ವಿಧೇಯತೆ ಬಾಲ್ಯದಲ್ಲಿ ಕಲಿಸಲ್ಪಡಬೇಕಾದ ಪ್ರಮುಖ ಪಾಠವೊ?
“ಹೆತ್ತವರಿಗೆ ಕೇವಲ ವಿಧೇಯರಾಗಿರುವ ಮಕ್ಕಳಲ್ಲ, ಬದಲಿಗೆ ಸ್ವತಂತ್ರ ವ್ಯಕ್ತಿತ್ವವುಳ್ಳ ಮಕ್ಕಳು ಬೇಕಾಗಿದ್ದಾರೆ.” ಇದು ಒಂದು ವಾರ್ತಾಪತ್ರಿಕೆಯ ತಲೆಬರಹವಾಗಿತ್ತು. “ಪ್ರತಿಕ್ರಿಯೆ ತೋರಿಸಿದವರಲ್ಲಿ” ಕೇವಲ “22 ಪ್ರತಿಶತದಷ್ಟು ಮಂದಿ ಮಕ್ಕಳಿಗೆ ಮನೆಯಲ್ಲಿ ವಿಧೇಯತೆ ಕಲಿಸಲ್ಪಡಬೇಕೆಂದು ನೆನಸಿದರು.” ಈ ಚಿಕ್ಕ ವರದಿಯು, ನ್ಯೂಸೀಲೆಂಡ್ನಲ್ಲಿ ನಡೆಸಲ್ಪಟ್ಟ ಸಮೀಕ್ಷೆಯ ಫಲಿತಾಂಶಗಳ ಮೇಲೆ ಆಧಾರಿತವಾಗಿತ್ತು. ಸಭ್ಯಾಚಾರಗಳು, ಸ್ವಾತಂತ್ರ್ಯ ಮತ್ತು ಜವಾಬ್ದಾರಿಯಂಥ ವಿಷಯಗಳನ್ನು ಮಕ್ಕಳಿಗೆ ಕಲಿಸಿಕೊಡುವುದು ಹೆಚ್ಚು ಪ್ರಾಮುಖ್ಯವಾಗಿದೆ ಎಂದು ಹೆತ್ತವರು ನೆನಸುತ್ತಾರೆ ಎಂಬುದಾಗಿ ಕೂಡಾ ಆ ಸಮೀಕ್ಷೆಯು ಕಂಡುಕೊಂಡಿತು.
ವ್ಯಕ್ತಿಸ್ವಾತಂತ್ರ್ಯ ತತ್ವ ಹಾಗೂ ಸ್ವ-ಆಸಕ್ತಿಯ ಈ ಯುಗದಲ್ಲಿ, ಹೆಚ್ಚಿನವರು ವಿಧೇಯತೆ ಮತ್ತು ಅದನ್ನು ಮಕ್ಕಳಿಗೆ ಕಲಿಸುವುದರ ಬಗ್ಗೆ ಅನಿಶ್ಚಿತ ದೃಷ್ಟಿಕೋನವುಳ್ಳವರು ಆಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ಬಾಲ್ಯದಲ್ಲಿ ವಿಧೇಯತೆಯನ್ನು ಕಲಿಸುವುದು, ಓಬೀರಾಯನ ಕಾಲದ ಮತ್ತು ಚಾಲ್ತಿಯಲ್ಲಿಲ್ಲದ ವಿಷಯವಾಗಿ ಪರಿಗಣಿಸಲ್ಪಡಬೇಕೋ? ಅಥವಾ ಇದು, ಮಕ್ಕಳು ಕಲಿತುಕೊಂಡು ಪ್ರಯೋಜನಪಡೆದುಕೊಳ್ಳಲು ಸಾಧ್ಯವಿರುವ ಪ್ರಾಮುಖ್ಯ ಪಾಠಗಳಲ್ಲೊಂದಾಗಿದೆಯೋ? ಎಲ್ಲದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ, ಹೆತ್ತವರಿಗೆ ವಿಧೇಯತೆ ತೋರಿಸುವುದರ ಬಗ್ಗೆ ಕುಟುಂಬ ಏರ್ಪಾಡಿನ ಮೂಲಕರ್ತನಾಗಿರುವ ಯೆಹೋವ ದೇವರ ದೃಷ್ಟಿಕೋನವೇನು, ಮತ್ತು ಅಂಥ ವಿಧೇಯತೆಯಿಂದ ಸಿಗುವ ಕೆಲವು ಪ್ರಯೋಜನಗಳೇನು?—ಅ. ಕೃತ್ಯಗಳು 17:28; ಎಫೆಸ 3:14, 15.
“ಇದು ನೀತಿ”
ಎಫೆಸದಲ್ಲಿನ ಒಂದನೇ ಶತಮಾನದ ಕ್ರೈಸ್ತ ಸಭೆಗೆ, ಅಪೊಸ್ತಲ ಪೌಲನು ಬರೆದುದು: “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ (“ನೀತಿ,” NW).” (ಎಫೆಸ 6:1) ಆದುದರಿಂದ ಅಂಥ ವಿಧೇಯತೆಯನ್ನು ತೋರಿಸಲಿಕ್ಕಾಗಿರುವ ಪ್ರಥಮ ಕಾರಣವೇನೆಂದರೆ, ಅದು ಯಾವುದು ಸರಿ ಎಂಬುದರ ಕುರಿತಾದ ದೈವಿಕ ಮಟ್ಟಕ್ಕನುಗುಣವಾಗಿದೆ. ಪೌಲನು ಹೇಳಿರುವಂತೆ, “ಇದು ನೀತಿ.”
ಇದಕ್ಕೆ ಹೊಂದಿಕೆಯಲ್ಲಿ, ದೇವರ ವಾಕ್ಯವು ಹೆತ್ತವರ ಪ್ರೀತಿಭರಿತ ಶಿಸ್ತುಕೊಡುವಿಕೆಯನ್ನು ಒಂದು ಸುಂದರ ಆಭರಣದೋಪಾದಿ ವಿವರಿಸುತ್ತದೆ. ಅದು “ನಿನ್ನ ತಲೆಗೆ ಅಂದದ ಪುಷ್ಪಕಿರೀಟ; ಕೊರಳಿಗೆ ಹಾರ” ಆಗಿದೆ ಹಾಗೂ “ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.” (ಜ್ಞಾನೋಕ್ತಿ 1:8, 9; ಕೊಲೊಸ್ಸೆ 3:20) ಇದಕ್ಕೆ ತದ್ವಿರುದ್ಧವಾಗಿ, ಹೆತ್ತವರಿಗೆ ಅವಿಧೇಯತೆಯನ್ನು ತೋರಿಸುವುದು ದೈವಿಕ ಅಸಮ್ಮತಿಯನ್ನು ತರುತ್ತದೆ.—ರೋಮಾಪುರ 1:30, 32.
“ನಿನಗೆ ಮೇಲಾಗುವುದು”
ಪೌಲನು ಬರೆದಾಗ ವಿಧೇಯತೆಯ ಇನ್ನೊಂದು ಶ್ರೇಷ್ಠತೆಗೆ ಸೂಚಿಸಿದನು: “ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ—ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” (ಎಫೆಸ 6:2, 3; ವಿಮೋಚನಕಾಂಡ 20:12) ಹೆತ್ತವರಿಗೆ ವಿಧೇಯತೆಯನ್ನು ತೋರಿಸುವುದು ಯಾವ ರೀತಿಗಳಲ್ಲಿ ಒಬ್ಬನಿಗೆ ಒಳಿತನ್ನುಂಟುಮಾಡುವುದು?
ಮೊದಲನೆಯದಾಗಿ ಇದನ್ನು ಪರಿಗಣಿಸಿರಿ: ಹೆತ್ತವರು, ಪ್ರಾಯದಲ್ಲಿ ದೊಡ್ಡವರೂ ಹೆಚ್ಚು ಅನುಭವವುಳ್ಳವರೂ ಎಂಬುದು ಸತ್ಯವಲ್ಲವೇ? ಅವರಿಗೆ ಕಂಪ್ಯೂಟರ್ ಅಥವಾ ಶಾಲೆಯಲ್ಲಿ ಕಲಿಸಲ್ಪಡುವ ಬೇರಾವುದೊ ವಿಷಯಗಳ ಬಗ್ಗೆ ಹೆಚ್ಚು ಗೊತ್ತಿಲ್ಲದಿರಬಹುದಾದರೂ, ಜೀವಿಸುವುದು ಹೇಗೆ ಹಾಗೂ ಜೀವನದ ಸಮಸ್ಯೆಗಳನ್ನು ಎದುರಿಸುವುದು ಹೇಗೆಂಬುದರ ಬಗ್ಗೆ ಅವರಿಗೆ ಖಂಡಿತವಾಗಿಯೂ ಬಹಳಷ್ಟು ಗೊತ್ತಿದೆ. ಆದರೆ ಇನ್ನೊಂದು ಕಡೆ ಯುವ ಜನರಿಗೆ ಪ್ರೌಢತೆಯಿಂದ ಫಲಿಸುವ ಸಮತೋಲನವುಳ್ಳ ಯೋಚನಾ ರೀತಿಯ ಕೊರತೆಯಿರುತ್ತದೆ. ಹೀಗಿರುವುದರಿಂದ, ಅವರು ನಿರ್ಣಯಗಳನ್ನು ಆತುರದಿಂದ ಮಾಡುತ್ತಾರೆ ಮತ್ತು ಹೆಚ್ಚಾಗಿ ಸಮವಯಸ್ಕರ ಒತ್ತಡಗಳಿಗೆ ಮಣಿಯುತ್ತಾರೆ. ಮತ್ತು ಇದು ಅವರಿಗೇ ಹಾನಿಯನ್ನುಂಟುಮಾಡುತ್ತದೆ. ಬೈಬಲ್ ನೈಜ ಸ್ಥಿತಿಯನ್ನು ಹೀಗೆ ತಿಳಿಸುತ್ತದೆ: “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ.” ಇದಕ್ಕೆ ಪರಿಹಾರವೇನು? “ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವದು.”—ಜ್ಞಾನೋಕ್ತಿ 22:15.
ವಿಧೇಯತೆಯ ಪ್ರಯೋಜನಗಳು ಹೆತ್ತವರ ಮತ್ತು ಮಗುವಿನ ನಡುವಿನ ಸಂಬಂಧಕ್ಕೆ ಸೀಮಿತವಾಗಿಲ್ಲ. ಮಾನವ ಸಮಾಜವು ಸರಾಗವಾಗಿ ಹಾಗೂ ಫಲದಾಯಕವಾಗಿ ಕ್ರಿಯೆಗೈಯಲು ಸಹಕಾರವು ಇರಲೇಬೇಕು ಮತ್ತು ಇದಕ್ಕಾಗಿ ಸ್ವಲ್ಪಮಟ್ಟಿಗೆಯಾದರೂ ವಿಧೇಯತೆಯು ಆವಶ್ಯಕ. ಉದಾಹರಣೆಗೆ ವಿವಾಹದಲ್ಲಿ, ತಗಾದೆಮಾಡುತ್ತಿರುವವರು ಮತ್ತು ಇತರರ ಭಾವನೆಗಳು ಹಾಗೂ ಹಕ್ಕುಗಳಿಗೆ ಸ್ಪಂದಿಸದೆ ಇರುವುದರ ಬದಲಿಗೆ, ಮಣಿಯಲು ಸಿದ್ಧರಾಗಿರುವವರು ಆಗಿರಬೇಕು. ಹೀಗೆ ಮಾಡುವಲ್ಲಿ ಶಾಂತಿ, ಸಾಮರಸ್ಯ ಹಾಗೂ ಸಂತೋಷವು ಫಲಿಸುತ್ತದೆ. ಕೆಲಸದ ಸ್ಥಳದಲ್ಲಿ, ಯಾವುದೇ ವ್ಯಾಪಾರವಾಗಲಿ ಉದ್ಯಮವಾಗಲಿ ಯಶಸ್ವಿಯಾಗಬೇಕಾದರೆ, ಧಣಿಗೆ ವಿಧೇಯತೆಯನ್ನು ತೋರಿಸುವುದು ಅತ್ಯಾವಶ್ಯಕ. ಸರಕಾರದ ನಿಯಮ ಹಾಗೂ ನಿಬಂಧನೆಗಳ ಸಂಬಂಧದಲ್ಲಿ ವಿಧೇಯತೆಯು ಒಬ್ಬನನ್ನು ಶಿಕ್ಷೆಯಿಂದ ದೂರವಿರಿಸುವುದಲ್ಲದೆ ಸ್ವಲ್ಪ ಮಟ್ಟಿಗಾದರೂ ಸುರಕ್ಷೆ ಹಾಗೂ ಸಂರಕ್ಷಣೆಯನ್ನು ಕೊಡುತ್ತದೆ.—ರೋಮಾಪುರ 13:1-7; ಎಫೆಸ 5:21-25; 6:5-8.
ಅಧಿಕಾರಕ್ಕೆ ವಿಧೇಯತೆಯನ್ನು ತೋರಿಸದಿರುವ ಯುವ ಜನರು ಹೆಚ್ಚಾಗಿ ಸಮಾಜದಲ್ಲಿ ಎಡವುಗಲ್ಲುಗಳಾಗುತ್ತಾರೆ. ಅದಕ್ಕೆ ವ್ಯತಿರಿಕ್ತವಾಗಿ, ಬಾಲ್ಯದಲ್ಲೇ ಕಲಿಯಲಾಗುವ ವಿಧೇಯತೆಯ ಪಾಠವು ಒಬ್ಬನ ಜೀವನದುದ್ದಕ್ಕೂ ಪ್ರತಿಫಲದಾಯಕವಾಗಿರಬಲ್ಲದು. ಆದುದರಿಂದ ಇದನ್ನು ಬಾಲ್ಯದಲ್ಲಿಯೇ ಕಲಿಯುವುದು ಎಷ್ಟು ಪ್ರಯೋಜನಕರ!
ವಿಧೇಯತೆಯ ಅತ್ಯಂತ ದೊಡ್ಡ ಬಹುಮಾನ
ವಿಧೇಯತೆಯು, ಕುಟುಂಬದಲ್ಲಿ ಸಂತೋಷಕರ ಸಂಬಂಧಗಳು ಹಾಗೂ ಜೀವನಪರ್ಯಂತ ಪ್ರಯೋಜನಗಳನ್ನು ತರುವುದಲ್ಲದೆ, ಎಲ್ಲಕ್ಕಿಂತ ಅತಿ ಮುಖ್ಯವಾದ ಸಂಬಂಧವನ್ನು, ಅಂದರೆ ಒಬ್ಬ ವ್ಯಕ್ತಿ ಮತ್ತು ಅವನ ಸೃಷ್ಟಿಕರ್ತನ ನಡುವಿನ ಸಂಬಂಧವನ್ನು ಕಟ್ಟಲು ಅಸ್ತಿವಾರವನ್ನು ಒದಗಿಸುತ್ತದೆ. “ಜೀವದ ಬುಗ್ಗೆ”ಯಾಗಿರುವ “ಮಹಾನ್ ಸೃಷ್ಟಿಕರ್ತ”ನೋಪಾದಿ (NW) ಯೆಹೋವ ದೇವರು ನಮ್ಮ ಸಂಪೂರ್ಣ ವಿಧೇಯತೆಗೆ ಅರ್ಹನಾಗಿದ್ದಾನೆ.—ಪ್ರಸಂಗಿ 12:1; ಕೀರ್ತನೆ 36:9.
“ವಿಧೇಯ” ಎಂಬ ಈ ಪದವು ವಿಭಿನ್ನ ರೂಪಗಳಲ್ಲಿ ಅನೇಕಬಾರಿ ಬೈಬಲ್ನಲ್ಲಿ ಕಂಡುಬರುತ್ತದೆ. ಅದಕ್ಕೆ ಕೂಡಿಸಿ, ಬೈಬಲಿನಲ್ಲಿ ನೂರಾರು ಸಲ, ದೇವರ ನಿಯಮಗಳು, ಕಟ್ಟಳೆಗಳು, ಆಜ್ಞೆಗಳು, ನ್ಯಾಯವಿಧಿಗಳು, ಮತ್ತು ನಿಬಂಧನೆಗಳಿಗೆ ಸೂಚಿಸಲಾಗಿದೆ. ಇವೆಲ್ಲವುಗಳಿಗೆ ಅಧೀನತೆಯನ್ನು ತೋರಿಸುವುದು ಆವಶ್ಯಕವಾಗಿದೆ. ದೇವರ ಮೆಚ್ಚುಗೆಯನ್ನು ಪಡೆದಿರಲು ಆತನ ದೃಷ್ಟಿಯಲ್ಲಿ ವಿಧೇಯತೆ ಒಂದು ಆವಶ್ಯಕತೆಯಾಗಿದೆ ಎಂಬುದರ ಬಗ್ಗೆ ಯಾವುದೇ ಸಂಶಯವಿಲ್ಲ. ಹೌದು, ಯೆಹೋವನೊಂದಿಗೆ ಒಂದು ಸಂಬಂಧವನ್ನು ಕಟ್ಟಲು ವಿಧೇಯತೆಯು ಕಡೆಗಣಿಸಲಾಗದ ಅತ್ಯಾವಶ್ಯಕ ಅಂಶವಾಗಿದೆ. (1 ಸಮುವೇಲ 15:22) ಮಾನವನ ಸ್ವಾಭಾವಿಕ ಪ್ರವೃತ್ತಿ ವಿಧೇಯತೆಯನ್ನು ತೋರಿಸುವುದಲ್ಲ ಬದಲಿಗೆ ಅವಿಧೇಯತೆ ತೋರಿಸುವುದು ಆಗಿದೆಯೆಂಬುದು ದುಃಖಕರ ಸಂಗತಿ. “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂದು ಬೈಬಲ್ ಹೇಳುತ್ತದೆ. (ಆದಿಕಾಂಡ 8:21) ಆದ್ದರಿಂದ, ವಿಧೇಯತೆಯ ಪಾಠವನ್ನು ಬಾಲ್ಯದಲ್ಲಿ ಮಾತ್ರವಲ್ಲ ಜೀವನದುದ್ದಕ್ಕೂ ಕಲಿಯಬೇಕಾಗಿದೆ. ಹಾಗೆ ಮಾಡುವುದು ದೊಡ್ಡ ಬಹುಮಾನವನ್ನು ತರುತ್ತದೆ.
ಅಪೊಸ್ತಲ ಪೌಲನು ಹೇಳಿರುವುದನ್ನು ನೀವು ಜ್ಞಾಪಿಸಿಕೊಳ್ಳುವುದಾದರೆ, ಹೆತ್ತವರಿಗೆ ವಿಧೇಯರಾಗಿರಬೇಕೆಂಬ ಆಜ್ಞೆಯೊಂದಿಗೆ ಇಮ್ಮಡಿ ವಾಗ್ದಾನಗಳಿವೆ. ಅದೇನೆಂದರೆ, “ನಿನಗೆ ಮೇಲಾಗುವುದು ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.” ಈ ವಾಗ್ದಾನದ ದೃಢೀಕರಿಸುವಿಕೆಯು ಜ್ಞಾನೋಕ್ತಿ 3:1, 2ರಲ್ಲಿ ಕಂಡುಬರುತ್ತದೆ: “ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು.” ವಿಧೇಯತೆಯನ್ನು ತೋರಿಸುವವರಿಗೆ ಇಂದು ಯೆಹೋವನೊಟ್ಟಿಗೆ ಒಂದು ಒಳ್ಳೇ ವೈಯಕ್ತಿಕ ಸಂಬಂಧ ಹಾಗೂ ಶಾಂತಿಯ ಹೊಸ ಲೋಕದಲ್ಲಿ ನಿತ್ಯಜೀವವೇ ಆ ಮಹಾನ್ ಪ್ರತಿಫಲವಾಗಿರುತ್ತದೆ.—ಪ್ರಕಟನೆ 21:3, 4.
[ಪುಟ 30, 31ರಲ್ಲಿರುವ ಚಿತ್ರಗಳು]
ವಿಧೇಯತೆಯು ಕುಟುಂಬದಲ್ಲಿ, ಕೆಲಸದ ಸ್ಥಳದಲ್ಲಿ ಹಾಗೂ ಯೆಹೋವನೊಟ್ಟಿಗೆ ಸಂತೋಷಕರ ಸಂಬಂಧಗಳನ್ನು ತರುತ್ತದೆ