ರಸ್ಸಲ್ರ ಬರಹಗಳನ್ನು ಗಣ್ಯಮಾಡಿದ ಇಬ್ಬರು ಪಾಸ್ಟರ್ಗಳು
ಯೆಹೋವನ ನಿಜ ಕ್ರೈಸ್ತ ಆರಾಧಕರ ನಡುವೆ ಗಮನಾರ್ಹ ರೀತಿಯಲ್ಲಿ ಕಾರ್ಯನಡಿಸಿದ್ದಂತಹ ಚಾರ್ಲ್ಸ್ ಟೇಸ್ ರಸ್ಸಲ್ರು, 1891ರಲ್ಲಿ ಪ್ರಪ್ರಥಮ ಬಾರಿ ಯೂರೋಪನ್ನು ಸಂದರ್ಶಿಸಿದರು. ಕೆಲವು ವರದಿಗಳಿಗನುಸಾರ, ಇಟಲಿಯ ಪೀನೇರೊಲೋ ಪಟ್ಟದಲ್ಲಿನ ನಿಲುಗಡೆಯ ಸಮಯದಲ್ಲಿ, ರಸ್ಸಲ್ರು ಪ್ರೊಫೆಸರ್ ಡಾನ್ಯೆಲೇ ರೀವ್ವಾರ್ನನ್ನು ಭೇಟಿಯಾದರು. ಇವನು ವಾಲ್ಡೆನ್ಸೀಸ್a ಎಂದು ಕರೆಯಲ್ಪಡುವ ಒಂದು ಧಾರ್ಮಿಕ ಗುಂಪಿನ ಒಬ್ಬ ಮಾಜಿ ಪಾಸ್ಟರ್ ಆಗಿದ್ದನು. ರೀವ್ವಾರ್ ತನ್ನ ಪಾದ್ರಿವೃತ್ತಿಯನ್ನು ಬಿಟ್ಟಬಳಿಕ ವಾಲ್ಡೆನ್ಸೀಸ್ರೊಂದಿಗೆ ನಿಕಟವಾಗಿ ಸಹವಾಸಮಾಡುತ್ತಾ ಮುಂದುವರಿದನಾದರೂ, ಅವನು ಒಂದು ಮುಕ್ತ ಮನಸ್ಸನ್ನು ಇಟ್ಟುಕೊಂಡು ಸಿ. ಟಿ. ರಸ್ಸಲ್ರು ಬರೆದಂಥ ಅನೇಕ ಪ್ರಕಾಶನಗಳನ್ನು ಓದಿದನು.
ಇಸವಿ 1903ರಲ್ಲಿ, ರಸ್ಸಲ್ರ ಯುಗಗಳ ಕುರಿತಾದ ದೈವಿಕ ಯೋಜನೆ (ಇಂಗ್ಲಿಷ್) ಎಂಬ ಪುಸ್ತಕವನ್ನು ರೀವ್ವಾರ್ ಇಟ್ಯಾಲಿಯನ್ ಭಾಷೆಗೆ ಭಾಷಾಂತರಿಸಿದನು ಮತ್ತು ತನ್ನ ಸ್ವಂತ ಖರ್ಚಿನಲ್ಲಿ ಅದನ್ನು ಮುದ್ರಿಸಿದನು. ಅಧಿಕೃತ ಇಟ್ಯಾಲಿಯನ್ ಸಂಪುಟವನ್ನು ಪ್ರಕಾಶಿಸುವುದಕ್ಕೆ ಬಹಳ ಮುಂಚೆಯೇ ಇದು ಮಾಡಲ್ಪಟ್ಟಿತು. ಈ ಪುಸ್ತಕದ ಮುನ್ನುಡಿಯಲ್ಲಿ ರೀವ್ವಾರ್ ಬರೆದುದು: “ನಾವು ಈ ಪ್ರಪ್ರಥಮ ಇಟ್ಯಾಲಿಯನ್ ಸಂಪುಟವನ್ನು ಕರ್ತನ ರಕ್ಷಣೆಯ ಹಸ್ತಕ್ಕೆ ಒಪ್ಪಿಸುತ್ತೇವೆ. ಇದರಲ್ಲಿ ಅನೇಕ ಲೋಪದೋಷಗಳು ಇರುವುದಾದರೂ, ಇದು ಆತನ ಅತಿ ಪವಿತ್ರ ನಾಮವನ್ನು ಮಹಿಮೆಗೇರಿಸಲು ಸಹಾಯಮಾಡುವಂತೆ ಮತ್ತು ಇಟ್ಯಾಲಿಯನ್ ಭಾಷೆಯನ್ನು ಮಾತಾಡುವ ಆತನ ಮಕ್ಕಳನ್ನು ಮಹಾನ್ ಭಕ್ತಿಗೆ ನಡೆಸಲು ಉತ್ತೇಜಿಸುವಂತೆ ಆತನು ಇದನ್ನು ಆಶೀರ್ವದಿಸಲಿ. ಈ ಪುಸ್ತಕವನ್ನು ಓದುವ ಮೂಲಕ, ದೇವರ ಯೋಜನೆ ಹಾಗೂ ಪ್ರೀತಿಯ ಸಿರಿತನ, ವಿವೇಕ, ಹಾಗೂ ಜ್ಞಾನದ ಆಳವನ್ನು ಗಣ್ಯಮಾಡುವಂಥ ಜನರೆಲ್ಲರ ಹೃದಯಗಳು ಸ್ವತಃ ದೇವರಿಗೇ ಕೃತಜ್ಞವಾಗಿರಲಿ. ಏಕೆಂದರೆ ಆತನ ಅನುಗ್ರಹದಿಂದಲೇ ಈ ಕೃತಿಯ ಪ್ರಕಾಶನವು ಸಾಧ್ಯಗೊಳಿಸಲ್ಪಟ್ಟಿದೆ.”
ಚೀಯೋನಿನ ಕಾವಲಿನಬುರುಜು ಮತ್ತು ಕ್ರಿಸ್ತನ ಸಾನ್ನಿಧ್ಯದ ಘೋಷಕ (ಇಂಗ್ಲಿಷ್) ಎಂಬ ಪತ್ರಿಕೆಯನ್ನೂ ರೀವ್ವಾರ್ ಇಟ್ಯಾಲಿಯನ್ ಭಾಷೆಗೆ ಭಾಷಾಂತರಿಸಲಾರಂಭಿಸಿದನು. ಕಾವಲಿನಬುರುಜು ಪತ್ರಿಕೆಯ ಆರಂಭದ ರೂಪವಾಗಿದ್ದ ಈ ಪತ್ರಿಕೆಯು, 1903ರಲ್ಲಿ ತ್ರೈಮಾಸಿಕ ಸಂಚಿಕೆಯಾಗಿ ಕಂಡುಬರತೊಡಗಿತು. ಪ್ರೊಫೆಸರ್ ರೀವ್ವಾರ್ ಎಂದೂ ಒಬ್ಬ ಬೈಬಲ್ ವಿದ್ಯಾರ್ಥಿಯಾಗಿ—ಆಗ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು—ಪರಿಣಮಿಸದಿದ್ದರೂ, ಬೈಬಲ್ ವಿದ್ಯಾರ್ಥಿಗಳ ಪ್ರಕಾಶನಗಳಲ್ಲಿ ವಿವರಿಸಲ್ಪಟ್ಟಿರುವಂಥ ಬೈಬಲ್ ಸಂದೇಶವನ್ನು ಹಬ್ಬಿಸುವುದರಲ್ಲಿ ಅವನು ಅತ್ಯಧಿಕ ಆಸಕ್ತಿಯನ್ನು ತೋರಿಸಿದನು.
“ನನ್ನ ಕಣ್ಣುಗಳಿಂದ ಪೊರೆಯು ಬಿದ್ದುಹೋಯಿತೋ ಎಂಬಂತೆ ನನಗೆ ಅನಿಸಿತು”
ರಸ್ಸಲ್ರ ಪ್ರಕಾಶನಗಳನ್ನು ಅಮೂಲ್ಯವಾಗಿ ಪರಿಗಣಿಸಿದ ವಾಲ್ಡೆನ್ಸೀಯನ್ಸರ ಇನ್ನೊಬ್ಬ ಪಾಸ್ಟರ್ ಜೂಸೆಪಾ ಬಾಂಕೆಟ್ಟೀ ಆಗಿದ್ದನು. ಕ್ಯಾಥೊಲಿಕ್ ಧರ್ಮದಿಂದ ಮತಾಂತರಹೊಂದಿದ್ದ ಜೂಸೆಪಾನ ತಂದೆಯು, ಜೂಸೆಪಾನಿಗೆ ವಾಲ್ಡೆನ್ಸೀಯನ್ ಶಿಕ್ಷಣವನ್ನು ನೀಡಿದನು. 1894ರಲ್ಲಿ ಜೂಸೆಪಾ ಒಬ್ಬ ಪಾಸ್ಟರ್ ಆದನು, ಮತ್ತು ಅಪುಲಿಯಾ ಹಾಗೂ ಅಬ್ರೂಸ್ಸಿಯಲ್ಲಿರುವ ಮತ್ತು ಎಲ್ಬ ಹಾಗೂ ಸಿಸಿಲಿಯಲ್ಲಿರುವ ಬೇರೆ ಬೇರೆ ವಾಲ್ಡೆನ್ಸೀಯನ್ ಸಮುದಾಯಗಳಲ್ಲಿ ಪಾದ್ರಿಯಾಗಿ ಸೇವೆಸಲ್ಲಿಸಿದನು.
ರಸ್ಸಲ್ರ ಯುಗಗಳ ಕುರಿತಾದ ದೈವಿಕ ಯೋಜನೆ (ಇಂಗ್ಲಿಷ್) ಎಂಬ ಪುಸ್ತಕದ ಅಧಿಕೃತ ಇಟ್ಯಾಲಿಯನ್ ಸಂಪುಟವು 1905ರಲ್ಲಿ ಪ್ರಕಾಶಿಸಲ್ಪಟ್ಟಿತು. ಬಾಂಕೆಟ್ಟೀ ಅದರ ಕುರಿತಾದ ಉತ್ಸಾಹಭರಿತ ಪುನರ್ವಿಮರ್ಶೆಯನ್ನು ಬರೆದನು. ಲಾ ರೀವೇಸ್ಟಾ ಕ್ರೀಸ್ಟ್ಯಾನಾ ಎಂಬ ಪ್ರಾಟೆಸ್ಟಂಟ್ ನಿಯತಕಾಲಿಕದಲ್ಲಿ ಅದು ಕಂಡುಬಂತು. ಬಾಂಕೆಟ್ಟೀ ಬರೆದದ್ದೇನೆಂದರೆ, ರಸ್ಸಲ್ರ ಪುಸ್ತಕವು, “ಪವಿತ್ರ ಶಾಸ್ತ್ರಗಳ ಪ್ರಯೋಜನಾರ್ಹವಾದ ಹಾಗೂ ಪ್ರತಿಫಲದಾಯಕ ಅಧ್ಯಯನವನ್ನು ಆರಂಭಿಸಲಿಕ್ಕಾಗಿ ಯಾವುದೇ ಕ್ರೈಸ್ತನು ಕಂಡುಕೊಳ್ಳಸಾಧ್ಯವಿರುವ ಅತ್ಯಂತ ಬೋಧಪ್ರದ ಹಾಗೂ ಖಚಿತ ಮಾರ್ಗದರ್ಶನೆಯನ್ನು ನೀಡುವಂಥ ಪುಸ್ತಕವಾಗಿದೆ ಎಂದು ನಮಗೆ ಅನಿಸುತ್ತದೆ . . . ನಾನು ಅದನ್ನು ಓದಿದ ಕೂಡಲೆ, ನನ್ನ ಕಣ್ಣುಗಳಿಂದ ಪೊರೆಯು ಬಿದ್ದುಹೋಯಿತೋ ಎಂಬಂತೆ ನನಗೆ ಅನಿಸಿತು, ಮತ್ತು ದೇವರ ಬಳಿಗೆ ನಡೆಸುವ ಮಾರ್ಗವು ನೇರವಾದದ್ದೂ ಸುಲಭವಾದದ್ದೂ ಆಗಿ ಕಂಡುಬಂತು. ಸ್ಪಷ್ಟವಾದ ವಿರೋಧಾಭಾಸಗಳಾಗಿ ಕಂಡುಬರುತ್ತಿದ್ದ ವಿಷಯಗಳಲ್ಲಿ ಹೆಚ್ಚಿನವು ಸಹ ಕಣ್ಮರೆಯಾದವು. ಈ ಮುಂಚೆ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿ ಕಂಡುಬರುತ್ತಿದ್ದ ಸಿದ್ಧಾಂತಗಳು ಈಗ ಸರಳವಾಗಿ ಮತ್ತು ಸಂಪೂರ್ಣವಾಗಿ ಅಂಗೀಕಾರಾರ್ಹವಾಗಿ ಪರಿಣಮಿಸಿದವು. ಈ ಹಿಂದೆ ಗ್ರಹಿಸಲು ಅಸಾಧ್ಯವಾಗಿ ತೋರುತ್ತಿದ್ದ ವಿಷಯಗಳು ಈಗ ಸ್ಪಷ್ಟವಾದವು. ಕ್ರಿಸ್ತನ ಮೂಲಕ ಲೋಕದ ರಕ್ಷಣೆಯ ಕುರಿತಾದ ಪ್ರಶಂಸಾರ್ಹ ಯೋಜನೆಯು ನನ್ನ ಮುಂದೆ ಎಷ್ಟು ಭಯಭಕ್ತಿಭರಿತ ಸರಳತೆಯಾಗಿ ಕಂಡುಬಂದಿತೆಂದರೆ, ‘ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ!’ ಎಂದು ಅಪೊಸ್ತಲನೊಂದಿಗೆ ಉದ್ಗರಿಸುವಂತೆ ಅದು ನನ್ನನ್ನು ಪ್ರಚೋದಿಸಿತು.”—ರೋಮಾಪುರ 11:33.
ಇಸವಿ 1925ರಲ್ಲಿ ರಮೀಸೊ ಕೂಮೀನಿಟೀ ಎಂಬ ವ್ಯಕ್ತಿಯಿಂದ ತಿಳಿಸಲ್ಪಟ್ಟಂತೆ, ಬಾಂಕೆಟ್ಟೀಯು ಬೈಬಲ್ ವಿದ್ಯಾರ್ಥಿಗಳ ಕೆಲಸಕ್ಕೆ “ಅತ್ಯಧಿಕ ಒಪ್ಪಿಗೆಯನ್ನು” ತೋರಿಸಿದನು ಮತ್ತು ಅವರು ಸಿದ್ಧಾಂತಗಳನ್ನು ವಿವರಿಸಿದಂಥ ರೀತಿಯನ್ನು “ಪೂರ್ಣವಾಗಿ ಮನಗಂಡನು.” ತನ್ನದೇ ಆದ ರೀತಿಯಲ್ಲಿ ಬಾಂಕೆಟ್ಟೀ ಸಹ ಇಂತಹ ಸಿದ್ಧಾಂತಗಳನ್ನು ಇತರರಿಗೆ ತಿಳಿಸಲು ಪ್ರಯತ್ನಿಸಿದನು.
ಯೆಹೋವನ ಸಾಕ್ಷಿಗಳಂತೆಯೇ, ಶಾಸ್ತ್ರವಚನಗಳಲ್ಲಿ ಕಲಿಸಲ್ಪಟ್ಟಿರುವಂತೆ ಒಂದು ಭೂಪುನರುತ್ಥಾನವಿರುವುದು ಎಂದು ಬಾಂಕೆಟ್ಟೀಯು ನಂಬಿದ್ದನು ಎಂಬುದು ಅವನ ಬರಹಗಳಿಂದ ವ್ಯಕ್ತವಾಗುತ್ತದೆ. ಯೇಸು ಯಾವ ವರ್ಷದಲ್ಲಿ ಮರಣಪಟ್ಟನೋ ಅದು ಮೊದಲೇ ನಿಗದಿಪಡಿಸಲ್ಪಟ್ಟಿತ್ತು ಮತ್ತು 70 ವಾರಗಳ ಕುರಿತಾದ ದಾನಿಯೇಲನ ಪ್ರವಾದನೆಯಲ್ಲಿ ದೇವರಿಂದ ಪ್ರಕಟಪಡಿಸಲ್ಪಟ್ಟಿತ್ತು ಎಂದು ಅವನು ವಿವರಿಸಿದಾಗ, ಅವನು ಬೈಬಲ್ ವಿದ್ಯಾರ್ಥಿಗಳೊಂದಿಗೆ ಸಹಮತದಿಂದಿದ್ದನು. (ದಾನಿಯೇಲ 9:24-27) ಒಂದಕ್ಕಿಂತಲೂ ಹೆಚ್ಚು ಬಾರಿ, ಮತ್ತು ತನ್ನ ಚರ್ಚಿನ ಬೋಧನೆಗಳ ವಿಷಯದಲ್ಲಿ ನೇರವಾಗಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವಾಗ, “ವಾರ್ಷಿಕೋತ್ಸವವು ನಿರ್ದಿಷ್ಟವಾಗಿ ಯಾವ ದಿನ ಬರುತ್ತದೋ ಆ ದಿನ,” ಪ್ರತಿ ವರ್ಷ ಒಮ್ಮೆ ಮಾತ್ರ ಯೇಸು ಕ್ರಿಸ್ತನ ಮರಣದ ಜ್ಞಾಪಕಾಚರಣೆಯನ್ನು ಆಚರಿಸಬೇಕು ಎಂದು ಅವನು ನಂಬಿದನು. (ಲೂಕ 22:19, 20) ಅವನು ಡಾರ್ವಿನನ ವಿಕಾಸವಾದವನ್ನು ನಿರಾಕರಿಸಿದನು, ಮತ್ತು ನಿಜ ಕ್ರೈಸ್ತರು ಐಹಿಕ ಯುದ್ಧದಲ್ಲಿ ಒಳಗೂಡಬಾರದು ಎಂದು ಒತ್ತಿಹೇಳಿದನು.—ಯೆಶಾಯ 2:4.
ಒಂದು ಸಂದರ್ಭದಲ್ಲಿ ಬಾಂಕೆಟ್ಟೀಯು, ಜೆ. ಕಾಂಬಲ್ ವೊಲ್ ಎಂಬ ಹೆಸರಿನ ವ್ಯಕ್ತಿಯೊಂದಿಗೆ ರಸ್ಸಲ್ರ ಬರಹಗಳ ಕುರಿತು ಚರ್ಚಿಸುತ್ತಿದ್ದನು. ವೊಲ್ನ ಟೀಕೆಗಳಿಗೆ ಉತ್ತರವಾಗಿ ಬಾಂಕೆಟ್ಟೀ ಹೇಳಿದ್ದು: “ನೀನು ರಸ್ಸಲ್ರ ಆರು ಸಂಪುಟಗಳನ್ನು ಓದುವುದಾದರೆ, ನಿನಗೆ ಹುರುಪಿನ ಹಾಗೂ ಆಳವಾದ ಆನಂದದ ಅನುಭವವಾಗುವುದು, ಮತ್ತು ನೀನು ಭಾವನಾತ್ಮಕವಾಗಿ ನನಗೆ ಉಪಕಾರ ಸಲ್ಲಿಸುವಿ ಎಂಬ ದೃಢನಂಬಿಕೆ ನನಗಿದೆ. ನಾನು ಸಿದ್ಧಾಂತವನ್ನು ಪ್ರದರ್ಶನಮಾಡುವುದಿಲ್ಲ; ಆದರೆ ಸುಮಾರು ಹನ್ನೊಂದು ವರ್ಷಗಳ ಹಿಂದೆ ನಾನು ಆ ಪುಸ್ತಕಗಳನ್ನು ಓದಿದೆ, ಮತ್ತು ಸಂಪೂರ್ಣವಾಗಿ ಹಾಗೂ ಸಮಗ್ರವಾಗಿ ಪವಿತ್ರ ಶಾಸ್ತ್ರಗಳ ಮೇಲಾಧಾರಿತವಾದ ಒಂದು ಕೃತಿಯ ಮೂಲಕ ಅಂಥ ಬೆಳಕನ್ನು ಹಾಗೂ ಸಾಂತ್ವನವನ್ನು ನನ್ನ ಮುಂದೆ ಇಟ್ಟದ್ದಕ್ಕಾಗಿ, ನಾನು ಪ್ರತಿ ದಿನ ದೇವರಿಗೆ ಉಪಕಾರ ಸಲ್ಲಿಸುತ್ತೇನೆ.”
“ಕಿವಿಗೊಡಬೇಕು, ಕಿವಿಗೊಡಬೇಕು, ಕಿವಿಗೊಡಬೇಕು”
ಡಾನ್ಯೇಲೇ ರೀವ್ವಾರ್ ಮತ್ತು ಜೂಸೆಪಾ ಬಾಂಕೆಟ್ಟೀ ಎಂಬ ಈ ಇಬ್ಬರು ವಾಲ್ಡೆನ್ಸೀಯನ್ ಪಾಸ್ಟರ್ಗಳು, ರಸ್ಸಲ್ರು ಬೈಬಲನ್ನು ವಿವರಿಸಿದಂಥ ವಿಧಕ್ಕಾಗಿ ಗಣ್ಯತೆಯನ್ನು ತೋರಿಸಿದರು ಎಂಬುದಂತೂ ಗಮನಾರ್ಹವಾಗಿದೆ. ಬಾಂಕೆಟ್ಟೀ ಬರೆದುದು: “ನಮ್ಮಂಥ ಈವ್ಯಾಂಜೆಲಿಕಲ್ ಧರ್ಮಬೋಧಕರಲ್ಲಿ ಯಾರೇ ಆಗಲಿ, ನಮ್ಮ ಪಾಸ್ಟರ್ಗಳಾಗಲಿ ಅಥವಾ ದೇವತಾಶಾಸ್ತ್ರದ ಪ್ರೊಫೆಸರರಾಗಲಿ, ಯಾರೊಬ್ಬರೂ ಎಲ್ಲ ವಿಷಯವನ್ನು ಅರಿತವರಾಗಿಲ್ಲ. ಇಲ್ಲ, ನಮಗೆ ಇನ್ನೂ ಅನೇಕಾನೇಕ ವಿಷಯಗಳನ್ನು ಕಲಿಯಲಿಕ್ಕಿದೆ. . . . [ನಾವು] . . . ಉಳಿದು ಕಿವಿಗೊಡಬೇಕು, ಇದೆಲ್ಲವೂ ನನಗೆ ಗೊತ್ತಿದೆ ಎಂದು ನೆನಸಬಾರದು, ಮತ್ತು ನಮ್ಮ ಪರೀಕ್ಷೆಗಾಗಿ ಏನು ನೀಡಲ್ಪಡುತ್ತದೋ ಅದನ್ನು ನಿರಾಕರಿಸಬಾರದು. ಅದಕ್ಕೆ ಬದಲಾಗಿ, ಕಿವಿಗೊಡಬೇಕು, ಕಿವಿಗೊಡಬೇಕು, ಕಿವಿಗೊಡಬೇಕು.”
ಪ್ರತಿ ವರ್ಷ, ಯೆಹೋವನ ಸಾಕ್ಷಿಗಳಿಂದ ಅವರ ಮನೆಗೆ ತರಲ್ಪಡುವಂಥ ರಾಜ್ಯದ ಸಂದೇಶಕ್ಕೆ ಸಾವಿರಾರು ಮಂದಿ ಕಿವಿಗೊಡುತ್ತಾರೆ. ಬೈಬಲ್ ಸತ್ಯಗಳಿಗಾಗಿ ಬಾಯಾರುತ್ತಿರುವ ಎಲ್ಲಾ ಕಡೆಗಳಲ್ಲಿರುವ ಮುಕ್ತ ಮನಸ್ಸಿನ ಜನರು, ಯೇಸುವಿನ ಈ ಆಮಂತ್ರಣಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ: “ಬಂದು ನನ್ನನ್ನು ಹಿಂಬಾಲಿಸು.”—ಮಾರ್ಕ 10:17-21; ಪ್ರಕಟನೆ 22:17.
[ಪಾದಟಿಪ್ಪಣಿ]
a ಪೈಯರ್ ವೊಡೀ, ಅಥವಾ ಪೀಟರ್ ವಾಲ್ಡೊ ಎಂಬಾತನ ನಾಮದಲ್ಲಿ ಇದು ಹೆಸರಿಸಲ್ಪಟ್ಟಿದೆ ಮತ್ತು ಇವನು ಫ್ರಾನ್ಸಿನ ಲೀಓನ್ಸ್ ಪಟ್ಟಣದಲ್ಲಿ 12ನೆಯ ಶತಮಾನದ ಒಬ್ಬ ವ್ಯಾಪಾರಿಯಾಗಿದ್ದನು. ವಾಲ್ಡೊನನ್ನು, ಅವನ ನಂಬಿಕೆಗಳಿಗೋಸ್ಕರ ಕ್ಯಾಥೊಲಿಕ್ ಚರ್ಚಿನಿಂದ ಬಹಿಷ್ಕರಿಸಲಾಗಿತ್ತು. ವಾಲ್ಡೆನ್ಸೀಸ್ರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, 2002, ಮಾರ್ಚ್ 15ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ವಾಲ್ಡೆನ್ಸೀಸ್—ಪಾಷಂಡವಾದದಿಂದ ಪ್ರಾಟೆಸ್ಟಂಟ್ ಮತಕ್ಕೆ” ಎಂಬ ಲೇಖನವನ್ನು ನೋಡಿರಿ.
[ಪುಟ 28ರಲ್ಲಿರುವ ಚಿತ್ರ]
ಪ್ರೊಫೆಸರ್ ಡಾನ್ಯೆಲೇ ರೀವ್ವಾರ್
[ಪುಟ 29ರಲ್ಲಿರುವ ಚಿತ್ರ]
ಜೂಸೆಪಾ ಬಾಂಕೆಟ್ಟೀ
[ಕೃಪೆ]
ಬಾಂಕೆಟ್ಟೀ: La Luce, April 14, 1926