“ಸಭಾಮಧ್ಯದಲ್ಲಿ” ಯೆಹೋವನನ್ನು ಸ್ತುತಿಸಿರಿ
ಕ್ರೈಸ್ತ ಕೂಟಗಳು, ಯೆಹೋವನು ತನ್ನ ಜನರನ್ನು ಆತ್ಮಿಕವಾಗಿ ಬಲಪಡಿಸಲಿಕ್ಕಾಗಿ ಮಾಡಲ್ಪಟ್ಟಿರುವ ಏರ್ಪಾಡಾಗಿವೆ. ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ ನಾವು ಯೆಹೋವನ ಒದಗಿಸುವಿಕೆಗಳಿಗಾಗಿರುವ ನಮ್ಮ ಗಣ್ಯತೆಯನ್ನು ತೋರಿಸುತ್ತೇವೆ. ಅಷ್ಟುಮಾತ್ರವಲ್ಲ, ‘[ನಮ್ಮ ಸಹೋದರರನ್ನು] ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಪ್ರೇರೇಪಿಸಲು’ ನಾವು ಶಕ್ತರಾಗುತ್ತೇವೆ. ಇದು ಪರಸ್ಪರ ಪ್ರೀತಿಯನ್ನು ತೋರಿಸುವ ಪ್ರಾಮುಖ್ಯ ವಿಧವಾಗಿದೆ. (ಇಬ್ರಿಯ 10:24; ಯೋಹಾನ 13:35) ಆದರೂ, ಕೂಟಗಳಲ್ಲಿ ನಮ್ಮ ಸಹೋದರರನ್ನು ನಾವು ಹೇಗೆ ಪ್ರೇರೇಪಿಸಬಲ್ಲೆವು?
ಬಹಿರಂಗ ಅಭಿವ್ಯಕ್ತಿಗಳನ್ನು ಮಾಡಿರಿ
ರಾಜ ದಾವೀದನು ತನ್ನ ಕುರಿತಾಗಿ ಬರೆದುದು: “ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ನಾನು ಮಹಾಸಭೆಯಲ್ಲಿ ಮಾಡುವ ಸ್ತೋತ್ರಕ್ಕೆ ನೀನೇ ಆಧಾರನು.” “ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.” “ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು ಧಾರಾಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು.”—ಕೀರ್ತನೆ 22:22, 25; 35:18; 40:9.
ಅಪೊಸ್ತಲ ಪೌಲನ ದಿನದಲ್ಲಿ, ಕ್ರೈಸ್ತರು ಆರಾಧನೆಗಾಗಿ ಕೂಡಿಬಂದಾಗ, ಯೆಹೋವನಲ್ಲಿರುವ ತಮ್ಮ ನಂಬಿಕೆಯ ಕುರಿತು ಹಾಗೂ ಆತನ ಮಹಿಮೆಯ ಕುರಿತು ತದ್ರೀತಿಯ ಅಭಿವ್ಯಕ್ತಿಗಳನ್ನು ಮಾಡಿದ್ದರು. ಈ ರೀತಿಯಲ್ಲಿ ಅವರು ಒಬ್ಬರು ಇನ್ನೊಬ್ಬರನ್ನು ಪ್ರೋತ್ಸಾಹಿಸಿದರು ಮತ್ತು ಪರಸ್ಪರ ಪ್ರೀತಿಸಲು ಹಾಗೂ ಸತ್ಕಾರ್ಯಗಳನ್ನು ಮಾಡಲು ಪ್ರೇರೇಪಿಸಿದರು. ದಾವೀದ ಮತ್ತು ಪೌಲರ ಕಾಲವು ಮುಗಿದು ಅನೇಕ ಶತಮಾನಗಳು ಗತಿಸಿದ ಬಳಿಕ, ನಮ್ಮ ದಿನದಲ್ಲಿ ನಾವು ನಿಜವಾಗಿಯೂ ‘[ಯೆಹೋವನ] ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೋಡುತ್ತಿದ್ದೇವೆ.’ (ಇಬ್ರಿಯ 10:24, 25) ಸೈತಾನನ ವಿಷಯಗಳ ವ್ಯವಸ್ಥೆಯು ನಾಶನದ ಕಡೆಗೆ ಹೆಜ್ಜೆಹಾಕುತ್ತಾ ಇದೆ, ಮತ್ತು ಸಮಸ್ಯೆಗಳು ದಿನೇ ದಿನೇ ಅಧಿಕಗೊಳ್ಳುತ್ತಾ ಹೋಗುತ್ತಿವೆ. ಆದುದರಿಂದ, ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಮಗೆ “ತಾಳ್ಮೆ ಬೇಕು.” (ಇಬ್ರಿಯ 10:36) ನಮ್ಮ ಸಹೋದರರಲ್ಲದೆ ಇನ್ನಾರು ತಾಳಿಕೊಳ್ಳುವಂತೆ ನಮ್ಮನ್ನು ಉತ್ತೇಜಿಸಾರು?
ಆರಂಭದ ಸಮಯದಲ್ಲಿದ್ದಂತೆಯೇ ಇಂದು ಸಹ, “ಸಭಾಮಧ್ಯದಲ್ಲಿ” ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಲಿಕ್ಕಾಗಿ ಪ್ರತಿಯೊಬ್ಬ ವಿಶ್ವಾಸಿಗೂ ಒದಗಿಸುವಿಕೆಗಳು ಮಾಡಲ್ಪಟ್ಟಿವೆ. ಪ್ರತಿಯೊಬ್ಬರಿಗೂ ಲಭ್ಯಗೊಳಿಸಲ್ಪಟ್ಟಿರುವ ಒಂದು ಸದವಕಾಶವು, ಸಭಾ ಕೂಟಗಳಲ್ಲಿ ಸಭಿಕರಿಗೆ ಕೇಳಲ್ಪಡುವ ಪ್ರಶ್ನೆಗಳಿಗೆ ಉತ್ತರವಾಗಿ ಹೇಳಿಕೆಗಳನ್ನು ನೀಡುವುದೇ ಆಗಿದೆ. ಹೇಳಿಕೆಗಳನ್ನು ನೀಡುವುದರಿಂದ ಸಿಗುವ ಪ್ರಯೋಜನಗಳನ್ನು ಎಂದೂ ಕಡಿಮೆ ಅಂದಾಜುಮಾಡದಿರಿ. ಉದಾಹರಣೆಗೆ, ಸಮಸ್ಯೆಗಳನ್ನು ಹೇಗೆ ಜಯಿಸುವುದು ಅಥವಾ ಅವುಗಳಿಂದ ಹೇಗೆ ದೂರವಿರಸಾಧ್ಯವಿದೆ ಎಂಬುದನ್ನು ತೋರಿಸುವಂಥ ಹೇಳಿಕೆಗಳು, ಬೈಬಲ್ ಮೂಲತತ್ತ್ವಗಳನ್ನು ಅನುಸರಿಸುವ ನಮ್ಮ ಸಹೋದರರ ದೃಢನಿರ್ಧಾರವನ್ನು ಇನ್ನಷ್ಟು ಬಲಗೊಳಿಸುತ್ತವೆ. ಉಲ್ಲೇಖಿಸಲ್ಪಟ್ಟಿದ್ದರೂ ಉದ್ಧರಿಸದಂಥ ಬೈಬಲ್ ವಚನಗಳನ್ನು ವಿವರಿಸುವ ಅಥವಾ ವೈಯಕ್ತಿಕ ಸಂಶೋಧನೆಯ ಸಮಯದಲ್ಲಿ ಕಂಡುಕೊಂಡಿರುವ ವಿಚಾರಗಳನ್ನು ಒಳಗೂಡಿರುವಂಥ ಹೇಳಿಕೆಗಳು, ಇತರರು ಸಹ ಹೆಚ್ಚು ಉತ್ತಮವಾದ ಅಧ್ಯಯನ ರೂಢಿಗಳನ್ನು ಬೆಳೆಸಿಕೊಳ್ಳುವಂತೆ ಉತ್ತೇಜಿಸಬಹುದು.
ಕೂಟಗಳಲ್ಲಿ ನಾವು ಹೇಳಿಕೆ ನೀಡುವುದಾದರೆ, ಸ್ವತಃ ನಾವು ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ ಹಾಗೂ ಇತರರು ಪ್ರಯೋಜನವನ್ನು ಪಡೆದುಕೊಳ್ಳುವರು ಎಂಬ ವಿಚಾರವು ತಾನೇ ಸಂಕೋಚವನ್ನು ಹೊಡೆದೋಡಿಸುವಂತೆ ಎಲ್ಲಾ ಯೆಹೋವನ ಸಾಕ್ಷಿಗಳನ್ನು ಪ್ರಚೋದಿಸಬೇಕಾಗಿದೆ. ಹಿರಿಯರು ಮತ್ತು ಶುಶ್ರೂಷಾ ಸೇವಕರು ಕೂಟಗಳಲ್ಲಿ ಹೇಳಿಕೆ ನೀಡುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ, ಏಕೆಂದರೆ ಕೂಟಗಳಲ್ಲಿನ ಭಾಗವಹಿಸುವಿಕೆಯಲ್ಲಿ ಹಾಗೂ ಹಾಜರಿಯಲ್ಲಿ ಅವರು ಮುಂದಾಳತ್ವವನ್ನು ವಹಿಸುವಂತೆ ನಿರೀಕ್ಷಿಸಲಾಗುತ್ತದೆ. ಆದರೂ, ಕ್ರೈಸ್ತ ಚಟುವಟಿಕೆಯ ಈ ನಿರ್ದಿಷ್ಟ ಅಂಶವನ್ನು, ಅಂದರೆ ಕೂಟಗಳಲ್ಲಿ ಹೇಳಿಕೆ ನೀಡುವುದನ್ನು ಒಬ್ಬ ವ್ಯಕ್ತಿಯು ಒಂದು ಪಂಥಾಹ್ವಾನವಾಗಿ ಕಂಡುಕೊಳ್ಳುತ್ತಿರುವಲ್ಲಿ, ಅವನು ಹೇಗೆ ಪ್ರಗತಿಯನ್ನು ಮಾಡಸಾಧ್ಯವಿದೆ?
ಪ್ರಗತಿಯನ್ನು ಮಾಡಲಿಕ್ಕಾಗಿರುವ ಸಲಹೆಗಳು
ಹೇಳಿಕೆ ನೀಡುವುದು ಯೆಹೋವನಿಗೆ ನಾವು ಸಲ್ಲಿಸುವ ಆರಾಧನೆಯ ಒಂದು ಭಾಗವಾಗಿದೆ ಎಂಬುದನ್ನು ನೆನಪಿನಲ್ಲಿಡಿರಿ. ಜರ್ಮನಿಯಲ್ಲಿ ವಾಸಿಸುತ್ತಿರುವ ಒಬ್ಬ ಕ್ರೈಸ್ತ ಸಹೋದರಿಯು ತನ್ನ ಹೇಳಿಕೆಗಳ ಬಗ್ಗೆ ಅವಳಿಗಿರುವ ದೃಷ್ಟಿಕೋನವನ್ನು ವಿವರಿಸುತ್ತಾಳೆ. “ತಮ್ಮ ನಂಬಿಕೆಯನ್ನು ವ್ಯಕ್ತಪಡಿಸದಂತೆ ದೇವಜನರನ್ನು ತಡೆಯಲಿಕ್ಕಾಗಿ ಸೈತಾನನು ಮಾಡುವ ಪ್ರಯತ್ನಗಳಿಗೆ, ನನ್ನ ಹೇಳಿಕೆಗಳು ನನ್ನ ವೈಯಕ್ತಿಕ ಉತ್ತರವಾಗಿವೆ.” ಅದೇ ಸಭೆಯೊಂದಿಗೆ ಸಹವಾಸಮಾಡುತ್ತಿದ್ದು, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡಿರುವಂಥ ಒಬ್ಬ ಸಹೋದರನು ಹೇಳುವುದು: “ಹೇಳಿಕೆ ನೀಡುವ ವಿಷಯದಲ್ಲಿ ನಾನು ತುಂಬ ಪ್ರಾರ್ಥಿಸುತ್ತೇನೆ.”
ಚೆನ್ನಾಗಿ ತಯಾರಿಮಾಡಿರಿ. ಅಧ್ಯಯನದ ವಿಷಯಭಾಗವನ್ನು ಮುಂಚಿತವಾಗಿಯೇ ಅಭ್ಯಾಸಿಸಲು ತಪ್ಪಿಹೋಗುವಲ್ಲಿ, ಹೇಳಿಕೆ ನೀಡುವುದು ನಿಮಗೆ ತುಂಬ ಕಷ್ಟಕರವಾಗಿರುವುದು ಮತ್ತು ನಿಮ್ಮ ಹೇಳಿಕೆಗಳು ಅಷ್ಟೇನೂ ಪರಿಣಾಮಕಾರಿಯಾಗಿರುವುದಿಲ್ಲ. ಕ್ರೈಸ್ತ ಕೂಟಗಳಲ್ಲಿ ಹೇಳಿಕೆ ನೀಡಲಿಕ್ಕಾಗಿರುವ ಸಲಹೆಗಳು, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಪ್ರಕಾಶನದ 70ನೆಯ ಪುಟದಲ್ಲಿ ಕೊಡಲ್ಪಟ್ಟಿವೆ.a
ಪ್ರತಿಯೊಂದು ಕೂಟದಲ್ಲಿ ಕಡಿಮೆಪಕ್ಷ ಒಂದು ಹೇಳಿಕೆಯನ್ನಾದರೂ ನೀಡುವ ಗುರಿಯನ್ನಿಡಿರಿ. ಇದರ ಅರ್ಥ ಅನೇಕ ಉತ್ತರಗಳನ್ನು ತಯಾರಿಸಬೇಕೆಂಬುದೇ ಆಗಿದೆ. ಏಕೆಂದರೆ ನೀವು ಅನೇಕ ಬಾರಿ ನಿಮ್ಮ ಕೈಯನ್ನು ಮೇಲೆತ್ತುವುದಾದರೆ, ಅಧ್ಯಯನವನ್ನು ನಡೆಸುತ್ತಿರುವ ಸಹೋದರನು ನಿಮಗೆ ಅವಕಾಶವನ್ನು ಕೊಡುವ ಸಂಭವನೀಯತೆ ಹೆಚ್ಚಾಗಿರುತ್ತದೆ. ನೀವು ಯಾವ ಪ್ರಶ್ನೆಗಳಿಗೆ ಉತ್ತರ ಕೊಡಲು ಸಿದ್ಧರಾಗಿದ್ದೀರಿ ಎಂಬುದನ್ನು ನೀವು ಮುಂದಾಗಿಯೇ ಅವನಿಗೆ ತಿಳಿಯಪಡಿಸಲು ಸಹ ಬಯಸಬಹುದು. ಒಂದುವೇಳೆ ನೀವು ಉತ್ತರವನ್ನು ಕೊಡಲು ಈಗಷ್ಟೇ ಆರಂಭಿಸಿರುವುದಾದರೆ, ಇದು ವಿಶೇಷವಾಗಿ ಸಹಾಯಕರವಾಗಿದೆ. “ಮಹಾಸಭೆಯಲ್ಲಿ” ನಿಮ್ಮ ಕೈಯನ್ನು ಮೇಲೆತ್ತಲು ನೀವು ಹಿಂಜರಿಯಬಹುದಾದರೂ, ಇದು ನೀವು ಉತ್ತರವನ್ನು ಸಿದ್ಧಪಡಿಸಿಕೊಂಡಿರುವ ಪ್ಯಾರಗ್ರಾಫ್ ಆಗಿದೆ ಮತ್ತು ಕೂಟವನ್ನು ನಡೆಸುತ್ತಿರುವ ಸಹೋದರನು ನಿಮ್ಮ ಕೈಯನ್ನು ಕಂಡುಕೊಳ್ಳಲಿಕ್ಕಾಗಿ ಕಣ್ಣುಹಾಯಿಸುತ್ತಾನೆ ಎಂಬ ತಿಳಿವಳಿಕೆಯೇ ನೀವು ಹೇಳಿಕೆಯನ್ನು ನೀಡುವಂತೆ ನಿಮ್ಮನ್ನು ಉತ್ತೇಜಿಸುವುದು.
ಆರಂಭದಲ್ಲೇ ಹೇಳಿಕೆ ನೀಡಿರಿ. ಕಷ್ಟಕರವಾದಂಥ ಒಂದು ಕೆಲಸವನ್ನು ಕೇವಲ ಮುಂದೂಡುವ ಮೂಲಕ ಅದನ್ನು ಸುಲಭಗೊಳಿಸಸಾಧ್ಯವಿಲ್ಲ. ಕೂಟದಲ್ಲಿ ಆರಂಭದಲ್ಲೇ ಒಂದು ಹೇಳಿಕೆಯನ್ನು ಮಾಡುವುದು ಸಹಾಯಕರವಾಗಿರಸಾಧ್ಯವಿದೆ. ಪ್ರಥಮ ಹೇಳಿಕೆಯನ್ನು ಮಾಡುವ ಕಷ್ಟಕರ ಕೆಲಸವನ್ನು ನೀವು ಸುಲಲಿತವಾಗಿ ಮಾಡಿಮುಗಿಸಿದ ಬಳಿಕ, ಎರಡನೆಯ ಬಾರಿ ಅಥವಾ ಮೂರನೆಯ ಬಾರಿ ಉತ್ತರವನ್ನು ನೀಡುವುದು ಎಷ್ಟು ಸುಲಭವಾಗುತ್ತದೆ ಎಂಬುದನ್ನು ನೋಡಿ ನೀವು ಆಶ್ಚರ್ಯಪಡುವಿರಿ.
ಸೂಕ್ತವಾದ ಆಸನವನ್ನು ಆಯ್ಕೆಮಾಡಿರಿ. ಕೆಲವರು ರಾಜ್ಯ ಸಭಾಗೃಹದ ಮುಂದಿನ ಆಸನಗಳಲ್ಲಿ ಕುಳಿತುಕೊಳ್ಳುವಾಗ ಹೇಳಿಕೆ ನೀಡಲು ಹೆಚ್ಚು ಸುಲಭವಾಗುವುದನ್ನು ಕಂಡುಕೊಳ್ಳುತ್ತಾರೆ. ಅಲ್ಲಿ ಕುಳಿತುಕೊಳ್ಳುವಾಗ ಅಪಕರ್ಷಣೆಗಳು ಕಡಿಮೆಯಾಗಿರುತ್ತವೆ, ಮತ್ತು ಅಧ್ಯಯನ ನಡೆಸುತ್ತಿರುವವನು ಅವರ ಕೈಗಳನ್ನು ಗಮನಿಸದಿರುವ ಸಾಧ್ಯತೆ ತುಂಬ ಕಡಿಮೆ ಇರುತ್ತದೆ. ಒಂದುವೇಳೆ ನೀವು ಹೀಗೆ ಮಾಡಲು ಪ್ರಯತ್ನಿಸುವಲ್ಲಿ, ಪ್ರತಿಯೊಬ್ಬರೂ ಕೇಳಿಸಿಕೊಳ್ಳಲು ಸಾಧ್ಯವಿರುವಷ್ಟು ಗಟ್ಟಿಯಾಗಿ ಮಾತಾಡಲು ಮರೆಯದಿರಿ, ಅದರಲ್ಲೂ ವಿಶೇಷವಾಗಿ ನಿಮ್ಮ ಸಭೆಯು ಧ್ವನಿವರ್ಧಕಗಳನ್ನು ಉಪಯೋಗಿಸದಿರುವಲ್ಲಿ ಇದು ಅತ್ಯಗತ್ಯವಾಗಿದೆ.
ಜಾಗರೂಕತೆಯಿಂದ ಕಿವಿಗೊಡಿರಿ. ಬೇರೊಬ್ಬರು ಆಗ ತಾನೇ ಕೊಟ್ಟಿರುವ ಅದೇ ಉತ್ತರವನ್ನು ಪುನರಾವರ್ತಿಸುವುದರಿಂದ ದೂರವಿರುವಂತೆ ಇದು ನಿಮಗೆ ಸಹಾಯಮಾಡುವುದು. ಇದಲ್ಲದೆ, ಇತರರಿಂದ ಮಾಡಲ್ಪಡುವ ಹೇಳಿಕೆಗಳು, ಆಗಷ್ಟೇ ವ್ಯಕ್ತಪಡಿಸಲ್ಪಟ್ಟ ವಿಚಾರವನ್ನು ಇನ್ನಷ್ಟು ವಿವರಿಸುವಂಥ ಒಂದು ಶಾಸ್ತ್ರವಚನವನ್ನೊ ಅಥವಾ ಒಂದು ಅಂಶವನ್ನೊ ನಿಮಗೆ ನೆನಪು ಹುಟ್ಟಿಸಬಹುದು. ಕೆಲವೊಮ್ಮೆ, ಒಂದು ಸಂಕ್ಷಿಪ್ತ ಅನುಭವವು ಚರ್ಚಿಸಲ್ಪಡುತ್ತಿರುವ ಅಂಶವನ್ನು ಇನ್ನಷ್ಟು ಸ್ಪಷ್ಟಪಡಿಸಬಹುದು. ಅಂಥ ಹೇಳಿಕೆಗಳು ತುಂಬ ಸಹಾಯಕರವಾಗಿವೆ.
ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರಿಸಲು ಕಲಿಯಿರಿ. ಅಧ್ಯಯನ ವಿಷಯಭಾಗದಿಂದ ಒಂದು ಹೇಳಿಕೆಯನ್ನು ಓದುವುದು, ಸರಿಯಾದ ಉತ್ತರವನ್ನು ನೀವು ಕಂಡುಕೊಂಡಿದ್ದೀರಿ ಎಂಬುದನ್ನು ಸೂಚಿಸಬಹುದು, ಮತ್ತು ಹೇಳಿಕೆಯನ್ನು ಮಾಡಲಾರಂಭಿಸಲು ಇದು ಒಂದು ಒಳ್ಳೇ ವಿಧವಾಗಿರಬಹುದು. ಆದರೆ ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರಿಸುವಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡುವುದು, ನೀವು ಆ ಅಂಶವನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬುದನ್ನು ತೋರಿಸುತ್ತದೆ. ನಮ್ಮ ಪ್ರಕಾಶನಗಳಲ್ಲಿರುವ ಪದಗಳನ್ನೇ ಪುನಃ ಓದಿಹೇಳುವ ಅಗತ್ಯವಿಲ್ಲ. ಯೆಹೋವನ ಸಾಕ್ಷಿಗಳು ತಮ್ಮ ಪ್ರಕಾಶನಗಳು ಏನನ್ನು ಹೇಳುತ್ತವೋ ಅದನ್ನೇ ಸುಮ್ಮನೆ ಪುನರಾವರ್ತಿಸುವುದಿಲ್ಲ.
ವಿಷಯವಸ್ತುವಿಗೆ ಸಂಬಂಧಿಸಿದ ಹೇಳಿಕೆಗಳನ್ನೇ ಮಾಡಿರಿ. ವಿಷಯವಸ್ತುವಿಗೆ ಸಂಬಂಧಿಸಿರದ ಅಥವಾ ಪರಿಗಣಿಸಲ್ಪಡುತ್ತಿರುವ ಮುಖ್ಯ ವಿಷಯವನ್ನು ಬಿಟ್ಟು ಬೇರೆ ಕಡೆಗೆ ತಿರುಗಿಸುವಂಥ ಹೇಳಿಕೆಗಳು ಅಯುಕ್ತವಾಗಿವೆ. ಇದರ ಅರ್ಥ, ನಿಮ್ಮ ಹೇಳಿಕೆಗಳು ಚರ್ಚಿಸಲ್ಪಡುತ್ತಿರುವ ವಿಷಯವಸ್ತುವಿಗೆ ಸಂಬಂಧಪಟ್ಟವುಗಳಾಗಿರಬೇಕು. ಇವು, ವಿಕಸಿಸಲ್ಪಡುತ್ತಿರುವ ಮುಖ್ಯ ವಿಷಯದ ಆತ್ಮಿಕವಾಗಿ ಭಕ್ತಿವೃದ್ಧಿಮಾಡುವಂಥ ಒಂದು ಚರ್ಚೆಯನ್ನು ಹೆಚ್ಚು ಮಾಹಿತಿಭರಿತವಾಗಿ ಮಾಡುವವು.
ಉತ್ತೇಜಿಸುವ ಗುರಿಯನ್ನಿಡಿರಿ. ಹೇಳಿಕೆ ನೀಡಲಿಕ್ಕಾಗಿರುವ ಒಂದು ಗಮನಾರ್ಹ ಕಾರಣವು ಇತರರನ್ನು ಉತ್ತೇಜಿಸುವುದಾಗಿರುವುದರಿಂದ, ಅವರನ್ನು ನಿರುತ್ತೇಜಿಸಬಹುದಾದ ವಿಷಯಗಳನ್ನು ಹೇಳುವುದರಿಂದ ನಾವು ದೂರವಿರಲು ಪ್ರಯತ್ನಿಸಬೇಕು. ಅಷ್ಟುಮಾತ್ರವಲ್ಲ, ಇತರರು ಹೇಳಲಿಕ್ಕಾಗಿ ಸ್ವಲ್ಪವನ್ನೂ ಅಥವಾ ಏನನ್ನೂ ಉಳಿಸದಿರುವಷ್ಟರ ಮಟ್ಟಿಗೆ ಪ್ಯಾರಗ್ರಾಫನ್ನು ಪೂರ್ಣವಾಗಿ ಆವರಿಸಬೇಡಿರಿ. ದೀರ್ಘವಾದ ಮತ್ತು ಜಟಿಲವಾದ ಉತ್ತರಗಳು ಅರ್ಥವನ್ನು ಅಸ್ಪಷ್ಟಗೊಳಿಸುತ್ತವೆ. ಕೆಲವೇ ಶಬ್ದಗಳಿಂದ ಕೂಡಿರುವ ಚುಟುಕಾದ ಉತ್ತರಗಳು ತುಂಬ ಪರಿಣಾಮಕಾರಿಯಾಗಿರಸಾಧ್ಯವಿದೆ, ಮತ್ತು ಇವು ತಾವು ತಯಾರಿಸಿರುವಂಥ ಚಿಕ್ಕ ಚಿಕ್ಕ ಉತ್ತರಗಳನ್ನು ಕೊಡುವಂತೆ ಹೊಸಬರನ್ನು ಉತ್ತೇಜಿಸುತ್ತವೆ.
ಕೂಟಗಳನ್ನು ನಡೆಸುವವರ ಪಾತ್ರ
ಪ್ರೋತ್ಸಾಹವನ್ನು ನೀಡುವವರಾಗಿರುವ ವಿಷಯದಲ್ಲಿ ಮಾತಾಡುವುದಾದರೆ, ಕೂಟವನ್ನು ನಡೆಸುವಂಥ ವ್ಯಕ್ತಿಯು ಭಾರವಾದ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಜಾಗರೂಕತೆಯಿಂದ ಕಿವಿಗೊಡುವ ಮೂಲಕ ಮತ್ತು ಬೇರೆ ಏನನ್ನೋ ಮಾಡುವುದರಲ್ಲಿ ತಲ್ಲೀನರಾಗುವುದಕ್ಕೆ ಬದಲಾಗಿ ಯಾರು ಹೇಳಿಕೆ ನೀಡುತ್ತಾರೋ ಅವರೊಂದಿಗೆ ವಿನಯಭಾವದ ದೃಷ್ಟಿಸಂಪರ್ಕವನ್ನು ಇಟ್ಟುಕೊಳ್ಳುವ ಮೂಲಕ, ಕೊಡಲ್ಪಡುವ ಪ್ರತಿಯೊಂದು ಹೇಳಿಕೆಯಲ್ಲಿ ಅವನು ನಿಜವಾದ ಆಸಕ್ತಿಯನ್ನು ತೋರಿಸುತ್ತಾನೆ. ಅವನು ಜಾಗರೂಕತೆಯಿಂದ ಕಿವಿಗೊಡದಿರುವಲ್ಲಿ ಮತ್ತು ಇದರ ಫಲಿತಾಂಶವಾಗಿ ಆಗಷ್ಟೇ ಹೇಳಲ್ಪಟ್ಟ ವಿಷಯವನ್ನೇ ಅನಗತ್ಯವಾಗಿ ಪುನರಾವರ್ತಿಸುವಲ್ಲಿ ಅಥವಾ ಆಗಷ್ಟೇ ಉತ್ತರಿಸಲ್ಪಟ್ಟಿದ್ದ ಒಂದು ಪ್ರಶ್ನೆಯನ್ನೇ ಪುನಃ ಕೇಳುವಲ್ಲಿ, ಅದೆಷ್ಟು ಅನುಚಿತವಾಗಿರುವುದು!
ಯಾರು ಅಧ್ಯಯನವನ್ನು ನಡೆಸುತ್ತಿದ್ದಾರೋ ಅವರು, ಆಗಷ್ಟೇ ಕೊಡಲ್ಪಟ್ಟಿರುವ ಉತ್ತರದಲ್ಲಿ ಏನೋ ಕೊರತೆಯಿತ್ತೋ ಎಂಬಂತೆ, ಆ ಉತ್ತರವನ್ನೇ ಸ್ವಲ್ಪ ಭಿನ್ನವಾದ ಶಬ್ದಗಳಿಂದ ಯಾವಾಗಲೂ ಪುನರಾವರ್ತಿಸುತ್ತಿರುವಲ್ಲಿ, ಅದು ಸಹ ನಿರುತ್ತೇಜನಕರವಾಗಿರುವುದು. ಇನ್ನೊಂದು ಕಡೆಯಲ್ಲಿ, ಹೇಳಿಕೆಗಳು ಒಂದು ಅರ್ಥಗರ್ಭಿತ ಅಂಶದ ಇನ್ನೂ ಹೆಚ್ಚಿನ ಚರ್ಚೆಗೆ ನಡೆಸುವಲ್ಲಿ ಅದೆಷ್ಟು ಪ್ರೋತ್ಸಾಹನೀಯವಾಗಿರುವುದು. ‘ನಾವಿದನ್ನು ನಮ್ಮ ಸಭೆಯಲ್ಲಿ ಹೇಗೆ ಅನ್ವಯಿಸಸಾಧ್ಯವಿದೆ?’ ಅಥವಾ ‘ಪ್ಯಾರಗ್ರಾಫ್ನಲ್ಲಿರುವ ಯಾವ ಶಾಸ್ತ್ರವಚನವು ಈಗಷ್ಟೇ ಹೇಳಿದ ವಿಷಯಕ್ಕೆ ಆಧಾರ ನೀಡುತ್ತದೆ?’ ಎಂಬಂಥ ರೀತಿಯ ಪ್ರಶ್ನೆಗಳು, ಅಮೂಲ್ಯವಾದ ಉತ್ತರಗಳನ್ನು ಒದಗಿಸುವಂಥ ಸಕಾರಾತ್ಮಕವಾದ ಹೇಳಿಕೆಗಳನ್ನು ನೀಡುವಂತೆ ಉತ್ತೇಜಿಸುತ್ತವೆ.
ಹೊಸಬರು ಅಥವಾ ಸಂಕೋಚಭಾವದವರು ಒಂದು ಹೇಳಿಕೆಯನ್ನು ನೀಡುವಾಗ, ಅವರನ್ನು ವಿಶೇಷವಾಗಿ ಪ್ರಶಂಸಿಸಬೇಕು ಎಂಬುದಂತೂ ನಿಶ್ಚಯ. ಯಾವುದೇ ಮುಜುಗರವನ್ನು ದೂರಮಾಡಲಿಕ್ಕಾಗಿ ಮತ್ತು ಸೂಕ್ತವಾಗಿರುವಾಗ ಸಲಹೆಗಳನ್ನು ನೀಡುವ ಅವಕಾಶವನ್ನು ಅಧ್ಯಯನ ಚಾಲಕನಿಗೆ ನೀಡಲಿಕ್ಕಾಗಿ, ಅಧ್ಯಯನದ ಬಳಿಕ ವೈಯಕ್ತಿಕವಾಗಿ ಪ್ರಶಂಸೆಯನ್ನು ಮಾಡಬಹುದು.
ಸಾಮಾನ್ಯ ಸಂಭಾಷಣೆಯಲ್ಲಿ, ಯಾವಾಗಲೂ ಮಾತಾಡುತ್ತಾ ಇರುವ ಒಬ್ಬ ವ್ಯಕ್ತಿಯು ಸಂವಾದವನ್ನು ತಡೆಗಟ್ಟುತ್ತಾನೆ. ತಾವು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದು ಅವನ ಕೇಳುಗರಿಗೆ ಅನಿಸುತ್ತದೆ. ಒಂದುವೇಳೆ ಅವರು ಕಿವಿಗೊಡಲು ಸಿದ್ಧರಾಗುವುದಾದರೂ, ಅರೆಮನಸ್ಸಿನಿಂದ ಹಾಗೆ ಮಾಡುತ್ತಾರೆ. ಯಾರು ಅಧ್ಯಯನವನ್ನು ನಡೆಸುತ್ತಾರೋ ಅವರೇ ಅನೇಕ ಬಾರಿ ಹೇಳಿಕೆ ನೀಡುವ ಮೂಲಕ ಚರ್ಚೆಯಲ್ಲಿ ಮೇಲುಗೈ ಪಡೆಯುವಾಗ, ಅದೇ ರೀತಿ ಸಂಗತಿಯು ಸಂಭವಿಸಬಹುದು. ಆದರೂ, ಒಂದು ಕೂಟವನ್ನು ನಡೆಸುತ್ತಿರುವಂಥ ವ್ಯಕ್ತಿಯು ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಮೂಲಕ ಕೆಲವೊಮ್ಮೆ ಸಭಿಕರಿಂದ ವಿಷಯವನ್ನು ಹೊರಸೆಳೆಯಬಹುದು ಮತ್ತು ವಿಷಯವಸ್ತುವಿನ ಕುರಿತಾದ ಅವರ ಆಲೋಚನೆಯನ್ನು ಪ್ರಚೋದಿಸಬಹುದು. ಅಂಥ ಪ್ರಶ್ನೆಗಳನ್ನು ಮಿತವಾಗಿ ಉಪಯೋಗಿಸಬೇಕು.
ಅಧ್ಯಯನ ಚಾಲಕನು ಯಾರು ಮೊದಲು ಕೈಯನ್ನು ಎತ್ತುತ್ತಾರೋ ಆ ವ್ಯಕ್ತಿಯೇ ಉತ್ತರವನ್ನು ಕೊಡುವಂತೆ ಕರೆಕೊಡುವುದಿಲ್ಲ. ಏಕೆಂದರೆ ತಮ್ಮ ಆಲೋಚನೆಗಳನ್ನು ನಿರ್ದಿಷ್ಟ ರೂಪದಲ್ಲಿ ಹೇಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವ ಆವಶ್ಯಕತೆ ಯಾರಿಗಿದೆಯೋ ಅಂಥವರನ್ನು ಇದು ನಿರುತ್ತೇಜಿಸಸಾಧ್ಯವಿದೆ. ಅವನು ಸ್ವಲ್ಪ ಕಾಯುವ ಮೂಲಕ, ಈಗಾಗಲೇ ಯಾರು ಹೇಳಿಕೆಯನ್ನು ನೀಡಿಲ್ಲವೋ ಅವರಿಗೆ ಅವಕಾಶವನ್ನು ಕೊಡುವನು. ತಮ್ಮ ಗ್ರಹಿಕೆಗೆ ಮೀರಿರುವಂಥ ವಿಷಯವಸ್ತುಗಳ ಕುರಿತಾಗಿರುವ ಪ್ರಶ್ನೆಗಳನ್ನು ಉತ್ತರಿಸುವಂತೆ, ಚಿಕ್ಕ ಮಕ್ಕಳಿಗೆ ಕರೆಕೊಡದಿರುವ ಮೂಲಕವೂ ಅವನು ವಿವೇಚನಾಶಕ್ತಿಯನ್ನು ತೋರಿಸುವನು.
ಒಂದುವೇಳೆ ತಪ್ಪು ಉತ್ತರವು ಕೊಡಲ್ಪಟ್ಟಿರುವಲ್ಲಿ ಆಗೇನು? ಅಧ್ಯಯನ ಚಾಲಕನು, ಯಾರು ಉತ್ತರವನ್ನು ಕೊಟ್ಟನೋ ಆ ವ್ಯಕ್ತಿಗೆ ಮುಜುಗರವನ್ನು ಉಂಟುಮಾಡುವುದರಿಂದ ದೂರವಿರಬೇಕು. ಕೆಲವೊಮ್ಮೆ ತಪ್ಪಾದ ಹೇಳಿಕೆಗಳು ಕೊಡಲ್ಪಟ್ಟರೂ, ಅವುಗಳಲ್ಲಿ ಸತ್ಯಾಂಶಗಳು ಒಳಗೂಡಿರುತ್ತವೆ. ಸಮಯೋಚಿತ ಜಾಣ್ಮೆಯನ್ನು ಉಪಯೋಗಿಸಿ ಅದರಲ್ಲಿ ಯಾವುದು ಸರಿಯಾಗಿದೆಯೋ ಆ ಅಂಶವನ್ನು ಆರಿಸಿಕೊಳ್ಳುವ ಮೂಲಕ, ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಕೇಳುವ ಮೂಲಕ, ಅಥವಾ ಹೆಚ್ಚಿನ ಪ್ರಶ್ನೆಯನ್ನು ಕೇಳುವ ಮೂಲಕ, ಅಧ್ಯಯನ ಚಾಲಕನು ಯಾವುದೇ ಮುಜುಗರವನ್ನು ಉಂಟುಮಾಡದೆ ಉತ್ತರವನ್ನು ಸರಿಪಡಿಸಬಲ್ಲನು.
ಹೇಳಿಕೆ ನೀಡುವುದನ್ನು ಉತ್ತೇಜಿಸಲಿಕ್ಕಾಗಿ, ಒಂದು ಕೂಟವನ್ನು ನಡೆಸುತ್ತಿರುವಂಥ ವ್ಯಕ್ತಿಯು ‘ಬೇರೆ ಯಾರಾದರೂ ಉತ್ತರ ಕೊಡಲು ಬಯಸುತ್ತೀರೋ?’ ಎಂಬಂಥ ಸಾಮಾನ್ಯ ಪ್ರಶ್ನೆಗಳನ್ನು ಕೇಳದಿರುವುದು ಒಳ್ಳೇದು. ‘ಇಷ್ಟರ ತನಕ ಯಾರು ಉತ್ತರಿಸಿಲ್ಲ? ಇದೇ ನಿಮಗಿರುವ ಕೊನೆಯ ಅವಕಾಶ!’ ಎಂಬ ಮಾತು ಸದುದ್ದೇಶವುಳ್ಳದ್ದಾಗಿ ಇರಬಹುದಾದರೂ, ಖಂಡಿತವಾಗಿಯೂ ಅದು ಒಬ್ಬ ವ್ಯಕ್ತಿಯು ಬಹಿರಂಗವಾಗಿ ತನ್ನನ್ನು ವ್ಯಕ್ತಪಡಿಸಿಕೊಳ್ಳುವಂತೆ ಉತ್ತೇಜಿಸುವುದಿಲ್ಲ. ಅಧ್ಯಯನದಲ್ಲಿ ಈ ಮುಂಚೆ ಹೇಳಿಕೆ ನೀಡಿಲ್ಲದಿರುವುದಕ್ಕಾಗಿ ಸಹೋದರರು ದೋಷಿ ಮನೋಭಾವವನ್ನು ತಾಳುವಂತೆ ಮಾಡಬಾರದು. ಅದಕ್ಕೆ ಬದಲಾಗಿ, ತಮಗೆ ಗೊತ್ತಿರುವಂಥ ವಿಷಯವನ್ನು ಹಂಚಿಕೊಳ್ಳುವಂತೆ ಅವರು ಉತ್ತೇಜಿಸಲ್ಪಡಬೇಕು, ಏಕೆಂದರೆ ಹಾಗೆ ಹಂಚಿಕೊಳ್ಳುವುದು ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ. ಇದಕ್ಕೆ ಕೂಡಿಸಿ, ಅಧ್ಯಯನ ಚಾಲಕನು ಹೇಳಿಕೆ ನೀಡುವಂತೆ ಯಾರಿಗಾದರೂ ಅವಕಾಶ ನೀಡಿದ ಬಳಿಕ, “ಇವರ ಉತ್ತರದ ಬಳಿಕ, ಈ ಹೆಸರಿನ ಸಹೋದರ ಅಥವಾ ಸಹೋದರಿಯ ಹೇಳಿಕೆಯನ್ನು ಕೇಳೋಣ” ಎಂದು ಮೊದಲೇ ಹೇಳದಿರುವುದು ಅತ್ಯುತ್ತಮವಾಗಿರುವುದು. ಅಧ್ಯಯನವನ್ನು ನಡೆಸುತ್ತಿರುವವನು ಮೊದಲಾಗಿ ಕೊಡಲ್ಪಡುವ ಹೇಳಿಕೆಗೆ ಕಿವಿಗೊಡಬೇಕು ಮತ್ತು ನಂತರ ಹೆಚ್ಚಿನ ಹೇಳಿಕೆಯ ಅಗತ್ಯವಿದೆಯೋ ಎಂಬುದನ್ನು ನಿರ್ಧರಿಸಬೇಕು.
ಹೇಳಿಕೆ ನೀಡುವುದು ಒಂದು ಸುಯೋಗವಾಗಿದೆ
ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಒಂದು ಆತ್ಮಿಕ ಆವಶ್ಯಕತೆಯಾಗಿದೆ; ಕೂಟಗಳಲ್ಲಿ ಹೇಳಿಕೆ ನೀಡುವುದು ಒಂದು ಸುಯೋಗವಾಗಿದೆ. “ಸಭಾಮಧ್ಯದಲ್ಲಿ” ಯೆಹೋವನನ್ನು ಸ್ತುತಿಸುವ ಈ ಅಪೂರ್ವ ಸುಯೋಗದಲ್ಲಿ ನಾವು ಎಷ್ಟರ ಮಟ್ಟಿಗೆ ಭಾಗವಹಿಸುತ್ತೇವೋ ಅಷ್ಟರ ಮಟ್ಟಿಗೆ ನಾವು ದಾವೀದನ ಮಾದರಿಯನ್ನು ಅನುಸರಿಸುತ್ತೇವೆ ಹಾಗೂ ಪೌಲನ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಕೂಟಗಳಲ್ಲಿನ ನಮ್ಮ ಭಾಗವಹಿಸುವಿಕೆಯು, ನಾವು ನಮ್ಮ ಸಹೋದರರನ್ನು ಪ್ರೀತಿಸುತ್ತೇವೆ ಮತ್ತು ನಾವು ಯೆಹೋವನ ಮಹಾ ಸಭೆಯ ಭಾಗವಾಗಿದ್ದೇವೆ ಎಂಬುದನ್ನು ರುಜುಪಡಿಸುತ್ತದೆ. ‘ಆ ದಿನವು ಸಮೀಪಿಸುತ್ತಾ ಇದೆ ಎಂಬುದನ್ನು ನೀವು ನೋಡುತ್ತಿರುವಾಗ,’ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗದೆ ನೀವು ಬೇರೆಲ್ಲಿ ಇರಲು ಬಯಸುವಿರಿ?—ಇಬ್ರಿಯ 10:25.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 20ರಲ್ಲಿರುವ ಚಿತ್ರಗಳು]
ಕ್ರೈಸ್ತ ಕೂಟಗಳಲ್ಲಿ ಕಿವಿಗೊಡುವುದು ಮತ್ತು ಹೇಳಿಕೆ ನೀಡುವುದು ಖಂಡಿತವಾಗಿಯೂ ಅತಿ ಪ್ರಾಮುಖ್ಯವಾಗಿದೆ
[ಪುಟ 21ರಲ್ಲಿರುವ ಚಿತ್ರ]
ಯಾರು ಅಧ್ಯಯನವನ್ನು ನಡೆಸುತ್ತಾನೋ ಅವನು ಪ್ರತಿಯೊಂದು ಹೇಳಿಕೆಯಲ್ಲಿ ನಿಜವಾದ ಆಸಕ್ತಿಯನ್ನು ತೋರಿಸುತ್ತಾನೆ