ಯೇಸುವಿನ ಅದ್ಭುತಗಳು—ನೀವೇನು ಕಲಿಯಬಲ್ಲಿರಿ?
ಯೇಸುವಿನ ಭೂಜೀವಿತದ ಕುರಿತಾದ ಬೈಬಲ್ ವೃತ್ತಾಂತಗಳು, “ಅದ್ಭುತ”ಕ್ಕಾಗಿರುವ ಮೂಲ ಭಾಷಾ ಪದವನ್ನು ಎಂದೂ ಉಪಯೋಗಿಸಲಿಲ್ಲ ಎಂಬುದನ್ನು ತಿಳಿದು ನಿಮಗೆ ಆಶ್ಚರ್ಯವಾದೀತು. “ಅದ್ಭುತ” ಎಂದು ಕೆಲವೊಮ್ಮೆ ಭಾಷಾಂತರಿಸಲಾಗಿರುವ ಗ್ರೀಕ್ ಪದದ (ಧೀನಾಮೀಸ್) ಅಕ್ಷರಾರ್ಥವು, “ಶಕ್ತಿ” ಎಂದಾಗಿದೆ. (ಲೂಕ 8:46) ಅದನ್ನು “ಮಹತ್ಕಾರ್ಯ” ಅಥವಾ “ಸಾಮರ್ಥ್ಯ” ಎಂದೂ ತರ್ಜುಮೆಮಾಡಬಹುದು. (ಮತ್ತಾಯ 11:20; 25:15) ಒಬ್ಬ ವಿದ್ವಾಂಸನಿಗನುಸಾರ, ಈ ಗ್ರೀಕ್ ಪದವು “ನಡೆಸಲ್ಪಟ್ಟಿರುವ ಬಲಿಷ್ಠಕೃತ್ಯವನ್ನು, ಮತ್ತು ವಿಶಿಷ್ಟವಾಗಿ ಅದು ಯಾವ ಶಕ್ತಿಯಿಂದ ನಡೆಸಲ್ಪಟ್ಟಿತ್ತೊ ಅದಕ್ಕೆ ಒತ್ತುನೀಡುತ್ತದೆ. ಅಂತಹ ಘಟನೆಯನ್ನು, ಕ್ರಿಯೆಯಲ್ಲಿ ತೋರಿಬರುವ ದೇವರ ಶಕ್ತಿಗೆ ಒತ್ತುನೀಡುತ್ತಾ ವರ್ಣಿಸಲಾಗಿದೆ.”
‘ಉತ್ಪಾತ’ ಯಾ ‘ಚಮತ್ಕಾರ’ ಎಂಬರ್ಥವುಳ್ಳ ಇನ್ನೊಂದು ಗ್ರೀಕ್ ಪದವು (ಟೀರಾಸ್) ಪ್ರೇಕ್ಷಕರ ಮೇಲೆ ಆಗುವ ಪರಿಣಾಮವನ್ನು ಎತ್ತಿತೋರಿಸುತ್ತದೆ. ಹೆಚ್ಚಾಗಿ ಜನಸಮೂಹ ಮತ್ತು ಶಿಷ್ಯರು ಯೇಸುವಿನ ಮಹತ್ಕಾರ್ಯಗಳನ್ನು ನೋಡಿ ಬೆರಗಾಗುತ್ತಿದ್ದರು.—ಮಾರ್ಕ 2:12; 4:41; 6:51; ಲೂಕ 9:43.
ಯೇಸುವಿನ ಅದ್ಭುತಗಳಿಗೆ ಸೂಚಿಸುವ ಮೂರನೆಯ ಗ್ರೀಕ್ ಪದವು (ಸೀಮೀಆನ್) ಒಂದು “ಸೂಚಕಕಾರ್ಯ”ವನ್ನು ಅರ್ಥೈಸುತ್ತದೆ. ಅದು “ಅದ್ಭುತದ ಗಹನವಾದ ಅರ್ಥದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ” ಎಂದು ವಿದ್ವಾಂಸರಾದ ರಾಬರ್ಟ್ ಡೆಫಿನ್ಬಾವ್ ತಿಳಿಸುತ್ತಾರೆ. ಅವರು ಕೂಡಿಸಿದ್ದು: “ಒಂದು ಸೂಚಕಕಾರ್ಯವು, ನಮ್ಮ ಪ್ರಭುವಾದ ಯೇಸುವಿನ ಕುರಿತಾದ ಒಂದು ಸತ್ಯವನ್ನು ತಿಳಿಯಪಡಿಸುವ ಒಂದು ಅದ್ಭುತವಾಗಿದೆ.”
ಕಣ್ಕಟ್ಟೊ ದೇವದತ್ತ ಶಕ್ತಿಯೊ?
ಬೈಬಲು ಯೇಸುವಿನ ಅದ್ಭುತಗಳನ್ನು, ಜನರ ಮನರಂಜಿಸುವ ಉದ್ದೇಶದಿಂದ ನಡೆಸಲ್ಪಟ್ಟ ಕೈಚಳಕ ಇಲ್ಲವೆ ಕಣ್ಕಟ್ಟುಗಳಂತೆ ವರ್ಣಿಸುವುದಿಲ್ಲ. ಆ ಅದ್ಭುತಗಳು, ಯೇಸು ದೆವ್ವಬಿಡಿಸಿದ ಹುಡುಗನ ಸಂಬಂಧದಲ್ಲಿ ನಡೆದಂತೆ, ‘ದೇವರ ಮಹತ್ತಿನ’ ಇಲ್ಲವೆ ಘನಗಾಂಭೀರ್ಯವುಳ್ಳ ಶಕ್ತಿಯ ಪ್ರದರ್ಶನಗಳಾಗಿದ್ದವು. (ಲೂಕ 9:37-43) ಸರ್ವಶಕ್ತನಾದ ದೇವರಿಗೆ, ಹೌದು ಯಾರನ್ನು ‘ಅತಿ ಬಲಾಢ್ಯನು’ ಎಂದು ವರ್ಣಿಸಲಾಗಿದೆಯೊ ಆತನಿಗೆ ಇಂಥ ಮಹತ್ಕಾರ್ಯಗಳು ಅಸಾಧ್ಯವೊ? (ಯೆಶಾಯ 40:26) ಖಂಡಿತವಾಗಿಯೂ ಇಲ್ಲ!
ಸುವಾರ್ತೆ ಪುಸ್ತಕದಲ್ಲಿನ ವೃತ್ತಾಂತಗಳು, ಯೇಸು ನಡಿಸಿದ ಸುಮಾರು 35 ಅದ್ಭುತಗಳ ಬಗ್ಗೆ ತಿಳಿಸುತ್ತವೆ. ಆದರೆ ಅವನು ನಡೆಸಿದ ಅದ್ಭುತಗಳ ಪೂರ್ಣ ಸಂಖ್ಯೆಯನ್ನು ತಿಳಿಸಲಾಗಿಲ್ಲ. ದೃಷ್ಟಾಂತಕ್ಕಾಗಿ ಮತ್ತಾಯ 14:14 ತಿಳಿಸುವುದು: “ಆತನು [ಯೇಸು] ಹೊರಗೆ ಬಂದು ಬಹು ಜನರ ಗುಂಪನ್ನು ಕಂಡು ಕನಿಕರ ಪಟ್ಟು ಅವರಲ್ಲಿದ್ದ ರೋಗಿಗಳನ್ನು ಸ್ವಸ್ಥಮಾಡಿದನು.” ಆ ಸಂದರ್ಭದಲ್ಲಿ ಅವನು ಎಷ್ಟು ಮಂದಿ ಅಸ್ವಸ್ಥರನ್ನು ಗುಣಪಡಿಸಿದನೆಂದು ತಿಳಿಸಲಾಗಿಲ್ಲ.
ಯೇಸು ತಾನು ದೇವಕುಮಾರನು, ವಾಗ್ದತ್ತ ಮೆಸ್ಸೀಯನು ಎಂದು ಹೇಳಿಕೊಳ್ಳುತ್ತಿದ್ದುದರಿಂದ, ಆ ಹೇಳಿಕೆಯನ್ನು ಬೆಂಬಲಿಸಲು ಅವನ ಮಹತ್ಕಾರ್ಯಗಳು ಆಧಾರವೂ ಅತ್ಯಾವಶ್ಯಕವೂ ಆಗಿದ್ದವು. ಅವುಗಳನ್ನು ನಡೆಸಲು ಯೇಸುವನ್ನು ಶಕ್ತಗೊಳಿಸಿದಂಥದ್ದು ದೇವದತ್ತ ಶಕ್ತಿಯೇ ಎಂಬದನ್ನು ಶಾಸ್ತ್ರವಚನಗಳು ದೃಢೀಕರಿಸಿದವು. ಯೇಸುವನ್ನು ಸೂಚಿಸಿ ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ನಿಮಗೂ ತಿಳಿದಿರುವಂತೆ ಆತನ ಕೈಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೊಟ್ಟನು.” (ಅ. ಕೃತ್ಯಗಳು 2:22) ಇನ್ನೊಂದು ಸಂದರ್ಭದಲ್ಲಿ ಪೇತ್ರನು ಹೇಳಿದ್ದೇನೆಂದರೆ, “ದೇವರು . . . ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು.”—ಅ. ಕೃತ್ಯಗಳು 10:37, 38.
ಯೇಸುವಿನ ಅದ್ಭುತಗಳು ಮತ್ತು ಅವನ ಸಂದೇಶವು ಒಂದಕ್ಕೊಂದು ಹೆಣೆದುಕೊಂಡಿದ್ದವು. ಮಾರ್ಕ 1:21-27, ಯೇಸುವಿನ ಬೋಧನೆ ಮತ್ತು ಅವನ ಅದ್ಭುತಗಳಲ್ಲಿ ಒಂದಕ್ಕೆ ಜನರು ತೋರಿಸಿದಂಥ ಪ್ರತಿಕ್ರಿಯೆಯನ್ನು ತಿಳಿಸುತ್ತದೆ. ಮಾರ್ಕ 1:22, ಜನಸಮೂಹವು “ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು” ಎಂದು ಹೇಳುತ್ತದೆ ಮತ್ತು 27ನೇ ವಚನವು, ಅವನು ದೆವ್ವವನ್ನು ಬಿಡಿಸಿದಾಗ ಅವರು ‘ಬೆರಗಾದರು’ ಎಂದು ಹೇಳುತ್ತದೆ. ಯೇಸುವಿನ ಮಹತ್ಕಾರ್ಯಗಳೂ ಮತ್ತು ಅವನ ಸಂದೇಶವೂ ಅವನೇ ಮೆಸ್ಸೀಯನು ಎಂಬುದನ್ನು ಸಾಬೀತುಪಡಿಸಿದವು.
ತಾನೇ ಮೆಸ್ಸೀಯನೆಂದು ಯೇಸು ಕೇವಲ ಹೇಳಿಕೊಳ್ಳುತ್ತಿರಲಿಲ್ಲ; ಯೇಸುವಿನ ಮಾತುಗಳು ಹಾಗೂ ಇತರ ಕೃತ್ಯಗಳೊಂದಿಗೆ, ಅವನ ಅದ್ಭುತಗಳ ಮೂಲಕ ತೋರಿಬರುತ್ತಿದ್ದ ದೇವದತ್ತ ಶಕ್ತಿಯು ಸಹ ಅವನ ಮೆಸ್ಸೀಯತ್ವಕ್ಕೆ ಸಾಕ್ಷ್ಯವನ್ನು ಕೊಟ್ಟಿತು. ಯೇಸುವಿನ ಪಾತ್ರ ಮತ್ತು ಅಧಿಕಾರದ ಬಗ್ಗೆ ಸವಾಲುಗಳು ಎದ್ದಾಗ ಅವನು ಧೈರ್ಯದಿಂದ ಉತ್ತರಿಸಿದ್ದು: “ನನಗಂತೂ [ಸ್ನಾನಿಕನಾದ] ಯೋಹಾನನ ಸಾಕ್ಷಿಗಿಂತ ಹೆಚ್ಚಿನ ಸಾಕ್ಷಿ ಉಂಟು; ಹೇಗಂದರೆ ಪೂರೈಸುವದಕ್ಕೆ ತಂದೆ ನನಗೆ ಕೊಟ್ಟಿರುವ ಕೆಲಸಗಳು, ಅಂದರೆ ನಾನು ಮಾಡುವ ಕೆಲಸಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟನೆಂಬದಾಗಿ ನನ್ನ ವಿಷಯದಲ್ಲಿ ಸಾಕ್ಷಿಕೊಡುತ್ತವೆ.”—ಯೋಹಾನ 5:36.
ವಿಶ್ವಾಸಾರ್ಹತೆಯ ಗುರುತುಗಳು
ಯೇಸುವಿನ ಅದ್ಭುತಗಳು ವಾಸ್ತವಿಕವೂ ವಿಶ್ವಾಸಾರ್ಹವೂ ಆಗಿದ್ದವೆಂದು ನಾವು ಏಕೆ ನಿಶ್ಚಯದಿಂದಿರಬಲ್ಲೆವು? ವಿಶ್ವಾಸಾರ್ಹತೆಯ ಕೆಲವೊಂದು ಗುರುತುಗಳನ್ನು ಪರಿಗಣಿಸಿರಿ.
ಮಹತ್ಕಾರ್ಯಗಳನ್ನು ನಡೆಸುವಾಗ ಯೇಸು ಎಂದಿಗೂ ತನ್ನ ಕಡೆಗೆ ಗಮನ ಸೆಳೆಯಲಿಲ್ಲ. ತಾನು ನಡೆಸುವ ಯಾವುದೇ ಅದ್ಭುತದಿಂದಾಗಿ ದೇವರಿಗೆ ಕೀರ್ತಿ ಮತ್ತು ಮಹಿಮೆಯು ಸಲ್ಲುವಂತೆ ಅವನು ಖಚಿತಪಡಿಸಿಕೊಳ್ಳುತ್ತಿದ್ದನು. ಉದಾಹರಣೆಗೆ, ಒಬ್ಬ ಕುರುಡನನ್ನು ಗುಣಪಡಿಸುವ ಮುಂಚೆ ಯೇಸು, ಈ ಗುಣಪಡಿಸುವಿಕೆಯು “ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವದಕ್ಕೆ” ನಡೆಯುವುದು ಎಂದು ಒತ್ತಿಹೇಳಿದನು.—ಯೋಹಾನ 9:1-3; 11:1-4.
ಕಣ್ಕಟ್ಟು ಮಾಡುವವರು, ಜಾದುಗಾರರು, ಮತ್ತು ಭಕ್ತಿಚಿಕಿತ್ಸಕರಿಗೆ ಅಸದೃಶವಾಗಿ, ಯೇಸು ಎಂದೂ ವಶೀಕರಣ, ಠಕ್ಕು, ಆಡಂಬರದ ಪ್ರದರ್ಶನಗಳು, ಜಾದೂ ಮಂತ್ರಗಳು ಇಲ್ಲವೆ ಭಾವಾತ್ಮಕ ವಿಧಿವಿಧಾನಗಳನ್ನು ಬಳಸಲಿಲ್ಲ. ಅವನು ಮೂಢನಂಬಿಕೆಯನ್ನಾಗಲಿ, ಪವಿತ್ರವಸ್ತುಗಳನ್ನಾಗಲಿ ಬಳಸಲಿಲ್ಲ. ಯೇಸು ಇಬ್ಬರು ಕುರುಡರನ್ನು ಗುಣಪಡಿಸಿದಂಥ ಸರಳವಾದ ವಿಧವನ್ನು ಗಮನಿಸಿರಿ. ಆ ವೃತ್ತಾಂತವು ಹೇಳುವುದು: “ಯೇಸು ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೆ ಅವರಿಗೆ ಕಣ್ಣುಬಂದವು, ಅವರು ಆತನ ಹಿಂದೆ ಹೋದರು.” (ಮತ್ತಾಯ 20:29-34) ಯಾವುದೇ ವಿಧಿಸಂಸ್ಕಾರವಾಗಲಿ, ಸಮಾರಂಭವಾಗಲಿ, ಆಡಂಬರದ ಪ್ರದರ್ಶನವಾಗಲಿ ಅಲ್ಲಿರಲಿಲ್ಲ. ಯೇಸು ತನ್ನ ಅದ್ಭುತಗಳನ್ನು ಬಹಿರಂಗವಾಗಿ, ಹೆಚ್ಚಾಗಿ ಅಸಂಖ್ಯಾತ ಪ್ರತ್ಯಕ್ಷ ಸಾಕ್ಷಿಗಳ ಕಣ್ಣೆದುರಿಗೇ ಮಾಡುತ್ತಿದ್ದನು. ಅವನು ವಿಶೇಷ ರೀತಿಯ ಬೆಳಕು ವ್ಯವಸ್ಥೆ, ವೇದಿಕೆ, ಇಲ್ಲವೆ ರಂಗಸಜ್ಜುಗಳನ್ನು ಬಳಸಲಿಲ್ಲ. ಇದಕ್ಕೆ ತೀರ ವಿರುದ್ಧವಾಗಿ, ಆಧುನಿಕ ದಿನದ ಅದ್ಭುತಗಳನ್ನು ಸಾಕ್ಷ್ಯಾಧಾರಗಳೊಂದಿಗೆ ದಾಖಲಿಸಲಾಗುವುದಿಲ್ಲ.—ಮಾರ್ಕ 5:24-29; ಲೂಕ 7:11-15.
ತನ್ನ ಅದ್ಭುತಗಳಿಂದ ಪ್ರಯೋಜನಪಡೆದವರಿಗಿದ್ದ ನಂಬಿಕೆಯನ್ನು ಯೇಸು ಕೆಲವೊಮ್ಮೆ ಎಲ್ಲರ ಮುಂದೆ ಅಂಗೀಕರಿಸಿದನು. ಆದರೆ ಒಬ್ಬ ವ್ಯಕ್ತಿಗೆ ನಂಬಿಕೆ ಇಲ್ಲದಿದ್ದಾಗಲೂ, ಇದು ಯೇಸುವನ್ನು ಅದ್ಭುತ ನಡಿಸುವುದರಿಂದ ತಡೆಯಲಿಲ್ಲ. ಅವನು ಗಲಿಲಾಯದ ಕಪೆರ್ನೌಮಿನಲ್ಲಿದ್ದಾಗ, “ದೆವ್ವಹಿಡಿದ ಬಹಳ ಜನರನ್ನು ಆತನ ಬಳಿಗೆ ಕರತಂದರು; ಆತನು ಮಾತು ಮಾತ್ರದಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನು ವಾಸಿಮಾಡಿದನು.” (ಓರೆ ಅಕ್ಷರಗಳು ನಮ್ಮವು.)—ಮತ್ತಾಯ 8:16.
ಜನರ ನಿಜವಾದ ಶಾರೀರಿಕ ಅಗತ್ಯಗಳನ್ನು ಪೂರೈಸಲಿಕ್ಕಾಗಿಯೇ ಯೇಸು ಅದ್ಭುತಗಳನ್ನು ನಡೆಸುತ್ತಿದ್ದನೇ ವಿನಃ, ಪ್ರೇಕ್ಷಕರ ಕೌತುಕವನ್ನು ತಣಿಸಲಿಕ್ಕಾಗಿ ಅಲ್ಲ. (ಮಾರ್ಕ 10:46-52; ಲೂಕ 23:8) ಮತ್ತು ಯಾವುದೇ ರೀತಿಯಲ್ಲಿ ತನ್ನ ವೈಯಕ್ತಿಕ ಲಾಭಕ್ಕಾಗಿ ಅವನೆಂದೂ ಅದ್ಭುತಗಳನ್ನು ನಡೆಸಲಿಲ್ಲ.—ಮತ್ತಾಯ 4:2-4; 10:8.
ಸುವಾರ್ತೆ ಪುಸ್ತಕ ವೃತ್ತಾಂತಗಳ ಕುರಿತಾಗಿ ಏನು?
ಯೇಸುವಿನ ಅದ್ಭುತಗಳ ಕುರಿತಾದ ವಾಸ್ತವಾಂಶಗಳು ನಮಗೆ ನಾಲ್ಕು ಸುವಾರ್ತೆ ಪುಸ್ತಕಗಳ ಪುಟಗಳಲ್ಲಿ ಸಾಗಿಸಲಾಗಿವೆ. ಆದರೆ ಯೇಸು ನಡೆಸಿದನೆಂದು ಹೇಳಲಾಗುವ ಅದ್ಭುತಗಳ ವಿಶ್ವಾಸಾರ್ಹತೆಯನ್ನು ನಾವು ಪರೀಕ್ಷಿಸುವಾಗ ಈ ವೃತ್ತಾಂತಗಳ ಮೇಲೆ ಆತುಕೊಳ್ಳಲು ಸಕಾರಣಗಳಿವೆಯೊ? ಹೌದು, ಇವೆ.
ಈಗಾಗಲೇ ತಿಳಿಸಲ್ಪಟ್ಟಿರುವಂತೆ, ಯೇಸುವಿನ ಅದ್ಭುತಗಳು ಸಾರ್ವಜನಿಕವಾಗಿ, ಅನೇಕ ಪ್ರತ್ಯಕ್ಷ ಸಾಕ್ಷಿಗಳ ಕಣ್ಣೆದುರಿಗೇ ನಡೆಸಲ್ಪಟ್ಟವು. ಆರಂಭದ ಸುವಾರ್ತೆ ಪುಸ್ತಕಗಳು, ಆ ಪ್ರತ್ಯಕ್ಷ ಸಾಕ್ಷಿಗಳಲ್ಲಿ ಹೆಚ್ಚಿನವರು ಬದುಕಿದ್ದಾಗಲೇ ಬರೆಯಲ್ಪಟ್ಟವು. ಸುವಾರ್ತೆ ಪುಸ್ತಕಗಳ ಲೇಖಕರ ಬಗ್ಗೆ, ಅದ್ಭುತಗಳು ಮತ್ತು ಪುನರುತ್ಥಾನ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಸುವಾರ್ತೆ ಪುಸ್ತಕಗಳನ್ನು ಬರೆದವರು, ತಮ್ಮ ಧರ್ಮವನ್ನು ಪ್ರಚಾರಮಾಡಲಿಕ್ಕೋಸ್ಕರ ಅದ್ಭುತಗಳ ಕುರಿತಾದ ಕಥೆಗಳ ಪ್ರವಾಹದಲ್ಲಿ, ಗೊತ್ತುಗುರಿಯಿಲ್ಲದೆ ಚಾರಿತ್ರಿಕ ವಾಸ್ತವಾಂಶಗಳನ್ನು ಮುಳುಗಿಸಿದರೆಂಬ ಆರೋಪಹೊರಿಸುವುದು ಶುದ್ಧ ಅನ್ಯಾಯ. . . . ಅವರು ಪ್ರಾಮಾಣಿಕ ದಾಖಲುಗಾರರಾಗಿರಲು ಬಯಸಿದರು.”
ಕ್ರೈಸ್ತಧರ್ಮವನ್ನು ವಿರೋಧಿಸುತ್ತಿದ್ದ ಯೆಹೂದ್ಯರು ಸಹ, ಸುವಾರ್ತೆ ಪುಸ್ತಕಗಳಲ್ಲಿ ವರ್ಣಿಸಲ್ಪಟ್ಟಿರುವ ಮಹತ್ಕಾರ್ಯಗಳ ಬಗ್ಗೆ ಎಂದೂ ಚಕಾರವೆತ್ತಲಿಲ್ಲ. ಆ ಅದ್ಭುತಗಳು ಯಾರ ಶಕ್ತಿಯಿಂದ ನಡೆಸಲ್ಪಟ್ಟವು ಎಂಬುದರ ಬಗ್ಗೆ ಮಾತ್ರ ಅವರು ಪ್ರಶ್ನಿಸಿದರು. (ಮಾರ್ಕ 3:22-26) ತದನಂತರದ ಟೀಕಾಕಾರರು ಸಹ, ಯೇಸುವಿನ ಅದ್ಭುತಗಳನ್ನು ನಿರಾಕರಿಸುವುದರಲ್ಲಿ ಯಶಸ್ವಿಗಳಾಗಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಸಾ.ಶ. ಮೊದಲನೆಯ ಮತ್ತು ಎರಡನೆಯ ಶತಮಾನಗಳಲ್ಲಿ, ಯೇಸುವಿನಿಂದ ನಡೆಸಲ್ಪಟ್ಟ ಅದ್ಭುತಕಾರ್ಯಗಳಿಗೆ ಸೂಚಿಸುವಂಥ ರೆಫರೆನ್ಸ್ಗಳಿದ್ದವು. ಆದುದರಿಂದ, ಯೇಸುವಿನ ಅದ್ಭುತಗಳ ಕುರಿತಾದ ಸುವಾರ್ತಾ ವೃತ್ತಾಂತಗಳು ವಿಶ್ವಾಸಾರ್ಹವಾಗಿವೆಯೆಂದು ನಂಬಲು ಸ್ಪಷ್ಟವಾಗಿಯೇ ನಮಗೆ ದೃಢವಾದ ಆಧಾರವಿದೆ.
ಆ ಅದ್ಭುತಗಳನ್ನು ನಡೆಸಿದಾತ
ಯೇಸುವಿನ ಅದ್ಭುತಗಳ ಕುರಿತಾದ ಪರಿಶೀಲನೆಯನ್ನು, ಅವುಗಳ ವಿಶ್ವಾಸಾರ್ಹತೆಯ ಕುರಿತಾದ ತರ್ಕಸಂಗತ ವಾದಗಳಿಗೇ ಸೀಮಿತಗೊಳಿಸಿದರೆ ಅದು ಅಪೂರ್ಣವಾಗಿರುವುದು. ಸುವಾರ್ತೆ ಪುಸ್ತಕಗಳು ಯೇಸುವಿನ ಮಹತ್ಕಾರ್ಯಗಳನ್ನು ವರ್ಣಿಸುವಾಗ, ಗಾಢವಾದ ಭಾವನೆಗಳುಳ್ಳ ಹಾಗೂ ಸರಿಸಾಟಿಯಿಲ್ಲದಷ್ಟು ಕರುಣೆಯುಳ್ಳ, ಜೊತೆ ಮಾನವರಲ್ಲಿ ತೀವ್ರಾಸಕ್ತಿಯುಳ್ಳ ಒಬ್ಬ ವ್ಯಕ್ತಿಯನ್ನು ಪ್ರಕಟಪಡಿಸುತ್ತವೆ.
“ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಹತಾಶೆಯಿಂದ ಬಿನ್ನೈಸುತ್ತಾ ಯೇಸುವಿನ ಬಳಿ ಬಂದ ಒಬ್ಬ ಕುಷ್ಠರೋಗಿಯ ವಿದ್ಯಮಾನವನ್ನು ಪರಿಗಣಿಸಿರಿ. ಯೇಸು “ಕನಿಕರಪಟ್ಟು” ಆ ಕುಷ್ಠರೋಗಿಯನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧವಾಗು” ಎಂದು ಹೇಳಿದನು. ಆ ಕ್ಷಣವೇ ಆ ವ್ಯಕ್ತಿ ವಾಸಿಯಾದನು. (ಮಾರ್ಕ 1:40-42) ಈ ರೀತಿಯಲ್ಲಿ ಯೇಸು ತನ್ನ ಪರಾನುಭೂತಿಯನ್ನು ತೋರಿಸಿದನು. ಇದು ತಾನೇ ಅವನು ತನ್ನ ದೇವದತ್ತ ಶಕ್ತಿಯನ್ನು ಅದ್ಭುತಗಳನ್ನು ನಡೆಸಲಿಕ್ಕಾಗಿ ಉಪಯೋಗಿಸುವಂತೆ ಪ್ರಚೋದಿಸುತ್ತಿತ್ತು.
ನಾಯಿನೆಂಬ ಊರಿಂದ ಹೊರಬರುತ್ತಿದ್ದ ಒಂದು ಶವಯಾತ್ರೆಯು ಯೇಸುವಿಗೆ ಎದುರಾದಾಗ ಏನಾಯಿತು? ಆ ಮೃತ ಯುವಕನು, ವಿಧವೆಯೊಬ್ಬಳ ಒಬ್ಬನೇ ಮಗನಾಗಿದ್ದನು. ಆ ಸ್ತ್ರೀಯನ್ನು ‘ಕನಿಕರಿಸುತ್ತಾ’ ಯೇಸು ಅವಳ ಬಳಿ ಬಂದು, “ಅಳಬೇಡ” ಎಂದು ಹೇಳಿದನು. ನಂತರ, ಅವನು ಆಕೆಯ ಮಗನನ್ನು ಜೀವಕ್ಕೆ ತಂದನು.—ಲೂಕ 7:11-15.
ಯೇಸುವಿನ ಅದ್ಭುತಗಳಿಂದ ಕಲಿಯಬಹುದಾದ ಒಂದು ಸಾಂತ್ವನದಾಯಕ ಪಾಠವೇನೆಂದರೆ, ಅವನು ‘ಕನಿಕರ’ದಿಂದ ಪ್ರಚೋದಿಸಲ್ಪಟ್ಟು, ಜನರಿಗೆ ಸಹಾಯಮಾಡಲಿಕ್ಕಾಗಿ ಅಂಥ ಕಾರ್ಯಗಳನ್ನು ನಡೆಸಿದನು. ಆದರೆ ಅಂಥ ಅದ್ಭುತಗಳು ಬರೀ ಗತ ಇತಿಹಾಸವಲ್ಲ. “ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು” ಎಂದು ಇಬ್ರಿಯ 13:8 ಹೇಳುತ್ತದೆ. ಈಗ ಅವನು ಸ್ವರ್ಗೀಯ ರಾಜನಾಗಿ ಆಳುತ್ತಿದ್ದಾನೆ ಮತ್ತು ಭೂಮಿಯ ಮೇಲೆ ಒಬ್ಬ ಮಾನವನಾಗಿದ್ದಾಗ ತನಗಿದ್ದ ಅದ್ಭುತಕರ ದೇವದತ್ತ ಶಕ್ತಿಗಳನ್ನು ಬಳಸಿದ ರೀತಿಗಿಂತ ಹೆಚ್ಚು ವಿಸ್ತಾರವಾದ ರೀತಿಯಲ್ಲಿ ಅದನ್ನು ಬಳಸಲು ಸಿದ್ಧನೂ ಶಕ್ತನೂ ಆಗಿದ್ದಾನೆ. ಬೇಗನೆ, ಯೇಸು ಆ ಶಕ್ತಿಯನ್ನು, ವಿಧೇಯ ಮಾನವಕುಲವನ್ನು ವಾಸಿಮಾಡಲು ಬಳಸುವನು. ಭವಿಷ್ಯತ್ತಿನ ಈ ಉಜ್ವಲ ಪ್ರತೀಕ್ಷೆಯ ಬಗ್ಗೆ ಹೆಚ್ಚನ್ನು ಕಲಿಯಲು ಯೆಹೋವನ ಸಾಕ್ಷಿಗಳು ನಿಮಗೆ ಸಂತೋಷದಿಂದ ಸಹಾಯಮಾಡುವರು.
[ಪುಟ 4, 5ರಲ್ಲಿರುವ ಚಿತ್ರಗಳು]
ಯೇಸುವಿನ ಅದ್ಭುತಗಳು ದೇವರ ಘನಗಾಂಭೀರ್ಯವುಳ್ಳ ಶಕ್ತಿಯ ಪ್ರದರ್ಶನವಾಗಿದ್ದವು
[ಪುಟ 7ರಲ್ಲಿರುವ ಚಿತ್ರ]
ಯೇಸು, ಗಾಢ ಭಾವನೆಗಳುಳ್ಳ ಪುರುಷನಾಗಿದ್ದನು