ಸತ್ಯಾರಾಧನೆ ಮತ್ತು ವಿಧರ್ಮಿ ಆರಾಧನೆ ಒಂದಕ್ಕೊಂದು ಘರ್ಷಿಸಿದ ಸ್ಥಳ
ಟರ್ಕಿಯ ಪಶ್ಚಿಮ ಕರಾವಳಿಯಲ್ಲಿರುವ ಪುರಾತನ ಎಫೆಸದ ಅವಶೇಷಗಳು, ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದಿಂದ ಆಳವಾದ ಪ್ರಾಕ್ತನಶಾಸ್ತ್ರೀಯ ಸಂಶೋಧನೆಯ ಪ್ರದೇಶವಾಗಿವೆ. ಹಲವಾರು ಕಟ್ಟಡಗಳನ್ನು ಪುನರ್ನಿರ್ಮಿಸಲಾಗಿದೆ, ಮತ್ತು ಕಂಡುಹಿಡಿಯಲ್ಪಟ್ಟ ಸಹಸ್ರಾರು ವಸ್ತುಗಳನ್ನು ವಿಜ್ಞಾನಿಗಳು ಅಧ್ಯಯನಮಾಡಿ ವಿವರಿಸಿದ್ದಾರೆ. ಇದರ ಪರಿಣಾಮವಾಗಿ, ಎಫೆಸವು ಟರ್ಕಿಯಲ್ಲಿನ ಅತಿ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಎಫೆಸದ ಬಗ್ಗೆ ಏನನ್ನು ಕಂಡುಹಿಡಿಯಲಾಗಿದೆ? ಆಕರ್ಷಕವಾದ ಆ ಪುರಾತನ ಮಹಾನಗರದ ಯಾವ ಚಿತ್ರಣವನ್ನು ಇಂದು ಬಿಡಿಸಸಾಧ್ಯವಿದೆ? ಎಫೆಸದ ಅವಶೇಷಗಳು ಮತ್ತು ಆಸ್ಟ್ರೀಯದ ವಿಯನ್ನದಲ್ಲಿರುವ ಎಫೆಸದ ವಸ್ತುಸಂಗ್ರಹಾಲಯ ಇವೆರಡಕ್ಕೂ ಭೇಟಿನೀಡುವ ಮೂಲಕ, ಎಫೆಸದಲ್ಲಿ ಸತ್ಯಾರಾಧನೆ ಮತ್ತು ವಿಧರ್ಮಿ ಆರಾಧನೆಯು ಹೇಗೆ ಒಂದಕ್ಕೊಂದು ಘರ್ಷಿಸಿದವು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯವಾಗುತ್ತದೆ. ಮೊದಲಾಗಿ ಎಫೆಸದ ಕುರಿತು ಸ್ಪಲ್ಪ ಹಿನ್ನೆಲೆಯನ್ನು ಪರಿಗಣಿಸೋಣ.
ಅನೇಕರಿಂದ ಆಶಿಸಲ್ಪಟ್ಟ ಪ್ರದೇಶ
ಸಾ.ಶ.ಪೂ. 11ನೇ ಶತಮಾನದಲ್ಲಿ ಯೂರೇಷಿಯದಲ್ಲಿ ಅಸ್ಥಿರತೆ ಮತ್ತು ವಲಸೆಹೋಗುವಿಕೆ ಒಂದು ಸಾಮಾನ್ಯ ಸಂಗತಿಯಾಗಿತ್ತು. ಅದೇ ಸಮಯದಲ್ಲಿ ಐಯೋನಿಯನ್ ಗ್ರೀಕರು ಏಷ್ಯಾ ಮೈನರ್ನ ಪಶ್ಚಿಮ ಕರಾವಳಿಯಲ್ಲಿ ವಸಾಹತನ್ನು ಸ್ಥಾಪಿಸಲು ಆರಂಭಿಸಿದರು. ಇಲ್ಲಿಯೇ ಈ ಆರಂಭದ ನೆಲೆಸಿಗರು, ಮುಂದಕ್ಕೆ ಎಫೆಸದ ಅರ್ತೆಮೀದೇವಿ ಎಂದು ಪ್ರಖ್ಯಾತವಾಗಲಿದ್ದ ದೇವತಾ-ಮಾತೆಯ ಆರಾಧನೆಗೆ ಪ್ರಸಿದ್ಧರಾದ ಜನರ ಸಂಪರ್ಕಕ್ಕೆ ಬಂದರು.
ಸಾ.ಶ.ಪೂ. ಏಳನೇ ಶತಮಾನದ ಮಧ್ಯಭಾಗದಲ್ಲಿ, ಏಷ್ಯಾ ಮೈನರನ್ನು ಸುಲಿಗೆ ಮಾಡಲು ಅಲೆಮಾರಿಗಳಾದ ಸಿಮಿರೀಯನ್ನರು ಉತ್ತರದಲ್ಲಿರುವ ಕಪ್ಪು ಸಮುದ್ರ ಪ್ರದೇಶದಿಂದ ಬಂದರು. ಅನಂತರ ಸಾ.ಶ.ಪೂ. 550ರ ಸುಮಾರಿಗೆ, ಶಕ್ತಿಶಾಲಿ ಅಧಿಪತಿಯಾದ ಲಿಡಿಯದ ರಾಜ ಕ್ರೀಸಸ್ ಅಧಿಕಾರಕ್ಕೆ ಬಂದನು. ಅವನು ತನ್ನ ಹೇರಳವಾದ ಐಶ್ವರ್ಯಕ್ಕೆ ಹೆಸರುವಾಸಿಯಾಗಿದ್ದನು. ಪಾರಸಿಯ ಸಾಮ್ರಾಜ್ಯದ ವಿಸ್ತರಣೆಯಾಗುತ್ತಾ ಹೋದಂತೆ, ರಾಜ ಕೋರೆಷನು ಎಫೆಸವನ್ನು ಸೇರಿಸಿ ಐಯೋನಿಯನ್ ಪಟ್ಟಣಗಳನ್ನು ವಶಪಡಿಸಿಕೊಂಡನು.
ಸಾ.ಶ.ಪೂ. 334ರಲ್ಲಿ, ಮಕೆದೋನ್ಯದ ಅಲೆಕ್ಸಾಂಡರನು ಪರ್ಷಿಯದ ವಿರುದ್ಧ ತನ್ನ ಕಾರ್ಯಾಚರಣೆಯನ್ನು ಆರಂಭಿಸಿ, ಮುಂದಕ್ಕೆ ಎಫೆಸದ ಹೊಸ ಅಧಿಪತಿಯಾದನು. ಸಾ.ಶ.ಪೂ. 323ರಲ್ಲಿ ಅಲೆಕ್ಸಾಂಡರನ ಅಕಾಲಿಕ ಮರಣದ ಅನಂತರ, ಅವನ ಸೇನಾಪತಿಗಳ ಮಧ್ಯೆ ನಡೆದ ಅಧಿಕಾರದ ಹೋರಾಟದಲ್ಲಿ ಎಫೆಸವು ಸಿಕ್ಕಿಕೊಂಡಿತು. ಸಂತಾನವಿಲ್ಲದವನಾಗಿದ್ದ ಪೆರ್ಗಮದ ರಾಜನಾದ ಆ್ಯಟಲಸ್ III ಸಾ.ಶ.ಪೂ. 133ರಲ್ಲಿ ಎಫೆಸವನ್ನು ರೋಮನರ ಕೈಗೊಪ್ಪಿಸಿದನು. ಹೀಗೆ, ಎಫೆಸವು ರೋಮನ್ ಪ್ರಾಂತವಾಗಿದ್ದ ಏಷ್ಯಾದ ಭಾಗವಾಯಿತು.
ಸತ್ಯಾರಾಧನೆಯು ವಿಧರ್ಮಿ ಆರಾಧನೆಯೊಂದಿಗೆ ಘರ್ಷಿಸುತ್ತದೆ
ಸಾ.ಶ. ಒಂದನೇ ಶತಮಾನದಲ್ಲಿ ಅಪೊಸ್ತಲ ಪೌಲನು ತನ್ನ ಎರಡನೇ ಮಿಷನೆರಿ ಸಂಚಾರದ ಅಂತ್ಯದಷ್ಟಕ್ಕೆ ಎಫೆಸಕ್ಕೆ ಬಂದಾಗ, ಆ ಪಟ್ಟಣದಲ್ಲಿ ಹೆಚ್ಚುಕಡಿಮೆ ಸುಮಾರು 3,00,000 ನಿವಾಸಿಗಳಿದ್ದರು. (ಅ. ಕೃತ್ಯಗಳು 18:19-21) ಅವನ ಮೂರನೇ ಮಿಷನೆರಿ ಸಂಚಾರದ ಸಮಯದಲ್ಲಿ, ಪೌಲನು ಎಫೆಸಕ್ಕೆ ಹಿಂದಿರುಗಿದನು ಮತ್ತು ದೇವರ ರಾಜ್ಯದ ಕುರಿತು ಸಭಾಮಂದಿರದಲ್ಲಿ ಹೆಚ್ಚಿನ ಧೈರ್ಯದಿಂದ ಮಾತಾಡಿದನು. ಆದರೆ ಮೂರು ತಿಂಗಳಿನ ಅನಂತರ, ಯೆಹೂದ್ಯರಿಂದ ವಿರೋಧವು ಹೆಚ್ಚಾಯಿತು, ಮತ್ತು ಪೌಲನು ತನ್ನ ದೈನಂದಿನ ಭಾಷಣಗಳನ್ನು ತುರನ್ನನ ತರ್ಕಶಾಲೆಯಲ್ಲಿ ನೀಡಲು ನಿರ್ಧರಿಸಿದನು. (ಅ. ಕೃತ್ಯಗಳು 19:1, 8, 9) ಅವನ ಸಾರುವ ಕೆಲಸವು ಎರಡು ವರುಷಗಳ ವರೆಗೆ ಮುಂದುವರಿಯಿತು ಮತ್ತು ಅದರೊಂದಿಗೆ ಅವನು ಅದ್ಭುತಕರ ಗುಣಪಡಿಸುವಿಕೆ ಹಾಗೂ ದೆವ್ವಗಳನ್ನು ಬಿಡಿಸುವುದು ಮುಂತಾದ ಶಕ್ತಿಯ ಅಸಾಧಾರಣ ಕೃತ್ಯಗಳನ್ನು ಸಹ ಮಾಡಿದನು. (ಅ. ಕೃತ್ಯಗಳು 19:10-17) ಅನೇಕರು ವಿಶ್ವಾಸಿಗಳಾದರು ಎಂಬುದರಲ್ಲಿ ಆಶ್ಚರ್ಯವೇನಿಲ್ಲ! ಹೌದು, ಯೆಹೋವನ ವಾಕ್ಯವು ಪ್ರಬಲವಾಯಿತು ಮತ್ತು ಈ ಕಾರಣ ಹಿಂದೆ ಮಾಟಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಬೆಲೆಬಾಳುವ ಪುಸ್ತಕಗಳನ್ನು ಇಚ್ಛಾಪೂರ್ವಕವಾಗಿ ಸುಟ್ಟುಬಿಟ್ಟರು.—ಅ. ಕೃತ್ಯಗಳು 19:19, 20.
ಪೌಲನ ಯಶಸ್ವಿಕರ ಸಾರುವಿಕೆಯು ಅನೇಕರು ಅರ್ತೆಮೀದೇವಿಯ ಆರಾಧನೆಯನ್ನು ತ್ಯಜಿಸುವಂತೆ ಪ್ರೇರೇಪಿಸಿದ್ದು ಮಾತ್ರವಲ್ಲದೆ ಅಂಥ ವಿಧರ್ಮಿ ಆರಾಧನೆಯನ್ನು ಪ್ರೋತ್ಸಾಹಿಸುತ್ತಿದ್ದ ಜನರ ಕೋಪವನ್ನು ಸಹ ಕೆರಳಿಸಿತು. ಅರ್ತೆಮೀದೇವಿಯ ಬೆಳ್ಳಿಯ ಸಣ್ಣಸಣ್ಣ ಗುಡಿಗಳ ತಯಾರಿಕೆಯು ಒಂದು ಲಾಭದಾಯಕ ವ್ಯಾಪಾರವಾಗಿತ್ತು. ತಮ್ಮ ವ್ಯಾಪಾರಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬುದನ್ನು ಗಮನಿಸಿ, ದೇಮೇತ್ರಿಯ ಎಂಬ ಒಬ್ಬ ವ್ಯಕ್ತಿಯು ಗಲಭೆಯನ್ನೆಬ್ಬಿಸುವಂತೆ ಅಕ್ಕಸಾಲಿಗರನ್ನು ಚಿತಾಯಿಸಿದನು.—ಅ. ಕೃತ್ಯಗಳು 19:23-32.
“ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂಬುದಾಗಿ ಎರಡು ತಾಸುಗಳ ವರೆಗೆ ಜನರ ಗುಂಪು ಹುಚ್ಚರಂತೆ ಆರ್ಭಟಿಸುವದರೊಂದಿಗೆ ಈ ವಿರೋಧವು ಉತ್ತುಂಗಕ್ಕೇರಿತು. (ಅ. ಕೃತ್ಯಗಳು 19:34) ಈ ಗದ್ದಲವು ನಿಂತ ತರುವಾಯ, ಪೌಲನು ತನ್ನ ಜೊತೆ ಕ್ರೈಸ್ತರನ್ನು ಪುನಃ ಒಮ್ಮೆ ಉತ್ತೇಜಿಸಿ ಅಲ್ಲಿಂದ ಮುಂದಕ್ಕೆ ಸಾಗಿದನು. (ಅ. ಕೃತ್ಯಗಳು 20:1) ಅವನು ಆ ಊರನ್ನು ಬಿಟ್ಟು ಮಕೆದೋನ್ಯಕ್ಕೆ ಹೋದರೂ, ಅರ್ತೆಮೀದೇವಿಯ ಪಂಥಕ್ಕೆ ಸಂಭವಿಸಲಿದ್ದ ದುರ್ಗತಿಯು ನಿಲ್ಲಲಿಲ್ಲ.
ಅರ್ತೆಮೀದೇವಿಯ ದೇವಾಲಯವು ತತ್ತರಿಸುತ್ತದೆ
ಎಫೆಸದಲ್ಲಿ ಅರ್ತೆಮೀದೇವಿಯ ಪಂಥವು ಆಳವಾಗಿ ಬೇರೂರಿತ್ತು. ರಾಜ ಕ್ರೀಸಸ್ನ ಸಮಯಕ್ಕೆ ಮುಂಚೆ, ಸೈಬಿಲ್ ದೇವತಾ-ಮಾತೆ ಆ ಕ್ಷೇತ್ರದ ಧಾರ್ಮಿಕ ಜೀವನದಲ್ಲಿ ಮುಖ್ಯ ದೇವತೆಯಾಗಿತ್ತು. ಸೈಬಿಲ್ ದೇವತೆಗೆ ಗ್ರೀಕ್ ದೇವತೆಗಳೊಂದಿಗೆ ಸಂಬಂಧವಿದೆ ಎಂದು ಪ್ರತಿಪಾದಿಸುವ ಮೂಲಕ ಕ್ರೀಸಸ್, ಗ್ರೀಕರಿಗೂ ಗ್ರೀಕರಲ್ಲದವರಿಗೂ ಸ್ವೀಕರಣೀಯವಾಗಿರುವ ಒಂದು ಧಾರ್ಮಿಕ ದೇವತೆಯನ್ನು ಸ್ಥಾಪಿಸಲು ನಿರೀಕ್ಷಿಸಿದನು. ಅವನ ಬೆಂಬಲದೊಂದಿಗೆ, ಸಾ.ಶ.ಪೂ. ಆರನೇ ಶತಮಾನದ ಮಧ್ಯಭಾಗದಲ್ಲಿ ಸೈಬಿಲ್ ದೇವತೆಯ ಉತ್ತರಾಧಿಕಾರಿಯಾದ ಅರ್ತೆಮೀದೇವಿಯ ದೇವಸ್ಥಾನವನ್ನು ಕಟ್ಟುವ ಕೆಲಸವು ಆರಂಭಗೊಂಡಿತು.
ಈ ದೇವಸ್ಥಾನವು ಗ್ರೀಕ್ ಕಟ್ಟಡಗಳ ನಿರ್ಮಾಣದಲ್ಲಿಯೇ ಒಂದು ಮಹಾ ಸಾಧನೆಯಾಗಿತ್ತು. ಈ ರೀತಿಯ ಮತ್ತು ಗಾತ್ರದ ಕಟ್ಟಡವನ್ನು ಕಟ್ಟಲು ಹಿಂದೆಂದೂ ಇಷ್ಟೊಂದು ದೊಡ್ಡ ಚಂದ್ರಕಾಂತ ಶಿಲೆಗಳನ್ನು ಉಪಯೋಗಿಸಿರಲಿಲ್ಲ. ಆ ದೇವಸ್ಥಾನವು ಸಾ.ಶ.ಪೂ. 356ರಲ್ಲಿ ಬೆಂಕಿಯಿಂದ ನಾಶವಾಯಿತು. ಅನಂತರ ಅದಕ್ಕೆ ಸಮಾನವಾದ ವೈಭವವನ್ನು ಹೊಂದಿದ್ದ ದೇವಸ್ಥಾನವು ಪುನಃ ಕಟ್ಟಲ್ಪಟ್ಟಿತು ಮತ್ತು ಅದು ಉದ್ಯೋಗದ ಪ್ರಾಮುಖ್ಯ ಕೇಂದ್ರವೂ ಯಾತ್ರಿಕರಿಗೆ ಒಂದು ಪ್ರಧಾನ ಆಕರ್ಷಣಾ ಸ್ಥಳವೂ ಆಗಿತ್ತು. ಈ ಪುನರ್ನಿರ್ಮಿಸಲ್ಪಟ್ಟ ದೇವಸ್ಥಾನವು, 73 ಮೀಟರ್ ಅಗಲ ಮತ್ತು 127 ಮೀಟರ್ ಉದ್ದದ ದಿಬ್ಬದ ಮೇಲೆ ಕಟ್ಟಲ್ಪಟ್ಟಿದ್ದು ಸುಮಾರು 50 ಮೀಟರ್ ಅಗಲ ಮತ್ತು 105 ಮೀಟರ್ ಉದ್ದದ್ದಾಗಿತ್ತು. ಈ ದೇವಸ್ಥಾನವು ಲೋಕದ ಏಳು ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸಲಾಗಿತ್ತು. ಹಾಗಿದ್ದರೂ, ಇದರಿಂದ ಎಲ್ಲರೂ ಸಂತೋಷಗೊಳ್ಳಲಿಲ್ಲ. ಎಫೆಸದ ತತ್ತ್ವಜ್ಞಾನಿ ಹೆರಕ್ಲೈಟಸ್ ಆ ದೇವಸ್ಥಾನದ ಯಜ್ಞವೇದಿಗೆ ನಡೆಸುವ ಕತ್ತಲಿನ ಹಾದಿಯನ್ನು ನೀಚ ಕೃತ್ಯಗಳೆಂಬ ಅಂಧಕಾರಕ್ಕೆ ಹೋಲಿಸಿದನು, ಮತ್ತು ದೇವಸ್ಥಾನದ ನೈತಿಕತೆಯನ್ನು ಮೃಗಗಳಿಗಿಂತ ಹೀನವೆಂದು ಪರಿಗಣಿಸಿದನು. ಆದರೆ ಹೆಚ್ಚಿನವರಿಗೆ ಎಫೆಸದಲ್ಲಿರುವ ಅರ್ತೆಮೀದೇವಿಯ ಈ ದೇವಸ್ಥಾನಕ್ಕೆ ಎಂದಿಗೂ ದುರ್ಗತಿ ಸಂಭವಿಸದು ಎಂಬಂತೆ ತೋರಿತು. ಇತಿಹಾಸವಾದರೊ ಇದಕ್ಕೆ ವಿರುದ್ಧವಾದ ಸಂಗತಿಯನ್ನು ರುಜುಪಡಿಸಿತು. ಎಫೆಸೊಸ್—ಡಾ ನೊಯಿ ಫ್ಯೂರೆ (ಎಫೆಸ—ಹೊಸ ಮಾರ್ಗದರ್ಶಿ) ಎಂಬ ಪುಸ್ತಕವು ತಿಳಿಸುವುದು: “ಎರಡನೇ ಶತಮಾನದಷ್ಟಕ್ಕೆ, ಅರ್ತೆಮೀದೇವಿಯ ಮತ್ತು ಇತರ ಸ್ಥಾಪಿತ ದೇವತೆಗಳ ಆರಾಧನೆಯು ಥಟ್ಟನೆ ಕೆಳಮುಖವಾಯಿತು.”
ಸಾ.ಶ. ಮೂರನೇ ಶತಮಾನದಲ್ಲಿ, ಎಫೆಸವು ಭಯಂಕರ ಭೂಕಂಪದಿಂದ ಅಲುಗಾಡಿಸಲ್ಪಟ್ಟಿತು. ಅಷ್ಟುಮಾತ್ರವಲ್ಲದೆ, ಕಪ್ಪು ಸಮುದ್ರ ಪ್ರದೇಶದಿಂದ ಬಂದ ಸಮುದ್ರಯಾನಿಗಳಾದ ಗಾತ್ ಜನಾಂಗದವರು ಅರ್ತೆಮೀದೇವಿಯ ದೇವಸ್ಥಾನವನ್ನು ಸೂರೆಮಾಡಿ, ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟರು. ಈ ಹಿಂದೆ ಉಲ್ಲೇಖಿಸಲಾದ ಪುಸ್ತಕವು ತಿಳಿಸುವುದು: “ಸೋತುಹೋದ ಮತ್ತು ತನ್ನನ್ನೇ ರಕ್ಷಿಸಿಕೊಳ್ಳಲು ಅಶಕ್ತಳಾದ ಅರ್ತೆಮೀದೇವಿಯನ್ನು ಆ ಪಟ್ಟಣದ ರಕ್ಷಕಿಯೆಂದು ಹೇಗೆ ತಾನೇ ಪರಿಗಣಿಸಸಾಧ್ಯವಿದೆ?”—ಕೀರ್ತನೆ 135:15-18.
ಅಂತಿಮವಾಗಿ, ಸಾ.ಶ. ನಾಲ್ಕನೇ ಶತಮಾನದ ಅಂತ್ಯದಷ್ಟಕ್ಕೆ ಸಾಮ್ರಾಟ Iನೆಯ ಥಿಯೊಡೋಶಸನು “ಕ್ರೈಸ್ತತ್ವ”ವನ್ನು ರಾಷ್ಟ್ರ ಧರ್ಮವಾಗಿ ದೃಢೀಕರಿಸಿದನು. ಒಂದೊಮ್ಮೆ ಘನಗಾಂಭೀರ್ಯದಿಂದ ಕೂಡಿದ್ದ ಅರ್ತೆಮೀದೇವಿಯ ದೇವಸ್ಥಾನದ ಕಲ್ಲುಕೆಲಸವು ಬೇಗನೆ ಕಟ್ಟಡ ಕಟ್ಟಲು ಬೇಕಾಗುವ ಸಾಮಗ್ರಿಗಳ ಗಣಿಯಾಯಿತು. ಅರ್ತೆಮೀದೇವಿಯ ಆರಾಧನೆಯು ಸಂಪೂರ್ಣವಾಗಿ ಕುಸಿಯಿತು. ಆ ದೇವಸ್ಥಾನವನ್ನು ಪುರಾತನ ಲೋಕದ ಒಂದು ಅದ್ಭುತ ಎಂಬುದಾಗಿ ಹೊಗಳುವ ಪದ್ಯದ ಕುರಿತು ಹೇಳಿಕೆ ನೀಡುತ್ತಾ ಒಬ್ಬ ಅನಾಮಧೇಯ ಪ್ರೇಕ್ಷಕನು ಹೀಗೆ ತಿಳಿಸಿದನು: “ಈಗ ಅದು ಅತಿ ನಿರ್ಜನವೂ ಧಿಕ್ಕರಿಸಲ್ಪಟ್ಟದ್ದೂ ದರಿದ್ರವೂ ಆದ ಸ್ಥಳ ಆಗಿದೆ.”
ಅರ್ತೆಮೀದೇವಿಯಿಂದ “ದೇವರ-ಮಾತೆ”
ತಾನು ಹೋದ ಮೇಲೆ “ಕ್ರೂರವಾದ ತೋಳಗಳು” ಬರುವವು ಮತ್ತು ಅವರೊಳಗಿಂದ ಕೆಲವರು ಎದ್ದು “ವ್ಯತ್ಯಾಸ ಬೋಧನೆಗಳನ್ನು” ಮಾಡುವರು ಎಂದು ಪೌಲನು ಎಫೆಸ ಸಭೆಯಲ್ಲಿದ್ದ ಹಿರೀಪುರುಷರಿಗೆ ಎಚ್ಚರಿಸಿದನು. (ಅ. ಕೃತ್ಯಗಳು 20:17, 29, 30) ಅವನು ಹೇಳಿದಂತೆಯೇ ಆಯಿತು. ಘಟನೆಗಳು ತೋರಿಸುವುದೇನೆಂದರೆ, ಸುಳ್ಳು ಆರಾಧನೆಯು ಧರ್ಮಭ್ರಷ್ಟ ಕ್ರೈಸ್ತತ್ವದ ರೂಪದಲ್ಲಿ ಎಫೆಸದಲ್ಲಿ ಪ್ರಬಲವಾಯಿತು.
ಸಾ.ಶ. 431ರಲ್ಲಿ ಎಫೆಸವು ಮೂರನೇ ವಿಶ್ವಕ್ರೈಸ್ತ ಸಭೆಯ ನಿವೇಶನವಾಗಿತ್ತು ಮತ್ತು ಅಲ್ಲಿ ಕ್ರಿಸ್ತನ ಪ್ರಕೃತಿಯ ಕುರಿತು ಚರ್ಚಿಸಲಾಯಿತು. ಎಫೆಸೊಸ್—ಡಾ ನೊಯಿ ಫ್ಯೂರೆಯು ವಿವರಿಸುವುದು: “ಕ್ರಿಸ್ತನು ಕೇವಲ ದೈವಿಕ ಪ್ರಕೃತಿಯುಳ್ಳವನು . . . ಎಂದು ಹೇಳುತ್ತಿದ್ದ ಅಲೆಕ್ಸಾಂಡ್ರಿಯದವರ ಜಯವು ಸಂಪೂರ್ಣವಾಗಿತ್ತು.” ಇದರ ಪರಿಣಾಮಗಳು ಅತಿ ವ್ಯಾಪಕವಾಗಿದ್ದವು. “ಎಫೆಸದಲ್ಲಿ ಮಾಡಲಾದ ನಿರ್ಣಯವು ಮರಿಯಳನ್ನು ಕ್ರಿಸ್ತನನ್ನು-ಹೊತ್ತವಳು ಎಂಬ ಸ್ಥಾನದಿಂದ ದೇವರನ್ನು ಹೊತ್ತವಳು ಎಂಬ ಸ್ಥಾನಕ್ಕೆ ಮೇಲೆತ್ತಿತು ಮತ್ತು ಅದು ಮರಿಯಳ ಪಂಥಕ್ಕೆ ಒಂದು ಆಧಾರವನ್ನು ಒದಗಿಸಿತು ಮಾತ್ರವಲ್ಲದೆ ಚರ್ಚಿನೊಳಗೆ ಪ್ರಪ್ರಥಮವಾದ ದೊಡ್ಡ ಒಡಕನ್ನು ಉಂಟುಮಾಡಿತು. . . . ಇಂದಿನ ದಿನದ ತನಕ ಇದರ ವಾಗ್ವಾದವು ನಡೆಯುತ್ತಿದೆ.”
ಹೀಗೆ, ಸೈಬಿಲ್ ಮತ್ತು ಅರ್ತೆಮೀದೇವಿಯ ಆರಾಧನೆಯು “ದೇವರನ್ನು-ಹೊತ್ತವಳು” ಅಥವಾ “ದೇವರ-ಮಾತೆ”ಯ ಆರಾಧನೆಯಿಂದ ಸ್ಥಾನಪಲ್ಲಟಗೊಂಡಿತು. ಆ ಪುಸ್ತಕವು ತಿಳಿಸುವಂತೆ, “ಎಫೆಸದಲ್ಲಿ ‘ಮರಿಯಳ ಪಂಥವು’ . . . ಇಂದಿನ ವರೆಗೂ ಜೀವಂತ ಸಂಪ್ರದಾಯವಾಗಿ ಉಳಿದಿದೆ ಮತ್ತು ಇದನ್ನು ಅರ್ತೆಮೀದೇವಿಯ ಪಂಥಕ್ಕೆ ಜೋಡಿಸದೆ ವಿವರಿಸುವುದು ಅಸಾಧ್ಯ.”
ಇತಿಹಾಸದ ಕಸದತೊಟ್ಟಿಯ ಪಾಲಾಯಿತು
ಅರ್ತೆಮೀದೇವಿಯ ಆರಾಧನೆಯು ಕೆಳಮುಖವಾದ ಅನಂತರ ಎಫೆಸ ಪಟ್ಟಣದ ಪತನವು ಸಂಭವಿಸಿತು. ಭೂಕಂಪಗಳು, ಮಲೇರಿಯ ಮತ್ತು ಅಲ್ಲಿನ ಬಂದರು ಕ್ರಮೇಣ ಮಣ್ಣಿನಿಂದ ತುಂಬಿಕೊಂಡ ಕಾರಣ, ಎಫೆಸ ಪಟ್ಟಣದಲ್ಲಿ ಜೀವನವು ಹೆಚ್ಚು ಕಷ್ಟಕರವಾಗುತ್ತಾ ಹೋಯಿತು.
ಸಾ.ಶ. ಏಳನೇ ಶತಮಾನದಷ್ಟಕ್ಕೆ ಇಸ್ಲಾಮ್ ಮತವು ಎಲ್ಲೆಡೆಯೂ ವಿಸ್ತರಣೆಗೊಳ್ಳಲಾರಂಭಿಸಿತ್ತು. ಇಸ್ಲಾಮ್ ಮತವು ಕೇವಲ ಅರಬ್ ಕುಲದವರನ್ನು ಮಾತ್ರ ತನ್ನ ಪದ್ಧತಿಯ ಕೆಳಗೆ ಒಟ್ಟುಗೂಡಿಸಿಡಲು ಪ್ರಯತ್ನಿಸಲಿಲ್ಲ. ಬದಲಾಗಿ, ಸಾ.ಶ. ಏಳನೇ ಮತ್ತು ಎಂಟನೇ ಶತಮಾನದಾದ್ಯಂತ ಅರಬ್ ನೌಕಾತಂಡಗಳು ಎಫೆಸವನ್ನು ಸೂರೆಮಾಡಿದವು. ಎಫೆಸದ ಬಂದರು ಸಂಪೂರ್ಣವಾಗಿ ಮಣ್ಣಿನಿಂದ ತುಂಬಿಕೊಂಡಾಗ ಅದರ ಭವಿಷ್ಯವು ಎಂದೆಂದಿಗೂ ಮುಚ್ಚಿಹೋಯಿತು ಮತ್ತು ಆ ಪಟ್ಟಣವು ಅವಶೇಷಗಳ ಕೊಂಪೆಯಾಯಿತು. ಒಂದೊಮ್ಮೆ ಆಡಂಬರದಿಂದ ತುಂಬಿದ್ದ ಆ ಮಹಾನಗರದಲ್ಲಿ ಈಗ ಕೇವಲ ಒಂದು ಸಣ್ಣ ನೆಲಸುಪ್ರದೇಶವಾದ ಆಯಾಸೋಲೂಕ್ (ಈಗ ಸೆಲ್ಚೂಕ್) ಮಾತ್ರ ಉಳಿದಿದೆ.
ಎಫೆಸದ ಅವಶೇಷಗಳ ಮಧ್ಯದಿಂದ ನಡೆದುಹೋಗುವುದು
ಎಫೆಸದ ಹಳೆಯ ವೈಭವವನ್ನು ತಿಳಿದುಕೊಳ್ಳಬೇಕಾದರೆ, ಅದರ ಅವಶೇಷಗಳಿಗೆ ಭೇಟಿನೀಡಬೇಕು. ಅದರ ಮುಂದಿನ ಪ್ರವೇಶದ್ವಾರದಿಂದ ನೀವು ನಿಮ್ಮ ಪ್ರವಾಸವನ್ನು ಆರಂಭಿಸಿದರೆ, ತಕ್ಷಣವೇ ವೈಭವಭರಿತವಾದ ಕೂರೆಟೆಸ್ ರಸ್ತೆಯನ್ನು ಸೆಲ್ಸಸ್ ಗ್ರಂಥಾಲಯದ ವರೆಗೆ ಕಾಣುತ್ತೀರಿ. ರಸ್ತೆಯ ಬಲಬದಿಯಲ್ಲಿ ಎರಡನೇ ಶತಮಾನದಲ್ಲಿ ಕಟ್ಟಲ್ಪಟ್ಟ ಒಂದು ಸಣ್ಣ ನಾಟಕಮಂದಿರವು ನಿಮ್ಮ ಗಮನವನ್ನು ಸೆಳೆಯುತ್ತದೆ. ಈ ನಾಟಕಮಂದಿರದಲ್ಲಿ 1,500 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆಯಿದೆ. ಬಹುಶಃ ಇದನ್ನು ಕೇವಲ ಸಮಿತಿ ಭವನವಾಗಿ ಮಾತ್ರ ಉಪಯೋಗಿಸದೆ, ಸಾರ್ವಜನಿಕ ಮನೋರಂಜನೆಗಾಗಿಯೂ ಉಪಯೋಗಿಸಲಾಗುತ್ತಿತ್ತು. ಕೂರೆಟೆಸ್ ರಸ್ತೆಯ ಎರಡು ಬದಿಯೂ, ರಾಷ್ಟ್ರಕ್ಕೆ ಸಂಬಂಧಿಸಿದ ವಿಚಾರಗಳು ಚರ್ಚಿಸಲ್ಪಡುವ ಸ್ಥಳವಾದ ರಾಷ್ಟ್ರ ಆ್ಯಗೊರ, ಹ್ಯಾಡ್ರೀಯನನ ದೇವಸ್ಥಾನ, ಕೆಲವು ಸಾರ್ವಜನಿಕ ನೀರುಬುಗ್ಗೆಗಳು, ಮತ್ತು ಎಫೆಸದಲ್ಲಿದ್ದ ಪ್ರತಿಷ್ಠಿತ ಜನರ ತಾರಸಿ ಮನೆಗಳು ಈ ಮುಂತಾದ ಕಟ್ಟಡಗಳಿಂದ ಸಾಲುಗಟ್ಟಿರುತ್ತದೆ.
ಸಾ.ಶ. ಎರಡನೇ ಶತಮಾನದಲ್ಲಿ ಕಟ್ಟಲ್ಪಟ್ಟ ಮನೋಹರವಾದ ಸೆಲ್ಸಸ್ ಗ್ರಂಥಾಲಯವು ತನ್ನ ಸೊಬಗಿನಿಂದ ನಿಮ್ಮನ್ನು ಆಕರ್ಷಿಸುವುದು. ಅದರ ಅಸಂಖ್ಯಾತ ಸುರುಳಿಗಳನ್ನು ಒಂದು ದೊಡ್ಡ ಓದುವ ಕೋಣೆಯ ಗೋಡೆಯಲ್ಲಿರುವ ಗೂಡುಗಳಲ್ಲಿ ಇಡಲಾಗುತ್ತಿತ್ತು. ಶೋಭಾಯಮಾನವಾದ ಮುಂಭಾಗದಲ್ಲಿರುವ ನಾಲ್ಕು ಪ್ರತಿಮೆಗಳು, ಸೆಲ್ಸಸ್ನಂತೆ ಉನ್ನತ ಸ್ಥಾನದಲ್ಲಿದ್ದ ರೋಮನ್ ಸರಕಾರಿ ಅಧಿಕಾರಿಯಿಂದ ನಿರೀಕ್ಷಿಸಲಾಗುವ ಗುಣಗಳಾದ ಸೋಫೀಯ (ವಿವೇಕ), ಆರೆಟೀ (ಸದ್ಗುಣ), ಆ್ಯನ್ಈಯ (ಭಕ್ತಿ), ಮತ್ತು ಎಫೀಸ್ಟೀಮೀ (ಜ್ಞಾನ ಅಥವಾ ತಿಳಿವಳಿಕೆ) ಮುಂತಾದವುಗಳನ್ನು ಚಿತ್ರಿಸುತ್ತವೆ. ಮೂಲ ಪ್ರತಿಮೆಗಳನ್ನು, ವಿಯನ್ನದಲ್ಲಿರುವ ಎಫೆಸದ ವಸ್ತುಸಂಗ್ರಹಾಲಯದಲ್ಲಿ ಕಾಣಸಾಧ್ಯವಿದೆ. ಗ್ರಂಥಾಲಯದ ಮುನ್ನಂಗಳದ ಪಕ್ಕದಲ್ಲಿಯೇ ಒಂದು ಬೃಹತ್ ಗಾತ್ರದ ದ್ವಾರವು ನಿಮ್ಮನ್ನು ಟೆಟ್ರಾಗೊನೋಸ್ ಆ್ಯಗೊರಕ್ಕೆ, ಅಂದರೆ ಮಾರುಕಟ್ಟೆಗೆ ಕರೆದೊಯ್ಯುತ್ತದೆ. ಸುತ್ತಲೂ ಸಾರ್ವಜನಿಕರಿಗಾಗಿ ಚಾವಣಿಯಿರುವ ಪಾದಚಾರಿ ಪಥಗಳುಳ್ಳ ಅತಿ ದೊಡ್ಡದಾದ ಈ ಚೌಕದಲ್ಲಿ, ಜನರು ತಮ್ಮ ನಿತ್ಯದ ವ್ಯಾಪಾರ ಚಟುವಟಿಕೆಗಳನ್ನು ಮಾಡುತ್ತಿದ್ದರು.
ಅನಂತರ, ನೀವು ಮಾರ್ಬಲ್ ರೋಡ್ ಎಂದು ಕರೆಯಲ್ಪಡುವ ಹಾದಿಗೆ ಬರುತ್ತೀರಿ. ಈ ಹಾದಿಯು ಮಹಾ ನಾಟಕಮಂದಿರಕ್ಕೆ ನಡೆಸುತ್ತದೆ. ಈ ನಾಟಕಮಂದಿರದ ಕೊನೆಯ ವಿಸ್ತರಣೆಗಳನ್ನು ರೋಮ್ ಸಾಮ್ರಾಜ್ಯದ ಸಮಯದಲ್ಲಿ ಮಾಡಲಾಯಿತು ಮತ್ತು ಇದರಲ್ಲಿ ಸುಮಾರು 25,000 ಮಂದಿ ಪ್ರೇಕ್ಷಕರು ಕುಳಿತುಕೊಳ್ಳುವ ಸೌಲಭ್ಯವಿದೆ. ಇದರ ಮುಂಭಾಗವು, ಆಧಾರಸ್ತಂಭಗಳು, ಉಬ್ಬು ಚಿತ್ರಗಳು, ಮತ್ತು ಪ್ರತಿಮೆಗಳಿಂದ ಅತಿ ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು. ಇದೇ ಸ್ಥಳದಲ್ಲಿ ಒಟ್ಟುಸೇರಿದ ಜನಸಮೂಹದ ಮಧ್ಯೆ ಅಕ್ಕಸಾಲಿಗನಾದ ದೇಮೇತ್ರಿಯನು ಗದ್ದಲವನ್ನೆಬ್ಬಿಸಿದ ವಿಷಯವನ್ನು ನೀವು ಮನಸ್ಸಿನಲ್ಲಿ ಸ್ಪಷ್ಟವಾಗಿ ಚಿತ್ರಿಸಿಕೊಳ್ಳಬಹುದು.
ಮಹಾ ನಾಟಕಮಂದಿರದಿಂದ ಪಟ್ಟಣದ ಬಂದರಿನ ವರೆಗಿನ ಈ ಹಾದಿಯು ಅತಿ ಸುಂದರವಾಗಿದೆ. ಇದು, ಸುಮಾರು 500 ಮೀಟರ್ ಉದ್ದ ಮತ್ತು 11 ಮೀಟರ್ ಅಗಲವಾಗಿದ್ದು, ಎರಡೂ ಬದಿಯಲ್ಲಿ ಸ್ತಂಭಗಳಿಂದ ಅಲಂಕರಿಸಲ್ಪಟ್ಟಿದೆ. ಈ ಹಾದಿಯಲ್ಲೇ, ಶಾರೀರಿಕ ತರಬೇತಿಗಾಗಿ ಕಟ್ಟಲಾದ ನಾಟಕಮಂದಿರಕ್ಕೆ ಸಂಬಂಧಿಸಿದ ವ್ಯಾಯಾಮ ಶಾಲೆ ಮತ್ತು ಬಂದರಿಗೆ ಸಂಬಂಧಿಸಿದ ವ್ಯಾಯಾಮ ಶಾಲೆ ಇವೆರಡೂ ಇದ್ದವು. ಈ ಹಾದಿಯ ಕೊನೆಯಲ್ಲಿರುವ ಬಂದರಿನ ದ್ವಾರ, ಲೋಕವನ್ನು ಪ್ರವೇಶಿಸಲಿಕ್ಕೆ ಹೆಬ್ಬಾಗಿಲಾಗಿತ್ತು. ಲೋಕದ ಅತಿ ಮನಮೋಹಕ ಅವಶೇಷಗಳಲ್ಲಿ ಕೆಲವೊಂದರ ಮಧ್ಯದಿಂದ ನಾವು ಮಾಡಿದ ಚಿಕ್ಕ ಪ್ರವಾಸವು ಇಲ್ಲಿಗೆ ಕೊನೆಗೊಳ್ಳುತ್ತದೆ. ವಿಯನ್ನದಲ್ಲಿರುವ ‘ಎಫೆಸದ ವಸ್ತುಸಂಗ್ರಹಾಲಯ’ದಲ್ಲಿ, ಈ ಐತಿಹಾಸಿಕ ಮಹಾನಗರದ ಹಾಗೂ ಅಸಂಖ್ಯಾತ ಸ್ಮಾರಕಕಟ್ಟಡಗಳ ಮರದ ನಮೂನೆ ಇದೆ.
ಈ ವಸ್ತುಸಂಗ್ರಹಾಲಯಕ್ಕೆ ಭೇಟಿನೀಡಿ ಅಲ್ಲಿರುವ ಅರ್ತೆಮೀದೇವಿಯ ವಿಗ್ರಹವನ್ನು ನೋಡುವಾಗ, ಎಫೆಸದಲ್ಲಿದ್ದ ಆರಂಭದ ಕ್ರೈಸ್ತರ ಸೈರಣೆಯ ಕುರಿತು ಆಲೋಚಿಸದೇ ಇರಲಾಗದು. ಮಾಟಮಂತ್ರದಲ್ಲಿ ಮುಳುಗಿದ್ದ ಮತ್ತು ಧಾರ್ಮಿಕ ಪೂರ್ವಗ್ರಹದಿಂದ ಅಂಧರಾಗಿದ್ದ ಜನರಿಂದ ತುಂಬಿದ ಪಟ್ಟಣದಲ್ಲಿ ಆ ಕ್ರೈಸ್ತರು ವಾಸಿಸಬೇಕಿತ್ತು. ಅರ್ತೆಮೀದೇವಿಯ ಆರಾಧಕರಿಂದ ರಾಜ್ಯದ ಸಂದೇಶಕ್ಕೆ ಕಟು ವಿರೋಧವು ಎದುರಾಯಿತು. (ಅ. ಕೃತ್ಯಗಳು 19:19; ಎಫೆಸ 6:12; ಪ್ರಕಟನೆ 2:1-3) ಅಂಥ ಪ್ರತಿಕೂಲ ವಾತಾವರಣದಲ್ಲೂ ಸತ್ಯಾರಾಧನೆಯು ಬೇರೂರಿತು. ನಮ್ಮ ದಿನಗಳಲ್ಲಿ ಸುಳ್ಳು ಆರಾಧನೆಯು ಪುರಾತನ ಅರ್ತೆಮೀದೇವಿಯ ಆರಾಧನೆಯಂತೆ ಅಂತ್ಯಗೊಳ್ಳುವಾಗ ಸತ್ಯ ದೇವರ ಈ ಆರಾಧನೆಯು ಅದೇ ರೀತಿಯಲ್ಲಿ ಜಯಶಾಲಿಯಾಗುವುದು.—ಪ್ರಕಟನೆ 18:4-8.
[ಪುಟ 26ರಲ್ಲಿರುವ ಭೂಪಟ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಮಕೆದೋನ್ಯ
ಕಪ್ಪು ಸಮುದ್ರ
ಏಷ್ಯಾ ಮೈನರ್
ಎಫೆಸ
ಮೆಡಿಟರೇನಿಯನ್ ಸಮುದ್ರ
ಐಗುಪ್ತ
[ಪುಟ 27ರಲ್ಲಿರುವ ಚಿತ್ರ]
ಅರ್ತೆಮೀ ದೇವಿಯ ದೇವಸ್ಥಾನದ ಅವಶೇಷಗಳು
[ಪುಟ 28, 29ರಲ್ಲಿರುವ ಚಿತ್ರಗಳು]
1. ಸೆಲ್ಸಸ್ ಗ್ರಂಥಾಲಯ
2. ಆರೆಟೀ ವಿಗ್ರಹದ ನಿಕಟ ನೋಟ
3. ಮಹಾ ನಾಟಕಮಂದಿರಕ್ಕೆ ನಡೆಸುವ ಮಾರ್ಬಲ್ ರೋಡ್