ಸಮಗ್ರ ಸಾಕ್ಷಿಯನ್ನು ನೀಡಲು ತರಬೇತುಗೊಳಿಸಲ್ಪಟ್ಟವರು
‘ನೀವು ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ.’—ಅ. ಕೃತ್ಯಗಳು 1:8.
“ನಜರೇತಿನ ಯೇಸು . . . ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬದನ್ನು ಜನರಿಗೆ ಸಮಗ್ರ ಸಾಕ್ಷಿಯನ್ನು ನೀಡಬೇಕೆಂದು ಅವನು ನಮಗೆ ಅಪ್ಪಣೆಕೊಟ್ಟನು.” (ಅ. ಕೃತ್ಯಗಳು 10:38, 42, NW) ಈ ಮಾತುಗಳಲ್ಲಿ ಅಪೊಸ್ತಲ ಪೇತ್ರನು, ಒಬ್ಬ ಸೌವಾರ್ತಿಕನಾಗಲಿಕ್ಕಾಗಿ ತಾನು ಪಡೆದ ನೇಮಕವನ್ನು ಕೊರ್ನೇಲ್ಯನಿಗೂ ಅವನ ಕುಟುಂಬದವರಿಗೂ ವಿವರಿಸಿದನು.
2 ಆ ನೇಮಕವನ್ನು ಯೇಸು ಯಾವಾಗ ಕೊಟ್ಟನು? ಪುನರುತ್ಥಾನಗೊಂಡ ಯೇಸು ಸ್ವರ್ಗಾರೋಹಣವಾಗುವುದಕ್ಕೆ ಸ್ವಲ್ಪ ಮುಂಚೆ ಏನನ್ನು ಹೇಳಿದನೋ ಅದರ ಕುರಿತು ಪೇತ್ರನು ಆಲೋಚಿಸುತ್ತಿದ್ದಿರಬಹುದು. ಆ ಸಂದರ್ಭದಲ್ಲಿ ಯೇಸು ತನ್ನ ನಂಬಿಗಸ್ತ ಶಿಷ್ಯರಿಗೆ ಹೇಳಿದ್ದು: ‘ನೀವು ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ.’ (ಅ. ಕೃತ್ಯಗಳು 1:8) ಆದರೂ, ಅದಕ್ಕಿಂತ ಸ್ವಲ್ಪ ಸಮಯಕ್ಕೆ ಮುಂಚೆಯೇ, ಯೇಸುವಿನ ಒಬ್ಬ ಶಿಷ್ಯನಾಗಿರುವ ತಾನು ಅವನಲ್ಲಿಟ್ಟಿರುವ ನಂಬಿಕೆಯ ಬಗ್ಗೆ ಇತರರಿಗೆ ತಿಳಿಸಬೇಕಾಗಿದೆ ಎಂಬುದು ಪೇತ್ರನಿಗೆ ಗೊತ್ತಿತ್ತು.
ಮೂರು ವರ್ಷಗಳ ತರಬೇತಿ
3 ಯೇಸು ಸಾ.ಶ. 29ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡು ಕೆಲವಾರು ತಿಂಗಳುಗಳಾದ ಬಳಿಕ, ಗಲಿಲಾಯ ಸಮುದ್ರದಲ್ಲಿ ಬೆಸ್ತರಾಗಿ ಕೆಲಸಮಾಡುತ್ತಿದ್ದ ಪೇತ್ರನಿಗೂ ಅವನ ತಮ್ಮನಾದ ಅಂದ್ರೆಯನಿಗೂ ಸುವಾರ್ತೆಯನ್ನು ಸಾರಿದನು. ಅವರು ಇಡೀ ರಾತ್ರಿ ಬಲೆಗಳನ್ನು ಬೀಸಿದ್ದರೂ ಏನೂ ಸಿಕ್ಕಿರಲಿಲ್ಲ. ಆದರೂ, ಯೇಸು ಅವರಿಗಂದದ್ದು: “ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ.” ಯೇಸು ಹೇಳಿದಂತೆಯೇ ಅವರು ಮಾಡಿದಾಗ, “ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು.” ಈ ಅದ್ಭುತಕಾರ್ಯವನ್ನು ನೋಡಿದ ಬಳಿಕ ಪೇತ್ರನು ಭಯಭೀತನಾದನು, ಆದರೆ ಅವನನ್ನು ಶಾಂತಪಡಿಸುತ್ತಾ ಯೇಸುವಂದದ್ದು: “ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವವನಾಗಿರುವಿ.”—ಲೂಕ 5:4-10.
4 ಒಡನೆಯೇ ಪೇತ್ರ ಅಂದ್ರೆಯರು ಹಾಗೂ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ತಮ್ಮ ದೋಣಿಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಸುಮಾರು ಮೂರು ವರ್ಷಗಳ ವರೆಗೆ ಅವರು ಯೇಸುವಿನ ಸಾರುವ ಪ್ರಯಾಣಗಳಲ್ಲಿ ಅವನೊಂದಿಗೆ ಜೊತೆಗೂಡಿದರು ಮತ್ತು ಸೌವಾರ್ತಿಕರಾಗಲಿಕ್ಕಾಗಿ ತರಬೇತಿಯನ್ನು ಪಡೆದುಕೊಂಡರು. (ಮತ್ತಾಯ 10:7; ಮಾರ್ಕ 1:16, 18, 20, 38; ಲೂಕ 4:43; 10:9) ಆ ತರಬೇತಿಯ ಕಾಲಾವಧಿಯ ಅಂತ್ಯದಲ್ಲಿ, ಸಾ.ಶ. 33ರ ನೈಸಾನ್ 14ರಂದು ಯೇಸು ಅವರಿಗೆ ಹೇಳಿದ್ದು: “ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು.” (ಯೋಹಾನ 14:12) ಯೇಸುವಿನಂತೆಯೇ ಅವನ ಶಿಷ್ಯರು ಸಹ ಸಮಗ್ರ ಸಾಕ್ಷಿಯನ್ನು ಕೊಡಲಿದ್ದರು, ಆದರೆ ಇನ್ನೂ ಹೆಚ್ಚು ವ್ಯಾಪಕವಾದ ಮಟ್ಟದಲ್ಲಿ ಅವರಿದನ್ನು ಮಾಡಲಿದ್ದರು. ಸ್ವಲ್ಪದರಲ್ಲೇ ಅವರಿಗೆ ತಿಳಿದುಬಂದಂತೆ, ಅವರು ಮತ್ತು ಭಾವೀ ಶಿಷ್ಯರೆಲ್ಲರೂ ‘ಎಲ್ಲಾ ದೇಶಗಳಲ್ಲಿ’ “ಯುಗದ ಸಮಾಪ್ತಿಯ ವರೆಗೂ” ಸಾಕ್ಷಿಯನ್ನು ನೀಡಲಿದ್ದರು.—ಮತ್ತಾಯ 28:19, 20.
5 ನಾವು “ಯುಗದ ಸಮಾಪ್ತಿ”ಯಲ್ಲಿ ಜೀವಿಸುತ್ತಿದ್ದೇವೆ. (ಮತ್ತಾಯ 24:3) ಆ ಪ್ರಥಮ ಶಿಷ್ಯರಂತೆ ನಾವು ಯೇಸುವಿನ ಜೊತೆಯಲ್ಲಿ ಹೋಗಿ ಅವನು ಜನರಿಗೆ ಹೇಗೆ ಸಾರುತ್ತಾನೆ ಎಂಬುದನ್ನು ಗಮನಿಸಲು ಸಾಧ್ಯವಿಲ್ಲ. ಆದರೂ, ಅವನು ಹೇಗೆ ಸಾರಿದನು ಮತ್ತು ತನ್ನ ಹಿಂಬಾಲಕರಿಗೆ ಯಾವ ಸೂಚನೆಗಳನ್ನು ಕೊಟ್ಟನು ಎಂಬುದನ್ನು ಬೈಬಲಿನಲ್ಲಿ ಓದುವ ಮೂಲಕ ನಾವು ಅವನ ತರಬೇತಿಯಿಂದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ. (ಲೂಕ 10:1-11) ಅಷ್ಟುಮಾತ್ರವಲ್ಲ, ಈ ಲೇಖನವು ಯೇಸು ತನ್ನ ಶಿಷ್ಯರಿಗೆ ತೋರಿಸಿದಂಥ ಒಂದು ಅತ್ಯಾವಶ್ಯಕ ಮನೋಭಾವದ ಕುರಿತು, ಅಂದರೆ ಸಾರುವ ಕೆಲಸದ ಕಡೆಗಿನ ಯೋಗ್ಯ ಮನೋಭಾವದ ಕುರಿತು ಚರ್ಚಿಸುವುದು.
ಜನರ ವಿಷಯದಲ್ಲಿ ಕಾಳಜಿ
6 ಯೇಸು ಏಕೆ ಅಷ್ಟು ಪರಿಣಾಮಕಾರಿಯಾಗಿ ಸಾಕ್ಷಿ ಕೊಟ್ಟನು? ಒಂದು ಕಾರಣವೇನೆಂದರೆ, ಜನರ ವಿಷಯದಲ್ಲಿ ಅವನಿಗೆ ಗಾಢವಾದ ಆಸಕ್ತಿಯಿತ್ತು ಮತ್ತು ಕಾಳಜಿಯಿತ್ತು. ಯೇಸು “ದೀನದರಿದ್ರರ ಮೇಲೆ ಕರುಣೆಯುಳ್ಳ”ವನಾಗಿರುವನು ಎಂದು ಕೀರ್ತನೆಗಾರನು ಮುಂತಿಳಿಸಿದ್ದನು. (ಕೀರ್ತನೆ 72:13) ನಿಶ್ಚಯವಾಗಿಯೂ ಅವನು ಈ ಪ್ರವಾದನೆಯನ್ನು ನೆರವೇರಿಸಿದನು. ಒಂದು ಸಂದರ್ಭದ ಕುರಿತು ಬೈಬಲ್ ಹೀಗೆ ಹೇಳುತ್ತದೆ: “[ಅವನು] ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾಯ 9:36) ಗಂಭೀರ ಪಾಪಗಳನ್ನು ಮಾಡಿದ್ದ ಪಾಪಿಗಳು ಸಹ ತಮ್ಮ ಕಡೆಗೆ ಅವನಿಗಿದ್ದ ಕಾಳಜಿಯನ್ನು ಗ್ರಹಿಸಿದರು ಮತ್ತು ಅವನ ಕಡೆಗೆ ಆಕರ್ಷಿತರಾದರು.—ಮತ್ತಾಯ 9:9-13; ಲೂಕ 7:36-38; 19:1-10.
7 ಇಂದು ನಾವು ಜನರ ಕಡೆಗೆ ಅದೇ ರೀತಿಯ ಕಾಳಜಿಯನ್ನು ತೋರಿಸುವಲ್ಲಿ ನಾವು ಸಹ ಪರಿಣಾಮಕಾರಿಯಾಗುವೆವು. ಶುಶ್ರೂಷೆಯಲ್ಲಿ ಭಾಗವಹಿಸುವ ಮುಂಚೆ, ನೀವು ಜನರಿಗೆ ಕೊಂಡೊಯ್ಯುತ್ತಿರುವ ಮಾಹಿತಿಯು ಅವರಿಗೆ ಎಷ್ಟು ಜರೂರಿಯದ್ದಾಗಿದೆ ಎಂಬುದರ ಕುರಿತು ಒಂದು ಕ್ಷಣ ಆಲೋಚಿಸಬಾರದೇಕೆ? ದೇವರ ರಾಜ್ಯವು ಮಾತ್ರ ಬಗೆಹರಿಸುವಂಥ ಅವರಿಗಿರಬಹುದಾದ ಸಮಸ್ಯೆಗಳ ಕುರಿತು ಸ್ವಲ್ಪ ಆಲೋಚಿಸಿರಿ. ನಿಮ್ಮ ಸಂದೇಶಕ್ಕೆ ಯಾರು ಪ್ರತಿಕ್ರಿಯೆ ತೋರಿಸುತ್ತಾರೆ ಎಂಬುದು ನಿಮಗೆ ತಿಳಿದಿಲ್ಲದಿರುವುದರಿಂದ, ಪ್ರತಿಯೊಬ್ಬರ ವಿಷಯದಲ್ಲಿಯೂ ಸಕಾರಾತ್ಮಕ ಮನೋಭಾವವುಳ್ಳವರಾಗಿರಲು ನಿರ್ಧರಿಸಿರಿ. ಬಹುಶಃ ಮುಂದೆ ನೀವು ಭೇಟಿಯಾಗುವ ವ್ಯಕ್ತಿಯು, ನಿಮ್ಮಂಥ ಯಾರಾದರೊಬ್ಬರು ಬಂದು ಸಹಾಯಮಾಡುವಂತೆ ಪ್ರಾರ್ಥಿಸುತ್ತಿರುವ ವ್ಯಕ್ತಿಯಾಗಿರಬಹುದು!
ಪ್ರೀತಿಯಿಂದ ಪ್ರಚೋದಿಸಲ್ಪಡುವುದು
8 ಯೇಸು ಸಾರಿದ ಸುವಾರ್ತೆಯು ಯೆಹೋವನ ಚಿತ್ತದ ನೆರವೇರಿಕೆ, ಆತನ ನಾಮದ ಪವಿತ್ರೀಕರಣ, ಮತ್ತು ಆತನ ಪರಮಾಧಿಕಾರದ ನಿರ್ದೋಷೀಕರಣದ ಕುರಿತಾಗಿತ್ತು—ಇವು ಮಾನವಕುಲದ ಮುಂದಿರುವ ಅತ್ಯಂತ ಪ್ರಾಮುಖ್ಯ ವಿವಾದಾಂಶಗಳಾಗಿವೆ. (ಮತ್ತಾಯ 6:9, 10) ಯೇಸು ತನ್ನ ತಂದೆಯನ್ನು ಪ್ರೀತಿಸಿದ್ದರಿಂದ ಕಡೇ ವರೆಗೂ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಮತ್ತು ಈ ವಿವಾದಾಂಶಗಳನ್ನು ಬಗೆಹರಿಸಲಿರುವಂಥ ರಾಜ್ಯದ ಕುರಿತು ಸಮಗ್ರ ಸಾಕ್ಷಿಯನ್ನು ನೀಡುವಂತೆ ಪ್ರಚೋದಿಸಲ್ಪಟ್ಟನು. (ಯೋಹಾನ 14:31) ಇಂದು ಯೇಸುವಿನ ಹಿಂಬಾಲಕರು ಸಹ ಇದೇ ರೀತಿಯ ಪ್ರಚೋದನೆಯನ್ನು ಹೊಂದಿರುವುದರಿಂದ, ಅವರು ಶುಶ್ರೂಷೆಯಲ್ಲಿ ಶ್ರದ್ಧಾಪೂರ್ವಕವಾಗಿ ಪಾಲ್ಗೊಳ್ಳುತ್ತಾರೆ. ಅಪೊಸ್ತಲ ಯೋಹಾನನು ಹೇಳಿದ್ದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” ಇದರಲ್ಲಿ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆಯೂ ಒಳಗೂಡಿದೆ.—1 ಯೋಹಾನ 5:3; ಮತ್ತಾಯ 28:19, 20.
9 ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ. ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು.” (ಯೋಹಾನ 14:15, 21) ಹೀಗೆ, ಯೇಸುವಿನ ಮೇಲಿರುವ ಪ್ರೀತಿಯು ಸತ್ಯದ ಕುರಿತು ಸಾಕ್ಷಿ ನೀಡುವಂತೆ ಮತ್ತು ಅವನು ಆಜ್ಞಾಪಿಸಿರುವ ಇತರ ವಿಷಯಗಳಿಗೆ ವಿಧೇಯರಾಗುವಂತೆ ನಮ್ಮನ್ನು ಪ್ರಚೋದಿಸಬೇಕು. ಪುನರುತ್ಥಾನಗೊಂಡ ಬಳಿಕ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡ ಒಂದು ಸಂದರ್ಭದಲ್ಲಿ ಅವನು ಪೇತ್ರನನ್ನು ಹುರಿದುಂಬಿಸಿದ್ದು: “ನನ್ನ ಕುರಿಮರಿಗಳನ್ನು ಮೇಯಿಸು . . . ನನ್ನ ಕುರಿಗಳನ್ನು ಕಾಯಿ . . . ನನ್ನ ಕುರಿಗಳನ್ನು ಮೇಯಿಸು.” ಹೀಗೆ ಮಾಡುವಂತೆ ಪೇತ್ರನನ್ನು ಯಾವುದು ಪ್ರಚೋದಿಸಬೇಕಾಗಿತ್ತು? ಯೇಸು ಇದಕ್ಕೆ ಉತ್ತರವನ್ನು, “ನೀನು . . . ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ . . . ನನ್ನ ಮೇಲೆ ಪ್ರೀತಿ ಇಟ್ಟಿದ್ದೀಯೋ . . . ನನ್ನ ಮೇಲೆ ಮಮತೆ ಇಟ್ಟಿದ್ದೀಯೋ” ಎಂದು ಪೇತ್ರನನ್ನು ಪುನಃ ಪುನಃ ಕೇಳಿದಾಗ ಸೂಚಿಸಿದನು. ಹೌದು, ಯೇಸುವಿನ ಕಡೆಗೆ ಪೇತ್ರನಿಗಿದ್ದ ಪ್ರೀತಿ ಮತ್ತು ಮಮತೆಯು ಸಮಗ್ರ ಸಾಕ್ಷಿಯನ್ನು ನೀಡುವಂತೆ, ಯೇಸುವಿನ “ಪುಟ್ಟ ಕುರಿಗಳನ್ನು” (NW) ಕಂಡುಕೊಳ್ಳುವಂತೆ, ಮತ್ತು ತದನಂತರ ಅವರಿಗೆ ಒಬ್ಬ ಆಧ್ಯಾತ್ಮಿಕ ಕುರುಬನಾಗಿರುವಂತೆ ಪೇತ್ರನನ್ನು ಪ್ರಚೋದಿಸಲಿತ್ತು.—ಯೋಹಾನ 21:15-17.
10 ಇಂದು, ಪೇತ್ರನಂತೆ ನಾವು ಯೇಸುವಿನೊಂದಿಗೆ ವ್ಯಕ್ತಿಗತವಾಗಿ ಚಿರಪರಿಚಿತರಾಗಿಲ್ಲ. ಆದರೂ, ಯೇಸು ನಮಗೋಸ್ಕರ ಏನು ಮಾಡಿದನೋ ಅದರ ಬಗ್ಗೆ ಗಹನವಾದ ತಿಳಿವಳಿಕೆ ನಮಗಿದೆ. “ಎಲ್ಲರಿಗೋಸ್ಕರ ಮರಣವನ್ನು ಅನುಭವಿ”ಸುವಂತೆ ಅವನನ್ನು ಮುನ್ನಡಿಸಿದ ಮಹಾನ್ ಪ್ರೀತಿಯಿಂದ ನಮ್ಮ ಹೃದಯಗಳು ಪ್ರಚೋದಿಸಲ್ಪಡುತ್ತವೆ. (ಇಬ್ರಿಯ 2:9; ಯೋಹಾನ 15:13) “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ; ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು” ಎಂದು ಬರೆದಾಗ ಪೌಲನಿಗೆ ಯಾವ ಅನಿಸಿಕೆಯಾಯಿತೋ ಅದೇ ಅನಿಸಿಕೆ ನಮಗೂ ಆಗುತ್ತದೆ. (2 ಕೊರಿಂಥ 5:14, 15) ಸಮಗ್ರ ಸಾಕ್ಷಿಯನ್ನು ನೀಡಬೇಕೆಂಬ ಆಜ್ಞೆಯನ್ನು ಶ್ರದ್ಧಾಪೂರ್ವಕವಾಗಿ ಪೂರೈಸುವ ಮೂಲಕ, ನಮ್ಮ ಕಡೆಗೆ ಯೇಸು ತೋರಿಸಿದ ಪ್ರೀತಿಯನ್ನು ನಾವು ಅಮೂಲ್ಯವಾಗಿ ಪರಿಗಣಿಸುತ್ತೇವೆ ಮತ್ತು ಇದಕ್ಕೆ ಪ್ರತಿಯಾಗಿ ನಾವು ಅವನನ್ನು ಪ್ರೀತಿಸುತ್ತೇವೆ ಎಂಬುದನ್ನು ತೋರಿಸುತ್ತೇವೆ. (1 ಯೋಹಾನ 2:3-5) ಯೇಸುವಿನ ಯಜ್ಞವನ್ನು ಸಾಮಾನ್ಯ ಮೌಲ್ಯದ್ದಾಗಿ ಪರಿಗಣಿಸುವವರೋಪಾದಿ ಸಾರುವ ಕೆಲಸದ ಕಡೆಗೆ ನಾವು ಎಂದಿಗೂ ಉದಾಸೀನ ಮನೋಭಾವವನ್ನು ರೂಢಿಸಿಕೊಳ್ಳದಿರುವೆವು.—ಇಬ್ರಿಯ 10:29.
ಯೋಗ್ಯವಾದ ನೋಟವನ್ನು ಕಾಪಾಡಿಕೊಳ್ಳುವುದು
11 ಯೇಸು ಪೊಂತ್ಯ ಪಿಲಾತನ ಮುಂದೆ ಬಂದಾಗ ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ.” (ಯೋಹಾನ 18:37) ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದರಿಂದ ಯಾವುದೂ ತನ್ನನ್ನು ಅಪಕರ್ಷಿಸುವಂತೆ ಯೇಸು ಬಿಡಲಿಲ್ಲ. ಅವನ ವಿಷಯದಲ್ಲಿ ಇದೇ ದೇವರ ಚಿತ್ತವಾಗಿತ್ತು.
12 ನಿಶ್ಚಯವಾಗಿಯೂ ಈ ವಿಷಯದಲ್ಲಿ ಸೈತಾನನು ಯೇಸುವನ್ನು ಪರೀಕ್ಷೆಗೊಳಪಡಿಸಿದನು. ಯೇಸುವಿನ ದೀಕ್ಷಾಸ್ನಾನವಾಗಿ ಸ್ವಲ್ಪ ಸಮಯಾವಧಿಯ ಬಳಿಕ, ಅವನನ್ನು ಲೋಕದಲ್ಲೇ ಅತಿ ಅಗ್ರಗಣ್ಯ ವ್ಯಕ್ತಿಯಾಗಿ ಮಾಡುವ, “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ಅವನಿಗೆ ಕೊಡುವ ಪ್ರಸ್ತಾಪವನ್ನು ಸೈತಾನನು ಅವನ ಮುಂದಿಟ್ಟನು. (ಮತ್ತಾಯ 4:8, 9) ಸಮಯಾನಂತರ, ಯೆಹೂದ್ಯರು ಅವನನ್ನು ಅರಸನನ್ನಾಗಿ ಮಾಡಲು ಬಯಸಿದರು. (ಯೋಹಾನ 6:15) ಒಬ್ಬ ಮಾನವ ಅರಸನಾಗಿರುತ್ತಿದ್ದಲ್ಲಿ ಮಾನವಕುಲಕ್ಕೆ ಅತ್ಯಧಿಕ ಒಳಿತನ್ನು ಮಾಡಸಾಧ್ಯವಿತ್ತೇನೊ ಎಂದು ತರ್ಕಿಸುತ್ತಾ ಯೇಸು ಅಂಥ ವಿನಂತಿಯನ್ನು ಸಮ್ಮತಿಸುತ್ತಿದ್ದಲ್ಲಿ ಅದರಿಂದ ದೊರಕಸಾಧ್ಯವಿದ್ದ ಪ್ರಯೋಜನಗಳ ಕುರಿತು ಕೆಲವರು ಆಲೋಚಿಸಬಹುದು. ಆದರೆ ಅವನು ಈ ರೀತಿಯ ಆಲೋಚನೆಯನ್ನು ತಿರಸ್ಕರಿಸಿದನು. ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದನ್ನು ಯೇಸು, ತಾನು ಮಾಡಸಾಧ್ಯವಿರುವ ಅತ್ಯಂತ ಪ್ರಾಮುಖ್ಯ ಕೆಲಸವಾಗಿ ಪರಿಗಣಿಸಿದನು.
13 ಅಷ್ಟುಮಾತ್ರವಲ್ಲ, ಯೇಸು ಐಶ್ವರ್ಯದ ಬೆನ್ನಟ್ಟುವಿಕೆಯಿಂದಲೂ ಅಪಕರ್ಷಿತನಾಗಲಿಲ್ಲ. ಈ ಕಾರಣದಿಂದಲೇ ಅವನೊಬ್ಬ ಶ್ರೀಮಂತ ವ್ಯಕ್ತಿಯಂತೆ ಜೀವಿಸಲಿಲ್ಲ. ಅವನಿಗೆ ಸ್ವಂತ ಮನೆಯೂ ಇರಲಿಲ್ಲ. ಒಂದು ಸಂದರ್ಭದಲ್ಲಿ ಅವನು ಹೇಳಿದ್ದು: “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ.” (ಮತ್ತಾಯ 8:20) ಬೈಬಲಿಗನುಸಾರ, ಯೇಸು ಮರಣಹೊಂದಿದಾಗ ಅವನ ಬಳಿಯಿದ್ದ ಬೆಲೆಬಾಳುವ ಏಕಮಾತ್ರ ಸೊತ್ತು ಅವನ ಬಟ್ಟೆಯಾಗಿದ್ದು, ರೋಮನ್ ಸಿಪಾಯಿಗಳು ಅದಕ್ಕೆ ಚೀಟುಹಾಕಿದರು. (ಯೋಹಾನ 19:23, 24) ಹಾಗಾದರೆ ಯೇಸುವಿನ ಜೀವನವು ಒಂದು ಸೋಲಾಗಿತ್ತೊ? ನಿಶ್ಚಯವಾಗಿಯೂ ಇಲ್ಲ!
14 ಅತ್ಯಂತ ಶ್ರೀಮಂತ ಲೋಕೋಪಕಾರಿಯೊಬ್ಬನು ಎಂದಾದರೂ ಸಾಧಿಸಸಾಧ್ಯವಿದ್ದುದಕ್ಕಿಂತಲೂ ಎಷ್ಟೋ ಹೆಚ್ಚನ್ನು ಯೇಸು ಸಾಧಿಸಿದನು. ಪೌಲನು ಹೇಳಿದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದು ತಾನು ಬಡತನದಲ್ಲಿ ಸೇರುವದರಿಂದ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಬಡವನಾದನು.” (2 ಕೊರಿಂಥ 8:9; ಫಿಲಿಪ್ಪಿ 2:5-8) ಯೇಸು ಪ್ರಾಪಂಚಿಕ ರೀತಿಯಲ್ಲಿ ಬಡವನಾಗಿದ್ದರೂ, ದೀನ ವ್ಯಕ್ತಿಗಳು ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು ಆನಂದಿಸಲಿಕ್ಕಾಗಿ ದ್ವಾರವನ್ನು ತೆರೆದನು. ನಾವು ಅವನಿಗೆ ಎಷ್ಟು ಚಿರಋಣಿಗಳಾಗಿದ್ದೇವೆ! ಮತ್ತು ದೇವರ ಚಿತ್ತವನ್ನು ಮಾಡುವುದನ್ನೇ ತನ್ನ ಜೀವನದ ಪ್ರಾಮುಖ್ಯ ಕೆಲಸವನ್ನಾಗಿ ಮಾಡಿಕೊಂಡದ್ದಕ್ಕೆ ಅವನಿಗೆ ಸಿಕ್ಕಿದ ಪ್ರತಿಫಲಕ್ಕಾಗಿ ನಾವೆಷ್ಟು ಹರ್ಷಿಸುತ್ತೇವೆ!—ಕೀರ್ತನೆ 40:8; ಅ. ಕೃತ್ಯಗಳು 2:32, 33, 36.
15 ಇಂದು ಯೇಸುವನ್ನು ಅನುಕರಿಸಲು ಪ್ರಯತ್ನಿಸುವ ಕ್ರೈಸ್ತರು ಸಹ ಐಶ್ವರ್ಯದ ಬೆನ್ನಟ್ಟುವಿಕೆಯಿಂದ ಅಪಕರ್ಷಿತರಾಗಲು ನಿರಾಕರಿಸುತ್ತಾರೆ. (1 ತಿಮೊಥೆಯ 6:9, 10) ಧನಸಂಪತ್ತುಗಳು ಜೀವನವನ್ನು ಸುಖಕರವಾಗಿ ಮಾಡಬಲ್ಲವು ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರಾದರೂ, ತಮ್ಮ ನಿತ್ಯ ಭವಿಷ್ಯತ್ತಿಗೆ ಐಶ್ವರ್ಯವು ಯಾವುದೇ ರೀತಿಯಲ್ಲಿ ಸಹಾಯಮಾಡಲಾರದು ಎಂಬುದು ಅವರಿಗೆ ಗೊತ್ತಿದೆ. ಯೇಸು ಮರಣಹೊಂದಿದಾಗ ಅವನ ವಸ್ತ್ರವು ಹೇಗೆ ಅವನಿಗೆ ಯಾವುದೇ ಮೌಲ್ಯವುಳ್ಳದ್ದಾಗಿರಲಿಲ್ಲವೋ ಅದೇ ರೀತಿಯಲ್ಲಿ ಒಬ್ಬ ಕ್ರೈಸ್ತನು ಸಾಯುವಾಗ ಅವನ ಪ್ರಾಪಂಚಿಕ ಐಶ್ವರ್ಯವು ಅವನಿಗೆ ಯಾವುದೇ ಮೌಲ್ಯವುಳ್ಳದ್ದಾಗಿರುವುದಿಲ್ಲ. (ಪ್ರಸಂಗಿ 2:10, 11, 17-19; 7:12) ಕ್ರೈಸ್ತನೊಬ್ಬನು ಸಾಯುವಾಗ, ಅವನ ಬಳಿಯಿರುವ ನಿಜ ಮೌಲ್ಯವುಳ್ಳ ಏಕಮಾತ್ರ ವಿಷಯವು, ಯೆಹೋವನೊಂದಿಗೆ ಮತ್ತು ಯೇಸು ಕ್ರಿಸ್ತನೊಂದಿಗೆ ಅವನಿಗಿರುವ ಸಂಬಂಧವೇ ಆಗಿದೆ.—ಮತ್ತಾಯ 6:19-21; ಲೂಕ 16:9.
ವಿರೋಧದಿಂದ ವಿಚಲಿತನಾಗಲಿಲ್ಲ
16 ವಿರೋಧವು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದರಿಂದ ಯೇಸುವನ್ನು ಅಪಕರ್ಷಿಸಲಿಲ್ಲ. ತನ್ನ ಭೂಶುಶ್ರೂಷೆಯು ಒಂದು ಯಜ್ಞಾರ್ಪಿತ ಮರಣದಲ್ಲಿ ಕೊನೆಗೊಳ್ಳುವುದು ಎಂಬ ಅರಿವು ಸಹ ಅವನನ್ನು ನಿರುತ್ತೇಜಿಸಲಿಲ್ಲ. ಯೇಸುವಿನ ಕುರಿತು ಪೌಲನು ಹೇಳಿದ್ದು: “ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ [“ಯಾತನಾ ಕಂಬದ,” NW] ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿಯ 12:2) ಯೇಸು ‘ಅವಮಾನವನ್ನು ಅಲಕ್ಷ್ಯಮಾಡಿದನು’ ಎಂಬುದನ್ನು ಗಮನಿಸಿರಿ. ವಿರೋಧಿಗಳು ತನ್ನ ಕುರಿತು ಏನು ನೆನಸುತ್ತಾರೆ ಎಂಬುದರ ಬಗ್ಗೆ ಅವನು ತಲೆಕೆಡಿಸಿಕೊಳ್ಳಲಿಲ್ಲ. ಅವನ ಮನಸ್ಸು ದೇವರ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರೀಕೃತವಾಗಿತ್ತು.
17 ಯೇಸುವಿನ ತಾಳ್ಮೆಯ ಕುರಿತಾದ ಪಾಠವನ್ನು ಅನ್ವಯಿಸುತ್ತಾ ಪೌಲನು ಕ್ರೈಸ್ತರನ್ನು ಹೀಗೆ ಉತ್ತೇಜಿಸುತ್ತಾನೆ: “ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.” (ಇಬ್ರಿಯ 12:3) ಸತತವಾಗಿ ವಿರೋಧವನ್ನು ಮತ್ತು ನಿಂದೆಯನ್ನು ಎದುರಿಸುವುದು ಬಹಳ ಬಳಲಿಸುವಂಥದ್ದು ಆಗಿರಸಾಧ್ಯವಿದೆ ಎಂಬುದು ನಿಜ. ಲೋಕದ ಆಕರ್ಷಣೆಗಳನ್ನು ಪ್ರತಿರೋಧಿಸುತ್ತಾ ಇರುವುದು ನಮ್ಮನ್ನು ದಣಿಸಿಬಿಡಸಾಧ್ಯವಿದೆ; ಇದು ಒಬ್ಬ ಗಮನಾರ್ಹ ವ್ಯಕ್ತಿಯಾಗುವಂತೆ ಉತ್ತೇಜಿಸುವಂಥ ಸಂಬಂಧಿಕರು ನಮ್ಮನ್ನು ಟೀಕಿಸುವಂತೆ ಮಾಡಬಹುದು. ಆದರೂ, ದೃಢನಿಶ್ಚಯದಿಂದ ನಮ್ಮ ಜೀವಿತಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ನೀಡುತ್ತಿರುವಾಗ, ಯೇಸುವಿನಂತೆಯೇ ನಾವು ಬೆಂಬಲಕ್ಕಾಗಿ ಯೆಹೋವನ ಕಡೆಗೆ ನೋಡುತ್ತೇವೆ.—ಮತ್ತಾಯ 6:33; ರೋಮಾಪುರ 15:13; 1 ಕೊರಿಂಥ 2:4.
18 ಸಮೀಪಿಸುತ್ತಿರುವ ತನ್ನ ಮರಣದ ಕುರಿತು ಯೇಸು ತನ್ನ ಶಿಷ್ಯರಿಗೆ ಹೇಳಲಾರಂಭಿಸಿದಾಗ, ಅವನು ಅಪಕರ್ಷಿತನಾಗಲು ನಿರಾಕರಿಸಿದ್ದು ಸುವ್ಯಕ್ತವಾಯಿತು. ಪೇತ್ರನು ಯೇಸುವಿಗೆ “ದೇವರು ನಿನ್ನನ್ನು ಕಾಯಲಿ” ಎಂದು ತಿಳಿಸುತ್ತಾ, “ನಿನಗೆ ಹೀಗೆ ಎಂದಿಗೂ ಆಗಬಾರ”ದೆಂದು ನಿಶ್ಚಿತವಾಗಿ ಹೇಳಿದನು. ಯೆಹೋವನ ಚಿತ್ತವನ್ನು ಮಾಡುವ ತನ್ನ ನಿರ್ಧಾರವನ್ನು ದುರ್ಬಲಗೊಳಿಸಬಹುದಾದ ಯಾವುದೇ ವಿಷಯವನ್ನು ಕೇಳಿಸಿಕೊಳ್ಳಲು ಯೇಸು ನಿರಾಕರಿಸಿದನು. ಅವನು ತಿರುಗಿಕೊಂಡು ಪೇತ್ರನಿಗೆ ಹೇಳಿದ್ದು: “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ.” (ಮತ್ತಾಯ 16:21-23) ನಾವು ಸಹ ಮನುಷ್ಯರ ಯೋಚನೆಗಳನ್ನು ತಿರಸ್ಕರಿಸುವುದರಲ್ಲಿ ಯಾವಾಗಲೂ ಇಂಥದ್ದೇ ದೃಢನಿರ್ಧಾರವುಳ್ಳವರಾಗಿರೋಣ. ನಾವು ಯಾವಾಗಲೂ ದೇವರ ವಿಚಾರಗಳಿಂದ ಮಾರ್ಗದರ್ಶಿಸಲ್ಪಡೋಣ.
ನಿಜವಾದ ಪ್ರಯೋಜನಗಳನ್ನು ತರುತ್ತದೆ
19 ತಾನು ಮೆಸ್ಸೀಯನಾಗಿದ್ದೇನೆ ಎಂಬುದನ್ನು ರುಜುಪಡಿಸಲಿಕ್ಕಾಗಿ ಯೇಸು ಅನೇಕ ಅದ್ಭುತಕಾರ್ಯಗಳನ್ನು ಮಾಡಿದನು. ಅವನು ಸತ್ತವರನ್ನೂ ಪುನರುತ್ಥಾನಗೊಳಿಸಿದನು. ಈ ಕಾರ್ಯಗಳು ಜನರ ಗುಂಪುಗಳನ್ನು ಆಕರ್ಷಿಸಿದವು, ಆದರೆ ಯೇಸು ಕೇವಲ ಸಮಾಜೋದ್ಧಾರಕ ಕೆಲಸವನ್ನು ಮಾಡಲಿಕ್ಕಾಗಿ ಭೂಮಿಗೆ ಬರಲಿಲ್ಲ. ಅವನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳಲಿಕ್ಕೋಸ್ಕರ ಬಂದನು. ತಾನು ಒದಗಿಸುವಂಥ ಯಾವುದೇ ಪ್ರಾಪಂಚಿಕ ಪ್ರಯೋಜನಗಳು ತಾತ್ಕಾಲಿಕವಾಗಿವೆ ಎಂಬುದು ಅವನಿಗೆ ಗೊತ್ತಿತ್ತು. ಪುನರುತ್ಥಾನಗೊಳಿಸಲ್ಪಟ್ಟವರು ಸಹ ಪುನಃ ಸಾಯಲಿದ್ದರು. ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವ ಮೂಲಕ ಮಾತ್ರ ಅವನು ಕೆಲವರಿಗೆ ನಿತ್ಯಜೀವವನ್ನು ಪಡೆದುಕೊಳ್ಳುವಂತೆ ಸಹಾಯಮಾಡಸಾಧ್ಯವಿತ್ತು.—ಲೂಕ 18:28-30.
20 ಇಂದು ಕೆಲವು ವ್ಯಕ್ತಿಗಳು ಆಸ್ಪತ್ರೆಗಳನ್ನು ಕಟ್ಟುವ ಮೂಲಕ ಅಥವಾ ಲೋಕದಲ್ಲಿರುವ ಬಡವರ ಪರವಾಗಿ ಸಮಾಜ ಸೇವೆಗಳನ್ನು ಮಾಡುವ ಮೂಲಕ ಯೇಸುವಿನ ಸತ್ಕಾರ್ಯಗಳನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ವೈಯಕ್ತಿಕವಾಗಿ ತುಂಬ ನಷ್ಟವನ್ನು ಮಾಡಿಕೊಂಡಾದರೂ ಅವರಿದನ್ನು ಮಾಡುತ್ತಾರೆ, ಮತ್ತು ಅವರ ಯಥಾರ್ಥ ಪ್ರಯತ್ನವು ಪ್ರಶಂಸಾರ್ಹವಾದದ್ದಾಗಿದೆ; ಆದರೆ ಅವರು ಒದಗಿಸುವ ಯಾವುದೇ ಪರಿಹಾರವು ತಾತ್ಕಾಲಿಕವಾದದ್ದಾಗಿದೆ. ಕೇವಲ ರಾಜ್ಯವು ಮಾತ್ರ ಶಾಶ್ವತ ಪರಿಹಾರವನ್ನು ತರುವುದು. ಆದುದರಿಂದ, ಯೇಸುವಿನಂತೆ ಯೆಹೋವನ ಸಾಕ್ಷಿಗಳು ಆ ರಾಜ್ಯದ ಕುರಿತಾದ ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ.
21 ನಿಜ ಕ್ರೈಸ್ತರು ಸತ್ಕಾರ್ಯಗಳನ್ನೂ ಮಾಡುತ್ತಾರೆ ನಿಶ್ಚಯ. ಪೌಲನು ಬರೆದುದು: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ನಮ್ಮ ನೆರೆಹೊರೆಯವರಿಗೆ ಅಥವಾ ನಮ್ಮ ಕ್ರೈಸ್ತ ಸಹೋದರರಿಗೆ ಬಿಕ್ಕಟ್ಟಿನ ಸಮಯಗಳಲ್ಲಿ ಇಲ್ಲವೆ ಅಗತ್ಯವಿರುವಾಗ ‘ಒಳ್ಳೇದನ್ನು ಮಾಡಲು’ ನಾವು ಹಿಂಜರಿಯುವುದಿಲ್ಲ. ಹೀಗಿದ್ದರೂ, ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದರ ಮೇಲೆಯೇ ನಾವು ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತೇವೆ.
ಯೇಸುವಿನ ಮಾದರಿಯಿಂದ ಕಲಿಯಿರಿ
22 ಪೌಲನು ಬರೆದುದು: “ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ.” (1 ಕೊರಿಂಥ 9:16) ಸುವಾರ್ತೆಯ ವಿಷಯದಲ್ಲಿ ಅವನು ನಿರ್ಲಕ್ಷ್ಯ ಮನೋಭಾವದವನಾಗಿರಲಿಲ್ಲ, ಏಕೆಂದರೆ ಅದನ್ನು ಸಾರುವುದು ಸ್ವತಃ ಅವನಿಗೆ ಮತ್ತು ಅವನ ಕೇಳುಗರಿಗೆ ಜೀವದ ಅರ್ಥದಲ್ಲಿತ್ತು. (1 ತಿಮೊಥೆಯ 4:16) ನಮ್ಮ ಶುಶ್ರೂಷೆಯ ವಿಷಯದಲ್ಲಿ ನಮಗೂ ಇದೇ ರೀತಿಯ ನೋಟವಿದೆ. ನಾವು ನಮ್ಮ ನೆರೆಯವರಿಗೆ ಸಹಾಯಮಾಡಲು ಬಯಸುತ್ತೇವೆ. ನಾವು ಯೆಹೋವನ ಕಡೆಗಿರುವ ನಮ್ಮ ಪ್ರೀತಿಯನ್ನು ತೋರಿಸಲು ಇಷ್ಟಪಡುತ್ತೇವೆ. ನಾವು ಯೇಸುವಿನ ಮೇಲಿರುವ ನಮ್ಮ ಪ್ರೀತಿಯನ್ನು ಮತ್ತು ನಮ್ಮ ಕಡೆಗೆ ಅವನಿಗಿರುವ ಮಹಾನ್ ಪ್ರೀತಿಗೆ ಗಣ್ಯತೆಯನ್ನು ರುಜುಪಡಿಸಲು ಬಯಸುತ್ತೇವೆ. ಆದುದರಿಂದಲೇ ನಾವು ಸುವಾರ್ತೆಯನ್ನು ಸಾರುತ್ತೇವೆ ಮತ್ತು ಹೀಗೆ “ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ” ಬದುಕುತ್ತೇವೆ.—1 ಪೇತ್ರ 4:1, 2.
23 ಇತರರು ನಮ್ಮನ್ನು ಕುಚೋದ್ಯಮಾಡುವಾಗ ಅಥವಾ ನಮ್ಮ ಸಂದೇಶವನ್ನು ಕೋಪದಿಂದ ತಿರಸ್ಕರಿಸುವಾಗ, ಯೇಸುವಿನಂತೆಯೇ ನಾವು ಸಹ ನಮ್ಮ ಮುಖ್ಯ ಕೆಲಸದಿಂದ ಅಪಕರ್ಷಿತರಾಗುವುದಿಲ್ಲ. ತನ್ನ ಹಿಂದೆ ಬರುವಂತೆ ಯೇಸು ಪೇತ್ರನಿಗೆ ಮತ್ತು ಅಂದ್ರೆಯನಿಗೆ ಕರೆಕೊಟ್ಟಾಗ ಅವನು ಯಾವ ಅದ್ಭುತಕಾರ್ಯವನ್ನು ಮಾಡಿದನೋ ಅದರಿಂದ ನಾವು ಒಂದು ಪಾಠವನ್ನು ಕಲಿಯುತ್ತೇವೆ. ನಾವು ಯೇಸುವಿಗೆ ವಿಧೇಯರಾಗುವಲ್ಲಿ, ಮತ್ತು ಸಾಂಕೇತಿಕವಾಗಿ ಹೇಳುವುದಾದರೆ ಯಾವುದೇ ಪ್ರತಿಫಲವು ಸಿಗದಿರುವಂತೆ ತೋರುವ ಸ್ಥಳಗಳಲ್ಲಿಯೂ ನಮ್ಮ ಬಲೆಗಳನ್ನು ಬೀಸುವಲ್ಲಿ, ನಮ್ಮ ಮೀನುಹಿಡಿಯುವ ಪ್ರಯತ್ನವು ಸಫಲವಾಗಬಹುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಯಾವುದೇ ಪ್ರತಿಫಲ ಸಿಗದಿರುವಂತೆ ತೋರಿಬಂದ ಟೆರಿಟೊರಿಗಳಲ್ಲಿ ಅನೇಕ ವರ್ಷಗಳ ವರೆಗೆ ಕೆಲಸಮಾಡಿದ ಬಳಿಕ ಅನೇಕ ಕ್ರೈಸ್ತ ಬೆಸ್ತರು ಸಾಕಷ್ಟು ಮೀನನ್ನು ಹಿಡಿದಿದ್ದಾರೆ. ಇನ್ನಿತರರು ಮೀನುಗಾರಿಕೆಯು ಹೆಚ್ಚು ಫಲದಾಯಕವಾಗಿರುವ ಕ್ಷೇತ್ರಗಳಿಗೆ ಸ್ಥಳಾಂತರಿಸಲು ಶಕ್ತರಾಗಿದ್ದಾರೆ ಮತ್ತು ಅಲ್ಲಿ ಬಹಳಷ್ಟು ಮೀನನ್ನು ಕಂಡುಕೊಂಡಿದ್ದಾರೆ. ನಾವು ಏನೇ ಮಾಡುವುದಾದರೂ, ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವುದನ್ನು ಮಾತ್ರ ಎಂದಿಗೂ ನಿಲ್ಲಿಸುವುದಿಲ್ಲ. ಭೂಮಿಯ ಯಾವುದೇ ಭಾಗದಲ್ಲಿ ಸಾರುವ ಕೆಲಸವು ಪೂರ್ಣಗೊಳಿಸಲ್ಪಟ್ಟಿದೆ ಎಂದು ಯೇಸು ಇನ್ನೂ ಹೇಳಿಲ್ಲ ಎಂಬುದು ನಮಗೆ ಗೊತ್ತಿದೆ.—ಮತ್ತಾಯ 24:14.
24 ಈಗ 60 ಲಕ್ಷಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಕಾರ್ಯಮಗ್ನರಾಗಿದ್ದಾರೆ. ಇಸವಿ 2005, ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯಲ್ಲಿ 2004ರ ಸೇವಾ ವರ್ಷದ ಸಾಕ್ಷಿಗಳ ಚಟುವಟಿಕೆಯ ವಾರ್ಷಿಕ ಲೋಕವ್ಯಾಪಕ ವರದಿಯನ್ನು ಕೊಡಲಾಗುವುದು. ಈ ವರದಿಯು, ಸಾರುವ ಕೆಲಸದ ಮೇಲಿನ ಯೆಹೋವನ ಸಮೃದ್ಧ ಆಶೀರ್ವಾದವನ್ನು ರುಜುಪಡಿಸುವುದು. ಈ ವಿಷಯಗಳ ವ್ಯವಸ್ಥೆಗೆ ಉಳಿದಿರುವ ಕೊಂಚವೇ ಸಮಯದಲ್ಲಿ ನಾವು ಪೌಲನ ಭಾವಪ್ರಚೋದಕ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳೋಣ: “ದೇವರ ವಾಕ್ಯವನ್ನು ಸಾರು . . . ಅದರಲ್ಲಿ ಆಸಕ್ತನಾಗಿರು.” (2 ತಿಮೊಥೆಯ 4:2) ಈ ಕೆಲಸವು ಪೂರ್ಣಗೊಳಿಸಲ್ಪಟ್ಟಿದೆ ಎಂದು ಯೆಹೋವನು ಹೇಳುವ ತನಕ ನಾವು ಸಮಗ್ರ ಸಾಕ್ಷಿಯನ್ನು ನೀಡುತ್ತಾ ಇರುವಂತಾಗಲಿ.
ಈ ವರ್ಷದಿಂದ ಆರಂಭಿಸಿ, ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿಯು ಜನವರಿ 1ರ ಕಾವಲಿನಬುರುಜು ಸಂಚಿಕೆಯಲ್ಲಿ ಪ್ರಕಟವಾಗುವುದಿಲ್ಲ. ಬದಲಾಗಿ ಇದು ಫೆಬ್ರವರಿ 1ರ ಸಂಚಿಕೆಯಲ್ಲಿ ಮುದ್ರಿಸಲ್ಪಡುವುದು.
ಉತ್ತರಿಸಬಲ್ಲಿರೋ?
• ಯೇಸು ತನ್ನ ಶಿಷ್ಯರಿಗೆ ಕೊಟ್ಟ ತರಬೇತಿಯಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
• ತಾನು ಯಾರಿಗೆ ಸಾರಿದನೋ ಆ ಜನರ ಕಡೆಗೆ ಯೇಸುವಿಗೆ ಯಾವ ಮನೋಭಾವವಿತ್ತು?
• ಸಮಗ್ರ ಸಾಕ್ಷಿಯನ್ನು ಕೊಡುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?
• ಯೇಸುವಿನಂತೆ ಯಾವ ವಿಧಗಳಲ್ಲಿ ನಾವು ದೇವರ ಚಿತ್ತವನ್ನು ಮಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಸಾಧ್ಯವಿದೆ?
[ಅಧ್ಯಯನ ಪ್ರಶ್ನೆಗಳು]
1, 2. ಪೇತ್ರನಿಗೆ ಯಾವ ನೇಮಕವಿತ್ತು, ಮತ್ತು ಅವನಿಗೆ ಅದನ್ನು ಯಾರು ಕೊಟ್ಟರು?
3. ಯೇಸು ಯಾವ ಅದ್ಭುತಕಾರ್ಯವನ್ನು ಮಾಡಿದನು, ಮತ್ತು ಪೇತ್ರನಿಗೂ ಅಂದ್ರೆಯನಿಗೂ ಯಾವ ಆಮಂತ್ರಣವನ್ನು ನೀಡಿದನು?
4. (ಎ) ಸಾಕ್ಷಿಯನ್ನು ಕೊಡಲಿಕ್ಕಾಗಿ ಯೇಸು ತನ್ನ ಶಿಷ್ಯರನ್ನು ಹೇಗೆ ಸಿದ್ಧಪಡಿಸಿದನು? (ಬಿ) ಯೇಸುವಿನ ಶುಶ್ರೂಷೆಗೆ ಹೋಲಿಸುವಾಗ ಅವನ ಶಿಷ್ಯರ ಶುಶ್ರೂಷೆಯು ಹೇಗಿರಲಿತ್ತು?
5. ಯೇಸು ತನ್ನ ಹಿಂಬಾಲಕರಿಗೆ ಕೊಟ್ಟ ತರಬೇತಿಯಿಂದ ನಾವು ಯಾವ ವಿಧಗಳಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
6, 7. ಯೇಸುವಿನ ಯಾವ ಗುಣವು ಅವನ ಶುಶ್ರೂಷೆಯನ್ನು ಪರಿಣಾಮಕಾರಿಯಾಗಿ ಮಾಡಿತು, ಮತ್ತು ಈ ವಿಷಯದಲ್ಲಿ ನಾವು ಅವನನ್ನು ಹೇಗೆ ಅನುಕರಿಸಬಲ್ಲೆವು?
8. ಯೇಸುವಿನ ಅನುಕರಣೆಯಲ್ಲಿ ಸುವಾರ್ತೆಯನ್ನು ಸಾರುವಂತೆ ಅವನ ಹಿಂಬಾಲಕರನ್ನು ಯಾವುದು ಪ್ರಚೋದಿಸುತ್ತದೆ?
9, 10. ದೇವರ ಪ್ರೀತಿಯಲ್ಲದೆ ಬೇರೆ ಯಾವ ಪ್ರೀತಿಯು ಸಮಗ್ರ ಸಾಕ್ಷಿಯನ್ನು ನೀಡುವಂತೆ ನಮ್ಮನ್ನು ಪ್ರಚೋದಿಸುತ್ತದೆ?
11, 12. ಯಾವ ಉದ್ದೇಶಕ್ಕಾಗಿ ಯೇಸು ಲೋಕಕ್ಕೆ ಬಂದನು, ಮತ್ತು ಅವನು ಇದನ್ನು ಅತ್ಯಂತ ಪ್ರಾಮುಖ್ಯ ಕೆಲಸವಾಗಿ ಪರಿಗಣಿಸಿದನು ಎಂಬುದನ್ನು ಹೇಗೆ ತೋರಿಸಿಕೊಟ್ಟನು?
13, 14. (ಎ) ಯೇಸುವಿನ ಮುಖ್ಯ ಕೆಲಸದಿಂದ ಅವನನ್ನು ಅಪಕರ್ಷಿಸುವುದರಲ್ಲಿ ಯಾವುದು ವಿಫಲವಾಯಿತು? (ಬಿ) ಯೇಸು ಪ್ರಾಪಂಚಿಕ ರೀತಿಯಲ್ಲಿ ಬಡವನಾಗಿದ್ದರೂ ಏನನ್ನು ಸಾಧಿಸಿದನು?
15. ಐಶ್ವರ್ಯಕ್ಕಿಂತಲೂ ಯಾವುದು ಹೆಚ್ಚು ಅಮೂಲ್ಯವಾದದ್ದಾಗಿದೆ?
16. ಯೇಸು ವಿರೋಧವನ್ನು ಹೇಗೆ ಎದುರಿಸಿದನು?
17. ಯೇಸುವಿನ ತಾಳ್ಮೆಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?
18. ಯೇಸು ಪೇತ್ರನಿಗೆ ನುಡಿದ ಮಾತುಗಳಿಂದ ನಾವು ಯಾವ ಅತ್ಯುತ್ತಮ ಪಾಠವನ್ನು ಕಲಿಯಸಾಧ್ಯವಿದೆ?
19. ಯೇಸು ಅನೇಕ ಅದ್ಭುತಕಾರ್ಯಗಳನ್ನು ಮಾಡಿದನಾದರೂ, ಅವನ ಶುಶ್ರೂಷೆಯ ಅತ್ಯಂತ ಪ್ರಾಮುಖ್ಯ ಭಾಗವು ಯಾವುದಾಗಿತ್ತು?
20, 21. ಸತ್ಕಾರ್ಯಗಳ ವಿಷಯದಲ್ಲಿ ನಿಜ ಕ್ರೈಸ್ತರು ಯಾವ ಸಮತೂಕವನ್ನು ಕಾಪಾಡಿಕೊಳ್ಳುತ್ತಾರೆ?
22. ಕ್ರೈಸ್ತರು ತಮ್ಮ ನೆರೆಯವರಿಗೆ ಏಕೆ ಸಾರುತ್ತಾರೆ?
23, 24. (ಎ) ಮೀನಿನ ಅದ್ಭುತಕಾರ್ಯದಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ? (ಬಿ) ಇಂದು ಯಾರು ಸಮಗ್ರ ಸಾಕ್ಷಿಯನ್ನು ಕೊಡುತ್ತಿದ್ದಾರೆ?
[ಪುಟ 15ರಲ್ಲಿರುವ ಚಿತ್ರ]
ಯೇಸುವಿನಂತೆಯೇ ನಾವು ಜನರ ವಿಷಯದಲ್ಲಿ ಕಾಳಜಿ ತೋರಿಸುವುದಾದರೆ, ನಮ್ಮ ಶುಶ್ರೂಷೆಯಲ್ಲಿ ನಾವು ಪರಿಣಾಮಕಾರಿಯಾಗಿರುವೆವು
[ಪುಟ 16, 17ರಲ್ಲಿರುವ ಚಿತ್ರ]
ಯೇಸು ಪ್ರಧಾನವಾಗಿ ಸತ್ಯದ ವಿಷಯದಲ್ಲಿ ಸಾಕ್ಷಿಹೇಳಲಿಕ್ಕೋಸ್ಕರ ಭೂಮಿಗೆ ಬಂದನು
[ಪುಟ 17ರಲ್ಲಿರುವ ಚಿತ್ರಗಳು]
ಯೆಹೋವನ ಸಾಕ್ಷಿಗಳು ಸಮಗ್ರ ಸಾಕ್ಷಿಯನ್ನು ನೀಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾರೆ