ಪಿಶಾಚನು ಇದ್ದಾನೆಂದು ನೀವು ನಂಬುತ್ತೀರೊ?
ಶಾಸ್ತ್ರವಚನಗಳು ಪಿಶಾಚನನ್ನು ಒಬ್ಬ ನೈಜ ವ್ಯಕ್ತಿಯಾಗಿ ಚಿತ್ರಿಸುತ್ತವೆ. ದೇವರು ಯಾವ ಕಾರಣದಿಂದ ಮಾನವ ಕಣ್ಣುಗಳಿಗೆ ಅದೃಶ್ಯನೊ ಅದೇ ಕಾರಣದಿಂದಾಗಿ ಪಿಶಾಚನೂ ಅದೃಶ್ಯನಾಗಿದ್ದಾನೆ. “ದೇವರು ಆತ್ಮಸ್ವರೂಪನು” ಎನ್ನುತ್ತದೆ ಬೈಬಲ್. (ಯೋಹಾನ 4:24) ಪಿಶಾಚನು ಸಹ ಆತ್ಮಜೀವಿಯಾಗಿದ್ದಾನೆ. ಆದರೆ, ಸೃಷ್ಟಿಕರ್ತನಾದ ದೇವರಿಗೆ ವ್ಯತಿರಿಕ್ತವಾಗಿ ಪಿಶಾಚನಿಗೆ ಒಂದು ಆರಂಭವಿತ್ತು.
ದೇವರು ಮಾನವರನ್ನು ಸೃಷ್ಟಿಸುವ ಬಹಳ ವರುಷಗಳ ಹಿಂದೆ ಅಸಂಖ್ಯಾತ ಆತ್ಮಜೀವಿಗಳನ್ನು ಸೃಷ್ಟಿಸಿದನು. (ಯೋಬ 38:4, 6) ಬೈಬಲಿನಲ್ಲಿ ಈ ಆತ್ಮಜೀವಿಗಳನ್ನು ದೇವದೂತರು ಎಂದು ಕರೆಯಲಾಗಿದೆ. (ಇಬ್ರಿಯ 1:13, 14) ಇವರೆಲ್ಲರನ್ನು ದೇವರು ಪರಿಪೂರ್ಣರನ್ನಾಗಿ ಸೃಷ್ಟಿಸಿದ್ದನು. ಅವರಲ್ಲಿ ಯಾರೊಬ್ಬನೂ ಪಿಶಾಚನಾಗಿರಲಿಲ್ಲ ಇಲ್ಲವೆ ಯಾರೊಬ್ಬನಲ್ಲಿಯೂ ಯಾವುದೇ ದುಷ್ಟ ಗುಣಲಕ್ಷಣಗಳಿರಲಿಲ್ಲ. ಹಾಗಾದರೆ, ಪಿಶಾಚನು ಎಲ್ಲಿಂದ ಬಂದನು? ಬೈಬಲಿನ ಮೂಲ ಭಾಷೆಗಳಲ್ಲಿ, “ಪಿಶಾಚ” ಎಂಬ ಪದದ ಅರ್ಥವು “ಮಿಥ್ಯಾಪವಾದಿ” ಎಂದಾಗಿದೆ. ಇದು, ಇತರರ ಬಗ್ಗೆ ಹಾನಿಕಾರಕ ಸುಳ್ಳುಗಳನ್ನು ಹೇಳುವವನಿಗೆ ಸೂಚಿಸುತ್ತದೆ. “ಸೈತಾನ” ಅಂದರೆ “ಪ್ರತಿಭಟಕ” ಇಲ್ಲವೆ ವಿರೋಧಿ ಎಂದಾಗಿದೆ. ಆರಂಭದಲ್ಲಿ ಪ್ರಾಮಾಣಿಕನಾಗಿದ್ದ ಒಬ್ಬ ವ್ಯಕ್ತಿಯು ಕದಿಯುವುದರ ಮೂಲಕ ಹೇಗೆ ತನ್ನನ್ನು ಕಳ್ಳನನ್ನಾಗಿ ಮಾಡಿಕೊಳ್ಳುತ್ತಾನೊ ಅಂತೆಯೇ ದೇವರ ಪರಿಪೂರ್ಣ ಆತ್ಮಪುತ್ರರಲ್ಲಿ ಒಬ್ಬನು ತನ್ನ ತಪ್ಪು ಇಚ್ಛೆಗನುಸಾರ ಕ್ರಿಯೆಗೈಯುವ ಮೂಲಕ ತನ್ನನ್ನು ಪಿಶಾಚನಾದ ಸೈತಾನನನ್ನಾಗಿ ಮಾಡಿಕೊಂಡನು. ಒಬ್ಬ ವ್ಯಕ್ತಿಯು ತಾನಾಗಿಯೇ ಭ್ರಷ್ಟಗೊಳ್ಳುವ ಕಾರ್ಯಗತಿಯನ್ನು ಬೈಬಲ್ ಈ ರೀತಿಯಾಗಿ ವಿವರಿಸುತ್ತದೆ: “ಪ್ರತಿಯೊಬ್ಬನೂ ತನ್ನಲ್ಲಿರುವ ಆಶಾಪಾಶದಿಂದ ಎಳೆಯಲ್ಪಟ್ಟು ಮರುಳುಗೊಂಡವನಾಗಿ ಪ್ರೇರೇಪಿಸಲ್ಪಡುತ್ತಾನೆ. ಆ ಮೇಲೆ ಆಶೆಯು ಬಸುರಾಗಿ ಪಾಪವನ್ನು ಹೆರುತ್ತದೆ; ಪಾಪವು ತುಂಬಾ ಬೆಳೆದು ಮರಣವನ್ನು ಹಡೆಯುತ್ತದೆ.”—ಯಾಕೋಬ 1:14, 15.
ವಾಸ್ತವದಲ್ಲಿ ಸಂಭವಿಸಿದ್ದು ಇದೇ. ಮೊದಲ ಮಾನವ ಜೋಡಿಯಾದ ಆದಾಮಹವ್ವರನ್ನು ಯೆಹೋವ ದೇವರು ಸೃಷ್ಟಿಸುವಾಗ, ಮುಂದಕ್ಕೆ ಆತನ ವಿರುದ್ಧ ದಂಗೆಯೇಳಲಿದ್ದ ದೂತನು ಅದನ್ನು ನೋಡುತ್ತಿದ್ದನು. ಮಾತ್ರವಲ್ಲದೆ, ಸೃಷ್ಟಿಕರ್ತನಾದ ತನ್ನನ್ನು ಆರಾಧಿಸುವ ನೀತಿಯ ಮಾನವರಿಂದ ಈ ಭೂಮಿಯನ್ನು ತುಂಬಿಸುವಂತೆ ಯೆಹೋವನು ಆದಾಮಹವ್ವರಿಗೆ ಆಜ್ಞೆಯಿತ್ತದ್ದು ಆ ದೂತನಿಗೆ ತಿಳಿದಿತ್ತು. (ಆದಿಕಾಂಡ 1:28) ಈ ಗೌರವ ಮತ್ತು ಮಹತ್ವವನ್ನು ತಾನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂಬುದನ್ನು ಆ ದೂತನು ಮನಗಂಡನು. ಲೋಭದಿಂದ ಪ್ರಚೋದಿತನಾಗಿ, ಮಾನವರಿಂದ ನ್ಯಾಯಯುತವಾಗಿ ಕೇವಲ ಸೃಷ್ಟಿಕರ್ತನು ಪಡೆದುಕೊಳ್ಳತಕ್ಕ ಆರಾಧನೆಯನ್ನು ಅವನು ಆಶಿಸಿದನು. ಅಂಥ ತಪ್ಪಾದ ಆಶೆಯನ್ನು ಮನಸ್ಸಿನಿಂದ ತೆಗೆದುಹಾಕುವ ಬದಲಿಗೆ, ದೇವರ ಆ ಆತ್ಮಪುತ್ರನು ಅದನ್ನು ತನ್ನ ಮನಸ್ಸಿನಲ್ಲಿ ಬೆಳೆಸಿದನು. ಆ ಆಶೆಯು ಒಂದು ಸುಳ್ಳಿಗೆ ಜನನವಿತ್ತು ಅನಂತರ ದಂಗೆಗೆ ನಡೆಸಿತು. ಆ ಆತ್ಮಪುತ್ರನು ಏನು ಮಾಡಿದನೆಂಬುದನ್ನು ಪರಿಗಣಿಸಿರಿ.
ಪ್ರಥಮ ಸ್ತ್ರೀಯಾದ ಹವ್ವಳೊಂದಿಗೆ ಮಾತಾಡಲು ಆ ದಂಗೆಕೋರ ದೂತನು ಒಂದು ಸರ್ಪವನ್ನು ಉಪಯೋಗಿಸಿದನು. “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ” ಎಂದು ಸರ್ಪವು ಸ್ತ್ರೀಯನ್ನು ಕೇಳಿತು. ದೇವರ ಆಜ್ಞೆಯನ್ನು ಮತ್ತು ಅದನ್ನು ಉಲ್ಲಂಘಿಸಿದರೆ ಸಿಗುವ ದಂಡನೆಯನ್ನು ಹವ್ವಳು ತಿಳಿಸಿದಾಗ, ಸರ್ಪವು ಹೇಳಿದ್ದು: “ನೀವು ಹೇಗೂ ಸಾಯುವದಿಲ್ಲ. ನೀವು [ತೋಟದ ಮಧ್ಯದಲ್ಲಿರುವ ಈ ಮರದ] ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” (ಆದಿಕಾಂಡ 3:1-5) ದೇವರು ಆದಾಮಹವ್ವರಿಂದ ಸತ್ಯವನ್ನು ಬಚ್ಚಿಟ್ಟಿದ್ದಾನೆ ಎಂಬುದು ಆರೋಪವಾಗಿತ್ತು. ಹವ್ವಳು ಆ ಮರದ ಹಣ್ಣನ್ನು ತಿನ್ನುವ ಮೂಲಕ, ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬುದನ್ನು ನಿರ್ಣಯಿಸುವ ಅಧಿಕಾರವನ್ನು ಹೊಂದಿ ಒಂದುವೇಳೆ ದೇವರಂತೆ ಆಗುವಳು. ಇದೇ ಪ್ರಪ್ರಥಮ ಸುಳ್ಳಾಗಿತ್ತು. ಈ ಸುಳ್ಳನ್ನು ಹೇಳುವ ಮೂಲಕ ಆ ದೂತನು ಮಿಥ್ಯಾಪವಾದಿಯಾದನು. ಮತ್ತು ದೇವರ ವಿರೋಧಿಯೂ ಆದನು. ಆದುದರಿಂದಲೇ ಬೈಬಲ್ ದೇವರ ಈ ವೈರಿಯನ್ನು “ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ” ಎಂದು ಗುರುತಿಸುತ್ತದೆ.—ಪ್ರಕಟನೆ 12:9.
“ಎಚ್ಚರವಾಗಿರಿ”
ಪಿಶಾಚನು ಹವ್ವಳಿಗೆ ಹೇಳಿದ ಸುಳ್ಳು ಅವನು ಯೋಜಿಸಿದಂತೆಯೇ ಕಾರ್ಯಸಾಧಕವಾಯಿತು. ಬೈಬಲ್ ಹೇಳುವುದು: “ಆಗ ಸ್ತ್ರೀಯು—ಆ ಮರದ ಹಣ್ಣು ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು ಅದನ್ನು ತೆಗೆದುಕೊಂಡು ತಿಂದಳು. ಸಂಗಡ ಇದ್ದ ಗಂಡನಿಗೂ ಕೊಡಲು ಅವನೂ ತಿಂದನು.” (ಆದಿಕಾಂಡ 3:6) ಹವ್ವಳು ಸೈತಾನನ ಮಾತನ್ನು ನಂಬಿ, ದೇವರಿಗೆ ಅವಿಧೇಯಳಾದಳು. ಮಾತ್ರವಲ್ಲದೆ, ಆದಾಮನು ಸಹ ದೇವರ ನಿಯಮವನ್ನು ಮುರಿಯುವಂತೆ ಅವಳು ಮಾಡಶಕ್ತಳಾದಳು. ಈ ರೀತಿಯಲ್ಲಿ, ಮೊದಲ ಮಾನವ ದಂಪತಿಯು ದೇವರ ವಿರುದ್ಧ ದಂಗೆಯೇಳುವಂತೆ ಮಾಡುವುದರಲ್ಲಿ ಪಿಶಾಚನು ಯಶಸ್ವಿಯಾದನು. ಅಂದಿನಿಂದ ಸೈತಾನನು ಮಾನವ ವ್ಯವಹಾರಗಳ ಮೇಲೆ ಅಗೋಚರವಾದ ಪ್ರಭಾವವನ್ನು ಬೀರುತ್ತಿದ್ದಾನೆ. ಅವನ ಗುರಿಯೇನು? ಜನರು ಸತ್ಯ ದೇವರನ್ನು ಆರಾಧಿಸದಂತೆ ಮಾಡಿ, ತಾನು ಆ ಆರಾಧನೆಯನ್ನು ಪಡೆದುಕೊಳ್ಳುವುದೇ ಆಗಿದೆ. (ಮತ್ತಾಯ 4:8, 9) ಆದುದರಿಂದ ಶಾಸ್ತ್ರವಚನಗಳು ಸಕಾರಣದಿಂದಲೇ ಹೀಗೆ ಎಚ್ಚರಿಸುತ್ತವೆ: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.
ಪಿಶಾಚನು ಒಬ್ಬ ನೈಜ ಆತ್ಮಜೀವಿಯಾಗಿದ್ದಾನೆ—ಭ್ರಷ್ಟನೂ ಅಪಾಯಕಾರಿಯೂ ಆಗಿ ಪರಿಣಮಿಸಿದ ಒಬ್ಬ ದೂತನಾಗಿದ್ದಾನೆ ಎಂಬುದನ್ನು ಬೈಬಲ್ ಎಷ್ಟು ಸ್ಪಷ್ಟವಾಗಿ ಚಿತ್ರಿಸುತ್ತದೆ! ಪಿಶಾಚನು ನಿಜವಾಗಿಯೂ ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಅಂಗೀಕರಿಸುವುದೇ ನಾವು ಎಚ್ಚರವಾಗಿರಲು ತೆಗೆದುಕೊಳ್ಳಬೇಕಾದ ಪ್ರಥಮ ಪ್ರಾಮುಖ್ಯ ಹೆಜ್ಜೆಯಾಗಿದೆ. ಆದರೆ ಸ್ವಸ್ಥಚಿತ್ತರಾಗಿದ್ದು ಎಚ್ಚರವಾಗಿರುವುದರಲ್ಲಿ ಹೆಚ್ಚಿನ ವಿಷಯಗಳು ಒಳಗೂಡಿವೆ. ಸೈತಾನನ “ಯೋಚನೆಗಳನ್ನು” ಮತ್ತು ಜನರನ್ನು ದಾರಿತಪ್ಪಿಸಲು ಅವನು ಉಪಯೋಗಿಸುವ ವಿಧಾನಗಳನ್ನು ನಾವು ಅರಿಯದವರಾಗಿ ಇರಬಾರದು ಎಂಬುದು ಸಹ ಪ್ರಾಮುಖ್ಯವಾದ ವಿಷಯವಾಗಿದೆ. (2 ಕೊರಿಂಥ 2:11) ಅವನ ತಂತ್ರಗಳಾವುವು? ಮತ್ತು ನಾವು ಹೇಗೆ ಅವುಗಳ ವಿರುದ್ಧ ಸ್ಥಿರವಾಗಿ ನಿಲ್ಲಬಲ್ಲೆವು?
ಪಿಶಾಚನು ಮಾನವನಲ್ಲಿರುವ ಸಹಜ ಅಗತ್ಯದ ದುಷ್ಪ್ರಯೋಗ ಮಾಡುತ್ತಾನೆ
ಮಾನವಕುಲವು ಸೃಷ್ಟಿಯಾದಂದಿನಿಂದ ಪಿಶಾಚನು ಮನುಷ್ಯರನ್ನು ಗಮನಿಸುತ್ತಲೇ ಬಂದಿದ್ದಾನೆ. ಮನುಷ್ಯರ ಸ್ವಭಾವ ಅಂದರೆ ಅವರ ಅಗತ್ಯಗಳು, ಆಸಕ್ತಿಗಳು ಮತ್ತು ಇಚ್ಛೆಗಳು ಏನೆಂಬುದು ಅವನಿಗೆ ಚೆನ್ನಾಗಿ ತಿಳಿದಿದೆ. ಮನುಷ್ಯನು ಆಧ್ಯಾತ್ಮಿಕ ಅಗತ್ಯದೊಂದಿಗೆ ಸೃಷ್ಟಿಸಲ್ಪಟ್ಟಿದ್ದಾನೆ ಎಂಬುದು ಸಹ ಸೈತಾನನಿಗೆ ಚೆನ್ನಾಗಿ ತಿಳಿದಿದೆ ಮತ್ತು ಆ ಅಗತ್ಯದ ದುಷ್ಪ್ರಯೋಗವನ್ನು ಪಿಶಾಚನು ಚಾಕಚಕ್ಯತೆಯಿಂದ ಮಾಡಿದ್ದಾನೆ. ಹೇಗೆ? ಮಾನವಕುಲಕ್ಕೆ ಧಾರ್ಮಿಕ ಸುಳ್ಳುಗಳನ್ನು ಉಣಿಸುವ ಮೂಲಕವೇ. (ಯೋಹಾನ 8:44) ದೇವರ ಕುರಿತಾದ ಅನೇಕ ಧಾರ್ಮಿಕ ಬೋಧನೆಗಳು ಒಂದಕ್ಕೊಂದು ವಿರುದ್ಧವಾಗಿವೆ ಮತ್ತು ಗಲಿಬಿಲಿಯನ್ನು ಉಂಟುಮಾಡುತ್ತವೆ. ಇದು ಯಾರ ಉದ್ದೇಶವನ್ನು ನೆರವೇರಿಸುತ್ತದೆ ಎಂದು ನೀವು ಭಾವಿಸುತ್ತೀರಿ? ಒಂದಕ್ಕೊಂದು ವಿರುದ್ಧವಾಗಿರುವ ಬೋಧನೆಗಳೆಲ್ಲವೂ ಸತ್ಯವಾಗಿರಲು ಸಾಧ್ಯವಿಲ್ಲ. ಹಾಗಾದರೆ, ಅನೇಕ ಧಾರ್ಮಿಕ ಬೋಧನೆಗಳು ಜನರನ್ನು ದಾರಿತಪ್ಪಿಸುವ ಸಲುವಾಗಿ ಸೈತಾನನಿಂದ ಜಾಗರೂಕವಾಗಿ ವಿನ್ಯಾಸಿಸಲ್ಪಟ್ಟು ಉಪಯೋಗಿಸಲ್ಪಡುವ ವಿಚಾರಗಳಾಗಿರಸಾಧ್ಯವಿದೆ ಅಲ್ಲವೇ? ವಾಸ್ತವದಲ್ಲಿ ಬೈಬಲ್ ಸೈತಾನನನ್ನು, ಜನರ ಮನಸ್ಸನ್ನು ಮಂಕುಮಾಡಿರುವ “ಈ ಪ್ರಪಂಚದ ದೇವರು” ಎಂಬುದಾಗಿ ಕರೆಯುತ್ತದೆ.—2 ಕೊರಿಂಥ 4:4.
ದೈವಿಕ ಸತ್ಯವು ಒಬ್ಬ ವ್ಯಕ್ತಿಯನ್ನು ಧಾರ್ಮಿಕ ವಂಚನೆಯ ವಿರುದ್ಧ ಸಂರಕ್ಷಿಸುತ್ತದೆ. ದೇವರ ವಾಕ್ಯದ ಸತ್ಯವನ್ನು ಬೈಬಲ್, ಪುರಾತನ ಕಾಲಗಳಲ್ಲಿನ ಸೈನಿಕನು ತನ್ನ ಸೊಂಟವನ್ನು ಸಂರಕ್ಷಿಸಿಕೊಳ್ಳಲು ಧರಿಸುತ್ತಿದ್ದ ನಡುಕಟ್ಟಿಗೆ ಹೋಲಿಸುತ್ತದೆ. (ಎಫೆಸ 6:14) ದೇವರ ವಾಕ್ಯವಾದ ಬೈಬಲಿನ ಜ್ಞಾನವನ್ನು ನೀವು ತೆಗೆದುಕೊಂಡು ಅದರ ಸಂದೇಶವನ್ನು ನಡುಕಟ್ಟಿನಂತೆ ಧರಿಸಿಕೊಳ್ಳುವುದಾದರೆ ಅಂದರೆ ಅದಕ್ಕನುಸಾರ ಜೀವಿಸುವುದಾದರೆ, ಧಾರ್ಮಿಕ ಸುಳ್ಳುಗಳಿಂದ ಮತ್ತು ತಪ್ಪುಗಳಿಂದ ವಂಚಿಸಲ್ಪಡದಂತೆ ಅದು ನಿಮ್ಮನ್ನು ಸಂರಕ್ಷಿಸುವುದು.
ಮಾನವನಲ್ಲಿರುವ ಆಧ್ಯಾತ್ಮಿಕ ಇಚ್ಛೆಯು, ಅಜ್ಞಾತ ವಿಷಯವನ್ನು ಪರಿಶೋಧಿಸುವಂತೆ ನಡೆಸಿದೆ. ಇದು ಸೈತಾನನ ಇನ್ನೊಂದು ವಂಚನಾತ್ಮಕ ತಂತ್ರಕ್ಕೆ ಅವನನ್ನು ಗುರಿಮಾಡಿದೆ. ಯಾವುದು ಅಸಾಮಾನ್ಯ ಮತ್ತು ನಿಗೂಢವಾಗಿದೆಯೊ ಅಂಥ ವಿಷಯವನ್ನು ತಿಳಿಯುವುದರ ಬಗ್ಗೆ ಮಾನವನಲ್ಲಿರುವ ಕುತೂಹಲವನ್ನು ದುಷ್ಪ್ರಯೋಗಿಸುತ್ತಾ, ಸೈತಾನನು ಅನೇಕರನ್ನು ತನ್ನ ಹತೋಟಿಯಲ್ಲಿಡಲು ಪ್ರೇತವ್ಯವಹಾರವನ್ನು ಉಪಯೋಗಿಸಿದ್ದಾನೆ. ಬೇಟೆಗಾರನು ತನ್ನ ಬೇಟೆಯ ಪ್ರಾಣಿಯನ್ನು ಆಕರ್ಷಿಸಲು ಸೆಳೆಆಹಾರವನ್ನು ಉಪಯೋಗಿಸುವಂತೆ, ಸೈತಾನನು ಲೋಕಾದ್ಯಂತವಿರುವ ಜನರನ್ನು ಆಕರ್ಷಿಸಿ ಬೋನಿನಲ್ಲಿ ಬೀಳಿಸಲು ಭವಿಷ್ಯ ನುಡಿಯುವುದು, ಜ್ಯೋತಿಶ್ಶಾಸ್ತ್ರ, ವಶೀಕರಣ, ಮಾಟ, ಹಸ್ತಸಾಮುದ್ರಿಕ ಮತ್ತು ಜಾದೂವಿದ್ಯೆ ಈ ಮುಂತಾದವುಗಳನ್ನು ಉಪಯೋಗಿಸುತ್ತಿದ್ದಾನೆ.—ಯಾಜಕಕಾಂಡ 19:31; ಕೀರ್ತನೆ 119:110.
ಪ್ರೇತವ್ಯವಹಾರದಲ್ಲಿ ಸಿಲುಕಿಕೊಳ್ಳದಂತೆ ನೀವು ನಿಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಬಲ್ಲಿರಿ? ಧರ್ಮೋಪದೇಶಕಾಂಡ 18:10-12 ತಿಳಿಸುವುದು: “ಮಕ್ಕಳನ್ನು ಆಹುತಿಕೊಡುವವರು, ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ; ನಿಮ್ಮ ದೇವರಾದ ಯೆಹೋವನು ಇಂಥ ಹೇಯ ಕೃತ್ಯಗಳನ್ನು ಮಾಡುವ ಆ ಜನಾಂಗಗಳನ್ನು ನಿಮ್ಮೆದುರಿನಿಂದ ಹೊರಡಿಸಿಬಿಡುತ್ತಾನಲ್ಲಾ.”
ಶಾಸ್ತ್ರೀಯ ಸಲಹೆಯು ಸುಸ್ಪಷ್ಟವಾಗಿದೆ: ಪ್ರೇತವ್ಯವಹಾರದೊಂದಿಗೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳಬಾರದು. ಒಂದುವೇಳೆ ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಅಭ್ಯಾಸದಲ್ಲಿ ನೀವು ಭಾಗವಹಿಸುತ್ತಿದ್ದು, ಈಗ ಅದರಿಂದ ಹೊರಬರಲು ಇಚ್ಛಿಸುವುದಾದರೆ ಆಗೇನು? ಎಫೆಸ ಪಟ್ಟಣದಲ್ಲಿನ ಆರಂಭದ ಕ್ರೈಸ್ತರ ಮಾದರಿಯನ್ನು ನೀವು ಅನುಕರಿಸಬಲ್ಲಿರಿ. “[ಯೆಹೋವನ] ವಾಕ್ಯ”ವನ್ನು ಸ್ವೀಕರಿಸಿದಾಗ ಅವರಲ್ಲಿ “ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು” ಎಂದು ಬೈಬಲ್ ತಿಳಿಸುತ್ತದೆ. ಅವು ಬಹಳ ದುಬಾರಿ ಪುಸ್ತಕಗಳಾಗಿದ್ದವು. ಅವುಗಳಿಗೆ 50,000 ಬೆಳ್ಳೀ ನಾಣ್ಯದ ಬೆಲೆಯಿತ್ತು. (ಅ. ಕೃತ್ಯಗಳು 19:19, 20) ಹಾಗಿದ್ದರೂ, ಎಫೆಸದಲ್ಲಿದ್ದ ಕ್ರೈಸ್ತರು ಅವನ್ನು ಸುಟ್ಟುಬಿಡಲು ಹಿಂಜರಿಯಲಿಲ್ಲ.
ಸೈತಾನನು ಮಾನವ ಬಲಹೀನತೆಗಳನ್ನು ಬೇಟೆಯಾಡುತ್ತಾನೆ
ಸ್ವಘನತೆ ಎಂಬ ಆಶೆಗೆ ಮಣಿದ ಕಾರಣ ಒಬ್ಬ ಪರಿಪೂರ್ಣ ದೂತನು ಪಿಶಾಚನಾದ ಸೈತಾನನಾದನು. ಹವ್ವಳಲ್ಲಿಯೂ ದೇವರಂತಾಗಬೇಕು ಎಂಬ ಗರ್ವ ಮತ್ತು ಸ್ವಾರ್ಥಪರ ಆಶೆಯನ್ನು ಅವನು ಹುಟ್ಟಿಸಿದನು. ಇಂದು, ಸೈತಾನನು ಅನೇಕರಲ್ಲಿ ಗರ್ವದ ಭಾವನೆಯನ್ನು ಕೆರಳಿಸುವ ಮೂಲಕ ಅವರನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುತ್ತಾನೆ. ಉದಾಹರಣೆಗೆ, ಕೆಲವರಿಗೆ ತಮ್ಮ ಕುಲ, ಜನಾಂಗೀಯ ಗುಂಪು ಅಥವಾ ರಾಷ್ಟ್ರ ಇತರರದ್ದಕ್ಕಿಂತ ಉತ್ತಮ ಎಂದು ಅನಿಸುತ್ತದೆ. ಬೈಬಲ್ ಕಲಿಸುವ ವಿಷಯಕ್ಕೆ ಇದು ಎಷ್ಟು ವ್ಯತಿರಿಕ್ತವಾಗಿದೆ! (ಅ. ಕೃತ್ಯಗಳು 10:34, 35) ಬೈಬಲ್ ಸ್ಪಷ್ಟವಾಗಿ ಹೇಳುವುದು: “[ದೇವರು] ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು” ಹುಟ್ಟಿಸಿದ್ದಾನೆ.—ಅ. ಕೃತ್ಯಗಳು 17:26.
ಗರ್ವವನ್ನು ಹುಟ್ಟಿಸಲು ಸೈತಾನನು ಮಾಡುತ್ತಿರುವ ಪ್ರಯತ್ನದ ವಿರುದ್ಧ ಪರಿಣಾಮಕಾರಿ ರಕ್ಷಣೆಯು ದೀನತೆಯೇ ಆಗಿದೆ. ನಾವು ನಮ್ಮ ಬಗ್ಗೆ ‘ಯೋಗ್ಯತೆಗೆ ಮೀರಿ ಭಾವಿಸಿಕೊಳ್ಳ’ಬಾರದು ಎಂದು ಬೈಬಲ್ ಬುದ್ಧಿವಾದ ನೀಡುತ್ತದೆ. (ರೋಮಾಪುರ 12:3) ಅದು ಹೇಳುವುದು: “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (ಯಾಕೋಬ 4:6) ಸೈತಾನನ ಪ್ರಯತ್ನಗಳನ್ನು ಪ್ರತಿರೋಧಿಸಲು ಒಂದು ಅತ್ಯುತ್ತಮ ವಿಧಾನವು ನಿಮ್ಮ ವೈಯಕ್ತಿಕ ಜೀವನದಲ್ಲಿ ದೀನತೆ ಮತ್ತು ದೇವರಿಂದ ಮೆಚ್ಚಲ್ಪಡುವ ಇತರ ಗುಣಗಳನ್ನು ಪ್ರದರ್ಶಿಸುವುದೇ ಆಗಿದೆ.
ಅಯೋಗ್ಯವಾಗಿರುವ ಶಾರೀರಿಕ ಆಶೆಗಳಿಗೆ ಮಣಿಯುವ ಮಾನವ ಬಲಹೀನತೆಯನ್ನು ಸಹ ದುಷ್ಪ್ರಯೋಗಿಸಲು ಪಿಶಾಚನು ಬಹಳ ಆತುರನಾಗಿದ್ದಾನೆ. ಮಾನವರು ಜೀವನವನ್ನು ಆನಂದಿಸಬೇಕೆಂದು ಯೆಹೋವ ದೇವರು ಉದ್ದೇಶಿಸಿದನು. ಯಾವುದೇ ಆಶೆಗಳು ದೇವರ ಚಿತ್ತದ ಮೇರೆಯೊಳಗೆ ಪೂರೈಸಲ್ಪಡುವಲ್ಲಿ ಅವು ನಿಜವಾದ ಸಂತೋಷವನ್ನು ಫಲಿಸುತ್ತವೆ. ಆದರೆ ಮಾನವರು ತಮ್ಮ ಆಶೆಗಳನ್ನು ಅನೈತಿಕ ವಿಧಗಳಲ್ಲಿ ತೃಪ್ತಿಪಡಿಸಿಕೊಳ್ಳುವಂತೆ ಸೈತಾನನು ಅವರನ್ನು ಶೋಧನೆಗೊಳಪಡಿಸುತ್ತಾನೆ. (1 ಕೊರಿಂಥ 6:9, 10) ಆದುದರಿಂದ ಶುದ್ಧವೂ ನ್ಯಾಯವೂ ಆದ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಅತ್ಯುತ್ತಮವಾಗಿದೆ. (ಫಿಲಿಪ್ಪಿ 4:8) ಇವು ನಿಮ್ಮ ಆಲೋಚನೆಗಳ ಮತ್ತು ಭಾವನೆಗಳ ಮೇಲೆ ದೃಢವಾದ ಹತೋಟಿಯನ್ನು ಕಾಪಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುತ್ತವೆ.
ಪಿಶಾಚನನ್ನು ಪ್ರತಿರೋಧಿಸುತ್ತಾ ಇರಿ
ಪಿಶಾಚನನ್ನು ಪ್ರತಿರೋಧಿಸುವುದರಲ್ಲಿ ನೀವು ಯಶಸ್ಸನ್ನು ಕಂಡುಕೊಳ್ಳಸಾಧ್ಯವಿದೆಯೊ? ಹೌದು. ಬೈಬಲ್ ನಮಗೆ ಆಶ್ವಾಸನೆ ನೀಡುವುದು: ಪಿಶಾಚನಾದ “ಸೈತಾನನನ್ನು ಎದುರಿಸಿರಿ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” (ಯಾಕೋಬ 4:7) ದೇವರ ಜ್ಞಾನವನ್ನು ಪಡೆಯುತ್ತಿರುವಾಗ ನೀವು ಸೈತಾನನನ್ನು ಎದುರಿಸುವುದಾದರೂ ಅವನು ಕೂಡಲೇ ತನ್ನ ಪ್ರಯತ್ನವನ್ನು ನಿಲ್ಲಿಸಿಬಿಟ್ಟು ನಿಮಗೆ ಇನ್ನು ಮುಂದೆ ಯಾವುದೇ ತೊಂದರೆಕೊಡುವುದಿಲ್ಲ ಎಂಬುದು ಇದರ ಅರ್ಥವಲ್ಲ. ಪಿಶಾಚನು ‘ಸ್ವಲ್ಪಕಾಲ ಬಿಟ್ಟು’ ಪುನಃ ಇನ್ನೊಂದು ಸಂದರ್ಭದಲ್ಲಿ ಪ್ರಯತ್ನವನ್ನು ಮಾಡುವನು. (ಲೂಕ 4:13) ಹಾಗಿದ್ದರೂ, ನೀವು ಪಿಶಾಚನಿಗೆ ಭಯಪಡುವ ಅಗತ್ಯವಿಲ್ಲ. ನೀವು ಅವನನ್ನು ಎದುರಿಸುತ್ತಾ ಇರುವುದಾದರೆ, ನಿಮ್ಮನ್ನು ಸತ್ಯ ದೇವರಿಂದ ವಿಮುಖಗೊಳಿಸಲು ಅವನಿಗೆ ಸಾಧ್ಯವಾಗುವುದಿಲ್ಲ.
ಆದರೂ, ಪಿಶಾಚನನ್ನು ಪ್ರತಿರೋಧಿಸಬೇಕಾದರೆ ಅವನು ಯಾರು ಮತ್ತು ಅವನು ಜನರನ್ನು ಯಾವ ವಿಧಗಳಲ್ಲಿ ವಂಚಿಸುತ್ತಾನೆ ಹಾಗೂ ಅವನ ತಂತ್ರಗಳ ವಿರುದ್ಧ ನಮ್ಮನ್ನು ಸಂರಕ್ಷಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ಕುರಿತು ನಾವು ಜ್ಞಾನವನ್ನು ಹೊಂದಿರುವ ಅಗತ್ಯವಿದೆ. ಆ ಜ್ಞಾನದ ಏಕಮಾತ್ರ ನಿಷ್ಕೃಷ್ಟ ಮೂಲವು ದೇವರ ವಾಕ್ಯವಾದ ಬೈಬಲ್ ಆಗಿದೆ. ಆದುದರಿಂದ ಪ್ರೇರಿತ ಶಾಸ್ತ್ರಗಳನ್ನು ಅಧ್ಯಯನಮಾಡಲು ಮತ್ತು ಅದರಿಂದ ನೀವೇನನ್ನು ಕಲಿಯುತ್ತೀರೊ ಅದನ್ನು ನಿಮ್ಮ ಜೀವನದಲ್ಲಿ ಅನ್ವಯಿಸಲು ದೃಢನಿರ್ಧಾರಮಾಡಿರಿ. ಅಂಥ ಅಧ್ಯಯನವನ್ನು ಮಾಡುವಂತೆ, ನಿಮಗೆ ಅನುಕೂಲವಾಗಿರುವ ಸಮಯಕ್ಕೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಮಗೆ ಸಹಾಯಮಾಡಲು ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ. ಅವರನ್ನು ಸಂಪರ್ಕಿಸಲು ಇಲ್ಲವೆ ಈ ಪತ್ರಿಕೆಯಲ್ಲಿರುವ ವಿಳಾಸಕ್ಕೆ ಬರೆಯಲು ಹಿಂಜರಿಯಬೇಡಿರಿ.
ನೀವು ಬೈಬಲನ್ನು ಅಧ್ಯಯನಮಾಡುವಾಗ, ಸೈತಾನನು ವಿರೋಧವನ್ನು ಇಲ್ಲವೆ ಹಿಂಸೆಯನ್ನು ತಂದು ದೇವರ ವಾಕ್ಯದಿಂದ ಸತ್ಯವನ್ನು ಕಲಿಯದಂತೆ ಮಾಡಲು ಪ್ರಯತ್ನಿಸಬಹುದು ಎಂಬುದನ್ನು ನೀವು ಗ್ರಹಿಸಬೇಕು. ನೀವು ಬೈಬಲ್ ಅಧ್ಯಯನಮಾಡುವುದನ್ನು ನೋಡುವಾಗ ನಿಮ್ಮ ಪ್ರಿಯ ವ್ಯಕ್ತಿಗಳಲ್ಲಿ ಕೆಲವರು ಕೋಪಿಸಿಕೊಳ್ಳಬಹುದು. ಅವರು ಹಾಗೆ ಮಾಡುವುದು, ಬೈಬಲಿನಲ್ಲಿರುವ ಅದ್ಭುತಕರವಾದ ಸತ್ಯಗಳು ಅವರಿಗೆ ತಿಳಿದಿಲ್ಲದ ಕಾರಣವೇ ಆಗಿದೆ. ಇತರರು ನಿಮ್ಮನ್ನು ಕುಚೋದ್ಯಮಾಡಬಹುದು. ಆದರೆ ಈ ಎಲ್ಲ ಒತ್ತಡಗಳಿಗೆ ನೀವು ಮಣಿದರೆ ಅದು ದೇವರನ್ನು ಸಂತೋಷಗೊಳಿಸಬಲ್ಲದೊ? ನಿಮ್ಮನ್ನು ನಿರುತ್ತೇಜನಗೊಳಿಸಲು ಪಿಶಾಚನು ಬಯಸುತ್ತಾನೆ, ಏಕೆಂದರೆ ಸತ್ಯ ದೇವರ ಕುರಿತು ಕಲಿಯುವುದನ್ನು ನೀವು ನಿಲ್ಲಿಸಬೇಕೆಂಬುದು ಅವನ ಇಚ್ಛೆಯಾಗಿದೆ. ಹಾಗಿರುವಾಗ, ಸೈತಾನನು ಜಯಗೊಳ್ಳುವಂತೆ ನೀವೇಕೆ ಬಿಡಬೇಕು? (ಮತ್ತಾಯ 10:34-39) ನೀವು ಅವನಿಗೆ ಯಾವುದೇ ವಿಷಯಕ್ಕೆ ಋಣಿಗಳಾಗಿಲ್ಲ. ಆದರೆ ನಿಮ್ಮ ಜೀವಕ್ಕಾಗಿ ನೀವು ಯೆಹೋವನಿಗೆ ಋಣಿಗಳಾಗಿದ್ದೀರಿ. ಆದುದರಿಂದ, ಪಿಶಾಚನನ್ನು ಎದುರಿಸಲು ಮತ್ತು ‘[ಯೆಹೋವನ] ಮನಸ್ಸನ್ನು ಸಂತೋಷಪಡಿಸಲು’ ದೃಢನಿರ್ಧಾರಮಾಡಿರಿ.—ಜ್ಞಾನೋಕ್ತಿ 27:11.
[ಪುಟ 6ರಲ್ಲಿರುವ ಚಿತ್ರ]
ಕ್ರೈಸ್ತರಾದವರು ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ತಮ್ಮ ಪುಸ್ತಕಗಳನ್ನು ಸುಟ್ಟುಬಿಟ್ಟರು
[ಪುಟ 7ರಲ್ಲಿರುವ ಚಿತ್ರ]
ಬೈಬಲಿನ ಅಧ್ಯಯನಮಾಡಲು ದೃಢನಿರ್ಧಾರಮಾಡಿರಿ