ದೇವರಿಗೆ ಭಯಪಟ್ಟು ವಿವೇಕಿಗಳಾಗಿರಿ!
“ಯೆಹೋವನಿಗೆ ಭಯಪಡುವುದೇ ವಿವೇಕದ ಆರಂಭ.”—ಜ್ಞಾನೋಕ್ತಿ 9:10, NW.
ದೇವರಿಗೆ ಭಯಪಡುವ ವ್ಯಕ್ತಿ ಎಂದು ಒಬ್ಬನನ್ನು ವರ್ಣಿಸುವುದನ್ನು ಅಭಿನಂದನೆಯಾಗಿ ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಆದರೆ ಇಂದು, ದೇವರಿಗೆ ಭಯಪಡುವುದನ್ನು ಅನೇಕರು ಏನೊ ಹಳೇಕಾಲದ ಶೈಲಿ ಮತ್ತು ಅರ್ಥಮಾಡಿಕೊಳ್ಳಲು ಕಷ್ಟಕರವಾದ ವಿಷಯವೆಂದು ಹೇಳುತ್ತಾರೆ. ‘ದೇವರು ಪ್ರೀತಿಸ್ವರೂಪಿ ಆಗಿರುವುದಾದರೆ ನಾನೇಕೆ ಆತನಿಗೆ ಭಯಪಡಬೇಕು?’ ಎಂದು ಅವರು ಕೇಳಬಹುದು. ಅವರ ದೃಷ್ಟಿಯಲ್ಲಿ ಭಯ ಎಂಬುದು ನಕಾರಾತ್ಮಕವಾದ, ಮಾತ್ರವಲ್ಲ ಗಾಬರಿಗೊಳಿಸುವ ಭಾವಾತಿರೇಕವಾಗಿದೆ. ಆದರೆ, ನಿಜ ದೇವಭಯಕ್ಕೆ ಹೆಚ್ಚು ವಿಶಾಲವಾದ ಅರ್ಥವಿದೆ ಮತ್ತು ನಾವು ಮುಂದೆ ನೋಡಲಿರುವಂತೆ ಅದು ಕೇವಲ ಅನಿಸಿಕೆ ಇಲ್ಲವೆ ಭಾವುಕತೆಯೂ ಅಲ್ಲ.
2 ಬೈಬಲಿನಲ್ಲಿ ದೇವಭಯ ಎಂಬ ಪದವನ್ನು ಸಕಾರಾತ್ಮಕ ರೀತಿಯಲ್ಲಿ ಬಳಸಲಾಗಿದೆ. (ಯೆಶಾಯ 11:3) ಅದು ದೇವರಿಗೆ ತೋರಿಸುವ ಗಾಢವಾದ ಪೂಜ್ಯಭಾವ ಮತ್ತು ಆಳವಾದ ಗೌರವ ಹಾಗೂ ಆತನನ್ನು ಅಸಂತೋಷಗೊಳಿಸದಿರುವ ಬಲವಾದ ಬಯಕೆಯಾಗಿದೆ. (ಕೀರ್ತನೆ 115:11) ದೇವಭಯದಲ್ಲಿ, ದೇವರ ನೈತಿಕ ಮಟ್ಟಗಳನ್ನು ಅಂಗೀಕರಿಸಿ ಅವುಗಳಿಗೆ ಕಟ್ಟುನಿಟ್ಟಾಗಿ ಅಂಟಿಕೊಳ್ಳುವುದು ಮತ್ತು ದೇವರು ಯಾವುದು ಸರಿ ಅಥವಾ ತಪ್ಪೆಂದು ಹೇಳುತ್ತಾನೊ ಅದರಂತೆ ಜೀವಿಸುವುದೂ ಸೇರಿದೆ. ಒಂದು ಪರಾಮರ್ಶನ ಗ್ರಂಥ ಹೇಳುವುದೇನೆಂದರೆ, ಇಂತಹ ಹಿತಕರವಾದ ಭಯವು “ವಿವೇಕದಿಂದ ವರ್ತಿಸುವಂತೆ ಮತ್ತು ಪ್ರತಿಯೊಂದು ವಿಧದ ಕೆಟ್ಟತನವನ್ನು ಬಿಟ್ಟುಬಿಡುವಂತೆ ಮಾಡುವ ದೇವರ ಕಡೆಗಿನ ಮೂಲಭೂತ ಮನೋಭಾವ ಆಗಿದೆ.” ಆದುದರಿಂದ ತಕ್ಕದಾಗಿಯೇ, “ಯೆಹೋವನಿಗೆ ಭಯಪಡುವುದೇ ವಿವೇಕದ ಆರಂಭ” ಎಂದು ದೇವರ ವಾಕ್ಯ ತಿಳಿಸುತ್ತದೆ.—ಜ್ಞಾನೋಕ್ತಿ 9:10, NW.
3 ದೇವಭಯವು, ಜೀವನದ ಅನೇಕ ಅಂಶಗಳನ್ನು ಆವರಿಸುತ್ತದೆಂಬುದು ನಿಶ್ಚಯ. ದೈವಿಕ ಭಯದಿಂದ ವಿವೇಕ ಮಾತ್ರವಲ್ಲ ಉಲ್ಲಾಸ, ಸಮಾಧಾನ, ಸಮೃದ್ಧಿ, ದೀರ್ಘಾಯುಷ್ಯ, ನಿರೀಕ್ಷೆ, ಭರವಸೆ ಮತ್ತು ದೃಢವಿಶ್ವಾಸವೂ ಲಭಿಸುತ್ತದೆ. (ಕೀರ್ತನೆ 2:11; ಜ್ಞಾನೋಕ್ತಿ 1:7; 10:27; 14:26; 22:4; 23:17, 18; ಅ. ಕೃತ್ಯಗಳು 9:31) ಇದಕ್ಕೆ ನಂಬಿಕೆ ಮತ್ತು ಪ್ರೀತಿಯೊಂದಿಗೆ ಒತ್ತಾದ ಸಂಬಂಧವಿದೆ. ವಾಸ್ತವದಲ್ಲಿ, ದೇವರ ಮತ್ತು ಜೊತೆ ಮಾನವರ ಸಂಗಡ ನಮಗಿರುವ ಸಂಬಂಧವು ಇದರಲ್ಲಿ ಸೇರಿದೆ. (ಧರ್ಮೋಪದೇಶಕಾಂಡ 10:12; ಯೋಬ 6:14; ಇಬ್ರಿಯ 11:7) ದೇವಭಯದಲ್ಲಿ, ನಮ್ಮ ಸ್ವರ್ಗೀಯ ತಂದೆ ನಮ್ಮನ್ನು ವೈಯಕ್ತಿಕವಾಗಿ ಪರಾಮರಿಸುತ್ತಾನೆ ಮತ್ತು ನಮ್ಮ ಪಾಪಗಳನ್ನು ಕ್ಷಮಿಸಲು ಸಿದ್ಧನಾಗಿದ್ದಾನೆ ಎಂಬ ದೃಢ ಮನವರಿಕೆಯೂ ಸೇರಿದೆ. (ಕೀರ್ತನೆ 130:4) ಹೀಗಿರುವುದರಿಂದ, ಕೇವಲ ಪಶ್ಚಾತ್ತಾಪಪಡದ ದುಷ್ಟನು ಮಾತ್ರ ದೇವರಿಗೆ ಭಯಭೀತನಾಗಬೇಕು.a—ಇಬ್ರಿಯ 10:26-31.
ಯೆಹೋವನಿಗೆ ಭಯಪಡಲು ಕಲಿಯುವುದು
4 ವಿವೇಕಪೂರ್ಣವಾದ ನಿರ್ಣಯಗಳನ್ನು ಮಾಡಿ ದೇವರ ಆಶೀರ್ವಾದಗಳನ್ನು ಪಡೆಯಲು ದೇವಭಯವು ಅತ್ಯಾವಶ್ಯಕವಾಗಿರುವುದರಿಂದ, ನಾವು ಯೋಗ್ಯ ರೀತಿಯಲ್ಲಿ ‘ಯೆಹೋವನಿಗೆ ಭಯ’ಪಡಲು ಹೇಗೆ ಕಲಿಯಬಲ್ಲೆವು? (ಧರ್ಮೋಪದೇಶಕಾಂಡ 17:19) ‘ನಮ್ಮ ಉಪದೇಶಕ್ಕಾಗಿ,’ ದೇವಭಯವಿದ್ದ ಸ್ತ್ರೀಪುರುಷರ ಅನೇಕ ಮಾದರಿಗಳು ಬೈಬಲಿನಲ್ಲಿ ದಾಖಲಾಗಿವೆ. (ರೋಮಾಪುರ 15:4) ಆದುದರಿಂದ ಆ ಮಾದರಿಗಳಲ್ಲಿ ಒಬ್ಬನಾದ, ಪುರಾತನ ಇಸ್ರಾಯೇಲಿನ ರಾಜ ದಾವೀದನ ಜೀವನವನ್ನು ನಾವೀಗ ಪರಿಶೀಲಿಸೋಣ. ಇದು ದೇವಭಯದ ನಿಜಾರ್ಥವನ್ನು ತಿಳಿಯಲು ನಮಗೆ ಸಹಾಯಮಾಡುತ್ತದೆ.
5 ಇಸ್ರಾಯೇಲಿನ ಪ್ರಥಮ ಅರಸನಾದ ಸೌಲನಿಗೆ ಜನರ ಭಯವಿದ್ದ ಕಾರಣ ಮತ್ತು ದೈವಿಕ ಭಯದ ಕೊರತೆಯಿದ್ದ ಕಾರಣ ಯೆಹೋವನು ಅವನನ್ನು ತಳ್ಳಿಹಾಕಿದನು. (1 ಸಮುವೇಲ 15:24-26) ಇದಕ್ಕೆ ವ್ಯತಿರಿಕ್ತವಾಗಿ, ದಾವೀದನ ಜೀವನರೀತಿ ಮತ್ತು ಯೆಹೋವನೊಂದಿಗೆ ಅವನಿಗಿದ್ದ ಆಪ್ತ ಸಂಬಂಧವು ಅವನನ್ನು ನಿಜವಾಗಿಯೂ ದೇವಭಯವಿದ್ದ ಮನುಷ್ಯನನ್ನಾಗಿ ಗುರುತಿಸಿತು. ದಾವೀದನು ಬಾಲ್ಯದಿಂದ ಆಗಾಗ್ಗೆ ತನ್ನ ತಂದೆಯ ಕುರಿಗಳನ್ನು ಮೇಯಿಸಲು ಹೋಗುತ್ತಿದ್ದನು. (1 ಸಮುವೇಲ 16:11) ಆ ಸಮಯದಲ್ಲಿ, ಮಿನುಗುವ ತಾರೆಗಳಿಂದ ತುಂಬಿದ ಆಕಾಶದ ಕೆಳಗೆ ಕುರಿಗಳನ್ನು ಪಾಲಿಸುತ್ತಾ ಕಳೆದ ಅನೇಕ ರಾತ್ರಿಗಳು, ಯೆಹೋವನ ಭಯವನ್ನು ಅರಿತುಕೊಳ್ಳಲು ದಾವೀದನಿಗೆ ಸಹಾಯಮಾಡಿದ್ದಿರಬೇಕು. ದಾವೀದನು ವಿಶಾಲವಾದ ವಿಶ್ವದ ಒಂದು ಅಂಶವನ್ನು ಮಾತ್ರ ಗ್ರಹಿಸಿಕೊಳ್ಳಬಲ್ಲವನಾಗಿದ್ದರೂ, ದೇವರು ನಮ್ಮ ಗೌರವಕ್ಕೂ ಆರಾಧನೆಗೂ ಅರ್ಹನು ಎಂಬ ಸರಿಯಾದ ತೀರ್ಮಾನಕ್ಕೆ ಬಂದನು. ಆದುದರಿಂದಲೇ, “ನಿನ್ನ ಕೈಕೆಲಸವಾಗಿರುವ ಆಕಾಶಮಂಡಲವನ್ನೂ ನೀನು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ ನಾನು ನೋಡುವಾಗ—ಮನುಷ್ಯನು ಎಷ್ಟು ಮಾತ್ರದವನು, ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು, ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು?” ಎಂದು ಅವನು ತರುವಾಯ ಬರೆದನು.—ಕೀರ್ತನೆ 8:3, 4.
6 ನಕ್ಷತ್ರ ಖಚಿತವಾದ ವಿಶಾಲ ಆಕಾಶದ ಮುಂದೆ ತಾನೆಷ್ಟು ಅಲ್ಪನೆಂದು ಹೋಲಿಸಿ ನೋಡಿದಾಗ ದಾವೀದನು ಯೋಗ್ಯವಾಗಿಯೇ ಪ್ರಭಾವಿತನಾದನು. ಈ ಜ್ಞಾನವು ಅವನನ್ನು ಭಯಭೀತನನ್ನಾಗಿ ಮಾಡುವ ಬದಲಿಗೆ ಯೆಹೋವನನ್ನು ಹೀಗೆ ಹಾಡಿ ಸ್ತುತಿಸುವಂತೆ ಪ್ರಚೋದಿಸಿತು: “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” (ಕೀರ್ತನೆ 19:1) ಯೆಹೋವನ ಕಡೆಗಿನ ಈ ಪೂಜ್ಯಭಾವವು ದಾವೀದನನ್ನು, ಆತನಿಗೆ ಹೆಚ್ಚು ಸಮೀಪವಾಗುವಂತೆ ಸೆಳೆಯಿತು ಮತ್ತು ಆತನ ಪರಿಪೂರ್ಣ ಮಾರ್ಗಗಳನ್ನು ಕಲಿತುಕೊಂಡು ಅನುಸರಿಸಲು ಇಚ್ಛಿಸುವಂತೆ ಮಾಡಿತು. “ಮಹೋನ್ನತನೂ ಮಹತ್ಕಾರ್ಯಗಳನ್ನು ನಡಿಸುವವನೂ ನೀನು; ದೇವರು ನೀನೊಬ್ಬನೇ. ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು. ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು” ಎಂದು ಯೆಹೋವನಿಗೆ ಹಾಡಿದಾಗ ದಾವೀದನಿಗೆ ಹೇಗನಿಸಿದ್ದಿರಬೇಕೆಂದು ಭಾವಿಸಿರಿ!—ಕೀರ್ತನೆ 86:10, 11.
7 ಫಿಲಿಷ್ಟಿಯರು ಇಸ್ರಾಯೇಲ್ ದೇಶಕ್ಕೆ ಮುತ್ತಿಗೆ ಹಾಕಿದಾಗ, ಒಂಬತ್ತುವರೆ ಅಡಿ ಎತ್ತರದ ಅವರ ಯುದ್ಧವೀರ ಗೊಲ್ಯಾತನು ಇಸ್ರಾಯೇಲ್ಯರನ್ನು ಹೀಯಾಳಿಸಿ, ಸಾರಂಶದಲ್ಲಿ ಹೀಗಂದನು: ‘ನನ್ನೊಂದಿಗೆ ಹೋರಾಡಲು ನಿಮ್ಮಲ್ಲಿ ಒಬ್ಬನನ್ನು ಆರಿಸಿ ಕಳುಹಿಸಿ. ಅವನು ಗೆಲ್ಲುವಲ್ಲಿ ನಾವು ನಿಮ್ಮ ಸೇವಕರಾಗುವೆವು!’ (1 ಸಮುವೇಲ 17:4-10) ಇದಕ್ಕೆ ಸೌಲನು ಮತ್ತು ಅವನ ಸೈನ್ಯದವರು ಭಯಭೀತರಾದರು, ಆದರೆ ದಾವೀದನು ಹೆದರಲಿಲ್ಲ. ನಾವು ಭಯಪಡಬೇಕಾಗಿರುವ ಏಕೈಕ ವ್ಯಕ್ತಿ ಯೆಹೋವನೇ ಹೊರತು ಎಷ್ಟು ಬಲಾಢ್ಯನಾಗಿದ್ದರೂ ಮನುಷ್ಯನು ಅಲ್ಲವೇ ಅಲ್ಲ ಎಂಬುದು ದಾವೀದನಿಗೆ ತಿಳಿದಿತ್ತು. “ನಾನಾದರೋ . . . ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ. . . . ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವದು; ಯಾಕಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ” ಎಂದು ದಾವೀದನು ಗೊಲ್ಯಾತನಿಗೆ ಹೇಳಿದನು. ಹೀಗೆ ತನ್ನ ಕವಣೆ ಮತ್ತು ಕೇವಲ ಒಂದು ಕಲ್ಲಿನಿಂದ ಹಾಗೂ ಯೆಹೋವನ ಸಹಾಯದೊಂದಿಗೆ ದಾವೀದನು ಆ ದೈತ್ಯನನ್ನು ಹತಿಸಿದನು.—1 ಸಮುವೇಲ 17:45-47.
8 ದಾವೀದನು ಎದುರಿಸಿದ ಕಷ್ಟಕರ ಸನ್ನಿವೇಶಕ್ಕೆ ಸಮಾನವಾದ ತಡೆಗಳನ್ನು ಅಥವಾ ವಿರೋಧಿಗಳನ್ನು ನಾವು ಸಹ ಎದುರಿಸುತ್ತಿರಬಹುದು. ನಾವೇನು ಮಾಡಸಾಧ್ಯವಿದೆ? ದಾವೀದನು ಮತ್ತು ಪುರಾತನಕಾಲದ ಇತರ ನಂಬಿಗಸ್ತ ಸೇವಕರು ಅವನ್ನು ಹೇಗೆ ದೈವಿಕ ಭಯದಿಂದ ಎದುರಿಸಿದರೋ ಹಾಗೆಯೇ ನಾವೂ ಎದುರಿಸಸಾಧ್ಯವಿದೆ. ದೇವಭಯವು ಮಾನವಭಯವನ್ನು ಜಯಿಸಬಲ್ಲದು. ದೇವರ ನಂಬಿಗಸ್ತ ಸೇವಕನಾಗಿದ್ದ ನೆಹೆಮೀಯನು, ವಿರೋಧಿಗಳಿಂದ ಒತ್ತಡಕ್ಕೊಳಗಾಗಿದ್ದ ಜೊತೆ ಇಸ್ರಾಯೇಲ್ಯರನ್ನು ಪ್ರೋತ್ಸಾಹಿಸಿದ್ದು: ‘ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ ಭಯಂಕರನೂ ಆಗಿರುವ ಯೆಹೋವನನ್ನು ನೆನಪುಮಾಡಿಕೊಳ್ಳಿರಿ.’ (ನೆಹೆಮೀಯ 4:14) ಯೆಹೋವನ ಬೆಂಬಲದಿಂದಾಗಿ ದಾವೀದ, ನೆಹೆಮೀಯ ಮತ್ತು ಆತನ ಇತರ ನಂಬಿಗಸ್ತ ಸೇವಕರು ತಮ್ಮ ದೇವದತ್ತ ನೇಮಕಗಳನ್ನು ಪೂರ್ತಿಗೊಳಿಸುವುದರಲ್ಲಿ ಜಯಗಳಿಸಿದರು. ದೇವಭಯವಿರುವಲ್ಲಿ ನಾವೂ ಜಯಹೊಂದಬಲ್ಲೆವು.
ದೈವಿಕ ಭಯದೊಂದಿಗೆ ಸಮಸ್ಯೆಗಳನ್ನು ಎದುರಿಸುವುದು
9 ದಾವೀದನು ಗೊಲ್ಯಾತನನ್ನು ಹತಿಸಿದ ಬಳಿಕ ಯೆಹೋವನು ದಾವೀದನಿಗೆ ಹೆಚ್ಚು ವಿಜಯಗಳನ್ನು ದಯಪಾಲಿಸಿದನು. ಆದರೆ ಅಸೂಯೆಗಾರನಾದ ಸೌಲನು ದಾವೀದನನ್ನು ಮೊದಲು ಹಠಾತ್ತಾಗಿ, ಬಳಿಕ ಕುತಂತ್ರದಿಂದ ಮತ್ತು ಕೊನೆಯಲ್ಲಿ ಸೈನ್ಯದೊಂದಿಗೆ ಆಕ್ರಮಣಮಾಡುವ ಮೂಲಕ ಕೊಲ್ಲಲು ಪ್ರಯತ್ನಿಸಿದನು. ದಾವೀದನು ರಾಜನಾಗುವನೆಂದು ಯೆಹೋವನು ಆಶ್ವಾಸನೆ ನೀಡಿದ್ದನಾದರೂ, ಅವನು ಅನೇಕ ವರ್ಷಕಾಲ ಪಲಾಯನಗೈದು, ಹೋರಾಡಿ, ಆತನು ತನ್ನನ್ನು ಅರಸನನ್ನಾಗಿ ಮಾಡುವ ಸಮಯದ ತನಕ ಕಾಯಬೇಕಾಗಿತ್ತು. ಈ ಎಲ್ಲಾ ಸನ್ನಿವೇಶಗಳಲ್ಲಿ, ದಾವೀದನು ತಾನು ಸತ್ಯದೇವರಿಗೆ ಭಯಪಡುವವನೆಂದು ತೋರಿಸಿದನು.—1 ಸಮುವೇಲ 18:9, 11, 17; 24:2.
10 ಒಂದು ಸಂದರ್ಭದಲ್ಲಿ, ದಾವೀದನು ಗೊಲ್ಯಾತನ ಊರಾಗಿದ್ದ ಗತ್ ಎಂಬ ಫಿಲಿಷ್ಟಿಯ ಪಟ್ಟಣದ ಅರಸ ಅಕೀಷನ ಆಶ್ರಯವನ್ನು ಕೋರಿದನು. (1 ಸಮುವೇಲ 21:10-15) ಅರಸನ ಸೇವಕರು, ದಾವೀದನು ತಮ್ಮ ರಾಜ್ಯದ ವೈರಿಯೆಂದು ಅಪವಾದ ಹೊರಿಸಿದರು. ಆ ಅಪಾಯಕರ ಸಂದರ್ಭದಲ್ಲಿ ದಾವೀದನು ಹೇಗೆ ಪ್ರತಿವರ್ತಿಸಿದನು? ಅವನು ಯೆಹೋವನಿಗೆ ತನ್ನ ಹೃದಯ ಬಿಚ್ಚಿ ಪ್ರಾರ್ಥಿಸಿದನು. (ಕೀರ್ತನೆ 56:1-4, 11-13) ಅಲ್ಲಿಂದ ತಪ್ಪಿಸಿಕೊಳ್ಳಲು ದಾವೀದನಿಗೆ ಹುಚ್ಚನಂತೆ ವರ್ತಿಸಬೇಕಾಯಿತಾದರೂ, ತನ್ನ ಪ್ರಯತ್ನವನ್ನು ಹರಸುವ ಮೂಲಕ ವಾಸ್ತವವಾಗಿ ಯೆಹೋವನೇ ತನ್ನನ್ನು ರಕ್ಷಿಸಿದನೆಂದು ದಾವೀದನು ತಿಳಿದುಕೊಂಡನು. ದಾವೀದನು ಯೆಹೋವನ ಮೇಲೆ ಪೂರ್ಣ ಹೃದಯದಿಂದ ಹೊಂದಿಕೊಂಡದ್ದು ಮತ್ತು ಭರವಸೆಯಿಟ್ಟದ್ದು ಅವನು ನಿಜವಾಗಿಯೂ ದೇವಭಯವುಳ್ಳವನೆಂದು ತೋರಿಸಿತು.—ಕೀರ್ತನೆ 34:4-6, 9-11.
11 ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ದೇವರು ಸಹಾಯನೀಡುವನೆಂದು ಆತನು ಮಾಡಿರುವ ವಾಗ್ದಾನದಲ್ಲಿ ಭರವಸೆಯಿಡುವ ಮೂಲಕ ನಾವು ಸಹ ದಾವೀದನಂತೆ ದೇವಭಯವನ್ನು ತೋರಿಸಬಲ್ಲೆವು. “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು” ಎಂದು ದಾವೀದನು ಹೇಳಿದನು. (ಕೀರ್ತನೆ 37:5) ಅಂದರೆ ನಾವು ನಮ್ಮ ಸಮಸ್ಯೆಗಳ ವಿಷಯದಲ್ಲಿ ನಮ್ಮಿಂದಾಗುವುದೇನನ್ನು ಮಾಡದೆ, ದೇವರೇ ನಮ್ಮ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಅವನ್ನು ಆತನ ಮೇಲೆ ಹಾಕಬೇಕೆಂಬುದು ಇದರ ಅರ್ಥವಲ್ಲ. ದಾವೀದನು ದೇವರಿಗೆ ಪ್ರಾರ್ಥಿಸಿ, ಏನನ್ನೂ ಮಾಡದೆ ಕೈಕಟ್ಟಿ ಕೂರಲಿಲ್ಲ. ಅವನು ಯೆಹೋವನು ತನಗೆ ಕೊಟ್ಟಿದ್ದ ಬುದ್ಧಿಶಕ್ತಿ ಹಾಗೂ ಶಾರೀರಿಕ ಸಾಮರ್ಥ್ಯಗಳನ್ನು ಉಪಯೋಗಿಸಿ ಸಮಸ್ಯೆಯನ್ನು ಎದುರಿಸಿದನು. ಆದರೂ, ಕೇವಲ ಮಾನವ ಪ್ರಯತ್ನಗಳ ಮೇಲೆ ಹೊಂದಿಕೊಂಡಿದ್ದರೆ ಜಯಹೊಂದಸಾಧ್ಯವಿಲ್ಲ ಎಂಬುದು ದಾವೀದನಿಗೆ ತಿಳಿದಿತ್ತು. ದಾವೀದನಂತೆ ನಾವು ಸಹ ನಮ್ಮ ಕೈಯಲ್ಲಿ ಮಾಡಸಾಧ್ಯವಿರುವುದೆಲ್ಲವನ್ನು ಮಾಡಿ ಉಳಿದುದನ್ನು ಯೆಹೋವನಿಗೆ ವಹಿಸಿಬಿಡತಕ್ಕದ್ದು. ವಾಸ್ತವದಲ್ಲಿ, ಅನೇಕವೇಳೆ ಯೆಹೋವನ ಮೇಲೆ ಹೊಂದಿಕೊಳ್ಳುವುದನ್ನು ಬಿಟ್ಟು ನಾವು ಬೇರೇನನ್ನೂ ಮಾಡಸಾಧ್ಯವಿರುವುದಿಲ್ಲ. ಆದರೆ, ವೈಯಕ್ತಿಕವಾಗಿ ನಮ್ಮಲ್ಲಿರುವ ದೇವಭಯವನ್ನು ನಾವು ತೋರಿಸಬೇಕಾಗಿರುವುದು ಈ ಸಮಯದಲ್ಲಿಯೇ. ದಾವೀದನ ಈ ಹೃತ್ಪೂರ್ವಕವಾದ ಅಭಿವ್ಯಕ್ತಿಯಿಂದ ನಾವು ಸಾಂತ್ವನ ಪಡೆಯಬಲ್ಲೆವು: “ಯೆಹೋವನು ತನ್ನ ಸದ್ಭಕ್ತರಿಗೆ [“ತನಗೆ ಭಯಪಡುವವರಿಗೆ,” NW] ಆಪ್ತಮಿತ್ರನಂತಿರುವನು.”—ಕೀರ್ತನೆ 25:14.
12 ಆದಕಾರಣ, ದೇವರಿಗೆ ನಾವು ಮಾಡುವ ಪ್ರಾರ್ಥನೆಯನ್ನು ಮತ್ತು ಆತನೊಂದಿಗೆ ನಮಗಿರುವ ಸಂಬಂಧವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ನಾವು ಯೆಹೋವನನ್ನು ಸಮೀಪಿಸುವಾಗ, “[ಆತನು] ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂದು ನಂಬತಕ್ಕದ್ದು. (ಇಬ್ರಿಯ 11:6; ಯಾಕೋಬ 1:5-8) ಮತ್ತು ಆತನು ನಮಗೆ ಸಹಾಯಮಾಡುವಾಗ, ಅಪೊಸ್ತಲ ಪೌಲನು ಸಲಹೆ ನೀಡಿದಂತೆ ನಾವು ‘ಕೃತಜ್ಞತೆಯುಳ್ಳವರಾಗಿರಬೇಕು.’ (ಕೊಲೊಸ್ಸೆ 3:15, 17) ಒಬ್ಬ ಅನುಭವಸ್ಥ ಅಭಿಷಿಕ್ತ ಕ್ರೈಸ್ತನು ವರ್ಣಿಸಿದ ಜನರ ಹಾಗೆ ನಾವಿರಲೇಬಾರದು. ಅವನು ಹೇಳಿದ್ದು: “ದೇವರು ಒಂದು ರೀತಿಯ ಸ್ವರ್ಗೀಯ ವೇಟರ್ (ಪರಿಚಾರಕ) ಆಗಿದ್ದಾನೆಂದು ಅವರು ನೆನಸುತ್ತಾರೆ. ತಮಗೆ ಏನಾದರೂ ಬೇಕಾಗುವಾಗ ಅವನನ್ನು ಚಿಟಿಕೆ ಹಾಕಿ ಕರೆದು, ನಂತರ ತಮಗೆ ಬೇಕಾದದ್ದನ್ನು ಒದಗಿಸಿದ ಕೂಡಲೇ ಅವನು ಹೋಗಿಬಿಡಬೇಕೆಂದು ಅವರು ಬಯಸುತ್ತಾರೆ.” ಇಂಥ ಮನೋಭಾವವು ದೈವಿಕ ಭಯದ ಕೊರತೆಯನ್ನು ತೋರಿಸುತ್ತದೆ.
ದೇವಭಯವು ಕ್ಷೀಣಿಸಿದಾಗ
13 ಸಂಕಟಕಾಲದಲ್ಲಿ ಯೆಹೋವನ ಸಹಾಯವನ್ನು ಪಡೆದುಕೊಂಡದ್ದು ದಾವೀದನಲ್ಲಿದ್ದ ದೇವಭಯವನ್ನು ಆಳವಾಗಿಸಿ, ಅವನಿಗೆ ದೇವರಲ್ಲಿದ್ದ ಭರವಸೆಯನ್ನು ಬಲಪಡಿಸಿತು. (ಕೀರ್ತನೆ 31:22-24) ಆದರೂ, ಮೂರು ಗಮನಾರ್ಹ ಸಂದರ್ಭಗಳಲ್ಲಿ ದಾವೀದನಲ್ಲಿದ್ದ ದೇವಭಯವು ಕ್ಷೀಣಿಸಲಾಗಿ, ಅದು ಭಯಂಕರ ಪರಿಣಾಮಗಳನ್ನುಂಟುಮಾಡಿತು. ಇವುಗಳಲ್ಲಿ ಮೊದಲನೆಯದು, ಯೆಹೋವನ ಒಡಂಬಡಿಕೆಯ ಮಂಜೂಷವನ್ನು ದೇವರ ಧರ್ಮಶಾಸ್ತ್ರ ವಿಧಿಸಿದಂತೆ, ಯಾಜಕರ ಹೆಗಲುಗಳ ಮೇಲೆ ಅಲ್ಲ ಬದಲಿಗೆ ಬಂಡಿಯ ಮೇಲೆ ರವಾನಿಸಲು ದಾವೀದನು ಏರ್ಪಡಿಸಿದ ಸಂಗತಿಯಾಗಿತ್ತು. ಬಂಡಿ ನಡೆಸುತ್ತಿದ್ದ ಉಜ್ಜನು, ಮಂಜೂಷವು ಬೀಳದಂತೆ ಅದನ್ನು ಹಿಡಿದಾಗ ಆ “ತಪ್ಪಿನ [“ಪೂಜ್ಯಭಾವವಿಲ್ಲದ ಕೃತ್ಯದ,” NW] ಸಲುವಾಗಿ” ಆ ಕೂಡಲೇ ಸತ್ತನು. ಹೌದು, ಉಜ್ಜನ ತಪ್ಪು ಗಂಭೀರವಾಗಿತ್ತಾದರೂ, ಮುಖ್ಯವಾಗಿ ಈ ದುರಂತಕ್ಕೆ ಕಾರಣವು ದೇವರ ಧರ್ಮಶಾಸ್ತ್ರಕ್ಕೆ ದಾವೀದನು ಯೋಗ್ಯ ಗೌರವವನ್ನು ತೋರಿಸಲು ತಪ್ಪಿದ್ದೇ ಆಗಿತ್ತು. ದೇವರಿಗೆ ಭಯಪಡುವುದೆಂದರೆ ಆತನ ಏರ್ಪಾಡಿಗನುಸಾರ ಕ್ರಿಯೆಗೈಯುವುದೆಂದರ್ಥ.—2 ಸಮುವೇಲ 6:2-9; ಅರಣ್ಯಕಾಂಡ 4:15; 7:9.
14 ಸಮಯಾನಂತರ, ದಾವೀದನು ಸೈತಾನನಿಂದ ಪ್ರೇರಿತನಾಗಿ ಇಸ್ರಾಯೇಲಿನ ಸೈನಿಕ ಸಂಖ್ಯೆಯನ್ನು ಲೆಕ್ಕಿಸಿದನು. (1 ಪೂರ್ವಕಾಲವೃತ್ತಾಂತ 21:1) ಹಾಗೆ ಮಾಡುವ ಮೂಲಕ, ದಾವೀದನು ದೇವಭಯದ ಕೊರತೆಯನ್ನು ತೋರಿಸಿದ ಕಾರಣ 70,000 ಇಸ್ರಾಯೇಲ್ಯರು ಸಾಯಬೇಕಾಯಿತು. ಇದಕ್ಕೆ ದಾವೀದನು ಯೆಹೋವನ ಎದುರು ಪಶ್ಚಾತ್ತಾಪಪಟ್ಟನಾದರೂ, ಅವನು ಮತ್ತು ಇಸ್ರಾಯೇಲ್ಯರು ಬಹಳ ವೇದನೆಯನ್ನು ಅನುಭವಿಸಿದರು.—2 ಸಮುವೇಲ 24:1-16.
15 ದಾವೀದನ ದೇವಭಯವು ಇನ್ನೊಮ್ಮೆ ತತ್ಕಾಲಕ್ಕೆ ಕ್ಷೀಣಿಸಿದಾಗ ಅದು ಊರೀಯನ ಪತ್ನಿ ಬತ್ಷೆಬೆಯೊಂದಿಗಿನ ಅನೈತಿಕ ಸಂಬಂಧಕ್ಕೆ ನಡೆಸಿತು. ವ್ಯಭಿಚಾರ, ಅಷ್ಟೇಕೆ ಇನ್ನೊಬ್ಬನ ಸಂಗಾತಿಯನ್ನು ಆಶಿಸುವುದು ಸಹ ತಪ್ಪೆಂದು ದಾವೀದನಿಗೆ ತಿಳಿದಿತ್ತು. (ವಿಮೋಚನಕಾಂಡ 20:14, 17) ಆದರೆ ಬತ್ಷೆಬೆ ಸ್ನಾನ ಮಾಡುತ್ತಿದ್ದಾಗ ದಾವೀದನು ನೋಡಿದ್ದು ಸಮಸ್ಯೆಯನ್ನು ಶುರುಮಾಡಿತು. ದೇವರ ಕಡೆಗಿನ ಯೋಗ್ಯ ಭಯವು ಅವನು ತನ್ನ ಕಣ್ಣುಗಳನ್ನು ಮತ್ತು ಯೋಚನೆಗಳನ್ನು ಆ ಕೂಡಲೇ ಬೇರೆ ಕಡೆಗೆ ತಿರುಗಿಸುವಂತೆ ಪ್ರೇರಿಸಬೇಕಿತ್ತು. ಆದರೆ ತನ್ನಲ್ಲಿದ್ದ ದೇವಭಯವನ್ನು ಕಾಮೋದ್ರೇಕವು ಅಡಗಿಸಿಬಿಡುವ ವರೆಗೆ ದಾವೀದನು ಆಕೆಯನ್ನು ‘ನೋಡುತ್ತಾ’ ಇದ್ದನು. (ಮತ್ತಾಯ 5:28; 2 ಸಮುವೇಲ 11:1-4) ಆ ಸಮಯದಲ್ಲಿ, ಯೆಹೋವನು ತನ್ನ ಜೀವನದ ಪ್ರತಿಯೊಂದೂ ವಿಷಯದಲ್ಲೂ ಒಳಗೂಡಿದ್ದಾನೆ ಎಂಬುದನ್ನು ದಾವೀದನು ಮರೆತುಬಿಟ್ಟನು.—ಕೀರ್ತನೆ 139:1-7.
16 ದಾವೀದ ಮತ್ತು ಬತ್ಷೆಬೆಯ ಅನೈತಿಕ ಸಂಬಂಧದಿಂದಾಗಿ ಒಂದು ಗಂಡುಮಗು ಜನಿಸಿತು. ಸ್ವಲ್ಪದರಲ್ಲೇ, ಯೆಹೋವನು ದಾವೀದನ ಪಾಪವನ್ನು ಬಯಲಿಗೆ ತರಲು ಪ್ರವಾದಿ ನಾತಾನನನ್ನು ಕಳುಹಿಸಿದನು. ಬುದ್ಧಿ ಬರಿಸಲ್ಪಟ್ಟವನಾಗಿ, ದಾವೀದನು ತನ್ನ ದೇವಭಯವನ್ನು ಹಿಂದಿರುಗಿ ಪಡೆದು ಪಶ್ಚಾತ್ತಾಪಪಟ್ಟನು. ತನ್ನನ್ನು ತ್ಯಜಿಸಬಾರದೆಂದು ಇಲ್ಲವೆ ಪವಿತ್ರಾತ್ಮವನ್ನು ತನ್ನಿಂದ ತೊಲಗಿಸಬಾರದೆಂದು ದಾವೀದನು ಯೆಹೋವನಿಗೆ ಮೊರೆಯಿಟ್ಟನು. (ಕೀರ್ತನೆ 51:7, 11) ಆಗ ಯೆಹೋವನು ದಾವೀದನನ್ನು ಕ್ಷಮಿಸಿ ಶಿಕ್ಷೆಯ ತೀಕ್ಷ್ಣತೆಯನ್ನು ಕಡಿಮೆಮಾಡಿದನಾದರೂ, ದಾವೀದನ ಕೃತ್ಯಗಳ ಎಲ್ಲ ಕೆಟ್ಟ ಪರಿಣಾಮಗಳಿಂದ ಅವನನ್ನು ಕಾಪಾಡಲಿಲ್ಲ. ದಾವೀದನ ಮಗನು ಸತ್ತನು ಮತ್ತು ಅಂದಿನಿಂದ ಅವನ ಕುಟುಂಬವನ್ನು ಹೃದ್ವೇದನೆ ಹಾಗೂ ದುರಂತಗಳು ಕಾಡಿಸತೊಡಗಿದವು. ದೇವಭಯದ ಕ್ಷೀಣಿಸುವಿಕೆಗೆ ಅವನು ಎಷ್ಟು ದೊಡ್ಡ ಬೆಲೆಯನ್ನು ತೆರಬೇಕಾಯಿತು!—2 ಸಮುವೇಲ 12:10-14; 13:10-14; 15:14.
17 ಇಂದು ಸಹ, ನೈತಿಕ ವಿಷಯಗಳಲ್ಲಿ ದೇವಭಯವನ್ನು ತೋರಿಸಲು ತಪ್ಪಿಬೀಳುವುದು ತದ್ರೀತಿಯ ಘೋರ ಹಾಗೂ ದೀರ್ಘಕಾಲದ ದುಷ್ಪರಿಣಾಮಗಳನ್ನು ತಂದೊಡ್ಡಬಹುದು. ಒಬ್ಬ ಯುವ ಪತ್ನಿಗೆ, ತನ್ನ ಕ್ರೈಸ್ತ ಪತಿ ಹೊರದೇಶದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ತನಗೆ ಅಪನಂಬಿಗಸ್ತನಾಗಿದ್ದನೆಂದು ತಿಳಿದುಬಂದಾಗ ಎಂತಹ ಭಾವಾತ್ಮಕ ವೇದನೆ ಅವಳಿಗಾಗಿದ್ದಿರಬಹುದು ಎಂಬುದನ್ನು ಭಾವಿಸಿರಿ. ಆಘಾತಗೊಂಡು ತೀವ್ರವಾಗಿ ದುಃಖಿತಳಾದ ಅವಳು ವೇದನೆಯಿಂದ ತನ್ನ ಮುಖವನ್ನು ಕೈಗಳಿಂದ ಮುಚ್ಚಿ ಗೋಳೋ ಎಂದು ಕಣ್ಣೀರು ಸುರಿಸಿದಳು. ಆಕೆಯ ಗಂಡನಿಗೆ ಅವಳ ಭರವಸೆ ಮತ್ತು ಗೌರವವನ್ನು ಪುನಃ ಸಂಪಾದಿಸಲು ಅದೆಷ್ಟು ಸಮಯ ಹಿಡಿದೀತು? ಹೌದು, ನಿಜ ದೇವಭಯವನ್ನು ತೋರಿಸುವ ಮೂಲಕ ಇಂತಹ ಘೋರ ದುಷ್ಪರಿಣಾಮಗಳನ್ನು ತಪ್ಪಿಸಬಲ್ಲೆವು.—1 ಕೊರಿಂಥ 6:18.
ದೇವಭಯವು ಪಾಪಮಾಡದಂತೆ ನಮ್ಮನ್ನು ತಡೆಯುತ್ತದೆ
18 ಸೈತಾನನು ಲೋಕದ ನೈತಿಕ ಮೌಲ್ಯಗಳನ್ನು ವೇಗಗತಿಯಿಂದ ಸವೆಯಿಸುತ್ತಾ ಇದ್ದಾನೆ ಮತ್ತು ಸತ್ಯ ಕ್ರೈಸ್ತರನ್ನು ಭ್ರಷ್ಟಗೊಳಿಸುವುದು ಅವನ ವಿಶೇಷ ಬಯಕೆಯಾಗಿದೆ. ಹೀಗೆ ಮಾಡುವ ಉದ್ದೇಶದಿಂದ ಅವನು ನಮ್ಮ ಹೃದಮನಗಳನ್ನು ಅತಿ ನೇರವಾಗಿ ತಲಪುವ ಮಾರ್ಗಗಳಾದ ನಮ್ಮ ಇಂದ್ರಿಯಶಕ್ತಿಗಳನ್ನು ಅದರಲ್ಲೂ ವಿಶೇಷವಾಗಿ ಕಣ್ಣು ಮತ್ತು ಕಿವಿಗಳನ್ನು ದುರುಪಯೋಗಿಸಿಕೊಳ್ಳುತ್ತಾನೆ. (ಎಫೆಸ 4:17-19) ಹೀಗಿರುವುದರಿಂದ, ಅನಿರೀಕ್ಷಿತವಾಗಿ ಅನೈತಿಕ ಚಿತ್ರಗಳು ಮತ್ತು ಜನರು ಎದುರಾಗುವಲ್ಲಿ ಅಥವಾ ಮಾತುಗಳು ಕೇಳಿಬರುವಲ್ಲಿ ನೀವು ಹೇಗೆ ಪ್ರತಿಕ್ರಿಯಿಸುವಿರಿ?
19 ಯೂರೋಪಿನಲ್ಲಿ, ಒಬ್ಬ ಕ್ರೈಸ್ತ ಹಿರಿಯ, ತಂದೆ ಮತ್ತು ವೈದ್ಯನಾಗಿರುವ ಆಂಡ್ರೇಯb ವಿಷಯವನ್ನು ತೆಗೆದುಕೊಳ್ಳಿ. ಆಸ್ಪತ್ರೆಯಲ್ಲಿ ಅವನು ಇಡೀ ರಾತ್ರಿಯ ಡ್ಯೂಟಿಯಲ್ಲಿದ್ದಾಗ ಅವನ ಸಹೋದ್ಯೋಗಿ ಸ್ತ್ರೀಯರು, ತಮ್ಮೊಂದಿಗೆ ಲೈಂಗಿಕ ಸಂಬಂಧವಿಟ್ಟುಕೊಳ್ಳುವಂತೆ ಅವನನ್ನು ಆಮಂತ್ರಿಸುತ್ತಾ ಪ್ರೇಮಸೂಚಕ ಹೃದಯದ ಚಿತ್ರವಿದ್ದ ಚೀಟಿಗಳನ್ನು ಅವನ ತಲೆದಿಂಬಿಗೆ ಪದೇಪದೇ ಜೋಡಿಸಿಡುತ್ತಿದ್ದರು. ಆದರೆ ಆಂಡ್ರೇ ಅವರ ಒಲಿಸಿಕೊಳ್ಳುವ ಪ್ರಯತ್ನವನ್ನು ದೃಢವಾಗಿ ನಿರಾಕರಿಸಿದನು. ಅಲ್ಲದೆ, ಆ ಕೆಟ್ಟ ಸನ್ನಿವೇಶದಿಂದ ದೂರವಿರಲು ಅವನು ಬೇರೆ ಕಡೆಯಲ್ಲಿ ಕೆಲಸಕ್ಕೆ ಸೇರಿಕೊಂಡನು. ಇಂದು ಆಂಡ್ರೇ ತನ್ನ ದೇಶದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಆಂಶಕಾಲಿಕವಾಗಿ ಸೇವೆಮಾಡುತ್ತಿದ್ದಾನೆ. ಹೀಗೆ, ದೇವಭಯವು ಅತಿ ವಿವೇಕಯುತ ಮಾರ್ಗವಾಗಿ ರುಜುವಾಗಿ ಆಶೀರ್ವಾದಗಳಿಗೆ ನಡೆಸಿತು.
20 ಕೆಟ್ಟ ವಿಚಾರಗಳ ಬಗ್ಗೆ ಆಲೋಚಿಸುತ್ತಾ ಇರುವುದು ಒಬ್ಬನನ್ನು, ಅವನು ಯೆಹೋವನೊಂದಿಗಿರುವ ತನ್ನ ಅಮೂಲ್ಯ ಸಂಬಂಧವನ್ನು ತನಗೆ ಹಕ್ಕಿಲ್ಲದ ಯಾವುದೋ ವಿಷಯದೊಂದಿಗೆ ವಿನಿಮಯಮಾಡಿಕೊಳ್ಳಲಿಕ್ಕಾಗಿ ಅದನ್ನು ತೊರೆದುಬಿಡುವ ಮನಃಸ್ಥಿತಿಗೆ ನಡೆಸಬಲ್ಲದು. (ಯಾಕೋಬ 1:14, 15) ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಾವು ಯೆಹೋವನಿಗೆ ಭಯಪಡುವಲ್ಲಿ, ನಮ್ಮ ನೈತಿಕ ಪಹರೆಯನ್ನು ಕ್ಷೀಣಿಸುವ ಜನರು, ಸ್ಥಳಗಳು, ಕಾರ್ಯಗಳು ಮತ್ತು ವಿನೋದಾವಳಿಗಳಿಗೆ ನಾವು ಹೋಗದಿರುವೆವು ಮಾತ್ರವಲ್ಲ, ಹೋಗಿರುವಲ್ಲಿ ಆ ಸ್ಥಳದಿಂದ ಹೊರಟು ಬರುವೆವು. (ಜ್ಞಾನೋಕ್ತಿ 22:3) ಹೀಗೆ ಮಾಡುವುದು, ಮುಜುಗರವನ್ನುಂಟು ಮಾಡುವುದಾದರೂ ಅಥವಾ ಯಾವುದೇ ತ್ಯಾಗಗಳನ್ನು ಮಾಡಬೇಕಾಗಿರುವುದಾದರೂ ದೇವರ ಅನುಗ್ರಹನಷ್ಟಕ್ಕೆ ಹೋಲಿಸುವಾಗ ಅದು ಚಿಕ್ಕ ವಿಷಯವೇ ಸರಿ. (ಮತ್ತಾಯ 5:29, 30) ನಾವು ದೇವರಿಗೆ ಭಯಪಡುವುದರಲ್ಲಿ, ಯಾವುದೇ ರೀತಿಯ ಅಶ್ಲೀಲ ಸಾಹಿತ್ಯವನ್ನೂ ಸೇರಿಸಿ ಎಲ್ಲಾ ಅನೈತಿಕ ವಿಷಯಗಳಿಗೆ ನಮ್ಮನ್ನು ಬೇಕುಬೇಕೆಂದು ಒಡ್ಡಿಕೊಳ್ಳದಿರುವುದು ಮತ್ತು ‘ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಿರುವುದು’ ಒಳಗೂಡಿದೆ. ನಾವು ಹಾಗೆ ಮಾಡುವಲ್ಲಿ, ಯೆಹೋವನು ‘ನಮ್ಮನ್ನು ಕಾಪಾಡುವಂತೆ’ ಮತ್ತು ನಮಗೆ ಅಗತ್ಯವಿರುವ ಸಕಲವನ್ನೂ ಒದಗಿಸುವಂತೆ ಆತನಲ್ಲಿ ಭರವಸವಿಡಸಾಧ್ಯವಿದೆ.—ಕೀರ್ತನೆ 84:11; 119:37.
21 ಹೌದು, ಯಥಾರ್ಥವಾದ ದೇವಭಯದಿಂದ ವರ್ತಿಸುವುದು ಸದಾ ವಿವೇಕದ ಮಾರ್ಗವಾಗಿರುತ್ತದೆ. ಅದು ನಿಜ ಸಂತೋಷದ ಮೂಲವೂ ಆಗಿದೆ. (ಕೀರ್ತನೆ 34:9) ಇದನ್ನು ಮುಂದಿನ ಲೇಖನದಲ್ಲಿ ಸ್ಪಷ್ಟಪಡಿಸಲಾಗುವುದು. (w06 8/1)
[ಪಾದಟಿಪ್ಪಣಿಗಳು]
a ಇಸವಿ 1998ರ ಫೆಬ್ರವರಿ ತಿಂಗಳ ಎಚ್ಚರ!ದಲ್ಲಿರುವ “ಬೈಬಲಿನ ದೃಷ್ಟಿಕೋನ: ಒಬ್ಬ ಪ್ರೀತಿಪರ ದೇವರಿಗೆ ನೀವು ಹೇಗೆ ಭಯಪಡಸಾಧ್ಯವಿದೆ?” ಎಂಬ ಲೇಖನವನ್ನು ನೋಡಿರಿ.
b ಹೆಸರನ್ನು ಬದಲಾಯಿಸಲಾಗಿದೆ.
ವಿವರಿಸಬಲ್ಲಿರಾ?
• ದೇವಭಯದಲ್ಲಿ ಯಾವ ಕ್ರೈಸ್ತ ಗುಣಗಳು ಸೇರಿವೆ?
• ದೇವಭಯವು ಮಾನವಭಯವನ್ನು ಹೇಗೆ ಪ್ರತಿರೋಧಿಸುತ್ತದೆ?
• ನಮಗೆ ಪ್ರಾರ್ಥನೆಯ ವಿಷಯದಲ್ಲಿ ಸರಿಯಾದ ವೀಕ್ಷಣವಿದೆಯೆಂದು ಹೇಗೆ ತೋರಿಸಬಲ್ಲೆವು?
• ದೇವಭಯವು ನಾವು ಪಾಪಮಾಡದಂತೆ ಹೇಗೆ ತಡೆಯಬಲ್ಲದು?
[ಅಧ್ಯಯನ ಪ್ರಶ್ನೆಗಳು]
1. ದೇವರಿಗೆ ಭಯಪಡುವ ವಿಷಯವು ಅನೇಕರಿಗೆ ಅರ್ಥಮಾಡಿಕೊಳ್ಳಲು ಕಷ್ಟಕರವೇಕೆ?
2, 3. ಯಥಾರ್ಥವಾದ ದೇವಭಯದಲ್ಲಿ ಏನು ಸೇರಿದೆ?
4. ‘ಯೆಹೋವನಿಗೆ ಭಯ’ಪಡುವುದನ್ನು ಕಲಿತುಕೊಳ್ಳಲು ನಮಗೆ ಯಾವುದು ಸಹಾಯಮಾಡಬಲ್ಲದು?
5. ಕುರಿಪಾಲನೆಯು ದಾವೀದನಿಗೆ ಯೆಹೋವನ ಭಯವನ್ನು ಕಲಿಯಲು ಹೇಗೆ ಸಹಾಯಮಾಡಿತು?
6. ಯೆಹೋವನ ಮಹತ್ತನ್ನು ಗ್ರಹಿಸಿದಾಗ ದಾವೀದನಿಗೆ ಹೇಗನಿಸಿತು?
7. ದೇವಭಯವು ದಾವೀದನು ಗೊಲ್ಯಾತನೊಂದಿಗೆ ಹೋರಾಡಲು ಹೇಗೆ ಸಹಾಯಮಾಡಿತು?
8. ದೇವಭಯವಿದ್ದವರ ಬೈಬಲ್ ಮಾದರಿಗಳು ನಮಗೇನನ್ನು ಕಲಿಸುತ್ತವೆ?
9. ದಾವೀದನು ಯಾವ ಸನ್ನಿವೇಶಗಳಲ್ಲಿ ದೇವಭಯವನ್ನು ತೋರಿಸಿದನು?
10. ಅಪಾಯದ ಎದುರಲ್ಲಿ ದಾವೀದನು ದೇವಭಯವನ್ನು ಹೇಗೆ ತೋರಿಸಿದನು?
11. ಪರೀಕ್ಷೆಯ ಸಮಯದಲ್ಲಿ ದಾವೀದನಂತೆ ನಾವು ಹೇಗೆ ದೈವಿಕ ಭಯವನ್ನು ತೋರಿಸಬಲ್ಲೆವು?
12. ನಮ್ಮ ಪ್ರಾರ್ಥನೆಗಳನ್ನು ನಾವೇಕೆ ಗಂಭೀರವಾಗಿ ತೆಗೆದುಕೊಳ್ಳಬೇಕು, ಮತ್ತು ಯಾವ ಮನೋಭಾವ ನಮ್ಮಲ್ಲಿ ಇರಲೇಬಾರದು?
13. ದಾವೀದನು ದೇವರ ಧರ್ಮಶಾಸ್ತ್ರಕ್ಕೆ ಗೌರವ ತೋರಿಸಲು ತಪ್ಪಿದ್ದು ಯಾವಾಗ?
14. ದಾವೀದನು ಇಸ್ರಾಯೇಲ್ಯರನ್ನು ಲೆಕ್ಕಿಸಿದ ಪರಿಣಾಮವೇನಾಯಿತು?
15. ದಾವೀದನನ್ನು ಲೈಂಗಿಕ ಪಾಪದಲ್ಲಿ ಬೀಳಿಸಿದ್ದು ಯಾವುದು?
16. ದಾವೀದನು ತನ್ನ ತಪ್ಪಿಗಾಗಿ ಯಾವ ದುಷ್ಪರಿಣಾಮಗಳನ್ನು ಅನುಭವಿಸಿದನು?
17. ಪಾಪಕೃತ್ಯಗಳಿಂದ ಫಲಿಸುವ ಹೃದ್ವೇದನೆಯನ್ನು ದೃಷ್ಟಾಂತಿಸಿರಿ.
18. ಸೈತಾನನ ಲಕ್ಷ್ಯವೇನು ಮತ್ತು ಅವನು ಕಾರ್ಯನಡೆಸುವ ರೀತಿ ಯಾವುದು?
19. ದೇವಭಯವು ಒಬ್ಬ ಕ್ರೈಸ್ತನಿಗೆ ಪ್ರಲೋಭನೆಯನ್ನು ಜಯಿಸುವಂತೆ ಹೇಗೆ ಸಹಾಯಮಾಡಿತು?
20, 21. (ಎ) ದೇವಭಯವು ನಾವು ಪಾಪಮಾಡುವುದರಿಂದ ದೂರವಿರುವಂತೆ ಹೇಗೆ ಸಹಾಯಮಾಡಬಲ್ಲದು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?
[ಪುಟ 23ರಲ್ಲಿರುವ ಚಿತ್ರ]
ಯೆಹೋವನ ಕೈಕೆಲಸವನ್ನು ಗಮನಿಸುತ್ತಿದ್ದಾಗ ದಾವೀದನು ದೇವಭಯವನ್ನು ಕಲಿತುಕೊಂಡನು
[ಪುಟ 24ರಲ್ಲಿರುವ ಚಿತ್ರಗಳು]
ನೀವು ಅನಿರೀಕ್ಷಿತವಾಗಿ ಪ್ರಲೋಭನೆಯ ಸನ್ನಿವೇಶವನ್ನು ಎದುರಿಸುವಲ್ಲಿ ಹೇಗೆ ಪ್ರತಿವರ್ತಿಸುವಿರಿ?