ನಿಮ್ಮ ನಂಬಿಕೆಯನ್ನು ನಿಮ್ಮ ಜೀವನರೀತಿಯ ಮೂಲಕ ರುಜುಪಡಿಸಿರಿ
“ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.”—ಯಾಕೋಬ 2:17.
ಆದಿಕ್ರೈಸ್ತರಲ್ಲಿ ಹೆಚ್ಚಿನವರು ತಾವು ವಾಸ್ತವವಾಗಿ ಹೇಗೆ ಜೀವಿಸಿದರೊ ಅದರ ಮೂಲಕ ತಮ್ಮ ನಂಬಿಕೆಯನ್ನು ರುಜುಪಡಿಸಿದರು. ಶಿಷ್ಯ ಯಾಕೋಬನು ಸಕಲ ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದು, ‘ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿರಬೇಡಿರಿ.’ ಅವನು ಕೂಡಿಸಿ ಹೇಳಿದ್ದು: “ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.” (ಯಾಕೋಬ 1:22; 2:26) ಅವನು ಇದನ್ನು ಬರೆದು ಸುಮಾರು 35ವರುಷಗಳ ಬಳಿಕವೂ ಅನೇಕ ಕ್ರೈಸ್ತರು ತಕ್ಕ ಕಾರ್ಯಗಳ ಮೂಲಕ ತಮ್ಮ ನಂಬಿಕೆಯನ್ನು ರುಜುಪಡಿಸಿ ತೋರಿಸುತ್ತಿದ್ದರು. ಆದರೆ ವಿಷಾದಕರವಾಗಿ ಕೆಲವರು ಹಾಗೆ ಮಾಡುತ್ತಿರಲಿಲ್ಲ. ಸ್ಮುರ್ನದ ಸಭೆಯನ್ನು ಯೇಸು ಪ್ರಶಂಸಿಸಿದರೂ ಸಾರ್ದಿಸ್ ಸಭೆಯ ಅನೇಕರಿಗೆ ಅವನಂದದ್ದು: “ನಿನ್ನ ಕೃತ್ಯಗಳನ್ನು ಬಲ್ಲೆನು; ಜೀವಿಸುವವನು ಎಂದು ಹೆಸರು ನಿನಗಿದ್ದರೂ ಸತ್ತವನಾಗಿದ್ದೀ ಎಂಬುದನ್ನು ಬಲ್ಲೆನು.”—ಪ್ರಕಟನೆ 2:8-11; 3:1.
2 ಆದುದರಿಂದಲೇ, ಯೇಸು ಸಾರ್ದಿಸಿನವರನ್ನು—ಮತ್ತು ವಿಸ್ತರಣೆಯಾಗಿ, ಅವನ ಮಾತುಗಳನ್ನು ಮುಂದಕ್ಕೆ ಓದುವ ಎಲ್ಲರನ್ನು—ಕ್ರೈಸ್ತ ಸತ್ಯಕ್ಕಾಗಿ ಅವರಲ್ಲಿದ್ದ ಪ್ರಥಮ ಪ್ರೀತಿಯನ್ನು ರುಜುಪಡಿಸಿ ತೋರಿಸಬೇಕೆಂದೂ ಆಧ್ಯಾತ್ಮಿಕವಾಗಿ ಎಚ್ಚರದಿಂದಿರಬೇಕೆಂದೂ ಪ್ರೋತ್ಸಾಹಿಸಿದನು. (ಪ್ರಕಟನೆ 3:2, 3) ನಮ್ಮಲ್ಲಿ ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳಬಹುದು: ‘ನನ್ನ ಕ್ರಿಯೆಗಳು ಹೇಗಿವೆ? ನಾನು ಮಾಡುವ ಕ್ರಿಯೆಗಳು ನನ್ನ ನಂಬಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೊ? ಮತ್ತು ನನ್ನ ನಂಬಿಕೆಯನ್ನು ನಾನು ಮಾಡುವ ಪ್ರತಿಯೊಂದು ಕಾರ್ಯದ ಮೂಲಕ ರುಜುಪಡಿಸಲು ಸಾಧ್ಯವಿರುವುದೆಲ್ಲವನ್ನು ನಾನು ಮಾಡುತ್ತಿದ್ದೇನೊ? ಸಾರುವ ಕೆಲಸ ಅಥವಾ ಸಭಾಕೂಟಗಳಿಗೆ ನೇರವಾಗಿ ಸಂಬಂಧಿಸದ ವಿಷಯಗಳಲ್ಲೂ ನನ್ನ ನಂಬಿಕೆಯನ್ನು ನಾನು ರುಜುಪಡಿಸುತ್ತಿದ್ದೇನೊ?’ (ಲೂಕ 16:10) ಜೀವನದ ಹಲವಾರು ವಿಷಯಗಳಲ್ಲಿ ನಾವು ನಮ್ಮ ನಂಬಿಕೆಯನ್ನು ರುಜುಪಡಿಸಸಾಧ್ಯವಿದೆ. ಆದರೆ ನಾವೀಗ ಸಾಮಾಜಿಕ ಗೋಷ್ಠಿಯ ಕುರಿತಾಗಿ ಮಾತ್ರ ನೋಡೋಣ. ಅನೇಕವೇಳೆ ಕ್ರೈಸ್ತ ವಿವಾಹದ ನಂತರ ನಡೆಸಲ್ಪಡುವ ಗೋಷ್ಠಿಗಳು ಇದರಲ್ಲಿ ಸೇರಿವೆ.
ಚಿಕ್ಕ ಸಾಮಾಜಿಕ ಗೋಷ್ಠಿಗಳು
3 ಸಂತೋಷಿಸುತ್ತಿರುವ ಕ್ರೈಸ್ತರ ಗೋಷ್ಠಿಗೆ ಆಮಂತ್ರಿಸಲ್ಪಡುವುದನ್ನು ನಮ್ಮಲ್ಲಿ ಹೆಚ್ಚಿನವರು ಗಣ್ಯಮಾಡುತ್ತಾರೆ. ಯೆಹೋವನು “ಸಂತೋಷದ ದೇವರು” ಮತ್ತು ತನ್ನ ಸೇವಕರು ಸಂತೋಷವಾಗಿರಬೇಕೆಂಬುದು ಆತನ ಬಯಕೆ. (1 ತಿಮೊಥೆಯ 1:11, NW) ಯೆಹೋವನು ಸೊಲೊಮೋನನ ಮೂಲಕ ಈ ನಿಜತ್ವವನ್ನು ಬೈಬಲಿನಲ್ಲಿ ಸೇರಿಸಿದನು: “ಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವದಕ್ಕಿಂತ ಅವನಿಗೆ ಲೋಕದಲ್ಲಿ ಇನ್ನಾವ ಮೇಲೂ ಇಲ್ಲವೆಂದು ಸಂತೋಷವನ್ನೇ ಸ್ತುತಿಸಿದೆನು; ದೇವರು ಅವನಿಗೆ ಲೋಕದಲ್ಲಿ ಅನುಗ್ರಹಿಸುವ ದಿನಗಳಲ್ಲೆಲ್ಲಾ ಅವನು ಪಡುವ ಪ್ರಯಾಸದಲ್ಲಿ ಸಂತೋಷವೇ ಸೇರಿರುವದು.” (ಪ್ರಸಂಗಿ 3:1, 4, 13; 8:15) ಇಂತಹ ಸಂತೋಷವು ಒಂದು ಕುಟುಂಬ ಭೋಜನದ ಸಮಯದಲ್ಲಿಯೊ ಸತ್ಯಾರಾಧಕರ ಬೇರೆ ಚಿಕ್ಕ ಸಾಮಾಜಿಕ ಗೋಷ್ಠಿಯ ಸಮಯದಲ್ಲಿಯೊ ಇರಬಹುದು.—ಯೋಬ 1:4, 5, 18; ಲೂಕ 10:38-42; 14:12-14.
4 ನೀವು ಅಂತಹ ಗೋಷ್ಠಿಯನ್ನು ಏರ್ಪಡಿಸುವಲ್ಲಿ ಮತ್ತು ಅದಕ್ಕೆ ಜವಾಬ್ದಾರರಾಗಿರುವಲ್ಲಿ, ಕೇವಲ ಕೆಲವೇ ಮಂದಿ ವಿಶ್ವಾಸಿಗಳನ್ನು ಒಂದು ಊಟ ಮತ್ತು ಸ್ನೇಹಪರ ಮಾತುಕತೆಗಾಗಿ ಕರೆಯುವುದಾದರೂ ನಿಮ್ಮ ಯೋಜನೆಯನ್ನು ನೀವು ಜಾಗರೂಕತೆಯಿಂದ ಪರಿಶೀಲಿಸಬೇಕು. (ರೋಮಾಪುರ 12:13) “ಎಲ್ಲವೂ ಮರ್ಯಾದೆಯಿಂದ,” ನಡೆಯುವಂತೆಯೂ ‘ಮೇಲಣಿಂದ ಬರುವ ವಿವೇಕದಿಂದ’ ಮಾರ್ಗದರ್ಶಿಸಲ್ಪಡುವಂತೆಯೂ ನೋಡಿಕೊಳ್ಳಿರಿ. (1 ಕೊರಿಂಥ 14:40; ಯಾಕೋಬ 3:17) ಅಪೊಸ್ತಲ ಪೌಲನು ಬರೆದುದು: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ. . . . ವಿಘ್ನವಾಗಬೇಡಿರಿ.” (1 ಕೊರಿಂಥ 10:31, 32) ಹಾಗಾದರೆ, ನಿರ್ದಿಷ್ಟವಾಗಿ ಗಮನಕೊಡಬೇಕಾದ ಕೆಲವು ವಿಷಯಗಳಾವುವು? ಇವುಗಳ ಕುರಿತು ಮುಂಚಿತವಾಗಿಯೇ ಯೋಚಿಸುವುದು, ನೀವು ಮತ್ತು ನಿಮ್ಮ ಅತಿಥಿಗಳು ಮಾಡುವಂಥ ವಿಷಯಗಳು ನೀವು ನಿಮ್ಮ ನಂಬಿಕೆಯನ್ನು ಕ್ರಿಯೆಯಲ್ಲಿ ತೋರಿಸುತ್ತೀರೆಂಬುದನ್ನು ಖಾತರಿಮಾಡಲು ಸಹಾಯಮಾಡುವುದು.—ರೋಮಾಪುರ 12:2.
ಗೋಷ್ಠಿ ಹೇಗಿರಬೇಕು?
5 ಮದ್ಯಸಾರ ಪಾನೀಯಗಳನ್ನು ವಿತರಿಸಬೇಕೊ ಬಾರದೊ ಎಂಬ ಪ್ರಶ್ನೆಯನ್ನು ಅನೇಕ ಆತಿಥೇಯರು ಎದುರಿಸುತ್ತಾರೆ. ಒಂದು ಒಕ್ಕೂಟವು ಭಕ್ತಿವರ್ಧನೆಯಾಗಿರಲು ಇಂತಹ ಪಾನೀಯಗಳು ಅಗತ್ಯವಿರುವುದಿಲ್ಲ. ಯೇಸು ತನ್ನ ಬಳಿಗೆ ಬಂದ ದೊಡ್ಡ ಜನಸಮೂಹಕ್ಕೆ ರೊಟ್ಟಿ ಮೀನುಗಳನ್ನು ಬಹುಸಂಖ್ಯೆಯಲ್ಲಿ ಹೆಚ್ಚಿಸುತ್ತ ಭೋಜನವನ್ನು ಒದಗಿಸಿದ್ದನ್ನು ನೆನಪಿಸಿಕೊಳ್ಳಿ. ಆದರೆ ಅವನು ಅದ್ಭುತಕರವಾಗಿ ದ್ರಾಕ್ಷಾಮದ್ಯವನ್ನು ಒದಗಿಸಿದನೆಂದು ಆ ವೃತ್ತಾಂತವು ತಿಳಿಸುವುದಿಲ್ಲ. ಆದರೆ ಹಾಗೆ ಮಾಡುವ ಸಾಮರ್ಥ್ಯ ಅವನಿಗಿತ್ತೆಂದು ನಮಗೆ ತಿಳಿದದೆ. (ಮತ್ತಾಯ 14:14-21) ಒಂದು ಒಕ್ಕೂಟದಲ್ಲಿ ಮದ್ಯಸಾರ ಪಾನೀಯಗಳನ್ನು ವಿತರಿಸಬೇಕೆಂದು ನೀವು ನಿರ್ಣಯಿಸುವುದಾದರೆ, ಅದರ ಪ್ರಮಾಣದ ವಿಷಯದಲ್ಲಿ ಮಿತವಾದಿಯಾಗಿರಿ ಮತ್ತು ಮದ್ಯಸಾರರಹಿತ ಪಾನೀಯಗಳನ್ನು ಇಷ್ಟಪಡುವವರಿಗೆ ಅವು ಲಭ್ಯ ಇವೆಯೆಂದು ನಿಶ್ಚಯ ಮಾಡಿಕೊಳ್ಳಿರಿ. (1 ತಿಮೊಥೆಯ 3:2, 3, 8; 5:23; 1 ಪೇತ್ರ 4:3) “ನಾಗದ ಹಾಗೆ” ಕಡಿಯುವ ಯಾವುದನ್ನೇ ಆಗಲಿ ಕುಡಿಯುವಂತೆ ಯಾರನ್ನೂ ಒತ್ತಾಯಿಸಬೇಡಿರಿ. (ಜ್ಞಾನೋಕ್ತಿ 23:29-32) ಸಂಗೀತ ಮತ್ತು ಹಾಡುಗಳ ಕುರಿತೇನು? ನಿಮ್ಮ ಗೋಷ್ಠಿಯಲ್ಲಿ ಸಂಗೀತವು ಸೇರಿರುವಲ್ಲಿ ಹಾಡುಗಳ ಛಂದೋಗತಿ (ರಿದಮ್) ಮತ್ತು ಪದಗಳನ್ನು (ಲಿರಿಕ್ಸ್) ಗಮನಿಸಿ ಅವನ್ನು ನೀವೇ ಜಾಗರೂಕತೆಯಿಂದ ಆರಿಸಿಕೊಳ್ಳಿರಿ. (ಕೊಲೊಸ್ಸೆ 3:8; ಯಾಕೋಬ 1:21) ಅನೇಕ ಕ್ರೈಸ್ತರು, ಕಿಂಗ್ಡಮ್ ಮೆಲಡೀಸ್ಗಳನ್ನು ನುಡಿಸುವುದು ಇಲ್ಲವೆ ರಾಜ್ಯಗೀತೆಗಳನ್ನು ಗುಂಪಾಗಿ ಹಾಡುವುದು ಕೂಡ ಉತ್ತಮ ವಾತಾವರಣಕ್ಕೆ ಇಂಬುಕೊಡುತ್ತದೆ ಎಂದು ಕಂಡುಕೊಂಡಿದ್ದಾರೆ. (ಎಫೆಸ 5:19, 20) ಸಂಗೀತದ ಧ್ವನಿಪ್ರಮಾಣ ಹರ್ಷಕರ ಸಂಭಾಷಣೆಯನ್ನು ತಡೆಯದಂತೆಯೂ ನೆರೆಯವರ ನೆಮ್ಮದಿಯನ್ನು ಕೆಡಿಸದಂತೆಯೂ ಆಗಿಂದಾಗ್ಗೆ ಅದನ್ನು ಪರೀಕ್ಷಿಸುತ್ತ ಇರಿ.—ಮತ್ತಾಯ 7:12.
6 ಒಂದು ಸಾಮಾಜಿಕ ಗೋಷ್ಠಿಯಲ್ಲಿ ಕ್ರೈಸ್ತರು ವಿವಿಧ ವಿಷಯಗಳ ಕುರಿತು ಸಂಭಾಷಿಸಬಹುದು, ಕೆಲವು ವಿಷಯಗಳನ್ನು ಗಟ್ಟಿಯಾಗಿ ಓದಬಹುದು ಇಲ್ಲವೆ ಆಸಕ್ತಿಕರವಾದ ಅನುಭವಗಳನ್ನು ಹೇಳಬಹುದು. ಆದರೆ ಸಂಭಾಷಣೆ ಕ್ರೈಸ್ತ ಮಟ್ಟದಿಂದ ಸರಿಯುವಲ್ಲಿ, ಆತಿಥೇಯನು ಅದನ್ನು ಜಾಣತನದಿಂದ ಹಿಂದೆ ತಿರುಗಿಸಬಹುದು. ಸಂಭಾಷಣೆಯಲ್ಲಿ ಒಬ್ಬ ವ್ಯಕ್ತಿಯೇ ಮೇಲುಗೈ ಹೊಂದದಂತೆ ಆತಿಥೇಯನು ಎಚ್ಚರವಹಿಸುವನು. ಒಂದುವೇಳೆ ಸನ್ನಿವೇಶ ಈ ರೀತಿ ತಿರುಗುವುದನ್ನು ಆತಿಥೇಯನು ಗಮನಿಸುವಲ್ಲಿ, ಅವನು ವಿವೇಚನೆಯಿಂದ ಮಧ್ಯೆ ಬಂದು, ಪ್ರಾಯಶಃ ಎಳೆಯರು ಮಾತಾಡುವಂತೆ ಆಹ್ವಾನಿಸುವನು ಇಲ್ಲವೆ ವಿಭಿನ್ನ ಹೇಳಿಕೆಗಳನ್ನು ಹೊರಸೆಳೆಯುವ ವಿಷಯವೊಂದನ್ನು ಎತ್ತಿಹೇಳಿ ವೈವಿಧ್ಯವನ್ನು ಒದಗಿಸುವನು. ಗೋಷ್ಠಿಯ ಈ ಅಂಶದಿಂದಾಗಿ ಆಬಾಲವೃದ್ಧರು ಹರ್ಷಗೊಳ್ಳುವರು. ವ್ಯವಸ್ಥಾಪಕರಾದ ನೀವು ಸಂಗತಿಗಳನ್ನು ವಿವೇಕದಿಂದಲೂ ಸಮಯೋಚಿತನಯದಿಂದಲೂ ನಡೆಸುವಲ್ಲಿ, ಅಲ್ಲಿ ಉಪಸ್ಥಿತರಿಗೆ ‘ನಿಮ್ಮ ನ್ಯಾಯಸಮ್ಮತತೆಯು ಪ್ರಸಿದ್ಧ’ವಾಗುವುದು. (ಫಿಲಿಪ್ಪಿ 4:5, NW) ಆಗ, ನಿಮ್ಮ ಜೀವನದ ಎಲ್ಲ ಅಂಶಗಳನ್ನು ಪ್ರಭಾವಿಸುವಂಥ ಸಜೀವವಾದ ನಂಬಿಕೆ ನಿಮಗಿದೆಯೆಂದು ಅವರು ತಿಳಿದುಕೊಳ್ಳುವರು.
ಮದುವೆ ಮತ್ತು ರಿಸೆಪ್ಷನ್
7 ಉಲ್ಲಾಸಿಸುವ ಒಂದು ವಿಶೇಷ ಸಂದರ್ಭವು ಕ್ರೈಸ್ತ ವಿವಾಹವಾಗಿದೆ. ಯೇಸು ಕ್ರಿಸ್ತನು ಮತ್ತು ಅವನ ಶಿಷ್ಯರು ಸೇರಿ ದೇವರ ಪೂರ್ವಕಾಲದ ಸೇವಕರು, ಇಂತಹ ಸಂತೋಷ ಸಮಾರಂಭಗಳಲ್ಲಿ ಮತ್ತು ಅವುಗಳೊಂದಿಗೆ ಏರ್ಪಡಿಸುತ್ತಿದ್ದ ಔತಣಗಳಲ್ಲಿ ಹರ್ಷದಿಂದ ಭಾಗವಹಿಸಿದರು. (ಆದಿಕಾಂಡ 29:21, 22; ಯೋಹಾನ 2:1, 2) ಆದರೆ, ವಿವಾಹಗಳಿಗೆ ಸಂಬಂಧಿಸಿದ ಸಾಮಾಜಿಕ ಚಟುವಟಿಕೆಗಳನ್ನು ಯೋಜಿಸುವಾಗ ಒಳ್ಳೆಯ ಔಚಿತ್ಯ ಪ್ರಜ್ಞೆ ಮತ್ತು ಕ್ರೈಸ್ತ ಸಮತೋಲನವನ್ನು ತೋರಿಸಲು ವಿಶೇಷ ಪ್ರಯತ್ನ ಅಗತ್ಯವೆಂದು ಇತ್ತೀಚಿನ ಅನುಭವಗಳು ಸ್ಪಷ್ಟವಾಗಿ ತಿಳಿಯಪಡಿಸಿವೆ. ಆದರೂ, ಇಂಥ ಚಟುವಟಿಕೆಗಳು ಒಬ್ಬ ಕ್ರೈಸ್ತನು ತನ್ನ ನಂಬಿಕೆಯನ್ನು ತೋರ್ಪಡಿಸಲು ಸಂದರ್ಭ ನೀಡುವ ಜೀವನದ ಸಾಮಾನ್ಯ ಕ್ಷೇತ್ರಗಳಾಗಿವೆ.
8 ದೈವಿಕ ಮೂಲತತ್ತ್ವಗಳನ್ನು ಅರಿಯದವರು ಅಥವಾ ಅವನ್ನು ಅಲಕ್ಷಿಸುವವರು ವಿವಾಹವನ್ನು ಮಿತಿಮೀರಿ ವಿಜೃಂಭನೆಯಿಂದ ಮಾಡುವ ಸಮಾರಂಭವೆಂದು ವೀಕ್ಷಿಸುತ್ತಾರೆ ಇಲ್ಲವೆ ಆ ಸಂದರ್ಭದಲ್ಲಿ ಮಿತಿಮೀರಿ ಅದ್ದೂರಿಯಾಗಿ ಏನೇ ಮಾಡಿದರೂ ತಪ್ಪೇನಿಲ್ಲವೆಂದು ನೆನಸುತ್ತಾರೆ. ಒಂದು ಯೂರೋಪಿಯನ್ ಪತ್ರಿಕೆಯಲ್ಲಿ, ನವವಿವಾಹಿತ ಪತ್ನಿಯೊಬ್ಬಳು ತನ್ನ “ರಾಜೋಚಿತ” ವಿವಾಹದ ಕುರಿತಾಗಿ ಹೀಗೆಂದಳು: “ನಾವು ನಾಲ್ಕು ಕುದುರೆಗಳ ರಥದಲ್ಲಿ ಸವಾರಿಮಾಡಿದೆವು. ನಮ್ಮ ಹಿಂದೆ ಹನ್ನೆರಡು ಮಡಚುಚಾವಣಿಯ ಒಂಟಿಕುದುರೆ ಬಂಡಿಗಳು ಮತ್ತು ವಾದ್ಯವೃಂದವಿದ್ದ ಕುದುರೆ ಬಂಡಿ ಬರುತ್ತಿದ್ದವು. ನಂತರ ಭರ್ಜರಿ ಊಟ, ಸುಮಧುರ ಸಂಗೀತ, ಅಬ್ಬಾ ಎಲ್ಲವೂ ಅಮೋಘ! ನನ್ನ ಇಚ್ಛೆಯಂತೆ ನಾನು ಆ ದಿನ ರಾಣಿಯಾಗಿದ್ದೆ.”
9 ಪದ್ಧತಿಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರಬಹುದಾದರೂ, ಮೇಲಿನ ಮನೋಭಾವವು ಅಪೊಸ್ತಲ ಯೋಹಾನನು ಏನು ಬರೆದನೊ ಅದನ್ನು ದೃಢೀಕರಿಸುತ್ತವೆ: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” ರಾಜರಾಣಿಯರ ಮದುವೆಯಂತೆ ತಮ್ಮ ವಿವಾಹ ಮತ್ತು ರಿಸೆಪ್ಷನ್ “ರಾಜೋಚಿತ”ವಾಗಿ ಅದ್ದೂರಿಯಿಂದ ನಡೆಯಬೇಕೆಂದು ಪ್ರೌಢ ಕ್ರೈಸ್ತ ದಂಪತಿಗಳು ಬಯಸುವುದನ್ನು ನೀವು ಊಹಿಸಬಲ್ಲಿರಾ? ಇದಕ್ಕೆ ಬದಲಾಗಿ, “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂಬ ಮಾತುಗಳ ದೃಷ್ಟಿಕೋನ ಅವರದ್ದಾಗಿರಬೇಕು.—1 ಯೋಹಾನ 2:16, 17.
10 ಕ್ರೈಸ್ತ ದಂಪತಿಗಳು ವಾಸ್ತವಿಕ ನೋಟವುಳ್ಳವರೂ ವಿವೇಚನಾಶೀಲರೂ ಆಗಿರಲು ಬಯಸುತ್ತಾರೆ ಮತ್ತು ಇದಕ್ಕಾಗಿ ಬೈಬಲ್ ಅವರಿಗೆ ಸಹಾಯ ನೀಡಬಲ್ಲದು. ವಿವಾಹದಿನವು ಮಹತ್ವಪೂರ್ಣ ಸಂದರ್ಭವಾಗಿರುವುದಾದರೂ, ಅದು ನಿತ್ಯಜೀವದ ನಿರೀಕ್ಷೆಯಿರುವ ಇಬ್ಬರು ಕ್ರೈಸ್ತರ ವೈವಾಹಿಕ ಜೀವನದ ಕೇವಲ ಆರಂಭವಾಗಿದೆ ಎಂಬುದನ್ನು ಅವರು ತಿಳಿದಿರುತ್ತಾರೆ. ಅವರು ಒಂದು ದೊಡ್ಡ ವಿವಾಹದೌತಣವನ್ನು ಏರ್ಪಡಿಸಲೇಬೇಕೆಂದಿಲ್ಲ. ಒಂದುವೇಳೆ ಅವರು ವಿವಾಹದ ಗೋಷ್ಠಿಯನ್ನು ಏರ್ಪಡಿಸಲು ಇಷ್ಟಪಡುವಲ್ಲಿ, ಅದಕ್ಕಾಗುವ ಖರ್ಚುವೆಚ್ಚ ಮತ್ತು ಅದು ಯಾವ ರೀತಿಯಲ್ಲಿ ಇರಬೇಕೆಂಬುದನ್ನು ಪರಿಗಣಿಸಬಯಸುವರು. (ಲೂಕ 14:28) ಅವರ ಕ್ರೈಸ್ತ ಸಹಬಾಳ್ವೆಯಲ್ಲಿ ಪತಿಯು ಶಾಸ್ತ್ರಾಧಾರಿತವಾಗಿ ಶಿರಸ್ಸಾಗಿರುವನು. (1 ಕೊರಿಂಥ 11:3; ಎಫೆಸ 5:22, 23) ಆದುದರಿಂದ, ವಿವಾಹದ ರಿಸೆಪ್ಷನ್ಗೆ ಪ್ರಮುಖ ಹೊಣೆಗಾರನು ವರನಾಗಿರುತ್ತಾನೆ. ಆದರೂ, ವಿವಾಹದೌತಣಕ್ಕೆ ಯಾರನ್ನು ಆಮಂತ್ರಿಸಬೇಕು ಅಥವಾ ಎಷ್ಟು ಮಂದಿಯನ್ನು ಆಮಂತ್ರಿಸಸಾಧ್ಯವಿದೆ ಎಂಬ ವಿಷಯದಲ್ಲಿ ಅವನು ತನ್ನ ಕೈಹಿಡಿಯುವವಳನ್ನು ಪ್ರೀತಿಯಿಂದ ವಿಚಾರಿಸುವನು. ಅವರ ಎಲ್ಲ ಬಂಧುಮಿತ್ರರನ್ನು ಆಮಂತ್ರಿಸಲು ಸಾಧ್ಯವಿರಲಿಕ್ಕಿಲ್ಲ ಇಲ್ಲವೆ ಅದು ಪ್ರಾಯೋಗಿಕವೂ ಆಗಿರಲಿಕ್ಕಿಲ್ಲ. ಆದಕಾರಣ, ಕೆಲವು ನ್ಯಾಯಸಮ್ಮತ ನಿರ್ಣಯಗಳನ್ನು ಮಾಡಬೇಕಾದೀತು. ಕೆಲವು ಜೊತೆಕ್ರೈಸ್ತರಿಗೆ ಕರೆಕೊಡದಿರುವಲ್ಲಿ, ಆ ಕ್ರೈಸ್ತರು ಬೇಸರ ಮಾಡಿಕೊಳ್ಳದೆ ಅದು ಏಕೆಂಬುದಕ್ಕೆ ವಿವೇಚನಾಶಕ್ತಿಯನ್ನು ಉಪಯೋಗಿಸುವರು ಎಂಬ ಭರವಸೆ ಅವರಿಗಿರಬೇಕು.—ಪ್ರಸಂಗಿ 7:9.
“ಔತಣದ ಮೇಲ್ವಿಚಾರಕ”
11 ದಂಪತಿಗಳು ತಮ್ಮ ವಿವಾಹೋತ್ಸವಕ್ಕಾಗಿ ಒಂದು ಸಮಾರಂಭವನ್ನು ಏರ್ಪಡಿಸಲು ಇಷ್ಟಪಡುವಲ್ಲಿ, ಆ ಸಂದರ್ಭವು ಗೌರವಪೂರ್ಣವಾಗಿ ಉಳಿಯುವುದೆಂದು ಹೇಗೆ ಖಾತರಿಯಿಂದಿರಬಲ್ಲರು? ಕೆಲವು ದಶಕಗಳಿಂದ ಯೆಹೋವನ ಸಾಕ್ಷಿಗಳು, ಯೇಸು ಕಾನಾದಲ್ಲಿ ಉಪಸ್ಥಿತನಾಗಿದ್ದ ಔತಣದ ಸಂಬಂಧದಲ್ಲಿ ಹೇಳಲ್ಪಟ್ಟಿರುವಂತೆ ಒಬ್ಬ “ಔತಣದ ಮೇಲ್ವಿಚಾರಕನು” ಇರುವುದು ವಿವೇಕಪೂರ್ಣವೆಂದು ಕಂಡುಕೊಂಡಿದ್ದಾರೆ. ಅವನು ನಿಶ್ಚಯವಾಗಿಯೂ ಜವಾಬ್ದಾರಿಯುತ ಜೊತೆ ವಿಶ್ವಾಸಿಯಾಗಿದ್ದನು. (ಯೋಹಾನ 2:9, 10, NIBV) ಅದೇ ರೀತಿಯಲ್ಲಿ, ಈ ಪ್ರಾಮುಖ್ಯ ಪಾತ್ರವನ್ನು ವಹಿಸಿಕೊಳ್ಳಲು, ವಿವೇಕಿಯಾದ ವರನು ಆಧ್ಯಾತ್ಮಿಕವಾಗಿ ಪ್ರೌಢನಾಗಿರುವ ಕ್ರೈಸ್ತ ಸಹೋದರನೊಬ್ಬನನ್ನು ಆರಿಸಿಕೊಳ್ಳುವನು. ಮತ್ತು ಈ ಔತಣದ ಮೇಲ್ವಿಚಾರಕನು ವರನ ಅಪೇಕ್ಷೆ ಮತ್ತು ಅಭಿರುಚಿಗಳನ್ನು ತಿಳಿದುಕೊಂಡು ಗೋಷ್ಠಿಗೆ ಮುಂಚೆ ಹಾಗೂ ಆ ಗೋಷ್ಠಿಯಲ್ಲಿ ಅವನ್ನು ಅನುಸರಿಸುವನು.
12 ಐದನೆಯ ಪ್ಯಾರದಲ್ಲಿ ಚರ್ಚಿಸಲ್ಪಟ್ಟಿರುವುದಕ್ಕೆ ಹೊಂದಿಕೆಯಲ್ಲಿ, ಕೆಲವು ದಂಪತಿಗಳು ಮದ್ಯಸಾರ ಪಾನೀಯಗಳನ್ನು ತಮ್ಮ ವಿವಾಹದೌತಣದಲ್ಲಿ ಸೇರಿಸದಿರಲು ನಿರ್ಣಯಿಸುತ್ತಾರೆ. ಒಂದುವೇಳೆ, ಅದರ ದುರುಪಯೋಗದಿಂದ ಆ ಸಂದರ್ಭದ ಸಂತೋಷ ಮತ್ತು ಯಶಸ್ವಿಗೆ ಕುಂದು ಬಂದೀತೆಂದು ಅವರು ಹೀಗೆ ಮಾಡುತ್ತಾರೆ. (ರೋಮಾಪುರ 13:13; 1 ಕೊರಿಂಥ 5:11) ಆದರೆ, ಮದ್ಯಸಾರ ಪಾನೀಯಗಳನ್ನು ವಿವಾಹದೌತಣದಲ್ಲಿ ಸೇರಿಸುವಲ್ಲಿ, ಅವು ಮಿತವಾಗಿ ಹಂಚಲ್ಪಡುವಂತೆ ಇಲ್ಲವೆ ಲಭ್ಯವಿರುವಂತೆ ವರನು ನಿಶ್ಚಯವಾಗಿ ನೋಡಿಕೊಳ್ಳಬೇಕು. ಯೇಸು ಕಾನಾದಲ್ಲಿ ಹಾಜರಾಗಿದ್ದ ವಿವಾಹದಲ್ಲಿ ದ್ರಾಕ್ಷಾಮದ್ಯವಿದದ್ದು ಮಾತ್ರವಲ್ಲ, ಅವನು ಉತ್ತಮ ದರ್ಜೆಯ ದ್ರಾಕ್ಷಾಮದ್ಯವನ್ನೂ ಒದಗಿಸಿದನು. ಆಸಕ್ತಿಕರವಾಗಿ, ಔತಣದ ಮೇಲ್ವಿಚಾರಕನು ಹೇಳಿದ್ದು: “ಎಲ್ಲರು ಹಿರಿದಿನ ದ್ರಾಕ್ಷಾರಸವನ್ನು ಮೊದಲು ಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು ಕೊಡುತ್ತಾರೆ; ನೀನು ಹಿರಿದಿನ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿದ್ದೀ.” (ಯೋಹಾನ 2:10) ಯೇಸು ಕುಡಿಕತನವನ್ನು ಉತ್ತೇಜಿಸಲಿಲ್ಲವೆಂಬುದು ನಿಶ್ಚಯ, ಏಕೆಂದರೆ ಕುಡುಕರನ್ನು ನಿಂದಾರ್ಹರೆಂದು ಅವನು ವೀಕ್ಷಿಸಿದನು. (ಲೂಕ 12:45, 46) ದ್ರಾಕ್ಷಾಮದ್ಯದ ಗುಣಮಟ್ಟದ ಬಗ್ಗೆ ಈ ಮೇಲ್ವಿಚಾರಕನು ಆಶ್ಚರ್ಯವನ್ನು ವ್ಯಕ್ತಪಡಿಸಿದಾಗ, ಕೆಲವು ಮಂದಿ ವಿವಾಹಾತಿಥಿಗಳು ಕುಡಿದು ಮತ್ತರಾದ ನಿದರ್ಶನಗಳನ್ನು ತಾನು ನೋಡಿದ್ದೇನೆಂದು ಆ ಮೇಲ್ವಿಚಾರಕನು ಸ್ಪಷ್ಟಪಡಿಸಿದನು. (ಅ. ಕೃತ್ಯಗಳು 2:15; 1 ಥೆಸಲೊನೀಕ 5:7) ಆದುದರಿಂದ, ವರನು ಮತ್ತು ಔತಣದ ಮೇಲ್ವಿಚಾರಕನಾಗಿ ವರನು ನೇಮಿಸಿದ ಭರವಸಾರ್ಹ ಕ್ರೈಸ್ತನು—ಇವರಿಬ್ಬರು ಸಹ ಉಪಸ್ಥಿತರಾಗಿರುವ ಎಲ್ಲರೂ, “ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ” ಎಂಬ ಸ್ಪಷ್ಟ ನಿರ್ದೇಶನವನ್ನು ಪಾಲಿಸುವುದನ್ನು ಖಾತರಿಮಾಡಿಕೊಳ್ಳಬೇಕು.—ಎಫೆಸ 5:18; ಜ್ಞಾನೋಕ್ತಿ 20:1; ಹೋಶೇಯ 4:11.
13 ಬೇರೆ ಸಮಾರಂಭಗಳಲ್ಲಿರುವಂತೆ, ಸಂಗೀತವಿರುವಲ್ಲಿ ಸಂಭಾಷಣೆಗೆ ಅಡಚಣೆಯಾಗದಂತೆ ಸಂಗೀತದ ಧ್ವನಿಮಟ್ಟಕ್ಕೆ ತಕ್ಕ ಗಮನವನ್ನು ಕೊಡಬೇಕು. ಕ್ರೈಸ್ತ ಹಿರಿಯನೊಬ್ಬನು ಗಮನಿಸಿದ್ದು: “ಸಂಜೆ ಕಳೆದಂತೆ, ಸಂಭಾಷಣೆ ಆವೇಶಪೂರಿತವಾಗುವಾಗ ಅಥವಾ ಡಾನ್ಸ್ ಆರಂಭಗೊಳ್ಳುವಾಗ ಸಂಗೀತದ ಧ್ವನಿಮಟ್ಟವೂ ಕೆಲವು ಬಾರಿ ಹೆಚ್ಚುತ್ತದೆ. ಯಾವುದು ಹಿನ್ನೆಲೆ ಸಂಗೀತವಾಗಿ ಆರಂಭವಾಯಿತೊ ಅದು ಈಗ ಗಟ್ಟಿಯಾಗುತ್ತಾ ಸಂಭಾಷಣೆಗೆ ಅಡ್ಡಿಮಾಡಬಲ್ಲದು. ವಿವಾಹ ಸತ್ಕಾರಕೂಟ ಹಿತಕರವಾದ ಒಡನಾಟಕ್ಕೆ ಅವಕಾಶಕೊಡುತ್ತದೆ. ಈ ಅವಕಾಶವನ್ನು ಗಟ್ಟಿಯಾದ ಸಂಗೀತವು ಕೆಡಿಸುವುದಾದರೆ ಅದೆಷ್ಟು ವಿಷಾದಕರ!” ಈ ವಿಷಯದಲ್ಲಿ ಸಹ ವರನೂ ಔತಣದ ಮೇಲ್ವಿಚಾರಕನೂ ಜವಾಬ್ದಾರಿಯಿಂದ ವರ್ತಿಸುವ ಅಗತ್ಯವಿದೆ. ಯಾವ ರೀತಿಯ ಸಂಗೀತ ನುಡಿಸಲ್ಪಡಬೇಕು ಮತ್ತು ಸಂಗೀತದ ಧ್ವನಿ ಎಷ್ಟಿರಬೇಕೆಂಬ ಜವಾಬ್ದಾರಿಯನ್ನು ಸಂಗೀತಕಾರರಿಗೆ—ಅವರು ಬಾಡಿಗೆಗೆ ಹಿಡಿಯಲ್ಪಟ್ಟವರಾಗಿರಲಿ, ಅಲ್ಲವಾಗಿರಲಿ—ಒಪ್ಪಿಸಿಕೊಡಬಾರದು. ಪೌಲನು ಬರೆದುದು: “ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ.” (ಕೊಲೊಸ್ಸೆ 3:17) ವಿವಾಹದ ಔತಣದ (ಅಥವಾ ರಿಸೆಪ್ಷನ್) ಬಳಿಕ ಅತಿಥಿಗಳು ತಮ್ಮ ಮನೆಗಳಿಗೆ ಹೋದಾಗ, ದಂಪತಿಗಳು ಎಲ್ಲವನ್ನೂ ಯೇಸುವಿನ ಹೆಸರಿನಲ್ಲಿ ಮಾಡಿದರೆಂದು ಹೇಳುವಷ್ಟರ ಮಟ್ಟಿಗೆ ಆ ಸಂಗೀತವಿತ್ತೆಂದು ಅವರು ನೆನಸಿಕೊಳ್ಳುವರೊ? ವಿಷಯವು ಹಾಗಿರಬೇಕು.
14 ಹೌದು, ಅಚ್ಚುಕಟ್ಟಾಗಿ ಏರ್ಪಡಿಸಲಾದ ವಿವಾಹವೊಂದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಸಾಧ್ಯವಿದೆ. ಮದುವೆಯಾಗಿ 30 ವರುಷಗಳಾಗಿರುವ ಆಡಾಮ್ ಮತ್ತು ಎಡೀಟಾ ಎಂಬವರು ಒಂದು ವಿವಾಹದ ಕುರಿತು ಹೀಗೆಂದರು: “ಅಲ್ಲಿನ ಕ್ರೈಸ್ತ ಪರಿಸರವನ್ನು ನಾವು ನಿಜವಾಗಿಯೂ ಅನುಭವಿಸಸಾಧ್ಯವಾಯಿತು. ಯೆಹೋವನನ್ನು ಸ್ತುತಿಸುವ ಗೀತೆಗಳಲ್ಲದೆ ಇತರ ಉತ್ತಮ ರೀತಿಯ ಮನೋರಂಜನೆಯೂ ಅಲ್ಲಿತ್ತು. ಡಾನ್ಸಿಂಗ್ ಮತ್ತು ಸಂಗೀತ ಎರಡನೆಯ ಸ್ಥಾನದಲ್ಲಿತ್ತು. ಅದು ಹಿತಕರವೂ ಭಕ್ತಿವರ್ಧಕವೂ ಆಗಿತ್ತು ಮತ್ತು ಸಕಲವೂ ಬೈಬಲ್ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿತ್ತು.” ಹೌದು, ಕ್ರಿಯೆಗಳಿಂದ ತಮ್ಮ ನಂಬಿಕೆಯನ್ನು ರುಜುಪಡಿಸಲು ವಧೂವರರು ಅನೇಕ ವಿಷಯಗಳನ್ನು ಮಾಡಸಾಧ್ಯವಿದೆ.
ವಿವಾಹದ ಉಡುಗೊರೆಗಳು
15 ಅನೇಕ ದೇಶಗಳಲ್ಲಿ ವಿವಾಹವಾಗುತ್ತಿರುವವರಿಗೆ ಬಂಧುಮಿತ್ರರು ಉಡುಗೊರೆಯನ್ನು ಕೊಡುವುದು ಸಾಮಾನ್ಯ. ನೀವು ಹಾಗೆ ಉಡುಗೊರೆಯನ್ನು ಕೊಡಬಯಸುವಲ್ಲಿ ಯಾವ ವಿಷಯವನ್ನು ಮನಸ್ಸಿನಲ್ಲಿಡಬಹುದು? ಒಳ್ಳೆದು, ಅಪೊಸ್ತಲ ಯೋಹಾನನು ‘ಬದುಕುಬಾಳಿನ ಡಂಬದ’ ಕುರಿತು ಏನು ಹೇಳಿದನೆಂದು ನೆನಪಿಸಿಕೊಳ್ಳಿ. ಅವನು ಅಂತಹ ಬೆಡಗನ್ನು, ತಮ್ಮ ನಂಬಿಕೆಯನ್ನು ಕ್ರಿಯೆಯ ಮೂಲಕ ತೋರಿಸುವ ಕ್ರೈಸ್ತರಿಗೆ ಜೋಡಿಸದೆ, ‘ಗತಿಸಿಹೋಗುವ ಲೋಕಕ್ಕೆ’ ಜೋಡಿಸಿದನು. (1 ಯೋಹಾನ 2:16, 17) ಯೋಹಾನನ ಈ ಪ್ರೇರಿತ ಅವಲೋಕನವನ್ನು ಮನಸ್ಸಿನಲ್ಲಿಟ್ಟುಕೊಂಡು, ನವದಂಪತಿಗಳು ತಮಗೆ ಉಡುಗೊರೆಯನ್ನು ನೀಡಿದವರ ಹೆಸರನ್ನು ಎಲ್ಲರಿಗೆ ತಿಳಿಯಪಡಿಸಬೇಕೊ? ಮಕೆದೋನ್ಯ ಮತ್ತು ಅಖಾಯದ ಕ್ರೈಸ್ತರು ಯೆರೂಸಲೇಮಿನ ಸಹೋದರರಿಗೆ ದಾನವನ್ನು ಕೊಟ್ಟರು; ಆದರೆ ಅವರ ಹೆಸರುಗಳನ್ನು ಪ್ರಕಟಿಸಲಾಯಿತೆಂಬುದರ ಬಗ್ಗೆ ಯಾವ ಸೂಚನೆಯೂ ಇಲ್ಲ. (ರೋಮಾಪುರ 15:26) ವಿವಾಹದ ಉಡುಗೊರೆಯನ್ನು ಕೊಡುವ ಅನೇಕ ಕ್ರೈಸ್ತರು ತಮ್ಮ ಕಡೆಗೆ ಅನುಚಿತ ಗಮನವನ್ನು ಸೆಳೆದುಕೊಳ್ಳದಿರಲಿಕ್ಕಾಗಿ ತಮ್ಮ ಹೆಸರನ್ನು ತಿಳಿಯಪಡಿಸದಿರಲು ಬಯಸುವರು. ಈ ಸಂಬಂಧದಲ್ಲಿ ಮತ್ತಾಯ 6:1-4ರಲ್ಲಿರುವ ಯೇಸುವಿನ ಸಲಹೆಯನ್ನು ಪುನರ್ವಿಮರ್ಶಿಸಿರಿ.
16 ಉಡುಗೊರೆ ಕೊಡುವವರ ಹೆಸರನ್ನು ತಿಳಿಯಪಡಿಸುವುದು, ಯಾವುದು ಹೆಚ್ಚು ಉತ್ತಮ ಕೊಡುಗೆ ಅಥವಾ ಯಾವುದು ಹೆಚ್ಚು ದುಬಾರಿ ಎಂಬ ಕಾರಣದಿಂದ ‘ಸ್ಪರ್ಧೆಯನ್ನು ಕೆದಕಿ ಮೇಲೆಬ್ಬಿಸುವುದಕ್ಕೆ’ ನಡೆಸಸಾಧ್ಯವಿದೆ. ಆದುದರಿಂದ ವಿವೇಕಿಗಳಾದ ಕ್ರೈಸ್ತ ನವದಂಪತಿಗಳು ಉಡುಗೊರೆಯನ್ನು ನೀಡಿದವರ ಹೆಸರುಗಳನ್ನು ಬಹಿರಂಗವಾಗಿ ಪ್ರಕಟಪಡಿಸುವುದಿಲ್ಲ. ಹಾಗೆ ಹೆಸರುಗಳನ್ನು ಪ್ರಕಟಿಸುವುದು ಉಡುಗೊರೆಯನ್ನು ನೀಡಲು ಸಾಧ್ಯವಾಗದವರಿಗೆ ಮುಜುಗರವನ್ನುಂಟುಮಾಡುವುದು. (ಗಲಾತ್ಯ 5:26; 6:10, NW) ಒಂದು ಉಡುಗೊರೆಯನ್ನು ಯಾರು ಕೊಟ್ಟರೆಂಬುದನ್ನು ವಧೂವರರು ತಿಳಿಯುವುದು ತಪ್ಪಲ್ಲವೆಂಬುದು ಒಪ್ಪಿಕೊಳ್ಳುವ ವಿಷಯ. ಅದನ್ನು ಅವರು ಉಡುಗೊರೆಯ ಜೊತೆಗಿರುವ ಕಾರ್ಡಿನಿಂದ ತಿಳಿದುಕೊಳ್ಳಸಾಧ್ಯವಿದೆ, ಆದರೆ ಅದನ್ನು ಬಹಿರಂಗವಾಗಿ ಓದುವುದಿಲ್ಲ. ವಿವಾಹದ ಕೊಡುಗೆಗಳನ್ನು ಕೊಳ್ಳುವಾಗ, ಕೊಡುವಾಗ ಮತ್ತು ಪಡೆಯುವಾಗ, ನಮ್ಮ ನಂಬಿಕೆ ನಮ್ಮ ಕ್ರಿಯೆಗಳನ್ನು ಇಂತಹ ವೈಯಕ್ತಿಕ ವಿಷಯದಲ್ಲಿಯೂ ಪ್ರಭಾವಿಸುತ್ತಿದೆಯೆಂದು ರುಜುಪಡಿಸುವ ಸಂದರ್ಭ ನಮ್ಮೆಲ್ಲರಿಗೂ ಇದೆ.a
17 ನಮ್ಮ ನಂಬಿಕೆಯನ್ನು ರುಜುಪಡಿಸಿ ತೋರಿಸಲು ನೈತಿಕವಾಗಿ ಒಳ್ಳೆಯ ರೀತಿಯಲ್ಲಿ ಜೀವಿಸುವುದು, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ಸಾರುವ ಕಾರ್ಯದಲ್ಲಿ ಭಾಗವಹಿಸುವುದಷ್ಟೇ ಸಾಕಾಗುವುದಿಲ್ಲ. ನಾವು ಮಾಡುವ ಸಕಲ ವಿಷಯಗಳನ್ನು ನಮ್ಮ ನಂಬಿಕೆಯು ಪ್ರಭಾವಿಸತಕ್ಕದು. ಇಂಥ ಸಜೀವವಾದ ನಂಬಿಕೆ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇರಲಿ. ಹೌದು, ನಾವು ಮೇಲೆ ಚರ್ಚಿಸಲ್ಪಟ್ಟಿರುವ ವಿಷಯಗಳ ಸಮೇತ ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲಿ ಕ್ರಿಯೆಗಳನ್ನು ‘ಸಂಪೂರ್ಣವಾದದ್ದಾಗಿ’ ಮಾಡುವ ಮೂಲಕ ನಮ್ಮ ನಂಬಿಕೆಯನ್ನು ತೋರಿಸಬಲ್ಲೆವು.—ಪ್ರಕಟನೆ 3:2.
18 ಯೇಸು ತನ್ನ ನಂಬಿಗಸ್ತ ಅಪೊಸ್ತಲರ ಪಾದಗಳನ್ನು ತೊಳೆಯುವ ದೀನ ಕೃತ್ಯದ ಮೂಲಕ ಉತ್ತಮ ಮಾದರಿಯನ್ನಿಟ್ಟನು. ಅದನ್ನು ಮಾಡಿದ ಅನಂತರ “ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು” ಎಂದು ಹೇಳಿದನು. (ಯೋಹಾನ 13:4-17) ಸಾಮಾನ್ಯವಾಗಿ, ನಾವಿಂದು ವಾಸಿಸುತ್ತಿರುವ ಸ್ಥಳಗಳಲ್ಲಿ ನಮ್ಮ ಮನೆಗೆ ಬರುವ ಅತಿಥಿ ಇಲ್ಲವೆ ಇನ್ನೊಬ್ಬ ವ್ಯಕ್ತಿಯ ಪಾದಗಳನ್ನು ತೊಳೆಯುವುದಾಗಲಿ ಅಥವಾ ಅಂಥ ರೂಢಿಯಾಗಲಿ ಇರಲಿಕ್ಕಿಲ್ಲ. ಆದರೂ, ನಾವು ಈ ಲೇಖನದಲ್ಲಿ ಪರಿಗಣಿಸಿರುವಂತೆ ಸಾಮಾಜಿಕ ಗೋಷ್ಠಿಗಳು ಮತ್ತು ಕ್ರೈಸ್ತ ವಿವಾಹ ಸಮಾರಂಭಗಳಲ್ಲಿ ಮಾತ್ರವಲ್ಲ ಜೀವನದ ಇತರ ಎಲ್ಲ ವಿಷಯಗಳಲ್ಲಿ ನಮ್ಮ ನಂಬಿಕೆಯನ್ನು ಪ್ರೀತಿಯ ಪರಚಿಂತನೆಯ ಕಾರ್ಯಗಳ ಮೂಲಕ ತೋರಿಸಬಲ್ಲೆವು. ಇದನ್ನು ನಾವು ವಿವಾಹವಾಗುತ್ತಿರುವ ಸಮಯದಲ್ಲಿ ಅಥವಾ ವಿವಾಹದ ಅತಿಥಿಗಳಾಗಿರುವ ಸಮಯದಲ್ಲಿ ಇಲ್ಲವೆ ತಮ್ಮ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರಿಸಬಯಸುವ ಕ್ರೈಸ್ತರ ಸಂತೋಷಕೂಟಗಳಲ್ಲಿ ತೋರಿಸಬಲ್ಲೆವು. (w06 10/15)
[ಪಾದಟಿಪ್ಪಣಿ]
a ವಿವಾಹಗಳು ಮತ್ತು ಅವುಗಳೊಂದಿಗೆ ಏರ್ಪಡಿಸಲಾಗುವ ರಿಸೆಪ್ಷನ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು “ನಿಮ್ಮ ವಿವಾಹದಿನದ ಹರ್ಷ ಮತ್ತು ಘನತೆಯನ್ನು ಹೆಚ್ಚಿಸಿರಿ” ಎಂಬ ಮುಂದಿನ ಲೇಖನದಲ್ಲಿ ಕೊಡಲಾಗಿದೆ.
ಹೇಗೆ ಉತ್ತರ ಕೊಡುವಿರಿ?
• ಸಾಮಾಜಿಕ ಗೋಷ್ಠಿಯನ್ನು ಏರ್ಪಡಿಸುವಾಗ
• ವಿವಾಹ ಇಲ್ಲವೆ ರಿಸೆಪ್ಷನ್ ಏರ್ಪಡಿಸುವಾಗ
• ವಿವಾಹ ಉಡುಗೊರೆಗಳನ್ನು ಕೊಡುವಾಗ ಇಲ್ಲವೆ ಪಡೆಯುವಾಗ
ನಿಮ್ಮ ನಂಬಿಕೆಯನ್ನು ಹೇಗೆ ರುಜುಪಡಿಸುವಿರಿ?
[ಅಧ್ಯಯನ ಪ್ರಶ್ನೆಗಳು]
1. ಆದಿಕ್ರೈಸ್ತರು ನಂಬಿಕೆ ಮತ್ತು ಕ್ರಿಯೆ ಇವೆರಡಕ್ಕೂ ಏಕೆ ಗಮನಕೊಟ್ಟರು?
2. ಕ್ರೈಸ್ತರು ತಮ್ಮ ನಂಬಿಕೆಯ ವಿಷಯದಲ್ಲಿ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?
3. ಗೋಷ್ಠಿಗಳಲ್ಲಿ ಭಾಗವಹಿಸುವ ವಿಷಯದಲ್ಲಿ ಬೈಬಲಿನ ದೃಷ್ಟಿಕೋನವೇನು?
4. ಒಂದು ಗೋಷ್ಠಿಯನ್ನು ಏರ್ಪಡಿಸುವವನು ಯಾವುದರಲ್ಲಿ ಆಸಕ್ತನಾಗಿರಬೇಕು?
5. ಮದ್ಯಸಾರ ಪಾನೀಯಗಳನ್ನು ಒದಗಿಸಿಬೇಕೊ, ಸಂಗೀತವನ್ನು ಏರ್ಪಡಿಸಬೇಕೊ ಎಂಬ ವಿಷಯವನ್ನು ಆತಿಥೇಯನು ಏಕೆ ಜಾಗರೂಕವಾಗಿ ಪರಿಗಣಿಸಬೇಕು?
6. ತನ್ನದು ಸಜೀವವಾದ ನಂಬಿಕೆಯೆಂದು ಸಂಭಾಷಣೆ ಹಾಗೂ ಇತರ ಚಟುವಟಿಕೆಗಳಲ್ಲಿ ಆತಿಥೇಯನು ಹೇಗೆ ತೋರಿಸಬಲ್ಲನು?
7. ವಿವಾಹಗಳನ್ನು ಮತ್ತು ಸಂಬಂಧಿತ ಗೋಷ್ಠಿಗಳನ್ನು ಯೋಜಿಸುವುದು ಚಿಂತನಾರ್ಹವೇಕೆ?
8, 9. ಅನೇಕ ವಿವಾಹ ಸಮಾರಂಭದ ಆಚರಣೆಗಳು ನಾವು 1 ಯೋಹಾನ 2:16, 17ರಲ್ಲಿ ಓದುವುದನ್ನು ಸರಿಯೆಂದು ಹೇಗೆ ತೋರಿಸುತ್ತವೆ?
10. (ಎ) ಒಂದು ಸರಳ ವಿವಾಹಕ್ಕಾಗಿ ಯೋಜಿಸುವುದು ಅಗತ್ಯವೇಕೆ? (ಬಿ) ಆಮಂತ್ರಿಸಲ್ಪಡುವವರ ಬಗ್ಗೆ ಹೇಗೆ ನಿರ್ಣಯ ಮಾಡತಕ್ಕದು?
11. “ಔತಣದ ಮೇಲ್ವಿಚಾರಕನು” ವಿವಾಹದಲ್ಲಿ ಯಾವ ಪಾತ್ರವನ್ನು ವಹಿಸಬಲ್ಲನು?
12. ಮದ್ಯಸಾರ ಪಾನೀಯಗಳ ಬಳಕೆಯ ಬಗ್ಗೆ ವರನು ಏನನ್ನು ಪರ್ಯಾಲೋಚಿಸಬೇಕು?
13. ವಿವಾಹದೌತಣದಲ್ಲಿ ಸಂಗೀತವನ್ನು ದಂಪತಿಗಳು ಏರ್ಪಡಿಸುವಲ್ಲಿ ಅವರೇನನ್ನು ಪರಿಗಣಿಸಬೇಕು ಮತ್ತು ಏಕೆ?
14. ಒಂದು ವಿವಾಹದ ಕುರಿತು ಕ್ರೈಸ್ತರಲ್ಲಿ ಯಾವುದು ಸವಿನೆನಪಾಗಿರಬೇಕು?
15. ವಿವಾಹದ ಉಡುಗೊರೆಗಳ ವಿಷಯದಲ್ಲಿ ಯಾವ ಬೈಬಲ್ ಸಲಹೆಯನ್ನು ಅನ್ವಯಿಸಿಕೊಳ್ಳಸಾಧ್ಯವಿದೆ?
16. ನವದಂಪತಿಗಳು ವಿವಾಹ ಉಡುಗೊರೆಗಳ ವಿಷಯದಲ್ಲಿ ಇತರರಿಗೆ ಮುಜುಗರವನ್ನು ಉಂಟುಮಾಡುವುದರಿಂದ ಹೇಗೆ ದೂರವಿರಬಲ್ಲರು?
17. ತಮ್ಮ ನಂಬಿಕೆ ಮತ್ತು ಕ್ರಿಯೆಗಳ ವಿಷಯದಲ್ಲಿ ಕ್ರೈಸ್ತರಿಗೆ ಯಾವ ಗುರಿ ಇರಬೇಕು?
18. ಯೋಹಾನ 13:17ರ ಮಾತುಗಳು ಕ್ರೈಸ್ತ ವಿವಾಹಗಳು ಮತ್ತು ಗೋಷ್ಠಿಗಳ ಸಂಬಂಧದಲ್ಲಿ ಹೇಗೆ ನಿಜವಾಗಿ ಪರಿಣಮಿಸಬಲ್ಲವು?
[ಪುಟ 17ರಲ್ಲಿರುವ ಚಿತ್ರ]
ಕೆಲವರನ್ನು ಮಾತ್ರ ಆಮಂತ್ರಿಸುವುದಾದರೂ ‘ಮೇಲಣಿಂದ ಬರುವ ವಿವೇಕದಿಂದ’ ಮಾರ್ಗದರ್ಶಿಸಲ್ಪಡಿರಿ