ಯುವಜನರೇ, ದೇವರಿಗೆ ಗೌರವತರುವಂಥ ಗುರಿಗಳನ್ನು ಬೆನ್ನಟ್ಟಿರಿ
“ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ.”—1 ತಿಮೊಥೆಯ 4:7.
“ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. . . . ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನೆಂಬದು ನಿಮಗೆ ಗೊತ್ತುಂಟು.” (ಫಿಲಿಪ್ಪಿ 2:20, 22) ಅಪೊಸ್ತಲ ಪೌಲನು ಫಿಲಿಪ್ಪಿಯಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಶಿಫಾರಸ್ಸಿನ ಆ ಪ್ರಶಂಸೆಭರಿತ ಮಾತುಗಳನ್ನು ಸೇರಿಸಿದನು. ಅವನು ಯಾರ ಬಗ್ಗೆ ಹೇಳುತ್ತಿದ್ದನು? ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಯುವಪ್ರಾಯದ ಸಂಗಡಿಗನಾದ ತಿಮೊಥೆಯನ ಬಗ್ಗೆ. ಪೌಲನ ಮಮತೆ ಹಾಗೂ ಭರವಸೆಯನ್ನು ದೃಢೀಕರಿಸಿದ ಈ ಮಾತುಗಳು ತಿಮೊಥೆಯನನ್ನು ಎಷ್ಟೊಂದು ಉತ್ತೇಜಿಸಿರಬಹುದು ಎಂಬುದನ್ನು ತುಸು ಯೋಚಿಸಿ!
2 ತಿಮೊಥೆಯನಂತೆ ಆಧ್ಯಾತ್ಮಿಕ-ಮನಸ್ಸುಳ್ಳ ಯುವ ಜನರು ಯೆಹೋವನ ಜನರ ನಡುವೆ ಒಂದು ಅಮೂಲ್ಯ ಸ್ವತ್ತಾಗಿದ್ದಾರೆ. (ಕೀರ್ತನೆ 110:3) ಪಯನೀಯರರಾಗಿ, ಮಿಷನೆರಿಗಳಾಗಿ, ನಿರ್ಮಾಣಕೆಲಸದ ಸ್ವಯಂಸೇವಕರಾಗಿ ಮತ್ತು ಬೆತೆಲಿಗರಾಗಿ ಸೇವೆಸಲ್ಲಿಸುತ್ತಿರುವ ಅನೇಕಾನೇಕ ಯುವಜನರು ಇಂದು ದೇವರ ಸಂಘಟನೆಗೆ ಆಶೀರ್ವಾದವಾಗಿದ್ದಾರೆ. ಇತರ ಜವಾಬ್ದಾರಿಗಳನ್ನು ಹೊತ್ತಿರುವ ಆದರೆ ಅದೇ ಸಮಯದಲ್ಲಿ ಸಭಾ ಚಟುವಟಿಕೆಗಳಲ್ಲಿ ಹುರುಪಿನಿಂದ ಪಾಲ್ಗೊಳ್ಳುತ್ತಿರುವವರು ಸಹ ಬಹಳಷ್ಟು ಶ್ಲಾಘನೆಗೆ ಯೋಗ್ಯರಾಗಿದ್ದಾರೆ. ಇಂಥ ಯುವ ಜನರು, ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಗೌರವ ತರುವಂಥ ಗುರಿಗಳನ್ನು ಬೆನ್ನಟ್ಟುವುದರಿಂದ ಬರುವ ನಿಜ ಸಂತೃಪ್ತಿಯನ್ನು ಆನಂದಿಸುತ್ತಾರೆ. ಅವರು ನಿಜವಾಗಿಯೂ ‘ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡುತ್ತಿದ್ದಾರೆ.’—1 ತಿಮೊಥೆಯ 4:7, 8.
3 ಒಬ್ಬ ಯುವ ವ್ಯಕ್ತಿಯಾಗಿ ನೀವು ನಿರ್ದಿಷ್ಟ ಆಧ್ಯಾತ್ಮಿಕ ಗುರಿಗಳನ್ನು ತಲಪಲು ಪ್ರಯತ್ನಿಸುತ್ತಿದ್ದೀರೋ? ಇದನ್ನು ಮಾಡಲು ಬೇಕಾದ ಸಹಾಯ ಹಾಗೂ ಉತ್ತೇಜನ ನಿಮಗೆ ಎಲ್ಲಿ ಸಿಗಬಲ್ಲದು? ಈ ಪ್ರಾಪಂಚಿಕಭಾವದ ಲೋಕದಿಂದ ಬರುವ ಒತ್ತಡಗಳನ್ನು ನೀವು ಹೇಗೆ ಪ್ರತಿರೋಧಿಸಬಲ್ಲಿರಿ? ದೇವರಿಗೆ ಗೌರವತರುವಂಥ ಗುರಿಗಳನ್ನು ಬೆನ್ನಟ್ಟುವಲ್ಲಿ ನೀವು ಯಾವ ರೀತಿಯ ಆಶೀರ್ವಾದಗಳನ್ನು ನಿರೀಕ್ಷಿಸಬಲ್ಲಿರಿ? ತಿಮೊಥೆಯನ ಜೀವನ ಹಾಗೂ ಜೀವನವೃತ್ತಿಯನ್ನು ಪರಿಗಣಿಸುವ ಮೂಲಕ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ.
ತಿಮೊಥೆಯನ ಹಿನ್ನೆಲೆ
4 ತಿಮೊಥೆಯನು ಗಲಾತ್ಯ ಎಂಬ ರೋಮನ್ ಪ್ರಾಂತದ ಒಂದು ಚಿಕ್ಕ ಪಟ್ಟಣವಾಗಿದ್ದ ಲುಸ್ತ್ರದಲ್ಲಿ ಬೆಳೆದನು. ಸಾ.ಶ. 47ರಲ್ಲಿ ಪೌಲನು ಲುಸ್ತ್ರದಲ್ಲಿ ಸಾರಿದನು. ಬಹುಶಃ ಆ ಸಮಯದಲ್ಲೇ, ಹದಿವಯಸ್ಕನಾಗಿದ್ದ ತಿಮೊಥೆಯನು ಕ್ರೈಸ್ತತ್ವದ ಕುರಿತಾಗಿ ತಿಳಿದುಕೊಂಡನು. ಸ್ಥಳಿಕ ಕ್ರೈಸ್ತ ಸಹೋದರರ ನಡುವೆ ತಿಮೊಥೆಯನು ಸ್ವಲ್ಪ ಸಮಯದೊಳಗೆಯೇ ಒಂದು ಒಳ್ಳೇ ಹೆಸರನ್ನು ಮಾಡಿಕೊಂಡನು. ಎರಡು ವರ್ಷಗಳ ಬಳಿಕ ಪೌಲನು ಲುಸ್ತ್ರಕ್ಕೆ ಹಿಂದಿರುಗಿ ಬಂದನು ಮತ್ತು ತಿಮೊಥೆಯನು ಮಾಡಿದ್ದಂಥ ಪ್ರಗತಿಯ ಕುರಿತಾಗಿ ತಿಳಿದುಕೊಂಡನು. ಆಗ ಪೌಲನು ತಿಮೊಥೆಯನನ್ನು ತನ್ನ ಮಿಷನೆರಿ ಸಂಗಡಿಗನಾಗಿ ಸೇವೆಮಾಡಲು ಆಯ್ಕೆಮಾಡಿದನು. (ಅ. ಕೃತ್ಯಗಳು 14:5-20; 16:1-3) ತಿಮೊಥೆಯನು ಪ್ರೌಢನಾದಂತೆ ಅವನಿಗೆ ಇನ್ನೂ ಹೆಚ್ಚಿನ ಜವಾಬ್ದಾರಿಗಳನ್ನು ಕೊಡಲಾಯಿತು. ಇದರಲ್ಲಿ, ಸಹೋದರರನ್ನು ಬಲಪಡಿಸಲಿಕ್ಕಾಗಿ ಮಹತ್ವಪೂರ್ಣ ಸಂಚಾರಗಳನ್ನು ಕೈಗೊಳ್ಳುವುದು ಸೇರಿತ್ತು. ಪೌಲನು ಸಾ.ಶ. 65ರಷ್ಟಕ್ಕೆ ಸೆರೆಮನೆಯಿಂದ ತಿಮೊಥೆಯನಿಗೆ ಬರೆಯುತ್ತಿದ್ದ ಸಮಯದಲ್ಲಿ ಅವನು ಎಫೆಸದಲ್ಲಿ ಒಬ್ಬ ಕ್ರೈಸ್ತ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದನು.
5 ತಿಮೊಥೆಯನು ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟಲು ಆಯ್ಕೆಮಾಡಿದ್ದನೆಂಬುದು ಸುವ್ಯಕ್ತ. ಆದರೆ ಅವನು ಇದನ್ನು ಮಾಡುವಂತೆ ಯಾವುದು ಪ್ರೇರಿಸಿತು? ತಿಮೊಥೆಯನಿಗೆ ಬರೆದ ಎರಡನೇ ಪತ್ರದಲ್ಲಿ ಪೌಲನು ಎರಡು ನಿರ್ಣಾಯಕ ಅಂಶಗಳನ್ನು ತಿಳಿಸಿದನು. ಅವನು ಬರೆದುದು: “ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. ಚಿಕ್ಕಂದಿನಿಂದಲೂ ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ.” (2 ತಿಮೊಥೆಯ 3:14, 15) ಮೊದಲಾಗಿ ನಾವು, ತಿಮೊಥೆಯನ ಆಯ್ಕೆಗಳನ್ನು ಪ್ರಭಾವಿಸುವುದರಲ್ಲಿ ಇತರ ಕ್ರೈಸ್ತರಿಗಿದ್ದ ಪಾತ್ರವನ್ನು ಪರಿಶೀಲಿಸೋಣ.
ಸಕಾರಾತ್ಮಕ ಪ್ರಭಾವಬೀರಬಲ್ಲ ವ್ಯಕ್ತಿಗಳಿಂದ ಪ್ರಯೋಜನಹೊಂದಿರಿ
6 ತಿಮೊಥೆಯನು ಧಾರ್ಮಿಕವಾಗಿ ವಿಭಜಿಸಲ್ಪಟ್ಟಿದ್ದ ಕುಟುಂಬದಲ್ಲಿ ಬೆಳೆದನು. ಅವನ ತಂದೆ ಗ್ರೀಕ್ ಜನಾಂಗದವನಾಗಿದ್ದನು ಮತ್ತು ಅವನ ತಾಯಿ ಯೂನೀಕೆ ಹಾಗೂ ಅಜ್ಜಿ ಲೋವಿ ಯೆಹೂದಿ ಮೂಲದವರಾಗಿದ್ದರು. (ಅ. ಕೃತ್ಯಗಳು 16:1) ಯೂನೀಕೆ ಮತ್ತು ಲೋವಿ ತಿಮೊಥೆಯನಿಗೆ ಶೈಶವಾವಸ್ಥೆಯಿಂದಲೇ ಹೀಬ್ರು ಶಾಸ್ತ್ರಗಳ ಸತ್ಯಗಳನ್ನು ಕಲಿಸಿದರು. ಅವರು ಕ್ರೈಸ್ತರಾದ ಬಳಿಕ, ತಿಮೊಥೆಯನು ಕ್ರೈಸ್ತ ಬೋಧನೆಗಳನ್ನು ನಂಬುವಂತೆ ಮನಗಾಣಿಸಲು ಅವರು ಸಹಾಯಮಾಡಿದರೆಂಬುದು ನಿಸ್ಸಂದೇಹ. ಸ್ಪಷ್ಟವಾಗಿಯೇ, ತಿಮೊಥೆಯನು ತನಗೆ ಸಿಕ್ಕಿದ ಈ ಉತ್ಕೃಷ್ಟ ತರಬೇತಿಯ ಪೂರ್ಣ ಪ್ರಯೋಜನ ಪಡೆದನು. ಪೌಲನು ಹೇಳಿದ್ದು: “ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿಗೆ ಬಂತು. ಆ ನಂಬಿಕೆಯು ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು; ಹಾಗೆಯೇ ನಿನ್ನಲ್ಲಿಯೂ ವಾಸವಾಗಿದೆ ಎಂದು ದೃಢವಾಗಿ ನಂಬಿದ್ದೇನೆ.”—2 ತಿಮೊಥೆಯ 1:5.
7 ಇಂದು ಸಹ ಅನೇಕ ಯುವ ಜನರು ದೇವಭಯವುಳ್ಳ ಹೆತ್ತವರು ಹಾಗೂ ಅಜ್ಜಅಜ್ಜಿಯರಿಂದ ಪ್ರಯೋಜನಪಡೆದಿದ್ದಾರೆ. ಇವರು, ಲೋವಿ ಮತ್ತು ಯೂನೀಕೆಯಂತೆ ಆಧ್ಯಾತ್ಮಿಕ ಗುರಿಗಳ ಮಹತ್ವವನ್ನು ಮನಗಾಣುವವರಾಗಿದ್ದಾರೆ. ಉದಾಹರಣೆಗಾಗಿ ಸಮೀರಾ ಎಂಬವಳು ಹದಿವಯಸ್ಕಳಾಗಿದ್ದಾಗ ತನ್ನ ಹೆತ್ತವರೊಂದಿಗೆ ನಡೆಸುತ್ತಿದ್ದ ದೀರ್ಘ ಮಾತುಕತೆಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾಳೆ. ಅವಳನ್ನುವುದು: “ಯಾವುದೇ ವಿಷಯದ ಬಗ್ಗೆ ಯೆಹೋವನ ದೃಷ್ಟಿಕೋನವನ್ನು ಹೊಂದುವಂತೆ ಮತ್ತು ಸಾರುವ ಕೆಲಸವನ್ನು ನನ್ನ ಆದ್ಯತೆಯನ್ನಾಗಿ ಮಾಡುವಂತೆ ನನ್ನ ತಂದೆತಾಯಿ ಕಲಿಸಿದರು. ಪೂರ್ಣ ಸಮಯದ ಸೇವೆಯನ್ನು ಬೆನ್ನಟ್ಟುವಂತೆ ಅವರು ನನ್ನನ್ನು ಯಾವಾಗಲೂ ಪ್ರಚೋದಿಸಿದರು.” ಸಮೀರಾ ತನ್ನ ಹೆತ್ತವರು ಕೊಟ್ಟ ಉತ್ತೇಜನಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದಳು ಮತ್ತು ಈಗ ತನ್ನ ದೇಶದಲ್ಲಿರುವ ಬೆತೆಲ್ ಕುಟುಂಬದ ಸದಸ್ಯಳಾಗಿ ಸೇವೆಸಲ್ಲಿಸುವ ವಿಶೇಷ ಸುಯೋಗದಲ್ಲಿ ಆನಂದಿಸುತ್ತಿದ್ದಾಳೆ. ನೀವು ಆಧ್ಯಾತ್ಮಿಕ ಗುರಿಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ನಿಮ್ಮ ಹೆತ್ತವರು ಉತ್ತೇಜಿಸುತ್ತಿರುವುದಾದರೆ ಅವರ ಬುದ್ಧಿವಾದವನ್ನು ಜಾಗರೂಕತೆಯಿಂದ ಪರಿಗಣಿಸಿರಿ. ಅವರು ನಿಮಗೋಸ್ಕರ ಯಾವಾಗಲೂ ಅತ್ಯುತ್ತಮವಾದದ್ದನ್ನೇ ಬಯಸುತ್ತಾರೆ.—ಜ್ಞಾನೋಕ್ತಿ 1:5.
8 ಕ್ರೈಸ್ತ ಸಹೋದರತ್ವದೊಳಗೆ ನಿಮ್ಮ ಭಕ್ತಿವೃದ್ಧಿಮಾಡುವಂಥ ಒಡನಾಡಿಗಳನ್ನು ಹುಡುಕುವುದು ಸಹ ಮಹತ್ವದ ಸಂಗತಿ ಆಗಿದೆ. ತಿಮೊಥೆಯನು ತನ್ನ ಸ್ವಂತ ಸಭೆಯಲ್ಲಿದ್ದ ಕ್ರೈಸ್ತ ಹಿರಿಯರೊಂದಿಗೆ ಹಾಗೂ 30 ಕಿಲೊಮೀಟರ್ ದೂರದ ಐಕೋನ್ಯ ಸಭೆಯವರೊಂದಿಗೆ ಒಳ್ಳೇ ಹೆಸರನ್ನು ಮಾಡಿಕೊಂಡನು. (ಅ. ಕೃತ್ಯಗಳು 16:1, 2) ಸದಾ ಚಟುವಟಿಕಾಭರಿತನೂ ಯಾವುದೇ ಕೆಲಸಕ್ಕೆ ಮುಂತೊಡಗುವ ಸ್ವಭಾವದವನೂ ಆಗಿದ್ದ ಪೌಲನೊಂದಿಗೆ ಅವನು ಆಪ್ತ ಗೆಳೆತನವನ್ನು ಬೆಳೆಸಿಕೊಂಡನು. (ಫಿಲಿಪ್ಪಿ 3:14) ತಿಮೊಥೆಯನಿಗೆ ಯಾವುದೇ ಬುದ್ಧಿವಾದ ಕೊಟ್ಟರೂ ಅವನದನ್ನು ಕೂಡಲೇ ಸ್ವೀಕರಿಸುತ್ತಿದ್ದನು ಮತ್ತು ನಂಬಿಗಸ್ತ ಮಾದರಿಗಳನ್ನು ತಡಮಾಡದೇ ಅನುಸರಿಸುತ್ತಿದ್ದನೆಂದು ಪೌಲನ ಪತ್ರಗಳು ಸೂಚಿಸುತ್ತವೆ. (1 ಕೊರಿಂಥ 4:17; 1 ತಿಮೊಥೆಯ 4:6, 12-16) ಪೌಲನು ಬರೆದುದು: “ನೀನಾದರೋ ನನ್ನನ್ನು ಅನುಸರಿಸುವವನಾಗಿದ್ದು ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘಶಾಂತಿ ಪ್ರೀತಿ ಸೈರಣೆ ಇವುಗಳನ್ನೂ . . . ತಿಳಿದವನಾಗಿದ್ದೀ.” (2 ತಿಮೊಥೆಯ 3:10) ಹೌದು, ತಿಮೊಥೆಯನು ಪೌಲನ ಮಾದರಿಯನ್ನು ನಿಕಟವಾಗಿ ಅನುಸರಿಸಿದನು. ತದ್ರೀತಿಯಲ್ಲಿ ನೀವು ಸಭೆಯಲ್ಲಿ ಆಧ್ಯಾತ್ಮಿಕ ರೀತಿಯಲ್ಲಿ ಬಲವಾಗಿರುವ ವ್ಯಕ್ತಿಗಳಿಗೆ ಆಪ್ತರಾಗುವಲ್ಲಿ, ದೃಢವಾದ ಆಧ್ಯಾತ್ಮಿಕ ಗುರಿಗಳನ್ನು ಇಟ್ಟುಕೊಳ್ಳಲು ಸಹಾಯ ಪಡೆಯುವಿರಿ.—2 ತಿಮೊಥೆಯ 2:20-22.
“ಪರಿಶುದ್ಧಗ್ರಂಥಗಳನ್ನು” ಅಧ್ಯಯನಮಾಡಿರಿ
9 ಆಧ್ಯಾತ್ಮಿಕ ಗುರಿಗಳನ್ನು ತಲಪಲಿಕ್ಕಾಗಿ, ಕೇವಲ ಒಳ್ಳೇ ಸಹವಾಸವಿದ್ದರೆ ಸಾಕೋ? ಇಲ್ಲ. ತಿಮೊಥೆಯನಂತೆ ನೀವು ‘ಪರಿಶುದ್ಧ ಗ್ರಂಥಗಳನ್ನು’ ಜಾಗರೂಕತೆಯಿಂದ ಪರಿಶೀಲಿಸಬೇಕಾಗುವುದು. ಅಧ್ಯಯನಮಾಡುವುದು ನಿಮಗೆ ಅಚ್ಚುಮೆಚ್ಚಿನ ಕೆಲಸವಾಗಿರಲಿಕ್ಕಿಲ್ಲ. ಆದರೆ ತಿಮೊಥೆಯನು ‘ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೊಳ್ಳ’ಬೇಕಿತ್ತು ಎಂಬುದನ್ನು ನೆನಪಿನಲ್ಲಿಡಿರಿ. ಕ್ರೀಡಾಪಟುಗಳು, ತಮ್ಮ ಗುರಿಗಳನ್ನು ತಲಪಲಿಕ್ಕಾಗಿ ಅನೇಕ ತಿಂಗಳುಗಳ ತನಕ ತೀವ್ರ ಸಾಧನೆ ಅಥವಾ ಕಸರತ್ತು ಮಾಡಬೇಕಾಗುತ್ತದೆ. ಅದೇ ರೀತಿಯಲ್ಲಿ ಆಧ್ಯಾತ್ಮಿಕ ಗುರಿಗಳನ್ನು ತಲಪಲಿಕ್ಕಾಗಿ ತ್ಯಾಗ ಹಾಗೂ ಗಂಭೀರ ಪ್ರಯತ್ನ ಆವಶ್ಯಕ. (1 ತಿಮೊಥೆಯ 4:7, 8, 10) ‘ಆದರೆ ಬೈಬಲಿನ ಅಧ್ಯಯನಮಾಡುವುದು ನನ್ನ ಗುರಿಗಳನ್ನು ತಲಪುವಂತೆ ಹೇಗೆ ಸಹಾಯಮಾಡುವುದು?’ ಎಂದು ನೀವು ಕೇಳಬಹುದು. ಅದು ಸಹಾಯಮಾಡುವ ಮೂರು ವಿಧಗಳನ್ನು ಪರಿಗಣಿಸೋಣ.
10 ಮೊದಲನೆಯದಾಗಿ, ಶಾಸ್ತ್ರವಚನಗಳು ನಿಮಗೆ ಸರಿಯಾದ ರೀತಿಯ ಪ್ರಚೋದನೆ ಕೊಡುವವು. ನಮ್ಮ ಸ್ವರ್ಗೀಯ ತಂದೆಯ ಅದ್ಭುತ ವ್ಯಕ್ತಿತ್ವವನ್ನು, ನಮಗೋಸ್ಕರ ಆತನ ಪ್ರೀತಿಯ ಪರಮೋಚ್ಛ ಕೃತ್ಯವನ್ನು ಮತ್ತು ತನ್ನ ನಂಬಿಗಸ್ತ ಸೇವಕರಿಗಾಗಿ ಕಾದಿರಿಸಿರುವ ನಿತ್ಯ ಆಶೀರ್ವಾದಗಳನ್ನು ಅವು ಪ್ರಕಟಪಡಿಸುತ್ತವೆ. (ಆಮೋಸ 3:7; ಯೋಹಾನ 3:16; ರೋಮಾಪುರ 15:4) ಯೆಹೋವನ ಕುರಿತಾದ ನಿಮ್ಮ ಜ್ಞಾನವು ಬೆಳೆಯುತ್ತಾ ಹೋದಂತೆ, ಆತನ ಮೇಲಿನ ನಿಮ್ಮ ಪ್ರೀತಿ ಹಾಗೂ ಆತನಿಗೆ ನಿಮ್ಮ ಜೀವವನ್ನು ಸಮರ್ಪಣೆಮಾಡುವ ಬಯಕೆಯು ಹೆಚ್ಚುತ್ತಾ ಹೋಗುವುದು.
11 ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳಲು ಕ್ರಮವಾದ ವೈಯಕ್ತಿಕ ಬೈಬಲ್ ಅಧ್ಯಯನವು ಅತ್ಯಾವಶ್ಯಕವಾಗಿತ್ತು ಎಂದು ಅನೇಕ ಯುವ ಕ್ರೈಸ್ತರು ಹೇಳುತ್ತಾರೆ. ಉದಾಹರಣೆಗಾಗಿ ಅಡೇಲ್ ಎಂಬವಳು ಒಂದು ಕ್ರೈಸ್ತ ಕುಟುಂಬದಲ್ಲಿ ಬೆಳೆದಿದ್ದಳು. ಆದರೆ ಅವಳು ಎಂದೂ ಯಾವುದೇ ಆಧ್ಯಾತ್ಮಿಕ ಗುರಿಗಳನ್ನು ಇಟ್ಟಿರಲಿಲ್ಲ. ಅವಳನ್ನುವುದು: “ಹೆತ್ತವರು ನನ್ನನ್ನು ರಾಜ್ಯ ಸಭಾಗೃಹಕ್ಕೆ ಕರಕೊಂಡು ಹೋಗುತ್ತಿದ್ದರು, ಆದರೆ ನಾನು ವೈಯಕ್ತಿಕ ಅಧ್ಯಯನವನ್ನೂ ಮಾಡುತ್ತಿರಲಿಲ್ಲ, ಕೂಟಗಳಲ್ಲಿ ಕಿವಿಗೊಡುತ್ತಿರಲೂ ಇಲ್ಲ.” ಅವಳ ಅಕ್ಕ ದೀಕ್ಷಾಸ್ನಾನ ತೆಗೆದುಕೊಂಡ ಬಳಿಕ, ಅಡೇಲ್ ಸತ್ಯವನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದಳು. “ನಾನು ಇಡೀ ಬೈಬಲನ್ನು ಓದಲಾರಂಭಿಸಿದೆ. ನಾನು ಸ್ವಲ್ಪ ಭಾಗವನ್ನು ಓದಿ, ನಂತರ ನಾನೇನನ್ನು ಓದಿದ್ದೇನೋ ಅದರ ಬಗ್ಗೆ ಒಂದು ಹೇಳಿಕೆಯನ್ನು ಬರೆದಿಡುತ್ತಿದ್ದೆ. ಈಗಲೂ ನನ್ನ ಬಳಿ ಆ ಎಲ್ಲ ಟಿಪ್ಪಣಿಗಳಿವೆ. ನಾನು ಪ್ರತಿ ವರ್ಷ ಇಡೀ ಬೈಬಲನ್ನು ಓದಿಮುಗಿಸುತ್ತೇನೆ.” ಇದರ ಪರಿಣಾಮವಾಗಿ, ಅವಳು ಯೆಹೋವನಿಗೆ ತನ್ನ ಜೀವವನ್ನು ಸಮರ್ಪಿಸಲು ಪ್ರಚೋದಿಸಲ್ಪಟ್ಟಳು. ಅವಳಿಗೊಂದು ಗಂಭೀರವಾದ ಅಂಗವೈಕಲ್ಯ ಇದೆಯಾದರೂ ಅವಳೀಗ ಒಬ್ಬ ಪಯನೀಯರ್ ಅಂದರೆ ಪೂರ್ಣ ಸಮಯದ ಶುಶ್ರೂಷಕಿ ಆಗಿದ್ದಾಳೆ.
12 ಎರಡನೆಯದಾಗಿ ನಿಮ್ಮ ವ್ಯಕ್ತಿತ್ವದಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಬೈಬಲ್ ನಿಮಗೆ ಸಹಾಯಮಾಡುವುದು. “ಪರಿಶುದ್ಧಗ್ರಂಥಗಳು” “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿವೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು” ಎಂದು ಪೌಲನು ತಿಮೊಥೆಯನಿಗೆ ಹೇಳಿದನು. (2 ತಿಮೊಥೆಯ 3:16, 17) ದೇವರ ವಾಕ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಕುರಿತು ಕ್ರಮವಾಗಿ ಧ್ಯಾನಿಸುವ ಮೂಲಕ ಮತ್ತು ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ, ದೇವರ ಆತ್ಮವು ನಿಮ್ಮ ವ್ಯಕ್ತಿತ್ವವನ್ನು ಸಂಸ್ಕರಿಸುವಂತೆ ನೀವು ಅನುಮತಿಸುವಿರಿ. ಇದು ನಿಮ್ಮಲ್ಲಿ ದೈನ್ಯತೆ, ಛಲ, ಶ್ರಮಶೀಲತೆ ಮತ್ತು ಜೊತೆ ಕ್ರೈಸ್ತರಿಗಾಗಿ ಯಥಾರ್ಥ ಪ್ರೀತಿಯಂಥ ಅತ್ಯಾವಶ್ಯಕ ಗುಣಗಳನ್ನು ಬೆಳೆಸುವುದು. (1 ತಿಮೊಥೆಯ 4:15) ತಿಮೊಥೆಯನ ಬಳಿ ಈ ಗುಣಗಳಿದ್ದವು. ಇದರಿಂದಾಗಿ ಅವನು ಪೌಲನಿಗೂ ತಿಮೊಥೆಯನು ಸೇವೆಮಾಡಿದ ಸಭೆಗಳಿಗೂ ಒಂದು ಅಮೂಲ್ಯ ಸ್ವತ್ತಾಗಿದ್ದನು.—ಫಿಲಿಪ್ಪಿ 2:20-22.
13 ಮೂರನೆಯದಾಗಿ, ದೇವರ ವಾಕ್ಯವು ಪ್ರಾಯೋಗಿಕ ವಿವೇಕದ ಭಂಡಾರವೇ ಆಗಿದೆ. (ಕೀರ್ತನೆ 1:1-3; 19:7; 2 ತಿಮೊಥೆಯ 2:7; 3:15) ಅದು ನಿಮಗೆ, ಸ್ನೇಹಿತರನ್ನು ವಿವೇಕಯುತವಾಗಿ ಆಯ್ಕೆಮಾಡುವಂತೆ, ಹಿತಕರವಾದ ಮನೋರಂಜನೆಯನ್ನು ಆಯ್ಕೆಮಾಡುವಂತೆ ಮತ್ತು ಇನ್ನಿತರ ಅಸಂಖ್ಯಾತ ಸವಾಲುಗಳನ್ನು ನಿಭಾಯಿಸುವಂತೆ ಸಹಾಯಮಾಡುವುದು. (ಆದಿಕಾಂಡ 34:1, 2; ಕೀರ್ತನೆ 119:37; 1 ಕೊರಿಂಥ 7:36) ಆಧ್ಯಾತ್ಮಿಕ ಗುರಿಗಳನ್ನು ತಲಪಲಿಕ್ಕಾಗಿ ಬುದ್ಧಿವಂತಿಕೆಯ ನಿರ್ಣಯಗಳನ್ನು ಈಗಲೇ ಮಾಡುವುದು ಅತಿ ಪ್ರಾಮುಖ್ಯ.
“ಶ್ರೇಷ್ಠ ಹೋರಾಟವನ್ನು ಮಾಡು”
14 ಯೆಹೋವನಿಗೆ ಗೌರವ ತರುವಂಥ ಗುರಿಗಳಿಗೆ ಆದ್ಯತೆ ಕೊಡುವುದು ವಿವೇಕದ ಕ್ರಮವೆಂಬುದು ನಿಜ. ಆದರೆ ಅದು ಬಹಳ ಸುಲಭವೇನಲ್ಲ. ಉದಾಹರಣೆಗಾಗಿ ನೀವೊಂದು ಜೀವನವೃತ್ತಿಯನ್ನು ಆಯ್ಕೆಮಾಡುವ ಸಮಯ ಬಂದಾಗ ಏನಾಗುತ್ತದೆಂಬುದನ್ನು ಪರಿಗಣಿಸಿರಿ. ಉಚ್ಛ ಶಿಕ್ಷಣ ಹಾಗೂ ಕೈತುಂಬ ಸಂಬಳ ತರುವ ಉದ್ಯೋಗವೇ ನಿಜ ಯಶಸ್ಸು ಹಾಗೂ ಸಂತೋಷದ ಕೀಲಿಕೈಗಳಾಗಿವೆ ಎಂಬ ಅಭಿಪ್ರಾಯವುಳ್ಳ ಸಂಬಂಧಿಕರು, ಸಮಾನಸ್ಥರು ಹಾಗೂ ಸದುದ್ದೇಶವುಳ್ಳ ಶಿಕ್ಷಕರು ನಿಮ್ಮ ಮೇಲೆ ಬಹಳಷ್ಟು ಒತ್ತಡ ಹಾಕಬಹುದು. (ರೋಮಾಪುರ 12:2) ಯೆಹೋವನು ನಿಮ್ಮ ಮುಂದೆ ಇಡುವ ‘ನಿತ್ಯಜೀವವನ್ನು ಹಿಡಿದುಕೊಳ್ಳಲಿಕ್ಕಾಗಿ’ ತಿಮೊಥೆಯನಂತೆ ನೀವು ಸಹ “ಶ್ರೇಷ್ಠ ಹೋರಾಟವನ್ನು ಮಾಡ”ಬೇಕು.—1 ತಿಮೊಥೆಯ 6:12; 2 ತಿಮೊಥೆಯ 3:12.
15 ವಿಶೇಷವಾಗಿ, ಅವಿಶ್ವಾಸಿ ಕುಟುಂಬ ಸದಸ್ಯರು ನೀವು ಮಾಡುವ ಆಯ್ಕೆಗಳ ಬಗ್ಗೆ ಅಸಮ್ಮತಿ ಸೂಚಿಸುವಾಗ ಪರೀಕ್ಷೆಯು ತುಂಬ ಕಠಿನವಾಗಿರುತ್ತದೆ. ಬಹುಶಃ ತಿಮೊಥೆಯನಿಗೂ ಅಂಥ ವಿರೋಧವನ್ನು ಎದುರಿಸಲಿಕ್ಕಿತ್ತು. ಒಂದು ಪರಾಮರ್ಶೆ ಕೃತಿಗನುಸಾರ ತಿಮೊಥೆಯನ ಕುಟುಂಬವು ಪ್ರಾಯಶಃ “ಶಿಕ್ಷಿತರ ಹಾಗೂ ಮೇಲಂತಸ್ತಿನ ವರ್ಗಕ್ಕೆ ಸೇರಿದಂಥದ್ದಾಗಿತ್ತು.” ಅವನ ತಂದೆಯು ಅವನು ಉಚ್ಚ ಶಿಕ್ಷಣವನ್ನು ಪಡೆದುಕೊಳ್ಳಬೇಕು ಮತ್ತು ಕುಟುಂಬದ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನಿರೀಕ್ಷಿಸಿದ್ದಿರಬಹುದು.a ಆದರೆ ಇದಕ್ಕೆ ಬದಲಾಗಿ ತಿಮೊಥೆಯನು ಪೌಲನೊಂದಿಗಿದ್ದು, ಅಪಾಯಗಳು ಹಾಗೂ ಹಣಕಾಸಿನ ಅನಿಶ್ಚಿತತೆಗಳಿಂದ ಕೂಡಿದ ಮಿಷನೆರಿ ಕೆಲಸವನ್ನು ಮಾಡಲು ಆಯ್ಕೆಮಾಡಿದನು. ಇದರ ಬಗ್ಗೆ ತಿಮೊಥೆಯನ ತಂದೆಗೆ ತಿಳಿದುಬಂದಾಗ ಅವನ ಪ್ರತಿಕ್ರಿಯೆ ಏನಾಗಿದ್ದಿರಬಹುದೆಂದು ಸ್ವಲ್ಪ ಊಹಿಸಿ!
16 ಇಂದು ಸಹ ಯುವ ಜನರು ಅದೇ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ಯೆಹೋವನ ಸಾಕ್ಷಿಗಳ ಒಂದು ಬ್ರಾಂಚ್ ಆಫೀಸಿನಲ್ಲಿ ಕೆಲಸಮಾಡುತ್ತಿರುವ ಮ್ಯಾಥ್ಯೂ ಎಂಬವನು ಜ್ಞಾಪಿಸಿಕೊಳ್ಳುವುದು: “ನಾನೊಬ್ಬ ಪಯನೀಯರನಾಗಿ ಸೇವೆಮಾಡಲಾರಂಭಿಸಿದಾಗ ನನ್ನ ತಂದೆಗೆ ತುಂಬ ನಿರಾಶೆಯಾಯಿತು. ಪಯನೀಯರನಾಗಿ ಸೇವೆಸಲ್ಲಿಸುತ್ತಿದ್ದಾಗ ನನ್ನ ಜೀವನೋಪಾಯಕ್ಕಾಗಿ ನಾನು ಕಛೇರಿಗಳನ್ನು ಗುಡಿಸಿ, ಚೊಕ್ಕಟಗೊಳಿಸುವ ಕೆಲಸಮಾಡುತ್ತಿದ್ದೆ. ಇದರಿಂದಾಗಿ, ನನ್ನ ಶಿಕ್ಷಣವನ್ನು ‘ವ್ಯರ್ಥಮಾಡುತ್ತಿದ್ದೇನೆ’ ಎಂದು ಅವರಿಗನಿಸಿತು. ಅವರು ನನ್ನ ಅಪಹಾಸ್ಯಮಾಡುತ್ತಾ, ನಾನೊಂದು ಪೂರ್ಣ ಸಮಯದ ಉದ್ಯೋಗವನ್ನು ಮಾಡುತ್ತಿದ್ದಲ್ಲಿ ಎಷ್ಟೊಂದು ಹಣ ಸಂಪಾದಿಸಬಹುದಿತ್ತೆಂದು ಅವರು ನೆನಪುಹುಟ್ಟಿಸುತ್ತಿದ್ದರು.” ಈ ವಿರೋಧವನ್ನು ಮ್ಯಾಥ್ಯೂ ಹೇಗೆ ಎದುರಿಸಿದನು? “ನಾನು ಕಟ್ಟುನಿಟ್ಟಾಗಿ ಬೈಬಲನ್ನು ಪ್ರತಿದಿನ ಓದುತ್ತಿದ್ದೆ, ಮತ್ತು ನಿರಂತರವಾಗಿ ಪ್ರಾರ್ಥಿಸುತ್ತಿದ್ದೆ. ಇದನ್ನು ವಿಶೇಷವಾಗಿ ನಾನು ಸುಲಭವಾಗಿ ಸಿಟ್ಟುಗೊಳ್ಳಸಾಧ್ಯವಿದ್ದ ಕ್ಷಣಗಳಲ್ಲಿ ಮಾಡುತ್ತಿದ್ದೆ.” ಮ್ಯಾಥ್ಯೂವಿಗಿದ್ದ ದೃಢನಿರ್ಣಯಕ್ಕೆ ಪ್ರತಿಫಲ ಸಿಕ್ಕಿದೆ. ಕಾಲ ಕಳೆದಂತೆ ತಂದೆಯೊಂದಿಗಿನ ಅವನ ಸಂಬಂಧವು ಸುಧಾರಿಸಿತು. ಅದಲ್ಲದೆ, ಮ್ಯಾಥ್ಯೂ ಯೆಹೋವನ ಹೆಚ್ಚು ಸಮೀಪಕ್ಕೂ ಬಂದಿದ್ದಾನೆ. “ಯೆಹೋವನು ನನ್ನ ಅಗತ್ಯಗಳನ್ನು ಪೂರೈಸಿರುವುದನ್ನು, ನನ್ನನ್ನು ಉತ್ತೇಜಿಸುವುದನ್ನು ಮತ್ತು ಕೆಟ್ಟ ನಿರ್ಣಯಗಳನ್ನು ಮಾಡುವದರಿಂದ ಸಂರಕ್ಷಿಸಿರುವುದನ್ನು ನಾನು ನೋಡಿದ್ದೇನೆ” ಎಂದು ಅವನು ಅನ್ನುತ್ತಾನೆ. “ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ನಾನು ಪ್ರಯತ್ನಿಸದಿರುತ್ತಿದ್ದಲ್ಲಿ ಇವುಗಳಲ್ಲಿ ಯಾವುದನ್ನೂ ಅನುಭವಿಸುತ್ತಿರಲಿಲ್ಲ.”
ಆಧ್ಯಾತ್ಮಿಕ ಗುರಿಗಳ ಮೇಲೆ ಗಮನ ಕೇಂದ್ರೀಕರಿಸಿರಿ
17 ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವಾಗ, ಕೂಡಲೇ ಗೊತ್ತಾಗದಂಥ ಆದರೆ ನಿರುತ್ತೀಜಿಸುವಂಥ ಮಾತು ನಿಮ್ಮ ಜೊತೆ ವಿಶ್ವಾಸಿಗಳಿಂದಲೇ ಬರಬಹುದು. ‘ನೀನೇಕೆ ಪಯನೀಯರನಾಗಬೇಕು?’ ಎಂದವರು ಕೇಳಬಹುದು. ‘ಬೇರೆಲ್ಲರಂತೆಯೇ ನಾರ್ಮಲ್ ಜೀವನ ನಡೆಸು; ಆಗಲೂ ನೀನು ಸಾರುವ ಕೆಲಸದಲ್ಲಿ ಪಾಲ್ಗೊಳ್ಳಬಹುದಲ್ಲಾ? ಮೊದಲು, ಒಳ್ಳೇ ಸಂಬಳವಿರುವ ಉದ್ಯೋಗ ಪಡೆದು ಆರ್ಥಿಕ ರೀತಿಯಲ್ಲಿ ಭದ್ರನಾಗು’ ಎಂದವರು ಹೇಳಬಹುದು. ಇದು ಪ್ರಾಯೋಗಿಕ ಸಲಹೆಯಂತೆ ತೋರಬಹುದು. ಆದರೆ ನೀವದರಂತೆ ನಡೆಯುವಲ್ಲಿ, ನೀವು ದೇವಭಕ್ತಿಯ ವಿಷಯದಲ್ಲಿ ನಿಜವಾಗಿ ಸಾಧನೆಮಾಡಿಕೊಳ್ಳುತ್ತಿದ್ದೀರಿ ಎಂದು ಹೇಳಬಹುದೋ?
18 ತಿಮೊಥೆಯ ಸಮಯದಲ್ಲಿದ್ದ ಕೆಲವು ಕ್ರೈಸ್ತರಿಗೂ ತದ್ರೀತಿಯ ಅಭಿಪ್ರಾಯಗಳಿತ್ತೆಂಬುದು ವ್ಯಕ್ತ. (1 ತಿಮೊಥೆಯ 6:17) ತಿಮೊಥೆಯನು ಆಧ್ಯಾತ್ಮಿಕ ಗುರಿಗಳ ಮೇಲೆ ದೃಷ್ಟಿಯನ್ನಿಡುವಂತೆ ಸಹಾಯಮಾಡಲು ಪೌಲನು ಹೀಗನ್ನುತ್ತಾ ಅವನನ್ನು ಉತ್ತೇಜಿಸಿದನು: “ಯುದ್ಧಕ್ಕೆ ಹೋಗುವ ಸೈನಿಕನು ಲೋಕ ವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಿರುವನಲ್ಲವೇ.” (2 ತಿಮೊಥೆಯ 2:4) ಕರ್ತವ್ಯನಿರತನಾಗಿರುವ ಒಬ್ಬ ಸೈನಿಕನು, ಒಬ್ಬ ಸಾಮಾನ್ಯ ಪ್ರಜೆಯು ಬೆನ್ನಟ್ಟುವಂಥ ಕೆಲಸಗಳಲ್ಲಿ ತೊಡಗುವ ಮೂಲಕ ಅಪಕರ್ಷಿತನಾಗಬಾರದು. ಏಕೆಂದರೆ ಸೈನ್ಯಾಧಿಕಾರಿಯ ಅಪ್ಪಣೆಯಂತೆ ಮಾಡಲು ಅವನು ಸದಾ ಸಿದ್ಧನಾಗಿರುವುದರ ಮೇಲೆ ಅವನ ಮತ್ತು ಇತರರ ಜೀವವು ಹೊಂದಿಕೊಂಡಿರುತ್ತದೆ. ಅದೇ ರೀತಿಯಲ್ಲಿ, ಕ್ರಿಸ್ತನ ಕೆಳಗಿರುವ ಒಬ್ಬ ಸೈನಿಕನಾಗಿ ನೀವು ಏಕಚಿತ್ತವುಳ್ಳವರಾಗಿರಬೇಕು. ಅಲ್ಲದೆ, ಪ್ರಾಣರಕ್ಷಕವಾದ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವುದರಿಂದ ನಿಮ್ಮನ್ನು ತಡೆಗಟ್ಟಬಹುದಾದ ಅನಾವಶ್ಯಕ ಪ್ರಾಪಂಚಿಕ ಬೆನ್ನಟ್ಟುವಿಕೆಗಳಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ದೂರವಿರತಕ್ಕದ್ದು.—ಮತ್ತಾಯ 6:24; 1 ತಿಮೊಥೆಯ 4:16; 2 ತಿಮೊಥೆಯ 4:2, 5.
19 ಆರಾಮದ ಜೀವನವನ್ನು ನಿಮ್ಮ ಗುರಿಯನ್ನಾಗಿ ಮಾಡುವ ಬದಲು, ಸ್ವತ್ಯಾಗದ ಆತ್ಮವನ್ನು ಬೆಳೆಸಿಕೊಳ್ಳಿರಿ. “ಕ್ರಿಸ್ತ ಯೇಸುವಿನ ಸೈನ್ಯದಲ್ಲೊಬ್ಬರೋಪಾದಿ, ಜೀವನದ ಸುಖಸೌಕರ್ಯಗಳಿಲ್ಲದೆ ಜೀವಿಸಲು ಸಿದ್ಧರಾಗಿರಿ.” (2 ತಿಮೊಥೆಯ 2:3, ದಿ ಇಂಗ್ಲಿಷ್ ಬೈಬಲ್ ಇನ್ ಬೇಸಿಕ್ ಇಂಗ್ಲಿಷ್) ಪೌಲನೊಂದಿಗಿನ ಒಡನಾಟದಲ್ಲಿ, ತಿಮೊಥೆಯನು ಅತಿ ಕಷ್ಟಕರವಾದ ಸ್ಥಿತಿಗಳಲ್ಲೂ ಸಂತೃಪ್ತನಾಗಿರುವುದರ ಗುಟ್ಟನ್ನು ಕಲಿತುಕೊಂಡನು. (ಫಿಲಿಪ್ಪಿ 4:11, 12; 1 ತಿಮೊಥೆಯ 6:6-8) ನೀವು ಸಹ ಅದನ್ನೇ ಮಾಡಬಹುದು. ರಾಜ್ಯದ ನಿಮಿತ್ತ ನೀವು ತ್ಯಾಗಗಳನ್ನು ಮಾಡಲು ಸಿದ್ಧರಿದ್ದೀರೋ?
ಇಂದೂ ಮುಂದೂ ಆಶೀರ್ವಾದಗಳು
20 ತಿಮೊಥೆಯನು ಸುಮಾರು 15 ವರ್ಷಗಳ ವರೆಗೆ ಪೌಲನೊಂದಿಗೆ ನಿಕಟವಾಗಿ ಕೆಲಸಮಾಡಿದನು. ಸುವಾರ್ತೆಯು ಭೂಮಧ್ಯ ಸಮುದ್ರದ ಉತ್ತರ ದಿಕ್ಕಿನ ಬಹುಮಟ್ಟಿಗೆ ಹೆಚ್ಚಿನ ಭಾಗದಲ್ಲೆಲ್ಲಾ ಹಬ್ಬಿದಾಗ ಹೊಸ ಸಭೆಗಳು ರಚಿಸಲ್ಪಡುವುದನ್ನು ತಿಮೊಥೆಯನು ಕಣ್ಣಾರೆ ನೋಡಿದನು. ಅವನ ಜೀವನವು, ಒಂದುವೇಳೆ ಅವನು “ನಾರ್ಮಲ್” ಜೀವನವನ್ನು ಆಯ್ಕೆಮಾಡುತ್ತಿದ್ದಲ್ಲಿ ಹೇಗಿರುತ್ತಿತ್ತೊ ಅಂಥ ಜೀವನಕ್ಕಿಂತಲೂ ಹೆಚ್ಚು ರೋಮಾಂಚಕಾರಿಯೂ ತೃಪ್ತಿದಾಯಕವೂ ಆಗಿತ್ತು. ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವ ಮೂಲಕ ನೀವು ಸಹ ಬೆಲೆಕಟ್ಟಲಾಗದ ಆಧ್ಯಾತ್ಮಿಕ ಆಶೀರ್ವಾದಗಳನ್ನು ಕೊಯ್ಯುವಿರಿ. ನೀವು ಯೆಹೋವನ ಸಮೀಪಕ್ಕೆ ಬರುವಿರಿ ಮತ್ತು ಜೊತೆ ಕ್ರೈಸ್ತರ ಪ್ರೀತಿಗೌರವವನ್ನು ಸಂಪಾದಿಸಿಕೊಳ್ಳುವಿರಿ. ಭೌತಿಕ ಸಂಪತ್ತನ್ನು ಬೆನ್ನಟ್ಟುವುದರಿಂದ ಬರುವ ನೋವು ಹಾಗೂ ಹತಾಶೆಯನ್ನು ಅನುಭವಿಸುವ ಬದಲು, ನಿಸ್ವಾರ್ಥವಾಗಿ ಕೊಡುವುದರಿಂದ ಬರುವ ನಿಜವಾದ ಸಂತೋಷ ನಿಮಗೆ ಸಿಗುವುದು. ಎಲ್ಲಕ್ಕಿಂತಲೂ ಅಮೂಲ್ಯವಾಗಿ ನೀವು ಪರದೈಸ ಭೂಮಿಯಲ್ಲಿ ನಿತ್ಯ ಜೀವ ಅಂದರೆ “ವಾಸ್ತವವಾದ ಜೀವದ” ಮೇಲೆ ಬಿಗಿಯಾದ ಹಿಡಿತವನ್ನು ಪಡೆದುಕೊಳ್ಳುವಿರಿ.—1 ತಿಮೊಥೆಯ 6:9, 10, 17-19; ಅ. ಕೃತ್ಯಗಳು 20:35.
21 ಹಾಗಾದರೆ ನೀವು ಈಗಾಗಲೇ ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಲು ಆರಂಭಿಸದೇ ಇದ್ದಲ್ಲಿ, ಅದನ್ನು ತತ್ಕ್ಷಣವೇ ಆರಂಭಿಸುವಂತೆ ನಿಮ್ಮನ್ನು ಹಾರ್ದಿಕವಾಗಿ ಉತ್ತೇಜಿಸುತ್ತೇವೆ. ಸಭೆಯಲ್ಲಿ, ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ನಿಮಗೆ ಸಹಾಯಮಾಡಬಲ್ಲವರ ಸಮೀಪಕ್ಕೆ ಬನ್ನಿರಿ ಮತ್ತು ಅವರ ಮಾರ್ಗದರ್ಶನೆಯನ್ನು ಕೇಳಿಪಡೆಯಿರಿ. ದೇವರ ವಾಕ್ಯದ ಕ್ರಮವಾದ ವೈಯಕ್ತಿಕ ಅಧ್ಯಯನವನ್ನು ನಿಮ್ಮ ಆದ್ಯತೆಯನ್ನಾಗಿ ಮಾಡಿರಿ. ಈ ಲೋಕದ ಪ್ರಾಪಂಚಿಕ ಆತ್ಮವನ್ನು ಪ್ರತಿರೋಧಿಸುವ ದೃಢನಿರ್ಣಯ ಮಾಡಿರಿ. “ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ” ದೇವರು ವಾಗ್ದಾನಿಸುವುದೇನೆಂದರೆ, ಒಂದುವೇಳೆ ನೀವು ಆತನಿಗೆ ಗೌರವತರುವ ಗುರಿಗಳನ್ನು ಆಯ್ಕೆಮಾಡಿದರೆ ನೀವು ಆತನಿಂದ ಇಂದೂ ಮುಂದೂ ಹೇರಳವಾದ ಆಶೀರ್ವಾದಗಳನ್ನು ಪಡೆದುಕೊಳ್ಳಸಾಧ್ಯವಿದೆ.—1 ತಿಮೊಥೆಯ 6:17. (w07 5/1)
[ಪಾದಟಿಪ್ಪಣಿ]
a ಗ್ರೀಕ್ ಸಮಾಜವು ಶಿಕ್ಷಣಕ್ಕೆ ತುಂಬ ಮಹತ್ವವನ್ನು ಕೊಡುತ್ತಿತ್ತು. ತಿಮೊಥೆಯನ ಕಾಲದಲ್ಲಿ ಜೀವಿಸುತ್ತಿದ್ದ ಪ್ಲುಟಾರ್ಕ್ ಎಂಬವನು ಬರೆದುದು: “ಒಂದು ಒಳ್ಳೇ ಶಿಕ್ಷಣ ಪಡೆದುಕೊಳ್ಳುವುದು ಎಲ್ಲ ಒಳಿತಿನ ಆಕರ ಹಾಗೂ ಮೂಲ ಆಗಿದೆ. . . . ಇದೇ, ನೈತಿಕ ಉತ್ಕೃಷ್ಟತೆ ಹಾಗೂ ಸಂತೋಷದ ಕಡೆಗೆ ಸಾಗುವಂತೆ ಸಹಾಯಮಾಡುತ್ತದೆ ಎಂಬುದು ನನ್ನ ಅಭಿಪ್ರಾಯ. . . . ಬೇರೆಲ್ಲ ಲಾಭಗಳು ಮಾನುಷವಾಗಿವೆ, ಕ್ಷುಲ್ಲಕವಾಗಿವೆ, ನಮ್ಮ ಪರಿಗಣನೆಗೆ ಯೋಗ್ಯವಲ್ಲದ್ದಾಗಿವೆ.”—ಮೋರಾಲ್ಯ I, “ಮಕ್ಕಳ ಶಿಕ್ಷಣ.”
ನಿಮಗೆ ನೆನಪಿದೆಯೋ?
• ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಬೇಕಾದ ಸಹಾಯ ಯುವ ಜನರಿಗೆ ಎಲ್ಲಿ ಸಿಗಬಲ್ಲದು?
• ಜಾಗರೂಕತೆಯ ಬೈಬಲ್ ಅಧ್ಯಯನವು ಏಕೆ ಮಹತ್ವದ್ದು?
• ಈ ಲೋಕದ ಪ್ರಾಪಂಚಿಕ ಪ್ರಭಾವವನ್ನು ಯುವಜನರು ಹೇಗೆ ಪ್ರತಿರೋಧಿಸಬಲ್ಲರು?
• ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವುದರಿಂದ ಯಾವ ಆಶೀರ್ವಾದಗಳು ಸಿಗುತ್ತವೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಪೌಲನು ತಿಮೊಥೆಯನನ್ನು ಏಕೆ ಶ್ಲಾಘಿಸಿದನು? (ಬಿ) ಇಂದು ಯುವ ಜನರು ಹೇಗೆ ‘ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡುತ್ತಿದ್ದಾರೆ’?
3. ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಚರ್ಚಿಸಲಾಗುವುದು?
4. ತಿಮೊಥೆಯನ ಕ್ರೈಸ್ತ ಜೀವನವೃತ್ತಿಯ ಚುಟುಕಾದ ವಿವರಣೆ ಕೊಡಿ.
5. ಎರಡನೇ ತಿಮೊಥೆಯ 3:14, 15ಕ್ಕನುಸಾರ, ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವಂತೆ ನಿರ್ಣಯಿಸಲು ತಿಮೊಥೆಯನಿಗೆ ನೆರವು ನೀಡಿದ ಎರಡು ಅಂಶಗಳು ಯಾವುವು?
6. ತಿಮೊಥೆಯನಿಗೆ ಯಾವ ತರಬೇತಿ ಸಿಕ್ಕಿತು, ಮತ್ತು ಅವನು ಹೇಗೆ ಪ್ರತಿಕ್ರಿಯೆ ತೋರಿಸಿದನು?
7. ಅನೇಕ ಯುವಜನರು ಯಾವ ಆಶೀರ್ವಾದವನ್ನು ಆನಂದಿಸುತ್ತಾರೆ, ಮತ್ತು ಇದು ಅವರಿಗೆ ಹೇಗೆ ಪ್ರಯೋಜನದಾಯಕ ಆಗಿರಬಲ್ಲದು?
8. ಭಕ್ತಿವೃದ್ಧಿಮಾಡುವಂಥ ಕ್ರೈಸ್ತ ಒಡನಾಟದಿಂದ ತಿಮೊಥೆಯನು ಹೇಗೆ ಪ್ರಯೋಜನಪಡೆದನು?
9. ಸರಿಯಾದ ರೀತಿಯ ಸಹವಾಸವನ್ನು ಆಯ್ಕೆಮಾಡುವುದಲ್ಲದೆ, ‘ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೊಳ್ಳಲು’ ನೀವು ಇನ್ನೇನು ಮಾಡಬೇಕು?
10, 11. ಆಧ್ಯಾತ್ಮಿಕ ಗುರಿಗಳನ್ನು ತಲಪುವಂತೆ ಶಾಸ್ತ್ರವಚನಗಳು ನಿಮ್ಮನ್ನು ಹೇಗೆ ಪ್ರಚೋದಿಸುವವು? ಒಂದು ದೃಷ್ಟಾಂತ ಕೊಡಿ.
12, 13. (ಎ) ಬೈಬಲ್ ಅಧ್ಯಯನವು ಒಬ್ಬ ಯುವ ವ್ಯಕ್ತಿಗೆ ಯಾವ ಬದಲಾವಣೆಗಳನ್ನು ಮಾಡುವಂತೆ ಸಹಾಯನೀಡುವುದು, ಮತ್ತು ಹೇಗೆ? (ಬಿ) ದೇವರ ವಾಕ್ಯದಲ್ಲಿರುವ ಪ್ರಾಯೋಗಿಕ ವಿವೇಕದ ಉದಾಹರಣೆಗಳನ್ನು ಕೊಡಿರಿ.
14. ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವುದು ಬಹಳ ಸುಲಭವೇನಲ್ಲ, ಏಕೆ?
15. ತಿಮೊಥೆಯನು ಬಹುಶಃ ಯಾವ ವಿರೋಧವನ್ನು ಎದುರಿಸಿದನು?
16. ಒಬ್ಬ ಯುವಕನು ತನ್ನ ತಂದೆಯಿಂದ ಬಂದ ವಿರೋಧವನ್ನು ಹೇಗೆ ನಿಭಾಯಿಸಿದನು?
17. ಪೂರ್ಣ ಸಮಯದ ಸೇವೆಯಲ್ಲಿ ತೊಡಗಲು ಯೋಜಿಸುತ್ತಿರುವವರನ್ನು ಕೆಲವರು ಹೇಗೆ ತಿಳಿಯದೇ ನಿರುತ್ತೇಜಿಸಬಹುದು? (ಮತ್ತಾಯ 16:22)
18, 19. (ಎ) ಆಧ್ಯಾತ್ಮಿಕ ಗುರಿಗಳ ಮೇಲೆ ನಿಮ್ಮ ಗಮನವನ್ನು ಹೇಗೆ ಕೇಂದ್ರೀಕರಿಸಬಲ್ಲಿರಿ? (ಬಿ) ಒಬ್ಬ ಯುವ ವ್ಯಕ್ತಿಯಾಗಿ ರಾಜ್ಯಕ್ಕಾಗಿ ಯಾವ ತ್ಯಾಗಗಳನ್ನು ಮಾಡುತ್ತಿದ್ದೀರೆಂದು ವಿವರಿಸಿರಿ.
20, 21. (ಎ) ಆಧ್ಯಾತ್ಮಿಕ ಗುರಿಗಳನ್ನು ಬೆನ್ನಟ್ಟುವುದರಿಂದ ಬರುವ ಕೆಲವು ಆಶೀರ್ವಾದಗಳನ್ನು ವರ್ಣಿಸಿರಿ. (ಬಿ) ನೀವೇನು ಮಾಡಲು ದೃಢನಿರ್ಣಯಮಾಡಿದ್ದೀರಿ?
[ಪುಟ 29ರಲ್ಲಿರುವ ಚಿತ್ರಗಳು]
ಸಕಾರಾತ್ಮಕ ಪ್ರಭಾವಬೀರಿದ ಯಾವ ವ್ಯಕ್ತಿಗಳು ತಿಮೊಥೆಯನಿಗೆ ಸಹಾಯಮಾಡಿದರು?