“ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ”
“ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ.”—ರೋಮಾಪುರ 12:17, NIBV.
ಒಡಹುಟ್ಟಿದವರಲ್ಲಿ ಒಬ್ಬನು ಇನ್ನೊಬ್ಬನನ್ನು ನೂಕಿದಾಗ ಪ್ರತಿಯಾಗಿ ನೂಕುವುದೇ ಚಿಕ್ಕ ಮಗುವಿನ ಸ್ವಭಾವ. ಆದರೆ ವಿಷಾದಕರವಾಗಿ ಏಟಿಗೆ ಎದಿರೇಟು ಕೊಡುವ ಈ ಸ್ವಭಾವ ಮಕ್ಕಳಿಗೇ ಸೀಮಿತವಲ್ಲ. ಅನೇಕ ವಯಸ್ಕರೂ ಅದೇ ರೀತಿ ವರ್ತಿಸುತ್ತಾರೆ. ಒಬ್ಬನು ಕೋಪವೆಬ್ಬಿಸುವಾಗ ಅವರು ಸೇಡು ತೀರಿಸಿಕೊಳ್ಳಲು ಬಯಸುತ್ತಾರೆ. ವಯಸ್ಕರಲ್ಲಿ ಹೆಚ್ಚಿನವರು ಅಕ್ಷರಶಃ ಒಬ್ಬರನ್ನೊಬ್ಬರು ನೂಕುವುದಿಲ್ಲ ನಿಜ, ಆದರೆ ಕುಟಿಲ ವಿಧಗಳಲ್ಲಿ ನೂಕಿಬಿಡುತ್ತಾರೆ. ಪ್ರಾಯಶಃ ಕೋಪವೆಬ್ಬಿಸಿದವರ ವಿಷಯದಲ್ಲಿ ಹಾನಿಕರವಾದ ಗಾಳಿಮಾತುಗಳನ್ನು ಅವರು ಹಬ್ಬಿಸಬಹುದು ಇಲ್ಲವೆ ಯಶಸ್ಸು ಪಡೆಯದ ಹಾಗೆ ಬೇರೆ ಕುತಂತ್ರಗಳನ್ನು ಯೋಜಿಸಬಹುದು. ವಿಧಾನ ಏನೇ ಆಗಿರಲಿ, ಉದ್ದೇಶ ಒಂದೇ—ಪ್ರತೀಕಾರಕ್ಕೆ ಪ್ರತೀಕಾರ, ಸೇಡಿಗೆ ಸೇಡು.
2 ಈ ಸೇಡು ತೀರಿಸುವ ದುಷ್ಪ್ರೇರಣೆಯು ಜನರಲ್ಲಿ ಆಳವಾಗಿ ಬೇರೂರಿರುತ್ತದೆ. ಆದರೆ ಸತ್ಯ ಕ್ರೈಸ್ತರು ಅದಕ್ಕೆ ಬಲಿಬೀಳುವುದನ್ನು ನಿರೋಧಿಸುತ್ತಾರೆ. “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ” ಎಂಬ ಅಪೊಸ್ತಲ ಪೌಲನ ಸಲಹೆಯನ್ನು ಅನುಸರಿಸಲು ಅವರು ಪ್ರಯತ್ನಿಸುತ್ತಾರೆ. (ರೋಮಾಪುರ 12:17, NIBV) ಆ ಉದಾತ್ತ ಮಟ್ಟಕ್ಕನುಸಾರ ಬದುಕುವಂತೆ ನಮ್ಮನ್ನು ಯಾವುದು ಪ್ರಚೋದಿಸುವುದು? ಮುಖ್ಯವಾಗಿ ನಾವು ಯಾರಿಗೆ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬಾರದು? ಸೇಡು ತೀರಿಸದೆ ಇರುವಲ್ಲಿ ಯಾವ ಪ್ರಯೋಜನಗಳನ್ನು ಕೊಯ್ಯುವೆವು? ಈ ಪ್ರಶ್ನೆಗಳನ್ನು ಉತ್ತರಿಸುವ ಸಲುವಾಗಿ ನಾವು ಪೌಲನ ಆ ಮಾತುಗಳ ಪೂರ್ವಾಪರವನ್ನು ಅಧ್ಯಯನ ಮಾಡೋಣ. ಅಲ್ಲದೆ ರೋಮಾಪುರ 12ನೆಯ ಅಧ್ಯಾಯವು, ಸೇಡು ತೀರಿಸದೆ ಇರುವುದು ಹೇಗೆ ಯೋಗ್ಯವೂ, ಪ್ರೀತಿಪರವೂ ಮತ್ತು ವಿನೀತ ಮಾರ್ಗವೂ ಆಗಿದೆಯೆಂದು ತೋರಿಸುತ್ತದೆ ಎಂಬುದನ್ನು ಸಹ ನೋಡೋಣ. ನಾವು ಈ ಮೂರು ವಿಷಯಗಳನ್ನು ಒಂದೊಂದಾಗಿ ಪರಿಗಣಿಸುವೆವು.
‘ಆದುದರಿಂದ ನಾನು ಬೇಡಿಕೊಳ್ಳುವುದೇನಂದರೆ’
3 ಪೌಲನು, 12ನೆಯ ಅಧ್ಯಾಯ ಮೊದಲ್ಗೊಂಡು ಕ್ರೈಸ್ತ ಜೀವನವನ್ನು ಪ್ರಭಾವಿಸುವ ನಾಲ್ಕು ಸಂಬಂಧಿತ ವಿಷಯಗಳನ್ನು ಚರ್ಚಿಸುತ್ತಾನೆ. ಯೆಹೋವನೊಂದಿಗೆ, ಜೊತೆವಿಶ್ವಾಸಿಗಳೊಂದಿಗೆ, ಅವಿಶ್ವಾಸಿಗಳೊಂದಿಗೆ ಮತ್ತು ಸರಕಾರೀ ಅಧಿಕಾರಿಗಳೊಂದಿಗೆ ನಮಗಿರುವ ಸಂಬಂಧಗಳೇ ಅವಾಗಿವೆ. ಪ್ರತೀಕಾರ ಸಲ್ಲಿಸುವ ದುಷ್ಪ್ರೇರಣೆಯನ್ನು ಸೇರಿಸಿ ಕೆಟ್ಟ ಪ್ರವೃತ್ತಿಗಳನ್ನು ನಿರೋಧಿಸಲು ಇರುವ ಒಂದು ಮೂಲಕಾರಣವನ್ನು ಸೂಚಿಸುತ್ತಾ ಪೌಲನು ಹೇಳುವುದು: ‘ಆದುದರಿಂದ ಸಹೋದರರೇ, ದೇವರ ಕನಿಕರವನ್ನು [“ಕರುಣೆ,” NW] ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.’ (ರೋಮಾಪುರ 12:1) ಆ ವಚನದಲ್ಲಿ “ಆದುದರಿಂದ” ಎಂಬ ಪದವನ್ನು ಗಮನಿಸಿರಿ. ಅಂದರೆ “ಈ ಮೊದಲೇ ಹೇಳಿದ ವಿಷಯಕ್ಕೆ” ಪೌಲನು ಸೂಚಿಸುತ್ತಿದ್ದಾನೆ. ಇನ್ನೊಂದು ಮಾತಿನಲ್ಲಿ ಅವನು, ‘ನಾನು ನಿಮಗೆ ಈಗ ತಾನೇ ಏನು ವಿವರಿಸಿದ್ದೇನೋ ಆ ಕಾರಣಕ್ಕಾಗಿ ಮುಂದೆ ಹೇಳಲಿರುವುದನ್ನೂ ಮಾಡಬೇಕೆಂದು ಬೇಡಿಕೊಳ್ಳುತ್ತೇನೆ’ ಎಂದು ಹೇಳುತ್ತಾನೆ. ರೋಮ್ನ ಆ ಕ್ರೈಸ್ತರಿಗೆ ಪೌಲನು ಏನನ್ನು ವಿವರಿಸಿದ್ದನು?
4 ಪೌಲನು ತನ್ನ ಪತ್ರದ ಮೊದಲ 11 ಅಧ್ಯಾಯಗಳಲ್ಲಿ, ಯೆಹೂದ್ಯರಿಗೂ ಅನ್ಯಜನರಿಗೂ ದೇವರ ರಾಜ್ಯದಲ್ಲಿ ಕ್ರಿಸ್ತನೊಂದಿಗೆ ಆಳುವ ಆಶ್ಚರ್ಯಕರ ಅವಕಾಶ ತೆರೆದಿರುವ ಕುರಿತು ಚರ್ಚಿಸಿದನು; ಆ ನಿರೀಕ್ಷೆಯನ್ನು ಹುಟ್ಟು ಇಸ್ರಾಯೇಲ್ಯರು ಸ್ವೀಕರಿಸಿರಲಿಲ್ಲ. (ರೋಮಾಪುರ 11:13-36) ಈ ಅಮೂಲ್ಯ ಅವಕಾಶವು ‘ದೇವರ ಕರುಣೆಯಿಂದ’ ಮಾತ್ರವೇ ಶಕ್ಯವಾಗಿತ್ತು. ದೇವರ ಈ ಅಪಾರ ದಯೆಗೆ ಕ್ರೈಸ್ತರು ಹೇಗೆ ಪ್ರತಿವರ್ತಿಸಬೇಕು? ಅವರ ಹೃದಯಗಳು ಎಷ್ಟು ಗಾಢವಾದ ಕೃತಜ್ಞತೆಯಿಂದ ತುಂಬಿರಬೇಕೆಂದರೆ, ಅವರು ಪೌಲನ ಮುಂದಿನ ಮಾತುಗಳನ್ನು ಮಾಡಲು ಪ್ರೇರಿಸಲ್ಪಡಬೇಕಿತ್ತು. ಅದೇನೆಂದರೆ: “ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆ.” (ರೋಮಾಪುರ 12:1) ಆದರೆ ಆ ಕ್ರೈಸ್ತರು ದೇವರಿಗೆ ತಮ್ಮನ್ನು “ಯಜ್ಞವಾಗಿ” ಹೇಗೆ ತಾನೇ ಅರ್ಪಿಸಸಾಧ್ಯವಿತ್ತು?
5 ಪೌಲನು ಅದನ್ನು ವಿವರಿಸುತ್ತ ಹೇಳುವುದು: “ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ಈ ಲೋಕದ ನಡವಳಿಕೆಯು ತಮ್ಮ ಆಲೋಚನೆಗಳನ್ನು ರೂಪಿಸುವಂತೆ ಬಿಡುವ ಬದಲಿಗೆ ಅವರು ಕ್ರಿಸ್ತನ ಆಲೋಚನೆಗನುಸಾರ ತಮ್ಮ ಮನಸ್ಸನ್ನು ಹೊಂದಿಸಿಕೊಳ್ಳಬೇಕಾಗಿತ್ತು. (1 ಕೊರಿಂಥ 2:16; ಫಿಲಿಪ್ಪಿ 2:5) ಆ ಮೂಲತತ್ತ್ವವು ಇಂದು ನಮ್ಮನ್ನೂ ಸೇರಿಸಿ ಎಲ್ಲ ನಿಜ ಕ್ರೈಸ್ತರ ದಿನದಿನದ ವರ್ತನೆಯನ್ನು ಪ್ರಭಾವಿಸಬೇಕು.
6 ರೋಮಾಪುರ 12:1, 2ರಲ್ಲಿರುವ ಪೌಲನ ಆ ತರ್ಕವಿಧಾನವು ನಮಗೆ ಹೇಗೆ ಸಹಾಯ ಮಾಡುತ್ತದೆ? ರೋಮ್ ನಗರದ ಆ ಆತ್ಮಾಭಿಷಿಕ್ತ ಕ್ರೈಸ್ತರಂತೆ, ದೇವರು ನಮಗೆ ಕೊಟ್ಟಿರುವ ಮತ್ತು ನಮ್ಮ ಜೀವನದ ಪ್ರತಿಯೊಂದು ದಿನದಲ್ಲಿ ಈಗಲೂ ಕೊಡುತ್ತಿರುವ ಕರುಣೆಯ ಹೇರಳ ಅಭಿವ್ಯಕ್ತಿಗಳಿಗೆ ನಾವು ಆಳವಾದ ಕೃತಜ್ಞತೆಯನ್ನು ತೋರಿಸುತ್ತೇವೆ. ಆದುದರಿಂದ, ಕೃತಜ್ಞತೆ ತುಂಬಿರುವ ಹೃದಯವು ನಾವು ದೇವರನ್ನು ನಮ್ಮೆಲ್ಲಾ ಶಕ್ತಿ, ಸಂಪತ್ತು ಮತ್ತು ಸಾಮರ್ಥ್ಯಗಳಿಂದ ಸೇವಿಸುವಂತೆ ಪ್ರೇರಿಸುತ್ತದೆ. ಈ ಹಾರ್ದಿಕ ಬಯಕೆಯು ನಾವು ಲೋಕದಂತಲ್ಲ, ಕ್ರಿಸ್ತನ ಹಾಗೆ ಆಲೋಚಿಸುವಂತೆ ನಮ್ಮ ಕೈಲಾದದ್ದನ್ನು ಮಾಡಲು ಪ್ರಚೋದಿಸುತ್ತದೆ. ಕ್ರಿಸ್ತನ ಮನಸ್ಸನ್ನು ಹೊಂದಿರುವುದು ನಾವು ಇತರರೊಂದಿಗೆ ಅಂದರೆ ಜೊತೆವಿಶ್ವಾಸಿಗಳು ಮತ್ತು ಅವಿಶ್ವಾಸಿಗಳೊಂದಿಗೆ ವರ್ತಿಸುವ ರೀತಿಯನ್ನೂ ಪ್ರಭಾವಿಸುತ್ತದೆ. (ಗಲಾತ್ಯ 5:25) ಉದಾಹರಣೆಗೆ, ನಾವು ಕ್ರಿಸ್ತನಂತೆ ಆಲೋಚಿಸುವಲ್ಲಿ ಸೇಡು ತೀರಿಸುವ ಪ್ರೇರೇಪಣೆಯನ್ನು ನಿರೋಧಿಸುವಂತೆ ನಿರ್ಬಂಧಿಸಲ್ಪಡುತ್ತೇವೆ.—1 ಪೇತ್ರ 2:21-23.
“ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ”
7 ನಾವು ಕೇಡಿಗೆ ಪ್ರತಿಯಾಗಿ ಕೇಡನ್ನು ಮಾಡದಿರುವುದು ಯಾಕೆಂದರೆ ಅದು ಸರಿಯಾದ ಮಾರ್ಗವಾಗಿದೆ ಮಾತ್ರವಲ್ಲ, ಪ್ರೀತಿಪರ ಮಾರ್ಗವೂ ಆಗಿದೆ. ಪ್ರೀತಿಯನ್ನು ಪ್ರೇರಿಸುವಂಥದ್ದು ಯಾವುದು ಎಂಬುದನ್ನು ಅಪೊಸ್ತಲ ಪೌಲನು ಮುಂದೆ ಹೇಗೆ ತಿಳಿಸುತ್ತಾನೆಂಬುದನ್ನು ಗಮನಿಸಿರಿ. ರೋಮಾಪುರದವರಿಗೆ ಬರೆದ ಪತ್ರದಲ್ಲಿ ಪೌಲನು “ಪ್ರೀತಿ” (ಗ್ರೀಕ್ನಲ್ಲಿ ಅಗಾಪೆ) ಎಂಬ ಪದವನ್ನು ದೇವರ ಪ್ರೀತಿ ಮತ್ತು ಕ್ರಿಸ್ತನ ಪ್ರೀತಿಗೆ ಸೂಚಿಸುವಾಗ ಅನೇಕ ಬಾರಿ ಪ್ರಯೋಗಿಸುತ್ತಾನೆ. (ರೋಮಾಪುರ 5:5, 8; 8:35, 39) ಆದರೆ, ಅಧ್ಯಾಯ 12ರಲ್ಲಿ ಪೌಲನು ಅಗಾಪೆಯನ್ನು ಇನ್ನೊಂದು ವಿಧದಲ್ಲಿ ಅಂದರೆ ಜೊತೆಮಾನವರಿಗೆ ತೋರಿಸುವ ಪ್ರೀತಿಯ ಕುರಿತು ಮಾತಾಡುವಾಗ ಉಪಯೋಗಿಸುತ್ತಾನೆ. ಆಧ್ಯಾತ್ಮಿಕ ವರಗಳು ಬೇರೆ ಬೇರೆ ವಿಧದವುಗಳಾಗಿರುತ್ತವೆ ಮತ್ತು ಅವು ಕೆಲವು ವಿಶ್ವಾಸಿಗಳಲ್ಲಿರುತ್ತವೆಂದು ಹೇಳಿದ ಬಳಿಕ ಎಲ್ಲಾ ಕ್ರೈಸ್ತರು ಬೆಳೆಸಿಕೊಳ್ಳಬೇಕಾದ ಒಂದು ಗುಣವನ್ನು ಪೌಲನು ಎತ್ತಿ ಹೇಳುತ್ತಾನೆ. ಅದೇನೆಂದರೆ, “ನಿಮ್ಮ ಪ್ರೀತಿಯು ನಿಷ್ಕಪಟವಾಗಿರಲಿ.” (ರೋಮಾಪುರ 12:4-9) ಇತರರಿಗೆ ಪ್ರೀತಿ ತೋರಿಸುವಿಕೆಯು ನಿಜ ಕ್ರೈಸ್ತರ ಹೆಗ್ಗುರುತಾಗಿದೆ. (ಮಾರ್ಕ 12:28-31) ಆದರೆ ಕ್ರೈಸ್ತರಾದ ನಾವು ತೋರಿಸುವ ಪ್ರೀತಿ ಯಥಾರ್ಥವಾಗಿದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳುವಂತೆ ಪೌಲನು ಬುದ್ಧಿಹೇಳುತ್ತಾನೆ.
8 ಅಲ್ಲದೆ, ನಿಷ್ಕಪಟ ಪ್ರೀತಿಯನ್ನು ಹೇಗೆ ತೋರಿಸಲಾಗುತ್ತದೆ ಎಂಬುದನ್ನು ಪೌಲನು ಈ ಮಾತುಗಳಲ್ಲಿ ತಿಳಿಯಪಡಿಸುತ್ತಾನೆ: “ಕೆಟ್ಟತನಕ್ಕೆ ಹೇಸಿಕೊಂಡು ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ.” (ರೋಮಾಪುರ 12:9) ಇಲ್ಲಿರುವ ‘ಹೇಸುವುದು’ ಮತ್ತು ‘ಬಿಗಿಯಾಗಿ ಹಿಡಿದುಕೊಳ್ಳುವುದು’ ಎಂಬ ಪದಗಳು ತೀಕ್ಷ್ಣತೆಯನ್ನು ಸೂಚಿಸುತ್ತವೆ. ‘ಹೇಸು’ ಎಂಬುದನ್ನು “ವಿಪರೀತವಾಗಿ ದ್ವೇಷಿಸು” ಎಂದು ಭಾಷಾಂತರಿಸಬಹುದು. ಆದುದರಿಂದ ನಾವು ದ್ವೇಷಿಸಬೇಕಾದದ್ದು ಕೆಟ್ಟತನದ ಪರಿಣಾಮಗಳನ್ನು ಮಾತ್ರವಲ್ಲ ಕೆಟ್ಟತನವನ್ನೇ. (ಕೀರ್ತನೆ 97:10) ‘ಬಿಗಿಯಾಗಿ ಹಿಡಿದುಕೊಳ್ಳುವುದು’ ಎಂಬುದು ಅಕ್ಷರಶಃ “ಅಂಟಿಸು” ಎಂಬ ಅರ್ಥದ ಗ್ರೀಕ್ ಕ್ರಿಯಾಪದದ ಭಾಷಾಂತರ. ನಿಜ ಪ್ರೀತಿಯಿರುವ ಒಬ್ಬ ಕ್ರೈಸ್ತನು ಒಳ್ಳೆಯತನ ಎಂಬ ಗುಣಕ್ಕೆ ಎಷ್ಟು ಸ್ಥಿರವಾಗಿ ಅಂಟಿಕೊಂಡಿರುತ್ತಾನೆ ಅಥವಾ ಜೋಡಿಸಲ್ಪಟ್ಟಿರುತ್ತಾನೆ ಎಂದರೆ ಅದು ಅವನ ವ್ಯಕ್ತಿತ್ವದಿಂದ ಅಗಲಿಸಲಾರದ ಭಾಗವಾಗುತ್ತದೆ.
9 ಪ್ರೀತಿಯನ್ನು ತೋರಿಸುವ ಒಂದು ನಿರ್ದಿಷ್ಟ ವಿಧಾನವನ್ನು ಪೌಲನು ಪದೇ ಪದೇ ತಿಳಿಸಿದನು. ಅವನು ಹೇಳುವುದು: “ನಿಮ್ಮನ್ನು ಹಿಂಸಿಸುವವರಿಗೆ ಆಶೀರ್ವಾದಮಾಡಿರಿ; ಶಪಿಸದೆ ಆಶೀರ್ವದಿಸಿರಿ.” “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ.” (NIBV) ‘ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ.’ “ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.” (ರೋಮಾಪುರ 12:14, 17-19, 21) ಅವಿಶ್ವಾಸಿಗಳೊಂದಿಗೆ, ನಮ್ಮನ್ನು ವಿರೋಧಿಸುವವರೊಂದಿಗೆ ಕೂಡ ನಾವು ಹೇಗೆ ವರ್ತಿಸಬೇಕೆಂದು ಪೌಲನ ಮಾತುಗಳು ಸ್ಪಷ್ಟವಾಗಿ ತೋರಿಸುತ್ತವೆ.
“ಹಿಂಸಿಸುವವರಿಗೆ ಆಶೀರ್ವಾದಮಾಡಿರಿ”
10 “ಹಿಂಸಿಸುವವರಿಗೆ ಆಶೀರ್ವಾದಮಾಡಿರಿ” ಎಂಬ ಪೌಲನ ಬುದ್ಧಿವಾದವನ್ನು ನಾವು ಹೇಗೆ ಕಾರ್ಯರೂಪಕ್ಕೆ ಹಾಕುತ್ತೇವೆ? (ರೋಮಾಪುರ 12:14) ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” (ಮತ್ತಾಯ 5:44; ಲೂಕ 6:27, 28) ಹೀಗಿರುವುದರಿಂದ, ನಾವು ಹಿಂಸಕರನ್ನು ಆಶೀರ್ವದಿಸುವ ಒಂದು ವಿಧವು ಅವರಿಗಾಗಿ ಪ್ರಾರ್ಥಿಸುವ ಮೂಲಕವೇ. ಹೇಗೆಂದರೆ, ಅವರಲ್ಲಿ ಯಾರೇ ಆಗಲಿ, ಅಜ್ಞಾನದ ಕಾರಣದಿಂದ ನಮ್ಮನ್ನು ವಿರೋಧಿಸುತ್ತಿರುವಲ್ಲಿ ಸತ್ಯವನ್ನು ನೋಡುವಂತೆ ಯೆಹೋವನು ಅವರ ಕಣ್ಣುಗಳನ್ನು ತೆರೆಯಲಿ ಎಂದು ಬೇಡಿಕೊಳ್ಳುವುದೇ. (2 ಕೊರಿಂಥ 4:4) ಹಿಂಸಕನನ್ನು ಆಶೀರ್ವದಿಸುವಂತೆ ದೇವರನ್ನು ಕೇಳಿಕೊಳ್ಳುವುದು ವಿಚಿತ್ರವಾಗಿ ಕಂಡೀತು ಎಂಬುದು ಒಪ್ಪತಕ್ಕದ್ದೇ. ಆದರೂ, ನಮ್ಮ ಯೋಚನೆ ಕ್ರಿಸ್ತನ ಆಲೋಚನಾ ವಿಧವನ್ನು ಎಷ್ಟು ಹೆಚ್ಚಾಗಿ ಹೋಲುತ್ತದೋ ಅಷ್ಟು ಹೆಚ್ಚಾಗಿ ನಮ್ಮ ವೈರಿಗಳಿಗೆ ಪ್ರೀತಿ ತೋರಿಸಲು ನಾವು ಶಕ್ತರಾಗುವೆವು. (ಲೂಕ 23:34) ಇಂಥ ಪ್ರೀತಿ ತೋರಿಸುವಿಕೆಯ ಫಲಿತಾಂಶ ಏನಾಗಿರಬಲ್ಲದು?
11 ತನ್ನ ಹಿಂಸಕರಿಗಾಗಿ ಪ್ರಾರ್ಥಿಸಿದವರಲ್ಲಿ ಸ್ತೆಫನನು ಒಬ್ಬನಾಗಿದ್ದನು ಮತ್ತು ಅವನ ಪ್ರಾರ್ಥನೆ ವ್ಯರ್ಥವಾಗಲಿಲ್ಲ. ಸಾ.ಶ. 33ರ ಪಂಚಾಶತ್ತಮದ ಬಳಿಕ ಸ್ವಲ್ಪದರಲ್ಲಿ ಕ್ರೈಸ್ತ ಸಭೆಯ ವಿರೋಧಿಗಳು ಸ್ತೆಫನನನ್ನು ಬಂಧಿಸಿ, ಯೆರೂಸಲೇಮಿನ ಹೊರಗೆ ಎಳೆದುಕೊಂಡು ಹೋಗಿ ಕಲ್ಲೆಸೆದರು. ಅವನು ಸಾಯುವುದಕ್ಕೆ ಮುಂಚೆ ಮಹಾಶಬ್ದದಿಂದ ಕೂಗಿ “[ಯೆಹೋವನೇ,] ಈ ಪಾಪವನ್ನು ಅವರ ಮೇಲೆ ಹೊರಿಸಬೇಡ” ಎಂದನು. (ಅ. ಕೃತ್ಯಗಳು 7:58–8:1) ಆ ದಿನ ಸ್ತೆಫನನು ಯಾರ ಪರವಾಗಿ ಪ್ರಾರ್ಥಿಸಿದನೊ ಅವರಲ್ಲಿ ಒಬ್ಬನು ಸೌಲನಾಗಿದ್ದನು. ಅವನು ಸ್ತೆಫನನ ಕೊಲೆಯನ್ನು ನೋಡಿದವನೂ ಸಮ್ಮತಿಸಿದವನೂ ಆಗಿದ್ದನು. ಇದಾದ ಬಳಿಕ ಪುನರುತ್ಥಿತ ಯೇಸು ಸೌಲನಿಗೆ ಕಾಣಿಸಿಕೊಂಡನು. ಆ ಮಾಜಿ ಹಿಂಸಕನು ಕ್ರಿಸ್ತನ ಹಿಂಬಾಲಕನಾಗಿ, ಅನಂತರ ಅಪೊಸ್ತಲ ಪೌಲನೂ ರೋಮಾಪುರದವರಿಗೆ ಬರೆದ ಪತ್ರದ ಲೇಖಕನೂ ಆದನು. (ಅ. ಕೃತ್ಯಗಳು 26:12-18) ಸ್ತೆಫನನ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಪೌಲನು ಹಿಂಸಕನಾಗಿದ್ದಾಗ ಮಾಡಿದ ಪಾಪವನ್ನು ಯೆಹೋವನು ಕ್ಷಮಿಸಿದ್ದನೆಂಬುದು ವ್ಯಕ್ತ. (1 ತಿಮೊಥೆಯ 1:12-16) ಆದುದರಿಂದ “ಹಿಂಸಿಸುವವರಿಗೆ ಆಶೀರ್ವಾದಮಾಡಿರಿ” ಎಂದು ಪೌಲನು ಕ್ರೈಸ್ತರಿಗೆ ಬುದ್ಧಿಹೇಳಿದ್ದು ಆಶ್ಚರ್ಯವೇನಲ್ಲ! ಕೆಲವು ಮಂದಿ ಹಿಂಸಕರು ಕೊನೆಗೆ ದೇವರ ಸೇವಕರಾಗಬಹುದು ಎಂದು ಅವನಿಗೆ ಅನುಭವದಿಂದ ಗೊತ್ತಿತ್ತು. ತದ್ರೀತಿಯಲ್ಲಿ ನಮ್ಮ ದಿನಗಳಲ್ಲಿಯೂ ಕೆಲವು ಮಂದಿ ಹಿಂಸಕರು ಯೆಹೋವನ ಸೇವಕರ ಶಾಂತಿಶೀಲ ನಡತೆಯ ಪರಿಣಾಮವಾಗಿ ವಿಶ್ವಾಸಿಗಳಾಗಿದ್ದಾರೆ.
“ಎಲ್ಲರ ಸಂಗಡ ಸಮಾಧಾನದಿಂದಿರಿ”
12 ವಿಶ್ವಾಸಿಗಳೊಂದಿಗೆ ಮತ್ತು ಅವಿಶ್ವಾಸಿಗಳೊಂದಿಗೆ ಹೇಗೆ ವರ್ತಿಸಬೇಕೆಂಬ ವಿಷಯದಲ್ಲಿ ಪೌಲನ ಮುಂದಿನ ಸಲಹೆಯು ಹೀಗಿದೆ: “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ.” ಈ ಹೇಳಿಕೆಯು, ‘ಕೆಟ್ಟದ್ದನ್ನು ಹೇಸಿರಿ’ ಎಂದು ಅವನು ಈ ಹಿಂದೆ ಹೇಳಿದ್ದ ಮಾತಿನ ತರ್ಕಬದ್ಧವಾದ ಪರಿಣಾಮವಾಗಿದೆ. ನಿಜವಾಗಿಯೂ, ಒಬ್ಬ ವ್ಯಕ್ತಿಯು ಇತರರಿಗೆ ಸೇಡು ತೀರಿಸಲು ಕೆಟ್ಟದನ್ನು ಸಾಧನವಾಗಿ ಬಳಸುವುದಾದರೆ ತಾನು ದುಷ್ಟತ್ವವನ್ನು ಅಥವಾ ಕೆಟ್ಟದ್ದನ್ನು ಹೇಸುತ್ತೇನೆಂದು ಹೇಗೆ ಹೇಳಬಲ್ಲನು? ಹಾಗೆ ಮಾಡುವುದು ‘ನಿಷ್ಕಪಟವಾದ’ ಪ್ರೀತಿ ಅಲ್ಲವೇ ಅಲ್ಲ. ಆ ಬಳಿಕ ಪೌಲನು ಹೇಳುವುದು: “ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ.” (ರೋಮಾಪುರ 12:9, 17) ಆ ಮಾತುಗಳನ್ನು ನಾವು ಹೇಗೆ ಅನ್ವಯಿಸುತ್ತೇವೆ?
13 ಈ ಮೊದಲು, ಕೊರಿಂಥದವರಿಗೆ ಬರೆದ ಪತ್ರದಲ್ಲಿ ಅಪೊಸ್ತಲರು ಎದುರಿಸಿದ ಹಿಂಸೆಯ ಕುರಿತು ಪೌಲನು ಬರೆದನು. ಅವನು ಹೇಳಿದ್ದು: “ನಾವು ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ನೋಟವಾದೆವು . . . ಬೈಸಿಕೊಂಡು ಹರಸುತ್ತೇವೆ; ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ; ಅಪಕೀರ್ತಿಹೊಂದಿ ಆದರಿಸುತ್ತೇವೆ.” (1 ಕೊರಿಂಥ 4:9-13) ತದ್ರೀತಿಯೇ, ಇಂದಿನ ನಿಜ ಕ್ರೈಸ್ತರು ಈ ಲೋಕದ ಜನರಿಗೆ ನೋಟವಾಗಿದ್ದಾರೆ. ನಮಗೆ ಆಗುತ್ತಿರುವ ಅನ್ಯಾಯದ ಎದುರಲ್ಲೂ ನಾವು ಸತ್ಕಾರ್ಯಗಳನ್ನು ಮಾಡುವುದನ್ನು ನಮ್ಮ ಸುತ್ತಮುತ್ತಲಿನವರು ನೋಡುವಾಗ, ಅವರು ನಮ್ಮ ಕ್ರೈಸ್ತ ಸಂದೇಶಕ್ಕೆ ಹೆಚ್ಚು ಒಳ್ಳೇ ಪ್ರತಿವರ್ತನೆ ತೋರಿಸಲು ಮನಸ್ಸುಳ್ಳವರಾಗಬಹುದು.—1 ಪೇತ್ರ 2:12.
14 ಆದರೆ ಶಾಂತಿಯನ್ನು ವರ್ಧಿಸುವ ಸಲುವಾಗಿ ನಾವು ಎಷ್ಟರ ಮಟ್ಟಿಗೆ ಮುಂದೆ ಸಾಗಬೇಕು? ಸಾಧ್ಯವಾಗುವಷ್ಟರ ಮಟ್ಟಿಗೆ ಮುಂದೆ ಸಾಗಬೇಕು. ಪೌಲನು ತನ್ನ ಕ್ರೈಸ್ತ ಸಹೋದರರಿಗೆ ಹೇಳಿದ್ದು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” (ರೋಮಾಪುರ 12:18) “ಸಾಧ್ಯವಾದರೆ” ಮತ್ತು “ನಿಮ್ಮಿಂದಾಗುವ ಮಟ್ಟಿಗೆ” ಎಂಬವುಗಳು ಮಿತಿ ಕಲ್ಪಿಸುವ ಶಬ್ದಗಳು. ಇವು, ಯಾವಾಗಲೂ ಇತರರೊಂದಿಗೆ ಶಾಂತಿಯಿಂದಿರುವುದು ಸಾಧ್ಯವಾಗಿರಲಿಕ್ಕಿಲ್ಲವೆಂದು ಸೂಚಿಸುತ್ತವೆ. ಉದಾಹರಣೆಗೆ, ಮನುಷ್ಯರೊಂದಿಗೆ ಕೇವಲ ಸಮಾಧಾನದಿಂದಿರಲಿಕ್ಕಾಗಿ ನಾವು ದೇವರಾಜ್ಞೆಗೆ ಅವಿಧೇಯರಾಗೆವು. (ಮತ್ತಾಯ 10:34-36; ಇಬ್ರಿಯ 12:14) ಆದರೂ, “ಎಲ್ಲರ ಸಂಗಡ” ಶಾಂತಿಯಿಂದಿರಲು ನಾವು ನ್ಯಾಯೋಚಿತವಾದ ಎಲ್ಲವನ್ನೂ ಮಾಡುತ್ತೇವೆ. ಆದರೆ ನೀತಿಯ ಮೂಲತತ್ತ್ವಗಳನ್ನು ಮಾತ್ರ ಮುರಿಯುವುದಿಲ್ಲ.
‘ನೀವೇ ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ’
15 ನಾವು ಏಕೆ ಸೇಡು ತೀರಿಸಬಾರದೆಂಬುದಕ್ಕೆ ಪೌಲನು ಇನ್ನೊಂದು ಬಲವಾದ ಕಾರಣವನ್ನು ಕೊಡುತ್ತಾನೆ; ಇದು ಅನುಸರಿಸಲು ಯೋಗ್ಯವಾದ ಮಾರ್ಗ. ಅವನು ಹೇಳುವುದು: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು [ಯೆಹೋವನು] ಹೇಳುತ್ತಾನೆಂಬದಾಗಿ ಬರೆದದೆ.” (ರೋಮಾಪುರ 12:19) ಸೇಡು ತೀರಿಸಲು ಪ್ರಯತ್ನಿಸುವ ಕ್ರೈಸ್ತನು ದುರಹಂಕಾರಿಯಾಗಿದ್ದಾನೆ. ದೇವರ ಪಾತ್ರವನ್ನು ಅವನು ತನ್ನದಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. (ಮತ್ತಾಯ 7:1) ಅಷ್ಟು ಮಾತ್ರವಲ್ಲದೆ, ತಾನೇ ಪ್ರತಿಕಾರಕ್ಕೆ ಪ್ರತಿಕಾರ ತೋರಿಸುವ ಮೂಲಕ, “ನಾನೇ ಪ್ರತಿಫಲವನ್ನು ಕೊಡುವೆನು” ಎಂಬ ಯೆಹೋವನ ಆಶ್ವಾಸನೆಯಲ್ಲಿ ಅವನು ನಂಬಿಕೆಯನ್ನು ತೋರಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ‘ತಾನು ಆದುಕೊಂಡವರಿಗೆ’ ಯೆಹೋವನು ‘ನ್ಯಾಯ ತೀರಿಸುವನು’ ಎಂಬ ಭರವಸೆ ನಿಜ ಕ್ರೈಸ್ತರಲ್ಲಿದೆ. (ಲೂಕ 18:7, 8; 2 ಥೆಸಲೊನೀಕ 1:6-8) ಅವರು ಸೇಡು ತೀರಿಸುವ ಕೆಲಸವನ್ನು ವಿನೀತಭಾವದಿಂದ ದೇವರ ಕೈಯಲ್ಲಿ ಬಿಡುತ್ತಾರೆ.—ಯೆರೆಮೀಯ 30:23, 24; ರೋಮಾಪುರ 1:18.
16 ಒಬ್ಬ ವೈರಿಗೆ ಮುಯ್ಯಿ ತೀರಿಸುವುದು ಅವನ ಹೃದಯವನ್ನು ಹೆಚ್ಚು ಕಠಿಣಗೊಳಿಸಬಹುದು. ಆದರೆ ದಯೆತೋರಿಸುವುದು ಅವನ ಹೃದಯವನ್ನು ಮೃದುಗೊಳಿಸಬಹುದು. ಇದೇಕೆ? ರೋಮ್ನ ಕ್ರೈಸ್ತರಿಗೆ ಪೌಲನು ಹೇಳಿದ ಮಾತುಗಳನ್ನು ಗಮನಿಸಿರಿ. ಅವನು ಹೇಳುವುದು: “ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.” (ರೋಮಾಪುರ 12:20; ಜ್ಞಾನೋಕ್ತಿ 25:21, 22) ಇದರ ಅರ್ಥವೇನು?
17 “ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು” ಎಂಬ ರೂಪಕಾಲಂಕಾರವು ಬೈಬಲ್ ಸಮಯಗಳ ಲೋಹ ಕರಗಿಸುವ ವಿಧಾನದಿಂದ ತೆಗೆಯಲಾಗಿದೆ. ಒಂದು ಕುಲುಮೆಯಲ್ಲಿ ಅದುರನ್ನು ಹಾಕಿ, ಅದರ ಕೆಳಗಡೆ ಕಲ್ಲಿದ್ದಲಿನ ಪದರವನ್ನು ಹಾಕುತ್ತಿದ್ದುದು ಮಾತ್ರವಲ್ಲ ಅದರ ಮೇಲ್ಗಡೆಯೂ ಕಲ್ಲಿದ್ದಲನ್ನು ಹಾಕಲಾಗುತ್ತಿತ್ತು. ಮೇಲೆ ಹಾಕಲಾಗಿದ್ದ ಉರಿಯುವ ಕಲ್ಲಿದ್ದಲು ತಾಪವನ್ನು ಹೆಚ್ಚಿಸಿದಾಗ, ಆ ಗಟ್ಟಿಯಾದ ಅದುರು ಕರಗಿ ಕಲ್ಮಶಗಳಿಂದ ಪ್ರತ್ಯೇಕಗೊಳ್ಳುತ್ತಿತ್ತು. ಇದೇ ರೀತಿ, ಒಬ್ಬ ವಿರೋಧಿಗೆ ದಯೆಯ ವರ್ತನೆಯನ್ನು ತೋರಿಸುವಲ್ಲಿ, ನಾವು ಅವನ ಗಡುಸುತನವನ್ನು ‘ಕರಗಿಸಿ’ ಅವನಲ್ಲಿರುವ ಉತ್ತಮ ಗುಣಗಳನ್ನು ಹೊರತರಬಹುದು. (2 ಅರಸುಗಳು 6:14-23) ನಿಜವೇನೆಂದರೆ, ಕ್ರೈಸ್ತ ಸಭೆಯ ಅನೇಕ ಮಂದಿ ಸದಸ್ಯರು ಸತ್ಯಾರಾಧನೆಗೆ ಪ್ರಥಮವಾಗಿ ಆಕರ್ಷಿತರಾದದ್ದು, ಯೆಹೋವನ ಸೇವಕರು ಅವರ ಪರವಾಗಿ ಮಾಡಿದ ದಯೆಯ ಕಾರ್ಯಗಳ ಮೂಲಕವೇ.
ನಾವು ಸೇಡು ತೀರಿಸದಿರಲು ಕಾರಣ
18 ರೋಮಾಪುರ 12ನೆಯ ಅಧ್ಯಾಯದ ಈ ಸಂಕ್ಷಿಪ್ತ ಚರ್ಚೆಯಲ್ಲಿ, ನಾವು “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು” ಏಕೆ ಮಾಡುವುದಿಲ್ಲ ಎಂಬುದಕ್ಕಿರುವ ಅನೇಕ ಪ್ರಮುಖ ಕಾರಣಗಳನ್ನು ನಾವು ನೋಡಿದೆವು. ಒಂದನೆಯದಾಗಿ, ಸೇಡು ತೀರಿಸದೆ ಇರುವುದು ಅನುಸರಿಸಲು ಯೋಗ್ಯವಾದ ಮಾರ್ಗವಾಗಿದೆ. ದೇವರು ನಮಗೆ ತೋರಿಸಿರುವ ಕರುಣೆಯಿಂದಾಗಿ, ನಾವು ನಮ್ಮನ್ನು ದೇವರಿಗೆ ಅರ್ಪಿಸಿಕೊಳ್ಳುವುದು ಮತ್ತು ಆತನ ಆಜ್ಞೆಗಳನ್ನು ಪಾಲಿಸುವುದು ಯೋಗ್ಯವೂ ತರ್ಕಬದ್ಧವೂ ಆಗಿದೆ. ಈ ಆಜ್ಞೆಗಳಲ್ಲಿ ವೈರಿಗಳನ್ನು ಪ್ರೀತಿಸುವುದೂ ಸೇರಿದೆ. ಎರಡನೆಯದಾಗಿ, ಸೇಡಿಗೆ ಸೇಡು ತೀರಿಸದಿರುವದು ಪ್ರೀತಿಪರವಾದ ಮಾರ್ಗವಾಗಿದೆ. ಸೇಡು ತೀರಿಸುವುದನ್ನು ಬಿಟ್ಟುಬಿಟ್ಟು ಶಾಂತಿಯನ್ನು ವರ್ಧಿಸುವ ಮೂಲಕ, ಉಗ್ರ ವಿರೋಧಿಗಳು ಕೂಡ ಯೆಹೋವನ ಆರಾಧಕರಾಗುವಂತೆ ಸಹಾಯಮಾಡಲು ನಾವು ಪ್ರೀತಿಪೂರ್ವಕವಾಗಿ ನಿರೀಕ್ಷಿಸುತ್ತೇವೆ. ಮೂರನೆಯದಾಗಿ, ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡದಿರುವುದು ವಿನೀತ ಮಾರ್ಗವಾಗಿದೆ. ನಾವೇ ಸೇಡು ತೀರಿಸುವುದು ದುರಹಂಕಾರವನ್ನು ತೋರಿಸುತ್ತದೆ. ಏಕೆಂದರೆ ಯೆಹೋವನು ಹೇಳುವುದು: “ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ.” ದೇವರ ವಾಕ್ಯ ಹೀಗೂ ಎಚ್ಚರಿಸುತ್ತದೆ: “ಎಲ್ಲಿ ಹೆಮ್ಮೆಯೋ ಅಲ್ಲಿ ನಾಚಿಕೆ; ದೀನರಲ್ಲಿ ಜ್ಞಾನ.” (ಜ್ಞಾನೋಕ್ತಿ 11:2) ಆದುದರಿಂದ ಸೇಡು ತೀರಿಸುವುದನ್ನು ದೇವರ ಕೈಯಲ್ಲಿ ವಿವೇಕದಿಂದ ಬಿಟ್ಟುಬಿಡುವುದು ನಾವು ದೀನರೆಂದು ತೋರಿಸುತ್ತದೆ.
19 ನಾವು ಇತರರೊಂದಿಗೆ ಹೇಗೆ ವರ್ತಿಸಬೇಕೆಂಬ ತನ್ನ ಚರ್ಚೆಯನ್ನು ಪೌಲನು ಸಾರಾಂಶವಾಗಿ ಹೇಳುತ್ತಾನೆ. ಕ್ರೈಸ್ತರಿಗೆ ಬುದ್ಧಿ ಹೇಳುತ್ತಾ ಅವನಂದದ್ದು: “ಕೆಟ್ಟದ್ದು ನಿನ್ನನ್ನು ಸೋಲಿಸುವಂತೆ ಬಿಡದೆ ಒಳ್ಳೆಯದರಿಂದ ಕೆಟ್ಟದ್ದನ್ನು ಗೆಲ್ಲುತ್ತ ಇರು.” (ರೋಮಾಪುರ 12:21, NW) ನಾವು ಇಂದು ಯಾವ ಕೆಡುಕಿನ ಶಕ್ತಿಗಳನ್ನು ಎದುರಿಸುತ್ತಿದ್ದೇವೆ? ನಾವು ಅವುಗಳನ್ನು ಹೇಗೆ ಜಯಿಸಬಲ್ಲೆವು? ಈ ಮತ್ತು ಇತರ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುತ್ತದೆ. (w07 7/1)
ವಿವರಿಸಬಲ್ಲಿರಾ?
• ರೋಮಾಪುರ 12ನೆಯ ಅಧ್ಯಾಯದಲ್ಲಿ ಯಾವ ಸಲಹೆ ಪದೇ ಪದೇ ಕಂಡುಬರುತ್ತದೆ?
• ನಾವು ಸೇಡು ತೀರಿಸದಂತೆ ನಮ್ಮನ್ನು ಪ್ರಚೋದಿಸುವಂಥದ್ದು ಯಾವುದು?
• “ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು” ಮಾಡದಿದ್ದರೆ ನಾವೂ ಇತರರೂ ಯಾವ ಪ್ರಯೋಜನಗಳನ್ನು ಪಡೆಯುವೆವು?
[ಅಧ್ಯಯನ ಪ್ರಶ್ನೆಗಳು]
1. ಯಾವ ರೀತಿಯ ವರ್ತನೆಯು ಸರ್ವಸಾಮಾನ್ಯವಾಗಿದೆ?
2. (ಎ) ಸತ್ಯ ಕ್ರೈಸ್ತರು ಸೇಡು ತೀರಿಸುವ ದುಷ್ಪ್ರೇರಣೆಯನ್ನು ಏಕೆ ನಿರೋಧಿಸುತ್ತಾರೆ? (ಬಿ) ನಾವು ಯಾವ ಪ್ರಶ್ನೆಗಳನ್ನು ಮತ್ತು ಬೈಬಲಿನ ಯಾವ ಅಧ್ಯಾಯವನ್ನು ಪರಿಗಣಿಸುವೆವು?
3, 4. (ಎ) ರೋಮಾಪುರ 12ನೆಯ ಅಧ್ಯಾಯ ಮೊದಲ್ಗೊಂಡು ಪೌಲನು ಏನನ್ನು ಚರ್ಚಿಸುತ್ತಾನೆ ಹಾಗೂ “ಆದುದರಿಂದ” ಎಂದು ಅವನು ಬಳಸಿದ ಪದದ ವಿಶೇಷತೆಯೇನು? (ಬಿ) ದೇವರ ಕರುಣೆಯು ರೋಮ್ನ ಕ್ರೈಸ್ತರ ಮೇಲೆ ಯಾವ ಪರಿಣಾಮ ಬೀರಬೇಕಿತ್ತು?
5. (ಎ) ಒಬ್ಬನು ತನ್ನನ್ನು ದೇವರಿಗೆ “ಯಜ್ಞವಾಗಿ” ಹೇಗೆ ಒಪ್ಪಿಸಿಕೊಡಬಲ್ಲನು? (ಬಿ) ಒಬ್ಬ ಕ್ರೈಸ್ತನ ವರ್ತನೆಯನ್ನು ಯಾವ ಮೂಲತತ್ತ್ವವು ಪ್ರಭಾವಿಸಬೇಕು?
6. ರೋಮಾಪುರ 12:1, 2ರಲ್ಲಿರುವ ಪೌಲನ ತರ್ಕದ ಮೇರೆಗೆ ನಾವು ಸೇಡಿಗೆ ಸೇಡು ತೀರಿಸದಂತೆ ಯಾವುದು ಪ್ರಚೋದಿಸುತ್ತದೆ?
7. ರೋಮಾಪುರ 12ನೆಯ ಅಧ್ಯಾಯದಲ್ಲಿ ಯಾವ ವಿಧದ ಪ್ರೀತಿಯನ್ನು ತಿಳಿಸಲಾಗಿದೆ?
8. ನಾವು ನಿಷ್ಕಪಟವಾದ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು?
9. ಪೌಲನು ಯಾವ ಬುದ್ಧಿವಾದವನ್ನು ಪದೇ ಪದೇ ಕೊಡುತ್ತಾನೆ?
10. ನಾವು ನಮ್ಮ ಹಿಂಸಕರನ್ನು ಯಾವ ವಿಧದಲ್ಲಿ ಆಶೀರ್ವದಿಸಬಲ್ಲೆವು?
11. (ಎ) ಸ್ತೆಫನನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು? (ಬಿ) ಪೌಲನ ಜೀವನವು ತೋರಿಸುವಂತೆ, ಕೆಲವು ಹಿಂಸಕರಲ್ಲಿ ಯಾವ ಬದಲಾವಣೆಯಾಗಬಹುದು?
12. ರೋಮಾಪುರ 12:9, 17ರ ಬುದ್ಧಿವಾದದ ಮಾತುಗಳು ಹೇಗೆ ಒಂದಕ್ಕೊಂದು ಸಂಬಂಧಿಸಿವೆ?
13. ನಾವು “ಎಲ್ಲರ ದೃಷ್ಟಿಯಲ್ಲಿ” ಯಾವ ನಡವಳಿಕೆಯನ್ನು ತೋರಿಸುತ್ತೇವೆ?
14. ಸಮಾಧಾನದಿಂದಿರಲು ನಾವು ಎಷ್ಟರ ಮಟ್ಟಿಗೆ ಪ್ರಯತ್ನಿಸಬೇಕು?
15. ನಾವೇ ಸೇಡನ್ನು ತೀರಿಸದಿರಲು ರೋಮಾಪುರ 12:19ರಲ್ಲಿ ಯಾವ ಕಾರಣವು ಕಂಡುಬರುತ್ತದೆ?
16, 17. (ಎ) ಒಬ್ಬನ ತಲೆಯ ಮೇಲೆ ‘ಕೆಂಡಗಳನ್ನು ಕೂಡಿಸಿಡು’ ಎಂಬುದರ ಅರ್ಥವೇನು? (ಬಿ) ದಯೆಯು ಅವಿಶ್ವಾಸಿಯ ಹೃದಯವನ್ನು ಮೃದುಗೊಳಿಸಿದ್ದನ್ನು ನೀವು ವೈಯಕ್ತಿಕವಾಗಿ ಅವಲೋಕಿಸಿದ್ದೀರೊ? ಒಂದು ಉದಾಹರಣೆ ಕೊಡಿ.
18. ಸೇಡು ತೀರಿಸದೆ ಇರುವುದು ಏಕೆ ಯೋಗ್ಯವೂ ಪ್ರೀತಿಪರವೂ ವಿನೀತ ಮಾರ್ಗವೂ ಆಗಿದೆ?
19. ಮುಂದಿನ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?
[ಪುಟ 24ರಲ್ಲಿರುವ ಚೌಕ]
ರೋಮಾಪುರ 12ನೇ ಅಧ್ಯಾಯವು ಕ್ರೈಸ್ತನೊಬ್ಬನಿಗೆ ಈ ಕೆಳಗಿನವರೊಂದಿಗಿನ ಸಂಬಂಧವನ್ನು ವರ್ಣಿಸುತ್ತದೆ:
• ಯೆಹೋವನು
• ಜೊತೆವಿಶ್ವಾಸಿಗಳು
• ಅವಿಶ್ವಾಸಿಗಳು
[ಪುಟ 25ರಲ್ಲಿರುವ ಚಿತ್ರ]
ರೋಮಾಪುರದವರಿಗೆ ಪೌಲನು ಬರೆದ ಪತ್ರವು ಕ್ರೈಸ್ತರಿಗೆ ಪ್ರಾಯೋಗಿಕ ಸಲಹೆಯನ್ನು ನೀಡುತ್ತದೆ