ಶ್ರದ್ಧಾಪೂರ್ವಕವಾಗಿ ಯೆಹೋವನ ಆಶೀರ್ವಾದವನ್ನು ಹುಡುಕಿರಿ
“[ದೇವರು] ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವವನಾಗುತ್ತಾನೆ.”—ಇಬ್ರಿ. 11:6.
1, 2. (ಎ) ಅನೇಕ ಜನರು ದೇವರ ಆಶೀರ್ವಾದಗಳನ್ನು ಹುಡುಕುವುದು ಹೇಗೆ? (ಬಿ) ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಲು ನಾವು ವಿಶೇಷ ಆಸಕ್ತಿಯುಳ್ಳವರಾಗಿರಬೇಕು ಏಕೆ?
“ದೇವರು ನಿನ್ನನ್ನು ಆಶೀರ್ವದಿಸಲಿ!” ಅಥವಾ ‘ದೇವರು ಒಳಿತನ್ನು ಮಾಡಲಿ’ ಎಂಬ ಆಶೀರ್ವಚನವನ್ನು ನಾವು ಕೇಳಿಸಿಕೊಳ್ಳುವುದು ಸಾಮಾನ್ಯ. ಕೆಲವು ದೇಶಗಳಲ್ಲಿ, ವ್ಯಕ್ತಿಯೊಬ್ಬನು ಸೀನಿದಾಗ ತೀರ ಅಪರಿಚಿತರು ಕೂಡ ಹಾಗೆ ಹೇಳುವುದುಂಟು. ವಿಭಿನ್ನ ಧರ್ಮಗಳ ಪಾದ್ರಿಗಳು ಜನರನ್ನು, ಪ್ರಾಣಿಗಳನ್ನು, ನಿರ್ಜೀವ ವಸ್ತುಗಳನ್ನು ಸಹ ಹರಸಿ ಆಶೀರ್ವದಿಸುತ್ತಾರೆ. ಪುಣ್ಯ ಸಿಗುತ್ತದೆ ಎಂಬ ಆಸೆ ತೋರಿಸಿ ಪ್ರವಾಸಿಗರನ್ನು ಧಾರ್ಮಿಕ ಯಾತ್ರಾಸ್ಥಳಗಳಿಗೆ ಸೆಳೆಯುವುದೂ ಇದೆ. ರಾಜಕಾರಣಿಗಳು ತಮ್ಮ ರಾಷ್ಟ್ರವನ್ನು ಹರಸುವಂತೆ ದೇವರನ್ನು ಸದಾ ಕೋರುತ್ತಿರುತ್ತಾರೆ. ಆಶೀರ್ವಾದಕ್ಕಾಗಿ ಮಾಡುವ ಅಂಥ ಕೋರಿಕೆಗಳು ಸೂಕ್ತವೋ? ಅವು ಕಾರ್ಯಸಾಧಕವೋ? ದೇವರ ಆಶೀರ್ವಾದವನ್ನು ನಿಜವಾಗಿ ಯಾರು ಪಡೆಯುತ್ತಾರೆ? ಏಕೆ?
2 ಅಂತ್ಯಕಾಲದಲ್ಲಿ ದ್ವೇಷ ಮತ್ತು ವಿರೋಧದ ಮಧ್ಯೆಯೂ ರಾಜ್ಯದ ಸುವಾರ್ತೆಯನ್ನು ಭೂಮಿಯಾದ್ಯಂತ ಸಾರುವ ಶುದ್ಧರೂ ಶಾಂತಿಪ್ರಿಯರೂ ಆದ ಜನರು ತನಗಿರುವರು ಮತ್ತು ಅವರು ಸಕಲ ಜನಾಂಗಗಳಿಂದ ಬಂದವರಾಗಿರುವರು ಎಂದು ಯೆಹೋವನು ಮುಂತಿಳಿಸಿದನು. (ಯೆಶಾ. 2:2-4; ಮತ್ತಾ. 24:14; ಪ್ರಕ. 7:9, 14) ಆ ಪ್ರೇರಿತ ವರ್ಣನೆಗೆ ಅನುಸಾರ ಜೀವಿಸುವ ಜವಾಬ್ದಾರಿಯನ್ನು ಸ್ವೀಕರಿಸಿರುವ ನಾವು ದೇವರ ಆಶೀರ್ವಾದವನ್ನು ಬಯಸುತ್ತೇವೆ ಮಾತ್ರವಲ್ಲ ನಮಗೆ ಅದರ ಅಗತ್ಯವಿದೆ. ಅದರ ಹೊರತು ನಮಗೆಂದೂ ಯಶಸ್ಸು ಲಭಿಸಲಾರದು. (ಕೀರ್ತ. 127:1) ಆದರೆ ದೇವರ ಆಶೀರ್ವಾದವನ್ನು ನಾವು ಹೇಗೆ ಪಡೆದುಕೊಳ್ಳಬಲ್ಲೆವು?
ವಿಧೇಯರನ್ನು ಆಶೀರ್ವಾದಗಳು ಬೆಂಬತ್ತಿ ಬರುವವು
3. ಇಸ್ರಾಯೇಲ್ಯರು ವಿಧೇಯರಾಗಿದ್ದಲ್ಲಿ ಫಲಿತಾಂಶವು ಏನಾಗುತ್ತಿತ್ತು?
3 ಜ್ಞಾನೋಕ್ತಿ 10:6, 7 ಓದಿ. ಇಸ್ರಾಯೇಲ್ಯರು ತನ್ನ ಮಾತುಗಳಿಗೆ ವಿಧೇಯರಾದರೆ ಗಮನಾರ್ಹ ಸಮೃದ್ಧಿಯನ್ನೂ ಸುರಕ್ಷೆಯನ್ನೂ ಪಡೆದುಕೊಳ್ಳುವರು ಎಂದು ಯೆಹೋವನು ಅವರು ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕೆ ಸ್ವಲ್ಪ ಮೊದಲು ಸೂಚಿಸಿದ್ದನು. (ಧರ್ಮೋ. 28:1, 2) ಯೆಹೋವನ ಆಶೀರ್ವಾದಗಳು ಅವರ ಮೇಲೆ ಕೇವಲ ಬರುವವು ಮಾತ್ರವಲ್ಲ ಅವರನ್ನು ಬೆಂಬತ್ತಿ ಬರಲಿದ್ದವು. ಯಾರು ವಿಧೇಯರಾಗುತ್ತಾರೋ ಅವರ ಮೇಲೆ ಆ ಆಶೀರ್ವಾದಗಳು ಬರಲಿದ್ದವು ಖಂಡಿತ.
4. ನಿಜ ವಿಧೇಯತೆಯಲ್ಲಿ ಏನು ಒಳಗೂಡಿದೆ?
4 ಇಸ್ರಾಯೇಲ್ಯರು ಯಾವ ಮನೋಭಾವದಿಂದ ವಿಧೇಯರಾಗಿರಬೇಕಿತ್ತು? ಯೆಹೋವನ ಜನರು ಆತನನ್ನು ‘ಹರ್ಷಾನಂದದಿಂದ’ ಸೇವಿಸದೇ ಇದ್ದಲ್ಲಿ ಆತನ ಮೆಚ್ಚಿಕೆಯನ್ನು ಪಡೆಯಲಾರರು ಎಂದು ಧರ್ಮಶಾಸ್ತ್ರವು ತಿಳಿಸಿತ್ತು. (ಧರ್ಮೋಪದೇಶಕಾಂಡ 28:45-47 ಓದಿ.) ನಿರ್ದಿಷ್ಟ ಆಜ್ಞೆಗಳಿಗೆ ಬರೇ ಯಾಂತ್ರಿಕ ವಿಧೇಯತೆಯನ್ನು ಯೆಹೋವನು ಮೆಚ್ಚುವುದಿಲ್ಲ. ಪ್ರಾಣಿಗಳೂ ದೆವ್ವಗಳೂ ಅಂಥ ಯಾಂತ್ರಿಕ ವಿಧೇಯತೆಯನ್ನು ತೋರಿಸಬಲ್ಲವಲ್ಲಾ. (ಮಾರ್ಕ 1:27; ಯಾಕೋ. 3:3) ದೇವರಿಗೆ ನಾವು ತೋರಿಸುವ ನಿಜ ವಿಧೇಯತೆಯು ಪ್ರೀತಿಯ ಒಂದು ಅಭಿವ್ಯಕ್ತಿ. ಅದು ಹರ್ಷಾನಂದದಿಂದ ತೋರಿಸಲ್ಪಡುತ್ತದೆ. ಆ ಹರ್ಷಾನಂದವು ಯೆಹೋವನ ಆಜ್ಞೆಗಳು ಭಾರವಾದವುಗಳಲ್ಲ ಮತ್ತು “ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ [ಆತನು] ಪ್ರತಿಫಲವನ್ನು ಕೊಡುವವನಾಗುತ್ತಾನೆ” ಎಂಬ ನಂಬಿಕೆಯಿಂದ ಉದ್ಭವಿಸುತ್ತದೆ.—ಇಬ್ರಿ. 11:6; 1 ಯೋಹಾ. 5:3.
5. ಯೆಹೋವನ ವಾಗ್ದಾನದಲ್ಲಿ ನಂಬಿಕೆಯನ್ನಿಡುವುದು ಧರ್ಮೋಪದೇಶಕಾಂಡ 15:7, 8ರ ಆಜ್ಞೆಯನ್ನು ಪಾಲಿಸಲು ಒಬ್ಬ ವ್ಯಕ್ತಿಗೆ ಹೇಗೆ ಸಹಾಯ ಮಾಡಸಾಧ್ಯವಿತ್ತು?
5 ಧರ್ಮೋಪದೇಶಕಾಂಡ 15:7, 8ರಲ್ಲಿ (ಓದಿ) ಹೇಳಲಾದ ಆಜ್ಞೆಯನ್ನು ಪಾಲಿಸುವಾಗ ಅಂಥ ನಿಜ ವಿಧೇಯತೆಯನ್ನು ಹೇಗೆ ತೋರಿಸಬಹುದಿತ್ತೆಂಬುದನ್ನು ಪರಿಗಣಿಸಿರಿ. ಒಲ್ಲದ ಮನಸ್ಸಿನಿಂದ ಆ ಆಜ್ಞೆಗೆ ವಿಧೇಯರಾದಲ್ಲಿ ಬಡವರಿಗೆ ತುಸು ಪರಿಹಾರವು ದೊರೆಯಬಹುದಿತ್ತೇನೋ ನಿಜ. ಆದರೆ ಅದು ದೇವಜನರಲ್ಲಿ ಸುಸಂಬಂಧಗಳನ್ನೂ ಸ್ನೇಹಪರತೆಯನ್ನೂ ತಂದಿರುತ್ತಿತ್ತೋ? ಹೆಚ್ಚು ಮುಖ್ಯವಾಗಿ, ಯೆಹೋವನು ತನ್ನ ಸೇವಕರ ಅಗತ್ಯಗಳನ್ನು ಒದಗಿಸಶಕ್ತನು ಎಂಬ ನಂಬಿಕೆಯನ್ನು ಮತ್ತು ಆತನ ಔದಾರ್ಯವನ್ನು ಅನುಕರಿಸುವ ಅವಕಾಶಕ್ಕಾಗಿ ಗಣ್ಯತೆಯನ್ನು ಹುಟ್ಟಿಸುತ್ತಿತ್ತೋ? ಇಲ್ಲವೇ ಇಲ್ಲ! ನಿಜವಾಗಿ ಉದಾರಿಯಾದ ವ್ಯಕ್ತಿಯ ಹೃದಯಸ್ಥಿತಿಯನ್ನು ದೇವರು ಗಮನಿಸಿದನು ಮತ್ತು ಅವನ ಎಲ್ಲ ಕೆಲಸಗಳಲ್ಲಿಯೂ ಎಲ್ಲ ಪ್ರಯತ್ನಗಳಲ್ಲಿಯೂ ಅವನನ್ನು ಆಶೀರ್ವದಿಸುವನೆಂದು ವಚನಕೊಟ್ಟನು. (ಧರ್ಮೋ. 15:10) ಆ ವಾಗ್ದಾನದಲ್ಲಿ ನಂಬಿಕೆಯು ಉದಾರ ಕ್ರಿಯೆಗಳನ್ನು ಹೆಚ್ಚಿಸಿ, ಫಲಿತಾಂಶವಾಗಿ ಹೇರಳ ಆಶೀರ್ವಾದಗಳನ್ನು ಪಡೆಯುವಂತೆ ಸಾಧ್ಯಮಾಡುವುದು.—ಜ್ಞಾನೋ. 28:20.
6. ಇಬ್ರಿಯ 11:6 ನಮಗೆ ಯಾವ ಭರವಸೆಯನ್ನು ಕೊಡಬೇಕು?
6 ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಲು, ಆತನು ಪ್ರತಿಫಲವನ್ನು ಕೊಡುವ ದೇವರು ಎಂದು ನಂಬಿಕೆಯಿಡಬೇಕು ಮಾತ್ರವಲ್ಲ ನಮ್ಮಲ್ಲಿರಬೇಕಾದ ಇನ್ನೊಂದು ಗುಣವನ್ನೂ ಇಬ್ರಿಯ 11:6 ಎತ್ತಿಹೇಳುತ್ತದೆ. “ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ” ಯೆಹೋವನು ಪ್ರತಿಫಲವನ್ನು ಕೊಡುತ್ತಾನೆ ಎಂಬುದನ್ನೂ ಗಮನಿಸಿ. ಇಲ್ಲಿ ಬಳಸಲಾದ ಮೂಲಭಾಷಾ ಪದವು ಗಾಢವಾದ ಹಾಗೂ ಏಕಾಗ್ರಚಿತ್ತದ ಪ್ರಯತ್ನವನ್ನು ಸೂಚಿಸುತ್ತದೆ. ಇದು ನಮಗೆ ದೇವರ ಆಶೀರ್ವಾದದ ಪ್ರಾಪ್ತಿಯನ್ನು ಎಷ್ಟು ಖಾತ್ರಿಪಡಿಸುತ್ತದೆ! ಆಶೀರ್ವಾದದ ಮೂಲನು “ಸುಳ್ಳಾಡಲು ಸಾಧ್ಯವಿಲ್ಲದ” ಒಬ್ಬನೇ ಸತ್ಯದೇವರು ತಾನೇ. (ತೀತ 1:2) ತನ್ನ ವಾಗ್ದಾನಗಳು ನಿಶ್ಚಯವಾಗಿಯೂ ಭರವಸಾರ್ಹ ಎಂಬುದನ್ನು ಸಹಸ್ರಾರು ವರ್ಷಗಳಿಂದ ಆತನು ತೋರಿಸಿದ್ದಾನೆ. ಆತನ ಮಾತುಗಳು ಎಂದೂ ವಿಫಲವಾಗವು; ಅವು ಯಾವಾಗಲೂ ಸತ್ಯವಾಗಿ ನೆರವೇರುತ್ತವೆ. (ಯೆಶಾ. 55:11) ಆದುದರಿಂದ ನಾವು ನಿಜ ನಂಬಿಕೆಯನ್ನು ತೋರಿಸುವುದಾದರೆ ಆತನು ಪ್ರತಿಫಲ ಕೊಡುವನೆಂಬ ಪೂರ್ಣ ಭರವಸೆ ನಮಗಿರಬಲ್ಲದು.
7. ಅಬ್ರಹಾಮನ ‘ಸಂತತಿಯ’ ಮೂಲಕ ನಾವು ಹೇಗೆ ಆಶೀರ್ವಾದವನ್ನು ಪಡೆದುಕೊಳ್ಳಬಲ್ಲೆವು?
7 ಯೇಸು ಕ್ರಿಸ್ತನು ಅಬ್ರಹಾಮನ ‘ಸಂತತಿಯ’ ಪ್ರಧಾನ ಭಾಗವಾಗಿ ರುಜುವಾದನು. ಅಭಿಷಿಕ್ತ ಕ್ರೈಸ್ತರು ಮುಂತಿಳಿಸಲಾದ ಆ ‘ಸಂತತಿಯ’ ದ್ವಿತೀಯ ಭಾಗವಾಗಿದ್ದಾರೆ. ಅವರು ‘ತಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವ’ ನೇಮಕವನ್ನು ಪಡೆದಿರುತ್ತಾರೆ. (ಗಲಾ. 3:7-9, 14, 16, 26-29; 1 ಪೇತ್ರ 2:9) ಯೇಸು ತನ್ನ ಆಸ್ತಿಯ ಮೇಲೆ ಯಾರನ್ನು ನೇಮಿಸಿದ್ದಾನೋ ಅವರನ್ನು ನಾವು ಅಲಕ್ಷಿಸಿದಲ್ಲಿ ಯೆಹೋವನೊಂದಿಗೆ ಒಂದು ಸುಸಂಬಂಧವನ್ನು ಗಳಿಸಲಾರೆವು. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಸಹಾಯದ ಹೊರತು ದೇವರ ವಾಕ್ಯದಲ್ಲಿ ಓದುವ ವಿಷಯಗಳ ಪೂರ್ಣಾರ್ಥವನ್ನು ನಾವು ಗ್ರಹಿಸಲಾರೆವು ಮಾತ್ರವಲ್ಲ ಅವನ್ನು ಹೇಗೆ ಅನ್ವಯಿಸುವುದೆಂಬುದನ್ನೂ ತಿಳಿಯಲಾರೆವು. (ಮತ್ತಾ. 24:45-47) ಶಾಸ್ತ್ರಗ್ರಂಥಗಳಿಂದ ಕಲಿಯುವ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಮಾತ್ರ ದೇವರ ಆಶೀರ್ವಾದವನ್ನು ನಾವು ಪಡೆದುಕೊಳ್ಳಬಲ್ಲೆವು.
ದೇವರ ಚಿತ್ತದ ಮೇಲೆ ಕೇಂದ್ರಿತ
8, 9. ಪೂರ್ವಜನಾದ ಯಾಕೋಬನು ದೇವರ ವಾಗ್ದಾನಕ್ಕೆ ಹೊಂದಿಕೆಯಲ್ಲಿ ಪ್ರಯಾಸಪಟ್ಟು ಶ್ರಮಿಸಿದ್ದು ಹೇಗೆ?
8 ದೇವರ ಆಶೀರ್ವಾದವನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಯಾಸಪಟ್ಟು ಶ್ರಮಿಸುವ ವಿಷಯದಲ್ಲಿ ಪೂರ್ವಜನಾದ ಯಾಕೋಬನು ನಮ್ಮ ನೆನಪಿಗೆ ಬರಬಹುದು. ದೇವರು ಅಬ್ರಹಾಮನಿಗೆ ಕೊಟ್ಟ ವಾಗ್ದಾನವು ಹೇಗೆ ನೆರವೇರುವುದು ಎಂದು ಅವನಿಗೆ ಗೊತ್ತಿರಲಿಲ್ಲ. ಆದರೂ ತನ್ನ ಪಿತಾಮಹನ ಸಂತಾನವನ್ನು ಯೆಹೋವನು ಮಹತ್ತಾಗಿ ಹೆಚ್ಚಿಸುವನು ಮತ್ತು ಅವನ ವಂಶಜರು ಒಂದು ದೊಡ್ಡ ಜನಾಂಗವಾಗುವರು ಎಂದವನು ನಂಬಿದ್ದನು. ಹೀಗೆ ಕ್ರಿ.ಪೂ. 1781ರಲ್ಲಿ ಯಾಕೋಬನು ತನಗಾಗಿ ಪತ್ನಿಯನ್ನು ದೊರಕಿಸಿಕೊಳ್ಳಲು ಖಾರಾನಿಗೆ ಪ್ರಯಾಣಿಸಿದಾಗ, ಒಬ್ಬಾಕೆ ಉಲ್ಲಾಸಿತ ಸಹಕಾರಿಣಿಯನ್ನು ಕಂಡುಕೊಳ್ಳುವುದರಲ್ಲಿ ಮಾತ್ರವೇ ಅವನು ಆಸಕ್ತಿಯಿಂದಿರಲಿಲ್ಲ, ಬದಲಿಗೆ ಯೆಹೋವನ ಆರಾಧಕಳಾಗಿದ್ದ ಆಧ್ಯಾತ್ಮಿಕ ಮನಸ್ಸಿನ ಸ್ತ್ರೀಯನ್ನು ಹಾಗೂ ತನಗೆ ಹುಟ್ಟುವ ಮಕ್ಕಳಿಗೆ ಒಳ್ಳೇ ತಾಯಿಯಾಗಲಿದ್ದವಳನ್ನು ಹುಡುಕಿದನು.
9 ಯಾಕೋಬನು ತನ್ನ ಸಂಬಂಧಿಕಳಾಗಿದ್ದ ರಾಹೇಲಳನ್ನು ಅಲ್ಲಿ ಸಂಧಿಸಿದನು ಎಂದು ನಮಗೆ ಗೊತ್ತಿದೆ. ಅವನು ರಾಹೇಲಳನ್ನು ಬಹಳವಾಗಿ ಪ್ರೀತಿಸತೊಡಗಿದನು. ಅವಳನ್ನು ಪತ್ನಿಯಾಗಿ ಪಡೆಯುವುದಕ್ಕಾಗಿ ಏಳು ವರ್ಷಗಳ ತನಕ ಅವಳ ತಂದೆ ಲಾಬಾನನ ಕೈಕೆಳಗೆ ಕೆಲಸಮಾಡಲೂ ಒಪ್ಪಿಕೊಂಡನು. ಇದು ಕೇವಲ ಅವಿಸ್ಮರಣೀಯ ಪ್ರೇಮಕಥೆಯಲ್ಲ. ತನ್ನ ಅಜ್ಜನಾದ ಅಬ್ರಹಾಮನಿಗೆ ಕೊಟ್ಟ ಹಾಗೂ ತನ್ನ ತಂದೆ ಇಸಾಕನಿಗೆ ಪುನರುಚ್ಚರಿಸಿದ್ದ ಸರ್ವಶಕ್ತ ದೇವರ ವಾಗ್ದಾನವು ಯಾಕೋಬನಿಗೆ ನಿಶ್ಚಯವಾಗಿ ತಿಳಿದಿತ್ತು. (ಆದಿ. 18:18; 22:17, 18; 26:3-5, 24, 25) ಸರದಿಯಲ್ಲಿ ಇಸಾಕನು ಯಾಕೋಬನಿಗೆ ಹೇಳಿದ್ದು: “ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ ನಿನಗೆ ಬಹಳ ಸಂತತಿಯನ್ನು ಕೊಟ್ಟು ನಿನ್ನಿಂದ ಅನೇಕ ಜನಾಂಗಗಳು ಹುಟ್ಟುವಂತೆ ಅನುಗ್ರಹಿಸಲಿ; ಆತನು ಅಬ್ರಹಾಮನಿಗೆ ಕೊಟ್ಟ ಆಶೀರ್ವಾದವನ್ನು ನಿನಗೂ ನಿನ್ನ ಸಂತತಿಗೂ ಕೊಟ್ಟು ತಾನು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದೂ ನೀನು ಪ್ರವಾಸವಾಗಿರುವಂಥದೂ ಆಗಿರುವ ಈ ದೇಶವನ್ನು ನೀನು ಬಾಧ್ಯನಾಗಿ ಹೊಂದುವಂತೆ ಮಾಡಲಿ.” (ಆದಿ. 28:3, 4) ಆದುದರಿಂದ ಯೋಗ್ಯ ಪತ್ನಿಯನ್ನು ಕಂಡುಕೊಂಡು ಒಂದು ಕುಟುಂಬವನ್ನು ಹುಟ್ಟಿಸಲು ಯಾಕೋಬನು ಮಾಡಿದ ಪ್ರಯತ್ನವು ಯೆಹೋವನು ಹೇಳಿದ್ದ ಮಾತುಗಳಲ್ಲಿ ಅವನಿಗಿದ್ದ ದೃಢಭರವಸೆಯನ್ನು ತೋರಿಸಿತು.
10. ಯಾಕೋಬನ ಬೇಡಿಕೆಗನುಸಾರ ಅವನನ್ನು ಆಶೀರ್ವದಿಸಲು ಯೆಹೋವನು ಸಂತೋಷಪಟ್ಟದ್ದೇಕೆ?
10 ಯಾಕೋಬನು ತನ್ನ ಕುಟುಂಬದ ಅನುಕೂಲತೆಗಾಗಿ ಐಶ್ವರ್ಯವನ್ನು ಹುಡುಕುತ್ತಿರಲಿಲ್ಲ. ಅವನ ಮನಸ್ಸು ತನ್ನ ಸಂತಾನಾಭಿವೃದ್ಧಿಯ ಕುರಿತಾಗಿ ಯೆಹೋವನು ನುಡಿದ ವಾಗ್ದಾನದ ಮೇಲಿತ್ತು. ಯೆಹೋವನ ಚಿತ್ತದ ನೆರವೇರಿಕೆಯ ಮೇಲೆ ಅವನ ಮನಸ್ಸು ಕೇಂದ್ರಿತವಾಗಿತ್ತು. ಯಾವುದೇ ಅಡ್ಡಿತಡೆಗಳ ಮಧ್ಯೆಯೂ ಯೆಹೋವನ ಆಶೀರ್ವಾದಗಳನ್ನು ಪಡೆಯಲು ತನ್ನಿಂದಾದ ಸಕಲ ಪ್ರಯಾಸ ಪ್ರಯತ್ನಗಳನ್ನು ಮಾಡಲು ಅವನು ದೃಢಸಂಕಲ್ಪ ಮಾಡಿದ್ದನು. ಅವನು ಆ ಮನೋಭಾವವನ್ನು ತನ್ನ ವೃದ್ಧಾಪ್ಯದ ತನಕ ಕಾಪಾಡಿಕೊಂಡನು. ಅದಕ್ಕಾಗಿ ಯೆಹೋವನು ಅವನನ್ನು ಆಶೀರ್ವದಿಸಿದನು.—ಆದಿಕಾಂಡ 32:24-29 ಓದಿ.
11. ದೇವರ ಪ್ರಕಟಿತ ಚಿತ್ತದೊಂದಿಗೆ ಹೊಂದಿಕೆಯಲ್ಲಿ ನಾವು ಯಾವ ಪ್ರಯತ್ನವನ್ನು ಮಾಡಬೇಕು?
11 ಯೆಹೋವನ ಉದ್ದೇಶದ ನೆರವೇರಿಕೆಯ ಎಲ್ಲ ವಿವರಗಳು ಯಾಕೋಬನಂತೆ ನಮಗೂ ತಿಳಿದಿಲ್ಲ. ಆದರೂ ದೇವರ ವಾಕ್ಯದ ಅಧ್ಯಯನದ ಮೂಲಕ ‘ಯೆಹೋವನ ದಿನದಲ್ಲಿ’ ನಾವು ಏನನ್ನು ನಿರೀಕ್ಷಿಸತಕ್ಕದ್ದು ಎಂಬುದರ ಸಾಮಾನ್ಯ ಗ್ರಹಿಕೆ ನಮಗಿದೆ. (2 ಪೇತ್ರ 3:10, 17) ಉದಾಹರಣೆಗೆ, ಆ ದಿನವು ಸರಿಯಾಗಿ ಯಾವಾಗ ಬರುವುದು ಎಂಬುದು ನಮಗೆ ತಿಳಿದಿಲ್ಲ. ಆದರೆ ಅದು ಸಮೀಪವಿದೆ ಎಂದು ನಮಗೆ ತಿಳಿದಿದೆ. ಉಳಿದಿರುವ ಕೊಂಚ ಅವಧಿಯಲ್ಲಿ ಕೂಲಂಕಷ ಸಾಕ್ಷಿಯನ್ನು ಕೊಡುವ ಮೂಲಕ ನಾವು ನಮ್ಮನ್ನೂ ನಮಗೆ ಕಿವಿಗೊಡುವವರನ್ನೂ ರಕ್ಷಿಸುವೆವು ಎಂದು ದೇವರ ವಾಕ್ಯವು ಹೇಳುವಾಗ ನಾವದನ್ನು ನಂಬುತ್ತೇವೆ.—1 ತಿಮೊ. 4:16.
12. ಯಾವ ಖಾತ್ರಿಯು ನಮಗಿರಸಾಧ್ಯವಿದೆ?
12 ಅಂತ್ಯವು ಯಾವುದೇ ಸಮಯದಲ್ಲಿ ಬರಸಾಧ್ಯವಿದೆ ಎಂಬ ಮನವರಿಕೆ ನಮಗಿದೆ. ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ನಾವು ವೈಯಕ್ತಿಕ ಸಾಕ್ಷಿಯನ್ನು ಕೊಡುವ ತನಕ ಯೆಹೋವನು ಕಾಯಬೇಕೆಂದಿರುವುದಿಲ್ಲ. (ಮತ್ತಾ. 10:23) ಅದಲ್ಲದೆ ಸಾರುವ ಕೆಲಸವನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸುವುದು ಎಂಬ ವಿಷಯದಲ್ಲಿ ನಮಗೆ ಒಳ್ಳೇ ಮಾರ್ಗದರ್ಶನೆ ಸಿಗುತ್ತದೆ. ನಮ್ಮಲ್ಲಿರುವ ಯಾವುದೇ ಸ್ವತ್ತು ಸೌಲಭ್ಯವನ್ನು ಬಳಸುತ್ತಾ ಈ ಕೆಲಸದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ನಾವು ಭಾಗವಹಿಸುವುದು ನಂಬಿಕೆಯಿಂದಲೇ. ಯಾವಾಗಲೂ ಅತಿ ಹೆಚ್ಚು ಫಲಕೊಡುವ ಟೆರಿಟೊರಿಯಲ್ಲಿಯೇ ನಾವು ಸಾರಬೇಕೆಂದಿರುವುದಿಲ್ಲ. ಫಲ ಸಿಗುವುದೊ ಇಲ್ಲವೊ ಎಂಬದನ್ನು ನಾವು ಮುಂಚಿತವಾಗಿ ತಿಳಿಯಸಾಧ್ಯವಿಲ್ಲವಲ್ಲಾ. (ಪ್ರಸಂಗಿ 11:5, 6 ಓದಿ.) ಬಿಡದೆ ಸಾರುವುದು ನಮ್ಮ ಕೆಲಸ. ಯೆಹೋವನು ತನ್ನ ಆಶೀರ್ವಾದವನ್ನು ಕೊಟ್ಟೇಕೊಡುವನು ಎಂಬ ಭರವಸೆಯಿಂದ ನಾವು ಸಾರುತ್ತೇವೆ. (1 ಕೊರಿಂ. 3:6, 7) ನಮ್ಮ ಪರಿಶ್ರಮದ ಪ್ರಯತ್ನಗಳನ್ನು ಆತನು ನೋಡುತ್ತಾನೆ ಮತ್ತು ತನ್ನ ಪವಿತ್ರಾತ್ಮದ ಮೂಲಕ ನಮಗೆ ಬೇಕಾದ ಯಾವುದೇ ನಿರ್ದಿಷ್ಟ ಮಾರ್ಗದರ್ಶನೆಯನ್ನು ಆತನು ಒದಗಿಸುವನು ಎಂಬ ಖಾತ್ರಿಯು ನಮಗಿರಬಲ್ಲದು.—ಕೀರ್ತ. 32:8.
ಪವಿತ್ರಾತ್ಮಕ್ಕಾಗಿ ಬೇಡಿರಿ
13, 14. ದೇವರ ಸೇವಕರನ್ನು ಅರ್ಹಗೊಳಿಸಲು ಪವಿತ್ರಾತ್ಮಕ್ಕಿರುವ ಶಕ್ತಿಯು ತೋರಿಬಂದಿರುವುದು ಹೇಗೆ?
13 ಸಾರುವ ಕೆಲಸದಲ್ಲಿ ಭಾಗವಹಿಸಲು ಅಥವಾ ಒಂದು ನೇಮಕವನ್ನು ಪೂರೈಸಲು ನಮಗೆ ಸಾಮರ್ಥ್ಯವಿಲ್ಲ ಎಂಬ ಅನಿಸಿಕೆ ಬಂದರೆ ಆಗೇನು? ದೇವರ ಸೇವೆಯಲ್ಲಿ ನಮಗಿರುವ ಯಾವುದೇ ಸಾಮರ್ಥ್ಯವನ್ನು ಪ್ರಗತಿಗೊಳಿಸಲು ಯೆಹೋವನು ತನ್ನ ಪವಿತ್ರಾತ್ಮವನ್ನು ಕೊಡುವಂತೆ ನಾವು ಬೇಡಿಕೊಳ್ಳಬೇಕು. (ಲೂಕ 11:13 ಓದಿ.) ಜನರ ಹಿಂದಣ ಪರಿಸ್ಥಿತಿಗಳು ಅಥವಾ ಅನುಭವಗಳು ಹೇಗೆಯೇ ಇರಲಿ ದೇವರ ಪವಿತ್ರಾತ್ಮವು ಅವರನ್ನು ಒಂದು ಕೆಲಸಕ್ಕಾಗಿ ಅಥವಾ ಸೇವಾ ಸುಯೋಗಕ್ಕಾಗಿ ಅರ್ಹಗೊಳಿಸಬಲ್ಲದು. ಉದಾಹರಣೆಗಾಗಿ ಇಸ್ರಾಯೇಲ್ಯರು ಐಗುಪ್ತದ ದಾಸತ್ವದಿಂದ ಹೊರಗೆ ಬಂದಾಗ ಏನಾಯಿತೆಂದು ಗಮನಿಸಿರಿ. ಕುರುಬರೂ ದಾಸರೂ ಆಗಿ ಕೆಲಸಮಾಡಿದ್ದ ಅವರಿಗೆ ಯುದ್ಧಾಭ್ಯಾಸದ ಯಾವ ಅನುಭವವೂ ಇರಲಿಲ್ಲ. ಆದರೂ ಶತ್ರುಗಳನ್ನು ಯುದ್ಧದಲ್ಲಿ ಸೋಲಿಸಿಬಿಡುವ ಶಕ್ತಿಯನ್ನು ಆ ಕೂಡಲೆ ದೇವರಾತ್ಮವು ಅವರಿಗೆ ಕೊಟ್ಟಿತು. (ವಿಮೋ. 17:8-13) ಅನಂತರ ಸ್ವಲ್ಪ ಸಮಯದಲ್ಲೇ ಅದೇ ಪವಿತ್ರಾತ್ಮವು, ಬೆಚಲೇಲ ಮತ್ತು ಒಹೊಲೀಯಾಬ ಎಂಬವರಿಗೆ ದೇವದರ್ಶನದ ಗುಡಾರದ ನಯನಾಜೂಕಿನ, ಶಿಲ್ಪಕಲಾ ಕೆಲಸವನ್ನು ದೇವರು ಗೊತ್ತುಮಾಡಿದ ರೀತಿಯಲ್ಲಿ ಮಾಡಿಮುಗಿಸಲು ಬೇಕಾದ ಸಾಮರ್ಥ್ಯವನ್ನು ಕೊಟ್ಟಿತು.—ವಿಮೋ. 31:2-6; 35:30-35.
14 ಅದೇ ಶಕ್ತಿಶಾಲಿ ಪವಿತ್ರಾತ್ಮವು ಆಧುನಿಕ ದಿನದ ದೇವರ ಸೇವಕರನ್ನೂ ಸಂಘಟನೆಯ ಕೆಲಸ ಮಾಡಲು ಸನ್ನದ್ಧಗೊಳಿಸಿತ್ತು. ಉದಾಹರಣೆಗೆ, ಸಂಘಟನೆಯು ತನ್ನ ಸ್ವಂತ ಮುದ್ರಣ ಕೆಲಸವನ್ನು ಆರಂಭಿಸುವ ಅಗತ್ಯಬಂದಾಗ ಅದು ತೋರಿಬಂತು. ಆ ಸಮಯದಲ್ಲಿ ಫ್ಯಾಕ್ಟರಿ ಮೇಲ್ವಿಚಾರಕರಾಗಿದ್ದ ಸಹೋದರ ಆರ್. ಜೆ. ಮಾರ್ಟಿನ್ ಒಂದು ಪತ್ರದಲ್ಲಿ, 1927ರೊಳಗೆ ಪೂರೈಸಲ್ಪಟ್ಟಿದ್ದ ಕೆಲಸವನ್ನು ಹೀಗೆ ವಿವರಿಸಿದರು: “ಕರ್ತನು ತಕ್ಕ ಸಮಯದಲ್ಲಿ ಸಹಾಯ ದ್ವಾರವನ್ನು ತೆರೆದನು. ದೊಡ್ಡ ರೋಟರಿ [ಪ್ರೆಸ್] ನಮ್ಮ ಕೈಗೆ ಸಿಕ್ಕಿತು. ಆದರೆ ಅದರ ಸಂಯೋಜನೆ ಹಾಗೂ ಕಾರ್ಯರೀತಿಯ ಕುರಿತು ನಮಗೆ ಏನೂ ತಿಳಿದಿರಲಿಲ್ಲ. ಆದರೆ ಆತನಿಗಾಗಿ ಸರ್ವಸ್ವವನ್ನೂ ಮೀಸಲಾಗಿಟ್ಟ ಜನರ ಬುದ್ಧಿಶಕ್ತಿಯನ್ನು ಹೇಗೆ ಚುರುಕುಗೊಳಿಸುವುದೆಂದು ಕರ್ತನಿಗೆ ತಿಳಿದಿದೆ. . . . ಕೆಲವೇ ವಾರಗಳಲ್ಲಿ ನಾವು ಆ ಪ್ರೆಸ್ಸನ್ನು ನಡೆಸಶಕ್ತರಾದೆವು. ಅದು ಇನ್ನೂ ಕೆಲಸಮಾಡುತ್ತಾ ಇದೆ. ಅದು ಏನೆಲ್ಲ ಮಾಡಶಕ್ತವಾಗಿತ್ತೆಂದು ಅದರ ಉತ್ಪಾದಕರು ಸಹ ತಿಳಿದಿರದ ಕೆಲಸವನ್ನು ಅದೀಗ ಮಾಡುತ್ತದೆ.” ಅಂಥ ಪ್ರಾಮಾಣಿಕ ಪ್ರಯತ್ನಗಳನ್ನು ಯೆಹೋವನು ಈ ದಿನದ ತನಕವೂ ಆಶೀರ್ವದಿಸುತ್ತಾ ಇದ್ದಾನೆ.
15. ಶೋಧನೆಯನ್ನು ಎದುರಿಸುವವರಿಗೆ ಉತ್ತೇಜನವನ್ನು ರೋಮನ್ನರಿಗೆ 8:11 ಹೇಗೆ ಕೊಡುತ್ತದೆ?
15 ಯೆಹೋವನ ಪವಿತ್ರಾತ್ಮವು ಹಲವಾರು ವಿಧಗಳಲ್ಲಿ ಕಾರ್ಯನಡಿಸುತ್ತದೆ. ಆ ಪವಿತ್ರಾತ್ಮವು ದೇವರ ಸೇವಕರೆಲ್ಲರಿಗೆ ಲಭ್ಯವಿದೆ. ದುಸ್ಸಾಧ್ಯವಾದ ಅಡ್ಡಿತಡೆಗಳನ್ನು ಪರಿಹರಿಸಲು ಅದು ಅವರಿಗೆ ಸಹಾಯಮಾಡುತ್ತದೆ. ಶೋಧನೆಯಿಂದಾಗಿ ನಾವು ಕಂಗೆಟ್ಟುಹೋದರೆ ಆಗೇನು? ರೋಮನ್ನರಿಗೆ 7:21, 25 ಮತ್ತು 8:11ರಲ್ಲಿರುವ ಪೌಲನ ಮಾತುಗಳಿಂದ ನಾವು ಬಲವನ್ನು ಹೊಂದಸಾಧ್ಯವಿದೆ. ಹೌದು, “ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನ ಪವಿತ್ರಾತ್ಮವು” ನಮ್ಮ ಪರವಾಗಿ ಕಾರ್ಯನಡಿಸುತ್ತದೆ. ಶರೀರಾಭಿಲಾಶೆಗಳ ವಿರುದ್ಧವಾಗಿ ಮಾಡುವ ಹೋರಾಟದಲ್ಲಿ ಜಯಗಳಿಸಲು ಬೇಕಾದ ಶಕ್ತಿಯನ್ನು ಅದು ನಮಗೆ ಕೊಡಬಲ್ಲದು. ಆ ವಚನವು ಆತ್ಮಾಭಿಷಿಕ್ತ ಕ್ರೈಸ್ತರಿಗಾಗಿ ಬರೆಯಲ್ಪಟ್ಟಿತ್ತಾದರೂ ಅದರ ಮೂಲತತ್ತ್ವವು ದೇವರ ಸೇವಕರೆಲ್ಲರಿಗೆ ಅನ್ವಯಿಸುತ್ತದೆ. ಕ್ರಿಸ್ತನಲ್ಲಿ ನಂಬಿಕೆಯಿಡುವ ಮೂಲಕ, ಕೆಟ್ಟ ಅಭಿಲಾಷೆಗಳನ್ನು ಸಾಯಿಸಲು ಪ್ರಯಾಸಪಡುವ ಮೂಲಕ ಹಾಗೂ ಪವಿತ್ರಾತ್ಮದ ಮಾರ್ಗದರ್ಶನೆಗೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ನಾವೆಲ್ಲರು ಜೀವವನ್ನು ಹೊಂದುತ್ತೇವೆ.
16. ದೇವರ ಪವಿತ್ರಾತ್ಮವನ್ನು ಪಡೆದುಕೊಳ್ಳಲು ನಾವೇನು ಮಾಡಬೇಕು?
16 ನಾವು ಯಾವುದೇ ಪ್ರಯತ್ನ ಮಾಡದಿದ್ದಲ್ಲಿ ದೇವರು ತನ್ನ ಕಾರ್ಯಕಾರಿ ಶಕ್ತಿಯನ್ನು ನಮಗೆ ಕೊಡುವನೆಂದು ನಾವು ನಿರೀಕ್ಷಿಸಬಲ್ಲೆವೊ? ಇಲ್ಲ. ಆ ಶಕ್ತಿಗಾಗಿ ನಾವು ಪ್ರಾರ್ಥನೆ ಮಾಡುವುದು ಮಾತ್ರವಲ್ಲ ದೇವರ ಪ್ರೇರಿತ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಸೇವಿಸುತ್ತಾ ಇರಬೇಕು. (ಜ್ಞಾನೋ. 2:1-6) ಅದಲ್ಲದೆ ದೇವರ ಪವಿತ್ರಾತ್ಮವು ಕ್ರೈಸ್ತ ಸಭೆಯ ಮೇಲೂ ನೆಲೆಸಿದೆ. ನಮ್ಮ ಕ್ರಮದ ಕೂಟದ ಹಾಜರಿಯು ‘ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕೇಳಲು’ ನಮಗಿರುವ ಅಪೇಕ್ಷೆಯನ್ನು ತೋರಿಸಿಕೊಡುತ್ತದೆ. (ಪ್ರಕ. 3:6) ಅಷ್ಟುಮಾತ್ರವಲ್ಲ, ನಾವೇನನ್ನು ಕಲಿಯುತ್ತೇವೋ ಅದಕ್ಕೆ ದೀನತೆಯಿಂದ ಪ್ರತಿಕ್ರಿಯೆ ತೋರಿಸಬೇಕು. ಜ್ಞಾನೋಕ್ತಿ 1:23 ನಮಗೆ ಪ್ರಬೋಧಿಸುವದು: ‘ನನ್ನ ಗದರಿಕೆಯನ್ನು ಕೇಳಿ ತಿರುಗಿಕೊಳ್ಳಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸುವೆನು.’ ನಿಶ್ಚಯವಾಗಿಯೂ, “ಪ್ರಭುವಾಗಿರುವ ದೇವರಿಗೆ ವಿಧೇಯರಾಗುವವರಿಗೆ” ಆತನು ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ.—ಅ. ಕಾ. 5:32.
17. ನಮ್ಮ ಪ್ರಯತ್ನಗಳ ಮೇಲೆ ದೇವರ ಆಶೀರ್ವಾದದ ಪರಿಣಾಮವನ್ನು ನಾವು ಯಾವುದಕ್ಕೆ ಹೋಲಿಸಬಹುದು?
17 ದೇವರ ಆಶೀರ್ವಾದವನ್ನು ಪಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನವು ಅಗತ್ಯವಿದೆ ನಿಜ. ಆದರೂ ಯೆಹೋವನು ತನ್ನ ಜನರ ಮೇಲೆ ಸುರಿಸುವ ಹೇರಳ ಸುವರಗಳಿಗೆ ನಾವು ಕಷ್ಟಪಟ್ಟು ಕೆಲಸ ಮಾಡುವುದೊಂದೇ ಕಾರಣವಾಗಿರಲು ಸಾಧ್ಯವಿಲ್ಲವೆಂದು ನೆನಪಿಡಿ. ನಮ್ಮ ಪ್ರಯತ್ನಗಳ ಮೇಲೆ ಆತನ ಆಶೀರ್ವಾದದ ಪರಿಣಾಮವನ್ನು ಪೌಷ್ಠಿಕ ಆಹಾರದಿಂದ ನಮ್ಮ ದೇಹವು ಪ್ರಯೋಜನ ಹೊಂದುವ ವಿಧಕ್ಕೆ ಹೋಲಿಸಬಹುದು. ನಾವು ಆಹಾರವನ್ನು ಉಂಡು ಆನಂದಿಸುವಂತೆ ಹಾಗೂ ಅದರಿಂದ ಆವಶ್ಯಕ ಪೋಷಣೆಯನ್ನು ಪಡೆದುಕೊಳ್ಳುವಂತೆ ದೇವರು ನಮ್ಮ ದೇಹವನ್ನು ರೂಪಿಸಿದ್ದಾನೆ. ಆತನು ಆಹಾರವನ್ನು ಸಹ ಒದಗಿಸುತ್ತಾನೆ. ಆಹಾರವಸ್ತುಗಳು ಪೋಷಕಾಂಶಗಳನ್ನು ಹೇಗೆ ಪಡೆಯುತ್ತವೆ ಎಂಬುದು ನಮಗೆ ಪೂರ್ಣವಾಗಿ ಗೊತ್ತಿಲ್ಲ. ಅಲ್ಲದೆ, ನಾವು ತಿನ್ನುವ ಆಹಾರದಿಂದ ನಮ್ಮ ದೇಹಗಳು ಹೇಗೆ ಶಕ್ತಿಯನ್ನು ಉತ್ಪಾದಿಸುತ್ತವೆ ಎಂಬುದೂ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಆ ಪ್ರಕ್ರಿಯೆಯು ಕಾರ್ಯಸಾಧಕ ಎಂದು ನಮಗೆ ಗೊತ್ತಿದೆಯಷ್ಟೆ ಮತ್ತು ಆಹಾರ ಸೇವಿಸುವ ಮೂಲಕ ನಾವು ಅದರೊಂದಿಗೆ ಸಹಕರಿಸುತ್ತೇವೆ. ಪೌಷ್ಠಿಕ ಆಹಾರವನ್ನು ಸೇವಿಸಲು ನಾವು ಆರಿಸಿಕೊಂಡಲ್ಲಿ ಫಲಿತಾಂಶ ಮತ್ತೂ ಒಳ್ಳೇದು. ಅದೇ ರೀತಿ ಯೆಹೋವನು ನಿತ್ಯಜೀವ ಪಡೆಯಲಿಕ್ಕಾಗಿ ಆವಶ್ಯಕತೆಗಳನ್ನು ಇಟ್ಟಿದ್ದಾನೆ ಮತ್ತು ಆ ಆವಶ್ಯಕತೆಗಳನ್ನು ಮುಟ್ಟಲು ನಮಗೆ ಬೇಕಾದ ಸಹಾಯವನ್ನು ಆತನು ಕೊಡುತ್ತಾನೆ. ಸ್ಪಷ್ಟವಾಗಿಯೇ ಆತನು ನಮಗೆ ಮಹಾ ಸಹಾಯವನ್ನು ಮಾಡುತ್ತಾನೆ, ಆದ್ದರಿಂದ ಸ್ತುತಿಗೆ ಪಾತ್ರನು. ಆದರೂ ನಾವಾತನೊಂದಿಗೆ ಸಹಕರಿಸಬೇಕು, ದೇವರ ಚಿತ್ತಕ್ಕನುಸಾರವಾಗಿ ಕ್ರಿಯೆಗೈಯಬೇಕು. ಆಗ ಮಾತ್ರ ಆತನ ಆಶೀರ್ವಾದವನ್ನು ಹೊಂದುವೆವು.—ಹಗ್ಗಾ. 2:18, 19.
18. ನಿಮ್ಮ ದೃಢನಿರ್ಧಾರವೇನು? ಏಕೆ?
18 ಆದುದರಿಂದ ಪ್ರತಿಯೊಂದು ನೇಮಕವನ್ನೂ ಹೃದಯಪೂರ್ವಕವಾಗಿ ಮಾಡಿರಿ. ಯಶಸ್ಸಿಗಾಗಿ ಯಾವಾಗಲೂ ಯೆಹೋವನ ಕಡೆಗೆ ನೋಡಿರಿ. (ಮಾರ್ಕ 11:23, 24) ನೀವಿದನ್ನು ಮಾಡುವಾಗ “ಹುಡುಕುತ್ತಿರುವ ಪ್ರತಿಯೊಬ್ಬನು ಕಂಡುಕೊಳ್ಳುವನು” ಎಂಬ ಮಾತುಗಳಲ್ಲಿ ಭರವಸೆಯು ನಿಮಗಿರಲಿ. (ಮತ್ತಾ. 7:8) ಆತ್ಮಾಭಿಷಿಕ್ತ ಕ್ರೈಸ್ತರು ಸ್ವರ್ಗದಲ್ಲಿ “ಜೀವದ ಕಿರೀಟವನ್ನು” ಆಶೀರ್ವಾದವಾಗಿ ಹೊಂದುವರು. (ಯಾಕೋ. 1:12) ಅಬ್ರಹಾಮನ ಸಂತತಿಯ ಮೂಲಕವಾಗಿ ಆಶೀರ್ವಾದಗಳನ್ನು ಪಡೆಯಲು ಪ್ರಯಾಸಪಡುವ ಕ್ರಿಸ್ತನ ‘ಬೇರೆ ಕುರಿಗಳು’ ಅವನು ಹೀಗನ್ನುವುದನ್ನು ಕೇಳಿ ಉಲ್ಲಾಸಿಸುವರು: “ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ ಬನ್ನಿರಿ; ಲೋಕದ ಆದಿಯಿಂದ ನಿಮಗಾಗಿ ಸಿದ್ಧಪಡಿಸಲ್ಪಟ್ಟಿರುವ ರಾಜ್ಯವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಿರಿ.” (ಯೋಹಾ. 10:16; ಮತ್ತಾ. 25:34) ಹೌದು, “ಯೆಹೋವನ ಆಶೀರ್ವಾದವು ಯಾರಿಗಿರುವದೋ ಅವರು ದೇಶವನ್ನು ಅನುಭವಿಸುವರು . . . ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತ. 37:22, 29.
ನೀವು ವಿವರಿಸಬಲ್ಲಿರೊ?
• ನಿಜ ವಿಧೇಯತೆಯಲ್ಲಿ ಏನು ಒಳಗೂಡಿದೆ?
• ದೇವರ ಆಶೀರ್ವಾದ ಪಡೆದುಕೊಳ್ಳಲು ಏನು ಅವಶ್ಯಕ?
• ದೇವರ ಪವಿತ್ರಾತ್ಮವನ್ನು ನಾವು ಹೇಗೆ ಪಡೆದುಕೊಳ್ಳಬಹುದು? ಅದು ನಮ್ಮ ಪರವಾಗಿ ಹೇಗೆ ಕಾರ್ಯನಡಿಸಬಲ್ಲದು?
[ಪುಟ 9ರಲ್ಲಿರುವ ಚಿತ್ರಗಳು]
ಯೆಹೋವನ ಆಶೀರ್ವಾದ ಪಡೆದುಕೊಳ್ಳಲಿಕ್ಕಾಗಿ ಯಾಕೋಬನು ದೇವದೂತನೊಂದಿಗೆ ಹೋರಾಡಿದನು
ನೀವು ಸಹ ಅದೇ ರೀತಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೀರೊ?
[ಪುಟ 10ರಲ್ಲಿರುವ ಚಿತ್ರ]
ಬೆಚಲೇಲ ಮತ್ತು ಒಹೊಲೀಯಾಬರು ಹೆಚ್ಚಿನ ಸಾಮರ್ಥ್ಯ ಪಡೆಯುವಂತೆ ದೇವರ ಪವಿತ್ರಾತ್ಮವು ಸನ್ನದ್ಧಗೊಳಿಸಿತು