ದೇವರ ವಾಕ್ಯದಿಂದ ಕಲಿಯಿರಿ
ದೇವರು ಯಾರು?
ನೀವು ಯೋಚಿಸಿರಬಹುದಾದ ಕೆಲವು ಪ್ರಶ್ನೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮಾತ್ರವಲ್ಲ ಅವುಗಳ ಉತ್ತರಗಳನ್ನು ದೇವರ ವಾಕ್ಯವಾದ ಬೈಬಲಿನಲ್ಲಿ ನೀವೆಲ್ಲಿ ಓದಬಹುದೆಂದೂ ತೋರಿಸಲಾಗಿದೆ. ಈ ಉತ್ತರಗಳನ್ನು ನಿಮ್ಮ ಜೊತೆ ಚರ್ಚಿಸಲು ಯೆಹೋವನ ಸಾಕ್ಷಿಗಳು ಸಂತೋಷಪಡುವರು.
1. ದೇವರು ಯಾರು?
ಸಮಸ್ತವನ್ನು ಸೃಷ್ಟಿಸಿದಾತನೇ ನಿಜ ದೇವರು. ಬೈಬಲ್ ಆತನನ್ನು “ನಿತ್ಯತೆಯ ರಾಜ” ಎಂದು ಕರೆಯುತ್ತದೆ. ಅದರರ್ಥ ಆತನಿಗೆ ಆದಿಯೂ ಇರಲಿಲ್ಲ ಅಂತ್ಯವೂ ಎಂದೂ ಇರದು. (ಪ್ರಕಟನೆ 15:3) ದೇವರು ಜೀವದ ಮೂಲನಾಗಿರುವುದರಿಂದ ನಾವು ಆತನನ್ನು ಮಾತ್ರ ಆರಾಧಿಸತಕ್ಕದ್ದು.—ಪ್ರಕಟನೆ 4:11 ಓದಿ.
2. ದೇವರು ಎಂಥವನು?
ದೇವರನ್ನು ಯಾರೂ ಎಂದೂ ಕಂಡಿಲ್ಲ ಏಕೆಂದರೆ ಆತನೊಬ್ಬ ಆತ್ಮಜೀವಿ. ಅಂದರೆ, ಭೂಮಿ ಮೇಲೆ ಜೀವಿಸುವ ಭೌತಿಕ ಜೀವಿಗಳಿಗಿಂತ ಆತನು ಶ್ರೇಷ್ಠ ಜೀವಿ ಆಗಿದ್ದಾನೆ. (ಯೋಹಾನ 1:18; 4:24) ದೇವರ ವ್ಯಕ್ತಿತ್ವವು ಆತನ ಸೃಷ್ಟಿಕಾರ್ಯಗಳಿಂದ ಪ್ರಕಟವಾಗುತ್ತದೆ. ಉದಾಹರಣೆಗೆ ಹಣ್ಣುಹಂಪಲು ಹಾಗೂ ಹೂವುಗಳ ವಿನ್ಯಾಸ, ವೈವಿಧ್ಯತೆಯ ಕುರಿತು ಯೋಚಿಸುವಾಗ ಅದರಲ್ಲಿ ದೇವರ ಪ್ರೀತಿ ಮತ್ತು ವಿವೇಕವನ್ನು ಕಾಣಬಲ್ಲೆವು. ಈ ವಿಶಾಲ ವಿಶ್ವವೂ ದೇವರ ಅಪಾರ ಶಕ್ತಿಯನ್ನು ತಿಳಿಯಪಡಿಸುತ್ತದೆ.—ರೋಮನ್ನರಿಗೆ 1:20 ಓದಿ.
ದೇವರ ವ್ಯಕ್ತಿತ್ವದ ಬಗ್ಗೆ ಇನ್ನೂ ಹೆಚ್ಚನ್ನು ಬೈಬಲಿನಿಂದ ಕಲಿಯಬಲ್ಲೆವು. ಉದಾಹರಣೆಗೆ, ದೇವರು ಏನನ್ನು ಮೆಚ್ಚುತ್ತಾನೆ ಏನನ್ನು ಮೆಚ್ಚುವುದಿಲ್ಲ, ಜನರೊಂದಿಗೆ ಹೇಗೆ ವ್ಯವಹರಿಸುತ್ತಾನೆ, ಭಿನ್ನಭಿನ್ನ ಸನ್ನಿವೇಶಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾನೆಂದು ಅದು ನಮಗೆ ತಿಳಿಸುತ್ತದೆ.—ಕೀರ್ತನೆ 103:7-10 ಓದಿ.
3. ದೇವರಿಗೆ ಒಂದು ಹೆಸರಿದೆಯೊ?
ಯೇಸು ಅಂದದ್ದು: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.” (ಮತ್ತಾಯ 6:9) ದೇವರಿಗೆ ಅನೇಕ ಅಧಿಕಾರಸೂಚಕ ಪದವಿಗಳಿದ್ದರೂ ಹೆಸರು ಒಂದೇ. ಪ್ರತಿಯೊಂದು ಭಾಷೆಯಲ್ಲಿ ಅದರ ಉಚ್ಚಾರಣೆ ಭಿನ್ನ ಭಿನ್ನ. ಕನ್ನಡದಲ್ಲಿ ನಾವು “ಯೆಹೋವ” ಎಂದೇ ಹೇಳುತ್ತೇವೆ.—ಕೀರ್ತನೆ 83:18 ಓದಿ.
ಅನೇಕ ಬೈಬಲುಗಳಲ್ಲಿ ದೇವರ ಹೆಸರನ್ನು ತೆಗೆದುಹಾಕಿ ಅದರ ಸ್ಥಳದಲ್ಲಿ “ಕರ್ತ” ಇಲ್ಲವೆ “ದೇವರು” ಎಂಬ ಅಧಿಕಾರಸೂಚಕ ಪದವಿಗಳನ್ನು ಹಾಕಲಾಗಿದೆ. ಆದರೆ ಬೈಬಲ್ ಬರೆಯಲ್ಪಟ್ಟಾಗ ಅದರಲ್ಲಿ ದೇವರ ಹೆಸರು ಸರಿಸುಮಾರು 7,000 ಬಾರಿ ಇತ್ತು. ಯೇಸು ಜನರಿಗೆ ದೇವರ ವಾಕ್ಯವನ್ನು ವಿವರಿಸಿದಾಗ ದೇವರ ಹೆಸರನ್ನು ಬಳಸುವ ಮೂಲಕ ಅದನ್ನು ತಿಳಿಯಪಡಿಸಿದನು. ದೇವರನ್ನು ತಿಳಿದುಕೊಳ್ಳಲು ಅವನು ಜನರಿಗೆ ಸಹಾಯಮಾಡಿದನು.—ಯೋಹಾನ 17:26 ಓದಿ.
4. ಯೆಹೋವನಿಗೆ ನಮ್ಮ ಬಗ್ಗೆ ಕಾಳಜಿ ಇದೆಯೊ?
ನಾವು ಮಾಡುವ ಪ್ರಾರ್ಥನೆಗಳಿಗೆ ವೈಯಕ್ತಿಕವಾಗಿ ಕಿವಿಗೊಡುವ ಮೂಲಕ ಯೆಹೋವನು ನಮ್ಮ ಬಗ್ಗೆ ಕಾಳಜಿ ತೋರಿಸುತ್ತಾನೆ. (ಕೀರ್ತನೆ 65:2) ಜಗತ್ತಿನಲ್ಲಿ ಇಷ್ಟು ಹೆಚ್ಚು ಕಷ್ಟಸಂಕಟಗಳಿರುವುದು, ದೇವರಿಗೆ ನಮ್ಮ ಬಗ್ಗೆ ಕಾಳಜಿ ಇಲ್ಲದಿರುವುದರಿಂದಲೊ? ದೇವರು ನಮ್ಮನ್ನು ಪರೀಕ್ಷಿಸಲಿಕ್ಕಾಗಿಯೇ ಕಷ್ಟಗಳನ್ನು ಕೊಡುತ್ತಾನೆಂದು ಕೆಲವರು ಹೇಳುತ್ತಾರೆ. ಆದರೆ ಇದು ನಿಜವಲ್ಲ. “ದೇವರು ಕೆಟ್ಟದ್ದನ್ನು ನಡಿಸುವದೇ ಇಲ್ಲ” ಎನ್ನುತ್ತದೆ ಬೈಬಲ್.—ಯೋಬ 34:10, 12; ಓದಿ ಯಾಕೋಬ 1:13.
ದೇವರು ಮನುಷ್ಯರಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟು ಘನಪಡಿಸಿದ್ದಾನೆ. ದೇವರನ್ನು ಸೇವಿಸಬೇಕೊ ಇಲ್ಲವೊ ಎಂಬ ಆಯ್ಕೆ ಮಾಡಲು ನಮಗಿರುವ ಈ ಸ್ವಾತಂತ್ರ್ಯಕ್ಕಾಗಿ ನಾವು ಕೃತಜ್ಞರಲ್ಲವೊ? (ಯೆಹೋಶುವ 24:15) ಕಷ್ಟಸಂಕಟಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣ, ಅನೇಕರು ಬೇರೆಯವರಿಗೆ ಕೆಡುಕನ್ನು ಮಾಡಲು ಆಯ್ಕೆಮಾಡುವುದರಿಂದಲೇ. ಇಂಥ ಅನ್ಯಾಯವನ್ನು ನೋಡಿ ನಿಜವಾಗಿ ಯೆಹೋವನು ನೊಂದುಕೊಳ್ಳುತ್ತಾನೆ.—ಆದಿಕಾಂಡ 6:5, 6 ಓದಿ.
ಯೆಹೋವನು ಬಲುಬೇಗನೆ ಯೇಸುವಿನ ಮೂಲಕ ಕಷ್ಟಸಂಕಟವನ್ನೂ ಅದಕ್ಕೆ ಕಾರಣರಾಗುವವರನ್ನೂ ನಿರ್ಮೂಲಗೊಳಿಸುವನು. ಅಲ್ಲಿಯ ತನಕ ಕಷ್ಟಸಂಕಟವನ್ನು ತತ್ಕಾಲಕ್ಕೆ ಅನುಮತಿಸಲು ಯೆಹೋವನಿಗೆ ಸಕಾರಣವಿದೆ. ಆ ಕಾರಣವನ್ನು ಮುಂದಿನ ಸಂಚಿಕೆಯೊಂದರಲ್ಲಿ ಇದೇ ಲೇಖನಮಾಲೆ ವಿವರಿಸುವುದು.—ಯೆಶಾಯ 11:4 ಓದಿ.
5. ನಾವೇನು ಮಾಡಬೇಕೆಂದು ದೇವರು ಬಯಸುತ್ತಾನೆ?
ಆತನ ಬಗ್ಗೆ ತಿಳಿಯುವ ಮತ್ತು ಆತನನ್ನು ಪ್ರೀತಿಸುವ ಸಾಮರ್ಥ್ಯದೊಂದಿಗೆ ಯೆಹೋವನು ನಮ್ಮನ್ನು ಸೃಷ್ಟಿಸಿದ್ದಾನೆ. ಆತನ ಕುರಿತ ಸತ್ಯವನ್ನು ನಾವು ಕಲಿಯಬೇಕೆಂದು ಆತನು ಬಯಸುತ್ತಾನೆ. (1 ತಿಮೊಥೆಯ 2:4) ನಾವು ಬೈಬಲಿನ ಅಧ್ಯಯನ ಮಾಡಿದರೆ ದೇವರ ಬಗ್ಗೆ ತಿಳಿದುಕೊಂಡು ಆತನ ಸ್ನೇಹಿತರಾಗಬಲ್ಲೆವು.—ಜ್ಞಾನೋಕ್ತಿ 2:4, 5; ಯಾಕೋಬ 2:23 ಓದಿ.
ಯೆಹೋವನು ನಮಗೆ ಜೀವಕೊಟ್ಟಿರುವುದರಿಂದ ನಾವು ಬೇರಾರನ್ನೂ ಪ್ರೀತಿಸುವುದಕ್ಕಿಂತ ಆತನನ್ನೇ ಹೆಚ್ಚು ಪ್ರೀತಿಸಬೇಕು. ಪ್ರಾರ್ಥನೆಯಲ್ಲಿ ಆತನೊಂದಿಗೆ ಮಾತಾಡುವ ಮೂಲಕ ಮತ್ತು ಆತನು ನಮ್ಮಿಂದ ಅಪೇಕ್ಷಿಸುವಂಥದ್ದನ್ನು ಮಾಡುವ ಮೂಲಕ ನಾವಾತನಿಗೆ ನಮ್ಮ ಪ್ರೀತಿಯನ್ನು ತೋರಿಸಬಲ್ಲೆವು. (ಜ್ಞಾನೋಕ್ತಿ 15:8) ನಾವು ಜನರೊಂದಿಗೂ ಪ್ರೀತಿಯಿಂದ ಇರುವಂತೆ ಯೆಹೋವನು ಕೇಳಿಕೊಳ್ಳುತ್ತಾನೆ.—ಮಾರ್ಕ 12:29-31; 1 ಯೋಹಾನ 5:3 ಓದಿ. (w11-E 02/01)
ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 1ನೇ ಅಧ್ಯಾಯ ನೋಡಿ.
[ಪುಟ 23ರಲ್ಲಿರುವ ಚಿತ್ರ]
ಕಷ್ಟಸಂಕಟಗಳು ತತ್ಕಾಲ ಇರುವಂತೆ ಅನುಮತಿಸಲು ದೇವರಿಗೆ ಸಕಾರಣವಿರಬಹುದೇ?