ಬದುಕನ್ನೇ ಬದಲಾಯಿಸಿತು ಬೈಬಲ್
ಹೆತ್ತವರು ಕಲಿಸಿದ ಧರ್ಮವನ್ನು ಬಿಟ್ಟು ಅಡ್ಡದಾರಿ ಹಿಡಿದ ಮಗ ಮತ್ತೆ ಮರಳಿ ಬರುವಂತೆ ಮಾಡಿದ್ದು ಯಾವುದು? ತಂದೆಯ ಪ್ರೀತಿಗಾಗಿ ತವಕಿಸುತ್ತಿದ್ದ ಒಬ್ಬ ತರುಣನಿಗೆ ಅದು ಸಿಕ್ಕಿದ್ದು ಹೇಗೆ? ಅವರಿಬ್ಬರ ಮಾತುಗಳಲ್ಲೇ ಕೇಳೋಣ ಬನ್ನಿ.
“ಯೆಹೋವನ ಬಳಿ ಹಿಂದಿರುಗಿ ಹೋಗಬೇಕು.”—ಈಲೀ ಕಲಿಲ್
ಜನನ: 1976
ಸ್ವದೇಶ: ಸೈಪ್ರಸ್
ಹಿಂದೆ: ಹಾದಿತಪ್ಪಿದ ಮಗ
ಹಿನ್ನೆಲೆ: ನಾನು ಹುಟ್ಟಿದ್ದು ಸೈಪ್ರಸ್ನಲ್ಲಿ. ಬೆಳೆದದ್ದು ಆಸ್ಟ್ರೇಲಿಯದಲ್ಲಿ. ಅಪ್ಪಅಮ್ಮ ಯೆಹೋವನ ಸಾಕ್ಷಿಗಳು. ನನ್ನಲ್ಲಿ ಯೆಹೋವ ದೇವರ ಮೇಲೆ ಪ್ರೀತಿ ಬೆಳೆಸಲಿಕ್ಕೆ, ಬೈಬಲ್ ಬಗ್ಗೆ ಗೌರವ ಮೂಡಿಸಲಿಕ್ಕೆ ಅವರು ತಮ್ಮಿಂದಾದೆಲ್ಲ ಪ್ರಯತ್ನ ಮಾಡಿದರು. ಆದರೆ ನಾನು ಹರೆಯಕ್ಕೆ ಬಂದಾಗ ಅವರಿಗೇ ತಿರುಗಿಬಿದ್ದೆ. ರಾತ್ರಿ ಕದ್ದುಮುಚ್ಚಿ ಮನೆಯಿಂದ ಹೊರಬಂದು ನನ್ನ ವಯಸ್ಸಿನ ಬೇರೆ ಹುಡುಗ ಹುಡುಗಿಯರೊಂದಿಗೆ ಒಂದು ಕಡೆ ಸೇರುತ್ತಿದ್ದೆ. ನಾವು ಕಾರುಗಳನ್ನು ಕದಿಯುತ್ತಿದ್ದೆವು. ಬೇಡದ ಕೆಲಸಗಳನ್ನೆಲ್ಲ ಮಾಡಿ ತೊಂದರೆಗೆ ಸಿಕ್ಕಿಬೀಳುತ್ತಿದ್ದೆವು.
ಅಪ್ಪಅಮ್ಮನ ಹೆದರಿಕೆಯಿಂದ ಮೊದಮೊದಲು ಇದನ್ನೆಲ್ಲ ಗುಟ್ಟಾಗಿ ಮಾಡುತ್ತಿದ್ದೆ. ಕಾಲಕ್ರಮೇಣ ಆ ಭಯ ಮಾಯವಾಯಿತು. ನನಗಿಂತಲೂ ಹಿರಿವಯಸ್ಸಿನ ಆದರೆ ಯೆಹೋವನನ್ನು ಪ್ರೀತಿಸದ ಜನರ ಸಹವಾಸ ಶುರುಮಾಡಿದೆ. ಅವರ ಕೆಟ್ಟ ಪ್ರಭಾವಕ್ಕೊಳಗಾದೆ. ಕೊನೆಗೊಂದು ದಿನ ಅಪ್ಪಅಮ್ಮನ ಬಳಿ ಹೋಗಿ, ‘ನನಗಿನ್ನು ನಿಮ್ಮ ಧರ್ಮ ಬೇಡ, ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದು ಹೇಳಿದೆ. ಅವರು ತಾಳ್ಮೆಯಿಂದ ನನಗೆ ಬುದ್ಧಿಹೇಳಿ ಮನವೊಪ್ಪಿಸಲು ಪ್ರಯತ್ನಿಸಿದರು. ಅದ್ಯಾವುದಕ್ಕೂ ನಾನು ಬಗ್ಗದಿದ್ದಾಗ ಅಪ್ಪಅಮ್ಮನ ಎದೆಯೊಡೆದು ಹೋಯಿತು.
ಮನೆಬಿಟ್ಟು ಬಂದೆ. ಮಾದಕ ವಸ್ತುಗಳ ಚಟಕ್ಕೆ ಬಲಿಬಿದ್ದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ಗಾಂಜಾ ಬೆಳೆಸಿ ಮಾರಾಟ ಮಾಡುತ್ತಿದ್ದೆ. ಅನೈತಿಕ ಜೀವನವನ್ನೂ ನಡೆಸುತ್ತಿದ್ದೆ. ನೈಟ್ಕ್ಲಬ್ ಪಾರ್ಟಿಗಳಲ್ಲಿ ಹೆಚ್ಚು ಸಮಯ ಕಳಿತಿದ್ದೆ. ಕೋಪ ಮೂಗಿನ ತುದಿಯಲ್ಲೇ ಇರುತ್ತಿತ್ತು. ಯಾರಾದರೂ ಹೇಳಿದ್ದು ಮಾಡಿದ್ದು ಇಷ್ಟವಾಗದಿದ್ದರೆ ಸರ್ರಂತ ಸಿಟ್ಟು ನೆತ್ತಿಗೇರುತ್ತಿತ್ತು. ಯದ್ವಾತದ್ವಾ ಬೈಯುತ್ತಿದ್ದೆ, ಹೊಡೆದು ಬಿಡುತ್ತಿದ್ದೆ. ಯಾವದನ್ನು ಕ್ರೈಸ್ತರು ಮಾಡಬಾರದು ಅಂತ ನನಗೆ ಕಲಿಸಲಾಗಿತ್ತೋ ಅದನ್ನೆಲ್ಲ ಮಾಡುತ್ತಿದ್ದೆ.
ನನ್ನ ಬದುಕನ್ನು ಬದಲಾಯಿಸಿತು ಬೈಬಲ್: ನನಗೊಬ್ಬ ಆಪ್ತ ಗೆಳೆಯನಿದ್ದ. ಅವನೂ ಮಾದಕ ವ್ಯಸನಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ. ನಾವು ಎಷ್ಟೋ ಸಲ ತಡರಾತ್ರಿಯ ವರೆಗೆ ಮಾತಾಡುತ್ತಾ ಕೂತಿರುತ್ತಿದ್ದೆವು. ಒಮ್ಮೊಮ್ಮೆ ಅವನು ತನ್ನ ಮನಸ್ಸಲ್ಲಿ ಇದ್ದದೆಲ್ಲವನ್ನೂ ಹೇಳುತ್ತಿದ್ದ. ತನ್ನ ತಂದೆಯ ನೆನಪು ತುಂಬ ಕಾಡುತ್ತಿದೆಯೆಂದು ಹೇಳುತ್ತಿದ್ದ. ಆಗೆಲ್ಲ ನಾನವನಿಗೆ ಯೇಸು ಸತ್ತವರನ್ನು ಬದುಕಿಸಿದ್ದನ್ನು, ಭವಿಷ್ಯದಲ್ಲೂ ಅದೇ ರೀತಿ ಮಾಡುತ್ತೇನೆಂದು ಮಾತು ಕೊಟ್ಟಿರುವುದನ್ನು ಹೇಳುತ್ತಿದ್ದೆ. ಪುನರುತ್ಥಾನದ ಬಗ್ಗೆ ಚಿಕ್ಕಂದಿನಿಂದ ನಾನು ಕೇಳುತ್ತಾ ಬಂದ ಕಾರಣ ಇದೆಲ್ಲ ನನಗರಿವಿಲ್ಲದೆ ಬಾಯಿಂದ ಬಂದುಬಿಡುತ್ತಿತ್ತು. (ಯೋಹಾನ 5:28, 29) “ನಿನ್ನ ಪ್ರೀತಿಯ ಅಪ್ಪನನ್ನು ಪುನಃ ನೋಡುವುದನ್ನು ಕಲ್ಪಿಸಿಕೊ. ಉದ್ಯಾನವನದಂಥ ಭೂಮಿಯಲ್ಲಿ ನಾವೆಲ್ಲರೂ ಶಾಶ್ವತವಾಗಿ ಜೀವಿಸಬಹುದು” ಎಂದು ಹೇಳುತ್ತಿದ್ದೆ. ಈ ವಿಷಯ ನನ್ನ ಗೆಳೆಯನ ಮನಸ್ಪರ್ಶಿಸಿತು.
ಕಡೇ ದಿವಸಗಳು, ತಂದೆ-ಮಗ-ಪವಿತ್ರಾತ್ಮ ಒಂದೇ ಎಂಬ ಬೋಧನೆ ಮುಂತಾದ ವಿಷಯಗಳ ಬಗ್ಗೆ ಅವನು ಕೆಲವೊಮ್ಮೆ ಮಾತೆತ್ತುತ್ತಿದ್ದ. ಆಗ ನಾನು ಅವನ ಬೈಬಲಿನಿಂದಲೇ ಕಡೇ ದಿವಸಗಳ, ಯೆಹೋವ ದೇವರ, ಯೇಸುವಿನ ಬಗ್ಗೆ ಸತ್ಯವನ್ನು ತಿಳಿಸುವ ಬೇರೆ ಬೇರೆ ವಚನಗಳನ್ನು ತೋರಿಸುತ್ತಿದ್ದೆ. (ಯೋಹಾನ 14:28; 2 ತಿಮೊಥೆಯ 3:1-5) ಯೆಹೋವನ ಬಗ್ಗೆ ಎಷ್ಟು ಹೆಚ್ಚು ಮಾತಾಡುತ್ತಿದ್ದೆನೋ ಅಷ್ಟೇ ಹೆಚ್ಚು ಆತನನ್ನು ನೆನಸಲಾರಂಭಿಸಿದೆ.
ಹೆತ್ತವರು ಶ್ರಮಪಟ್ಟು ನನ್ನ ಹೃದಯದಲ್ಲಿ ಬಿತ್ತಿದ್ದ ಬೈಬಲ್ ಸತ್ಯದ ಬೀಜಗಳು ಈಗ ನಿಧಾನವಾಗಿ ಮೊಳಕೆಯೊಡೆಯಲು ಶುರುವಾದವು. ಉದಾಹರಣೆಗೆ ಕೆಲವೊಮ್ಮೆ ಗೆಳೆಯರ ಜತೆ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ನನಗೆ ಯೆಹೋವನ ನೆನಪಾಗುತ್ತಿತ್ತು. ನನ್ನ ಗೆಳೆಯರಲ್ಲಿ ಅನೇಕರು ತಮಗೂ ದೇವರ ಮೇಲೆ ಪ್ರೀತಿಯಿದೆ ಅಂತ ಹೇಳಿಕೊಳ್ಳುತ್ತಿದ್ದರಷ್ಟೆ. ಆದರೆ ನಡತೆ ಬೇರೆಯೇ ಇತ್ತು. ನಾನು ಅವರಂತಿರಬಾರದು, ಯೆಹೋವನ ಬಳಿ ಹಿಂದಿರುಗಿ ಹೋಗಬೇಕು ಎಂದು ತೀರ್ಮಾನಿಸಿದೆ.
ತೀರ್ಮಾನಿಸುವುದು ಸುಲಭ ಆದರೆ ಅದರಂತೆ ನಡೆಯುವುದು ಕಷ್ಟ. ಕೆಲವೊಂದು ಬದಲಾವಣೆಗಳನ್ನು ಸಲೀಸಾಗಿ ಮಾಡಿಕೊಂಡೆ. ಉದಾಹರಣೆಗೆ ಮಾದಕ ವಸ್ತುಗಳ ಚಟ ಬಿಡಲು ನನಗೇನೂ ಕಷ್ಟ ಅನಿಸಲಿಲ್ಲ. ಎಲ್ಲ ಹಳೇ ಸಹವಾಸವನ್ನೂ ಕಡಿದುಹಾಕಿದೆ. ಬಳಿಕ ಒಬ್ಬ ಕ್ರೈಸ್ತ ಹಿರಿಯರ ನೆರವಿನಿಂದ ಬೈಬಲ್ ಅಧ್ಯಯನ ಮಾಡತೊಡಗಿದೆ.
ಆದರೆ ಇನ್ನು ಕೆಲವು ಬದಲಾವಣೆ ಮಾಡಲು ತುಂಬ ಕಷ್ಟವಾಯಿತು. ಅದರಲ್ಲೂ ನನ್ನ ಸಿಟ್ಟನ್ನು ಕಡಿಮೆ ಮಾಡಲು ಪಟ್ಟ ಪಾಡು ಅಷ್ಟಿಷ್ಟಲ್ಲ! ನನ್ನ ಸಿಟ್ಟು ಕಮ್ಮಿಯಾಗಿದೆ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ಯಾವುದೋ ಕಾರಣಕ್ಕೆ ಪುನಃ ರೊಚ್ಚಿಗೇಳುತ್ತಿದ್ದೆ. ಆಗೆಲ್ಲ ನಿರಾಶೆಯಿಂದ ಮನಸ್ಸು ಕುಗ್ಗಿಹೋಗುತ್ತಿತ್ತು. ಈ ಸಮಸ್ಯೆ ಬಗ್ಗೆ ಬೈಬಲ್ ಕಲಿಯಲು ನನಗೆ ಸಹಾಯ ಮಾಡುತ್ತಿದ್ದ ಸಹೋದರನ ಬಳಿ ಹೇಳಿಕೊಂಡೆ. ಯಾವಾಗಲೂ ತಾಳ್ಮೆಯಿಂದ, ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ಅವರು ಈಗಲೂ ಅನೇಕ ವಿಧದಲ್ಲಿ ನನಗೆ ಪ್ರೋತ್ಸಾಹ ಕೊಟ್ಟರು. ಕಾವಲಿನಬುರುಜು ಪತ್ರಿಕೆಯ ಒಂದು ಲೇಖನa ಓದಲು ಹೇಳಿದರು. ಪಟ್ಟುಹಿಡಿಯುವ ಮಹತ್ವದ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು. ಸಿಟ್ಟು ಬಂದಾಗ ನಾನು ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಚರ್ಚಿಸಿದೆವು. ಆ ಲೇಖನವನ್ನು ಯಾವಾಗಲೂ ಮನಸ್ಸಿನಲ್ಲಿ ಇಟ್ಟುಕೊಂಡೆ ಮತ್ತು ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ ಇದ್ದೆ. ಹೀಗೆ ನನ್ನ ಸಿಟ್ಟನ್ನು ಹದ್ದುಬಸ್ತಿಗೆ ತರಲು ಸಾಧ್ಯವಾಯಿತು. ಕೊನೆಗೂ 2000ದ ಏಪ್ರಿಲ್ನಲ್ಲಿ ದೀಕ್ಷಾಸ್ನಾನ ಪಡೆದು ಒಬ್ಬ ಯೆಹೋವನ ಸಾಕ್ಷಿಯಾದೆ. ನನ್ನ ಅಪ್ಪಅಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ!
ಸಿಕ್ಕಿದ ಪ್ರಯೋಜನ: ಮಾದಕ ವಸ್ತು ಸೇವನೆ, ಅನೈತಿಕ ಜೀವನ ನಿಲ್ಲಿಸಿದ್ದರಿಂದ ನಾನು ದೇಹವನ್ನು ಕೆಡಿಸಿಕೊಳ್ಳುತ್ತಿಲ್ಲ ಎಂಬ ನೆಮ್ಮದಿ ನನಗಿದೆ. ಮನಸ್ಸಾಕ್ಷಿಯೂ ಕಾಡುತ್ತಿಲ್ಲ. ಉದ್ಯೋಗದ ಸ್ಥಳದಲ್ಲಿರಲಿ ಕ್ರೈಸ್ತ ಸಭೆಯಲ್ಲಿರಲಿ ವಿನೋದಾವಳಿಯಲ್ಲಿ ತೊಡಗಿರಲಿ ಅಂತೂ ನಾನು ಎಲ್ಲೇ ಇರಲಿ ಏನೇ ಮಾಡುತ್ತಿರಲಿ ಸಂತೋಷವಾಗಿ ಇದ್ದೇನೆ. ಬದುಕಿನ ಬಗ್ಗೆ ನನಗೀಗ ಸಕಾರಾತ್ಮಕ ನೋಟವಿದೆ.
ನನ್ನ ಹೆತ್ತವರು ನನ್ನನ್ನೆಂದೂ ಮರೆಯಲಿಲ್ಲ, ಸಹಾಯ ನೀಡಲು ಪ್ರಯತ್ನ ಮಾಡುತ್ತಾ ಇದ್ದರು. ಅಂಥ ಹೆತ್ತವರನ್ನು ಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಋಣಿ. ಯೋಹಾನ 6:44ರಲ್ಲಿರುವ ಯೇಸುವಿನ ಮಾತುಗಳನ್ನೂ ನೆನಸಿಕೊಳ್ಳುತ್ತೇನೆ: “ನನ್ನನ್ನು ಕಳುಹಿಸಿದ ತಂದೆಯು ಸೆಳೆದ ಹೊರತು ಯಾರೊಬ್ಬನೂ ನನ್ನ ಬಳಿಗೆ ಬರಲಾರನು.” ಯೆಹೋವ ದೇವರು ನನ್ನನ್ನು ಸೆಳೆದದ್ದರಿಂದಲೇ ಆತನ ಬಳಿ ಹಿಂದಿರುಗಲು ಸಾಧ್ಯವಾಯಿತೆಂದು ಯೋಚಿಸುವಾಗ ಹೃದಯ ತುಂಬಿ ಬರುತ್ತದೆ.
“ತಂದೆಗಾಗಿ ನನ್ನ ಮನ ತುಡಿಯುತ್ತಿತ್ತು.”—ಮಾರ್ಕೊ ಆಂಟೋನಿಯೊ ಆಲ್ವಾರೆಜ್ ಸೊಟೊ
ಜನನ: 1977
ಸ್ವದೇಶ: ಚಿಲಿ
ಹಿಂದೆ: ಡೆತ್-ಮೆಟಲ್ ಬ್ಯಾಂಡ್ ಸದಸ್ಯ
ಹಿನ್ನೆಲೆ: ನಾನು ಬೆಳೆದದ್ದು ಪುಂಟಾ ಅರನಾಸ್ ಎಂಬ ಸುಂದರ ನಗರಿಯಲ್ಲಿ. ಇದು ದಕ್ಷಿಣ ಅಮೆರಿಕದ ದಕ್ಷಿಣ ತುದಿಯಲ್ಲಿ, ಮೆಗಲನ್ ಜಲಸಂಧಿಯ ತೀರದಲ್ಲಿ ಇದೆ. ನನ್ನನ್ನು ಬೆಳೆಸಿದವರು ತಾಯಿ. ಏಕೆಂದರೆ ನಾನು ಐದು ವರ್ಷದವನಿದ್ದಾಗ ಅಪ್ಪಅಮ್ಮ ಬೇರೆಬೇರೆ ಆದರು. ನನಗ್ಯಾರೂ ಇಲ್ಲ ಎನ್ನುವ ಭಾವನೆ ಅಂದಿನಿಂದ ನನ್ನನ್ನು ಕಿತ್ತು ತಿನ್ನುತ್ತಿತ್ತು. ತಂದೆಗಾಗಿ ನನ್ನ ಮನ ತುಡಿಯುತ್ತಿತ್ತು.
ನನ್ನ ಅಮ್ಮ ಯೆಹೋವನ ಸಾಕ್ಷಿಗಳಿಂದ ಬೈಬಲಿನ ಬಗ್ಗೆ ಕಲಿಯಲು ಆರಂಭಿಸಿದರು. ರಾಜ್ಯ ಸಭಾಗೃಹದಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಅಮ್ಮ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಗೆ ಹೋಗುವುದೆಂದರೆ ಮೂಗುಮುರಿಯುತ್ತಿದ್ದೆ. ಹೋಗುವಾಗ ದಾರಿಯಲ್ಲಿ ಅಮ್ಮನ ಮೇಲೆ ರೇಗಾಡುತ್ತಿದ್ದೆ, ರಂಪ ಮಾಡುತ್ತಿದ್ದೆ. 13 ವರ್ಷದವನಾದಾಗ ಕೂಟಗಳಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ.
ಆ ಸಮಯದಷ್ಟಕ್ಕೆ ನನಗೆ ಸಂಗೀತದ ಕಡೆಗೆ ಒಲವು ಬೆಳೆದಿತ್ತು. ನನ್ನಲ್ಲಿ ಸಂಗೀತದ ಪ್ರತಿಭೆಯೂ ಇದೆಯೆಂದು ಗುರುತಿಸಿದೆ. 15ರ ಪ್ರಾಯಕ್ಕೆ ಕಾಲಿಡುವಷ್ಟರಲ್ಲಿ ನಾನು ಉತ್ಸವಗಳಲ್ಲಿ, ಬಾರ್ಗಳಲ್ಲಿ, ಸಂತೋಷ ಕೂಟಗಳಲ್ಲಿ ಹೆವಿ-ಮೆಟಲ್ ಮತ್ತು ಡೆತ್-ಮೆಟಲ್ ಸಂಗೀತ ನುಡಿಸುತ್ತಿದ್ದೆ. ಪ್ರತಿಭಾವಂತ ಸಂಗೀತಕಾರರ ಸಹಚರ್ಯೆಯಿಂದ ನನ್ನಲ್ಲಿ ಹಳೇ ಕಾಲದ ಸಂಗೀತಕ್ಕಾಗಿಯೂ ಒಲವು ಮೂಡಿತು. ಸ್ಥಳೀಯ ಸಂಗೀತ ಶಾಲೆಯೊಂದರಲ್ಲಿ ಸಂಗೀತಾಭ್ಯಾಸ ಮಾಡಿದೆ. ಹೆಚ್ಚಿನ ಅಭ್ಯಾಸಕ್ಕೆಂದು ರಾಜಧಾನಿಯಾದ ಸಾಂಟಿಯಾಗೊಗೆ ಹೋದೆ. ಆಗ ನನಗೆ 20 ವರ್ಷ. ಅಲ್ಲಿಯೂ ಹೆವಿ-ಮೆಟಲ್, ಡೆತ್-ಮೆಟಲ್ ಸಂಗೀತ ತಂಡಕ್ಕೆ ಸೇರಿಕೊಂಡೆ.
ಏನೇ ಮಾಡಿದರೂ ಅತೃಪ್ತ ಭಾವನೆ ಕಾಡುತ್ತಾ ಇತ್ತು. ಅದರಿಂದ ಹೊರಬರಲು ಮಾದಕ ವಸ್ತುಗಳಿಗೆ, ಕುಡಿತಕ್ಕೆ ದಾಸನಾದೆ. ಇತರ ಬ್ಯಾಂಡ್ ಸದಸ್ಯರು ಇದರಲ್ಲಿ ನನಗೆ ಸಾಥ್ ನೀಡುತ್ತಿದ್ದರು. ಅವರೇ ನನಗೆ ಮನೆಮಂದಿಯಂತೆ ಇದ್ದರು. ನನ್ನ ವೇಷಭೂಷಣ ನೋಡುವಾಗಲೇ ನನ್ನೊಳಗಿದ್ದ ದಂಗೆಕೋರ ಮನೋವೃತ್ತಿ ಯಾರಿಗೆ ಬೇಕಾದರೂ ಗೊತ್ತಾಗಿಬಿಡುತ್ತಿತ್ತು. ಯಾವಾಗಲೂ ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಿದ್ದೆ. ಗಡ್ಡ ಬಿಟ್ಟಿದ್ದೆ. ಸೊಂಟದ ವರೆಗೆ ತಲೆಗೂದಲು ಬೆಳೆಸಿದ್ದೆ.
ದಂಗೆಕೋರ ಮನೋವೃತ್ತಿಯ ಕಾರಣ ನಾನು ಯಾವಾಗಲೂ ಗಲಾಟೆ, ಹೊಡೆದಾಟಕ್ಕೆ ಇಳಿದು ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದೆ. ಕುಡಿದ ಅಮಲಿನಲ್ಲೇ ಒಮ್ಮೆ ಮಾದಕ ವಸ್ತುಗಳ ವಿತರಕರ ಜೊತೆ ಜಗಳಕ್ಕಿಳಿದೆ. ಏಕೆಂದರೆ ಅವರು ಯಾವಾಗಲೂ ನನಗೂ ನನ್ನ ಸ್ನೇಹಿತರಿಗೂ ತೊಂದರೆ ಕೊಡುತ್ತಿದ್ದರು. ಆ ವಿತರಕರು ನನ್ನ ದವಡೆ ಒಡೆದು ಹೋಗುವಷ್ಟು ಹಿಗ್ಗಾಮುಗ್ಗಾ ಥಳಿಸಿದರು.
ಇದೆಲ್ಲಕ್ಕಿಂತ ದೊಡ್ಡ ಏಟು ತಿಂದದ್ದು ನನ್ನ ಆಪ್ತ ಮಿತ್ರರಿಂದಲೇ. ನನ್ನ ಗರ್ಲ್ಫ್ರೆಂಡ್ ನನ್ನ ಆತ್ಮೀಯ ಗೆಳೆಯನ ಜೊತೆಗೇ ಎಷ್ಟೋ ವರ್ಷಗಳಿಂದ ನನ್ನ ಬೆನ್ನಹಿಂದೆ ಚಕ್ಕಂದ ಆಡುತ್ತಿದ್ದಳು. ಈ ವಿಷಯ ನನ್ನ ಸ್ನೇಹಿತರಿಗೆ ಗೊತ್ತಿದ್ದರೂ ನನ್ನಿಂದ ಮುಚ್ಚಿಟ್ಟಿದ್ದರು. ಇದೆಲ್ಲ ಗೊತ್ತಾದಾಗ ನನ್ನ ಹೃದಯ ಚೂರುಚೂರಾಯಿತು.
ನಾನು ಪುಂಟಾ ಅರನಾಸ್ಗೆ ಮರಳಿದೆ. ಅಲ್ಲಿ ಸಂಗೀತ ಮೇಷ್ಟ್ರಾಗಿ ಚೆಲೋ-ವಾದಕನಾಗಿ ಕೆಲಸ ಆರಂಭಿಸಿದೆ. ಅದೇ ಸಮಯದಲ್ಲಿ ಹೆವಿ-ಮೆಟಲ್, ಡೆತ್-ಮೆಟಲ್ ಬ್ಯಾಂಡ್ನಲ್ಲಿ ಸಂಗೀತ ನುಡಿಸಿ, ರೆಕಾರ್ಡಿಂಗ್ ಕೆಲಸವನ್ನೂ ಮಾಡುತ್ತಿದ್ದೆ. ಸೂಸನ್ ಎಂಬ ಸುಂದರ ಹುಡುಗಿಯ ಪರಿಚಯವಾಗಿ ನಾವಿಬ್ಬರೂ ಒಟ್ಟಿಗೆ ಜೀವನ ಮಾಡುತ್ತಿದ್ದೆವು. ಒಮ್ಮೆ ಅವಳಿಗೆ ತನ್ನ ತಾಯಿ ನಂಬುತ್ತಿದ್ದ ಬೋಧನೆಯಾದ ತಂದೆ-ಮಗ-ಪವಿತ್ರಾತ್ಮ ಮೂವರೂ ಒಂದೇ ಎನ್ನುವುದನ್ನು ನಾನು ನಂಬುವುದಿಲ್ಲ ಅಂತ ಗೊತ್ತಾಯಿತು. ಆಗ ಅವಳು “ಇದರಲ್ಲಿ ಯಾವುದು ಸತ್ಯ?” ಎಂದು ನನ್ನನ್ನು ಕೇಳಿದಳು. ಆ ಬೋಧನೆ ತಪ್ಪೆಂದು ನನಗೆ ಗೊತ್ತು, ಆದರೆ ಅದನ್ನು ಬೈಬಲಿನಿಂದ ಸಾಬೀತು ಮಾಡಲು ನನ್ನಿಂದಾಗುತ್ತಿಲ್ಲ, ಯೆಹೋವನ ಸಾಕ್ಷಿಗಳು ಅದನ್ನು ಮಾಡಬಲ್ಲರೆಂದು ಹೇಳಿದೆ. ಆಮೇಲೆ ಎಷ್ಟೋ ವರ್ಷಗಳಿಂದ ನಾನು ಮರೆತೇ ಹೋಗಿದ್ದ ಸಂಗತಿಯೊಂದನ್ನು ಮಾಡಿದೆ. ಸಹಾಯ ಮಾಡಪ್ಪಾ ಎಂದು ದೇವರಿಗೆ ಪ್ರಾರ್ಥನೆ ಮಾಡಿದೆ.
ಕೆಲ ದಿನಗಳ ನಂತರ, ನನಗೆ ಪರಿಚಯವಿದ್ದಂತೆ ಕಂಡ ಒಬ್ಬರ ಬಳಿ ‘ನೀವು ಯೆಹೋವನ ಸಾಕ್ಷಿನಾ? ನಿಮ್ಮ ಕೂಟಗಳು ಎಲ್ಲಿ, ಯಾವಾಗ ನಡಿತದೆ?’ ಎಂದು ಕೇಳಿದೆ. ನನ್ನ ಅವತಾರ ನೋಡಿ ಅವರಿಗೆ ಹೆದರಿಕೆ ಆಯಿತೆಂದು ಅವರ ಮುಖಭಾವ ನೋಡಿ ನನಗೆ ಗೊತ್ತಾಯಿತು. ಆದರೂ ಅವರು ಸೌಮ್ಯವಾಗಿ ಉತ್ತರ ಕೊಟ್ಟರು. ಈ ಭೇಟಿ ನನ್ನ ಪ್ರಾರ್ಥನೆಗೆ ಸಿಕ್ಕಿದ ಉತ್ತರವಾಗಿತ್ತು. ಒಂದು ದಿನ ಸಭಾಗೃಹಕ್ಕೆ ಹೋದೆ. ಯಾರೂ ನೋಡಬಾರದು ಅಂತ ಹಿಂದಿನ ಸಾಲಿನಲ್ಲಿ ಕುಳಿತುಕೊಂಡೆ. ಆದರೂ ಅನೇಕರು ನನ್ನ ಗುರುತು ಹಿಡಿದರು. ಏಕೆಂದರೆ ಬಾಲ್ಯದಲ್ಲಿ ಕೂಟಗಳಿಗೆ ಹಾಜರಾಗುತ್ತಿದ್ದೆನಲ್ಲಾ. ಅವರೆಲ್ಲ ನನ್ನನ್ನು ಸ್ವಾಗತಿಸಿದರು. ಪ್ರೀತಿ ವಾತ್ಸಲ್ಯದಿಂದ ಕೈದೆರೆದು ಆಲಿಂಗಿಸಿದರು. ನನ್ನ ಮನಸ್ಸು ಹಗುರವಾಯಿತು. ಬಿಟ್ಟು ಹೋಗಿದ್ದ ಮನೆಗೆ ಹಿಂದಿರುಗಿ ಬಂದ ಹಾಗನಿಸಿತು. ನಾನು ಚಿಕ್ಕವನಿದ್ದಾಗ ನನಗೆ ಬೈಬಲ್ ಕಲಿಸಿದ ವ್ಯಕ್ತಿಯನ್ನು ನೋಡಿದಾಕ್ಷಣ ಪುನಃ ನನಗೆ ಬೈಬಲ್ ಕಲಿಸಿಕೊಡಿ ಎಂದು ಕೇಳಿದೆ.
ನನ್ನ ಬದುಕನ್ನು ಬದಲಾಯಿಸಿತು ಬೈಬಲ್: ಒಂದು ದಿನ ನಾನು ಜ್ಞಾನೋಕ್ತಿ 27:11ನ್ನು ಓದಿದೆ. “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು” ಎಂಬ ಮಾತು ಅಲ್ಲಿತ್ತು. ಹುಲುಮಾನವರಾದ ನಾವು ಇಡೀ ವಿಶ್ವದ ನಿರ್ಮಾಣಿಕನ ಹೃದಯಕ್ಕೆ ಹರ್ಷ ತರಬಹುದೆಂಬ ವಿಷಯ ನನ್ನ ಮನಸ್ಸಲ್ಲಿ ಛಾಪು ಮೂಡಿಸಿತು. ಇಷ್ಟರ ವರೆಗೆ ನಾನು ತವಕಿಸುತ್ತಿದ್ದ ತಂದೆ ಯೆಹೋವನೇ ಎಂದು ನನಗಾಗ ಭಾಸವಾಯಿತು!
ನನ್ನ ಈ ತಂದೆಯನ್ನು ಸಂತೋಷಪಡಿಸಬೇಕು, ಆತ ಹೇಳಿದಂತೆ ನಡೆದುಕೊಳ್ಳಬೇಕು ಎಂಬ ಆಸೆ ಮನದಲ್ಲಿ ಚಿಗುರಿತು. ಆದರೆ ಈಗಾಗಲೇ ನಾನು ಮಾದಕವಸ್ತು, ಮದ್ಯಕ್ಕೆ ಎಷ್ಟೋ ವರ್ಷಗಳಿಂದ ಅಡಿಯಾಳಾಗಿದ್ದೆ. ಈಗ ನನಗೆ ಮತ್ತಾಯ 6:24ರಲ್ಲಿನ “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರ” ಎಂಬ ಯೇಸುವಿನ ಮಾತಿನ ಸತ್ಯ ಅರಿವಾಯಿತು. ನಾನು ಬದಲಾವಣೆ ಮಾಡುವ ಅಗತ್ಯವನ್ನು ಮನಗಂಡೆ. ಇದನ್ನು ಮಾಡುವಾಗ 1 ಕೊರಿಂಥ 15:33 ಸಹಾಯ ಮಾಡಿತು: “ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.” ಹಾನಿಕಾರಕ ಚಟಗಳನ್ನು ಬಿಟ್ಟುಬಿಡಬೇಕಾದರೆ ಅದಕ್ಕೆ ಇಂಬುನೀಡುತ್ತಿದ್ದ ಸ್ನೇಹಿತರ ಮತ್ತು ಸ್ಥಳಗಳ ನಂಟನ್ನು ಕಡಿದುಹಾಕಬೇಕಿತ್ತು. ಬೈಬಲಿನ ಸಲಹೆ ಸ್ಪಷ್ಟವಾಗಿತ್ತು: ನನ್ನನ್ನು ಎಡವಿಸುವ ಸಂಗತಿಗಳಿಂದ ದೂರವಾಗಬೇಕಾದರೆ ನಾನು ನಿರ್ಣಾಯಕ ಕ್ರಮ ತೆಗೆದುಕೊಳ್ಳಲೇಬೇಕು.—ಮತ್ತಾಯ 5:30.
ಹೆವಿ-ಮೆಟಲ್ ಸಂಗೀತದ ನಂಟನ್ನು ಸಂಪೂರ್ಣ ಕಡಿದುಹಾಕಬೇಕಿತ್ತು. ಸಂಗೀತವೆಂದರೆ ಪಂಚಪ್ರಾಣವಾಗಿದ್ದ ನನಗೆ ಈ ಬದಲಾವಣೆ ಮಾಡುವುದು ತುಂಬ ಕಷ್ಟವಾಗಿತ್ತು. ಸಭೆಯಲ್ಲಿದ್ದ ನನ್ನ ಸ್ನೇಹಿತರ ಸಹಾಯದಿಂದ ಕೊನೆಗೂ ಅದರಲ್ಲಿ ಯಶಸ್ವಿಯಾದೆ. ಮಿತಿಮೀರಿದ ಕುಡಿತ, ಮಾದಕವಸ್ತುಗಳ ಸೇವನೆಯನ್ನೂ ಬಿಟ್ಟುಬಿಟ್ಟೆ. ಉದ್ದ ಕೂದಲನ್ನು ಕತ್ತರಿಸಿದೆ. ಗಡ್ಡ ಬೋಳಿಸಿದೆ. ಯಾವಾಗಲೂ ಕಪ್ಪು ಬಣ್ಣದ ಬಟ್ಟೆ ಧರಿಸುವುದನ್ನು ನಿಲ್ಲಿಸಿದೆ. ನನ್ನ ಕೂದಲನ್ನು ಕತ್ತರಿಸುತ್ತೇನೆ ಎಂದು ಸೂಸನ್ಗೆ ಹೇಳಿದ್ದಾಗ ಅವಳಿಗೆ ಪರಮಾಶ್ಚರ್ಯ. “ಅಂಥದ್ದೇನಿದೆ ನಿಮ್ಮ ಸಭೆಯಲ್ಲಿ? ನನಗೆ ನೋಡಲೇಬೇಕು!” ಎಂದಳು. ನನ್ನ ಜತೆ ಸಭಾಗೃಹಕ್ಕೆ ಬಂದಳು. ಅಲ್ಲಿಯ ವಾತಾವರಣ ಅವಳಿಗೆ ತುಂಬ ಹಿಡಿಸಿತು. ಅವಳೂ ಬೈಬಲ್ ಕಲಿಯಲು ಶುರುಮಾಡಿದಳು. ಸ್ವಲ್ಪ ಸಮಯದ ನಂತರ ನಾವು ಮದುವೆ ಮಾಡಿಕೊಂಡೆವು. 2008ರಲ್ಲಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಾದೆವು. ನಾವೀಗ ನನ್ನ ಅಮ್ಮನ ಜೊತೆ ಸಂತೋಷದಿಂದ ಯೆಹೋವನ ಸೇವೆ ಮಾಡುತ್ತಿದ್ದೇವೆ.
ಸಿಕ್ಕಿದ ಪ್ರಯೋಜನ: ಸಂತೋಷವಿದ್ದಂತೆ ಕಾಣುವ ಮತ್ತು ಬೆನ್ನಿಗೆ ಚೂರಿ ಇರಿಯುವ ಸ್ನೇಹಿತರಿಂದ ತುಂಬಿದ್ದ ಜಗತ್ತಿನಿಂದ ಹೊರಬಂದೆ. ಸಂಗೀತವೆಂದರೆ ನನಗೀಗಲೂ ಇಷ್ಟ. ಆದರೆ ಒಳ್ಳೇದನ್ನು ಮಾತ್ರ ಆಯ್ದುಕೊಳ್ಳುತ್ತೇನೆ. ನನ್ನ ಜೀವನಾನುಭವದಿಂದ ನಾನು ಕಲಿತ ಪಾಠಗಳನ್ನು ಬಂಧುಮಿತ್ರರೊಂದಿಗೆ ವಿಶೇಷವಾಗಿ ಯುವಜನರೊಂದಿಗೆ ಹಂಚಿಕೊಳ್ಳುತ್ತೇನೆ. ಈ ಲೋಕ ಕೊಡುತ್ತಿರುವ ಬಹುಪಾಲು ವಿಷಯಗಳು ಆಕರ್ಷಕವಾಗಿ ಕಂಡರೂ ಸಿಗುವುದು ಬರೇ ಕಸ ಎಂಬದನ್ನು ಅವರಿಗೆ ಮನದಟ್ಟು ಮಾಡಿಸುವುದೇ ನನ್ನಾಸೆ.—ಫಿಲಿಪ್ಪಿ 3:8.
ಸದಾ ಪ್ರೀತಿ, ಶಾಂತಿಯ ತಾಣವಾಗಿರುವ ಕ್ರೈಸ್ತ ಸಭೆಯಲ್ಲಿ ನನಗೆ ನಿಷ್ಠಾವಂತ ಮಿತ್ರರು ಸಿಕ್ಕಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಯೆಹೋವ ದೇವರಿಗೆ ಆಪ್ತನಾದ್ದರಿಂದ ನಾನು ಹಂಬಲಿಸುತ್ತಿದ್ದ ತಂದೆಯ ಪ್ರೀತಿ ಕೊನೆಗೂ ಸಿಕ್ಕಿತು. (w12-E 04/01)
[ಪಾದಟಿಪ್ಪಣಿ]
a “ಪಟ್ಟುಹಿಡಿಯುವ ಮೂಲಕ ಯಶಸ್ಸು” ಎಂಬ ಲೇಖನ 2000 ಫೆಬ್ರವರಿ 1ರ ಸಂಚಿಕೆಯ ಪುಟ 4-6ರಲ್ಲಿ ಮೂಡಿಬಂದಿತ್ತು.
[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಯೆಹೋವ ದೇವರು ನನ್ನನ್ನು ಸೆಳೆದದ್ದರಿಂದಲೇ ಆತನ ಬಳಿ ಹಿಂದಿರುಗಲು ಸಾಧ್ಯವಾಯಿತು”