‘ಮಗನು ತಂದೆಯನ್ನು ತಿಳಿಯಪಡಿಸಲು ಇಷ್ಟಪಡುತ್ತಾನೆ’
“ತಂದೆಯು ಯಾರೆಂಬುದು ಮಗನ ಹೊರತು ಮತ್ತು ಮಗನು ಯಾರಿಗೆ ಆತನನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನ ಹೊರತು ಯಾವನಿಗೂ ತಿಳಿದಿರುವುದಿಲ್ಲ.”—ಲೂಕ 10:22.
ಉತ್ತರಿಸುವಿರಾ?
ಯೇಸುವಿಗಿಂತ ಉತ್ತಮವಾಗಿ ಯೆಹೋವನ ಬಗ್ಗೆ ಯಾರೂ ತಿಳಿಸಲಾರರು ಏಕೆ?
ಯೇಸು ತನ್ನ ತಂದೆಯ ಬಗ್ಗೆ ಇತರರಿಗೆ ತಿಳಿಯಪಡಿಸಿದ್ದು ಹೇಗೆ?
ಯೆಹೋವನ ಬಗ್ಗೆ ಇತರರಿಗೆ ತಿಳಿಯಪಡಿಸುವುದರಲ್ಲಿ ನೀವು ಯೇಸುವನ್ನು ಹೇಗೆ ಅನುಕರಿಸಬಲ್ಲಿರಿ?
1, 2. ಅನೇಕರನ್ನು ಯಾವ ಪ್ರಶ್ನೆ ಕಾಡುತ್ತಿದೆ? ಏಕೆ?
‘ದೇವರು ಯಾರು?’ ಈ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಉದಾಹರಣೆಗೆ ಕ್ರೈಸ್ತರೆಂದು ಹೇಳಿಕೊಳ್ಳುವ ಹೆಚ್ಚಿನವರು ದೇವರು ತ್ರಯೈಕ್ಯ ಎಂದು ನಂಬುತ್ತಾರಾದರೂ ಈ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವೆಂದು ಅವರಲ್ಲಿ ಅನೇಕರಿಗೆ ತಿಳಿದಿದೆ. ಲೇಖಕರಾಗಿರುವ ಒಬ್ಬ ಪಾದ್ರಿ ಹೇಳುವುದು: “ಈ ಸಿದ್ಧಾಂತ ಮಾನವ ಮಿದುಳಿಗೆ ಮೀರಿದ ಸಂಗತಿ. ಇದನ್ನು ವಿವರಿಸುವುದು ಕಷ್ಟ. ಇದು ಮಾನವನ ಗ್ರಹಿಕೆಗೆ ಮೀರಿದ ವಿಷಯವಾಗಿದೆ.” ಇನ್ನು ಕೆಲವರು ವಿಕಾಸವಾದವನ್ನು ನಂಬುತ್ತಾರೆ. ಅವರಲ್ಲಿ ಹೆಚ್ಚಿನವರು ದೇವರೇ ಇಲ್ಲ ಎಂದು ಹೇಳುತ್ತಾರೆ. ಈ ಸುಂದರ ಸೃಷ್ಟಿ ಆಕಸ್ಮಿಕವಾಗಿ ಬಂತೆಂದು ವಾದಿಸುತ್ತಾರೆ. ಆದರೆ ವಿಕಾಸವಾದ ತತ್ವವನ್ನು ಆರಂಭಿಸಿದ ಚಾರ್ಲ್ಸ್ ಡಾರ್ವಿನ್ ದೇವರನ್ನು ಅಲ್ಲಗಳೆಯಲಿಲ್ಲ. ಬದಲಾಗಿ ದೇವರು ಎಂಬ “ವಿಷಯ ಮಾನವ ಬುದ್ಧಿಗೆ ಗ್ರಹಿಸಲು ಮಿಗಿಲಾದದ್ದೆಂದು ನನಗನಿಸುತ್ತದೆ” ಎಂದು ಹೇಳಿದನು.
2 ಜನರ ನಂಬಿಕೆಗಳು ಏನೇ ಇರಲಿ ದೇವರ ಅಸ್ತಿತ್ವದ ಕುರಿತು ಅನೇಕರಿಗೆ ಪ್ರಶ್ನೆಗಳಿವೆ. ಆದರೆ ಅದಕ್ಕೆ ತೃಪ್ತಿಕರ ಉತ್ತರ ಸಿಗದಿದ್ದಾಗ ಆ ಕುರಿತು ಯೋಚಿಸುವುದನ್ನೇ ನಿಲ್ಲಿಸಿಬಿಡುತ್ತಾರೆ. ಮಾತ್ರವಲ್ಲ, ಸೈತಾನನು ಸಹ “ಅವಿಶ್ವಾಸಿಗಳ ಮನಸ್ಸನ್ನು ಕುರುಡುಮಾಡಿದ್ದಾನೆ.” (2 ಕೊರಿಂ. 4:4) ಹಾಗಾಗಿ ವಿಶ್ವದ ಸೃಷ್ಟಿಕರ್ತ ತಂದೆಯು ಯಾರೆಂಬ ಸತ್ಯ ಮಾನವಕುಲದಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಅವರು ಅಂಧಕಾರದಲ್ಲಿಯೂ ಗಲಿಬಿಲಿಯಲ್ಲಿಯೂ ಇದ್ದಾರೆ.—ಯೆಶಾ. 45:18.
3. (1) ಸೃಷ್ಟಿಕರ್ತನ ಬಗ್ಗೆ ನಮಗೆ ತಿಳಿಯಪಡಿಸಿದವನು ಯಾರು? (2) ಯಾವ ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ?
3 ಹಾಗಿದ್ದರೂ ಜನರು ದೇವರ ಕುರಿತು ಸತ್ಯವನ್ನು ಕಲಿಯುವುದು ಪ್ರಾಮುಖ್ಯ. ಏಕೆ? ಏಕೆಂದರೆ “ಯೆಹೋವನ ನಾಮದಲ್ಲಿ” ಕೋರುವವರು ಮಾತ್ರ ರಕ್ಷಿಸಲ್ಪಡುವರು. (ರೋಮ. 10:13) ದೇವರ ನಾಮದಲ್ಲಿ ಕೋರಬೇಕಾದರೆ ಆತನು ಯಾರು, ಆತನು ಎಂಥ ವ್ಯಕ್ತಿಯಾಗಿದ್ದಾನೆ ಎಂದು ತಿಳಿಯುವ ಅಗತ್ಯವಿದೆ. ಆ ಅಮೂಲ್ಯ ಜ್ಞಾನವನ್ನೇ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಪ್ರಕಟಿಸಿದನು. ಅವನು ತನ್ನ ತಂದೆಯ ಬಗ್ಗೆ ಅವರಿಗೆ ತಿಳಿಯಪಡಿಸಿದನು. (ಲೂಕ 10:22 ಓದಿ.) ಬೇರೆ ಎಲ್ಲರಿಗಿಂತಲೂ ಅತ್ಯುತ್ತಮ ರೀತಿಯಲ್ಲಿ ತಂದೆಯ ಬಗ್ಗೆ ತಿಳಿಯಪಡಿಸಲು ಯೇಸು ಶಕ್ತನಾದದ್ದು ಹೇಗೆ? ಇದನ್ನು ಅವನು ಹೇಗೆ ಮಾಡಿದನು? ತಂದೆಯ ಕುರಿತು ಇತರರಿಗೆ ತಿಳಿಯಪಡಿಸುವುದರಲ್ಲಿ ಯೇಸುವಿನ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? ಈ ಪ್ರಶ್ನೆಗಳಿಗೆ ಉತ್ತರ ನೋಡೋಣ.
ತಂದೆಯ ಕುರಿತು ಮಗನಷ್ಟು ಯಾರಿಗೂ ತಿಳಿದಿಲ್ಲ
4, 5. ಯೇಸುವಿಗಿಂತ ಉತ್ತಮವಾಗಿ ತಂದೆಯ ಬಗ್ಗೆ ಯಾರೂ ತಿಳಿಸಲಾರರು ಏಕೆ?
4 ಯೇಸು ತನ್ನ ತಂದೆಯ ಬಗ್ಗೆ ತಿಳಿಯಪಡಿಸಲು ಸಂಪೂರ್ಣ ಅರ್ಹನಾಗಿದ್ದನು. ಏಕೆ? ಏಕೆಂದರೆ ಯಾವುದೇ ಜೀವಿಗಳನ್ನು ಸೃಷ್ಟಿಸುವ ಮೊದಲು ಯೇಸು ಒಬ್ಬ ಆತ್ಮಜೀವಿಯಾಗಿ ಸ್ವರ್ಗದಲ್ಲಿದ್ದನು. ಅವನು “ದೇವರ ಏಕೈಕಜಾತ ಪುತ್ರ”ನಾಗಿದ್ದನು. (ಯೋಹಾ. 1:14; 3:18) ಯಾರಿಗೂ ಇಲ್ಲದ ಅದ್ಭುತ ಸುಯೋಗ! ಬೇರೆ ಯಾವುದೇ ಸೃಷ್ಟಿಜೀವಿಗಳಿಲ್ಲದ ಸಮಯದಿಂದ ಮಗನು ತಂದೆಯೊಂದಿಗೆ ಆಪ್ತ ಸಹವಾಸದಲ್ಲಿ ಆನಂದಿಸುತ್ತಾ ಆತನ ಕುರಿತೂ ಆತನ ಗುಣಗಳ ಕುರಿತೂ ಕಲಿಯುತ್ತಾ ಇದ್ದನು. ತಂದೆಯೂ ಮಗನೂ ಸಹಸ್ರಾರು ವರುಷ ಸಂವಾದಿಸುತ್ತಾ ಒಟ್ಟಿಗಿದ್ದ ಕಾರಣ ಅವರ ಪ್ರೀತಿ, ಮಮತೆ ಬಲವಾಯಿತು. (ಯೋಹಾ. 5:20; 14:31) ಈ ಎಲ್ಲ ಸಮಯದಲ್ಲಿ ಯೇಸು ತನ್ನ ತಂದೆಯ ವ್ಯಕ್ತಿತ್ವದ ಬಗ್ಗೆ ಬಹಳಷ್ಟನ್ನು ಕಲಿತುಕೊಂಡನು ಎಂಬುದರಲ್ಲಿ ಕಿಂಚಿತ್ತೂ ಸಂಶಯವಿಲ್ಲ.—ಕೊಲೊಸ್ಸೆ 1:15-17 ಓದಿ.
5 ದೇವರು ಮಗನನ್ನು ತನ್ನ ವಕ್ತಾರನಾಗಿ ನೇಮಿಸಿದನು. ಅಂದರೆ ಅವನು ದೇವರ ಪರವಾಗಿ ಮಾತಾಡುವ “ದೇವರ ವಾಕ್ಯ”ವಾಗಿದ್ದನು. (ಪ್ರಕ. 19:13) ಯೇಸುವಿಗಿಂತ ಉತ್ತಮವಾಗಿ ತಂದೆಯ ಬಗ್ಗೆ ಯಾರೂ ತಿಳಿಸಲಾರರು. ಯೇಸುವನ್ನು “ವಾಕ್ಯ” ಎಂದು ವರ್ಣಿಸುತ್ತಾ ಅವನು ‘ತಂದೆಯೊಂದಿಗೆ ಆಪ್ತ ಸ್ಥಾನದಲ್ಲಿದ್ದಾನೆ’ ಎಂದು ಸುವಾರ್ತಾ ಲೇಖಕನಾದ ಯೋಹಾನನು ಹೇಳಿದನು. (ಯೋಹಾ. 1:1, 18) “ಆಪ್ತ ಸ್ಥಾನ” ಎಂಬ ಪದಕ್ಕೆ ಮೂಲ ಭಾಷೆಯಲ್ಲಿ ಎದೆಗೆ ಒರಗಿಕೊಂಡಿರುವುದು ಎಂಬ ಅರ್ಥವಿದೆ. ಇಲ್ಲಿ ಯೋಹಾನನು ತನ್ನ ದಿನಗಳಲ್ಲಿದ್ದ ಊಟದ ಪದ್ಧತಿಯ ಬಗ್ಗೆ ಸೂಚಿಸುತ್ತಿದ್ದಾನೆ. ಆ ದಿನಗಳಲ್ಲಿ ಊಟಕ್ಕೆ ಕುಳಿತುಕೊಳ್ಳುವಾಗ ಅತಿಥಿಗಳು ಒಬ್ಬರ ಪಕ್ಕದಲ್ಲೊಬ್ಬರು ಕುಳಿತುಕೊಳ್ಳುತ್ತಿದ್ದರು. ಹಾಗಾಗಿ ಅವರು ಸುಲಭವಾಗಿ ಸಂವಾದಿಸಶಕ್ತರಾಗಿದ್ದರು. ಅದೇ ರೀತಿ ಮಗನು ‘ತಂದೆಯೊಂದಿಗೆ ಆಪ್ತ ಸ್ಥಾನದಲ್ಲಿದ್ದಾನೆ’ ಅಥವಾ ಎದೆಗೆ ಒರಗಿಕೊಂಡಿದ್ದಾನೆ ಎಂದು ಹೇಳುವಾಗ ಅವರಿಬ್ಬರ ಮಧ್ಯೆ ಸಂವಾದಕ್ಕೆ ಯಾವುದೇ ತಡೆಯಿರಲಿಲ್ಲ ಎಂದು ತಿಳಿಯುತ್ತದೆ.
6, 7. ತಂದೆ ಮಗನ ಸಂಬಂಧ ಹೇಗೆ ಗಾಢವಾಗುತ್ತಾ ಬಂತು?
6 ತಂದೆ ಮಗನ ಸಂಬಂಧ ಗಾಢವಾಗುತ್ತಾ ಬಂತು. ದೇವರು ಮಗನಲ್ಲಿ “ಅನುದಿನವೂ ವಿಶೇಷವಾಗಿ ಒಲುಮೆ” [NW] ತೋರಿಸಿದನು. (ಜ್ಞಾನೋಕ್ತಿ 8:22, 23, 30, 31 ಓದಿ.) ಅವರು ಒಟ್ಟಿಗೆ ಕೆಲಸಮಾಡಿದಂತೆ ಅವರ ನಂಟು ಬಲವಾಗುತ್ತಾ ಹೋಯಿತು. ಮಗನು ತಂದೆಯ ಗುಣಗಳನ್ನು ಅನುಕರಿಸಲು ಕಲಿತನು. ದೇವರು ಇತರ ಬುದ್ಧಿಜೀವಿಗಳನ್ನು ಸೃಷ್ಟಿಸಿದ ಬಳಿಕ ಅವರಲ್ಲಿ ಪ್ರತಿಯೊಬ್ಬರೊಂದಿಗೆ ಹೇಗೆ ವ್ಯವಹರಿಸಿದನು ಎಂಬುದನ್ನು ಕಣ್ಣಾರೆ ಕಂಡನು. ಆಗ ದೇವರ ವ್ಯಕ್ತಿತ್ವದ ಕಡೆಗೆ ಯೇಸುವಿನ ಗಣ್ಯತೆ ಮತ್ತಷ್ಟು ಹೆಚ್ಚಿತು.
7 ನಮಗೆ ತಿಳಿದಿರುವಂತೆ ಸೈತಾನನು ಯೆಹೋವನ ಆಳುವ ಹಕ್ಕಿಗೆ ಸವಾಲೊಡ್ಡಿದನು. ಕಷ್ಟಕರ ಸನ್ನಿವೇಶದಲ್ಲೂ ಪ್ರೀತಿ, ನ್ಯಾಯ, ವಿವೇಕ ಮತ್ತು ಶಕ್ತಿ ಎಂಬ ಗುಣಗಳನ್ನು ದೇವರು ಹೇಗೆ ಪ್ರದರ್ಶಿಸುತ್ತಾನೆ ಎಂಬುದನ್ನು ಕಲಿತುಕೊಳ್ಳುವ ಸುಯೋಗ ಮಗನಿಗೆ ದೊರೆಯಿತು. ಇದು ಯೇಸು ಮುಂದೆ ಭೂಮಿಗೆ ಬಂದಾಗ ಎದುರಿಸಲಿದ್ದ ಕಷ್ಟಗಳನ್ನು ನಿಭಾಯಿಸಲು ಅವನನ್ನು ಸನ್ನದ್ಧಗೊಳಿಸಿತು.—ಯೋಹಾ. 5:19.
8. ತಂದೆಯ ಗುಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸುವಾರ್ತಾ ವೃತ್ತಾಂತಗಳು ಹೇಗೆ ಸಹಾಯ ಮಾಡುತ್ತವೆ?
8 ಯೆಹೋವನೊಂದಿಗಿನ ಆಪ್ತ ಸಂಬಂಧದ ಕಾರಣ ಯೇಸು ಆತನ ಕುರಿತು ಸವಿವರವಾಗಿ ತಿಳಿಸಶಕ್ತನಾದನು. ಇಷ್ಟು ಉತ್ತಮವಾಗಿ ಬೇರಾರೂ ತಿಳಿಸಶಕ್ತರಲ್ಲ. ಹಾಗಾಗಿ ಈ ಏಕೈಕಜಾತ ಪುತ್ರನು ಕಲಿಸಿದ ಮತ್ತು ಮಾಡಿದ ವಿಷಯಗಳನ್ನು ಪರಿಗಣಿಸುವ ಮೂಲಕ ನಾವು ಯೆಹೋವನನ್ನು ಉತ್ತಮವಾಗಿ ತಿಳಿಯಬಲ್ಲೆವು. ದೃಷ್ಟಾಂತಕ್ಕೆ, “ಪ್ರೀತಿ” ಎಂಬ ಗುಣವನ್ನು ತೆಗೆದುಕೊಳ್ಳಿ. ಶಬ್ದಕೋಶದಲ್ಲಿ ಆ ಪದದ ಅರ್ಥವನ್ನು ನೋಡಿದ ಮಾತ್ರಕ್ಕೆ ಪ್ರೀತಿ ಅಂದರೇನು ಎಂದು ನಾವು ಪೂರ್ಣವಾಗಿ ಗ್ರಹಿಸಲಾರೆವು. ಆದರೆ ಯೇಸು ಮಾಡಿದ ಸೇವೆ, ಜನರ ಕಡೆಗೆ ತೋರಿಸಿದ ಕಾಳಜಿ ಇದೆಲ್ಲವನ್ನು ಸುವಾರ್ತಾ ಪುಸ್ತಕದಲ್ಲಿ ಓದುವಾಗ “ದೇವರು ಪ್ರೀತಿಯಾಗಿದ್ದಾನೆ” ಎಂಬ ಹೇಳಿಕೆಯ ಆಳವಾದ ಅರ್ಥವನ್ನು ನಾವು ಗ್ರಹಿಸಬಲ್ಲೆವು. (1 ಯೋಹಾ. 4:8, 16) ದೇವರ ಇತರ ಗುಣಗಳ ವಿಷಯದಲ್ಲೂ ಇದು ಸತ್ಯ. ಯೇಸು ಈ ಭೂಮಿಯಲ್ಲಿದ್ದಾಗ ತನ್ನ ಶಿಷ್ಯರಿಗೆ ಆ ಗುಣಗಳ ನಿಜಾರ್ಥವನ್ನು ತಿಳಿಯಪಡಿಸಿದನು.
ಯೇಸು ತಂದೆಯನ್ನು ತಿಳಿಯಪಡಿಸಿದ ವಿಧ
9. (1) ಯಾವ ಎರಡು ವಿಧಗಳಲ್ಲಿ ಯೇಸು ತನ್ನ ತಂದೆಯನ್ನು ತಿಳಿಯಪಡಿಸಿದನು? (2) ಯೇಸು ತನ್ನ ಬೋಧನೆಯ ಮೂಲಕ ತಂದೆಯ ಗುಣಗಳ ಕುರಿತು ಹೇಗೆ ತಿಳಿಯಪಡಿಸಿದನು ಎಂಬುದಕ್ಕೆ ಉದಾಹರಣೆ ಕೊಡಿ.
9 ಯೇಸು ತನ್ನೊಂದಿಗಿದ್ದ ಶಿಷ್ಯರಿಗೂ ಮುಂದೆ ಶಿಷ್ಯರಾಗಲಿದ್ದವರಿಗೂ ತಂದೆಯ ಬಗ್ಗೆ ತಿಳಿಯಪಡಿಸಿದ್ದು ಹೇಗೆ? ಎರಡು ವಿಧಗಳಲ್ಲಿ. ಒಂದು ಅವನ ಬೋಧನೆಗಳ ಮೂಲಕ. ಇನ್ನೊಂದು ಅವನ ನಡತೆಯ ಮೂಲಕ. ಮೊದಲಾಗಿ ಅವನ ಬೋಧನೆಗಳನ್ನು ಪರಿಗಣಿಸೋಣ. ಯೇಸು ತನ್ನ ತಂದೆಯ ಆಲೋಚನೆಗಳನ್ನು, ಭಾವನೆಗಳನ್ನು ಮತ್ತು ಮಾರ್ಗಗಳನ್ನು ಎಷ್ಟು ಆಳವಾಗಿ ತಿಳಿದಿದ್ದನೆಂದು ಅವನು ತನ್ನ ಹಿಂಬಾಲಕರಿಗೆ ಕಲಿಸಿದ ವಿಷಯದಿಂದ ಗೊತ್ತಾಗುತ್ತದೆ. ಉದಾಹರಣೆಗೆ, ಅವನು ತನ್ನ ತಂದೆಯನ್ನು ಕುರಿಗಳ ಕಡೆಗೆ ಅತೀವ ಕಾಳಜಿಯಿರುವ ಕುರಿಹಿಂಡಿನ ಯಜಮಾನನಿಗೆ ಹೋಲಿಸಿದನು. ಹಿಂಡಿನಿಂದ ಒಂದು ಕುರಿ ಬೇರೆಯಾಗಿ ತಪ್ಪಿಹೋದಾಗ ಆ ಯಜಮಾನನು ಅದನ್ನು ಹುಡುಕಲು ಹೋಗುತ್ತಾನೆ. ಅದು ಸಿಕ್ಕಿದಾಗ “ಬೇರೆಯಾಗದೇ ಇರುವ ತೊಂಬತ್ತೊಂಬತ್ತು ಕುರಿಗಳಿಗಿಂತ ಆ ಒಂದು ಕುರಿಯ ವಿಷಯದಲ್ಲಿ ಹೆಚ್ಚು ಆನಂದಪಡುತ್ತಾನೆ.” ಈ ದೃಷ್ಟಾಂತದ ಅನ್ವಯವನ್ನು ಯೇಸು ಹೇಳಿದನು: “ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವುದನ್ನು ಸ್ವರ್ಗದಲ್ಲಿರುವ ನನ್ನ ತಂದೆಯು ಇಷ್ಟಪಡುವುದಿಲ್ಲ.” (ಮತ್ತಾ. 18:12-14) ಈ ದೃಷ್ಟಾಂತದಿಂದ ಯೆಹೋವನ ಕುರಿತು ನೀವೇನನ್ನು ಕಲಿಯಬಲ್ಲಿರಿ? ‘ನಾನು ನಿಷ್ಪ್ರಯೋಜಕ, ನನ್ನನ್ನು ಯಾರು ನೆನಸುತ್ತಾರೆ?’ ಎಂಬ ಅನಿಸಿಕೆ ಕೆಲವೊಮ್ಮೆ ನಿಮಗಾಗಬಹುದು. ಆದರೆ ಅದು ನಿಜವಲ್ಲ. ಸ್ವರ್ಗದಲ್ಲಿರುವ ದೇವರಿಗೆ ನಿಮ್ಮ ಕುರಿತು ಬಹಳ ಆಸಕ್ತಿಯಿದೆ. ಆತನು ನಿಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೆ. ನಾಶವಾಗಬಾರದೆಂದು ಆತನು ನೆನಸುವ ಆ “ಚಿಕ್ಕವರಲ್ಲಿ” ನೀವೂ ಒಬ್ಬರಾಗಿದ್ದೀರಿ.
10. ಯೇಸು ತನ್ನ ನಡತೆಯ ಮೂಲಕ ತಂದೆಯ ಗುಣಗಳನ್ನು ಹೇಗೆ ತಿಳಿಯಪಡಿಸಿದನು?
10 ಯೇಸು ತಂದೆಯ ಬಗ್ಗೆ ತನ್ನ ಶಿಷ್ಯರಿಗೆ ತಿಳಿಯಪಡಿಸಿದ ಎರಡನೇ ವಿಧ ತನ್ನ ನಡತೆಯ ಮೂಲಕ. ಆದುದರಿಂದಲೇ “ನಮಗೆ ತಂದೆಯನ್ನು ತೋರಿಸು” ಎಂದು ಫಿಲಿಪ್ಪನು ಕೇಳಿದಾಗ “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಯೇಸು ಹೇಳಿದನು. (ಯೋಹಾ. 14:8, 9) ಯೇಸು ತನ್ನ ತಂದೆಯ ಗುಣಗಳನ್ನು ಪ್ರದರ್ಶಿಸಿದ ಕೆಲವು ಉದಾಹರಣೆಗಳನ್ನು ಪರಿಗಣಿಸಿ. ಒಬ್ಬ ಕುಷ್ಠರೋಗಿ ತನ್ನನ್ನು ಗುಣಪಡಿಸುವಂತೆ ಯೇಸುವನ್ನು ಕೇಳಿಕೊಂಡಾಗ “ಕುಷ್ಠರೋಗದಿಂದ ತುಂಬಿದ್ದ” ಆ ಮನುಷ್ಯನನ್ನು ಯೇಸು ಮುಟ್ಟಿ “ನನಗೆ ಮನಸ್ಸುಂಟು. ಶುದ್ಧನಾಗು” ಎಂದು ಹೇಳಿದನು. ಗುಣಹೊಂದಿದ ಆ ಕುಷ್ಠರೋಗಿ ತನ್ನನ್ನು ಗುಣಪಡಿಸಲು ಯೆಹೋವನೇ ಯೇಸುವಿಗೆ ಶಕ್ತಿ ನೀಡಿದನು ಎಂದು ತಿಳುಕೊಂಡನು. (ಲೂಕ 5:12, 13) ಇನ್ನೊಂದು ಸಂದರ್ಭ ಲಾಜರನು ಮೃತಪಟ್ಟಾಗ. ಆಗಲೂ ಯೇಸುವಿನ ಶಿಷ್ಯರು ಯೆಹೋವನು ಕನಿಕರದ ದೇವರು ಎಂಬುದನ್ನು ಯೇಸು ವರ್ತಿಸಿದ ರೀತಿಯಿಂದ ತಿಳಿದುಕೊಂಡರು. ಏಕೆಂದರೆ ಆಗ ಯೇಸು “ತನ್ನ ಆಂತರ್ಯದಲ್ಲಿ ನೊಂದುಕೊಂಡು ಕಳವಳಪಟ್ಟನು” ಮತ್ತು “ಕಣ್ಣೀರು ಸುರಿಸಿದನು.” ಲಾಜರನನ್ನು ಪುನರುತ್ಥಾನಗೊಳಿಸಲಿದ್ದೇನೆ ಎಂದು ಯೇಸುವಿಗೆ ತಿಳಿದಿದ್ದರೂ ಲಾಜರನ ಕುಟುಂಬಸ್ಥರೂ ಸ್ನೇಹಿತರೂ ಅಳುವುದನ್ನು ನೋಡಿದಾಗ ಅವನ ಮನಮರುಗಿತು. (ಯೋಹಾ. 11:32-35, 40-43) ಈ ಎರಡು ಸಂದರ್ಭಗಳಲ್ಲದೆ ಇನ್ನೂ ಅನೇಕ ಸಂದರ್ಭಗಳಲ್ಲಿ ಯೇಸು ತನ್ನ ಕ್ರಿಯೆಗಳ ಮೂಲಕ ಯೆಹೋವ ದೇವರು ಎಷ್ಟು ಕರುಣೆಯುಳ್ಳವನೆಂದು ನಮಗೆ ಮನಗಾಣಿಸಿದ್ದಾನೆ. ಅದರಲ್ಲಿ ಯಾವುದಾದರೊಂದು ನಿಮಗೆ ಅತಿ ಪ್ರಿಯವಾಗಿರಬಹುದು. ಅದು ನಿಮಗೆ ಯೆಹೋವನ ಕರುಣೆಯನ್ನು ಮನದಟ್ಟುಮಾಡುವುದು.
11. (1) ಯೇಸು ದೇವಾಲಯವನ್ನು ಶುದ್ಧಮಾಡಿದ ವಿಷಯದಿಂದ ಯೆಹೋವನ ಕುರಿತು ನಾವೇನನ್ನು ತಿಳಿದುಕೊಳ್ಳಬಲ್ಲೆವು? (2) ಯೇಸು ದೇವಾಲಯವನ್ನು ಶುದ್ಧಮಾಡಿದ ವಿಷಯ ನಮಗೆ ಸಾಂತ್ವನದಾಯಕವಾಗಿದೆ ಹೇಗೆ?
11 ದೇವಾಲಯವನ್ನು ಯೇಸು ಶುದ್ಧಮಾಡಿದ ಸಂಗತಿಯಿಂದ ನೀವೇನನ್ನು ತಿಳಿಯುತ್ತೀರಿ? ಆ ದೃಶ್ಯವನ್ನು ನಿಮ್ಮ ಕಣ್ಮುಂದೆ ಚಿತ್ರಿಸಿಕೊಳ್ಳಿ. ಯೇಸು ಹಗ್ಗಗಳಿಂದ ಕೊರಡೆ ಮಾಡಿ ಜಾನುವಾರು ಮತ್ತು ಕುರಿ ಮಾರುತ್ತಿರುವವರನ್ನು ಹೊರಗಟ್ಟಿದನು. ಹಣವಿನಿಮಯಗಾರರ ನಾಣ್ಯಗಳನ್ನು ಚೆಲ್ಲಿ ಅವರ ಮೇಜುಗಳನ್ನು ಕೆಡವಿದನು. (ಯೋಹಾ. 2:13-17) ಯೇಸುವಿನ ಈ ಕ್ರೋಧಭರಿತ ಕ್ರಿಯೆಯನ್ನು ನೋಡಿದ ಶಿಷ್ಯರಿಗೆ “ನಿನ್ನ ಆಲಯಾಭಿಮಾನವು ನನ್ನನ್ನು ಬೆಂಕಿಯಂತೆ ದಹಿಸಿದೆ” ಎಂಬ ರಾಜ ದಾವೀದನ ಪ್ರವಾದನಾತ್ಮಕ ಮಾತು ನೆನಪಿಗೆ ಬಂತು. (ಕೀರ್ತ. 69:9) ಆ ರೀತಿ ಯೇಸು ದೃಢ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ ಸತ್ಯಾರಾಧನೆಯನ್ನು ಎತ್ತಿಹಿಡಿಯಲು ತನಗಿದ್ದ ಬಲವಾದ ಇಚ್ಛೆಯನ್ನು ತೋರ್ಪಡಿಸಿದನು. ಈ ವೃತ್ತಾಂತವನ್ನು ಓದುವಾಗ ಯೇಸುವಿನಲ್ಲಿ ತಂದೆಯ ಯಾವ ಗುಣವನ್ನು ಕಾಣುತ್ತೀರಿ? ಭೂಮಿಯಿಂದ ದುಷ್ಟತನವನ್ನು ತೆಗೆದುಹಾಕಲು ದೇವರಿಗೆ ಅಪರಿಮಿತ ಶಕ್ತಿಯಿದೆ ಮಾತ್ರವಲ್ಲ ಬಲವಾದ ಇಚ್ಛೆಯೂ ಇದೆ ಎಂಬುದನ್ನು ಇದು ನಮ್ಮ ಮನಸ್ಸಿಗೆ ತರುತ್ತದೆ. ತಪ್ಪು ಕೃತ್ಯಗಳಿಗೆ ಯೇಸು ತೋರಿಸಿದ ಪ್ರತಿಕ್ರಿಯೆಯಿಂದ ಇಂದು ಭೂಮಿಯಲ್ಲಿ ತುಂಬಿರುವ ದುಷ್ಕೃತ್ಯಗಳನ್ನು ನೋಡಿ ಯೆಹೋವನಿಗೆ ಹೇಗನಿಸುತ್ತದೆ ಎಂದು ನಾವು ಗ್ರಹಿಸಬಲ್ಲೆವು. ವೈಯಕ್ತಿಕವಾಗಿ ನಮಗೆ ಅನ್ಯಾಯವಾಗುವಾಗ ಯೆಹೋವನಿಗೂ ಯೇಸುವಿಗೂ ಈ ಕುರಿತು ಹೇಗನಿಸುತ್ತದೆ ಎಂದು ನೆನಪು ಮಾಡಿಕೊಳ್ಳುವುದು ನಮಗೆ ನಿಜವಾಗಿ ಸಾಂತ್ವನ ನೀಡುತ್ತದೆ.
12, 13. ಯೇಸು ತನ್ನ ಶಿಷ್ಯರೊಂದಿಗೆ ನಡೆದುಕೊಂಡ ರೀತಿಯಿಂದ ಯೆಹೋವನ ಬಗ್ಗೆ ನೀವೇನನ್ನು ಕಲಿಯುತ್ತೀರಿ?
12 ಇನ್ನೊಂದು ಉದಾಹರಣೆಯನ್ನು ಪರಿಗಣಿಸೋಣ. ಅದು ಯೇಸು ತನ್ನ ಶಿಷ್ಯರೊಂದಿಗೆ ನಡೆದುಕೊಂಡ ರೀತಿ. ತಮ್ಮಲ್ಲಿ ಯಾರು ಶ್ರೇಷ್ಠನು ಎಂಬ ವಾಗ್ವಾದ ಶಿಷ್ಯರ ಮಧ್ಯೆ ಯಾವಾಗಲೂ ಏಳುತ್ತಿತ್ತು. (ಮಾರ್ಕ 9:33-35; 10:43; ಲೂಕ 9:46) ಯೆಹೋವನೊಂದಿಗೆ ದೀರ್ಘಕಾಲ ಒಡನಾಟದಲ್ಲಿದ್ದ ಯೇಸುವಿಗೆ ಆತನು ಹೆಮ್ಮೆಯನ್ನು ದ್ವೇಷಿಸುತ್ತಾನೆಂದು ತಿಳಿದಿತ್ತು. (2 ಸಮು. 22:28; ಕೀರ್ತ. 138:6) ಮಾತ್ರವಲ್ಲ, ಆ ಗುಣವನ್ನು ಪಿಶಾಚನಾದ ಸೈತಾನನು ಪ್ರದರ್ಶಿಸಿದ್ದನ್ನು ಯೇಸು ನೋಡಿದ್ದನು. ಸ್ವಾರ್ಥಿಯಾಗಿರುವ ಸೈತಾನನು ಪ್ರಖ್ಯಾತಿ, ಸ್ಥಾನಮಾನವನ್ನು ಬಹಳವಾಗಿ ಆಶಿಸಿದನು. ಇಂಥ ಹೆಬ್ಬಯಕೆಯು ತಾನು ತರಬೇತು ನೀಡಿದ ಶಿಷ್ಯರಲ್ಲಿ ಕಂಡುಬಂದಾಗ ಯೇಸು ಎಷ್ಟು ನೊಂದಿರಬೇಕೆಂದು ಊಹಿಸಿ. ಅವನು ಅಪೊಸ್ತಲರಾಗಿ ಆಯ್ಕೆಮಾಡಿದವರಲ್ಲಿಯೂ ಈ ಗುಣವಿತ್ತು. ಯೇಸು ಸಾಯುವ ದಿನದ ವರೆಗೂ ಅವರು ಹೆಬ್ಬಯಕೆಯನ್ನು ತೋರ್ಪಡಿಸಿದರು. (ಲೂಕ 22:24-27) ಹಾಗಿದ್ದರೂ ಯೇಸು ಅವರನ್ನು ದಯೆಯಿಂದ ತಿದ್ದುತ್ತಾ ಇದ್ದನು. ಮುಂದೆ ಅವರು ತನ್ನಂತೆ ದೀನ ಗುಣವನ್ನು ತೋರಿಸಲು ಕಲಿತುಕೊಳ್ಳುವರೆಂಬ ಭರವಸೆಯನ್ನು ಅವನೆಂದೂ ಕಳೆದುಕೊಳ್ಳಲಿಲ್ಲ.—ಫಿಲಿ. 2:5-8.
13 ಶಿಷ್ಯರಲ್ಲಿದ್ದ ತಪ್ಪು ಮನೋಭಾವಗಳನ್ನು ತಾಳ್ಮೆಯಿಂದ ತಿದ್ದಿದ ಯೇಸುವಿನಲ್ಲಿ ತಂದೆಯ ಯಾವ ಗುಣವನ್ನು ನೀವು ಕಾಣುತ್ತೀರಿ? ಯೇಸುವಿನ ಕ್ರಿಯೆಗಳಿಂದಲೂ ಮಾತುಗಳಿಂದಲೂ ತಂದೆಯ ಬಗ್ಗೆ ನೀವು ಏನನ್ನು ಕಲಿಯಬಲ್ಲಿರಿ? ತನ್ನ ಜನರು ಪದೇ ಪದೇ ತಪ್ಪಿಬಿದ್ದರೂ ಯೆಹೋವನು ಅವರನ್ನು ಎಂದಿಗೂ ತೊರೆದುಬಿಡುವುದಿಲ್ಲ ಎಂಬುದನ್ನೇ. ಯೆಹೋವನ ಈ ಗುಣವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ನಾವು ತಪ್ಪುಮಾಡಿದಾಗ ಪಶ್ಚಾತ್ತಾಪಪಟ್ಟು ಆತನ ಬಳಿ ಕ್ಷಮೆ ಕೋರಲು ಹಿಂಜರಿಯೆವು.
ಮಗನು ತಂದೆಯ ಬಗ್ಗೆ ಇಷ್ಟಪೂರ್ವಕವಾಗಿ ತಿಳಿಯಪಡಿಸಿದನು
14. ತಂದೆಯ ಬಗ್ಗೆ ತಿಳಿಯಪಡಿಸಲು ತನಗೆ ಇಷ್ಟವಿದೆ ಎಂದು ಯೇಸು ಹೇಗೆ ತೋರಿಸಿಕೊಟ್ಟನು?
14 ಹೆಚ್ಚಿನ ಅಧಿಕಾರಿಗಳು ಜನರಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡದೆ ಅವರನ್ನು ಅಂಧಕಾರದಲ್ಲೂ ತಮ್ಮ ಹದ್ದುಬಸ್ತಿನಲ್ಲೂ ಇಡಲು ಪ್ರಯತ್ನಿಸುತ್ತಾರೆ. ಯೇಸುವಾದರೋ ಹಾಗೆ ಮಾಡಲಿಲ್ಲ. ಅವನು ತನ್ನ ತಂದೆಯ ಕುರಿತು ಅಗತ್ಯವಿದ್ದ ಎಲ್ಲ ಮಾಹಿತಿಯನ್ನು ಇಷ್ಟಪೂರ್ವಕವಾಗಿ ಇತರರೊಂದಿಗೆ ಹಂಚಿಕೊಂಡನು. (ಮತ್ತಾಯ 11:27 ಓದಿ.) ಜೊತೆಗೆ, ತನ್ನ ಶಿಷ್ಯರಿಗೆ “ಸತ್ಯವಾಗಿರುವಾತನ [ಯೆಹೋವ ದೇವರ] ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ . . . ಬುದ್ಧಿಸಾಮರ್ಥ್ಯವನ್ನು” ಸಹ ಕೊಟ್ಟನು. (1 ಯೋಹಾ. 5:20) ಇದರ ಅರ್ಥವೇನು? ತಂದೆಯ ಕುರಿತು ತಾನು ಬೋಧಿಸಿದ ವಿಷಯಗಳನ್ನು ತನ್ನ ಹಿಂಬಾಲಕರು ಅರ್ಥಮಾಡಿಕೊಳ್ಳಲು ಶಕ್ತರಾಗುವಂತೆ ಯೇಸು ಅವರ ಮನಸ್ಸನ್ನು ತೆರೆದನು. ತ್ರಯೈಕ್ಯದಂಥ ಗಲಿಬಿಲಿಗೊಳಿಸುವ ಬೋಧನೆಯನ್ನು ಕಲಿಸುತ್ತಾ ತಂದೆಯು ಎಂಥವನಾಗಿದ್ದಾನೆ ಎನ್ನುವುದನ್ನು ಗುಪ್ತವಾಗಿಡಲಿಲ್ಲ.
15. ಯೇಸು ತನ್ನ ತಂದೆಯ ಬಗ್ಗೆ ಕೆಲವೊಂದು ಮಾಹಿತಿಯನ್ನು ಏಕೆ ತಿಳಿಯಪಡಿಸಲಿಲ್ಲ?
15 ಯೇಸು ತಂದೆಯ ಬಗ್ಗೆ ತನಗೆ ಗೊತ್ತಿದ್ದ ಪ್ರತಿಯೊಂದು ವಿಷಯವನ್ನು ತಿಳಿಯಪಡಿಸಿದನಾ? ಇಲ್ಲ. ಅವನು ವಿವೇಚನೆಯನ್ನು ಉಪಯೋಗಿಸಿದನು. ತನಗೆ ತಿಳಿದಿದ್ದ ಅನೇಕ ವಿಷಯಗಳನ್ನು ಆ ಸಮಯದಲ್ಲಿ ಅವರಿಗೆ ತಿಳಿಸಲಿಲ್ಲ. (ಯೋಹಾನ 16:12 ಓದಿ.) ಏಕೆ? ಏಕೆಂದರೆ ಆ ಸಮಯದಲ್ಲಿ ಅವನ ಶಿಷ್ಯರು ಎಲ್ಲ ಜ್ಞಾನವನ್ನು ‘ಸಹಿಸಿಕೊಳ್ಳಲಾರರು’ ಎಂಬುದು ಅವನಿಗೆ ತಿಳಿದಿತ್ತು. ಆದರೆ ಮುಂದಕ್ಕೆ “ಸಹಾಯಕ” ಅಂದರೆ ಪವಿತ್ರಾತ್ಮ ಶಕ್ತಿ ಅವರಿಗೆ ಸಿಗುವಾಗ ಹೆಚ್ಚಿನ ಜ್ಞಾನ ಪ್ರಕಟವಾಗುವುದು, “ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ” ಅದು ಅವರನ್ನು ಮಾರ್ಗದರ್ಶಿಸುವುದು ಎಂದು ಯೇಸು ಹೇಳಿದನು. (ಯೋಹಾ. 16:7, 13) ವಿವೇಚನೆಯುಳ್ಳ ಹೆತ್ತವರು ತಮ್ಮ ಮಕ್ಕಳು ಚಿಕ್ಕವರಿರುವಾಗ ಎಲ್ಲ ವಿಷಯವನ್ನು ತಿಳಿಸದೆ ಅವರು ನಿರ್ದಿಷ್ಟ ಪ್ರಾಯವನ್ನು ತಲಪುವ ವರೆಗೆ ಕಾಯುತ್ತಾರೆ. ಅಂತೆಯೇ ತನ್ನ ಶಿಷ್ಯರು ಆಧ್ಯಾತ್ಮಿಕವಾಗಿ ಬಲಿತವರಾಗುವ ಮತ್ತು ತಂದೆಯ ಕುರಿತು ಹೆಚ್ಚನ್ನು ಗ್ರಹಿಸಶಕ್ತರಾಗುವ ವರೆಗೆ ಯೇಸು ಕಾದನು. ಪ್ರೀತಿಯಿಂದ ಅವರ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಂಡನು.
ಯೇಸುವನ್ನು ಅನುಕರಿಸುತ್ತಾ ಯೆಹೋವನ ಬಗ್ಗೆ ಇತರರಿಗೆ ತಿಳಿಸಿರಿ
16, 17. ಇತರರಿಗೆ ದೇವರ ಬಗ್ಗೆ ತಿಳಿಸಲು ನೀವು ಶಕ್ತರಾಗಿರುವುದು ಹೇಗೆ?
16 ನೀವು ಒಬ್ಬರ ಬಗ್ಗೆ ಹೆಚ್ಚು ತಿಳಿದು ಅವರ ವ್ಯಕ್ತಿತ್ವವನ್ನು ಇಷ್ಟಪಡಲಾರಂಭಿಸಿದಾಗ ಅವರ ಕುರಿತು ಇತರರಿಗೆ ತಿಳಿಸದಿರುವಿರಾ? ಯೇಸು ಕೂಡ ಮಾಡಿದ್ದು ಅದನ್ನೇ. ಭೂಮಿಯಲ್ಲಿದ್ದಾಗ ಅವನು ತನ್ನ ತಂದೆಯ ಬಗ್ಗೆ ಮಾತಾಡಿದನು. (ಯೋಹಾ. 17:25, 26) ಈ ವಿಷಯದಲ್ಲಿ ನಾವೂ ಅವನನ್ನು ಅನುಕರಿಸಲು ಸಾಧ್ಯವೇ?
17 ಯೆಹೋವನ ಕುರಿತು ಬೇರೆಲ್ಲರಿಗಿಂತಲೂ ಯೇಸುವಿಗೆ ಹೆಚ್ಚು ಆಳವಾದ ಜ್ಞಾನವಿತ್ತು. ಅವನು ತನಗೆ ತಿಳಿದಿದ್ದ ವಿಷಯಗಳಲ್ಲಿ ಕೆಲವನ್ನು ತನ್ನ ಹಿಂಬಾಲಕರೊಂದಿಗೆ ಸಂತೋಷದಿಂದ ಹಂಚಿಕೊಂಡನು. ದೇವರ ವ್ಯಕ್ತಿತ್ವವನ್ನು ಆಳವಾಗಿ ಗ್ರಹಿಸಶಕ್ತರಾಗುವಂತೆ ಅವರಿಗೆ ಬುದ್ಧಿಸಾಮರ್ಥ್ಯವನ್ನು ನೀಡಿದನು. ನಾವು ಸಹ ಯೇಸುವಿನ ಸಹಾಯದಿಂದ ಯೆಹೋವನ ಕುರಿತು ಲೋಕದವರಿಗೆ ತಿಳಿದಿರದ ಬಹಳಷ್ಟು ವಿಷಯಗಳನ್ನು ತಿಳಿದಿದ್ದೇವೆ ಅಲ್ಲವೇ? ಯೇಸು ತನ್ನ ನಡತೆ ಮತ್ತು ಬೋಧನೆಗಳ ಮೂಲಕ ತಂದೆ ಕುರಿತು ತಿಳಿಯಪಡಿಸಿದ್ದಕ್ಕೆ ನಾವು ತುಂಬಾ ಆಭಾರಿಗಳು! ಯೆಹೋವನನ್ನು ತಿಳಿದಿದ್ದೇವೆ ಎಂದು ಹೇಳಲು ನಿಜಕ್ಕೂ ನಾವು ಹೆಚ್ಚಳಪಡುತ್ತೇವೆ. (ಯೆರೆ. 9:24; 1 ಕೊರಿಂ. 1:31) ನಾವು ಯೆಹೋವನ ಸಮೀಪಕ್ಕೆ ಬರಲು ಪ್ರಯತ್ನಿಸಿದಂತೆ ಆತನು ನಮ್ಮ ಸಮೀಪಕ್ಕೆ ಬಂದಿದ್ದಾನೆ. (ಯಾಕೋ. 4:8) ಆದುದರಿಂದ, ಈಗ ನಾವು ಇತರರಿಗೆ ಯೆಹೋವನ ಬಗ್ಗೆ ಹೇಳುವ ಸ್ಥಾನದಲ್ಲಿದ್ದೇವೆ. ಇದನ್ನು ನಾವು ಹೇಗೆ ಮಾಡಬಲ್ಲೆವು?
18, 19. ನೀವು ದೇವರನ್ನು ಯಾವ ವಿಧಗಳಲ್ಲಿ ಇತರರಿಗೆ ತಿಳಿಯಪಡಿಸಸಾಧ್ಯವಿದೆ? ವಿವರಿಸಿ.
18 ಯೇಸುವಿನಂತೆ ನಾವು ಸಹ ನಮ್ಮ ನಡೆನುಡಿಯ ಮೂಲಕ ಯೆಹೋವನ ಕುರಿತು ಜನರಿಗೆ ತಿಳಿಯಪಡಿಸಬೇಕು. ಕ್ಷೇತ್ರದಲ್ಲಿ ನಮಗೆ ಸಿಗುವ ಹೆಚ್ಚಿನ ಜನರಿಗೆ ದೇವರು ಯಾರೆಂಬುದು ತಿಳಿದಿಲ್ಲ. ಸುಳ್ಳು ಬೋಧನೆಗಳಿಂದಾಗಿ ಅವರಿಗೆ ದೇವರ ಬಗ್ಗೆ ತಪ್ಪಾದ ನೋಟವಿದೆ. ಹಾಗಾಗಿ ದೇವರ ಹೆಸರು, ಮಾನವಕುಲಕ್ಕಾಗಿ ಆತನ ಉದ್ದೇಶ, ಆತನ ಗುಣಗಳು ಮುಂತಾದ ವಿಷಯಗಳನ್ನು ನಾವು ಅವರಿಗೆ ಬೈಬಲಿನಿಂದ ತಿಳಿಸಬೇಕು. ಮಾತ್ರವಲ್ಲ, ಜೊತೆ ಆರಾಧಕರೊಂದಿಗೂ ದೇವರ ಗುಣಗಳ ಕುರಿತು ಮಾತಾಡಬಹುದು. ಉದಾಹರಣೆಗೆ, ಬೈಬಲಿನ ಯಾವುದಾದರೊಂದು ವೃತ್ತಾಂತವನ್ನು ಓದಿದಾಗ ಅದರಲ್ಲಿ ದೇವರ ಗುಣಗಳನ್ನು ನಾವು ಹಿಂದೆಂದಿಗಿಂತಲೂ ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಬಹುದು. ಆ ಮಾಹಿತಿಯನ್ನು ಸಭೆಯಲ್ಲಿರುವ ಇತರರೊಂದಿಗೆ ಹಂಚಿಕೊಳ್ಳಬಹುದು. ಆಗ ಅವರೂ ಪ್ರಯೋಜನ ಪಡೆದುಕೊಳ್ಳುವರು.
19 ನಾವು ಯೇಸುವಿನಂತೆ ನಮ್ಮ ನಡತೆಯ ಮೂಲಕ ಹೇಗೆ ಯೆಹೋವನನ್ನು ತಿಳಿಯಪಡಿಸಬಲ್ಲೆವು? ಕ್ರಿಸ್ತನು ತೋರಿಸಿದಂಥ ಪ್ರೀತಿ ನಮ್ಮಲ್ಲಿದೆ ಎಂದು ನಮ್ಮ ಕ್ರಿಯೆಗಳ ಮೂಲಕ ಜನರು ತಿಳಿದುಕೊಳ್ಳುವಾಗ ಅವರು ಯೇಸುವಿನ ಹಾಗೂ ಯೆಹೋವನ ಸಮೀಪಕ್ಕೆ ಸೆಳೆಯಲ್ಪಡುತ್ತಾರೆ. (ಎಫೆ. 5:1, 2) “ನಾನು ಕ್ರಿಸ್ತನನ್ನು ಅನುಕರಿಸುವವನಾಗಿರುವಂತೆಯೇ ನೀವೂ ನನ್ನನ್ನು ಅನುಕರಿಸುವವರಾಗಿರಿ” ಎಂದು ಅಪೊಸ್ತಲ ಪೌಲ ಉತ್ತೇಜಿಸಿದನು. (1 ಕೊರಿಂ. 11:1) ನಾವು ನಡಕೊಳ್ಳುವ ರೀತಿಯ ಮೂಲಕ ನಮ್ಮ ದೇವರಾದ ಯೆಹೋವನು ಎಂಥವನು ಎಂಬುದನ್ನು ಜನರಿಗೆ ತಿಳಿಯಪಡಿಸುವ ಮಹಾ ಸುಯೋಗ ನಮಗಿದೆ. ನಾವೆಲ್ಲರೂ ಯೇಸುವನ್ನು ಅನುಕರಿಸುತ್ತಾ ಇರೋಣ. ಅವನಂತೆಯೇ ತಂದೆಯಾದ ಯೆಹೋವನನ್ನು ಇತರರಿಗೆ ತಿಳಿಯಪಡಿಸುತ್ತಾ ಇರೋಣ.