“ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು” ಯೆಹೋವನು ಪ್ರಕಟಿಸಿದ್ದಾನೆ
“ಯೇಸು ಕ್ರಿಸ್ತನಿಂದ ಒಂದು ಪ್ರಕಟನೆ; ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸಲಿಕ್ಕಾಗಿ ದೇವರು ಈ ಪ್ರಕಟನೆಯನ್ನು ಅವನಿಗೆ ಕೊಟ್ಟನು.”—ಪ್ರಕ. 1:1.
ಉತ್ತರಿಸುವಿರಾ?
ಲೋಹದ ದೊಡ್ಡ ಪ್ರತಿಮೆಯ ಯಾವ ಭಾಗ ಆಂಗ್ಲೋ-ಅಮೆರಿಕನ್ ಲೋಕಶಕ್ತಿಯನ್ನು ಸೂಚಿಸುತ್ತದೆ?
ಆಂಗ್ಲೋ-ಅಮೆರಿಕನ್ ಲೋಕಶಕ್ತಿಗೂ ವಿಶ್ವ ಸಂಸ್ಥೆಗೂ ಇರುವ ನಂಟನ್ನು ಯೋಹಾನನು ಹೇಗೆ ತೋರಿಸಿಕೊಟ್ಟಿದ್ದಾನೆ?
ಮಾನವ ಆಳ್ವಿಕೆಯ ವಿನಾಶವನ್ನು ದಾನಿಯೇಲ ಹಾಗೂ ಯೋಹಾನ ಹೇಗೆ ವರ್ಣಿಸಿದ್ದಾರೆ?
1, 2. (1) ದಾನಿಯೇಲ ಮತ್ತು ಯೋಹಾನನ ಪ್ರವಾದನೆಗಳನ್ನು ಹೋಲಿಸಿ ನೋಡುವಾಗ ನಮಗೇನು ತಿಳಿದುಬರುತ್ತದೆ? (2) ಕಾಡುಮೃಗದ ಮೊದಲ ಆರು ತಲೆಗಳು ಏನನ್ನು ಸೂಚಿಸುತ್ತವೆ?
ದಾನಿಯೇಲ ಹಾಗೂ ಯೋಹಾನ ತಿಳಿಸಿರುವ ಪ್ರವಾದನೆಗಳು ಒಂದಕ್ಕೊಂದು ನಿಕಟವಾಗಿ ಸಂಬಂಧಿಸಿವೆ. ಅವು ಇಂದು ಲೋಕದಲ್ಲಿ ಸಂಭವಿಸುತ್ತಿರುವ ಮತ್ತು ಮುಂದೆ ಸಂಭವಿಸಲಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳಲು ನಮಗೆ ನೆರವಾಗುತ್ತವೆ. ಯೋಹಾನನು ದರ್ಶನದಲ್ಲಿ ಕಂಡ ಕಾಡುಮೃಗ, ದಾನಿಯೇಲ ಕನಸಿನಲ್ಲಿ ಕಂಡ ಹತ್ತು ಕೊಂಬುಗಳುಳ್ಳ ಭಯಂಕರ ಮೃಗ ಹಾಗೂ ನೆಬೂಕದ್ನೆಚ್ಚರ ಕನಸಿನಲ್ಲಿ ಕಂಡ ದೊಡ್ಡ ಪ್ರತಿಮೆಯ ಕುರಿತು ದಾನಿಯೇಲ ಕೊಟ್ಟ ವಿವರಣೆ, ಈ ಮೂರನ್ನೂ ಒಂದಕ್ಕೊಂದು ಹೋಲಿಸಿ ನೋಡುವುದರಿಂದ ನಮಗೇನು ತಿಳಿದುಬರುತ್ತದೆ? ಈ ಪ್ರವಾದನೆಗಳು ಏನು ಮಾಡುವಂತೆ ನಮ್ಮನ್ನು ಪ್ರಚೋದಿಸಬೇಕು?
2 ನಾವೀಗ ಯೋಹಾನನು ದರ್ಶನದಲ್ಲಿ ಕಂಡ ಏಳು ತಲೆಯ ಕಾಡುಮೃಗದ ಕುರಿತು ನೋಡೋಣ. (ಪ್ರಕ. ಅಧ್ಯಾಯ 13) ಹಿಂದಿನ ಲೇಖನದಲ್ಲಿ ಕಲಿತಂತೆ ಆ ಕಾಡುಮೃಗದ ಆರು ತಲೆಗಳು ಒಂದರ ನಂತರ ಒಂದರಂತೆ ಬಂದ ಆರು ಲೋಕಶಕ್ತಿಗಳನ್ನು ಅಂದರೆ ಈಜಿಪ್ಟ್, ಅಶ್ಶೂರ, ಬಾಬೆಲ್, ಮೇದ್ಯ-ಪಾರಸೀಯ, ಗ್ರೀಸ್, ರೋಮ್ ಸಾಮ್ರಾಜ್ಯವನ್ನು ಸೂಚಿಸುತ್ತವೆ. ಈ ಎಲ್ಲ ಸಾಮ್ರಾಜ್ಯಗಳು ಸ್ತ್ರೀಯ ಸಂತತಿಯ ಮೇಲೆ ಹಗೆ ಅಥವಾ ದ್ವೇಷ ಕಾರಿದವು. (ಆದಿ. 3:15) ಯೋಹಾನನು ಆ ದರ್ಶನವನ್ನು ದಾಖಲಿಸಿದ ಸಮಯದಲ್ಲಿ ಆರನೇ ತಲೆಯಾದ ರೋಮ್ ಸಾಮ್ರಾಜ್ಯ ಅಧಿಕಾರದಲ್ಲಿತ್ತು. ಅನಂತರವೂ ಅದು ಅನೇಕ ಶತಮಾನಗಳ ವರೆಗೆ ಪ್ರಾಬಲ್ಯದಲ್ಲಿತ್ತು. ತದನಂತರ ಏಳನೇ ತಲೆ ಅಧಿಕಾರಕ್ಕೆ ಬಂತು. ಏಳನೇ ತಲೆ ಯಾವ ಲೋಕಶಕ್ತಿಯನ್ನು ಸೂಚಿಸುತ್ತದೆ? ಈ ಲೋಕಶಕ್ತಿ ಸ್ತ್ರೀಯ ಸಂತತಿಯೊಂದಿಗೆ ಹೇಗೆ ನಡೆದುಕೊಂಡಿತು?
ಅಧಿಕಾರಕ್ಕೆ ಬಂದ ಬ್ರಿಟನ್ ಮತ್ತು ಅಮೆರಿಕ
3. (1) ಹತ್ತು ಕೊಂಬುಗಳ ಭಯಂಕರ ಮೃಗ ಯಾವುದನ್ನು ಸೂಚಿಸುತ್ತದೆ? (2) ಹತ್ತು ಕೊಂಬುಗಳು ಏನನ್ನು ಸೂಚಿಸುತ್ತವೆ?
3 ಪ್ರಕಟನೆ 13ನೇ ಅಧ್ಯಾಯದಲ್ಲಿ ಹೇಳಲಾಗಿರುವ ಕಾಡುಮೃಗದ ಏಳನೇ ತಲೆ ಯಾವುದನ್ನು ಸೂಚಿಸುತ್ತದೆ? ಈ ದರ್ಶನವನ್ನು ದಾನಿಯೇಲ ನೋಡಿದ ಹತ್ತು ಕೊಂಬುಗಳ ಮೃಗದ ದರ್ಶನದೊಂದಿಗೆ ಹೋಲಿಸುವಾಗ ಉತ್ತರ ಸುಸ್ಪಷ್ಟ.a (ದಾನಿಯೇಲ 7:7, 8, 23, 24 ಓದಿ.) ದಾನಿಯೇಲ ಕಂಡ ಹತ್ತು ಕೊಂಬುಗಳ ಮೃಗ ರೋಮ್ ಸಾಮ್ರಾಜ್ಯವನ್ನು ಸೂಚಿಸುತ್ತದೆ. (ಪುಟ 12-13ರಲ್ಲಿರುವ ಚೌಕ ನೋಡಿ.) ಈ ಸಾಮ್ರಾಜ್ಯ 5ನೇ ಶತಮಾನದಷ್ಟಕ್ಕೆ ವಿಭಜನೆಯಾಗತೊಡಗಿತು. ದಾನಿಯೇಲ ಕಂಡ ಮೃಗದ ಹತ್ತು ಕೊಂಬುಗಳು ರೋಮ್ ಸಾಮ್ರಾಜ್ಯ ವಿಭಜನೆಗೊಂಡಾಗ ಅದರಿಂದಲೇ ಉದಯವಾದ ಎಲ್ಲ ರಾಜ್ಯಗಳನ್ನು ಸೂಚಿಸುತ್ತವೆ.
4, 5. (1) ಚಿಕ್ಕ ಕೊಂಬು ಏನು ಮಾಡಿತು? (2) ಕಾಡುಮೃಗದ ಏಳನೇ ತಲೆ ಯಾವುದನ್ನು ಸೂಚಿಸುತ್ತದೆ?
4 ದಾನೀಯೇಲ ಕಂಡ ಆ ಭಯಾನಕ ಮೃಗದ ನಾಲ್ಕು ಕೊಂಬುಗಳು ಅಥವಾ ರಾಜ್ಯಗಳು ವಿಶೇಷತೆ ಹೊಂದಿವೆ. ಹತ್ತು ಕೊಂಬುಗಳ ಮಧ್ಯೆ ಮೊಳೆತ “ಚಿಕ್ಕ ಕೊಂಬು” ಮೂರು ಕೊಂಬುಗಳನ್ನು ಬೇರು ಸಹಿತ ಕಿತ್ತು ಹಾಕುತ್ತದೆಂದು ದಾನಿಯೇಲ ಪುಸ್ತಕ ತಿಳಿಸುತ್ತದೆ. ಈ ಚಿಕ್ಕ ಕೊಂಬು ಬ್ರಿಟನ್ ಅನ್ನು ಸೂಚಿಸುತ್ತದೆ. ಮೊದಲು ರೋಮ್ನ ವಸಾಹತು ಆಗಿದ್ದ ಬ್ರಿಟನ್ ಪ್ರಖ್ಯಾತಿಗೆ ಬರಲು ಆರಂಭಿಸಿದಾಗ ಆ ಪ್ರವಾದನೆ ನೆರವೇರಿತು. 17ನೇ ಶತಮಾನದ ವರೆಗೂ ಲೋಕರಂಗದಲ್ಲಿ ಬ್ರಿಟನ್ ಹೆಚ್ಚು ಪ್ರಾಶಸ್ತ್ಯ ಪಡೆದಿರಲಿಲ್ಲ. ಆದರೆ ಈ ಹಿಂದೆ ರೋಮ್ ಸಾಮ್ರಾಜ್ಯಕ್ಕೆ ಸೇರಿದ್ದ ಸ್ಪೇನ್, ನೆದರ್ಲೆಂಡ್ಸ್, ಫ್ರಾನ್ಸ್ ಲೋಕರಂಗದಲ್ಲಿ ಛಾಪು ಮೂಡಿಸಿದ್ದವು. ಈಗ ಬ್ರಿಟನ್ ಒಂದೊಂದಾಗಿ ಆ ಮೂರೂ ರಾಜ್ಯಗಳನ್ನು ನೆಲಕ್ಕುರುಳಿಸಿತು. 18ನೇ ಶತಮಾನದ ಮಧ್ಯದಷ್ಟಕ್ಕೆ ಬ್ರಿಟನ್ ಅಧಿಕಾರದ ಉತ್ತುಂಗದತ್ತ ದಾಪುಗಾಲಿಡುತ್ತಿತ್ತು. ಹಾಗಿದ್ದರೂ ಆ ಸಮಯದಷ್ಟಕ್ಕೆ ಬ್ರಿಟನ್ ಕಾಡುಮೃಗದ ಏಳನೇ ತಲೆಯಾಗಿ ಅಸ್ತಿತ್ವಕ್ಕೆ ಬಂದಿರಲಿಲ್ಲ.
5 ಬ್ರಿಟನ್ ಪ್ರಾಬಲ್ಯಕ್ಕೆ ಬಂದರೂ ಉತ್ತರ ಅಮೆರಿಕದಲ್ಲಿದ್ದ ವಸಾಹತುಗಳು ಬ್ರಿಟನ್ ವಿರುದ್ಧ ದಂಗೆಯೆದ್ದು ಸ್ವತಂತ್ರಗೊಂಡವು. ಇದರಿಂದಾಗಿ ಅಮೆರಿಕ ದೇಶ ಅಸ್ತಿತ್ವಕ್ಕೆ ಬಂತು. ಅಮೆರಿಕ ಬಲಾಢ್ಯ ದೇಶವಾಗಿ ಬೆಳೆಯುವುದನ್ನು ಬ್ರಿಟನ್ ತಡೆಯಲಿಲ್ಲ. ತನ್ನ ನೌಕಾದಳದ ಮೂಲಕ ರಕ್ಷಣೆಯನ್ನೂ ಕೊಟ್ಟಿತು. 1914ರಲ್ಲಿ ಕರ್ತನ ದಿನದ ಆರಂಭದಷ್ಟಕ್ಕೆ ಇತಿಹಾಸದಲ್ಲಿ ಬ್ರಿಟನ್ ಅತ್ಯಂತ ದೊಡ್ಡ ಸಾಮ್ರಾಜ್ಯವಾಗಿ ಬೆಳೆದು ನಿಂತಿತ್ತು. ಅಮೆರಿಕ ಕೂಡ ಕೈಗಾರಿಕೆಯಲ್ಲಿ ಅತಿ ಪ್ರಬಲ ರಾಷ್ಟ್ರವಾಗಿ ಬೆಳೆದಿತ್ತು.b ಒಂದನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕವು ಬ್ರಿಟನ್ನೊಂದಿಗೆ ಕೈಜೋಡಿಸಿ ಮಹತ್ತರ ರೀತಿಯಲ್ಲಿ ಕಾರ್ಯವೆಸಗಲು ಆರಂಭಿಸಿತು. ಹೀಗೆ ಎರಡು ರಾಷ್ಟ್ರಗಳು ಜೊತೆಸೇರಿ ಆಂಗ್ಲೋ-ಅಮೆರಿಕನ್ ಲೋಕ ಶಕ್ತಿ ಉದಯವಾಯಿತು. ಇದೇ ಕಾಡುಮೃಗದ ಏಳನೇ ತಲೆ. ಈ ಲೋಕಶಕ್ತಿ ಸ್ತ್ರೀಯ ಸಂತಾನದೊಂದಿಗೆ ಹೇಗೆ ವರ್ತಿಸಿತು?
6. ಕಾಡುಮೃಗದ ಏಳನೇ ತಲೆ ದೇವಜನರೊಂದಿಗೆ ಹೇಗೆ ವರ್ತಿಸಿತು?
6 ಕರ್ತನ ದಿನ ಆರಂಭವಾಗಿ ಸ್ವಲ್ಪವೇ ಸಮಯದಲ್ಲಿ ಕಾಡುಮೃಗದ ಏಳನೇ ತಲೆಯಾದ ಆಂಗ್ಲೋ-ಅಮೆರಿಕನ್ ಲೋಕಶಕ್ತಿ ಭೂಮಿಯ ಮೇಲಿದ್ದ ಕ್ರಿಸ್ತನ ಸಹೋದರರಾದ ಅಭಿಷಿಕ್ತರಲ್ಲಿ ಉಳಿದವರ ಮೇಲೆ ಆಕ್ರಮಣ ಮಾಡಿತು. (ಮತ್ತಾ. 25:40) ಯೇಸು ಮುಂತಿಳಿಸಿದಂತೆ ಸ್ತ್ರೀಯ ಸಂತತಿಯಲ್ಲಿ ಉಳಿದವರು ಆತನ ಸಾನ್ನಿಧ್ಯದ ಸಮಯದಲ್ಲಿ ಭೂಮಿಯಲ್ಲಿ ಸಾರುವ ಕೆಲಸವನ್ನು ಮಾಡುತ್ತಿದ್ದರು. (ಮತ್ತಾ. 24:45-47; ಗಲಾ. 3:26-29) ಈ ಪವಿತ್ರ ಜನರೊಂದಿಗೆ ಆಂಗ್ಲೋ-ಅಮೆರಿಕನ್ ಲೋಕಶಕ್ತಿ ಯುದ್ಧಕ್ಕಿಳಿಯಿತು. (ಪ್ರಕ. 13:3, 7) ಒಂದನೇ ಮಹಾಯುದ್ಧದ ಸಮಯದಲ್ಲಿ ದೇವಜನರನ್ನು ಹಿಂಸೆಪಡಿಸಿತು. ಅವರ ಸಾಹಿತ್ಯದ ಮೇಲೆ ನಿಷೇಧ ಹೇರಿತು. ನಂಬಿಗಸ್ತ ಆಳು ವರ್ಗದ ಪ್ರತಿನಿಧಿಗಳನ್ನು ಸೆರೆಗೆ ದೊಬ್ಬಿತು. ಸಾರುವ ಕೆಲಸವನ್ನು ಈ ಲೋಕಶಕ್ತಿ ಕೊನೆಗಾಣಿಸಿಯೇ ಬಿಟ್ಟಂತಿತ್ತು. ಈ ಎಲ್ಲ ಸಂಗತಿಗಳು ಸಂಭವಿಸುವವೆಂದು ಯೆಹೋವ ದೇವರು ಮೊದಲೇ ಯೋಹಾನನಿಗೆ ಪ್ರಕಟಿಸಿದ್ದನು. ಮಾತ್ರವಲ್ಲ, ಸ್ತ್ರೀಯ ಸಂತತಿಯ ದ್ವಿತೀಯ ಭಾಗವಾದ ಅಭಿಷಿಕ್ತ ಕ್ರೈಸ್ತರು ಸಾರುವ ಕೆಲಸವನ್ನು ಪುನಃ ಆರಂಭಿಸುವರು ಎಂದೂ ತಿಳಿಸಿದ್ದನು. (ಪ್ರಕ. 11:3, 7-11) ಅದು ಸತ್ಯವಾಯಿತೆಂದು ಸಾಕ್ಷಿಗಳ ಆಧುನಿಕ ಕಾಲದ ಇತಿಹಾಸ ತೋರಿಸುತ್ತದೆ.
ಆಂಗ್ಲೋ-ಅಮೆರಿಕನ್ ಲೋಕಶಕ್ತಿ ಮತ್ತು ಕಬ್ಬಿಣಮಣ್ಣಿನ ಹೆಜ್ಜೆಗಳು
7. ಕಾಡುಮೃಗದ ಏಳನೇ ತಲೆಗೂ ಲೋಹದ ದೊಡ್ಡ ಪ್ರತಿಮೆಗೂ ಯಾವ ಸಂಬಂಧವಿದೆ?
7 ಕಾಡುಮೃಗದ ಏಳನೇ ತಲೆ ಮತ್ತು ಲೋಹದ ದೊಡ್ಡ ಪ್ರತಿಮೆಯ ಹೆಜ್ಜೆಗಳಿಗೆ ಯಾವ ಸಂಬಂಧವಿದೆ? ರೋಮ್ ಸಾಮ್ರಾಜ್ಯದಿಂದ ಬ್ರಿಟನ್ ಹುಟ್ಟಿಕೊಂಡಿತು. ಬ್ರಿಟನ್ನಿಂದ ಅಮೆರಿಕ ಉದಯವಾಯಿತು. ಆದಕಾರಣ ಅಮೆರಿಕ ಸಹ ರೋಮ್ನಿಂದ ಬಂದದ್ದೆಂದು ಹೇಳಸಾಧ್ಯ. ಪ್ರತಿಮೆಯ ಹೆಜ್ಜೆಯಲ್ಲಿ ಕಬ್ಬಿಣದ ಅಂಶ ಏಕಿದೆಯೆಂದು ಇದು ಸ್ಪಷ್ಟಪಡಿಸುತ್ತದೆ. ಆದರೆ ಗಮನಿಸಬೇಕಾದ ವಿಷಯವೇನೆಂದರೆ ಹೆಜ್ಜೆಗಳಲ್ಲಿ ಕಬ್ಬಿಣದೊಂದಿಗೆ ಮಣ್ಣು ಮಿಶ್ರಿತವಾಗಿದೆ. (ದಾನಿಯೇಲ 2:41-43 ಓದಿ.) ಪ್ರತಿಮೆಯ ಹೆಜ್ಜೆಗಳು ಹಾಗೂ ಕಾಡುಮೃಗದ ಏಳನೆಯ ತಲೆ ಇವೆರಡೂ ಆಂಗ್ಲೋ-ಅಮೆರಿಕನ್ ಲೋಕ ಶಕ್ತಿ ಅಧಿಕಾರಕ್ಕೆ ಬಂದ ಸಮಯಕ್ಕೆ ಕೈತೋರಿಸುತ್ತವೆ. ಕಬ್ಬಿಣದ ವಸ್ತುವಿಗಿಂತಲೂ ಮಣ್ಣು-ಕಬ್ಬಿಣದ ಮಿಶ್ರಣದಿಂದ ಮಾಡಿದ ವಸ್ತು ದುರ್ಬಲವಾಗಿರುವಂತೆಯೇ ರೋಮ್ ಲೋಕಶಕ್ತಿಗಿಂತಲೂ ಆಂಗ್ಲೋ-ಅಮೆರಿಕನ್ ಲೋಕಶಕ್ತಿ ದುರ್ಬಲವಾಗಿದೆ. ಯಾವ ವಿಷಯ ಆಂಗ್ಲೋ-ಅಮೆರಿಕನ್ ಲೋಕಶಕ್ತಿಯನ್ನು ದುರ್ಬಲಗೊಳಿಸಿತು?
8, 9. (1) ಏಳನೇ ಲೋಕಶಕ್ತಿ ಕಬ್ಬಿಣದಂಥ ಶಕ್ತಿಯನ್ನು ಹೇಗೆ ಪ್ರದರ್ಶಿಸಿತು? (2) ಪ್ರತಿಮೆಯ ಹೆಜ್ಜೆಗಳಲ್ಲಿರುವ ಮಣ್ಣು ಏನನ್ನು ಸೂಚಿಸುತ್ತದೆ?
8 ಆಂಗ್ಲೋ-ಅಮೆರಿಕನ್ ಲೋಕಶಕ್ತಿ ಕೆಲವು ಬಾರಿ ಕಬ್ಬಿಣದಂತೆ ತಾನು ಬಲಿಷ್ಠವೆಂದು ತೋರ್ಪಡಿಸಿತು. ಉದಾಹರಣೆಗೆ, ಒಂದನೇ ಮತ್ತು ಎರಡನೇ ಮಹಾಯುದ್ಧದಲ್ಲಿ ಜಯಗಳಿಸುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿತು.c ಇದರ ನಂತರವೂ ಹಲವಾರು ಬಾರಿ ಈ ಲೋಕಶಕ್ತಿಯ ಕಬ್ಬಿಣದಂಥ ಬಲವು ತೋರಿಬಂದಿದೆ. ಆದರೆ ಅದು ಅಸ್ತಿತ್ವಕ್ಕೆ ಬಂದ ಸಮಯದಿಂದಲೂ ಅದರಲ್ಲಿ ಮಣ್ಣು ಮಿಶ್ರಿತವಾಗಿದೆ.
9 ಪ್ರತಿಮೆಯ ಹೆಜ್ಜೆಗಳು ಏನನ್ನು ಸೂಚಿಸುತ್ತವೆ ಎಂದು ತಿಳಿದುಕೊಳ್ಳಲು ಯೆಹೋವನ ಜನರು ತುಂಬ ಸಮಯದಿಂದ ಪ್ರಯತ್ನಿಸುತ್ತಿದ್ದಾರೆ. ಕಬ್ಬಿಣ ಮತ್ತು ಮಣ್ಣು ಮಿಶ್ರಿತ ಹೆಜ್ಜೆಗಳನ್ನು ದಾನಿಯೇಲ 2:41ರಲ್ಲಿ ಅನೇಕ ರಾಜ್ಯಗಳೆಂದಲ್ಲ, ಒಂದು “ರಾಜ್ಯ” ಎಂದು ಹೇಳಲಾಗಿದೆ. ಮಣ್ಣು ಏನನ್ನು ಸೂಚಿಸುತ್ತದೆ? ರೋಮ್ ಲೋಕಶಕ್ತಿಗಿಂತ ಆಂಗ್ಲೋ-ಅಮೆರಿಕನ್ ಲೋಕಶಕ್ತಿಯನ್ನು ಯಾವುದು ದುರ್ಬಲಗೊಳಿಸುತ್ತದೋ ಅದನ್ನು ಮಣ್ಣು ಸೂಚಿಸುತ್ತದೆ. ಅದು ಏನೆಂದು ದಾನಿಯೇಲನ ಪ್ರವಾದನೆ ತಿಳಿಸುತ್ತದೆ. ಮಣ್ಣು ‘ಸಂತತಿಯನ್ನು’ ಅಂದರೆ ಜನಸಾಮಾನ್ಯರನ್ನು ಸೂಚಿಸುತ್ತದೆ. (ದಾನಿ. 2:43) ಆಂಗ್ಲೋ-ಅಮೆರಿಕನ್ ಲೋಕಶಕ್ತಿಯ ಕೆಳಗೆ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾ ಪೌರ ಹಕ್ಕುಗಳ ಆಂದೋಲನಗಳನ್ನು, ಕಾರ್ಮಿಕರ ಸಂಘಗಳನ್ನು, ಸ್ವಾತಂತ್ರ್ಯ ಚಳುವಳಿಗಳನ್ನು ನಡೆಸುತ್ತಿದ್ದಾರೆ. ಆಂಗ್ಲೋ ಅಮೆರಿಕನ್ ಲೋಕಶಕ್ತಿಯ ಕಬ್ಬಿಣದಂಥ ಸಾಮರ್ಥ್ಯವನ್ನು ಜನಸಾಮಾನ್ಯರು ಕುಗ್ಗಿಸುತ್ತಿದ್ದಾರೆ. ಮಾತ್ರವಲ್ಲ ರಾಜಕೀಯದ ಬಗ್ಗೆ ಜನರಿಗೆ ಭಿನ್ನ ಧೋರಣೆಗಳಿವೆ. ಹಾಗೂ ಪುನಃ ಪುನಃ ನಡೆಯುವ ಚುನಾವಣೆಗಳಿಂದಾಗಿ ಅಧಿಕಾರಕ್ಕೆ ಬರುವವರು ಬಹುಮತಗಳನ್ನು ಪಡೆಯದ ಕಾರಣ ಅವರು ಯಾವುದೇ ನಿಯಮವನ್ನು ಅಧಿಕಾರಯುಕ್ತವಾಗಿ ಜಾರಿಗೊಳಿಸುವುದು ಕಷ್ಟವಾಗುತ್ತದೆ. “ಆ ರಾಜ್ಯದ ಒಂದಂಶವು ಗಟ್ಟಿ ಒಂದಂಶವು ಬೆಂಡು” ಎಂಬ ದಾನಿಯೇಲನು ಪ್ರವಾದಿಸಿದ್ದನು.—ದಾನಿ. 2:42; 2 ತಿಮೊ. 3:1-3.
10, 11. (1) ಹೆಜ್ಜೆಗಳಿಗೆ ಏನಾಗುವುದು? (2) ಕಾಲ್ಬೆರಳುಗಳ ಸಂಖ್ಯೆಗೆ ಯಾವುದಾದರೂ ವಿಶೇಷಾರ್ಥವಿದೆಯೇ?
10 ಇವತ್ತಿಗೂ ಬ್ರಿಟನ್ ಮತ್ತು ಅಮೆರಿಕ ಜೊತೆಗೂಡಿ ಲೋಕರಂಗದಲ್ಲಿ ಕೆಲಸಮಾಡುತ್ತಿವೆ. ದೊಡ್ಡ ಲೋಹದ ಪ್ರತಿಮೆಯಲ್ಲಿ ಹೆಜ್ಜೆಗಳು ಪ್ರತಿಮೆಯ ಕೊನೆಯ ಭಾಗವಾಗಿದೆ. ಕಾಡುಮೃಗದ ಏಳನೇ ತಲೆಯು ಸಹ ಕೊನೆಯ ತಲೆಯಾಗಿದೆ. ಅಂದರೆ ಆಂಗ್ಲೋ-ಅಮೆರಿಕನ್ ಲೋಕಶಕ್ತಿಯೇ ಕೊನೆಯ ಲೋಕಶಕ್ತಿಯಾಗಿದೆ. ಇದರ ನಂತರ ಇನ್ನೊಂದು ಲೋಕಶಕ್ತಿ ಆಳ್ವಿಕೆಗೆ ಬರುವುದಿಲ್ಲ ಎಂದು ಈ ಎರಡೂ ಪ್ರವಾದನೆಗಳು ತೋರಿಸುತ್ತವೆ. ಪ್ರತಿಮೆಯ ಕಬ್ಬಿಣದ ಕಾಲುಗಳಿಂದ ಸೂಚಿತವಾದ ರೋಮ್ ಲೋಕಶಕ್ತಿಗಿಂತ ಆಂಗ್ಲೋ-ಅಮೆರಿಕನ್ ಲೋಕಶಕ್ತಿ ದುರ್ಬಲವಾಗಿದೆ ನಿಜ. ಆದರೂ ಅದು ತನ್ನಿಂದ ತಾನೇ ನಾಶವಾಗದು.
11 ಪ್ರತಿಮೆಯ ಕಾಲ್ಬೆರಳುಗಳ ಸಂಖ್ಯೆಗೆ ಏನಾದರೂ ವಿಶೇಷ ಅರ್ಥವಿದೆಯೇ? ದಾನಿಯೇಲನು ಇತರ ದರ್ಶನಗಳ ಕುರಿತು ತಿಳಿಸುವಾಗ ನಿರ್ದಿಷ್ಟ ಸಂಖ್ಯೆಗಳನ್ನು ಹೇಳಿದ್ದಾನೆ. ಉದಾಹರಣೆಗೆ ಬೇರೆ ಬೇರೆ ಮೃಗಗಳಿಗಿದ್ದ ಕೊಂಬುಗಳ ಸಂಖ್ಯೆಯನ್ನು ತಿಳಿಸಿದ್ದಾನೆ. ಆ ಸಂಖ್ಯೆಗಳಿಗೆ ವಿಶೇಷಾರ್ಥವಿದೆ. ಆದರೆ ಪ್ರತಿಮೆಯ ಬಗ್ಗೆ ತಿಳಿಸುವಾಗ ಅದರ ಕಾಲ್ಬೆರಳುಗಳ ಸಂಖ್ಯೆಯನ್ನು ದಾನಿಯೇಲ ತಿಳಿಸಿಲ್ಲ. ಹಾಗಾಗಿ ಪ್ರತಿಮೆಯ ಕಾಲ್ಬೆರಳುಗಳ ಸಂಖ್ಯೆಗೆ ಯಾವುದೇ ವಿಶೇಷಾರ್ಥವಿಲ್ಲ. ಪ್ರತಿಮೆಯ ತೋಳುಗಳು, ಕೈಗಳು, ಬೆರಳುಗಳು, ಕಾಲುಗಳು ಅಥವಾ ಹೆಜ್ಜೆಗಳ ಸಂಖ್ಯೆಗೆ ಹೇಗೆ ವಿಶೇಷಾರ್ಥವಿಲ್ಲವೋ ಹಾಗೆಯೇ ಕಾಲ್ಬೆರಳುಗಳ ಸಂಖ್ಯೆಗೆ ಯಾವುದೇ ವಿಶೇಷಾರ್ಥವಿಲ್ಲ. ಆದರೆ ಕಾಲ್ಬೆರಳುಗಳು ಕಬ್ಬಿಣ ಮತ್ತು ಮಣ್ಣಿನಿಂದ ಮಾಡಲ್ಪಟ್ಟಿವೆ ಎಂದು ದಾನಿಯೇಲ ಸ್ಪಷ್ಟವಾಗಿ ಹೇಳಿದ್ದಾನೆ. ಇದರಿಂದ ನಾವೇನನ್ನು ತಿಳುಕೊಳ್ಳುತ್ತೇವೆಂದರೆ ದೇವರ ರಾಜ್ಯವನ್ನು ಸೂಚಿಸುವ “ಗುಂಡು ಬಂಡೆ” ಪ್ರತಿಮೆಯ ಕಾಲಿಗೆ ಬಂದು ಬಡಿಯುವಾಗ ಆಂಗ್ಲೋ-ಅಮೆರಿಕನ್ ಲೋಕಶಕ್ತಿಯೇ ಅಧಿಕಾರದಲ್ಲಿರುವುದು.—ದಾನಿ. 2:45.
ಆಂಗ್ಲೋ-ಅಮೆರಿಕ ಮತ್ತು ಎರಡು ಕೊಂಬುಗಳ ಕಾಡುಮೃಗ
12, 13. (1) ಎರಡು ಕೊಂಬಿನ ಕಾಡುಮೃಗ ಯಾವುದನ್ನು ಸೂಚಿಸುತ್ತದೆ? (2) ಅದು ಏನು ಮಾಡುತ್ತದೆ?
12 ಆಂಗ್ಲೋ-ಅಮೆರಿಕನ್ ಲೋಕಶಕ್ತಿ ಕಬ್ಬಿಣ ಮತ್ತು ಮಣ್ಣಿನ ಮಿಶ್ರಣದಂತೆ ದುರ್ಬಲವಾಗಿದ್ದರೂ ಅದು ಕಡೇ ದಿವಸಗಳಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆಂದು ಯೋಹಾನನಿಗೆ ಯೇಸು ತೋರಿಸಿದ ದರ್ಶನಗಳು ವ್ಯಕ್ತಪಡಿಸುತ್ತವೆ. ಒಂದು ದರ್ಶನದಲ್ಲಿ ಘಟಸರ್ಪದಂತೆ ಮಾತಾಡುತ್ತಿದ್ದ ಎರಡು ಕೊಂಬಿನ ಕಾಡುಮೃಗವನ್ನು ಯೋಹಾನ ನೋಡಿದನು. ಈ ಕಾಡುಮೃಗ ಯಾವುದನ್ನು ಸೂಚಿಸುತ್ತದೆ? ಇದಕ್ಕೆ ಎರಡು ಕೊಂಬುಗಳಿರುವುದರಿಂದ ಇದು ಉಭಯ ಲೋಕಶಕ್ತಿಯನ್ನು ಸೂಚಿಸುತ್ತದೆ. ಈ ಮೃಗ ಸಹ ಆಂಗ್ಲೋ-ಅಮೆರಿಕನ್ ಲೋಕಶಕ್ತಿಯನ್ನು ಸೂಚಿಸುತ್ತದೆ. ಆದರೆ ಈ ದರ್ಶನದಲ್ಲಿ ಅದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ.—ಪ್ರಕಟನೆ 13:11-15 ಓದಿ.
13 ಈ ಎರಡು ಕೊಂಬಿನ ಕಾಡುಮೃಗವು ಏಳು ತಲೆಗಳ ಕಾಡುಮೃಗದ ವಿಗ್ರಹವನ್ನು ಮಾಡುವಂತೆ ಜನರಿಗೆ ಹೇಳುತ್ತದೆ. ಈ ವಿಗ್ರಹವು ಒಮ್ಮೆ ಇದ್ದು ಆಮೇಲೆ ಕಣ್ಮರೆಯಾಗಿ ಮತ್ತೆ ಇನ್ನೊಮ್ಮೆ ಕಾಣಿಸಿಕೊಳ್ಳುತ್ತದೆ ಎಂದು ಯೋಹಾನನು ಹೇಳಿದ್ದಾನೆ. ಬ್ರಿಟನ್ ಮತ್ತು ಅಮೆರಿಕ ಒಟ್ಟುಗೂಡಿ ಸ್ಥಾಪಿಸಿದ ಸಂಘಟನೆಯ ವಿಷಯದಲ್ಲಿ ಇದು ಸತ್ಯವಾಯಿತು. ಲೋಕದ ರಾಷ್ಟ್ರಗಳ ಪ್ರತಿನಿಧಿಯಾಗಿ ಕೆಲಸಮಾಡುತ್ತಾ ಅವುಗಳಲ್ಲಿ ಏಕತೆಯನ್ನು ತರುವ ಉದ್ದೇಶದಿಂದ ಈ ಸಂಘಟನೆd ಒಂದನೇ ಮಹಾಯುದ್ಧದ ನಂತರ ಅಸ್ತಿತ್ವಕ್ಕೆ ಬಂತು. ಇದೇ ಜನಾಂಗ ಸಂಘ. ಆದರೆ ಎರಡನೇ ಮಹಾಯುದ್ಧ ಆರಂಭವಾದಾಗ ಜನಾಂಗ ಸಂಘ ಕಣ್ಮರೆಯಾಯಿತು. ಆ ಸಂಘಟನೆ ಪ್ರಕಟನೆಯ ಪ್ರವಾದನೆಗನುಸಾರ ಪುನಃ ಅಸ್ತಿತ್ವಕ್ಕೆ ಬರಲಿದೆ ಎಂದು ದೇವಜನರು ಯುದ್ಧದ ಸಮಯದಲ್ಲಿ ಪ್ರಕಟಿಸಿದರು. ಪ್ರವಾದನೆ ಚಾಚೂತಪ್ಪದೆ ನೆರವೇರಿತು. ಆ ಸಂಘಟನೆ ವಿಶ್ವ ಸಂಸ್ಥೆ ಎಂಬ ಹೆಸರಿನಲ್ಲಿ ಪುನಃ ಅಸ್ತಿತ್ವಕ್ಕೆ ಬಂತು.—ಪ್ರಕ. 17:8.
14. ಕಾಡುಮೃಗದ ವಿಗ್ರಹವನ್ನು “ಎಂಟನೆಯ ರಾಜ” ಎಂದು ಏಕೆ ಕರೆಯಲಾಗಿದೆ?
14 ಕಾಡುಮೃಗದ ವಿಗ್ರಹವನ್ನು “ಎಂಟನೆಯ ರಾಜ” ಎಂದು ಯೋಹಾನ ಹೇಳಿದ್ದಾನೆ. ಯಾವ ಅರ್ಥದಲ್ಲಿ? ನಿಜವಾದ ಕಾಡುಮೃಗಕ್ಕೆ ಎಂಟನೆಯ ತಲೆ ಇಲ್ಲದ್ದರಿಂದ ಇದು ಎಂಟನೆಯ ಲೋಕಶಕ್ತಿಯಾಗಲು ಸಾಧ್ಯವಿಲ್ಲ. ಆದರೆ ಕಾಡುಮೃಗದ ವಿಗ್ರಹದಿಂದ ಸೂಚಿಸಲ್ಪಟ್ಟಿರುವ ಸಂಘಟನೆಯು ತನ್ನ ಸದಸ್ಯ ರಾಷ್ಟ್ರಗಳಿಂದ, ಮುಖ್ಯವಾಗಿ ಆಂಗ್ಲೋ-ಅಮೆರಿಕನ್ ಲೋಕಶಕ್ತಿಯಿಂದ ಅಧಿಕಾರ ಪಡೆಯುತ್ತದೆ. (ಪ್ರಕ. 17:10, 11) ಒಂದು ನಿರ್ದಿಷ್ಟ ಕೆಲಸ ಮಾಡಲಿಕ್ಕಾಗಿ ಅಧಿಕಾರ ಪಡೆದು ಒಬ್ಬ ರಾಜನಂತೆ ಕಾರ್ಯ ನಿರ್ವಹಿಸುವುದರಿಂದ ಅದನ್ನು “ಎಂಟನೆಯ ರಾಜ” ಎಂದು ಕರೆಯಲಾಗಿದೆ. ಈ ಕೆಲಸ ಇತಿಹಾಸವನ್ನೇ ಬದಲಾಯಿಸುವ ಘಟನೆಗಳ ಸರಮಾಲೆಯನ್ನೇ ಆರಂಭಿಸಲಿದೆ.
ಕಾಡುಮೃಗದ ವಿಗ್ರಹದಿಂದ ವೇಶ್ಯೆಯ ನಾಶನ
15, 16. (1) ವೇಶ್ಯೆ ಯಾವುದನ್ನು ಸೂಚಿಸುತ್ತಾಳೆ? (2) ಅವಳಿಗೆ ಈಗ ಎಷ್ಟರ ಮಟ್ಟಿಗೆ ಬೆಂಬಲ ದೊರಕುತ್ತಿದೆ?
15 ಕಾಡುಮೃಗದ ವಿಗ್ರಹದ ಮೇಲೆ ಅಂದರೆ ಕಡುಗೆಂಪು ಬಣ್ಣದ ಕಾಡುಮೃಗದ ಮೇಲೆ ಒಬ್ಬ ವೇಶ್ಯೆ ಕುಳಿತುಕೊಂಡಿರುತ್ತಾಳೆ ಎಂದು ಯೋಹಾನನ ಪ್ರವಾದನೆ ಹೇಳುತ್ತದೆ. ಆ ವೇಶ್ಯೆಯನ್ನು “ಮಹಾ ಬಾಬೆಲ್” ಎಂದು ಕರೆಯಲಾಗುತ್ತದೆ. (ಪ್ರಕ. 17:1-6) ಈಕೆ ಎಲ್ಲ ಸುಳ್ಳು ಧರ್ಮಗಳನ್ನು ಸೂಚಿಸುತ್ತಾಳೆ. ಈ ಸುಳ್ಳು ಧರ್ಮಗಳಲ್ಲಿ ಕ್ರೈಸ್ತಪ್ರಪಂಚದ ಚರ್ಚುಗಳು ಪ್ರಮುಖವಾಗಿವೆ. ಧಾರ್ಮಿಕ ಸಂಘಟನೆಗಳು ಕಾಡುಮೃಗದ ವಿಗ್ರಹಕ್ಕೆ ಅಂದರೆ ಜನಾಂಗ ಸಂಘ ಹಾಗೂ ವಿಶ್ವ ಸಂಸ್ಥೆಗೆ ಬೆಂಬಲ ಕೊಡುತ್ತಾ ಅವುಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿವೆ.
16 ಮಹಾ ಬಾಬೆಲ್ ‘ನೀರುಗಳ’ ಮೇಲೆ ಕುಳಿತುಕೊಂಡಿದ್ದಾಳೆ ಎಂದು ಪ್ರವಾದನೆ ವರ್ಣಿಸುತ್ತದೆ. ‘ನೀರುಗಳು’ ಆಕೆಯನ್ನು ಬೆಂಬಲಿಸುವ ಜನರನ್ನು ಸೂಚಿಸುತ್ತದೆ. ಆದರೆ ಕರ್ತನ ದಿನದಲ್ಲಿ ಆ ನೀರು ಇಂಗಿಹೋಯಿತು. ಅಂದರೆ ಮಹಾ ಬಾಬೆಲ್ ತನ್ನ ಬಹುಪಾಲು ಬೆಂಬಲಿಗರನ್ನು ಕಳೆದುಕೊಂಡಿತು. (ಪ್ರಕ. 16:12; 17:15) ಉದಾಹರಣೆಗೆ, ಕಾಡುಮೃಗದ ವಿಗ್ರಹವು ಮೊದಲು ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಮಹಾ ಬಾಬೆಲಿನ ಪ್ರಮುಖ ಭಾಗವಾದ ಕ್ರೈಸ್ತ ಪ್ರಪಂಚದ ಚರ್ಚುಗಳು ಪಾಶ್ಚಾತ್ಯ ದೇಶಗಳ ಮೇಲೆ ನಿಯಂತ್ರಣ ಸಾಧಿಸಿದ್ದವು. ಆದರೀಗ? ಜನರಿಗೆ ಚರ್ಚ್ ಮತ್ತು ಪಾದ್ರಿಗಳ ಮೇಲೆ ಗೌರವವೇ ಇಲ್ಲ. ಅವರಿಗೆ ಬೆಂಬಲವನ್ನೂ ಕೊಡುವುದಿಲ್ಲ. ಅಷ್ಟೇ ಅಲ್ಲ, ಲೋಕದಲ್ಲಿರುವ ಸಮಸ್ಯೆಗಳಿಗೆಲ್ಲ ಧರ್ಮವೇ ಕಾರಣ ಎಂದು ಅನೇಕ ಜನರು ಪ್ರತಿಪಾದಿಸುತ್ತಿದ್ದಾರೆ. ಹಾಗಾಗಿ ಧರ್ಮವು ಸಮಾಜದ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರದಂತೆ ತಡೆಯಬೇಕು ಎಂದು ಅನೇಕರು ದನಿಯೆತ್ತಿದ್ದಾರೆ.
17. (1) ಸುಳ್ಳು ಧರ್ಮಕ್ಕೆ ಬೇಗನೆ ಏನಾಗಲಿದೆ? (2) ಏಕೆ?
17 ಹಾಗಂತ ಸುಳ್ಳು ಧರ್ಮ ತನ್ನ ಪ್ರಭಾವವನ್ನು ಕಳಕೊಂಡು ಕಣ್ಮರೆಯಾಗುವುದಿಲ್ಲ. ದೇವರು ತನ್ನ ಯೋಚನೆಯನ್ನು ರಾಜರ ಹೃದಯಗಳಲ್ಲಿ ಹಾಕುವ ವರೆಗೂ ಅದರ ಪ್ರಭಾವ ಮುಂದುವರಿಯುತ್ತದೆ. ಅಷ್ಟರವರೆಗೂ ಅದು ರಾಜರನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ಇಷ್ಟಬಂದಂತೆ ನಡೆಸಿಕೊಳ್ಳುತ್ತದೆ. (ಪ್ರಕಟನೆ 17:16, 17 ಓದಿ.) ಆದರೆ ಶೀಘ್ರದಲ್ಲೇ ವಿಶ್ವ ಸಂಸ್ಥೆಯಿಂದ ಪ್ರತಿನಿಧಿಸಲ್ಪಡುವ ಈ ಲೋಕದ ಎಲ್ಲ ಸರಕಾರಗಳು ಸುಳ್ಳು ಧರ್ಮದ ಮೇಲೆ ಆಕ್ರಮಣ ಮಾಡುವಂತೆ ಯೆಹೋವನು ಮಾಡುವನು. ಈ ಸರಕಾರಗಳು ಸುಳ್ಳು ಧರ್ಮದ ಪ್ರಭಾವವನ್ನು ಅಡಗಿಸಿ ಅದರ ಐಶ್ವರ್ಯವನ್ನೆಲ್ಲಾ ನಾಶಮಾಡಿ ಬಿಡುವವು. ಇಂಥ ಒಂದು ಘಟನೆಯನ್ನು ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಿರಲಿಲ್ಲ. ಸುಳ್ಳು ಧರ್ಮ ಅಷ್ಟು ಪ್ರಭಾವಶಾಲಿಯಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಕಡುಗೆಂಪು ಬಣ್ಣದ ಕಾಡುಮೃಗದ ಮೇಲೆ ಕೂತಿರುವ ಮಹಾ ಬಾಬೆಲ್ ಅಲುಗಾಡುತ್ತಿದ್ದಾಳೆ. ಆದರೂ ಅವಳು ಮೆಲ್ಲಮೆಲ್ಲನೆ ಜಾರಿ ಕೆಳಗೆ ಬೀಳುವುದಿಲ್ಲ. ಒಮ್ಮೆಲೆ ಧಡಮ್ಮನೆ ಬಿದ್ದು ನಾಶವಾಗುವಳು.—ಪ್ರಕ. 18:7, 8, 15-19.
ಕಾಡುಮೃಗಗಳ ವಿನಾಶ
18. (1) ಕಾಡುಮೃಗ ಏನು ಮಾಡುವುದು? (2) ಫಲಿತಾಂಶ ಏನಾಗುವುದು? (3) ದಾನಿಯೇಲ 2:44ರಲ್ಲಿ ದೇವರ ರಾಜ್ಯವು ಯಾವೆಲ್ಲ ರಾಜ್ಯಗಳನ್ನು ನಾಶಮಾಡುತ್ತದೆಂದು ಹೇಳಲಾಗಿದೆ? (ಪುಟ 17ರ ಚೌಕ ನೋಡಿ.)
18 ಸುಳ್ಳು ಧರ್ಮ ನಾಶವಾದ ಮೇಲೆ ಕಾಡುಮೃಗ ಅಂದರೆ ಸೈತಾನನ ರಾಜಕೀಯ ವ್ಯವಸ್ಥೆ ದೇವರ ರಾಜ್ಯದ ಮೇಲೆ ಆಕ್ರಮಣ ಮಾಡುವಂತೆ ಪ್ರಚೋದಿಸಲ್ಪಡುವುದು. ಈ ಭೂರಾಜರು ಸ್ವರ್ಗದ ವರೆಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಸಾಧ್ಯವಾಗದೆ ಭೂಮಿಯ ಮೇಲೆ ದೇವರ ರಾಜ್ಯವನ್ನು ಬೆಂಬಲಿಸುತ್ತಿರುವ ಜನರ ವಿರುದ್ಧ ರೌದ್ರದಿಂದ ಮುನ್ನುಗ್ಗುವರು. ಫಲಿತಾಂಶ? ನಮಗೆ ಗೊತ್ತೇ ಇದೆ. ದೇವರೊಂದಿಗೆ ಮಹಾ ಯುದ್ಧ! (ಪ್ರಕ. 16:13-16; 17:12-14) ಈ ಅಂತಿಮ ಯುದ್ಧದ ಒಂದು ಫಲಿತಾಂಶವನ್ನು ದಾನಿಯೇಲನು ವಿವರಿಸಿದ್ದಾನೆ. (ದಾನಿಯೇಲ 2:44 ಓದಿ.) ಪ್ರಕಟನೆ 13:1ರಲ್ಲಿ ಹೇಳಲಾಗಿರುವ ಕಾಡುಮೃಗ, ಅದರ ವಿಗ್ರಹ, ಎರಡು ಕೊಂಬಿನ ಕಾಡುಮೃಗ ಹೇಳಹೆಸರಿಲ್ಲದಂತೆ ನಾಶವಾಗುವವು.
19. (1) ನಮಗೆ ಯಾವ ಖಾತ್ರಿಯಿದೆ? (2) ಈಗಲೇ ನಾವೇನು ಮಾಡಬೇಕು?
19 ಕಾಡುಮೃಗದ ಏಳನೇ ತಲೆ ಅಧಿಕಾರದಲ್ಲಿರುವ ಸಮಯದಲ್ಲಿ ನಾವೀಗ ಜೀವಿಸುತ್ತಿದ್ದೇವೆ. ಇದೇ ಕೊನೆಯ ತಲೆ. ಇದರ ನಂತರ ಯಾವ ಲೋಕಶಕ್ತಿಯೂ ಆಳ್ವಿಕೆಗೆ ಬರುವುದಿಲ್ಲ. ಏಳನೇ ತಲೆಯಾಗಿರುವ ಆಂಗ್ಲೋ-ಅಮೆರಿಕನ್ ಲೋಕ ಶಕ್ತಿ ಆಳ್ವಿಕೆ ನಡೆಸುತ್ತಿರುವಾಗಲೇ ಸುಳ್ಳು ಧರ್ಮ ಸಂಪೂರ್ಣವಾಗಿ ನಾಶವಾಗುವುದು. ದಾನಿಯೇಲ ಹಾಗೂ ಯೋಹಾನನ ಪ್ರವಾದನೆಗಳು ನಮ್ಮೀ ಸಮಯದ ವರೆಗೆ ಚಾಚೂತಪ್ಪದೆ ನೆರವೇರಿವೆ. ಇದು ಸುಳ್ಳು ಧರ್ಮದ ನಾಶನ ಹಾಗೂ ಅರ್ಮಗೆದೋನ್ ಯುದ್ಧ ಅತಿ ಬೇಗನೆ ಸಂಭವಿಸಲಿದೆ ಎಂಬ ಖಾತ್ರಿಯನ್ನು ನಮಗೆ ಕೊಡುತ್ತದೆ. ಮುಂದೆ ಸಂಭವಿಸಲಿರುವ ಸಂಗತಿಗಳನ್ನು ದೇವರು ನಮಗೆ ಮುಂಚಿತವಾಗಿಯೇ ಪ್ರಕಟಿಸಿದ್ದಾನೆ. ಆದರೆ ನಾವು ಈ ಪ್ರವಾದನೆಗಳು ಕೊಡುವ ಎಚ್ಚರಿಕೆಗೆ ಕಿವಿಗೊಡುತ್ತೇವಾ? (2 ಪೇತ್ರ 1:19) ಯೆಹೋವ ದೇವರ ಪಕ್ಷವಹಿಸಿ ಆತನ ರಾಜ್ಯವನ್ನು ಬೆಂಬಲಿಸುವ ಸಮಯ ಇದೇ ಆಗಿದೆ!—ಪ್ರಕ. 14:6, 7.
[ಪಾದಟಿಪ್ಪಣಿಗಳು]
a ಬೈಬಲ್ನಲ್ಲಿ ಸಂಖ್ಯೆ ಹತ್ತನ್ನು ಹೆಚ್ಚಾಗಿ ಸಂಪೂರ್ಣತೆಯನ್ನು ಸೂಚಿಸಲು ಬಳಸಲಾಗಿದೆ. ಹಾಗಾಗಿ ಹತ್ತು ಕೊಂಬುಗಳು ರೋಮ್ ಸಾಮ್ರಾಜ್ಯ ವಿಭಜನೆಗೊಂಡಾಗ ಅದರಿಂದಲೇ ಉದಯವಾದ ಎಲ್ಲ ರಾಜ್ಯಗಳನ್ನು ಸೂಚಿಸುತ್ತವೆ.
b 18ನೇ ಶತಮಾನದಿಂದಲೇ ಅಮೆರಿಕ ಹಾಗೂ ಬ್ರಿಟನ್ ಅಸ್ತಿತ್ವದಲ್ಲಿ ಇದ್ದವು. ಆ ಎರಡು ರಾಷ್ಟ್ರಗಳು ಒಂದು ಲೋಕಶಕ್ತಿಯಾಗಿ ಉದಯವಾಗುವುದು ಕರ್ತನ ದಿನದ ಆರಂಭದಲ್ಲಿ ಎಂದು ಯೋಹಾನನು ಕಂಡ ದರ್ಶನವು ತೋರಿಸುತ್ತದೆ. ಏಕೆಂದರೆ ಯೋಹಾನನು ಪಡೆದ ದರ್ಶನಗಳು “ಕರ್ತನ ದಿನದಲ್ಲಿ” ನಡೆಯಲಿದ್ದ ಘಟನೆಗಳ ಕುರಿತಾಗಿಯೇ ಆಗಿದ್ದವು. (ಪ್ರಕ. 1:10) ಒಂದನೇ ಮಹಾಯುದ್ಧದ ಸಮಯದಲ್ಲಿ ಈ ಎರಡು ರಾಷ್ಟ್ರಗಳು ಒಂದು ಲೋಕ ಶಕ್ತಿಯಾಗಿ ಕೆಲಸ ಮಾಡಲು ಆರಂಭಿಸಿದವು.
c ಎರಡನೇ ಮಹಾಯುದ್ಧದ ಸಮಯದಲ್ಲಿ ಆಂಗ್ಲೋ-ಅಮೆರಿಕನ್ ಲೋಕಶಕ್ತಿ ಭಾರಿ ನಾಶವನ್ನು ಮಾಡಲಿದೆ ಎಂದು ಪ್ರವಾದನೆ ಮೊದಲೇ ತಿಳಿಸಿತ್ತು. ‘ಅವನು ಅತ್ಯಧಿಕವಾಗಿ ಹಾಳುಮಾಡುವನು’ ಎಂದು ದಾನಿಯೇಲ ಬರೆದನು. (ದಾನಿ. 8:24) ಉದಾಹರಣೆಗೆ, ಅಮೆರಿಕವು ವೈರಿ ರಾಷ್ಟ್ರದ ಮೇಲೆ ಎರಡು ಪರಮಾಣು ಬಾಂಬ್ಗಳನ್ನು ಹಾಕಿ ಹೇಳಲಾಗದಷ್ಟು ನಾಶನವನ್ನು ಉಂಟುಮಾಡಿತು.
d ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ ಪುಟ 240, 241, 253 ನೋಡಿ.
[ಪುಟ 17ರಲ್ಲಿರುವ ಚೌಕ]
“ಆ ರಾಜ್ಯಗಳನ್ನೆಲ್ಲಾ” ಅಂದರೆ ಯಾವ ರಾಜ್ಯಗಳು?
ದೇವರ ರಾಜ್ಯ “ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮ” ಮಾಡುವುದೆಂದು ದಾನಿಯೇಲ 2:44ರಲ್ಲಿರುವ ಪ್ರವಾದನೆ ಹೇಳುತ್ತದೆ. ಈ ವಚನವು ಪ್ರತಿಮೆಯ ಭಾಗಗಳಿಂದ ಸೂಚಿತವಾದ ರಾಜ್ಯಗಳ ಕುರಿತು ಮಾತ್ರ ಹೇಳುತ್ತದೆ.
ಹಾಗಾದರೆ ಉಳಿದ ಮಾನವ ಸರಕಾರಗಳ ಕುರಿತೇನು? ದಾನಿಯೇಲನ ಪ್ರವಾದನೆಗೆ ಸರಿಹೋಲುವ ಇನ್ನೊಂದು ಪ್ರವಾದನೆಯು ಪ್ರಕಟನೆ ಪುಸ್ತಕದಲ್ಲಿದೆ. ಅದು ಈ ಕುರಿತು ಹೆಚ್ಚಿನ ವಿವರ ಕೊಡುತ್ತದೆ. ‘ಸರ್ವಶಕ್ತನಾದ ದೇವರ ಮಹಾ ದಿನದಲ್ಲಿ ಇಡೀ ನಿವಾಸಿತ ಭೂಮಿಯ ರಾಜರು’ ಯೆಹೋವನ ವಿರುದ್ಧ ಒಟ್ಟುಗೂಡಿಸಲ್ಪಡುವರು ಎಂದು ಆ ಪ್ರವಾದನೆ ತಿಳಿಸುತ್ತದೆ. (ಪ್ರಕ. 16:14; 19:19-21) ಆದುದರಿಂದ ಅರ್ಮಗೆದೋನ್ ಯುದ್ಧದಲ್ಲಿ ಪ್ರತಿಮೆಯ ಭಾಗಗಳಿಂದ ಸೂಚಿತವಾದ ರಾಜ್ಯಗಳು ಮಾತ್ರವಲ್ಲ ಎಲ್ಲ ಮಾನವ ಸರಕಾರಗಳು ನಾಶವಾಗುವವು.