ಯೆಹೋವನನ್ನು ‘ತಿಳಿದುಕೊಳ್ಳುವ ಹೃದಯ’ ನಿಮ್ಮಲ್ಲಿದೆಯೇ?
“ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನ್ನ ಜನರಾಗಿರುವರು.”—ಯೆರೆ. 24:7.
ನಿಮ್ಮ ಉತ್ತರವೇನು?
ಯೆರೆಮೀಯನ ಕಾಲದಲ್ಲಿದ್ದ ಅನೇಕ ಯೆಹೂದ್ಯರು ಹೇಗೆ ‘ಹೃದಯ ಸುನ್ನತಿಯಿಲ್ಲದವರಾಗಿದ್ದರು?’
ನಾವೆಲ್ಲರೂ ನಮ್ಮ ಸಾಂಕೇತಿಕ ಹೃದಯವನ್ನು ಯಾಕೆ ಪರೀಕ್ಷಿಸಿಕೊಳ್ಳಬೇಕು?
ಯೆಹೋವನನ್ನು ‘ತಿಳಿದುಕೊಳ್ಳುವ ಹೃದಯ’ ಪಡೆಯುವುದು ಹೇಗೆ?
1, 2. ಯಾವ ಯಾವ ಕಾರಣಗಳಿಗಾಗಿ ಕೆಲವರು ಅಂಜೂರ ಹಣ್ಣಿನ ಬಗ್ಗೆ ಆಸಕ್ತಿ ತೋರುತ್ತಾರೆ?
ಅಂಜೂರ ಹಣ್ಣೆಂದರೆ ಅನೇಕರಿಗೆ ಬಲು ಇಷ್ಟ. ಪ್ರಾಚೀನಕಾಲದ ಯೆಹೂದ್ಯರು ಸಹ ಅಂಜೂರದ ಮರಗಳನ್ನು ಬೆಳೆಸುತ್ತಿದ್ದರು. (ನಹೂ. 3:12; ಲೂಕ 13:6-9) ಅಂಜೂರ ಹಣ್ಣಿನಲ್ಲಿ ನಾರಿನಂಶ, ಆಮ್ಲನಿರೋಧಕ ಶಕ್ತಿ ಮತ್ತು ಅನೇಕ ಖನಿಜಾಂಶಗಳಿವೆ. ಆದ್ದರಿಂದ ಈ ಹಣ್ಣು ಹೃದಯಕ್ಕೆ ಒಳ್ಳೇದೆಂದು ಅನೇಕರು ಹೇಳುತ್ತಾರೆ.
2 ಯೆಹೋವನು ಒಮ್ಮೆ ಅಂಜೂರ ಹಣ್ಣನ್ನು ಬಳಸುತ್ತಾ ಹೃದಯದ ಬಗ್ಗೆ ಮಾತಾಡಿದನು. ಆತನು ಅಂಜೂರದಿಂದ ಆರೋಗ್ಯಕ್ಕಾಗುವ ಹಿತದ ಬಗ್ಗೆ ಮಾತಾಡಲಿಲ್ಲ. ಬದಲಿಗೆ ಜನರ ಹೃದಯದಲ್ಲಿ ಏನಿತ್ತೋ ಅದರ ಬಗ್ಗೆ ಮಾತಾಡುತ್ತಿದ್ದನು. ಯೆರೆಮೀಯನ ಮೂಲಕ ಆತನು ಹೇಳಿದ ಆ ಮಾತುಗಳು ನಮ್ಮ ಹಾಗೂ ನಮ್ಮ ಪ್ರಿಯ ಜನರ ಹೃದಯಕ್ಕೆ ಅನ್ವಯಿಸುತ್ತವೆ. ಆ ಮಾತುಗಳನ್ನು ನಾವೀಗ ಪರಿಗಣಿಸುವಾಗ ಅವು ನಮಗೆ ಹೇಗೆ ಅನ್ವಯಿಸುತ್ತವೆಂದು ಯೋಚಿಸಿ.
3. ಯೆರೆಮೀಯ 24ನೇ ಅಧ್ಯಾಯದಲ್ಲಿ ಹೇಳಲಾದ ಅಂಜೂರದ ಹಣ್ಣುಗಳು ಯಾರನ್ನು ಸೂಚಿಸುತ್ತವೆ?
3 ಯೆರೆಮೀಯನ ದಿನಗಳಲ್ಲಿ ಯೆಹೋವನು ಅಂಜೂರದ ಹಣ್ಣುಗಳನ್ನು ಬಳಸಿ ಹೇಳಿದ ಮಾತುಗಳನ್ನು ನೋಡೋಣ. ಕ್ರಿ.ಪೂ. 617ರಷ್ಟಕ್ಕೆ ಯೆಹೂದಿ ಜನಾಂಗವು ಯೆಹೋವನು ದ್ವೇಷಿಸುವ ವಿಷಯಗಳಲ್ಲೇ ಮುಳುಗಿಹೋಗಿತ್ತು. ಅವರಿಗೆ ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂದು ಯೆರೆಮೀಯನಿಗೆ ದರ್ಶನದ ಮೂಲಕ ಯೆಹೋವನು ತೋರಿಸಿಕೊಟ್ಟನು. ಆ ದರ್ಶನದಲ್ಲಿ ಅವರನ್ನು ಎರಡು ರೀತಿಯ ಅಂಜೂರದ ಹಣ್ಣುಗಳಿಗೆ ಹೋಲಿಸಿದನು. ಒಂದು “ಅತ್ಯುತ್ತಮ” ಫಲ ಇನ್ನೊಂದು ‘ಬಹಳ ಕೆಟ್ಟ’ ಫಲ. (ಯೆರೆಮೀಯ 24:1-3 ಓದಿ.) ಕೆಟ್ಟ ಫಲವು ಅರಸ ನೆಬೂಕದ್ನೆಚ್ಚರನು ಮತ್ತು ಅವನ ಸೈನಿಕರಿಂದ ಕ್ರೂರ ಹಿಂಸೆ ಅನುಭವಿಸಲಿದ್ದ ರಾಜ ಚಿದ್ಕೀಯ ಮತ್ತು ಅವನಂಥ ಜನರನ್ನು ಸೂಚಿಸುತ್ತದೆ. ಒಳ್ಳೆ ಫಲ ಯಾರನ್ನು ಸೂಚಿಸುತ್ತದೆ? ಈಗಾಗಲೇ ಬಾಬೆಲಿಗೆ ಬಂದಿವಾಸಿಗಳಾಗಿ ಹೋಗಿದ್ದ ಯೆಹೆಜ್ಕೇಲ, ದಾನಿಯೇಲ, ಮೂವರು ಇಬ್ರಿಯ ಯುವಕರು ಮತ್ತು ಇನ್ನೇನು ಬಂದಿವಾಸಿಗಳಾಗಿ ಹೋಗಲಿದ್ದ ಕೆಲವು ಯೆಹೂದ್ಯರನ್ನು ಸೂಚಿಸುತ್ತದೆ. ಅವರಲ್ಲಿ ಕೆಲವರು ಯೆರೂಸಲೇಮ್ಗೆ ಹಿಂದಿರುಗಿ ಆ ಪಟ್ಟಣವನ್ನು ಮತ್ತು ದೇವಾಲಯವನ್ನು ಪುನಃ ಕಟ್ಟಲಿದ್ದರು.—ಯೆರೆ. 24:8-10; 25:11, 12; 29:10.
4. ಉತ್ತಮ ಅಂಜೂರದ ಹಣ್ಣುಗಳನ್ನು ಪ್ರತಿನಿಧಿಸಿದ ಜನರ ಬಗ್ಗೆ ದೇವರು ಹೇಳಿದ ಮಾತುಗಳು ನಮಗೆ ಹೇಗೆ ಪ್ರೋತ್ಸಾಹದಾಯಕ?
4 ಉತ್ತಮ ಫಲಗಳನ್ನು ಪ್ರತಿನಿಧಿಸಿದ ಜನರ ಕುರಿತು ಯೆಹೋವನು ಹೇಳಿದ್ದು: “ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ [ತಿಳಿದುಕೊಳ್ಳುವುದಕ್ಕೆ, ಪವಿತ್ರ ಗ್ರಂಥ] ಹೃದಯವನ್ನು ಅವರಿಗೆ ಅನುಗ್ರಹಿಸುವೆನು; ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು.” (ಯೆರೆ. 24:7) ಈ ಮಾತುಗಳು ಎಷ್ಟು ಪ್ರೋತ್ಸಾಹದಾಯಕವಾಗಿವೆ! ತನ್ನನ್ನು ‘ತಿಳಿದುಕೊಳ್ಳುವ ಹೃದಯವನ್ನು’ ಜನರಿಗೆ ಕೊಡಲು ದೇವರು ಸಿದ್ಧನಿದ್ದಾನೆ. ಇಲ್ಲಿ “ಹೃದಯ” ಎಂದಿರುವುದು ಒಬ್ಬನ ಪ್ರವೃತ್ತಿಯನ್ನು ಸೂಚಿಸುತ್ತದೆ. ಯೆಹೋವನನ್ನು ತಿಳಿದುಕೊಳ್ಳುವ ಹೃದಯ ನಿಮ್ಮಲ್ಲಿರಬೇಕೆಂದು ಮತ್ತು ಆತನ ಜನರಲ್ಲಿ ಒಬ್ಬರಾಗಬೇಕೆಂದು ನೀವೂ ಬಯಸಬಹುದು. ಆ ಬಯಕೆ ಈಡೇರಬೇಕಾದರೆ ಏನು ಮಾಡಬೇಕು? ದೇವರ ವಾಕ್ಯದ ಸಮಗ್ರ ಅಧ್ಯಯನ ಮಾಡಬೇಕು. ಕಲಿತದ್ದನ್ನು ಅನ್ವಯಿಸಬೇಕು. ಪಾಪಗಳಿಗೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಬೇಕು. ನಿಮ್ಮ ಜೀವನವನ್ನು ದೇವರಿಗೆ ಸಮರ್ಪಿಸಿಕೊಳ್ಳಬೇಕು. ತಂದೆಯ, ಮಗನ ಹಾಗೂ ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯಬೇಕು. (ಮತ್ತಾ. 28:19, 20; ಅ. ಕಾ. 3:19) ಈ ಹೆಜ್ಜೆಗಳನ್ನು ನೀವು ಈಗಾಗಲೇ ತೆಗೆದುಕೊಂಡಿರಬಹುದು ಅಥವಾ ಯೆಹೋವನ ಸಾಕ್ಷಿಗಳ ಕೂಟಗಳಿಗೆ ತಪ್ಪದೇ ಹಾಜರಾಗುತ್ತಾ ಈ ಹೆಜ್ಜೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿರಬಹುದು.
5. ಯೆರೆಮೀಯನು ಮುಖ್ಯವಾಗಿ ಯಾರನ್ನು ಉದ್ದೇಶಿಸಿ ಬರೆದನು?
5 ಈ ಹೆಜ್ಜೆಗಳನ್ನು ನಾವು ತೆಗೆದುಕೊಂಡಿದ್ದರೂ ನಮ್ಮ ಮನೋಭಾವ ಮತ್ತು ನಡತೆಯನ್ನು ಪರೀಕ್ಷಿಸಿಕೊಳ್ಳುವುದು ತುಂಬ ಅಗತ್ಯ. ಏಕೆ? ಉತ್ತರವು ಯೆರೆಮೀಯನು ಹೃದಯದ ಕುರಿತು ಏನನ್ನು ಬರೆದನೋ ಅದರಲ್ಲಿದೆ. ಯೆರೆಮೀಯ ಪುಸ್ತಕದ ಕೆಲವು ಅಧ್ಯಾಯಗಳು ಯೆಹೂದದ ಸುತ್ತಮುತ್ತಲಿದ್ದ ಜನಾಂಗಗಳ ಕುರಿತಾಗಿ ಇವೆಯಾದರೂ ಹೆಚ್ಚಿನವು ಯೆಹೂದದ ಕೊನೆಯ ಐದು ಅರಸರ ಆಳ್ವಿಕೆಯ ಸಮಯದ ಯೆಹೂದದ ಜನರ ಕುರಿತಾಗಿವೆ. (ಯೆರೆ. 1:15, 16) ಹೌದು ಯೆಹೋವನಿಗೆ ಸಮರ್ಪಿತರಾಗಿದ್ದ ಜನರ ಬಗ್ಗೆ ಯೆರೆಮೀಯ ಬರೆದನು. ಅವರ ಪೂರ್ವಜರು ಅಂಥ ಸಂಬಂಧದಲ್ಲಿರಲು ಅವರಾಗಿಯೇ ಮುಂದೆಬಂದು ಮಾತುಕೊಟ್ಟಿದ್ದರು. (ವಿಮೋ. 19:3-8) ಯೆರೆಮೀಯನ ಸಮಯದಲ್ಲಿ ಕೂಡ ತಾವು ದೇವರಿಗೆ ಸಮರ್ಪಿತರು ಎಂದು ಜನರೇ ಒಪ್ಪಿಕೊಂಡು ಹೇಳಿದ್ದು: “ಇಗೋ, ನಿನ್ನ ಬಳಿಗೆ ಬಂದೆವು, ನೀನು ಯೆಹೋವನು, ನಮ್ಮ ದೇವರು.” (ಯೆರೆ. 3:22) ಆದರೆ ಅವರ ಹೃದಯ ಸ್ಥಿತಿ ನಿಜಕ್ಕೂ ಹೇಗಿತ್ತು?
ಅವರ ಹೃದಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿತ್ತು
6. ಯೆಹೋವನು ಹೃದಯದ ಬಗ್ಗೆ ಹೇಳಿರುವ ಮಾತುಗಳಿಗೆ ನಾವೇಕೆ ಲಕ್ಷ್ಯಕೊಡಬೇಕು?
6 ಹೃದಯ ಸರಿಯಾಗಿ ಕೆಲಸ ಮಾಡುತ್ತಿದೆಯಾ ಎಂದು ನೋಡಲು ವೈದ್ಯರು ನವೀನ ತಂತ್ರಜ್ಞಾನ ಬಳಸುತ್ತಾರೆ. ಆದರೆ ಯೆಹೋವನು ಅವರೆಲ್ಲರಿಗಿಂತ ಹೆಚ್ಚನ್ನು ನೋಡಬಲ್ಲನು. ಆತನು ಹೇಳಿದ್ದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು? ಯೆಹೋವನಾದ ನಾನು ಪ್ರತಿಯೊಬ್ಬನಿಗೂ ಕರ್ಮಫಲವನ್ನು ಅವನವನ ನಡತೆಗೆ ತಕ್ಕ ಹಾಗೆ ಕೊಡಬೇಕೆಂದು ಹೃದಯವನ್ನು ಪರೀಕ್ಷಿಸುವವ”ನಾಗಿದ್ದೇನೆ. (ಯೆರೆ. 17:9, 10) ‘ಹೃದಯವನ್ನು ಪರೀಕ್ಷಿಸುವವನಾಗಿದ್ದೇನೆ’ ಎಂದು ಹೇಳಿದಾಗ ಯೆಹೋವನು ಅಕ್ಷರಾರ್ಥಕ ಹೃದಯದ ಬಗ್ಗೆ ಮಾತಾಡುತ್ತಿಲ್ಲ. ಬದಲಾಗಿ ಸಾಂಕೇತಿಕ ಹೃದಯದ ಬಗ್ಗೆ ಅಂದರೆ ಆಂತರಿಕ ವ್ಯಕ್ತಿತ್ವದ ಕುರಿತು ಮಾತಾಡುತ್ತಿದ್ದನು. ಹಾಗಾದರೆ ಒಬ್ಬನ ಅಪೇಕ್ಷೆ, ಯೋಚನೆ, ಪ್ರವೃತ್ತಿ, ಮನೋಭಾವ, ಗುರಿಗಳನ್ನು ಆತನು ತಿಳಿಯಶಕ್ತನು. ನಿಮ್ಮ ಹೃದಯವನ್ನೂ ಯೆಹೋವನು ಪರೀಕ್ಷಿಸುತ್ತಾನೆ. ಸ್ವಲ್ಪಮಟ್ಟಿಗೆ ನೀವು ಸಹ ನಿಮ್ಮನಿಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಬಹುದು.
7. ಯೆರೆಮೀಯನು ತನ್ನ ಕಾಲದ ಅನೇಕ ಯೆಹೂದ್ಯರ ಹೃದಯದ ಬಗ್ಗೆ ಏನೆಂದು ವಿವರಿಸಿದನು?
7 ಯೆಹೋವನು ಯೆರೆಮೀಯನ ಕಾಲದ ಯೆಹೂದ್ಯರ ಹೃದಯ ಸ್ಥಿತಿಯ ಕುರಿತು ಹೇಳಿದ ಮಾತುಗಳು ನಾವು ನಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಲು ಸಹಾಯಮಾಡುತ್ತವೆ. ಆ ಯೆಹೂದ್ಯರ ಹೃದಯ ಸ್ಥಿತಿ ಹೇಗಿತ್ತು? ಯೆರೆಮೀಯನು ಅಸಾಮಾನ್ಯ ಮಾತುಗಳಲ್ಲಿ ತಿಳಿಸುತ್ತಾ, ‘ಎಲ್ಲಾ ಇಸ್ರಾಯೇಲ್ ವಂಶದವರು ಹೃದಯ ಸುನ್ನತಿಯಿಲ್ಲದವರಾಗಿದ್ದಾರೆ’ ಎಂದನು. ಇಲ್ಲಿ ಅವನು ಯೆಹೂದಿ ಪುರುಷರು ಸಾಮಾನ್ಯವಾಗಿ ಮಾಡಿಸಿಕೊಳ್ಳುತ್ತಿದ್ದ ಸುನ್ನತಿ ಬಗ್ಗೆ ಮಾತಾಡಲಿಲ್ಲ. ಇದು ಹೇಗೆ ಗೊತ್ತಾಗುತ್ತದೆ? ಅವನು ಮುಂದುವರಿಸಿ ಹೇಳಿದ್ದು: “ಸುನ್ನತಿಯುಳ್ಳವರಾದರೂ ಸುನ್ನತಿಯಿಲ್ಲದ ಇವರೆಲ್ಲರನ್ನೂ ನಾನು ದಂಡಿಸುವ ದಿನಗಳು ಬರುತ್ತವೆ.” ಅಂದರೆ ಸುನ್ನತಿಯಾದ ಯೆಹೂದ್ಯರು ಸಹ ‘ಹೃದಯ ಸುನ್ನತಿಯಿಲ್ಲದವರಾಗಿದ್ದರು.’ (ಯೆರೆ. 9:25, 26) ಇದರರ್ಥ ಏನು?
8, 9. ಹೆಚ್ಚಿನ ಯೆಹೂದ್ಯರು ತಮ್ಮ ಹೃದಯಗಳಿಗೆ ಏನು ಮಾಡಬೇಕಿತ್ತು?
8 ‘ಹೃದಯ ಸುನ್ನತಿಯಿಲ್ಲದವರು’ ಅಂದರೆ ಏನು? ಇದು ಯೆಹೋವನು ಯೆಹೂದ್ಯರಿಗೆ ಏನು ಮಾಡಲು ಹೇಳಿದನೋ ಅದರಿಂದ ತಿಳಿಯುತ್ತದೆ. “ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿ ಯೆಹೋವನಿಗಾಗಿ ಸುನ್ನತಿಯಾಗಿರಿ; ಇಲ್ಲವಾದರೆ ನಿಮ್ಮ ದುಷ್ಕೃತ್ಯಗಳ ನಿಮಿತ್ತ ನನ್ನ ರೋಷವು . . . ರಭಸವಾಗಿ ಧಗಧಗಿಸುವದು” ಎಂದನು. ದುಷ್ಕೃತ್ಯಗಳನ್ನು ಮಾಡುವ ಯೋಚನೆ ಎಲ್ಲಿ ಹುಟ್ಟುತ್ತದೆ? ಹೃದಯದಲ್ಲೇ. (ಮಾರ್ಕ 7:20-23 ಓದಿ.) ಹೌದು ಯೆಹೋವನು ಯೆಹೂದ್ಯರ ಹೃದಯಗಳನ್ನು ಪರೀಕ್ಷಿಸಿ ಅವರ ಕೆಟ್ಟ ಕಾರ್ಯಗಳ ಮೂಲವನ್ನು ಪತ್ತೆ ಹಚ್ಚಿದ್ದನು. ಅವರು ಹಠಮಾರಿತನದಿಂದ ಯೆಹೋವನ ವಿರುದ್ಧ ತಿರುಗಿ ಬಿದ್ದಿದ್ದರು. ಅವರ ಇರಾದೆಗಳು, ಆಲೋಚನೆಗಳು ಆತನಿಗೆ ವಿರುದ್ಧವಾಗಿದ್ದವು. (ಯೆರೆಮೀಯ 5:23, 24; 7:24-26 ಓದಿ.) ಹಾಗಾಗಿ ಆತನು ಹೇಳಿದ್ದು: “ನಿಮ್ಮ ಹೃದಯದ ಮುಂದೊಗಲನ್ನು ತೆಗೆದುಹಾಕಿ ಯೆಹೋವನಿಗಾಗಿ ಸುನ್ನತಿಯಾಗಿರಿ.”—ಯೆರೆ. 4:4; 18:11, 12.
9 ಆದ್ದರಿಂದ ಯೆರೆಮೀಯನ ಕಾಲದ ಯೆಹೂದ್ಯರು ಒಂದರ್ಥದಲ್ಲಿ ಹೃದಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು. ಮೋಶೆಯ ಕಾಲದ ಜನರು ‘ಹೃದಯದ ಸುನ್ನತಿ’ ಮಾಡಿಕೊಂಡಂತೆ ಇವರೂ ಮಾಡಿಕೊಳ್ಳಬೇಕಿತ್ತು. (ಧರ್ಮೋ. 10:16; 30:6) ಹಾಗಾದರೆ ಅವರು ಹೇಗೆ ‘ಹೃದಯದ ಮುಂದೊಗಲನ್ನು ತೆಗೆದುಹಾಕಲು’ ಸಾಧ್ಯವಿತ್ತು? ದೇವರ ಮಾತಿಗೆ ತಮ್ಮ ಹೃದಯಗಳು ಸ್ಪಂದಿಸದಂತೆ ಮಾಡಿದ ವಿಷಯಗಳನ್ನು ತೆಗೆದುಹಾಕುವ ಮೂಲಕವೇ. ಅಂದರೆ ದೇವರ ಚಿತ್ತಕ್ಕೆ ವಿರುದ್ಧವಾಗಿರುವ ಯೋಚನೆಗಳನ್ನು, ಇಚ್ಛೆಗಳನ್ನು, ಇರಾದೆಗಳನ್ನು ಕಿತ್ತೆಸೆಯಬೇಕಿತ್ತು.—ಅ. ಕಾ. 7:51.
ಯೆಹೋವನನ್ನು ‘ತಿಳಿದುಕೊಳ್ಳುವ ಹೃದಯ’ ನಮ್ಮಲ್ಲೂ ಇರಬೇಕು
10. ದಾವೀದನಂತೆ ನಾವೂ ಏನು ಮಾಡಬೇಕು?
10 ಯೆಹೋವನು ನಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಲು ಸಹಾಯಮಾಡುತ್ತಾನೆ ಎನ್ನುವುದು ಆತನ ಕಡೆಗಿನ ನಮ್ಮ ಕೃತಜ್ಞತೆಯನ್ನು ಹೆಚ್ಚಿಸುತ್ತದೆ. ‘ನಾವು ಯೆಹೋವನ ಸಾಕ್ಷಿಗಳಲ್ಲವೇ, ನಾವೂ ಹೃದಯವನ್ನು ಪರೀಕ್ಷಿಸಿಕೊಳ್ಳಬೇಕಾ?’ ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಬರಬಹುದು. ಹೌದು ಅದೂ ನಿಜ. ‘ಕೆಟ್ಟ’ ಅಂಜೂರ ಹಣ್ಣುಗಳಂತಿದ್ದ ಯೆಹೂದ್ಯರಂತೆ ನಾವೇನು ದುಷ್ಕೃತ್ಯಗಳಲ್ಲಿ ಒಳಗೂಡಿಲ್ಲ. ದೇವಸೇವಕರಾಗಿರುವ ನಾವು ಸಮರ್ಪಿತರೂ ಶುದ್ಧ ಜನರೂ ಆಗಿದ್ದೇವೆ. ದಾವೀದನು ಯೆಹೋವನಿಗೆ ನಂಬಿಗಸ್ತನಾಗಿದ್ದರೂ ಏನೆಂದು ಬಿನ್ನಹಿಸಿದನು ಗಮನಿಸಿ: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.” ನಾವೂ ಇದನ್ನೇ ಮಾಡಬೇಕಲ್ಲವೇ?—ಕೀರ್ತ. 17:3; 139:23, 24.
11, 12. (1) ನಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳುವುದು ಪ್ರಾಮುಖ್ಯವೇಕೆ? (2) ಹಾಗಂತ ದೇವರು ಏನು ಮಾಡಬೇಕೆಂದು ನಾವು ನಿರೀಕ್ಷಿಸಬಾರದು?
11 ಯೆಹೋವನ ಬಯಕೆ ಏನೆಂದರೆ ಎಲ್ಲರೂ ತನ್ನನ್ನು ತಿಳಿದುಕೊಂಡು, ತನ್ನ ಮೆಚ್ಚಿಗೆಗೆ ಪಾತ್ರರಾಗುವ ರೀತಿಯಲ್ಲಿ ಜೀವಿಸಬೇಕೆಂಬುದೇ. “ಹೃದಯವನ್ನೂ ಅಂತರಿಂದ್ರಿಯವನ್ನೂ ಪರೀಕ್ಷಿಸಿ ಶಿಷ್ಟರನ್ನು ಶೋಧಿಸುವ ಸೇನಾಧೀಶ್ವರನಾದ ಯೆಹೋವನೇ” ಎಂದು ಯೆರೆಮೀಯನು ಬರೆದನು. (ಯೆರೆ. 20:12) ಯೆಹೋವನು ಶಿಷ್ಟರ ಹೃದಯಗಳನ್ನೇ ಪರೀಕ್ಷಿಸುವಾಗ, ನಾವು ನಮ್ಮ ಹೃದಯಗಳನ್ನು ಪ್ರಾಮಾಣಿಕವಾಗಿ ಸ್ವಪರೀಕ್ಷೆ ಮಾಡಿಕೊಳ್ಳುವುದು ಎಷ್ಟು ಪ್ರಾಮುಖ್ಯವಲ್ಲವೇ? (ಕೀರ್ತನೆ 11:5 ಓದಿ.) ಹಾಗೆ ಮಾಡುವಾಗ ನಮ್ಮ ಹೃದಯದಲ್ಲಿರುವ ಯಾವುದಾದರೊಂದು ಇರಾದೆ, ಯೋಚನೆ, ಗುರಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎನ್ನುವುದು ನಮ್ಮ ಗಮನಕ್ಕೆ ಬರಬಹುದು. ಏಕೆಂದರೆ ಯೆಹೋವನ ಮಾತುಗಳಿಗೆ ನಮ್ಮ ಹೃದಯ ಸ್ಪಂದಿಸದಂತೆ ಅವು ಮಾಡಿರಬಹುದು. ಇಂಥ ಸಮಯದಲ್ಲಿ ನಾವೂ ಸಹ ನಮ್ಮ ‘ಹೃದಯದ ಮುಂದೊಗಲನ್ನು’ ತೆಗೆದುಹಾಕಬೇಕು. ಅದೇ ನಮ್ಮ ಸಾಂಕೇತಿಕ ಹೃದಯದ ಶಸ್ತ್ರಚಿಕಿತ್ಸೆ! ಹಾಗಾದರೆ ನಮ್ಮ ಹೃದಯದಲ್ಲಿ ಇರಬಹುದಾದ ಕೆಲವು ಕೆಟ್ಟ ಪ್ರವೃತ್ತಿ ಅಥವಾ ಭಾವನೆಗಳು ಯಾವುವು? ಇದ್ದಲ್ಲಿ, ಬದಲಾವಣೆ ಮಾಡಿಕೊಳ್ಳುವುದು ಹೇಗೆ?—ಯೆರೆ. 4:4.
12 ಒಂದು ವಿಷಯ ನೆನಪಿಡಿ. ನಾವು ಬದಲಾವಣೆ ಮಾಡಿಕೊಳ್ಳಬೇಕೆಂದು ಯೆಹೋವನು ಒತ್ತಾಯಿಸುವುದಿಲ್ಲ. ಆತನು “ಉತ್ತಮ” ಅಂಜೂರದ ಹಣ್ಣನ್ನು ಪ್ರತಿನಿಧಿಸುತ್ತಿದ್ದ ಸಜ್ಜನರಿಗೆ ತನ್ನನ್ನು ‘ತಿಳಿದುಕೊಳ್ಳುವ ಹೃದಯ ಅನುಗ್ರಹಿಸುವೆನು’ ಎಂದನೇ ಹೊರತು ಹೃದಯವನ್ನು ಬದಲಾಯಿಸಿಕೊಳ್ಳುವಂತೆ ಒತ್ತಾಯಿಸುವೆನು ಎಂದು ಹೇಳಲಿಲ್ಲ. ದೇವರನ್ನು ತಿಳಿದುಕೊಳ್ಳುವ ಹೃದಯ ತಮ್ಮಲ್ಲಿರಬೇಕೆಂದು ಅವರು ಅಪೇಕ್ಷಿಸಬೇಕಿತ್ತು. ಅಂಥ ಹೃದಯ ನಮಗೂ ಬೇಕಲ್ಲವೆ?
13, 14. ಹೃದಯದಲ್ಲಿರುವ ಭಾವನೆ ಒಬ್ಬನಿಗೆ ಹೇಗೆ ಅಪಾಯವನ್ನು ತರಬಹುದು?
13 “ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೇವದೂಷಣೆಗಳು ಹೊರಬರುತ್ತವೆ” ಎಂದನು ಯೇಸು. (ಮತ್ತಾ. 15:19) ಒಬ್ಬ ಸಹೋದರನು ಹೃದಯದಲ್ಲಿ ಕೆಟ್ಟ ಅಪೇಕ್ಷೆಯನ್ನು ಬೆಳೆಸಿಕೊಂಡು ಹಾದರ ಅಥವಾ ವ್ಯಭಿಚಾರ ಮಾಡಿರುವಲ್ಲಿ ಮತ್ತು ಪಶ್ಚಾತ್ತಾಪಪಡದೆ ಇದ್ದಲ್ಲಿ ಅವನು ಯೆಹೋವನ ಮೆಚ್ಚುಗೆಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ. ಆದರೆ ಒಬ್ಬ ವ್ಯಕ್ತಿ ಗಂಭೀರ ಪಾಪವನ್ನು ಮಾಡಿರದಿದ್ದರೂ, ಹೃದಯದಲ್ಲಿ ಒಳಗೊಳಗೆ ಅಂಥ ತಪ್ಪಾದ ಅಪೇಕ್ಷೆಯನ್ನು ಬೆಳೆಸಿಕೊಂಡಿರುವಲ್ಲಿ ಆಗೇನು? (ಮತ್ತಾಯ 5:27, 28 ಓದಿ.) ಇಂಥ ಸಂದರ್ಭದಲ್ಲಿ ಹೃದಯದ ಸ್ವಪರೀಕ್ಷೆ ಸಹಾಯ ಮಾಡುತ್ತದೆ. ನಿಮ್ಮ ಹೃದಯವನ್ನು ಸೂಕ್ಷ್ಮವಾಗಿ ಪರಿಶೋಧಿಸಿ. ಪರಿಶೋಧಿಸುವಾಗ ನಿಮಗೇನಾದರೂ ವಿರುದ್ಧಲಿಂಗದವರೊಬ್ಬರ ಕಡೆಗೆ ತಪ್ಪಾದ ಭಾವನೆ ಇರುವುದು ಕಂಡುಬರುತ್ತದಾ? ದೇವರು ಮೆಚ್ಚದ ಅಂಥ ಅಪೇಕ್ಷೆಯನ್ನು ಕಿತ್ತೆಸೆಯಬೇಕಿದೆಯಾ?
14 ಒಬ್ಬ ಸಹೋದರನು ಇನ್ನೊಬ್ಬರ “ಕೊಲೆ” ಮಾಡದೆ ಇರಬಹುದು. ಆದರೆ ಒಬ್ಬ ಜೊತೆವಿಶ್ವಾಸಿ ಮೇಲೆ ಎಷ್ಟರಮಟ್ಟಿಗೆ ಕೋಪ ಬೆಳೆಸಿಕೊಳ್ಳಬಹುದೆಂದರೆ ಅವನನ್ನು ಹೃದಯದಲ್ಲೇ ದ್ವೇಷಿಸಲು ಆರಂಭಿಸಬಹುದು. (ಯಾಜ. 19:17) ಹಾಗಿರುವಲ್ಲಿ ಆ ಸಹೋದರನು ಅಂಥ ದ್ವೇಷಭರಿತ ಭಾವನೆಗಳನ್ನು ಹೃದಯದಿಂದ ತೆಗೆದುಹಾಕಲು ಶ್ರಮಿಸಿಬೇಕಲ್ಲವೇ?—ಮತ್ತಾ. 5:21, 22.
15, 16. (1) ಕ್ರೈಸ್ತನೊಬ್ಬನ ಹೃದಯ ಹೇಗೆ ಸುನ್ನತಿಯಿಲ್ಲದಂತೆ ಆಗಬಹುದು ಎನ್ನುವುದಕ್ಕೆ ಒಂದು ಉದಾಹರಣೆ ಕೊಡಿ. (2) ‘ಹೃದಯ ಸುನ್ನತಿಯಿಲ್ಲದವರನ್ನು’ ಯೆಹೋವನು ಮೆಚ್ಚುವುದಿಲ್ಲವೆಂದು ನೀವು ಹೇಗೆ ಹೇಳುತ್ತೀರಿ?
15 ಅನೇಕ ಕ್ರೈಸ್ತರಿಗೆ ಇಂಥ ‘ಹೃದಯದ ಸಮಸ್ಯೆ’ ಇಲ್ಲದಿರುವುದು ಸಂತೋಷದ ವಿಷಯ. ಆದರೂ “ಕೆಟ್ಟ ಆಲೋಚನೆಗಳು” ನಮ್ಮಲ್ಲಿ ಬರಬಹುದೆಂದು ಯೇಸು ಹೇಳಿದನು. ಈ ಕೆಟ್ಟ ಆಲೋಚನೆಗಳು ಅಂದರೆ ತಪ್ಪಾದ ದೃಷ್ಟಿಕೋನಗಳು, ಮನೋಭಾವಗಳಾಗಿದ್ದು ಅವು ಕ್ರೈಸ್ತನೊಬ್ಬನ ಜೀವನದ ಅನೇಕ ಕ್ಷೇತ್ರಗಳನ್ನು ಪ್ರಭಾವಿಸಬಲ್ಲವು. ಉದಾಹರಣೆಗೆ, ಒಂದು ಕ್ಷೇತ್ರ ಸಂಬಂಧಿಕರ ಕಡೆಗಿನ ನಿಷ್ಠೆ. ಕ್ರೈಸ್ತರಿಗೆ ಸಂಬಂಧಿಕರ ಕಡೆಗೆ “ಸ್ವಾಭಾವಿಕ ಮಮತೆ” ಇರಬೇಕು. ಕಡೇದಿವಸಗಳಲ್ಲಿ ಅಂಥ ಮಮತೆ ಅನೇಕರಲ್ಲಿಲ್ಲ. (2 ತಿಮೊ. 3:1, 3) ಆದರೂ ಆ ಮಮತೆ ಅಥವಾ ನಿಷ್ಠೆ ಅತಿರೇಕಕ್ಕೆ ಹೋಗದಂತೆ ಜಾಗ್ರತೆ ವಹಿಸಬೇಕು. “ರಕ್ತಸಂಬಂಧವು ಉಳಿದೆಲ್ಲ ಸಂಬಂಧಕ್ಕಿಂತ ಬಲ” ಎನ್ನುತ್ತಾರೆ ಅನೇಕರು. ಸಂಬಂಧಿಕರಿಗೆ ಯಾರಾದರೂ ನೋವು ಮಾಡಿದರೆ ಅದು ತಮಗೇ ಆದಂತೆ ಭಾವಿಸುತ್ತಾರೆ. ಏನೇ ಆದರೂ ಅವರ ಪಕ್ಷ ವಹಿಸುತ್ತಾರೆ. ಇಂಥ ಅತಿಯಾದ ಮಮತೆಯಿಂದಾಗಿ ದೀನಳ ಅಣ್ಣಂದಿರು ಏನು ಮಾಡಿದರು ಯೋಚಿಸಿ. (ಆದಿ. 34:13, 25-30) ಅಬ್ಷಾಲೋಮನು ತನ್ನ ಮಲಅಣ್ಣನಾದ ಅಮ್ನೋನನನ್ನು ಕೊಲ್ಲುವಂತೆ ನಡೆಸಿದ್ದು ಯಾವುದೆಂದು ಯೋಚಿಸಿ. (2 ಸಮು. 13:1-30) ಇದೆಲ್ಲದರ ಹಿಂದೆ ಇದ್ದದ್ದು “ಕೆಟ್ಟ ಆಲೋಚನೆ”ಗಳಲ್ಲವೇ?
16 ಸತ್ಯ ಕ್ರೈಸ್ತರು ಕೊಲೆಮಾಡಲ್ಲ. ಆದರೂ ಒಬ್ಬ ಕ್ರೈಸ್ತನು ತನ್ನ ಸಂಬಂಧಿಕನಿಗೆ ಯಾರು ನೋವನ್ನು ಉಂಟುಮಾಡಿದ್ದಾರೊ ಅಥವಾ ನೋವನ್ನು ಉಂಟುಮಾಡಿದ್ದಾರೆಂದು ಭಾವಿಸುತ್ತಾನೋ ಅವರ ಮೇಲೆ ದ್ವೇಷವನ್ನು ಇಟ್ಟುಕೊಂಡಿರಬಹುದು. ಅವರು ಅತಿಥಿಸತ್ಕಾರಕ್ಕೆ ಕರೆದರೂ ನಿರಾಕರಿಸುವ, ಅವರಿಗೆ ಅತಿಥಿಸತ್ಕಾರ ತೋರಿಸದೇ ಇರುವ ಸಾಧ್ಯತೆಯಿದೆ. (ಇಬ್ರಿ. 13:1, 2) ಇಂಥ ಋಣಾತ್ಮಾಕ ಭಾವನೆಯಾಗಲಿ ಅಥವಾ ಅತಿಥಿಸತ್ಕಾರ ಮಾಡುವುದನ್ನು ನಿಲ್ಲಿಸುವುದಾಗಲಿ ಪ್ರೀತಿಯ ಕೊರತೆಯನ್ನು ತೋರಿಸುತ್ತದೆ. ಇಂಥ ಭಾವನೆಗಳು ಇರುವಲ್ಲಿ ಹೃದಯವನ್ನು ಪರೀಕ್ಷಿಸುವವನಾದ ಯೆಹೋವನು ಅವರನ್ನು ‘ಹೃದಯ ಸುನ್ನತಿಯಿಲ್ಲದವರಂತೆ’ ವೀಕ್ಷಿಸುತ್ತಾನೆ. (ಯೆರೆ. 9:25, 26) ಅಂಥವರಿಗೆ ಯೆಹೋವನು ಹೇಳಿದ್ದನ್ನು ನೆನಪಿಸಿಕೊಳ್ಳಿ: “ಹೃದಯದ ಮುಂದೊಗಲನ್ನು ತೆಗೆದುಹಾಕಿ.”—ಯೆರೆ. 4:4.
ದೇವರನ್ನು ‘ತಿಳಿದುಕೊಳ್ಳುವ ಹೃದಯ’ ಪಡೆದುಕೊಳ್ಳುವುದು ಮತ್ತು ಕಾಪಾಡಿಕೊಳ್ಳುವುದು
17. ಹೃದಯ ಸೂಕ್ಷ್ಮಸಂವೇದಿಯಾಗಿರಲು ಯೆಹೋವನ ಭಯ ಹೇಗೆ ಸಹಾಯ ಮಾಡುತ್ತದೆ?
17 ನಿಮ್ಮ ಹೃದಯವನ್ನು ಪರೀಕ್ಷಿಸುವಾಗ ಯೆಹೋವನ ಸಲಹೆಸೂಚನೆಗಳಿಗೆ ಹೃದಯ ಸ್ಪಂದಿಸುತ್ತಿಲ್ಲ ಎಂದು ಅನಿಸಿದರೆ ಮತ್ತು ಹೃದಯ ಸ್ವಲ್ಪಮಟ್ಟಿಗೆ “ಸುನ್ನತಿಯಿಲ್ಲದ” ಹಾಗೆ ಇದೆ ಎಂದು ಕಂಡುಬಂದರೆ ಏನು ಮಾಡುವಿರಿ? ಉದಾಹರಣೆಗೆ ಹೃದಯವನ್ನು ಪರೀಕ್ಷಿಸುವಾಗ ದೊಡ್ಡ ಹೆಸರು ಮಾಡಬೇಕು, ಐಷಾರಾಮಿ ಜೀವನ ನಡೆಸಬೇಕು ಎಂಬ ಆಕಾಂಕ್ಷೆ, ಮನುಷ್ಯನ ಭಯ ನಿಮ್ಮಲ್ಲಿ ಕಂಡುಬಂದಿರಬಹುದು. ಇಲ್ಲವೇ ಹಠಮಾರಿತನ, ಮನಸ್ಸಿಗೆ ಬಂದ ಹಾಗೆ ನಡೆಯುವ ಇಚ್ಛೆ ಇರಬಹುದು. ನಿಮ್ಮಂಥದ್ದೆ ಭಾವನೆಗಳು ಅನೇಕರಲ್ಲಿ ಇದ್ದವು. (ಯೆರೆ. 7:24; 11:8) ಅಪನಂಬಿಗಸ್ತ ಯೆಹೂದ್ಯರ ‘ಹೃದಯವು ಯೆಹೋವನ ಅಧೀನ ತಪ್ಪಿ ತಿರುಗಿಬಿದ್ದಿದೆ’ ಎಂದು ಯೆರೆಮೀಯನು ಬರೆದನು. ಅಂದರೆ ಅವರ ಹೃದಯಗಳಲ್ಲಿ ಹಠಮಾರಿತನ ಹಾಗೂ ದಂಗೆ ಏಳುವ ಸ್ವಭಾವ ಇತ್ತು. ಯೆರೆಮೀಯನು ಮುಂದೆ ಹೇಳಿದ್ದು: “ಮುಂಗಾರು, ಹಿಂಗಾರು ಅಂತು ಸಕಾಲದ ಮಳೆಯನ್ನು ದಯಪಾಲಿಸಿ ಸುಗ್ಗಿಯ ಕ್ಲುಪ್ತವಾರಗಳನ್ನು ನಮಗಾಗಿ ಪ್ರತ್ಯೇಕಪಡಿಸುವ ನಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯಿಡೋಣ ಎಂದು [ಅವರು] ಮನದಲ್ಲಿ ಅಂದುಕೊಳ್ಳುವದಿಲ್ಲ.” (ಯೆರೆ. 5:23, 24) ಇದು ತೋರಿಸುವಂತೆ ಹೃದಯದ ಮುಂದೊಗಲನ್ನು ತೆಗೆದುಹಾಕಲು ನಾವು ಯೆಹೋವನ ಕಡೆಗೆ ಭಯ ಹಾಗೂ ಗಣ್ಯತೆಯನ್ನು ಬೆಳೆಸಿಕೊಳ್ಳಬೇಕು. ಯೆಹೋವನ ಕಡೆಗೆ ಹಿತಕರ ಭಯ ಇರುವಾಗ ಆತನು ಬಯಸುವುದನ್ನೇ ಮಾಡುತ್ತೇವೆ ಮತ್ತು ಆತನ ಮಾತುಗಳನ್ನು ಬೇಗನೆ ಹೃದಯಕ್ಕೆ ತೆಗೆದುಕೊಳ್ಳುತ್ತೇವೆ.
18. ಹೊಸ ಒಡಂಬಡಿಕೆಯಲ್ಲಿ ಇರುವವರಿಗೆ ಯೆಹೋವನು ಯಾವ ವಾಗ್ದಾನ ಮಾಡಿದ್ದಾನೆ?
18 ಹೀಗೆ ಮಾಡುತ್ತಾ ಇರುವಲ್ಲಿ ಯೆಹೋವನು ನಮಗೆ ಆತನನ್ನು ‘ತಿಳಿದುಕೊಳ್ಳುವ ಹೃದಯವನ್ನೂ’ ಕೊಡುವನು. ಇದೇ ವಾಗ್ದಾನವನ್ನು ಆತನು ಹೊಸ ಒಡಂಬಡಿಕೆಯಡಿಯಲ್ಲಿ ಅಭಿಷಿಕ್ತರಿಗೆ ಮಾಡಿದ್ದನು: “ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.” ಆತನನ್ನು ಹೆಚ್ಚು ತಿಳಿದುಕೊಳ್ಳುವುದರ ಬಗ್ಗೆ ಏನು? ಯೆಹೋವನು ಹೀಗನ್ನುತ್ತಾನೆ: “ನೆರೆಹೊರೆಯವರೂ ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು—ಯೆಹೋವನ ಜ್ಞಾನವನ್ನು ಪಡೆಯಿರಿ ಎಂದು ಇನ್ನು ಮೇಲೆ ಬೋಧಿಸಬೇಕಾಗಿರುವದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು; ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.”—ಯೆರೆ. 31:31-34.a
19. ನಿಜ ಕ್ರೈಸ್ತರಿಗೆ ಯಾವ ಅಮೋಘ ಪ್ರತೀಕ್ಷೆ ಇದೆ?
19 ಹೊಸ ಒಡಂಬಡಿಕೆ ಕೆಳಗೆ ನಾವು ಶಾಶ್ವತ ಪ್ರಯೋಜನಗಳನ್ನು ಪಡೆಯಲಿದ್ದೇವೆ. ನಮ್ಮ ನಿರೀಕ್ಷೆ ಸ್ವರ್ಗದ್ದಾಗಿರಲಿ ಭೂಮಿಯದ್ದಾಗಿರಲಿ ನಾವು ಯೆಹೋವನನ್ನು ತಿಳಿದುಕೊಳ್ಳಬೇಕು ಮತ್ತು ಆತನ ಜನರಲ್ಲಿ ಒಬ್ಬರಾಗಿರಬೇಕು. ಹಾಗೆ ಮಾಡಲು ನಮ್ಮ ಪಾಪಗಳು ಯೇಸುವಿನ ವಿಮೋಚನಾ ಮೌಲ್ಯದ ಆಧಾರದ ಮೇಲೆ ಕ್ಷಮಿಸಲ್ಪಟ್ಟಿರಬೇಕು. ನಿಮ್ಮನ್ನು ದೇವರು ಕ್ಷಮಿಸುತ್ತಾನೆ ಎಂಬುದು ಇತರರನ್ನು ಕ್ಷಮಿಸುವಂತೆ ನಿಮ್ಮನ್ನು ಪ್ರೇರೇಪಿಸಬೇಕು. ಅವರು ನಿಮಗೆ ಎಷ್ಟೇ ನೋವು ಮಾಡಿರಲಿ ನೀವು ಕ್ಷಮಿಸಲು ಮುಂದಾಗಬೇಕು. ಅವರ ಕಡೆಗೆ ಹೃದಯದಲ್ಲಿ ಯಾವುದೇ ರೀತಿಯ ದ್ವೇಷಪೂರಿತ ಭಾವನೆ ಇರುವುದಾದರೆ ಅದನ್ನು ತೆಗೆದುಹಾಕುವುದು ನಿಮ್ಮ ಹೃದಯಕ್ಕೆ ಒಳಿತು ಮಾಡುತ್ತದೆ. ಹೀಗೆ ಮಾಡುವ ಮೂಲಕ ನಿಮಗೆ ಯೆಹೋವನನ್ನು ಆರಾಧಿಸುವ ಅಪೇಕ್ಷೆಯಿದೆ ಎಂದು ಮಾತ್ರವಲ್ಲ ಆತನನ್ನು ಹೆಚ್ಚೆಚ್ಚು ತಿಳಿದುಕೊಳ್ಳುತ್ತಿದ್ದೀರಿ ಎಂದು ತೋರಿಸುತ್ತೀರಿ. ಆಗ ಯೆಹೋವನು ಯೆರೆಮೀಯನ ಕಾಲದ ನಂಬಿಗಸ್ತ ಜನರಿಗೆ ಹೇಳಿದಂತೆ ನಿಮಗೂ ಹೇಳುವನು: “ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. ನಾನು ನಿಮಗೆ ದೊರೆಯುವೆನು.”—ಯೆರೆ. 29:13, 14.
[ಪಾದಟಿಪ್ಪಣಿ]
a 2012, ಜನವರಿ 15ರ ಕಾವಲಿನಬುರುಜು, ಪುಟ 26-30ರಲ್ಲಿ ಹೊಸ ಒಡಂಬಡಿಕೆ ಬಗ್ಗೆ ವಿವರಿಸಲಾಗಿದೆ.
[ಪುಟ 8ರಲ್ಲಿರುವ ಚಿತ್ರ]
[ಪುಟ 10ರಲ್ಲಿರುವ ಚಿತ್ರ]
[ಪುಟ 11ರಲ್ಲಿರುವ ಚಿತ್ರ]
ಹೃದಯವನ್ನು ಪರೀಕ್ಷಿಸಿ ಕೆಟ್ಟ ಅಪೇಕ್ಷೆಗಳನ್ನು ತೆಗೆದುಹಾಕಿದರೆ ಆಶೀರ್ವಾದಗಳನ್ನು ಪಡೆಯುತ್ತೇವೆ
[ಪುಟ 12ರಲ್ಲಿರುವ ಚಿತ್ರ]