ಕತ್ತಲೆಯಿಂದ ಕರೆಯಲ್ಪಟ್ಟರು
‘ಯೆಹೋವನು ನಿಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದನು.’ —1 ಪೇತ್ರ 2:9.
1. ಯೆರೂಸಲೇಮಿನ ನಾಶನ ಹೇಗಾಯಿತೆಂದು ತಿಳಿಸಿ.
ಕ್ರಿಸ್ತ ಪೂರ್ವ 607. ಬಾಬೆಲ್ ಸಾಮ್ರಾಜ್ಯದ ರಾಜನಾದ IIನೇ ನೆಬೂಕದ್ನೆಚ್ಚರನು ಮತ್ತು ಅವನ ದೊಡ್ಡ ಸೈನ್ಯವು ಯೆರೂಸಲೇಮ್ ಪಟ್ಟಣದ ಮೇಲೆ ದಾಳಿಮಾಡಿತು. ಅರಸನು ಯೆರೂಸಲೇಮಿನ ಯುವಭಟರನ್ನು ಕತ್ತಿಯಿಂದ ಕೊಂದುಹಾಕಿದನು. “ಕನ್ಯೆಯರನ್ನೂ ಮುದುಕರನ್ನೂ ಅತಿವೃದ್ಧರನ್ನೂ ಕನಿಕರಿಸದೆ ಎಲ್ಲರನ್ನೂ ಕೊಲ್ಲಿಸಿದನು” ಎಂದು ದೇವರ ವಾಕ್ಯ ಹೇಳುತ್ತದೆ. ಕೊನೆಯಲ್ಲಿ “[ಅವನ ಜನರು] ಯೆರೂಸಲೇಮಿನ ಪೌಳಿಗೋಡೆಗಳನ್ನು ಕೆಡವಿ ಅದರ ಎಲ್ಲಾ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟುಬಿಟ್ಟು ಅಮೂಲ್ಯವಸ್ತುಗಳನ್ನು ನಾಶಮಾಡಿದರು.”—2 ಪೂರ್ವ. 36:17, 19.
2. ಯೆಹೋವನು ಯೆಹೂದ್ಯರಿಗೆ ಯಾವ ಎಚ್ಚರಿಕೆ ಕೊಟ್ಟಿದ್ದನು?
2 ಯೆರೂಸಲೇಮ್ ಪಟ್ಟಣವು ನಾಶ ಆದಾಗ ಯೆಹೂದ್ಯರು ಆಶ್ಚರ್ಯಪಡುವ ಆವಶ್ಯಕತೆ ಇರಲಿಲ್ಲ. ಯಾಕೆಂದರೆ ಅವರಿಗೆ ಈ ಗತಿಯಾಗುತ್ತದೆ ಎಂದು ಮೊದಲೇ ಎಚ್ಚರಿಕೆ ಕೊಡಲಾಗಿತ್ತು. ತನ್ನ ಮಾತು ಮೀರಿ ನಡೆದರೆ ಬಾಬೆಲಿನವರು ದಾಳಿಮಾಡುತ್ತಾರೆ, ಅನೇಕರು ಕತ್ತಿಯಿಂದ ಸಾಯುತ್ತಾರೆ, ಕತ್ತಿಯಿಂದ ತಪ್ಪಿಸಿಕೊಂಡವರು ಬಾಬೆಲಿಗೆ ಬಂದಿಗಳಾಗಿ ಹೋಗುತ್ತಾರೆ ಎಂದು ಯೆಹೋವನು ಪ್ರವಾದಿಗಳ ಮೂಲಕ ಅವರಿಗೆ ಸುಮಾರು ವರ್ಷಗಳಿಂದ ಎಚ್ಚರಿಸುತ್ತಾ ಬಂದಿದ್ದನು. (ಯೆರೆ. 15:2) ಬಾಬೆಲಿನ ಬಂದಿವಾಸದಲ್ಲಿ ಜೀವನ ಹೇಗಿದ್ದಿರಬಹುದು? ಇದೇ ರೀತಿಯ ಸನ್ನಿವೇಶ ಕ್ರೈಸ್ತರಿಗೂ ಬಂತಾ? ಬಂದಿದ್ದರೆ, ಯಾವಾಗ ಬಂತು?
ಬಂದಿವಾಸದಲ್ಲಿ ಜೀವನ
3. ಐಗುಪ್ತದ ಬಂದಿವಾಸಕ್ಕೂ ಬಾಬೆಲಿನ ಬಂದಿವಾಸಕ್ಕೂ ಏನು ವ್ಯತ್ಯಾಸ?
3 ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದಾಗ ಅಲ್ಲಿರುವ ಸನ್ನಿವೇಶಕ್ಕನುಸಾರ ಒಳ್ಳೇದಾಗಿ ಜೀವನ ನಡೆಸಿಕೊಂಡು ಹೋಗುವಂತೆ ಯೆಹೋವನು ಹೇಳಿದನು. “ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಅವುಗಳ ಫಲವನ್ನು ಅನುಭವಿಸಿರಿ; ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ.” (ಯೆರೆ. 29:5, 7) ಯೆಹೋವನ ನಿರ್ದೇಶನದಂತೆ ನಡೆದವರು ಬಂದಿವಾಸದಲ್ಲಿದ್ದರೂ ಜೀವನವನ್ನು ಸುಗಮವಾಗಿ ಸಾಗಿಸಲು ಸಾಧ್ಯವಾಯಿತು. ಯೆಹೂದ್ಯರು ತಮ್ಮ ಸ್ವಂತ ವ್ಯವಹಾರಗಳನ್ನು ನೋಡಿಕೊಳ್ಳುವ ಸ್ವಾತಂತ್ರ್ಯವನ್ನು ಬಾಬೆಲಿನವರು ಕೊಟ್ಟಿದ್ದರು. ಅವರು ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಹೋಗಿ ಬರಬಹುದಿತ್ತು. ಆ ಸಮಯದಲ್ಲಿ ಬಾಬೆಲ್ ಒಂದು ದೊಡ್ಡ ವಾಣಿಜ್ಯ ನಗರವೂ ಆಗಿತ್ತು. ಯೆಹೂದ್ಯರು ವ್ಯಾಪಾರ-ವಹಿವಾಟು ಹೇಗೆ ನಡೆಸುವುದೆಂದು ಕಲಿತರು ಮತ್ತು ಅನೇಕ ಕೈಕಸಬುಗಳನ್ನೂ ಕಲಿತರು ಎಂದು ಪ್ರಾಚೀನ ದಾಖಲೆಗಳು ತೋರಿಸುತ್ತವೆ. ಹೀಗೆ ಕೆಲವರು ಶ್ರೀಮಂತರೂ ಆದರು. ನೂರಾರು ವರ್ಷಗಳ ಹಿಂದೆ ಐಗುಪ್ತದ ಬಂದಿವಾಸದಲ್ಲಿ ಅವರು ಬಿಟ್ಟೀಕೆಲಸ ಮಾಡುತ್ತಾ ನಿಟ್ಟುಸಿರುಬಿಟ್ಟು ನೋವು ನರಳಾಟದಲ್ಲಿ ಕಷ್ಟಪಡಬೇಕಾಗಿತ್ತು. ಆದರೆ ಇಲ್ಲಿ ಅಂಥ ಪರಿಸ್ಥಿತಿ ಇರಲಿಲ್ಲ.—ವಿಮೋಚನಕಾಂಡ 2:23-25 ಓದಿ.
4. (ಎ) ಅಪನಂಬಿಗಸ್ತ ಯೆಹೂದ್ಯರಿಂದಾಗಿ ಬೇರೆ ಯಾರು ಸಹ ಕಷ್ಟಪಡಬೇಕಾಯಿತು? (ಬಿ) ಧರ್ಮಶಾಸ್ತ್ರದಲ್ಲಿ ಹೇಳಿರುವ ಪ್ರತಿಯೊಂದು ವಿಷಯವನ್ನು ಅವರಿಂದ ಪಾಲಿಸಲು ಆಗಲಿಲ್ಲ ಯಾಕೆ?
4 ಬಾಬೆಲಿಗೆ ಬಂದಿಗಳಾಗಿ ಹೋದ ಕೆಲವು ಯೆಹೂದ್ಯರು ದೇವರ ನಂಬಿಗಸ್ತ ಆರಾಧಕರಾಗಿದ್ದರು. ಬೇರೆ ಯೆಹೂದ್ಯರು ಮಾಡಿದ ತಪ್ಪಿಗೆ ಇವರೂ ಶಿಕ್ಷೆ ಅನುಭವಿಸಬೇಕಾಯಿತು. ಅವರು ಬಾಬೆಲಿನಲ್ಲಿ ಮನೆಮಾರು ಕಟ್ಟಿಕೊಂಡು ಆರಾಮವಾಗಿದ್ದರೂ ಯೆಹೋವನನ್ನು ಆರಾಧನೆ ಮಾಡಲು ಆಗುತ್ತಿರಲಿಲ್ಲ. ಏಕೆಂದರೆ ಯೆಹೋವನ ಆಲಯ ಮತ್ತು ಯಜ್ಞವೇದಿಯನ್ನು ನಾಶಮಾಡಲಾಗಿತ್ತು ಮತ್ತು ಯಾಜಕ ಸೇವೆ ಸರಿಯಾಗಿ ನಡೆಯುತ್ತಾ ಇರಲಿಲ್ಲ. ಆದರೆ ನಂಬಿಗಸ್ತ ಯೆಹೂದ್ಯರು ಧರ್ಮಶಾಸ್ತ್ರವನ್ನು ಪಾಲಿಸಲು ತಮ್ಮಿಂದಾದಷ್ಟು ಪ್ರಯತ್ನಿಸಿದರು. ಉದಾಹರಣೆಗೆ, ಯೆಹೂದ್ಯರು ತಿನ್ನಬಾರದಿದ್ದ ಆಹಾರಗಳನ್ನು ದಾನಿಯೇಲ, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ತಿನ್ನಲಿಲ್ಲ. ದಾನಿಯೇಲನು ದೇವರಿಗೆ ತಪ್ಪದೆ ಪ್ರಾರ್ಥನೆ ಮಾಡುತ್ತಿದ್ದನು. (ದಾನಿ. 1:8; 6:10) ಆದರೂ ಬಾಬೆಲನ್ನು ಬೇರೆ ಧರ್ಮಕ್ಕೆ ಸೇರಿದವರು ಆಳುತ್ತಿದ್ದರಿಂದ ಧರ್ಮಶಾಸ್ತ್ರದಲ್ಲಿ ಹೇಳಿರುವ ಪ್ರತಿಯೊಂದು ವಿಷಯವನ್ನು ಯೆಹೂದ್ಯರಿಂದ ಪಾಲಿಸಲು ಆಗಲಿಲ್ಲ.
5. (ಎ) ಯೆಹೋವನು ತನ್ನ ಜನರಿಗೆ ಯಾವ ಮಾತು ಕೊಟ್ಟಿದ್ದನು? (ಬಿ) ಇದನ್ನು ನಂಬುವುದು ಸ್ವಲ್ಪ ಕಷ್ಟವಾಗಿತ್ತು ಯಾಕೆ?
5 ಇಸ್ರಾಯೇಲ್ಯರು ದೇವರನ್ನು ಧರ್ಮಶಾಸ್ತ್ರ ಹೇಳುವ ಪ್ರಕಾರ ಆರಾಧಿಸುವ ಸಮಯ ಪುನಃ ಬರುತ್ತಾ? ಬರಲ್ಲ ಎಂದು ಕೆಲವರು ನೆನಸಿರಬಹುದು. ಯಾಕೆಂದರೆ ಬಂದಿಗಳಾಗಿ ಹಿಡುಕೊಂಡು ಹೋದವರನ್ನು ಬಾಬೆಲ್ ಬಿಡುಗಡೆ ಮಾಡುತ್ತಿರಲಿಲ್ಲ. ಆದರೆ ತನ್ನ ಜನರಿಗೆ ಬಿಡುಗಡೆ ಆಗುವುದೆಂದು ಯೆಹೋವ ದೇವರು ವಾಗ್ದಾನಿಸಿದ್ದನು. ಹಾಗೆಯೇ ಆಯಿತು. ನಮ್ಮ ದೇವರಾದ ಯೆಹೋವನು ಕೊಟ್ಟ ಮಾತನ್ನು ಖಂಡಿತ ನೆರವೇರಿಸುತ್ತಾನೆ.—ಯೆಶಾ. 55:11.
ಕ್ರೈಸ್ತರು ಯಾವಾಗಾದರೂ ಬಾಬೆಲಿನ ಬಂದಿವಾಸದಲ್ಲಿದ್ದರಾ?
6, 7. ಕ್ರೈಸ್ತರು 1918ರಲ್ಲಿ ಬಾಬೆಲಿನ ಬಂದಿವಾಸಕ್ಕೆ ಹೋಗಿಲ್ಲ ಎಂದು ಹೇಗೆ ಹೇಳಬಹುದು?
6 ಯೆಹೂದ್ಯರಂತೆ ಕ್ರೈಸ್ತರು ಯಾವಾಗಾದರೂ ಬಾಬೆಲಿನ ಬಂದಿವಾಸದಲ್ಲಿದ್ದರಾ? ನಂಬಿಗಸ್ತ ಕ್ರೈಸ್ತರು 1918ರಲ್ಲಿ ಮಹಾ ಬಾಬೆಲಿನ ಬಂದಿವಾಸಕ್ಕೆ ಹೋದರು ಮತ್ತು 1919ರಲ್ಲಿ ಬಿಡುಗಡೆ ಹೊಂದಿದರು ಎಂದು ಕಾವಲಿನಬುರುಜು ಪತ್ರಿಕೆ ಹಲವಾರು ವರ್ಷಗಳಿಂದ ಹೇಳಿತ್ತು. ಆದರೆ ನಾವು ಅರ್ಥಮಾಡಿಕೊಂಡಿದ್ದ ವಿಷಯವನ್ನು ಸ್ವಲ್ಪ ಬದಲಾಯಿಸಬೇಕಿದೆ. ಇದರ ಬಗ್ಗೆ ಈ ಲೇಖನ ಮತ್ತು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.
7 ನಮಗೆ ಗೊತ್ತಿರುವ ಹಾಗೆ ಮಹಾ ಬಾಬೆಲ್ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿದೆ. 1918ರಲ್ಲಿ ದೇವಜನರು ಹಿಂಸೆಯನ್ನು ಎದುರಿಸಿದ್ದು ನಿಜ. ಆದರೆ ಆ ಹಿಂಸೆಯನ್ನು ತಂದದ್ದು ಸರ್ಕಾರ, ಧರ್ಮ ಅಲ್ಲ. ಹಾಗಾಗಿ ಅವರು ಆ ವರ್ಷದಲ್ಲಿ ಸುಳ್ಳು ಧರ್ಮದ ದಾಸರಾಗಲಿಲ್ಲ. ವಾಸ್ತವದಲ್ಲಿ ಒಂದನೇ ಲೋಕ ಯುದ್ಧ 1914ರಲ್ಲಿ ಆರಂಭವಾಗುವ ಮುಂಚೆಯೇ ದೇವರ ಅಭಿಷಿಕ್ತ ಸೇವಕರು ಸುಳ್ಳು ಧರ್ಮವನ್ನು ಬಿಟ್ಟು ಬಂದಿದ್ದರು. ಆದ್ದರಿಂದ 1918ರಲ್ಲಿ ಯೆಹೋವನ ಜನ ಮಹಾ ಬಾಬೆಲಿನ ಬಂದಿವಾಸಕ್ಕೆ ಹೋದರು ಎಂದು ಹೇಳುವುದು ಸರಿಯಲ್ಲ ಎಂದು ತೋರುತ್ತದೆ.
ಕ್ರೈಸ್ತರು ಬಾಬೆಲಿನ ಬಂದಿವಾಸಕ್ಕೆ ಹೋದದ್ದು ಯಾವಾಗ?
8. ಅಪೊಸ್ತಲರು ತೀರಿಹೋದ ಮೇಲೆ ಸಭೆಯಲ್ಲಿ ಏನಾಯಿತು? (ಲೇಖನದ ಆರಂಭದ ಚಿತ್ರ ನೋಡಿ.)
8 ಕ್ರಿಸ್ತ ಶಕ 33ರ ಪಂಚಾಶತ್ತಮದಂದು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ ಸಾವಿರಾರು ಮಂದಿ ಪವಿತ್ರಾತ್ಮದಿಂದ ಅಭಿಷೇಕ ಹೊಂದಿದರು. ಇವರು “ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ” ಆದರು. (1 ಪೇತ್ರ 2:9, 10 ಓದಿ.) ಅಪೊಸ್ತಲರು ಬದುಕಿರುವ ವರೆಗೆ ಸಭೆಗಳನ್ನು ಶುದ್ಧವಾಗಿ ಇಟ್ಟಿದ್ದರು. ಆದರೆ ಅವರು ತೀರಿಹೋದ ಮೇಲೆ ಸಭೆಯಲ್ಲಿರುವ ಕೆಲವು ಪುರುಷರು ಸುಳ್ಳು ಬೋಧನೆ ಮಾಡಲು ಆರಂಭಿಸಿದರು ಮತ್ತು ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಂಡರು. ಈ ಪುರುಷರಿಗೆ ಗ್ರೀಕ್ ತತ್ವಜ್ಞಾನಿಗಳಾದ ಅರಿಸ್ಟಾಟಲ್ ಮತ್ತು ಪ್ಲೇಟೊ ಅವರ ಬೋಧನೆ ತುಂಬ ಇಷ್ಟವಾಗಿತ್ತು. ಸತ್ಯವನ್ನು ಬೋಧಿಸುವುದು ಬಿಟ್ಟು ತಮ್ಮ ಸ್ವಂತ ವಿಚಾರಗಳನ್ನು ಬೋಧಿಸಲು ಆರಂಭಿಸಿದರು. (ಅ. ಕಾ. 20:30; 2 ಥೆಸ. 2:6-8) ಇವರಲ್ಲಿ ಅನೇಕರು ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳಾಗಿದ್ದರು ಮತ್ತು ಸಭೆಯಲ್ಲಿ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿದ್ದರು. ಯೇಸು ತನ್ನ ಶಿಷ್ಯರಿಗೆ “ನೀವೆಲ್ಲರೂ ಸಹೋದರರು” ಎಂದು ಹೇಳಿದ್ದರೂ ಒಂದು ಪಾದ್ರಿ ವರ್ಗ ರೂಪುಗೊಳ್ಳುತ್ತಾ ಇತ್ತು.—ಮತ್ತಾ. 23:8.
9. (ಎ) ಧರ್ಮಭ್ರಷ್ಟ ಕ್ರೈಸ್ತರೂ ರೋಮ್ ಸರ್ಕಾರವೂ ಹೇಗೆ ನಂಟು ಬೆಳೆಸಿಕೊಂಡರು ಹೇಳುತ್ತೀರಾ? (ಬಿ) ಇದರ ಪರಿಣಾಮ ಏನಾಯಿತು?
9 ಕ್ರಿಸ್ತ ಶಕ 313ರಲ್ಲಿ ರೋಮ್ ಸಾಮ್ರಾಜ್ಯವನ್ನು ಆಳುತ್ತಿದ್ದ ಸಾಮ್ರಾಟ ಕಾನ್ಸ್ಟೆಂಟೀನ್ ಹೊಸದಾಗಿ ರೂಪುಗೊಳ್ಳುತ್ತಿದ್ದ ಧರ್ಮಭ್ರಷ್ಟ ಕ್ರೈಸ್ತತ್ವವನ್ನು ಕಾನೂನುಬದ್ಧ ಧರ್ಮವಾಗಿ ಮಾಡಿದನು. ಇದರ ನಂತರ ಚರ್ಚಿಗೂ ರೋಮ್ ಸರ್ಕಾರಕ್ಕೂ ಎಲ್ಲಿಲ್ಲದ ನಂಟು ಬೆಸೆಯಿತು. ಒಂದು ಸಂದರ್ಭದಲ್ಲಿ ನೈಸೀಯ ನಗರದಲ್ಲಿ ಕಾನ್ಸ್ಟೆಂಟೀನ್ ಧಾರ್ಮಿಕ ಮುಖಂಡರೊಂದಿಗೆ ಒಂದು ಕೂಟವನ್ನು ಏರ್ಪಡಿಸಿದ. ಆಗ ಅರೀಯಸ್ ಎಂಬ ಪಾದ್ರಿಯ ಬಗ್ಗೆ ಅವನಿಗೆ ಗೊತ್ತಾಯಿತು. ಈ ಪಾದ್ರಿ ಯೇಸುವನ್ನು ದೇವರೆಂದು ಒಪ್ಪಿಕೊಳ್ಳದ ಕಾರಣ ಕಾನ್ಸ್ಟೆಂಟೀನ್ ಅವನನ್ನು ಗಡೀಪಾರು ಮಾಡಿಬಿಟ್ಟ. ಅನಂತರ Iನೇ ಥಿಯೊಡೋಶಸನು (ಕ್ರಿ.ಶ. 379-395) ರೋಮ್ ಚಕ್ರವರ್ತಿಯಾದನು. ಆಗ ಕ್ಯಾಥೊಲಿಕ್ ಧರ್ಮ ರೋಮ್ ಸಾಮ್ರಾಜ್ಯದ ರಾಷ್ಟ್ರೀಯ ಧರ್ಮವಾಯಿತು. ಈ ಕಾರಣದಿಂದ ವಿಧರ್ಮಿ ರಾಜ್ಯವಾಗಿದ್ದ ರೋಮ್ ಥಿಯೊಡೋಶಸನ ಸಮಯದಲ್ಲಿ ಕ್ರೈಸ್ತ ರಾಜ್ಯವಾಯಿತು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಸತ್ಯಾಂಶನೇ ಬೇರೆ. ಇದೆಲ್ಲ ನಡೆಯುವುದಕ್ಕಿಂತ ಮುಂಚೆಯೇ ಧರ್ಮಭ್ರಷ್ಟ ಕ್ರೈಸ್ತರು ಬೇರೆ ಧರ್ಮಗಳ ಬೋಧನೆಗಳನ್ನು ಸ್ವೀಕರಿಸಿ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಭಾಗವಾಗಿಬಿಟ್ಟಿದ್ದರು. ಆದರೂ ಅವರಲ್ಲಿ ಕೆಲವು ನಂಬಿಗಸ್ತ ಅಭಿಷಿಕ್ತ ಕ್ರೈಸ್ತರಿದ್ದರು. ಇವರು ಯೇಸು ದೃಷ್ಟಾಂತದಲ್ಲಿ ಹೇಳಿದ ಗೋದಿಯಂತೆ ಇದ್ದರು ಮತ್ತು ದೇವರನ್ನು ಆರಾಧಿಸಲು ತಮ್ಮಿಂದಾದ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದದ್ದು ಕೆಲವರು ಮಾತ್ರ. (ಮತ್ತಾಯ 13:24, 25, 37-39 ಓದಿ.) ಇಂಥ ಪರಿಸ್ಥಿತಿಯಲ್ಲಿ ಇವರು ಬಾಬೆಲಿನ ಬಂದಿವಾಸದಲ್ಲಿ ಇದ್ದಂತೆ ಇತ್ತು.
10. ಕೆಲವು ಕ್ರೈಸ್ತರು ಚರ್ಚ್ ಬೋಧನೆಗಳನ್ನು ಒಪ್ಪಲಿಲ್ಲ ಯಾಕೆ?
10 ಕ್ರಿಸ್ತನು ತೀರಿಹೋದ ಮೇಲೆ ಕೆಲವು ಶತಮಾನಗಳ ವರೆಗೆ ಅನೇಕರು ಬೈಬಲನ್ನು ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಓದುತ್ತಿದ್ದರು. ಅವರು ಬೈಬಲಿನ ಬೋಧನೆ ಮತ್ತು ಚರ್ಚಿನ ಬೋಧನೆಯನ್ನು ಹೋಲಿಸಿ ನೋಡುತ್ತಿದ್ದರು. ಆಗ ಚರ್ಚಿನ ಬೋಧನೆಗಳು ತಪ್ಪಾಗಿವೆ ಎಂದು ಕೆಲವರಿಗೆ ಗೊತ್ತಾಯಿತು. ಆದ್ದರಿಂದ ಅವರು ಅದನ್ನು ಒಪ್ಪಲಿಲ್ಲ. ಆದರೆ ಇದರ ಬಗ್ಗೆ ಬೇರೆಯವರೊಂದಿಗೆ ಮಾತಾಡುವ ಹಾಗಿರಲಿಲ್ಲ. ಮಾತಾಡಿದರೆ ಅವರ ಜೀವಕ್ಕೇ ಅಪಾಯ ಬರುವ ಸಾಧ್ಯತೆ ಇತ್ತು.
11. ಬೈಬಲ್ ಸತ್ಯವನ್ನು ಮುಚ್ಚಿಹಾಕಲು ಪಾದ್ರಿ ವರ್ಗ ಹೇಗೆ ಪ್ರಯತ್ನಿಸಿತು?
11 ವರ್ಷಗಳು ಉರುಳಿದಂತೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯಲ್ಲಿ ಮಾತಾಡುವ ಜನ ಕಡಿಮೆಯಾಗುತ್ತಾ ಹೋದರು. ಆದ್ದರಿಂದ ಪಾದ್ರಿ ವರ್ಗ ಮತ್ತು ಕೆಲವು ವಿದ್ಯಾವಂತರು ಮಾತ್ರ ಬೈಬಲನ್ನು ಓದಲು ಆಗುತ್ತಿತ್ತು. ಪಾದ್ರಿ ವರ್ಗದಲ್ಲೂ ಓದುಬರಹ ಬರದವರು ಇದ್ದರು. ಇದು ಸಾಲದಂತೆ, ಚರ್ಚಿನ ಮುಖಂಡರು ಬೈಬಲನ್ನು ಸಾಮಾನ್ಯ ಜನರ ಭಾಷೆಗೆ ಭಾಷಾಂತರಿಸಲೂ ಬಿಡುತ್ತಿರಲಿಲ್ಲ. ಯಾರಾದರೂ ಚರ್ಚ್ ಬೋಧಿಸಿದ್ದನ್ನು ಒಪ್ಪದೆ ಹೋದರೆ ಅವರಿಗೆ ಕಠಿಣ ಶಿಕ್ಷೆ ಆಗುತ್ತಿತ್ತು. ಇದರಿಂದ ಇದ್ದ ಕೆಲವು ಅಭಿಷಿಕ್ತ ಕ್ರೈಸ್ತರು ಆರಾಧನೆ ಮಾಡಲು ಸಣ್ಣ ಸಣ್ಣ ಗುಂಪುಗಳಾಗಿ ಸೇರಿಬರಬೇಕಾಯಿತು. ಕೆಲವರಂತೂ ಸೇರಿಬರಲು ಸಾಧ್ಯವೇ ಇರಲಿಲ್ಲ. ಬಾಬೆಲಿನಲ್ಲಿ ಬಂದಿಗಳಾಗಿದ್ದ ಯೆಹೂದ್ಯರಂತೆ ‘ರಾಜವಂಶಸ್ಥರಾದ ಯಾಜಕರಾಗಿದ್ದ’ ಅಭಿಷಿಕ್ತರು ಸಹ ದೇವರನ್ನು ವ್ಯವಸ್ಥಿತ ರೀತಿಯಲ್ಲಿ ಆರಾಧಿಸಲು ಸಾಧ್ಯವಾಗಲಿಲ್ಲ. ಮಹಾ ಬಾಬೆಲ್ ಎಲ್ಲರನ್ನೂ ತನ್ನ ಅಂಗೈಯಲ್ಲಿಟ್ಟು ಆಡಿಸುತ್ತಿತ್ತು.
ಬೆಳಕು ಕಾಣಿಸುತ್ತದೆ
12, 13. ಮಹಾ ಬಾಬೆಲಿನ ಬಿಗಿಮುಷ್ಟಿಯಿಂದ ತಪ್ಪಿಸಿಕೊಳ್ಳಲು ಸತ್ಯ ಕ್ರೈಸ್ತರಿಗೆ ಯಾವುದು ಸಹಾಯಮಾಡಿತು? ವಿವರಿಸಿ.
12 ಮಹಾ ಬಾಬೆಲಿನ ಬಿಗಿಮುಷ್ಟಿಯಿಂದ ಸತ್ಯ ಕ್ರೈಸ್ತರು ತಪ್ಪಿಸಿಕೊಂಡರಾ? ಹೌದು! ಎರಡು ವಿಷಯಗಳು ಅವರಿಗೆ ಸಹಾಯಮಾಡಿತು. ಮೊದಲನೇದು, ಮುದ್ರಣ ಯಂತ್ರದ ಆವಿಷ್ಕಾರ. ಇದನ್ನು ಕಂಡುಹಿಡಿಯುವ ಮುಂಚೆ ಅಂದರೆ 1450ಕ್ಕೆ ಮುಂಚೆ ಬೈಬಲನ್ನು ಕೈಯಿಂದ ಬರೆದು ನಕಲು ಮಾಡಬೇಕಿತ್ತು. ಇದು ಸುಲಭದ ಕೆಲಸ ಅಲ್ಲ. ಯಾಕೆಂದರೆ ನಕಲು ಮಾಡುವುದರಲ್ಲಿ ನಿಪುಣತೆ ಪಡೆದ ವ್ಯಕ್ತಿಗೇ ಇಡೀ ಬೈಬಲನ್ನು ನಕಲು ಮಾಡಲು 10 ತಿಂಗಳು ಹಿಡಿಯುತ್ತಿತ್ತು. ಆಗೆಲ್ಲಾ ನಕಲುಗಾರರು ಚರ್ಮದ ತುಂಡುಗಳ ಮೇಲೆ ಬರೆಯುತ್ತಿದ್ದರು. ಈ ಕಾರಣದಿಂದ ಬೈಬಲಿನ ಕೆಲವು ಪ್ರತಿಗಳು ಮಾತ್ರ ಇದ್ದವು. ಈ ಬೈಬಲ್ ಬೇಕಾದರೆ ತುಂಬ ಹಣ ಕೊಡಬೇಕಿತ್ತು. ಆದರೆ ಮುದ್ರಣ ಯಂತ್ರ ಬಂದ ಮೇಲೆ ದಿನಕ್ಕೆ 1,300 ಪುಟಗಳನ್ನು ಮುದ್ರಿಸಬಹುದಿತ್ತು.
13 ಬೆಳಕು ಪ್ರಕಾಶಿಸಲು ಎರಡನೇ ಕಾರಣ ಬೈಬಲ್ ಭಾಷಾಂತರ. ಸುಮಾರು 1500ರಲ್ಲಿ ಧೈರ್ಯಶಾಲಿಗಳಾಗಿದ್ದ ಕೆಲವು ಪುರುಷರು ಸಾಮಾನ್ಯ ಜನರು ಮಾತಾಡುವ ಭಾಷೆಯಲ್ಲಿ ಬೈಬಲನ್ನು ಭಾಷಾಂತರಿಸಲು ಆರಂಭಿಸಿದರು. ಇದು ಧಾರ್ಮಿಕ ಮುಖಂಡರಿಗೆ ಗೊತ್ತಾದರೆ ಕೊಂದುಹಾಕುತ್ತಾರೆ ಅಂತ ಗೊತ್ತಿದ್ದರೂ ಇದನ್ನು ಮಾಡಿದರು. ಇದರಿಂದ ಚರ್ಚ್ ಮುಖಂಡರ ನಿದ್ದೆಗೆಟ್ಟಿತು. ಯಾಕೆ? ಯಾಕೆಂದರೆ ಸಾಮಾನ್ಯ ಜನರ ಭಾಷೆಯಲ್ಲಿ ಬೈಬಲ್ ಬಂದುಬಿಟ್ಟರೆ ಜನ ಏನೆಲ್ಲಾ ಪ್ರಶ್ನೆ ಹಾಕಬಹುದು ಎಂದು ಪಾದ್ರಿಗಳು ಹೆದರಿದರು. ‘ಪರ್ಗೆಟರಿ ಬಗ್ಗೆ ಬೈಬಲಲ್ಲಿ ಎಲ್ಲಿ ಹೇಳಿದೆ? ಸತ್ತವರಿಗೆ ಮಾಸ್ ಇಡಲು ದುಡ್ಡು ಕೊಡಬೇಕು ಅಂತ ಹೇಳುತ್ತದಾ? ಪೋಪ್ ಮತ್ತು ಕಾರ್ಡಿನಲ್ಗಳ ಬಗ್ಗೆ ಎಲ್ಲಿ ಬರೆದಿದೆ?’ ಎಂದು ಪ್ರಶ್ನೆ ಹಾಕಬಹುದು ಎಂಬ ಭಯ ಹತ್ತಿತು. ಚರ್ಚಿನ ಅನೇಕ ಬೋಧನೆಗಳು ಅರಿಸ್ಟಾಟಲ್ ಮತ್ತು ಪ್ಲೇಟೊ ಅವರ ಬೋಧನೆಗಳ ಮೇಲೆ ಆಧರಿಸಿತ್ತು. ಈ ತತ್ವಜ್ಞಾನಿಗಳು ಕ್ರಿಸ್ತನು ಭೂಮಿಗೆ ಬರುವ ಎಷ್ಟೋ ಶತಮಾನಗಳ ಹಿಂದೆ ಬದುಕಿದ್ದರು. ಜನ ಬೈಬಲನ್ನು ಓದಿ ಒಂದೊಂದೇ ಪ್ರಶ್ನೆ ಹಾಕಿದಾಗ ಚರ್ಚ್ ಮುಖಂಡರು ರೊಚ್ಚಿಗೆದ್ದರು. ಇವರ ಬೋಧನೆಗಳನ್ನು ಒಪ್ಪದ ವ್ಯಕ್ತಿಗಳಿಗೆ ಮರಣ ಶಿಕ್ಷೆ ವಿಧಿಸಿದರು. ಜನ ಬೈಬಲ್ ಓದುವುದನ್ನು ಮತ್ತು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಕೆಂದು ಚರ್ಚ್ ಮುಖಂಡರು ಬಯಸಿದರು. ಅದೇ ಆಯಿತು. ಆದರೆ ಧೈರ್ಯಶಾಲಿಗಳಾಗಿದ್ದ ಕೆಲವರು ಮಹಾ ಬಾಬೆಲಿನ ಕೈಗೆ ತಮ್ಮ ಜುಟ್ಟನ್ನು ಕೊಡಲಿಲ್ಲ. ದೇವರ ವಾಕ್ಯದಿಂದ ಅವರಿಗೆ ಸತ್ಯ ಸಿಕ್ಕಿತ್ತು ಮತ್ತು ಅವರು ಹೆಚ್ಚನ್ನು ತಿಳಿಯಲು ಬಯಸಿದರು. ಹೀಗೆ ಸುಳ್ಳು ಧರ್ಮದಿಂದ ಬಿಡುಗಡೆ ಹತ್ತಿರವಾಗುತ್ತಾ ಬಂತು.
14. (ಎ) ಬೈಬಲನ್ನು ಅಧ್ಯಯನ ಮಾಡಲು ಬಯಸಿದ ವ್ಯಕ್ತಿಗಳು ಏನು ಮಾಡಿದರು? (ಬಿ) ಸಹೋದರ ರಸಲ್ ಸತ್ಯಕ್ಕಾಗಿ ಮಾಡಿದ ಹುಡುಕಾಟದ ಬಗ್ಗೆ ಹೇಳಿ.
14 ಅನೇಕರು ಬೈಬಲನ್ನು ಓದಿ ಅಧ್ಯಯನ ಮಾಡಿ ಕಲಿತದ್ದರ ಬಗ್ಗೆ ಬೇರೆಯವರೊಂದಿಗೆ ಮಾತಾಡಬೇಕೆಂದು ಬಯಸಿದರು. ಇನ್ನು ಚರ್ಚ್ ಮುಖಂಡರು ಹೇಳುವುದನ್ನು ನಂಬಿಕೊಂಡು ಕೂರಲು ಅವರು ಬಯಸಲಿಲ್ಲ. ಬೈಬಲನ್ನು ಎಲ್ಲಿ ಸ್ವತಂತ್ರವಾಗಿ ಅಧ್ಯಯನ ಮಾಡಬಹುದೋ ಅಂಥ ದೇಶಗಳಿಗೆ ಓಡಿಹೋದರು. ಹೀಗೆ ಅನೇಕರು ಅಮೆರಿಕಕ್ಕೆ ಬಂದರು. ಅಲ್ಲಿ 1870ರಿಂದ ಚಾರ್ಲ್ಸ್ ಟೇಸ್ ರಸಲ್ ಮತ್ತು ಬೇರೆ ಕೆಲವರು ಬೈಬಲನ್ನು ಆಳವಾಗಿ ಅಧ್ಯಯನ ಮಾಡಲು ಆರಂಭಿಸಿದ್ದರು. ಮೊದಲು ಸಹೋದರ ರಸಲ್ ಯಾವ ಧರ್ಮ ಸತ್ಯ ಬೋಧಿಸುತ್ತಿದೆ ಎಂದು ಕಂಡುಹಿಡಿಯಲು ಬಯಸಿದರು. ಅವರು ಕ್ರೈಸ್ತರೆಂದು ಹೇಳಿಕೊಳ್ಳುವ ಧರ್ಮಗಳ ಬೋಧನೆಗಳು ಬೈಬಲಿನಲ್ಲಿದೆಯಾ ಎಂದು ಪರೀಕ್ಷಿಸಿ ನೋಡಿದರು. ಬೇರೆ ಧರ್ಮಗಳ ಬೋಧನೆಗಳ ಕಡೆ ಕೂಡ ಕಣ್ಣಾಡಿಸಿದರು. ಈ ಯಾವುದೇ ಧರ್ಮ ದೇವರ ವಾಕ್ಯದ ಪ್ರಕಾರ ಸಂಪೂರ್ಣವಾಗಿ ನಡೆಯುತ್ತಿಲ್ಲ ಎಂದು ಬೇಗ ಅರ್ಥಮಾಡಿಕೊಂಡರು. ಒಂದು ಸಲ ಅವರು ತಮ್ಮ ಸ್ಥಳದಲ್ಲಿದ್ದ ಚರ್ಚ್ ಮುಖಂಡರೊಂದಿಗೆ ಮಾತಾಡಿದರು. ತಮ್ಮ ಬೈಬಲ್ ಅಧ್ಯಯನ ಗುಂಪು ಕಂಡುಹಿಡಿದಿರುವ ಬೈಬಲ್ ಸತ್ಯಗಳನ್ನು ಈ ಮುಖಂಡರು ಒಪ್ಪಿಕೊಂಡು ತಮ್ಮ ಸಭೆಗಳಲ್ಲಿ ಬೋಧಿಸುವರು ಎಂದು ಸಹೋದರ ರಸಲ್ ನೆನಸಿದರು. ಆದರೆ ಆ ಧಾರ್ಮಿಕ ಮುಖಂಡರು ಕ್ಯಾರೆ ಅನ್ನಲಿಲ್ಲ. ಸುಳ್ಳು ಧರ್ಮದ ಭಾಗವಾಗಿರುವವರೊಂದಿಗೆ ಸೇರಿ ದೇವರನ್ನು ಆರಾಧಿಸಲು ಸಾಧ್ಯವಿಲ್ಲ ಎಂದು ಬೈಬಲ್ ವಿದ್ಯಾರ್ಥಿಗಳಿಗೆ ಅರ್ಥವಾಯಿತು.—2 ಕೊರಿಂಥ 6:14 ಓದಿ.
15. (ಎ) ಸತ್ಯ ಕ್ರೈಸ್ತರು ಬಾಬೆಲಿನ ಬಂದಿವಾಸಕ್ಕೆ ಒಳಗಾದದ್ದು ಯಾವಾಗ? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ?
15 ಅಪೊಸ್ತಲರು ತೀರಿಹೋದ ಮೇಲೆ ಸತ್ಯ ಕ್ರೈಸ್ತರು ಬಾಬೆಲಿನ ಬಂದಿವಾಸಕ್ಕೆ ಹೋದರು ಎಂದು ಈ ಲೇಖನದಲ್ಲಿ ಕಲಿತೆವು. ಆದರೂ ನಮಗೆ ಮುಂದೆ ಕೊಡಲಾಗಿರುವ ಪ್ರಶ್ನೆಗಳಿಗೆ ಉತ್ತರ ಬೇಕಿದೆ: 1914ಕ್ಕೆ ಮುಂಚೆಯೇ ಅಭಿಷಿಕ್ತರು ಮಹಾ ಬಾಬೆಲಿನ ಬಂದನದಿಂದ ಹೊರಗೆ ಬಂದಿದ್ದರು ಎಂದು ಹೇಗೆ ಹೇಳಬಹುದು? 1ನೇ ಲೋಕ ಯುದ್ಧದ ಸಮಯದಲ್ಲಿ ಸಾರುವ ಕೆಲಸವನ್ನು ಕಡಿಮೆ ಮಾಡಿದ್ದರಿಂದ ಯೆಹೋವನಿಗೆ ತನ್ನ ಜನರ ಮೇಲೆ ಸಿಟ್ಟು ಬಂದಿತ್ತು ಎಂಬುದು ನಿಜಾನಾ? ಆ ಸಮಯದಲ್ಲಿ ನಮ್ಮ ಕೆಲವು ಸಹೋದರರು ಕ್ರೈಸ್ತ ತಾಟಸ್ಥ್ಯವನ್ನು ಬಿಟ್ಟು ಯೆಹೋವನ ಅನುಗ್ರಹವನ್ನು ಕಳೆದುಕೊಂಡರಾ? ಅಪೊಸ್ತಲರು ತೀರಿಹೋದ ಮೇಲೆ ಕ್ರೈಸ್ತರು ಸುಳ್ಳು ಧರ್ಮದ ಬಂದನಕ್ಕೆ ಹೋದರಾದರೆ, ಯಾವಾಗ ಹೊರಗೆ ಬಂದರು? ತುಂಬ ಒಳ್ಳೇ ಪ್ರಶ್ನೆಗಳು. ಉತ್ತರ ಮುಂದಿನ ಲೇಖನದಲ್ಲಿದೆ.