ಕ್ರಿಸ್ತನ ಮರಣದ ಸ್ಮರಣೆ ತರುವ ರಮ್ಯವಾದ ಐಕ್ಯತೆ
“ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!”—ಕೀರ್ತ. 133:1.
1, 2. (ಎ) 2018ರಲ್ಲಿ ಯಾವ ಕಾರ್ಯಕ್ರಮ ನಮ್ಮನ್ನು ಅದ್ವಿತೀಯ ರೀತಿಯಲ್ಲಿ ಐಕ್ಯಗೊಳಿಸಲಿದೆ? (ಬಿ) ಅದು ಯಾಕೆ ಅದ್ವಿತೀಯವಾಗಿದೆ? (ಲೇಖನದ ಆರಂಭದ ಚಿತ್ರ ನೋಡಿ.)
ಮಾರ್ಚ್ 31, 2018ರಂದು ಲಕ್ಷಾಂತರ ಜನರು ವರ್ಷದಲ್ಲಿ ಒಂದು ಸಲ ಮಾತ್ರ ನಡೆಯುವ ಒಂದು ಸಮಾರಂಭಕ್ಕೆ ಲೋಕದೆಲ್ಲೆಡೆ ಒಟ್ಟುಸೇರಲಿದ್ದಾರೆ. ಅವತ್ತಿನ ದಿನ ಸೂರ್ಯಾಸ್ತಮಾನದ ನಂತರ ಯೆಹೋವನ ಸಾಕ್ಷಿಗಳು ಮತ್ತು ಬೇರೆ ಅನೇಕರು ಯೇಸು ನಮಗಾಗಿ ಮಾಡಿದ ತ್ಯಾಗವನ್ನು ಸ್ಮರಿಸಲಿದ್ದಾರೆ. ಪ್ರತಿ ವರ್ಷ ಕ್ರಿಸ್ತನ ಮರಣದ ಸ್ಮರಣೆ ಜನರನ್ನು ಅದ್ಭುತ ರೀತಿಯಲ್ಲಿ ಐಕ್ಯಗೊಳಿಸುತ್ತದೆ. ಬೇರೆ ಯಾವ ಸಮಾರಂಭವೂ ಜನರಲ್ಲಿ ಈ ರೀತಿಯ ಐಕ್ಯತೆಯನ್ನು ತರಲಾರದು.
2 ಮಾರ್ಚ್ 31ರಂದು ಒಂದೊಂದು ತಾಸಿಗೂ ಲೋಕವ್ಯಾಪಕವಾಗಿ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಸೇರಿಬರುತ್ತಾರೆ. ಇದನ್ನು ನೋಡುವಾಗ ಯೆಹೋವನಿಗೆ ಮತ್ತು ಯೇಸುವಿಗೆ ತುಂಬ ಸಂತೋಷವಾಗುತ್ತದೆ. ಬೈಬಲು ‘ಯಾವ ಮನುಷ್ಯನಿಂದಲೂ ಎಣಿಸಲಾಗದಂಥ ಒಂದು ಮಹಾ ಸಮೂಹದ’ ಬಗ್ಗೆ ಮಾತಾಡುತ್ತದೆ. ಇವರು “ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ” ಬಂದವರು. “ಸಿಂಹಾಸನದ ಮೇಲೆ ಕುಳಿತುಕೊಂಡಿರುವ ನಮ್ಮ ದೇವರಿಗೂ ಕುರಿಮರಿಗೂ ನಮ್ಮ ರಕ್ಷಣೆಗಾಗಿ ನಾವು ಋಣಿಗಳು” ಎಂದು ಅವರು ಕೂಗಿ ಹೇಳುತ್ತಾರೆ. (ಪ್ರಕ. 7:9, 10) ಯೆಹೋವ ಮತ್ತು ಯೇಸು ನಮಗಾಗಿ ಮಾಡಿರುವ ಮಹಾ ತ್ಯಾಗಗಳಿಗಾಗಿ ಪ್ರತಿ ವರ್ಷ ಇಷ್ಟೊಂದು ಜನರು ಸ್ಮರಣೆಯ ಸಮಯದಲ್ಲಿ ಸೇರಿಬಂದು ಗಣ್ಯತೆ ವ್ಯಕ್ತಪಡಿಸುವುದು ಅತ್ಯದ್ಭುತ!
3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ?
3 ಈ ಲೇಖನದಲ್ಲಿ ನಮಗೆ ಕೆಳಗಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ: (1) ಸ್ಮರಣೆಯಿಂದ ಸಂಪೂರ್ಣ ಪ್ರಯೋಜನ ಪಡೆಯಲು ನಾನು ಅದಕ್ಕೆ ಹೇಗೆ ಸಿದ್ಧವಾಗಲಿ? (2) ದೇವಜನರೆಲ್ಲರೂ ಐಕ್ಯವಾಗಿರಲು ಸ್ಮರಣೆ ಹೇಗೆ ಸಹಾಯ ಮಾಡುತ್ತದೆ? (3) ದೇವಜನರ ಮಧ್ಯೆ ಐಕ್ಯತೆಯನ್ನು ಹೆಚ್ಚಿಸಲು ನಾನು ಏನು ಮಾಡಬಹುದು? (4) ಕೊನೆಯ ಸ್ಮರಣೆ ಅನ್ನುವುದು ಇದೆಯಾ? ಇರುತ್ತದಾದರೆ ಯಾವಾಗ?
ಸ್ಮರಣೆಗೆ ಸಿದ್ಧರಾಗುವುದು ಹೇಗೆ ಮತ್ತು ಹಾಜರಾಗುವುದರಿಂದ ಸಿಗುವ ಪ್ರಯೋಜನ ಏನು?
4. ನಾವು ಸ್ಮರಣೆಗೆ ಹಾಜರಾಗುವುದು ಯಾಕಷ್ಟು ಮುಖ್ಯ?
4 ನಾವು ಸ್ಮರಣೆಗೆ ಹಾಜರಾಗುವುದು ಯಾಕಷ್ಟು ಮುಖ್ಯ? ಒಂದು ಕಾರಣ ಏನೆಂದರೆ, ಕೂಟಗಳಿಗೆ ಹಾಜರಾಗುವ ಮೂಲಕ ನಾವು ಯೆಹೋವನಿಗೆ ಆರಾಧನೆ ಸಲ್ಲಿಸುತ್ತೇವೆ. ಪ್ರತಿ ವರ್ಷ ನಡೆಯುವ ಅತಿ ಪ್ರಾಮುಖ್ಯ ಕೂಟ ಕ್ರಿಸ್ತನ ಮರಣದ ಸ್ಮರಣೆ. ಇದಕ್ಕೆ ಹಾಜರಾಗಲು ಪ್ರತಿಯೊಬ್ಬರು ಮಾಡುವ ಪ್ರಯತ್ನವನ್ನು ಯೆಹೋವ ಮತ್ತು ಯೇಸು ಖಂಡಿತ ಗಮನಿಸುತ್ತಾರೆ. ನಮ್ಮ ಆರೋಗ್ಯ ಅಥವಾ ನಮ್ಮ ಕೈಮೀರಿದ ಯಾವುದೋ ಸನ್ನಿವೇಶದಿಂದಾಗಿ ನಮಗೆ ಹಾಜರಾಗಲು ಆಗದೇ ಇರಬಹುದು. ಆದರೆ ನಾವು ಹಾಜರಾಗಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು. ಕೂಟಗಳಿಗೆ ಹೋಗುವುದನ್ನು ನಾವು ತುಂಬ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ನಮ್ಮ ಕ್ರಿಯೆಗಳು ತೋರಿಸುವಾಗ, ನಮ್ಮ ಹೆಸರನ್ನು “ಜ್ಞಾಪಕದ ಪುಸ್ತಕದಲ್ಲಿ” ಅಂದರೆ “ಜೀವದ ಪುಸ್ತಕ”ದಲ್ಲಿ ಉಳಿಸಿಕೊಳ್ಳಲು ಯೆಹೋವನಿಗೆ ಒಂದು ಬಲವಾದ ಕಾರಣ ಸಿಕ್ಕಿದಂತಾಗುತ್ತದೆ. ಯಾರಿಗೆಲ್ಲಾ ನಿತ್ಯಜೀವ ಸಿಗಲಿದೆಯೋ ಅವರೆಲ್ಲರ ಹೆಸರುಗಳು ಅದರಲ್ಲಿವೆ.—ಮಲಾ. 3:16; ಪ್ರಕ. 20:15.
5. “ನೀವು ನಂಬಿಕೆಯಲ್ಲಿ ಇದ್ದೀರೋ” ಎಂದು ಸ್ಮರಣೆಗೆ ಮುಂಚಿನ ವಾರಗಳಲ್ಲಿ ಪರೀಕ್ಷಿಸಿಕೊಳ್ಳುವುದು ಹೇಗೆ?
5 ಸ್ಮರಣೆಗೆ ಮುಂಚಿನ ವಾರಗಳಲ್ಲಿ, ಯೆಹೋವನೊಂದಿಗೆ ನಮಗಿರುವ ಸಂಬಂಧ ಎಷ್ಟು ಬಲವಾಗಿದೆ ಎಂಬುದರ ಬಗ್ಗೆ ಯೋಚಿಸಲು ಮತ್ತು ಪ್ರಾರ್ಥಿಸಲು ನಾವು ಹೆಚ್ಚು ಸಮಯ ತೆಗೆದುಕೊಳ್ಳುವುದು ಒಳ್ಳೇದು. (2 ಕೊರಿಂಥ 13:5 ಓದಿ.) “ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ” ಎಂದು ಅಪೊಸ್ತಲ ಪೌಲನು ಕ್ರೈಸ್ತರಿಗೆ ಹೇಳಿದನು. ನಾವಿದನ್ನು ಹೇಗೆ ಮಾಡಬಹುದು? ನಾವು ನಮ್ಮನ್ನೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ಯೆಹೋವನು ತನ್ನ ಚಿತ್ತವನ್ನು ಮಾಡಲು ಆರಿಸಿಕೊಂಡಿರುವ ಸಂಘಟನೆ ಇದೊಂದೇ ಎಂದು ನಾನು ನಿಜವಾಗಿಯೂ ನಂಬುತ್ತೇನಾ? ಸುವಾರ್ತೆ ಸಾರಲು ಮತ್ತು ಬೋಧಿಸಲು ನಾನು ನನ್ನಿಂದಾದ ಎಲ್ಲ ಪ್ರಯತ್ನ ಮಾಡುತ್ತೇನಾ? ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು ಸೈತಾನನ ಆಳ್ವಿಕೆಯ ಅಂತ್ಯ ಹತ್ತಿರವಿದೆ ಅನ್ನುವುದನ್ನು ನಾನು ನಿಜವಾಗಿಯೂ ನಂಬುತ್ತೇನೆ ಎಂಬುದು ನನ್ನ ಕ್ರಿಯೆಗಳಿಂದ ಗೊತ್ತಾಗುತ್ತದಾ? ನಾನು ಯೆಹೋವನ ಸೇವೆಯನ್ನು ಮಾಡಲು ಆರಂಭಿಸಿದ ಸಮಯದಲ್ಲಿ ನನಗೆ ಯೆಹೋವ ಮತ್ತು ಯೇಸುವಿನ ಮೇಲಿದ್ದಷ್ಟು ಭರವಸೆ ಈಗಲೂ ಇದೆಯಾ?’ (ಮತ್ತಾ. 24:14; 2 ತಿಮೊ. 3:1; ಇಬ್ರಿ. 3:14) ಈ ಪ್ರಶ್ನೆಗಳಿರುವ ಉತ್ತರದ ಬಗ್ಗೆ ಯೋಚಿಸುವುದರಿಂದ ನಾವು ಏನಾಗಿದ್ದೇವೆ ಎಂದು “ಪ್ರಮಾಣೀಕರಿಸುತ್ತಾ” ಇರಲು ಆಗುತ್ತದೆ.
6. (ಎ) ನಿತ್ಯಜೀವ ಪಡೆಯಲು ನಮ್ಮ ಮುಂದಿರುವ ಒಂದೇ ಒಂದು ದಾರಿ ಯಾವುದು? (ಬಿ) ಒಬ್ಬ ಹಿರಿಯ ಪ್ರತಿ ವರ್ಷ ಸ್ಮರಣೆಗೆ ಹೇಗೆ ಸಿದ್ಧರಾಗುತ್ತಾರೆ? (ಸಿ) ಇದೇ ರೀತಿ ನೀವೂ ಏನು ಮಾಡಬಹುದು?
6 ನೀವು ಸ್ಮರಣೆಗಾಗಿ ಸಿದ್ಧರಾಗುವ ಒಂದು ವಿಧ, ಈ ಸಮಾರಂಭ ಯಾಕೆ ಮುಖ್ಯ ಎಂದು ವಿವರಿಸುವ ಲೇಖನಗಳನ್ನು ಓದಿ ಅದರ ಬಗ್ಗೆ ಯೋಚಿಸುವ ಮೂಲಕವೇ ಆಗಿದೆ. (ಯೋಹಾನ 3:16; 17:3 ಓದಿ.) ನಾವು ನಿತ್ಯಜೀವ ಪಡೆಯಲು ಇರುವ ಒಂದೇ ಒಂದು ದಾರಿ, ಯೆಹೋವನ ಬಗ್ಗೆ ತಿಳಿದುಕೊಳ್ಳುವುದು ಮತ್ತು ಆತನ ಮಗನಾದ ಯೇಸುವಿನಲ್ಲಿ ನಂಬಿಕೆ ಇಡುವುದು. ಸ್ಮರಣೆಗೆ ಸಿದ್ಧರಾಗಲಿಕ್ಕಾಗಿ ನಾವು ಯೆಹೋವನಿಗೆ ಮತ್ತು ಯೇಸುವಿಗೆ ಹತ್ತಿರವಾಗಲು ಸಹಾಯ ಮಾಡುವ ವಿಷಯಗಳನ್ನು ಅಧ್ಯಯನ ಮಾಡಲು ಯೋಜನೆ ಮಾಡಬೇಕು. ತುಂಬ ಸಮಯದಿಂದ ಹಿರಿಯರಾಗಿರುವ ಒಬ್ಬ ಸಹೋದರ ಇದನ್ನೇ ಮಾಡುತ್ತಾರೆ. ಅನೇಕ ವರ್ಷಗಳಿಂದ ಅವರು ಸ್ಮರಣೆಯ ಬಗ್ಗೆ ಮತ್ತು ಯೆಹೋವ ಹಾಗೂ ಯೇಸು ತೋರಿಸಿದ ಪ್ರೀತಿಯ ಬಗ್ಗೆ ತಿಳಿಸುವ ಕಾವಲಿನಬುರುಜು ಲೇಖನಗಳನ್ನು ಸಂಗ್ರಹಿಸಿದ್ದಾರೆ. ಕೆಲವೊಮ್ಮೆ ಒಂದೆರಡು ಹೊಸ ಲೇಖನಗಳನ್ನೂ ಇದಕ್ಕೆ ಸೇರಿಸುತ್ತಾರೆ. ಸ್ಮರಣೆಗೆ ಮುಂಚಿನ ವಾರಗಳಲ್ಲಿ ಅವರು ಸಂಗ್ರಹಿಸಿರುವ ಲೇಖನಗಳನ್ನು ತೆಗೆದು ಓದಿ, ಈ ಸಮಾರಂಭ ಯಾಕಷ್ಟು ಮುಖ್ಯ ಎಂದು ಯೋಚಿಸುತ್ತಾರೆ. ಸ್ಮರಣೆಯ ಬೈಬಲ್ ಓದುವಿಕೆಯನ್ನೂ ಮಾಡಿ ಗಂಭೀರವಾಗಿ ಯೋಚಿಸುತ್ತಾರೆ. ಹೀಗೆ ಮಾಡುವ ಮೂಲಕ ಅವರು ಪ್ರತಿ ವರ್ಷ ಹೊಸ ವಿಷಯಗಳನ್ನು ಕಲಿಯುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಮಾಡುವ ಅಧ್ಯಯನದಿಂದ ಅವರಿಗೆ ಯೆಹೋವನ ಮೇಲೆ ಮತ್ತು ಯೇಸುವಿನ ಮೇಲೆ ಪ್ರೀತಿ ಹೆಚ್ಚಾಗಿದೆ. ಈ ರೀತಿ ಅಧ್ಯಯನ ಮಾಡುವಾಗ ಯೆಹೋವ ಮತ್ತು ಯೇಸುವಿನ ಮೇಲೆ ನಿಮಗೂ ಪ್ರೀತಿ ಹೆಚ್ಚಾಗುತ್ತದೆ. ಅವರು ಮಾಡಿದ ಮಹಾ ತ್ಯಾಗಗಳಿಗಾಗಿ ಕೃತಜ್ಞತೆ ಹೇಳಬೇಕೆಂದು ಅನಿಸುತ್ತದೆ. ಹೀಗೆ ನೀವು ಕ್ರಿಸ್ತನ ಮರಣದ ಸ್ಮರಣೆಯಿಂದ ಪ್ರಯೋಜನ ಪಡೆಯಬಲ್ಲಿರಿ.
ಕ್ರಿಸ್ತನ ಸ್ಮರಣೆ ನಾವು ಐಕ್ಯವಾಗಿರಲು ಸಹಾಯ ಮಾಡುತ್ತದೆ
7. (ಎ) ಕರ್ತನ ಸಂಧ್ಯಾ ಭೋಜನವನ್ನು ಮೊದಲನೇ ಸಾರಿ ಮಾಡಿದಾಗ ಯೇಸು ಯಾವುದಕ್ಕಾಗಿ ಪ್ರಾರ್ಥಿಸಿದನು? (ಬಿ) ಯೇಸು ಸಲ್ಲಿಸಿದ ಪ್ರಾರ್ಥನೆಗೆ ಯೆಹೋವ ಉತ್ತರ ಕೊಟ್ಟಿದ್ದಾನೆಂದು ಯಾವುದು ತೋರಿಸುತ್ತದೆ?
7 ಕರ್ತನ ಸಂಧ್ಯಾ ಭೋಜನವನ್ನು ಮೊದಲನೇ ಸಾರಿ ಮಾಡಿದಾಗ ಯೇಸು ಒಂದು ವಿಶೇಷ ಪ್ರಾರ್ಥನೆ ಸಲ್ಲಿಸಿದನು. ಅದರಲ್ಲಿ ಅವನು ತನ್ನ ಮತ್ತು ತನ್ನ ತಂದೆಯ ಮಧ್ಯೆ ಇರುವ ಅಮೂಲ್ಯ ಐಕ್ಯತೆಯ ಬಗ್ಗೆ ಪ್ರಾರ್ಥಿಸಿದನು. ತನ್ನ ಶಿಷ್ಯರೆಲ್ಲರು ಅದೇ ರೀತಿ ಐಕ್ಯವಾಗಿರಬೇಕೆಂದು ಕೇಳಿಕೊಂಡನು. (ಯೋಹಾನ 17:20, 21 ಓದಿ.) ಯೆಹೋವನು ತನ್ನ ಪ್ರಿಯ ಪುತ್ರನು ಸಲ್ಲಿಸಿದ ಆ ಪ್ರಾರ್ಥನೆಗೆ ಖಂಡಿತ ಉತ್ತರ ಕೊಟ್ಟಿದ್ದಾನೆ. ನಮ್ಮ ದಿನದಲ್ಲಿ ಬೇರೆ ಯಾವ ಕೂಟಕ್ಕಿಂತಲೂ ಸ್ಮರಣೆಯ ಕೂಟ ಯೆಹೋವನ ಸಾಕ್ಷಿಗಳು ಐಕ್ಯವಾಗಿದ್ದಾರೆಂದು ತೋರಿಸುತ್ತದೆ. ಅವತ್ತಿನ ದಿನ, ಬೇರೆ ಬೇರೆ ದೇಶಗಳ, ಬೇರೆ ಬೇರೆ ಮೈಬಣ್ಣದ ಜನರು ಲೋಕದೆಲ್ಲೆಡೆ ಸೇರಿಬರುತ್ತಾರೆ ಮತ್ತು ಯೆಹೋವನೇ ತನ್ನ ಮಗನನ್ನು ಕಳುಹಿಸಿಕೊಟ್ಟದ್ದು ಎಂದು ತೋರಿಸಿಕೊಡುತ್ತಾರೆ. ಕೆಲವು ಸ್ಥಳಗಳಲ್ಲಿ ಬೇರೆ ಬೇರೆ ಜಾತಿಯ ಜನರು ಧಾರ್ಮಿಕ ಕೂಟಗಳಿಗೆ ಒಟ್ಟುಸೇರಿ ಬರುವುದು ಅಸಾಮಾನ್ಯವಾದ ವಿಷಯ. ಒಂದುವೇಳೆ ಅವರು ಒಟ್ಟುಸೇರಿದರೂ ಇದಕ್ಕೆ ಬೇರೆಯವರು ನಕಾರ ಸೂಚಿಸುತ್ತಾರೆ. ಆದರೆ ಯೆಹೋವ ಮತ್ತು ಯೇಸು ಹಾಗಲ್ಲ. ಅವರಿಗೆ ಸ್ಮರಣೆಯ ಸಮಯದಲ್ಲಿರುವ ಐಕ್ಯತೆ ಅತಿ ಸುಂದರವಾಗಿ ಕಾಣಿಸುತ್ತದೆ!
8. ಯೆಹೋವನು ಐಕ್ಯತೆಯ ಬಗ್ಗೆ ಯೆಹೆಜ್ಕೇಲನಿಗೆ ಏನು ಹೇಳಿದನು?
8 ಯೆಹೋವನ ಜನರ ಮಧ್ಯೆ ಇರುವ ಐಕ್ಯತೆಯನ್ನು ನೋಡಿ ನಮಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ಯೆಹೋವನು ಈ ಐಕ್ಯದ ಬಗ್ಗೆ ಯೆಹೆಜ್ಕೇಲನ ಮೂಲಕ ಈ ಮೊದಲೇ ತಿಳಿಸಿದ್ದಾನೆ. ಆತನು ಯೆಹೆಜ್ಕೇಲನಿಗೆ ಎರಡು ದಂಡಗಳನ್ನು ಅಥವಾ ಕೋಲುಗಳನ್ನು ತೆಗೆದುಕೊಳ್ಳುವಂತೆ ಹೇಳಿದನು. ಅದರಲ್ಲಿ ಒಂದು “ಯೆಹೂದಕ್ಕೆ” ಮತ್ತು ಇನ್ನೊಂದು “ಯೋಸೇಫಿಗೆ.” ಇವೆರಡನ್ನು ಒಂದುಮಾಡುವಂತೆ ಯೆಹೋವನು ಹೇಳಿದನು. (ಯೆಹೆಜ್ಕೇಲ 37:15-17 ಓದಿ.) ಜುಲೈ 2016ರ ಕಾವಲಿನಬುರುಜುವಿನಲ್ಲಿ ಬಂದ “ವಾಚಕರಿಂದ ಪ್ರಶ್ನೆಗಳು” ಇದನ್ನು ಹೀಗೆ ವಿವರಿಸಿತು: “ಯೆಹೋವನು ತನ್ನ ಪ್ರವಾದಿ ಯೆಹೆಜ್ಕೇಲನ ಮೂಲಕ ತನ್ನ ಜನರು ವಾಗ್ದತ್ತ ದೇಶಕ್ಕೆ ಹಿಂದಿರುಗುವರೆಂದು ಮತ್ತು ಪುನಃ ಒಂದೇ ಜನಾಂಗವಾಗಿ ಐಕ್ಯರಾಗುವರೆಂದು ಮುಂತಿಳಿಸಿದನು. ಅದೇ ಪ್ರವಾದನೆಯು ಕಡೇ ದಿವಸಗಳಲ್ಲಿ ದೇವರನ್ನು ಆರಾಧಿಸುವವರು ಒಂದೇ ಜನಾಂಗವಾಗಿ ಐಕ್ಯರಾಗುವರೆಂದು ಸಹ ಮುಂತಿಳಿಸಿತು.”
9. ಯೆಹೆಜ್ಕೇಲನು ಮುಂತಿಳಿಸಿದ ಐಕ್ಯತೆಯನ್ನು ನಾವು ಪ್ರತಿ ವರ್ಷ ಸ್ಮರಣೆಯ ಸಮಯದಲ್ಲಿ ನೋಡಲು ಸಾಧ್ಯವಾಗುತ್ತದೆ ಹೇಗೆ?
9 ಯೆಹೋವನು 1919ರಿಂದ ಆರಂಭಿಸಿ ಅಭಿಷಿಕ್ತರನ್ನು ಕ್ರಮೇಣವಾಗಿ ಒಟ್ಟುಸೇರಿಸಿ ಸಂಘಟಿಸಿದನು. ಇವರು “ಯೆಹೂದಕ್ಕೆ” ಸೇರಿದ ಕೋಲಿನಂತೆ ಇದ್ದಾರೆ. ಆಮೇಲೆ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯಿರುವ ಹೆಚ್ಚುಹೆಚ್ಚು ಜನರು ಅಭಿಷಿಕ್ತರ ಜೊತೆ ಸೇರಿದರು. ಈ ಜನರು “ಯೋಸೇಫಿಗೆ” ಸೇರಿದ ಕೋಲಿನಂತೆ ಇದ್ದಾರೆ. ಯೆಹೋವನು ಈ ಎರಡೂ ಕೋಲುಗಳನ್ನು ಒಟ್ಟು ಸೇರಿಸಿ ತನ್ನ ಕೈಯಲ್ಲಿ ಒಂದೇ ಕೋಲಾಗಿ ಮಾಡುವೆನೆಂದು ವಾಗ್ದಾನ ಮಾಡಿದ್ದನು. (ಯೆಹೆ. 37:19) ಆತನು ಅಭಿಷಿಕ್ತರನ್ನು ಮತ್ತು ‘ಬೇರೆ ಕುರಿಗಳನ್ನು’ ‘ಒಂದೇ ಹಿಂಡಾಗಿ’ ಮಾಡಿದ್ದಾನೆ. (ಯೋಹಾ. 10:16; ಜೆಕ. 8:23) ಇಂದು ಈ ಎರಡೂ ಗುಂಪಿನವರು ಐಕ್ಯವಾಗಿದ್ದಾರೆ, ಯೆಹೋವನ ಸೇವೆಯನ್ನು ಒಗ್ಗಟ್ಟಿನಿಂದ ಮಾಡುತ್ತಿದ್ದಾರೆ. ಅವರಿಗಿರುವುದು ಒಬ್ಬನೇ ರಾಜ, ಯೇಸು ಕ್ರಿಸ್ತ. ಯೆಹೆಜ್ಕೇಲನ ಪ್ರವಾದನೆಯಲ್ಲಿ ಆತನನ್ನು “ಸೇವಕನಾದ ದಾವೀದನು” ಎಂದು ಕರೆಯಲಾಗಿದೆ. (ಯೆಹೆ. 37:24, 25) ಪ್ರತಿ ವರ್ಷ ನಾವು ಯೇಸುವಿನ ಮರಣವನ್ನು ಸ್ಮರಿಸಲು ಸೇರಿಬರುವಾಗ ಯೆಹೆಜ್ಕೇಲನು ಮುಂತಿಳಿಸಿದ ಎರಡೂ ಗುಂಪಿನವರ ಐಕ್ಯತೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುತ್ತದೆ. ದೇವಜನರ ಮಧ್ಯೆ ಇರುವ ಐಕ್ಯತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ನಮ್ಮಲ್ಲಿ ಪ್ರತಿಯೊಬ್ಬರು ಏನು ಮಾಡಬಹುದು?
ಐಕ್ಯತೆಯನ್ನು ಹೆಚ್ಚಿಸಲು ನಾವು ಏನು ಮಾಡಬಹುದು?
10. ದೇವಜನರ ಮಧ್ಯೆ ಐಕ್ಯತೆಯನ್ನು ಹೆಚ್ಚಿಸಲು ನಾವು ಏನು ಮಾಡಬಹುದು?
10 ದೇವಜನರ ಮಧ್ಯೆ ಐಕ್ಯತೆಯನ್ನು ಹೆಚ್ಚಿಸಲು ನಾವು ನಾಲ್ಕು ವಿಷಯಗಳನ್ನು ಮಾಡಬೇಕು. ಅದರಲ್ಲಿ ಮೊದಲನೇದು, ನಾವು ದೀನತೆ ತೋರಿಸಬೇಕು. ತನ್ನ ಶಿಷ್ಯರು ದೀನರಾಗಿರಬೇಕೆಂದು ಯೇಸು ಭೂಮಿಯಲ್ಲಿದ್ದಾಗ ಹೇಳಿದನು. (ಮತ್ತಾ. 23:12) ಲೋಕದಲ್ಲಿರುವ ಜನರು ಹೆಚ್ಚಾಗಿ ತಾವು ಬೇರೆಯವರಿಗಿಂತ ಶ್ರೇಷ್ಠರು ಎಂದು ನೆನಸುತ್ತಾರೆ. ಆದರೆ ನಮ್ಮಲ್ಲಿ ದೀನತೆ ಇದ್ದರೆ, ಸಭೆಯಲ್ಲಿ ಮುಂದಾಳತ್ವ ವಹಿಸುವ ಸಹೋದರರನ್ನು ಗೌರವಿಸುತ್ತೇವೆ ಮತ್ತು ಅವರು ಕೊಡುವ ನಿರ್ದೇಶನವನ್ನು ಪಾಲಿಸುತ್ತೇವೆ. ನಾವು ಹೀಗೆ ಮಾಡಿದರೆ ಮಾತ್ರ ಸಭೆಯಲ್ಲಿ ಐಕ್ಯತೆ ಇರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ನಾವು ದೀನರಾಗಿದ್ದರೆ ಯೆಹೋವನ ಮನಸ್ಸಿಗೆ ಸಂತೋಷವಾಗುತ್ತದೆ. ಏಕೆಂದರೆ ಆತನು “ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.
11. ಸ್ಮರಣೆಯ ಸಮಯದಲ್ಲಿ ಉಪಯೋಗಿಸಲಾಗುವ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ಬಗ್ಗೆ ಯೋಚಿಸುವುದರಿಂದ ಹೇಗೆ ಐಕ್ಯತೆ ಹೆಚ್ಚಿಸಲು ಸಾಧ್ಯವಾಗುತ್ತದೆ?
11 ಎರಡನೇದಾಗಿ, ಸ್ಮರಣೆಯ ಸಮಯದಲ್ಲಿ ಉಪಯೋಗಿಸಲಾಗುವ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತದೆ ಎಂದು ಯೋಚಿಸಬೇಕು. ಇದನ್ನು ಸ್ಮರಣೆಗೆ ಮುಂಚೆ ಮತ್ತು ಮುಖ್ಯವಾಗಿ ಸ್ಮರಣೆಯ ದಿನದಂದು ಮಾಡಬೇಕು. (1 ಕೊರಿಂ. 11:23-25) ಹುಳಿಯಿಲ್ಲದ ರೊಟ್ಟಿ ಯೇಸು ಯಜ್ಞವಾಗಿ ಕೊಟ್ಟ ಪರಿಪೂರ್ಣ ದೇಹವನ್ನು ಸೂಚಿಸುತ್ತದೆ. ಕೆಂಪು ದ್ರಾಕ್ಷಾಮದ್ಯ ಆತನ ರಕ್ತವನ್ನು ಸೂಚಿಸುತ್ತದೆ. ಈ ಮೂಲಭೂತ ಸತ್ಯಗಳನ್ನು ತಿಳಿದಿದ್ದರೆ ಮಾತ್ರ ಸಾಕಾಗುವುದಿಲ್ಲ. ಯೇಸು ಕೊಟ್ಟ ವಿಮೋಚನಾ ಮೌಲ್ಯವು ಇಬ್ಬರು ತೋರಿಸಿದ ಅಸಾಧಾರಣ ಪ್ರೀತಿಯ ನಿದರ್ಶನ ಅನ್ನುವುದನ್ನು ನಾವು ಮರೆಯಬಾರದು. ಯೆಹೋವನು ತನ್ನ ಮಗನನ್ನು ನಮಗೋಸ್ಕರ ಕೊಟ್ಟನು ಮತ್ತು ಯೇಸು ನಮಗೋಸ್ಕರ ತನ್ನ ಜೀವವನ್ನೇ ಕೊಟ್ಟನು. ಅವರು ತೋರಿಸಿದ ಪ್ರೀತಿಯ ಬಗ್ಗೆ ಯೋಚಿಸುವಾಗ ನಾವೂ ಅವರನ್ನು ಪ್ರೀತಿಸಲು ಪ್ರೋತ್ಸಾಹ ಸಿಗುತ್ತದೆ. ನಮ್ಮೆಲ್ಲರಿಗೂ ಯೆಹೋವನ ಮೇಲಿರುವ ಪ್ರೀತಿಯು ಐಕ್ಯವಾಗಿರಲು ನಮಗೆ ಸಹಾಯ ಮಾಡುತ್ತದೆ.
12. ಯೇಸು ಹೇಳಿದ ಕಥೆಯಲ್ಲಿ, ನಾವು ಬೇರೆಯವರನ್ನು ಕ್ಷಮಿಸಲೇಬೇಕೆಂದು ಯೆಹೋವನು ಬಯಸುತ್ತಾನೆ ಅನ್ನುವುದನ್ನು ಹೇಗೆ ಸ್ಪಷ್ಟಪಡಿಸಿದನು?
12 ಮೂರನೇದಾಗಿ, ನಾವು ಬೇರೆಯವರನ್ನು ಉದಾರವಾಗಿ ಕ್ಷಮಿಸಬೇಕು. ಹೀಗೆ ಮಾಡುವಾಗ, ಯೆಹೋವನು ಯೇಸುವಿನ ಯಜ್ಞದ ಮೂಲಕ ನಮ್ಮ ಪಾಪಗಳನ್ನು ಕ್ಷಮಿಸಲು ಸಾಧ್ಯವಾಗಿರುವುದಕ್ಕೆ ನಾವು ಕೃತಜ್ಞರು ಎಂದು ತೋರಿಸಿಕೊಡುತ್ತೇವೆ. ಕ್ಷಮಿಸುವುದು ಯಾಕೆ ಮುಖ್ಯ ಎಂದು ತೋರಿಸಲು ಒಬ್ಬ ರಾಜ ಮತ್ತು ಅವನ ಆಳುಗಳ ಕುರಿತು ಯೇಸು ಒಂದು ಕಥೆಯನ್ನು ಹೇಳಿದನು. ದಯವಿಟ್ಟು ಮತ್ತಾಯ 18:23-34ನ್ನು ಓದಿ ಮತ್ತು ಹೀಗೆ ಕೇಳಿಕೊಳ್ಳಿ: ‘ಯೇಸು ಹೇಳಿದಂತೆ ಮಾಡಲು ನನಗೆ ಮನಸ್ಸಾಗುತ್ತದಾ? ನಾನು ನನ್ನ ಸಹೋದರ ಸಹೋದರಿಯರನ್ನು ಅರ್ಥಮಾಡಿಕೊಂಡು ತಾಳ್ಮೆಯಿಂದ ನಡಕೊಳ್ಳುತ್ತೇನಾ? ನನಗೆ ಬೇಜಾರಾಗುವ ತರ ನಡಕೊಂಡ ವ್ಯಕ್ತಿಗಳನ್ನು ನಾನು ಕ್ಷಮಿಸಲು ಸಿದ್ಧನಿದ್ದೇನಾ?’ ಕೆಲವು ಪಾಪಗಳು ತುಂಬ ಗಂಭೀರವಾಗಿರುತ್ತವೆ ಅನ್ನುವುದು ನಿಜಾನೇ. ಕೆಲವನ್ನಂತೂ ಅಪರಿಪೂರ್ಣ ಮಾನವರಾದ ನಮಗೆ ಕ್ಷಮಿಸಲು ತುಂಬ ಕಷ್ಟ ಆಗಬಹುದು. ಆದರೆ ನಾವು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ ಅನ್ನುವುದು ಯೇಸು ಹೇಳಿದ ಕಥೆಯಿಂದ ಗೊತ್ತಾಗುತ್ತದೆ. (ಮತ್ತಾಯ 18:35 ಓದಿ.) ನಮ್ಮ ಸಹೋದರರು ನಿಜವಾಗಲೂ ಪಶ್ಚಾತ್ತಾಪಪಡುವಾಗ ನಾವು ಕ್ಷಮಿಸದೆ ಹೋದರೆ ಯೆಹೋವನು ನಮ್ಮನ್ನು ಕ್ಷಮಿಸಲ್ಲ ಎಂದು ಯೇಸು ಇಲ್ಲಿ ಸ್ಪಷ್ಟಪಡಿಸುತ್ತಿದ್ದಾನೆ. ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯ. ನಮ್ಮ ಅಮೂಲ್ಯ ಐಕ್ಯತೆಯನ್ನು ಸಂರಕ್ಷಿಸಿ ಹೆಚ್ಚಿಸಲು ನಾವು ಯೇಸು ಹೇಳಿದಂತೆ ಬೇರೆಯವರನ್ನು ಕ್ಷಮಿಸಲೇಬೇಕು.
13. ನಾವು ಬೇರೆಯವರೊಂದಿಗೆ ಶಾಂತಿಯಿಂದ ಇರುವಾಗ ಹೇಗೆ ಐಕ್ಯತೆ ಹೆಚ್ಚಿಸಲು ಸಾಧ್ಯವಾಗುತ್ತದೆ?
13 ನಾವು ನಮ್ಮ ಸಹೋದರ ಸಹೋದರಿಯರನ್ನು ಕ್ಷಮಿಸುವಾಗ ಅವರೊಂದಿಗೆ ಶಾಂತಿ ಕಾಪಾಡಿಕೊಳ್ಳಲು ಆಗುತ್ತದೆ. ನಾವು ಐಕ್ಯವಾಗಿರಲು ಮತ್ತು ಶಾಂತಿ ಕಾಪಾಡಿಕೊಳ್ಳಲು ತುಂಬ ಪ್ರಯತ್ನ ಮಾಡಬೇಕೆಂದು ಅಪೊಸ್ತಲ ಪೌಲ ಹೇಳಿದನು. (ಎಫೆ. 4:3) ಆದ್ದರಿಂದ ಸ್ಮರಣೆ ಹತ್ತಿರವಾಗುತ್ತಿರುವಾಗ ಮತ್ತು ಮುಖ್ಯವಾಗಿ ಸ್ಮರಣೆ ನಡೆಯುವ ರಾತ್ರಿಯಂದು ನೀವು ಬೇರೆಯವರೊಂದಿಗೆ ಹೇಗೆ ನಡಕೊಳ್ಳುತ್ತೀರಿ ಅನ್ನುವುದರ ಬಗ್ಗೆ ಯೋಚಿಸಿ. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನಗೆ ಬೇಜಾರು ಮಾಡಿದ ವ್ಯಕ್ತಿಗಳ ಮೇಲೆ ನಾನು ಸಿಟ್ಟು ಮಾಡಿಕೊಂಡು ಇರುವುದಿಲ್ಲ ಎಂದು ನನ್ನ ಪರಿಚಯವಿರುವ ವ್ಯಕ್ತಿಗಳಿಗೆ ಗೊತ್ತಾ? ನಾನು ಶಾಂತಿ ಕಾಪಾಡಿಕೊಳ್ಳಲು ಮತ್ತು ಐಕ್ಯವಾಗಿರಲು ತುಂಬ ಪ್ರಯತ್ನ ಮಾಡುತ್ತೇನೆ ಅನ್ನುವುದನ್ನು ಜನರು ನೋಡಲಿಕ್ಕಾಗುತ್ತದಾ?’ ಈ ಪ್ರಶ್ನೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು.
14. ‘ನಾವು ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳುತ್ತೇವೆ’ ಎಂದು ಹೇಗೆ ತೋರಿಸಬಹುದು?
14 ನಾಲ್ಕನೇದಾಗಿ, ಪ್ರೀತಿ ತೋರಿಸುವುದರಲ್ಲಿ ನಾವು ಯೆಹೋವನನ್ನು ಅನುಕರಿಸಬೇಕು. (1 ಯೋಹಾ. 4:8) ‘ನಾನು ನನ್ನ ಸಹೋದರರನ್ನು ಪ್ರೀತಿಸಬೇಕು ಎಂಬ ಆಜ್ಞೆ ಇದೆ ಪ್ರೀತಿಸುತ್ತೇನೆ, ಆದರೆ ಅವರನ್ನು ಕಂಡರೆ ನನಗೆ ಇಷ್ಟವಾಗಲ್ಲ’ ಎಂದು ನಾವು ಯಾವತ್ತೂ ಹೇಳಬಾರದು. ಇಂಥ ಮನೋಭಾವವಿದ್ದರೆ ನಾವು ಪೌಲನ ಸಲಹೆಯನ್ನು ಪಾಲಿಸುತ್ತಿಲ್ಲ ಎಂದಾಗುತ್ತದೆ. ಪೌಲನು, “ನೀವು . . . ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ” ಎಂದು ಹೇಳಿದ್ದಾನೆ. (ಎಫೆ. 4:2) ‘ನೀವು ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ’ ಎಂದು ಮಾತ್ರ ಹೇಳದೆ ಅದನ್ನು ‘ಪ್ರೀತಿಯಿಂದ’ ಮಾಡಿ ಎಂದಿದ್ದಾನೆ ಪೌಲ. ಇದರಲ್ಲಿರುವ ವ್ಯತ್ಯಾಸವನ್ನು ಗಮನಿಸಿದಿರಾ? ಸಭೆಯಲ್ಲಿ ಬೇರೆ ಬೇರೆ ರೀತಿಯ ಜನರು ಇರುತ್ತಾರೆ. ಯೆಹೋವನು ಅವರನ್ನೆಲ್ಲ ತನ್ನ ಕಡೆಗೆ ಸೆಳೆದಿದ್ದಾನೆ. (ಯೋಹಾ. 6:44) ಅವರಲ್ಲಿ ನೋಡಿರುವ ಅನೇಕ ಒಳ್ಳೇ ವಿಷಯಗಳಿಗಾಗಿ ಯೆಹೋವನು ಅವರನ್ನು ಪ್ರೀತಿಸಿ ತನ್ನ ಕಡೆಗೆ ಸೆಳೆದಿರಬೇಕು. ನಮ್ಮ ಸಹೋದರ ಸಹೋದರಿಯರನ್ನು ಪ್ರೀತಿಸಲು ಯೆಹೋವನಿಗೆ ಎಷ್ಟೋ ಕಾರಣಗಳಿರುವಾಗ ನಾವು ಅವರನ್ನು ಪ್ರೀತಿಸಲು ಒಂದು ಕಾರಣನೂ ಇಲ್ಲದೆ ಹೋಗುತ್ತದಾ? ನಾವು ಅವರನ್ನು ಹೇಗೆ ಪ್ರೀತಿಸಬೇಕೆಂದು ಯೆಹೋವನು ಬಯಸುತ್ತಾನೋ ಆ ರೀತಿಯಲ್ಲಿ ಪ್ರೀತಿಸಲು ನಾವು ಸಿದ್ಧವಾಗಿರಬೇಕು.—1 ಯೋಹಾ. 4:20, 21.
ಕೊನೆಯ ಸ್ಮರಣೆ ಯಾವಾಗ?
15. ಸ್ಮರಣೆಯನ್ನು ಕೊನೆಯ ಸಾರಿ ಮಾಡುವ ಸಮಯ ಬರುತ್ತದೆ ಎಂದು ಹೇಗೆ ಹೇಳಬಹುದು?
15 ನಾವು ಕ್ರಿಸ್ತನ ಮರಣದ ಸ್ಮರಣೆಯನ್ನು ಕೊನೆಯ ಸಾರಿ ಮಾಡುವ ದಿನ ಬಂದೇ ಬರುತ್ತದೆ. ಅದು ನಮಗೆ ಹೇಗೆ ಗೊತ್ತು? ಅಭಿಷಿಕ್ತ ಕ್ರೈಸ್ತರು ಪ್ರತಿ ವರ್ಷ ಕ್ರಿಸ್ತನ ಮರಣದ ಸ್ಮರಣೆಯನ್ನು ಮಾಡುವಾಗ “ಕರ್ತನ ಮರಣವನ್ನು ಅವನು ಬರುವ ತನಕ ಪ್ರಕಟಪಡಿಸುತ್ತಾ” ಇರುತ್ತಾರೆ ಎಂದು ಪೌಲನು ಅವರಿಗೆ ಹೇಳಿದನು. (1 ಕೊರಿಂ. 11:26) ಯೇಸು ಅಂತ್ಯದ ಬಗ್ಗೆ ಮಾತಾಡುವಾಗಲೂ ತನ್ನ ‘ಬರೋಣದ’ ಬಗ್ಗೆ ಹೇಳಿದನು. ಅತಿ ಹತ್ತಿರದಲ್ಲಿರುವ ಮಹಾ ಸಂಕಟದ ಬಗ್ಗೆ ಮಾತಾಡುತ್ತಾ ಆತನು ಹೇಳಿದ್ದು: “ಮನುಷ್ಯಕುಮಾರನ ಸೂಚನೆಯು ಆಕಾಶದಲ್ಲಿ ಕಾಣಿಸಿಕೊಳ್ಳುವುದು; ಭೂಮಿಯ ಎಲ್ಲ ಕುಲಗಳವರು ಗೋಳಾಡುತ್ತಾ ಎದೆಬಡಿದುಕೊಳ್ಳುವರು ಮತ್ತು ಮನುಷ್ಯಕುಮಾರನು ಆಕಾಶದ ಮೇಘಗಳ ಮೇಲೆ ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಬರುವುದನ್ನು ಕಾಣುವರು. ಅವನು ತುತೂರಿಯ ಮಹಾ ಶಬ್ದದೊಂದಿಗೆ ತನ್ನ ದೂತರನ್ನು ಕಳುಹಿಸುವನು ಮತ್ತು ಅವರು ಅವನು ಆಯ್ದುಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು.” (ಮತ್ತಾ. 24:29-31) ‘ಆಯ್ದುಕೊಂಡವರನ್ನು ಒಟ್ಟುಗೂಡಿಸುವ’ ಕೆಲಸ ಭೂಮಿಯ ಮೇಲೆ ಉಳಿದಿರುವ ಎಲ್ಲ ಅಭಿಷಿಕ್ತರನ್ನು ಯೇಸು ಸ್ವರ್ಗಕ್ಕೆ ಕೊಂಡೊಯ್ಯುವಾಗ ನಡೆಯುವುದು. ಇದು ಮಹಾ ಸಂಕಟ ಆರಂಭವಾದ ಮೇಲೆ ಮತ್ತು ಅರ್ಮಗೆದೋನ್ ಯುದ್ಧ ನಡೆಯುವುದಕ್ಕಿಂತ ಮುಂಚೆ ಆಗುವುದು. ಆ ಯುದ್ಧದಲ್ಲಿ ಯೇಸು ಮತ್ತು 1,44,000 ಮಂದಿ ಭೂಮಿಯ ರಾಜರ ವಿರುದ್ಧ ಹೋರಾಡಿ ಜಯಗಳಿಸುವರು. (ಪ್ರಕ. 17:12-14) ಯೇಸು ಅಭಿಷಿಕ್ತರನ್ನು ಒಟ್ಟುಗೂಡಿಸಲು ‘ಬರುವುದಕ್ಕೆ’ ಮುಂಚೆ ನಡೆಯುವ ಸ್ಮರಣೆಯೇ ಕೊನೆಯ ಸ್ಮರಣೆ.
16. ಈ ವರ್ಷ ಸ್ಮರಣೆಗೆ ಹಾಜರಾಗಲು ನೀವು ಯಾಕೆ ದೃಢತೀರ್ಮಾನ ಮಾಡಿದ್ದೀರಿ?
16 ಮಾರ್ಚ್ 31, 2018ರಂದು ಸ್ಮರಣೆಗೆ ಹಾಜರಾಗಲು ದೃಢತೀರ್ಮಾನ ಮಾಡಿ. ಯೆಹೋವನ ಜನರ ಮಧ್ಯೆ ಐಕ್ಯತೆ ಹೆಚ್ಚಿಸಲು ನೀವೇನು ಮಾಡಬೇಕೋ ಅದನ್ನು ಮಾಡಲು ಯೆಹೋವನ ಸಹಾಯಕ್ಕಾಗಿ ಕೇಳಿಕೊಳ್ಳಿ. (ಕೀರ್ತನೆ 133:1 ಓದಿ.) ಸ್ಮರಣೆಯನ್ನು ನಾವು ಕೊನೆಯ ಸಾರಿ ಮಾಡುವ ಸಮಯ ಬಂದೇ ಬರುತ್ತದೆ. ಆ ದಿನ ಬರುವ ತನಕ, ಪ್ರತಿ ವರ್ಷ ಸ್ಮರಣೆಯ ಸಮಯದಲ್ಲಿ ನಾವು ನೋಡುವ ರಮ್ಯವಾದ ಐಕ್ಯತೆ ತುಂಬ ಅಮೂಲ್ಯ ಎಂದು ತೋರಿಸೋಣ.