ದಯೆ ನಡೆನುಡಿ ಎರಡರಲ್ಲೂ ಇರಬೇಕಾದ ಗುಣ
ದಯೆಯಿಂದ ಯಾರಾದರೂ ನಮ್ಮ ಜೊತೆ ನಡಕೊಂಡರೆ ಎಷ್ಟು ಸಂತೋಷ ಆಗುತ್ತದೆ! ಒಬ್ಬರಿಗೆ ನಮ್ಮ ಮೇಲೆ ಪ್ರೀತಿ-ಕಾಳಜಿ ಇದೆ ಅಂತ ನಮಗೆ ಗೊತ್ತಾದಾಗ ಹೃದಯ ತುಂಬಿ ಬರುತ್ತದೆ. ಬೇರೆಯವರು ನಮಗೆ ದಯೆ ತೋರಿಸಬೇಕು ಅಂತ ನಮ್ಮಲ್ಲಿ ಪ್ರತಿಯೊಬ್ಬರೂ ಇಷ್ಟಪಡುತ್ತೇವೆ. ಇಂಥ ಒಳ್ಳೇ ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?
ನಮ್ಮಲ್ಲಿ ದಯೆ ಇರಬೇಕೆಂದರೆ ಬೇರೆಯವರಿಗೆ ಒಳ್ಳೇದು ಮಾಡುವ ಮನಸ್ಸಿರಬೇಕು. ನಮ್ಮ ಮಾತಲ್ಲಿ ಮತ್ತು ಕ್ರಿಯೆಯಲ್ಲಿ ಅದನ್ನು ತೋರಿಸಬೇಕು. ದಯೆ ಇರುವ ವ್ಯಕ್ತಿ ನಯ-ವಿನಯ ಇರುವ ತರ ನಾಟಕವಾಡಲ್ಲ. ಅವನಿಗೆ ಬೇರೆಯವರ ಮೇಲೆ ನಿಜವಾದ ಪ್ರೀತಿ ಇರುತ್ತದೆ. ಬೇರೆಯವರನ್ನು ಅರ್ಥಮಾಡಿಕೊಂಡು ಮಾತಾಡುತ್ತಾನೆ, ನಡಕೊಳ್ಳುತ್ತಾನೆ. ಇಂಥ ದಯೆ ಪವಿತ್ರಾತ್ಮದ ಫಲದ ಅಂಶವಾಗಿದೆ. ಹಾಗಾಗಿ ಇದನ್ನು ಕ್ರೈಸ್ತರು ಬೆಳೆಸಿಕೊಳ್ಳಬೇಕು ಎಂದು ಬೈಬಲ್ ಹೇಳುತ್ತದೆ. (ಗಲಾ. 5:22, 23) ಈ ಗುಣವನ್ನು ಯೆಹೋವ ಮತ್ತು ಆತನ ಮಗನಾದ ಯೇಸು ಹೇಗೆ ತೋರಿಸಿದ್ದಾರೆ ಅಂತ ನೋಡೋಣ. ನಂತರ ಅವರಂತೆ ನಾವು ಈ ಗುಣವನ್ನು ಹೇಗೆ ತೋರಿಸಬಹುದು ಅಂತ ಕಲಿಯೋಣ.
ಯೆಹೋವನು ಎಲ್ಲರಿಗೂ ದಯೆ ತೋರಿಸುತ್ತಾನೆ
ಯೆಹೋವನು ಎಲ್ಲರಿಗೂ ದಯೆ ತೋರಿಸುತ್ತಾನೆ. ಅದರಲ್ಲಿ ‘ಉಪಕಾರನೆನಸದವರೂ ಕೆಟ್ಟವರೂ’ ಇದ್ದಾರೆ. (ಲೂಕ 6:35) ಉದಾಹರಣೆಗೆ, “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾ. 5:45) ಯೆಹೋವನು ತಮ್ಮ ಸೃಷ್ಟಿಕರ್ತ ಅಂತ ಒಪ್ಪಿಕೊಳ್ಳದ ಜನರಿಗೂ ಬದುಕಲು ಮತ್ತು ಸಂತೋಷವಾಗಿರಲು ಬೇಕಾದದ್ದನ್ನು ಆತನು ದಯೆಯಿಂದ ಕೊಡುತ್ತಾನೆ.
ಆದಾಮ-ಹವ್ವರಿಗೆ ಯೆಹೋವನು ಮಾಡಿದ ವಿಷಯವೇ ಆತನು ದಯಾಮಯಿ ಅನ್ನುವುದಕ್ಕೆ ಒಂದು ದೊಡ್ಡ ಉದಾಹರಣೆ. ಆದಾಮ-ಹವ್ವ ಪಾಪಮಾಡಿದ ಸ್ವಲ್ಪ ಸಮಯದಲ್ಲೇ “ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.” ಆದರೆ ಏದೆನ್ ತೋಟದ ಹೊರಗೆ ಅವರು ಜೀವನ ಮಾಡಬೇಕೆಂದರೆ ಆ ಬಟ್ಟೆ ಸೂಕ್ತವಲ್ಲ ಅಂತ ಯೆಹೋವನಿಗೆ ಗೊತ್ತಿತ್ತು. ಆತನ ಶಾಪದಿಂದಾಗಿ ಏದೆನಿನ ಹೊರಗೆ “ಮುಳ್ಳುಗಿಡಗಳೂ ಕಳೆಗಳೂ” ತುಂಬಿಕೊಂಡಿದ್ದವು. ಹಾಗಾಗಿ ಯೆಹೋವನು ಅವರಿಗೆ ಉದ್ದವಾದ “ಚರ್ಮದ ಅಂಗಿಗಳನ್ನು ಮಾಡಿ” ಕೊಟ್ಟನು.—ಆದಿ. 3:7, 17, 18, 21.
ಯೆಹೋವನು “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ” ದಯೆ ತೋರಿಸುವುದಾದರೂ ಮುಖ್ಯವಾಗಿ ತನ್ನ ನಂಬಿಗಸ್ತ ಸೇವಕರಿಗೆ ದಯೆ ತೋರಿಸಲು ಇಷ್ಟಪಡುತ್ತಾನೆ. ಉದಾಹರಣೆಗೆ ಪ್ರವಾದಿ ಜೆಕರ್ಯನ ಕಾಲದಲ್ಲಿ ಯೆರೂಸಲೇಮ್ ದೇವಾಲಯವನ್ನು ಕಟ್ಟುವ ಕೆಲಸ ನಿಂತುಹೋಗಿತ್ತು. ಇದನ್ನು ನೋಡಿ ಒಬ್ಬ ದೇವದೂತನಿಗೆ ತುಂಬ ಬೇಜಾರಾಗಿತ್ತು. ಅವನು ತನ್ನ ಚಿಂತೆಯನ್ನು ಹೇಳಿಕೊಳ್ಳುವಾಗ ಯೆಹೋವನು ಕೇಳಿಸಿಕೊಂಡನು ಮತ್ತು “ಕರುಣೆಯ ಒಳ್ಳೆಯ ಮಾತುಗಳಿಂದ” ಸಮಾಧಾನ ಮಾಡಿದನು. (ಜೆಕ. 1:12, 13) ಪ್ರವಾದಿ ಎಲೀಯನ ಜೊತೆ ಕೂಡ ಯೆಹೋವನು ದಯೆಯಿಂದ ನಡಕೊಂಡನು. ಒಮ್ಮೆ ಅವನು ಎಷ್ಟು ಕುಗ್ಗಿಹೋಗಿದ್ದನೆಂದರೆ “ನನ್ನ ಪ್ರಾಣವನ್ನು ತೆಗೆದುಬಿಡು” ಅಂತ ದೇವರನ್ನು ಕೇಳಿಕೊಂಡನು. ಯೆಹೋವನು ಎಲೀಯನ ಭಾವನೆಗಳನ್ನು ಅರ್ಥಮಾಡಿಕೊಂಡು ಒಬ್ಬ ದೇವದೂತನನ್ನು ಕಳುಹಿಸಿ ಬಲಪಡಿಸಿದನು. ಅಷ್ಟೇ ಅಲ್ಲ, ಅವನ ತರಾನೇ ಇನ್ನೂ ಸಾವಿರಾರು ಜನರು ನಿಷ್ಠೆಯಿಂದ ಇದ್ದಾರೆ ಅಂತ ಹೇಳಿ ಧೈರ್ಯ ಕೊಟ್ಟನು. ದಯೆ ತುಂಬಿದ ಮಾತು ಮತ್ತು ಬೇಕಾದ ಸಹಾಯ ಪಡಕೊಂಡ ಮೇಲೆ ಎಲೀಯನಿಗೆ ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಬಲ ಸಿಕ್ಕಿತು. (1 ಅರ. 19:1-18) ದೇವರ ಸೇವಕರಲ್ಲಿ ಯೆಹೋವನಂತೆ ದಯೆ ತೋರಿಸಿದ ವ್ಯಕ್ತಿ ಯಾರು?
ಯೇಸು ಅತ್ಯುತ್ತಮ ಮಾದರಿ
ಯೇಸು ಭೂಮಿಯಲ್ಲಿ ಜನರ ಜೊತೆ ಒರಟಾಗಿ ಅಹಂಕಾರದಿಂದ ನಡಕೊಳ್ಳಲಿಲ್ಲ, ದಯೆಯಿಂದ ನಡಕೊಂಡನು. ಅವರನ್ನು ಅರ್ಥಮಾಡಿಕೊಂಡನು. ಆತನು ಹೇಳಿದ್ದು: “ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. . . . ಏಕೆಂದರೆ ನನ್ನ ನೊಗವು ಮೃದು” ಆಗಿದೆ. (ಮತ್ತಾ. 11:28-30) ಹಾಗಾಗಿ ಜನರು ಯೇಸು ಎಲ್ಲೇ ಹೋದರೂ ಆತನ ಹಿಂದೆನೇ ಹೋಗುತ್ತಿದ್ದರು. ಜನರನ್ನು ನೋಡಿ “ಕನಿಕರಪಟ್ಟು” ಊಟ ಕೊಟ್ಟನು, ರೋಗಿಗಳನ್ನು ವಾಸಿಮಾಡಿದನು ಮತ್ತು ತನ್ನ ತಂದೆಯ ಬಗ್ಗೆ “ಅನೇಕ ವಿಷಯಗಳನ್ನು” ಕಲಿಸಿದನು.—ಮಾರ್ಕ 6:34; ಮತ್ತಾ. 14:14; 15:32-38.
ಯೇಸು ಜನರನ್ನು ಅರ್ಥಮಾಡಿಕೊಂಡು ವಿವೇಚನೆಯಿಂದ ದಯೆಯಿಂದ ನಡಕೊಳ್ಳುತ್ತಿದ್ದನು. ಆತನಿಂದ ಜನರು ಕೇಳುತ್ತಿದ್ದ ವಿಷಯಗಳನ್ನು ಎಷ್ಟೇ ಕಷ್ಟವಾದರೂ ಮಾಡುತ್ತಿದ್ದನು. ತನ್ನ ಹತ್ತಿರ ಬರುತ್ತಿದ್ದ ಎಲ್ಲರನ್ನೂ “ಆದರದಿಂದ” ಬರಮಾಡಿಕೊಳ್ಳುತ್ತಿದ್ದನು. (ಲೂಕ 9:10, 11) ಉದಾಹರಣೆಗೆ, ಧರ್ಮಶಾಸ್ತ್ರದ ಪ್ರಕಾರ ಅಶುದ್ಧಳಾಗಿದ್ದ ಸ್ತ್ರೀ ಆತನ ಬಟ್ಟೆಯನ್ನು ಮುಟ್ಟಿದಾಗ ಅವಳನ್ನು ಬೈಯಲಿಲ್ಲ. ಅವಳು ತನ್ನ ಕಾಯಿಲೆ ವಾಸಿಯಾಗುತ್ತದೆ ಅನ್ನುವ ನಂಬಿಕೆಯಿಂದ ಯೇಸುವಿನ ಮೇಲಂಗಿಯನ್ನು ಮುಟ್ಟಿದ್ದಳು. (ಯಾಜ. 15:25-28) ಅವಳು 12 ವರ್ಷಗಳಿಂದ ನರಳುತ್ತಿದ್ದಾಳೆ ಅಂತ ಅರ್ಥಮಾಡಿಕೊಂಡು “ಮಗಳೇ, ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ. ಸಮಾಧಾನದಿಂದ ಹೋಗು; ನಿನ್ನನ್ನು ಕಾಡುತ್ತಿದ್ದ ವಿಷಮ ರೋಗದಿಂದ ವಿಮುಕ್ತಳಾಗಿ ಆರೋಗ್ಯದಿಂದಿರು” ಎಂದು ಹೇಳಿದನು. (ಮಾರ್ಕ 5:25-34) ಹೇಗೆ ದಯೆ ತೋರಿಸಬೇಕು ಎನ್ನುವುದಕ್ಕೆ ಇದು ಎಂಥ ಉತ್ತಮ ಉದಾಹರಣೆ!
ದಯೆ ತೋರಿಸಬೇಕೆಂದರೆ ಒಳ್ಳೇದನ್ನು ಮಾಡಬೇಕು
ಒಬ್ಬರ ಮೇಲೆ ನಿಜವಾಗಲೂ ದಯೆ ಇದ್ದರೆ ಅದನ್ನು ಕ್ರಿಯೆಯಲ್ಲಿ ತೋರಿಸುತ್ತೇವೆ ಅನ್ನುವುದು ಮೇಲಿನ ಉದಾಹರಣೆಯಿಂದ ಗೊತ್ತಾಗುತ್ತದೆ. ಯೇಸು ಇದನ್ನು ಒಳ್ಳೇ ನೆರೆಯವನಾದ ಸಮಾರ್ಯದವನ ಕಥೆಯಲ್ಲೂ ತಿಳಿಸಿದನು. ಸಮಾರ್ಯದವರು ಮತ್ತು ಯೆಹೂದ್ಯರ ಮಧ್ಯೆ ದ್ವೇಷ ಇತ್ತು. ಆದರೂ ಒಬ್ಬ ಸಮಾರ್ಯದವನು ಗಾಯಗೊಂಡಿದ್ದ ಒಬ್ಬ ಯೆಹೂದ್ಯನನ್ನು ನೋಡಿದಾಗ ಅಯ್ಯೋ ಪಾಪ ಅಂತನಿಸಿತು. ಕಳ್ಳರು ಆ ಯೆಹೂದ್ಯನನ್ನು ತುಂಬ ಹೊಡೆದು ಅರೆಜೀವ ಮಾಡಿ ಅವನ ಹತ್ತಿರ ಇದ್ದದ್ದನ್ನೆಲ್ಲ ಕಿತ್ತುಕೊಂಡು ಹೋಗಿದ್ದರು. ಅವನಿಗೆ ಸಹಾಯ ಮಾಡಲು ಸಮಾರ್ಯದವನು ಮುಂದೆ ಬಂದನು. ಅವನಿಗಾದ ಗಾಯಗಳನ್ನು ಕಟ್ಟಿ ಒಂದು ವಸತಿಗೃಹಕ್ಕೆ ಕರಕೊಂಡು ಹೋದನು. ಅವನ ಆರೈಕೆ ಮಾಡುವಂತೆ ಹೇಳಿ ವಸತಿಗೃಹದವನಿಗೆ ಹಣಕೊಟ್ಟನು. ಇನ್ನೂ ಹೆಚ್ಚು ಹಣ ಖರ್ಚಾದರೆ ಅದನ್ನೂ ಕೊಡುತ್ತೇನೆ ಅಂತ ಹೇಳಿದನು.—ಲೂಕ 10:29-37.
ದಯೆಯನ್ನು ಹೆಚ್ಚಾಗಿ ಕ್ರಿಯೆಯಲ್ಲಿ ತೋರಿಸುತ್ತೇವಾದರೂ ಅದನ್ನು ಹುರಿದುಂಬಿಸುವ ಮಾತುಗಳಲ್ಲೂ ತೋರಿಸಬಹುದು. ಆದ್ದರಿಂದ “ಕಳವಳವು ಮನಸ್ಸನ್ನು ಕುಗ್ಗಿಸುವದು. ಕನಿಕರದ ಮಾತು ಅದನ್ನು ಹಿಗ್ಗಿಸುವದು” ಅಂತ ಬೈಬಲ್ ಹೇಳುತ್ತದೆ. (ಜ್ಞಾನೋ. 12:25) ನಾವು ದಯೆಯಿಂದ ಮತ್ತು ಒಳ್ಳೇತನದಿಂದ ಮಾತಾಡಿದರೆ ಬೇರೆಯವರ ಮನಸ್ಸು ಅರಳುತ್ತದೆ.a ನಾವು ಅವರ ಬಗ್ಗೆ ಕಾಳಜಿ ವಹಿಸುತ್ತೇವೆ ಅಂತ ಅವರಿಗೆ ಗೊತ್ತಾಗುತ್ತದೆ. ಆಗ ಅವರಿಗೆ ಪ್ರೋತ್ಸಾಹ ಸಿಗುತ್ತದೆ ಮತ್ತು ಕಷ್ಟಗಳನ್ನು ತಾಳಿಕೊಳ್ಳಲು ಬೇಕಾದ ಬಲ ಸಿಗುತ್ತದೆ.—ಜ್ಞಾನೋ. 16:24.
ದಯೆಯನ್ನು ಬೆಳೆಸಿಕೊಳ್ಳುವುದು ಹೇಗೆ?
ಎಲ್ಲ ಮನುಷ್ಯರು “ದೇವಸ್ವರೂಪದಲ್ಲಿ” ಸೃಷ್ಟಿ ಆಗಿರುವುದರಿಂದ ದಯೆ ಎನ್ನುವ ಗುಣವನ್ನು ಬೆಳೆಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿದೆ. (ಆದಿ. 1:27) ಉದಾಹರಣೆಗೆ, ಅಪೊಸ್ತಲ ಪೌಲನನ್ನು ರೋಮಿಗೆ ಕರಕೊಂಡು ಹೋಗುವ ಜವಾಬ್ದಾರಿ ರೋಮನ್ ಸೇನಾಧಿಕಾರಿಯಾದ ಯೂಲ್ಯನಿಗೆ ಕೊಡಲಾಗಿತ್ತು. ಇವರು ಪ್ರಯಾಣ ಮಾಡುತ್ತಿರುವಾಗ ಆ ಅಧಿಕಾರಿ ಪೌಲನಿಗೆ “ಮಾನವ ದಯೆ” ತೋರಿಸಿದನು. ಅಷ್ಟೇ ಅಲ್ಲ ಪೌಲನು ಸೀದೋನಿನಲ್ಲಿ “ತನ್ನ ಸ್ನೇಹಿತರ ಬಳಿಗೆ ಹೋಗಿ ಅವರಿಂದ ಪರಾಮರಿಕೆಯನ್ನು ಪಡೆಯುವಂತೆ ಅನುಮತಿಸಿದನು.” (ಅ. ಕಾ. 27:3) ಸ್ವಲ್ಪ ಸಮಯದ ನಂತರ ಸಮುದ್ರದಲ್ಲಿ ಹಡಗು ಒಡೆದುಹೋದಾಗ ಮಾಲ್ಟ ದ್ವೀಪದ ಜನರು ಪೌಲ ಮತ್ತು ಅವನ ಜೊತೆಯಲ್ಲಿ ಇದ್ದವರಿಗೆ “ಅಸಾಧಾರಣವಾದ ಮಾನವ ದಯೆಯನ್ನು ತೋರಿಸಿದರು.” ಬೆಂಕಿ ಹೊತ್ತಿಸಿ ಚಳಿಕಾಯಿಸಿಕೊಳ್ಳಲು ಸಹಾಯ ಮಾಡಿದರು. (ಅ. ಕಾ. 28:1, 2) ಅವರು ದಯೆಯಿಂದ ಮಾಡಿದ ಸಹಾಯವನ್ನು ಮೆಚ್ಚಲೇಬೇಕು. ಆದರೆ ಇಂಥ ಒಳ್ಳೇ ಕೆಲಸಗಳನ್ನು ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಮಾಡುವುದರಿಂದ ನಾವು ದಯೆ ಇರುವ ವ್ಯಕ್ತಿ ಆಗಿಬಿಡುವುದಿಲ್ಲ.
ದೇವರ ಮನಸ್ಸನ್ನು ಸಂತೋಷಪಡಿಸಬೇಕಾದರೆ ನಾವು ಯಾವಾಗಲೂ ದಯೆ ತೋರಿಸಬೇಕು. ಆ ಗುಣ ನಮ್ಮ ನರನಾಡಿಗಳಲ್ಲಿ ಬೆರೆತುಹೋಗಿರಬೇಕು. ಆದ್ದರಿಂದಲೇ ಯೆಹೋವನು ನಮಗೆ ದಯೆಯನ್ನು “ಧರಿಸಿಕೊಳ್ಳಿರಿ” ಅಂತ ಹೇಳಿದ್ದಾನೆ. (ಕೊಲೊ. 3:12) ಆದರೆ ಬೇರೆಯವರ ಜೊತೆ ಯಾವಾಗಲೂ ದಯೆಯಿಂದ ನಡಕೊಳ್ಳಲು ನಮಗೆ ಕಷ್ಟವಾಗುತ್ತದೆ. ಯಾಕೆ? ನಾಚಿಕೆ ಸ್ವಭಾವದಿಂದಾಗಿ, ಆತ್ಮವಿಶ್ವಾಸದ ಕೊರತೆಯಿಂದಾಗಿ, ವಿರೋಧದಿಂದಾಗಿ ಅಥವಾ ನಮ್ಮಲ್ಲಿ ಇನ್ನೂ ಉಳಿದಿರುವ ಅಲ್ಪಸ್ವಲ್ಪ ಸ್ವಾರ್ಥದಿಂದಾಗಿ ದಯೆ ತೋರಿಸಲು ನಮಗೆ ಕಷ್ಟವಾಗುತ್ತದೆ. ಆದರೂ ಪವಿತ್ರಾತ್ಮದ ಸಹಾಯದಿಂದ ಮತ್ತು ಯೆಹೋವನನ್ನು ಅನುಕರಿಸುವುದರಿಂದ ದಯೆಯನ್ನು ಬೆಳೆಸಿಕೊಳ್ಳಲು ಸಾಧ್ಯ.—1 ಕೊರಿಂ. 2:12.
ನಾವು ಯಾರಿಗೆ, ಯಾವಾಗ, ಹೇಗೆ ದಯೆ ತೋರಿಸಬೇಕು ಅಂತ ಹೇಗೆ ತಿಳುಕೊಳ್ಳಬಹುದು? ಈ ಪ್ರಶ್ನೆಗಳು ನಮಗೆ ಸಹಾಯ ಮಾಡುತ್ತವೆ: ‘ನಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಲ್ಲದೆ ಬೇರೆ ಯಾರಿಗೆ ನಾನು ಇತ್ತೀಚಿಗೆ ದಯೆ ತೋರಿಸಿದೆ? ಯಾರಿಗಾದರೂ ಸಹಾಯ ಬೇಕಿರುವಾಗ ಅದಕ್ಕೆ ಕೂಡಲೇ ಗಮನ ಕೊಡುತ್ತೇನಾ? ಒಬ್ಬರು ತಮ್ಮ ಭಾವನೆಗಳನ್ನು, ಕಷ್ಟಗಳನ್ನು ಹೇಳಿಕೊಳ್ಳುವಾಗ ಅದನ್ನು ಬರೀ ಕೇಳಿಸಿಕೊಳ್ಳುತ್ತೇನಾ ಅಥವಾ ಅವರನ್ನು ಅರ್ಥಮಾಡಿಕೊಳ್ಳುತ್ತೇನಾ?’ ಇದರ ಬಗ್ಗೆ ಯೋಚಿಸಿದ ಮೇಲೆ ನಾವು ಕೆಲವು ಗುರಿಗಳನ್ನು ಇಡಬಹುದು. ಉದಾಹರಣೆಗೆ, ನಮ್ಮ ಸುತ್ತಮುತ್ತ ಇರುವ ಜನರ ಬಗ್ಗೆ ಹೆಚ್ಚು ತಿಳುಕೊಳ್ಳುವ ಗುರಿ ಇಡಬಹುದು. ಮುಖ್ಯವಾಗಿ ನಮ್ಮ ಸಭೆಯಲ್ಲಿರುವವರ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕು. ಆಗ ಯಾರಿಗೆ ಯಾವಾಗ ಸಹಾಯ ಬೇಕು ಅಂತ ನಮಗೆ ಗೊತ್ತಾಗುತ್ತದೆ. ಆಮೇಲೆ ಆ ಸಹಾಯವನ್ನು ಮಾಡಲು ಪ್ರಯತ್ನಿಸಬೇಕು. ಹೀಗೆ ಅವರ ಜಾಗದಲ್ಲಿ ನಾವು ಇದ್ದಿದ್ದರೆ ಬೇರೆಯವರು ನಮಗೇನು ಮಾಡಬೇಕು ಅಂತ ಇಷ್ಟಪಡುತ್ತಿದ್ದೆವೋ ಅದನ್ನೇ ನಾವು ಅವರಿಗೆ ಮಾಡುತ್ತೇವೆ. (ಮತ್ತಾ. 7:12) ದಯೆಯನ್ನು ಬೆಳೆಸಿಕೊಳ್ಳಲು ನಾವು ಮಾಡುತ್ತಿರುವ ಪ್ರಯತ್ನವನ್ನು ಆಶೀರ್ವದಿಸುವಂತೆ ಯೆಹೋವನನ್ನು ಕೇಳಿಕೊಂಡರೆ ಆತನು ಖಂಡಿತ ಸಹಾಯ ಮಾಡುತ್ತಾನೆ.—ಲೂಕ 11:13.
ದಯೆ ದಾರಿ ತೆರೆಯುತ್ತದೆ
ಪೌಲನು ತನ್ನನ್ನು ದೇವರ ಶುಶ್ರೂಷಕನಾಗಿ ಗುರುತಿಸಿದ ಗುಣಗಳ ಬಗ್ಗೆ ಹೇಳುವಾಗ ತನ್ನಲ್ಲಿದ್ದ “ದಯೆ” ಬಗ್ಗೆ ಕೂಡ ಹೇಳಿದನು. (2 ಕೊರಿಂ. 6:3-6) ಆತನಿಗೆ ಜನರ ಮೇಲೆ ನಿಜವಾದ ಆಸಕ್ತಿ ಇತ್ತು. ಅದನ್ನು ನಡೆನುಡಿಯಲ್ಲಿ ತೋರಿಸಿದನು. ಇದರಿಂದ ಜನರಿಗೆ ಆತನೆಂದರೆ ತುಂಬ ಇಷ್ಟ ಆಗುತ್ತಿತ್ತು. (ಅ. ಕಾ. 28:30, 31) ನಮ್ಮಲ್ಲೂ ದಯೆ ಇದ್ದರೆ ಜನರು ಸತ್ಯಕ್ಕೆ ಬರಲು ಮನಸ್ಸು ಮಾಡುತ್ತಾರೆ. ಎಲ್ಲರಿಗೂ ದಯೆ ತೋರಿಸಬೇಕು. ನಮ್ಮನ್ನು ವಿರೋಧಿಸುವವರ ಜೊತೆನೂ ದಯೆಯಿಂದ ನಡಕೊಂಡಾಗ ಅವರಲ್ಲಿರುವ ಕೋಪ ತಣ್ಣಗಾಗುತ್ತದೆ. (ರೋಮ. 12:20) ಮುಂದೆ ಯಾವತ್ತಾದರೂ ಅವರು ಸತ್ಯ ಕಲಿತರೂ ಕಲಿಯಬಹುದು.
ಪರದೈಸಲ್ಲಿ ತುಂಬ ತುಂಬ ಜನರು ಪುನರುತ್ಥಾನವಾಗಿ ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಮೊದಲ ಸಲ ನಿಜವಾದ ದಯೆ ಅಂದರೇನು ಅಂತ ಅನುಭವಿಸಲಿಕ್ಕಿದ್ದಾರೆ. ಇದನ್ನು ನೋಡಿ ಅವರೂ ಬೇರೆಯವರಿಗೆ ದಯೆ ತೋರಿಸುತ್ತಾರೆ. ಯಾರು ದಯೆ ತೋರಿಸುವುದಿಲ್ಲವೋ, ಬೇರೆಯವರಿಗೆ ಸಹಾಯ ಮಾಡುವುದಿಲ್ಲವೋ ಅಂಥವರಿಗೆ ದೇವರ ರಾಜ್ಯದಲ್ಲಿ ಶಾಶ್ವತವಾಗಿ ಇರುವ ಅವಕಾಶ ಸಿಗಲ್ಲ. ಬೇರೆಯವರನ್ನು ಪ್ರೀತಿ-ದಯೆಯಿಂದ ನೋಡುವವರಿಗೆ ಮಾತ್ರ ದೇವರು ನಿತ್ಯಜೀವ ಕೊಡುತ್ತಾನೆ. (ಕೀರ್ತ. 37:9-11) ಪರದೈಸಲ್ಲಿ ಎಷ್ಟು ಶಾಂತಿ, ನೆಮ್ಮದಿ ಇರುತ್ತೆ ಅಲ್ವಾ! ಆ ಪರದೈಸ್ ಬರುವ ವರೆಗೆ ದಯೆ ತೋರಿಸುವುದರಿಂದ ನಾವು ಹೇಗೆ ಪ್ರಯೋಜನ ಪಡಕೊಳ್ಳಬಹುದು?
ದಯೆ ತೋರಿಸಿ ಪ್ರಯೋಜನ ಪಡೆಯಿರಿ
“ಪರೋಪಕಾರವು ತನಗೂ ಉಪಕಾರ” ಅಂತ ಬೈಬಲ್ ಹೇಳುತ್ತದೆ. (ಜ್ಞಾನೋ. 11:17) ಜನರು ದಯೆ ತೋರಿಸುವವರನ್ನು ಇಷ್ಟಪಡುತ್ತಾರೆ, ಅವರಿಗೂ ದಯೆ ತೋರಿಸುತ್ತಾರೆ. ಅದಕ್ಕೇ ಯೇಸು “ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು” ಅಂತ ಹೇಳಿದನು. (ಲೂಕ 6:38) ದಯೆ ತೋರಿಸುವವನಿಗೆ ಬೇರೆಯವರು ಬೇಗ ಸ್ನೇಹಿತರಾಗುತ್ತಾರೆ ಮತ್ತು ಇಂಥ ವ್ಯಕ್ತಿ ಒಳ್ಳೇ ಸ್ನೇಹಿತರನ್ನು ಉಳಿಸಿಕೊಳ್ಳುತ್ತಾನೆ.
ಅಪೊಸ್ತಲ ಪೌಲನು ಎಫೆಸ ಸಭೆಯವರಿಗೆ, “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ . . . ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ” ಎಂದು ಹೇಳಿದನು. (ಎಫೆ. 4:32) ಸಭೆಯಲ್ಲಿ ಪ್ರತಿಯೊಬ್ಬರೂ ದಯೆಯಿಂದ ನಡಕೊಳ್ಳುತ್ತಾ, ಒಬ್ಬರಿಗೊಬ್ಬರು ಸಹಾಯ ಮಾಡುತ್ತಾ ಇದ್ದರೆ ಆ ಸಭೆಗೆ ತುಂಬ ಪ್ರಯೋಜನ ಸಿಗುತ್ತದೆ. ಯಾರೂ ಒರಟಾಗಿ ಮಾತಾಡಲ್ಲ, ಚುಚ್ಚಿ ಮಾತಾಡಲ್ಲ, ವ್ಯಂಗ್ಯವಾಗಿ ಮಾತಾಡಲ್ಲ, ಬೇರೆಯವರ ಹೆಸರನ್ನು ಕೆಡಿಸುವಂಥ ಹರಟೆ ಹೊಡೆಯಲ್ಲ. ಬದಲಿಗೆ ತಮ್ಮ ಮಾತನ್ನು ಬೇರೆಯವರಿಗೆ ಒಳ್ಳೇದಾಗಲು ಉಪಯೋಗಿಸುತ್ತಾರೆ. (ಜ್ಞಾನೋ. 12:18) ಆಗ ಇಡೀ ಸಭೆ ಬಲವಾಗಿರುತ್ತದೆ, ಸಭೆಯವರೆಲ್ಲರೂ ಸಂತೋಷವಾಗಿ ಯೆಹೋವನನ್ನು ಆರಾಧಿಸುತ್ತಾರೆ.
ದಯೆ ನಿಜಕ್ಕೂ ನಡೆನುಡಿ ಎರಡರಲ್ಲೂ ಇರಬೇಕಾದ ಗುಣ. ನಾವು ದಯೆಯಿಂದ ನಡಕೊಂಡರೆ ಯೆಹೋವನ ಈ ಸೊಗಸಾದ ಗುಣವನ್ನು ತೋರಿಸುತ್ತೇವೆ ಅಂತ ಅರ್ಥ. (ಎಫೆ. 5:1) ದಯೆ ತೋರಿಸಿದರೆ ಸಭೆಯನ್ನು ಬಲಪಡಿಸಬಹುದು ಮತ್ತು ಜನರನ್ನು ಸತ್ಯಾರಾಧನೆಗೆ ಸೆಳೆಯಬಹುದು. ದಯೆ ತೋರಿಸುವುದರಲ್ಲಿ ನಮ್ಮದು ಯಾವಾಗಲೂ ಎತ್ತಿದ ಕೈಯಾಗಿರಲಿ!
a ಪವಿತ್ರಾತ್ಮದಿಂದ ಉಂಟಾಗುವ ಫಲದ ಒಂದು ಅಂಶವಾದ ಒಳ್ಳೇತನದ ಬಗ್ಗೆ ಈ ಸರಣಿಯ ಇನ್ನೊಂದು ಲೇಖನದಲ್ಲಿ ನೋಡಲಿದ್ದೇವೆ.