ತನ್ನಲ್ಲಿ ಭರವಸೆಯಿಡುವವರಿಗೆ ಯೆಹೋವನು ಸಹಾಯಮಾಡುತ್ತಾನೆ
1 ಅನೇಕ ಜನರು ಹಣ, ಅಧಿಕಾರ, ಮತ್ತು ಮಾನವ ಸಾಮರ್ಥ್ಯವನ್ನು ಯಶಸ್ಸಿಗೆ ಕೀಲಿ ಕೈಯಾಗಿ ಪರಿಗಣಿಸುತ್ತಾರೆ. (ಕೀರ್ತ. 12:4; 33:16, 17; 49:6) ಆದರೂ, ಯೆಹೋವನಿಗೆ ಭಯಪಡುವ ಮತ್ತು ಆತನಲ್ಲಿ ಭರವಸೆಯಿಡುವ ಜನರಿಗೆ ಆತನು “ಸಹಾಯಕನೂ ಗುರಾಣಿಯೂ” ಆಗಿದ್ದಾನೆ ಎಂಬ ಬೈಬಲ್ ಆಶ್ವಾಸನೆಯಿದೆ. (ಕೀರ್ತ. 115:11) ಯೆಹೋವನಲ್ಲಿ ಭರವಸೆಯನ್ನು ತೋರಿಸುವ ಅಗತ್ಯವಿರುವ ಎರಡು ಕ್ಷೇತ್ರಗಳನ್ನು ನಾವೀಗ ಪರಿಗಣಿಸೋಣ.
2 ಕ್ರೈಸ್ತ ಶುಶ್ರೂಷಕರೋಪಾದಿ: ನಾವು ಸಭೆಯಲ್ಲಿ ನೇಮಕಗಳನ್ನು ನಿರ್ವಹಿಸುವಾಗೆಲ್ಲಾ ಅಥವಾ ಕ್ಷೇತ್ರ ಸೇವೆಯಲ್ಲಿ ಬೋಧಿಸುವಾಗೆಲ್ಲಾ, ನಮ್ಮ ದೇವರನ್ನು ಅವಲಂಬಿಸಬೇಕು. ಯೇಸುವಿನ ಉದಾಹರಣೆಯನ್ನು ಪರಿಗಣಿಸಿ. ಅವನು ದೇವಕುಮಾರನಾಗಿದ್ದರೂ, ತನ್ನ ಸ್ವಂತ ವಿವೇಕ ಅಥವಾ ಸಾಮರ್ಥ್ಯದಲ್ಲಿ ಅವನು ಭರವಸೆಯಿಡಲಿಲ್ಲ, ಬದಲಾಗಿ ತನ್ನ ಸ್ವರ್ಗೀಯ ತಂದೆಯನ್ನೇ ಸಂಪೂರ್ಣವಾಗಿ ಅವಲಂಬಿಸಿದನು. (ಯೋಹಾ. 12:49; 14:10) ಹಾಗಾದರೆ ನಾವೆಷ್ಟು ಅಧಿಕವಾಗಿ ನಮ್ಮ ಸ್ವರ್ಗೀಯ ತಂದೆಯನ್ನು ಅವಲಂಬಿಸುವ ಅಗತ್ಯವಿದೆ! (ಜ್ಞಾನೋ. 3:5-7) ಯೆಹೋವನ ಆಶೀರ್ವಾದದಿಂದ ಮಾತ್ರ, ನಮ್ಮ ದೀನ ಪ್ರಯತ್ನಗಳು ಆತನನ್ನು ಘನಪಡಿಸುವವು ಮತ್ತು ಇತರರಿಗೆ ಪ್ರಯೋಜನವನ್ನು ತರುವವು.—ಕೀರ್ತ. 127:1, 2.
3 ಯೆಹೋವನ ಮಾರ್ಗದರ್ಶನಕ್ಕಾಗಿ ಮತ್ತು ಆತನ ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸುವ ಮೂಲಕ ನಾವು ಆತನನ್ನು ಅವಲಂಬಿಸಿದ್ದೇವೆ ಎಂಬುದನ್ನು ತೋರಿಸುತ್ತೇವೆ. (ಕೀರ್ತ. 105:4; ಲೂಕ 11:13) ಇದರ ಜೊತೆಗೆ, ನಮ್ಮ ಬೋಧನೆಯನ್ನು ದೇವರ ವಾಕ್ಯವಾದ ಬೈಬಲಿನ ಮೇಲಾಧಾರಿಸುವ ಮೂಲಕ ಆತನಲ್ಲಿ ನಮಗಿರುವ ಭರವಸೆಯನ್ನು ನಾವು ತೋರಿಸುತ್ತೇವೆ. ಬೈಬಲಿನ ಸಂದೇಶವು ಜನರ ಹೃದಯಗಳ ಮೇಲೆ ಪ್ರಭಾವ ಬೀರುವ ಮತ್ತು ಅವರ ಜೀವಿತಗಳನ್ನು ರೂಪಾಂತರಿಸುವ ಶಕ್ತಿಯನ್ನು ಹೊಂದಿದೆ. (ಇಬ್ರಿ. 4:12) ‘ದೇವರಿಂದ ಬರುವ ಶಕ್ತಿಯ’ ಮೇಲೆ ಹೊಂದಿಕೊಂಡವರಾಗಿ ನಾವು ಶುಶ್ರೂಷೆಯನ್ನು ಪೂರೈಸುವಾಗ ಯೆಹೋವನು ಘನಪಡಿಸಲ್ಪಡುತ್ತಾನೆ.—1 ಪೇತ್ರ 4:11.
4 ಸಮಸ್ಯೆಗಳನ್ನು ನಿಭಾಯಿಸುವುದು: ಒತ್ತಡಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸುವಾಗಲೂ ನಾವು ಯೆಹೋವನಿಂದ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಅಗತ್ಯವಿದೆ. (ಕೀರ್ತ. 46:1) ಉದಾಹರಣೆಗೆ, ಒಂದು ಸಮ್ಮೇಳನಕ್ಕೆ ಹಾಜರಾಗಲಿಕ್ಕಾಗಿ ನಮಗೆ ರಜೆಯನ್ನು ಕೊಡಲು ಧಣಿಯು ಹಿಂಜರಿಯಬಹುದು, ಅಥವಾ ನಮ್ಮ ಕುಟುಂಬ ಜೀವನದಲ್ಲಿ ನಾವು ಒಂದು ಕಷ್ಟಕರ ಸನ್ನಿವೇಶವನ್ನು ಎದುರಿಸಬಹುದು. ಶ್ರದ್ಧಾಭಕ್ತಿಯಿಂದ ಆತನಿಗೆ ಪ್ರಾರ್ಥಿಸುವ ಮತ್ತು ತನ್ನ ವಾಕ್ಯ ಹಾಗೂ ಸಂಸ್ಥೆಯಿಂದ ಆತನು ಒದಗಿಸುವ ಮಾರ್ಗದರ್ಶನವನ್ನು ಅನ್ವಯಿಸುವ ಮೂಲಕ ನಾವು ಯೆಹೋವನಲ್ಲಿನ ನಮ್ಮ ಭರವಸೆಯನ್ನು ತೋರಿಸುತ್ತೇವೆ. (ಕೀರ್ತ. 62:8; 119:143, 173) ಹೀಗೆ ಮಾಡುವ ಮೂಲಕ, ಯೆಹೋವನ ಸೇವಕರು ತಮ್ಮ ಜೀವಿತಗಳಲ್ಲಿ ಆತನ ಸಹಾಯಹಸ್ತವನ್ನು ಅನುಭವಿಸುತ್ತಾರೆ.—ಕೀರ್ತ. 37:5; 118:13, 16.
5 ಯೆಹೋವನು ತಾನೇ ನಮಗೆ ಆಶ್ವಾಸನೆ ನೀಡುವುದು: “ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು.” (ಯೆರೆ. 17:7) ನಾವು ಮಾಡುವ ಸಕಲ ವಿಷಯಗಳಲ್ಲೂ ಆತನಲ್ಲಿನ ನಮ್ಮ ಭರವಸೆಯನ್ನು ತೋರಿಸೋಣ!—ಕೀರ್ತ. 146:5.