ಶುಶ್ರೂಷಾ ತರಬೇತಿ ಶಾಲೆ—ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭ
1 ಪ್ರವಾದಿಯಾದ ಯೆರೆಮೀಯನ ಮೂಲಕ ಯೆಹೋವನು ಮುಂತಿಳಿಸಿದ್ದು: “ನಾನು ಅವುಗಳ [ನನ್ನ ಜನರ] ಮೇಲೆ ಕುರುಬರನ್ನು ನೇಮಿಸುವೆನು, ಅವರು ಅವುಗಳನ್ನು ಮೇಯಿಸುವರು; ಅವು ಇನ್ನು ಭಯಪಡವು, ಬೆದರವು, ಅವುಗಳಲ್ಲಿ ಒಂದೂ ಕಡಿಮೆಯಾಗದು; ಇದು ಯೆಹೋವನ ನುಡಿ.” (ಯೆರೆ. 23:4) ಇಂತಹ ಒಂದು ಕುರಿಪಾಲನಾ ಕೆಲಸವು ಇಂದು ಎಲ್ಲಾ ಜನಾಂಗಗಳ ಜನರ ಮಧ್ಯೆ ಸಾಧಿಸಲ್ಪಡುತ್ತಾ ಇದೆ. ಇದನ್ನು ಸಾವಿರಾರು ಸಭಾ ಹಿರಿಯರು ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಇಬ್ಬನಿಯಂತೆ ಅಸಂಖ್ಯಾತರಾಗಿರುವ ಯುವ ಪುರುಷರ ಸಮೂಹವು ಯೆಹೋವನ ಸೇವೆಯಲ್ಲಿ ಒಳಗೂಡಲು ಸಂತೋಷದಿಂದ ತಾವಾಗಿಯೇ ಸೇರಿಕೊಂಡಿದ್ದಾರೆ. (ಕೀರ್ತ. 110:3) ಈ ದೀನ ಸಹೋದರರು ದೇವಜನರ ಸಭೆಗಳಿಗೆ ಎಂತಹ ಆಶೀರ್ವಾದವಾಗಿದ್ದಾರೆ! ಆಧ್ಯಾತ್ಮಿಕ ಒಟ್ಟುಗೂಡಿಸುವಿಕೆಯ ಕೆಲಸವು ಮುಂದುವರಿಯುತ್ತಿರುವಾಗ, ಹೆಚ್ಚಿನ ಅರ್ಹ ಪುರುಷರು ತಮ್ಮ ಸಹೋದರರ ಸೇವೆಮಾಡಲಿಕ್ಕೋಸ್ಕರ ತಮ್ಮನ್ನೇ ನೀಡಿಕೊಳ್ಳುವ ಅಗತ್ಯವಿದೆ.
2 ಶುಶ್ರೂಷಾ ತರಬೇತಿ ಶಾಲೆಯು ಹೆಚ್ಚಿನ ಜವಾಬ್ದಾರಿಗಳಿಗಾಗಿ ಅವಿವಾಹಿತ ಹಿರಿಯರನ್ನೂ ಶುಶ್ರೂಷಾ ಸೇವಕರನ್ನೂ ತರಬೇತುಗೊಳಿಸುವ ಉತ್ತಮ ಏರ್ಪಾಡಾಗಿದೆ. ಈ ಶಾಲೆಯು 1987ರಲ್ಲಿ ಆರಂಭಿಸಲ್ಪಟ್ಟಂದಿನಿಂದ, 999 ತರಗತಿಗಳಲ್ಲಿ ಸುಮಾರು 140 ದೇಶಗಳ 22,000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಈ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಈ ಸಹೋದರರಿಗೆ ಶಾಲೆಯು “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭ”ವನ್ನು ಒದಗಿಸಿದೆ.—1 ಕೊರಿಂ. 16:9.
3 ಶಾಲೆಯ ಉದ್ದೇಶ: ಸಂಘಟನೆಯಲ್ಲಿ ಎಲ್ಲಿ ಅಗತ್ಯವಿದೆಯೋ ಅಲ್ಲಿ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿಕ್ಕಾಗಿ ಅರ್ಹ ಪುರುಷರನ್ನು ತರಬೇತುಗೊಳಿಸಿ ಸನ್ನದ್ಧಗೊಳಿಸುವುದೇ ಶುಶ್ರೂಷಾ ತರಬೇತಿ ಶಾಲೆಯ ಗುರಿಯಾಗಿದೆ. ಸೌವಾರ್ತಿಕ ಕೆಲಸದಲ್ಲಿ ಮುಂದಾಳುತ್ವ ವಹಿಸಲು, ಮಂದೆಯನ್ನು ಪರಾಂಬರಿಸುವುದರಲ್ಲಿ ಭಾಗವಹಿಸಲು ಮತ್ತು ಸಭೆಯಲ್ಲಿ ಬೋಧಿಸಲು ಅವರಿಗಿರುವ ಸಾಮರ್ಥ್ಯಗಳನ್ನು ಶಾಲೆಯು ಉತ್ತಮಗೊಳಿಸುತ್ತದೆ. ಪದವೀಧರರಾದ ಮೇಲೆ, ಕೆಲವು ವಿದ್ಯಾರ್ಥಿಗಳನ್ನು ಅವರ ಸ್ವಂತ ದೇಶಗಳಲ್ಲಿ ಅಥವಾ ಹೊರದೇಶಗಳಲ್ಲಿ ವಿಶೇಷ ಪಯನೀಯರರನ್ನಾಗಿ ಅಥವಾ ಸಂಚರಣ ಮೇಲ್ವಿಚಾರಕರನ್ನಾಗಿ ನೇಮಿಸಲಾಗುತ್ತದೆ. ಇತರರನ್ನು, ಅವರ ಸ್ವಂತ ಸಭೆಗಳಲ್ಲಿ ಅಥವಾ ಅವರ ಬ್ರಾಂಚ್ ಕ್ಷೇತ್ರದಲ್ಲಿಯೇ ಹೆಚ್ಚಿನ ಅಗತ್ಯವಿರುವ ಮತ್ತೊಂದು ಸ್ಥಳದಲ್ಲಿ ಸೇವೆಸಲ್ಲಿಸುವಂತೆ ನೇಮಿಸಲಾಗುತ್ತದೆ.
4 ಎಂಟು ವಾರಗಳ ವ್ಯಾಸಂಗದ ಸಮಯದಲ್ಲಿ, ವಿದ್ಯಾರ್ಥಿಗಳು ಬೈಬಲಿನ ತೀವ್ರ ಅಧ್ಯಯನವನ್ನು ಮಾಡುತ್ತಾರೆ. ಅವರು ಅನೇಕಾನೇಕ ಬೈಬಲ್ ಬೋಧನೆಗಳನ್ನು ಜಾಗರೂಕವಾಗಿ ಪರಿಗಣಿಸುವುದರೊಂದಿಗೆ, ಕುರಿಪಾಲನಾ ಜವಾಬ್ದಾರಿಗಳ ಹಾಗೂ ಕ್ರೈಸ್ತ ಜೀವನರೀತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಬೇಕಾದ ಮಾರ್ಗದರ್ಶಕ ಸೂಚನೆಗಳ ಕುರಿತಾದ ವಿಷಯಗಳನ್ನೂ ಪರಿಶೀಲಿಸುತ್ತಾರೆ. ಶಾಸ್ತ್ರವಚನಗಳು ಆಡಳಿತಾತ್ಮಕ, ನ್ಯಾಯನಿರ್ಣಾಯಕ ಮತ್ತು ಸಂಘಟನಾತ್ಮಕ ವಿಚಾರಗಳ ಬಗ್ಗೆ ಏನನ್ನು ತಿಳಿಸುತ್ತವೆ ಎಂಬುದನ್ನೂ ಅವರು ಕಲಿಯುತ್ತಾರೆ. ಅವರು ಸಾರ್ವಜನಿಕ ಭಾಷಣ ನೀಡುವಿಕೆಯಲ್ಲಿ ವಿಶೇಷ ತರಬೇತಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ತಮ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ತ್ವರಿತಗೊಳಿಸುವಂತೆ ಅವರಿಗೆ ವೈಯಕ್ತಿಕ ನೆರವು ನೀಡಲ್ಪಡುತ್ತದೆ.
5 ಅರ್ಹತೆಗಳು: ಸ್ವಾಭಾವಿಕವಾಗಿಯೇ, ಈ ಶಾಲೆಗೆ ಹಾಜರಾಗಲಿಕ್ಕಾಗಿರುವ ಅರ್ಹತೆಗಳು ಕಟ್ಟುನಿಟ್ಟಿನದ್ದಾಗಿವೆ. ಅರ್ಜಿದಾರರು ಕಡಿಮೆಪಕ್ಷ ಎರಡು ವರ್ಷ ಎಡೆಬಿಡದೆ ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಿ ಸೇವೆಸಲ್ಲಿಸಿರಬೇಕು. ಎಲ್ಲರೂ ಅವಿವಾಹಿತರೂ 23ರಿಂದ 50 ರ ವಯೋಮಿತಿಯಿರುವವರೂ ಆಗಿರಬೇಕು. ಅರ್ಜಿದಾರರು ಇಂಗ್ಲಿಷ್ ಭಾಷೆಯನ್ನು ಬರೆಯಲು, ಓದಲು ಮತ್ತು ಸರಾಗವಾಗಿ ಮಾತನಾಡಲು ಬಲ್ಲವರಾಗಿರಬೇಕು ಮತ್ತು ಅವರು ವಿಶೇಷ ಆರೈಕೆ ಅಥವಾ ಆಹಾರಪಥ್ಯದ ಅಗತ್ಯವಿಲ್ಲದ ಉತ್ತಮ ಆರೋಗ್ಯವಿರುವ ವ್ಯಕ್ತಿಗಳಾಗಿರಬೇಕು. ರೆಗ್ಯುಲರ್ ಪಯನೀಯರ್ ಸೇವೆಯಲ್ಲಿರುವವರಿಗೆ ಆದ್ಯತೆಯು ನೀಡಲ್ಪಡುತ್ತದೆ.
6 ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗಲು ಅರ್ಜಿಯನ್ನು ಹಾಕುವವರು, ತಮ್ಮ ಸಹೋದರರಿಗಾಗಿರುವ ಪ್ರೀತಿ ಮತ್ತು ಅವರಿಗೆ ಸೇವೆ ಸಲ್ಲಿಸಬೇಕೆಂಬ ಇಚ್ಛೆಯಿಂದ ಪ್ರೇರೇಪಿಸಲ್ಪಟ್ಟವರಾಗಿರಬೇಕು, ಪ್ರಖ್ಯಾತಿ ಅಥವಾ ವಿಶೇಷ ಅಂತಸ್ತನ್ನು ಬಯಸುವ ವ್ಯಕ್ತಿಗಳಾಗಿರಬಾರದು. ಇಂತಹ ಉತ್ತಮ ತರಬೇತಿಯನ್ನು ಪಡೆದುಕೊಂಡ ತರುವಾಯ, ಇತರರ ಪ್ರಯೋಜನಾರ್ಥವಾಗಿ ಪದವೀಧರರು ತಾವು ಕಲಿತಂಥ ವಿಷಯಗಳನ್ನು ಅನ್ವಯಿಸುವಂತೆ ನಿರೀಕ್ಷಿಸಲಾಗುತ್ತದೆ.—ಲೂಕ 12:48.
7 ಪ್ರಯೋಜನಗಳು: ಎಂಟು ವಾರಗಳ ತೀವ್ರ ತರಬೇತಿಯ ಸಮಯದಲ್ಲಿ, ಪದವೀಧರರು “ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ” ಪೋಷಿಸಲ್ಪಟ್ಟಿರುವರು. (1 ತಿಮೊ. 4:6) ಇದು ತಮ್ಮ ನೇಮಿತ ಸಭೆಗಳಲ್ಲಿ ಮತ್ತು ಸರ್ಕಿಟ್ಗಳಲ್ಲಿರುವ ಇತರರಿಗೆ ನೆರವನ್ನು ನೀಡಿ ಉತ್ತೇಜಿಸಲಿಕ್ಕಾಗಿ ಅವರನ್ನು ಸನ್ನದ್ಧಗೊಳಿಸುತ್ತದೆ. ಶುಶ್ರೂಷಾ ತರಬೇತಿ ಶಾಲೆಯ ಪದವೀಧರರು ನೇಮಿಸಲ್ಪಟ್ಟಿರುವ ಅನೇಕ ಸ್ಥಳಗಳಲ್ಲಿ ಕ್ಷೇತ್ರ ಚಟುವಟಿಕೆಯು ಹೆಚ್ಚಾಗಿದೆ, ವಿಶೇಷವಾಗಿ ಯುವ ಜನರ ಮಧ್ಯೆ ಪಯನೀಯರ್ ಸೇವೆಯು ಪ್ರೋತ್ಸಾಹಿಸಲ್ಪಟ್ಟಿದೆ, ಮತ್ತು ದೇವರ ಜನರೊಂದಿಗೆ ಸಹವಾಸಿಸುತ್ತಿರುವ ಅನೇಕ ಹೊಸಬರಿಗೆ ಹೆಚ್ಚು ವೈಯಕ್ತಿಕ ಗಮನವು ನೀಡಲ್ಪಟ್ಟಿದೆ.
8 ನೀವು 23ರಿಂದ 50ರ ಮಧ್ಯದ ವಯಸ್ಸಿನ ಅವಿವಾಹಿತ ಹಿರಿಯರು ಅಥವಾ ಶುಶ್ರೂಷಾ ಸೇವಕರು ಆಗಿದ್ದೀರೋ? ಹಾಗಾದರೆ ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗುವುದರ ಬಗ್ಗೆ ಏಕೆ ಯೋಚಿಸಬಾರದು? ಯೆಹೋವನ ಸೇವೆಯಲ್ಲಿ ದೀರ್ಘಕಾಲದ ಗುರಿಗಳನ್ನು ಇಡಲು ಬಯಸುತ್ತಿರುವ ಒಬ್ಬ ಯುವ ಸಹೋದರರು ನೀವಾಗಿದ್ದೀರೋ? “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭ”ವನ್ನು ಸದುಪಯೋಗಿಸಿಕೊಳ್ಳಲು ಸಾಧ್ಯವಾಗುವಂತೆ ನೀವೇಕೆ ನಿಮ್ಮ ಜೀವನವನ್ನು ಸರಳವಾಗಿಯೂ ಅಪಕರ್ಷಣೆಗಳಿಂದ ಮುಕ್ತವಾದದ್ದಾಗಿಯೂ ಇಡಬಾರದು? ಇದು ನಿಮಗೆ ಬಹಳಷ್ಟು ಸಂತೋಷ ಮತ್ತು ಸಂತೃಪ್ತಿಯನ್ನು ತರುವುದು. ವಾಸ್ತವದಲ್ಲಿ, ಈ ಶುಶ್ರೂಷಾ ತರಬೇತಿ ಶಾಲೆಯು ಅದರ ಪದವೀಧರರಿಗೆ ಮಾತ್ರವಲ್ಲದೆ ಲೋಕವ್ಯಾಪಕವಾಗಿರುವ ದೇವಜನರ ಸಭೆಗಳಿಗೂ ಒಂದು ಆಶೀರ್ವಾದವಾಗಿ ಪರಿಣಮಿಸಿದೆ.
[ಪುಟ 6ರಲ್ಲಿರುವಚೌಕ]
ಅವರು ತರಬೇತಿಯಿಂದ ಪ್ರಯೋಜನವನ್ನು ಪಡೆದುಕೊಂಡ ವಿಧ
“ಈ ತರಬೇತಿಯು ನನ್ನ ಶುಶ್ರೂಷೆಯನ್ನು ಮತ್ತು ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ ಮಂದೆಯನ್ನು ವಿವೇಕದಿಂದ ಪರಿಪಾಲಿಸುವ ನನ್ನ ಸಾಮರ್ಥ್ಯವನ್ನು ನಿಜವಾಗಿಯೂ ಉತ್ತಮಗೊಳಿಸಿದೆ.”
“ಸಭೆಯಲ್ಲಿ ನನಗಿರುವ ವಿಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ವಿಷಯದಲ್ಲಿ ಶಾಲೆಯು ನನ್ನಲ್ಲಿ ಇನ್ನಷ್ಟು ದೃಢವಿಶ್ವಾಸವನ್ನು ತುಂಬಿಸಿದೆ.”
“ಇದು ದೈವಿಕ ಏರ್ಪಾಡುಗಳು ಮತ್ತು ದೇವರ ಸಂಘಟನೆಯ ಬಗ್ಗೆ ನನಗಿರುವ ದೃಷ್ಟಿಕೋನವನ್ನು ಸೇರಿಸಿ ನನ್ನ ಜೀವಿತದ ಹೆಚ್ಚಿನಾಂಶ ಪ್ರತಿಯೊಂದು ಕ್ಷೇತ್ರವನ್ನು ಬದಲಾಯಿಸಿದೆ.”
“ನಾನು ಪಡೆದುಕೊಂಡ ತರಬೇತಿಯು, ಎಲ್ಲಿ ಅಗತ್ಯವಿದೆಯೋ ಅಲ್ಲಿ ಸೇವೆಮಾಡಲು ನನ್ನನ್ನೇ ಲಭ್ಯಗೊಳಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಮನಗಾಣುವಂತೆ ನನಗೆ ಸಹಾಯಮಾಡಿದೆ.”