ಸ್ವಯಂಪ್ರೇರಣೆಯಿಂದ ಕೊಡುವುದು ಆಶೀರ್ವಾದಗಳನ್ನು ತರುವುದು
1. ದಾವೀದ ಮತ್ತು ನೆಹೆಮೀಯ ಸ್ವಯಂ ಸೇವೆಯ ಮನೋಭಾವವನ್ನು ಹೇಗೆ ಪ್ರದರ್ಶಿಸಿದರು?
1 ಗೊಲ್ಯಾತನು ಇಸ್ರಾಯೇಲ್ಯ ಸೈನ್ಯವನ್ನು ಹಿಯ್ಯಾಳಿಸಿದಾಗ ಯಾವೊಬ್ಬ ಸೈನಿಕನಾದರೂ ಮುಂದೆ ಬಂದು ಹೋರಾಡಬಹುದಿತ್ತು. ಆದರೆ ಯುದ್ಧದಲ್ಲಿ ಯಾವುದೇ ತರಬೇತಿಯನ್ನು ಹೊಂದಿಲ್ಲದಿದ್ದ ಒಬ್ಬ ಎಳೆಯ ಕುರುಬನು ಮುಂದೆ ಬಂದನು. (1 ಸಮು. 17:32) ಯೆಹೂದ್ಯ ಬಂದಿವಾಸಿಗಳು ಯೆರೂಸಲೇಮಿಗೆ ಹಿಂದಿರುಗಿದರೂ ಪಟ್ಟಣದ ಗೋಡೆಗಳ ಪುನರ್ನಿರ್ಮಾಣ ಕಾರ್ಯವನ್ನು ಪೂರ್ತಿಮಾಡಲಿಲ್ಲ. ಆಗ ಪಾರಸಿಯ ಅರಸನಿಗೆ ಪಾನಸೇವಕನಾಗಿದ್ದ ಒಬ್ಬನು ಮುಂದೆಬಂದನು. ಆ ಕೆಲಸವನ್ನು ಸಂಘಟಿಸಲು ಅವನು ಅರಮನೆಯಲ್ಲಿ ತನಗಿದ್ದ ಪ್ರತಿಷ್ಠೆಯ ಸ್ಥಾನವನ್ನು ಸ್ವಇಷ್ಟದಿಂದ ಬಿಟ್ಟು ಯೆರೂಸಲೇಮಿಗೆ ಹೋದನು. (ನೆಹೆ. 2:5) ಈ ಮನೋಭಾವಕ್ಕಾಗಿ ಯೆಹೋವನು ದಾವೀದ ಮತ್ತು ನೆಹೆಮೀಯ ಇವರಿಬ್ಬರನ್ನೂ ಆಶೀರ್ವದಿಸಿದನು.—1 ಸಮು. 17:45, 50; ನೆಹೆ. 6:15, 16.
2. ಕ್ರೈಸ್ತರು ಸ್ವಯಂಪ್ರೇರಿತ ಮನೋಭಾವವನ್ನು ಏಕೆ ತೋರಿಸಬೇಕು?
2 ಇಂದು ಲೋಕದಲ್ಲಿ ಸ್ವಯಂಪ್ರೇರಿತ ಮನೋಭಾವವು ತುಂಬ ವಿರಳ. ಈ “ಕಡೇ ದಿವಸಗಳಲ್ಲಿ” ಜನರು ದಿನನಿತ್ಯದ ಜೀವನದಲ್ಲಿ ತುಂಬ ಕಾರ್ಯಮಗ್ನರಾಗಿದ್ದಾರೆ. ಇನ್ನು ಅನೇಕರು “ಸ್ವಾರ್ಥಚಿಂತಕರೂ” ಆಗಿದ್ದಾರೆ. (2 ತಿಮೊ. 3:1, 2) ಹೀಗಿರುವುದರಿಂದ ಒಬ್ಬನು ವೈಯಕ್ತಿಕ ಆಸಕ್ತಿಗಳಲ್ಲಿ ಎಷ್ಟು ಮುಳುಗಿಹೋಗುತ್ತಾನೆಂದರೆ ಇತರರಿಗೆ ನೆರವಿನ ಅಗತ್ಯವಿರುವಾಗ ಸ್ವಇಷ್ಟದಿಂದ ಸೇವೆಸಲ್ಲಿಸುವುದನ್ನು ಸುಲಭವಾಗಿ ತಾತ್ಸಾರಮಾಡುತ್ತಾನೆ. ಆದರೆ ಕ್ರೈಸ್ತರಾದ ನಾವೊ ಯೇಸುಕ್ರಿಸ್ತನನ್ನು ಅನುಕರಿಸಲು ಬಯಸುತ್ತೇವೆ. ಅವನು ಇತರರಿಗೆ ನೆರವನ್ನು ನೀಡಲು ಸ್ವತಃ ಮುಂದೆ ಬಂದನು. (ಯೋಹಾ. 5:5-9; 13:12-15; 1 ಪೇತ್ರ 2:21) ನಾವು ಹೇಗೆ ಸ್ವಯಂಪ್ರೇರಿತ ಮನೋಭಾವವನ್ನು ತೋರಿಸಸಾಧ್ಯವಿದೆ? ಇದಕ್ಕಾಗಿ ಯಾವ ಆಶೀರ್ವಾದಗಳನ್ನು ಪಡೆದುಕೊಳ್ಳುವೆವು?
3. ಸ್ವಯಂಪ್ರೇರಿತ ಮನೋಭಾವವು ಸಭಾಕೂಟಗಳಿಗೆ ಹೇಗೆ ನೆರವಾಗುವುದು?
3 ನಮ್ಮ ಸಹೋದರರಿಗಾಗಿ: ಸಭಿಕರೊಂದಿಗೆ ಚರ್ಚಿಸಲಾಗುವಂಥ ಕೂಟದ ಭಾಗಗಳಲ್ಲಿ ಹೇಳಿಕೆಗಳನ್ನು ಕೊಡುವ ವಿಷಯದಲ್ಲೂ ಸ್ವಯಂಪ್ರೇರಣೆಯ ಮನೋಭಾವವನ್ನು ತೋರಿಸಸಾಧ್ಯವಿದೆ. ಈ ಮೂಲಕ ಇತರರಿಗೆ ‘ಆಧ್ಯಾತ್ಮಿಕ ಉಡುಗೊರೆಗಳನ್ನು’ ನೀಡಸಾಧ್ಯವಿದೆ. (ರೋಮಾ. 1:11, NW) ನಮ್ಮ ಹೇಳಿಕೆಗಳು ಯೆಹೋವನಿಗೆ ಗೌರವ ತರುತ್ತವೆ. ನಮ್ಮ ಹೃದಮನಗಳಲ್ಲಿ ಸತ್ಯವನ್ನು ನಾಟಿಸುತ್ತವೆ. ಮಾತ್ರವಲ್ಲದೆ, ಕೂಟಗಳಲ್ಲಿ ಹೆಚ್ಚೆಚ್ಚು ಆನಂದಿಸುವಂತೆ ಮಾಡುತ್ತವೆ. (ಕೀರ್ತ. 26:12) ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೇಮಿತ ಭಾಷಣಕರ್ತರಿಗೆ ಸಾಧ್ಯವಾಗದ ಪಕ್ಷದಲ್ಲಿ ಭಾಷಣ ನೀಡಲು ನಾವು ಮುಂದೆ ಬರುವ ಮೂಲಕ ಸ್ವಯಂಪ್ರೇರಿತ ಮನೋಭಾವವನ್ನು ತೋರಿಸಸಾಧ್ಯವಿದೆ. ಇದು ನಮ್ಮ ಬೋಧನಾ ಸಾಮರ್ಥ್ಯವನ್ನು ಉತ್ತಮಗೊಳಿಸಲು ಸಹಾಯಮಾಡುತ್ತದೆ.
4. ಇತರ ಯಾವ ವಿಧಗಳಲ್ಲಿ ನಾವು ಸ್ವಯಂಪ್ರೇರಿತ ಮನೋಭಾವವನ್ನು ತೋರಿಸಬಲ್ಲೆವು?
4 ಸಭೆಯ ಜವಾಬ್ದಾರಿಗಳನ್ನು ನಿರ್ವಹಿಸಲಿಕ್ಕಾಗಿ ಅರ್ಹತೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಮೂಲಕ ಸಹೋದರರು ಸ್ವಯಂಪ್ರೇರಿತ ಮನೋಭಾವವನ್ನು ಪ್ರದರ್ಶಿಸಸಾಧ್ಯವಿದೆ. (ಯೆಶಾ. 32:2; 1 ತಿಮೊ. 3:1) ಸಮ್ಮೇಳನಗಳು ಮತ್ತು ಅಧಿವೇಶನಗಳು ಅಚ್ಚುಕಟ್ಟಾಗಿ ನಡೆಯುವಂತೆ ಎಲ್ಲರೂ ವಿವಿಧ ಡಿಪಾರ್ಟ್ಮೆಂಟ್ಗಳಲ್ಲಿ ಸ್ವಯಂಸೇವಕರಾಗಿ ಕೆಲಸಮಾಡಸಾಧ್ಯವಿದೆ. ಸ್ವತಃ ಮುಂದೆ ಬಂದು ಸಂಚಾರ ಮೇಲ್ವಿಚಾರಕರೊಂದಿಗೆ ಶುಶ್ರೂಷೆಯಲ್ಲಿ ಭಾಗವಹಿಸುವಾಗ ಇಲ್ಲವೆ ಅವರಿಗೆ ಭೋಜನವನ್ನು ಏರ್ಪಡಿಸುವಾಗ ‘ಪರಸ್ಪರ ಪ್ರೋತ್ಸಾಹವನ್ನು’ ಪಡೆದುಕೊಳ್ಳುವೆವು. (ರೋಮಾ. 1:12, NIBV) ತಂದೆಯಿಲ್ಲದ ಮಕ್ಕಳಿಗೆ, ವಿಧವೆಯರಿಗೆ, ಅಸ್ವಸ್ಥರಿಗೆ, ಚಿಕ್ಕಮಕ್ಕಳಿರುವ ತಾಯಂದಿರಿಗೆ ಹೀಗೆ ಸಭೆಯಲ್ಲಿರುವ ಮತ್ತಿತ್ತರರಿಗೆ ಪ್ರಾಯೋಗಿಕ ಸಹಾಯವನ್ನು ನೀಡುವಾಗ ನಾವು ಆನಂದವನ್ನು ಪಡೆದುಕೊಳ್ಳುವೆವು. ಯೆಹೋವನ ಅನುಗ್ರಹಕ್ಕೂ ಪಾತ್ರರಾಗುವೆವು.—ಜ್ಞಾನೋ. 19:17; ಅ. ಕೃ. 20:35.
5. ರಾಜ್ಯ ಸಭಾಗೃಹಕ್ಕೆ ಸಂಬಂಧಿಸಿದ ಯಾವ ವಿಷಯಗಳಲ್ಲಿ ಸ್ವಯಂಸೇವಕರ ಅಗತ್ಯವಿದೆ?
5 ಸ್ವಯಂಪ್ರೇರಿತವಾಗಿ ನಮ್ಮ ಸಮಯ ಮತ್ತು ಪ್ರಯತ್ನವನ್ನು ಉಪಯೋಗಿಸುವ ಇನ್ನೊಂದು ವಿಧವು ರಾಜ್ಯ ಸಭಾಗೃಹದ ಸ್ವಚ್ಛಗೊಳಿಸುವಿಕೆ ಮತ್ತು ದುರಸ್ತಿಕಾರ್ಯಗಳಿಗೆ ಸಹಾಯಮಾಡುವುದಾಗಿದೆ. ಅನೇಕ ಜನರು ಸತ್ಯಕ್ಕೆ ಬರುತ್ತಿರುವುದರಿಂದ ರಾಜ್ಯ ಸಭಾಗೃಹದ ಬೇಡಿಕೆಯು ಹೆಚ್ಚಾಗುತ್ತಿದೆ. ಹಾಗೆಯೇ ಅದನ್ನು ಕಟ್ಟಲು ಸ್ವಯಂಸೇವಕರ ಬೇಡಿಕೆಯು ಹೆಚ್ಚುತ್ತಿದೆ. ಒಂದು ದಂಪತಿಯು ಸ್ಥಳಿಕ ರೀಜನಲ್ ಬಿಲ್ಡಿಂಗ್ ಕಮಿಟಿಗೆ ನೆರವು ನೀಡಲು ಮುಂದೆ ಬಂದರು. ಅವರಿಗೆ ಕಟ್ಟಡ ನಿರ್ಮಾಣಕಾರ್ಯದ ಬಗ್ಗೆ ಅಷ್ಟೆನೂ ಗೊತ್ತಿರಲಿಲ್ಲ. ಕ್ರಮೇಣ ಆ ದಂಪತಿಗಳಿಗೆ ತರಬೇತಿಯನ್ನು ಕೊಡಲಾಯಿತು. ಈಗ ಅವರು ಇಟ್ಟಿಗೆಗಳನ್ನು ಜೋಡಿಸಿ ಕಟ್ಟುವುದರಲ್ಲಿ ನೆರವು ನೀಡುತ್ತಾರೆ. ಪತ್ನಿಯು ಹೇಳಿದ್ದು: “ಇತರರೊಂದಿಗೆ ಕೈ-ಕೈಜೋಡಿಸಿ ಕೆಲಸ ಮಾಡುವುದು ಆಪ್ತ ಮಿತ್ರರಾಗುವಂತೆ ಮಾಡಿದೆ. ದಿನದ ಕೊನೆಯಲ್ಲಿ ನಾವು ಶಾರೀರಿಕವಾಗಿ ಧಣಿದಿರುತ್ತೇವೆ. ಆದರೆ ಆಧ್ಯಾತ್ಮಿಕವಾಗಿ ಚೈತನ್ಯಪಡೆದುಕೊಳ್ಳುತ್ತೇವೆ.”
6. ಶುಶ್ರೂಷೆಯು ನಾವು ಮಾಡಸಾಧ್ಯವಿರುವ ಅತಿ ಪ್ರಾಮುಖ್ಯ ಸ್ವಯಂಸೇವೆಯಾಗಿದೆ ಏಕೆ?
6 ಸಾರುವಿಕೆಯ ಮೂಲಕ: ಇಂದು ನಾವು ಸ್ವಯಂಸೇವಕರಾಗಿ ಕಾರ್ಯವೆಸಗಸಾಧ್ಯವಿರುವ ಒಂದು ಪ್ರಾಮುಖ್ಯ ಕೆಲಸವು ರಾಜ್ಯ ಸಾರುವಿಕೆಯಾಗಿದೆ. ಬೈಬಲಿನಲ್ಲಿರುವ ಸಲಹೆಗಳನ್ನು ಅರ್ಥಮಾಡಿಕೊಂಡು ಅದನ್ನು ಅನ್ವಯಿಸಿಕೊಳ್ಳುವಂತೆ ಜನರಿಗೆ ಸಹಾಯಮಾಡುವಾಗ ಅವರು ಜೀವನದಲ್ಲಿ ಒಂದು ಉದ್ದೇಶವನ್ನು ಕಂಡುಕೊಳ್ಳುವರು. ಮಾತ್ರವಲ್ಲದೆ ಕೆಟ್ಟ ಚಾಳಿಗಳನ್ನು ಬಿಟ್ಟುಬಿಡಲು ಶಕ್ತರಾಗುವರು. ಭವಿಷ್ಯಕ್ಕಾಗಿರುವ ಬೈಬಲಿನ ಉನ್ನತ ನಿರೀಕ್ಷೆಯನ್ನು ಅವರು ಕಲಿಯುವರು. ಹೀಗೆ ಬೈಬಲ್ ಶಿಕ್ಷಣವನ್ನು ಒದಗಿಸುವ ಮೂಲಕ ನಾವು ಹರ್ಷಕರವಾದ ಸ್ವಯಂಸೇವೆಯನ್ನು ಮಾಡುತ್ತೇವೆ. ಇದು ಅವರಿಗೆ ನಿತ್ಯಾಶೀರ್ವಾದಗಳನ್ನು ತರುತ್ತದೆ. (ಯೋಹಾ. 17:3; 1 ತಿಮೊ. 4:16) ಪ್ರಾಯಶಃ ಈ ಕೆಲಸದಲ್ಲಿ ನಾವು ಹೆಚ್ಚೆಚ್ಚಾಗಿ ಭಾಗವಹಿಸುವಂತೆ ನಮ್ಮ ಪರಿಸ್ಥಿತಿಗಳು ಅನುಮತಿಸಬಹುದು. ಆಕ್ಸಿಲಿಯರ್ ಅಥವಾ ರೆಗ್ಯುಲರ್ ಪಯನೀಯರ್ ಸೇವೆಯ ಮೂಲಕ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸುವ ಮೂಲಕ ಪರಭಾಷೆಯನ್ನು ಕಲಿಯುವ ಮೂಲಕ ನಾವಿದನ್ನು ಮಾಡಬಹುದಾಗಿದೆ.
7. ಸ್ವತಃ ಮುಂದೆ ಬಂದು ಕೊಟ್ಟುಕೊಳ್ಳುವುದು ವಿಶೇಷವಾಗಿ ಇಂದು ಪ್ರಾಮುಖ್ಯವಾಗಿದೆಯೇಕೆ?
7 ಮೆಸ್ಸೀಯನು ತನ್ನ ಆಳ್ವಿಕೆಯನ್ನು ಆರಂಭಿಸುವ ಸಮಯದಲ್ಲಿ ದೇವಜನರು “ತಾವಾಗಿಯೇ ಸೇರಿಕೊಳ್ಳುವರು” ಎಂದು ರಾಜ ದಾವೀದನು ಪ್ರವಾದಿಸಿದನು. (ಕೀರ್ತ. 110:3) ಅಂತಿಮ ಆಧ್ಯಾತ್ಮಿಕ ಕೊಯ್ಲನ್ನು ಯೆಹೋವನು ತ್ವರೆಪಡಿಸುತ್ತಿರುವುದರಿಂದ ಸ್ವತಃ ಮುಂದೆ ಬಂದು ಮಾಡುವುದಕ್ಕಾಗಿ ಬಹಳಷ್ಟು ಕೆಲಸಗಳಿವೆ. (ಯೆಶಾ. 60:22) ಆದುದರಿಂದ, “ಇಗೋ ನಾನಿದ್ದೇನೆ, ನನ್ನನ್ನು ಕಳುಹಿಸು” ಎಂದು ನೀವು ಈಗಾಗಲೇ ಹೇಳಿದ್ದೀರೋ? (ಯೆಶಾ. 6:8) ಸ್ವಯಂಪ್ರೇರಿತ ಮನೋಭಾವವನ್ನು ತೋರ್ಪಡಿಸುವ ಮೂಲಕ ನಾವು ಯೆಹೋವನನ್ನು ಸಂತೋಷಪಡಿಸುತ್ತೇವೆ ಮತ್ತು ಹೇರಳವಾದ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತೇವೆ ಎಂಬುದು ನಿಜ.