ಎಷ್ಟು ಸಮಯಾನಂತರ ಪುನರ್ಭೇಟಿ ಮಾಡಬೇಕು?
1. ಶಿಷ್ಯರನ್ನಾಗಿ ಮಾಡುವುದರಲ್ಲಿ ಏನು ಸೇರಿದೆ?
1 ಶಿಷ್ಯರನ್ನಾಗಿ ಮಾಡುವುದರಲ್ಲಿ ಯೆಹೋವನ ರಾಜ್ಯದ ಬಗ್ಗೆ ಕಲಿಯಲು ಮನಸ್ಸುಳ್ಳ ಪ್ರತಿಯೊಬ್ಬರನ್ನೂ ಪುನಃ ಭೇಟಿಮಾಡುವುದು ಸೇರಿದೆ. (ಮತ್ತಾ. 28:19, 20) ಪುನರ್ಭೇಟಿ ಮಾಡುವ ಸರಿಯಾದ ಸಮಯ ಹೆಚ್ಚಾಗಿ ನಮಗೂ ಆಸಕ್ತ ವ್ಯಕ್ತಿಗೂ ಸಿಗುವ ಸಮಯದ ಮೇಲೆ ಹೊಂದಿಕೊಂಡಿರುತ್ತದೆ. ಮೊದಲ ಭೇಟಿಯ ನಂತರ ನಾವೇಕೆ ಆದಷ್ಟು ಬೇಗ ಪುನರ್ಭೇಟಿ ಮಾಡಬೇಕು?
2, 3. ಆದಷ್ಟು ಬೇಗ ಪುನರ್ಭೇಟಿ ಮಾಡಲು ನಾವೇಕೆ ಪ್ರಯತ್ನಿಸಬೇಕು?
2 ಆದಷ್ಟು ಬೇಗ ಏಕೆ? ಆಸಕ್ತ ವ್ಯಕ್ತಿಗಳು ಸದ್ಯದ ‘ರಕ್ಷಣೆಯ ದಿನದ’ ಪ್ರಯೋಜನ ಪಡೆಯಲು ಇನ್ನೂ ಸಮಯವಿರುವಾಗಲೇ ನಾವು ‘ವಾಕ್ಯವನ್ನು ತುರ್ತಿನಿಂದ ಸಾರುವ’ ಆಜ್ಞೆಯನ್ನು ಪಾಲಿಸಬೇಕು. ಇದರಲ್ಲಿ, ಅವರ ಆಸಕ್ತಿ ಬೆಳೆಸಲು ಆದಷ್ಟು ಬೇಗ ಪುನರ್ಭೇಟಿ ಮಾಡುವುದು ಸೇರಿದೆ.—2 ಕೊರಿಂ. 6:1, 2; 2 ತಿಮೊ. 4:2.
3 ಆಸಕ್ತ ವ್ಯಕ್ತಿಯ ಹೃದಯದಲ್ಲಿ ನಾವು ಬಿತ್ತುವ ರಾಜ್ಯದ ಬೀಜವನ್ನು ತೆಗೆದುಹಾಕಲು ಸೈತಾನನು ತುದಿಗಾಲಲ್ಲಿ ನಿಂತಿದ್ದಾನೆ. (ಮಾರ್ಕ 4:14, 15) ನಾವು ಅವರನ್ನು ಆದಷ್ಟು ಬೇಗ ಭೇಟಿಮಾಡಿದರೆ ಅವರ ಆಸಕ್ತಿಯನ್ನು ಯಾರಾದರೂ ನಂದಿಸಿಬಿಡುವ ಮುಂಚೆಯೇ ನಮ್ಮ ಹಿಂದಿನ ಚರ್ಚೆಯನ್ನು ಮುಂದುವರಿಸಲು ಸಾಧ್ಯವಾಗುವುದು.
4. ಪುನರ್ಭೇಟಿಗಾಗಿ ಮೊದಲ ಭೇಟಿಯಲ್ಲೇ ಹೇಗೆ ತಯಾರಿಮಾಡಬಹುದು?
4 ಸಮಯ ಗೊತ್ತುಮಾಡಿ: ಮನೆಯವನಿಗೆ ನಿಜವಾಗಿ ಆಸಕ್ತಿಯಿದೆ ಮತ್ತು ನಿಮಗೇನೂ ಸಮಸ್ಯೆಯಾಗಲಿಕ್ಕಿಲ್ಲವೆಂದು ಖಚಿತವಾದರೆ ಮೊದಲ ಭೇಟಿಯಲ್ಲೇ ಪುನರ್ಭೇಟಿಗಾಗಿ ಪಕ್ಕಾ ವ್ಯವಸ್ಥೆ ಮಾಡುವುದು ಒಳ್ಳೇದು. ಮುಂದಿನ ಭೇಟಿಯಲ್ಲಿ ಉತ್ತರಿಸಲಿಕ್ಕಾಗಿ ಒಂದು ಪ್ರಶ್ನೆಯನ್ನೂ ಕೇಳಿ. ಇವೆಲ್ಲವುಗಳನ್ನು ಬರೆದಿಡುವುದು ಪ್ರಾಮುಖ್ಯ. ಮರುದಿನವೇ ಅಥವಾ ಕೆಲ ದಿನಗಳಲ್ಲೇ ಅವರನ್ನು ಭೇಟಿಮಾಡಲು ನಿಮಗೆ ಸಾಧ್ಯವಿದ್ದರೆ ಅದಕ್ಕಾಗಿ ಅವರ ಒಪ್ಪಿಗೆ ಪಡೆಯಿರಿ. ಒಂದುವೇಳೆ ವಾರಾಂತ್ಯದಲ್ಲಿ ನೀವು ಭೇಟಿಮಾಡುವ ಆಸಕ್ತ ವ್ಯಕ್ತಿ ಉದ್ಯೋಗಸ್ಥನಾಗಿರುವಲ್ಲಿ ಅವನು ಮುಂದಿನ ವಾರಾಂತ್ಯದ ಭೇಟಿಗೆ ಒಪ್ಪಿಕೊಂಡಾನು. ಸಮಸ್ಯೆ ಉಂಟಾಗುವಂಥ ಟೆರಿಟೊರಿಗಳಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು, ಮನೆಯವನಿಗೆ ನಿಜವಾದ ಆಸಕ್ತಿಯಿದೆ ಎಂದು ಖಚಿತವಾದ ಬಳಿಕವೇ ಅಂದರೆ ಬಹುಶಃ ಎರಡನೇ ಇಲ್ಲವೆ ಮೂರನೇ ಭೇಟಿಯಲ್ಲಿ ನೀಡುವಂತೆ ಹಿರಿಯರು ಸಲಹೆಕೊಡಬಹುದು. ಇಂಥ ದಿನ ಬರುತ್ತೇನೆಂದು ಹೇಳಿದ ಮೇಲೆ ಕೊಟ್ಟ ಮಾತಿಗೆ ತಪ್ಪಬೇಡಿ.—ಮತ್ತಾ. 5:37.
5. ಪುನರ್ಭೇಟಿ ಮಾಡಲು ತಡಮಾಡದಿರುವುದು ಶಿಷ್ಯರನ್ನಾಗಿ ಮಾಡಲು ಯೇಸು ಕೊಟ್ಟ ನೇಮಕವನ್ನು ಪೂರೈಸಲು ಹೇಗೆ ಸಹಾಯಕರ?
5 ಆಸಕ್ತರನ್ನು ಆದಷ್ಟು ಬೇಗ ಪುನರ್ಭೇಟಿಮಾಡಲು ನಮಗೆ ಸಕಾರಣಗಳಿವೆ. ‘ಉಳಿದಿರುವ ಸಮಯ ಕೊಂಚವೇ ಆಗಿರುವುದರಿಂದ’ ಆದಷ್ಟು ಬೇಗನೆ ಹಿಂದಿರುಗಲು ಸಮಯ ಗೊತ್ತುಮಾಡಿ ಪುನರ್ಭೇಟಿಮಾಡಿ. (1 ಕೊರಿಂ. 7:29) ಆಸಕ್ತ ವ್ಯಕ್ತಿಗಳನ್ನು ಪುನಃ ಭೇಟಿಮಾಡಲು ನಾವೆಷ್ಟು ಬೇಗ ಹೋಗುತ್ತೇವೋ ನಮ್ಮ ಪ್ರಯತ್ನಗಳೂ ಅಷ್ಟೇ ಹೆಚ್ಚು ಫಲಪ್ರದ!