ಒಡಂಬಡಿಸುವ ರೀತಿಯಲ್ಲಿ ಬೋಧಿಸಿರಿ
1 ಅಪೊಸ್ತಲ ಪೌಲನಂತೆ ಇಂದು ಪರಿಣಾಮಕಾರಿ ಶುಶ್ರೂಷಕರು ಗ್ರಹಿಸುವುದೇನೆಂದರೆ ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು’ ಪವಿತ್ರ ಗ್ರಂಥದಿಂದ ಬರೇ ಉಲ್ಲೇಖಿಸಿದರಷ್ಟೇ ಸಾಲದು. (2 ತಿಮೊ. 2:15) ನಾವು ಒಡಂಬಡಿಸುವ ರೀತಿಯಲ್ಲಿ ದೇವರ ವಾಕ್ಯವನ್ನು ಬೋಧಿಸಬೇಕು. ಹೇಗೆ?—ಅ. ಕಾ. 28:23.
2 ದೇವರ ವಾಕ್ಯವೇ ಮಾತಾಡಲಿ: ಮೊದಲಾಗಿ, ಜನರ ಗಮನವನ್ನು ಬೈಬಲಿನೆಡೆಗೆ ತಿರುಗಿಸಿರಿ. ಅದರಲ್ಲಿರುವ ದೈವಿಕ ವಿವೇಕಕ್ಕಾಗಿ ಗೌರವ ಮೂಡುವ ರೀತಿಯಲ್ಲಿ ಇದನ್ನು ಮಾಡಿರಿ. ದೇವರ ವಾಕ್ಯದಲ್ಲಿ ನಮಗಿರುವ ಭರವಸೆಯನ್ನು ವ್ಯಕ್ತಪಡಿಸಿದ ನಂತರ ವಚನವನ್ನು ಓದಿದರೆ, ಆಗ ಅದನ್ನು ಗಮನಕೊಟ್ಟು ಆಲಿಸುವಂತೆ ಮನೆಯವರಿಗೆ ಮನಸ್ಸಾಗಬಹುದು. (ಇಬ್ರಿ. 4:12) ಉದಾಹರಣೆಗೆ ನಾವು ಹೀಗೆ ಹೇಳಬಹುದು: “ಈ ವಿಷಯದ ಬಗ್ಗೆ ದೇವರ ದೃಷ್ಟಿಕೋನವೇನೆಂದು ತಿಳಿಯುವುದರಿಂದ ನನಗೆ ಪ್ರಯೋಜನವಾಗಿದೆ. ಆತನ ವಾಕ್ಯ ಏನು ಹೇಳುತ್ತದೆಂದು ನೋಡಿ.” ಸಾಧ್ಯವಿರುವಲ್ಲೆಲ್ಲ ಬೈಬಲಿನಿಂದಲೇ ಓದುವ ಮೂಲಕ ದೇವರ ವಾಕ್ಯ ಮಾತಾಡುವಂತೆ ಬಿಡಿ.
3 ಎರಡನೇದಾಗಿ, ಓದಿದ ವಚನವನ್ನು ವಿವರಿಸಿ. ಓದಿದ ಕೂಡಲೇ ಅನೇಕರಿಗೆ ವಚನ ಅರ್ಥವಾಗುವುದಿಲ್ಲ. ಆದುದರಿಂದ ನಾವು ಮಾತಾಡುತ್ತಿರುವ ವಿಷಯಕ್ಕೆ ಆ ವಚನ ಹೇಗೆ ಸಂಬಂಧಿಸಿದೆ ಎಂದು ವಿವರಿಸಬೇಕು. (ಲೂಕ 24:26, 27) ಮುಖ್ಯ ಪದಗಳನ್ನು ಒತ್ತಿಹೇಳಿ. ವಚನವು ಚೆನ್ನಾಗಿ ಅರ್ಥವಾಗಿದೆಯೋ ಎಂದು ತಿಳಿಯಲು ಮನೆಯವರಿಗೆ ಪ್ರಶ್ನೆಯನ್ನೂ ಕೇಳಬಹುದು.—ಜ್ಞಾನೋ. 20:5; ಅ. ಕಾ. 8:30.
4 ಶಾಸ್ತ್ರಗ್ರಂಥದಿಂದ ತರ್ಕಿಸಿ: ಮೂರನೇದಾಗಿ, ಮನೆಯವರ ಹೃದಮನಗಳನ್ನು ತಲಪಿರಿ. ಓದಿದ ವಚನವು ಅವರಿಗೆ ವೈಯಕ್ತಿಕವಾಗಿ ಹೇಗೆ ಅನ್ವಯವಾಗುತ್ತದೆಂದು ತಿಳಿದುಕೊಳ್ಳಲು ಸಹಾಯಮಾಡಿ. ಶಾಸ್ತ್ರಗ್ರಂಥದಿಂದ ತರ್ಕಿಸುವುದರಿಂದ ಅವರ ಯೋಚನಾಧಾಟಿಯನ್ನು ಬದಲಾಯಿಸಲು ನಾವು ಒಡಂಬಡಿಸಬಲ್ಲೆವು. (ಅ. ಕಾ. 17:2-4; 19:8) ಉದಾಹರಣೆಗೆ ಕೀರ್ತನೆ 83:18 ಓದುತ್ತೀರೆಂದು ನೆನಸಿ. ಬಳಿಕ, ಒಬ್ಬರೊಂದಿಗೆ ಸ್ನೇಹ ಬೆಳೆಸಲು ಅವರ ಹೆಸರನ್ನು ತಿಳಿದುಕೊಳ್ಳುವುದು ಹೇಗೆ ಅತ್ಯಗತ್ಯ ಎಂದು ನೀವು ತರ್ಕಿಸಬಹುದು. ಅನಂತರ ನೀವು ಹೀಗೆ ಕೇಳಬಹುದು: “ದೇವರ ಹೆಸರನ್ನು ಈಗ ತಿಳಿದಿರುವುದರಿಂದ ನೀವಾತನಿಗೆ ಮಾಡುವ ಪ್ರಾರ್ಥನೆಗಳು ಹೆಚ್ಚು ಅರ್ಥಪೂರ್ಣವಾಗಿರುವವು ಎಂದು ನಿಮಗನಿಸುವುದಿಲ್ಲವೇ?” ಈ ರೀತಿಯಲ್ಲಿ ವಚನವನ್ನು ಮನೆಯವರ ಸ್ವಂತ ಜೀವನಕ್ಕೆ ಅನ್ವಯಿಸುವುದಾದರೆ ಅದರ ಪ್ರಾಯೋಗಿಕ ಮೌಲ್ಯ ಅವರಿಗೆ ಹೆಚ್ಚು ಸ್ಪಷ್ಟವಾಗುವುದು. ಹೀಗೆ ದೇವರ ವಾಕ್ಯವನ್ನು ಒಡಂಬಡಿಸುವ ರೀತಿಯಲ್ಲಿ ಬೋಧಿಸಿದರೆ ಸತ್ಯದೇವರೂ ಜೀವಸ್ವರೂಪನೂ ಆದ ಯೆಹೋವನನ್ನು ಆರಾಧಿಸುವಂತೆ ಪ್ರಾಮಾಣಿಕ ಹೃದಯದ ಜನರು ಸೆಳೆಯಲ್ಪಡುವರು.—ಯೆರೆ. 10:10.
[ಅಧ್ಯಯನ ಪ್ರಶ್ನೆಗಳು]
1. ಶುಶ್ರೂಷೆಯಲ್ಲಿ ದೇವರ ವಾಕ್ಯವನ್ನು ಪರಿಣಾಮಕಾರಿಯಾಗಿ ಬಳಸಲು ಏನು ಮಾಡಬೇಕು?
2. ದೇವರ ವಾಕ್ಯದ ಮೇಲೆ ಜನರ ಗೌರವ ಹೆಚ್ಚಿಸಲು ನಾವೇನು ಮಾಡಬಲ್ಲೆವು?
3. ವಚನವೊಂದನ್ನು ಓದಿದ ಬಳಿಕ ಅದು ಮನೆಯವನಿಗೆ ಅರ್ಥವಾಗಲು ನಾವೇನು ಮಾಡಬೇಕು?
4. ಒಡಂಬಡಿಸುವ ರೀತಿಯಲ್ಲಿ ಬೋಧಿಸಲು ಕೊನೆಯದಾಗಿ ನಾವೇನು ಮಾಡಬೇಕು?