ಪ್ರಾರ್ಥನಾಪೂರ್ವಕ ಧ್ಯಾನ —ಹುರುಪುಳ್ಳ ಶುಶ್ರೂಷಕರಿಗೆ ಆವಶ್ಯಕ
1. ತನ್ನ ಪ್ರಪ್ರಧಾನ ಕೆಲಸದಿಂದ ಅಪಕರ್ಷಿತನಾಗದಿರಲು ಯೇಸುವಿಗೆ ಯಾವುದು ಸಹಾಯಮಾಡಿತು?
1 ಯೇಸು ಸಾಯಂಕಾಲವಿಡೀ ಜನರ ಕಾಯಿಲೆಗಳನ್ನು ಗುಣಪಡಿಸಿ ಅವರಿಂದ ದೆವ್ವಗಳನ್ನು ಓಡಿಸಿದ್ದನು. ಅದಾದ ಮರುದಿನವೇ ಅವನ ಶಿಷ್ಯರು ಆತನನ್ನು ಕಂಡುಕೊಂಡಾಗ, “ಎಲ್ಲರೂ ನಿನ್ನನ್ನು ಹುಡುಕುತ್ತಿದ್ದಾರೆ” ಎಂದು ಹೇಳಿದರು. ಆತನು ಪವಾಡ ಕಾರ್ಯಗಳನ್ನು ಇನ್ನಷ್ಟು ಮಾಡಬೇಕೆಂಬುದು ಅವರ ಉದ್ದೇಶವಾಗಿತ್ತು. ಆದರೆ ಯೇಸು ತನ್ನ ಪ್ರಪ್ರಧಾನ ಕೆಲಸ, ಸುವಾರ್ತೆಯನ್ನು ಸಾರುವುದರಿಂದ ಅಪಕರ್ಷಿತನಾಗಲಿಲ್ಲ. “ನಾವು ಹತ್ತಿರದಲ್ಲಿರುವ ಬೇರೆ ಯಾವುದಾದರೂ ಊರುಗಳಿಗೆ ಹೋಗೋಣ. ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಈ ಉದ್ದೇಶಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ” ಎಂದನಾತ. ಶುಶ್ರೂಷೆಯ ಮೇಲೆ ಗಮನ ಕೇಂದ್ರೀಕರಿಸಲು ಯೇಸುವಿಗೆ ಯಾವುದು ಸಹಾಯಮಾಡಿತು? ಆತನು ಮುಂಜಾನೆಯೇ ಎದ್ದು ಪ್ರಾರ್ಥಿಸಿ ಧ್ಯಾನಮಾಡಿದ್ದನು. (ಮಾರ್ಕ 1:32-39) ನಾವು ಸಹ ಹುರುಪಿನ ಶುಶ್ರೂಷಕರಾಗಿರಲು ಪ್ರಾರ್ಥನಾಪೂರ್ವಕ ಧ್ಯಾನ ಹೇಗೆ ಸಹಾಯಮಾಡಬಲ್ಲದು?
2. ಶುಶ್ರೂಷೆಯಲ್ಲಿ ಹುರುಪನ್ನು ಕಾಪಾಡಿಕೊಳ್ಳಲು ಸಹಾಯವಾಗುವಂತೆ ನಾವು ಏನನ್ನೆಲ್ಲ ಧ್ಯಾನಿಸಬಲ್ಲೆವು?
2 ಏನನ್ನು ಧ್ಯಾನಮಾಡಬೇಕು? ಜನರು ‘ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರೆ’ ಎಂಬುದನ್ನು ಯೇಸು ಗಮನಿಸಿದನು. (ಮತ್ತಾ. 9:36) ತದ್ರೀತಿಯಲ್ಲಿ ಜನರು ಸುವಾರ್ತೆಯನ್ನು ತಿಳಿಯುವುದು ಎಷ್ಟು ಪ್ರಾಮುಖ್ಯ ಎಂಬುದರ ಕುರಿತು ನಾವು ಸಹ ಆಲೋಚಿಸಬಲ್ಲೆವು. ನಾವು ತುರ್ತಿನ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂಬುದರ ಕುರಿತು ಸಹ ಯೋಚಿಸಬಲ್ಲೆವು. (1 ಕೊರಿಂ. 7:29) ಯೆಹೋವನ ಕ್ರಿಯೆಗಳು, ಗುಣಗಳು ಮತ್ತು ಯೆಹೋವನ ಸಾಕ್ಷಿಗಳಾಗಿರುವ ನಮ್ಮ ಸುಯೋಗದ ಕುರಿತು ಮನನಮಾಡಬಲ್ಲೆವು. ಅಲ್ಲದೇ ನಮ್ಮ ಟೆರಿಟೊರಿಯಲ್ಲಿರುವ ಜನರಿಗೆ ತಿಳಿಯದಿರುವ ಆದರೆ ನಮಗೆ ತಿಳಿದಿರುವ ದೇವರ ವಾಕ್ಯದಲ್ಲಿನ ಅತ್ಯಮೂಲ್ಯವಾದ ಆಧ್ಯಾತ್ಮಿಕ ಐಶ್ವರ್ಯಗಳ ಕುರಿತು ಪರ್ಯಾಲೋಚಿಸಬಲ್ಲೆವು.—ಕೀರ್ತ. 77:11-13; ಯೆಶಾ. 43:10-12; ಮತ್ತಾ. 13:52.
3. ನಾವು ಯಾವಾಗೆಲ್ಲ ಧ್ಯಾನಿಸಬಹುದು?
3 ಯಾವಾಗ ಧ್ಯಾನಿಸಬೇಕು? ಯೇಸುವಿನಂತೆ ಕೆಲವರು ನಿಶ್ಶಬ್ದವಾಗಿರುವ ಬೆಳಗಿನ ಜಾವ ಎದ್ದು ಧ್ಯಾನಿಸುತ್ತಾರೆ. ಇತರರು ಮಲಗಲು ಹೋಗುವ ಮುಂಚೆ ಧ್ಯಾನಮಾಡುವುದು ಉತ್ತಮವೆಂದು ಕಂಡುಕೊಂಡಿದ್ದಾರೆ. (ಆದಿ. 24:63) ನಾವು ಕಾರ್ಯಮಗ್ನರಾಗಿರುವುದಾದರೂ ಧ್ಯಾನಮಾಡಲು ಸಮಯವನ್ನು ಕಂಡುಕೊಳ್ಳಸಾಧ್ಯ. ಕೆಲವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿರುವಾಗ ಧ್ಯಾನಿಸುತ್ತಾರೆ. ಇನ್ನು ಕೆಲವರು ಏಕಾಗ್ರತೆಯಿಂದ ಮನನ ಮಾಡಲಿಕ್ಕಾಗಿ ತಮ್ಮ ಮಧ್ಯಾಹ್ನದ ಊಟದ ವಿರಾಮದಲ್ಲಿ ಸ್ವಲ್ಪ ಸಮಯವನ್ನು ಉಪಯೋಗಿಸಿಕೊಳ್ಳುತ್ತಾರೆ. ಶುಶ್ರೂಷೆಯಲ್ಲಿ ತೊಡಗುವ ಮುಂಚೆ ಸ್ವಲ್ಪ ಹೊತ್ತು ಧ್ಯಾನಿಸುವುದಾದರೂ ಹೆಚ್ಚಿನ ಹುರುಪು ಮತ್ತು ಧೈರ್ಯದೊಂದಿಗೆ ಸಾರಲು ಸಾಧ್ಯವಾಗುತ್ತದೆ ಎಂದು ಅನೇಕರು ಕಂಡುಕೊಂಡಿದ್ದಾರೆ.
4. ನಾವು ಏಕೆ ಧ್ಯಾನಿಸಬೇಕು?
4 ಪ್ರಾರ್ಥನಾಪೂರ್ವಕ ಧ್ಯಾನ ಯೆಹೋವನ ಸೇವೆಮಾಡುವ ಆಶೆಯನ್ನು ನಮ್ಮಲ್ಲಿ ಹೆಚ್ಚಿಸುವುದು. ನಮ್ಮ ಆರಾಧನೆಯೇ ಜೀವನದಲ್ಲಿ ಅತಿ ಪ್ರಾಮುಖ್ಯವಾದದ್ದೆಂದು ಪರಿಗಣಿಸಲು ಅದು ಸಹಾಯಮಾಡುವುದು. ಮಾತ್ರವಲ್ಲದೆ ಸಾರುತ್ತಾ ಮುಂದುವರಿಯಬೇಕೆಂಬ ನಮ್ಮ ದೃಢಸಂಕಲ್ಪವನ್ನು ಇನ್ನಷ್ಟು ಬಲಪಡಿಸುವುದು. ದೇವರ ಪ್ರಧಾನ ಶುಶ್ರೂಷಕನಾದ ಯೇಸು ಧ್ಯಾನದಿಂದ ಪ್ರಯೋಜನ ಪಡೆದುಕೊಂಡನು. ನಾವು ಸಹ ಪಡೆದುಕೊಳ್ಳಬಲ್ಲೆವು.