ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಚೆಫನ್ಯ
1. ಎಂತಹ ಸಂದರ್ಭದಲ್ಲಿ ಚೆಫನ್ಯನು ಪ್ರವಾದಿಯಾಗಿದ್ದನು? ಅವನು ಹೇಗೆ ನಮಗೆ ಉತ್ತಮ ಮಾದರಿಯಾಗಿದ್ದಾನೆ?
1 ಅದು ಕ್ರಿ.ಪೂ. ಏಳನೆಯ ಶತಮಾನದ ಮಧ್ಯ ಭಾಗ, ಯೆಹೂದದಲ್ಲಿ ಬಾಳನ ಆರಾಧನೆ ಮುಚ್ಚುಮರೆಯಿಲ್ಲದೆ ನಡೆಯುತ್ತಿತ್ತು. ದುಷ್ಟ ಅರಸ ಆಮೋನನು ಕೊಲ್ಲಲ್ಪಟ್ಟಿದ್ದನು. ಅವನ ಸ್ಥಾನದಲ್ಲಿ ಯುವರಾಜ ಯೋಷೀಯನು ಆಳುತ್ತಿದ್ದನು. (2 ಪೂರ್ವ. 33:21–34:1) ಇಂಥ ಸಮಯದಲ್ಲಿ ಯೆಹೋವನು ತನ್ನ ತೀರ್ಪಿನ ಸಂದೇಶವನ್ನು ಸಾರಲು ಚೆಫನ್ಯನನ್ನು ಆರಿಸಿಕೊಂಡನು. ಚೆಫನ್ಯನು ಸ್ವತಃ ಯೆಹೂದಿ ರಾಜ ಮನೆತನದವನಾಗಿದ್ದನು. ಆದರೂ ಯೆಹೂದಿ ರಾಜರ ಆಳ್ವಿಕೆಗೆ ವಿರುದ್ಧವಾಗಿ ಯೆಹೋವನ ಖಂಡನೆಯ ಸಂದೇಶವನ್ನು ಸ್ವಲ್ಪವೂ ಹಿಂಜರಿಯದೆ ಹೇಳಿದನು. (ಚೆಫ. 1:1; 3:1-4) ನಾವು ಅವನಿಗಿದ್ದ ಧೈರ್ಯವನ್ನು ಅನುಕರಿಸುತ್ತಾ ಯೆಹೋವನೊಂದಿಗಿನ ನಮ್ಮ ಸಂಬಂಧದ ಮಧ್ಯೆ ರಕ್ತ ಸಂಬಂಧಗಳು ನುಸುಳಿ ತಪ್ಪಾದ ಪ್ರಭಾವ ಬೀರದಂತೆ ನೋಡಿಕೊಳ್ಳೋಣ. (ಮತ್ತಾ. 10:34-37) ಇಷ್ಟಕ್ಕೂ ಚೆಫನ್ಯನು ಏನನ್ನು ಸಾರಿದನು? ಅದರ ಫಲಿತಾಂಶವೇನು?
2. ಯೆಹೋವನ ಸಿಟ್ಟಿನ ದಿನದಲ್ಲಿ ಮರೆಯಾಗಲು ನಾವೇನು ಮಾಡಬೇಕು?
2 ಯೆಹೋವನನ್ನು ಆಶ್ರಯಿಸಿ: ತನ್ನ ಸಿಟ್ಟಿನ ದಿನದಿಂದ ಜನರನ್ನು ಯೆಹೋವನು ಮಾತ್ರ ಸಂರಕ್ಷಿಸಬಲ್ಲನು. ಆದ್ದರಿಂದ ಇನ್ನೂ ಸಮಯವಿರುವಾಗಲೇ ಯೆಹೋವನನ್ನು ಆಶ್ರಯಿಸಿಕೊಳ್ಳುವಂತೆ, ಸದ್ಧರ್ಮವನ್ನು ಅಭ್ಯಾಸಿಸುವಂತೆ ಮತ್ತು ದೀನತೆಯನ್ನು ಬೆಳೆಸಿಕೊಳ್ಳುವಂತೆ ಚೆಫನ್ಯನು ಯೆಹೂದ್ಯರನ್ನು ಪ್ರೋತ್ಸಾಹಿಸಿದನು. (ಚೆಫ. 2:2, 3) ಆ ಮಾತುಗಳು ಇಂದಿಗೂ ಸತ್ಯ. ಚೆಫನ್ಯನಂತೆ ನಾವು ಸಹ ಇತರರಿಗೆ, ಯೆಹೋವನನ್ನು ಆಶ್ರಯಿಸಬೇಕೆಂದು ಉತ್ತೇಜಿಸುತ್ತೇವಾದರೂ ಸ್ವತಃ ನಾವು ಹಾಗೆ ನಡೆದುಕೊಳ್ಳಲು ಪ್ರಯಾಸಪಡಬೇಕು. ಎಂದಿಗೂ ‘ಯೆಹೋವನ ಮಾರ್ಗದಿಂದ’ ದೂರಹೋಗದ ದೃಢನಿರ್ಧಾರ ಮಾಡಬೇಕು. (ಚೆಫ. 1:6) ಯೆಹೋವನನ್ನು ಆಶ್ರಯಿಸಲು ಆತನ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿ, ಆತನ ಮಾರ್ಗದರ್ಶನೆಗಾಗಿ ಪ್ರಾರ್ಥಿಸಬೇಕು. ಸದ್ಧರ್ಮವನ್ನು ಅಭ್ಯಾಸಿಸಲು ನೈತಿಕವಾಗಿ ಶುದ್ಧ ಜೀವನ ನಡೆಸಬೇಕು. ದೀನತೆ ಬೆಳೆಸಿಕೊಳ್ಳಲು ಅಧೀನ ಮನೋಭಾವದವರಾಗಿದ್ದು, ಯೆಹೋವನ ಸಂಘಟನೆಯ ನಿರ್ದೇಶನಗಳನ್ನು ಮನಃಪೂರ್ವಕವಾಗಿ ಪಾಲಿಸಬೇಕು.
3. ಸೇವೆಯ ಕಡೆಗೆ ನಮಗೆ ಏಕೆ ಸಕಾರಾತ್ಮಕ ನೋಟವಿರಬೇಕು?
3 ಒಳ್ಳೆಯ ಫಲಿತಾಂಶ: ಚೆಫನ್ಯನು ಸಾರಿದ ತೀರ್ಪಿನ ಸಂದೇಶ, ಯೆಹೂದದ ಕೆಲವರನ್ನು ಪ್ರತಿಕ್ರಿಯಿಸುವಂತೆ ಮಾಡಿತು. ಅದರಲ್ಲೂ ಯೌವನಸ್ಥನಾಗಿರುವಾಗಲೇ ಯೆಹೋವನನ್ನು ಹುಡುಕಿದ ರಾಜ ಯೋಷೀಯನ ಮೇಲೆ ಒಳ್ಳೆಯ ಪ್ರಭಾವ ಬೀರಿತು. ಯೋಷೀಯನು ದೇಶದಲ್ಲೆಲ್ಲ ವಿಗ್ರಹಾರಾಧನೆಯನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಒಂದು ಕಾರ್ಯಾಚರಣೆಯನ್ನು ಮಾಡಿದನು. (2 ಪೂರ್ವ. 34:2-5) ಇಂದು ಸಹ ರಾಜ್ಯದ ಬೀಜಗಳು ದಾರಿಯಲ್ಲಿ, ಬಂಡೆಗಳ ಮಧ್ಯೆ ಮತ್ತು ಮುಳ್ಳುಗಳಲ್ಲಿ ಬೀಳುತ್ತವಾದರೂ ಕೆಲವು ಬೀಜಗಳು ಒಳ್ಳೆಯ ನೆಲದಲ್ಲೂ ಬಿದ್ದು ಒಳ್ಳೆಯ ಫಲಿತಾಂಶ ತರುತ್ತವೆ. (ಮತ್ತಾ. 13:18-23) ಆದ್ದರಿಂದ ರಾಜ್ಯದ ಬೀಜವನ್ನು ಬಿತ್ತಲು ನಾವು ಮಾಡುವ ಪ್ರಯತ್ನಗಳನ್ನು ಯೆಹೋವನು ಖಂಡಿತ ಆಶೀರ್ವದಿಸುವನು.—ಕೀರ್ತ. 126:6.
4. ನಾವು ‘ಯೆಹೋವನನ್ನು ಏಕೆ ಕಾದುಕೊಂಡಿರಬೇಕು’?
4 ಯೆಹೋವನ ಎಚ್ಚರಿಕೆಯ ಸಂದೇಶವನ್ನು ಕೆಲವು ಯೆಹೂದದ ಜನರು ತುಂಬ ಹಗುರವಾಗಿ ಎಣಿಸಿದರು. ಆದರೆ ಯೆಹೋವನು ತನ್ನ ಮಹಾದಿನ ಹತ್ತಿರವಾಗಿದೆ ಎಂದು ಎಲ್ಲರಿಗೂ ಖಡಾಖಂಡಿತವಾಗಿ ತಿಳಿಸಿದನು. (ಚೆಫ. 1:12, 14) ಆತನನ್ನು ಆಶ್ರಯಿಸುವವರು ಮಾತ್ರ ರಕ್ಷಣೆ ಪಡೆಯುವರು. (ಚೆಫ. 3:12, 17) ನಾವು ‘ಯೆಹೋವನನ್ನು ಕಾದುಕೊಂಡಿರುವುದಾದರೆ’ ನಮ್ಮ ಜೊತೆ ಆರಾಧಕರೊಂದಿಗೆ ಐಕ್ಯರಾಗಿದ್ದು ಸೇವೆ ಮಾಡುವುದರಲ್ಲಿ ಸಂತೋಷಿಸುವೆವು.—ಚೆಫ. 3:8, 9.