ಸೌಮ್ಯಭಾವ—ಕೊಡುತ್ತೆ ಸಂತೋಷವ!
“ನನ್ಗೆ ನಾಚಿಕೆ ಸ್ವಭಾವ, ಆತ್ಮವಿಶ್ವಾಸದ ಕೊರತೆ ಇದೆ. ಹಾಗಾಗಿ ‘ನಂದೇ ಸರಿ’ ಅಂತ ಹಟ ಹಿಡಿಯೋವ್ರ ಜೊತೆ, ಮಾತುಮಾತಿಗೂ ಕೋಪ ಮಾಡ್ಕೊಳ್ಳೋರ ಜೊತೆ ಬೆರೆಯೋಕೆ ಕಷ್ಟ ಆಗುತ್ತೆ. ಆದ್ರೆ ದೀನತೆ, ಮೃದು ಸ್ವಭಾವ ಇರೋ ಜನ್ರ ಜೊತೆ ಇರೋಕೆ ಇಷ್ಟ ಆಗುತ್ತೆ. ಅವ್ರತ್ರ ನನ್ನ ಭಾವನೆ, ಸಮಸ್ಯೆ ಹೇಳಿಕೊಳ್ಳೋಕೆ ಸುಲಭ ಆಗುತ್ತೆ. ಅಂಥವ್ರೇ ನನ್ನ ಬೆಸ್ಟ್ ಫ್ರೆಂಡ್ಸ್” ಅಂತ ಸಾರಾa ಹೇಳ್ತಾಳೆ.
ಸೌಮ್ಯಭಾವದವ್ರ ಜೊತೆ ಇರೋಕೆ ಜನ್ರಿಗೆ ತುಂಬ ಇಷ್ಟ ಅಂತ ಸಾರಾಳ ಮಾತಿನಿಂದ ಅರ್ಥ ಆಗುತ್ತೆ. ಅಂಥವ್ರನ್ನ ಕಂಡ್ರೆ ಯೆಹೋವನಿಗೂ ತುಂಬ ಇಷ್ಟ. ಬೈಬಲ್ ‘ಸೌಮ್ಯಭಾವವನ್ನು ಧರಿಸಿಕೊಳ್ಳಿ’ ಅಂತ ನಮ್ಮನ್ನು ಪ್ರೋತ್ಸಾಹಿಸುತ್ತೆ. (ಕೊಲೊ. 3:12) ಸೌಮ್ಯಭಾವ ಅಂದರೇನು? ಈ ಗುಣವನ್ನ ಯೇಸು ಹೇಗೆ ತೋರಿಸಿದ? ಈ ಗುಣ ಇದ್ರೆ ನಾವು ಹೇಗೆ ಸಂತೋಷವಾಗಿರಬಹುದು?
ಸೌಮ್ಯಭಾವ ಅಂದರೇನು?
ನಿಮ್ಮ ಮನಸ್ಸು ಪ್ರಶಾಂತವಾಗಿದ್ರೆ ನಿಮ್ಗೆ ಸೌಮ್ಯಭಾವ ಇದೆ ಅಂತ ಅರ್ಥ. ಸೌಮ್ಯಭಾವ ಇರೋವ್ರು ಬೇರೆಯವ್ರ ಜೊತೆ ಮೃದುವಾಗಿ ಮತ್ತು ಪ್ರೀತಿಯಿಂದ ನಡ್ಕೊಳ್ತಾರೆ. ಯಾರಾದ್ರೂ ಕಿರಿಕಿರಿ ಮಾಡಿದ್ರೂ ರೇಗಾಡದೆ ಸಮಾಧಾನದಿಂದ ಇರ್ತಾರೆ.
ಬೈಬಲ್ನಲ್ಲಿ ಸೌಮ್ಯಭಾವಕ್ಕೆ ಬಳಸಿರೋ ಗ್ರೀಕ್ ಪದ ಮತ್ತು ಪಳಗಿಸಿರೋ ಕುದುರೆಯನ್ನು ವಿವರಿಸೋಕೆ ಉಪಯೋಗಿಸೋ ಗ್ರೀಕ್ ಪದ ಒಂದೇ ಆಗಿದೆ. ಮೊಂಡ ಸ್ವಭಾವದ ಕುದುರೆಯನ್ನ ಪಳಗಿಸಿದ್ರೂ ಅದು ತನ್ನ ಶಕ್ತಿ ಕಳ್ಕೊಳ್ಳಲ್ಲ. ಅದಿನ್ನೂ ಶಕ್ತಿಶಾಲಿಯಾಗೇ ಇರುತ್ತೆ. ಆದ್ರೆ ಸಾಧು ಸ್ವಭಾವ ಬಂದಿರುತ್ತೆ. ಅದೇ ರೀತಿ ಸೌಮ್ಯಭಾವ ಇರೋವ್ರು ಬಲಹೀನರಲ್ಲ. ಬದ್ಲಿಗೆ ಅವ್ರು ಬಲಶಾಲಿಗಳಾಗೇ ಇರ್ತಾರೆ. ಯಾಕೆಂದ್ರೆ ಅವ್ರಿಗೆ ಅಪರಿಪೂರ್ಣ ಸ್ವಭಾವವನ್ನ ಹಿಡಿತದಲ್ಲಿಡೋ ತಾಕತ್ತಿರುತ್ತೆ ಮತ್ತು ಬೇರೆಯವ್ರ ಜೊತೆ ಶಾಂತಿಯಿಂದ ಇರೋಕೂ ಆಗುತ್ತೆ.
ಆದ್ರೆ ಕೆಲವೊಮ್ಮೆ ಸೌಮ್ಯಭಾವ ತೋರಿಸೋಕೆ ನಮ್ಗೆ ಕಷ್ಟ ಆಗ್ಬಹುದು. ಯಾಕಂದ್ರೆ ನಮ್ಮ ಸುತ್ತಲೂ ಇರೋ ಜನ ತಾಳ್ಮೆ ಇಲ್ಲದವ್ರು, ತಾವು ಹೇಳೋದೇ ಸರಿ ಅಂತ ವಾದಿಸೋರು ಆಗಿದ್ದಾರೆ. (ರೋಮ. 7:19) ಹಾಗಾಗಿ ಸೌಮ್ಯಭಾವ ಬೆಳೆಸಿಕೊಳ್ಳೋಕೆ ತುಂಬ ಪ್ರಯತ್ನ ಹಾಕ್ಬೇಕು. ಈ ಪ್ರಯತ್ನ ಬಿಡದೆ ಮುಂದುವರಿಸೋಕೆ ಯೆಹೋವನ ಪವಿತ್ರಾತ್ಮ ಸಹಾಯ ಮಾಡುತ್ತೆ. (ಗಲಾ. 5:22, 23) ನಾವ್ಯಾಕೆ ಸೌಮ್ಯಭಾವ ಬೆಳೆಸಿಕೊಳ್ಳೋಕೆ ಪ್ರಯತ್ನ ಹಾಕ್ಬೇಕು?
ಸೌಮ್ಯಭಾವ ಇರೋವ್ರನ್ನ ಕಂಡ್ರೆ ಜನ್ರಿಗೆ ಇಷ್ಟ. ಸಾರಾ ತರಾನೇ ನಮ್ಗೂ ಸೌಮ್ಯಭಾವದವ್ರ ಜೊತೆ ಇರೋಕೆ ಇಷ್ಟ ಆಗುತ್ತೆ. ಯೇಸು ಸೌಮ್ಯಭಾವ ಮತ್ತು ಪ್ರೀತಿ ತೋರಿಸೋದ್ರಲ್ಲಿ ಅತ್ಯುತ್ತಮ ಮಾದರಿ. (2 ಕೊರಿಂ. 10:1) ಸಾಮಾನ್ಯವಾಗಿ ಮಕ್ಳು ಪರಿಚಯ ಇಲ್ಲದವ್ರ ಜೊತೆ ಬೆರೆಯೋದು ತುಂಬ ಕಡಿಮೆ. ಆದ್ರೆ ಯೇಸು ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ರೂ ಮಕ್ಳು ಆತನ ಜೊತೆ ಇರೋಕೆ ಇಷ್ಟಪಡ್ತಿದ್ರು. ಕಾರಣ, ಆತನಲ್ಲಿ ಅಷ್ಟು ಸೌಮ್ಯ ಸ್ವಭಾವ ಮತ್ತು ದಯೆ ಇತ್ತು.—ಮಾರ್ಕ 10:13-16.
ಸೌಮ್ಯಭಾವ ಇದ್ರೆ ನಮ್ಗೂ ನಮ್ಮ ಜೊತೆ ಇರೋರಿಗೂ ಒಳ್ಳೇದಾಗುತ್ತೆ. ನಮ್ಗೆ ಸೌಮ್ಯಭಾವ ಇದ್ರೆ ನಾವು ಮಾತುಮಾತಿಗೂ ಬೇಜಾರು ಮಾಡ್ಕೊಳ್ಳಲ್ಲ ಅಥ್ವಾ ಕೋಪದಿಂದ ನಡ್ಕೊಳ್ಳಲ್ಲ. (ಜ್ಞಾನೋ. 16:32) ಅಷ್ಟೇ ಅಲ್ಲ ಬೇರೆಯವ್ರಿಗೂ, ನಮ್ಮನ್ನ ಪ್ರೀತಿಸೋ ಜನ್ರಿಗೂ ನೋವು ಮಾಡಲ್ಲ. ಹೀಗೆ ನಡಕೊಂಡಾಗ ನಮ್ಮ ಮನಸ್ಸೂ ಚುಚ್ಚಲ್ಲ ಮತ್ತು ನಮ್ಮ ಭಾವನೆ, ನಡತೆಯನ್ನ ಹತೋಟಿಯಲ್ಲಿ ಇಡೋದ್ರಿಂದ ಬೇರೆಯವ್ರಿಗೂ ನೋವು ಮಾಡಲ್ಲ.
ಸೌಮ್ಯಭಾವ ತೋರಿಸಿದ ಅತ್ಯುತ್ತಮ ಮಾದರಿ
ಯೇಸುಗೆ ತುಂಬ ಜವಾಬ್ದಾರಿಗಳಿದ್ದವು. ತುಂಬ ಬಿಝಿನೂ ಇದ್ದ. ಆದ್ರೂ ಎಲ್ರ ಜೊತೆ ಸೌಮ್ಯಭಾವದಿಂದ ನಡ್ಕೊಂಡ. ಆಗಿನ ಸಮ್ಯದಲ್ಲಿ ಅನೇಕರು ಕಷ್ಟ, ಆತಂಕ, ದಣಿವಿನಿಂದ ಬಳಲಿ ಹೋಗಿದ್ರು. ಅವ್ರಿಗೆ ಚೈತನ್ಯ ಬೇಕಿತ್ತು. ಯೇಸು ಅವ್ರಿಗೆ ‘ನನ್ನ ಬಳಿಗೆ ಬನ್ನಿರಿ. ನಾನು ಸೌಮ್ಯಭಾವದವನೂ ದೀನ ಮನಸ್ಸುಳ್ಳವನೂ ಆಗಿದ್ದೇನೆ’ ಅಂತ ಹೇಳ್ದಾಗ ಅವ್ರಿಗೆ ಎಷ್ಟು ಸಾಂತ್ವನ ಸಿಕ್ಕಿರಬೇಕಲ್ವಾ?—ಮತ್ತಾ. 11:28, 29.
ಯೇಸು ತರ ಸೌಮ್ಯಭಾವ ತೋರಿಸೋಕೆ ಹೇಗೆ ಕಲೀಬಹುದು? ಆತನು ಜನ್ರ ಜೊತೆ ಹೇಗೆ ನಡಕೊಂಡ, ಕಷ್ಟದ ಸನ್ನಿವೇಶನ ಹೇಗೆ ನಿಭಾಯಿಸಿದ ಅನ್ನೋದನ್ನ ನಾವು ಬೈಬಲ್ನಿಂದ ಕಲೀಬಹುದು. ಆಗ ಸೌಮ್ಯಭಾವ ತೋರಿಸೋಕೆ ಕಷ್ಟವಾಗೋ ಸನ್ನಿವೇಶದಲ್ಲೂ ಆತನ ತರ ನಡ್ಕೊಳೋಕೆ ನಾವು ಪ್ರಯತ್ನಿಸ್ತೇವೆ. (1 ಪೇತ್ರ 2:21) ಸೌಮ್ಯಭಾವ ತೋರಿಸೋಕೆ ಯೇಸುಗೆ ಸಹಾಯ ಮಾಡಿದ ಮೂರು ವಿಷ್ಯ ನೋಡೋಣ.
ಯೇಸು ದೀನ ವ್ಯಕ್ತಿಯಾಗಿದ್ದ. ‘ನಾನು ಸೌಮ್ಯಭಾವದವನೂ ದೀನ ಹೃದಯದವನೂ ಆಗಿದ್ದೇನೆ’ ಅಂತ ಯೇಸು ಹೇಳಿದ. (ಮತ್ತಾ. 11:29) ಬೈಬಲ್ನಲ್ಲಿ ಸೌಮ್ಯಭಾವ ಮತ್ತು ದೀನತೆಯನ್ನ ಒಟ್ಟೊಟ್ಟಿಗೆ ತಿಳಿಸಲಾಗಿದೆ. ಯಾಕೆಂದ್ರೆ ಈ ಎರಡೂ ಗುಣಗಳಿಗೂ ನಿಕಟ ಸಂಬಂಧವಿದೆ. ದೀನ ವ್ಯಕ್ತಿ ಯಾವತ್ತೂ ಸಿಟ್ಟು ಮಾಡ್ಕೊಳ್ಳಲ್ಲ ಮತ್ತು ಸೌಮ್ಯಭಾವದಿಂದ ನಡ್ಕೊಳ್ತಾನೆ.—ಎಫೆ. 4:1-3.
ನಮ್ಗೆ ದೀನತೆಯಿದ್ರೆ ಯಾರಾದ್ರೂ ನೋವು ಮಾಡ್ದಾಗ ನಾವು ಬೇಸರ ಮಾಡ್ಕೊಳ್ಳಲ್ಲ. ಯೇಸುವನ್ನ ಜನ ಒಬ್ಬ ಕುಡುಕ, ಹೊಟ್ಟೆಬಾಕ ಅಂತ ಹೇಳ್ದಾಗ ಆತ ಏನು ಮಾಡಿದ? ಆತನಿಗೆ ದೀನತೆ ಇದ್ದಿದ್ರಿಂದ ಆ ಜನ್ರತ್ರ ಹೋಗಿ ವಾದ ಮಾಡ್ಲಿಲ್ಲ. ಬದ್ಲಿಗೆ ತನ್ನ ನಡತೆಯಿಂದ ತಾನು ಎಂಥವನು ಅಂತ ತೋರಿಸಿಕೊಟ್ಟ. ಹೀಗೆ “ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ” ಅಂತ ತೋರಿಸಿಕೊಟ್ಟ.—ಮತ್ತಾ. 11:19.
ಯಾರಾದ್ರೂ ನಿಮ್ಮ ಬಗ್ಗೆ, ನಿಮ್ಮ ದೇಶ ಭಾಷೆ ಜಾತಿ ಮುಂತಾದ ಹಿನ್ನೆಲೆ ಬಗ್ಗೆ ಹಿಂದೆಮುಂದೆ ಯೋಚಿಸದೆ ಏನಾದ್ರೂ ಹೇಳ್ಬಿಟ್ರೆ ನೀವು ಸೌಮ್ಯಭಾವದಿಂದ ನಡಕೊಳ್ತೀರಾ? ದಕ್ಷಿಣ ಆಫ್ರಿಕಾದ ಪೀಟರ್ ಎಂಬ ಒಬ್ಬ ಹಿರಿಯ ಹೇಳೋದು, “ನನ್ಗೆ ಯಾರಾದ್ರೂ ಕಿರಿಕಿರಿ ಮಾಡಿದ್ರೆ, ನನ್ನ ಜಾಗದಲ್ಲಿ ಯೇಸು ಇದ್ದಿದ್ರೆ ಏನು ಮಾಡ್ತಿದ್ದ ಅಂತ ಯೋಚಿಸ್ತೀನಿ. ಪ್ರತಿಯೊಂದಕ್ಕೂ ಬೇಸರ ಮಾಡ್ಕೋಬಾರ್ದು ಅಂತ ಕಲ್ತಿದ್ದೀನಿ.”
ಯೇಸು ಜನರ ಬಲಹೀನತೆಗಳನ್ನ ಅರ್ಥಮಾಡಿಕೊಂಡ. ಯೇಸುವಿನ ಶಿಷ್ಯರು ಒಳ್ಳೇದನ್ನ ಮಾಡೋಕೆ ಬಯಸ್ತಿದ್ರು. ಆದ್ರೆ ಅವ್ರೂ ಅಪರಿಪೂರ್ಣರಾಗಿದ್ರು, ಯಾವಾಗ್ಲೂ ಒಳ್ಳೇದನ್ನ ಮಾಡೋಕೆ ಆಗ್ತಿರಲಿಲ್ಲ. ಉದಾಹರಣೆಗೆ ಯೇಸುವಿನ ಮರಣದ ಹಿಂದಿನ ರಾತ್ರಿ ಆತನಿಗೆ ಬೇಕಾದ ಭಾವನಾತ್ಮಕ ಬೆಂಬಲ ಕೊಡೋಕೆ ಪೇತ್ರ, ಯಾಕೋಬ, ಯೋಹಾನ ಸೋತುಹೋದ್ರು. ಅವ್ರ ‘ಹೃದಯ ಸಿದ್ಧವಾಗಿದೆ, ಆದರೆ ದೇಹಕ್ಕೆ ಬಲ ಸಾಲದು’ ಅನ್ನೋದನ್ನ ಯೇಸು ಅರ್ಥಮಾಡಿಕೊಂಡ. (ಮತ್ತಾ. 26:40, 41) ಅವ್ರು ಅಪರಿಪೂರ್ಣರಾಗಿದ್ದಾರೆ ಅನ್ನೋದನ್ನ ಅರ್ಥ ಮಾಡಿಕೊಂಡದ್ರಿಂದ ಯೇಸು ಅವ್ರ ಮೇಲೆ ರೇಗಾಡಲಿಲ್ಲ.
ಮ್ಯಾಂಡಿ ಎಂಬ ಸಹೋದರಿ ಎಲ್ರಲ್ಲೂ ತಪ್ಪನ್ನ ಹುಡುಕುತ್ತಿದ್ದಳು. ಆದ್ರೆ ಈಗ ಯೇಸು ತರನೇ ಬೇರಯವ್ರ ಜೊತೆ ಸೌಮ್ಯಭಾವದಿಂದ ನಡ್ಕೊಳ್ಳೋಕೆ ಪ್ರಯತ್ನಿಸ್ತಾಳೆ. ಅವ್ಳು ಹೇಳೋದು, “ಎಲ್ರೂ ಅಪರಿಪೂರ್ಣರು ಅನ್ನೋದನ್ನ ಅರ್ಥಮಾಡಿಕೊಂಡು ಯೆಹೋವನ ತರನೇ ನಾನು ಸಹ ಬೇರೆಯವ್ರಲ್ಲಿರೋ ಒಳ್ಳೇ ಗುಣಗಳನ್ನ ನೋಡೋಕೆ ಪ್ರಯತ್ನಿಸ್ತೇನೆ.” ಯೇಸು ಬೇರೆಯವ್ರ ಬಲಹೀನತೆನಾ ಅರ್ಥಮಾಡ್ಕೊಂಡು ಅವ್ರ ಜೊತೆ ಪ್ರೀತಿಯಿಂದ ನಡ್ಕೊಂಡ ತರಾನೇ ನೀವೂ ನಡ್ಕೋಬಹುದಲ್ವಾ?
ಯೇಸು ಎಲ್ಲವನ್ನು ಯೆಹೋವನ ಕೈಗೆ ಒಪ್ಪಿಸಿದ. ಯೇಸು ಭೂಮಿಯಲ್ಲಿದ್ದಾಗ ತನಗಾದ ಅನ್ಯಾಯ ತಾಳ್ಕೊಂಡ. ಜನ್ರು ಆತನನ್ನ ಅಪಾರ್ಥ ಮಾಡ್ಕೊಂಡ್ರು, ದ್ವೇಷಿಸಿದ್ರು, ಹಿಂಸಿಸಿದ್ರು. ಆದ್ರೂ ಆತ ಸೌಮ್ಯಭಾವ ಬಿಟ್ಟುಕೊಡ್ಲಿಲ್ಲ. ಯಾಕಂದ್ರೆ “ನೀತಿಯಿಂದ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿಕೊಡುತ್ತಾ ಇದ್ದನು.” (1 ಪೇತ್ರ 2:23) ತನ್ನ ತಂದೆ ಯೆಹೋವ ತಾಳಿಕೊಳ್ಳುವ ಶಕ್ತಿ ಕೊಡ್ತಾನೆ ಮತ್ತು ಅನ್ಯಾಯ ಮಾಡಿದವ್ರಿಗೆ ತಕ್ಕ ಶಿಕ್ಷೆ ಕೊಡ್ತಾನೆ ಅನ್ನೋದು ಯೇಸುಗೆ ಚೆನ್ನಾಗಿ ಗೊತ್ತಿತ್ತು.
ನಮಗೇನಾದ್ರೂ ಅನ್ಯಾಯ ಆದಾಗ ನಾವು ಕೋಪದಿಂದ ವರ್ತಿಸಿದ್ರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತೆ. ಅದಕ್ಕೇ ಬೈಬಲ್ “ಮನುಷ್ಯನ ಕೋಪವು ದೇವರ ನೀತಿಯನ್ನು ಸಾಧಿಸುವುದಿಲ್ಲ.” ಅಂತ ಹೇಳುತ್ತೆ. (ಯಾಕೋ. 1:20) ಕೋಪ ಮಾಡ್ಕೊಳ್ಳೋಕೆ ನ್ಯಾಯವಾದ ಕಾರಣ ಇದ್ರೂ ನಮ್ಮಲ್ಲಿ ಅಪರಿಪೂರ್ಣತೆ ಇರೋದ್ರಿಂದ ತಪ್ಪಾಗಿ ವರ್ತಿಸೋ ಸಾಧ್ಯತೆ ಇದೆ.
“ನನ್ನ ಬಗ್ಗೆ ಯಾರಾದ್ರೂ ತಪ್ಪಾಗಿ ಹೇಳ್ದಾಗ ಬಿಟ್ಟುಕೊಡಬಾರದು, ನಾನ್ಯಾರು ಅಂತ ತೋರಿಸಬೇಕು” ಅಂತ ಜರ್ಮನಿಯ ಕ್ಯಾಥಿ ಎಂಬ ಸಹೋದರಿ ಮುಂಚೆ ಯೋಚಿಸ್ತಿದ್ಲು. ಆದ್ರೆ ಯೆಹೋವನ ಮೇಲೆ ಭರವಸೆ ಇಡೋದನ್ನ ಕಲಿತ ಮೇಲೆ ಅವ್ಳು ತನ್ನ ಯೋಚನೆನಾ ಬದಲಾಯಿಸಿಕೊಂಡ್ಳು. ಅವ್ಳು ಹೇಳೋದು, “ಈಗ ನಾನು ನನ್ನನ್ನು ಸಮರ್ಥಿಸಿಕೊಳ್ಳಲ್ಲ. ಯಾಕೆಂದ್ರೆ ಯೆಹೋವನು ಎಲ್ಲಾ ಸರಿಮಾಡ್ತಾನೆ ಅನ್ನೋದು ಚೆನ್ನಾಗಿ ಅರ್ಥ ಆಗಿದೆ. ಹಾಗಾಗಿ ಸೌಮ್ಯಭಾವದಿಂದ ಇರೋಕೆ ನಾನು ಕಲ್ತಿದೀನಿ.” ನಿಮಗೇನಾದ್ರೂ ಅನ್ಯಾಯ ಆದಾಗ ಯೇಸು ತರಾನೇ ಎಲ್ಲವನ್ನೂ ಯೆಹೋವನ ಕೈಗೆ ಒಪ್ಪಿಸಿ, ಆಗ ಸೌಮ್ಯಭಾವದಿಂದ ಇರೋಕೆ ಆಗುತ್ತೆ.
“ಸೌಮ್ಯಭಾವದವರು ಸಂತೋಷಿತರು”
ನಾವು ಖುಷಿಯಾಗಿ ಇರಬೇಕಂದ್ರೆ ನಮ್ಮಲ್ಲಿ ಸೌಮ್ಯಭಾವ ಇರಬೇಕು ಅಂತ ಯೇಸುವಿನ ಮಾತಿಂದ ಗೊತ್ತಾಗುತ್ತೆ. “ಸೌಮ್ಯಭಾವದವರು ಸಂತೋಷಿತರು” ಅಂತ ಆತ ಹೇಳಿದ. (ಮತ್ತಾ. 5:5) ಈ ಕೆಳಗಿನ ಸನ್ನಿವೇಶಗಳಲ್ಲಿ ಸೌಮ್ಯಭಾವ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.
ಸೌಮ್ಯಭಾವ ಸಂಸಾರದಲ್ಲಿನ ಸಮಸ್ಯೆ ನಿವಾರಕ. ಆಸ್ಟ್ರೇಲಿಯದ ರಾಬರ್ಟ್ ಎಂಬ ಸಹೋದರ ಹೇಳೋದು: “ಹೆಂಡ್ತಿ ಮನ್ಸಿಗೆ ತುಂಬ ನೋವಾಗೋ ತರ ನಾನು ಮಾತಾಡಿದ್ದೀನಿ, ಆದ್ರೆ ಅವ್ಳಿಗೆ ನೋವು ಮಾಡ್ಬೇಕು ಅನ್ನೋ ಉದ್ದೇಶ ನನಗಿರಲಿಲ್ಲ. ಆಡಿದ ಮಾತನ್ನು ವಾಪಸ್ ತಗೊಳೋಕೆ ಆಗಲ್ಲ. ಅವ್ಳಿಗೆ ಮಾಡಿರೋ ನೋವನ್ನ ನೆನಸಿಕೊಂಡ್ರೆ ತುಂಬ ದುಃಖ ಆಗುತ್ತೆ.”
ಮಾತಿನಲ್ಲಿ “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ.” ನಾವು ಯೋಚಿಸದೇ ಹೇಳೋ ಮಾತು ಸಂಸಾರದ ನೆಮ್ಮದಿಯನ್ನ ಹಾಳು ಮಾಡುತ್ತೆ. (ಯಾಕೋ. 3:2) ಇಂಥ ಸನ್ನಿವೇಶಗಳಲ್ಲಿ ನಾವು ಶಾಂತಿಯಿಂದ ಇರೋಕೆ, ನಾಲಿಗೆಯನ್ನ ಹಿಡಿತದಲ್ಲಿಟ್ಟು ಮಾತಾಡೋಕೆ ಸೌಮ್ಯಭಾವ ಸಹಾಯಮಾಡುತ್ತೆ.—ಜ್ಞಾನೋ. 17:27.
ಶಾಂತಿ ಮತ್ತು ಸ್ವನಿಯಂತ್ರಣ ಬೆಳೆಸಿಕೊಳ್ಳೋಕೆ ರಾಬರ್ಟ್ ಪ್ರಯತ್ನಿಸಿದ. ಇದ್ರಿಂದ ಏನಾದ್ರೂ ಪ್ರಯೋಜನ ಆಯ್ತಾ? ಅವ್ನು ಹೀಗೆ ಹೇಳ್ತಾನೆ: “ಈಗೀಗ ನಮ್ಮಿಬ್ರ ಮಧ್ಯೆ ಏನಾದ್ರೂ ಭಿನ್ನಾಭಿಪ್ರಾಯ ಇದ್ರೆ, ಅವ್ಳು ಹೇಳೋದನ್ನ ಕೇಳ್ಸಿಕೊಳ್ಳೋಕೆ, ಸೌಮ್ಯಭಾವದಿಂದ ಮಾತಾಡೋಕೆ ಮತ್ತು ಬೇಜಾರು ಮಾಡಿಕೊಳ್ಳದಿರೋಕೆ ನಾನು ಪ್ರಯತ್ನಿಸ್ತೇನೆ. ಹಾಗಾಗಿ ಮೊದ್ಲಿಗಿಂತ ಈಗ ನಾವಿಬ್ರೂ ಇನ್ನೂ ಅನ್ಯೋನ್ಯವಾಗಿದ್ದೇವೆ.”
ಸೌಮ್ಯಭಾವ ಬೇರೆಯವ್ರ ಜೊತೆ ಚೆನ್ನಾಗಿರೋಕೆ ಸಹಾಯ ಮಾಡುತ್ತೆ. ಮುಟ್ಟಿದರೆ ಮುನಿ ತರ ಇರೋರಿಗೆ ಸ್ನೇಹಿತರು ಕಡಿಮೆ. ಸೌಮ್ಯಭಾವ “ಶಾಂತಿಯ . . . ಬಂಧದಲ್ಲಿ” ಇರೋಕೆ ಸಹಾಯ ಮಾಡುತ್ತೆ. (ಎಫೆ. 4:2, 3) ಈ ಮುಂಚೆ ತಿಳಿಸಿದ ಕ್ಯಾಥಿ ಹೇಳೋದು: “ಕೆಲ್ವು ಜನ್ರ ಜೊತೆ ಚೆನ್ನಾಗಿರೋಕೆ ಕಷ್ಟವಾದ್ರೂ ಸೌಮ್ಯಭಾವ ಬೆಳೆಸಿಕೊಂಡಿದ್ರಿಂದ ಎಲ್ರ ಜೊತೆ ಖುಷಿಯಾಗಿರೋಕೆ ಆಗ್ತಿದೆ.”
ಸೌಮ್ಯಭಾವ ಮನಶ್ಶಾಂತಿ ಕೊಡುತ್ತೆ. ‘ಮೇಲಣಿಂದ ಬರುವ ವಿವೇಕಕ್ಕೂ’ ಸೌಮ್ಯಭಾವ ಮತ್ತು ಶಾಂತಿಗೂ ಸಂಬಂಧವಿದೆ ಅಂತ ಬೈಬಲ್ ಹೇಳುತ್ತೆ. (ಯಾಕೋ. 3:13, 17) ಸೌಮ್ಯಭಾವ ಇರೋ ವ್ಯಕ್ತಿಗೆ ಶಾಂತ ಸ್ವಭಾವ ಇರುತ್ತೆ. (ಜ್ಞಾನೋ. 14:30) ಸೌಮ್ಯಭಾವ ಬೆಳೆಸಿಕೊಳ್ಳಲು ತುಂಬ ಪ್ರಯತ್ನ ಮಾಡಿದ ಮಾರ್ಟಿನ್ ಅನ್ನೋವ್ರು ಹೇಳೋದು: “ನಾನಂದ್ಕೊಂಡ ರೀತಿಯಲ್ಲೇ ಎಲ್ಲಾ ಆಗ್ಬೇಕು ಅಂತ ಹಠ ಹಿಡಿಯಲ್ಲ. ಹಾಗಾಗಿ ನನಗೀಗ ಮನಶ್ಶಾಂತಿ ಮತ್ತು ಸಂತೋಷ ಸಿಕ್ಕಿದೆ.”
ಸೌಮ್ಯಭಾವ ಬೆಳೆಸಿಕೊಳ್ಳೋಕ್ಕೆ ನಾವು ತುಂಬ ಪ್ರಯತ್ನ ಹಾಕ್ಬೇಕು. ಒಬ್ಬ ಸಹೋದರ ಹೇಳೋದು: “ನಿಜ ಹೇಳ್ಬೇಕಂದ್ರೆ ಈಗ್ಲೂ ಕೆಲವೊಮ್ಮೆ ಕೋಪ ನೆತ್ತಿಗೇರುತ್ತೆ.” ಆದ್ರೆ ಸೌಮ್ಯಭಾವ ಬೆಳೆಸಿಕೊಳ್ಳಿ ಅಂತ ಉತ್ತೇಜಿಸೋ ಯೆಹೋವ, ನಾವು ಆ ಗುಣಾನ ಬೆಳೆಸಿಕೊಳ್ಳೋಕೆ ಸಹಾಯ ಮಾಡ್ತಾನೆ. (ಯೆಶಾ. 41:10; 1 ತಿಮೊ. 6:11) ನಮ್ಗೆ ಬೇಕಾದ “ತರಬೇತಿ” ಕೊಟ್ಟು, ನಮ್ಮನ್ನು ‘ಬಲಪಡಿಸುತ್ತಾನೆ.’ (1 ಪೇತ್ರ 5:10) ಆಗ ನಾವು ಸಹ ಅಪೊಸ್ತಲ ಪೌಲನಂತೆ, ‘ಕ್ರಿಸ್ತನ ಸೌಮ್ಯಭಾವ ಮತ್ತು ದಯೆಯನ್ನು’ ತೋರಿಸುತ್ತೇವೆ.—2 ಕೊರಿಂ. 10:1.
a ಕೆಲ್ವು ಹೆಸ್ರುಗಳನ್ನು ಬದಲಾಯಿಸಲಾಗಿದೆ.