ಅಧ್ಯಯನ ಲೇಖನ 34
ಯೆಹೋವನ ಸಭೆಯಲ್ಲಿ ನೀವು ತುಂಬ ಅಮೂಲ್ಯರು!
“ದೇಹವು ಒಂದೇ ಆಗಿದ್ದು ಅನೇಕ ಅಂಗಗಳಿರುವಂತೆಯೇ ಮತ್ತು ಆ ದೇಹದ ಅಂಗಗಳು ಅನೇಕವಾಗಿರುವುದಾದರೂ ಒಂದೇ ದೇಹವಾಗಿರುವಂತೆಯೇ ಕ್ರಿಸ್ತನು ಸಹ ಇದ್ದಾನೆ.”—1 ಕೊರಿಂ. 12:12.
ಗೀತೆ 53 ಐಕ್ಯದಿಂದ ಕೆಲಸ ಮಾಡುವುದು
ಕಿರುನೋಟa
1. ನಮಗೆ ಯಾವ ಸುಯೋಗ ಸಿಕ್ಕಿದೆ?
ಯೆಹೋವನ ಸಭೆಯಲ್ಲಿರೋದು ನಮಗೆ ಸಿಕ್ಕಿರೋ ಅದ್ಭುತ ಸುಯೋಗ! ನಾವು ನಮ್ಮ ಸಹೋದರ ಸಹೋದರಿಯರ ಜೊತೆ ಯೆಹೋವನ ಆರಾಧನೆ ಮಾಡ್ತಾ ಶಾಂತಿ, ಸಂತೋಷದ ವಾತಾವರಣವನ್ನು ಆನಂದಿಸ್ತಿದ್ದೇವೆ. ಆದ್ದರಿಂದ ಸಭೆಯಲ್ಲಿ ನಮಗೆ ಯಾವ ಪಾತ್ರವಿದೆ ಅಂತ ತಿಳ್ಕೊಬೇಕು.
2. ಅಪೊಸ್ತಲ ಪೌಲ ತನ್ನ ಅನೇಕ ಪತ್ರಗಳಲ್ಲಿ ಯಾವ ಉದಾಹರಣೆ ಬಳಸಿದ್ದಾನೆ?
2 ಆ ಪಾತ್ರ ಏನು ಅಂತ ತಿಳ್ಕೊಳೋಕೆ ಅಪೊಸ್ತಲ ಪೌಲ ತನ್ನ ಅನೇಕ ಪತ್ರಗಳಲ್ಲಿ ಬಳಸಿದ ಒಂದು ಉದಾಹರಣೆ ಸಹಾಯ ಮಾಡುತ್ತೆ. ಆ ಉದಾಹರಣೆಯಲ್ಲಿ ಪೌಲ ಸಭೆಯನ್ನು ಮಾನವ ದೇಹಕ್ಕೆ ಮತ್ತು ಸಭೆಯಲ್ಲಿರೋ ಪ್ರತಿಯೊಬ್ರನ್ನು ದೇಹದ ಅಂಗಗಳಿಗೆ ಹೋಲಿಸಿದ್ದಾನೆ.—ರೋಮ. 12:4-8; 1 ಕೊರಿಂ. 12:12-27; ಎಫೆ. 4:16.
3. ಈ ಲೇಖನದಲ್ಲಿ ನಾವು ಯಾವ ಮೂರು ಪಾಠ ಕಲಿಯಲಿದ್ದೇವೆ?
3 ಸಭೆಯನ್ನು ಬಲಪಡಿಸೋದ್ರಲ್ಲಿ ಪ್ರತಿಯೊಬ್ರಿಗೂ ಒಂದು ಮಹತ್ವದ ಪಾತ್ರವಿದೆ. ನಮ್ಮ ಜಾತಿ-ಭಾಷೆ ಯಾವುದೇ ಆಗಿರಲಿ, ಬಡವರಾಗಿರಲಿ ಶ್ರೀಮಂತರಾಗಿರಲಿ, ವಿದ್ಯಾಭ್ಯಾಸ ಇರಲಿ ಇಲ್ಲದಿರಲಿ ನಮಗೆಲ್ರಿಗೂ ಸಭೆಯನ್ನು ಬಲಪಡಿಸೋಕೆ ಆಗುತ್ತೆ. ಹಾಗಾಗಿ ಪೌಲನ ಉದಾಹರಣೆಯಿಂದ ನಾವು ಕಲಿಬಹುದಾದ ಮೂರು ಪಾಠಗಳನ್ನು ಈ ಲೇಖನದಲ್ಲಿ ನೋಡಲಿದ್ದೇವೆ. ಅವು ಯಾವುವೆಂದ್ರೆ, (1) ಯೆಹೋವನ ಸಭೆಯಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಪಾತ್ರವಿದೆ, (2) ‘ಸಭೆಗೆ ನನ್ನಿಂದ ಪ್ರಯೋಜನ ಇಲ್ಲ’ ಅಂತ ಅನಿಸಿದಾಗ ನಾವೇನು ಮಾಡ್ಬೇಕು? (3) ಸಭೆಯಲ್ಲಿ ನಮಗಿರೋ ಪಾತ್ರವನ್ನು ನಿರ್ವಹಿಸ್ತಾ ಯಾಕೆ ಬಿಝಿಯಾಗಿರಬೇಕು?
ಸಭೆಯಲ್ಲಿ ನಮಗಿರೋ ಪಾತ್ರ
4. ರೋಮನ್ನರಿಗೆ 12:4, 5 ರಿಂದ ನಾವೇನು ಕಲಿಬಹುದು?
4 ಪೌಲನ ಉದಾಹರಣೆಯಿಂದ ನಾವು ಕಲಿಯುವಂಥ ಮೊದಲ್ನೇ ಪಾಠ ಏನಂದ್ರೆ ಯೆಹೋವನ ಕುಟುಂಬದಲ್ಲಿ ಪ್ರತಿಯೊಬ್ರಿಗೂ ಒಂದು ಪ್ರಾಮುಖ್ಯ ಪಾತ್ರವಿದೆ. ಪೌಲ ಹೀಗೆ ಹೇಳಿದ್ನು: “ಒಂದು ದೇಹದಲ್ಲಿ ಅನೇಕ ಅಂಗಗಳಿದ್ದರೂ ಆ ಅಂಗಗಳಿಗೆಲ್ಲ ಹೇಗೆ ಒಂದೇ ಕೆಲಸವಿರುವುದಿಲ್ಲವೋ ಹಾಗೆಯೇ ನಾವು ಸಹ ಅನೇಕರಿರುವುದಾದರೂ ಕ್ರಿಸ್ತನೊಂದಿಗೆ ಐಕ್ಯದಲ್ಲಿ ಒಂದೇ ದೇಹವಾಗಿದ್ದು ಪ್ರತಿಯೊಬ್ಬರು ಒಬ್ಬರಿಗೊಬ್ಬರು ಪರಸ್ಪರ ಅಂಗಗಳಾಗಿದ್ದೇವೆ.” (ರೋಮ. 12:4, 5) ಪೌಲನ ಮಾತಿನ ಅರ್ಥವೇನಾಗಿತ್ತು? ಸಭೆಯಲ್ಲಿ ನಮಗೆ ಬೇರೆಬೇರೆ ಪಾತ್ರವಿರುವುದಾದ್ರೂ ನಮ್ಮಲ್ಲಿ ಪ್ರತಿಯೊಬ್ರು ಯೆಹೋವನಿಗೆ ಅಮೂಲ್ಯರೇ!
5. ಯೆಹೋವನು ಸಭೆಗೆ ಯಾವ “ದಾನಗಳನ್ನು” ಕೊಟ್ಟಿದ್ದಾನೆ?
5 ಸಭೆಯ ಮುಂದಾಳತ್ವ ವಹಿಸುವವ್ರಿಗೆ ಮಾತ್ರ ಸಭೆಯಲ್ಲಿ ಪ್ರಾಮುಖ್ಯ ಪಾತ್ರವಿದೆ ಅಂತ ನಿಮ್ಗೆ ಅನಿಸಬಹುದು. (1 ಥೆಸ. 5:12; ಇಬ್ರಿ. 13:17) ಯೆಹೋವನು ಯೇಸು ಕ್ರಿಸ್ತನ ಮೂಲಕ ಸಭೆಗೆ “ಮನುಷ್ಯರಲ್ಲಿ ದಾನಗಳನ್ನು” ಕೊಟ್ಟಿದ್ದಾನೆ ಅನ್ನೋದು ನಿಜಾನೇ. (ಎಫೆ. 4:8) ಇವ್ರಲ್ಲಿ ಆಡಳಿತ ಮಂಡಲಿಯ ಸದಸ್ಯರು, ಅವರ ಸಹಾಯಕರು, ಬ್ರಾಂಚ್ ಕಮಿಟಿಯ ಸದಸ್ಯರು, ಸಂಚರಣ ಮೇಲ್ವಿಚಾರಕರು, ಬೈಬಲ್ ಶಾಲೆಗಳ ಬೋಧಕರು, ಸಭಾ ಹಿರಿಯರು ಮತ್ತು ಸಹಾಯಕ ಸೇವಕರು ಸೇರಿದ್ದಾರೆ. ಇವ್ರನ್ನು ಪವಿತ್ರಾತ್ಮದಿಂದ ನೇಮಿಸಲಾಗಿದೆ. ಯೆಹೋವನ ಅಮೂಲ್ಯ ಕುರಿಗಳನ್ನು ನೋಡಿಕೊಳ್ಳುವ ಮತ್ತು ಸಭೆಯನ್ನು ಬಲಪಡಿಸುವ ಜವಾಬ್ದಾರಿ ಇವರಿಗಿದೆ.—1 ಪೇತ್ರ 5:2, 3.
6. ಒಂದನೇ ಥೆಸಲೊನೀಕ 2:6-8 ರ ಪ್ರಕಾರ ಪವಿತ್ರಾತ್ಮದಿಂದ ನೇಮಿತರಾಗಿರೋ ಸಹೋದರರು ಏನು ಮಾಡಲು ಪ್ರಯತ್ನಿಸ್ತಾರೆ?
6 ಬೇರೆಬೇರೆ ಜವಾಬ್ದಾರಿಗಳನ್ನು ನಿರ್ವಹಿಸೋಕೆ ಈ ಸಹೋದರರನ್ನು ಪವಿತ್ರಾತ್ಮದಿಂದ ನೇಮಿಸಲಾಗಿದೆ. ದೇಹದ ಅನೇಕ ಅಂಗಗಳು ಉದಾಹರಣೆಗೆ ಕೈ ಮತ್ತು ಕಾಲು ಹೇಗೆ ಇಡೀ ದೇಹಕ್ಕೆ ಪ್ರಯೋಜನ ತರುವಂಥ ಕೆಲಸಗಳನ್ನು ಮಾಡುತ್ತವೋ ಹಾಗೇ ಈ ಸಹೋದರರು ಇಡೀ ಸಭೆಗೆ ಪ್ರಯೋಜನ ತರುವಂಥ ಕೆಲಸಗಳನ್ನು ಮಾಡ್ತಾರೆ. ಎಲ್ರೂ ತಮ್ಮನ್ನು ಹೊಗಳಬೇಕು ಅಂತ ಅವ್ರು ಬಯಸಲ್ಲ. ಸಭೆಯಲ್ಲಿರೋ ಸಹೋದರ ಸಹೋದರಿಯರನ್ನು ಬಲಪಡಿಸಲಿಕ್ಕಾಗಿ ತಮ್ಮ ಶ್ರಮ, ಶಕ್ತಿಯನ್ನ ಧಾರೆಯೆರೆಯುತ್ತಾರೆ. (1 ಥೆಸಲೊನೀಕ 2:6-8 ಓದಿ.) ಇಂಥ ನಿಸ್ವಾರ್ಥ, ಅರ್ಹ ಸಹೋದರರನ್ನು ನಮಗೋಸ್ಕರ ಕೊಟ್ಟಿರೋದಕ್ಕಾಗಿ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು!
7. ಪೂರ್ಣ ಸಮಯ ಸೇವೆ ಮಾಡೋವ್ರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?
7 ಕೆಲವು ಸಹೋದರ ಸಹೋದರಿಯರು ಮಿಷನರಿಗಳಾಗಿ, ವಿಶೇಷ ಪಯನೀಯರರಾಗಿ ಅಥ್ವಾ ರೆಗ್ಯುಲರ್ ಪಯನೀಯರರಾಗಿ ಸೇವೆ ಮಾಡ್ತಿದ್ದಾರೆ. ಹೀಗೆ ಪೂರ್ಣ ಸಮಯ ಸೇವೆ ಮಾಡುತ್ತಿರುವ ಸಹೋದರ ಸಹೋದರಿಯರು ಲೋಕದಾದ್ಯಂತ ಇದ್ದಾರೆ. ಇವ್ರು ಸುವಾರ್ತೆ ಸಾರೋದ್ರಲ್ಲಿ ಮತ್ತು ಅನೇಕರನ್ನು ಕ್ರಿಸ್ತನ ಶಿಷ್ಯರನ್ನಾಗಿ ಮಾಡೋದ್ರಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಇವ್ರಲ್ಲಿ ಹೆಚ್ಚಿನವ್ರಿಗೆ ಹಣ ಆಸ್ತಿ ಇಲ್ಲ. ಆದ್ರೆ ಯೆಹೋವನು ಅವ್ರ ಜೀವ್ನದಲ್ಲಿ ಆಶೀರ್ವಾದದ ಸುರಿಮಳೆ ಸುರಿಸಿದ್ದಾನೆ. (ಮಾರ್ಕ 10:29, 30) ಇವ್ರು ನಮ್ಮ ಸಭೆಯ ಭಾಗವಾಗಿರೋದು ನಿಜಕ್ಕೂ ಒಂದು ದೊಡ್ಡ ಆಶೀರ್ವಾದ. ನಾವೆಲ್ರೂ ಇವ್ರನ್ನು ತುಂಬ ಪ್ರೀತಿಸ್ತೇವೆ!
8. ಸುವಾರ್ತೆ ಸಾರೋ ಪ್ರತಿ ಪ್ರಚಾರಕರು ಯೆಹೋವನಿಗೆ ಯಾಕೆ ಅಮೂಲ್ಯರು?
8 ಮುಂದಾಳತ್ವ ವಹಿಸುವವ್ರು ಮತ್ತು ಪೂರ್ಣ ಸಮಯದ ಸೇವಕರು ಮಾತ್ರ ಸಭೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಾರಾ? ಖಂಡಿತ ಇಲ್ಲ. ಸುವಾರ್ತೆ ಸಾರೋ ಪ್ರತಿ ಪ್ರಚಾರಕರು ಯೆಹೋವನಿಗೆ ಮತ್ತು ಸಭೆಗೆ ಅಮೂಲ್ಯರೇ. (ರೋಮ. 10:15; 1 ಕೊರಿಂ. 3:6-9) ಯಾಕಂದ್ರೆ ಜನ್ರನ್ನು ಕ್ರಿಸ್ತನ ಶಿಷ್ಯರನ್ನಾಗಿ ಮಾಡೋದೇ ಸಭೆಯ ಮುಖ್ಯ ಗುರಿಯಾಗಿದೆ. (ಮತ್ತಾ. 28:19, 20; 1 ತಿಮೊ. 2:4) ಸಭೆಯಲ್ಲಿರೋ ಎಲ್ರು, ದೀಕ್ಷಾಸ್ನಾನವಾಗಿರಲಿ ಇಲ್ಲದಿರಲಿ ಸುವಾರ್ತೆ ಸಾರೋಕೆ ಎಲ್ಲ ರೀತಿಯ ಪ್ರಯತ್ನ ಹಾಕಬೇಕು.—ಮತ್ತಾ. 24:14.
9. ಕ್ರೈಸ್ತ ಸಹೋದರಿಯರು ಯಾಕೆ ಅಮೂಲ್ಯರು?
9 ಸಭೆಯಲ್ಲಿರೋ ಸಹೋದರಿಯರಿಗೂ ಯೆಹೋವ ಪ್ರಾಮುಖ್ಯ ಪಾತ್ರ ಕೊಟ್ಟಿದ್ದಾನೆ. ನಿಷ್ಠೆಯಿಂದ ಸೇವೆ ಮಾಡುವಂಥ ಪತ್ನಿಯರನ್ನು, ತಾಯಂದಿರನ್ನು, ವಿಧವೆಯರನ್ನು ಮತ್ತು ಮದುವೆ ಆಗದ ಸಹೋದರಿಯರನ್ನು ಆತನು ತುಂಬ ಮಾನ್ಯ ಮಾಡ್ತಾನೆ. ದೇವರನ್ನು ಮೆಚ್ಚಿಸಿದಂಥ ಅನೇಕ ಆದರ್ಶ ಸ್ತ್ರೀಯರ ಬಗ್ಗೆ ಬೈಬಲ್ ತಿಳ್ಸುತ್ತೆ. ಆ ಸ್ತ್ರೀಯರು ತೋರಿಸಿದ ವಿವೇಕ, ನಂಬಿಕೆ, ಹುರುಪು, ಧೈರ್ಯ, ಉದಾರತೆ ಮತ್ತು ಅವರ ಸತ್ಕ್ರಿಯೆಗಳ ಬಗ್ಗೆ ಬೈಬಲ್ ವರ್ಣಿಸುತ್ತೆ. (ಲೂಕ 8:2, 3; ಅ. ಕಾ. 16:14, 15; ರೋಮ. 16:3, 6; ಫಿಲಿ. 4:3; ಇಬ್ರಿ. 11:11, 31, 35) ಇಂಥ ಅದ್ಭುತ ಗುಣಗಳಿರೋ ಸಹೋದರಿಯರು ನಮ್ಮ ಸಭೆಯಲ್ಲೂ ಇರೋದಕ್ಕೆ ನಾವು ಯೆಹೋವನಿಗೆ ಆಭಾರಿಗಳಾಗಿದ್ದೇವೆ!
10. ವೃದ್ಧ ಸಹೋದರ ಸಹೋದರಿಯರನ್ನು ನಾವ್ಯಾಕೆ ಮಾನ್ಯ ಮಾಡ್ತೇವೆ?
10 ಸಭೆಯಲ್ಲಿ ವೃದ್ಧ ಸಹೋದರ ಸಹೋದರಿಯರು ಇರೋದು ಸಹ ದೊಡ್ಡ ಆಶೀರ್ವಾದ! ಅವ್ರಲ್ಲಿ ಕೆಲವ್ರು ಜೀವನಪೂರ್ತಿ ಯೆಹೋವನಿಗೆ ನಿಷ್ಠೆಯಿಂದ ಸೇವೆ ಮಾಡಿದಂಥವ್ರು. ಇನ್ನು ಕೆಲವ್ರು ಇತ್ತೀಚೆಗೆ ಸತ್ಯ ಕಲಿತಿರುವಂಥವ್ರು. ಏನೇ ಆಗಿರಲಿ, ಈ ಎಲ್ಲಾ ಸಹೋದರ ಸಹೋದರಿಯರಿಗೆ ವಯಸ್ಸಾಗುತ್ತಿರೋ ಕಾರಣ ಆರೋಗ್ಯ ಸಮಸ್ಯೆಗಳು ಇರಬಹುದು. ಹಾಗಾಗಿ ಅವ್ರಿಗೆ ಸಭೆ ಕೆಲ್ಸವನ್ನು, ಸಾರುವ ಕೆಲ್ಸವನ್ನು ಹೆಚ್ಚು ಮಾಡಕ್ಕಾಗಲ್ಲ. ಆದ್ರೂ ಸೇವೆ ಮಾಡೋಕೆ, ಬೇರೆಯವ್ರಿಗೆ ಪ್ರೋತ್ಸಾಹ, ತರಬೇತಿ ಕೊಡೋಕೆ ತಮ್ಮಿಂದಾದ ಎಲ್ಲ ಪ್ರಯತ್ನ ಮಾಡ್ತಿದ್ದಾರೆ! ನಾವು ಅವ್ರಿಂದ ತುಂಬ ವಿಷ್ಯ ಕಲಿಬಹುದು. ಇವ್ರೆಲ್ರೂ ನಮ್ಮ ಮತ್ತು ಯೆಹೋವನ ಕಣ್ಣಿಗೆ ಸುಂದರ ಮುತ್ತು-ರತ್ನಗಳು ಆಗಿದ್ದಾರೆ.—ಜ್ಞಾನೋ. 16:31.
11-12. ಸಭೆಯಲ್ಲಿರೋ ಮಕ್ಕಳು, ಯುವಜನ್ರಿಂದ ನಿಮಗೆ ಹೇಗೆ ಉತ್ತೇಜನ ಸಿಕ್ಕಿದೆ?
11 ಸಭೆಯಲ್ಲಿರೋ ಮಕ್ಕಳು ಮತ್ತು ಯುವಜನರ ಬಗ್ಗೆನೂ ಯೋಚಿಸಿ. ಸೈತಾನನ ಈ ಲೋಕದಲ್ಲಿ ಬೆಳೆಯುತ್ತಿರೋ ಅವ್ರು ಪ್ರತಿದಿನ ಅನೇಕ ಕಷ್ಟಗಳನ್ನು ಅನುಭವಿಸ್ತಾರೆ. ಕೆಟ್ಟ ಕೆಲ್ಸ ಮಾಡುವಂಥ ಮತ್ತು ತಪ್ಪಾಗಿ ಯೋಚಿಸುವಂಥ ಒತ್ತಡ ಅವ್ರಿಗೆ ಬರ್ತಾನೆ ಇರುತ್ತೆ. (1 ಯೋಹಾ. 5:19) ಇಷ್ಟೆಲ್ಲಾ ಇದ್ರೂ ಅವ್ರು ಕೂಟಗಳಲ್ಲಿ ಒಳ್ಳೇ ಉತ್ತರ ಕೊಡ್ತಾರೆ, ಸೇವೆಗೆ ಹೋಗ್ತಾರೆ ಮತ್ತು ಬೇರೆಯವ್ರ ಹತ್ರ ತಮ್ಮ ನಂಬಿಕೆಯ ಬಗ್ಗೆ ಧೈರ್ಯವಾಗಿ ಸಮರ್ಥಿಸ್ತಾರೆ. ಇದನ್ನೆಲ್ಲಾ ನೋಡ್ವಾಗ ನಮ್ಗೆ ತುಂಬ ಉತ್ತೇಜನ ಸಿಗುತ್ತೆ. ಮಕ್ಕಳೇ, ಯುವಜನ್ರೇ ಯೆಹೋವನ ಕಣ್ಮಣಿಗಳಾಗಿರೋ ನಿಮ್ಗೂ ಸಭೆಯಲ್ಲಿ ಒಂದು ಮುಖ್ಯ ಪಾತ್ರವಿದೆ!—ಕೀರ್ತ. 8:2.
12 ಆದ್ರೂ ಕೆಲವು ಸಹೋದರ ಸಹೋದರಿಯರಿಗೆ ತಮ್ಮಿಂದ ಸಭೆಗೆ ಏನಾದ್ರೂ ಪ್ರಯೋಜನ ಇದ್ಯಾ ಅನ್ನೋ ಸಂಶಯ ಇರುತ್ತೆ. ಹಾಗಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಅಮೂಲ್ಯರಾಗಿದ್ದೇವೆ, ಸಭೆಯಲ್ಲಿ ನಮ್ಗೂ ಮುಖ್ಯ ಪಾತ್ರವಿದೆ ಅಂತ ಅರ್ಥಮಾಡ್ಕೋಬೇಕು. ಅದರ ಬಗ್ಗೆ ಈಗ ಚರ್ಚಿಸೋಣ.
ಸಭೆಗೆ ನೀವು ಅಮೂಲ್ಯರು ಅನ್ನೋದನ್ನ ಅರ್ಥಮಾಡ್ಕೊಳ್ಳಿ
13-14. ಸಭೆಗೆ ತಮ್ಮಿಂದ ಏನೂ ಪ್ರಯೋಜನ ಇಲ್ಲ ಅಂತ ಕೆಲವ್ರಿಗೆ ಯಾಕೆ ಅನಿಸ್ಬಹುದು?
13 ಪೌಲ ತಿಳಿಸಿದ ಉದಾಹರಣೆಯಿಂದ ನಾವು ಕಲಿಯೋ ಎರಡನೇ ಪಾಠ ನೋಡೋಣ. ಇಂದು ಸಭೆಯಲ್ಲಿರೋ ಅನೇಕರಿಗೆ ತಮ್ಮಿಂದ ಸಭೆಗೆ ಏನೂ ಪ್ರಯೋಜನ ಇಲ್ಲ ಅಂತ ಅನ್ಸುತ್ತೆ. ಅವ್ರನ್ನು ಪ್ರೋತ್ಸಾಹಿಸಲು ಪೌಲ ಹೀಗೆ ಬರೆದಿದ್ದಾನೆ: “ಒಂದುವೇಳೆ ಪಾದವು ‘ನಾನು ಕೈಯಲ್ಲದ ಕಾರಣ ದೇಹದ ಭಾಗವಲ್ಲ’ ಎಂದು ಹೇಳುವುದಾದರೆ ಈ ಕಾರಣಕ್ಕಾಗಿ ಅದು ದೇಹದ ಭಾಗವಾಗದೆ ಇರುವುದಿಲ್ಲ. ಒಂದುವೇಳೆ ಕಿವಿಯು ‘ನಾನು ಕಣ್ಣಲ್ಲದ ಕಾರಣ ದೇಹದ ಭಾಗವಲ್ಲ’ ಎಂದು ಹೇಳುವುದಾದರೆ ಈ ಕಾರಣಕ್ಕಾಗಿ ಅದು ದೇಹದ ಭಾಗವಾಗದೆ ಇರುವುದಿಲ್ಲ.” (1 ಕೊರಿಂ. 12:15, 16) ಪೌಲನ ಮಾತಿನ ಅರ್ಥವೇನು?
14 ಒಂದುವೇಳೆ ಸಭೆಯಲ್ಲಿರೋ ಬೇರೆಯವ್ರ ಜೊತೆ ನಿಮ್ಮನ್ನು ಹೋಲಿಸಿಕೊಂಡ್ರೆ ‘ನನ್ನಿಂದ ಸಭೆಗೆ ಏನೂ ಪ್ರಯೋಜನ ಇಲ್ಲ’ ಅಂತ ನಿಮ್ಗೆ ಅನಿಸ್ಬಹುದು. ಸಭೆಯಲ್ಲಿ ಕೆಲವ್ರಿಗೆ ಚೆನ್ನಾಗಿ ಬೋಧನೆ ಮಾಡೋ ಕಲೆಯಿರುತ್ತೆ, ಇನ್ನು ಕೆಲವ್ರಿಗೆ ಕೆಲ್ಸಗಳನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮಾಡೋ ಕೌಶಲವಿರುತ್ತೆ ಮತ್ತು ಇನ್ನು ಕೆಲವ್ರಿಗೆ ಸಾಂತ್ವನ, ಉತ್ತೇಜನ ಕೊಡೋ ಸಾಮರ್ಥ್ಯವಿರುತ್ತೆ. ಇಂಥ ಸಾಮರ್ಥ್ಯಗಳು ನಿಮ್ಮಲ್ಲಿಲ್ಲ ಅಂತ ಅನಿಸ್ಬಹುದು. ಆ ರೀತಿ ಯೋಚಿಸೋದು ಒಳ್ಳೇದೇ. ಯಾಕಂದ್ರೆ ಅದು ನಿಮ್ಮಲ್ಲಿ ದೀನತೆ, ನಮ್ರತೆ ಇದೆ ಅನ್ನೋದನ್ನು ತೋರಿಸಿಕೊಡುತ್ತೆ. (ಫಿಲಿ. 2:3) ಆದ್ರೆ ಯಾವಾಗ್ಲೂ ಇಂಥ ಸಾಮರ್ಥ್ಯ ಇರುವವರ ಜೊತೆ ನಿಮ್ಮನ್ನು ಹೋಲಿಸಿಕೊಂಡ್ರೆ ನಿಮ್ಮ ಬಗ್ಗೆ ನಿಮ್ಗೇ ನಿರುತ್ಸಾಹ ಆಗ್ಬಹುದು. ಪೌಲ ತಿಳಿಸಿದಂತೆ ‘ಸಭೆಗೆ ನನ್ನಿಂದ ಏನೂ ಪ್ರಯೋಜನ ಇಲ್ಲ’ ಅಂತ ಅನಿಸ್ಬಹುದು. ಇಂಥ ಅನಿಸಿಕೆಗಳಿಂದ ಹೊರಬರೋಕೆ ಯಾವುದು ಸಹಾಯ ಮಾಡುತ್ತೆ?
15. ಒಂದನೇ ಕೊರಿಂಥ 12:4-11 ರಿಂದ ನಾವೇನು ಕಲಿಬಹುದು?
15 ಈ ವಿಷ್ಯದ ಬಗ್ಗೆ ಯೋಚಿಸಿ. ಯೆಹೋವನು ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರಿಗೆ ಪವಿತ್ರಾತ್ಮದ ಅದ್ಭುತ ವರಗಳನ್ನು ಕೊಟ್ಟನು. ಆದ್ರೆ ಆ ಎಲ್ಲಾ ಕ್ರೈಸ್ತರು ಒಂದೇ ತರದ ವರವನ್ನು ಪಡಕೊಳ್ಳಲಿಲ್ಲ. (1 ಕೊರಿಂಥ 12:4-11 ಓದಿ.) ಯೆಹೋವನು ಅವ್ರಿಗೆ ಬೇರೆಬೇರೆ ವರಗಳನ್ನು ಮತ್ತು ಸಾಮರ್ಥ್ಯಗಳನ್ನು ಕೊಟ್ಟರೂ ಅವ್ರಲ್ಲಿ ಪ್ರತಿಯೊಬ್ರು ಅಮೂಲ್ಯರಾಗಿದ್ರು. ಇವತ್ತು ನಮ್ಗೆ ಪವಿತ್ರಾತ್ಮದ ಅದ್ಭುತ ವರಗಳು ಸಿಗಲ್ಲ. ಆದ್ರೆ ಈಗ್ಲೂ ಆ ತತ್ವ ಅನ್ವಯವಾಗುತ್ತೆ. ಎಲ್ರಿಗೂ ಒಂದೇ ತರದ ಸಾಮರ್ಥ್ಯಗಳು ಇಲ್ಲದಿದ್ರು ನಾವೆಲ್ರೂ ಯೆಹೋವನಿಗೆ ಅಮೂಲ್ಯರು.
16. ಅಪೊಸ್ತಲ ಪೌಲ ಕೊಟ್ಟಿರೋ ಯಾವ ಸಲಹೆನ ನಾವು ಪಾಲಿಸ್ಬೇಕು?
16 ಬೇರೆಯವ್ರ ಜೊತೆ ನಮ್ಮನ್ನು ಹೋಲಿಸಿಕೊಳ್ಳೋ ಬದ್ಲಿಗೆ ಅಪೊಸ್ತಲ ಪೌಲ ದೇವಪ್ರೇರಿತವಾಗಿ ಕೊಟ್ಟಿರೋ ಈ ಸಲಹೆಯನ್ನು ಅನ್ವಯಿಸಿಕೊಳ್ಳೋಣ. ಆತ ಹೀಗೆ ಹೇಳಿದ: “ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನಿಗೆ ತನ್ನ ವಿಷಯದಲ್ಲೇ ಹೆಚ್ಚಳಪಡಲು ಕಾರಣವಿರುವುದೇ ಹೊರತು ಬೇರೊಬ್ಬ ವ್ಯಕ್ತಿಯೊಂದಿಗೆ ಹೋಲಿಕೆಯಲ್ಲಿ ಅಲ್ಲ.”—ಗಲಾ. 6:4.
17. ಪೌಲನ ಸಲಹೆಯನ್ನು ಪಾಲಿಸೋದಾದ್ರೆ ನಮ್ಗೆ ಯಾವ ಪ್ರಯೋಜ್ನ ಸಿಗುತ್ತೆ?
17 ಪೌಲನ ಸಲಹೆಯನ್ನು ಪಾಲಿಸುತ್ತಾ ನಮ್ಮ ಸ್ವಂತ ಕೆಲಸಗಳನ್ನು ಪರೀಕ್ಷಿಸೋದಾದ್ರೆ ನಮ್ಮಲ್ಲಿರೋ ವಿಶೇಷ ವರ ಮತ್ತು ಸಾಮರ್ಥ್ಯಗಳನ್ನು ಗುರುತಿಸೋಕಾಗುತ್ತೆ. ಉದಾಹರಣೆಗೆ, ಒಬ್ಬ ಹಿರಿಯನಿಗೆ ಚೆನ್ನಾಗಿ ಭಾಷಣ ಕೊಡೋಕೆ ಬರದಿರಬಹುದು. ಆದ್ರೆ ಅವನು ಶಿಷ್ಯರನ್ನಾಗಿ ಮಾಡೋ ಕೆಲ್ಸವನ್ನು ಚೆನ್ನಾಗಿ ಮಾಡ್ತಿರಬಹುದು. ಅಥ್ವಾ ಒಬ್ಬ ಹಿರಿಯನಿಗೆ ಸಭೆಯಲ್ಲಿರೋ ಬೇರೆ ಹಿರಿಯರ ತರ ಕೆಲ್ಸಗಳನ್ನು ವ್ಯವಸ್ಥಿತವಾಗಿ ಮಾಡೋಕೆ ಬರದಿರಬಹುದು. ಆದ್ರೆ ಅವನು ಪ್ರೀತಿಯಿರೋ ಹಿರಿಯನಾಗಿದ್ದು ಎಲ್ರೂ ಅವನ ಹತ್ರ ಬೈಬಲ್ ಸಲಹೆ ಕೇಳೋಕೆ ಇಷ್ಟಪಡ್ಬಹುದು. ಅಥ್ವಾ ಅವನು ಅತಿಥಿಸತ್ಕಾರ ಮಾಡೋದ್ರಲ್ಲಿ ಹೆಸ್ರುವಾಸಿ ಆಗಿರಬಹುದು. (ಇಬ್ರಿ. 13:2, 16) ನಮ್ಮಲ್ಲಿರೋ ಸ್ವಂತ ಸಾಮರ್ಥ್ಯ ಮತ್ತು ವರಗಳನ್ನು ಗುರುತಿಸಿದಾಗ ನಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ ಮತ್ತು ‘ನನ್ನಿಂದನೂ ಸಭೆಗೆ ಪ್ರಯೋಜನ ಇದೆ’ ಅಂತ ಅನ್ಸುತ್ತೆ. ಅಷ್ಟೇ ಅಲ್ಲ, ನಮ್ಮಲ್ಲಿ ಇಲ್ಲದ ಸಾಮರ್ಥ್ಯಗಳಿರೋ ಸಹೋದರರ ಬಗ್ಗೆನೂ ನಮ್ಗೆ ಹೊಟ್ಟೆಕ್ಕಿಚ್ಚಾಗಲ್ಲ.
18. ನಮ್ಮ ಸಾಮರ್ಥ್ಯಗಳನ್ನು ಹೇಗೆ ಹೆಚ್ಚಿಸಬಹುದು?
18 ಸಭೆಯಲ್ಲಿ ನಮಗೆ ಯಾವುದೇ ಪಾತ್ರ ಇರಲಿ ನಾವೆಲ್ರೂ ಸೇವೆನ ಚೆನ್ನಾಗಿ ಮಾಡೋಕೆ ಮತ್ತು ನಮ್ಮ ಸಾಮರ್ಥ್ಯಗಳನ್ನು ಹೆಚ್ಚಸಿಕೊಳ್ಳೋಕೆ ಅವಿರತ ಪ್ರಯತ್ನ ಮಾಡ್ಬೇಕು. ಇದಕ್ಕಾಗಿ ಯೆಹೋವ ನಮಗೆ ತನ್ನ ಸಂಘಟನೆಯ ಮೂಲಕ ಅದ್ಭುತ ತರಬೇತಿ ಕೊಡ್ತಿದ್ದಾನೆ. ಉದಾಹರಣೆಗೆ, ವಾರಮಧ್ಯದ ಕೂಟದಲ್ಲಿ ಸೇವೆಯನ್ನು ಚೆನ್ನಾಗಿ ಮಾಡಲು ನಮಗೆ ಸಲಹೆ ಸೂಚನೆಗಳು ಸಿಗುತ್ತೆ. ನೀವು ಸೇವೆಯಲ್ಲಿ ಈ ಸಲಹೆಸೂಚನೆಗಳನ್ನು ಪಾಲಿಸ್ತಿದ್ದೀರಾ?
19. ರಾಜ್ಯ ಪ್ರಚಾರಕರ ಶಾಲೆಗೆ ಹೋಗೋ ಗುರಿನ ಹೇಗೆ ಮುಟ್ಬಹುದು?
19 ಯೆಹೋವನು ರಾಜ್ಯ ಪ್ರಚಾರಕರ ಶಾಲೆ ಮೂಲಕನೂ ಅದ್ಭುತ ತರಬೇತಿ ಕೊಡ್ತಾನೆ. ಆ ಶಾಲೆಗೆ ಹಾಜರಾಗುವ ಸಹೋದರ ಸಹೋದರಿಯರು ಪೂರ್ಣ ಸಮಯದ ಸೇವಕರಾಗಿರಬೇಕು ಮತ್ತು ಅವರ ವಯಸ್ಸು 23 ರಿಂದ 65ರೊಳಗೆ ಇರಬೇಕು. ‘ಈ ಶಾಲೆಗೆ ಹೋಗೋಕೆ ನನ್ನಿಂದಾಗಲ್ಲ’ ಅಂತ ನಿಮಗನಿಸಬಹುದು. ಯಾಕೆ ಆಗಲ್ಲ ಅಂತ ಕಾರಣಗಳನ್ನು ಲೆಕ್ಕ ಹಾಕೋ ಬದ್ಲಿಗೆ ಆ ಶಾಲೆಗೆ ಹೋಗೋಕೆ ಯಾಕೆ ಇಷ್ಟಪಡ್ತೀರಿ ಅನ್ನೋ ಕಾರಣಗಳನ್ನು ಪಟ್ಟಿ ಮಾಡಿ. ನಂತರ ಆ ಶಾಲೆಗೆ ಹೋಗಲು ಬೇಕಾದ ಅರ್ಹತೆಗಳನ್ನು ಮುಟ್ಟಲು ಸಹಾಯ ಮಾಡುವಂಥ ಯೋಜನೆ ಮಾಡಿ. ಯೆಹೋವನ ಸಹಾಯದಿಂದ ಮತ್ತು ನಿಮ್ಮ ಶ್ರಮದಿಂದ ನಿಮಗೆ ಅಸಾಧ್ಯ ಅನ್ಸಿದ್ದನ್ನೂ ಸಾಧಿಸಬಹುದು.
ಸಭೆಯನ್ನು ಬಲಪಡಿಸೋಕೆ ನಿಮ್ಮಲ್ಲಿರೋ ವರವನ್ನ ಬಳಸಿ
20. ರೋಮನ್ನರಿಗೆ 12:6-8 ರಿಂದ ನಾವೇನು ಕಲಿತೀವಿ?
20 ಪೌಲ ತಿಳಿಸಿದ ಉದಾಹರಣೆಯಿಂದ ನಾವು ಕಲಿಯೋ ಮೂರನೇ ಪಾಠ ರೋಮನ್ನರಿಗೆ 12:6-8 ರಲ್ಲಿದೆ. (ಓದಿ.) ಇಲ್ಲಿನೂ ಪೌಲ ಸಭೆಯಲ್ಲಿ ಪ್ರತಿಯೊಬ್ರಿಗೂ ಬೇರೆಬೇರೆ ವರಗಳಿರುತ್ತವೆ ಅಂತ ಹೇಳಿದ್ದಾನೆ. ನಮಗೆ ಯಾವುದೇ ವರಗಳಿದ್ರೂ ಸಭೆಯನ್ನ ಬಲಪಡಿಸಲಿಕ್ಕಾಗಿ ಅವನ್ನ ಬಳಸಬೇಕು ಅಂತ ಒತ್ತಿಹೇಳಿದ್ದಾನೆ.
21-22. ರಾಬರ್ಟ್ ಮತ್ತು ಫೆಲಿಸ್ರ ಅನುಭವದಿಂದ ನಾವೇನು ಕಲಿಬಹುದು?
21 ರಾಬರ್ಟ್b ಅನ್ನೋ ಸಹೋದರನ ಉದಾಹರಣೆ ನೋಡಿ. ಬೇರೆ ದೇಶದಲ್ಲಿ ಸೇವೆ ಮಾಡ್ತಿದ್ದ ಅವನಿಗೆ ತನ್ನ ಸ್ವಂತ ದೇಶದ ಬೆತೆಲ್ನಲ್ಲಿ ಸೇವೆ ಮಾಡೋ ನೇಮಕ ಸಿಕ್ತು. “ಏನೋ ತಪ್ಪು ಮಾಡಿದ್ದಕ್ಕೆ ನಿಮ್ಮ ನೇಮಕನ ಬದಲಾಯಿಸಿದ್ವಿ ಅಂತ ಅಂದುಕೊಳ್ಬೇಡಿ” ಅಂತ ಸಹೋದರರು ಹೇಳಿದ್ರೂ ಅವನಿಗೆ ಅದನ್ನು ನಂಬಕ್ಕೆ ಆಗ್ಲಿಲ್ಲ. “ಮುಂಚಿನ ನೇಮಕನ ಚೆನ್ನಾಗಿ ಮಾಡಿಲ್ವೇನೋ ಅಂತ ತುಂಬ ತಿಂಗಳು ಯೋಚಿಸ್ತಿದ್ದೆ. ಕೆಲವೊಮ್ಮೆ ಬೆತೆಲ್ ಸೇವೆನೂ ಬಿಟ್ಟುಬಿಡ್ಬೇಕು ಅನಿಸ್ತಿತ್ತು” ಅಂತ ರಾಬರ್ಟ್ ಹೇಳ್ತಾನೆ. ಅವ್ನು ಕಳಕೊಂಡ ಸಂತೋಷನ ಪುನಃ ಪಡಕೊಂಡನಾ? ಒಬ್ಬ ಹಿರಿಯ ಹೇಳಿದ ಮಾತುಗಳಿಂದ ಅವ್ನು ಪುನಃ ಸಂತೋಷ ಪಡಕೊಂಡ. ಆ ಹಿರಿಯ, “ಈಗಿರೋ ನೇಮಕನ ನಾವು ಚೆನ್ನಾಗಿ ಮಾಡೋಕೆ ಯೆಹೋವ ನಮಗೆ ಹಿಂದಿನ ನೇಮಕಗಳಲ್ಲಿ ತರಬೇತಿ ಕೊಟ್ಟಿರ್ತಾನೆ” ಅಂತ ಹೇಳಿದ್ನು. ನಂತ್ರ ರಾಬರ್ಟ್ ಹಿಂದಿನ ನೇಮಕದ ಬಗ್ಗೆ ಯೋಚ್ಸಿ ಕೊರಗೋ ಬದ್ಲಿಗೆ ಈಗಿರೋ ನೇಮಕನ ಚೆನ್ನಾಗಿ ಮಾಡೋದ್ರ ಕಡೆ ಗಮನ ಕೊಟ್ಟನು.
22 ಸಹೋದರ ಫೆಲಿಸ್ ಎಪಿಸ್ಕೋಪೋ ಅವ್ರಿಗೂ ಇಂಥದ್ದೇ ಸಮಸ್ಯೆ ಎದುರಾಯ್ತು. ಅವರು ಮತ್ತವರ ಪತ್ನಿ 1956 ರಲ್ಲಿ ಗಿಲ್ಯಡ್ ಪದವಿ ಪಡಕೊಂಡ್ರು, ನಂತರ ಬೊಲಿವಿಯದಲ್ಲಿ ಸಂಚರಣ ಕೆಲ್ಸ ಮಾಡಿದ್ರು. ಆದ್ರೆ 1964 ರಲ್ಲಿ ಅವ್ರಿಗೆ ಮಗು ಆಯ್ತು. ಇದ್ರಿಂದ ಸಂಚರಣ ಕೆಲ್ಸ ಬಿಡಬೇಕಾಗಿ ಬಂತು. ಫೆಲಿಸ್ ಹೀಗೆ ಹೇಳ್ತಾರೆ: “ತುಂಬ ಇಷ್ಟಪಡ್ತಿದ್ದ ನೇಮಕನ ಬಿಡೋಕೆ ತುಂಬ ಕಷ್ಟ ಆಯ್ತು. ನಾನಂತೂ ಅದರ ಬಗ್ಗೆ ಸುಮಾರು 1 ವರ್ಷ ಯೋಚಿಸ್ತಿದ್ದೆ. ಆದ್ರೆ ಯೆಹೋವನ ಸಹಾಯದಿಂದ ನನ್ನ ಯೋಚನೆ ಬದ್ಲಾಯಿಸಿ ಒಳ್ಳೇ ತಂದೆಯಾಗಿ ಜವಾಬ್ದಾರಿ ನಿರ್ವಹಿಸೋದ್ರ ಕಡೆ ಗಮನ ಹರಿಸ್ದೆ.” ನಿಮಗೂ ರಾಬರ್ಟ್ ಅಥ್ವಾ ಫೆಲಿಸ್ ತರ ಅನ್ಸುತ್ತಾ? ಹಿಂದೆ ಇದ್ದ ಸೇವಾಸುಯೋಗ ಈಗ ಇಲ್ಲ ಅಂತ ಬೇಜಾರಾಗುತ್ತಾ? ಹಾಗಿದ್ರೆ ನಿಮ್ಮ ಗಮನವನ್ನ ಬೇರೆ ಕಡೆ ಹರಿಸಿ. ಯೆಹೋವನಿಗಾಗಿ ಮತ್ತು ಸಹೋದರರಿಗಾಗಿ ಈಗ ಏನೆಲ್ಲಾ ಮಾಡ್ಬಹುದು ಅನ್ನೋದ್ರ ಬಗ್ಗೆ ಯೋಚಿಸಿ. ಬೇರೆಯವ್ರಿಗೆ ಸಹಾಯ ಮಾಡೋಕೆ ನಿಮ್ಮಲ್ಲಿರೋ ವರಗಳನ್ನು, ಸಾಮರ್ಥ್ಯಗಳನ್ನು ಬಳಸಿ, ಅದ್ರಲ್ಲೇ ಬಿಝಿಯಾಗಿರಿ. ಹೀಗೆ ಮಾಡ್ವಾಗ ಸಭೆಯನ್ನ ಬಲಪಡಿಸ್ತಾ ಸಂತೋಷ ಪಡಕೊಳ್ತೀರಿ.
23. (ಎ) ನಾವು ಯಾವ ವಿಷ್ಯದ ಬಗ್ಗೆ ಯೋಚಿಸ್ಬೇಕು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
23 ನಮ್ಮಲ್ಲಿ ಪ್ರತಿಯೊಬ್ರು ಯೆಹೋವನಿಗೆ ಅಮೂಲ್ಯರೇ. ನಾವೆಲ್ರೂ ಆತನ ಕುಟುಂಬ ಆಗಿದ್ದೇವೆ ಅನ್ನೋದನ್ನು ಅರ್ಥಮಾಡ್ಕೋಬೇಕು ಅಂತ ಆತನು ಬಯಸ್ತಾನೆ. ನಮ್ಮ ಸಹೋದರ ಸಹೋದರಿಯರನ್ನು ಬಲಪಡಿಸೋದಕ್ಕೆ ನಾವೇನೆಲ್ಲಾ ಮಾಡ್ಬಹುದು ಅನ್ನೋದನ್ನ ಯೋಚಿಸಿದ್ರೆ ಮತ್ತು ಯೋಚಿಸಿದ್ದನ್ನ ಮಾಡೋಕೆ ನಮ್ಮಿಂದಾದ ಪ್ರಯತ್ನ ಮಾಡಿದ್ರೆ ‘ಸಭೆಗೆ ನನ್ನಿಂದ ಏನೂ ಪ್ರಯೋಜನ ಇಲ್ಲ’ ಅನ್ನೋ ಅನಿಸಿಕೆನೇ ಮನ್ಸಿಗೆ ಬರಲ್ಲ. ಹಾಗಾದ್ರೆ ಸಭೆಯಲ್ಲಿರೋ ಬೇರೆಯವ್ರ ಬಗ್ಗೆ ನಾವು ಯಾವ ರೀತಿ ಯೋಚಿಸ್ಬೇಕು? ಅವ್ರ ಮೇಲೆ ನಮ್ಗೆ ಪ್ರೀತಿ, ಗೌರವ ಇದೆ ಅಂತ ಹೇಗೆ ತೋರಿಸಿಕೊಡ್ಬಹುದು? ಈ ಪ್ರಾಮುಖ್ಯ ವಿಷ್ಯದ ಬಗ್ಗೆ ಮುಂದಿನ ಲೇಖನದಲ್ಲಿ ಚರ್ಚಿಸೋಣ.
ಗೀತೆ 107 ಬನ್ನಿ ಯೆಹೋವನ ಪರ್ವತಕ್ಕೆ
a ಯೆಹೋವ ದೇವರಿಗೆ ನಾವು ಅಮೂಲ್ಯರಾಗಿರಬೇಕು ಅನ್ನೋದು ನಮ್ಮೆಲ್ಲರ ಆಸೆ. ಆದ್ರೆ ಕೆಲವೊಮ್ಮೆ, ನಮ್ಮಿಂದ ಸಭೆಗೆ ಏನೂ ಪ್ರಯೋಜನ ಇಲ್ಲ ಅಂತ ಅನಿಸಬಹುದು. ಈ ಲೇಖನದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಸಭೆಗೆ ಅಮೂಲ್ಯರು ಮತ್ತು ನಮ್ಗೂ ಸಭೆಯಲ್ಲಿ ಒಂದು ಪಾತ್ರವಿದೆ ಅನ್ನೋದನ್ನು ಕಲಿಯಲಿದ್ದೇವೆ.
b ಕೆಲ್ವು ಹೆಸರನ್ನು ಬದ್ಲಾಯಿಸಲಾಗಿದೆ.
c ಚಿತ್ರ ವಿವರಣೆ: ಕೂಟದ ಮುಂಚೆ, ಕೂಟ ನಡೀವಾಗ ಮತ್ತು ಕೂಟದ ನಂತ್ರ ಏನೆಲ್ಲಾ ಆಗ್ತಿದೆ ಅಂತ ತೋರಿಸೋ ಮೂರು ಚಿತ್ರಗಳು. ಚಿತ್ರ 1: ಒಬ್ಬ ಹಿರಿಯ ಕೂಟಕ್ಕೆ ಹೊಸದಾಗಿ ಬಂದವನನ್ನು ಸಂತೋಷದಿಂದ ಸ್ವಾಗತಿಸ್ತಿದ್ದಾನೆ, ಒಬ್ಬ ಯುವ ಸಹೋದರ ಸೌಂಡ್ ಸಿಸ್ಟಮ್ ಅನ್ನು ಜೋಡಿಸೋಕೆ ಹೋಗ್ತಿದ್ದಾನೆ ಮತ್ತು ಒಬ್ಬ ಸಹೋದರಿ ವೃದ್ಧ ಸಹೋದರಿಯ ಜೊತೆ ಮಾತಾಡ್ತಿದ್ದಾಳೆ. ಚಿತ್ರ 2: ಕಾವಲಿನಬುರುಜು ಚರ್ಚೆಯಲ್ಲಿ ಚಿಕ್ಕವ್ರು ದೊಡ್ಡವ್ರು ಉತ್ತರ ಕೊಡಲು ಕೈ ಎತ್ತಿದ್ದಾರೆ. ಚಿತ್ರ 3: ಒಬ್ಬ ದಂಪತಿ ರಾಜ್ಯ ಸಭಾಗೃಹ ಶುಚಿ ಮಾಡ್ತಿದ್ದಾರೆ. ಒಬ್ಬ ಸಹೋದರಿ ತನ್ನ ಮಗಳು ಕಾಣಿಕೆಯನ್ನು ಪೆಟ್ಟಿಗೆಯಲ್ಲಿ ಹಾಕಲು ಸಹಾಯ ಮಾಡ್ತಿದ್ದಾಳೆ. ಒಬ್ಬ ಯುವ ಸಹೋದರ ಪುಸ್ತಕ, ಪತ್ರಿಕೆ ಇಡೋ ಕೌಂಟರ್ ನೋಡಿಕೊಳ್ತಿದ್ದಾನೆ. ಒಬ್ಬ ಸಹೋದರ ವೃದ್ಧ ಸಹೋದರಿ ಹತ್ರ ಮಾತಾಡ್ತಾ ಉತ್ತೇಜನ ಕೊಡ್ತಿದ್ದಾನೆ.