ಅಧ್ಯಯನ ಲೇಖನ 32
ಸೃಷ್ಟಿಕರ್ತನ ಮೇಲಿರೋ ನಂಬಿಕೆ ನಂದಿಹೋಗದಿರಲಿ
“ನಂಬಿಕೆ ಅಂದ್ರೆ ಒಂದು ವಿಷ್ಯ ಕಣ್ಣಿಗೆ ಕಾಣದೆ ಇದ್ರೂ ಅದು ನಿಜವಾಗ್ಲೂ ಇದೆ ಅನ್ನೋದಕ್ಕಿರೋ ಸ್ಪಷ್ಟ ಸಾಕ್ಷಿ.”—ಇಬ್ರಿ. 11:1.
ಗೀತೆ 15 ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಸುತ್ತದೆ
ಕಿರುನೋಟa
1. ನೀವು ಚಿಕ್ಕವರಿದ್ದಾಗ ನಿಮ್ಮ ಅಪ್ಪ-ಅಮ್ಮ ಯೆಹೋವ ದೇವರ ಬಗ್ಗೆ ಏನು ಕಲಿಸಿಕೊಟ್ರು?
ನೀವು ಚಿಕ್ಕವಯಸ್ಸಿಂದಾನೂ ಯೆಹೋವನ ಸಾಕ್ಷಿ ಆಗಿದ್ರೆ ನಿಮ್ಮ ಅಪ್ಪ-ಅಮ್ಮ ಯೆಹೋವ ದೇವರ ಬಗ್ಗೆ ನಿಮಗೆ ಚೆನ್ನಾಗಿ ಹೇಳಿಕೊಟ್ಟಿರುತ್ತಾರೆ. ಅವರು ನಿಮಗೆ ‘ಯೆಹೋವ ದೇವರೇ ಸೃಷ್ಟಿಕರ್ತ, ಅವರು ತುಂಬ ಒಳ್ಳೆ ದೇವರು, ಅವರಿಗೆ ಒಳ್ಳೆ ಗುಣಗಳಿವೆ, ಮುಂದೆ ಈ ಭೂಮಿಯನ್ನ ಪರದೈಸ್ ಮಾಡ್ತಾರೆ’ ಅಂತೆಲ್ಲಾ ಕಲಿಸಿರುತ್ತಾರೆ.—ಆದಿ. 1:1; ಅ. ಕಾ. 17:24-27.
2. ದೇವರೇ ಎಲ್ಲವನ್ನ ಸೃಷ್ಟಿಮಾಡಿದ್ದು ಅಂತ ನಂಬಿದವರನ್ನು ಈ ಲೋಕದ ಜನ ಹೇಗೆ ನೋಡ್ತಾರೆ?
2 ಆದ್ರೆ ಈ ಲೋಕದಲ್ಲಿ ಎಷ್ಟೋ ಜನ ‘ದೇವರೇ ಇಲ್ಲ, ಇದ್ರೂ ಅವರು ನಮ್ಮನ್ನ ಸೃಷ್ಟಿಮಾಡಿಲ್ಲ. ಭೂಮಿ ಮೇಲೆ ಆಕಸ್ಮಿಕವಾಗಿ ಜೀವ ಹುಟ್ಟಿಕೊಳ್ತು, ಸೂಕ್ಷ್ಮಾಣುಜೀವಿಗಳು ವಿಕಾಸ ಆಗ್ತಾ ದೊಡ್ಡ ದೊಡ್ಡ ಪ್ರಾಣಿಗಳಾದವು’ ಅಂತ ನಂಬ್ತಾರೆ. ಇದನ್ನ ನಂಬಿದವರಲ್ಲಿ ತುಂಬ ವಿದ್ಯಾಭ್ಯಾಸ ಪಡಕೊಂಡವರೂ ಇದ್ದಾರೆ. ದೇವರೇ ಎಲ್ಲವನ್ನ ಸೃಷ್ಟಿಮಾಡಿದ್ದು ಅಂತ ನಂಬಿದವರನ್ನು ಹೇಗೆ ನೋಡ್ತಾರೆ? ‘ಸೃಷ್ಟಿ ಬಗ್ಗೆ ಬೈಬಲಲ್ಲಿ ಇರೋದೆಲ್ಲ ತಪ್ಪು ಅಂತ ವಿಜ್ಞಾನ ಸಾಬೀತು ಮಾಡಿದೆ ಮತ್ತು ದೇವರೇ ಎಲ್ಲನೂ ಸೃಷ್ಟಿಮಾಡಿದ್ದು ಅಂತ ನಂಬುವವರು ವಿದ್ಯೆ-ಬುದ್ಧಿ ಇಲ್ಲದವರು’ ಅಂತ ಹೇಳ್ತಾರೆ.
3. ನಾವು ಯಾಕೆ ನಂಬಿಕೆ ಬೆಳೆಸಿಕೊಳ್ತಾ ಇರಬೇಕು?
3 ಇಂಥ ವಿದ್ಯಾವಂತರು ಹೇಳೋ ಮಾತನ್ನ ಕೇಳಿದಾಗ ಯೆಹೋವ ದೇವರು ನಮ್ಮನ್ನ ಸೃಷ್ಟಿಮಾಡಿದ್ರಾ, ಇಲ್ವಾ ಅನ್ನೋ ಸಂಶಯ ನಮಗೆ ಬಂದುಬಿಡುತ್ತಾ? ನಮ್ಮ ನಂಬಿಕೆ ಕಡಿಮೆ ಆಗದೆ ಇರಬೇಕಂದ್ರೆ ಯೆಹೋವನೇ ಸೃಷ್ಟಿಕರ್ತ ಅಂತ ಹೇಳೋದಕ್ಕೆ ಇರೋ ಕಾರಣವನ್ನೂ ತಿಳುಕೊಳ್ಳಬೇಕು. ಅಂದ್ರೆ ಯೆಹೋವ ದೇವರೇ ಸೃಷ್ಟಿಕರ್ತ ಅಂತ ಬೇರೆಯವರು ಹೇಳಿದ್ರಿಂದ ನಂಬಿದ್ದೀವಾ? ಅಥವಾ ನಾವೇ ಪರೀಕ್ಷೆ ಮಾಡಿ ತಿಳುಕೊಂಡು ನಂಬಿದ್ದೀವಾ? (1 ಕೊರಿಂ. 3:12-15) ನಾವು ಇತ್ತೀಚೆಗೆ ಸತ್ಯ ಕಲಿತಿರಲಿ, ತುಂಬ ವರ್ಷಗಳಿಂದ ಸತ್ಯದಲ್ಲಿರಲಿ ನಾವೆಲ್ರೂ ನಂಬಿಕೆನ ಬೆಳೆಸಿಕೊಳ್ತಾನೇ ಇರಬೇಕು. ಆಗ ಬೈಬಲ್ ಕಲಿಸುವ ವಿಷಯಗಳು ತಪ್ಪು ಅಂತ ಲೋಕದ ಜನ ಎಷ್ಟೇ ಹೇಳಿದ್ರೂ ನಾವು ಮೋಸ ಹೋಗಲ್ಲ. (ಕೊಲೊ. 2:8; ಇಬ್ರಿ. 11:6) ಈ ಲೇಖನದಲ್ಲಿ (1) ದೇವರೇ ಎಲ್ಲವನ್ನೂ ಸೃಷ್ಟಿಮಾಡಿದ್ದು ಅಂತ ಕೆಲವರು ಯಾಕೆ ನಂಬಲ್ಲ? (2) ನಮ್ಮ ಸೃಷ್ಟಿಕರ್ತನಾದ ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಏನು ಮಾಡಬೇಕು? (3) ಆತನ ಮೇಲಿರೋ ನಮ್ಮ ನಂಬಿಕೆ ಕಮ್ಮಿ ಆಗದೇ ಇರೋಕೆ ಏನು ಮಾಡಬೇಕು? ಅಂತ ಚರ್ಚಿಸ್ತೀವಿ.
ಸೃಷ್ಟಿಕರ್ತನನ್ನು ಯಾಕೆ ನಂಬಲ್ಲ?
4. ಇಬ್ರಿಯ 11:1 ಮತ್ತು ಅದರ ಪಾದಟಿಪ್ಪಣಿ ಪ್ರಕಾರ ನಿಜವಾದ ನಂಬಿಕೆ ಅಂದರೇನು?
4 ಒಂದು ವಿಷಯ ನಂಬೋಕೆ ಆಧಾರಗಳು ಬೇಕಿಲ್ಲ ಅಂತ ಕೆಲವರು ಹೇಳ್ತಾರೆ. ಆದ್ರೆ ಈ ತರ ನಂಬೋದು ಸರಿಯಾದ ನಂಬಿಕೆ ಅಲ್ಲ ಅಂತ ಬೈಬಲ್ ಹೇಳುತ್ತೆ. (ಇಬ್ರಿಯ 11:1 ಮತ್ತು ಅದರ ಪಾದಟಿಪ್ಪಣಿ ಓದಿ.) ಉದಾಹರಣೆಗೆ ಯೆಹೋವ, ಯೇಸು ಮತ್ತು ಸ್ವರ್ಗದಲ್ಲಿರೋ ದೇವರ ಸರ್ಕಾರ ಇದೆಲ್ಲ ನಮ್ಮ ಕಣ್ಣಿಗೆ ಕಾಣಲ್ಲ. ಆದ್ರೂ ಇದನ್ನೆಲ್ಲಾ ನಂಬೋಕೆ ನಮಗೆ ಬಲವಾದ ಆಧಾರ ಇದೆ. (ಇಬ್ರಿ. 11:3) ಒಬ್ಬ ವಿಜ್ಞಾನಿ ಯೆಹೋವನ ಸಾಕ್ಷಿ ಆದಮೇಲೆ ಹೀಗೆ ಹೇಳ್ತಾರೆ: “ಯೆಹೋವನ ಸಾಕ್ಷಿಗಳು ಯಾವುದನ್ನೂ ಕಣ್ಣುಮುಚ್ಚಿ ನಂಬಲ್ಲ, ಪ್ರತಿಯೊಂದಕ್ಕೂ ಆಧಾರ ಇದ್ಯಾ ಅಂತ ಪರೀಕ್ಷಿಸ್ತಾರೆ. ವಿಜ್ಞಾನ ಹೇಳೋ ವಿಷಯಕ್ಕೂ ಬಲವಾದ ಆಧಾರ ಇದ್ರೆ ಮಾತ್ರ ಅದನ್ನ ನಂಬ್ತಾರೆ.”
5. ಎಲ್ಲವನ್ನ ದೇವರೇ ಸೃಷ್ಟಿಮಾಡಿದ್ದು ಅಂತ ತುಂಬ ಜನ ಯಾಕೆ ನಂಬಲ್ಲ?
5 ದೇವರೇ ಎಲ್ಲವನ್ನು ಸೃಷ್ಟಿ ಮಾಡಿದ್ದು ಅನ್ನೋದಕ್ಕೆ ತುಂಬ ಆಧಾರಗಳಿದ್ರೂ ಜನ ಯಾಕೆ ನಂಬಲ್ಲ? ಯಾಕಂದ್ರೆ ಅವರು ಆಧಾರಗಳಿಗೆ ಗಮನನೇ ಕೊಟ್ಟಿಲ್ಲ. ರಾಬರ್ಟ್ ಅನ್ನೋ ಸಹೋದರ ಹೀಗೆ ಹೇಳ್ತಾರೆ: “ಸ್ಕೂಲಲ್ಲಿ ನಮಗೆ ವಿಕಾಸವಾದದ ಬಗ್ಗೆ ಕಲಿಸ್ತಾ ಇದ್ರು. ಅದಕ್ಕೆ ದೇವರೇ ನಮ್ಮನ್ನ ಸೃಷ್ಟಿಮಾಡಿದ್ದು ಅಂತ ನಾನು ನಂಬ್ತಾ ಇರಲಿಲ್ಲ. ನನಗೆ ಯೆಹೋವನ ಸಾಕ್ಷಿಗಳು 22ನೇ ವಯಸ್ಸಲ್ಲಿ ಪರಿಚಯ ಆದ್ರು. ಎಲ್ಲವನ್ನ ದೇವರೇ ಸೃಷ್ಟಿಮಾಡಿದ್ದು ಅನ್ನೋದಕ್ಕೆ ಸಾಕಷ್ಟು ಕಾರಣಗಳನ್ನ ಅವರು ಬೈಬಲಿಂದ ತೋರಿಸಿದ್ರು. ಆಮೇಲೆ ನಾನು ಅದನ್ನ ನಂಬಿದೆ.”b—“ಹೆತ್ತವರಿಗೆ ಒಂದು ಮನವಿ” ಅನ್ನೋ ಚೌಕ ನೋಡಿ.
6. ದೇವರೇ ಇಲ್ಲ ಅಂತ ಕೆಲವರು ಯಾಕೆ ಹೇಳ್ತಾರೆ?
6 ‘ಸೃಷ್ಟಿಕರ್ತನನ್ನ ನೋಡಕ್ಕಾಗಲ್ಲ, ಅದಿಕ್ಕೆ ಸೃಷ್ಟಿಕರ್ತ ಇದ್ದಾನೆ ಅಂತ ನಂಬಲ್ಲ’ ಅಂತ ಕೆಲವರು ಹೇಳ್ತಾರೆ. ಆದ್ರೆ “ಒಂದು ವಿಷ್ಯ ಕಾಣದೇ ಇದ್ರೂ ಅದು ನಿಜವಾಗ್ಲೂ ಇದೆ” ಅನ್ನೋದಕ್ಕೆ ಆಧಾರ ಇದ್ರೆ ಅದನ್ನ ನಂಬಬಹುದು ಅಂತ ಬೈಬಲ್ ಹೇಳುತ್ತೆ. (ಇಬ್ರಿ. 11:1) ಸೃಷ್ಟಿಕರ್ತ ಕಣ್ಣಿಗೆ ಕಾಣದೆ ಇರೋದ್ರಿಂದ ಆತನನ್ನು ನಂಬಲ್ಲ ಅಂತ ಹೇಳುವವರು ಗುರುತ್ವಾಕರ್ಷಣ ಶಕ್ತಿಯನ್ನ ನೋಡಿಲ್ಲಾಂದ್ರೂ ಅದು ಇದೆ ಅಂತ ನಂಬ್ತಾರೆ. ಯಾಕಂದ್ರೆ ಅದಕ್ಕೆ ಆಧಾರ ಇದೆ. ಅದೇ ತರ, ‘ದೇವರಿದ್ದಾನೆ, ದೇವರೇ ಎಲ್ಲವನ್ನೂ ಸೃಷ್ಟಿಮಾಡಿದ್ದು’ ಅಂತ ನಂಬಬೇಕಂದ್ರೆ ಅದಕ್ಕಿರೋ ಆಧಾರಗಳನ್ನ ಸಮಯ ತಗೊಂಡು ತಿಳುಕೊಳ್ಳಬೇಕು. ಇದನ್ನ ಮಾಡೋಕೆ ತುಂಬ ಜನರಿಗೆ ಇಷ್ಟ ಇಲ್ಲ. ಈ ರೀತಿ ಆಧಾರಗಳಿಗೆ ಗಮನಕೊಡದೆ ಇರುವವರೇ ದೇವರೇ ಇಲ್ಲ ಅನ್ನೋ ತೀರ್ಮಾನಕ್ಕೆ ಬರೋದು.
7. ಎಲ್ಲಾ ವಿದ್ಯಾವಂತರು ದೇವರಿಲ್ಲ ಅಂತ ಹೇಳ್ತಾರಾ? ವಿವರಿಸಿ.
7 ಈ ಆಧಾರಗಳಿಗೆ ಗಮನ ಕೊಟ್ಟಾಗ ಎಷ್ಟೋ ವಿಜ್ಞಾನಿಗಳು ‘ಇಡೀ ವಿಶ್ವವನ್ನ ದೇವರೇ ಸೃಷ್ಟಿಮಾಡಿದ್ದು’ ಅಂತ ಒಪ್ಪಿಕೊಂಡಿದ್ದಾರೆ.c ಸಹೋದರ ರಾಬರ್ಟ್ ಹೇಳಿದ ಹಾಗೆ ಸ್ಕೂಲಲ್ಲೇ ವಿಕಾಸವಾದದ ಬಗ್ಗೆ ಕಲಿಸುತ್ತಾ ಇರೋದ್ರಿಂದ ಕೆಲವರು ಸೃಷ್ಟಿಕರ್ತನೇ ಇಲ್ಲ ಅಂತ ಕಣ್ಮುಚ್ಚಿ ನಂಬಿಬಿಡ್ತಾರೆ. ಆದ್ರೆ ಎಷ್ಟೋ ವಿಜ್ಞಾನಿಗಳು ಆಮೇಲೆ ಯೆಹೋವ ದೇವರ ಬಗ್ಗೆ ತಿಳ್ಕೊಂಡು ಆತನೇ ಎಲ್ಲವನ್ನ ಸೃಷ್ಟಿಮಾಡಿದ್ದು ಅಂತ ನಂಬಿದ್ದಾರೆ. ನಮಗೆ ವಿದ್ಯಾಭ್ಯಾಸ ಕಮ್ಮಿ ಇರಲಿ, ಜಾಸ್ತಿ ಇರಲಿ ಈ ವಿಜ್ಞಾನಿಗಳ ತರ ನಾವು ಆಧಾರಗಳನ್ನ ಹುಡುಕಿ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳಬೇಕು. ಅದನ್ನ ಬೇರೆಯವರು ನಮಗೋಸ್ಕರ ಮಾಡೋಕೆ ಆಗಲ್ಲ.
ಸೃಷ್ಟಿಕರ್ತನ ಮೇಲೆ ನಂಬಿಕೆ ಬೆಳೆಸಿಕೊಳ್ಳಿ
8-9. (ಎ) ನಾವೀಗ ಏನು ಚರ್ಚೆ ಮಾಡ್ತೀವಿ? (ಬಿ) ಸುತ್ತಮುತ್ತ ಇರೋ ಸೃಷ್ಟಿ ಬಗ್ಗೆ ಕಲಿತಾಗ ನಮಗೆ ಏನು ಗೊತ್ತಾಗುತ್ತೆ?
8 ಸೃಷ್ಟಿಕರ್ತನ ಮೇಲೆ ಹೆಚ್ಚು ನಂಬಿಕೆ ಬೆಳೆಸಿಕೊಳ್ಳೋಕೆ ಏನು ಮಾಡಬೇಕು? ಅದಕ್ಕೆ ನಾಲ್ಕು ವಿಷಯಗಳನ್ನ ಮಾಡಬೇಕು. ಅದನ್ನ ಈಗ ಚರ್ಚೆ ಮಾಡೋಣ.
9 (1) ಸುತ್ತಮುತ್ತ ಇರೋ ಸೃಷ್ಟಿ ಬಗ್ಗೆ ಕಲಿರಿ. ಪ್ರಾಣಿಗಳನ್ನ, ಮರ-ಗಿಡಗಳನ್ನ, ನಕ್ಷತ್ರಗಳನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ನಮ್ಮ ಸೃಷ್ಟಿಕರ್ತನ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಆಗುತ್ತೆ. (ಕೀರ್ತ. 19:1; ಯೆಶಾ. 40:26) ಸೃಷ್ಟಿ ಬಗ್ಗೆ ನೀವು ಕಲಿತಾ ಹೋದ ಹಾಗೆ ಯೆಹೋವನೇ ಸೃಷ್ಟಿಕರ್ತ ಅನ್ನೋ ನಿಮ್ಮ ನಂಬಿಕೆನೂ ಜಾಸ್ತಿ ಆಗ್ತಾ ಹೋಗುತ್ತೆ. ನಮ್ಮ ಪುಸ್ತಕ-ಪತ್ರಿಕೆಗಳಲ್ಲಿ ಸೃಷ್ಟಿ ಬಗ್ಗೆ ತುಂಬ ಲೇಖನಗಳಿವೆ. ಅದನ್ನ ಓದಿದ್ರೆ ಏನೂ ಅರ್ಥ ಆಗಲ್ಲ ಅಂತ ನೆನಸಿ ಬಿಟ್ಟುಬಿಡಬಾರದು. ನಿಮಗೆ ಎಷ್ಟಾಗುತ್ತೋ ಅಷ್ಟು ಓದಿ ಅರ್ಥಮಾಡಿಕೊಳ್ಳಿ. ಅಷ್ಟೇ ಅಲ್ಲ, ನಮ್ಮ ವೆಬ್ಸೈಟ್ jw.orgನಲ್ಲಿ ಸೃಷ್ಟಿ ಬಗ್ಗೆ ತುಂಬ ವಿಡಿಯೋಗಳಿವೆ. ಇದನ್ನ ಇತ್ತೀಚೆಗೆ ನಡೆದ ಪ್ರಾದೇಶಿಕ ಅಧಿವೇಶನಗಳಲ್ಲಿ ನಾವು ನೋಡಿದ್ವಿ. ಅದನ್ನೆಲ್ಲಾ ಮತ್ತೆ ನೋಡಿ.
10. ಸೃಷ್ಟಿಕರ್ತ ಇದ್ದಾನೆ ಅನ್ನೋದಕ್ಕೆ ಸೃಷ್ಟಿಯಿಂದಾನೇ ಒಂದು ಆಧಾರ ಕೊಡಿ. (ರೋಮನ್ನರಿಗೆ 1:20)
10 ಸೃಷ್ಟಿ ಬಗ್ಗೆ ಕಲಿಯುವಾಗ ಅದ್ರಿಂದ ಸೃಷ್ಟಿಕರ್ತನ ಬಗ್ಗೆ ಏನು ಕಲಿಯಕ್ಕಾಗುತ್ತೆ ಅನ್ನೋದಕ್ಕೂ ಗಮನಕೊಡಿ. (ರೋಮನ್ನರಿಗೆ 1:20 ಓದಿ.) ಉದಾಹರಣೆಗೆ ಸೂರ್ಯನನ್ನೇ ತಗೊಳ್ಳಿ. ಸೂರ್ಯನಿಂದ ಮನುಷ್ಯರಿಗೆ ತುಂಬ ಉಪಯೋಗ ಇದೆ. ಅದು ನಮಗೆ ಬೇಕಾದ ಬೆಳಕು ಮತ್ತು ಶಾಖ ಕೊಡುತ್ತೆ. ಆದ್ರೆ ಸೂರ್ಯನಿಂದ ಬರೋ ಕೆಲವು ಕಿರಣಗಳು ಮನುಷ್ಯರಿಗೆ ತುಂಬ ಅಪಾಯಕಾರಿ. ಈ ಕಿರಣಗಳು ನಮಗೆ ತಟ್ಟದೆ ಇರೋ ತರ ಓಜೋನ್ ಪದರ ತಡೆಯುತ್ತೆ. ಈ ಅಪಾಯಕಾರಿ ಕಿರಣಗಳು ಜಾಸ್ತಿ ಆಗ್ತಾ ಹೋದ ಹಾಗೆ ಓಜೋನ್ ಪದರದ ಗಾತ್ರನೂ ಜಾಸ್ತಿ ಆಗ್ತಾ ಹೋಗುತ್ತೆ. ಹೀಗೆ ನಮಗೆ ಆ ಪದರ ರಕ್ಷಣೆ ಕೊಡುತ್ತೆ. ಈಗ ನೀವೇ ಹೇಳಿ, ಇಂಥ ಒಂದು ವ್ಯವಸ್ಥೆ ತನ್ನಿಂದ ತಾನೆ ಬಂದುಬಿಡ್ತಾ? ಅಥವಾ ಯಾರಾದ್ರೂ ಇದನ್ನ ಸೃಷ್ಟಿಮಾಡಿದ್ರಾ? ಸೃಷ್ಟಿ ಮಾಡಿರೋದಾದ್ರೆ ಸೃಷ್ಟಿಕರ್ತನಿಗೆ ತುಂಬ ಪ್ರೀತಿ, ವಿವೇಕ ಇದೆ ಅಂತ ಇದರಿಂದ ಗೊತ್ತಾಗುತ್ತೆ ಅಲ್ವಾ?
11. ಸೃಷ್ಟಿಕರ್ತನ ಮೇಲೆ ನಂಬಿಕೆ ಹೆಚ್ಚಿಸುವಂಥ ವಿಷಯಗಳು ನಿಮಗೆ ಎಲ್ಲಿ ಸಿಗುತ್ತೆ? (“ನಂಬಿಕೆ ಕಟ್ಟೋಕೆ ಇಟ್ಟಿಗೆಗಳು” ಚೌಕ ನೋಡಿ.)
11 ಇಂಥ ತುಂಬ ಉದಾಹರಣೆಗಳು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಮತ್ತು jw.org ವೆಬ್ಸೈಟಲ್ಲಿ ಸಿಗುತ್ತೆ. ಅಲ್ಲಿ “ವಿಕಾಸವೇ? ವಿನ್ಯಾಸವೇ?” ಅನ್ನೋ ವಿಷಯದ ಕೆಳಗಿರೋ ಲೇಖನಗಳನ್ನ ಅಥವಾ ವಿಡಿಯೋಗಳನ್ನ ನೋಡಿ. ಅದ್ರಲ್ಲಿ ಪ್ರಾಣಿ-ಪಕ್ಷಿಗಳು, ಮರ-ಗಿಡಗಳು ಮತ್ತು ಇನ್ನೂ ಬೇರೆಬೇರೆ ಸೃಷ್ಟಿಗಳ ಬಗ್ಗೆ ನಮಗೆ ಆಶ್ಚರ್ಯ ಆಗೋ ವಿಷಯಗಳನ್ನ ಸರಳವಾಗಿ ಕೊಟ್ಟಿರುತ್ತಾರೆ. ಈಗಿನ ವಿಜ್ಞಾನಿಗಳು ಸೃಷ್ಟಿಯಲ್ಲಿರೋ ಈ ವಿಶೇಷತೆಗಳನ್ನ ಮಾದರಿಯಾಗಿ ಇಟ್ಟುಕೊಂಡು ಹೊಸಹೊಸ ವಸ್ತುಗಳನ್ನ ತಯಾರಿಸ್ತಾ ಇದ್ದಾರೆ. ಅದರ ಬಗ್ಗೆನೂ ಈ ಸರಣಿ ಲೇಖನಗಳಲ್ಲಿ ಮತ್ತು ವಿಡಿಯೋಗಳಲ್ಲಿ ನೋಡಬಹುದು. ಇದು ಸೃಷ್ಟಿಕರ್ತನ ಮೇಲೆ ಇರೋ ನಿಮ್ಮ ನಂಬಿಕೆ ಇನ್ನೂ ಜಾಸ್ತಿ ಮಾಡುತ್ತೆ
12. ಬೈಬಲಲ್ಲಿ ನಾವು ಯಾವುದನ್ನು ಅಧ್ಯಯನ ಮಾಡಬೇಕು?
12 (2) ಬೈಬಲನ್ನ ಅಧ್ಯಯನ ಮಾಡಿ. ಪ್ಯಾರ 4ರಲ್ಲಿ ಹೇಳಿರೋ ವಿಜ್ಞಾನಿ ಸೃಷ್ಟಿಕರ್ತ ಇದ್ದಾನೆ ಅಂತ ಮೊದಮೊದಲು ನಂಬ್ತಾ ಇರಲಿಲ್ಲ. ಆಮೇಲೆ ಅವರಿಗೆ ನಂಬಿಕೆ ಬಂತು. ಯಾಕೆ ಅಂತ ಅವರ ಮಾತಲ್ಲೇ ಕೇಳಿ: “ಸೃಷ್ಟಿಕರ್ತ ಇದ್ದಾನೆ ಅಂತ ನಂಬೋಕೆ ನನಗೆ ವಿಜ್ಞಾನ ಮಾತ್ರ ಅಲ್ಲ, ಬೈಬಲ್ ಅಧ್ಯಯನನೂ ಸಹಾಯ ಮಾಡ್ತು.” ಈಗ ನಮ್ಮ ವಿಷಯಕ್ಕೆ ಬರೋಣ. ನಮಗೆ ಬೈಬಲ್ ಬಗ್ಗೆ ತುಂಬ ವಿಷಯಗಳು ಗೊತ್ತಿರಬಹುದು. ಹಾಗಿದ್ರೂ ಸೃಷ್ಟಿಕರ್ತನ ಮೇಲೆ ಹೆಚ್ಚು ನಂಬಿಕೆ ಬೆಳೆಸಿಕೊಳ್ಳಬೇಕಂದ್ರೆ ಬೈಬಲನ್ನ ಅಧ್ಯಯನ ಮಾಡ್ತಾ ಇರಬೇಕು. (ಯೆಹೋ. 1:8; ಕೀರ್ತ. 119:97) ಯಾವುದನ್ನ ಅಧ್ಯಯನ ಮಾಡಬೇಕು? ಉದಾಹರಣೆಗೆ, ಸಾವಿರಾರು ವರ್ಷಗಳ ಹಿಂದೆ ನಡೆದಿರೋ ಘಟನೆಗಳ ಬಗ್ಗೆ ಬೈಬಲ್ ವಿವರವಾಗಿ ಹೇಳಿದೆ. ಅಷ್ಟೇ ಅಲ್ಲ, ಅದರಲ್ಲಿರೋ ನೂರಾರು ಭವಿಷ್ಯವಾಣಿಗಳು ನಿಜ ಆಗಿದೆ ಮತ್ತು ಅದನ್ನ ಬೇರೆಬೇರೆ ಜನರು ಬೇರೆಬೇರೆ ಸಮಯದಲ್ಲಿ ಬರೆದಿದ್ರೂ ಅದರಲ್ಲಿರೋ ವಿಷಯಗಳಿಗೆ ಒಂದಕ್ಕೊಂದು ಸಂಬಂಧ ಇದೆ. ಇದನ್ನೆಲ್ಲಾ ಓದಿ ಅಧ್ಯಯನ ಮಾಡಿ. ಆಗ ಪ್ರೀತಿ, ಬುದ್ಧಿಶಕ್ತಿ ಇರೋ ದೇವರೇ ನಮ್ಮನ್ನ ಸೃಷ್ಟಿ ಮಾಡಿದ್ದಾರೆ ಮತ್ತು ಅವರೇ ಬೈಬಲನ್ನ ಬರೆಸಿದ್ದಾರೆ ಅನ್ನೋ ನಂಬಿಕೆನೂ ಗಟ್ಟಿ ಆಗುತ್ತೆ.d—2 ತಿಮೊ. 3:14; 2 ಪೇತ್ರ 1:21.
13. ಬೈಬಲಲ್ಲಿರೋ ಬುದ್ಧಿವಾದಗಳಿಂದ ಒಳ್ಳೆದಾಗುತ್ತೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.
13 ಬೈಬಲಲ್ಲಿ ಎಷ್ಟೋ ಒಳ್ಳೆ ಬುದ್ಧಿವಾದಗಳಿವೆ. ಉದಾಹರಣೆಗೆ ಹಣದಾಸೆ ಇರೋರು ತುಂಬ ನೋವು ಮತ್ತು ದುಃಖ ಅನುಭವಿಸಬೇಕಾಗುತ್ತೆ ಅಂತ ಬೈಬಲ್ ಎಚ್ಚರಿಕೆ ಕೊಟ್ಟಿತ್ತು. (1 ತಿಮೊ. 6:9, 10; ಜ್ಞಾನೋ. 28:20; ಮತ್ತಾ. 6:24) ಈ ಎಚ್ಚರಿಕೆ ಕೊಟ್ಟು ತುಂಬ ವರ್ಷಗಳಾಗಿವೆ. ಹಾಗಿದ್ರೂ ಈಗ ಹಣದಾಸೆ ಇರೋ ಜನರು ಕಷ್ಟ ನೋವು ಅನುಭವಿಸ್ತಾ ಇದ್ದಾರಾ? ಹಣದ ಹಿಂದೆ ಹೋಗೋ ಜನರಿಗೆ ಜೀವನದಲ್ಲಿ ಸಂತೋಷ, ನೆಮ್ಮದಿ ಇರಲ್ಲ. ಯಾವಾಗ್ಲೂ ಚಿಂತೆಯಲ್ಲೇ ಇರ್ತಾರೆ. “ದುಡ್ಡು ಮಾಡಬೇಕು ಅಂತ ಇರೋರು ಬೇರೆ ಬೇರೆ ತರದ ಕಾಯಿಲೆಗಳಿಂದ ಕಷ್ಟಪಡ್ತಿದ್ದಾರೆ” ಅಂತ ಒಂದು ಪುಸ್ತಕ ಹೇಳುತ್ತೆ. ಈ ಬುದ್ಧಿವಾದನ ಕೇಳಿದ್ರೆ ಇವತ್ತೂ ನಮಗೆ ಎಷ್ಟು ಒಳ್ಳೆದಾಗುತ್ತೆ ನೋಡಿ. ಬೈಬಲಲ್ಲಿರೋ ಇನ್ಯಾವ ಬುದ್ಧಿವಾದ ಅಥವಾ ತತ್ವಗಳು ಜೀವನದಲ್ಲಿ ನಿಮಗೆ ಸಹಾಯ ಮಾಡಿವೆ? ನಾವು ಬೈಬಲನ್ನ ಓದಿ ಅಧ್ಯಯನ ಮಾಡುವಾಗ ಇಂಥ ಬುದ್ಧಿವಾದಗಳಿಗೆ ಗಮನ ಕೊಡೋದಾದ್ರೆ ನಮಗೆ ಯಾವುದು ಒಳ್ಳೇದು ಅಂತ ಸೃಷ್ಟಿಕರ್ತನಿಗೆ ಗೊತ್ತು ಅನ್ನೋ ಭರವಸೆ ಮೂಡುತ್ತೆ. ಆಗ ನಮಗೇನೇ ಸಲಹೆ ಬೇಕಿದ್ರೂ ಮೊದಲು ಸೃಷ್ಟಿಕರ್ತನನ್ನೇ ಕೇಳ್ತೀವಿ. (ಯಾಕೋ. 1:5) ಇದ್ರಿಂದ ನಮ್ಮ ಜೀವನದಲ್ಲಿ ಖುಷಿ ಇರುತ್ತೆ.—ಯೆಶಾ. 48:17, 18.
14. ಬೈಬಲ್ ಓದುವಾಗ ನಮಗೆ ಯೆಹೋವ ದೇವರ ಬಗ್ಗೆ ಏನು ಗೊತ್ತಾಗುತ್ತೆ?
14 (3) ಯೆಹೋವ ದೇವರ ಬಗ್ಗೆ ತಿಳುಕೊಳ್ಳಬೇಕು ಅನ್ನೋ ಉದ್ದೇಶದಿಂದ ಅಧ್ಯಯನ ಮಾಡಿ. (ಯೋಹಾ. 17:3) ಬೈಬಲ್ ಅಧ್ಯಯನ ಮಾಡುವಾಗ ಯೆಹೋವ ಎಂಥ ದೇವರು ಮತ್ತು ಅವರ ಗುಣಗಳೇನು ಅಂತ ನೀವು ಕಲಿತೀರ. ಸೃಷ್ಟಿ ಬಗ್ಗೆ ಕಲಿಯುವಾಗಲೂ ನೀವು ಇದೇ ಗುಣಗಳನ್ನೇ ನೋಡ್ತೀರ. ನಿಜವಾದ ದೇವರಿಗೆ ಮಾತ್ರ ಇಂಥ ಗುಣಗಳು ಇರೋಕೆ ಸಾಧ್ಯ ಅಲ್ವಾ? (ವಿಮೋ. 34:6, 7; ಕೀರ್ತ. 145:8, 9) ಯೆಹೋವ ದೇವರ ಬಗ್ಗೆ ಹೆಚ್ಚೆಚ್ಚು ತಿಳುಕೊಳ್ತಾ ಇರಿ. ಆಗ ಆತನ ಮೇಲೆ ನಿಮ್ಮ ನಂಬಿಕೆ, ಪ್ರೀತಿ ಹೆಚ್ಚಾಗುತ್ತೆ ಮತ್ತು ನಿಮ್ಮಿಬ್ಬರ ಮಧ್ಯೆ ಇರೋ ಸ್ನೇಹ ಇನ್ನೂ ಗಟ್ಟಿ ಆಗುತ್ತೆ.
15. ದೇವರ ಬಗ್ಗೆ ಬೇರೆಯವರ ಹತ್ರ ಮಾತಾಡೋದ್ರಿಂದ ನಮಗೇನು ಪ್ರಯೋಜನ?
15 (4) ದೇವರ ಬಗ್ಗೆ ಬೇರೆಯವರಿಗೂ ಹೇಳಿ. ಒಬ್ಬರ ಜೊತೆ ನೀವು ದೇವರ ಬಗ್ಗೆ ಮಾತಾಡ್ತಾ ಇರುವಾಗ ‘ದೇವರಿದ್ದಾನೆ ಅಂತ ಹೇಗೆ ಹೇಳ್ತೀರಾ’ ಅಂತ ನಿಮಗೆ ಪ್ರಶ್ನೆ ಕೇಳ್ತಾರೆ ಅಂತ ಅಂದುಕೊಳ್ಳಿ. ಆಗ ಏನು ಹೇಳಬೇಕು ಅಂತ ಗೊತ್ತಾಗಿಲ್ಲ ಅಂದ್ರೆ ಏನು ಮಾಡಬೇಕು? ನಮ್ಮ ಪುಸ್ತಕ-ಪತ್ರಿಕೆಗಳಲ್ಲಿ ಉತ್ತರ ಹುಡುಕಿ ನಂತರ ಅವರಿಗೆ ಹೇಳಿ. (1 ಪೇತ್ರ 3:15) ಅನುಭವ ಇರೋ ಸಹೋದರರ ಹತ್ರ ಸಹಾಯ ಕೇಳಿ. ನೀವು ಬೈಬಲಿಂದ ಕೊಡೋ ಉತ್ತರವನ್ನ ಮನೆಯವರು ಒಪ್ಪಲಿ, ಒಪ್ಪದಿರಲಿ ನೀವು ಮಾಡಿರೋ ಅಧ್ಯಯನದಿಂದ ನಿಮ್ಮ ನಂಬಿಕೆ ಬಲ ಆಗುತ್ತೆ. ಲೋಕದಲ್ಲಿ ವಿದ್ಯಾವಂತರು, ಬುದ್ಧಿವಂತರು ಅಂತ ಅನಿಸಿಕೊಂಡವರು ‘ದೇವರೇ ಇಲ್ಲ, ಈ ವಿಶ್ವವನ್ನು ದೇವರು ಸೃಷ್ಟಿಮಾಡಿಲ್ಲ’ ಅಂತ ಹೇಳಿದ್ರೂ ನಿಮ್ಮ ನಂಬಿಕೆ ಬಿದ್ದುಹೋಗಲ್ಲ.
ನಂಬಿಕೆ ಕಡಿಮೆ ಆಗದೇ ಇರೋಕೆ ಏನು ಮಾಡಬೇಕು?
16. ನಂಬಿಕೆ ಕಾಪಾಡಿಕೊಳ್ಳೋದರ ಕಡೆಗೆ ಗಮನ ಕೊಟ್ಟಿಲ್ಲಾಂದ್ರೆ ಏನಾಗುತ್ತೆ?
16 ನಾವು ಎಷ್ಟೇ ವರ್ಷದಿಂದ ಸತ್ಯದಲ್ಲಿರಲಿ, ನಾವು ಬೆಳೆಸಿಕೊಂಡಿರೋ ನಂಬಿಕೆನ ಕಾಪಾಡಿಕೊಳ್ಳೋಕೆ ತುಂಬ ಗಮನ ಕೊಡಬೇಕು. ಗಮನ ಕೊಟ್ಟಿಲ್ಲಾಂದ್ರೆ ನಂಬಿಕೆ ಕಮ್ಮಿ ಆಗಿಬಿಡುತ್ತೆ. ಆಧಾರ ಇದ್ರೆ ಕಣ್ಣಿಗೆ ಕಾಣದಿರೋ ವಿಷಯವನ್ನೂ ನಂಬುತ್ತೀವಿ ಅಂತ ನಾವು ಕಲಿತ್ವಿ. ಆದ್ರೆ ಕಣ್ಣಿಗೆ ಕಾಣದಿರೋ ವಿಷಯವನ್ನ ಬೇಗ ಮರೆತೂ ಹೋಗ್ತೀವಿ. ಅದಕ್ಕೆ ಪೌಲ ನಂಬಿಕೆ ಕೊರತೆಯನ್ನ “ಸುಲಭವಾಗಿ ಬಲೆಗೆ ಬೀಳಿಸೋ ಪಾಪ” ಅಂತ ಹೇಳಿದ್ದಾನೆ. (ಇಬ್ರಿ. 12:1) ಹಾಗಾದ್ರೆ ನಮ್ಮ ನಂಬಿಕೆ ಕಡಿಮೆ ಆಗದೇ ಇರೋಕೆ ಏನು ಮಾಡಬೇಕು?—2 ಥೆಸ. 1:3.
17. ದೇವರ ಮೇಲಿರೋ ನಂಬಿಕೆ ಕಾಪಾಡಿಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
17 ಮೊದಲನೇದಾಗಿ, ಯೆಹೋವ ದೇವರ ಹತ್ರ ಪವಿತ್ರಶಕ್ತಿ ಕೊಡಿ ಅಂತ ಯಾವಾಗ್ಲೂ ಬೇಡುತ್ತಾ ಇರಿ. ಯಾಕಂದ್ರೆ ನಂಬಿಕೆ ಅನ್ನೋದು ಪವಿತ್ರಶಕ್ತಿಯಿಂದ ಬರೋ ಒಂದು ಗುಣ. (ಗಲಾ. 5:22, 23) ಹಾಗಾಗಿ ಪವಿತ್ರಶಕ್ತಿಯ ಸಹಾಯ ಇದ್ರೆ ಮಾತ್ರ ನಮಗೆ ಸೃಷ್ಟಿಕರ್ತನ ಮೇಲೆ ನಂಬಿಕೆ ಬೆಳೆಸಿಕೊಳ್ಳೋಕೆ ಮತ್ತು ಅದನ್ನ ಉಳಿಸಿಕೊಳ್ಳೋಕೆ ಆಗುತ್ತೆ. ‘ಪವಿತ್ರಶಕ್ತಿ ಕೊಡಪ್ಪಾ’ ಅಂತ ಬೇಡಿಕೊಂಡ್ರೆ ಯೆಹೋವ ದೇವರು ಖಂಡಿತ ಅದನ್ನ ಕೊಡ್ತಾರೆ. (ಲೂಕ 11:13) “ನಮಗೆ ಇನ್ನೂ ಹೆಚ್ಚು ನಂಬಿಕೆ ಕೊಡು” ಅಂತಾನೂ ನಾವು ಪ್ರಾರ್ಥನೆ ಮಾಡಬಹುದು.—ಲೂಕ 17:5.
18. ಕೀರ್ತನೆ 1:2, 3ರ ಪ್ರಕಾರ ನಮ್ಮ ಹತ್ರ ಯಾವ ದೊಡ್ಡ ಗಿಫ್ಟ್ ಇದೆ?
18 ಎರಡನೇದಾಗಿ, ಬೈಬಲನ್ನ ಓದಿ, ಅಧ್ಯಯನ ಮಾಡೋ ರೂಢಿ ಬೆಳೆಸಿಕೊಳ್ಳಿ. (ಕೀರ್ತನೆ 1:2, 3 ಓದಿ.) ಕೀರ್ತನೆಗಾರ ಇದನ್ನ ಬರೆದ ಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಕೆಲವರ ಹತ್ರ ಮಾತ್ರ ನಿಯಮ ಪುಸ್ತಕ ಇತ್ತು. ಅಂದ್ರೆ ರಾಜರು ಮತ್ತು ಪುರೋಹಿತರ ಹತ್ರ ಮಾತ್ರ ಇರ್ತಿತ್ತು. ಹಾಗಾಗಿ ಏಳು ವರ್ಷಕ್ಕೆ ಒಂದು ಸಲ ಅಲ್ಲಿರೋ ಗಂಡಸರು, ಹೆಂಗಸರು, ಮಕ್ಕಳು ಮತ್ತು ಅಲ್ಲಿರೋ ವಿದೇಶಿಯರು ಸೇರಿಬಂದಾಗ ಅವರ ಮುಂದೆ ನಿಯಮ ಪುಸ್ತಕವನ್ನ ಓದುವ ಏರ್ಪಾಡಿತ್ತು. ಅದನ್ನ ಎಲ್ಲರೂ ಕೇಳಿಸಿಕೊಳ್ಳುತ್ತಿದ್ದರು. (ಧರ್ಮೋ. 31:10-12) ಯೇಸುವಿನ ಕಾಲದಲ್ಲಿ ಕೆಲವರ ಹತ್ರ ಮಾತ್ರ ಸುರುಳಿಗಳು ಇರುತ್ತಿತ್ತು. ಉಳಿದಿರೋ ಸುರುಳಿಗಳನ್ನ ಸಭಾಮಂದಿರದಲ್ಲಿ ಇಡುತ್ತಿದ್ರು. ಆದ್ರೆ ಇವತ್ತು ನಮ್ಮ ಕಾಲದಲ್ಲಿ ತುಂಬ ಜನರ ಹತ್ರ ಬೈಬಲ್ ಇದೆ. ಕೆಲವರ ಹತ್ರ ಪೂರ್ತಿ ಬೈಬಲ್ ಇಲ್ಲದಿದ್ರೂ ಬೈಬಲಿನ ಕೆಲವು ಭಾಗಗಳಿವೆ. ಈ ದೊಡ್ಡ ಗಿಫ್ಟ್ ಸಿಕ್ಕಿರೋದಕ್ಕೆ ನಾವು ದೇವರಿಗೆ ಹೇಗೆ ಧನ್ಯವಾದ ಹೇಳಬಹುದು?
19. ನಮ್ಮ ನಂಬಿಕೆ ಕಡಿಮೆ ಆಗದಿರೋ ತರ ನೋಡಿಕೊಳ್ಳೋಕೆ ಏನು ಮಾಡಬೇಕು?
19 ನಾವು ಪ್ರತಿದಿನ ಬೈಬಲ್ ಓದಿದ್ರೆ ದೇವರಿಗೆ ಧನ್ಯವಾದ ಹೇಳಿದ ಹಾಗೆ ಇರುತ್ತೆ. ನಮಗೆ ಸಮಯ ಇದ್ದಾಗ ಮಾತ್ರ ಬೈಬಲ್ ಓದೋದಲ್ಲ. ಸಮಯ ಮಾಡಿಕೊಂಡು ಬೈಬಲನ್ನು ಓದಿ ಅಧ್ಯಯನ ಮಾಡಬೇಕು. ಅದಕ್ಕೋಸ್ಕರ ಶೆಡ್ಯೂಲ್ ಮಾಡಿಕೊಳ್ಳಬೇಕು. ಈ ರೀತಿ ಅಧ್ಯಯನ ಮಾಡಿದ್ರೆ ನಮ್ಮ ನಂಬಿಕೆ ಕಮ್ಮಿ ಆಗದಿರೋ ತರ ನೋಡಿಕೊಳ್ಳಬಹುದು.
20. ನಾವೀಗ ಏನು ಮಾಡೋಣ?
20 ನಾವು ಈ ಲೋಕದ ‘ವಿದ್ಯಾವಂತರ’ ತರ ಅಲ್ಲ. ಸೃಷ್ಟಿಕರ್ತ ಇದ್ದಾನೆ ಅಂತ ನಾವು ನಂಬ್ತೀವಿ. ಆ ನಂಬಿಕೆಗೆ ಬೈಬಲೇ ಆಧಾರ. (ಮತ್ತಾ. 11:25, 26) ನಾವು ಬೈಬಲನ್ನ ಅಧ್ಯಯನ ಮಾಡೋದ್ರಿಂದ ಈ ಲೋಕ ಯಾಕೆ ಇಷ್ಟು ಹಾಳಾಗ್ತಿದೆ, ದೇವರು ಇದನ್ನೆಲ್ಲಾ ಹೇಗೆ ಸರಿಮಾಡ್ತಾನೆ ಅನ್ನೋದು ನಮಗೆ ಗೊತ್ತು. ಹಾಗಾಗಿ ನಮ್ಮ ನಂಬಿಕೆಯನ್ನ ಆದಷ್ಟು ಹೆಚ್ಚು ಮಾಡಿಕೊಳ್ಳೋಣ ಮತ್ತು ನಮ್ಮಿಂದ ಎಷ್ಟಾಗುತ್ತೋ ಅಷ್ಟು ಜನರಿಗೆ ದೇವರ ಬಗ್ಗೆ ಹೇಳಿ ಅವರೂ ನಂಬಿಕೆ ಬೆಳೆಸಿಕೊಳ್ಳೋಕೆ ಸಹಾಯ ಮಾಡೋಣ. (1 ತಿಮೊ. 2:3, 4) ಪರದೈಸಲ್ಲಿ “ಯೆಹೋವನೇ, ನಮ್ಮ ದೇವರೇ, ಗೌರವ . . . ಪಡ್ಕೊಳ್ಳೋಕೆ ನೀನೇ ಯೋಗ್ಯ. ಯಾಕಂದ್ರೆ ನೀನೇ ಎಲ್ಲವನ್ನೂ ಸೃಷ್ಟಿ ಮಾಡಿದ್ದೀಯ” ಅಂತ ಹೇಳೋ ಮಾತು ಭೂಮಿಯ ಮೂಲೆಮೂಲೆಯಲ್ಲೂ ಕೇಳಿಸುತ್ತೆ. ಆ ಸಮಯಕ್ಕಾಗಿ ನಾವೆಲ್ಲರೂ ಕಾಯೋಣ!—ಪ್ರಕ. 4:11.
ಗೀತೆ 138 ಯೆಹೋವ ನಿನ್ನ ನಾಮ
a ಎಲ್ಲವನ್ನು ಯೆಹೋವನೇ ಸೃಷ್ಟಿಮಾಡಿದ್ದು ಅಂತ ಬೈಬಲ್ ಸ್ಪಷ್ಟವಾಗಿ ಹೇಳುತ್ತೆ. ಆದ್ರೆ ಕೆಲವರು ಇದನ್ನ ನಂಬಲ್ಲ. ‘ಎಲ್ಲ ತಾನಾಗೇ ಬಂತು’ ಅಂತ ಹೇಳ್ತಾರೆ. ಇಂಥ ಮಾತುಗಳನ್ನ ಕೇಳುವಾಗ ನಿಮಗೆ ‘ನಿಜವಾಗಲೂ ಯೆಹೋವ ದೇವರೇ ಇದನ್ನೆಲ್ಲಾ ಸೃಷ್ಟಿಮಾಡಿದ್ರಾ’ ಅಂತ ಅನುಮಾನ ಬರುತ್ತಾ? ಹಾಗಿದ್ರೆ ಯೆಹೋವ ದೇವರ ಮೇಲೆ ಮತ್ತು ಬೈಬಲ್ ಮೇಲೆ ನಿಮ್ಮ ನಂಬಿಕೆಯನ್ನ ಇನ್ನೂ ಹೆಚ್ಚು ಮಾಡಿಕೊಳ್ಳಬೇಕು. ಅದು ಹೇಗೆ ಅಂತ ಈ ಲೇಖನದಲ್ಲಿ ನೋಡೋಣ.
b ಲೋಕದಲ್ಲಿರೋ ಎಷ್ಟೋ ಶಾಲೆಗಳಲ್ಲಿ ಮಕ್ಕಳಿಗೆ ಟೀಚರ್ಸ್ ವಿಕಾಸವಾದದ ಬಗ್ಗೆ ಕಲಿಸುವಾಗ, ಎಲ್ಲವನ್ನು ದೇವರು ಸೃಷ್ಟಿ ಮಾಡಿರಬಹುದು ಅಂತ ಅಪ್ಪಿತಪ್ಪಿನೂ ಹೇಳಕ್ಕೆ ಹೋಗಲ್ಲ. ಹಾಗೆ ಹೇಳಿದ್ರೆ ದೇವರನ್ನ ನಂಬದಿರೋ ಮಕ್ಕಳನ್ನ ‘ದೇವರನ್ನ ನಂಬಿ’ ಅಂತ ಒತ್ತಾಯ ಮಾಡಿದ ಹಾಗೆ ಆಗುತ್ತೆ ಅಂತ ಟೀಚರ್ಸ್ ಹೇಳ್ತಾರೆ.
c ತುಂಬ ಓದಿರುವವರು ಮತ್ತು ವಿಜ್ಞಾನಿಗಳಲ್ಲಿ 60ಕ್ಕೂ ಹೆಚ್ಚು ಜನರ ಇಂಟರ್ವ್ಯೂ ಇಂಗ್ಲಿಷ್ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ನಲ್ಲಿ ಇದೆ. ವಿಶ್ವವನ್ನ ದೇವರೇ ಸೃಷ್ಟಿಮಾಡಿದ್ದು ಅಂತ ಇವರೆಲ್ಲಾ ನಂಬ್ತಾರೆ. ಇವರಲ್ಲಿ ಕೆಲವರ ಇಂಟರ್ವ್ಯೂ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲೂ ಸಿಗುತ್ತೆ. “ವಿಜ್ಞಾನ ಮತ್ತು ತಂತ್ರಜ್ಞಾನ” ಅನ್ನೋ ಶೀರ್ಷಿಕೆ ಕೆಳಗೆ “ಸಂದರ್ಶನಗಳು” (ಎಚ್ಚರ! ಸರಣಿ ಲೇಖನ) ನೋಡಿ.
d ಹೆಚ್ಚಿನ ಮಾಹಿತಿಗಾಗಿ ಜುಲೈ 2011ರ ಎಚ್ಚರ! ಪತ್ರಿಕೆಯ “ವಿಜ್ಞಾನ ಮತ್ತು ಬೈಬಲ್ ಮಧ್ಯೆ ಹೊಂದಾಣಿಕೆ ಇದೆಯೇ?” ಮತ್ತು ಜನವರಿ 1, 2008ರ ಕಾವಲಿನಬುರುಜುವಿನ “ಯೆಹೋವನು ಮುಂತಿಳಿಸುವ ವಿಷಯಗಳು ಸತ್ಯವಾಗಿ ನೆರವೇರುತ್ತವೆ” ಅನ್ನೋ ಲೇಖನಗಳನ್ನ ನೋಡಿ.