ಅಧ್ಯಯನ ಲೇಖನ 43
ವಿವೇಕದ ಕೂಗನ್ನ ಕೇಳಿಸಿಕೊಳ್ತಾ ಇದ್ದೀರಾ?
“ನಿಜವಾದ ವಿವೇಕ ಬೀದಿಗಳಲ್ಲಿ ಕೂಗಿ ಹೇಳುತ್ತೆ. ಅದು ಪಟ್ಟಣದ ಮುಖ್ಯಸ್ಥಳದಲ್ಲಿ ಜಾಸ್ತಿ ಕೂಗುತ್ತೆ.”—ಜ್ಞಾನೋ. 1:20.
ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು
ಕಿರುನೋಟa
1. ಬೈಬಲ್ನಲ್ಲಿರೋ ವಿವೇಕದ ಮಾತುಗಳ ಬಗ್ಗೆ ಕೆಲವರು ಏನಂತಾರೆ? (ಜ್ಞಾನೋಕ್ತಿ 1:20, 21)
ಅನೇಕ ದೇಶಗಳಲ್ಲಿ ನಮ್ಮ ಸಹೋದರ ಸಹೋದರಿಯರು ಜನ ತಿರುಗಾಡೋ ಜಾಗಗಳಲ್ಲಿ ಅವರ ಹತ್ರ ನಗುಮುಖದಿಂದ ಮಾತಾಡ್ತಾ ಪತ್ರಿಕೆಗಳನ್ನ ಕೊಡ್ತಾ ಇರ್ತಾರೆ. ಈ ತರ ಸಾಕ್ಷಿಕಾರ್ಯ ಮಾಡಿರೋದನ್ನ ನೀವೂ ನೋಡಿರ್ತೀರಿ ಅಥವಾ ಮಾಡಿರುತ್ತೀರಿ. ಇದು, ನಿಜವಾದ ವಿವೇಕ ಬೀದಿಗಳಲ್ಲಿ ಕೂಗಿ ಹೇಳುತ್ತೆ ಅಂತ ಜ್ಞಾನೋಕ್ತಿ ಪುಸ್ತಕದಲ್ಲಿ ಹೇಳಿರೋ ಮಾತನ್ನ ನಮ್ಮ ನೆನಪಿಗೆ ತರುತ್ತೆ. (ಜ್ಞಾನೋಕ್ತಿ 1:20, 21 ಓದಿ.) ಬೈಬಲ್ ಮತ್ತು ನಮ್ಮ ಪ್ರಕಾಶನಗಳಲ್ಲಿ “ನಿಜವಾದ ವಿವೇಕ” ಅಂದ್ರೆ ಯೆಹೋವನ ವಿವೇಕ ಇದೆ. ಈ ವಿವೇಕ, ಜನರಿಗೆ ಶಾಶ್ವತ ಜೀವ ಪಡಕೊಳ್ಳೋಕೆ ಸಹಾಯ ಮಾಡುತ್ತೆ. ಆದ್ರೆ ಕೆಲವರು ನಮ್ಮ ಪತ್ರಿಕೆಗಳನ್ನ ತಗೊಳಲ್ಲ, ಇನ್ನು ಕೆಲವರು ತಗೊಳ್ತಾರೆ. ಕೆಲವರು ನಮ್ಮನ್ನ ನೋಡಿ ‘ನೀವು ಇನ್ನೂ ಓಬಿರಾಯನ ಕಾಲದಲ್ಲಿ ಇದ್ದೀರ. ಬೈಬಲ್ನಲ್ಲಿ ಇರೋ ವಿಷಯಗಳಿಂದ ನಮ್ಮ ಕಾಲಕ್ಕೆ ಏನೂ ಪ್ರಯೋಜನ ಆಗಲ್ಲ’ ಅಂತ ಹೇಳ್ತಾರೆ. ಇನ್ನು ಕೆಲವರು ನಾವು ಬೈಬಲ್ನಲ್ಲಿ ಇರೋದನ್ನ ಪಾಲಿಸುವಾಗ ‘ನೀವು ಅತೀ ನೀತಿವಂತರ ತರ ಆಡ್ತೀರ’ ಅಂತ ಗೇಲಿ ಮಾಡ್ತಾರೆ. ಆದ್ರೂ ಯೆಹೋವ ದೇವರು ತನ್ನ ವಿವೇಕ ಎಲ್ರಿಗೂ ಸಿಗೋ ತರ ಮಾಡಿದ್ದಾನೆ. ಅದು ಹೇಗೆ ಅಂತ ನಾವು ಈಗ ನೋಡೋಣ.
2. ಜನರಿಗೆ ನಿಜವಾದ ವಿವೇಕ ಸಿಗೋಕೆ ಇವತ್ತು ಯೆಹೋವ ಏನು ಮಾಡಿದ್ದಾನೆ, ಆದ್ರೆ ತುಂಬಾ ಜನ ಏನು ಮಾಡ್ತಿದ್ದಾರೆ?
2 ಯೆಹೋವ ತನ್ನ ವಾಕ್ಯವಾದ ಬೈಬಲನ್ನ ಎಲ್ರಿಗೂ ಕೊಟ್ಟು ತನ್ನ ವಿವೇಕ ಸಿಗೋ ತರ ಮಾಡಿದ್ದಾನೆ. ಅಷ್ಟೇ ಅಲ್ಲ, ಬೈಬಲ್ ಆಧಾರಿತ ಪ್ರಕಾಶನಗಳನ್ನ 1,000ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಜನ್ರಿಗೆ ಸಿಗೋ ತರ ಮಾಡಿದ್ದಾನೆ. ವಿವೇಕನ ಕೇಳಿಸಿಕೊಳ್ಳುವವರಿಗೆ ಅಂದ್ರೆ ಬೈಬಲನ್ನ ಓದಿ ಅದರಲ್ಲಿ ಇರೋದನ್ನ ಪಾಲಿಸುವವರಿಗೆ ತುಂಬ ಪ್ರಯೋಜನ ಸಿಗುತ್ತೆ. ಆದ್ರೆ ದುಃಖದ ವಿಷಯ ಏನಂದ್ರೆ ಇವತ್ತು ಎಷ್ಟೋ ಜನ ಅದನ್ನ ಕೇಳಿಸಿಕೊಳ್ತಿಲ್ಲ. ಅವರು ತೀರ್ಮಾನಗಳನ್ನ ಮಾಡೋ ಮುಂಚೆ ಬೈಬಲ್ ಅದರ ಬಗ್ಗೆ ಏನು ಹೇಳುತ್ತೆ ಅಂತ ಯೋಚಿಸಲ್ಲ, ಬದಲಿಗೆ ತಮಗೆ ಏನನಿಸುತ್ತೋ, ಬೇರೆಯವರಿಗೆ ಏನನಿಸುತ್ತೋ ಅದರ ಪ್ರಕಾರ ತೀರ್ಮಾನ ಮಾಡ್ತಾರೆ. ಅಷ್ಟೇ ಅಲ್ಲ, ಬೈಬಲ್ ಹೇಳೋ ತರ ನಡಕೊಳ್ಳುವವರನ್ನ ತುಂಬ ಕೀಳಾಗಿ ನೋಡ್ತಾರೆ. ಜನರು ಯಾಕೆ ಈ ತರ ಮಾಡ್ತಾರೆ ಅಂತ ನಾವು ಈ ಲೇಖನದಲ್ಲಿ ನೋಡೋಣ. ಅದಕ್ಕೂ ಮೊದಲು ಯೆಹೋವನ ವಿವೇಕವನ್ನ ಪಡಕೊಳ್ಳೋಕೆ ನಾವು ಏನು ಮಾಡಬೇಕು ಅಂತ ತಿಳುಕೊಳ್ಳೋಣ.
ಯೆಹೋವನ ಜ್ಞಾನದಿಂದ ವಿವೇಕ ಸಿಗುತ್ತೆ
3. ನಿಜವಾದ ವಿವೇಕ ಪಡಕೊಳ್ಳೋಕೆ ಏನು ಮಾಡಬೇಕು?
3 ನಮ್ಮ ಹತ್ರ ಇರೋ ಮಾಹಿತಿಗಳಿಂದ ಸರಿಯಾದ ತೀರ್ಮಾನಗಳನ್ನ ಮಾಡೋ ಸಾಮರ್ಥ್ಯವನ್ನ ವಿವೇಕ ಅಂತ ಕರಿತೀವಿ. ಆದ್ರೆ ನಿಜವಾದ ವಿವೇಕ ಇದಕ್ಕಿಂತ ಶ್ರೇಷ್ಠವಾಗಿದೆ. ಅದು ಹೇಗೆ ಸಿಗುತ್ತೆ? “ಯೆಹೋವನ ಭಯನೇ ಜ್ಞಾನದ ಆರಂಭ. ಅತಿ ಪವಿತ್ರನಾದ ದೇವರ ಜ್ಞಾನನೇ ವಿವೇಚನೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 9:10) ಜೀವನದಲ್ಲಿ ಮುಖ್ಯವಾದ ನಿರ್ಧಾರಗಳನ್ನ ಮಾಡುವಾಗ “ಅತಿ ಪವಿತ್ರನಾದ ದೇವರ ಜ್ಞಾನ” ಪಡಕೊಂಡು ಆತನು ಯೋಚನೆ ಮಾಡೋ ತರ ನಾವು ಯೋಚನೆ ಮಾಡಬೇಕು. ಅದಕ್ಕೆ ನಾವು ಬೈಬಲ್ ಮತ್ತು ಬೈಬಲ್ ಆಧಾರಿತ ಪ್ರಕಾಶನಗಳನ್ನ ಓದಬೇಕು. ಇದನ್ನ ಮಾಡಿದ್ರೆ ನಮಗೆ ನಿಜವಾದ ವಿವೇಕ ಸಿಗುತ್ತೆ.—ಜ್ಞಾನೋ. 2:5-7.
4. ಯೆಹೋವನಿಂದ ಮಾತ್ರನೇ ಯಾಕೆ ನಮಗೆ ನಿಜವಾದ ವಿವೇಕ ಸಿಗುತ್ತೆ?
4 ಯೆಹೋವನಿಂದ ಮಾತ್ರ ನಮಗೆ ನಿಜವಾದ ವಿವೇಕನ ಕೊಡೋಕೆ ಆಗೋದು. (ರೋಮ. 16:27) ಯಾಕೆ? ಒಂದನೇದಾಗಿ, ಯೆಹೋವ ಎಲ್ಲವನ್ನ ಸೃಷ್ಟಿಸಿದ್ದಾನೆ. ಹಾಗಾಗಿ ಆತನಿಗೆ ಎಲ್ಲರ ಬಗ್ಗೆ, ಎಲ್ಲದರ ಬಗ್ಗೆನೂ ಚೆನ್ನಾಗಿ ಗೊತ್ತು. (ಕೀರ್ತ. 104:24) ಎರಡನೇದಾಗಿ, ಆತನು ಮಾಡಿರೋ ವಿಷಯಗಳು ಈಗಾಗ್ಲೇ ಆತನಿಗೆ ತುಂಬಾ ವಿವೇಕ ಇದೆ ಅನ್ನೋದನ್ನ ತೋರಿಸಿದೆ. (ರೋಮ. 11:33) ಮೂರನೇದಾಗಿ, ಯೆಹೋವ ಕೊಟ್ಟ ಬುದ್ಧಿವಾದವನ್ನ ಪಾಲಿಸಿದವರು ಜೀವನದಲ್ಲಿ ತುಂಬ ಖುಷಿಯಾಗಿದ್ದಾರೆ. (ಜ್ಞಾನೋ. 2:10-12) ಹಾಗಾಗಿ ನಮಗೆ ನಿಜವಾದ ವಿವೇಕ ಬೇಕಾದ್ರೆ ನಾವು ಈ ಸತ್ಯಗಳನ್ನ ಒಪ್ಕೋಬೇಕು ಮತ್ತು ನಿರ್ಧಾರಗಳನ್ನ ಮಾಡೋಕು ಮುಂಚೆ ಯೆಹೋವನ ಮಾತನ್ನ ಕೇಳಬೇಕು.
5. ನಿಜವಾದ ವಿವೇಕ ಯೆಹೋವನಿಂದನೇ ಬರೋದು ಅಂತ ಒಪ್ಪಿಕೊಳ್ಳದ ಜನರ ಜೀವನ ಹೇಗಿದೆ?
5 ಇವತ್ತು ತುಂಬ ಜನ ಸೃಷ್ಟಿಯನ್ನ ನೋಡಿ ಅದು ಅದ್ಭುತವಾಗಿದೆ ಅಂತ ಹೇಳ್ತಾರೆ. ಆದ್ರೆ ಅದರ ಹಿಂದೆ ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ಒಪ್ಪಿಕೊಳ್ಳಲ್ಲ. ಇದೆಲ್ಲ ತನ್ನಿಂದ ತಾನೇ ಬಂತು ಅಥವಾ ವಿಕಾಸವಾಗಿ ಬಂತು ಅಂತ ಹೇಳ್ತಾರೆ. ಇನ್ನೂ ಕೆಲವರು ದೇವರನ್ನ ನಂಬ್ತೀವಿ ಅಂತ ಹೇಳಿಕೊಳ್ತಾರೆ. ಆದ್ರೆ ಬೈಬಲಲ್ಲಿ ಇರೋದೆಲ್ಲ ಹಳೇ ಕಾಲದ್ದು, ಅದನ್ನ ನಾವು ಪಾಲಿಸಕ್ಕಾಗಲ್ಲ ಅಂತ ಹೇಳ್ತಾರೆ. ಹೀಗೆ ದೇವರ ಮಾತು ಕೇಳದೆ ತಮಗಿಷ್ಟ ಬಂದ ಹಾಗೆ ಜೀವನ ಮಾಡ್ತಿರೋದ್ರಿಂದ ಅವರಿಗೆ ಒಳ್ಳೆದಾಗಿದ್ಯಾ? ಅವರು ಸಂತೋಷವಾಗಿದ್ದಾರಾ? ಅವರ ಜೀವನಕ್ಕೆ ಅರ್ಥ ಇದ್ಯಾ? ಭವಿಷ್ಯದಲ್ಲಿ ಒಳ್ಳೆದಾಗುತ್ತೆ ಅನ್ನೋ ನಂಬಿಕೆ ಅವರಿಗಿದ್ಯಾ? ಸತ್ಯ ಏನು ಅನ್ನೋದು ನಮ್ಮ ಕಣ್ಣ ಮುಂದೆನೇ ಇದೆ. ಆದ್ರಿಂದ “ಯಾವ ವಿವೇಕನೂ, ವಿವೇಚನಾ ಶಕ್ತಿನೂ, ಸಲಹೆನೂ ಯೆಹೋವನ ಮುಂದೆ ನಿಲ್ಲಲ್ಲ” ಅನ್ನೋ ಮಾತನ್ನ ನಾವು ಒಪ್ಪಿಕೊಳ್ತೀವಿ. (ಜ್ಞಾನೋ. 21:30) ಹಾಗಾಗಿ ಯೆಹೋವನ ಹತ್ರ ವಿವೇಕ ಕೇಳೋದು ಎಷ್ಟು ಒಳ್ಳೇದಲ್ವಾ! ಆದ್ರೆ ತುಂಬ ಜನ ಅದನ್ನ ಕೇಳ್ತಿಲ್ಲ. ಕಾರಣ ಏನು ಅಂತ ಈಗ ನೊಡೋಣ.
ಜನರು ನಿಜ ವಿವೇಕನ ಯಾಕೆ ಕಿವಿಗೆ ಹಾಕಿಕೊಳ್ತಾನೇ ಇಲ್ಲ?
6. ಜ್ಞಾನೋಕ್ತಿ 1:22-25ರಲ್ಲಿ ಹೇಳೋ ಹಾಗೆ ದೇವರ ವಿವೇಕವನ್ನ ಬೇಡ ಅಂತ ಹೇಳುವವರು ಯಾರು?
6 ‘ವಿವೇಕ ಬೀದಿಗಳಲ್ಲಿ ಕೂಗುವಾಗ’ ಮೂರು ತರದ ಜನರು ಅದನ್ನ ಕೇಳಿಸಿಕೊಳ್ಳಲ್ಲ ಅಂತ ಬೈಬಲ್ ಹೇಳುತ್ತೆ. ಅವರು ಯಾರು? ‘ಅನುಭವ ಇಲ್ಲದವರು,’ ‘ಗೇಲಿ ಮಾಡುವವರು,’ ಮತ್ತು ‘ಮೂರ್ಖರು.’ (ಜ್ಞಾನೋಕ್ತಿ 1:22-25 ಓದಿ.) ಇವರು ದೇವರ ವಿವೇಕದ ಮಾತುಗಳನ್ನ ಬೇಡ ಅನ್ನೋಕೆ ಕಾರಣ ಏನು ಮತ್ತು ಇವರಲ್ಲಿರೋ ಗುಣಗಳು ನಮಗೆ ಬರದೇ ಇರೋಕೆ ನಾವೇನು ಮಾಡಬೇಕು? ಇದರ ಬಗ್ಗೆ ನಾವೀಗ ಕಲಿಯೋಣ.
7. ಕೆಲವರು ‘ಅನುಭವ ಇಲ್ಲದವರ’ ತರನೇ ಇರೋಕೆ ಯಾಕೆ ಇಷ್ಟಪಡ್ತಾರೆ?
7 ‘ಅನುಭವ ಇಲ್ಲದವರು’ ಎಲ್ಲರ ಮಾತನ್ನ ಸುಲಭವಾಗಿ ನಂಬ್ತಾರೆ ಮತ್ತು ಅವರು ಮುಗ್ಧರಾಗಿ ಇರುತ್ತಾರೆ. (ಜ್ಞಾನೋ. 14:15, ಪಾದಟಿಪ್ಪಣಿ) ಇಂಥ ಜನರನ್ನ ಎಷ್ಟೋ ಸಲ ನಾವು ಸೇವೆಯಲ್ಲಿ ನೋಡಿರ್ತೀವಿ. ಇಂಥ ಲಕ್ಷಗಟ್ಟಲೆ ಜನರಿಗೆ ಧರ್ಮಗುರುಗಳು ಅಥವಾ ರಾಜಕಾರಣಿಗಳು ಸುಳ್ಳುಗಳನ್ನ ಹೇಳಿ ಮೋಸ ಮಾಡ್ತಾರೆ. ಕೆಲವೊಮ್ಮೆ ಇಂಥ ಜನರು, ತಮಗೆ ಬೇರೆಯವರು ಮೋಸ ಮಾಡಿದ್ದಾರೆ ಅಂತ ತಿಳುಕೊಂಡಾಗ ಬೇಜಾರು ಮಾಡಿಕೊಳ್ತಾರೆ. ಆದ್ರೆ ಜ್ಞಾನೋಕ್ತಿ 1:22ರಲ್ಲಿ ಈ ರೀತಿಯ ಜನರ ಬಗ್ಗೆ ಮಾತಾಡ್ತಿಲ್ಲ. ಅವರು ಅನುಭವ ಇಲ್ಲದವರ ತರ ಇರೋಕೆ ಇಷ್ಟಪಡ್ತಾರೆ. (ಯೆರೆ. 5:31) ಅವರು ತಮಗಿಷ್ಟ ಬಂದ ಹಾಗೆ ಇರ್ತಾರೆ. ದೇವರ ಮಾತನ್ನ ಕೇಳೋ ಅವಶ್ಯಕತೆ ತಮಗಿಲ್ಲ ಅಂದುಕೊಳ್ತಾರೆ. ದೇವರು ಹೇಳಿಕೊಡೋ ನೀತಿಯ ಮಟ್ಟಗಳನ್ನ ಪಾಲಿಸೋಕೆ ಇಷ್ಟ ಪಡಲ್ಲ. ಕೆನಡಾದ ಕ್ವಿಬೆಕ್ನಲ್ಲಿರೋ ಒಬ್ಬ ಮಹಿಳೆಗೆ ದೇವರ ಮೇಲೆ ತುಂಬ ಭಕ್ತಿ. ಒಮ್ಮೆ ಅವರು ನಮ್ಮ ಸಹೋದರನೊಬ್ಬನಿಗೆ “ಧರ್ಮಗುರುಗಳು ನಮ್ಮನ್ನ ವಂಚಿಸ್ತಾರೆ ಅಂದ್ರೆ ಅದು ನಮ್ಮ ತಪ್ಪಲ್ಲ, ಅದು ಅವರ ತಪ್ಪು!” ಅಂತ ಹೇಳಿದ್ರು. ಈ ಮಹಿಳೆ ತರನೇ ತುಂಬ ಜನ ಇದ್ದಾರೆ. ಆದ್ರೆ ನಾವು ಯಾವತ್ತೂ ಅವರ ತರ ಇರೋಕೆ ಇಷ್ಟಪಡಲ್ಲ ಅಲ್ವಾ?—ಜ್ಞಾನೋ. 1:32; 27:12.
8. ವಿವೇಕ ಪಡಕೊಳ್ಳೋಕೆ ನಾವೇನು ಮಾಡಬೇಕು?
8 ನಾವು ಅನುಭವ ಇಲ್ಲದವರ ತರ ಅಲ್ಲ “ಬುದ್ಧಿವಂತಿಕೆಯಲ್ಲಿ ದೊಡ್ಡವ್ರ ತರ” ಇರಬೇಕು ಅಂತ ಬೈಬಲ್ ಪ್ರೋತ್ಸಾಹಿಸುತ್ತೆ. (1 ಕೊರಿಂ. 14:20) ನಾವು ಬೈಬಲನ್ನ ಚೆನ್ನಾಗಿ ಕಲಿತು, ಅದರಲ್ಲಿ ಇರೋದನ್ನ ಪಾಲಿಸುವಾಗ ನಮಗೆ ವಿವೇಕ ಸಿಗುತ್ತೆ. ಆಗ ನಾವು ಜೀವನದಲ್ಲಿ ಸಮಸ್ಯೆಗಳನ್ನ ನಿಭಾಯಿಸೋಕೆ ಮತ್ತು ಒಳ್ಳೇ ತೀರ್ಮಾನಗಳನ್ನ ಮಾಡೋಕೆ ಕಲಿತೀವಿ. ನಾವು ಮಾಡಿರೋ ತೀರ್ಮಾನಗಳ ಬಗ್ಗೆ ಯೋಚಿಸುವಾಗ ನಾವು ನಿಜವಾದ ವಿವೇಕವನ್ನ ಪಡಕೊಂಡಿದ್ದೀವಾ ಇಲ್ವಾ ಅಂತ ಗೊತ್ತಾಗುತ್ತೆ. ‘ನಾನು ಬೈಬಲ್ ಕಲಿತಾ ಇದ್ದೀನಿ, ಕೂಟಗಳಿಗೆ ಬರ್ತಾ ಇದ್ದೀನಿ ಆದ್ರೆ ದೇವರಿಗೆ ಸಮರ್ಪಿಸಿಕೊಂಡು ಯಾಕೆ ದೀಕ್ಷಾಸ್ನಾನ ತಗೊಳ್ತಾ ಇಲ್ಲ? ನಾನು ದೀಕ್ಷಾಸ್ನಾನ ತಗೊಂಡಿದ್ದೀನಿ ನಿಜ, ಆದ್ರೆ ಇನ್ನೂ ಚೆನ್ನಾಗಿ ಸೇವೆ ಮಾಡೋದು ಹೇಗೆ? ಇನ್ನೂ ಚೆನ್ನಾಗಿ ಬೇರೆಯವರಿಗೆ ಕಲಿಸೋದು ಹೇಗೆ? ಬೈಬಲ್ನಲ್ಲಿರೊ ತತ್ವಗಳನ್ನ ಅರ್ಥಮಾಡಿಕೊಂಡು ಜೀವನದಲ್ಲಿ ಸರಿಯಾದ ತೀರ್ಮಾನ ಮಾಡ್ತೀನಾ? ನಾನು ಬೇರೆಯವರ ಜೊತೆ ಯೇಸು ತರ ನಡಕೊಳ್ತೀನಾ?’ ಅಂತ ನಾವು ನಮ್ಮನ್ನೇ ಕೇಳಿಕೊಳ್ಳಬೇಕು. ಎಲ್ಲಾದ್ರೂ ಬದಲಾವಣೆ ಮಾಡ್ಕೊಬೇಕು ಅಂತ ಗೊತ್ತಾದ್ರೆ ಅದನ್ನ ಮಾಡಬೇಕು. ಹೀಗೆ ಯೆಹೋವ ಕೊಡೋ ಎಚ್ಚರಿಕೆಗಳು “ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.”—ಕೀರ್ತ. 19:7.
9. ‘ಗೇಲಿ ಮಾಡುವವರು’ ಯೆಹೋವನ ವಿವೇಕ ಬೇಡ ಅಂತ ಹೇಗೆ ತೋರಿಸಿಕೊಡ್ತಾರೆ?
9 ದೇವರ ವಿವೇಕವನ್ನ ಬೇಡ ಅನ್ನೋ ಎರಡನೇ ಗುಂಪಿನವರು ಯಾರು? ಅವರೇ ‘ಗೇಲಿ ಮಾಡುವವರು.’ ಇಂಥವರನ್ನೂ ನಾವು ಕೆಲವೊಮ್ಮ ಸೇವೆಯಲ್ಲಿ ನೋಡ್ತೀವಿ. ಇಂಥವರಿಗೆ ಬೇರೆಯವರನ್ನ ಗೇಲಿ ಮಾಡೋದಂದ್ರೆ ಹಾಲು ಕುಡಿದಷ್ಟು ಸಂತೋಷ. (ಕೀರ್ತ. 123:4) ಕೊನೇ ದಿನಗಳಲ್ಲಿ ಗೇಲಿ ಮಾಡುವ ಜನ ಇರ್ತಾರೆ ಅಂತ ಬೈಬಲ್ ಮೊದಲೇ ಹೇಳಿತ್ತು. (2 ಪೇತ್ರ 3:3, 4) ಅವರು, ದೇವರ ಎಚ್ಚರಿಕೆಗೆ ಕಿವಿಗೊಡದಿದ್ದ ಲೋಟನ ಅಳಿಯಂದಿರ ತರ ಇದ್ದಾರೆ. (ಆದಿ. 19:14) ಈ ತರ ಗೇಲಿ ಮಾಡುವವರು ‘ತಮ್ಮ ಕೆಟ್ಟ ಆಸೆಗಳ ಹಿಂದೇನೇ ಹೋಗೋದ್ರಿಂದ’ ಬೈಬಲ್ ಹೇಳೋ ತರ ನಡಕೊಳ್ಳುವವರನ್ನ ನೋಡಿ ತಮಾಷೆ ಮಾಡ್ತಾರೆ. (ಯೂದ 7, 17, 18) ಯೆಹೋವನನ್ನು ಬಿಟ್ಟು ಹೋದ ಜನರ ತರ ಮತ್ತು ಧರ್ಮಭ್ರಷ್ಟರ ತರಾನೇ ಇವರೂ ಇರ್ತಾರೆ.
10. ಗೇಲಿ ಮಾಡುವವರ ಬುದ್ಧಿ ನಮಗೆ ಬರಬಾರದು ಅಂದ್ರೆ ಕೀರ್ತನೆ 1:1ರಲ್ಲಿ ಹೇಳೋ ತರ ಏನು ಮಾಡಬೇಕು?
10 ಗೇಲಿ ಮಾಡುವವರ ಬುದ್ಧಿ ನಮಗೆ ಬರಬಾರದು ಅಂದ್ರೆ ಏನು ಮಾಡಬೇಕು? ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳುವವರ ಜೊತೆ ನಾವು ಸೇರಲೇಬಾರದು. (ಕೀರ್ತನೆ 1:1 ಓದಿ.) ಉದಾಹರಣೆಗೆ, ನಾವು ಧರ್ಮಭ್ರಷ್ಟರ ಬಗ್ಗೆ ಓದೋಕೆ ಹೋಗಬಾರದು, ಅವರು ಹೇಳೋದನ್ನ ಕೇಳಬಾರದು. ಒಂದುವೇಳೆ ಹಾಗೆ ಮಾಡಿದ್ರೆ ನಾವು ಅವರ ತರ ಬೇರೆಯವರಲ್ಲಿ ತಪ್ಪು ಕಂಡುಹಿಡಿಯೊ ವ್ಯಕ್ತಿಗಳಾಗಿ ಬಿಡ್ತೀವಿ. ಯೆಹೋವ ದೇವರ ಬಗ್ಗೆ ಅಥವಾ ಆತನ ಸಂಘಟನೆ ಕೊಡೋ ನಿರ್ದೇಶನಗಳ ಬಗ್ಗೆ ಸಂಶಯ ಪಡ್ತೀವಿ. ‘ಹೊಸ ನಿರ್ದೇಶನ ಅಥವಾ ತಿಳುವಳಿಕೆ ಕೊಟ್ಟಾಗ ನಾವು ಅದನ್ನ ಕೇಳ್ತೀವಾ? ಅಥವಾ ಪ್ರಶ್ನೆ ಮಾಡ್ತೀವಾ? ಮುಂದೆ ನಿಂತು ನಮ್ಮನ್ನ ನಡಿಸ್ತಿರೋ ಸಹೋದರರಲ್ಲಿ ತಪ್ಪು ಹುಡುಕ್ತಾ ಇರ್ತೀವಾ?’ ಅಂತ ನಮ್ಮನ್ನೇ ನಾವು ಕೇಳಿಕೊಳ್ಳಬೇಕು. ನಾವು ಏನಾದ್ರೂ ತಪ್ಪು ಮಾಡ್ತಿದ್ರೆ ಅದನ್ನ ತಕ್ಷಣ ಸರಿಮಾಡಿಕೊಳ್ಳಬೇಕು. ಆಗ ನಾವು ಗೇಲಿ ಮಾಡುವವರ ತರ ಇರಲ್ಲ. ಯೆಹೋವನೂ ನಮ್ಮನ್ನ ಇಷ್ಟಪಡ್ತಾನೆ.—ಜ್ಞಾನೋ. 3:34, 35.
11. ಯೆಹೋವನ ನೀತಿಯ ಮಟ್ಟಗಳ ಬಗ್ಗೆ ‘ಮೂರ್ಖರು’ ಏನು ನೆನಸುತ್ತಾರೆ?
11 ವಿವೇಕವನ್ನ ಬೇಡ ಅನ್ನೋ ಮೂರನೇ ಗುಂಪಿನವರು ಯಾರು? ಅವರೇ ‘ಮೂರ್ಖರು.’ ಜನರಿಗೆ ಯಾವುದು ಒಳ್ಳೇದು ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿದೆ ಮತ್ತು ಆತನು ನೀತಿಯ ಮಟ್ಟಗಳನ್ನ ನಮಗೆ ಕಲಿಸ್ತಾನೆ. ಕೆಲವರು ಅದನ್ನ ಬೇಡ ಅಂತ ಹೇಳ್ತಾರೆ ಮತ್ತು ತಮಗೆ ಸರಿ ಅನಿಸಿದ್ದನ್ನೇ ಮಾಡ್ತಾರೆ. ಅದಕ್ಕೆ ಅವರನ್ನ ಮೂರ್ಖರು ಅಂತ ಹೇಳಬಹುದು. (ಜ್ಞಾನೋ. 12:15) ನಿಜವಾದ ವಿವೇಕ ಯೆಹೋವನಿಂದನೇ ಸಿಗೋದು ಅಂತ ಅವರು ಒಪ್ಪಿಕೊಳ್ಳಲ್ಲ. (ಕೀರ್ತ. 53:1) ಇಂಥವರನ್ನ ನಾವು ಸೇವೇಲಿ ನೋಡಿರ್ತೀವಿ. ಇವರು, ಬೈಬಲಲ್ಲಿ ಹೇಳೋ ತರ ನಡಕೊಳ್ಳೋ ನಮ್ಮನ್ನ ನೋಡಿ ‘ನಿಮಗೆ ತಲೆ ಕೆಟ್ಟಿದೆ’ ಅಂತ ಬೈತಾರೆ. ಆದ್ರೆ ನಿಜ ಏನಂದ್ರೆ ಅವರ ಜೀವನನೇ ಚೆನ್ನಾಗಿಲ್ಲ ಮತ್ತು ಅವರು ಬೇರೆಯವರಿಗೂ ಒಳ್ಳೇದನ್ನ ಹೇಳಿ ಕೊಡೋಕೆ ಆಗಲ್ಲ. ಅದಕ್ಕೇ “ಮೂರ್ಖನಿಗೆ ನಿಜವಾದ ವಿವೇಕ ಸಿಗಲ್ಲ, ಪಟ್ಟಣದ ಬಾಗಿಲಲ್ಲಿ ಹೇಳೋಕೆ ಅವನ ಹತ್ರ ಏನೂ ಇರಲ್ಲ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 24:7) ಅಷ್ಟೇ ಅಲ್ಲ, “ಮೂರ್ಖನಿಂದ ದೂರ ಇರು” ಅಂತ ಯೆಹೋವ ದೇವರು ನಮ್ಮನ್ನ ಎಚ್ಚರಿಸಿದ್ದಾನೆ.—ಜ್ಞಾನೋ. 14:7.
12. ನಾವು ಮೂರ್ಖರ ತರ ಆಗಬಾರದು ಅಂದ್ರೆ ಏನು ಮಾಡಬೇಕು?
12 ನಾವು ಈ ಮೂರ್ಖರ ತರ ಇರಬಾರದು. ದೇವರ ನೀತಿ ನಿಯಮಗಳನ್ನ, ದೇವರ ವಿವೇಕದ ಮಾತುಗಳನ್ನ ಪಾಲಿಸೋಕೆ ಆಸೆಯನ್ನ ಬೆಳೆಸಿಕೊಳ್ಳಬೇಕು. ಈ ಆಸೆನ ಇನ್ನೂ ಜಾಸ್ತಿ ಬೆಳೆಸಿಕೊಳ್ಳೋಕೆ ದೇವರ ವಿವೇಕ ಬೇಡ ಅಂತ ಹೇಳುವವರ ಜೀವನದ ಜೊತೆ ನಾವು ನಮ್ಮ ಜೀವನನ ಹೋಲಿಸಿ ನೋಡಿಕೊಳ್ಳಬೇಕು. ಅವರ ಜೀವನದಲ್ಲಿ ಏನೆಲ್ಲ ಸಮಸ್ಯೆಗಳಿದೆ ಅನ್ನೋದರ ಬಗ್ಗೆ ಯೋಚನೆ ಮಾಡಬೇಕು. ಆಗ ದೇವರ ಮಾತನ್ನ ಕೇಳಿದ್ರಿಂದ ನಮ್ಮ ಜೀವನ ಎಷ್ಟು ಚೆನ್ನಾಗಿದೆ ಅಂತ ನಮಗೆ ಅರ್ಥ ಆಗುತ್ತೆ.—ಕೀರ್ತ. 32:8, 10.
13. ನಾವು ತನ್ನ ಮಾತನ್ನ ಕೇಳಲೇಬೇಕು ಅಂತ ಯೆಹೋವ ಒತ್ತಾಯ ಮಾಡ್ತಾನಾ?
13 ಯೆಹೋವ ಎಲ್ಲರಿಗೂ ವಿವೇಕ ಸಿಗೋ ತರ ಮಾಡಿದ್ದಾನೆ. ಹಾಗಂತ ಅದನ್ನ ಪಡಕೊಳ್ಳಬೇಕು ಅಂತ ಆತನು ಯಾರನ್ನೂ ಒತ್ತಾಯ ಮಾಡಲ್ಲ. ಆದ್ರೆ ವಿವೇಕದ ಮಾತನ್ನ ಯಾರೆಲ್ಲ ಕೇಳಲ್ವೋ ಅವರಿಗೆ ಏನಾಗುತ್ತೆ ಅಂತ ಆತನು ಹೇಳಿದ್ದಾನೆ. (ಜ್ಞಾನೋ. 1:29-32) ಯೆಹೋವನ ಮಾತು ಕೇಳದವರಿಗೆ “ತಮ್ಮ ಕೆಲಸಗಳಿಗೆ ತಕ್ಕ ಪ್ರತಿಫಲ ಸಿಗುತ್ತೆ.” ಅವರು ಜೀವನದಲ್ಲಿ ಹೋಗ್ತಾ-ಹೋಗ್ತಾ ಕಷ್ಟ, ತೊಂದ್ರೆ, ಸಮಸ್ಯೆಗಳನ್ನ ಅನುಭವಿಸ್ತಾರೆ. ಅಷ್ಟೇ ಅಲ್ಲ, ಮುಂದೆ ಯೆಹೋವ ಅವರನ್ನ ನಾಶ ಮಾಡ್ತಾನೆ. ಆದ್ರೆ ಯಾರು ಯೆಹೋವನ ಮಾತನ್ನ ಕೇಳ್ತಾರೋ ಅದನ್ನ ಪಾಲಿಸ್ತಾರೋ ಅವರ ಬಗ್ಗೆ ಯೆಹೋವ ಹೀಗೆ ಮಾತು ಕೊಟ್ಟಿದ್ದಾನೆ: “ನನ್ನ ಮಾತು ಕೇಳಿದವನು ಸುರಕ್ಷಿತವಾಗಿ ಇರ್ತಾನೆ, ಯಾವುದೇ ಆತಂಕ ಇಲ್ಲದೆ ಆರಾಮಾಗಿ ಇರ್ತಾನೆ.”—ಜ್ಞಾನೋ. 1:33.
ನಿಜ ವಿವೇಕದಿಂದ ನಾವು ಸಂತೋಷವಾಗಿ ಇರುತ್ತೀವಿ
14-15. ಜ್ಞಾನೋಕ್ತಿ 4:23ರಿಂದ ನಾವೇನು ಕಲಿತೀವಿ?
14 ದೇವರ ಬುದ್ಧಿಮಾತುಗಳಿಂದ ನಮಗೆ ಯಾವಾಗ್ಲೂ ಒಳ್ಳೇದಾಗುತ್ತೆ. ಆತನು ಅವುಗಳನ್ನ ಬೈಬಲ್ನಲ್ಲಿ ಸುಲಭವಾಗಿ ಸಿಗೋ ತರ ಇಟ್ಟಿದ್ದಾನೆ. ಅಂಥ ತುಂಬಾ ಬುದ್ಧಿಮಾತುಗಳು ಜ್ಞಾನೋಕ್ತಿ ಪುಸ್ತಕದಲ್ಲಿದೆ. ಅವನ್ನ ಎಷ್ಟೋ ವರ್ಷಗಳ ಹಿಂದೆ ಬರೆದಿದ್ರೂ ಅವುಗಳಿಂದ ನಮಗೆ ಈಗಲೂ ಪ್ರಯೋಜನ ಇದೆ. ಅಂಥ ಬುದ್ಧಿಮಾತುಗಳಲ್ಲಿ ನಾಲ್ಕನ್ನ ಈಗ ನೋಡೋಣ.
15 ನಿಮ್ಮ ಹೃದಯವನ್ನ ಹುಷಾರಾಗಿ ನೋಡಿಕೊಳ್ಳಿ. “ಎಲ್ಲಕ್ಕಿಂತ ಮುಖ್ಯವಾಗಿ ನಿನ್ನ ಹೃದಯ ಕಾಪಾಡ್ಕೊ. ಯಾಕಂದ್ರೆ ನಿನಗೆ ಜೀವ ಸಿಗುತ್ತಾ ಇಲ್ವಾ ಅನ್ನೋದು ಅದ್ರ ಮೇಲೆ ಹೊಂದ್ಕೊಂಡಿದೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 4:23) ನಿಮ್ಮ ಹೃದಯನ ಚೆನ್ನಾಗಿ ಇಟ್ಟುಕೊಳ್ಳೋಕೆ ಏನು ಮಾಡ್ತೀರಿ? ಒಳ್ಳೇ ಊಟ ಮಾಡ್ತೀರಿ, ಚೆನ್ನಾಗಿ ವ್ಯಾಯಾಮ ಮಾಡ್ತೀರಿ ಮತ್ತು ಯಾವ ಕೆಟ್ಟ ಅಭ್ಯಾಸವನ್ನೂ ಬೆಳೆಸಿಕೊಳ್ಳಲ್ಲ. ನಮ್ಮ ಸಾಂಕೇತಿಕ ಹೃದಯನ ಕಾಪಾಡಿಕೊಳ್ಳೋಕೆ ಇದೇ ತರ ಕೆಲವು ವಿಷಯಗಳನ್ನ ಮಾಡಬೇಕು. ದಿನಾ ಬೈಬಲ್ ಓದಬೇಕು, ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡಿ ಹೋಗಿ ಉತ್ತರಗಳನ್ನ ಹೇಳಬೇಕು. ಇದು ನಾವು ಒಳ್ಳೇ ಊಟ ಮಾಡಿದ ಹಾಗೆ ಇರುತ್ತೆ. ನಾವು ಹುರುಪಿನಿಂದ ಹುಮ್ಮಸ್ಸಿನಿಂದ ಸೇವೆ ಮಾಡಬೇಕು. ಇದು ವ್ಯಾಯಾಮ ಮಾಡಿದ ಹಾಗೆ ಇರುತ್ತೆ. ಅಷ್ಟೇ ಅಲ್ಲ, ನಾವು ಇನ್ನೊಂದು ವಿಷಯನೂ ಮಾಡಬೇಕು. ಕೆಟ್ಟ ಅಭ್ಯಾಸಗಳನ್ನ ಬೆಳೆಸಿಕೊಳ್ಳಬಾರದು. ಅಂದ್ರೆ ನಮ್ಮ ಯೋಚನೆ ಕೆಟ್ಟು ಹೋಗದೆ ಇರೋ ತರ ನೋಡ್ಕೊಬೇಕು. ಅದಕ್ಕಾಗಿ ನಾವು ಕೆಟ್ಟ ಮನೋರಂಜನೆ ನೋಡಬಾರದು ಮತ್ತು ಕೆಟ್ಟವರ ಸಹವಾಸ ಮಾಡಬಾರದು. ಇದರಿಂದ ಯೆಹೋವನ ಜೊತೆಗಿರೋ ನಮ್ಮ ಸ್ನೇಹ ಗಟ್ಟಿಯಾಗುತ್ತೆ.
16. ಜ್ಞಾನೋಕ್ತಿ 23:4, 5ರಲ್ಲಿರೋ ಬುದ್ಧಿಮಾತಿನಿಂದ ಇವತ್ತಿಗೂ ಒಳ್ಳೇದಾಗುತ್ತೆ ಅಂತ ನಾವು ಹೇಗೆ ಹೇಳಬಹುದು?
16 ಹಾಸಿಗೆ ಇದ್ದಷ್ಟು ಕಾಲು ಚಾಚು. “ಆಸ್ತಿಪಾಸ್ತಿ ಮಾಡ್ತಾ ಸುಸ್ತಾಗಿ ಹೋಗಬೇಡ . . . ನೀನು ಅದನ್ನ ನೋಡಿ ಕಣ್ತುಂಬಿಕೊಳ್ಳುವಷ್ಟರಲ್ಲಿ ಅದು ಮಾಯ ಆಗಿಬಿಡಬಹುದು, ಯಾಕಂದ್ರೆ ಅದು ರೆಕ್ಕೆ ಕಟ್ಕೊಂಡ ಹದ್ದಿನ ತರ ಆಕಾಶಕ್ಕೆ ಹಾರಿಹೋಗುತ್ತೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 23:4, 5) ಇಲ್ಲಿ ಹೇಳಿರೋದು ನೂರಕ್ಕೆ ನೂರು ಸತ್ಯ. ಈ ಆಸ್ತಿಪಾಸ್ತಿ ಎಲ್ಲಾ ಕೊನೆತನಕ ಇರಲ್ಲ. ಆದ್ರೂ ಇವತ್ತು ಬಡವರು, ಶ್ರೀಮಂತರು ಎಲ್ಲರೂ ದುಡ್ಡಿನ ಹಿಂದೆ ಓಡ್ತಾ ಇದ್ದಾರೆ. ಈ ದುಡ್ಡಿನಿಂದ ಅವರು ಸಮಾಜದಲ್ಲಿ ತಮ್ಮ ಹೆಸರನ್ನ ಹಾಳುಮಾಡಿಕೊಳ್ತಿದ್ದಾರೆ, ಸಂಬಂಧಗಳನ್ನ ಹಾಳುಮಾಡಿಕೊಳ್ತಿದ್ದಾರೆ, ತಮ್ಮ ಆರೋಗ್ಯವನ್ನೂ ಕಳೆದುಕೊಳ್ತಿದ್ದಾರೆ. (ಜ್ಞಾನೋ. 28:20; 1 ತಿಮೊ. 6:9, 10) ಆದರೆ ನಮಗೆ ವಿವೇಕ ಇದ್ರೆ, ದುಡ್ಡನ್ನ ಎಲ್ಲಿ ಇಡಬೇಕೋ ಅದರ ಸ್ಥಾನದಲ್ಲಿ ಇಡುತ್ತೀವಿ. ಇದರಿಂದ ಅತಿಯಾಸೆ ಅನ್ನೋ ಕೆಟ್ಟ ಗುಣ ನಮ್ಮಲ್ಲಿ ಬರಲ್ಲ. ಜೀವನದಲ್ಲಿ ಸಂತೋಷ, ನೆಮ್ಮದಿಯಿಂದ ಇರುತ್ತೀವಿ.—ಪ್ರಸಂ. 7:12.
17. ಜ್ಞಾನೋಕ್ತಿ 12:18ರಲ್ಲಿ ಹೇಳಿರೋ ಹಾಗೆ ನಮ್ಮ ಮಾತು ‘ಬುದ್ಧಿವಂತನ ಮಾತಿನ’ ತರ ಇರೋಕೆ ಏನು ಮಾಡಬೇಕು?
17 ಮಾತಾಡೋ ಮುಂಚೆ ಯೋಚನೆ ಮಾಡಿ. ನಾವು ಯೋಚನೆ ಮಾಡದೆ ಮಾತಾಡಿಬಿಟ್ಟರೆ ಬೇರೆಯವರ ಮನಸ್ಸಿಗೆ ತುಂಬಾ ನೋವಾಗುತ್ತೆ. “ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ, ಬುದ್ಧಿವಂತನ ಮಾತು ಮದ್ದಿನಂತೆ ಇರುತ್ತೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 12:18) ನಾವು ಬೇರೆಯವರ ತಪ್ಪುಗಳನ್ನ ಎತ್ತಿ ಆಡ್ತಾ ಎಲ್ಲರಿಗೂ ಹೇಳ್ತಿದ್ರೆ ಅವರ ಜೊತೆಗಿರೋ ನಮ್ಮ ಸಂಬಂಧ ಹಾಳಾಗಿಬಿಡುತ್ತೆ. (ಜ್ಞಾನೋ. 20:19) ನಮ್ಮ ಮಾತು ಬೇರೆಯವರಿಗೆ ಗಾಯ ಮಾಡದೆ ಮದ್ದಿನ ತರ ಇರಬೇಕಂದ್ರೆ ನಾವು ಪ್ರತಿದಿನ ಬೈಬಲ್ ಓದಬೇಕು, ಅದರಲ್ಲಿರೋ ಒಳ್ಳೇ ವಿಷಯಗಳನ್ನು ನಮ್ಮ ಮನಸ್ಸಲ್ಲಿ ತುಂಬಿಸ್ಕೊಬೇಕು. (ಲೂಕ 6:45) ನಾವು ಹೀಗೆ ಮಾಡೋದ್ರಿಂದ ನಮ್ಮ ಮಾತು “ವಿವೇಕ ಹರಿಯೋ ಕಾಲುವೆ ತರ” ಆಗುತ್ತೆ. ತಂಪಾದ ನೀರಿನ ತರ ಎಲ್ಲರ ಮನಸ್ಸಿಗೂ ಖುಷಿ ಕೊಡುತ್ತೆ.—ಜ್ಞಾನೋ. 18:4.
18. ಸೇವೆ ಚೆನ್ನಾಗಿ ಮಾಡೋಕೆ ಜ್ಞಾನೋಕ್ತಿ 24:6ರಲ್ಲಿರೋ ಸಲಹೆ ಹೇಗೆ ಸಹಾಯ ಮಾಡುತ್ತೆ?
18 ಸಂಘಟನೆಯಿಂದ ಬರೋ ನಿರ್ದೇಶನ ಪಾಲಿಸಿ. “ವಿವೇಕದಿಂದ ಕೂಡಿರೋ ಮಾರ್ಗದರ್ಶನದಿಂದ ಯುದ್ಧ ಮಾಡು, ತುಂಬ ಸಲಹೆಗಾರರು ಇದ್ರೆ ನಿನಗೆ ಜಯ ಸಿಗುತ್ತೆ” ಅಂತ ಬೈಬಲ್ ಹೇಳುತ್ತೆ. (ಜ್ಞಾನೋ. 24:6, ಪಾದಟಿಪ್ಪಣಿ) ಸಾರುವಾಗ ಮತ್ತು ಕಲಿಸುವಾಗ ಈ ಸಲಹೆಯನ್ನ ನಾವು ಹೇಗೆ ಪಾಲಿಸಬಹುದು? ನಾವು ಈ ಕೆಲಸನಾ ನಮಗೆ ಇಷ್ಟ ಬಂದ ಹಾಗೆ ಮಾಡದೇ ಸಂಘಟನೆ ಕಲಿಸಿಕೊಡೋ ರೀತಿಯಲ್ಲಿ ಮಾಡೋದು ಒಳ್ಳೇದು. ಈ ಸಲಹೆಗಳು ನಮಗೆ ಕೂಟದಲ್ಲಿ ಸಿಗುತ್ತೆ. ಅಲ್ಲಿ ನಿಪುಣ ಸಲಹೆಗಾರರ ತರ ಇರೋ ನಮ್ಮ ಸಹೋದರ ಸಹೋದರಿಯರು ಬೈಬಲ್ ಆಧರಿತ ಭಾಷಣಗಳನ್ನ ಕೊಡ್ತಾರೆ ಮತ್ತು ಅಭಿನಯಿಸಿ ತೋರಿಸ್ತಾರೆ. ಇದರಿಂದ ನಾವು ಸೇವೆನ ಚೆನ್ನಾಗಿ ಮಾಡೋದು ಹೇಗೆ ಅಂತ ಕಲಿತುಕೊಳ್ತೀವಿ. ಅಷ್ಟೇ ಅಲ್ಲ, ನಮ್ಮ ಸಂಘಟನೆ ಕೂಡ ಪತ್ರಿಕೆಗಳು ಮತ್ತು ವಿಡಿಯೋಗಳಿರುವ ಬೋಧನಾ ಸಲಕರಣೆಗಳನ್ನ ನಮಗೆ ಕೊಟ್ಟಿದೆ. ಆದರೆ ‘ಈ ಬೋಧನಾ ಸಲಕರಣೆಗಳನ್ನ ಚೆನ್ನಾಗಿ ಉಪಯೋಗಿಸೋಕೆ ನಾನು ಕಲಿತಿದ್ದೀನಾ?’ ಅಂತ ನಮ್ಮನ್ನೇ ಕೇಳಿಕೊಳ್ಳಬೇಕು.
19. ಯೆಹೋವ ಕೊಡೋ ವಿವೇಕದ ಬಗ್ಗೆ ನಿಮಗೇನು ಅನಿಸುತ್ತೆ? (ಜ್ಞಾನೋಕ್ತಿ 3:13-18)
19 ಜ್ಞಾನೋಕ್ತಿ 3:13-18 ಓದಿ. ಬೈಬಲ್ ಪೂರ್ತಿ ಯೆಹೋವನ ಬುದ್ಧಿಮಾತುಗಳೇ ಇದೆ. ಅದರಲ್ಲೂ ಜ್ಞಾನೋಕ್ತಿ ಪುಸ್ತಕದಲ್ಲಿ ಈಗಿನ ಕಾಲಕ್ಕೂ ಪ್ರಯೋಜನ ಆಗುವಂಥ ಕೆಲವು ಬುದ್ಧಿಮಾತುಗಳನ್ನ ಈ ಲೇಖನದಲ್ಲಿ ನೋಡಿದ್ವಿ. ನಮ್ಮ ದಾರಿಗೆ ದೀಪದ ತರ ಇರೋ ಈ ವಿವೇಕದ ಮಾತುಗಳನ್ನ ಯೆಹೋವ ದೇವರಲ್ಲದೆ ಬೇರೆ ಯಾರು ತಾನೇ ನಮಗೆ ಹೇಳಿಕೊಡೋಕೆ ಸಾಧ್ಯ ಹೇಳಿ? ಹಾಗಾಗಿ ದೇವರ ವಿವೇಕದ ಮಾತುಗಳನ್ನ ನಾವು ಯಾವಾಗ್ಲೂ ಪಾಲಿಸ್ತಾ ಇರೋಣ. ಹಾಗೆ ಮಾಡಿದಾಗ ಜನ ನಮ್ಮನ್ನ ಕೀಳಾಗಿ ನೋಡಬಹುದು. ಆದ್ರೆ ದೇವರ ‘ವಿವೇಕನ ಗಟ್ಟಿಯಾಗಿ ಹಿಡ್ಕೊಳ್ಳುವವರು ಸಂತೋಷವಾಗಿ ಇರ್ತಾರೆ’ ಅಂತ ನಮಗೆ ಚೆನ್ನಾಗಿ ಗೊತ್ತು.
ಗೀತೆ 52 ನಿನ್ನ ಹೃದಯವನ್ನು ಕಾಪಾಡಿಕೊ
a ಯೆಹೋವ ಕೊಡೋ ವಿವೇಕ ಈ ಲೋಕ ಕೊಡೋ ವಿವೇಕಕ್ಕಿಂತ ಶ್ರೇಷ್ಠ. ನಿಜವಾದ ವಿವೇಕ ಬೀದಿಗಳಲ್ಲಿ ಕೂಗಿ ಹೇಳುತ್ತೆ ಅಂತ ಜ್ಞಾನೋಕ್ತಿ ಪುಸ್ತಕದಲ್ಲಿ ಅಲಂಕಾರಿಕವಾಗಿ ಹೇಳಿದೆ. ಆದ್ರೆ ಕೆಲವರು ಈ ವಿವೇಕದ ಕೂಗನ್ನ ಕೇಳಿಸಿಕೊಳ್ಳೋದೇ ಇಲ್ಲ. ನಾವು ಅದನ್ನ ಕೇಳಿಸಿಕೊಳ್ಳೋಕೆ ಏನು ಮಾಡಬೇಕು ಮತ್ತು ಅದನ್ನ ಕೇಳಿಸಿಕೊಳ್ಳೋದ್ರಿಂದ ಏನು ಪ್ರಯೋಜನ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.