ವಾಚಕರಿಂದ ಪ್ರಶ್ನೆಗಳು
ಯೆಹೆಜ್ಕೇಲ ಪುಸ್ತಕದಲ್ಲಿ ತಿಳಿಸಲಾಗಿರುವ ಮಾಗೋಗಿನ ಗೋಗನು ಯಾರು?
ಸ್ವರ್ಗದಿಂದ ದೊಬ್ಬಲಾದ ಪಿಶಾಚನಾದ ಸೈತಾನನೇ ಮಾಗೋಗಿನ ಗೋಗನೆಂದು ಅನೇಕ ವರ್ಷಗಳಿಂದ ನಮ್ಮ ಪ್ರಕಾಶನಗಳು ವಿವರಿಸಿವೆ. ಲೋಕದೆಲ್ಲೆಡೆ ದೇವಜನರ ಮೇಲೆ ಆಕ್ರಮಣ ಮಾಡುತ್ತಿರುವ ನಾಯಕನು ಸೈತಾನ ಎಂದು ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾಗಿದೆ. ಈ ನಿಜತ್ವವನ್ನು ಆಧರಿಸಿ ಆ ವಿವರಣೆಯನ್ನು ಕೊಡಲಾಗುತ್ತಿತ್ತು. (ಪ್ರಕ. 12:1-17) ಆದ್ದರಿಂದ ಮಾಗೋಗಿನ ಗೋಗನು ಸೈತಾನನಿಗಿದ್ದ ಇನ್ನೊಂದು ಪ್ರವಾದನಾತ್ಮಕ ಹೆಸರು ಎಂದು ಭಾವಿಸಲಾಗುತ್ತಿತ್ತು.
ಆದರೆ ಈ ವಿವರಣೆ ಕೆಲವು ಪ್ರಾಮುಖ್ಯ ಪ್ರಶ್ನೆಗಳನ್ನು ಎಬ್ಬಿಸಿತು. ಯಾಕೆ? ಇದನ್ನು ಪರಿಗಣಿಸಿ: ಗೋಗನನ್ನು ಸೋಲಿಸುವ ಸಮಯದ ಬಗ್ಗೆ ತಿಳಿಸುತ್ತಾ ಯೆಹೋವನು ಅವನ ಬಗ್ಗೆ ಹೀಗನ್ನುತ್ತಾನೆ: “ನಾನು ನಿಮ್ಮನ್ನು ಮಾಂಸತಿನ್ನುವ ಬಗೆಬಗೆಯ ಹಕ್ಕಿಗಳಿಗೂ ಭೂಜಂತುಗಳಿಗೂ ಆಹಾರಮಾಡುವೆನು.” (ಯೆಹೆ. 39:4) ಯೆಹೋವನು ನಂತರ ಹೇಳಿದ್ದು: “ಆ ದಿನದಲ್ಲಿ ನಾನು ಇಸ್ರಾಯೇಲಿನೊಳಗೆ . . . ಗೋಗನಿಗೆ ಹೂಳುವ ಸ್ಥಳವನ್ನಾಗಿ ಏರ್ಪಡಿಸುವೆನು . . . ಅಲ್ಲೇ ಗೋಗನನ್ನೂ ಅವನ ಸಮೂಹವೆಲ್ಲವನ್ನೂ ಹೂಣಿಡುವರು.” (ಯೆಹೆ. 39:11) ಒಬ್ಬ ಆತ್ಮಜೀವಿಯನ್ನು ‘ಹಕ್ಕಿಗಳು ಮತ್ತು ಭೂಜಂತುಗಳು’ ತಿನ್ನುವುದಾದರೂ ಹೇಗೆ? ಸೈತಾನನನ್ನು ಭೂಮಿಯಲ್ಲಿ ‘ಹೂಣಿಡುವುದು’ ಹೇಗೆ? ಅವನನ್ನು 1,000 ವರ್ಷಗಳ ವರೆಗೆ ಅಗಾಧ ಸ್ಥಳಕ್ಕೆ ದೊಬ್ಬಲಾಗುವುದು ಎಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದಲ್ಲವಾ? ಹಾಗಾಗಿ ಸೈತಾನನನ್ನು ತಿನ್ನಲಿಕ್ಕಾಗಲಿ ಹೂಣಿಡಲಿಕ್ಕಾಗಲಿ ಆಗುವುದಿಲ್ಲ.—ಪ್ರಕ. 20:1, 2.
ಸೈತಾನನನ್ನು 1,000 ವರ್ಷಗಳ ಕೊನೆಯಲ್ಲಿ ಅಗಾಧ ಸ್ಥಳದಿಂದ ಬಿಡುಗಡೆ ಮಾಡಲಾಗುವುದು. ಆಗ “ಅವನು ಹೊರಗೆ ಬಂದು ಭೂಮಿಯ ನಾಲ್ಕು ಮೂಲೆಗಳಲ್ಲಿರುವ ಗೋಗ್ ಮತ್ತು ಮಾಗೋಗ್ ಎಂಬ ಜನಾಂಗಗಳನ್ನು ದಾರಿತಪ್ಪಿಸಲು, ಅವರನ್ನು ಯುದ್ಧಕ್ಕಾಗಿ ಒಟ್ಟುಗೂಡಿಸಲು ಹೋಗುವನು” ಎಂದು ಬೈಬಲ್ ಹೇಳುತ್ತದೆ. (ಪ್ರಕ. 20:8) ಸೈತಾನನೇ ಗೋಗನಾಗಿರುವಲ್ಲಿ ಅವನು ಗೋಗನನ್ನು ದಾರಿತಪ್ಪಿಸುವುದು ಹೇಗೆ? ಆದ್ದರಿಂದ ಯೆಹೆಜ್ಕೇಲನ ಪ್ರವಾದನೆಯಲ್ಲಿ ಮತ್ತು ಪ್ರಕಟನೆ ಪುಸ್ತಕದಲ್ಲಿ ತಿಳಿಸಲಾಗಿರುವ ‘ಗೋಗನು’ ಸೈತಾನನಲ್ಲ ಎಂದು ಗೊತ್ತಾಗುತ್ತದೆ.
ಹಾಗಾದರೆ ಮಾಗೋಗಿನ ಗೋಗನು ಯಾರು? ಈ ಪ್ರಶ್ನೆಗೆ ಉತ್ತರ ತಿಳಿಯಲು ದೇವಜನರ ಮೇಲೆ ಆಕ್ರಮಣ ಮಾಡುವವರು ಯಾರು ಎಂದು ಬೈಬಲಿನಿಂದ ಕಂಡುಹಿಡಿಯಬೇಕು. ಬೈಬಲಿನಲ್ಲಿ ಮಾಗೋಗಿನ ಗೋಗನ ಆಕ್ರಮಣದ ಬಗ್ಗೆ ಮಾತ್ರವಲ್ಲ ‘ಉತ್ತರರಾಜ’ ಮತ್ತು ‘ಭೂರಾಜರ’ ಆಕ್ರಮಣದ ಕುರಿತೂ ಹೇಳಲಾಗಿದೆ. (ಯೆಹೆ. 38:2, 10-13; ದಾನಿ. 11:40, 44, 45; ಪ್ರಕ. 17:14; 19:19) ಇವೆಲ್ಲಾ ಬೇರೆ ಬೇರೆ ಆಕ್ರಮಣಗಳನ್ನು ಸೂಚಿಸುತ್ತದಾ? ಇಲ್ಲ. ಬೇರೆ ಬೇರೆ ಹೆಸರಿನ ಒಂದೇ ಆಕ್ರಮಣಕ್ಕೆ ಬೈಬಲ್ ಸೂಚಿಸುತ್ತಿರುವುದರಲ್ಲಿ ಸಂಶಯವಿಲ್ಲ. ಇದನ್ನು ಹೇಗೆ ಹೇಳಬಹುದು? ಈ ಕೊನೆಯ ದಾಳಿಯಲ್ಲಿ ಭೂಮಿಯ ಎಲ್ಲಾ ರಾಜ್ಯಗಳೂ ಒಂದುಗೂಡುತ್ತವೆ. ಆಗ ಅರ್ಮಗೆದೋನ್ ಯುದ್ಧ ಆರಂಭವಾಗುತ್ತದೆ ಎಂದು ಬೈಬಲ್ ವಚನಗಳು ತಿಳಿಸುತ್ತವೆ.—ಪ್ರಕ. 16:14, 16.
ದೇವಜನರ ಮೇಲೆ ನಡೆಯುವ ಕೊನೆಯ ಆಕ್ರಮಣದ ಕುರಿತ ಈ ಎಲ್ಲಾ ವಚನಗಳನ್ನು ಹೋಲಿಸುವಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ಮಾಗೋಗಿನ ಗೋಗ ಎಂಬ ಹೆಸರು ಸೈತಾನನನ್ನು ಅಲ್ಲ, ಜನಾಂಗಗಳ ಗುಂಪನ್ನು ಸೂಚಿಸುತ್ತದೆ. ಈ ಗುಂಪನ್ನು ಸಾಂಕೇತಿಕ ‘ಉತ್ತರರಾಜ’ ಮುನ್ನಡೆಸುವನೇ? ಅದನ್ನು ಖಂಡಿತವಾಗಿ ಹೇಳಲು ಆಗುವುದಿಲ್ಲ. ಆದರೆ ಇದು ಯೆಹೋವನು ಗೋಗನ ಬಗ್ಗೆ ಹೇಳಿರುವ ವಿಷಯಕ್ಕೆ ಹೊಂದಿಕೆಯಲ್ಲಿದೆ. ಆತನು ಹೇಳಿದ್ದು: ‘ನೀನು ನಿನ್ನ ಸ್ಥಳವನ್ನು ಬಿಟ್ಟು ಅಶ್ವಬಲದ ಮಹಾಸೈನ್ಯವಾಗಿ ಗುಂಪುಕೂಡಿದ ಬಹುಜನಾಂಗಗಳೊಡನೆ ಉತ್ತರದಿಕ್ಕಿನ ಕಟ್ಟಕಡೆಯಿಂದ ಬರುವಿ.’—ಯೆಹೆ. 38:6, 15.
ಯೆಹೆಜ್ಕೇಲನ ಸಮಯದಲ್ಲಿ ಜೀವಿಸಿದ ದಾನಿಯೇಲನು ಸಹ ಉತ್ತರರಾಜನ ಬಗ್ಗೆ ಹೀಗನ್ನುತ್ತಾನೆ: “ಹೀಗಿರಲು ಮೂಡಲಿಂದಲೂ ಬಡಗಲಿಂದಲೂ ಬರುವ ಸುದ್ದಿಯು ಅವನನ್ನು ಬಾಧಿಸುವದು; ಅವನು ಅತಿರೋಷಗೊಂಡು ಬಹು ಜನರನ್ನು ಧ್ವಂಸಿಸಿ ನಿರ್ನಾಮ ಮಾಡುವದಕ್ಕೆ ಹೊರಡುವನು. ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು; ಆಹಾ, ಅವನು ಕೊನೆಗಾಣುವನು, ಯಾರೂ ಅವನಿಗೆ ಸಹಾಯಮಾಡರು.” (ದಾನಿ. 11:44, 45) ಗೋಗನ ಚಟುವಟಿಕೆಯ ಬಗ್ಗೆ ಯೆಹೆಜ್ಕೇಲ ಪುಸ್ತಕ ಹೇಳುವ ವಿಷಯಕ್ಕೆ ಇದು ಸ್ಪಷ್ಟವಾಗಿ ಹೋಲುತ್ತದೆ.—ಯೆಹೆ. 38:8-12, 16.
ಈ ಕೊನೆಯ ಆಕ್ರಮಣದ ಫಲಿತಾಂಶದಿಂದ ಮುಂದೇನಾಗುವುದು? ದಾನಿಯೇಲನು ಉತ್ತರಕೊಡುತ್ತಾನೆ: “ನಿನ್ನ ಜನರ ಪಕ್ಷವನ್ನು ಹಿಡಿದಿರುವ [1914ರಿಂದ] ಮಹಾ ಪಾಲಕನಾದ ಮೀಕಾಯೇಲನು [ಯೇಸು ಕ್ರಿಸ್ತ] ಆ ಕಾಲದಲ್ಲಿ [ಅರ್ಮಗೆದೋನಿನ ಸಮಯದಲ್ಲಿ] ಏಳುವನು; ಮೊಟ್ಟಮೊದಲು ಜನಾಂಗವು ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದಂಥ ಸಂಕಟವು [ಮಹಾ ಸಂಕಟ] ಸಂಭವಿಸುವದು; ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ ಅವರೆಲ್ಲರೂ ರಕ್ಷಿಸಲ್ಪಡುವರು.” (ದಾನಿ. 12:1) ದೇವರ ಪ್ರತಿನಿಧಿಯಾದ ಯೇಸು ತೆಗೆದುಕೊಳ್ಳುವ ಈ ಕ್ರಮದ ಬಗ್ಗೆ ಪ್ರಕಟನೆ 19:11-21ರಲ್ಲಿ ವಿವರಿಸಲಾಗಿದೆ.
ಆದರೆ ಪ್ರಕಟನೆ 20:8ರಲ್ಲಿ ತಿಳಿಸಲಾಗಿರುವ “ಗೋಗ್ ಮತ್ತು ಮಾಗೋಗ್” ಯಾರು? ಸಾವಿರ ವರ್ಷದ ಕೊನೆಯಲ್ಲಿರುವ ಅಂತಿಮ ಪರೀಕ್ಷೆಯಲ್ಲಿ ಯೆಹೋವನ ವಿರುದ್ಧ ದಂಗೆಯೇಳುವವರು. ಇವರು ಮಹಾ ಸಂಕಟದ ಕೊನೆಯಲ್ಲಿ ದೇವಜನರ ಮೇಲೆ ಆಕ್ರಮಣ ಮಾಡುವ ಜನಾಂಗಗಳಾಗಿರುವ ಮಾಗೋಗಿನ ಗೋಗನ ಕೊಲೆಗಡುಕ ಮನೋಭಾವವನ್ನು ತೋರಿಸುವರು. ಈ ಎರಡು ಗುಂಪಿನವರಿಗೆ ಒಂದೇ ಶಿಕ್ಷೆ. ಅದು ಶಾಶ್ವತ ಮರಣ. (ಪ್ರಕ. 19:20, 21; 20:9) ಆದ್ದರಿಂದ 1,000 ವರ್ಷಗಳ ಕೊನೆಯಲ್ಲಿ ದಂಗೆ ಏಳುವ ಎಲ್ಲರನ್ನು “ಗೋಗ್ ಮತ್ತು ಮಾಗೋಗ್” ಎಂದು ಕರೆಯುವುದು ಸೂಕ್ತ.
ಬೈಬಲಿನ ಉತ್ಸುಕ ವಿದ್ಯಾರ್ಥಿಗಳಾದ ನಾವು ಭವಿಷ್ಯದಲ್ಲಿ ‘ಉತ್ತರರಾಜ’ ಯಾರಾಗುವರು ಎಂದು ತಿಳಿಯಲು ಕಾತುರದಿಂದ ಕಾಯುತ್ತಿದ್ದೇವೆ. ಆದರೆ ಜನಾಂಗಗಳ ಗುಂಪನ್ನು ಯಾರೇ ಮುನ್ನಡೆಸಲಿ ಈ ಎರಡು ವಿಷಯ ಮಾತ್ರ ನಿಜ: (1) ಮಾಗೋಗಿನ ಗೋಗನನ್ನು ಮತ್ತು ಅವನ ಸೈನ್ಯವನ್ನು ಸೋಲಿಸಿ ನಾಶಮಾಡಲಾಗುವುದು. (2) ಈಗ ಸ್ವರ್ಗದಲ್ಲಿ ಆಳುತ್ತಿರುವ ರಾಜನಾದ ಯೇಸು ಕ್ರಿಸ್ತನು ದೇವಜನರನ್ನು ರಕ್ಷಿಸಿ ಶಾಂತಿ ತುಂಬಿರುವ ಮತ್ತು ನಿಜ ಭದ್ರತೆ ಇರುವ ನೂತನ ಲೋಕಕ್ಕೆ ನಡೆಸುವನು.—ಪ್ರಕ. 7:14-17.