ಗರ್ಭಪಾತದ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ಕೊಡೋ ಉತ್ತರ
ಬೈಬಲ್ನಲ್ಲಿ ಗರ್ಭಪಾತ ಅನ್ನೋ ಶಬ್ದ ಇಲ್ಲ. ಆದ್ರೆ ಬೈಬಲಿನಲ್ಲಿರೋ ವಚನಗಳಿಂದ ಮನುಷ್ಯರ ಜೀವವನ್ನ ಮತ್ತು ಇನ್ನೂ ಹುಟ್ಟದೆ ಗರ್ಭದಲ್ಲಿರೋ ಮಗುವನ್ನ ದೇವರು ಹೇಗೆ ನೋಡ್ತಾನೆ ಅಂತ ತಿಳಿಬಹುದು.
ಜೀವ ದೇವರು ಕೊಟ್ಟ ಉಡುಗೊರೆಯಾಗಿದೆ. (ಆದಿಕಾಂಡ 9:6; ಕೀರ್ತನೆ 36:9) ಗರ್ಭದಲ್ಲಿರೋ ಮಗುವಿನ ಜೀವವನ್ನು ಸೇರಿಸಿ ಎಲ್ಲರ ಜೀವವನ್ನ ದೇವರು ಅಮೂಲ್ಯವಾಗಿ ನೋಡ್ತಾನೆ. ಹಾಗಾಗಿ ಯಾರಾದರು ಬೇಕುಬೇಕಂತ ಗರ್ಭದಲ್ಲಿರೋ ಮಗುವನ್ನ ಕೊಂದ್ರೆ ಅದು ಕೊಲೆ ಆಗಿದೆ.
ದೇವರು ಇಸ್ರಾಯೇಲ್ಯರಿಗೆ ಈ ನಿಯಮ ಕೊಟ್ಟಿದ್ದನು: “ಮನುಷ್ಯರು ಜಗಳವಾಡುತ್ತಿರಲಾಗಿ ಗರ್ಭಿಣಿಯಾದ ಹೆಂಗಸಿಗೆ ಏಟು ತಗಲಿದದರಿಂದ ಅವಳಿಗೆ ಗರ್ಭಸ್ರಾವವೇ ಹೊರತಾಗಿ ಬೇರೆ ಯಾವ ಹಾನಿಯೂ ಆಗದೆ ಹೋದರೆ ಹೆಂಗಸಿನ ಗಂಡನು ನ್ಯಾಯಧಿಪತಿಗಳ ಸಮ್ಮತಿಯಿಂದ ಎಷ್ಟು ಹಣವನ್ನು ಗೊತ್ತುಮಾಡುತ್ತಾನೋ ಹೊಡೆದವನು ಅಷ್ಟನ್ನು ಕೊಡಬೇಕು. ಬೇರೆ ಹಾನಿಯಾದ ಪಕ್ಷಕ್ಕೆ ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು.”—ವಿಮೋಚನಕಾಂಡ 21:22, 23.a
ಮನುಷ್ಯನ ಜೀವನ ಯಾವಾಗ ಆರಂಭವಾಗುತ್ತೆ?
ತಾಯಿಯ ಗರ್ಭದಲ್ಲಿ ಮಗು ಭ್ರೂಣವಾಗಿ ರೂಪಗೊಳ್ಳುವಾಗಲೇ ದೇವರ ದೃಷ್ಟಿಯಲ್ಲಿ ಅದರ ಜೀವನ ಆರಂಭವಾಗುತ್ತೆ. ಇನ್ನೂ ಹುಟ್ಟದಿರೋ ಮಗುವನ್ನು ಸಹ ದೇವರು ಒಬ್ಬ ವ್ಯಕ್ತಿ ತರ ಪರಿಗಣಿಸುತ್ತಾನೆ ಅಂತ ಅನೇಕ ಬೈಬಲ್ ವಚನಗಳಲ್ಲಿ ಇದೆ. ಹೊಟ್ಟೆಯಲ್ಲಿರೋ ಮಗು ಮತ್ತು ಹುಟ್ಟಿರುವ ಮಗುವನ್ನು ದೇವರು ಸಮಾನವಾಗಿ ನೋಡ್ತಾನೆ ಅಂತ ತೋರಿಸೋ ಕೆಲವು ಉದಾಹರಣೆಗಳನ್ನ ನೋಡೋಣ.
ಪವಿತ್ರಾತ್ಮ ಪ್ರೇರಿತನಾಗಿ ರಾಜ ದಾವೀದ ದೇವರಿಗೆ ಹೀಗೆ ಹೇಳಿದ: “ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು.” (ಕೀರ್ತನೆ 139:16) ದಾವೀದ ತಾಯಿಯ ಗರ್ಭದಲ್ಲಿ ಭ್ರೂಣವಾಗಿದ್ರೂ ದೇವರು ಅವನನ್ನ ಒಬ್ಬ ವ್ಯಕ್ತಿಯಾಗಿ ನೋಡಿದ.
ಇದಲ್ಲದೆ ಪ್ರವಾದಿ ಯೆರೆಮೀಯ ಹುಟ್ಟುವ ಮೊದಲೇ ದೇವರು ಅವನಿಗಾಗಿ ಒಂದು ವಿಶೇಷ ಉದ್ದೇಶ ಇಟ್ಟಿದ್ದನು. ದೇವರು ಅವನಿಗೆ ಹೀಗಂದ: “ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವದಕ್ಕೆ ಮುಂಚೆ ನಿನ್ನನ್ನು ತಿಳಿದಿದ್ದೆನು; ನೀನು ಉದರದಿಂದ ಬರುವದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು; ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇಮಿಸಿದ್ದೇನೆ.”—ಯೆರೆಮೀಯ 1:5.
ಬೈಬಲ್ ಬರಹಗಾರ ಮತ್ತು ವೈದ್ಯನಾಗಿದ್ದ ಲೂಕ ಗರ್ಭದಲ್ಲಿರುವ ಮಗುವಿಗೂ ಇನ್ನು ಹುಟ್ಟದಿರುವ ಮಗುವಿಗೂ ಒಂದೇ ಗ್ರೀಕ್ ಪದ ಬಳಸಿದ್ದಾನೆ.—ಲೂಕ 1:41; 2:12, 16.
ಗರ್ಭಪಾತ ಮಾಡ್ಕೊಂಡವರನ್ನ ದೇವರು ಕ್ಷಮಿಸ್ತಾನಾ?
ಗರ್ಭಪಾತ ಮಾಡ್ಕೊಂಡವರು ದೇವರಿಂದ ಕ್ಷಮೆ ಪಡ್ಕೊಳ್ಳಬಹುದು. ದೇವರು ಜೀವವನ್ನ ಹೇಗೆ ನೋಡ್ತಾನೆ ಅಂತ ತಿಳಿದು ಅದನ್ನ ಸ್ವೀಕರಿಸಿದ್ರೆ ಚುಚ್ಚುವಂತ ತಪ್ಪು ಭಾವನೆಯಿಂದ ಹೊರ ಬರಬಹುದು. “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು . . . ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ.”b (ಕೀರ್ತನೆ 103:8-12) ಹೃದಯದಿಂದ ಪಶ್ಚಾತ್ತಾಪ ಪಡೋರನ್ನ ದೇವರು ಕ್ಷಮಿಸುತ್ತಾನೆ. ಅವರು ಗರ್ಭಪಾತ ಮಾಡಿದ್ರು ಸಹ ಕ್ಷಮಿಸುತ್ತಾನೆ.—ಕೀರ್ತನೆ 86:5.
ಮಗು ಅಥವಾ ತಾಯಿಯ ಜೀವ ಅಪಾಯದಲ್ಲಿದ್ದಾಗಲೂ ಗರ್ಭಪಾತ ಮಾಡ್ಕೊಳ್ಳೋದು ತಪ್ಪಾ?
ಬೈಬಲಲ್ಲಿ ಹೇಳೋ ಹಾಗೆ ಗರ್ಭದಲ್ಲಿರುವ ಮಗುವನ್ನು ಸಹ ದೇವರು ಅಮೂಲ್ಯವಾಗಿ ಎಣಿಸ್ತಾನೆ. ಹಾಗಾಗಿ ತಾಯಿ ಅಥವಾ ಮಗುವಿನ ಜೀವ ಅಪಾಯದಲ್ಲಿದ್ದಾಗಲೂ ಗರ್ಭಪಾತ ಮಾಡೋದು ಸರಿಯಲ್ಲ.
ಆದ್ರೆ ತಾಯಿ ಅಥವಾ ಮಗು ಇಬ್ಬರಲ್ಲಿ ಒಬ್ರನ್ನ ಮಾತ್ರ ಉಳಿಸೋ ಸಂದರ್ಭ ಬಂದ್ರೆ ಏನ್ ಮಾಡೋದು? ಆಗ ಯಾರನ್ನ ಉಳಿಸಬೇಕಂತ ಕುಟುಂಬದವರೇ ನಿರ್ಣಯ ಮಾಡಬೇಕು.
a ಇಲ್ಲಿ ತಾಯಿಯ ಪ್ರಾಣಾಪಾಯದ ಕುರಿತು ಹೇಳುತ್ತೆ ಹೊರತು ಮಗುವಿನದಲ್ಲ ಅನ್ನುವಂತೆ ಕೆಲವು ಭಾಷಾಂತರ ತೋರಿಸುತ್ತೆ. ಆದ್ರೆ ಮೂಲ ಹೀಬ್ರು ಭಾಷೆಯಲ್ಲಿ ತಾಯಿ ಮತ್ತು ಮಗು ಇಬ್ಬರ ಜೀವದ ಬಗ್ಗೆನೂ ತಿಳಿಸಲಾಗಿದೆ.
b ಬೈಬಲ್ ಪ್ರಕಾರ ದೇವರ ಹೆಸರು ಯೆಹೋವ ಆಗಿದೆ.—ಕೀರ್ತನೆ 83:18.