ಮರಣಾನಂತರದ ಜೀವಿತ—ಬೈಬಲ್ ಹೇಳುವುದೇನು?
“ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದಿ.”—ಆದಿಕಾಂಡ 3:19.
1, 2. (ಎ) ಮರಣಾನಂತರದ ಜೀವಿತದ ಕುರಿತು ಯಾವ ವ್ಯತ್ಯಾಸವಾದ ವಿಚಾರಗಳಿವೆ? (ಬಿ) ಮನುಷ್ಯನು ನಿಜವಾಗಿಯೂ ಏನಾಗಿದ್ದಾನೆಂದು ಬೈಬಲ್ ಕಲಿಸುವ ವಿಷಯವನ್ನು ತಿಳಿದುಕೊಳ್ಳುವುದಕ್ಕೋಸ್ಕರ ನಾವು ಯಾವುದನ್ನು ಪರಿಶೀಲಿಸಬೇಕಾಗಿದೆ?
“ದೇವರು ತಾನು ಸೃಷ್ಟಿಸಿದ ಪ್ರತಿಯೊಂದು ಸೃಷ್ಟಿಯನ್ನು ಪ್ರೀತಿಸುತ್ತಾನೆಂಬ ನಂಬಿಕೆಯು, ಅನಂತ ಯಾತನೆಯ ತತ್ವಕ್ಕೆ ಅಸಂಗತವಾಗಿದೆ. . . . ಆತ್ಮಕ್ಕೆ ತನ್ನನ್ನು ತಿದ್ದಿಕೊಳ್ಳುವ ಅವಕಾಶವನ್ನೂ ಕೊಡದೇ, ಕೆಲವು ವರ್ಷಗಳ ಪಾಪಗಳಿಗಾಗಿ ಅದಕ್ಕೆ ಅನಂತ ದಂಡನೆಯನ್ನು ವಿಧಿಸುವುದು, ಅನ್ಯಾಯವೇ ಸರಿ,” ಎಂದು ಹಿಂದೂ ತತ್ವಜ್ಞಾನಿ ನಿಕಿಲಾನಂದರು ಹೇಳಿದರು.
2 ನಿಕಿಲಾನಂದರಂತೆ ಇಂದು ಹೆಚ್ಚಿನವರಿಗೆ, ಅನಂತ ಯಾತನೆಯ ಬೋಧನೆಯು ನುಂಗಲಾರದ ತುತ್ತಾಗಿದೆ. ಅದೇ ಸಮಯದಲ್ಲಿ, ನಿರ್ವಾಣ ಮತ್ತು ಸೃಷ್ಟಿಯೊಂದಿಗೆ ಐಕ್ಯವಾಗುವಂತಹ ಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಇನ್ನು ಕೆಲವರಿಗೆ ಕಷ್ಟಕರವಾಗಿದೆ. ತಮ್ಮ ವಿಶ್ವಾಸಗಳು ಬೈಬಲಿನ ಮೇಲೆ ಆಧರಿಸಿವೆ ಎಂದು ಹೇಳಿಕೊಳ್ಳುವವರಲ್ಲಿಯೂ, ಮನುಷ್ಯನು ಏನಾಗಿದ್ದಾನೆ ಮತ್ತು ಅವನು ಸಾಯುವಾಗ ಅವನಿಗೆ ಏನಾಗುತ್ತದೆ ಎಂಬುದರ ಕುರಿತು ವ್ಯತ್ಯಾಸವಾದ ವಿಚಾರಗಳಿವೆ. ಆದರೆ, ಮನುಷ್ಯನು ಹೇಗೆ ಸೃಷ್ಟಿಸಲ್ಪಟ್ಟನೆಂಬ ವಿಷಯದಲ್ಲಿ ಬೈಬಲ್ ನಿಜವಾಗಿಯೂ ಏನನ್ನು ಕಲಿಸುತ್ತದೆ? ಅದನ್ನು ಕಂಡುಕೊಳ್ಳಲು, “ಪ್ರಾಣ,” “ಪ್ರಾಣಿ,” ಇಲ್ಲವೆ “ಜೀವ” ಎಂಬುದಾಗಿ ಬೈಬಲಿನಲ್ಲಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಮತ್ತು ಗ್ರೀಕ್ ಶಬ್ದಗಳ ಅರ್ಥಗಳನ್ನು ನಾವು ಪರಿಶೀಲಿಸಬೇಕಾಗಿದೆ.
ಬೈಬಲಿನ ಪರಿಭಾಷೆಯಲ್ಲಿ ಪ್ರಾಣ, ಪ್ರಾಣಿ, ಇಲ್ಲವೆ ಜೀವ
3. (ಎ) ಹೀಬ್ರು ಶಾಸ್ತ್ರಗಳಲ್ಲಿ ಯಾವ ಪದವನ್ನು “ಪ್ರಾಣ,” “ಪ್ರಾಣಿ” ಇಲ್ಲವೆ “ಜೀವ” ಎಂಬುದಾಗಿ ಭಾಷಾಂತರಿಸಲಾಗುತ್ತದೆ, ಮತ್ತು ಅದರ ಮೂಲ ಅರ್ಥವು ಏನಾಗಿದೆ? (ಬಿ) “ಪ್ರಾಣಿ” ಎಂಬ ಪದವು ಒಬ್ಬ ಸಂಪೂರ್ಣ ವ್ಯಕ್ತಿಯನ್ನು ಸೂಚಿಸಬಲ್ಲದೆಂದು ಆದಿಕಾಂಡ 2:7 ಹೇಗೆ ದೃಢೀಕರಿಸುತ್ತದೆ?
3 “ಪ್ರಾಣಿ,” “ಪ್ರಾಣ,” ಇಲ್ಲವೆ “ಜೀವ” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು ನೆಫೆಷ್ ಆಗಿದ್ದು, ಅದು ಹೀಬ್ರು ಶಾಸ್ತ್ರಗಳಲ್ಲಿ 754 ಬಾರಿ ಕಾಣಿಸಿಕೊಳ್ಳುತ್ತದೆ. ಹಾಗಾದರೆ ನೆಫೆಷ್ ಎಂಬ ಪದದ ಅರ್ಥವೇನಾಗಿದೆ? ಬೈಬಲ್ ಮತ್ತು ಧರ್ಮದ ಶಬ್ದಕೋಶ (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ, ಅದು “ಸಾಮಾನ್ಯವಾಗಿ ಇಡೀ ಜೀವಿಯನ್ನು, ಇಲ್ಲವೆ ಸಂಪೂರ್ಣ ವ್ಯಕ್ತಿಯನ್ನು ಸೂಚಿಸುತ್ತದೆ.” ಬೈಬಲಿನಲ್ಲಿ ಮನುಷ್ಯನ ಸರಳವಾದ ಸೃಷ್ಟಿಯ ಕುರಿತು ನೀಡಲ್ಪಟ್ಟಿರುವ ವಿವರಣೆಯಿಂದ ಇದು ದೃಢೀಕರಿಸಲ್ಪಟ್ಟಿದೆ. ಬೈಬಲಿನ ಮೊದಲನೇ ಪುಸ್ತಕದಲ್ಲಿ, ಅಂದರೆ ಆದಿಕಾಂಡ 2:7ರಲ್ಲಿ ಅದು ಹೇಳುವುದು: “ಯೆಹೋವದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಪ್ರಾಣಿಯಾದನು.” ಪ್ರಥಮ ಮನುಷ್ಯನು ಪ್ರಾಣಿ ‘ಆದನು’ ಎಂಬುದನ್ನು ಗಮನಿಸಿರಿ. ಹಾಗಾದರೆ, “ಪ್ರಾಣಿ” ಎಂಬ ಪದವು, ಇಲ್ಲಿ ಸಂಪೂರ್ಣ ವ್ಯಕ್ತಿಯನ್ನು ಸೂಚಿಸುತ್ತದೆ.
4. ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಯಾವ ಪದವು “ಪ್ರಾಣ” ಇಲ್ಲವೆ “ಜೀವ”ವೆಂದು ಭಾಷಾಂತರಿಸಲ್ಪಟ್ಟಿದೆ, ಮತ್ತು ಈ ಪದದ ಮೂಲಾರ್ಥವು ಏನಾಗಿದೆ?
4 ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಸೈಕೀ ಎನ್ನುವ ಪದವನ್ನು, “ಪ್ರಾಣ” ಇಲ್ಲವೆ “ಜೀವ”ವೆಂದು ಅನೇಕ ಬಾರಿ ಭಾಷಾಂತರಿಸಲ್ಪಟ್ಟಿದೆ. ನೆಫೆಷ್ ಎಂಬ ಪದದಂತೆಯೇ, ಇದು ಕೂಡ ಒಬ್ಬ ಸಂಪೂರ್ಣ ವ್ಯಕ್ತಿಯನ್ನು ಸೂಚಿಸುತ್ತದೆ. ಅದರ ಅರ್ಥವನ್ನು ತಿಳಿದುಕೊಳ್ಳಲು, ಈ ಮುಂದಿನ ವಚನಗಳನ್ನು ದಯವಿಟ್ಟು ಪರಿಗಣಿಸಿರಿ: “ಈಗ ನನ್ನ ಪ್ರಾಣವು ತತ್ತರಿಸುತ್ತದೆ.” (ಯೋಹಾನ 12:27) “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” (ಮತ್ತಾಯ 16:26) “ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ.” (ಲೂಕ 1:46) “ಮನುಷ್ಯಕುಮಾರನು . . . ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮತ್ತಾಯ 20:28) “ಸಬ್ಬತ್ ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? . . . ಪ್ರಾಣವನ್ನು ಉಳಿಸುವದೋ, ತೆಗೆಯುವದೋ?” (ಮಾರ್ಕ 3:4) ಹೀಗೆ, ನೆಫೆಷ್ ಎಂಬ ಪದದಂತೆ ಸೈಕೀ ಎಂಬ ಪದವು ಒಬ್ಬ ಸಂಪೂರ್ಣ ವ್ಯಕ್ತಿಯನ್ನು ಸೂಚಿಸುತ್ತದೆ ಎಂಬುದು ಸ್ಪಷ್ಟ. ವಿದ್ವಾಂಸ ನೈಜಲ್ ಟರ್ನರ್ ಅವರಿಗನುಸಾರ, ಈ ಪದವು “ಮಾನವ ಗುಣವೈಶಿಷ್ಟ್ಯಗಳಿರುವ ಜೀವಿಯನ್ನು, ವ್ಯಕ್ತಿಯನ್ನು, ದೇವರ ರೂಹ್ [ಸಕ್ರಿಯ ಶಕ್ತಿ] ಇರುವ ಭೌತಿಕ ಶರೀರವನ್ನು ಸೂಚಿಸುತ್ತದೆ. . . . ಇಡೀ ವ್ಯಕ್ತಿಯ ಮೇಲೆ ಒತ್ತು ನೀಡಲಾಗಿದೆ.”
5. ಪ್ರಾಣ, ಪ್ರಾಣಿ, ಮತ್ತು ಜೀವ ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಮತ್ತು ಗ್ರೀಕ್ ಪದಗಳನ್ನು ಬೇರೆ ಯಾವುದಕ್ಕೂ ಅನ್ವಯಿಸಸಾಧ್ಯವಿದೆ?
5 ಬೈಬಲಿನಲ್ಲಿ “ಪ್ರಾಣ,” “ಪ್ರಾಣಿ” ಇಲ್ಲವೆ “ಜೀವ” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಮತ್ತು ಗ್ರೀಕ್ ಪದಗಳು, ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಅನ್ವಯಿಸುತ್ತವೆ. ಉದಾಹರಣೆಗೆ, ಸಮುದ್ರ ಜೀವಿಗಳ ಸೃಷ್ಟಿಯನ್ನು ವರ್ಣಿಸುತ್ತಾ, ಆದಿಕಾಂಡ 1:20 ಹೇಳುವುದು: “ಗುಂಪುಗುಂಪಾಗಿ ಚಲಿಸುವ ಜಲಜಂತುಗಳು [ನೆಫೆಷ್ ಹೀಬ್ರು] ನೀರಿನಲ್ಲಿ ತುಂಬಿಕೊಳ್ಳಲಿ” ಎಂದು ದೇವರು ಆಜ್ಞಾಪಿಸಿದನು. ಮತ್ತು ದೇವರು “ಭೂಮಿಯಿಂದ ಜೀವ [ನೆಫೆಷ್ ಹೀಬ್ರು]ಜಂತುಗಳು ಉಂಟಾಗಲಿ; ಪಶುಕ್ರಿಮಿಗಳೂ ಕಾಡುಮೃಗಗಳೂ ತಮ್ಮತಮ್ಮ ಜಾತಿಗನುಸಾರವಾಗಿ ಹುಟ್ಟಲಿ” ಅಂದನು.—ಆದಿಕಾಂಡ 1:24.
6. “ಪ್ರಾಣಿ” ಎಂಬುದಾಗಿ ಅನೇಕ ವೇಳೆ ಭಾಷಾಂತರಿಸಲ್ಪಟ್ಟಿರುವ ಪದವನ್ನು ಬೈಬಲ್ ಹೇಗೆ ಬಳಸುತ್ತದೆ?
6 ಹೀಗೆ, ಬೈಬಲು ಮನುಷ್ಯನನ್ನು ಒಂದು ಪ್ರಾಣಿ ಎಂಬುದಾಗಿ ವರ್ಣಿಸುತ್ತದೆ, ಮತ್ತು ಮೂಲ ಭಾಷೆಯಲ್ಲಿ ಒಬ್ಬ ವ್ಯಕ್ತಿ ಇಲ್ಲವೆ ಒಂದು ಪ್ರಾಣಿಯನ್ನು ಸೂಚಿಸಲು ಅಥವಾ ಒಬ್ಬ ವ್ಯಕ್ತಿಯ ಇಲ್ಲವೆ ಒಂದು ಪ್ರಾಣಿಯ ಜೀವವನ್ನು ಸೂಚಿಸಲು ಅದೇ ಪದವನ್ನು ಉಪಯೋಗಿಸಲಾಗಿದೆ. (ಮೇಲಿನ ರೇಖಾಚೌಕವನ್ನು ನೋಡಿರಿ.) ಮನುಷ್ಯನು ಏನಾಗಿದ್ದಾನೆ ಎಂಬುದರ ಬಗ್ಗೆ ಬೈಬಲ್ ನೀಡುವ ವ್ಯಾಖ್ಯಾನವು, ಸರಳವೂ ಸಮಂಜಸವೂ ಆಗಿದ್ದು, ಮನುಷ್ಯರ ಜಟಿಲವಾದ ತತ್ವಜ್ಞಾನಗಳು ಮತ್ತು ಮೂಢನಂಬಿಕೆಗಳಿಂದ ಕೂಡಿರುವುದಿಲ್ಲ. ಹಾಗಾದರೆ, ಕೇಳಲ್ಪಡಬೇಕಾದ ತುರ್ತಿನ ಪ್ರಶ್ನೆಯು, ಬೈಬಲಿಗನುಸಾರ, ಮರಣದಲ್ಲಿ ಮನುಷ್ಯನಿಗೆ ಏನು ಸಂಭವಿಸುತ್ತದೆ? ಎಂಬುದೇ.
ಮೃತರು ಪ್ರಜ್ಞಾಹೀನರಾಗಿದ್ದಾರೆ
7, 8. (ಎ) ಮೃತರ ಸ್ಥಿತಿಯ ಕರಿತು ಶಾಸ್ತ್ರಗಳು ಏನನ್ನು ತಿಳಿಸುತ್ತವೆ? (ಬಿ) ಮರಣದ ನಂತರ ಒಬ್ಬ ವ್ಯಕ್ತಿಯ ಇಲ್ಲವೆ ಪ್ರಾಣಿಯ ಯಾವ ಭಾಗವಾದರೂ ಬದುಕಿ ಉಳಿಯುತ್ತದೆಂದು ಬೈಬಲ್ ಸೂಚಿಸುತ್ತದೊ?
7 ಮೃತರ ಸ್ಥಿತಿಯ ಕುರಿತು ಪ್ರಸಂಗಿ 9:5, 10 ಸ್ಪಷ್ಟವಾಗಿ ಹೀಗೆ ಹೇಳುತ್ತದೆ: “ಸತ್ತವರಿಗೆ ಯಾವ ಅರಿವೂ ಇರುವುದಿಲ್ಲ . . . ಸಮಾಧಿಯಲ್ಲಿ ಯಾವ ಚಟುವಟಿಕೆಯೂ, ಯೋಜನೆಯೂ, ಜ್ಞಾನವೂ ಇಲ್ಲವೆ ಬುದ್ಧಿಶಕ್ತಿಯೂ ಇರುವುದಿಲ್ಲ.” (ಮಾಫೆಟ್) ಆದುದರಿಂದ ಮರಣವು ಅಸ್ತಿತ್ವಹೀನ ಸ್ಥಿತಿಯಾಗಿದೆ. ವ್ಯಕ್ತಿಯೊಬ್ಬನು ಸಾಯುವಾಗ, “ಅವನು . . . ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು” ಎಂದು ಕೀರ್ತನೆಗಾರನು ಬರೆದನು. (ಕೀರ್ತನೆ 146:4) ಮೃತರು ಪ್ರಜ್ಞಾಹೀನರೂ ನಿಷ್ಕ್ರಿಯರೂ ಆಗಿದ್ದಾರೆ.
8 ಆದಾಮನಿಗೆ ಶಿಕ್ಷೆವಿಧಿಸುವಾಗ ದೇವರು ಹೇಳಿದ್ದು: “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದಿ.” (ಆದಿಕಾಂಡ 3:19) ದೇವರು ಆದಾಮನನ್ನು ಮಣ್ಣಿನಿಂದ ಸೃಷ್ಟಿಸಿ, ಅವನಿಗೆ ಜೀವವನ್ನು ಕೊಡುವ ಮೊದಲು, ಅವನು ಅಸ್ತಿತ್ವದಲ್ಲಿರಲಿಲ್ಲ. ಅವನ ದಂಡನೆಯು, ಮತ್ತೊಂದು ಲೋಕಕ್ಕೆ ವರ್ಗಾವಣೆಯಾಗಿರಲಿಲ್ಲ ಬದಲಿಗೆ ಮರಣವಾಗಿತ್ತು. ಜೀವಿಸುತ್ತಾ ಮುಂದುವರಿಯುವ ಅಮರವಾದ ಭಾಗವು ಅವನಲ್ಲಿತ್ತೊ? ವ್ಯಕ್ತಿಯೊಬ್ಬನು ಸಾಯುವಾಗ ಅವನು ಸಂಪೂರ್ಣವಾಗಿ ಸಾಯುತ್ತಾನೆಂದು ಬೈಬಲ್ ಹೇಳುತ್ತದೆ. ಪ್ರತಿಯೊಂದು ಪ್ರಾಣಿಯಲ್ಲಿ ಜೀವಿಸುತ್ತಾ ಮುಂದುವರಿಯುವ ಅಮರವಾದದ್ದೇನೋ ಇದೆಯೆಂದು ಅದು ಕಲಿಸುವುದಿಲ್ಲ. ಅಮರ ಆತ್ಮದಲ್ಲಿ ವಿಶ್ವಾಸವಿಡುವ ಒಬ್ಬ ವ್ಯಕ್ತಿಗೆ ಇದು ವಿಚಿತ್ರವಾಗಿರಬಹುದಾದರೂ, ಮರಣದಲ್ಲಿ ಇಡೀ ಪ್ರಾಣಿ ಇಲ್ಲವೆ ವ್ಯಕ್ತಿಯು ಮರಣಹೊಂದುತ್ತಾನೆ ಮತ್ತು ಯಾವ ಭಾಗವಾದರೂ ಬದುಕಿ ಉಳಿಯುತ್ತದೆಂದು ಸೂಚಿಸಲಾಗುವುದಿಲ್ಲ.
9. ರಾಹೇಲಳ ‘ಪ್ರಾಣಹೋಗುತ್ತಿತ್ತು’ ಎಂದು ಬೈಬಲ್ ಹೇಳುವಾಗ, ಅದರ ಅರ್ಥವೇನಾಗಿದೆ?
9 ರಾಹೇಲಳು ತನ್ನ ಎರಡನೆಯ ಪುತ್ರನಿಗೆ ಜನ್ಮನೀಡುತ್ತಿದ್ದಾಗ ಸಂಭವಿಸಿದ ದುಃಖಕರ ಮರಣದ ಕುರಿತು, ಆದಿಕಾಂಡ 35:18ರಲ್ಲಿರುವ ಹೇಳಿಕೆಯ ಕುರಿತೇನು? ಅಲ್ಲಿ ನಾವು ಓದುವುದು: “ಆದರೆ ರಾಹೇಲಳು ಸತ್ತುಹೋದಳು; ಪ್ರಾಣಹೋಗುತ್ತಿರುವಾಗ ಆಕೆಯು ಆ ಮಗುವಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ, ಅದರ ತಂದೆಯು ಅದಕ್ಕೆ ಬೆನ್ಯಾಮೀನ್ ಎಂದು ಹೆಸರಿಟ್ಟನು.” ರಾಹೇಲಳು ಸತ್ತುಹೋದಾಗ ಅವಳಿಂದ ಒಂದು ಆಂತರಿಕ ವ್ಯಕ್ತಿ ಹೊರಟುಹೋಯಿತೆಂದು ಈ ಹೇಳಿಕೆಯು ಸೂಚಿಸುತ್ತದೊ? ಖಂಡಿತವಾಗಿಯೂ ಇಲ್ಲ. ಪ್ರಾಣ ಎಂಬ ಪದವು ಒಬ್ಬ ವ್ಯಕ್ತಿಯ ಜೀವವನ್ನು ಸೂಚಿಸುತ್ತದೆ. ಹೀಗೆ ಈ ವಿದ್ಯಮಾನದಲ್ಲಿ, ರಾಹೇಲಳು “ಪ್ರಾಣ”ವು ಅವಳ “ಜೀವ”ವನ್ನು ಅರ್ಥೈಸಿತು. ಆದುದರಿಂದಲೇ ಇತರ ಬೈಬಲ್ ಭಾಷಾಂತರಗಳು, ‘ಅವಳ ಪ್ರಾಣಹೋಗುತ್ತಿತ್ತು’ ಎಂಬ ವಾಕ್ಸರಣಿಯನ್ನು ಹೀಗೆ ತರ್ಜುಮೆ ಮಾಡುತ್ತವೆ: “ಅವಳ ಜೀವ ಕ್ಷೀಣಿಸುತ್ತಿತ್ತು” (ನಾಕ್ಸ್), “ಅವಳು ಕೊನೆಯುಸಿರೆಳೆದಳು” (ಜೆಬಿ), ಮತ್ತು “ಅವಳ ಜೀವ ಅವಳಿಂದ ಹೊರಟುಹೋಯಿತು” (ಬೈಬಲ್ ಇನ್ ಬೇಸಿಕ್ ಇಂಗ್ಲಿಷ್). ರಾಹೇಲಳ ಮರಣದ ನಂತರ ಯಾವುದೋ ರಹಸ್ಯವಾದ ಭಾಗವು ಬದುಕಿ ಉಳಿಯಿತೆಂಬ ಸೂಚನೆಯನ್ನು ನಾವು ಕಾಣುವುದೇ ಇಲ್ಲ.
10. ಯಾವ ವಿಧದಲ್ಲಿ ಆ ವಿಧವೆಯ ಪುನರುತ್ಥಿತ ಪುತ್ರನ ಪ್ರಾಣವು ಅವನಿಗೆ ಹಿಂದಿರುಗಿ ಬಂದಿತು?
10 ಒಂದನೆಯ ಅರಸು, 17ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಚಿರುವ ಒಬ್ಬ ವಿಧವೆಯ ಮಗನ ಪುನರುತ್ಥಾನಕ್ಕೆ ಇದು ಸಮಾನವಾಗಿದೆ. ಎಲೀಷನು ಆ ಯುವಕನಿಗಾಗಿ ಪ್ರಾರ್ಥಿಸಿದಂತೆ, ವಚನ 22ರಲ್ಲಿ ನಾವು ಓದುವುದು, “ಯೆಹೋವನು ಅವನ ಪ್ರಾರ್ಥನೆಯನ್ನು ಕೇಳಿದದರಿಂದ ಹುಡುಗನ ಪ್ರಾಣವು ತಿರಿಗಿ ಬಂದು ಅವನು ಉಜ್ಜೀವಿಸಿದನು.” ಪುನಃ, “ಪ್ರಾಣ” ಎಂಬ ಪದವು “ಜೀವ”ವನ್ನು ಅರ್ಥೈಸುತ್ತದೆ. ಹೀಗೆ, ನ್ಯೂ ಅಮೆರಿಕನ್ ಸ್ಟ್ಯಾಂಡರ್ಡ್ ಬೈಬಲ್ ಓದುವುದು: “ಮಗುವಿನ ಜೀವವು ಅವನಿಗೆ ಹಿಂದಿರುಗಿದ ಕಾರಣ ಅವನು ಉಜ್ಜೀವಿಸಿದನು.” ಹೌದು, ಹುಡುಗನಿಗೆ ಹಿಂದಿರುಗಿದ್ದು ಒಂದು ಛಾಯರೂಪದ ಆಕಾರವಲ್ಲ, ಬದಲಿಗೆ ಅವನ ಜೀವವಾಗಿತ್ತು. “ಇಗೋ, ನೋಡು; ನಿನ್ನ ಮಗನು [ಸಂಪೂರ್ಣ ವ್ಯಕ್ತಿ] ಜೀವಿಸುತ್ತಾನೆ,” ಎಂದು ಎಲೀಷನು ಆ ಹುಡುಗನ ತಾಯಿಗೆ ಹೇಳಿದ ವಿಷಯಕ್ಕೆ ಇದು ಅನುಗುಣವಾಗಿದೆ.—1 ಅರಸು 17:23.
ಆತ್ಮದ ಕುರಿತೇನು?
11. ಬೈಬಲಿನಲ್ಲಿರುವ ಆತ್ಮ ಎಂಬ ಪದವು, ವ್ಯಕ್ತಿಯ ಮರಣದ ನಂತರ ಬದುಕಿ ಉಳಿಯುವ ಒಂದು ನಿರ್ದೇಹವಾದ ಭಾಗವನ್ನು ಏಕೆ ಸೂಚಿಸಸಾಧ್ಯವಿಲ್ಲ?
11 ಬೈಬಲಿನಲ್ಲಿ ಆತ್ಮ (ಹೀಬ್ರು ಭಾಷೆಯಲ್ಲಿ ರೂಆ್ಯಕ್; ಗ್ರೀಕ್ ಭಾಷೆಯಲ್ಲಿ ನ್ಯೂಮಾ) ಎಂಬುದಾಗಿ ಕೆಲವೊಮ್ಮ ಭಾಷಾಂತರಿಸಲ್ಪಟ್ಟ ಪದಗಳು ಮೂಲಭೂತವಾಗಿ “ಉಸಿರು” ಎಂಬುದನ್ನು ಅರ್ಥೈಸುತ್ತವೆ, ಮತ್ತು ಅನೇಕ ಬೈಬಲ್ ವಚನಗಳಲ್ಲಿ ಅವು ಉಸಿರು ಎಂಬುದಾಗಿಯೇ ಭಾಷಾಂತರಿಸಲ್ಪಟ್ಟಿವೆ. ಹೀಗೆ, ವ್ಯಕ್ತಿಯೊಬ್ಬನು ಸಾಯುವಾಗ, “ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ” ಎಂಬುದಾಗಿ ಕೀರ್ತನೆ 146:4ರಲ್ಲಿ ಹೆಚ್ಚಿನ ಭಾಷಾಂತರಗಳು ಹೇಳುತ್ತವೆ. (ಕೀರ್ತನೆ 146:4) ‘ಆತ್ಮವು ಹೊರಹೋಗುತ್ತದೆ’ ಎಂದು ಹೇಳುವಾಗ, ಒಂದು ಪ್ರಜ್ಞೆಯುಳ್ಳ ಅಮರ ಭಾಗವು ದೇಹವನ್ನು ಬಿಟ್ಟು ಮತ್ತೊಂದು ಅದೃಶ್ಯ ಲೋಕಕ್ಕೆ ಹೋಗಿ ವಾಸಿಸುತ್ತದೆ ಎಂಬುದು ಇದರ ಅರ್ಥವಲ್ಲ. ಅದು ಸಾಧ್ಯವಿಲ್ಲ ಏಕೆಂದರೆ, ಕೀರ್ತನೆಗಾರನು ಮುಂದೆ ಹೇಳುವುದು: “ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು” (“ಅವನ ಆಲೋಚನೆಯೆಲ್ಲ ಕೊನೆಗೊಳ್ಳುತ್ತದೆ,” ದ ನ್ಯೂ ಇಂಗ್ಲಿಷ್ ಬೈಬಲ್).
12. ಬೈಬಲಿನಲ್ಲಿ ಶ್ವಾಸ ಇಲ್ಲವೆ ಆತ್ಮ ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಮತ್ತು ಗ್ರೀಕ್ ಪದಗಳು ಏನನ್ನು ಸೂಚಿಸುತ್ತವೆ?
12 ಆದರೆ, ಈ ಹೀಬ್ರು ಮತ್ತು ಗ್ರೀಕ್ ಪದಗಳನ್ನು ಯಾವಾಗಲೂ ಉಸಿರು ಎಂಬುದಾಗಿ ಭಾಷಾಂತರಿಸಲಾಗುವುದಿಲ್ಲ. ಏಕೆಂದರೆ ಅವು ಉಸಿರಾಡುವ ಕ್ರಿಯೆಗಿಂತಲೂ ಹೆಚ್ಚಿನದ್ದನ್ನು ಸೂಚಿಸುತ್ತವೆ. ಉದಾಹರಣೆಗೆ, ಭೌಗೋಲಿಕ ಜಲಪ್ರಳಯದ ಸಮಯದಲ್ಲಿ ಸಂಭವಿಸಿದ ಮಾನವರ ಹಾಗೂ ಪ್ರಾಣಿಗಳ ನಾಶನವನ್ನು ವರ್ಣಿಸುತ್ತಾ, ಆದಿಕಾಂಡ 7:22 ಹೇಳುವುದು: “ಮೂಗಿನಿಂದ ಶ್ವಾಸ [ಇಲ್ಲವೆ ಆತ್ಮ; ಹೀಬ್ರು ಭಾಷೆಯಲ್ಲಿ ರೂಆ್ಯಕ್]ಬಿಡುವ ಭೂಜಂತುಗಳೆಲ್ಲಾ ಸತ್ತವು.” ಹೀಗೆ, ಹೀಬ್ರು ಭಾಷೆಯ ರೂಆ್ಯಕ್ ಅನ್ನು ಕೆಲವೊಮ್ಮೆ ಆತ್ಮವೆಂದು ಭಾಷಾಂತರಿಸಲಾಗಿದೆ, ಮತ್ತು ಬೈಬಲಿನಲ್ಲಿ ಅದು ಎಲ್ಲ ಜೀವಿಗಳಲ್ಲಿ ಅಂದರೆ ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಸಕ್ರಿಯವಾಗಿರುವ ಜೀವಶಕ್ತಿಯನ್ನು ಸೂಚಿಸುತ್ತದೆ. ಮತ್ತು ಈ ಜೀವಶಕ್ತಿಯ ಉಸಿರಾಟದಿಂದ ಪೋಷಿಸಲ್ಪಡುತ್ತದೆ.
13. ವ್ಯಕ್ತಿಯೊಬ್ಬನು ಸಾಯುವಾಗ, ಬೈಬಲು ತಿಳಿಸುವಂತೆ ಆತ್ಮವು ದೇವರ ಬಳಿಗೆ ಸೇರುವುದು ಹೇಗೆ?
13 ಹಾಗಾದರೆ ವ್ಯಕ್ತಿಯೊಬ್ಬನು ಸಾಯುವಾಗ, “ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು” ಎಂದು ಪ್ರಸಂಗಿ 12:7 ಹೇಳುವಾಗ, ಅದು ಏನನ್ನು ಅರ್ಥೈಸುತ್ತದೆ? ಆತ್ಮವು ಅಕ್ಷರಶಃ ಅಂತರಿಕ್ಷದಲ್ಲಿ ಸಂಚರಿಸಿ, ದೇವರ ಸಾನ್ನಿಧ್ಯವನ್ನು ತಲಪುತ್ತದೆಂಬುದು ಇದರ ಅರ್ಥವೊ? ಈ ರೀತಿಯ ಅರ್ಥವು ಇಲ್ಲಿ ಸೂಚಿಸಲ್ಪಟ್ಟಿಲ್ಲ. ಬೈಬಲಿನಲ್ಲಿರುವ ಆತ್ಮ ಎಂಬ ಪದವು ಜೀವಶಕ್ತಿಯಾಗಿರುವುದರಿಂದ, ಅದು “ದೇವರ ಬಳಿಗೆ ಸೇರು”ತ್ತದೆ ಎನ್ನುವುದು, ಆ ವ್ಯಕ್ತಿಯ ಭಾವೀ ಜೀವಿತದ ಯಾವುದೇ ನಿರೀಕ್ಷೆಯು ಈಗ ಸಂಪೂರ್ಣವಾಗಿ ದೇವರ ಕೈಗಳಲ್ಲಿದೆ ಎಂಬುದನ್ನು ಅರ್ಥೈಸುತ್ತದೆ. ದೇವರು ಮಾತ್ರ ಆ ಆತ್ಮ ಇಲ್ಲವೆ ಜೀವಶಕ್ತಿಯನ್ನು ಪುನಃ ನೀಡಿ, ಆ ವ್ಯಕ್ತಿಯು ಪುನಃ ಜೀವಿಸುವಂತೆ ಮಾಡಶಕ್ತನಾಗಿದ್ದಾನೆ. (ಕೀರ್ತನೆ 104:30) ಆದರೆ, ಹಾಗೆ ಮಾಡಲು ದೇವರು ಉದ್ದೇಶಿಸುತ್ತಾನೊ?
‘ಅವನು ಎದ್ದುಬರುವನು’
14. ಲಾಜರನ ಮೃತ್ಯುವಿನ ನಂತರ ಅವನ ಸಹೋದರಿಯರಿಗೆ ಸಾಂತ್ವನವನ್ನು ನೀಡಲು, ಯೇಸು ಏನು ಹೇಳಿದನು ಮತ್ತು ಮಾಡಿದನು?
14 ಯೆರೂಸಲೇಮಿನಿಂದ ಸುಮಾರು ಮೂರು ಕಿಲೊಮೀಟರುಗಳು ಪೂರ್ವದಿಕ್ಕಿನಲ್ಲಿರುವ ಬೇಥಾನ್ಯ ಎಂಬ ಚಿಕ್ಕ ಪಟ್ಟಣದಲ್ಲಿದ್ದ ಮರಿಯ ಮತ್ತು ಮಾರ್ಥರೆಂಬ ಸಹೋದರಿಯರು, ತಮ್ಮ ತಮ್ಮನಾದ ಲಾಜರನ ಅಕಾಲಿಕ ಮೃತ್ಯುವಿಗಾಗಿ ದುಃಖಿಸುತ್ತಿದ್ದರು. ಯೇಸುವಿಗೆ ಲಾಜರನಲ್ಲಿ ಮತ್ತು ಅವನ ಸಹೋದರಿಯರಲ್ಲಿ ಮಮತೆಯಿದ್ದ ಕಾರಣ, ಅವರ ದುಃಖದಲ್ಲಿ ಅವನು ಭಾಗಿಯಾದನು. ಆ ಸಹೋದರಿಯರಿಗೆ ಯಾವ ರೀತಿಯ ಸಾಂತ್ವನವನ್ನು ಯೇಸು ನೀಡಬಹುದಿತ್ತು? ಯಾವುದೊ ಸಂಕೀರ್ಣವಾದ ಕಥೆಯನ್ನು ಹೇಳುವ ಮೂಲಕವಲ್ಲ, ಸತ್ಯವನ್ನೇ ಹೇಳುವ ಮೂಲಕ ಅವರಿಗೆ ಸಾಂತ್ವನವನ್ನು ಅವನು ನೀಡಬಹುದಿತ್ತು. ಯೇಸು ಸರಳವಾದ ಮಾತಿನಲ್ಲಿ ಹೇಳಿದ್ದು: ‘ನಿನ್ನ ತಮ್ಮನು ಎದ್ದುಬರುವನು.’ ತದನಂತರ ಯೇಸು ಸಮಾಧಿಯ ಬಳಿಗೆ ಹೋಗಿ, ನಾಲ್ಕು ದಿನಗಳ ಹಿಂದೆ ಸತ್ತುಹೋಗಿದ್ದ ಲಾಜರನಿಗೆ ಜೀವವನ್ನು ಪುನಃ ನೀಡುತ್ತಾ ಅವನನ್ನು ಪುನರುತ್ಥಾನಗೊಳಿಸಿದನು.—ಯೋಹಾನ 11:18-23, 38-44.
15. ಯೇಸು ಹೇಳಿದ ಮಾತುಗಳಿಗೆ ಮತ್ತು ಮಾಡಿದ ಕೃತ್ಯಕ್ಕೆ ಮಾರ್ಥಳ ಪ್ರತಿಕ್ರಿಯೆಯು ಏನಾಗಿತ್ತು?
15 ಲಾಜರನು ‘ಎದ್ದುಬರುವನೆಂಬ’ ಯೇಸುವಿನ ಹೇಳಿಕೆಯಿಂದ ಮಾರ್ಥ ಆಶ್ಚರ್ಯಗೊಂಡಳೊ? ಇಲ್ಲವೆಂದು ಅವಳ ಉತ್ತರದಿಂದ ವ್ಯಕ್ತವಾಗುತ್ತದೆ: “ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದುಬರುವನೆಂದು ನಾನು ಬಲ್ಲೆನು.” ಪುನರುತ್ಥಾನದ ವಾಗ್ದಾನದಲ್ಲಿ ಅವಳಿಗೆ ಮೊದಲಿನಿಂದಲೂ ನಂಬಿಕೆಯಿತ್ತು. ಆಗ ಯೇಸು ಅವಳಿಗೆ ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” (ಯೋಹಾನ 11:23-25) ಲಾಜರನನ್ನು ಪುನಃ ಜೀವಂತನನ್ನಾಗಿ ಮಾಡಿದ ಅದ್ಭುತಕಾರ್ಯವು, ಅವಳ ನಂಬಿಕೆಯನ್ನು ಬಲಪಡಿಸಿತಲ್ಲದೆ, ಇತರರಲ್ಲಿಯೂ ನಂಬಿಕೆಯನ್ನು ಮೂಡಿಸಿತು. (ಯೋಹಾನ 11:45) ಆದರೆ, “ಪುನರುತ್ಥಾನ” ಎಂಬುದು ನಿಖರವಾಗಿ ಏನನ್ನು ಅರ್ಥೈಸುತ್ತದೆ?
16. “ಪುನರುತ್ಥಾನ” ಎಂಬ ಪದದ ಅರ್ಥವೇನಾಗಿದೆ?
16 “ಪುನರುತ್ಥಾನ” ಎಂಬ ಪದವು ಆ್ಯನಸ್ಟ್ಯಾಸಿಸ್ ಎಂಬ ಗ್ರೀಕ್ ಪದದಿಂದ ಭಾಷಾಂತರಿಸಲ್ಪಟ್ಟಿದ್ದು, ಅದರ ಅಕ್ಷರಾರ್ಥವು “ಎದ್ದುನಿಲ್ಲುವುದು” ಎಂದಾಗಿದೆ. ಆ್ಯನಸ್ಟ್ಯಾಸಿಸ್ ಎಂಬ ಗ್ರೀಕ್ ಪದವನ್ನು ಹೀಬ್ರು ಭಾಷಾಂತರಕಾರರು, “ಸತ್ತವರ ಪುನರುಜ್ಜೀವನ” (ಹೀಬ್ರು, ಟಕೀಯಾತ್ ಹಾಮೆಥೀಮ್) ಎಂಬ ಅರ್ಥನೀಡುವ ಅಭಿವ್ಯಕ್ತಿಯನ್ನು ಉಪಯೋಗಿಸಿ ಭಾಷಾಂತರಿಸಿದ್ದಾರೆ.a ಹೀಗೆ ಪುನರುತ್ಥಾನವು, ಒಬ್ಬ ವ್ಯಕ್ತಿಯ ಜೀವನ ಮಾದರಿಯನ್ನು ಪುನಸ್ಸ್ಥಾಪಿಸುತ್ತಾ ಮತ್ತು ಪುನಃ ಸಕ್ರಿಯಗೊಳಿಸುತ್ತಾ, ಅವನನ್ನು ಮರಣದ ಜೀವರಹಿತ ಸ್ಥಿತಿಯಿಂದ ಎಬ್ಬಿಸುವುದನ್ನು ಒಳಗೊಳ್ಳುತ್ತದೆ.
17. (ಎ) ವ್ಯಕ್ತಿಗಳ ಪುನರುತ್ಥಾನವು ಯೆಹೋವ ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ಒಂದು ಸಮಸ್ಯೆಯಾಗಿರುವುದಿಲ್ಲ ಏಕೆ? (ಬಿ) ಸಮಾಧಿಗಳಲ್ಲಿರುವವರ ಕುರಿತು ಯಾವ ವಾಗ್ದಾನವನ್ನು ಯೇಸು ಮಾಡಿದನು?
17 ವಿವೇಕದಲ್ಲಿ ಅಪರಿಮಿತನೂ ಸ್ಮರಣೆಯಲ್ಲಿ ಪರಿಪೂರ್ಣನೂ ಆಗಿರುವ ಯೆಹೋವ ದೇವರು, ಒಬ್ಬ ವ್ಯಕ್ತಿಯನ್ನು ಸುಲಭವಾಗಿ ಪುನರುತ್ಥಾನಗೊಳಿಸಬಲ್ಲನು. ಮೃತರ ಜೀವನ ಮಾದರಿಯನ್ನು, ಅಂದರೆ ಅವರ ವ್ಯಕ್ತಿಗತ ಗುಣಗಳು, ಅವರ ವೈಯಕ್ತಿಕ ಇತಿಹಾಸ, ಮತ್ತು ಅವರ ಗುರುತಿನ ಎಲ್ಲ ವಿವರಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಆತನಿಗೆ ಒಂದು ಸಮಸ್ಯೆಯಲ್ಲ. (ಯೋಬ 12:13; ಯೆಶಾಯ 40:26ನ್ನು ಹೋಲಿಸಿರಿ.) ಅಲ್ಲದೆ, ಲಾಜರನ ವೃತ್ತಾಂತವು ತೋರಿಸುವಂತೆ, ಯೇಸು ಕ್ರಿಸ್ತನು ಸತ್ತವರನ್ನು ಪುನರುತ್ಥಾನಗೊಳಿಸಲು ಸಿದ್ಧನೂ ಶಕ್ತನೂ ಆಗಿದ್ದಾನೆ. (ಹೋಲಿಸಿ ಲೂಕ 7:11-17; 8:40-56) ವಾಸ್ತವದಲ್ಲಿ ಯೇಸು ಕ್ರಿಸ್ತನು ಹೇಳಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ಯೆಹೋವನ ಸ್ಮರಣೆಯಲ್ಲಿರುವವರೆಲ್ಲರೂ ಪುನರುತ್ಥಾನಗೊಳಿಸಲ್ಪಡುವರೆಂದು ಯೇಸು ಕ್ರಿಸ್ತನು ವಾಗ್ದಾನಿಸಿದನು. ಹಾಗಾದರೆ ಬೈಬಲಿಗನುಸಾರ, ಮರಣದಲ್ಲಿ ಯಾವ ಅಮರ ಭಾಗವೂ ಜೀವಿಸುತ್ತಾ ಮುಂದುವರಿಯುವುದಿಲ್ಲ, ಬದಲಿಗೆ ಮರಣಕ್ಕಿರುವ ಪರಿಹಾರವು ಪುನರುತ್ಥಾನವಾಗಿದೆ. ಇದುವರೆಗೂ ನೂರಾರು ಕೋಟಿ ಜನರು ಬದುಕಿ ಸತ್ತುಹೋಗಿದ್ದಾರೆ. ಅವರಲ್ಲಿ ಪುನರುತ್ಥಾನವನ್ನು ಎದುರುನೋಡುತ್ತಾ ಯಾರು ದೇವರ ಸ್ಮರಣೆಯಲ್ಲಿದ್ದಾರೆ?
18. ಯಾರು ಪುನರುತ್ಥಾನಗೊಳಿಸಲ್ಪಡುವರು?
18 ಯೆಹೋವನ ಸೇವಕರೋಪಾದಿ ನೀತಿಯ ಮಾರ್ಗವನ್ನು ಬೆನ್ನಟ್ಟಿರುವವರು ಪುನರುತ್ಥಾನಗೊಳಿಸಲ್ಪಡುವರು. ಆದರೆ, ದೇವರ ನೀತಿಯ ಮಟ್ಟಗಳಿಗನುಸಾರ ತಾವು ಜೀವಿಸುತ್ತೇವೊ ಇಲ್ಲವೊ ಎಂಬುದನ್ನು ಪ್ರದರ್ಶಿಸದೆಯೇ ಕೋಟಿಗಟ್ಟಲೆ ಜನರು ಸತ್ತುಹೋಗಿದ್ದರು. ಅವರು ಯೆಹೋವನ ಆವಶ್ಯಕತೆಗಳ ವಿಷಯದಲ್ಲಿ ಏನೂ ತಿಳಿಯದವರಾಗಿದ್ದಾರೆ ಇಲ್ಲವೆ ಬೇಕಾದ ಬದಲಾವಣೆಗಳನ್ನು ಮಾಡಲು ಅವರಿಗೆ ಸಾಕಷ್ಟು ಸಮಯಾವಕಾಶವಿರಲಿಲ್ಲ. ಇವರು ಕೂಡ ದೇವರ ಸ್ಮರಣೆಯಲ್ಲಿದ್ದು, ಪುನರುತ್ಥಾನಗೊಳಿಸಲ್ಪಡುವರು. ಏಕೆಂದರೆ ಬೈಬಲು ವಾಗ್ದಾನಿಸುವುದು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗು”ವುದು.—ಅ. ಕೃತ್ಯಗಳು 24:15.
19. (ಎ) ಪುನರುತ್ಥಾನದ ಕುರಿತು ಅಪೊಸ್ತಲ ಯೋಹಾನನು ಯಾವ ದರ್ಶನವನ್ನು ಕಂಡನು? (ಬಿ) ಏನನ್ನು “ಬೆಂಕಿಯ ಕೆರೆಗೆ ದೊಬ್ಬ”ಲಾಗುತ್ತದೆ, ಮತ್ತು ಆ ಅಭಿವ್ಯಕ್ತಿಯ ಅರ್ಥವು ಏನಾಗಿದೆ?
19 ದೇವರ ಸಿಂಹಾಸನದ ಮುಂದೆ ನಿಂತಿದ್ದ ಪುನರುತ್ಥಿತರ ರೋಮಾಂಚಕ ದರ್ಶನವನ್ನು ಅಪೊಸ್ತಲ ಯೋಹಾನನು ಕಂಡನು. ಅದನ್ನು ವರ್ಣಿಸುತ್ತಾ, ಅವನು ಬರೆದುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು. ಆ ಮೇಲೆ ಮೃತ್ಯುವೂ ಪಾತಾಳವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಆ ಬೆಂಕಿಯ ಕೆರೆಯೇ ಎರಡನೆಯ ಮರಣವು.” (ಪ್ರಕಟನೆ 20:12-14) ಅದು ಏನನ್ನು ಅರ್ಥೈಸುತ್ತದೆ ಎಂಬುದನ್ನು ಸ್ವಲ್ಪ ಯೋಚಿಸಿನೋಡಿರಿ! ದೇವರ ಸ್ಮರಣೆಯಲ್ಲಿರುವ ಎಲ್ಲ ಮೃತರು ಹೇಡಿಸ್ ಇಲ್ಲವೆ ಶೀಯೋಲ್ನಿಂದ ಅಂದರೆ ಮಾನವರ ಸಾಮಾನ್ಯ ಸಮಾಧಿಯಿಂದ ಬಿಡುಗಡೆಗೊಳಿಸಲ್ಪಡುವರು. (ಕೀರ್ತನೆ 16:10; ಅ. ಕೃತ್ಯಗಳು 2:31) ತರುವಾಯ “ಮೃತ್ಯು ಮತ್ತು ಪಾತಾಳ (ಹೇಡಿಸ್)”ವು, ಸಂಪೂರ್ಣ ನಾಶನವನ್ನು ಸಂಕೇತಿಸುವ “ಬೆಂಕಿಯ ಕೆರೆಗೆ” ದೊಬ್ಬಲ್ಪಡುವವು. ಮಾನವಕುಲದ ಸಾಮಾನ್ಯ ಸಮಾಧಿಯು ಇನ್ನಿರಲಾರದು.
ಅಪೂರ್ವವಾದ ಒಂದು ಪ್ರತೀಕ್ಷೆ!
20. ಮೃತರಾಗಿರುವ ಕೋಟಿಗಟ್ಟಲೆ ಜನರು ಯಾವ ರೀತಿಯ ಪರಿಸರಗಳಲ್ಲಿ ಪುನರುತ್ಥಾನಗೊಳಿಸಲ್ಪಡುವರು?
20 ಕೋಟಿಗಟ್ಟಲೆ ಜನರು ಪುನರುತ್ಥಾನಗೊಳಿಸಲ್ಪಡುವಾಗ, ಅವರೊಂದು ಬರಿದಾದ ಭೂಮಿಯ ಮೇಲೆ ಜೀವಿತವನ್ನು ಆರಂಭಿಸಲಾರರು. (ಯೆಶಾಯ 45:18) ಅವರು ಸುಂದರವಾದ ಪರಿಸರದಲ್ಲಿ ಎಚ್ಚತ್ತು, ಅವರಿಗಾಗಿ ವಸತಿ, ಬಟ್ಟೆಬರೆ, ಮತ್ತು ಹೇರಳವಾದ ಆಹಾರವು ಸಿದ್ಧಗೊಳಿಸಲ್ಪಟ್ಟಿದೆ ಎಂಬುದನ್ನು ಕಂಡುಕೊಳ್ಳುವರು. (ಕೀರ್ತನೆ 67:6; 72:16; ಯೆಶಾಯ 65:21, 22) ಈ ಎಲ್ಲ ಸಿದ್ಧತೆಗಳನ್ನು ಯಾರು ಮಾಡುವರು? ಭೌಮಿಕ ಪುನರುತ್ಥಾನವು ಆರಂಭಿಸುವ ಮುಂಚೆಯೇ ಆ ಹೊಸ ಲೋಕದಲ್ಲಿ ಜನರು ಜೀವಿಸುತ್ತಿರುವರೆಂಬುದು ಸ್ಪಷ್ಟ. ಅವರು ಯಾರಾಗಿರುವರು?
21, 22. “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವವರಿಗೆ ಯಾವ ಅಪೂರ್ವವಾದ ಪ್ರತೀಕ್ಷೆಯು ಮುಂದೆ ಕಾದಿದೆ?
21 ನಾವು ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದು ಬೈಬಲ್ ಪ್ರವಾದನೆಗಳ ನೆರವೇರಿಕೆಯು ತೋರಿಸುತ್ತದೆ.b (2 ತಿಮೊಥೆಯ 3:1) ಬಹು ಬೇಗನೆ, ಯೆಹೋವ ದೇವರು ಮಾನವ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡಿ, ಭೂಮಿಯಿಂದ ದುಷ್ಟತನವನ್ನು ನಿರ್ಮೂಲಮಾಡಿಬಿಡುವನು. (ಕೀರ್ತನೆ 37:10, 11; ಜ್ಞಾನೋಕ್ತಿ 2:21, 22) ನಂಬಿಗಸ್ತಿಕೆಯಿಂದ ದೇವರಿಗೆ ಸೇವೆಸಲ್ಲಿಸುತ್ತಿರುವ ಜನರಿಗೆ ಆಗ ಏನು ಸಂಭವಿಸುವುದು?
22 ಯೆಹೋವನು ನೀತಿವಂತರನ್ನು ದುಷ್ಟರೊಂದಿಗೆ ನಾಶಮಾಡುವುದಿಲ್ಲ. (ಕೀರ್ತನೆ 145:20) ಅಂತಹ ಕಾರ್ಯವನ್ನು ಆತನು ಈ ತನಕವೂ ಮಾಡಿಲ್ಲ, ಮತ್ತು ಭೂಮಿಯಿಂದ ಎಲ್ಲ ಕೆಟ್ಟತನವನ್ನು ತೆಗೆಯುವಾಗಲೂ ಆತನು ಹಾಗೆ ಮಾಡಲಾರನು. (ಆದಿಕಾಂಡ 18:22, 23, 26ನ್ನು ಹೋಲಿಸಿರಿ.) ಬೈಬಲಿನ ಕೊನೆಯ ಪುಸ್ತಕವು, ‘ಮಹಾ ಸಂಕಟ’ದಿಂದ ಹೊರಬರುವ “ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವ” ಜನರ ಕುರಿತು ಮಾತಾಡುತ್ತದೆ. (ಪ್ರಕಟನೆ 7:9-14) ಹೌದು, ಪ್ರಸ್ತುತ ದುಷ್ಟ ಲೋಕವು ಅಂತ್ಯಗೊಳ್ಳುವಾಗ ಮಹಾ ಸಂಕಟದಿಂದ ಒಂದು ದೊಡ್ಡ ಸಮೂಹವು ಬದುಕಿ ಉಳಿದು, ದೇವರ ಹೊಸ ಲೋಕವನ್ನು ಪ್ರವೇಶಿಸುವುದು. ಅಲ್ಲಿ, ಮಾನವಕುಲವನ್ನು ಪಾಪಮರಣಗಳಿಂದ ಮುಕ್ತಗೊಳಿಸುವ ದೇವರ ಅದ್ಭುತಕರವಾದ ಏರ್ಪಾಡಿನಿಂದ ವಿಧೇಯ ಮಾನವಕುಲವು ಪೂರ್ಣವಾಗಿ ಲಾಭಪಡೆಯುವುದು. (ಪ್ರಕಟನೆ 22:1, 2) ಹೀಗೆ, ಆ “ಮಹಾ ಸಮೂಹವು” ಮರಣವನ್ನು ಎಂದಿಗೂ ಅನುಭವಿಸಲಾರದು. ಎಂತಹ ಅಪೂರ್ವವಾದ ಒಂದು ಪ್ರತೀಕ್ಷೆ!
ಮರಣವೇ ಇಲ್ಲದ ಜೀವಿತ
23, 24. ಭೂಮಿಯ ಪ್ರಮೋದವನದಲ್ಲಿ ಮರಣ ಇಲ್ಲದ ಜೀವಿತವನ್ನು ನೀವು ಅನುಭವಿಸಲು ಬಯಸುವುದಾದರೆ ಏನು ಮಾಡಬೇಕಾಗಿದೆ?
23 ದಿಗ್ಭ್ರಮೆಗೊಳಿಸುವ ಈ ನಿರೀಕ್ಷೆಯಲ್ಲಿ ನಾವು ಭರವಸೆಯನ್ನು ಇಡಸಾಧ್ಯವೊ? ಖಂಡಿತವಾಗಿಯೂ ಸಾಧ್ಯ! ಜನರು ಇನ್ನೆಂದಿಗೂ ಮರಣವನ್ನೇ ಅನುಭವಿಸದ ಕಾಲವು ಬರುವುದೆಂದು ಯೇಸು ಕ್ರಿಸ್ತನು ತಾನೇ ಸೂಚಿಸಿದನು. ತನ್ನ ಮಿತ್ರನಾದ ಲಾಜರನನ್ನು ಪುನರುತ್ಥಾನಗೊಳಿಸುವ ಮುಂಚೆ, ಯೇಸು ಮಾರ್ಥಳಿಗೆ ಹೇಳಿದ್ದು: “ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.”—ಯೋಹಾನ 11:26.
24 ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸಲು ಬಯಸುತ್ತೀರೊ? ನಿಮ್ಮ ಪ್ರಿಯ ಜನರನ್ನು ಮತ್ತೆ ನೋಡಲು ನೀವು ಹಾತೊರೆಯುತ್ತೀರೊ? “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂದು ಅಪೊಸ್ತಲ ಯೋಹಾನನು ಹೇಳುತ್ತಾನೆ. (1 ಯೋಹಾನ 2:17) ದೇವರ ಚಿತ್ತವು ಏನಾಗಿದೆ ಎಂದು ಕಲಿತು, ಅದಕ್ಕನುಗುಣವಾಗಿ ಜೀವಿಸಲು ನಿರ್ಧರಿಸುವ ಸಮಯವು ಇದೇ ಆಗಿದೆ. ಆಗ, ದೇವರ ಚಿತ್ತವನ್ನು ಈಗಾಗಲೇ ಮಾಡುತ್ತಿರುವ ಇತರ ಲಕ್ಷಾಂತರ ಜನರೊಂದಿಗೆ ನೀವು ಸಹ ಭೂಮಿಯ ಪ್ರಮೋದವನದಲ್ಲಿ ಸದಾಕಾಲ ಜೀವಿಸಬಲ್ಲಿರಿ.
[ಅಧ್ಯಯನ ಪ್ರಶ್ನೆಗಳು]
a “ಪುನರುತ್ಥಾನ” ಎಂಬ ಪದವು ಹೀಬ್ರು ಶಾಸ್ತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಪುನರುತ್ಥಾನದ ನಿರೀಕ್ಷೆಯು ಯೋಬ 14:13, ದಾನಿಯೇಲ 12:13, ಮತ್ತು ಹೋಶೇಯ 13:14ರಲ್ಲಿ ಸ್ಪಷ್ಟವಾಗಿ ತಿಳಿಸಲ್ಪಟ್ಟಿವೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ, 98-107ನೆಯ ಪುಟಗಳನ್ನು ನೋಡಿರಿ.
ನಿಮಗೆ ನೆನಪಿದೆಯೇ?
◻ “ಪ್ರಾಣ” ಇಲ್ಲವೆ “ಪ್ರಾಣಿ” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಮೂಲ ಭಾಷಾ ಪದಗಳ ಮೂಲಾರ್ಥವು ಏನಾಗಿದೆ?
◻ ಮರಣದಲ್ಲಿ ಮನುಷ್ಯನಿಗೆ ಏನು ಸಂಭವಿಸುತ್ತದೆ?
◻ ಬೈಬಲಿಗನುಸಾರ, ಮರಣಕ್ಕಿರುವ ಏಕೈಕ ಪರಿಹಾರ ಯಾವುದು?
◻ ಇಂದಿನ ನಂಬಿಗಸ್ತ ಜನರಿಗೆ ಯಾವ ಅಪೂರ್ವವಾದ ಪ್ರತೀಕ್ಷೆಯಿದೆ?
[ಪುಟ 15 ರಲ್ಲಿರುವ ಚೌಕ]
ಒಂದು ಸೃಷ್ಟಿಜೀವಿಯ ಜೀವದ ಅರ್ಥದಲ್ಲಿ “ಪ್ರಾಣ”
ಹಲವು ಬಾರಿ “ಪ್ರಾಣ” ಎಂಬ ಪದವು, ಒಬ್ಬ ವ್ಯಕ್ತಿ ಇಲ್ಲವೆ ಪ್ರಾಣಿಯ ಜೀವವನ್ನು ಸೂಚಿಸುತ್ತದೆ. ಪ್ರಾಣ, ಪ್ರಾಣಿ, ಇಲ್ಲವೆ ಜೀವ ಎಂಬುದಾಗಿ ತರ್ಜುಮೆ ಮಾಡಲ್ಪಟ್ಟಿರುವ ಒಂದೇ ಪದವನ್ನು ಬಳಸುವುದರಲ್ಲಿ ಬೈಬಲ್ ಬರಹಗಾರರಿಗೆ ಯಾವ ವಿಷಯವು ಮನಸ್ಸಿನಲ್ಲಿತ್ತೊ, ಅದರಲ್ಲಿ ಯಾವ ಬದಲಾವಣೆಯನ್ನೂ ಇದು ತರುವುದಿಲ್ಲ. ಒಬ್ಬ ಪೂರ್ತಿ ಜೀವಂತ ವ್ಯಕ್ತಿಯನ್ನು ಸೂಚಿಸಲು ಬೈಬಲ್ ಬರಹಗಾರರು ನೆಫೆಷ್ ಇಲ್ಲವೆ ಸೈಕೀ ಎಂಬ ಪದಗಳನ್ನು ಬಳಸಿದಾಗ, ಅದು ಪ್ರಾಣಿ ಇಲ್ಲವೆ ಜೀವ ಎಂಬುದಾಗಿ ಭಾಷಾಂತರಿಸಲ್ಪಟ್ಟಿದೆ. ಮತ್ತು ಆ ವ್ಯಕ್ತಿಯು ಒಬ್ಬ ಪ್ರಾಣಿ ಇಲ್ಲವೆ ಜೀವ ಆಗಿದ್ದಾನೆಂಬ ಅರ್ಥವನ್ನೂ ಅವರು ನೀಡಬಹುದಿತ್ತು. ಹಾಗಿದ್ದರೂ, ವ್ಯಕ್ತಿಯು ಜೀವಂತನಾಗಿರುವಾಗ, ನೆಫೆಷ್ ಮತ್ತು ಸೈಕೀ ಎಂಬ ಅದೇ ಪದಗಳು, ಅವನಲ್ಲಿರುವ ಜೀವವನ್ನು ಸೂಚಿಸಲು ಬಳಸಲ್ಪಡಸಾಧ್ಯವಿದೆ ಮತ್ತು ಇಂತಹ ಸಂದರ್ಭಗಳಲ್ಲಿ ಪ್ರಾಣ ಎಂಬ ಪದವು ಸಾಮಾನ್ಯವಾಗಿ ಬಳಸಲ್ಪಡುತ್ತದೆ.
ಉದಾಹರಣೆಗೆ, ದೇವರು ಮೋಶೆಗೆ ಹೇಳಿದ್ದು: “ನಿನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದವರೆಲ್ಲರೂ ಸತ್ತುಹೋದರು.” ಮೋಶೆಯ ವೈರಿಗಳು ಅವನ ಜೀವವನ್ನು ತೆಗೆಯಲು ನೋಡುತ್ತಿದ್ದರೆಂಬುದು ಸ್ಪಷ್ಟ. (ವಿಮೋಚನಕಾಂಡ 4:19; ಹೋಲಿಸಿ ಯೆಹೋಶುವ 9:24.) “ಮನುಷ್ಯಕುಮಾರನು . . . ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು,” ಎಂದು ಯೇಸು ಹೇಳಿದಾಗ, ಈ ಪದವನ್ನು ತದ್ರೀತಿಯ ಅರ್ಥದಲ್ಲಿ ಬಳಸಿದನು. (ಮತ್ತಾಯ 20:28) ಪ್ರತಿಯೊಂದು ವಿದ್ಯಮಾನದಲ್ಲೂ, “ಪ್ರಾಣ” ಎಂಬ ಪದವು “ಜೀವ”ವನ್ನು ಅರ್ಥೈಸುತ್ತದೆ.
[ಪುಟ 15 ರಲ್ಲಿರುವ ಚಿತ್ರ]
ಇವೆಲ್ಲವೂ ಪ್ರಾಣಗಳು
[ಕೃಪೆ]
ಹಮ್ಮಿಂಗ್ ಬರ್ಡ್: U.S. Fish and Wildlife Service, Washington, D.C./Dean Biggins
[ಪುಟ 17 ರಲ್ಲಿರುವ ಚಿತ್ರ]
ಮರಣಕ್ಕಿರುವ ಪರಿಹಾರವು ಪುನರುತ್ಥಾನವೆಂದು ಯೇಸು ಪ್ರದರ್ಶಿಸಿದನು
[ಪುಟ 18 ರಲ್ಲಿರುವ ಚಿತ್ರ]
“ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.”—ಯೋಹಾನ 11:26