ಯೆಹೋವನು ತಪ್ಪಿಗೆ ಹೊಣೆಯಲ್ಲ
“ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪು ಮಾಡಿಕೊಳ್ಳುತ್ತಾನೆ.”—ಕೀರ್ತನೆ 103:13, 14.
1, 2. ಅಬ್ರಹಾಮನು ಯಾರು, ಮತ್ತು ಅವನ ಸೋದರ ಮಗನಾದ ಲೋಟನು ದುಷ್ಟ ಪಟ್ಟಣವಾದ ಸೊದೋಮಿನಲ್ಲಿ ವಾಸಮಾಡುವಂಥಾದದ್ದು ಹೇಗೆ?
ನಮ್ಮ ತಪ್ಪುಗಳಿಗಾಗಿ ನಾವು ಅನುಭವಿಸುತ್ತಿರಬಹುದಾದ ಕಷ್ಟದೆಸೆಗಳಿಗೆ ಯೆಹೋವನು ಹೊಣೆಯಲ್ಲ. ಈ ಸಂಬಂಧದಲ್ಲಿ ಸುಮಾರು 3,900 ವರ್ಷಗಳ ಹಿಂದೆ ಏನು ಸಂಭವಿಸಿತ್ತೋ ಅದನ್ನು ಗಮನಿಸಿರಿ. ದೇವರ ಸ್ನೇಹಿತನಾದ ಅಬ್ರಹಾಮ (ಅಬ್ರಾಮ) ಮತ್ತು ಅವನ ಸೋದರಮಗ ಲೋಟನು ಬಹಳ ಸಮೃದ್ಧಿಯನ್ನು ಪಡೆದವರಾಗಿದ್ದರು. (ಯಾಕೋಬ 2:23) ವಾಸ್ತವದಲ್ಲಿ, ಅವರ ಸೊತ್ತುಗಳು ಮತ್ತು ಕುರಿದನಗಳು ಎಷ್ಟು ವಿಪುಲವಾಗಿದ್ದವೆಂದರೆ ಅವರಿಗೆ ‘ಒಂದೇ ಸ್ಥಳದಲ್ಲಿ ವಾಸವಾಗಿರುವದು ಅಸಾಧ್ಯವಾಯಿತು.’ ಇದಲ್ಲದೆ, ಆ ಇಬ್ಬರು ಪುರುಷರ ದನಕಾಯುವವರ ನಡುವೆ ಒಂದು ಜಗಳ ಹುಟ್ಟಿತು. (ಆದಿಕಾಂಡ 13:5-7) ಇದರ ಕುರಿತು ಏನು ಮಾಡ ಸಾಧ್ಯವಿತ್ತು?
2 ಆ ಜಗಳವನ್ನು ಕೊನೆಗೊಳಿಸಲು, ಪ್ರತ್ಯೇಕವಾಗುವುದು ಒಳ್ಳೆಯದೆಂದು ಅಬ್ರಹಾಮನು ಸೂಚಿಸಿದನು, ಮತ್ತು ಲೋಟನಿಗೆ ಮೊದಲನೆಯ ಆಯ್ಕೆಯನ್ನು ಬಿಟ್ಟುಕೊಟ್ಟನು. ಅಬ್ರಹಾಮನು ಹಿರಿಯನಾಗಿದ್ದರೂ ಮತ್ತು ಅವನು ಉತ್ತಮ ಕ್ಷೇತ್ರವನ್ನು ಆದುಕೊಳ್ಳುವಂತೆ ಅವನ ಸೋದರಮಗನು ಬಿಟ್ಟುಕೊಡುವುದು ಯೋಗ್ಯವಾಗಿದ್ದರೂ, ಲೋಟನು ಅತ್ಯುತ್ತಮ ಪ್ರದೇಶವನ್ನು—ಯೊರ್ದನ್ ತಗ್ಗಿನ ಒಳ್ಳೇ ನೀರಾವರಿಯ ಪ್ರಾಂತ್ಯವನ್ನು ಆರಿಸಿಕೊಂಡನು. ಹೊರಗಣ ತೋರ್ಕೆಗಳು ಮೋಸಕರವಾಗಿದ್ದವು, ಯಾಕಂದರೆ ಸಮೀಪದಲ್ಲೇ ನೈತಿಕವಾಗಿ ಕೆಟ್ಟುಹೋಗಿದ್ದ ಸೊದೋಮ್ ಮತ್ತು ಗೊಮೋರ ಪಟ್ಟಣಗಳಿದ್ದವು. ಲೋಟ ಮತ್ತು ಅವನ ಕುಟುಂಬವು ಕೊನೆಗೆ ಸೊದೋಮಿಗೆ ಸ್ಥಳ ಬದಲಾಯಿಸಿದರು, ಮತ್ತು ಇದು ಅವರನ್ನು ಆತ್ಮಿಕ ಆಪತ್ತಿನಲ್ಲಿ ಹಾಕಿತು. ಅಷ್ಟಲ್ಲದೆ, ಅರಸ ಕೆದೊರ್ಲಗೋಮರನು ಮತ್ತು ಅವನ ಮಿತ್ರ ರಾಜರು ಸೊದೋಮಿನ ಅರಸನನ್ನು ಸೋಲಿಸಿದಾಗ, ಅವರನ್ನು ಬಂದಿಗಳಾಗಿ ತಕ್ಕೊಂಡು ಹೋದರು. ಅಬ್ರಹಾಮ ಮತ್ತು ಅವನ ಭಟರು ಅವರನ್ನು ಬಿಡಿಸಿದರು, ಆದರೆ ಲೋಟ ಮತ್ತು ಅವನ ಕುಟುಂಬವು ಸೊದೋಮಿಗೆ ಹಿಂತಿರುಗಿದರು.—ಆದಿಕಾಂಡ 13:8-13; 14:4-16.
3, 4. ದೇವರು ಸೊದೋಮ್ ಮತ್ತು ಗೊಮೋರವನ್ನು ನಾಶಮಾಡಿದಾಗ ಲೋಟ ಮತ್ತು ಅವನ ಕುಟುಂಬ ಸದಸ್ಯರಿಗೆ ಏನು ಸಂಭವಿಸಿತು?
3 ಸೊದೋಮ್ ಮತ್ತು ಗೊಮೋರದ ಲೈಂಗಿಕ ವಕ್ರತೆ ಮತ್ತು ನೈತಿಕ ಅವನತಿಯ ಕಾರಣ, ಆ ಪಟ್ಟಣಗಳನ್ನು ನಾಶಮಾಡಲು ಯೆಹೋವನು ನಿಶ್ಚಯಿಸಿದನು. ಆತನು ಕರುಣಾಪೂರ್ಣನಾಗಿ ಕಳುಹಿಸಿಕೊಟ್ಟ ಇಬ್ಬರು ದೇವದೂತರು ಲೋಟ, ಅವನ ಪತ್ನಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳನ್ನು ಸೊದೋಮಿನ ಹೊರಗೆ ಕರತಂದರು. ಅವರು ಹಿಂದಕ್ಕೆ ನೋಡಬಾರದಿತ್ತು, ಆದರೆ ಲೋಟನ ಪತ್ನಿಯು, ಪ್ರಾಯಶಃ ಹಿಂದೆಬಿಟ್ಟಿದ್ದ ಭೌತಿಕ ವಿಷಯಗಳಿಗಾಗಿ ಹಂಬಲಿಸಿ, ಹಿಂದೆ ನೋಡಿದಳು. ಅದೇ ಕ್ಷಣದಲ್ಲಿ ಆಕೆ ಉಪ್ಪಿನ ಕಂಬವಾಗಿ ಪರಿಣಮಿಸಿದಳು.—ಆದಿಕಾಂಡ 19:1-26.
4 ಲೋಟ ಮತ್ತು ಅವನ ಕುಮಾರ್ತೆಯರು ಎಂಥ ನಷ್ಟಗಳನ್ನು ಅನುಭವಿಸಿದರು! ತಾವು ಮದುವೆಯಾಗಲಿದ್ದ ಪುರುಷರನ್ನು ಆ ಹುಡುಗಿಯರು ಹಿಂದೆ ಬಿಟ್ಟುಬರಬೇಕಾಯಿತು. ಲೋಟನೀಗ ಪತ್ನಿರಹಿತನು ಮತ್ತು ಐಹಿಕ ಸಂಪತ್ತುರಹಿತನಾಗಿದ್ದನು. ವಾಸ್ತವದಲ್ಲಿ, ಕಟ್ಟಕಡೆಗೆ ಅವನು ತನ್ನ ಹೆಣ್ಣು ಮಕ್ಕಳೊಂದಿಗೆ ಗವಿಯಲ್ಲಿ ವಾಸಿಸುವ ಸ್ಥಿತಿಗಿಳಿದನು. (ಆದಿಕಾಂಡ 19:30-38) ಯಾವುದು ಅವನಿಗೆ ಅಷ್ಟು ಉತ್ತಮವಾಗಿ ಕಂಡಿತ್ತೋ ಅದು ಪೂರಾ ವಿರುದ್ಧವಾಗಿ ರುಜುವಾಯಿತು. ಅವನು ಕೆಲವು ಗಂಭೀರವಾದ ತಪ್ಪುಗಳನ್ನು ಮಾಡಿದ್ದನೆಂಬದು ವ್ಯಕ್ತವಾದರೂ, ಅವನನ್ನು ಅನಂತರ “ನೀತಿವಂತನಾದ ಲೋಟ” ಎಂದು ಕರೆಯಲಾಯಿತು. (2 ಪೇತ್ರ 2:7, 8) ಮತ್ತು ನಿಶ್ಚಯವಾಗಿಯೂ ಲೋಟನ ತಪ್ಪುಗಳಿಗೆ ಯೆಹೋವ ದೇವರು ಹೊಣೆಯಾಗಿರಲಿಲ್ಲ.
“ತನ್ನ ತಪ್ಪುಗಳನ್ನೆಲ್ಲಾ ತಿಳುಕೊಳ್ಳುವವನು ಯಾವನು?“
5. ತಪ್ಪುಗಳು ಮತ್ತು ದುರಹಂಕಾರದ ವಿಷಯದಲ್ಲಿ ದಾವೀದನ ಭಾವನೆ ಏನಾಗಿತ್ತು?
5 ಅಪೂರ್ಣರೂ ಪಾಪಿಗಳೂ ಆಗಿರುವ ಕಾರಣ, ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. (ರೋಮಾಪುರ 5:12; ಯಾಕೋಬ 3:2) ಲೋಟನಂತೆ, ಬಾಹ್ಯ ತೋರಿಕೆಗಳಿಂದ ನಾವು ಮೋಸಹೋಗಬಹುದು ಮತ್ತು ತೀರ್ಮಾನದಲ್ಲಿ ತಪ್ಪಬಹುದು. ಹೀಗೆ, ಕೀರ್ತನೆಗಾರ ದಾವೀದನು ಬೇಡಿಕೊಂಡದ್ದು: “ತನ್ನ ತಪ್ಪುಗಳನ್ನೆಲ್ಲಾ ತಿಳುಕೊಳ್ಳುವವನು ಯಾವನು? ಮರೆಯಾದವುಗಳಿಂದ ನನ್ನನ್ನು ನಿರ್ಮಲಮಾಡು. ಅದಲ್ಲದೆ ಬೇಕೆಂದು ಪಾಪ ಮಾಡದಂತೆ ನಿನ್ನ ದಾಸನನ್ನು ಕಾಪಾಡು. ಅಂಥ ಪಾಪಗಳು ನನ್ನನ್ನು ಆಳದಿರಲಿ. ಆಗ ನಾನು ತಪ್ಪಿಲ್ಲದವನಾಗಿ ಮಹಾ ದ್ರೋಹಕ್ಕೆ ಒಳಗಾಗುವದಿಲ್ಲ.” (ಕೀರ್ತನೆ 19:12, 13) ಯಾವುದರ ಅರಿವು ಸಹ ತನಗಿಲ್ಲವೋ ಅಂಥ ಪಾಪಗಳನ್ನು ತಾನು ಮಾಡಬಹುದೆಂದು ದಾವೀದನಿಗೆ ತಿಳಿದಿತ್ತು. ಆದಕಾರಣ, ತನ್ನಿಂದ ಸಹ ಮರೆಯಾಗಿರಬಹುದಾದ ದ್ರೋಹಗಳು ಕ್ಷಮಿಸಲ್ಪಡಬೇಕೆಂದು ಅವನು ಕೇಳಿಕೊಂಡನು. ಒಂದು ಕೆಟ್ಟ ಮಾರ್ಗವನ್ನು ತಕ್ಕೊಳ್ಳುವಂತೆ ಅವನ ಅಪೂರ್ಣ ಶರೀರವು ಒತ್ತಾಯಿಸಿದ ಕಾರಣ ಒಂದು ಗಂಭೀರ ಪಾಪವನ್ನು ಅವನು ಮಾಡಿದಾಗ, ಯೆಹೋವನ ಸಹಾಯವನ್ನು ಅವನು ಬಹಳವಾಗಿ ಅಪೇಕ್ಷಿಸಿದನು. ಬೇಕುಬೇಕೆಂದು ಪಾಪಮಾಡದಂತೆ ದೇವರು ತನ್ನನ್ನು ನಿರ್ಬಂಧಿಸುವಂತೆ ಅವನು ಬಯಸಿದ್ದನು. ದುರಹಂಕಾರವು ತನ್ನ ಪ್ರಧಾನ ಮನೋಭಾವನೆಯಾಗಿರುವಂತೆ ದಾವೀದನು ಬಯಸಲಿಲ್ಲ. ಬದಲಾಗಿ ಯೆಹೋವ ದೇವರಿಗೆ ತನ್ನ ಭಕ್ತಿಯಲ್ಲಿ ಸಂಪೂರ್ಣನಾಗಿರಲು ಅವನು ಅಪೇಕ್ಷಿಸಿದನು.
6. ಕೀರ್ತನೆ 103:10-14 ರಿಂದ ಯಾವ ಆದರಣೆಯನ್ನು ತಕ್ಕೊಳ್ಳ ಸಾಧ್ಯವಿದೆ?
6 ಯೆಹೋವನ ಪ್ರಚಲಿತ ಸಮರ್ಪಿತ ಸೇವಕರೋಪಾದಿ, ನಾವು ಸಹ ಅಸಂಪೂರ್ಣರು ಮತ್ತು ಆ ಕಾರಣದಿಂದಾಗಿ ತಪ್ಪುಗಳನ್ನು ಮಾಡುತ್ತೇವೆ. ಉದಾಹರಣೆಗಾಗಿ, ಲೋಟನಂತೆ, ನಮ್ಮ ನಿವಾಸಸ್ಥಾನದ ಸಂಬಂಧದಲ್ಲಿ ನಾವು ಒಂದು ಕೆಟ್ಟ ಆಯ್ಕೆಯನ್ನು ಮಾಡಬಹುದು. ಪ್ರಾಯಶಃ ದೇವರಿಗೆ ನಮ್ಮ ಪವಿತ್ರ ಸೇವೆಯನ್ನು ವಿಸ್ತರಿಸುವ ಒಂದು ಸಂದರ್ಭವನ್ನು ನಾವು ಉಪೇಕ್ಷಿಸಲೂಬಹುದು. ಯೆಹೋವನು ಇಂಥ ತಪ್ಪುಗಳನ್ನು ನೋಡುತ್ತಾನಾದರೂ, ನೀತಿಯ ಕಡೆಗೆ ಓಲಿರುವ ಹೃದಯವಿರುವವರನ್ನು ಆತನು ಬಲ್ಲವನಾಗಿದ್ದಾನೆ. ನಾವು ಗಂಭೀರ ಪಾಪ ಮಾಡಿದ್ದಾದರೂ ಪಶ್ಚಾತ್ತಾಪ ಪಟ್ಟಲ್ಲಿ, ಯೆಹೋವನು ಕ್ಷಮೆ ಮತ್ತು ಸಹಾಯವನ್ನು ಒದಗಿಸುತ್ತಾನೆ ಮತ್ತು ನಮ್ಮನ್ನು ದೈವಿಕ ವ್ಯಕ್ತಿಗಳಾಗಿ ವೀಕ್ಷಿಸುವುದನ್ನು ಮುಂದರಿಸುತ್ತಾನೆ. “ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ,” ಎಂದು ಘೋಷಿಸಿದ್ದಾನೆ ದಾವೀದನು. “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೂ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಅತನ ಕೃಪೆಯು ಅಷ್ಟು ಅಪಾರವಾಗಿದೆ. ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ತೆಗೆದು ಅಷ್ಟು ದೂರ ಮಾಡಿದ್ದಾನೆ. ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪು ಮಾಡಿಕೊಳ್ಳುತ್ತಾನೆ.” (ಕೀರ್ತನೆ 103:10-14) ನಮ್ಮ ಕರುಣೆಯುಳ್ಳ ಸ್ವರ್ಗೀಯ ತಂದೆಯು ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆಯೂ ನಮ್ಮನ್ನು ಶಕ್ತರನ್ನಾಗಿ ಮಾಡಬಹುದು ಅಥವಾ ಆತನ ಸ್ತುತಿಗಾಗಿ ನಮ್ಮ ಪವಿತ್ರ ಸೇವೆಯನ್ನು ವಿಸ್ತರಿಸುವಂತೆ ಇನ್ನೊಂದು ಸಂದರ್ಭವನ್ನು ಕೊಡಲೂಬಹುದು.
ದೇವರನ್ನು ದೂರುವುದರ ತಪ್ಪು
7. ನಾವು ಸಂಕಷ್ಟಗಳನ್ನು ಅನುಭವಿಸುವುದೇಕೆ?
7 ವಿಷಯಗಳು ಕೆಟ್ಟುಹೋಗುವಾಗ, ಏನು ಸಂಭವಿಸುತ್ತದೋ ಅದಕ್ಕಾಗಿ ಯಾರನ್ನಾದರೂ ಅಥವಾ ಯಾವುದನ್ನಾದರೂ ದೂರುವುದು ಮಾನವ ಪ್ರವೃತ್ತಿಯಾಗಿದೆ. ಕೆಲವರು ದೇವರನ್ನೂ ದೂರುತ್ತಾರೆ. ಆದರೆ ಯೆಹೋವನು ಅಂಥ ಸಂಕಟಗಳನ್ನು ಜನರ ಮೇಲೆ ತರುವುದಿಲ್ಲ. ಆತನು ಒಳ್ಳಿತನ್ನು ಮಾಡುವವನು, ಹಾನಿಕಾರಕ ವಿಷಯಗಳನ್ನಲ್ಲ. “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ. ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.” (ಮತ್ತಾಯ 5:45) ನಾವು ಕಷ್ಟಗಳನ್ನು ಅನುಭವಿಸುವುದು ಏಕೆಂಬದಕ್ಕೆ ಒಂದು ಪ್ರಾಮುಖ್ಯ ಕಾರಣವು, ಸ್ವಾರ್ಥಪರ ತತ್ವಗಳ ಮೇಲೆ ಕ್ರಿಯೆಗೈಯುವ ಮತ್ತು ಪಿಶಾಚನಾದ ಸೈತಾನನ ಅಧಿಕಾರದ ಕೆಳಗೆ ಬಿದ್ದಿರುವ ಒಂದು ಲೋಕದಲ್ಲಿ ನಾವು ಜೀವಿಸುವುದೇ.—1 ಯೋಹಾನ 5:19.
8. ವಿಷಯಗಳು ಅವನಿಗೆ ಸರಿಹೋಗದಾಗ ಆದಾಮನು ಮಾಡಿದ್ದೇನು?
8 ನಮ್ಮ ತಪ್ಪುಗಳು ನಮ್ಮ ಮೇಲೆ ತರುವ ಕಷ್ಟಾಪತ್ತುಗಳಿಗಾಗಿ ಯೆಹೋವ ದೇವರನ್ನು ದೂರುವುದು ಅವಿವೇಕವೂ ಅಪಾಯಕರವೂ ಆಗಿದೆ. ಹಾಗೆ ಮಾಡುವುದು ನಮ್ಮ ಜೀವವನ್ನು ತಾನೇ ನಷ್ಟಗೊಳಿಸಲೂಬಹುದು. ಮೊದಲನೆಯ ಮನುಷ್ಯನಾದ ಆದಾಮನು ತಾನು ಪಡೆದ ಎಲ್ಲಾ ಒಳ್ಳೇ ವಿಷಯಗಳಿಗಾಗಿ ದೇವರಿಗೆ ಪ್ರಶಸ್ತಿಯನ್ನು ಕೊಡಬೇಕಿತ್ತು. ಹೌದು, ಸ್ವತಃ ಜೀವಕ್ಕಾಗಿ ಮತ್ತು ಉದ್ಯಾನದಂಥ ಮನೆಯಾದ ಏದೆನ್ ತೋಟದಲ್ಲಿ ಆನಂದಿಸಿದ ಆಶೀರ್ವಾದಗಳಿಗಾಗಿ ಯೆಹೋವನಿಗೆ ಆಳವಾಗಿ ಕೃತಜ್ಞನಾಗಿರಬೇಕಿತ್ತು. (ಆದಿಕಾಂಡ 2:7-9) ಯೆಹೋವನಿಗೆ ಅವಿಧೇಯನಾಗಿ ನಿಷೇಧಿಸಲ್ಪಟ್ಟ ಹಣ್ಣನ್ನು ತಿಂದ ಕಾರಣ ವಿಷಯಗಳು ಕೆಟ್ಟಾಗ, ಆದಾಮನು ಮಾಡಿದ್ದೇನು? ಆದಾಮನು ದೇವರಿಗೆ ದೂರುಕೊಟ್ಟದ್ದು: “ನನ್ನ ಜೊತೆಯಲ್ಲಿರುವದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನು ತಿಂದೆನು.” (ಆದಿಕಾಂಡ 2:15-17; 3:1-12) ನಿಶ್ಚಯವಾಗಿಯೂ ನಾವು, ಆದಾಮನು ಮಾಡಿದಂತೆ, ಯೆಹೋವನನ್ನು ದೂರಬಾರದು.
9. (ಎ) ನಮ್ಮ ಅವಿವೇಕದ ಕ್ರಿಯೆಗಳ ಕಾರಣ ನಾವು ಕಷ್ಟಗಳನ್ನು ಎದುರಿಸಿದ್ದಾದರೆ, ಯಾವುದರಿಂದ ನಾವು ಆದರಣೆಯನ್ನು ತಕ್ಕೊಳ್ಳಬಹುದು? (ಬಿ) ಜ್ಞಾನೋಕ್ತಿ 19:3 ಕ್ಕೆ ಅನುಸಾರವಾಗಿ, ಕೆಲವರು ತಾವಾಗಿಯೇ ತಮ್ಮ ಮೇಲೆ ಕಷ್ಟಗಳನ್ನು ತರುವಾಗ ಏನು ಮಾಡುತ್ತಾರೆ?
9 ನಮ್ಮ ಕ್ರಿಯೆಗಳು ಅವಿವೇಕದ್ದಾಗಿರುವ ಕಾರಣ ನಾವು ಕಷ್ಟಪಡುತೇವ್ತಾದರೆ, ಯೆಹೋವನು ನಮ್ಮ ಬಲಹೀನತೆಗಳನ್ನು ನಮಗಿಂತ ಒಳ್ಳೆಯದಾಗಿ ತಿಳುಕೊಳ್ಳುತ್ತಾನೆ ಮತ್ತು ನಾವಾತನಿಗೆ ಸಂಪೂರ್ಣ ಭಕ್ತಿಯನ್ನು ಕೊಡುವುದಾದರೆ ಆತನು ನಮ್ಮನ್ನು ಆ ಸ್ಥಿತಿಯೊಳಗಿಂದ ಬಿಡಿಸುವನು ಎಂಬ ಅರಿವಿನಿಂದ ಆದರಣೆಯನ್ನು ಹೊಂದಬಹುದು. ನಾವು ನಮ್ಮ ಮೇಲೆ ತರುವ ಸಂಕಟಗಳಿಗೆ ಮತ್ತು ಕಷ್ಟಗಳಿಗಾಗಿ ದೇವರನ್ನೆಂದೂ ದೂರದೆ, ನಮಗೆ ದೊರೆಯುವ ದೈವಿಕ ಸಹಾಯವನ್ನು ನಾವು ಗಣ್ಯಮಾಡಬೇಕು. ಈ ಸಂಬಂಧದಲ್ಲಿ ಒಂದು ಸುಜ್ಞ ಜ್ಞಾನೋಕ್ತಿಯು ಹೇಳುವುದು: “ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು ಯೆಹೋವನ ಮೇಲೆ ಕುದಿಯುವನು.” (ಜ್ಞಾನೋಕ್ತಿ 19:3) ಇನ್ನೊಂದು ತರ್ಜುಮೆಯು ಅನ್ನುವುದು: “ಕೆಲವು ಜನರು ತಮ್ಮ ತಿಳಿಗೇಡಿ ಕೃತ್ಯಗಳಿಂದ ತಮ್ಮನ್ನು ಹಾಳುಮಾಡಿಕೊಂಡು ಅನಂತರ ಕರ್ತ ನನ್ನು ದೂರುತ್ತಾರೆ.” (ಟುಡೇಸ್ ಇಂಗ್ಲಿಷ್ ವರ್ಷನ್) ಮತ್ತೊಂದು ತರ್ಜುಮೆಯು ಹೇಳುವುದು: “ಒಬ್ಬ ಮನುಷ್ಯನ ಅಜ್ಞಾನವು ಅವನ ಕಾರ್ಯಾಧಿಗಳನ್ನು ಕೆಡಿಸುತ್ತದೆ ಮತ್ತು ಅವನು ಯೆಹೋವನ ವಿರುದ್ಧ ಕ್ರೋಧಿತನಾಗುತ್ತಾನೆ.”—ಬೈಯಿಂಗ್ಟನ್.
10. ಆದಾಮನ ಅವಿವೇಕತೆಯು ‘ಅವನ ಮಾರ್ಗವನ್ನು ವಕ್ರಗೊಳಿಸಿದ್ದು’ ಹೇಗೆ?
10 ಈ ಜ್ಞಾನೋಕ್ತಿಯ ತತ್ವಕ್ಕೆ ಹೊಂದಿಕೆಯಲ್ಲಿ, ಆದಾಮನು ಸ್ವಾರ್ಥತೆಯಿಂದ ಕಾರ್ಯನಡಿಸಿದನು ಮತ್ತು ತನ್ನ ಅವಿವೇಕದ ಆಲೋಚನೆಯಿಂದಾಗಿ ‘ತನ್ನ ಗತಿಯನ್ನು ಕೆಡಿಸಿಕೊಂಡನು.’ ಅವನ ಹೃದಯವು ಯೆಹೋವ ದೇವರಿಂದ ದೂರ ತೊಲಗಿತು, ಮತ್ತು ಅವನು ತನ್ನ ಸ್ವಂತ ಸ್ವಾರ್ಥಪರ, ಸ್ವತಂತ್ರ ಮಾರ್ಗದಲ್ಲಿ ಮುಂದರಿದನು. ಆದಾಮನು ಎಷ್ಟು ಕೃತಘ್ನನಾದನೆಂದರೆ ಅವನು ತನ್ನ ನಿರ್ಮಾಣಿಕನನ್ನೇ ದೂರಿ, ಹೀಗೆ ತನ್ನನ್ನು ಮಹೋನ್ನತನ ವೈರಿಯಾಗಿ ಮಾಡಿಕೊಂಡನು! ಆದಾಮನ ಪಾಪವು ಅವನ ಸ್ವಂತ ಮತ್ತು ಅವನ ಕುಟುಂಬದ ಮಾರ್ಗವನ್ನು ಧ್ವಂಸಗೊಳಿಸಿತು. ಇದರಲ್ಲಿ ಎಂತಹ ಎಚ್ಚರಿಕೆಯು ಅಡಕವಾಗಿರುತ್ತದೆ! ಅನಪೇಕ್ಷಣೀಯ ಪರಿಸ್ಥಿತಿಗಳಿಗಾಗಿ ದೇವರನ್ನು ಹೊಣೆಮಾಡುವ ಪ್ರವೃತ್ತಿಯುಳ್ಳವರು ತಮ್ಮನ್ನು ಹೀಗೆ ಕೇಳಿಕೊಳ್ಳುವುದು ಒಳ್ಳೆಯದು: ನಾನು ಆನಂದಿಸುವ ಸುವಿಷಯಗಳಿಗಾಗಿ ನಾನು ದೇವರಿಗೆ ಪ್ರಶಸ್ತಿಯನ್ನು ಕೊಡುತ್ತೇನೋ? ಆತನ ಸೃಷ್ಟಿಜೀವಿಗಳಲ್ಲಿ ಒಬ್ಬನೋಪಾದಿ ನನಗೆ ಇರುವ ಜೀವಕ್ಕಾಗಿ ನಾನು ಕೃತಜ್ಞನೋ? ನನ್ನ ಸ್ವಂತ ತಪ್ಪುಗಳೇ ನನ್ನ ಮೇಲೆ ಸಂಕಷ್ಟವನ್ನು ತಂದಿರಬಹುದೋ? ಆತನ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ತಿಳಿಸಿರುವ ಪ್ರಕಾರ, ಆತನ ಮಾರ್ಗದರ್ಶನೆಯನ್ನು ಪಾಲಿಸುವ ಕಾರಣ, ನಾನು ಯೆಹೋವನ ಅನುಗ್ರಹಕ್ಕೆ ಅಥವಾ ಸಹಾಯಕ್ಕೆ ಪಾತ್ರನೋ?
ದೇವರ ಸೇವಕರಿಗೂ ಒಂದು ಅಪಾಯ
11. ದೇವರ ಸಂಬಂಧದಲ್ಲಿ, ಒಂದನೆಯ ಶತಕದ ಯೆಹೂದ್ಯ ಧಾರ್ಮಿಕ ಮುಖಂಡರು ಯಾವುದಕ್ಕೆ ದೋಷಿಗಳಾಗಿದ್ದರು?
11 ಸಾ.ಶ. ಒಂದನೆಯ ಶತಮಾನದ ಯೆಹೂದ್ಯ ಧಾರ್ಮಿಕ ಮುಖಂಡರುಗಳು ದೇವರನ್ನು ಸೇವಿಸುತ್ತೇವೆಂದು ವಾದಿಸಿದರು, ಆದರೆ ಆತನ ಸತ್ಯವಾಕ್ಯವನ್ನು ಅಸಡ್ಡೆಮಾಡಿದರು ಮತ್ತು ತಮ್ಮ ಸ್ವಬುದ್ಧಿಯ ಮೇಲೆ ಆತುಕೊಂಡರು. (ಮತ್ತಾಯ 15:8, 9) ಅವರ ಕೆಟ್ಟ ಆಲೋಚನೆಯನ್ನು ಯೇಸು ಕ್ರಿಸ್ತನು ಬಯಲುಪಡಿಸಿದ್ದರಿಂದ, ಅವರು ಅವನನ್ನು ಮರಣಕ್ಕೆ ಒಪ್ಪಿಸಿಕೊಟ್ಟರು. ತದನಂತರ, ಆತನ ಶಿಷ್ಯರ ಕಡೆಗೆ ಕಟು ಕ್ರೋಧವನ್ನು ಪ್ರದರ್ಶಿಸಿದರು. (ಅ. ಕೃತ್ಯಗಳು 7:54-60) ಆ ಮನುಷ್ಯರ ಮಾರ್ಗಗಳು ಎಷ್ಟು ವಕ್ಕವಾಗಿದ್ದವೆಂದರೆ, ಅವರು ಕಾರ್ಯತಃ ಯೆಹೋವನ ವಿರುದ್ಧವಾಗಿಯೇ ಕ್ರೋಧಗೊಂಡರು.—ಅ. ಕೃತ್ಯಗಳು 5:34, 38, 39 ಹೋಲಿಸಿರಿ.
12. ಕ್ರೈಸ್ತ ಸಭೆಯೊಂದಿಗೆ ಜತೆಗೂಡಿದ ಕೆಲವು ವ್ಯಕ್ತಿಗಳು ಸಹ ತಮ್ಮ ಕಷ್ಟಗಳಿಗಾಗಿ ಯೆಹೋವನನ್ನು ದೂರಲು ಪ್ರಯತ್ನಿಸುತ್ತಾರೆಂದು ಯಾವ ಉದಾಹರಣೆಗಳು ತೋರಿಸುತ್ತವೆ?
12 ಕ್ರೈಸ್ತ ಸಭೆಯಲ್ಲಿ ಸಹ ಕೆಲವರು ವ್ಯಕ್ತಿಗಳು, ತಾವು ಎದುರಿಸಿದ ಸಂಕಟಗಳಿಗೆ ದೇವರು ಹೊಣೆಯೆಂದು ಹಿಡಿಯಲು ಪ್ರಯತ್ನಿಸುತ್ತಾ ಅಪಾಯಕರವಾದ ಆಲೋಚನೆಗಳನ್ನು ವಿಕಸಿಸಿಕೊಂಡಿದ್ದಾರೆ. ಉದಾಹರಣೆಗೆ, ಒಂದು ನಿರ್ದಿಷ್ಟ ಸಭೆಯ ನೇಮಿತ ಹಿರಿಯರುಗಳು ಒಬ್ಬಾಕೆ ಯುವ ವಿವಾಹಿತ ಸ್ತ್ರೀಗೆ ಒಬ್ಬ ಲೌಕಿಕ ಮನುಷ್ಯನೊಂದಿಗೆ ಸಹವಾಸ ಮಾಡುವ ವಿರುದ್ಧವಾಗಿ ದಯೆಯುಳ್ಳ ಆದರೆ ದೃಢತೆಯ ಶಾಸ್ತ್ರೀಯ ಸೂಚನೆಯನ್ನು ಕೊಡುವುದು ಅಗತ್ಯವೆಂದು ಕಂಡರು. ಒಂದು ಚರ್ಚೆಯ ಸಮಯದಲ್ಲಿ ಅವಳು, ಆ ಮನುಷ್ಯನೊಂದಿಗೆ ತನ್ನ ಸಹವಾಸದ ಮುಂದುವರಿಕೆಯು ತನ್ನ ಮೇಲೆ ತಂದ ಶೋಧನೆಯನ್ನು ಎದುರಿಸಲು ದೇವರು ಸಹಾಯ ಮಾಡದಕ್ಕಾಗಿ ದೇವರನ್ನು ದೂರಿದಳು. ನಾನು ದೇವರೆಡೆಗೆ ರೇಗಿಕೊಂಡೆನು ಎಂದಾಕೆ ಕಾರ್ಯತಃ ನುಡಿದಳು! ಶಾಸ್ತ್ರೀಯ ವಿವೇಚನೆ ಮತ್ತು ಅವಳಿಗೆ ನೆರವಾಗಲು ಪದೇ ಪದೇ ಮಾಡಲ್ಪಟ್ಟ ಪ್ರಯತ್ನಗಳು ವ್ಯರ್ಥವಾದವು, ಮತ್ತು ಒಂದು ಅನೈತಿಕ ಮಾರ್ಗವು ತದನಂತರ ಕ್ರೈಸ್ತ ಸಭೆಯಿಂದ ಅವಳ ಬಹಿಷ್ಕಾರಕ್ಕೆ ನಡಿಸಿತು.
13. ಒಂದು ದೂರಿಡುವ ಮನೋಭಾವವನ್ನು ಯಾಕೆ ವರ್ಜಿಸಬೇಕು?
13 ಆಪಾದಿಸುವ ಆತ್ಮವು ಒಬ್ಬ ವ್ಯಕ್ತಿಯನ್ನು ಯೆಹೋವನನ್ನು ದೂರಲು ನಡಿಸಬಹುದು. ಒಂದನೆಯ ಶತಕದ ಸಭೆಯೊಳಗೆ ನುಸುಳಿದ್ದ “ಭಕ್ತಿಹೀನ ಜನರು” ಆ ರೀತಿಯ ಕೆಟ್ಟ ಆತ್ಮವುಳ್ಳವರಾಗಿದ್ದರು, ಮತ್ತು ಅದು ಬೇರೆ ರೀತಿಯ ಆತ್ಮಿಕವಾದ ಭ್ರಷ್ಟ ಯೋಚನೆಯಿಂದ ಒಡಗೂಡಿತ್ತು. ಶಿಷ್ಯ ಯೂದನು ಹೇಳಿದಂತೆ, ಈ ಮನುಷ್ಯರು, “ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸುವವರೂ ನಮ್ಮ ಒಬ್ಬನೇ ಒಡೆಯನೂ ಕರ್ತನೂ ಆಗಿರುವ ಯೇಸು ಕ್ರಿಸ್ತನನ್ನು ಅರಿಯದವರೂ” ಆಗಿದ್ದರು. ಯೂದನು ಇದನ್ನೂ ಹೇಳಿದ್ದಾನೆ: “ಇವರು ಗುಣುಪಿಸುಗುಟ್ಟುವವರೂ ತಮ್ಮ ಗತಿಯನ್ನು ನಿಂದಿಸುವವರೂ . . . ಆಗಿದ್ದಾರೆ.” (ಯೂದ 3, 4, 16) ಯೆಹೋವನ ಕರ್ತವ್ಯನಿಷ್ಠ ಸೇವಕರು ತಮಗೆ ಒಂದು ಗಣ್ಯತಾಯುಕ್ತ ಭಾವವಿರುವಂತೆ ವಿವೇಕದಿಂದ ಪ್ರಾರ್ಥಿಸುತ್ತಾರೆ, ಕಟ್ಟಕಡೆಗೆ ದೇವರಲ್ಲಿ ನಂಬಿಕೆಯನ್ನು ಕಳಕೊಳ್ಳುವ ಬಿಂದುವಿಗೆ ನಡಿಸುವಷ್ಟು ಮನಸ್ಸು ಕೆಡಿಸಬಹುದಾದ ಮತ್ತು ಆತನೊಂದಿಗೆ ಅವರ ಸಂಬಂಧವನ್ನು ಅಪಾಯಕ್ಕೆ ಹಾಕಬಹುದಾದ ಗುಣುಪಿಸುಗುಟ್ಟುವ ಮನೋಭಾವಕ್ಕಾಗಿ ಅಲ್ಲ.
14. ಜೊತೆ ಕ್ರೈಸ್ತನಿಂದ ಮನನೋಯಿಸಲ್ಪಟ್ಟಲ್ಲಿ ಒಬ್ಬನು ಹೇಗೆ ಪ್ರತಿಕ್ರಿಯೆ ತೋರಿಸಬಹುದು, ಆದರೆ ಇದೇಕೆ ಯೋಗ್ಯ ಮಾರ್ಗವಾಗಿರಲಾರದು?
14 ಇದು ನಿಮಗೆ ಸಂಭವಿಸಲಾರದು ಎಂದು ನೀವು ಎಣಿಸಬಹುದು. ಆದರೂ, ನಮ್ಮ ಅಥವಾ ಇತರರ ತಪ್ಪುಗಳಿಂದಾಗಿ ಉಂಟಾಗುವ ಕೆಡುಕುಗಳು ಕಟ್ಟಕಡೆಗೆ ದೇವರನ್ನು ದೂರುವಂತೆ ನಮ್ಮನ್ನು ನಡಿಸಬಹುದು. ದೃಷ್ಟಾಂತಕ್ಕಾಗಿ, ಜೊತೆ ವಿಶ್ವಾಸಿಯೊಬ್ಬನು ಹೇಳುವ ಅಥವಾ ಮಾಡುವ ವಿಷಯಗಳಿಂದ ವ್ಯಕ್ತಿಯೊಬ್ಬನು ಕುಪಿತನಾಗಬಹುದು. ಕುಪಿತನಾದ ಆ ವ್ಯಕ್ತಿಯು—ಪ್ರಾಯಶಃ ಯೆಹೋವನನ್ನು ಅನೇಕ ವರ್ಷಗಳಿಂದ ಕರ್ತವ್ಯನಿಷ್ಠೆಯಿಂದ ಸೇವಿಸಿದವನು—ಆಗ ಹೀಗನ್ನಬಹುದು: ‘ಆ ವ್ಯಕ್ತಿಯು ಸಭೆಯಲ್ಲಿರುವುದಾದರೆ, ನಾನು ಕೂಟಗಳಿಗೆ ಹಾಜರಾಗಲಾರೆ.’ ವ್ಯಕ್ತಿಯೊಬ್ಬನು ಎಷ್ಟು ಮನಕಲಕಿಸಿಕೊಳ್ಳಬಹುದೆಂದರೆ ಅವನು ತನ್ನ ಹೃದಯದಲ್ಲಿ ಹೀಗೆ ಹೇಳಿಕೊಳ್ಳುತ್ತಾನೆ: ‘ಇಂಥ ವಿಷಯಗಳು ನಡಿಯುತ್ತಾ ಹೋದರೆ, ಸಭೆಯ ಭಾಗವಾಗಿರಲು ನಾನು ಬಯಸುವುದಿಲ್ಲ.’ ಆದರೆ ಕ್ರೈಸ್ತನೊಬ್ಬನಲ್ಲಿ ಆ ಮನೋಭಾವವು ಇರಬೇಕೋ? ಇನ್ನೊಬ್ಬ ಅಪೂರ್ಣ ಮಾನವನಿಂದಾಗಿ ಮನಸ್ಸು ನೊಂದಿದ್ದರೆ, ದೇವರಿಗೆ ಸ್ವೀಕರಣೀಯರೂ ಮತ್ತು ಆತನನ್ನು ನಿಷ್ಠೆಯಿಂದ ಸೇವಿಸುವವರೂ ಆಗಿರುವ ಜನರ ಇಡೀ ಸಭೆಯ ಮೇಲೆ ಯಾಕೆ ಕೋಪಗೊಳ್ಳಬೇಕು? ಯೆಹೋವನಿಗೆ ಸಮರ್ಪಣೆಯನ್ನು ಮಾಡಿರುವ ಯಾವನಾದರೂ ಆ ದೈವಿಕ ಚಿತ್ತವನ್ನು ಮಾಡುವುದನ್ನು ಯಾಕೆ ನಿಲ್ಲಿಸಬೇಕು ಮತ್ತು ಹೀಗೆ ದೇವರ ಮೇಲೆ ಯಾಕೆ ಕೋಪಗೊಳ್ಳಬೇಕು? ಒಬ್ಬ ವ್ಯಕ್ತಿಯು ಅಥವಾ ಹಲವಾರು ಪರಿಸ್ಥಿತಿಗಳು ಯೆಹೋವನೊಂದಿಗಿನ ಒಬ್ಬನ ಸುಸಂಬಂಧವನ್ನು ನಾಶಗೊಳಿಸುವಂತೆ ಬಿಡುವುದು ಎಷ್ಟು ವಿವೇಕಪ್ರದವು? ನಿಶ್ಚಯವಾಗಿಯೂ, ಯಾವ ಕಾರಣಕ್ಕಾಗಿಯಾದರೂ ಯೆಹೋವ ದೇವರನ್ನು ಆರಾಧಿಸುವುದನ್ನು ನಿಲ್ಲಿಸುವುದು ಮೂರ್ಖತನ ಮತ್ತು ಪಾಪಪೂರ್ಣವಾಗಿರುವುದು.—ಯಾಕೋಬ 4:17.
15, 16. ದಿಯೊತ್ರೇಫನು ಯಾವುದಕ್ಕೆ ದೋಷಿಯಾಗಿದ್ದನು, ಆದರೆ ಗಾಯನು ತನ್ನನ್ನು ಹೇಗೆ ನಡಿಸಿಕೊಂಡನು?
15 ಪ್ರೀತಿಯುಳ್ಳ ಕ್ರೈಸ್ತ ಗಾಯನು ಇದ್ದ ಅದೇ ಸಭೆಯಲ್ಲಿ ನೀವಿದ್ದೀರಿ ಎಂದು ಊಹಿಸಿಕೊಳ್ಳಿರಿ. ಸಂದರ್ಶಿಸುವ ಜೊತೆ ಆರಾಧಕರಿಗೆ—ಪೂರಾ ಅಪರಿಚಿತರಿಗೂ—ಅತಿಥಿ ಸತ್ಕಾರ ಮಾಡುವುದರಲ್ಲಿ ಅವನು “ಒಂದು ನಂಬಿಗಸ್ತ ಕೆಲಸವನ್ನು” ನಡಿಸುತ್ತಿದ್ದನು! ಆದರೆ ಪ್ರತ್ಯಕ್ಷವಾಗಿ ಅದೇ ಸಭೆಯಲ್ಲಿ, ದಿಯೊತ್ರೇಫನೆಂಬ ಬಿಂಕದ ಮನುಷ್ಯನೊಬ್ಬನಿದ್ದನು. ಯೇಸು ಕ್ರಿಸ್ತನ ಅಪೊಸ್ತಲರಲ್ಲಿ ಒಬ್ಬನಾದ ಯೋಹಾನನ ಮಾತನ್ನೂ ಅವನು ಅಂಗೀಕರಿಸತ್ತಿರಲಿಲ್ಲ. ವಾಸ್ತವದಲ್ಲಿ, ದಿಯೊತ್ರೇಫನು ಯೋಹಾನನ ಕುರಿತೂ ಕೆಟ್ಟಕೆಟ್ಟ ಮಾತುಗಳನ್ನಾಡಿದ್ದನು. ಅಪೊಸ್ತಲನು ಹೇಳಿದ್ದು: “ಇವೂ ಸಾಲದೆ, [ದಿಯೊತ್ರೇಫನು] [ತಾನೇ ಸಹೋದರರನ್ನು ಆದರದಿಂದ ಸೇರಿಸುವದಿಲ್ಲ NW], ತಾನು ಸಹೋದರರನ್ನು ಸೇರಿಸಿಕೊಳ್ಳಬೇಕೆಂದಿರುವವರಿಗೆ ಅಡಿಮ್ಡಾಡಿ ಅವರನ್ನು ಸಭೆಯೊಳಗಿಂದ ಬಹಿಷ್ಕರಿಸುತ್ತಾನೆ.”—3 ಯೋಹಾನ 1, 5-10.
16 ದಿಯೊತ್ರೇಫನು ಏನು ಮಾಡುತ್ತಿದ್ದನೋ ಆ ಕೃತ್ಯಗಳ ಕುರಿತು ಯೋಹಾನನು ಸಭೆಗೆ ಬಂದಾಗ ನೆನಪುಕೊಡಲು ಯೋಜಿಸಿದ್ದನು. ಆ ಮಧ್ಯೆ, ಗಾಯನು ಮತ್ತು ಆ ಸಭೆಯ ಇತರ ಅತಿಥಿ ಸತ್ಕಾರ ಭಾವದ ಕ್ರೈಸ್ತರು ಹೇಗೆ ಪ್ರತಿಕ್ರಿಯೆ ತೋರಿಸಿದರು? ‘ಎಷ್ಟರ ತನಕ ದಿಯೊತ್ರೇಫನು ಸಭೆಯಲ್ಲಿರುವನೋ ಆ ತನಕ ನಾನು ಅದರ ಭಾಗವಾಗಿರಲು ಬಯಸಲಾರೆ. ಕೂಟಗಳಲ್ಲಿ ನೀವು ನನ್ನನ್ನು ಕಾಣಲಾರಿರಿ,’ ಎಂದು ಯಾರೂ ಹೇಳಿದ್ದ ಶಾಸ್ತ್ರೀಯ ಸೂಚನೆಯು ಅಲ್ಲಿಲ್ಲ. ನಿಸ್ಸಂದೇಹವಾಗಿ ಗಾಯನು ಮತ್ತು ಅವನಂತಿದ್ದ ಇತರರು ದೃಢವಾಗಿ ನಿಂತರು. ದೈವಿಕ ಚಿತ್ತವನ್ನು ಮಾಡುವುದರಿಂದ ಯಾವುದಾದರೂ ತಮ್ಮನ್ನು ತಡೆಯುವಂತೆ ಅವರು ಬಿಡಲಿಲ್ಲ, ಮತ್ತು ಖಂಡಿತವಾಗಿಯೂ ಅವರು ಯೆಹೋವನ ವಿರುದ್ಧ ಕ್ರೋಧಿತರಾಗಲಿಲ್ಲ. ನಿಶ್ಚಯವಾಗಿಯೂ ಇಲ್ಲ, ಮತ್ತು ಒಂದುವೇಳೆ ಅವರು ಯೆಹೋವನಿಗೆ ಅಪನಂಬಿಗಸ್ತರಾಗುತ್ತಿದ್ದರೆ ಮತ್ತು ದೇವರನ್ನು ದೂರುತ್ತಿದ್ದರೆ ಯಾರು ಸಂತೋಷಪಡುತ್ತಿದ್ದನೋ, ಆ ಪಿಶಾಚನಾದ ಸೈತಾನನ ಕುಟಿಲ ತಂತ್ರೋಪಾಯಗಳಿಗೆ ಅವರು ಬಲಿಯಾಗಲಿಲ್ಲ.—ಎಫೆಸ 6:10-18.
ಯೆಹೋವನ ವಿರುದ್ಧ ಎಂದೂ ಕ್ರೋಧಿತರಾಗದಿರ್ರಿ!
17. ಯಾವನೇ ವ್ಯಕ್ತಿ ಯಾ ಯಾವುದೇ ಪರಿಸ್ಥಿತಿಯು ನಮ್ಮ ಮನನೋಯಿಸಿದರೆ ಅಥವಾ ಅಪ್ರಸನ್ನಗೊಳಿಸಿದರೆ ನಾವು ಹೇಗೆ ಪ್ರತಿಕ್ರಿಯೆ ತೋರಿಸಬೇಕು?
17 ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಪರಿಸ್ಥಿತಿಯು ದೇವರ ಸೇವಕನನ್ನು ಅಪ್ರಸನ್ನಗೊಳಿಸಿದರೆ ಅಥವಾ ಮನನೋಯಿಸಿದರೆ ಕೂಡ, ಮನನೊಂದವನು ಯೆಹೋವನ ಜನರೊಂದಿಗೆ ಸಹವಸಿಸುವುದನ್ನು ನಿಲ್ಲಿಸಿದಲ್ಲಿ ಅವನು ತನ್ನ ಸ್ವಂತ ಮಾರ್ಗವನ್ನು ನಿಜವಾಗಿ ವಕ್ರಗೊಳಿಸುವವನಾಗಿರುವನು. ಅಂಥ ವ್ಯಕ್ತಿಯು ಜ್ಞಾನೇಂದ್ರಿಯಗಳನ್ನು ಯೋಗ್ಯ ಉಪಯೋಗಕ್ಕೆ ಹಾಕುವವನಾಗಿರನು. (ಇಬ್ರಿಯ 5:14) ಆದ್ದರಿಂದ ಸಮಗ್ರತೆ ಪಾಲಕರೋಪಾದಿ ಎಲ್ಲಾ ಪ್ರತಿಕೂಲತೆಗಳನ್ನು ಎದುರಿಸಲು ನಿರ್ಧಾರವುಳ್ಳವರಾಗಿರಿ. ಯೆಹೋವನಿಗೆ, ಯೇಸು ಕ್ರಿಸ್ತನಿಗೆ, ಮತ್ತು ಕ್ರೈಸ್ತ ಸಭೆಗೆ ಕರ್ತವ್ಯನಿಷ್ಠೆಯನ್ನು ಕಾಪಾಡಿಕೊಳ್ಳಿರಿ. (ಇಬ್ರಿಯ 10:24, 25) ನಿತ್ಯಜೀವಕ್ಕೆ ನಡಿಸುವ ಸತ್ಯವು ಬೇರೆಲಿಯ್ಲೂ ಕಾಣಸಿಗಲಾರದು.
18. ದೈವಿಕ ವ್ಯವಹಾರಗಳನ್ನು ನಾವು ಯಾವಾಗಲೂ ತಿಳುಕೊಳ್ಳದಿದ್ದರೂ, ಯೆಹೋವ ದೇವರ ಸಂಬಂಧದಲ್ಲಿ ನಾವು ಯಾವ ಖಾತರಿಯಿಂದ ಇರಬಲ್ಲೆವು?
18 ಯೆಹೋವನು ಯಾರನ್ನೂ ಕೆಟ್ಟ ವಿಷಯಗಳಿಂದ ಎಂದೂ ಶೋಧಿಸುವುದಿಲ್ಲವೆಂಬದನ್ನೂ ನೆನಪಿನಲ್ಲಿಡಿರಿ. (ಯಾಕೋಬ 1:13) ಪ್ರೀತಿಯ ಸ್ವರೂಪವೇ ಆಗಿರುವ ದೇವರು, ವಿಶೇಷವಾಗಿ ತನ್ನನ್ನು ಪ್ರೀತಿಸುವವರಿಗೆ ಒಳ್ಳೇಯದನ್ನೇ ಮಾಡುತ್ತಾನೆ. (1 ಯೋಹಾನ 4:8) ದೈವಿಕ ವ್ಯವಹಾರಗಳನ್ನು ನಾವು ಯಾವಾಗಲೂ ತಿಳುಕೊಳ್ಳದೆ ಇದ್ದರೂ, ತನ್ನ ಸೇವಕರಿಗೆ ಯಾವುದು ಯೋಗ್ಯವೋ ಅದನ್ನು ಮಾಡುವುದಕ್ಕೆ ಯೆಹೋವ ದೇವರು ಎಂದೂ ತಪ್ಪಲಾರನು. ಪೇತ್ರನು ಹೇಳಿದಂತೆ: “ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು. ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:6, 7) ಹೌದು, ಯೆಹೋವನು ನಿಜವಾಗಿಯೂ ತನ್ನ ಜನರಿಗಾಗಿ ಚಿಂತಿಸುತ್ತಾನೆ.—ಕೀರ್ತನೆ 94:14.
19, 20. ನಮ್ಮ ಕಷ್ಟಗಳು ನಮ್ಮನ್ನು ಕೆಲವೊಮ್ಮೆ ಕುಗ್ಗಿಸಿಬಿಟ್ಟರೂ, ನಾವು ಹೇಗೆ ಕ್ರಿಯೆಗೈಯಬೇಕು?
19 ಆದುದರಿಂದ, ಯಾವುದಾದರೂ ಅಥವಾ ಯಾರಾದರೂ ನಿಮ್ಮನ್ನು ಮುಗ್ಗರಿಸುವಂತೆ ಬಿಡಬೇಡಿರಿ. ಕೀರ್ತನೆಗಾರನು ಅಷ್ಟು ಚೆನ್ನಾಗಿ ಹೇಳಿರುವಂತೆ, “ [ಯೆಹೋವ ದೇವರ] ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣ ಸಮಾಧಾನವಿರುತ್ತದೆ. ಅಂಥವರಿಗೆ ವಿಘ್ನಕರವಾದದೇನ್ದೂ ಇರುವದಿಲ್ಲ.” (ಕೀರ್ತನೆ 119:165) ನಾವೆಲ್ಲರೂ ಕಷ್ಟಗಳನ್ನು ಅನುಭವಿಸುತ್ತೇವೆ, ಮತ್ತು ಇವು ನಮ್ಮನ್ನು ಕೆಲವೊಮ್ಮೆ ಸ್ಪಲ್ಪಮಟ್ಟಿಗೆ ಖಿನ್ನರಾಗುವಂತೆ ಮತ್ತು ಎದೆಗುಂದುವಂತೆ ಮಾಡಬಹುದು. ಆದರೆ ಕಹಿಭಾವನೆಯು ನಿಮ್ಮ ಹೃದಯದಲ್ಲಿ, ವಿಶೇಷವಾಗಿ ಯೆಹೋವನಿಗೆ ವಿರುದ್ಧವಾಗಿ, ಎಂದೂ ಬೆಳೆಯುವಂತೆ ಬಿಡಬೇಡಿರಿ. (ಜ್ಞಾನೋಕ್ತಿ 4:23) ಆತನ ಸಹಾಯದೊಂದಿಗೆ ಮತ್ತು ಒಂದು ಶಾಸ್ತ್ರೀಯ ಆಧಾರದ ಮೇಲೆ, ನೀವು ನಿಭಾಯಿಸಬಲ್ಲ ಸಮಸ್ಯೆಗಳನ್ನು ನಿರ್ವಹಿಸಿರಿ ಮತ್ತು ಪಟ್ಟುಹಿಡಿದು ನಿಂತಿರುವವುಗಳನ್ನು ತಾಳಿಕೊಳ್ಳಿರಿ.—ಮತ್ತಾಯ 18:15-17; ಎಫೆಸ 4:26, 27.
20 ನಿಮ್ಮ ಭಾವೂದ್ರೇಕಗಳು ನಿಮ್ಮನ್ನು ಅವಿವೇಕದಿಂದ ಪ್ರತಿವರ್ತಿಸುವಂತೆ ಮತ್ತು ಹೀಗೆ ನಿಮ್ಮ ಮಾರ್ಗಗಳನ್ನು ವಕ್ರಗೊಳಿಸುವಂತೆ ಎಂದೂ ಬಿಡದಿರ್ರಿ. ದೇವರ ಹೃದಯವನ್ನು ಸಂತೋಷಪಡಿಸುವಂಥ ರೀತಿಯಲ್ಲಿ ಮಾತನಾಡಿರಿ ಮತ್ತು ನಡೆಯಿರಿ. (ಜ್ಞಾನೋಕ್ತಿ 27:11) ಆತನ ಸೇವಕರಲ್ಲಿ ಒಬ್ಬರಾದ ನಿಮಗಾಗಿ ಆತನು ನಿಜವಾಗಿಯೂ ಚಿಂತಿಸುತ್ತಾನೆ ಮತ್ತು ಆತನ ಜನರೊಂದಿಗೆ ಜೀವದ ದಾರಿಯಲ್ಲಿ ಉಳಿಯಲು ಬೇಕಾದ ತಿಳಿವಳಿಕೆಯನ್ನು ನಿಮಗೆ ಕೊಡುವನು ಎಂಬದನ್ನು ತಿಳಿದವರಾಗಿ, ಯೆಹೋವನಿಗೆ ಕಟ್ಟಾಸಕ್ತಿಯ ಪ್ರಾರ್ಥನೆಯಿಂದ ಮೊರೆಯಿಡಿರಿ. (ಜ್ಞಾನೋಕ್ತಿ 3:5, 6) ಎಲ್ಲದಕ್ಕಿಂತಲೂ ಹೆಚ್ಚಾಗಿ, ದೇವರ ವಿರುದ್ಧವಾಗಿ ರೇಗಬೇಡಿರಿ. ವಿಷಯಗಳು ಕೆಡುವಾಗ, ಯೆಹೋವನು ತಪ್ಪಿಗೆ ಹೊಣೆಗಾರನಲ್ಲವೆಂದು ಯಾವಾಗಲೂ ನೆನಪಿನಲ್ಲಿಡಿರಿ.
ನೀವು ಹೇಗೆ ಉತ್ತರಿಸುವಿರಿ?
▫ ಯಾವ ತಪ್ಪನ್ನು ಲೋಟನು ಮಾಡಿದನು, ಆದರೆ ದೇವರು ಅವನನ್ನು ಹೇಗೆ ವೀಕ್ಷಿಸಿದನು?
▫ ತಪ್ಪುಗಳ ಮತ್ತು ದುರಹಂಕಾರದ ವಿಷಯದಲ್ಲಿ ದಾವೀದನ ಅನಿಸಿಕೆಯೇನಾಗಿತ್ತು?
▫ ವಿಷಯಗಳು ಕೆಡುವಾಗ, ನಾವು ದೇವರನ್ನೇಕೆ ದೂರಬಾರದು?
▫ ಯೆಹೋವನ ವಿರುದ್ಧ ರೇಗುವವರಾಗದಂತೆ ದೂರವಿರಲು ನಮಗೆ ಯಾವುದು ಸಹಾಯಮಾಡುವುದು?
[ಪುಟ 15 ರಲ್ಲಿರುವ ಚಿತ್ರ]
ಅಬ್ರಹಾಮನಿಂದ ಪ್ರತ್ಯೇಕನಾದಾಗ, ಲೋಟನು ತನ್ನ ವಾಸಸ್ಥಳದ ಸಂಬಂಧದಲ್ಲಿ ಒಂದು ನ್ಯೂನ ನಿರ್ಣಯವನ್ನು ಮಾಡಿದನು