ದೇವದೂತರು—‘ಸಾರ್ವಜನಿಕ ಸೇವೆಗಾಗಿರುವ ಆತ್ಮಜೀವಿಗಳು’
“ಅವರೆಲ್ಲರೂ ರಕ್ಷಣೆಯನ್ನು ಹೊಂದಲಿಕ್ಕಿರುವವರ ಶುಶ್ರೂಷೆಗಾಗಿ ಕಳುಹಿಸಲ್ಪಡುವ ಸಾರ್ವಜನಿಕ ಸೇವೆಗಾಗಿರುವ ಶಕ್ತಿಶಾಲಿ ಆತ್ಮಜೀವಿಗಳಲ್ಲವೆ?”—ಇಬ್ರಿ. 1:14.
1. ಮತ್ತಾಯ 18:10 ಮತ್ತು ಇಬ್ರಿಯ 1:14ರಿಂದ ನಾವು ಯಾವ ಸಾಂತ್ವನ ಪಡೆಯಬಲ್ಲೆವು?
ಯೇಸು ಕ್ರಿಸ್ತನು, ತನ್ನ ಹಿಂಬಾಲಕರನ್ನು ಎಡವಿಹಾಕಬಹುದಾದ ಯಾವನಿಗೂ ಎಚ್ಚರಿಕೆ ಕೊಟ್ಟದ್ದು: “ನೀವು ಈ ಚಿಕ್ಕವರಲ್ಲಿ ಒಬ್ಬನನ್ನೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ; ಏಕೆಂದರೆ ಸ್ವರ್ಗದಲ್ಲಿರುವ ಅವರ ದೂತರು ಸ್ವರ್ಗದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂದು ನಿಮಗೆ ಹೇಳುತ್ತೇನೆ.” (ಮತ್ತಾ. 18:10) ನಂಬಿಗಸ್ತ ದೇವದೂತರಿಗೆ ಸೂಚಿಸುತ್ತಾ ಅಪೊಸ್ತಲ ಪೌಲನು ಬರೆದದ್ದು: “ಅವರೆಲ್ಲರೂ ರಕ್ಷಣೆಯನ್ನು ಹೊಂದಲಿಕ್ಕಿರುವವರ ಶುಶ್ರೂಷೆಗಾಗಿ ಕಳುಹಿಸಲ್ಪಡುವ ಸಾರ್ವಜನಿಕ ಸೇವೆಗಾಗಿರುವ ಶಕ್ತಿಶಾಲಿ ಆತ್ಮಜೀವಿಗಳಲ್ಲವೆ?” (ಇಬ್ರಿ. 1:14) ಈ ಮಾತುಗಳು, ದೇವರು ಈ ಸ್ವರ್ಗೀಯ ಜೀವಿಗಳನ್ನು ಬಳಸುತ್ತಾ ಮಾನವರಿಗೆ ಸಹಾಯ ಮಾಡುತ್ತಾನೆಂಬ ಸಾಂತ್ವನದಾಯಕ ಆಶ್ವಾಸನೆ ಕೊಡುತ್ತವೆ. ದೇವದೂತರ ಬಗ್ಗೆ ಬೈಬಲ್ ನಮಗೇನನ್ನುತ್ತದೆ? ಅವರು ನಮಗೆ ಹೇಗೆ ಸಹಾಯ ಮಾಡುತ್ತಾರೆ? ಅವರ ಮಾದರಿಯಿಂದ ನಾವೇನು ಕಲಿಯಬಹುದು?
2, 3. ಸ್ವರ್ಗೀಯ ಆತ್ಮಜೀವಿಗಳು ನಿರ್ವಹಿಸುವ ಕರ್ತವ್ಯಗಳಲ್ಲಿ ಕೆಲವು ಯಾವುವು?
2 ಸ್ವರ್ಗದಲ್ಲಿ ಕೋಟಿಗಟ್ಟಲೆ ನಂಬಿಗಸ್ತ ದೇವದೂತರಿದ್ದಾರೆ. ಅವರೆಲ್ಲರೂ ‘ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳು.’ (ಕೀರ್ತ. 103:20; ಪ್ರಕಟನೆ 5:11 ಓದಿ.) ದೇವಪುತ್ರರಾದ ಈ ಆತ್ಮಜೀವಿಗಳಿಗೆ ಒಂದು ವ್ಯಕ್ತಿತ್ವವಿದೆ, ದೈವಿಕ ಗುಣಗಳಿವೆ ಮತ್ತು ಇಚ್ಛಾಸ್ವಾತಂತ್ರ್ಯವಿದೆ. ಅವರನ್ನು ಅತ್ಯುತ್ಕೃಷ್ಟ ವಿಧದಲ್ಲಿ ಸಂಘಟಿಸಲಾಗಿದೆ ಮತ್ತು ದೇವರ ಏರ್ಪಾಡಿನಲ್ಲಿ ಅವರಿಗೆ ಉನ್ನತ ಸ್ಥಾನಗಳಿವೆ. ಅವರಲ್ಲಿ, ಪ್ರಧಾನ ದೇವದೂತನು ಮೀಕಾಯೇಲನು (ಸ್ವರ್ಗದಲ್ಲಿ ಯೇಸುವಿನ ಹೆಸರು). (ದಾನಿ. 10:13; ಯೂದ 9) “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿರುವ ಈತನು “ವಾಕ್ಯ” ಇಲ್ಲವೇ ದೇವರ ಪರವಾಗಿ ಮಾತಾಡುವ ವಕ್ತಾರನಾಗಿದ್ದಾನೆ. ಈತನ ಮೂಲಕ ಯೆಹೋವನು ಬೇರೆಲ್ಲವನ್ನು ಸೃಷ್ಟಿಮಾಡಿದನು.—ಕೊಲೊ. 1:15-17; ಯೋಹಾ. 1:1-3.
3 ಪ್ರಧಾನ ದೇವದೂತನ ನಂತರದ ಸ್ಥಾನದಲ್ಲಿರುವವರು ಸೆರಾಫಿಯರು. ಇವರು ಯೆಹೋವನ ಪರಿಶುದ್ಧತೆಯ ಬಗ್ಗೆ ಘೋಷಿಸುತ್ತಾರೆ ಮತ್ತು ಆತನ ಜನರು ಆತನ ಮಟ್ಟಗಳಿಗನುಸಾರ ಜೀವಿಸುವಂತೆ ಸಹಾಯಮಾಡುತ್ತಾರೆ. ತದನಂತರ ಇರುವವರು, ಕೆರೂಬಿಯರು. ಇವರು ದೇವರ ಪರಮಾಧಿಕಾರವನ್ನು ಎತ್ತಿಹಿಡಿಯುವವರಾಗಿದ್ದಾರೆ. (ಆದಿ. 3:24; ಯೆಶಾ. 6:1-3, 6, 7) ಉಳಿದವರು ದೇವದೂತರು ಇಲ್ಲವೇ ಸಂದೇಶವಾಹಕರು ಆಗಿದ್ದಾರೆ. ಇವರಿಗೆ ದೇವರ ಚಿತ್ತವನ್ನು ನಡೆಸುವುದರಲ್ಲಿ ಬೇರೆಬೇರೆ ಕರ್ತವ್ಯಗಳಿವೆ.—ಇಬ್ರಿ. 12:22, 23.
4. ಲೋಕಕ್ಕೆ ಅಸ್ತಿವಾರ ಹಾಕಲ್ಪಟ್ಟಾಗ ದೇವದೂತರ ಪ್ರತಿಕ್ರಿಯೆ ಏನಾಗಿತ್ತು, ಮತ್ತು ಇಚ್ಛಾಸ್ವಾತಂತ್ರ್ಯವನ್ನು ಸರಿಯಾಗಿ ಬಳಸಿದ್ದಲ್ಲಿ ಮಾನವರಿಗೆ ಏನು ಸಿಗುತ್ತಿತ್ತು?
4 ‘ಲೋಕಕ್ಕೆ ಅಸ್ತಿವಾರಹಾಕಲ್ಪಟ್ಟಾಗ’ ಎಲ್ಲ ದೇವದೂತರು ಹರ್ಷಿಸಿದರು. ಅಂತರಿಕ್ಷದಲ್ಲಿ ಒಂದು ಅಪೂರ್ವ ರತ್ನಮಣಿಯಂತಿರುವ ಈ ಭೂಮಿಯು ಮಾನವಕುಲದ ಬೀಡಾಗಿ ಮಾರ್ಪಡುತ್ತಿದ್ದಾಗ ಅವರು ತಮ್ಮ ತಮ್ಮ ನೇಮಿತ ಕೆಲಸಗಳನ್ನು ಮಾಡುವುದರಲ್ಲಿ ಉಲ್ಲಾಸಿಸಿದರು. (ಯೋಬ 38:4, 7) ಯೆಹೋವನು ಮನುಷ್ಯರನ್ನು “ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ” ಮಾಡಿದರೂ, ಅವರನ್ನು ತನ್ನ “ಸ್ವರೂಪದಲ್ಲಿ” ರಚಿಸಿದನು. ಹೀಗೆ ಅವರು ದೇವರ ಉನ್ನತವಾದ ಗುಣಗಳನ್ನು ಪ್ರತಿಬಿಂಬಿಸಲು ಶಕ್ತರಾದರು. (ಇಬ್ರಿ. 2:7; ಆದಿ. 1:26) ಇಚ್ಛಾಸ್ವಾತಂತ್ರ್ಯವೆಂಬ ವರವನ್ನು ಸರಿಯಾದ ರೀತಿಯಲ್ಲಿ ಬಳಸುವ ಮೂಲಕ ಆದಾಮಹವ್ವರು ಮತ್ತವರ ವಂಶಜರು, ಯೆಹೋವನ ವಿಶ್ವ ಕುಟುಂಬದ ಭಾಗವಾಗಿ ಪರದೈಸಿನಲ್ಲಿ ಜೀವನವನ್ನು ಆನಂದಿಸಬಹುದಿತ್ತು.
5, 6. ಸ್ವರ್ಗದಲ್ಲಿ ಯಾವ ದಂಗೆ ನಡೆಯಿತು, ಮತ್ತು ಇದಕ್ಕೆ ದೇವರ ಪ್ರತಿಕ್ರಿಯೆ ಏನಾಗಿತ್ತು?
5 ದೇವರ ಮನೆತನದಲ್ಲಿ ದಂಗೆ ಆರಂಭವಾಗುವುದನ್ನು ನೋಡಿ ಆ ಪವಿತ್ರ ದೇವದೂತರಿಗೆ ಖಂಡಿತ ಆಘಾತವಾಗಿದ್ದಿರಬೇಕು. ಅವರಲ್ಲೇ ಒಬ್ಬನು, ಯೆಹೋವನನ್ನು ಸ್ತುತಿಸುವುದರಲ್ಲಿ ತೃಪ್ತನಾಗದೇ, ಸ್ವತಃ ತನಗೆ ಆರಾಧನೆಯನ್ನು ಬಯಸಿದನು. ಆ ದೇವದೂತನು ಯೆಹೋವನ ಆಳ್ವಿಕೆಯ ಯುಕ್ತತೆಯನ್ನು ಪ್ರಶ್ನಿಸಿ, ತನ್ನದೇ ಆದ ಒಂದು ಪ್ರತಿಸ್ಪರ್ಧಿ ಪರಮಾಧಿಕಾರವನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯಿಂದ ಕ್ರಿಯೆಗೈದನು. ಹೀಗೆ ಅವನು ತನ್ನನ್ನೇ ಸೈತಾನನನ್ನಾಗಿ (“ಪ್ರತಿಭಟಕ” ಎಂದರ್ಥ) ಮಾಡಿಕೊಂಡನು. ದಾಖಲೆಯಾಗಿರುವುದರಲ್ಲೇ ಪ್ರಪ್ರಥಮ ಸುಳ್ಳನ್ನಾಡಿ ಸೈತಾನನು ಕುಟಿಲತೆಯಿಂದ, ಪ್ರಥಮ ಮಾನವ ಜೋಡಿಯು ಅವರ ಪ್ರೀತಿಪರ ಸೃಷ್ಟಿಕರ್ತನ ವಿರುದ್ಧ ದಂಗೆಯೇಳುವುದರಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ಮಾಡಿದನು.—ಆದಿ. 3:4, 5; ಯೋಹಾ. 8:44.
6 ಯೆಹೋವನು ಆ ಕೂಡಲೇ ಸೈತಾನನ ವಿರುದ್ಧ ಹೊರಡಿಸಿದ ನ್ಯಾಯತೀರ್ಪನ್ನು ಬೈಬಲಿನ ಈ ಪ್ರಥಮ ಪ್ರವಾದನೆಯಲ್ಲಿ ತಿಳಿಸಲಾಗಿದೆ: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿ. 3:15) ಸೈತಾನನಿಗೂ ದೇವರ “ಸ್ತ್ರೀಗೂ” ವೈರತ್ವ ಇರಲಿತ್ತು. ಈ ಸ್ತ್ರೀ, ನಂಬಿಗಸ್ತ ಆತ್ಮಜೀವಿಗಳ ಸ್ವರ್ಗೀಯ ಸಂಘಟನೆಯಾಗಿದ್ದು ಯೆಹೋವನು ಆಕೆಯನ್ನು ಗಂಡನಂತಿರುವ ತನ್ನೊಂದಿಗೆ ಬೆಸೆದಿರುವ ಪ್ರಿಯ ಪತ್ನಿಯಾಗಿ ದೃಷ್ಟಿಸುತ್ತಾನೆ. ಈ ಪ್ರವಾದನೆಯ ವಿವರಗಳು “ಪವಿತ್ರ ರಹಸ್ಯ”ವಾಗಿ ಉಳಿದು ಹಂತಹಂತವಾಗಿ ಪ್ರಕಟವಾಗಲಿದ್ದವಾದರೂ ಅದು ನಿರೀಕ್ಷೆಗೆ ದೃಢ ಆಧಾರವನ್ನು ಕೊಟ್ಟಿತು. ತನ್ನ ಸ್ವರ್ಗೀಯ ಸಂಘಟನೆಗೆ ಸೇರಿದವನೊಬ್ಬನಿಂದ ಆ ಎಲ್ಲ ದಂಗೆಕೋರರನ್ನು ದಮನಮಾಡಲು ಮತ್ತು ಅವನ ಮೂಲಕ “ಸ್ವರ್ಗದಲ್ಲಿರುವ ವಿಷಯಗಳನ್ನೂ ಭೂಮಿಯಲ್ಲಿರುವ ವಿಷಯಗಳನ್ನೂ” ಒಂದಾಗಿಸಲು ಯೆಹೋವನು ಉದ್ದೇಶಿಸಿದನು.—ಎಫೆ. 1:8-10.
7. ನೋಹನ ದಿನದಲ್ಲಿ ಕೆಲವು ದೇವದೂತರು ಏನು ಮಾಡಿದರು, ಮತ್ತು ಅವರಿಗೇನಾಯಿತು?
7 ನೋಹನ ದಿನಗಳಲ್ಲಿ ಹಲವಾರು ದೂತರು ಭೂಮಿ ಮೇಲೆ ಸ್ವಾರ್ಥ ಭೋಗಗಳಿಗೋಸ್ಕರ ತಮ್ಮ “ಸೂಕ್ತವಾದ ವಾಸಸ್ಥಳವನ್ನು” ಬಿಟ್ಟು, ಮಾನವ ದೇಹಧರಿಸಿ ಬಂದರು. (ಯೂದ 6; ಆದಿ. 6:1-4) ಆದ್ದರಿಂದ ಯೆಹೋವನು ಆ ದಂಗೆಕೋರರನ್ನು ದಟ್ಟವಾದ ಕತ್ತಲೆಯೊಳಕ್ಕೆ ದೊಬ್ಬಿದನು. ಹೀಗೆ ಅವರು ಸೈತಾನನೊಂದಿಗೆ ಒಂದಾಗಿ “ದುಷ್ಟಾತ್ಮ ಸೇನೆ”ಗಳೂ ದೇವರ ಸೇವಕರ ಬದ್ಧ ವೈರಿಗಳೂ ಆಗಿದ್ದಾರೆ.—ಎಫೆ. 6:11-13; 2 ಪೇತ್ರ 2:4.
ದೇವದೂತರು ನಮಗೆ ನೆರವಾಗುವುದು ಹೇಗೆ?
8, 9. ಮಾನವರಿಗೆ ನೆರವು ನೀಡಲು ಯೆಹೋವನು ಹೇಗೆ ದೇವದೂತರನ್ನು ಬಳಸಿದ್ದಾನೆ?
8 ಅಬ್ರಹಾಮ, ಯಾಕೋಬ, ಮೋಶೆ, ಯೆಹೋಶುವ, ಯೆಶಾಯ, ದಾನಿಯೇಲ, ಯೇಸು, ಪೇತ್ರ, ಯೋಹಾನ ಮತ್ತು ಪೌಲರಿಗೆ ದೇವದೂತರು ಸೇವೆಮಾಡಿದರು. ನಂಬಿಗಸ್ತ ದೇವದೂತರು ದೇವರ ತೀರ್ಪುಗಳನ್ನು ಜಾರಿಗೊಳಿಸಿದರು, ಪ್ರವಾದನೆಗಳನ್ನೂ ನಿರ್ದೇಶನಗಳನ್ನೂ ದಾಟಿಸಿದರು. ಇದರಲ್ಲಿ ಮೋಶೆಯ ಧರ್ಮಶಾಸ್ತ್ರವನ್ನು ರವಾನಿಸಿದ್ದೂ ಸೇರಿದೆ. (2 ಅರ. 19:35; ದಾನಿ. 10:5, 11, 14; ಅ. ಕಾ. 7:53; ಪ್ರಕ. 1:1) ಇಂದು ನಮ್ಮ ಬಳಿ ದೇವರ ಇಡೀ ವಾಕ್ಯವಿರುವುದರಿಂದ, ದೈವಿಕ ಸಂದೇಶಗಳನ್ನು ದೇವದೂತರು ದಾಟಿಸಬೇಕಾಗಿಲ್ಲ. (2 ತಿಮೊ. 3:16, 17) ಹಾಗಿದ್ದರೂ, ತೆರೆಮರೆಯಲ್ಲೋ ಎಂಬಂತೆ ದೇವದೂತರು ದೈವಿಕ ಚಿತ್ತವನ್ನು ಪೂರೈಸುವುದರಲ್ಲಿ ಮತ್ತು ದೇವರ ಸೇವಕರನ್ನು ಬೆಂಬಲಿಸುವುದರಲ್ಲಿ ತುಂಬ ಕಾರ್ಯಮಗ್ನರಾಗಿದ್ದಾರೆ.
9 ಬೈಬಲ್ ಆಶ್ವಾಸನೆ ಕೊಡುವುದು: “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.” (ಕೀರ್ತ. 34:7; 91:11) ಯೆಹೋವನು, ಸಮಗ್ರತೆಯ ವಿವಾದಾಂಶದಿಂದಾಗಿ ನಮ್ಮ ಮೇಲೆ ಎಲ್ಲ ಪ್ರಕಾರದ ಸಂಕಷ್ಟಗಳನ್ನು ತರಲು ಸೈತಾನನನ್ನು ಅನುಮತಿಸುತ್ತಾನೆ. (ಲೂಕ 21:16-19) ಆದರೆ ನಮ್ಮ ಮೇಲೆ ಬಂದ ಪರೀಕ್ಷೆಯ ಯಾವ ಹಂತದಲ್ಲಿ ನಮ್ಮ ಸಮಗ್ರತೆ ರುಜುವಾಗಿದೆ ಎಂಬುದು ದೇವರಿಗೆ ಗೊತ್ತು. (1 ಕೊರಿಂಥ 10:13 ಓದಿ.) ಆ ಹಂತದಲ್ಲಿ, ಆತನ ಚಿತ್ತಾನುಸಾರ ಮಧ್ಯಪ್ರವೇಶಿಸಲು ದೇವದೂತರು ಸದಾ ಸಿದ್ಧರಾಗಿರುತ್ತಾರೆ. ಉದಾಹರಣೆಗೆ ಅವರು ಶದ್ರಕ್, ಮೆಶಕ್, ಅಬೇದ್ನೆಗೋ, ದಾನಿಯೇಲ ಮತ್ತು ಪೇತ್ರನನ್ನು ರಕ್ಷಿಸಿದರು, ಆದರೆ ಸ್ತೆಫನ ಮತ್ತು ಯಾಕೋಬರು ವೈರಿಗಳಿಂದ ಕೊಲ್ಲಲ್ಪಡದಂತೆ ರಕ್ಷಿಸಲಿಲ್ಲ. (ದಾನಿ. 3:17, 18, 28; 6:22; ಅ. ಕಾ. 7:59, 60; 12:1-3, 7, 11) ಏಕೆಂದರೆ ಪರಿಸ್ಥಿತಿಗಳು ಮತ್ತು ಪರೀಕ್ಷೆಗಳು ಭಿನ್ನಭಿನ್ನವಾಗಿದ್ದವು. ಅದೇ ರೀತಿಯಲ್ಲಿ, ನಾಸಿ ಸೆರೆಶಿಬಿರಗಳಲ್ಲಿದ್ದ ನಮ್ಮ ಸಹೋದರರಲ್ಲಿ ಕೆಲವರ ಹತ್ಯೆಯಾಯಿತು ಆದರೆ ಹೆಚ್ಚಿನವರು ಪಾರಾಗುವಂತೆ ಯೆಹೋವನು ನೋಡಿಕೊಂಡನು.
10. ದೇವದೂತರ ಸಹಾಯದ ಜೊತೆಗೆ ನಮಗೆ ಇನ್ಯಾವ ವಿಧದಲ್ಲಿ ನೆರವು ಸಿಗಬಹುದು?
10 ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಒಬ್ಬ ರಕ್ಷಕ ದೂತನಿದ್ದಾನೆಂದು ಬೈಬಲ್ ಕಲಿಸುವುದಿಲ್ಲ. “ನಾವು ಆತನ [ದೇವರ] ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ” ಭರವಸೆಯೊಂದಿಗೆ ನಾವು ಪ್ರಾರ್ಥಿಸುತ್ತೇವೆ. (1 ಯೋಹಾ. 5:14) ನಮಗೆ ಸಹಾಯಮಾಡಲು ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಶಕ್ತನು ನಿಜ. ಆದರೆ ಆತನಿಂದ ಸಹಾಯ ಬೇರೊಂದು ವಿಧದಲ್ಲೂ ಬರಬಹುದು. ನಮಗೆ ಸಹಾಯ ಹಾಗೂ ಸಾಂತ್ವನ ನೀಡಲು ಜೊತೆ ಕ್ರೈಸ್ತರು ಪ್ರಚೋದಿತರಾಗಬಹುದು. ಇಲ್ಲವೇ “ಸೈತಾನನ ಒಬ್ಬ ದೂತ” ನಮ್ಮನ್ನು ಹೊಡೆಯುತ್ತಿದ್ದಾನೋ ಎಂಬಂತೆ ‘ಶರೀರದಲ್ಲಿ ಒಂದು ಮುಳ್ಳು’ ನಮ್ಮನ್ನು ಬಾಧಿಸುತ್ತಿರಬಹುದು ಮತ್ತು ಅದನ್ನು ಸಹಿಸಲು ಬೇಕಾದ ವಿವೇಕ ಹಾಗೂ ಆಂತರಿಕ ಬಲವನ್ನು ದೇವರು ಕೊಡುವನು.—2 ಕೊರಿಂ. 12:7-10; 1 ಥೆಸ. 5:14.
ಯೇಸುವನ್ನು ಅನುಕರಿಸಿ
11. ಯೇಸುವಿಗೆ ಸಹಾಯಮಾಡಲು ದೇವದೂತರನ್ನು ಹೇಗೆ ಉಪಯೋಗಿಸಲಾಯಿತು, ಮತ್ತು ದೇವರಿಗೆ ನಂಬಿಗಸ್ತನಾಗಿರುವ ಮೂಲಕ ಅವನೇನನ್ನು ಸಾಧಿಸಿದನು?
11 ಯೇಸುವಿನ ವಿಷಯದಲ್ಲಿ ಯೆಹೋವನು ದೇವದೂತರನ್ನು ಹೇಗೆ ಬಳಸಿದನೆಂಬುದನ್ನು ಪರಿಗಣಿಸಿ. ಅವನ ಜನನ ಮತ್ತು ಪುನರುತ್ಥಾನದ ಕುರಿತಾಗಿ ದೇವದೂತರೇ ಘೋಷಿಸಿದರು. ಅಲ್ಲದೆ ಭೂಮಿಯಲ್ಲಿದ್ದಾಗ ಅವರು ಅವನಿಗೆ ನೆರವು ನೀಡಿದರು. ದೇವದೂತರು ಅವನ ದಸ್ತಗಿರಿಯನ್ನೂ ಕ್ರೂರ ಮರಣವನ್ನೂ ತಡೆಯಲು ಶಕ್ತರಾಗಿದ್ದರು. ಆದರೆ ಹಾಗೆ ಮಾಡುವ ಬದಲು, ಅವನನ್ನು ಬಲಪಡಿಸಲು ಒಬ್ಬ ದೇವದೂತನನ್ನು ಕಳುಹಿಸಲಾಯಿತು. (ಮತ್ತಾ. 28:5, 6; ಲೂಕ 2:8-11; 22:43) ಯೆಹೋವನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಯೇಸು ಒಂದು ಯಜ್ಞಾರ್ಪಿತ ಮರಣಕ್ಕೆ ಒಳಗಾದನು. ಹೀಗೆ, ಒಬ್ಬ ಪರಿಪೂರ್ಣ ಮನುಷ್ಯನು ಅತೀ ತೀಕ್ಷ್ಣ ಪರೀಕ್ಷೆಯ ಕೆಳಗೂ ಸಮಗ್ರತೆ ಕಾಪಾಡಿಕೊಳ್ಳಬಲ್ಲನೆಂದು ಸಾಬೀತುಪಡಿಸಿದನು. ಈ ಕಾರಣದಿಂದಲೇ ಯೆಹೋವನು ಯೇಸುವನ್ನು ಸ್ವರ್ಗದಲ್ಲಿ ಅಮರ ಜೀವನಕ್ಕೆ ಎಬ್ಬಿಸಿ, ಅವನಿಗೆ “ಎಲ್ಲ ಅಧಿಕಾರವನ್ನು” ಕೊಟ್ಟು, ದೇವದೂತರನ್ನು ಅವನಿಗೆ ಅಧೀನಪಡಿಸಿದನು. (ಮತ್ತಾ. 28:18; ಅ. ಕಾ. 2:32; 1 ಪೇತ್ರ 3:22) ಹೀಗೆ ಯೇಸು, ದೇವರ ‘ಸ್ತ್ರೀಯ ಸಂತಾನದ’ ಪ್ರಧಾನ ಭಾಗವಾಗಿ ರುಜುವಾದನು.—ಆದಿ. 3:15; ಗಲಾ. 3:16.
12. ಯೇಸುವಿನ ಸಮತೂಕದ ಮಾದರಿಯನ್ನು ನಾವು ಯಾವ ವಿಧದಲ್ಲಿ ಅನುಕರಿಸಬಲ್ಲೆವು?
12 ದೇವದೂತರು ರಕ್ಷಿಸುತ್ತಾರೆಂಬದಾಗಿ ನೆನಸುತ್ತಾ ಅನಾವಶ್ಯಕವಾಗಿ ಜೀವವನ್ನು ಅಪಾಯಕ್ಕೊಡ್ಡಿ ಯೆಹೋವನನ್ನು ಪರೀಕ್ಷಿಸುವುದು ತಪ್ಪೆಂದು ಯೇಸುವಿಗೆ ತಿಳಿದಿತ್ತು. (ಮತ್ತಾಯ 4:5-7 ಓದಿ.) ನಾವು ಸಹ ಹಿಂಸೆಯನ್ನು ಭರವಸೆಯಿಂದ ಎದುರಿಸುತ್ತೇವಾದರೂ ಅನಾವಶ್ಯಕವಾಗಿ ನಮ್ಮ ಮೇಲೆ ಅಪಾಯವನ್ನು ತಂದುಕೊಳ್ಳದೆ “ಸ್ವಸ್ಥಬುದ್ಧಿಯಿಂದ” ಜೀವಿಸುವ ಮೂಲಕ ಯೇಸುವಿನ ಮಾದರಿಯನ್ನು ಅನುಕರಿಸೋಣ.—ತೀತ 2:12.
ನಂಬಿಗಸ್ತ ದೇವದೂತರಿಂದ ನಾವೇನು ಕಲಿಯಬಹುದು?
13. ಎರಡನೇ ಪೇತ್ರ 2:9-11ರಲ್ಲಿ ತಿಳಿಸಲಾಗಿರುವ ನಂಬಿಗಸ್ತ ದೇವದೂತರ ಮಾದರಿಯಿಂದ ನಾವೇನು ಕಲಿಯಬಹುದು?
13 ಯೆಹೋವನ ಅಭಿಷಿಕ್ತ ಸೇವಕರ ಬಗ್ಗೆ “ದೂಷಣಾತ್ಮಕವಾಗಿ ಮಾತಾಡು”ವವರನ್ನು ಗದರಿಸುವಾಗ ಅಪೊಸ್ತಲ ಪೇತ್ರನು ನಂಬಿಗಸ್ತ ದೇವದೂತರ ಉತ್ತಮ ಮಾದರಿಗೆ ಕೈತೋರಿಸಿದನು. ಅವರಿಗೆ ತುಂಬ ಶಕ್ತಿಯಿದ್ದರೂ, “ಯೆಹೋವನ ಕಡೆಗಿರುವ ಗೌರವದ ಕಾರಣದಿಂದ” ಅವರು ದೀನತೆ ತೋರಿಸುತ್ತಾ ಟೀಕಾತ್ಮಕ ಆರೋಪಗಳನ್ನು ಮಾಡುವುದಿಲ್ಲ. (2 ಪೇತ್ರ 2:9-11 ಓದಿ.) ನಾವು ಸಹ ಇತರರನ್ನು ಅಯೋಗ್ಯವಾಗಿ ಟೀಕಿಸುವುದರಿಂದ ದೂರವಿದ್ದು, ಸಭೆಯಲ್ಲಿ ಮೇಲ್ವಿಚಾರಣೆಯ ಸ್ಥಾನದಲ್ಲಿರುವವರನ್ನು ಗೌರವಿಸೋಣ ಮತ್ತು ಸರ್ವೋಚ್ಛ ನ್ಯಾಯಾಧಿಪತಿಯಾದ ಯೆಹೋವನ ಕೈಗಳಲ್ಲಿ ವಿಷಯಗಳನ್ನು ಬಿಟ್ಟುಬಿಡೋಣ.—ರೋಮ. 12:18, 19; ಇಬ್ರಿ. 13:17.
14. ದೀನಭಾವದಿಂದ ಸೇವೆ ಸಲ್ಲಿಸುವ ವಿಷಯದಲ್ಲಿ ದೇವದೂತರು ಯಾವ ಮಾದರಿಯನ್ನಿಟ್ಟಿದ್ದಾರೆ?
14 ಯೆಹೋವನ ದೂತರು, ದೀನಭಾವದಿಂದ ಸೇವೆಸಲ್ಲಿಸುವ ವಿಷಯದಲ್ಲಿ ಉತ್ತಮ ಮಾದರಿಗಳಾಗಿದ್ದಾರೆ. ಕೆಲವು ದೇವದೂತರಿಗೆ ಮನುಷ್ಯರು ಅವರ ಹೆಸರುಗಳನ್ನು ಕೇಳಿದಾಗ ಅದನ್ನವರು ಹೇಳಲಿಲ್ಲ. (ಆದಿ. 32:29; ನ್ಯಾಯ. 13:17, 18) ಪರಲೋಕದಲ್ಲಿ ಕೋಟಿಗಟ್ಟಲೆ ಆತ್ಮಜೀವಿಗಳಿದ್ದರೂ, ಮೀಕಾಯೇಲ ಮತ್ತು ಗಬ್ರಿಯೇಲ ಎಂಬ ಎರಡು ಹೆಸರುಗಳನ್ನು ಮಾತ್ರ ಬೈಬಲ್ ತಿಳಿಸುತ್ತದೆ. ಇದು, ನಾವು ದೇವದೂತರಿಗೆ ಅನುಚಿತ ಗೌರವ ಕೊಡದಂತೆ ತಡೆಯುತ್ತದೆ. (ಲೂಕ 1:26; ಪ್ರಕ. 12:7) ಅಪೊಸ್ತಲ ಯೋಹಾನನು ದೇವದೂತನೊಬ್ಬನ ಮುಂದೆ ಅಡ್ಡಬಿದ್ದಾಗ, ಅವನಿಗೆ ಹೀಗೆ ಬುದ್ಧಿವಾದ ಹೇಳಲಾಯಿತು: “ಜಾಗ್ರತೆ! ಹಾಗೆ ಮಾಡಬೇಡ! ನಾನು ನಿನಗೂ ಪ್ರವಾದಿಗಳಾದ ನಿನ್ನ ಸಹೋದರರಿಗೂ . . . ಜೊತೆ ದಾಸನಾಗಿದ್ದೇನೆ ಅಷ್ಟೆ.” (ಪ್ರಕ. 22:8, 9) ನಮ್ಮ ಪ್ರಾರ್ಥನೆಗಳ ಸಮೇತ ನಮ್ಮ ಆರಾಧನೆ ದೇವರಿಗೆ ಮಾತ್ರ ಸಲ್ಲಬೇಕು.—ಮತ್ತಾಯ 4:8-10 ಓದಿ.
15. ತಾಳ್ಮೆಯ ವಿಷಯದಲ್ಲಿ ದೇವದೂತರು ಹೇಗೆ ನಮಗೆ ಮಾದರಿಯಿಟ್ಟಿದ್ದಾರೆ?
15 ದೇವದೂತರು, ತಾಳ್ಮೆಯ ವಿಷಯದಲ್ಲೂ ಮಾದರಿಯಿಟ್ಟಿದ್ದಾರೆ. ದೇವರ ಪವಿತ್ರ ರಹಸ್ಯಗಳನ್ನು ತಿಳಿಯಲು ಅವರಿಗೆ ತೀವ್ರ ಆಸಕ್ತಿಯಿದ್ದರೂ ಎಲ್ಲವನ್ನೂ ಅವರಿಗೆ ತಿಳಿಸಲಾಗಿರುವುದಿಲ್ಲ. “ದೇವದೂತರು ಸಹ ಇವೇ ಸಂಗತಿಗಳನ್ನು ಕುತೂಹಲಪೂರ್ವಕವಾಗಿ ನೋಡಲು ಬಯಸುತ್ತಿದ್ದಾರೆ” ಎಂದು ಬೈಬಲ್ ಹೇಳುತ್ತದೆ. (1 ಪೇತ್ರ 1:12) ಹಾಗಾದರೆ ಅವರೇನು ಮಾಡುತ್ತಾರೆ? ದೇವರ ತಕ್ಕ ಸಮಯದಲ್ಲಿ ‘ಸಭೆಯ ಮೂಲಕ ಆತನ ಬಹುಪ್ರಕಾರವಾದ ವಿವೇಕವು ತಿಳಿದುಬರುವಂತೆ’ ತಾಳ್ಮೆಯಿಂದ ಕಾಯುತ್ತಾರೆ.—ಎಫೆ. 3:10, 11.
16. ನಮ್ಮ ನಡತೆ ದೇವದೂತರ ಮೇಲೆ ಹೇಗೆ ಪ್ರಭಾವಬೀರಬಲ್ಲದು?
16 ಸಂಕಷ್ಟಗಳನ್ನು ಅನುಭವಿಸುತ್ತಿರುವ ಕ್ರೈಸ್ತರು ‘ದೇವದೂತರಿಗೆ ರಂಗಸ್ಥಳದ ಪ್ರೇಕ್ಷಣೀಯ ನೋಟ’ ಆಗಿದ್ದಾರೆ. (1 ಕೊರಿಂ. 4:9) ದೇವದೂತರು ನಮ್ಮ ನಂಬಿಗಸ್ತಿಕೆಯ ಕೃತ್ಯಗಳನ್ನು ನೋಡಿ ಮೆಚ್ಚುತ್ತಾರೆ ಮತ್ತು ಒಬ್ಬ ಪಾಪಿಯು ಪಶ್ಚಾತ್ತಾಪಪಡುವಾಗ ಹರ್ಷಿಸುತ್ತಾರೆ ಕೂಡ. (ಲೂಕ 15:10) ಕ್ರೈಸ್ತ ಸ್ತ್ರೀಯರ ಭಕ್ತಿಪೂರ್ವಕ ನಡತೆಯನ್ನೂ ದೇವದೂತರು ಗಮನಿಸುತ್ತಾರೆ. “ದೇವದೂತರ ನಿಮಿತ್ತವಾಗಿ ಸ್ತ್ರೀಯು ತನ್ನ ತಲೆಯ ಮೇಲೆ ಅಧಿಕಾರವನ್ನು ಸೂಚಿಸುವ ಮುಸುಕನ್ನು ಹಾಕಿಕೊಳ್ಳಬೇಕು” ಎಂದು ಬೈಬಲ್ ತೋರಿಸುತ್ತದೆ. (1 ಕೊರಿಂ. 11:3, 10) ಹೌದು, ಕ್ರೈಸ್ತ ಸ್ತ್ರೀಯರು ಮತ್ತು ದೇವರ ಇತರ ಭೂಸೇವಕರು ದೇವಪ್ರಭುತ್ವಾತ್ಮಕ ಕ್ರಮ ಮತ್ತು ಶಿರಸ್ಸುತನಕ್ಕೆ ವಿಧೇಯತೆ ತೋರಿಸುವುದನ್ನು ನೋಡಿ ದೇವದೂತರಿಗೆ ಸಂತೋಷವಾಗುತ್ತದೆ. ಅವರು ತೋರಿಸುವ ವಿಧೇಯತೆಯು, ದೇವರ ಸ್ವರ್ಗೀಯ ಪುತ್ರರಿಗೆ ಒಂದು ಸೂಕ್ತ ಮರುಜ್ಞಾಪನದಂತಿದೆ.
ಸಾರುವ ಕೆಲಸಕ್ಕೆ ದೇವದೂತರ ಸಕ್ರಿಯ ಬೆಂಬಲ
17, 18. ದೇವದೂತರು ನಮ್ಮ ಸಾರುವ ಕೆಲಸವನ್ನು ಬೆಂಬಲಿಸುತ್ತಾರೆಂದು ಏಕೆ ಹೇಳಬಹುದು?
17 “ಕರ್ತನ ದಿನದಲ್ಲಿ” ನಡೆಯುವ ಗಮನಾರ್ಹ ಸಂಗತಿಗಳಲ್ಲಿ ದೇವದೂತರೂ ಕೆಲವೊಂದರಲ್ಲಿ ಒಳಗೂಡಿದ್ದಾರೆ. ಉದಾಹರಣೆಗೆ, 1914ರಲ್ಲಿ ರಾಜ್ಯದ ಜನನವಾದಾಗ “ಮೀಕಾಯೇಲನೂ ಅವನ ದೂತರೂ,” ಸೈತಾನ ಮತ್ತವನ ದೆವ್ವಗಳನ್ನು ಸ್ವರ್ಗದಿಂದ ಹೊರದೊಬ್ಬಿದರು. (ಪ್ರಕ. 1:10; 11:15; 12:5-9) ಅಪೊಸ್ತಲ ಯೋಹಾನನು, ‘ಇನ್ನೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರುತ್ತಿರುವುದನ್ನು ಮತ್ತು ಅವನ ಬಳಿ ಭೂನಿವಾಸಿಗಳಿಗೂ ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೂ ಸಂತೋಷದ ಸುದ್ದಿಯಾಗಿ ಪ್ರಕಟಪಡಿಸಲು ನಿತ್ಯವಾದ ಸುವಾರ್ತೆ’ ಇರುವುದನ್ನು ನೋಡಿದನು. ಆ ದೇವದೂತನು ಹೀಗೆ ಘೋಷಿಸಿದನು: “ದೇವರಿಗೆ ಭಯಪಡಿರಿ ಮತ್ತು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ, ಏಕೆಂದರೆ ಆತನ ನ್ಯಾಯತೀರ್ಪಿನ ಗಳಿಗೆಯು ಬಂದಿದೆ; ಆದುದರಿಂದ ಸ್ವರ್ಗವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ.” (ಪ್ರಕ. 14:6, 7) ಹೀಗೆ, ಯೆಹೋವನ ಸೇವಕರು ಪಿಶಾಚನ ಕಡು ವಿರೋಧದ ಮಧ್ಯೆಯೂ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ಸಾರುವಾಗ ದೇವದೂತರ ಬೆಂಬಲದ ಆಶ್ವಾಸನೆ ಅವರಿಗಿದೆ.—ಪ್ರಕ. 12:13, 17.
18 ಹಿಂದೆ ದೇವದೂತನೊಬ್ಬನು ಫಿಲಿಪ್ಪನೊಡನೆ ಮಾತಾಡಿ ಅವನನ್ನು ಇಥಿಯೋಪ್ಯದ ಕಂಚುಕಿಯ ಬಳಿ ನಿರ್ದೇಶಿಸಿದಂತೆ ಇಂದು ದೇವದೂತರು ನಮ್ಮೊಂದಿಗೆ ಮಾತಾಡಿ ನಮ್ಮನ್ನು ನಡೆಸುವುದಿಲ್ಲ. (ಅ. ಕಾ. 8:26-29) ಆದರೆ, ದೇವದೂತರು ತೆರೆಮರೆಯಲ್ಲಿದ್ದು ನಮ್ಮ ರಾಜ್ಯ ಸಾರುವಿಕೆಯ ಕೆಲಸವನ್ನು ಬೆಂಬಲಿಸುತ್ತಿದ್ದಾರೆ ಮತ್ತು “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವವರ ಕಡೆಗೆ ನಮ್ಮನ್ನು ನಡೆಸುತ್ತಿದ್ದಾರೆಂದು ಆಧುನಿಕ ದಿನದ ಅನೇಕ ಅನುಭವಗಳು ತೋರಿಸಿಕೊಡುತ್ತವೆ.a (ಅ. ಕಾ. 13:48) ಹೀಗಿರುವುದರಿಂದ, ‘ತಂದೆಯನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸಲು’ ಅಪೇಕ್ಷಿಸುವವರನ್ನು ಕಂಡುಹಿಡಿಯುವ ಕೆಲಸದಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ಕ್ರಮವಾಗಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದು ಎಷ್ಟು ಪ್ರಾಮುಖ್ಯ!—ಯೋಹಾ. 4:23, 24.
19, 20. “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯನ್ನು ಗುರುತಿಸುವಂಥ ಘಟನೆಗಳಲ್ಲಿ ದೇವದೂತರ ಪಾತ್ರವೇನು?
19 ಯೇಸು ನಮ್ಮ ದಿನಕ್ಕೆ ಸೂಚಿಸುತ್ತಾ, “ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ” ದೇವದೂತರು ‘ನೀತಿವಂತರಿಂದ ಕೆಟ್ಟವರನ್ನು ಬೇರ್ಪಡಿಸುವರು’ ಎಂದು ಹೇಳಿದನು. (ಮತ್ತಾ. 13:37-43, 49) ಅಭಿಷಿಕ್ತರ ಅಂತಿಮ ಒಟ್ಟುಗೂಡಿಸುವಿಕೆ ಮತ್ತು ಮುದ್ರೆಯೊತ್ತುವಿಕೆಯಲ್ಲಿ ದೇವದೂತರಿಗೊಂದು ಪಾತ್ರವಿದೆ. (ಮತ್ತಾಯ 24:31 ಓದಿ; ಪ್ರಕ. 7:1-3) ಅಷ್ಟುಮಾತ್ರವಲ್ಲದೆ, ಯೇಸು ‘ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಾಗ’ ಅವನೊಟ್ಟಿಗೆ ದೇವದೂತರಿರುವರು.—ಮತ್ತಾ. 25:31-33, 46.
20 ‘ಕರ್ತನಾದ ಯೇಸು ಸ್ವರ್ಗದಿಂದ ತನ್ನ ಬಲಿಷ್ಠ ದೂತರೊಂದಿಗೆ ಪ್ರಕಟವಾಗುವ ಸಮಯದಲ್ಲಿ, ದೇವರನ್ನು ಅರಿಯದವರ ಮತ್ತು ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಗೆ ವಿಧೇಯರಾಗದವರ’ ನಾಶನವಾಗುವುದು. (2 ಥೆಸ. 1:6-10) ಯೋಹಾನನು ಇದೇ ಘಟನೆಯನ್ನು ದರ್ಶನದಲ್ಲಿ ನೋಡಿದನು. ಅದರಲ್ಲಿ, ಯೇಸು ಮತ್ತು ಅವನ ಸ್ವರ್ಗೀಯ ದೇವದೂತ ಪಡೆಗಳು ನೀತಿಯಿಂದ ಯುದ್ಧ ನಡೆಸುವುದಕ್ಕಾಗಿ ಬಿಳೀ ಕುದುರೆಗಳ ಮೇಲೆ ಸವಾರಿಮಾಡುವುದನ್ನು ಅವನು ವರ್ಣಿಸುತ್ತಾನೆ.—ಪ್ರಕ. 19:11-14.
21. ‘ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈಯನ್ನೂ ಒಂದು ದೊಡ್ಡ ಸರಪಣಿಯನ್ನೂ ಹಿಡಿದುಕೊಂಡಿರುವ’ ದೇವದೂತನು, ಸೈತಾನ ಮತ್ತವನ ದೆವ್ವಗಳ ವಿರುದ್ಧ ಯಾವ ಕ್ರಮಗೈಯುವನು?
21 “ಒಬ್ಬ ದೇವದೂತನು ತನ್ನ ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈಯನ್ನೂ ಒಂದು ದೊಡ್ಡ ಸರಪಣಿಯನ್ನೂ ಹಿಡಿದುಕೊಂಡು ಸ್ವರ್ಗದಿಂದ ಇಳಿದು ಬರುತ್ತಿರುವುದನ್ನು” ಸಹ ಯೋಹಾನನು ನೋಡಿದನು. ಅವನು ಪ್ರಧಾನ ದೇವದೂತನಾದ ಮೀಕಾಯೇಲನೇ. ಈತನು ಪಿಶಾಚನನ್ನು ಬಂಧಿಸಿ, ಅವನನ್ನೂ—ಖಂಡಿತವಾಗಿ ಅವನ ದೆವ್ವಗಳನ್ನೂ—ಅಗಾಧ ಸ್ಥಳಕ್ಕೆ ದೊಬ್ಬುವನು. ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಅಂತ್ಯದಲ್ಲಿ ಅವರನ್ನು ಸ್ವಲ್ಪ ಕಾಲ ಬಿಡಿಸಲಾಗುವುದು. ಆಗ ಪರಿಪೂರ್ಣ ಮಾನವಕುಲದ ಅಂತಿಮ ಪರೀಕ್ಷೆಯಾಗುವುದು. ಆ ಬಳಿಕ ಸೈತಾನನು ಮತ್ತು ಇತರ ದಂಗೆಕೋರರು ನಾಶವಾಗುವರು. (ಪ್ರಕ. 20:1-3, 7-10; 1 ಯೋಹಾ. 3:8) ದೇವರ ವಿರುದ್ಧ ನಡೆಸಲಾದ ದಂಗೆಯನ್ನು ಸಂಪೂರ್ಣವಾಗಿ ಶಮನಗೊಳಿಸಲಾಗುವುದು.
22. ನಮ್ಮ ಮುಂದಿರುವ ಘಟನೆಗಳಲ್ಲಿ ದೇವದೂತರು ಹೇಗೆ ಒಳಗೂಡಿರುವರು, ಮತ್ತು ಅವರ ಪಾತ್ರದ ಕುರಿತು ನಮಗೆ ಹೇಗನಿಸಬೇಕು?
22 ಸೈತಾನನ ದುಷ್ಟ ವ್ಯವಸ್ಥೆಯಿಂದ ಬಿಡುಗಡೆ ಅತಿ ನಿಕಟವಿದೆ. ಯೆಹೋವನ ಪರಮಾಧಿಕಾರವನ್ನು ಸಮರ್ಥಿಸುವ ಮತ್ತು ಭೂಮಿ ಹಾಗೂ ಮಾನವಕುಲಕ್ಕಾಗಿರುವ ಆತನ ಉದ್ದೇಶವನ್ನು ಪೂರ್ತಿಯಾಗಿ ನೆರವೇರಿಸುವ ಮಹತ್ತ್ವಪೂರ್ಣ ಘಟನೆಗಳಲ್ಲಿ ದೇವದೂತರಿಗೆ ಪ್ರಮುಖ ನೇಮಕಗಳಿರುವವು. ನಂಬಿಗಸ್ತ ದೇವದೂತರು ಖಂಡಿತವಾಗಿಯೂ, ‘ರಕ್ಷಣೆಯನ್ನು ಹೊಂದಲಿಕ್ಕಿರುವವರ ಶುಶ್ರೂಷೆಗಾಗಿ ಕಳುಹಿಸಲ್ಪಡುವ ಸಾರ್ವಜನಿಕ ಸೇವೆಗಾಗಿರುವ ಶಕ್ತಿಶಾಲಿ ಆತ್ಮಜೀವಿಗಳು’ ಆಗಿದ್ದಾರೆ. ಆದುದರಿಂದ, ದೈವಿಕ ಚಿತ್ತವನ್ನು ಮಾಡಲು ಮತ್ತು ನಿತ್ಯಜೀವವನ್ನು ಗಳಿಸಲು ನಮಗೆ ಸಹಾಯಮಾಡುವಂತೆ ಯೆಹೋವ ದೇವರು ತನ್ನ ದೂತರನ್ನು ಬಳಸುತ್ತಿರುವುದಕ್ಕಾಗಿ ನಾವಾತನಿಗೆ ಕೃತಜ್ಞರಾಗಿರೋಣ.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್), ಪುಟ 549-551 ನೋಡಿ.
ನಿಮ್ಮ ಉತ್ತರವೇನು?
• ಸ್ವರ್ಗೀಯ ಆತ್ಮಜೀವಿಗಳನ್ನು ಹೇಗೆ ಸಂಘಟಿಸಲಾಗಿದೆ?
• ನೋಹನ ದಿನಗಳಲ್ಲಿ ಕೆಲವು ದೇವದೂತರು ಏನು ಮಾಡಿದರು?
• ನಮಗೆ ನೆರವು ನೀಡಲು ದೇವರು ಹೇಗೆ ತನ್ನ ದೂತರನ್ನು ಬಳಸಿದ್ದಾನೆ?
• ನಮ್ಮ ಸಮಯದಲ್ಲಿ ನಂಬಿಗಸ್ತ ದೇವದೂತರ ಪಾತ್ರವೇನು?
[ಪುಟ 21ರಲ್ಲಿರುವ ಚಿತ್ರ]
ದೇವರ ಚಿತ್ತವನ್ನು ಮಾಡಲು ದೇವದೂತರು ಹರ್ಷಿಸುತ್ತಾರೆ
[ಪುಟ 23ರಲ್ಲಿರುವ ಚಿತ್ರ]
ದಾನಿಯೇಲನ ವಿಷಯದಲ್ಲಿ ನೋಡಬಹುದಾದಂತೆ, ದೇವರ ಚಿತ್ತಾನುಸಾರ ಮಧ್ಯಪ್ರವೇಶಿಸಲು ದೇವದೂತರು ಸದಾ ಎಚ್ಚರವಾಗಿದ್ದಾರೆ
[ಪುಟ 24ರಲ್ಲಿರುವ ಚಿತ್ರಗಳು]
ಧೈರ್ಯದಿಂದಿರ್ರಿ, ಏಕೆಂದರೆ ರಾಜ್ಯ ಸಾರುವ ಕೆಲಸವನ್ನು ದೇವದೂತರು ಬೆಂಬಲಿಸುತ್ತಿದ್ದಾರೆ!
[ಕೃಪೆ]
Globe: NASA photo