ನಿಮ್ಮಲ್ಲಿ ಒಂದು ಅಮರ ಆತ್ಮವಿದೆಯೋ?
“ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ” ಎಂದು ಅಪೊಸ್ತಲ ಪೌಲನು ಬರೆದನು. (2 ತಿಮೊಥೆಯ 3:16) ಹೌದು, ಬೈಬಲು ಸತ್ಯ ದೇವರಾಗಿರುವ ಯೆಹೋವನಿಂದ ಬಂದಿರುವ ಒಂದು ಸತ್ಯ ಪುಸ್ತಕವಾಗಿದೆ.—ಕೀರ್ತನೆ 83:18.
ಮಾನವರನ್ನು ಸೇರಿಸಿ ಸರ್ವವನ್ನೂ ಯೆಹೋವನೇ ಸೃಷ್ಟಿಸಿರುವುದರಿಂದ, ನಾವು ಸತ್ತಾಗ ನಮಗೆ ಏನು ಸಂಭವಿಸುತ್ತದೆ ಎಂಬುದು ಆತನಿಗೇ ಚೆನ್ನಾಗಿ ಗೊತ್ತಿದೆ. (ಇಬ್ರಿಯ 3:4; ಪ್ರಕಟನೆ 4:11) ತನ್ನ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ಆತನು, ಮರಣಾನಂತರ ಏನು ಸಂಭವಿಸುತ್ತದೆ ಎಂಬುದರ ಕುರಿತಾದ ಪ್ರಶ್ನೆಗಳಿಗೆ ಸತ್ಯವಾದ ಹಾಗೂ ಸಂತೃಪ್ತಿಕರವಾದ ಉತ್ತರಗಳನ್ನು ಕೊಟ್ಟಿದ್ದಾನೆ.
ಆತ್ಮ ಎಂದರೇನು?
ಬೈಬಲಿನಲ್ಲಿ “ಆತ್ಮ” ಎಂದು ಭಾಷಾಂತರಿಸಲ್ಪಟ್ಟಿರುವ ಶಬ್ದಗಳ ಮೂಲಾರ್ಥವು “ಉಸಿರು” ಎಂದಾಗಿದೆ. ಆದರೆ ಇದು ಉಸಿರಾಟಕ್ಕಿಂತಲೂ ಹೆಚ್ಚಿನದ್ದನ್ನು ಸೂಚಿಸುತ್ತದೆ. ಉದಾಹರಣೆಗೆ, ಬೈಬಲ್ ಬರಹಗಾರನಾದ ಯಾಕೋಬನು ಹೇಳುವುದು: ‘ಆತ್ಮವಿಲ್ಲದ ದೇಹವು ಸತ್ತದ್ದಾಗಿದೆ.’ (ಯಾಕೋಬ 2:26) ಆದುದರಿಂದ, ದೇಹಕ್ಕೆ ಜೀವಶಕ್ತಿಯನ್ನು ನೀಡುವಂಥದ್ದು ಆತ್ಮವೇ ಆಗಿದೆ.
ದೇಹವನ್ನು ಜೀವಂತವಾಗಿರಿಸುವ ಈ ಶಕ್ತಿಯು, ನಾವು ಉಸಿರಾಡುವಾಗ ಶ್ವಾಸಕೋಶಗಳ ಮೂಲಕ ಹರಿದಾಡುವಂತಹ ಉಸಿರೋ ಅಥವಾ ಗಾಳಿಯೋ ಆಗಿರಸಾಧ್ಯವಿಲ್ಲ. ಏಕಿಲ್ಲ? ಏಕೆಂದರೆ ಉಸಿರಾಟವು ನಿಂತ ಬಳಿಕವೂ, ದೇಹದ ಜೀವಕೋಶಗಳಲ್ಲಿ ಜೀವವು ಸ್ವಲ್ಪ ಕಾಲಾವಧಿಯ ವರೆಗೆ, ಅಂದರೆ “ಕೆಲವು ನಿಮಿಷಗಳ ವರೆಗೆ” ಇರುತ್ತದೆ ಎಂದು ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುತ್ತದೆ. ಆದುದರಿಂದಲೇ, ಒಬ್ಬ ವ್ಯಕ್ತಿಗೆ ಮತ್ತೆ ಪ್ರಜ್ಞೆ ಬರಿಸುವ ಪ್ರಯತ್ನವು ಯಶಸ್ವಿಯಾಗಸಾಧ್ಯವಿದೆ. ಆದರೆ ದೇಹದ ಜೀವಕೋಶಗಳಲ್ಲಿರುವ ಈ ಜೀವಶಕ್ತಿಯ ಕಿಡಿಯು ನಂದಿಹೋದರೆ, ಆ ವ್ಯಕ್ತಿಗೆ ಮತ್ತೆ ಪ್ರಜ್ಞೆ ಬರಿಸಲು ಮಾಡಲ್ಪಡುವ ಎಲ್ಲ ಪ್ರಯತ್ನಗಳು ನಿಷ್ಫಲವಾಗುತ್ತವೆ. ಅನಂತರ ಲೋಕದಲ್ಲಿರುವ ಎಲ್ಲ ಉಸಿರು ಅಥವಾ ಗಾಳಿಯನ್ನು ಉಪಯೋಗಿಸುವುದಾದರೂ, ಒಂದೇ ಒಂದು ಜೀವಕೋಶವನ್ನು ಸಹ ಉಜ್ಜೀವಿಸುವಂತೆ ಮಾಡಲು ಸಾಧ್ಯವಿಲ್ಲ. ಹಾಗಾದರೆ, ಆತ್ಮವು ಅದೃಶ್ಯ ಜೀವಶಕ್ತಿಯಾಗಿದೆ; ಜೀವಕಣಗಳನ್ನೂ ವ್ಯಕ್ತಿಯನ್ನೂ ಜೀವಂತವಾಗಿರಿಸುವ ಜೀವ ಕಿಡಿಯಾಗಿದೆ. ಈ ಜೀವಶಕ್ತಿಯನ್ನು ದೇಹದಲ್ಲಿ ಉಳಿಸುವುದು ಉಸಿರಾಟವೇ.—ಯೋಬ 34:14, 15.
ಈ ಆತ್ಮವು ಮಾನವರಲ್ಲಿ ಮಾತ್ರ ಕಾರ್ಯನಡಿಸುತ್ತದೋ? ಈ ವಿಷಯದಲ್ಲಿ ಸರಿಯಾದ ತೀರ್ಮಾನಕ್ಕೆ ಬರುವಂತೆ ಬೈಬಲು ನಮಗೆ ಸಹಾಯಮಾಡುತ್ತದೆ. ಮನುಷ್ಯರಿಗೂ ಪ್ರಾಣಿಗಳಿಗೂ “ಎಲ್ಲಕ್ಕೂ ಪ್ರಾಣ [“ಆತ್ಮ,” NW] ಒಂದೇ” ಎಂದು ಜ್ಞಾನಿಯಾದ ರಾಜ ಸೊಲೊಮೋನನು ಒಪ್ಪಿಕೊಂಡನು. ಮತ್ತು ಅವನು ಪ್ರಶ್ನಿಸಿದ್ದು: “ಮನುಷ್ಯನ ಆತ್ಮವು ಮೇಲಕ್ಕೆ ಏರುತ್ತದೋ ಪಶುವಿನ ಆತ್ಮವು ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ ಯಾರಿಗೆ ಗೊತ್ತು?” (ಪ್ರಸಂಗಿ 3:19-21) ಆದುದರಿಂದ, ಮನುಷ್ಯರಿಗೂ ಆತ್ಮವಿದೆ ಮತ್ತು ಪ್ರಾಣಿಗಳಿಗೂ ಆತ್ಮವಿದೆ ಎಂದು ಇಲ್ಲಿ ಹೇಳಲಾಗಿದೆ. ಇದು ಹೇಗೆ ಸಾಧ್ಯ?
ಆತ್ಮವನ್ನು ಅಥವಾ ಜೀವಶಕ್ತಿಯನ್ನು, ಒಂದು ಯಂತ್ರ ಅಥವಾ ಉಪಕರಣದಲ್ಲಿ ಹರಿಯುವಂತಹ ವಿದ್ಯುಚ್ಛಕ್ತಿಗೆ ಹೋಲಿಸಸಾಧ್ಯವಿದೆ. ಕಣ್ಣಿಗೆ ಅದೃಶ್ಯವಾಗಿರುವ ವಿದ್ಯುಚ್ಛಕ್ತಿಯು, ಅದು ಕೆಲಸಮಾಡುತ್ತಿರುವಂತಹ ಉಪಕರಣದ ಮೇಲೆ ಹೊಂದಿಕೊಂಡು, ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸಬಹುದು. ಉದಾಹರಣೆಗೆ, ವಿದ್ಯುಚ್ಛಕ್ತಿಯಿಂದಾಗಿ ಒಂದು ಇಲೆಕ್ಟ್ರಿಕ್ ಸ್ಟೌವ್ ಶಾಖವನ್ನು ಉಂಟುಮಾಡುತ್ತದೆ, ಒಂದು ಕಂಪ್ಯೂಟರ್ ಮಾಹಿತಿಯನ್ನು ಸಂಸ್ಕರಿಸುತ್ತದೆ, ಮತ್ತು ಟೆಲಿವಿಷನ್ ಚಿತ್ರಗಳನ್ನು ಮತ್ತು ಧ್ವನಿಯನ್ನು ಉಂಟುಮಾಡುತ್ತದೆ. ಆದರೂ, ವಿದ್ಯುಚ್ಛಕ್ತಿಯು ಯಾವ ಉಪಕರಣಗಳನ್ನು ಕಾರ್ಯನಡಿಸುವಂತೆ ಮಾಡುತ್ತದೋ ಅವುಗಳ ರೂಪವನ್ನು ಅದು ಪಡೆದುಕೊಳ್ಳುವುದಿಲ್ಲ. ಅದು ಒಂದು ಶಕ್ತಿಯಾಗಿಯೇ ಉಳಿಯುತ್ತದೆ. ತದ್ರೀತಿಯಲ್ಲಿ, ಜೀವಶಕ್ತಿಯು ಯಾವ ಜೀವಿಗಳನ್ನು ಕಾರ್ಯನಡಿಸುವಂತೆ ಮಾಡುತ್ತದೋ ಅವುಗಳ ರೂಪವನ್ನು ಪಡೆದುಕೊಳ್ಳುವುದಿಲ್ಲ. ಅದಕ್ಕೆ ವ್ಯಕ್ತಿತ್ವವೂ ಇಲ್ಲ, ಆಲೋಚನಾ ಸಾಮರ್ಥ್ಯವೂ ಇಲ್ಲ. ಮನುಷ್ಯರಿಗೂ ಪ್ರಾಣಿಗಳಿಗೂ “ಆತ್ಮ ಒಂದೇ.” (ಪ್ರಸಂಗಿ 3:19, NW) ಆದುದರಿಂದ, ಒಬ್ಬ ವ್ಯಕ್ತಿಯು ಮೃತಪಟ್ಟಾಗ, ಅವನ ಆತ್ಮವು ಒಂದು ಆತ್ಮ ಜೀವಿಯೋಪಾದಿ ಇನ್ನೊಂದು ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ಮುಂದುವರಿಸುವುದಿಲ್ಲ.
ಹಾಗಾದರೆ, ಮೃತರು ಯಾವ ಸ್ಥಿತಿಯಲ್ಲಿದ್ದಾರೆ? ಮತ್ತು ಒಬ್ಬ ವ್ಯಕ್ತಿಯು ಮೃತಪಟ್ಟಾಗ ಅವನ ಆತ್ಮಕ್ಕೆ ಏನು ಸಂಭವಿಸುತ್ತದೆ?
“ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ”
ಪ್ರಥಮ ಮಾನವನಾದ ಆದಾಮನು ಉದ್ದೇಶಪೂರ್ವಕವಾಗಿ ದೇವರ ಆಜ್ಞೆಗೆ ಅವಿಧೇಯನಾದಾಗ, ದೇವರು ಅವನಿಗೆ ಹೇಳಿದ್ದು: “ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ಯೆಹೋವನು ಆದಾಮನನ್ನು ಮಣ್ಣಿನಿಂದ ಸೃಷ್ಟಿಸುವುದಕ್ಕೆ ಮೊದಲು ಅವನು ಎಲ್ಲಿದ್ದನು? ಅವನು ಎಲ್ಲಿಯೂ ಇರಲಿಲ್ಲ! ಅವನು ಅಸ್ತಿತ್ವದಲ್ಲೇ ಇರಲಿಲ್ಲ. ಆದುದರಿಂದ, ಆದಾಮನು ‘ಮಣ್ಣಿಗೆ ಸೇರುವನು’ ಎಂದು ಯೆಹೋವ ದೇವರು ಹೇಳಿದಾಗ, ಆದಾಮನು ಸಾಯುವನು ಮತ್ತು ಮಣ್ಣಿನ ಘಟಕಾಂಶಗಳಿಗೆ ಸೇರುವನು ಎಂಬುದೇ ಆತನ ಮಾತುಗಳ ಅರ್ಥವಾಗಿತ್ತು. ಆದಾಮನು ಇನ್ನೊಂದು ಆತ್ಮ ಕ್ಷೇತ್ರಕ್ಕೆ ವರ್ಗಾಯಿಸಲ್ಪಡುವುದಿಲ್ಲ. ಬದಲಾಗಿ, ಅವನು ಮೃತಪಟ್ಟಾಗ ಪುನಃ ಅಸ್ತಿತ್ವದಲ್ಲಿಲ್ಲದೆ ಹೋಗಲಿದ್ದನು. ಅವನಿಗೆ ಕೊಡಲ್ಪಟ್ಟ ಶಿಕ್ಷೆಯು, ಇನ್ನೊಂದು ಕ್ಷೇತ್ರಕ್ಕೆ ಕಳುಹಿಸಲ್ಪಡುವುದಲ್ಲ, ಬದಲಿಗೆ ಮರಣವಾಗಿತ್ತು ಅಂದರೆ ಜೀವ ನಷ್ಟವಾಗಿತ್ತು.—ರೋಮಾಪುರ 6:23.
ಮೃತಪಟ್ಟಿರುವ ಇನ್ನಿತರರ ಕುರಿತಾಗಿ ಏನು? ಪ್ರಸಂಗಿ 9:5, 10ರಲ್ಲಿ ಮೃತರ ಸ್ಥಿತಿಯ ಕುರಿತು ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲಿ ನಾವು ಓದುವುದು: “ಸತ್ತವರಿಗೆ ಯಾವ ತಿಳಿವಳಿಕೆಯೂ ಇಲ್ಲ . . . ಸಮಾಧಿಯಲ್ಲಿ . . . ಕೆಲಸವಿಲ್ಲ, ಅಲ್ಲಿ ಆಲೋಚನೆಯಾಗಲೀ, ಜ್ಞಾನವಾಗಲೀ, ವಿವೇಕವಾಗಲೀ ಇರುವುದಿಲ್ಲ.” (ಪರಿಶುದ್ಧ ಬೈಬಲ್a) ಆದುದರಿಂದ, ಮರಣವು ಒಬ್ಬನನ್ನು ಅಸ್ತಿತ್ವದಲ್ಲಿಲ್ಲದಂತೆ ಮಾಡುವಂಥ ಒಂದು ಸ್ಥಿತಿಯಾಗಿದೆ. ಒಬ್ಬ ವ್ಯಕ್ತಿಯು ಸಾಯುವಾಗ, “ಅವನ ಉಸಿರು ಹೋಗಲು [“ಅವನ ಆತ್ಮವು ಹೊರಗೆ ಹೋದಾಗ,” NW] ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು” ಎಂದು ಕೀರ್ತನೆಗಾರನು ಬರೆದನು.—ಕೀರ್ತನೆ 146:4.
ಮೃತರು ಏನೂ ಮಾಡಲಾರರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅವರು ನಿಮ್ಮನ್ನು ನೋಡಲಾರರು, ನೀವು ಹೇಳುವುದನ್ನು ಕೇಳಿಸಿಕೊಳ್ಳಲಾರರು, ಅಥವಾ ನಿಮ್ಮೊಂದಿಗೆ ಮಾತಾಡಲಾರರು. ಅವರು ನಿಮಗೆ ಸಹಾಯಮಾಡಲಾರರು ಇಲ್ಲವೆ ಹಾನಿಮಾಡಲಾರರು. ಆದುದರಿಂದ, ಖಂಡಿತವಾಗಿಯೂ ನೀವು ಮೃತರಿಗೆ ಭಯಪಡುವ ಅಗತ್ಯವಿಲ್ಲ. ಆದರೆ ಒಬ್ಬ ವ್ಯಕ್ತಿಯು ಮೃತಪಟ್ಟಾಗ ಅವನಿಂದ ಆತ್ಮವು ಹೇಗೆ ‘ಹೊರಗೆ ಹೋಗು’ತ್ತದೆ?
ಆತ್ಮವು “ಸತ್ಯ ದೇವರ ಬಳಿಗೆ ಮತ್ತೆ ಹಿಂದಿರುಗುವುದು”
ಒಬ್ಬ ವ್ಯಕ್ತಿಯು ಮೃತಪಟ್ಟಾಗ “ಆತ್ಮವು ತನ್ನನ್ನು ದಯಪಾಲಿಸಿದ ಸತ್ಯ ದೇವರ ಬಳಿಗೆ ಮತ್ತೆ ಹಿಂದಿರುಗುವುದು” ಎಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 12:7, NW) ಅಕ್ಷರಾರ್ಥವಾಗಿ ಆತ್ಮವು ಬಾಹ್ಯಾಕಾಶದ ಮಾರ್ಗವಾಗಿ ಪ್ರಯಾಣಿಸಿ ದೇವರ ಬಳಿಗೆ ಸೇರುತ್ತದೆ ಎಂಬುದು ಇದರ ಅರ್ಥವಾಗಿದೆಯೋ? ಖಂಡಿತವಾಗಿಯೂ ಇಲ್ಲ! “ಹಿಂದಿರುಗು” ಎಂಬ ಶಬ್ದವನ್ನು ಬೈಬಲು ಉಪಯೋಗಿಸುವ ವಿಧವು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುವುದನ್ನು ಅಗತ್ಯಪಡಿಸುವುದಿಲ್ಲ. ಉದಾಹರಣೆಗೆ, ಅಪನಂಬಿಗಸ್ತ ಇಸ್ರಾಯೇಲ್ಯರಿಗೆ ಹೀಗೆ ಹೇಳಲಾಗಿತ್ತು: “ನೀವು ನನ್ನ ಬಳಿಗೆ ಹಿಂದಿರುಗಿ ಬನ್ನಿರಿ, ಮತ್ತು ನಾನು ನಿಮ್ಮ ಬಳಿಗೆ ಹಿಂದಿರುಗುವೆನು.” (ಮಲಾಕಿಯ 3:7, NW) ಇಸ್ರಾಯೇಲ್ಯರು ಯೆಹೋವನ ಬಳಿಗೆ ‘ಹಿಂದಿರುಗುವುದರ’ ಅರ್ಥ, ತಪ್ಪು ಮಾರ್ಗವನ್ನು ಬಿಟ್ಟುಬಿಡುವುದು ಮತ್ತು ದೇವರ ನೀತಿಯ ಮಾರ್ಗಕ್ಕೆ ಅನುಸಾರವಾಗಿ ನಡೆಯುವುದೇ ಆಗಿತ್ತು. ಮತ್ತು ಯೆಹೋವನು ಇಸ್ರಾಯೇಲ್ಯರ ಬಳಿಗೆ ‘ಹಿಂದಿರುಗುವುದರ’ ಅರ್ಥ, ಪುನಃ ಆತನು ತನ್ನ ಜನರ ಕಡೆಗೆ ಅನುಗ್ರಹವನ್ನು ದಯಪಾಲಿಸುವುದೇ ಆಗಿತ್ತು. ಈ ಎರಡೂ ಸಂದರ್ಭಗಳಲ್ಲಿ ‘ಹಿಂದಿರುಗುವಿಕೆಯು,’ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಕ್ಷರಾರ್ಥಕವಾದ ಚಲನೆಯನ್ನಲ್ಲ, ಬದಲಾಗಿ ಮನೋಭಾವವನ್ನು ಒಳಗೂಡುತ್ತದೆ.
ಅದೇ ರೀತಿಯಲ್ಲಿ, ಒಬ್ಬ ವ್ಯಕ್ತಿಯು ಮೃತಪಟ್ಟು ಅವನ ಆತ್ಮವು ದೇವರ ಬಳಿಗೆ ‘ಹಿಂದಿರುಗುವಾಗ,’ ಅದು ನಿಜವಾಗಿಯೂ ಭೂಮಿಯಿಂದ ಪರಲೋಕ ಕ್ಷೇತ್ರಕ್ಕೆ ಪ್ರಯಾಣಿಸುವುದಿಲ್ಲ. ಒಬ್ಬ ವ್ಯಕ್ತಿಯಿಂದ ಜೀವಶಕ್ತಿಯು ಹೊರಗೆ ಹೋದ ಬಳಿಕ, ಅದನ್ನು ಪುನಃ ಹಿಂದೆ ತರುವ ಸಾಮರ್ಥ್ಯ ಕೇವಲ ದೇವರಿಗೆ ಮಾತ್ರ ಇದೆ. ಆದುದರಿಂದ, ಆ ವ್ಯಕ್ತಿಗೆ ಇರುವ ಭವಿಷ್ಯತ್ತಿನ ಜೀವನದ ಯಾವುದೇ ನಿರೀಕ್ಷೆಯು ಈಗ ಸಂಪೂರ್ಣವಾಗಿ ದೇವರ ಕೈಯಲ್ಲಿದೆ ಎಂಬರ್ಥದಲ್ಲಿ ಆತ್ಮವು ‘ಸತ್ಯ ದೇವರ ಬಳಿಗೆ ಮತ್ತೆ ಹಿಂದಿರುಗುತ್ತದೆ.’
ಉದಾಹರಣೆಗೆ, ಯೇಸು ಕ್ರಿಸ್ತನ ಮರಣದ ಕುರಿತು ಶಾಸ್ತ್ರವಚನಗಳು ಏನು ಹೇಳುತ್ತವೆ ಎಂಬುದನ್ನು ಪರಿಗಣಿಸಿರಿ. ಸುವಾರ್ತಾ ಬರಹಗಾರನಾದ ಲೂಕನು ಹೇಳುವುದು: “ಯೇಸು—ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಎಂದು ಮಹಾಧ್ವನಿಯಿಂದ ಕೂಗಿದನು; ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.” (ಲೂಕ 23:46) ಯೇಸುವಿನ ಆತ್ಮವು ಅವನಿಂದ ಹೊರಗೆ ಹೋದಾಗ, ಅಕ್ಷರಾರ್ಥವಾಗಿ ಅವನು ಪರಲೋಕಕ್ಕೆ ಪ್ರಯಾಣಿಸಲಿಲ್ಲ. ಏಕೆಂದರೆ ಯೇಸು ಮೃತಪಟ್ಟು ಮೂರು ದಿನಗಳು ಕಳೆದ ನಂತರವೇ ಅವನ ಪುನರುತ್ಥಾನವಾಯಿತು. ಇದಲ್ಲದೆ 40 ದಿನಗಳ ಬಳಿಕವೇ ಅವನು ಪರಲೋಕಕ್ಕೆ ಏರಿಹೋದನು. (ಅ. ಕೃತ್ಯಗಳು 1:3, 9) ಆದರೂ, ತನ್ನ ಮರಣದ ಸಮಯದಲ್ಲಿ ಯೇಸು, ತನ್ನನ್ನು ಪುನಃ ಬದುಕಿಸುವ ಯೆಹೋವನ ಸಾಮರ್ಥ್ಯದಲ್ಲಿ ಪೂರ್ಣ ವಿಶ್ವಾಸವಿಡುತ್ತಾ, ದೃಢಭರವಸೆಯಿಂದ ತನ್ನ ಆತ್ಮವನ್ನು ತನ್ನ ತಂದೆಯ ಕೈಗೆ ಒಪ್ಪಿಸಿದನು.
ಹೌದು, ದೇವರು ಒಬ್ಬ ವ್ಯಕ್ತಿಯನ್ನು ಪುನಃ ಬದುಕಿಸಬಲ್ಲನು. (ಕೀರ್ತನೆ 104:30) ಇದು ಎಷ್ಟು ದೊಡ್ಡ ಪ್ರತೀಕ್ಷೆಯನ್ನು ನಮ್ಮ ಮುಂದಿಡುತ್ತದೆ!
ಒಂದು ನಿಶ್ಚಿತ ನಿರೀಕ್ಷೆ
ಬೈಬಲ್ ಹೇಳುವುದು: “[“ಸ್ಮರಣೆಯ,”NW] ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ಹೌದು, ಯೆಹೋವನ ಸ್ಮರಣೆಯಲ್ಲಿರುವವರೆಲ್ಲರು ಪುನರುತ್ಥಾನಗೊಳಿಸಲ್ಪಡುವರು ಅಥವಾ ಪುನಃ ಬದುಕಿಸಲ್ಪಡುವರು ಎಂದು ಯೇಸು ಕ್ರಿಸ್ತನು ವಾಗ್ದಾನಿಸಿದನು. ಯೆಹೋವನ ಸೇವಕರೋಪಾದಿ ನೀತಿಯ ಮಾರ್ಗವನ್ನು ಬೆನ್ನಟ್ಟಿದವರು ಖಂಡಿತವಾಗಿಯೂ ಅವರಲ್ಲಿ ಸೇರಿರುವರು. ಆದರೆ, ದೇವರ ನೀತಿಯ ಮಟ್ಟಗಳಿಗನುಸಾರ ನಡೆಯುವರೋ ಇಲ್ಲವೋ ಎಂಬುದನ್ನು ತೋರಿಸುವ ಅವಕಾಶವಿಲ್ಲದೆ ಮೃತಪಟ್ಟಿರುವಂತಹ ಕೋಟಿಗಟ್ಟಲೆ ಜನರೂ ಇದ್ದಾರೆ. ಸಾಯುವ ಮುಂಚೆ ಯೆಹೋವನ ಆವಶ್ಯಕತೆಗಳ ಕುರಿತು ಕಲಿಯಲು ಅವರಿಗೆ ಅವಕಾಶ ಸಿಕ್ಕಿರಲಿಕ್ಕಿಲ್ಲ ಅಥವಾ ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಅವರಿಗೆ ಸಾಕಷ್ಟು ಸಮಯವು ಸಿಕ್ಕಿಲ್ಲದಿರಬಹುದು. ಈ ರೀತಿಯ ವ್ಯಕ್ತಿಗಳು ಕೂಡ ದೇವರ ಸ್ಮರಣೆಯಲ್ಲಿದ್ದು, ಇವರು ಸಹ ಪುನರುತ್ಥಾನಗೊಳಿಸಲ್ಪಡುವರು. ಏಕೆಂದರೆ “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗು”ವದು ಎಂದು ಬೈಬಲ್ ಹೇಳುತ್ತದೆ.—ಅ. ಕೃತ್ಯಗಳು 24:15.
ಇಂದು ಭೂಮಿಯಲ್ಲಿ ದ್ವೇಷ, ಕಲಹ, ಹಿಂಸಾಚಾರ, ರಕ್ತಪಾತ, ಮಾಲಿನ್ಯ ಮತ್ತು ರೋಗವು ತುಂಬಿತುಳುಕುತ್ತಿದೆ. ಇಂತಹ ಒಂದು ಭೂಮಿಯಲ್ಲಿ ಮೃತರು ಪುನಃ ಬದುಕಿಸಲ್ಪಡುವಲ್ಲಿ, ಅವರಿಗಾಗುವ ಸಂತೋಷವು ಖಂಡಿತವಾಗಿಯೂ ಅಲ್ಪಕಾಲದ್ದಾಗಿರುವುದು. ಆದರೆ ಇಂದು ಪಿಶಾಚನಾದ ಸೈತಾನನ ನಿಯಂತ್ರಣದ ಕೆಳಗಿರುವ ಈ ಸದ್ಯದ ಲೋಕ ಸಮಾಜವನ್ನು ತಾನು ಅತಿ ಬೇಗನೆ ಅಂತ್ಯಗೊಳಿಸುವೆನು ಎಂದು ಸೃಷ್ಟಿಕರ್ತನು ವಾಗ್ದಾನಿಸಿದ್ದಾನೆ. (ಜ್ಞಾನೋಕ್ತಿ 2:21, 22; ದಾನಿಯೇಲ 2:44; 1 ಯೋಹಾನ 5:19) ಆಗ, ಒಂದು ನೀತಿಯ ಮಾನವ ಸಮಾಜ, ಅಂದರೆ ‘ನೂತನಭೂಮಂಡಲವು’ ಅದ್ಭುತ ವಾಸ್ತವಿಕತೆಯಾಗುವುದು.—2 ಪೇತ್ರ 3:13.
ಆ ಸಮಯದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಅಷ್ಟುಮಾತ್ರವಲ್ಲ, ಆಗ ಮರಣದ ಭಯವೂ ಇರುವುದಿಲ್ಲ. ಏಕೆಂದರೆ ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:4) “ಸ್ಮರಣೆಯ ಸಮಾಧಿಗಳಲ್ಲಿ” ಇರುವವರೆಲ್ಲರಿಗೆ ಇದು ಎಂತಹ ಒಂದು ಪ್ರತೀಕ್ಷೆ!
ಯೆಹೋವನು ಈ ಭೂಮಿಯಿಂದ ದುಷ್ಟತನವನ್ನು ಸಂಪೂರ್ಣವಾಗಿ ತೆಗೆದುಹಾಕುವಾಗ, ದುಷ್ಟರ ಜೊತೆಗೆ ಆತನು ನೀತಿವಂತರನ್ನೂ ನಾಶಮಾಡುವುದಿಲ್ಲ. (ಕೀರ್ತನೆ 37:10, 11; 145:20) ವಾಸ್ತವದಲ್ಲಿ, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಆಗಿರುವ ಜನರ ಒಂದು “ಮಹಾ ಸಮೂಹವು,” ಸದ್ಯದ ದುಷ್ಟ ಲೋಕವನ್ನು ನಾಶಮಾಡುವಂತಹ “ಮಹಾ ಸಂಕಟದಿಂದ” ಪಾರಾಗುವುದು. (ಪ್ರಕಟನೆ 7:9-14, NW) ಆದುದರಿಂದ, ಮೃತರನ್ನು ಸ್ವಾಗತಿಸಲಿಕ್ಕಾಗಿ ಖಂಡಿತವಾಗಿಯೂ ಒಂದು ಮಹಾ ಸಮೂಹವು ಸಿದ್ಧವಿರುವುದು.
ನಿಮ್ಮ ಪ್ರಿಯ ಜನರನ್ನು ಪುನಃ ನೋಡಲು ನೀವು ಹಂಬಲಿಸುತ್ತೀರೋ? ನೀವು ಭೂಪರದೈಸಿನಲ್ಲಿ ಸದಾಕಾಲ ಜೀವಿಸಲು ಬಯಸುತ್ತೀರೋ? ಹಾಗಿದ್ದಲ್ಲಿ, ನೀವು ದೇವರ ಚಿತ್ತ ಹಾಗೂ ಉದ್ದೇಶಗಳ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು. (ಯೋಹಾನ 17:3) “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ.—1 ತಿಮೊಥೆಯ 2:3, 4.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center. Inc. and used by permission.
[ಪುಟ 4ರಲ್ಲಿರುವ ಚಿತ್ರ]
“ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ”
[ಪುಟ 5ರಲ್ಲಿರುವ ಚಿತ್ರ]
ಆತ್ಮವನ್ನು ವಿದ್ಯುಚ್ಛಕ್ತಿಗೆ ಹೋಲಿಸಸಾಧ್ಯವಿದೆ
[ಪುಟ 7ರಲ್ಲಿರುವ ಚಿತ್ರ]
ಪುನರುತ್ಥಾನವು ಶಾಶ್ವತವಾದ ಆನಂದವನ್ನು ಉಂಟುಮಾಡುವುದು