ನಿಮ್ಮ ಸಲಹೆಯನ್ನು ಇತರರು ಸ್ವೀಕರಿಸುತ್ತಾರೊ?
ಸರಿಯಾದ ರೀತಿಯಲ್ಲಿ ಕೊಡಲಾಗುವ ಉತ್ತಮ ಸಲಹೆಯನ್ನು ಯಾವಾಗಲೂ ಸ್ವೀಕರಿಸಲಾಗುತ್ತದೆ. ಅದು ಸರಿಯೊ? ಇಲ್ಲ! ಯಾಕೆಂದರೆ ಸಮರ್ಥ ಸಲಹೆಗಾರರು ಅತ್ಯುತ್ಕೃಷ್ಟವಾದ ಸಲಹೆಯನ್ನು ಕೊಟ್ಟಾಗಲೂ, ಅದನ್ನು ಅನೇಕವೇಳೆ ಅಲಕ್ಷಿಸಲಾಗುತ್ತದೆ ಅಥವಾ ತಿರಸ್ಕರಿಸಲಾಗುತ್ತದೆ.—ಜ್ಞಾನೋಕ್ತಿ 29:19.
ತನ್ನ ತಮ್ಮನಾದ ಹೇಬೆಲನ ಕಡೆಗೆ ದ್ವೇಷವನ್ನು ಬೆಳೆಸಿಕೊಂಡಿದ್ದ ಕಾಯಿನನಿಗೆ ಯೆಹೋವನು ಸಲಹೆ ಕೊಟ್ಟಾಗ ಹಾಗೆಯೇ ಆಯಿತು. (ಆದಿಕಾಂಡ 4:3-5) ಇದರಿಂದಾಗಿ ಕಾಯಿನನ ಮುಂದೆ ಇರುವ ಅಪಾಯದ ಕುರಿತು ತಿಳಿದಿದ್ದು, ದೇವರು ಅವನಿಗೆ ಹೇಳಿದ್ದು: “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು.”—ಆದಿಕಾಂಡ 4:6, 7.
ಈ ರೀತಿಯಲ್ಲಿ ಯೆಹೋವನು ಪಾಪವನ್ನು ಒಂದು ಪರಭಕ್ಷಕ ಪ್ರಾಣಿಗೆ ಹೋಲಿಸಿದನು. ಕಾಯಿನನು ತನ್ನ ಮನಸ್ಸಿನಲ್ಲೇ ತನ್ನ ತಮ್ಮನ ವಿರುದ್ಧ ದ್ವೇಷವನ್ನು ಪೋಷಿಸುತ್ತಾ ಇರುತ್ತಿದ್ದಲ್ಲಿ, ಅದು ಥಟ್ಟನೆ ಕಾಯಿನನ ಮೇಲೆ ಆಕ್ರಮಣಮಾಡಲಿತ್ತು. (ಯಾಕೋಬ 1:14, 15ನ್ನು ಹೋಲಿಸಿರಿ.) ತನ್ನ ಮನೋಭಾವವನ್ನು ಬದಲಾಯಿಸಲು, ವಿಪತ್ಕಾರಕ ಮಾರ್ಗಕ್ರಮವನ್ನು ಬೆನ್ನಟ್ಟುವ ಬದಲಿಗೆ, ‘ಒಳ್ಳೇ ಕೆಲಸ ಮಾಡಲು’ ಕಾಯಿನನಿಗೆ ಇನ್ನೂ ಸಮಯವಿತ್ತು. ಆದರೆ ವಿಷಾದಕರವಾಗಿ, ಕಾಯಿನನು ಆ ಎಚ್ಚರಿಕೆಗೆ ಲಕ್ಷ್ಯಕೊಡಲಿಲ್ಲ. ಅವನು ಯೆಹೋವನ ಸಲಹೆಯನ್ನು ತಿರಸ್ಕರಿಸಿ, ಘೋರ ಫಲಿತಾಂಶಗಳನ್ನು ಅನುಭವಿಸಿದನು.
ಕೆಲವರು ಯಾವುದೇ ರೀತಿಯ ಸಲಹೆಯು ಕೊಡಲ್ಪಡುವಲ್ಲಿ ಮುನಿಸನ್ನು ತೋರಿಸುತ್ತಾರೆ ಮತ್ತು ಅದನ್ನು ತಿರಸ್ಕರಿಸುತ್ತಾರೆ. (ಜ್ಞಾನೋಕ್ತಿ 1:22-30) ಸಲಹೆಯು ನಿರಾಕರಿಸಲ್ಪಟ್ಟಾಗ, ಅದು ಸಲಹೆಗಾರನ ತಪ್ಪಾಗಿರಬಹುದೊ? (ಯೋಬ 38:2) ನೀವು ಸಲಹೆಯನ್ನು ಕೊಡುವಾಗ, ಇತರರು ಅದನ್ನು ಸ್ವೀಕರಿಸಲು ಕಷ್ಟಕರವನ್ನಾಗಿ ಮಾಡುತ್ತೀರೊ? ಮಾನವ ಅಪರಿಪೂರ್ಣತೆಯು, ಸಲಹೆ ಕೊಡುವುದನ್ನು ಒಂದು ನಿಜವಾದ ಅಪಾಯವನ್ನಾಗಿ ಮಾಡುತ್ತದೆ. ಆದರೆ ಬೈಬಲ್ ಮೂಲತತ್ವಗಳನ್ನು ಜಾಗರೂಕತೆಯಿಂದ ಅನುಸರಿಸುವ ಮೂಲಕ ಹಾಗಾಗುವ ಸಂಭವವನ್ನು ನೀವು ಕಡಿಮೆಗೊಳಿಸಬಲ್ಲಿರಿ. ಅವುಗಳಲ್ಲಿ ಹಲವಾರು ಮೂಲತತ್ವಗಳನ್ನು ನಾವು ಪರಿಗಣಿಸೋಣ.
‘ಶಾಂತಭಾವದಿಂದ ತಿದ್ದಿ ಸರಿಮಾಡಿ’
“ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ [“ಆತ್ಮಿಕ ಅರ್ಹತೆಗಳಿರುವ,” NW] ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೂ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.” (ಗಲಾತ್ಯ 6:1) ಆದುದರಿಂದ, “ದೋಷದಲ್ಲಿ ಸಿಕ್ಕಿರುವ” ಒಬ್ಬ ಕ್ರೈಸ್ತನನ್ನು ತಿದ್ದಿ ಸರಿಪಡಿಸಲು, “ಆತ್ಮಿಕ ಅರ್ಹತೆಗಳಿರುವವರು” ಪ್ರಯತ್ನಿಸಬೇಕೆಂದು ಅಪೊಸ್ತಲ ಪೌಲನು ತೋರಿಸುತ್ತಾನೆ. ಆದರೆ ಕೆಲವೊಮ್ಮೆ, ಸಲಹೆಯನ್ನು ಕೊಡಲು ತೀರ ಕಡಿಮೆ ಅರ್ಹತೆಯುಳ್ಳವರೇ ಹೆಚ್ಚಿನ ಸಮಯ ಬುದ್ಧಿವಾದವನ್ನು ಕೊಡುವ ಪ್ರವೃತ್ತಿಯುಳ್ಳವರಾಗಿದ್ದಾರೆ ಎಂಬಂತೆ ತೋರುತ್ತದೆ. ಆದುದರಿಂದ, ಇತರರಿಗೆ ಸಲಹೆ ಕೊಡಲು ಆತುರಪಡಬೇಡಿರಿ. (ಜ್ಞಾನೋಕ್ತಿ 10:19; ಯಾಕೋಬ 1:19; 3:1) ಇದನ್ನು ಮಾಡಲು ಆತ್ಮಿಕವಾಗಿ ಅರ್ಹರಾಗಿರುವವರು ಪ್ರಮುಖವಾಗಿ ಸಭಾ ಹಿರಿಯರಾಗಿದ್ದಾರೆ. ಆದರೆ, ಒಬ್ಬ ಸಹೋದರನು ಅಪಾಯದ ದಿಕ್ಕಿನಲ್ಲಿ ನಡೆಯುತ್ತಿರುವುದನ್ನು ನೋಡುವಾಗ, ಯಾವುದೇ ಪ್ರೌಢ ಕ್ರೈಸ್ತನು ಖಂಡಿತವಾಗಿಯೂ ಎಚ್ಚರಿಕೆಯನ್ನು ಕೊಡಬಲ್ಲನು.
ನೀವು ಬುದ್ಧಿವಾದ ಅಥವಾ ಸಲಹೆಯನ್ನು ಕೊಡುತ್ತಿರುವಲ್ಲಿ, ಅದು ಮಾನವ ವಾದಗಳು ಮತ್ತು ತತ್ವಜ್ಞಾನಗಳ ಮೇಲೆ ಅಲ್ಲ ಬದಲಾಗಿ ದೈವಿಕ ವಿವೇಕದ ಮೇಲೆ ಆಧಾರಿಸಿರುವುದನ್ನು ಖಚಿತಪಡಿಸಿಕೊಳ್ಳಿರಿ. (ಕೊಲೊಸ್ಸೆ 2:8) ಅಚ್ಚುಕಟ್ಟಾಗಿ ಕೆಲಸಮಾಡುವ ಅಡಿಗೆಭಟ್ಟನಂತಿರಿ. ತಾನು ಉಪಯೋಗಿಸುತ್ತಿರುವ ಪದಾರ್ಥಗಳು ಉತ್ತಮವೂ, ಅದರಲ್ಲಿ ವಿಷಕರವಾದ ಯಾವುದೇ ವಸ್ತು ಇಲ್ಲವೆಂಬುದನ್ನು ಅವನು ಖಚಿತಪಡಿಸಿಕೊಳ್ಳುತ್ತಾನೆ. ನಿಮ್ಮ ಸಲಹೆಯು ದೇವರ ವಾಕ್ಯದ ಮೇಲೆ ದೃಢವಾಗಿ ಆಧಾರಿಸಲ್ಪಟ್ಟಿದ್ದು, ನಿಮ್ಮ ಸ್ವಂತ ಅಭಿಪ್ರಾಯದ ಮೇಲೆ ಆಧಾರಿಸಲ್ಪಟ್ಟಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿರಿ. (2 ತಿಮೊಥೆಯ 3:16, 17) ಹೀಗೆ ಮಾಡುವುದರಿಂದ, ನಿಮ್ಮ ಸಲಹೆಯು ಯಾರಿಗೂ ಹಾನಿಯನ್ನುಂಟುಮಾಡದು ಎಂಬ ವಿಷಯದಲ್ಲಿ ನೀವು ಖಾತ್ರಿಯಿಂದಿರಬಲ್ಲಿರಿ.
ಸಲಹೆಯನ್ನು ಕೊಡುವ ಉದ್ದೇಶವು, ತಪ್ಪುಮಾಡಿದವನನ್ನು ‘ತಿದ್ದಿ ಸರಿಮಾಡುವುದೇ’ ಆಗಿದೆ, ಅವನನ್ನು ಒತ್ತಾಯಪೂರ್ವಕವಾಗಿ ಬದಲಾಯಿಸುವುದಲ್ಲ. ‘ತಿದ್ದಿ ಸರಿಮಾಡು’ ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, ಕೀಲು ತಪ್ಪಿರುವ ಒಂದು ಎಲುಬಿಗೆ ಹೆಚ್ಚಿನ ಹಾನಿಯಾಗದಂತೆ ಅದನ್ನು ಪುನಃ ಜೋಡಿಸಲು ಅನ್ವಯವಾಗುವ ಒಂದು ಪದಕ್ಕೆ ಸಂಬಂಧಿಸುತ್ತದೆ. ನಿಘಂಟುಕಾರ ಡಬ್ಲ್ಯೂ. ಇ. ವೈನ್ರವರಿಗನುಸಾರ, ಅದು “ಆ ಕಾರ್ಯಗತಿಯಲ್ಲಿ ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆಯ ಅಗತ್ಯ”ವನ್ನು ಸಹ ಸೂಚಿಸುತ್ತದೆ. ಅನಾವಶ್ಯಕವಾದ ದೈಹಿಕ ಬೇನೆಯನ್ನು ತಪ್ಪಿಸಲು ಬೇಕಾಗಿರುವ ಕೋಮಲತೆ ಮತ್ತು ಕೌಶಲ್ಯವನ್ನು ಊಹಿಸಿಕೊಳ್ಳಿರಿ. ಅಂತೆಯೇ, ಸಲಹೆಗಾರನು ಯಾರಿಗೆ ಸಲಹೆಯನ್ನು ಕೊಡುತ್ತಿದ್ದಾನೊ ಅವನ ಮನಸ್ಸಿಗೆ ನೋವಾಗದಂತೆ ತುಂಬ ಜಾಗರೂಕನಾಗಿರಬೇಕು. ಒಬ್ಬ ವ್ಯಕ್ತಿಯು ನಿಮ್ಮ ಸಲಹೆಯನ್ನು ವಿನಂತಿಸಿಕೊಳ್ಳುವಾಗಲೇ ಇದನ್ನು ಮಾಡುವುದು ಸಾಕಷ್ಟು ಕಷ್ಟಕರ. ಹೀಗಿರುವುದರಿಂದ ನಿಮ್ಮ ಸಲಹೆಯು ವಿನಂತಿಸಲ್ಪಡದೆ ಇರುವಾಗ, ಹಾಗೆ ಮಾಡಲು ಇನ್ನೂ ಹೆಚ್ಚಿನ ಕೌಶಲ್ಯ ಮತ್ತು ಜಾಣ್ಮೆಯ ಅಗತ್ಯವಿದೆ.
ಒಬ್ಬ ವ್ಯಕ್ತಿಯನ್ನು ನಿಮ್ಮಿಂದ ದೂರಹೋಗುವಂತೆ ಮಾಡುವಲ್ಲಿ, ನೀವು ಖಂಡಿತವಾಗಿಯೂ ಅವನನ್ನು ‘ತಿದ್ದಿ ಸರಿಮಾಡ’ಲಾರಿರಿ. ಹಾಗೆ ದೂರಹೋಗುವುದನ್ನು ತಪ್ಪಿಸಲು, “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು” ಪ್ರದರ್ಶಿಸುವ ಅಗತ್ಯವಿದೆ ಎಂಬುದನ್ನು ಮನಸ್ಸಿನಲ್ಲಿಡಿರಿ. (ಕೊಲೊಸ್ಸೆ 3:12) ಒಬ್ಬ ವೈದ್ಯನು ತಾಳ್ಮೆಯಿಲ್ಲದವನಾಗಿದ್ದು, ಒರಟುತನದಿಂದ ವರ್ತಿಸಿದರೆ, ರೋಗಿಯು ಅವನ ಮಾತನ್ನು ಅಲಕ್ಷಿಸಿ, ಪುನಃ ಇನ್ನೆಂದೂ ಚಿಕಿತ್ಸೆಗಾಗಿ ಅವನ ಬಳಿ ಹೋಗಲಿಕ್ಕಿಲ್ಲ.
ಸಲಹೆಯನ್ನು ದೃಢವಾಗಿ ಕೊಡುವ ಅಗತ್ಯವಿಲ್ಲವೆಂದು ಇದರ ಅರ್ಥವಲ್ಲ. ಅಸ್ಯಸೀಮೆಯಲ್ಲಿದ್ದ ಏಳು ಸಭೆಗಳಿಗೆ ಸಲಹೆಯನ್ನು ಕೊಡುತ್ತಿದ್ದಾಗ ಯೇಸು ಕ್ರಿಸ್ತನು ದೃಢವಾಗಿದ್ದನು. (ಪ್ರಕಟನೆ 1:4; 3:1-22) ಅವರು ಕಿವಿಗೊಟ್ಟು, ಅನ್ವಯಿಸಿಕೊಳ್ಳಬೇಕಾದ ತೀರ ನೇರವಾದ ಕೆಲವು ಸಲಹೆಯನ್ನು ಅವನು ಅವರಿಗೆ ಕೊಟ್ಟನು. ಆದರೆ, ಯೇಸುವಿನ ದೃಢತೆಯು, ತನ್ನ ಸ್ವರ್ಗೀಯ ತಂದೆಯ ಪ್ರೀತಿಪರ ಮನೋಭಾವವನ್ನು ಪ್ರತಿಬಿಂಬಿಸುತ್ತಾ, ಕನಿಕರ ಮತ್ತು ದಯೆಯಂತಹ ಗುಣಗಳೊಂದಿಗೆ ಯಾವಾಗಲೂ ಸಮತೋಲನದಿಂದಿರುತ್ತಿತ್ತು.—ಕೀರ್ತನೆ 23:1-6; ಯೋಹಾನ 10:7-15.
ವಿನಯದಿಂದ ಸಲಹೆಕೊಡಿರಿ
“ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ [“ಉಪ್ಪಿನಿಂದ ಕೂಡಿ,” NW] ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:6) ಉಪ್ಪು, ಆಹಾರದ ಸ್ವಾದವನ್ನು ಹೆಚ್ಚಿಸಿ, ಅದನ್ನು ರುಚಿಕರವನ್ನಾಗಿ ಮಾಡುತ್ತದೆ. ನಿಮ್ಮ ಸಲಹೆಯು ಮನಸ್ಸಿಗೆ ಹಿತಕರವಾಗಿರಬೇಕಾದರೆ ಅದನ್ನು ‘ವಿನಯದಿಂದ, ಉಪ್ಪನ್ನು ಕೂಡಿಸಿ’ ಕೊಡಬೇಕು. ಅತ್ಯುತ್ತಮವಾದ ಪದಾರ್ಥಗಳಿದ್ದರೂ, ಊಟವು ರುಚಿಕರವಾಗಿ ತಯಾರಿಸಲ್ಪಟ್ಟಿರಲಿಕ್ಕಿಲ್ಲ ಅಥವಾ ಊಟವನ್ನು ತಟ್ಟೆಯಲ್ಲಿ ರಾಶಿಯಾಗಿ ಬಡಿಸಬಹುದು. ಅದರಿಂದ ಒಬ್ಬ ವ್ಯಕ್ತಿಯ ರುಚಿ ಹೆಚ್ಚುವುದಿಲ್ಲ. ವಾಸ್ತವದಲ್ಲಿ, ಒಂದು ತುತ್ತನ್ನು ನುಂಗುವುದು ಸಹ ಕಷ್ಟಕರವಾಗಿರಬಹುದು.
ಸಲಹೆಯನ್ನು ಕೊಡುವಾಗ ಸರಿಯಾದ ಪದಗಳನ್ನು ಆರಿಸಿಕೊಳ್ಳುವುದು ಪ್ರಾಮುಖ್ಯ. ವಿವೇಕಿ ಪುರುಷನಾದ ಸೊಲೊಮೋನನು ಹೇಳಿದ್ದು: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣು [“ಸೇಬು,” NW]ಗಳಿಗೆ ಸಮಾನ.” (ಜ್ಞಾನೋಕ್ತಿ 25:11) ಇದನ್ನು ಬರೆಯುವಾಗ ಅವನ ಮನಸ್ಸಿನಲ್ಲಿ, ಸೊಗಸಾಗಿ ಕೆತ್ತಲ್ಪಟ್ಟಿರುವ ಬಂಗಾರದ ಸೇಬುಗಳುಳ್ಳ ಸುಂದರವಾದ ನಕಾಸೆಯುಳ್ಳ ಬೆಳ್ಳಿಯ ಹರಿವಾಣ ಇದ್ದಿರಬಹುದು. ಅದು ಕಣ್ಣುಗಳಿಗೆ ಎಷ್ಟು ಹಬ್ಬವನ್ನುಂಟುಮಾಡುವುದು, ಮತ್ತು ಅದು ನಿಮಗೆ ಒಂದು ಕೊಡುಗೆಯಾಗಿ ಕೊಡಲ್ಪಡುವಲ್ಲಿ ನೀವೆಷ್ಟು ಗಣ್ಯಮಾಡುವಿರಿ! ಅದೇ ರೀತಿಯಲ್ಲಿ ಸರಿಯಾಗಿ ಆರಿಸಲ್ಪಟ್ಟಿರುವ ವಿನಯಶೀಲ ಮಾತುಗಳು, ನೀವು ಸಹಾಯಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಮನಸ್ಸಿಗೆ ಹಿಡಿಸಬಹುದು.—ಪ್ರಸಂಗಿ 12:9, 10.
ಇದಕ್ಕೆ ವಿರುದ್ಧವಾಗಿ, “ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:1) ಅನುಚಿತ ಮಾತುಗಳು, ಕೃತಜ್ಞತೆಯ ಬದಲಿಗೆ ಸುಲಭವಾಗಿ ನೋವು ಮತ್ತು ಕೋಪವನ್ನು ಉಂಟುಮಾಡಬಲ್ಲವು. ವಾಸ್ತವದಲ್ಲಿ, ಅಯೋಗ್ಯ ಮಾತುಗಳು ಮಾತ್ರವಲ್ಲ, ಅದನ್ನು ತಪ್ಪಾದ ಸ್ವರದಲ್ಲಿ ಹೇಳುವುದು ಸಹ, ಒಬ್ಬ ವ್ಯಕ್ತಿಯು ಮೂಲಭೂತವಾಗಿ ಒಳ್ಳೆಯ ಸಲಹೆಯನ್ನು ತಿರಸ್ಕರಿಸುವಂತೆ ಮಾಡಬಲ್ಲದು. ನಯವಿಲ್ಲದ, ಅಸಂವೇದಿಯಾದ ರೀತಿಯಲ್ಲಿ ಸಲಹೆಯನ್ನು ಕೊಡುವುದು, ಒಬ್ಬ ವ್ಯಕ್ತಿಯ ಮೇಲೆ ಒಂದು ಆಯುಧದಿಂದ ಹಲ್ಲೆಮಾಡುವಷ್ಟೇ ಹಾನಿಕರವಾಗಿದೆ. “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು” ಎಂದು ಜ್ಞಾನೋಕ್ತಿ 12:18 ಹೇಳುತ್ತದೆ. ಆಲೋಚಿಸದೆ ಮಾತಾಡಿ, ಒಬ್ಬ ವ್ಯಕ್ತಿಯು ಸಲಹೆಗೆ ಕಿವಿಗೊಡುವುದನ್ನು ಏಕೆ ಕಷ್ಟಕರವನ್ನಾಗಿ ಮಾಡಬೇಕು?—ಜ್ಞಾನೋಕ್ತಿ 12:15.
ಸೊಲೊಮೋನನು ಹೇಳಿದಂತೆ, ಸಲಹೆಯು “ಸಮಯೋಚಿತ”ವಾಗಿರಬೇಕು. ಸಲಹೆಯು ಸ್ವೀಕರಿಸಲ್ಪಡಲು ಅದನ್ನು ಸರಿಯಾದ ಸಮಯದಲ್ಲಿ ಕೊಡುವುದು ತುಂಬ ಪ್ರಾಮುಖ್ಯ! ಹಸಿವಿಲ್ಲದಿರುವ ಒಬ್ಬ ವ್ಯಕ್ತಿಯು ಊಟಮಾಡಲು ಬಯಸಲಿಕ್ಕಿಲ್ಲವೆಂಬುದು ಸುವ್ಯಕ್ತ. ಅವನು ಸ್ವಲ್ಪ ಸಮಯದ ಮುಂಚೆಯೇ ಊಟಮಾಡಿದ್ದಿರಬಹುದು, ಅಥವಾ ಅವನು ಅಸ್ವಸ್ಥನಾಗಿರಬಹುದು. ತಿನ್ನಲು ಬಯಸದಿರುವ ವ್ಯಕ್ತಿಗೆ ಒತ್ತಾಯದಿಂದ ಉಣಿಸುವುದು ವಿವೇಕಯುತವಲ್ಲ ಮತ್ತು ಸ್ವೀಕಾರಾರ್ಹವೂ ಅಲ್ಲ.
ದೀನಭಾವದಿಂದ ಸಲಹೆನೀಡಿರಿ
“ಅನ್ಯೋನ್ಯಭಾವವುಳ್ಳವರೂ ಒಂದೇ ಗುರಿಯಿಟ್ಟುಕೊಂಡವರೂ ಆಗಿರ್ರಿ. ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” (ಫಿಲಿಪ್ಪಿ 2:2-4) ನೀವು ಒಬ್ಬ ಉತ್ತಮ ಸಲಹೆಗಾರರಾಗಿರುವಲ್ಲಿ, ಇತರರ ಕ್ಷೇಮದ ಕುರಿತು “ವೈಯಕ್ತಿಕ ಆಸಕ್ತಿ” (NW)ಯಿಂದ ಪ್ರಚೋದಿಸಲ್ಪಡುವಿರಿ. ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸುತ್ತಾ, ಆತ್ಮಿಕ ಸಹೋದರಸಹೋದರಿಯರೊಂದಿಗೆ ವ್ಯವಹರಿಸುವಾಗ ನೀವು “ದೀನಭಾವ”ವನ್ನು ತೋರಿಸುವಿರಿ. ಅದರ ಅರ್ಥವೇನು?
ನಮಗೆ ದೀನಭಾವವಿರುವಾಗ, ನಾವೇ ಶ್ರೇಷ್ಠರೆಂಬುದನ್ನು ನಮ್ಮ ಮನೋಭಾವ ಅಥವಾ ಸ್ವರದಲ್ಲಿ ನಾವು ತೋರಿಸುವುದಿಲ್ಲ. ಜೊತೆ ವಿಶ್ವಾಸಿಗಳಿಗಿಂತ ನಾವು ಶ್ರೇಷ್ಠರೆಂದೆಣಿಸಿಕೊಳ್ಳಲು ನಮ್ಮಲ್ಲಿ ಯಾರಿಗೂ ಆಧಾರವಿಲ್ಲ. ಆಗಿಂದಾಗ್ಗೆ ನಮ್ಮಲ್ಲಿ ಎಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ನಾವು ಹೃದಯವನ್ನು ಓದಲು ಅಶಕ್ತರಾಗಿರುವುದರಿಂದ, ನಾವು ಸಲಹೆ ಕೊಡುವ ವ್ಯಕ್ತಿಯ ಹೇತುಗಳನ್ನು ತೀರ್ಪುಮಾಡದಿರುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಅವನಿಗೆ ಯಾವುದೇ ತಪ್ಪು ಹೇತು ಇರಲಿಕ್ಕಿಲ್ಲ, ಮತ್ತು ತನ್ನ ತಪ್ಪು ಮನೋಭಾವ ಅಥವಾ ಕ್ರಿಯೆಗಳ ಕುರಿತಾಗಿ ಅವನಿಗೆ ಅರಿವೇ ಇಲ್ಲದಿರಬಹುದು. ತಾನು ದೇವರ ಆವಶ್ಯಕತೆಗಳಿಗೆ ಹೊಂದಿಕೊಂಡು ನಡೆಯುತ್ತಿಲ್ಲವೆಂದು ಅವನಿಗೆ ಒಂದಿಷ್ಟು ಅರಿವಿದ್ದರೂ, ಅವನ ಆತ್ಮಿಕ ಕ್ಷೇಮದಲ್ಲಿನ ಪ್ರಾಮಾಣಿಕ ಆಸಕ್ತಿಯಿಂದಾಗಿ ಸಲಹೆಯು ನಮ್ರತೆಯಿಂದ ಕೊಡಲ್ಪಡುವಲ್ಲಿ, ಅದನ್ನು ಸ್ವೀಕರಿಸುವುದು ಅವನಿಗೆ ಹೆಚ್ಚು ಸುಲಭವಾಗಿರಬಹುದು.
ನಿಮ್ಮನ್ನು ಒಂದು ಊಟಕ್ಕೆ ಕರೆಯಲಾಗಿದ್ದು, ನಿಮ್ಮ ಆತಿಥೇಯನು ನಿಮ್ಮನ್ನು ನಿರುತ್ಸಾಹದಿಂದ, ತಿರಸ್ಕಾರದಿಂದ ಉಪಚರಿಸಿದರೆ ನಿಮಗೆ ಹೇಗನಿಸುತ್ತದೆ ಎಂಬುದನ್ನು ಭಾವಿಸಿಕೊಳ್ಳಿರಿ! ನೀವು ಖಂಡಿತವಾಗಿಯೂ ಊಟವನ್ನು ಆಸ್ವಾದಿಸಲಾರಿರಿ. “ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ” ಎಂಬುದು ನಿಶ್ಚಯ. (ಜ್ಞಾನೋಕ್ತಿ 15:17) ತದ್ರೀತಿಯಲ್ಲಿ, ಸಲಹೆ ಕೊಡುವವನು, ತಾನು ಸಲಹೆಯನ್ನು ಕೊಡುತ್ತಿರುವವನನ್ನು ಇಷ್ಟಪಡುವುದಿಲ್ಲವೆಂದು ತೋರಿಸುವಲ್ಲಿ ಅಥವಾ ಅವನನ್ನು ಕೀಳಾಗಿಸಿ, ಪೇಚಾಟವನ್ನುಂಟುಮಾಡುವಲ್ಲಿ, ಸಲಹೆಯು ಅತ್ಯುತ್ತಮವಾಗಿರುವುದಾದರೂ ಅದನ್ನು ಸ್ವೀಕರಿಸುವುದು ಕಷ್ಟಕರವಾಗಿರಬಹುದು. ಆದರೆ ಪ್ರೀತಿ, ಪರಸ್ಪರ ಗೌರವ ಮತ್ತು ಭರವಸೆಯಿರುವಲ್ಲಿ, ಸಲಹೆಯನ್ನು ಕೊಡುವುದು ಮತ್ತು ಅದನ್ನು ಸ್ವೀಕರಿಸುವುದು ಹೆಚ್ಚು ಸುಲಭವಾಗುವುದು.—ಕೊಲೊಸ್ಸೆ 3:14.
ಸ್ವೀಕರಿಸಲ್ಪಟ್ಟಿರುವ ಸಲಹೆ
ಪ್ರವಾದಿಯಾದ ನಾತಾನನು, ರಾಜ ದಾವೀದನಿಗೆ ಸಲಹೆಕೊಟ್ಟಾಗ ದೀನಭಾವವನ್ನು ತೋರಿಸಿದನು. ನಾತಾನನು ಏನನ್ನು ಹೇಳಿದನೊ ಮತ್ತು ಮಾಡಿದನೊ ಅದರಲ್ಲಿ ದಾವೀದನಿಗಾಗಿ ಅವನಿಗಿದ್ದ ಪ್ರೀತಿ ಮತ್ತು ಗೌರವವು ಎದ್ದುಕಾಣುತ್ತಿತ್ತು. ಸಲಹೆಗೆ ಕಿವಿಗೊಡುವುದರಲ್ಲಿ ದಾವೀದನಿಗೆ ಇರಬಹುದಾಗಿದ್ದ ಸಮಸ್ಯೆಯನ್ನು ಮನಸ್ಸಿನಲ್ಲಿಡುತ್ತಾ, ನಾತಾನನು ಒಂದು ದೃಷ್ಟಾಂತದೊಂದಿಗೆ ಆರಂಭಿಸಿದನು. (2 ಸಮುವೇಲ 12:1-4) ದಾವೀದನು ನ್ಯಾಯನೀತಿಯನ್ನು ಪ್ರೀತಿಸುತ್ತಿದ್ದನು. ಇದು ಬತ್ಷೆಬೆಯೊಂದಿಗಿನ ಅವನ ಕಾರ್ಯಗಳಲ್ಲಿ ತೋರಿಬರಲಿಲ್ಲವಾದರೂ, ನಾತಾನನು ಅವನ ಆ ಪ್ರೀತಿಯನ್ನು ಉದ್ರೇಕಿಸಿದನು. (2 ಸಮುವೇಲ 11:2-27) ದೃಷ್ಟಾಂತದ ಮುಖ್ಯಾಂಶವು ಒತ್ತಿಹೇಳಲ್ಪಟ್ಟಾಗ, ದಾವೀದನು ಹೃತ್ಪೂರ್ವಕವಾಗಿ ಪ್ರತಿಕ್ರಿಯಿಸಿದ್ದು: “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.” (2 ಸಮುವೇಲ 12:7-13) ಯೆಹೋವನಿಗೆ ಕಿವಿಗೊಡದಿದ್ದ ಕಾಯಿನನಂತಿರದೆ, ದಾವೀದನು ಆ ತಿದ್ದುಪಾಡನ್ನು ನಮ್ರತೆಯಿಂದ ಸ್ವೀಕರಿಸಿದನು.
ದಾವೀದನ ಅಪರಿಪೂರ್ಣತೆ ಮತ್ತು ಅವನು ನಕಾರಾತ್ಮಕವಾಗಿ ಪ್ರತಿಕ್ರಿಯಿಸಬಲ್ಲ ಸಂಭವನೀಯತೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾ, ನಿಸ್ಸಂದೇಹವಾಗಿ ಯೆಹೋವನು ನಾತಾನನನ್ನು ಮಾರ್ಗದರ್ಶಿಸಿದನು. ನಾತಾನನು ತುಂಬ ಜಾಣ್ಮೆಯಿಂದ ಕಾರ್ಯನಿರ್ವಹಿಸಿದನು ಮತ್ತು ಯೆಹೋವನ ಅಭಿಷಿಕ್ತ ರಾಜನೋಪಾದಿ ದಾವೀದನಿಗಿದ್ದ ಸ್ಥಾನದಿಂದಾಗಿ, ಅವನನ್ನು ಶ್ರೇಷ್ಠನೆಂದು ಪರಿಗಣಿಸಿದ್ದನೆಂಬುದು ಸುವ್ಯಕ್ತ. ನೀವು ಅಧಿಕಾರದ ಸ್ಥಾನದಲ್ಲಿದ್ದು ಯೋಗ್ಯವಾದ ಸಲಹೆಯನ್ನು ಕೊಡಬಹುದಾದರೂ, ದೀನಭಾವವನ್ನು ಪ್ರದರ್ಶಿಸಲು ತಪ್ಪುವಲ್ಲಿ ಅದನ್ನು ಸ್ವೀಕರಿಸುವುದು ಕಷ್ಟಕರವಾಗಿರಬಹುದು.
ನಾತಾನನು ದಾವೀದನನ್ನು ಶಾಂತಭಾವದಿಂದ ತಿದ್ದಿ ಸರಿಪಡಿಸಿದನು. ಸ್ವತಃ ತನಗೇ ಪ್ರಯೋಜನವನ್ನು ತರುವಂತಹ ರೀತಿಯಲ್ಲಿ ದಾವೀದನು ಪ್ರತಿಕ್ರಿಯಿಸಲು ಸಾಧ್ಯವಾಗುವಂತೆ, ಪ್ರವಾದಿಯು ವಿನಯದಿಂದ ಮತ್ತು ಜಾಗರೂಕತೆಯಿಂದ ಯೋಚಿಸಿ ಸಲಹೆಯನ್ನು ಕೊಟ್ಟನು. ನಾತಾನನು ಕೇವಲ ಸ್ವಹಿತವನ್ನು ನೋಡಿಕೊಳ್ಳಲಿಲ್ಲ. ಅಥವಾ ಅವನು ದಾವೀದನಿಗಿಂತ ಶ್ರೇಷ್ಠವಾಗಿರುವ ನೈತಿಕ ಅಥವಾ ಆತ್ಮಿಕ ಸ್ಥಾನವನ್ನು ತೆಗೆದುಕೊಳ್ಳಲು ಪ್ರಯತ್ನಿಸಲಿಲ್ಲ. ಸರಿಯಾದ ಮಾತುಗಳನ್ನು, ತಕ್ಕದ್ದಾದ ರೀತಿಯಲ್ಲಿ ಹೇಳುವುದಕ್ಕೆ ಎಂತಹ ಒಂದು ಉತ್ತಮ ಮಾದರಿ! ನೀವು ತದ್ರೀತಿಯ ಮನೋಭಾವವನ್ನು ಪ್ರದರ್ಶಿಸುವಲ್ಲಿ, ಇತರರು ಸಹ ನಿಮ್ಮ ಸಲಹೆಯನ್ನು ಸ್ವೀಕರಿಸುವ ಸಾಧ್ಯತೆ ಬಹಳಷ್ಟಿರುತ್ತದೆ.
[ಪುಟ 22 ರಲ್ಲಿರುವ ಚಿತ್ರ]
ಪೌಷ್ಟಿಕ ಊಟದಂತೆ ನಿಮ್ಮ ಸಲಹೆಯು ಹಿತಕರವಾಗಿರಬೇಕು
[ಪುಟ 23 ರಲ್ಲಿರುವ ಚಿತ್ರ]
ನಿಮ್ಮ ಸಲಹೆಯನ್ನು, ಬೆಳ್ಳಿಯ ನಕಾಸಿಯಲ್ಲಿರುವ ಖಚಿತವಾದ ಬಂಗಾರದ ಸೇಬುಗಳಷ್ಟು ಆಕರ್ಷಕವಾಗಿ ಮಾಡುತ್ತೀರೊ?
[ಪುಟ 24 ರಲ್ಲಿರುವ ಚಿತ್ರ]
ಪ್ರವಾದಿಯಾದ ನಾತಾನನು ದೀನಭಾವದಿಂದ ದಾವೀದನ ನ್ಯಾಯಪ್ರೇಮ ಮತ್ತು ಪ್ರೀತಿಯನ್ನು ಸಂಬೋಧಿಸಿ ಮಾತಾಡಿದನು