ಅವರ ನಂಬಿಕೆಯನ್ನು ಅನುಕರಿಸಿ
“ಅವನು ಸತ್ತುಹೋದರೂ . . . ಇನ್ನೂ ಮಾತಾಡುತ್ತಾನೆ”
ಗುಡ್ಡದ ಇಳಿಜಾರಿನಲ್ಲಿ ಕುರಿಗಳನ್ನು ಮೇಯಿಸುತ್ತಾ ಹೇಬೆಲ ಕೂತಿದ್ದಾನೆ. ಅವನ ದೃಷ್ಟಿ ಕುರಿಮಂದೆಗಿಂತ ದೂರದಲ್ಲಿ ಕಾಣುತ್ತಿದ್ದ ಅಸ್ಪಷ್ಟ ಹೊಳಪಿನತ್ತ ಸರಿಯುತ್ತೆ. ಅದು ಏದೆನ್ ತೋಟಕ್ಕೆ ಯಾರೂ ಪ್ರವೇಶಿಸದಂತೆ ತಡೆಯಲು ಸದಾ ತಿರುಗುತ್ತಿದ್ದ ಕತ್ತಿ. . . ಒಂದು ಕಾಲದಲ್ಲಿ ಅಲ್ಲೇ ಅವನ ಅಪ್ಪಅಮ್ಮ ವಾಸಿಸುತ್ತಿದ್ದರು. ಆದರೆ ಈಗ ಅವರಿಗಾಗಲಿ ಅವರ ಮಕ್ಕಳಿಗಾಗಲಿ ಪ್ರವೇಶವಿಲ್ಲ. ಇದನ್ನೆಲ್ಲ ಯೋಚಿಸುತ್ತಿರುವಾಗಲೇ ಇಳಿಬಿಸಿಲ ತಂಗಾಳಿ ಅವನ ಮುಖವನ್ನು ಸೋಕಿ ತಲೆಗೂದಲು ಹಾರುತ್ತಿದ್ದಂತೆ ತಲೆಯನ್ನು ಮೇಲಕ್ಕೆತ್ತಿ ತನ್ನ ಸೃಷ್ಟಿಕರ್ತನನ್ನು ನೆನಪಿಸಿಕೊಳ್ಳುತ್ತಾನೆ. ಹೇಬೆಲನನ್ನು ಕಾಡುತ್ತಿದ್ದ ಒಂದೇ ಪ್ರಶ್ನೆ, ದೇವರ ಮತ್ತು ಮನುಷ್ಯನ ಮಧ್ಯೆ ಉಂಟಾಗಿರುವ ಬಿರುಕು ಸರಿಯಾಗುವುದೇ?
ಹೇಬೆಲ ಇಂದು ನಿಮ್ಮ ಜೊತೆ ಮಾತಾಡುತ್ತಿದ್ದಾನೆ. ನಿಮಗೆ ಕೇಳಿಸುತ್ತಿದೆಯಾ? ಅದ್ಹೇಗೆ ಸಾಧ್ಯ! ಹೇಬೆಲ ಆದಾಮನ ಎರಡನೇ ಮಗ. ಅವನು ತೀರಿಹೋಗಿ 6000 ವರ್ಷ ಆಗಿದೆ. ಎಲುಬುಗಳ ಸಮೇತ ಮಣ್ಣಲ್ಲಿ ಮಣ್ಣಾಗಿ ಹೋಗಿರುತ್ತೆ. ಅದಲ್ಲದೆ, ಸತ್ತವರಿಗೆ “ಯಾವ ತಿಳಿವಳಿಕೆಯೂ ಇಲ್ಲ” ಅಂತ ಬೈಬಲೇ ಹೇಳುತ್ತೆ. (ಪ್ರಸಂಗಿ 9:5, 10) ಇನ್ನು ಬೈಬಲಲ್ಲಿ ಹೇಬೆಲ ಆಡಿದ ಒಂದೇ ಒಂದು ಮಾತೂ ಇಲ್ಲ. ಹೀಗಿರುವಾಗ ಅವನು ಹೇಗೆ ನಮ್ಮ ಜೊತೆ ಮಾತಾಡಕ್ಕಾಗುತ್ತೆ?
ಯೇಸುವಿನ ಒಬ್ಬ ಅನುಯಾಯಿ ಪೌಲ ಹೇಬೆಲನ ಬಗ್ಗೆ ಹೀಗೆ ಹೇಳಿದನು: “ಅವನು ಸತ್ತುಹೋದರೂ . . . ಇನ್ನೂ ಮಾತಾಡುತ್ತಾನೆ.” (ಇಬ್ರಿಯ 11:4) ಹೇಗೆ? ಆ ವಚನ ಹೇಳುತ್ತೆ ನಂಬಿಕೆಯ ಮೂಲಕ ಅಂತ. ಈ ಉತ್ಕೃಷ್ಟ ಗುಣವನ್ನು ತೋರಿಸಿದ ಪ್ರಪ್ರಥಮ ಮನುಷ್ಯ ಹೇಬೆಲ. ಅವನಲ್ಲಿ ಎಷ್ಟು ಅಚಲ ನಂಬಿಕೆಯಿತ್ತೆಂದರೆ ಅವನ ಮಾದರಿ ಇವತ್ತಿಗೂ ಜೀವಂತ, ಪ್ರಸಕ್ತ. ನಾವಿಂದು ಅನ್ವಯಿಸಿಕೊಳ್ಳುವಷ್ಟು ಸ್ಪಂದಕ. ಅವನ ಮಾದರಿಯನ್ನು ಓದಿ ನಂಬಿಕೆಯನ್ನು ಬೆಳೆಸಿಕೊಳ್ಳುವಲ್ಲಿ ಅವನು ಮಾತಾಡುತ್ತಿರುವುದು ನಿಜವಾಗ್ಲೂ ನಮಗೆ ಕೇಳಿಸಿದಂತೆ.
ಹೇಬೆಲನ ಕುರಿತು ಬೈಬಲಿನಲ್ಲಿ ಅಷ್ಟೇನು ಮಾಹಿತಿ ಇಲ್ಲ. ಹೀಗಿರುವಾಗ ಅವನ ಕುರಿತು ಅವನ ನಂಬಿಕೆಯ ಕುರಿತು ಕಲಿಯೋದು ಹೇಗೆ? ಬನ್ನಿ ನೋಡೋಣ.
ಮಾನವಕುಲ ಅಂಬೆಗಾಲಿಡುವ ಸಮಯದಲ್ಲಿ ಜೀವಿಸಿದ್ದ
ಭೂಮಿಯಲ್ಲಿ ಮಾನವರನ್ನು ದೇವರು ಸೃಷ್ಟಿಮಾಡಿದ ಕೊಂಚವೇ ಸಮಯದಲ್ಲಿ ಹೇಬೆಲ ಹುಟ್ಟಿದ. ಅವನು “ಲೋಕದ ಆದಿ”ಯ ಸಮಯದಲ್ಲಿ ಜೀವಿಸಿದ್ದನೆಂದು ಯೇಸು ಕೂಡ ಹೇಳಿದ್ದನು. (ಲೂಕ 11:50, 51) “ಲೋಕದ ಆದಿ” ಅಂದರೆ ಮಾನವ ಸೃಷ್ಟಿಯ ಆರಂಭ. ಹೇಬೆಲ ಭೂಮಿಯಲ್ಲಿ ಜೀವಿಸಿದ ನಾಲ್ಕನೇ ವ್ಯಕ್ತಿಯಾಗಿದ್ದರೂ ದೇವರ ಪ್ರೀತಿಗೆ ಪಾತ್ರನಾದ ಮತ್ತು ದೇವರ ದೃಷ್ಟಿಯಲ್ಲಿ ಪಾಪದ ವಿಮೋಚನೆಗೆ ಪಾತ್ರನಾದ ಮೊತ್ತಮೊದಲ ವ್ಯಕ್ತಿ ಇವನು.a ಹಾಗಾದರೆ ಇವನ ಕಾಲದಲ್ಲಿ ಜೀವಿಸಿದ್ದವರು ಇವನಿಗೆ ಆದರ್ಶಪ್ರಾಯರಾಗಿರಲಿಲ್ಲ ಎಂದಾಯಿತು.
ಆಗಷ್ಟೇ ಅಂಬೆಗಾಲಿಡುತ್ತಿದ್ದ ಮಾನವಕುಲವನ್ನು ದುಃಖ-ದುಗುಡ ಮುತ್ತಿಕೊಂಡವು. ಆದಾಮ ಹವ್ವ ಬಲು ಸುಂದರರಾಗಿದ್ದರು. ಪಾದರಸದಂತೆ ಚುರುಕಾಗಿದ್ದರು. ಆದರೆ ಅವರು ಗೊತ್ತಿದ್ದು ಗೊತ್ತಿದ್ದು ಒಂದು ತಪ್ಪು ಮಾಡಿದರು. ಪರಿಪೂರ್ಣರಾಗಿದ್ದ ಅವರಿಗೆ ಅನಂತಕಾಲ ಜೀವಿಸುವ ಪ್ರತೀಕ್ಷೆಯಿತ್ತು. ಆದರೆ ಯೆಹೋವ ದೇವರ ವಿರುದ್ಧ ತಪ್ಪು ಮಾಡಿದ್ದರಿಂದ ಅವರನ್ನು ಏದೆನ್ ತೋಟದಿಂದ ಹೊರಹಾಕಲಾಯಿತು. ಅವರಿಗೆ ತಮ್ಮ ಸ್ವಾರ್ಥ ಮುಖ್ಯವಾಗಿತ್ತು. ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಚಿಂತೆಮಾಡಲಿಲ್ಲ. ಪರಿಣಾಮ, ಪರಿಪೂರ್ಣ ಮನಸ್ಸು, ಆರೋಗ್ಯ, ಅನಂತಕಾಲ ಬದುಕುವ ಅವಕಾಶ ಎಲ್ಲಾ ಕೈಜಾರಿತು.—ಆದಿಕಾಂಡ 2:15–3:24.
ಆದಾಮಹವ್ವರಿಗೆ ಏದೆನ್ ತೋಟದ ಹೊರಗಿನ ಬದುಕು ಮುಳ್ಳಿನ ಹಾದಿಯಾಗಿತ್ತು. ಆದರೆ ಒಂದು ಮಗು ಹುಟ್ಟಿದಾಗ ಅದರ ಮೇಲೆ ತಮ್ಮ ಆಶಾಗೋಪುರವನ್ನೇ ಕಟ್ಟಿದರು. ಆ ಮಗುವಿಗೆ ಕಾಯಿನ ಅಂತ ಹೆಸರಿಟ್ಟರು. “ಯೆಹೋವನ ಅನುಗ್ರಹದಿಂದ ಗಂಡುಮಗುವನ್ನು ಪಡೆದಿದ್ದೇನೆ” ಅಂತ ಹವ್ವ ಹರ್ಷೋದ್ಗಾರ ತೆಗೆದಳು. ಯೆಹೋವನು ಏದೆನ್ ತೋಟದಲ್ಲಿ ಮಾಡಿದ್ದ ವಾಗ್ದಾನ ಅವಳ ಮನಸ್ಸಿನಲ್ಲಿದ್ದಿರಬೇಕು. ತನ್ನನ್ನೂ ತನ್ನ ಪತಿಯನ್ನೂ ದಾರಿತಪ್ಪಿಸಿದ ದುಷ್ಟನನ್ನು ಸ್ತ್ರೀಯ ಸಂತಾನ ನಾಶಮಾಡುತ್ತೆ ಅಂತ ದೇವರು ಹೇಳಿದ್ದನು. (ಆದಿಕಾಂಡ 3:15; 4:1) ತಾನೇ ಆ ಸ್ತ್ರೀ ಮತ್ತು ಕಾಯಿನನೇ ಆ “ಸಂತಾನ” ಅಂತ ಹವ್ವಳು ಭಾವಿಸಿದ್ದಳಾ?
ಹಾಗೆ ಭಾವಿಸಿದ್ದಲ್ಲಿ ಅವಳ ಭಾವನೆ ತಪ್ಪಾಗಿತ್ತು. ಅಲ್ಲದೆ ಇಂಥ ವಿಚಾರಗಳನ್ನು ಕಾಯಿನನ ಮನಸ್ಸಿನಲ್ಲಿ ಅವಳೂ ಆದಾಮನೂ ಮೂಡಿಸಿದ್ದರೆ ಅದು ಅಪರಿಪೂರ್ಣ ಮನುಷ್ಯನಾಗಿದ್ದ ಕಾಯಿನನಲ್ಲಿ ಅಹಂಕಾರವನ್ನು ಮೂಡಿಸಿರಬೇಕೇ ವಿನಾ ಇನ್ನಾವ ಒಳಿತನ್ನೂ ಮಾಡಿರಲ್ಲ. ಸಮಯ ಉರುಳಿದಂತೆ ಹವ್ವ ಎರಡನೇ ಮಗನನ್ನು ಹೆತ್ತಳು. ಆದರೆ ಆ ಮಗನ ಬಗ್ಗೆ ಯಾವ ನಿರೀಕ್ಷೆಯ ಮಾತೂ ಇಲ್ಲ. ಆದಾಮಹವ್ವ ಆ ಮಗುವಿಗೆ ಹೇಬೆಲ ಎಂದು ಹೆಸರಿಟ್ಟರು. ಆ ಹೆಸರಿನ ಅರ್ಥ “ನಿಶ್ವಾಸ ಅಂದರೆ ಬಿಟ್ಟ ಉಸಿರು” ಅಥವಾ “ವ್ಯರ್ಥ” ಎಂದಾಗಿರಬಹುದು. (ಆದಿಕಾಂಡ 4:2) ಯಾಕೆ ಈ ಹೆಸರನ್ನು ಆಯ್ಕೆ ಮಾಡಿದರು? ಅವನ ಮೇಲೆ ಕಡಿಮೆ ಪ್ರತೀಕ್ಷೆಗಳಿದ್ದ ಕಾರಣನಾ? ಕಾಯಿನನ ಮೇಲೆ ಇದ್ದಷ್ಟು ನಿರೀಕ್ಷೆ ಹೇಬೆಲನ ಮೇಲೆ ಇರಲಿಲ್ವಾ? ನಾವು ಏನಿದ್ದರೂ ಊಹಿಸಬಹುದಷ್ಟೇ.
ಆದರೆ ಇಂದಿನ ಹೆತ್ತವರು ಕೆಲವೊಂದು ಪಾಠ ಕಲೀಬಹುದು. ಆ ಮೂಲ ಮಾತಾಪಿತರಂತೆ ನೀವು ನಡೆನುಡಿಗಳ ಮೂಲಕ ನಿಮ್ಮ ಮಕ್ಕಳಲ್ಲಿ ಅಹಂಕಾರ, ಹೆಬ್ಬಯಕೆ, ಸ್ವಾರ್ಥವನ್ನು ತುಂಬಿಸುತ್ತಿದ್ದೀರಾ? ಅಥವಾ ಅವರು ಯೆಹೋವ ದೇವರನ್ನು ಪ್ರೀತಿಸಿ ಆತನ ಸ್ನೇಹಿತರಾಗುವಂತೆ ಕಲಿಸುತ್ತಿದ್ದೀರಾ? ಆದಿಹೆತ್ತವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ. ಆದರೂ ದೇವರು ಅವರ ಸಂತತಿಗೆ ನಿರೀಕ್ಷೆಯನ್ನು ನೀಡಿದ್ದಾನೆ.
ಹೇಬೆಲ ನಂಬಿಕೆಯನ್ನು ಬೆಳೆಸಿಕೊಂಡ ವಿಧ
ಆ ಇಬ್ಬರು ಹುಡುಗರು ಬೆಳೆದು ದೊಡ್ಡವರಾಗುತ್ತಿದ್ದಾಗ ಕುಟುಂಬದ ಅವಶ್ಯಕತೆಗಳಿಗಾಗಿ ದುಡಿಯುವಂತೆ ಆದಾಮ ತರಬೇತಿ ಕೊಟ್ಟಿರಬೇಕು. ಆದ್ದರಿಂದ ಕಾಯಿನ ರೈತನಾದ. ಹೇಬೆಲ ಕುರುಬನಾದ.
ಆದರೆ ಹೇಬೆಲ ಹೆಚ್ಚು ಪ್ರಮುಖವಾದ ವಿಷಯವನ್ನು ಮಾಡಿದ. ಒಂದೊಂದು ವರ್ಷವೂ ಕಳೆದಂತೆ ಅವನು ದೇವರ ಮೇಲೆ ಅಚಲ ನಂಬಿಕೆ ಬೆಳಸಿಕೊಂಡ. ಅದರ ಬಗ್ಗೆ ಯೇಸುವಿನ ಅನುಯಾಯಿಯಾದ ಪೌಲ ಕೂಡ ಬರೆದಿದ್ದಾನೆ. ಸ್ವಲ್ಪ ಯೋಚಿಸಿ, ಹೇಬೆಲನಿಗೆ ಆದರ್ಶಪ್ರಾಯರಾಗಿ ಯಾರೂ ಇರಲಿಲ್ಲ. ಹಾಗಾದರೆ ಯೆಹೋವ ದೇವರಲ್ಲಿ ಅವನು ನಂಬಿಕೆ ಬೆಳೆಸಿಕೊಂಡದ್ದು ಹೇಗೆ? ಅಚಲ ನಂಬಿಕೆಯನ್ನು ಕಟ್ಟಲು ಅವನಿಗೆ ಮೂರು ವಿಷಯಗಳು ನೆರವಾಗಿದ್ದವು.
ಯೆಹೋವ ದೇವರ ಸೃಷ್ಟಿ.
ಯೆಹೋವನು ಭೂಮಿಯನ್ನು ಶಪಿಸಿದ್ದು ನಿಜ. ಪರಿಣಾಮವಾಗಿ ಭೂಮಿಯ ಮೇಲೆ ಮುಳ್ಳುಗಿಡ, ಕಳೆಗಳು ಬೆಳೆದು ವ್ಯವಸಾಯಕ್ಕೆ ತಡೆಯೊಡ್ಡಿದವು. ಹಾಗಿದ್ದರೂ ಹೇಬೆಲನ ಕುಟುಂಬ ಬದುಕಿ ಉಳಿಯುವಂತೆ ಆ ಭೂಮಿ ಧಾರಾಳ ಆಹಾರವನ್ನು ಬೆಳೆಸಿತ್ತು. ಮಾತ್ರವಲ್ಲ ಪ್ರಾಣಿ, ಪಕ್ಷಿ, ಮೀನು ಇವುಗಳ ಮೇಲೆ ಹಾಗೂ ಬೆಟ್ಟ, ಸರೋವರ, ನದಿ, ಸಮುದ್ರಗಳ ಮೇಲೆ ಶಾಪವಿರಲಿಲ್ಲ. ಅಲ್ಲದೆ ಆಕಾಶ, ಮೋಡಗಳು, ಸೂರ್ಯ, ಚಂದ್ರ, ನಕ್ಷತ್ರಗಳ ಮೇಲೂ ಶಾಪವಿರಲಿಲ್ಲ. ಹೇಬೆಲ ತನ್ನ ದೃಷ್ಟಿಯನ್ನು ಹರಿಸಿದಲ್ಲೆಲ್ಲಾ ಸಕಲ ಸೃಷ್ಟಿಗೆ ಮೂಲನಾದ ಯೆಹೋವ ದೇವರ ಪರಮ ಪ್ರೀತಿ, ವಿವೇಕ ಮತ್ತು ಒಳ್ಳೇತನದ ರುಜುವಾತನ್ನು ಕಂಡನು. (ರೋಮನ್ನರಿಗೆ 1:20) ಅಂಥ ವಿಷಯಗಳ ಬಗ್ಗೆ ಕೃತಜ್ಞತಾಭಾವದಿಂದ ಮಾಡಿದ ಧ್ಯಾನ ಅವನ ನಂಬಿಕೆಯನ್ನು ಬಲಪಡಿಸಿತು.
ಯೆಹೋವನ ಕುರಿತು ಯೋಚಿಸುವುದರಲ್ಲಿ ಹೇಬೆಲ ತುಂಬ ಸಮಯ ಕಳೆಯುತ್ತಿದ್ದ. ಕುರಿಮಂದೆಯನ್ನು ಮೇಯಿಸುತ್ತಿರುವ ಹೇಬೆಲನನ್ನು ಚಿತ್ರಿಸಿಕೊಳ್ಳಿ. ಒಬ್ಬ ಕುರುಬ ತುಂಬಾ ನಡೆಯಬೇಕಾಗುತ್ತೆ. ಆ ಸಾಧು ಪ್ರಾಣಿಗಳನ್ನು ಗುಡ್ಡಗಳ ಮೇಲಿಂದ ಕಣಿವೆಗಳ ದಾರಿಯಾಗಿ ನದಿಗಳಿಂದಾಚೆಗೆ ನಡಿಸುತ್ತಾ ಹೋಗಬೇಕು. ಹಚ್ಚಹಸುರಾದ ಹುಲ್ಲುಗಾವಲು, ತಿಳಿನೀರಿನಿಂದ ತುಂಬಿರುವ ಹಳ್ಳಗಳು, ಸುಭದ್ರವಾದ ವಿಶ್ರಾಂತಿ ತಾಣಗಳನ್ನು ಸದಾ ಹುಡುಕುತ್ತಿರಬೇಕಾಗುತ್ತೆ. ಕುರಿಗಳು ದೇವರ ಸೃಷ್ಟಿಜೀವಿಗಳಲ್ಲಿ ಅತ್ಯಂತ ನಿಸ್ಸಹಾಯಕ ಜೀವಿಗಳು. ಮನುಷ್ಯನ ಮಾರ್ಗದರ್ಶನೆ ಸಂರಕ್ಷಣೆಯ ಕೆಳಗೇ ಸದಾ ಇರಬೇಕೆಂದು ಅವನ್ನು ಸೃಷ್ಟಿಸಲಾಗಿದೆಯೊ ಎಂಬಂತಿದೆ. ತನಗೂ ಅಂಥ ಮಾರ್ಗದರ್ಶನೆ, ಸಂರಕ್ಷಣೆ, ಪರಾಮರಿಕೆ ಬೇಕು ಮತ್ತು ಅದು ಮನುಷ್ಯರಿಗಿಂತ ಅತೀ ಶಕ್ತಿಶಾಲಿ ವಿವೇಕಿ ಆದ ದೇವರಿಂದ ಸಿಗಬೇಕು ಅಂತ ಹೇಬೆಲ ಗ್ರಹಿಸಿಕೊಂಡನಾ? ಇಂಥ ಎಷ್ಟೋ ಯೋಚನೆಗಳನ್ನು ಅವನು ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಿರಲೇಬೇಕು. ಫಲಿತಾಂಶವಾಗಿ ಅವನ ನಂಬಿಕೆ ಬೆಳೆಯುತ್ತಾ ಹೋಯಿತು.
ಹೇಬೆಲ ಸುತ್ತಮುತ್ತಲಿನ ಅದ್ಭುತ ಸೃಷ್ಟಿಯ ಕುರಿತು ಧ್ಯಾನಿಸಿ ದೇವರಲ್ಲಿ ಅಚಲ ನಂಬಿಕೆ ಬೆಳೆಸಿಕೊಂಡ
ಯೆಹೋವ ದೇವರ ವಾಗ್ದಾನಗಳು.
ತಮ್ಮನ್ನು ಯಾಕೆ ಏದೆನ್ ತೋಟದಿಂದ ಹೊರಹಾಕಲಾಯಿತು ಅಂತ ಆದಾಮ ಹವ್ವರು ತಮ್ಮ ಪುತ್ರರಿಗೆ ತಿಳಿಸಿದ್ದಿರಬೇಕು. ಹಾಗಾಗಿ ಹೇಬೆಲನಿಗೆ ಧ್ಯಾನ ಮಾಡಲು ಬೆಟ್ಟದಷ್ಟು ವಿಷಯಗಳಿದ್ದವು.
ಭೂಮಿಗೆ ಶಾಪ ಬಂತು ಅಂತ ಯೆಹೋವನು ಹೇಳಿದ್ದನು. ಅದರಂತೆ ಭೂಮಿಯಲ್ಲಿ ಮುಳ್ಳುಗಿಡಗಳು ಕಳೆಗಳು ಬೆಳೆದದ್ದನ್ನು ಹೇಬೆಲ ನೋಡಿದ. ಹವ್ವಳು ಗರ್ಭಿಣಿಯಾಗಿ ಮಗುವನ್ನು ಹೆರುವಾಗ ಕಷ್ಟ-ನೋವು ಅನುಭವಿಸುತ್ತಾಳೆ ಅಂತನೂ ಯೆಹೋವನು ಹೇಳಿದ್ದನು. ತನ್ನ ಒಡಹುಟ್ಟಿದವರ ಜನನದ ಸಮಯದಲ್ಲಿ ಆ ಮಾತುಗಳು ನಿಜವಾಗಿದ್ದನ್ನು ಹೇಬೆಲ ನೋಡಿದ. ಹವ್ವಳಿಗೆ ತನ್ನ ಗಂಡನ ಪ್ರೀತಿಗೆ ಮತ್ತು ಪರಿಗಣನೆಗೆ ಬಯಸಿದರೂ ಆದಾಮ ಅವಳ ಮೇಲೆ ದೊರೆತನ ಮಾಡುವ ಸಂಗತಿಯನ್ನೂ ಯೆಹೋವನು ಹೇಳಿದ್ದನು. ಈ ವಿಷಾದಕರ ಸಂಗತಿ ತನ್ನ ತಂದೆತಾಯಿಯ ಮಧ್ಯೆ ಸಂಭವಿಸಿದ್ದನ್ನು ಹೇಬೆಲ ಕಣ್ಣಾರೆ ಕಂಡಿರಬೇಕು. ಹೀಗೆ ಪ್ರತಿ ವಿಷಯದಲ್ಲೂ ಯೆಹೋವನ ಮಾತುಗಳು ಸತ್ಯವಾದದ್ದನ್ನು ಅವನು ನೋಡಿದ. ಆದ್ದರಿಂದ “ಸಂತಾನ”ದ ಕುರಿತ ದೇವರ ವಾಗ್ದಾನದಲ್ಲಿ ಪೂರ್ಣ ನಂಬಿಕೆಯಿಡಲು ಅವನಿಗೆ ಬಲವಾದ ಕಾರಣಗಳಿದ್ದವು. ಏದೆನ್ ತೋಟದಲ್ಲಿ ಆರಂಭಿಸಿದ ತಪ್ಪುಗಳನ್ನೆಲ್ಲ ಆ ಸಂತಾನ ಮುಂದೊಂದು ದಿನ ಸರಿಪಡಿಸುವುದೆಂಬ ದೃಢನಂಬಿಕೆ ಅವನಿಗಿತ್ತು.—ಆದಿಕಾಂಡ 3:15-19.
ಯೆಹೋವ ದೇವರ ಸೇವಕರು.
ಮಾನವರಲ್ಲಿ ಯಾವ ಉತ್ತಮ ಮಾದರಿಯನ್ನೂ ಹೇಬೆಲ ಕಾಣಲಿಲ್ಲ. ಆದರೆ ದೇವದೂತರು ಭೂಮಿಯಲ್ಲಿದ್ದರು. ಅವರು ದೇವರ ಮೇಲೆ ಇಟ್ಟಿದ್ದ ಅಚಲ ನಂಬಿಕೆ ಹೇಬೆಲನಿಗೆ ಆದರ್ಶಪ್ರಾಯವಾಗಿತ್ತು. ಏದೆನ್ ತೋಟದಿಂದ ಆದಾಮಹವ್ವರನ್ನು ಹೊರಗಟ್ಟಿದ ಮೇಲೆ ಅವರಾಗಲಿ ಅವರ ಮಕ್ಕಳಾಗಲಿ ಆ ಸುಂದರ ಉದ್ಯಾನವನಕ್ಕೆ ಕಾಲಿಡದಂತೆ ಯೆಹೋವನು ಕ್ರಮಕೈಕೊಂಡನಲ್ಲಾ. ಹೌದು ಪ್ರವೇಶದ್ವಾರದಲ್ಲಿ ಕೆರೂಬಿಗಳನ್ನು ಕಾವಲಿಟ್ಟನು. ಇವರು ಅತಿ ಮೇಲ್ದರ್ಜೆಯ ದೂತರಾಗಿದ್ದರು. ಧಗಧಗನೆ ಪ್ರಜ್ವಲಿಸುತ್ತಾ ಸುತ್ತುತ್ತಿರುವ ಕತ್ತಿಯೂ ಅಲ್ಲಿತ್ತು.—ಆದಿಕಾಂಡ 3:24.
ಬಾಲಕನಾಗಿದ್ದಾಗ ಹೇಬೆಲ ಆ ಕೆರೂಬಿಗಳನ್ನು ನೋಡುತ್ತಿರುವುದನ್ನು ಚಿತ್ರಿಸಿಕೊಳ್ಳಿ. ಮಾನವ ರೂಪದಲ್ಲಿ ಅವರು ನಿಂತಿದ್ದರೂ ಅತ್ಯಂತ ಬಲಶಾಲಿಗಳು ಎನ್ನುವುದು ಅವನಿಗೆ ನಿಚ್ಚಳವಾಗಿ ಕಂಡಿರುತ್ತೆ. “ಸದಾ ಪ್ರಜ್ವಲಿಸುತ್ತಾ ಸುತ್ತುತ್ತಿರುವ ಕತ್ತಿ” ಭಯ-ಗೌರವ ಮೂಡಿಸಿರುತ್ತೆ. ಆ ಕೆರೂಬಿಗಳು ಕೆಲಸ ಬೋರಾಗಿ ತಮ್ಮ ಕಾವಲನ್ನು ಬಿಟ್ಟುಹೋದ್ರಾ? ದಿನ ಕಳೆದು ರಾತ್ರಿ ಆಯಿತು, ವರ್ಷಗಳು ಉರುಳುತ್ತಿದ್ದವು. ಆ ಬಲಿಷ್ಠ ಜೀವಿಗಳು ಅದೇ ಸ್ಥಾನದಲ್ಲಿ ಕದಲದೆ ನಿಂತಿದ್ದರು. ಯೆಹೋವ ದೇವರಿಗೆ ನೀತಿಯುತ ಹಾಗೂ ಸ್ಥಿರಚಿತ್ತದ ಸೇವಕರು ಇದ್ದಾರೆಂದು ಹೇಬೆಲ ಇದರಿಂದ ತಿಳಿದುಕೊಂಡ. ತನ್ನ ಸ್ವಂತ ಕುಟುಂಬದಲ್ಲಿ ಕಂಡಿರದ ಕರ್ತವ್ಯನಿಷ್ಠೆ ಮತ್ತು ವಿಧೇಯತೆಯನ್ನು ಆ ಕೆರೂಬಿಗಳಲ್ಲಿ ಹೇಬೆಲ ಕಂಡ. ಆ ದೇವದೂತರ ಮಾದರಿ ಅವನ ನಂಬಿಕೆಯನ್ನು ಬಲಪಡಿಸಿದ್ದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ದೇವರು ಮಾಡಿದ ಸೃಷ್ಟಿಯ ಬಗ್ಗೆ, ವಾಗ್ದಾನಗಳ ಬಗ್ಗೆ, ಆತನ ಸೇವಕರಿಟ್ಟ ಮಾದರಿಯ ಬಗ್ಗೆ ಧ್ಯಾನ ಮಾಡಿ ಹೇಬೆಲ ತನ್ನ ನಂಬಿಕೆಯನ್ನು ಬಲಪಡಿಸಿಕೊಂಡ. ಹೇಬೆಲ ಇಂದು ನಮ್ಮೊಂದಿಗೆ ಮಾತಾಡುತ್ತಿದ್ದಾನೆ. ಅವನ ಜೀವನದ ಬಗ್ಗೆ ಓದುವಾಗ ಅವನ ಮಾತನ್ನು ನಾವು ಕೇಳಿಸಿಕೊಳ್ಳುತ್ತಿದ್ದೇವೆ. ಅವನಿಂದ ನಾವು ಎಷ್ಟೋ ಪಾಠಗಳನ್ನು ಕಲಿಯಬಲ್ಲೆವು. ನಮ್ಮ ಕುಟುಂಬದಲ್ಲಿ ಇತರರು ಏನೇ ಮಾಡುತ್ತಿರಲಿ ಯೆಹೋವನಲ್ಲಿ ಅಚಲ ನಂಬಿಕೆಯನ್ನು ಯುವಜನತೆ ಬೆಳೆಸಿಕೊಳ್ಳಬಹುದು ಎನ್ನುವುದಕ್ಕೆ ಹೇಬೆಲ ಒಂದು ಉತ್ತಮ ಮಾದರಿ. ಸುತ್ತಲೂ ಇರುವ ಅದ್ಭುತ ಸೃಷ್ಟಿ, ಲಭ್ಯವಿರುವ ಸಂಪೂರ್ಣ ಬೈಬಲ್ ಹಾಗೂ ನಂಬಿಕೆಯ ಅನೇಕ ಮಾನವ ಆದರ್ಶಗಳು ನಮ್ಮ ಮುಂದೆ ಇರುವಾಗ ಅಚಲ ನಂಬಿಕೆ ಕಟ್ಟಲು ಇನ್ನೇನು ಬೇಕು ಹೇಳಿ?
ಹೇಬೆಲ ಕೊಟ್ಟ ಕಾಣಿಕೆ ಏಕೆ ಶ್ರೇಷ್ಠವಾಗಿತ್ತು?
ಹೇಬೆಲನಿಗೆ ದೇವರ ಮೇಲೆ ನಂಬಿಕೆ ಹೆಚ್ಚುತ್ತಿದ್ದ ಹಾಗೆ ಅದನ್ನು ತನ್ನ ನಡತೆಯಲ್ಲಿ ವ್ಯಕ್ತಪಡಿಸಬೇಕೆಂಬ ಆಸೆ ಚಿಗುರಿತು. ಆದರೆ ಒಬ್ಬ ಮನುಷ್ಯ ವಿಶ್ವದ ನಿರ್ಮಾಣಿಕನಿಗೆ ಏನು ತಾನೇ ಕೊಡಬಲ್ಲ? ದೇವರಿಗೆ ಮನುಷ್ಯನಿಂದ ಯಾವ ಕೊಡುಗೆಯಾಗಲಿ ಸಹಾಯವಾಗಲಿ ಬೇಕಿಲ್ಲ. ಆದರೆ ಹೇಬೆಲ ಒಂದು ಪರಮ ಸತ್ಯವನ್ನು ಗ್ರಹಿಸಿಕೊಂಡ. ಏನಂದರೆ ಯೋಗ್ಯ ಇರಾದೆಯಿಂದ ತನ್ನಲ್ಲಿರುವ ಅತ್ಯುತ್ತಮವಾದುದನ್ನು ಯೆಹೋವನಿಗೆ ಅರ್ಪಿಸುವಲ್ಲಿ ಸ್ವರ್ಗದಲ್ಲಿರುವ ಪ್ರೀತಿಯ ದೇವರು ಸಂತೋಷಪಡುತ್ತಾನೆ.
ಆದುದರಿಂದ ಹೇಬೆಲ ತನ್ನ ಮಂದೆಯಿಂದ ಕೆಲವು ಕುರಿಗಳನ್ನು ಅರ್ಪಿಸಲು ಸಿದ್ಧನಾದ. ಅತ್ಯುತ್ತಮವಾದ ಚೊಚ್ಚಲು ಕುರಿಗಳನ್ನು ಆರಿಸಿಕೊಂಡು ಅವುಗಳಲ್ಲಿ ಅತ್ಯುತ್ತಮವೆಂದು ಕಂಡ ಮಾಂಸಲ ಭಾಗಗಳನ್ನು ಅರ್ಪಣೆ ಮಾಡಿದ. ಕಾಯಿನ ಸಹ ತನ್ನ ಬೆಳೆಯಲ್ಲಿ ಕೆಲವನ್ನು ತಂದು ಅರ್ಪಣೆಗಾಗಿ ತಯಾರಿಸುತ್ತಾ ದೇವರ ಆಶೀರ್ವಾದ, ಮೆಚ್ಚಿಕೆ ಕೋರಲು ಬಯಸಿದ. ಆದರೆ ಅವನ ಇರಾದೆ ಹೇಬೆಲನ ಇರಾದೆಯಂತಿರಲಿಲ್ಲ. ಈ ಅಣ್ಣತಮ್ಮಂದಿರ ಇರಾದೆಗಳು ಅವರು ಕಾಣಿಕೆಗಳನ್ನು ಅರ್ಪಿಸಿದಾಗ ಸ್ಪಷ್ಟವಾಗಿ ತೋರಿತು.
ಕಾಣಿಕೆಗಳನ್ನು ಅರ್ಪಿಸಲು ಆದಾಮನ ಈ ಪುತ್ರರಿಬ್ಬರೂ ಯಜ್ಞವೇದಿ ಮತ್ತು ಬೆಂಕಿಯ ಬಳಕೆ ಮಾಡಿರಬೇಕು. ಬಹುಶಃ ಕೆರೂಬಿಗಳ ಕಣ್ಣಳತೆ ದೂರದಲ್ಲೇ ಕಾಣಿಕೆ ಅರ್ಪಿಸಿರಲೂಬಹುದು. ಆ ಸಮಯದಲ್ಲಿ ಭೂಮಿಯಲ್ಲಿ ಯೆಹೋವನ ಏಕಮಾತ್ರ ಜೀವಂತ ಪ್ರತಿನಿಧಿಗಳೆಂದರೆ ಆ ಕೆರೂಬಿಗಳು ಮಾತ್ರ. ಯೆಹೋವನು ಹೇಗೆ ಸ್ಪಂದಿಸಿದನು? “ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿ”ದನು ಎನ್ನುತ್ತೆ ಬೈಬಲ್. (ಆದಿಕಾಂಡ 4:5) ದೇವರು ತನ್ನ ಮೆಚ್ಚಿಕೆಯನ್ನು ಹೇಗೆ ತೋರಿಸಿದನೆಂದು ಈ ವೃತ್ತಾಂತ ತಿಳಿಸುವುದಿಲ್ಲ. ಆದರೆ ಹೇಬೆಲನನ್ನು ದೇವರು ಮೆಚ್ಚಿದನು. ಏಕೆ?
ದೇವರು ಹೇಬೆಲನ ಕಾಣಿಕೆಯನ್ನು ಮೆಚ್ಚಲು ಕಾರಣವೇನು? ಹೇಬೆಲ ಜೀವಂತ ಕುರಿಗಳನ್ನು ಅರ್ಪಿಸಿದ, ಅದರ ಅಮೂಲ್ಯ ಜೀವರಕ್ತವನ್ನು ಸುರಿಸುತ್ತಾ ಸಮರ್ಪಿಸಿದ. ಇಂಥ ಯಜ್ಞದ ಮೌಲ್ಯವನ್ನು ಅವನು ಅರಿತಿದ್ದಿರಬೇಕು. ಅನೇಕ ಶತಮಾನಗಳು ದಾಟಿದ ಮೇಲೆ ದೇವರು ಆ ದೋಷರಹಿತ ಕುರಿಮರಿಯ ಯಜ್ಞವನ್ನು ತನ್ನ ಸ್ವಂತ ಪರಿಪೂರ್ಣ ಮಗನ ಯಜ್ಞವನ್ನು ಸೂಚಿಸಲು ಬಳಸಿದನು. “ದೇವರ ಕುರಿಮರಿ” ಅಂದರೆ ಯೇಸುವಿನ ನಿರಪರಾಧ ರಕ್ತ ಸಹ ಸುರಿಯಲಿಕ್ಕಿತ್ತು. (ಯೋಹಾನ 1:29; ವಿಮೋಚನಕಾಂಡ 12:5-7) ಇದರ ಬಗ್ಗೆ ಹೇಬೆಲನಿಗೆ ಅಲ್ಪಸ್ವಲ್ಪ ಗೊತ್ತಿದ್ದಿರಬಹುದಾದರೂ ಇಷ್ಟೆಲ್ಲ ವಿಷಯಗಳು ಅವನ ತಿಳಿವಳಿಕೆಗೆ ಮೀರಿದ್ದಾಗಿತ್ತು.
ಆದರೆ ನಮಗೆ ನಿಸ್ಸಂಶಯವಾಗಿ ತಿಳಿದಿರುವ ವಿಷಯ: ಹೇಬೆಲ ತನ್ನಲ್ಲಿದ್ದುದರಲ್ಲಿ ಅತ್ಯುತ್ತಮವಾದದ್ದನ್ನು ಅರ್ಪಿಸಿದ. ಆ ಅರ್ಪಣೆಯನ್ನು ಮಾತ್ರವಲ್ಲ ಅರ್ಪಿಸಿದ ಹೇಬೆಲನನ್ನು ಸಹ ದೇವರು ಮೆಚ್ಚಿದನು. ಯಾಕೆಂದರೆ ಯೆಹೋವನ ಮೇಲೆ ಪ್ರೀತಿ, ಅಚಲ ನಂಬಿಕೆಯಿದ್ದ ಕಾರಣ ಹೇಬೆಲ ಉತ್ತಮ ಕಾಣಿಕೆಯನ್ನು ಅರ್ಪಿಸಿದ್ದ.
ಆದರೆ ಯೆಹೋವನು “ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ.” (ಆದಿಕಾಂಡ 4:5) ಇದರ ಅರ್ಥ ಕಾಯಿನನ ಕಾಣಿಕೆಯಲ್ಲಿ ಏನೊ ದೋಷವಿತ್ತು ಎಂದಲ್ಲ. ಯಾಕಂದ್ರೆ ಸಮಯಾನಂತರ ಫಸಲನ್ನು ಅರ್ಪಿಸುವಂತೆ ದೇವರ ನಿಯಮ ಅನುಮತಿ ನೀಡಿತ್ತು. (ಯಾಜಕಕಾಂಡ 6:14, 15) ಆದರೆ ಕಾಯಿನನ “ಕೃತ್ಯಗಳು ಕೆಟ್ಟವು” ಆಗಿತ್ತು ಎನ್ನುತ್ತೆ ಬೈಬಲ್. (1 ಯೋಹಾನ 3:12) ದೇವರಿಗೆ ಹೊರತೋರಿಕೆಯ ಭಕ್ತಿತೋರಿಸಿದರೆ ಸಾಕೆಂದು ಕಾಯಿನ ನೆನಸಿದ್ದಿರಬೇಕು. ಇವತ್ತೂ ಎಷ್ಟೋ ಜನರು ಹಾಗೇ ನೆನಸುತ್ತಾರಲ್ಲಾ. ಕಾಯಿನನಿಗೆ ಯೆಹೋವನ ಮೇಲೆ ಪ್ರೀತಿ, ನಂಬಿಕೆ ಇರಲಿಲ್ಲ. ಅದನ್ನೇ ಅವನು ಕ್ರಿಯೆಯಲ್ಲಿ ತೋರಿಸಿದ.
ಯೆಹೋವನ ಮೆಚ್ಚಿಕೆ ತನಗೆ ದೊರೆಯಲಿಲ್ಲ ಅಂತ ಕಾಯಿನನಿಗೆ ಗೊತ್ತಾದಾಗ ಹೇಬೆಲನನ್ನು ನೋಡಿ ಪಾಠ ಕಲಿತನಾ? ಇಲ್ಲ. ತನ್ನ ಸೋದರನ ಬಗ್ಗೆ ಮತ್ಸರ ಬೆಳೆಸಿಕೊಂಡ. ಆಕ್ರೋಶ ಮಡುಗಟ್ಟಿತು. ಕಾಯಿನನ ಹೃದಯದಲ್ಲಿ ಹೊಗೆಯಾಡುತ್ತಿದ್ದ ದ್ವೇಷ ನೋಡಿ ಯೆಹೋವನು ತಾಳ್ಮೆಯಿಂದ ಅವನಿಗೆ ಬುದ್ಧಿಹೇಳಿದನು. ಅವನ ನಡತೆ ಗಂಭೀರ ಪಾಪದ ಕಡೆಗೆ ಅವನನ್ನು ನಡೆಸುತ್ತಾ ಇದೆ ಎಂಬ ಎಚ್ಚರಿಕೆ ಕೊಟ್ಟನು. ಕಾಯಿನ ಒಂದುವೇಳೆ ತನ್ನ ನಡವಳಿಕೆಯನ್ನು ಸರಿಪಡಿಸಿಕೊಂಡರೆ ಅವನ “ತಲೆ ಎತ್ತಲ್ಪಡುವುದು” ಎಂಬ ನಿರೀಕ್ಷೆಯನ್ನೂ ಕೊಟ್ಟನು.—ಆದಿಕಾಂಡ 4:6, 7.
ಕಾಯಿನ ದೇವರ ಎಚ್ಚರಿಕೆಯನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಹೊಲಕ್ಕೆ ಬಾ ಎಂದು ಕರೆದಾಗ ನಂಬಿ ಬಂದ ತನ್ನ ತಮ್ಮನ ಮೇಲೆ ಹಲ್ಲೆನಡೆಸಿ ಕೊಂದೇಬಿಟ್ಟ. (ಆದಿಕಾಂಡ 4:8) ಹೀಗೆ ಹೇಬೆಲ ಒಂದರ್ಥದಲ್ಲಿ ಧಾರ್ಮಿಕ ಹಿಂಸೆಯ ಮೊತ್ತಮೊದಲ ಬಲಿಯಾದ, ಮೊದಲ ಹುತಾತ್ಮನಾದ. ಹೇಬೆಲ ಬದುಕಿಲ್ಲ ನಿಜ, ಆದರೆ ಅವನ ಕಥೆ ಇತಿಹಾಸದ ಪುಟಗಳಲ್ಲಿ ಜೀವಂತವಾಗಿದೆ.
ಹೇಬೆಲನ ರಕ್ತ ಸಾಂಕೇತಿಕ ಅರ್ಥದಲ್ಲಿ ಸೇಡಿಗಾಗಿ ಇಲ್ಲವೆ ನ್ಯಾಯಕ್ಕಾಗಿ ಯೆಹೋವನನ್ನು ಕೂಗಿತು. ದುಷ್ಟ ಕಾಯಿನನ ಪಾತಕಕ್ಕಾಗಿ ದೇವರು ಶಿಕ್ಷೆ ವಿಧಿಸಿ ನ್ಯಾಯ ತೀರಿಸಿದನು. (ಆದಿಕಾಂಡ 4:9-12) ಅಚಲ ನಂಬಿಕೆ ತೋರಿಸಿದ ಹೇಬೆಲ ಇಂದು ನಮ್ಮ ಜೊತೆ ಮಾತಾಡುತ್ತಿದ್ದಾನೆ. ಅವನು ಬದುಕಿದ್ದು ಬಹುಶಃ ನೂರು ವರುಷ. ಆ ಕಾಲದ ಜನರ ಆಯುಷ್ಯಕ್ಕೆ ಹೋಲಿಸುವಾಗ ಅದು ಕೊಂಚವೆನ್ನಬೇಕು. ಆದರೆ ಹೇಬೆಲ ಸಾಯುವ ತನಕ ದೇವರ ಇಷ್ಟದಂತೇ ನಡೆದುಕೊಂಡ. ತನ್ನ ದೇವರಾದ ಯೆಹೋವನ ಪ್ರೀತಿ ಮತ್ತು ಅನುಗ್ರಹ ತನ್ನ ಮೇಲಿದೆ ಅಂತ ಅವನಿಗೆ ಗೊತ್ತಿತ್ತು. (ಇಬ್ರಿಯ 11:4) ಅವನು ಸದಾ ದೇವರ ಸ್ಮರಣೆಯಲ್ಲಿರುತ್ತಾನೆ. ಭೂಮಿ ಸುಂದರ ಉದ್ಯಾನವನ ಆಗುವಾಗ ದೇವರು ಅಲ್ಲಿ ಅವನನ್ನು ಜೀವಂತ ಮಾಡುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. (ಯೋಹಾನ 5:28, 29) ಅಲ್ಲಿ ಅವನನ್ನು ಭೇಟಿಯಾಗುವ ಆಸೆ ನಿಮಗಿಲ್ಲವೇ? ಇಂದು ಹೇಬೆಲ ಮಾತಾಡುವಾಗ ಆಲಿಸಿ. ಆತನ ನಂಬಿಕೆಯ ಮಾದರಿಯನ್ನು ಅನುಕರಿಸಿ. ಖಂಡಿತ ಅವನನ್ನು ನೀವು ಭೇಟಿಯಾಗುವಿರಿ! ▪ (w13-E 01/01)
a “ಲೋಕದ ಆದಿ” ಎಂಬ ಪದಕ್ಕೆ ಮೂಲಭಾಷೆಯಲ್ಲಿ ಉಪಯೋಗಿಸಿರುವ ಪದ “ಬೀಜ ಬಿತ್ತು” ಅನ್ನೋ ಅರ್ಥ ಕೊಡುತ್ತೆ. ಅದರರ್ಥ ಸಂತಾನೋತ್ಪತ್ತಿ. ಹಾಗಾದರೆ ಆ ಪದ ಮಾನವಕುಲದ ಮೊದಲ ಸಂತಾನಕ್ಕೆ ಸೂಚಿಸುತ್ತೆ. ಆದರೆ ಯೇಸು, “ಲೋಕದ ಆದಿ” ಅಂತ ಹೇಬೆಲನಿಗೆ ಯಾಕೆ ಸೂಚಿಸಿ ಮಾತಾಡಿದನು? ಆದಾಮನ ಮೊದಲ ಮಗ ಕಾಯಿನನಲ್ಲವೇ! ಕಾಯಿನ ಬೇಕುಬೇಕೆಂದೇ ಯೆಹೋವ ದೇವರಿಗೆ ಇಷ್ಟವಾಗದ ಕೆಲಸಗಳನ್ನು ಮಾಡುತ್ತಿದ್ದ. ಹಾಗಾಗಿ ಅವನ ಹೆತ್ತವರಂತೆಯೇ ಕಾಯಿನ ಸಹ ಪುನರುತ್ಥಾನ ಮತ್ತು ವಿಮೋಚನೆಗೆ ಪಾತ್ರನಾಗದೆ ಇದ್ದಿರಬಹುದು.