ಅಧ್ಯಾಯ 7
ದೇವರಂತೆಯೇ ನೀವು ಜೀವವನ್ನು ಅಮೂಲ್ಯವಾಗಿ ಪರಿಗಣಿಸುತ್ತೀರೊ?
“ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ.” —ಕೀರ್ತನೆ 36:9.
1, 2. ದೇವರಿಂದ ಕೊಡಲ್ಪಟ್ಟಿರುವ ಯಾವ ಉಡುಗೊರೆ ಇಂದು ವಿಶೇಷವಾಗಿ ಅಮೂಲ್ಯವಾಗಿದೆ ಮತ್ತು ಹಾಗೇಕೆ?
ನಮ್ಮ ಸ್ವರ್ಗೀಯ ತಂದೆಯು ನಮಗೆ ಅತ್ಯಮೂಲ್ಯವಾದ ಆಸ್ತಿಯನ್ನು ಕೊಟ್ಟಿದ್ದಾನೆ. ಅದು ಬುದ್ಧಿಶಕ್ತಿಯುಳ್ಳ ಮಾನವರಾಗಿ ಆತನ ಗುಣಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯವುಳ್ಳ ಜೀವದ ಉಡುಗೊರೆಯೇ ಆಗಿದೆ. (ಆದಿಕಾಂಡ 1:27) ಆ ಅಮೂಲ್ಯವಾದ ಉಡುಗೊರೆಯಿಂದಾಗಿ ನಾವು ಬೈಬಲಿನ ಮೂಲತತ್ತ್ವಗಳ ಕುರಿತು ಆಲೋಚಿಸಲು ಶಕ್ತರಾಗಿದ್ದೇವೆ. ಅವುಗಳನ್ನು ಅನ್ವಯಿಸಿಕೊಳ್ಳುವ ಮೂಲಕ ನಾವು ಯೆಹೋವನನ್ನು ಪ್ರೀತಿಸುವ ಹಾಗೂ ‘ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ ಉಪಯೋಗದ ಮೂಲಕ ತಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸಿಕೊಂಡಿರುವ’ ಆಧ್ಯಾತ್ಮಿಕ ಪ್ರೌಢ ವ್ಯಕ್ತಿಗಳಾಗಿ ಬೆಳೆಯಸಾಧ್ಯವಿದೆ.—ಇಬ್ರಿಯ 5:14.
2 ಬೈಬಲ್ ಮೂಲತತ್ತ್ವಗಳ ಕುರಿತು ಆಲೋಚಿಸುವ ಸಾಮರ್ಥ್ಯವುಳ್ಳವರಾಗಿರುವುದು ಇಂದು ವಿಶೇಷವಾಗಿ ಪ್ರಮುಖವಾಗಿದೆ. ಏಕೆಂದರೆ ಈ ಲೋಕವು ಎಷ್ಟು ಜಟಿಲವಾಗಿದೆಯೆಂದರೆ ಎಷ್ಟೇ ಪ್ರಮಾಣದ ನಿಯಮಗಳು ಕೊಡಲ್ಪಡುವುದಾದರೂ ಅವು ಜೀವನದಲ್ಲಿ ಏಳಬಹುದಾದ ಪ್ರತಿಯೊಂದು ಸನ್ನಿವೇಶವನ್ನು ಆವರಿಸಲಾರವು. ವಿಶೇಷವಾಗಿ ರಕ್ತವನ್ನು ಒಳಗೊಂಡ ಉತ್ಪನ್ನಗಳು ಮತ್ತು ಕಾರ್ಯವಿಧಾನಗಳ ಸಂಬಂಧದಲ್ಲಿ ವೈದ್ಯಕೀಯ ಶಾಸ್ತ್ರವು ಈ ಅಂಶವನ್ನು ಸೂಕ್ತವಾಗಿ ದೃಷ್ಟಾಂತಿಸುತ್ತದೆ. ಯೆಹೋವನಿಗೆ ವಿಧೇಯರಾಗಲು ಬಯಸುವವರೆಲ್ಲರಿಗೆ ಈ ವಿಷಯವು ಆಸಕ್ತಿಯದ್ದಾಗಿದೆ ಮತ್ತು ಅವರು ಇದನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಆದರೂ ಇದಕ್ಕೆ ಸಂಬಂಧಪಟ್ಟ ಬೈಬಲ್ ಮೂಲತತ್ತ್ವಗಳನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ನಮ್ಮ ಮನಸ್ಸಾಕ್ಷಿಯನ್ನು ತೃಪ್ತಿಪಡಿಸಬಲ್ಲ ಮತ್ತು ಅದೇ ಸಮಯದಲ್ಲಿ ದೇವರ ಪ್ರೀತಿಯಲ್ಲಿ ನಮ್ಮನ್ನು ಕಾಪಾಡಿಕೊಳ್ಳುವಂತೆ ಮಾಡಬಲ್ಲ ವಿವೇಕಭರಿತ ನಿರ್ಣಯಗಳನ್ನು ಮಾಡಲು ನಾವು ಶಕ್ತರಾಗಿರಬೇಕು. (ಜ್ಞಾನೋಕ್ತಿ 2:6-11) ಈ ಮೂಲತತ್ತ್ವಗಳಲ್ಲಿ ಕೆಲವನ್ನು ಪರಿಗಣಿಸಿರಿ.
ಜೀವ ಮತ್ತು ರಕ್ತ ಪವಿತ್ರವಾಗಿವೆ
3, 4. ರಕ್ತದ ಪವಿತ್ರತೆಯ ಕುರಿತು ಶಾಸ್ತ್ರಗ್ರಂಥವು ಮೊದಲ ಬಾರಿ ಯಾವಾಗ ತಿಳಿಸುತ್ತದೆ ಮತ್ತು ಅದು ಯಾವ ಮೂಲಭೂತ ಸತ್ಯಗಳ ಮೇಲೆ ಆಧಾರಿತವಾಗಿದೆ?
3 ಕಾಯಿನನು ಹೇಬೆಲನನ್ನು ಕೊಂದ ಸ್ವಲ್ಪ ಸಮಯಾನಂತರ ಜೀವ ಮತ್ತು ರಕ್ತದ ಮಧ್ಯೆಯಿರುವ ನಿಕಟ ಸಂಬಂಧ ಹಾಗೂ ಅವುಗಳ ಪವಿತ್ರತೆಯನ್ನು ಯೆಹೋವನು ಮೊದಲ ಬಾರಿ ತಿಳಿಯಪಡಿಸಿದನು. ಯೆಹೋವನು ಕಾಯಿನನಿಗೆ, “ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತದೆ, ಕೇಳು” ಎಂದು ಹೇಳಿದನು. (ಆದಿಕಾಂಡ 4:10) ಯೆಹೋವನ ದೃಷ್ಟಿಯಲ್ಲಿ ಹೇಬೆಲನ ರಕ್ತವು ಹಿಂಸಾತ್ಮಕವಾಗಿ ಮೊಟಕುಗೊಳಿಸಲ್ಪಟ್ಟಿದ್ದ ಅವನ ಜೀವವನ್ನು ಪ್ರತಿನಿಧಿಸಿತು. ಆದುದರಿಂದ ಒಂದರ್ಥದಲ್ಲಿ ಹೇಬೆಲನ ರಕ್ತವು ಸೇಡುತೀರಿಸುವಂತೆ ದೇವರಿಗೆ ಕೂಗಿಹೇಳಿದಂತಿತ್ತು.—ಇಬ್ರಿಯ 12:24.
4 ನೋಹನ ಕಾಲದ ಜಲಪ್ರಳಯದ ಬಳಿಕ ದೇವರು ಮನುಷ್ಯರಿಗೆ ಪ್ರಾಣಿಗಳ ಮಾಂಸವನ್ನು ತಿನ್ನಲು ಅನುಮತಿಯನ್ನು ಕೊಟ್ಟನೇ ಹೊರತು ಅವುಗಳ ರಕ್ತವನ್ನಲ್ಲ. “ಆದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ. ಇದಲ್ಲದೆ ನಿಮ್ಮ ರಕ್ತವನ್ನು ಸುರಿಸಿ ಜೀವ ತೆಗೆಯುವವರಿಗೆ ಮುಯ್ಯಿ ತೀರಿಸುವೆನು” ಎಂದು ದೇವರು ಹೇಳಿದನು. (ಆದಿಕಾಂಡ 9:4, 5) ಈ ಆಜ್ಞೆಯು ಇಂದಿನ ತನಕವೂ ಇರುವ ನೋಹನ ಸಂತತಿಯವರೆಲ್ಲರಿಗೆ ಅನ್ವಯವಾಗುತ್ತದೆ. ಇದು ಈ ಮುಂಚೆ ದೇವರು ಕಾಯಿನನಿಗೆ ತಿಳಿಸಿದ ಮಾತುಗಳಲ್ಲಿ ಯಾವ ಮೂಲಭೂತ ಸತ್ಯಗಳನ್ನು ಸೂಚಿಸಿದನೋ ಅದನ್ನು ಪುನರ್ದೃಢೀಕರಿಸುತ್ತದೆ; ಅದೇನೆಂದರೆ, ಎಲ್ಲ ಸೃಷ್ಟಿಜೀವಿಗಳ ಜೀವವು ರಕ್ತದಿಂದ ಪ್ರತಿನಿಧಿಸಲ್ಪಟ್ಟಿದೆ. ಜೀವದ ಬುಗ್ಗೆಯಾಗಿರುವ ಯೆಹೋವನು ಜೀವ ಮತ್ತು ರಕ್ತವನ್ನು ಅಗೌರವಿಸುವ ಎಲ್ಲ ಮನುಷ್ಯರನ್ನು ಹೊಣೆಗಾರರನ್ನಾಗಿ ಮಾಡುವನು ಎಂಬುದನ್ನೂ ಆ ಆಜ್ಞೆಯು ರುಜುಪಡಿಸುತ್ತದೆ.—ಕೀರ್ತನೆ 36:9.
5, 6. ರಕ್ತವು ಪವಿತ್ರವೂ ಅಮೂಲ್ಯವೂ ಆಗಿದೆ ಎಂಬುದನ್ನು ಮೋಶೆಯ ಧರ್ಮಶಾಸ್ತ್ರವು ಹೇಗೆ ತೋರಿಸಿತು? (“ಪ್ರಾಣಿಗಳ ಜೀವವನ್ನು ಗೌರವಿಸಿ” ಎಂಬ ಚೌಕವನ್ನೂ ನೋಡಿ.)
5 ಈ ಎರಡು ಮೂಲಭೂತ ಸತ್ಯಗಳನ್ನು ಮೋಶೆಯ ಧರ್ಮಶಾಸ್ತ್ರದಲ್ಲಿಯೂ ಕಂಡುಕೊಳ್ಳಸಾಧ್ಯವಿತ್ತು. ಯಾಜಕಕಾಂಡ 17:10, 11 ಹೀಗೆ ತಿಳಿಸುತ್ತದೆ: “ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು. ಯಾಕಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದಷ್ಟೆ.”—“ರಕ್ತದ ದೋಷಪರಿಹಾರಕ ಶಕ್ತಿ” ಎಂಬ ಚೌಕವನ್ನು ನೋಡಿ.
6 ಕೊಲ್ಲಲ್ಪಟ್ಟ ಒಂದು ಪ್ರಾಣಿಯ ರಕ್ತವು ಯಜ್ಞವೇದಿಯ ಮೇಲೆ ಉಪಯೋಗಿಸಲ್ಪಡದಿದ್ದಲ್ಲಿ ಅದನ್ನು ಭೂಮಿಯ ಮೇಲೆ ಸುರಿಯಬೇಕಿತ್ತು. ಹೀಗೆ ಸಾಂಕೇತಿಕ ಅರ್ಥದಲ್ಲಿ ಜೀವವನ್ನು ಅದರ ಮೂಲ ಒಡೆಯನಿಗೇ ಹಿಂದಿರುಗಿಸಿದಂತಾಗುತ್ತಿತ್ತು. (ಧರ್ಮೋಪದೇಶಕಾಂಡ 12:16; ಯೆಹೆಜ್ಕೇಲ 18:4) ಆದರೂ ಇಸ್ರಾಯೇಲ್ಯರು ತಾವು ತಿನ್ನಲಿಕ್ಕಿದ್ದ ಪ್ರಾಣಿಗಳ ಮಾಂಸದಿಂದ ರಕ್ತದ ಅಂಶವನ್ನೆಲ್ಲಾ ತೆಗೆಯುವುದಕ್ಕಾಗಿ ಕಟ್ಟುನಿಟ್ಟಾದ ಕ್ರಮಗಳನ್ನು ಉಪಯೋಗಿಸಬೇಕಾಗಿರಲಿಲ್ಲ ಎಂಬುದನ್ನು ಗಮನಿಸಿ. ಒಂದು ಸೃಷ್ಟಿಜೀವಿಯನ್ನು ಸರಿಯಾಗಿ ಕೊಂದು ಅದರ ರಕ್ತವನ್ನು ಪೂರ್ಣವಾಗಿ ಸುರಿಸಿರುವಲ್ಲಿ, ಜೀವದಾತನಿಗೆ ಸಲ್ಲಿಸಬೇಕಾದ ಗೌರವವು ಸಲ್ಲಿಸಲ್ಪಟ್ಟಿರುವುದರಿಂದ ಒಬ್ಬ ಇಸ್ರಾಯೇಲ್ಯನು ಅದನ್ನು ಶುದ್ಧವಾದ ಮನಸ್ಸಾಕ್ಷಿಯಿಂದ ತಿನ್ನಬಹುದಿತ್ತು.
7. ದಾವೀದನು ರಕ್ತದ ಪವಿತ್ರತೆಗೆ ಹೇಗೆ ಗೌರವ ತೋರಿಸಿದನು?
7 ‘[ದೇವರ] ಹೃದಯಕ್ಕೆ ಮೆಚ್ಚಿಕೆಯಾದವನಾಗಿದ್ದ’ ದಾವೀದನು ರಕ್ತದ ಕುರಿತಾದ ದೇವರ ನಿಯಮದ ಹಿಂದಿರುವ ಮೂಲತತ್ತ್ವಗಳನ್ನು ಅರ್ಥಮಾಡಿಕೊಂಡನು. (ಅಪೊಸ್ತಲರ ಕಾರ್ಯಗಳು 13:22) ಒಂದು ಸಂದರ್ಭದಲ್ಲಿ ಅವನಿಗೆ ತುಂಬ ಬಾಯಾರಿಕೆಯಾಗಿದ್ದಾಗ ಅವನೊಂದಿಗಿದ್ದ ಮೂವರು ಪುರುಷರು ವೈರಿ ಪಾಳೆಯದೊಳಕ್ಕೆ ನುಗ್ಗಿ ಒಂದು ಬಾವಿಯಿಂದ ನೀರನ್ನು ಸೇದಿ ಅವನಿಗೆ ತಂದುಕೊಟ್ಟರು. ದಾವೀದನು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದನು? ಅವನು “ಇದು ತಮ್ಮ ಪ್ರಾಣದಾಶೆ ಬಿಟ್ಟು ಹೋದ ಮನುಷ್ಯರ ರಕ್ತವಲ್ಲವೇ?” (NIBV) ಎಂದು ಕೇಳಿದನು. ವಾಸ್ತವದಲ್ಲಿ ಆ ನೀರು ದಾವೀದನ ದೃಷ್ಟಿಯಲ್ಲಿ ಆ ಪುರುಷರ ಜೀವರಕ್ತವಾಗಿತ್ತು. ಆದುದರಿಂದ ತನ್ನ ಬಾಯಾರಿಕೆಯ ಹೊರತಾಗಿಯೂ ಅವನು “ಅದನ್ನು ಯೆಹೋವನ ಮುಂದೆ ಹೊಯ್ದನು.”—2 ಸಮುವೇಲ 23:15-17.
8, 9. ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟಾಗ ಜೀವ ಮತ್ತು ರಕ್ತದ ಕುರಿತಾದ ದೇವರ ದೃಷ್ಟಿಕೋನವು ಬದಲಾಯಿತೊ? ವಿವರಿಸಿ.
8 ನೋಹನಿಗೆ ರಕ್ತದ ಕುರಿತಾದ ನಿಯಮವನ್ನು ಕೊಟ್ಟು ಸುಮಾರು 2,400 ವರ್ಷಗಳು ಕಳೆದ ಬಳಿಕ ಮತ್ತು ಧರ್ಮಶಾಸ್ತ್ರದ ಒಡಂಬಡಿಕೆಯು ಕೊಡಲ್ಪಟ್ಟು ಸುಮಾರು 1,500 ವರ್ಷಗಳು ಕಳೆದ ಬಳಿಕ ಆದಿ ಕ್ರೈಸ್ತ ಸಭೆಯ ಆಡಳಿತ ಮಂಡಲಿಗೆ ಹೀಗೆ ಬರೆಯುವಂತೆ ಯೆಹೋವನು ಪ್ರೇರಿಸಿದನು: “ಪವಿತ್ರಾತ್ಮವೂ ನಾವೂ, ಈ ಆವಶ್ಯಕ ವಿಷಯಗಳಲ್ಲದೆ ಇನ್ನಾವ ಹೆಚ್ಚಿನ ಹೊರೆಯನ್ನೂ ನಿಮಗೆ ಕೂಡಿಸಬೇಕೆಂದು ಬಯಸಿರುವುದಿಲ್ಲ; ವಿಗ್ರಹಗಳಿಗೆ ಯಜ್ಞಾರ್ಪಣೆಮಾಡಿದ ವಸ್ತುಗಳನ್ನು, ರಕ್ತವನ್ನು, ಕತ್ತು ಹಿಸುಕಿ ಕೊಂದವುಗಳನ್ನು ಮತ್ತು ಹಾದರವನ್ನು ವರ್ಜಿಸುತ್ತಾ ಹೋಗಿರಿ.”—ಅಪೊಸ್ತಲರ ಕಾರ್ಯಗಳು 15:28, 29.
9 ರಕ್ತವು ಪವಿತ್ರವಾಗಿದೆ ಮತ್ತು ಅದನ್ನು ದುರುಪಯೋಗಿಸುವುದು ವಿಗ್ರಹಾರಾಧನೆ ಅಥವಾ ಹಾದರವನ್ನು ಮಾಡುವಷ್ಟೇ ನೈತಿಕವಾಗಿ ತಪ್ಪಾಗಿದೆ ಎಂಬುದನ್ನು ಆರಂಭದ ಆಡಳಿತ ಮಂಡಲಿಯು ವಿವೇಚಿಸಿ ತಿಳಿದುಕೊಂಡಿತು. ನಿಜ ಕ್ರೈಸ್ತರು ಇಂದು ಅದೇ ನಿಲುವನ್ನು ಅಂಗೀಕರಿಸುತ್ತಾರೆ. ಮಾತ್ರವಲ್ಲದೆ ಅವರು ನಿರ್ದಿಷ್ಟ ಆಜ್ಞೆಗಳಿಗಾಗಿ ಹುಡುಕದೆ ಬೈಬಲ್ ಮೂಲತತ್ತ್ವಗಳ ಕುರಿತು ಆಲೋಚಿಸಿ ಅವುಗಳನ್ನು ಅನ್ವಯಿಸುವುದರಿಂದ ರಕ್ತದ ಉಪಯೋಗದ ಸಂಬಂಧದಲ್ಲಿ ನಿರ್ಣಯಗಳನ್ನು ಮಾಡುವಾಗ ಯೆಹೋವನನ್ನು ಸಂತೋಷಪಡಿಸಲು ಶಕ್ತರಾಗಿದ್ದಾರೆ.
ರಕ್ತದ ವೈದ್ಯಕೀಯ ಉಪಯೋಗ
10, 11. (ಎ) ಯೆಹೋವನ ಸಾಕ್ಷಿಗಳು ಇಡೀ ರಕ್ತ ಮತ್ತು ರಕ್ತದ ಪ್ರಧಾನ ಘಟಕಾಂಶಗಳ ರಕ್ತಪೂರಣವನ್ನು ಹೇಗೆ ವೀಕ್ಷಿಸುತ್ತಾರೆ? (ಬಿ) ರಕ್ತದ ಕುರಿತಾದ ಯಾವ ಕ್ಷೇತ್ರಗಳಲ್ಲಿ ಕ್ರೈಸ್ತರಿಗೆ ಭಿನ್ನವಾದ ಅಭಿಪ್ರಾಯಗಳಿರಬಹುದು?
10 ‘ರಕ್ತವನ್ನು ವರ್ಜಿಸುವುದರ’ ಅರ್ಥ ರಕ್ತಪೂರಣಗಳನ್ನು ಸ್ವೀಕರಿಸದೆ ಇರುವುದು ಮತ್ತು ರಕ್ತಪೂರಣಕ್ಕಾಗಿ ತಮ್ಮ ಸ್ವಂತ ರಕ್ತವನ್ನು ದಾನಮಾಡದೆ ಅಥವಾ ಶೇಖರಿಸದೆ ಇರುವುದು ಎಂದಾಗಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ಮಾನ್ಯಮಾಡುತ್ತಾರೆ. ದೇವರ ನಿಯಮಕ್ಕೆ ಗೌರವ ಕೊಡುವ ಸಲುವಾಗಿ ಅವರು ರಕ್ತದ ನಾಲ್ಕು ಪ್ರಧಾನ ಘಟಕಾಂಶಗಳಾದ ಕೆಂಪು ರಕ್ತಕಣಗಳು, ಬಳಿ ರಕ್ತಕಣಗಳು, ಪ್ಲೇಟ್ಲೆಟ್ಗಳು ಮತ್ತು ಪ್ಲಾಸ್ಮಾವನ್ನು ಸಹ ಸ್ವೀಕರಿಸುವುದಿಲ್ಲ.
11 ಇಂದು ಹೆಚ್ಚಿನ ಸಂಸ್ಕರಿಸುವಿಕೆಯ ಮೂಲಕ ಈ ಘಟಕಾಂಶಗಳನ್ನು ಅನೇಕವೇಳೆ ಇನ್ನೂ ಸೂಕ್ಷ್ಮ ಅಂಶಗಳಾಗಿ ವಿಂಗಡಿಸಿ ಹಲವಾರು ವಿಧಗಳಲ್ಲಿ ಉಪಯೋಗಿಸಲಾಗುತ್ತದೆ. ಒಬ್ಬ ಕ್ರೈಸ್ತನು ಇಂಥ ಸೂಕ್ಷ್ಮ ಅಂಶಗಳನ್ನು ಸ್ವೀಕರಿಸಸಾಧ್ಯವಿದೆಯೊ? ಅವನು ಅವುಗಳನ್ನು “ರಕ್ತ”ವಾಗಿ ವೀಕ್ಷಿಸುತ್ತಾನೊ? ಈ ವಿಷಯದಲ್ಲಿ ಪ್ರತಿಯೊಬ್ಬನು ವೈಯಕ್ತಿಕ ನಿರ್ಣಯವನ್ನು ಮಾಡತಕ್ಕದ್ದು. ಇದೇ ತತ್ತ್ವವು ಒಬ್ಬನ ಸ್ವಂತ ರಕ್ತವನ್ನು ಒಳಗೊಂಡ ಹೀಮೊಡಯಾಲಿಸಿಸ್, ಹೀಮೊಡೈಲೂಷನ್ ಮತ್ತು ಸೆಲ್ ಸಾಲ್ವೇಜ್ನಂಥ ವೈದ್ಯಕೀಯ ಕಾರ್ಯವಿಧಾನಗಳಿಗೆ ಅನ್ವಯವಾಗುತ್ತದೆ—ಆದರೆ ಈ ಕಾರ್ಯವಿಧಾನಗಳಲ್ಲಿ ರಕ್ತದ ಶೇಖರಣೆಯು ಒಳಗೂಡಿರಬಾರದು.—“ರಕ್ತದ ಚಿಕ್ಕ ಅಂಶಗಳು ಮತ್ತು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳು” ಎಂಬ ಪರಿಶಿಷ್ಟ ನೋಡಿ.
12. ಮನಸ್ಸಾಕ್ಷಿಗೆ ಸಂಬಂಧಪಟ್ಟ ವಿಷಯಗಳನ್ನು ನಾವು ಹೇಗೆ ಪರಿಗಣಿಸಬೇಕು ಮತ್ತು ನಿರ್ವಹಿಸಬೇಕು?
12 ವೈಯಕ್ತಿಕ ನಿರ್ಣಯಕ್ಕೆ ಸಂಬಂಧಪಟ್ಟ ವಿಷಯಗಳು ಯೆಹೋವನಿಗೆ ಅಪ್ರಮುಖವೊ? ಇಲ್ಲ. ಆತನು ನಮ್ಮ ಆಲೋಚನೆಗಳು ಮತ್ತು ಪ್ರಚೋದನೆಗಳ ವಿಷಯದಲ್ಲಿ ತುಂಬ ಆಸಕ್ತಿ ವಹಿಸುತ್ತಾನೆ. (ಜ್ಞಾನೋಕ್ತಿ 17:3; 24:12 ಓದಿ.) ಆದುದರಿಂದ ಒಂದು ವೈದ್ಯಕೀಯ ಉತ್ಪನ್ನ ಅಥವಾ ಕಾರ್ಯವಿಧಾನದ ಕುರಿತು ಪ್ರಾರ್ಥನಾಪೂರ್ವಕ ಸಂಶೋಧನೆಯನ್ನು ಮಾಡಿದ ಬಳಿಕ ನಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗೆ ನಾವು ಕಿವಿಗೊಡಬೇಕು. (ರೋಮನ್ನರಿಗೆ 14:2, 22, 23) ವಾಸ್ತವದಲ್ಲಿ, ತಮ್ಮ ಮನಸ್ಸಾಕ್ಷಿಗೆ ಅನುಗುಣವಾಗಿ ನಾವು ಕ್ರಿಯೆಗೈಯುವಂತೆ ಇತರರು ಒತ್ತಾಯಿಸಬಾರದು ಅಥವಾ “ನೀವು ನನ್ನ ಸನ್ನಿವೇಶದಲ್ಲಿರುತ್ತಿದ್ದರೆ ಏನು ಮಾಡುತ್ತಿದ್ದಿರಿ?” ಎಂದು ನಾವೂ ಕೇಳಬಾರದು. ಇಂಥ ವಿಚಾರಗಳಲ್ಲಿ ಪ್ರತಿಯೊಬ್ಬ ಕ್ರೈಸ್ತನು ‘ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.’a—ಗಲಾತ್ಯ 6:5; ರೋಮನ್ನರಿಗೆ 14:12; “ನಾನು ರಕ್ತವನ್ನು ಪವಿತ್ರವಾಗಿ ವೀಕ್ಷಿಸುತ್ತೇನೊ?” ಎಂಬ ಚೌಕವನ್ನು ನೋಡಿ.
ಯೆಹೋವನ ನಿಯಮಗಳು ಆತನ ಪಿತೃಸದೃಶ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ
13. ಯೆಹೋವನ ನಿಯಮಗಳು ಮತ್ತು ಮೂಲತತ್ತ್ವಗಳು ಆತನ ಕುರಿತು ಏನನ್ನು ತಿಳಿಯಪಡಿಸುತ್ತವೆ? ದೃಷ್ಟಾಂತಿಸಿ.
13 ಬೈಬಲಿನಲ್ಲಿ ಕಂಡುಬರುವ ನಿಯಮಗಳು ಮತ್ತು ಮೂಲತತ್ತ್ವಗಳು ಯೆಹೋವನನ್ನು ಒಬ್ಬ ವಿವೇಕಭರಿತ ನಿಯಮದಾತನಾಗಿಯೂ ತನ್ನ ಮಕ್ಕಳ ಹಿತಕ್ಷೇಮದ ಕುರಿತು ಆಳವಾಗಿ ಚಿಂತಿಸುವ ಒಬ್ಬ ಪ್ರೀತಿಭರಿತ ತಂದೆಯಾಗಿಯೂ ಚಿತ್ರಿಸುತ್ತವೆ. (ಕೀರ್ತನೆ 19:7-11) ‘ರಕ್ತವನ್ನು ವರ್ಜಿಸಿರಿ’ ಎಂಬ ಆಜ್ಞೆಯು ಆರೋಗ್ಯದ ನಿಬಂಧನೆಯಾಗಿ ಕೊಡಲ್ಪಡಲಿಲ್ಲವಾದರೂ ರಕ್ತಪೂರಣಗಳಿಗೆ ಸಂಬಂಧಪಟ್ಟ ತೊಡಕುಗಳಿಂದ ಅದು ನಮ್ಮನ್ನು ಖಂಡಿತ ರಕ್ಷಿಸುತ್ತದೆ. (ಅಪೊಸ್ತಲರ ಕಾರ್ಯಗಳು 15:20) ವಾಸ್ತವದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿರುವ ಅನೇಕರು ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಆಧುನಿಕ ಆರೋಗ್ಯಾರೈಕೆಯ “ಸ್ವರ್ಣ ಮಟ್ಟ”ವಾಗಿ ಅಂದರೆ ಅತ್ಯುತ್ತಮ ಚಿಕಿತ್ಸೆಯಾಗಿ ಪರಿಗಣಿಸುತ್ತಾರೆ. ನಿಜ ಕ್ರೈಸ್ತರಿಗಾದರೋ ಇಂಥ ವಿಕಸನಗಳು ಯೆಹೋವನ ಅಗಾಧ ವಿವೇಕ ಮತ್ತು ಪಿತೃಸದೃಶ ಪ್ರೀತಿಯನ್ನು ಖಚಿತಪಡಿಸುತ್ತವೆ ಅಷ್ಟೆ.—ಯೆಶಾಯ 55:9 ಓದಿ; ಯೋಹಾನ 14:21, 23.
14, 15. (ಎ) ದೇವರಿಗೆ ತನ್ನ ಜನರ ಕಡೆಗಿದ್ದ ಪ್ರೀತಿಯು ಯಾವ ನಿಯಮಗಳಲ್ಲಿ ಪ್ರತಿಬಿಂಬಿಸಲ್ಪಟ್ಟಿತು? (ಬಿ) ಈ ಸುರಕ್ಷತಾ ನಿಯಮಗಳ ಹಿಂದಿರುವ ಮೂಲತತ್ತ್ವಗಳನ್ನು ನೀವು ಹೇಗೆ ಅನ್ವಯಿಸಿಕೊಳ್ಳಬಲ್ಲಿರಿ?
14 ಪುರಾತನ ಇಸ್ರಾಯೇಲಿನಲ್ಲಿದ್ದ ತನ್ನ ಜನರ ಹಿತಕ್ಷೇಮದ ವಿಷಯದಲ್ಲಿ ದೇವರಿಗಿದ್ದ ಕಾಳಜಿಯು ಆತನ ಅನೇಕ ನಿಯಮಗಳಲ್ಲಿ ಪ್ರತಿಬಿಂಬಿಸಲ್ಪಟ್ಟಿತ್ತು. ಉದಾಹರಣೆಗೆ, ಇಸ್ರಾಯೇಲ್ಯ ಮನೆಗಳ ಮಾಳಿಗೆಯ ಮೇಲೆ ಅನೇಕ ಚಟುವಟಿಕೆಗಳು ನಡೆಯುತ್ತಿದ್ದುದರಿಂದ ಅಪಘಾತಗಳನ್ನು ತಡೆಯಲಿಕ್ಕಾಗಿ ಆ ಮಾಳಿಗೆಯ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸುವಂತೆ ದೇವರು ಅಗತ್ಯಪಡಿಸಿದನು. (ಧರ್ಮೋಪದೇಶಕಾಂಡ 22:8; 1 ಸಮುವೇಲ 9:25, 26; ನೆಹೆಮೀಯ 8:16; ಅಪೊಸ್ತಲರ ಕಾರ್ಯಗಳು 10:9) ಅಪಾಯಕಾರಿ ಎತ್ತುಗಳನ್ನು ಯಾವಾಗಲೂ ಕಟ್ಟಿಹಾಕುವಂತೆ ಸಹ ಆತನು ಆಜ್ಞೆ ಕೊಟ್ಟನು. (ವಿಮೋಚನಕಾಂಡ 21:28, 29) ಇಂಥ ಆವಶ್ಯಕತೆಗಳನ್ನು ಅಲಕ್ಷಿಸುವುದು ಇತರರ ಹಿತಕ್ಷೇಮದ ವಿಷಯದಲ್ಲಿ ಅತ್ಯಧಿಕವಾದ ಗೌರವದ ಕೊರತೆಯನ್ನು ತೋರಿಸಿತು ಮತ್ತು ಇದು ರಕ್ತಾಪರಾಧವನ್ನು ತರಸಾಧ್ಯವಿತ್ತು.
15 ಈ ನಿಯಮಗಳ ಹಿಂದಿರುವ ಮೂಲತತ್ತ್ವಗಳನ್ನು ನೀವು ಹೇಗೆ ಅನ್ವಯಿಸಸಾಧ್ಯವಿದೆ? ನೀವು ನಿಮ್ಮ ವಾಹನ, ನಿಮ್ಮ ವಾಹನ ಚಲಾಯಿಸುವ ರೂಢಿಗಳು, ನಿಮ್ಮ ಪ್ರಾಣಿಗಳು, ನಿಮ್ಮ ಮನೆ, ನಿಮ್ಮ ಕೆಲಸದ ಸ್ಥಳ ಮತ್ತು ನಿಮ್ಮ ಮನೋರಂಜನೆಯ ಆಯ್ಕೆಯ ಕುರಿತು ಯೋಚಿಸಬಾರದೇಕೆ? ಕೆಲವು ದೇಶಗಳಲ್ಲಿ ಯುವ ಜನರ ಸಾವಿಗೆ ಅಪಘಾತಗಳು ಮುಖ್ಯ ಕಾರಣವಾಗಿವೆ. ಹೆಚ್ಚಾಗಿ, ಅವರು ಅನಗತ್ಯವಾದ ಅಪಾಯದಲ್ಲಿ ತಮ್ಮನ್ನು ಒಳಗೂಡಿಸಿಕೊಳ್ಳುವುದೇ ಇದಕ್ಕೆ ಕಾರಣವಾಗಿದೆ. ಆದರೆ ದೇವರ ಪ್ರೀತಿಯಲ್ಲಿ ತಮ್ಮನ್ನು ಕಾಪಾಡಿಕೊಳ್ಳಲು ಬಯಸುವ ಯುವ ಜನರು ಜೀವವನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೆ ಮತ್ತು ಅಪಾಯಕರ ಚಟುವಟಿಕೆಗಳಲ್ಲಿ ಆನಂದವನ್ನು ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲ. ಯುವ ಜನರಿಗೆ ಏನೂ ಆಗುವುದಿಲ್ಲ ಎಂದು ಅವರು ಮೂರ್ಖವಾಗಿ ಆಲೋಚಿಸುವುದಿಲ್ಲ. ಅದರ ಬದಲಿಗೆ, ಅನಗತ್ಯವಾದ ವಿಪತ್ತಿನಿಂದ ದೂರವಿರುವ ಮೂಲಕ ಅವರು ತಮ್ಮ ಯೌವನವನ್ನು ಆನಂದಿಸುತ್ತಾರೆ.—ಪ್ರಸಂಗಿ 11:9, 10.
16. ಯಾವ ಬೈಬಲ್ ಮೂಲತತ್ತ್ವವು ಭ್ರೂಣಹತ್ಯೆಗೆ ಅನ್ವಯವಾಗುತ್ತದೆ? (ಪಾದಟಿಪ್ಪಣಿಯನ್ನು ಸಹ ನೋಡಿ.)
16 ದೇವರ ದೃಷ್ಟಿಯಲ್ಲಿ ಅಜಾತ ಶಿಶುವಿನ ಜೀವವು ಕೂಡ ಅಮೂಲ್ಯ. ಪುರಾತನ ಇಸ್ರಾಯೇಲಿನಲ್ಲಿ, ಯಾರಾದರೂ ಗರ್ಭಿಣಿಯಾದ ಸ್ತ್ರೀಯನ್ನು ಗಾಯಗೊಳಿಸುವುದಾದರೆ ಮತ್ತು ಅದರಿಂದ ಅವಳು ಅಥವಾ ಅವಳ ಮಗು ಸತ್ತುಹೋಗುವುದಾದರೆ ಈ ಅಪರಾಧವನ್ನು ಮಾಡಿದವನನ್ನು ದೇವರು ನರಹಂತಕನಾಗಿ ಪರಿಗಣಿಸುತ್ತಿದ್ದನು ಮತ್ತು ಅವನು “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು” ಕೊಡಬೇಕಿತ್ತು.b (ವಿಮೋಚನಕಾಂಡ 21:22, 23 ಓದಿ.) ಹಾಗಾದರೆ ಪ್ರತಿ ವರ್ಷ ಬೇಕುಬೇಕೆಂದೇ ಅಸಂಖ್ಯಾತ ಅಜಾತ ಶಿಶುಗಳ ಭ್ರೂಣಹತ್ಯೆ ಮಾಡಲ್ಪಡುವುದನ್ನು ನೋಡುವಾಗ ಯೆಹೋವನಿಗೆ ಹೇಗನಿಸುತ್ತಿರಬೇಕು ಎಂಬುದನ್ನು ಆಲೋಚಿಸಿ ನೋಡಿ. ಇಂಥ ಭ್ರೂಣಹತ್ಯೆಗಳು ಹೆಚ್ಚಾಗಿ ಸ್ವ-ಅನುಕೂಲತೆ ಮತ್ತು ಲೈಂಗಿಕ ಸಡಿಲು ನಡತೆಯ ಕಾರಣ ಮಾಡಲ್ಪಡುತ್ತವೆ.
17. ದೇವರ ಮಟ್ಟಗಳ ಕುರಿತು ಕಲಿಯುವುದಕ್ಕಿಂತ ಮುಂಚೆ ಭ್ರೂಣಹತ್ಯೆ ಮಾಡಿರುವಂಥ ಒಬ್ಬ ವ್ಯಕ್ತಿಯನ್ನು ನೀವು ಹೇಗೆ ಸಂತೈಸಬಲ್ಲಿರಿ?
17 ಆದರೆ ಬೈಬಲ್ ಸತ್ಯವನ್ನು ತಿಳಿದುಕೊಳ್ಳುವುದಕ್ಕಿಂತ ಮುಂಚೆ ಭ್ರೂಣಹತ್ಯೆ ಮಾಡಿರುವಂಥ ಒಬ್ಬ ಸ್ತ್ರೀಯ ಕುರಿತಾಗಿ ಏನು? ಅವಳಿಗೆ ದೇವರ ಕರುಣೆಯು ಸಿಗುವುದಿಲ್ಲವೊ? ಹಾಗೇನಿಲ್ಲ. ನಿಜವಾದ ಪಶ್ಚಾತ್ತಾಪವನ್ನು ತೋರಿಸುವ ವ್ಯಕ್ತಿಯು ಕ್ರಿಸ್ತನು ಸುರಿಸಿದ ರಕ್ತದ ಮೇಲೆ ಆಧಾರಿತವಾದ ಯೆಹೋವನ ಕ್ಷಮಾಪಣೆಯ ಮೇಲೆ ಆತುಕೊಳ್ಳಸಾಧ್ಯವಿದೆ. (ಕೀರ್ತನೆ 103:8-14; ಎಫೆಸ 1:7) ವಾಸ್ತವದಲ್ಲಿ “ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಪಶ್ಚಾತ್ತಾಪಕ್ಕಾಗಿ ಕರೆಯಲು ಬಂದಿದ್ದೇನೆ” ಎಂದು ಕ್ರಿಸ್ತನು ತಾನೇ ಹೇಳಿದ್ದಾನೆ.—ಲೂಕ 5:32.
ಹಾನಿಕರ ಆಲೋಚನೆಯಿಂದ ದೂರವಿರಿ!
18. ಅತ್ಯಧಿಕ ರಕ್ತಪಾತದ ಹಿಂದಿರುವ ಕಾರಣವನ್ನು ಬೈಬಲು ಹೇಗೆ ಗುರುತಿಸುತ್ತದೆ?
18 ಇತರರಿಗೆ ಹಾನಿಯನ್ನು ಉಂಟುಮಾಡದೆ ಇರುವುದಕ್ಕಿಂತ ಹೆಚ್ಚಾಗಿ ಅತ್ಯಧಿಕ ರಕ್ತಪಾತಕ್ಕೆ ಕಾರಣವಾಗಿರುವ ದ್ವೇಷವನ್ನು ನಮ್ಮ ಹೃದಯದಿಂದ ಬೇರುಸಮೇತ ಕಿತ್ತುಹಾಕುವಂತೆ ಯೆಹೋವನು ಅಪೇಕ್ಷಿಸುತ್ತಾನೆ. “ತನ್ನ ಸಹೋದರನನ್ನು ದ್ವೇಷಿಸುವ ಪ್ರತಿಯೊಬ್ಬನು ನರಹಂತಕನಾಗಿದ್ದಾನೆ [ಅಥವಾ, ಕೊಲೆಗಾರನಾಗಿದ್ದಾನೆ]” ಎಂದು ಅಪೊಸ್ತಲ ಯೋಹಾನನು ಬರೆದನು. (1 ಯೋಹಾನ 3:15) ಇಂಥ ಒಬ್ಬ ವ್ಯಕ್ತಿಯು ತನ್ನ ಸಹೋದರನನ್ನು ಇಷ್ಟಪಡದೆ ಇರುವುದು ಮಾತ್ರವಲ್ಲ ಅವನ ಸಾವನ್ನೂ ಬಯಸುತ್ತಾನೆ. ಅವನ ವೈರತ್ವವು ತೀವ್ರವಾದ ಮಿಥ್ಯಾಪವಾದ ಅಥವಾ ಸುಳ್ಳು ಆರೋಪಗಳ ರೂಪದಲ್ಲಿ ತೋರಿಬರಬಹುದು—ಈ ಆರೋಪಗಳು ಸತ್ಯವಾಗಿದ್ದಲ್ಲಿ ಇವು ದೈವಿಕ ನ್ಯಾಯತೀರ್ಪನ್ನು ತರಸಾಧ್ಯವಿದೆ. (ಯಾಜಕಕಾಂಡ 19:16; ಧರ್ಮೋಪದೇಶಕಾಂಡ 19:18-21; ಮತ್ತಾಯ 5:22) ಆದುದರಿಂದ ನಮ್ಮ ಹೃದಯಗಳಲ್ಲಿರಬಹುದಾದ ಯಾವುದೇ ಹಗೆತನವನ್ನು ಪೂರ್ಣವಾಗಿ ತೆಗೆದುಹಾಕಲು ಪ್ರಯತ್ನಿಸುವುದು ಎಷ್ಟು ಪ್ರಮುಖ!—ಯಾಕೋಬ 1:14, 15; 4:1-3.
19. ಬೈಬಲಿನ ಮೂಲತತ್ತ್ವಗಳಿಂದ ನಡಿಸಲ್ಪಡುವ ಒಬ್ಬ ವ್ಯಕ್ತಿಯು ಕೀರ್ತನೆ 11:5 ಮತ್ತು ಫಿಲಿಪ್ಪಿ 4:8, 9ರಂಥ ವಚನಗಳನ್ನು ಹೇಗೆ ವೀಕ್ಷಿಸುತ್ತಾನೆ?
19 ಯೆಹೋವನಂತೆಯೇ ಜೀವವನ್ನು ಅಮೂಲ್ಯವಾಗಿ ಪರಿಗಣಿಸುವವರು ಮತ್ತು ಆತನ ಪ್ರೀತಿಯಲ್ಲಿ ತಮ್ಮನ್ನು ಕಾಪಾಡಿಕೊಳ್ಳಲು ಬಯಸುವವರು ಎಲ್ಲ ರೀತಿಯ ಹಿಂಸಾಚಾರದಿಂದ ಸಹ ದೂರವಿರುತ್ತಾರೆ. ಕೀರ್ತನೆ 11:5, ‘ಬಲಾತ್ಕಾರ ಪ್ರಿಯನನ್ನು [ಯೆಹೋವನ] ಪ್ರಾಣವು ದ್ವೇಷಿಸುತ್ತದೆ’ (NIBV) ಎಂದು ಹೇಳುತ್ತದೆ. ಈ ವಚನದಲ್ಲಿ ದೇವರ ವ್ಯಕ್ತಿತ್ವದ ಕುರಿತಾದ ಹೇಳಿಕೆಗಿಂತ ಹೆಚ್ಚಿನದ್ದು ಒಳಗೂಡಿದೆ; ಇದು ಜೀವನಕ್ಕಾಗಿರುವ ಒಂದು ಮಾರ್ಗದರ್ಶಕ ಮೂಲತತ್ತ್ವವಾಗಿದೆ. ಇದು ಹಿಂಸಾಚಾರದಲ್ಲಿ ಅಭಿರುಚಿಯನ್ನು ಹೆಚ್ಚಿಸುವಂಥ ಯಾವುದೇ ರೀತಿಯ ಮನೋರಂಜನೆಯಿಂದ ದೂರವಿರುವಂತೆ ದೇವಪ್ರಿಯರನ್ನು ಪ್ರಚೋದಿಸುತ್ತದೆ. ತದ್ರೀತಿಯಲ್ಲಿ ಯೆಹೋವನು “ಶಾಂತಿಯ ದೇವರು” ಎಂಬ ಹೇಳಿಕೆಯು ಆತನ ಸೇವಕರು ತಮ್ಮ ಹೃದಮನಗಳನ್ನು ಶಾಂತಿಗೆ ನಡಿಸುವಂಥ ಪ್ರೀತಿಯೋಗ್ಯವಾದ, ಸದ್ಗುಣವಾಗಿರುವ ಮತ್ತು ಸ್ತುತಿಗೆ ಯೋಗ್ಯವಾಗಿರುವ ವಿಷಯಗಳಿಂದ ತುಂಬಿಸಿಕೊಳ್ಳುವಂತೆ ಪ್ರಚೋದಿಸುತ್ತದೆ.—ಫಿಲಿಪ್ಪಿ 4:8, 9 ಓದಿ.
ರಕ್ತಾಪರಾಧಿ ಸಂಘಟನೆಗಳಿಂದ ದೂರವಿರಿ
20-22. ಲೋಕದ ಸಂಬಂಧದಲ್ಲಿ ಕ್ರೈಸ್ತರು ಯಾವ ನಿಲುವನ್ನು ತೆಗೆದುಕೊಳ್ಳುತ್ತಾರೆ ಮತ್ತು ಏಕೆ?
20 ದೇವರ ದೃಷ್ಟಿಯಲ್ಲಿ ಸೈತಾನನ ಇಡೀ ಲೋಕವು ರಕ್ತಾಪರಾಧಿಯಾಗಿದೆ. ಕ್ರೂರ ಮೃಗಗಳಾಗಿ ಚಿತ್ರಿಸಲ್ಪಟ್ಟಿರುವ ಅದರ ರಾಜಕೀಯ ವ್ಯವಸ್ಥೆಗಳು ಯೆಹೋವನ ಸೇವಕರಲ್ಲಿ ಅನೇಕರನ್ನು ಒಳಗೊಂಡು ಅಸಂಖ್ಯಾತ ಸಂಖ್ಯೆಯ ಜನಸಮೂಹವನ್ನು ಹತಿಸಿವೆ. (ದಾನಿಯೇಲ 8:3, 4, 20-22; ಪ್ರಕಟನೆ 13:1, 2, 7, 8) ಈ ಮೃಗಸದೃಶ ಅಧಿಕಾರಗಳ ಜೊತೆ ಜೊತೆಗೆ ವಾಣಿಜ್ಯ ಮತ್ತು ವಿಜ್ಞಾನ ಸಂಸ್ಥೆಗಳು ಊಹಿಸಸಾಧ್ಯವಿರುವುದರಲ್ಲಿ ಅತಿ ಭೀಕರವಾದ ಕೆಲವು ಶಸ್ತ್ರಾಸ್ತ್ರಗಳನ್ನು ರೂಪಿಸುವುದರಲ್ಲಿ ಕಾರ್ಯನಡಿಸಿವೆ ಮತ್ತು ಈ ಕಾರ್ಯಗತಿಯಲ್ಲಿ ಬೃಹತ್ಪ್ರಮಾಣದ ಲಾಭವನ್ನು ಗಳಿಸಿವೆ. “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂಬುದು ಎಷ್ಟು ಸತ್ಯವಾಗಿದೆ!—1 ಯೋಹಾನ 5:19.
21 ಯೇಸುವಿನ ಹಿಂಬಾಲಕರು ‘ಲೋಕದ ಭಾಗವಾಗಿಲ್ಲದೆ’ ಇದ್ದು ಅದರ ರಾಜಕೀಯ ಮತ್ತು ಯುದ್ಧಗಳ ಸಂಬಂಧದಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವುದರಿಂದ ಅವರು ವೈಯಕ್ತಿಕ ಹಾಗೂ ಸಾಮಾಜಿಕ ರಕ್ತಾಪರಾಧದಿಂದ ದೂರವಿರುತ್ತಾರೆ.c (ಯೋಹಾನ 15:19; 17:16) ಅವರು ಕ್ರಿಸ್ತನನ್ನು ಅನುಕರಿಸುವುದರಿಂದ ಇತರರು ಅವರನ್ನು ಹಿಂಸಿಸುವಾಗ ಅವರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದಿಲ್ಲ. ಬದಲಿಗೆ ಅವರು ತಮ್ಮ ವೈರಿಗಳಿಗೆ ಪ್ರೀತಿಯನ್ನು ತೋರಿಸುತ್ತಾರೆ, ಅವರಿಗಾಗಿ ಪ್ರಾರ್ಥನೆಯನ್ನೂ ಮಾಡುತ್ತಾರೆ.—ಮತ್ತಾಯ 5:44; ರೋಮನ್ನರಿಗೆ 12:17-21.
22 ಎಲ್ಲಕ್ಕಿಂತ ಮಿಗಿಲಾಗಿ ನಿಜ ಕ್ರೈಸ್ತರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವೂ ಎಲ್ಲಕ್ಕಿಂತಲೂ ಹೆಚ್ಚು ರಕ್ತಾಪರಾಧಿಯೂ ಆಗಿರುವ “ಮಹಾ ಬಾಬೆಲ್” ನೊಂದಿಗೆ ಒಳಗೂಡುವುದರಿಂದ ದೂರವಿರುತ್ತಾರೆ. “ಪ್ರವಾದಿಗಳ, ಪವಿತ್ರ ಜನರ ಮತ್ತು ಭೂಮಿಯ ಮೇಲೆ ವಧಿಸಲ್ಪಟ್ಟವರೆಲ್ಲರ ರಕ್ತವು ಅವಳಲ್ಲಿ ಕಂಡುಬಂತು” ಎಂದು ದೇವರ ವಾಕ್ಯವು ತಿಳಿಸುತ್ತದೆ. ಆದುದರಿಂದ “ನನ್ನ ಜನರೇ . . . ಅವಳನ್ನು ಬಿಟ್ಟು ಹೊರಗೆ ಬನ್ನಿರಿ” ಎಂಬ ಎಚ್ಚರಿಕೆಯು ನಮಗೆ ಕೊಡಲ್ಪಟ್ಟಿದೆ.—ಪ್ರಕಟನೆ 17:6; 18:2, 4, 24.
23. ಮಹಾ ಬಾಬೆಲನ್ನು ಬಿಟ್ಟು ಹೊರಗೆ ಬರುವುದರ ಅರ್ಥವೇನಾಗಿದೆ?
23 ಮಹಾ ಬಾಬೆಲನ್ನು ತೊರೆಯುವುದರಲ್ಲಿ ಒಬ್ಬನು ತನ್ನ ಹೆಸರನ್ನು ಅದರ ಸದಸ್ಯರ ಪಟ್ಟಿಯಿಂದ ತೆಗೆಸಿಬಿಡುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಇದರಲ್ಲಿ ಸುಳ್ಳು ಧರ್ಮವು ಸಮ್ಮತಿಸುವ ಅಥವಾ ಬಹಿರಂಗವಾಗಿ ಪ್ರವರ್ಧಿಸುವ ಅನೈತಿಕತೆ, ರಾಜಕೀಯ ಹಸ್ತಕ್ಷೇಪ ಮತ್ತು ಅತ್ಯಾಶೆಯಿಂದ ಐಶ್ವರ್ಯವನ್ನು ಬೆನ್ನಟ್ಟುವುದರಂಥ ದುಷ್ಟ ವಿಷಯಗಳನ್ನು ಹಗೆಮಾಡುವುದೂ ಒಳಗೂಡಿದೆ. (ಕೀರ್ತನೆ 97:10 ಓದಿ; ಪ್ರಕಟನೆ 18:7, 9, 11-17) ಇಂಥ ಚಟುವಟಿಕೆಗಳು ಎಷ್ಟೋ ಬಾರಿ ರಕ್ತಪಾತಕ್ಕೆ ನಡಿಸುತ್ತವೆ!
24, 25. (ಎ) ರಕ್ತಾಪರಾಧಿಯಾಗಿರುವ ಒಬ್ಬ ವ್ಯಕ್ತಿಯು ಪಶ್ಚಾತ್ತಾಪಪಡುವಾಗ ಯಾವ ಆಧಾರದ ಮೇಲೆ ದೇವರು ಕರುಣೆಯನ್ನು ತೋರಿಸಸಾಧ್ಯವಿದೆ? (ಬಿ) ಇದು ನಮಗೆ ಬೈಬಲ್ ಸಮಯಗಳಲ್ಲಿದ್ದ ಯಾವ ಏರ್ಪಾಡನ್ನು ನೆನಪಿಗೆ ತರುತ್ತದೆ?
24 ಸತ್ಯಾರಾಧನೆಯನ್ನು ಸ್ವೀಕರಿಸುವುದಕ್ಕಿಂತ ಮುಂಚೆ ನಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದಲ್ಲಿ ಸೈತಾನನ ವ್ಯವಸ್ಥೆಗೆ ಬೆಂಬಲವನ್ನು ನೀಡಿ ಸ್ವಲ್ಪಮಟ್ಟಿಗೆ ರಕ್ತಾಪರಾಧವನ್ನು ತಂದುಕೊಂಡಿದ್ದೇವೆ. ಆದರೆ ನಾವು ನಮ್ಮ ಮಾರ್ಗಗಳನ್ನು ಬದಲಾಯಿಸಿಕೊಂಡು, ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯನ್ನು ಬೆಳೆಸಿಕೊಂಡು, ನಮ್ಮ ಜೀವಿತವನ್ನು ದೇವರಿಗೆ ಸಮರ್ಪಿಸಿಕೊಂಡಿರುವುದರಿಂದ ದೇವರ ಕರುಣೆಯನ್ನು ಹಾಗೂ ಆಧ್ಯಾತ್ಮಿಕ ಸಂರಕ್ಷಣೆಯನ್ನು ಪಡೆದುಕೊಂಡೆವು. (ಅಪೊಸ್ತಲರ ಕಾರ್ಯಗಳು 3:19) ಈ ಸಂರಕ್ಷಣೆಯು ಬೈಬಲ್ ಸಮಯಗಳಲ್ಲಿದ್ದ ಆಶ್ರಯ ನಗರಗಳನ್ನು ನೆನಪಿಗೆ ತರುತ್ತದೆ.—ಅರಣ್ಯಕಾಂಡ 35:11-15; ಧರ್ಮೋಪದೇಶಕಾಂಡ 21:1-9.
25 ಆ ಏರ್ಪಾಡು ಹೇಗೆ ಕಾರ್ಯನಡಿಸಿತು? ಒಬ್ಬ ಇಸ್ರಾಯೇಲ್ಯನು ಕೈತಪ್ಪಿ ಮತ್ತೊಬ್ಬನನ್ನು ಕೊಂದರೆ ಅವನು ಈ ಆಶ್ರಯ ನಗರಗಳಲ್ಲಿ ಒಂದಕ್ಕೆ ಓಡಿಹೋಗಬೇಕಿತ್ತು. ಅರ್ಹರಾದ ನ್ಯಾಯಾಧೀಶರು ನ್ಯಾಯತೀರ್ಪನ್ನು ವಿಧಿಸಿದ ಬಳಿಕ, ಕೈತಪ್ಪಿ ನರಹತ್ಯೆಮಾಡಿದ ವ್ಯಕ್ತಿಯು ಮಹಾ ಯಾಜಕನ ಮರಣದ ತನಕ ಆಶ್ರಯ ನಗರದಲ್ಲಿ ಉಳಿಯಬೇಕಿತ್ತು. ಆ ಬಳಿಕ ಅವನು ಬೇರೆ ಎಲ್ಲಿಯಾದರೂ ಜೀವಿಸಲು ಸ್ವತಂತ್ರನಾಗಿದ್ದನು. ದೇವರ ಕರುಣೆ ಮತ್ತು ಮಾನವ ಜೀವವನ್ನು ಆತನೆಷ್ಟು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದಕ್ಕೆ ಇದು ಎಂಥ ಗಮನಾರ್ಹವಾದ ಉದಾಹರಣೆಯಾಗಿದೆ! ಆ ಪುರಾತನ ಆಶ್ರಯ ನಗರಗಳು ಇಂದು, ನಾವು ಜೀವ ಮತ್ತು ರಕ್ತದ ಪವಿತ್ರತೆಯ ಕುರಿತಾದ ದೇವರ ಆಜ್ಞೆಯನ್ನು ಆಕಸ್ಮಿಕವಾಗಿ ಉಲ್ಲಂಘಿಸಿದ್ದರಿಂದ ಉಂಟಾಗುವ ಮರಣದಿಂದ ನಮ್ಮನ್ನು ಸಂರಕ್ಷಿಸಲು ಮಾಡಲ್ಪಟ್ಟಿರುವ ದೇವರ ಒದಗಿಸುವಿಕೆಗೆ ಹೋಲುತ್ತವೆ. ಈ ಒದಗಿಸುವಿಕೆಯು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದ ಮೇಲೆ ಆಧರಿಸಿದೆ. ನೀವು ಈ ಒದಗಿಸುವಿಕೆಯನ್ನು ಅಮೂಲ್ಯವಾಗಿ ಪರಿಗಣಿಸುತ್ತೀರೊ? ನೀವು ಅಮೂಲ್ಯವಾಗಿ ಪರಿಗಣಿಸುತ್ತೀರಿ ಎಂಬುದನ್ನು ಹೇಗೆ ತೋರಿಸಸಾಧ್ಯವಿದೆ? ಒಂದು ವಿಧವು, ವಿಶೇಷವಾಗಿ “ಮಹಾ ಸಂಕಟವು” ವೇಗವಾಗಿ ಧಾವಿಸುತ್ತಿರುವುದರಿಂದ ಸಂರಕ್ಷಣೆಗಾಗಿರುವ ದೇವರ ಈ ಒದಗಿಸುವಿಕೆಯನ್ನು ಸ್ವೀಕರಿಸುವಂತೆ ಇತರರನ್ನು ಆಮಂತ್ರಿಸುವ ಮೂಲಕವೇ ಆಗಿದೆ.—ಮತ್ತಾಯ 24:21; 2 ಕೊರಿಂಥ 6:1, 2.
ರಾಜ್ಯದ ಸಂದೇಶವನ್ನು ಸಾರುವ ಮೂಲಕ ಜೀವವನ್ನು ಅಮೂಲ್ಯವಾಗಿ ಪರಿಗಣಿಸಿರಿ
26-28. ಇಂದಿರುವ ನಮ್ಮ ಸನ್ನಿವೇಶವು ಯಾವ ವಿಧದಲ್ಲಿ ಪ್ರವಾದಿಯಾದ ಯೆಹೆಜ್ಕೇಲನ ಸನ್ನಿವೇಶಕ್ಕೆ ತುಲನಾತ್ಮಕವಾಗಿದೆ ಮತ್ತು ನಾವು ನಮ್ಮನ್ನು ದೇವರ ಪ್ರೀತಿಯಲ್ಲಿ ಹೇಗೆ ಕಾಪಾಡಿಕೊಳ್ಳಬಲ್ಲೆವು?
26 ನಮ್ಮ ದಿನದಲ್ಲಿರುವ ದೇವಜನರ ಸನ್ನಿವೇಶವು ಪುರಾತನ ಪ್ರವಾದಿಯಾಗಿದ್ದ ಯೆಹೆಜ್ಕೇಲನ ಸನ್ನಿವೇಶವನ್ನು ನೆನಪಿಗೆ ತರುತ್ತದೆ. ಇಸ್ರಾಯೇಲ್ ಮನೆತನದ ಆಧ್ಯಾತ್ಮಿಕ ಕಾವಲುಗಾರನಾಗಿ ಸೇವೆಮಾಡುವಂತೆ ಯೆಹೋವನು ಅವನಿಗೆ ನೇಮಕವನ್ನು ಕೊಟ್ಟನು. “ನೀನು ನನ್ನ . . . ಮಾತನ್ನು ಕೇಳಿ ನನ್ನ ದೂತನಾಗಿ ಅವರನ್ನು ಎಚ್ಚರಪಡಿಸು” ಎಂದು ದೇವರು ಹೇಳಿದನು. ಯೆಹೆಜ್ಕೇಲನು ತನ್ನ ನೇಮಕವನ್ನು ಅಲಕ್ಷಿಸುತ್ತಿದ್ದಲ್ಲಿ ಯೆರೂಸಲೇಮ್ನಿಂದ ಲೆಕ್ಕವು ಕೇಳಲ್ಪಡುವಾಗ ಕೊಲ್ಲಲ್ಪಡುವವರ ರಕ್ತಕ್ಕೆ ಅವನು ವೈಯಕ್ತಿಕವಾಗಿ ಹೊಣೆಗಾರನಾಗುವ ಸಾಧ್ಯತೆಯಿತ್ತು. (ಯೆಹೆಜ್ಕೇಲ 33:7-9) ಆದರೆ ಯೆಹೆಜ್ಕೇಲನು ವಿಧೇಯನಾದನು ಮತ್ತು ತನ್ನ ಮೇಲೆ ಯಾವುದೇ ರಕ್ತಾಪರಾಧವನ್ನು ತಂದುಕೊಳ್ಳಲಿಲ್ಲ.
27 ಇಂದು ಸೈತಾನನ ಇಡೀ ಲೋಕದ ಅಂತ್ಯವು ನಮ್ಮ ಮುಂದೆ ಇದೆ. ಆದುದರಿಂದ ರಾಜ್ಯದ ಸಂದೇಶದ ಸಂಬಂಧದಲ್ಲಿ ದೇವರು ‘ಮುಯ್ಯಿತೀರಿಸುವ ದಿನವನ್ನು’ ಪ್ರಕಟಿಸುವುದನ್ನು ಯೆಹೋವನ ಸಾಕ್ಷಿಗಳು ಒಂದು ಕರ್ತವ್ಯವಾಗಿಯೂ ಸುಯೋಗವಾಗಿಯೂ ಪರಿಗಣಿಸುತ್ತಾರೆ. (ಯೆಶಾಯ 61:2; ಮತ್ತಾಯ 24:14) ಈ ಅತ್ಯಾವಶ್ಯಕ ಕೆಲಸದಲ್ಲಿ ನೀವು ಪೂರ್ಣವಾಗಿ ಭಾಗವಹಿಸುತ್ತೀರೊ? ಅಪೊಸ್ತಲ ಪೌಲನು ತನ್ನ ಸಾರುವ ನೇಮಕವನ್ನು ಗಂಭೀರವಾಗಿ ತೆಗೆದುಕೊಂಡನು. ಇದರಿಂದಾಗಿ, “ನಾನು ಎಲ್ಲ ಮನುಷ್ಯರ ರಕ್ತದ ಹೊಣೆಯಿಂದ ಶುದ್ಧನಾಗಿದ್ದೇನೆ . . . ಏಕೆಂದರೆ ನಾನು ದೇವರ ಸಂಕಲ್ಪವನ್ನೆಲ್ಲ ನಿಮಗೆ ತಿಳಿಯಪಡಿಸಲು ಸ್ವಲ್ಪವೂ ಹಿಂಜರಿಯಲಿಲ್ಲ” ಎಂದು ಅವನು ಹೇಳಶಕ್ತನಾದನು. (ಅಪೊಸ್ತಲರ ಕಾರ್ಯಗಳು 20:26, 27) ನಾವು ಅನುಕರಿಸಲು ಎಂಥ ಅತ್ಯುತ್ತಮ ಮಾದರಿಯಿದು!
28 ವಾಸ್ತವದಲ್ಲಿ ಯೆಹೋವನ ಪಿತೃಸದೃಶ ಪ್ರೀತಿಯ ಸೌಹಾರ್ದತೆಯಲ್ಲಿ ನಮ್ಮನ್ನು ಕಾಪಾಡಿಕೊಳ್ಳಲು ನಾವು ಯೆಹೋವನಂತೆಯೇ ಜೀವ ಮತ್ತು ರಕ್ತವನ್ನು ಪರಿಗಣಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡುವ ಆವಶ್ಯಕತೆಯಿದೆ. ನಾವು ಆತನ ದೃಷ್ಟಿಯಲ್ಲಿ ಶುದ್ಧರು ಅಥವಾ ಪವಿತ್ರರಾಗಿ ಉಳಿಯಬೇಕು. ಇದನ್ನು ನಾವು ಮುಂದಿನ ಅಧ್ಯಾಯದಲ್ಲಿ ನೋಡುವೆವು.
a ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಆಗಸ್ಟ್ 2006ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಪುಟಗಳು 3-4, 5-9, 10-12ನ್ನು ನೋಡಿ.
b ಹೀಬ್ರು ವಚನದ ಪದಪ್ರಯೋಗವು “ಆ ಪದಗಳನ್ನು ಕೇವಲ ಸ್ತ್ರೀಗೆ ಮಾಡಲ್ಪಡುವ ಹಾನಿಗೆ ಮಾತ್ರ ಸೂಚಿಸುವುದನ್ನು ಅಸಾಧ್ಯವಾಗಿ ಮಾಡುತ್ತದೆ” ಎಂದು ಬೈಬಲ್ ನಿಘಂಟುಕಾರರು ತಿಳಿಸುತ್ತಾರೆ. ಯೆಹೋವನ ನ್ಯಾಯತೀರ್ಪಿನಲ್ಲಿ ಭ್ರೂಣದ ವಯಸ್ಸು ಒಂದು ಅಂಶವಾಗಿರುವುದರ ಬಗ್ಗೆ ಬೈಬಲ್ ಏನೂ ಹೇಳುವುದಿಲ್ಲ ಎಂಬುದನ್ನು ಸಹ ಗಮನಿಸಿ.
c “ಲೋಕದಿಂದ ಪ್ರತ್ಯೇಕವಾಗಿರಿಸಿಕೊಳ್ಳುವ ವಿಧ” ಎಂಬ ಅಧ್ಯಾಯ 5ನ್ನು ನೋಡಿ.
d ಸವಿವರವಾದ ಮಾಹಿತಿಗಾಗಿ “ರಕ್ತದ ಚಿಕ್ಕ ಅಂಶಗಳು ಮತ್ತು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳು” ಎಂಬ ಪರಿಶಿಷ್ಟವನ್ನು ನೋಡಿ.