ನಿಮ್ಮ ನಂಬಿಕೆಯ ಮೂಲಕ ನೀವು ಲೋಕವನ್ನು ದಂಡನೆಗೆ ಗುರಿಮಾಡುತ್ತೀರೊ?
“ನಂಬಿಕೆಯಿಂದಲೇ ನೋಹನು. . . ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ಅದರಿಂದ ಅವನು ಲೋಕದವರನ್ನು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು.”—ಇಬ್ರಿಯ 11:7.
1, 2, ನೋಹನ ಜೀವನದ ಪರೀಕ್ಷೆಯಿಂದ ನಾವೇನು ಕಲಿಯಬಲ್ಲೆವು?
ಯೆಹೋವನು ನೋಹನಿಗೂ ಕುಟುಂಬಕ್ಕೂ—ಕೇವಲ ಎಂಟು ಮಂದಿಗೆ—ಜಲಪ್ರಲಯವನ್ನು ಪಾರಾಗುವ ಏಕಮಾತ್ರ ಮಾನವರಾಗುವ ಸುಯೋಗವನ್ನು ಕೊಟ್ಟನು. ದೇವರು ನೋಹನ ಇತರ ಎಲ್ಲ ಸಮಕಾಲೀನರನ್ನು ಜಲಸಮಾಧಿ ಮಾಡಿದಾಗ ಅವರ ಜೀವ ಥಟ್ಟನೆ ಕಡಿಯಲ್ಪಟ್ಟಿತು. ನೋಹನೇ ನಮ್ಮ ಸಾಮಾನ್ಯ ಪೂರ್ವಿಕನಾಗಿರುವುದರಿಂದ ಅವನು ತೋರಿಸಿದ ನಂಬಿಕೆಗೆ ನಾವು ಕೃತಜ್ಞರಾಗಿರಬೇಕು.
2 ನೋಹನ ಜೀವನವನ್ನು ಪರೀಕ್ಷಿಸುವುದರಿಂದ ನಾವು ಧಾರಾಳ ಕಲಿಯಬಲ್ಲೆವು. ಅವನ ತಲೆಮೊರೆಯ ಜನರನ್ನು ನಾಶಮಾಡಿದಾಗ ದೇವರು ನೋಹನಿಗೆ ಏಕೆ ರಕ್ಷಣೆಯನ್ನು ಅನುಗ್ರಹಿಸಿದನೆಂದು ಶಾಸ್ತ್ರ ತಿಳಿಸುತ್ತದೆ. ಇದೇ ದೈವಿಕ ದಾಖಲೆ, ನಮ್ಮ ತಲೆಮೊರೆಯೂ ದೇವರಿಂದ ಇದೇ ರೀತಿಯ ತೀರ್ಪನ್ನು ಎದುರಿಸುತ್ತದೆಂದು ಸ್ಪಷ್ಟವಾಗಿಗಿ ತೋರಿಸುತ್ತದೆ. ಇದರ ಕುರಿತು ಯೇಸು ಹೇಳಿದ್ದು: “ಅಂಥ [ಮಹಾ, NW] ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ. ಇನ್ನು ಮೇಲೆಯೂ ಆಗುವದಿಲ್ಲ.” (ಮತ್ತಾಯ 24:21) ನೋಹನ ನಂಬಿಕೆಯನ್ನು ಅನುಸರಿಸುವಲ್ಲಿ, ಈಗಿನ ದುಷ್ಟ ವ್ಯವಸ್ಥೆಯ ಸನ್ನಿಹಿತ ನಾಶವನ್ನು ಪಾರಾಗುವ ನಿಶ್ಚಿತ ನಿರೀಕ್ಷೆ ನಮ್ಮದಾಗಿರಬಲ್ಲದು.—ರೋಮಾಪುರ 15:4; ಇಬ್ರಿಯ 13:7 ಹೋಲಿಸಿ.
3. ಯೆಹೋವನು ಏಕೆ ಜಲಪ್ರಳಯವನ್ನು ತಂದನು?
3 ಆದಾಮನ ಸೃಷ್ಟಿಯಿಂದ ಹಿಡಿದು ಜಲಪ್ರಳಯದ ವರೆಗಿನ 1,656 ವರುಷಗಳಲ್ಲಿ ಒಳ್ಳೆಯದನ್ನು ಮಾಡುವ ಪ್ರವೃತ್ತಿ ಅತಿ ವಿರಳ ಜನರಿಗಿತ್ತು. ನೈತಿಕತೆ ವಿಪರೀತ ಕೆಳಮಟ್ಟಕ್ಕೆ ಇಳಿದಿತ್ತು. “ಮನುಷ್ಯನ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು ನೋಡಿದನು.” (ಆದಿಕಾಂಡ 6:5) ಹಿಂಸಾತ್ಮಕ ಕೃತ್ಯ, ಸುಖಾನ್ವೇಷಣೆ ಮತ್ತು ಸ್ತ್ರೀಯರನ್ನು ವಿವಾಹಮಾಡಿಕೊಂಡು ದೈತ್ಯರೂಪದ ಸಂತಾನವನ್ನು ಪಡೆದ ದೇಹರೂಪ ತಾಳಿಬಂದಿದ್ದ ದೇವದೂತರ ಇರುವಿಕೆ, ಆ ಪೂರ್ವದ ಮಾನವ ಲೋಕಕ್ಕೆ ದೇವರ ತೀರ್ಪನ್ನು ತಂದ ವಿಷಯಗಳಲ್ಲಿ ಕೆಲವಾಗಿದ್ದವು. ಯೆಹೋವನು ನೋಹನಿಗೆ ಹೇಳಿದ್ದು: “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ.” ಸರ್ವಭೂಮಿಯ ನ್ಯಾಯಾಧೀಶನಾದ ಸೃಷ್ಟಿಕರ್ತನ ತಾಳ್ಮೆ ಮುಗಿದುಹೋಗಿತ್ತು.—ಆದಿಕಾಂಡ 6:13; 18:25.
ನೋಹನು ದೇವರೊಂದಿಗೆ ನಡೆದನು
4. (ಎ) ಯೆಹೋವನು ನೋಹನನ್ನು ಹೇಗೆ ವೀಕ್ಷಿಸಿದನು, ಮತ್ತು ಏಕೆ? (ಬಿ) ದೇವರ ನ್ಯಾಯ ಈ ದುಷ್ಟ ಲೋಕದ ನಾಶವನ್ನು ಕೇಳಿಕೊಂಡಿತಾದರೂ ನೋಹ ಮತ್ತು ಅವನ ಕುಟುಂಬದ ಪರವಾಗಿ ಆತನ ಪ್ರೀತಿ ಹೇಗೆ ತೋರಿಸಲ್ಪಟ್ಟಿತು?
4 ನೋಹನು ಅವನ ದಿನಗಳ ಜನರಿಗಿಂತ ಎಷ್ಟು ಭಿನ್ನವಾಗಿದ್ದನು! ಅವನಿಗೆ “ಯೆಹೋವನ ದಯವು ದೊರಕಿತು. . . ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು. (ಆದಿಕಾಂಡ 6:8, 9) ನೋಹನು ಹೇಗೆ ದೇವರೊಂದಿಗೆ ನಡೆದಾಡಿದನು? ನೀತಿಯ ಸಮರ್ಥನೆ ಮಾಡುತ್ತಾ ಸಾರುವ ಮತ್ತು ನಂಬಿಕೆ ಮತ್ತು ವಿಧೇಯತೆಯಿಂದ ತೇಲುಪೆಟ್ಟಿಗೆಯನ್ನು ಕಟ್ಟುವಂಥ ಸಮರ್ಪಕವಾದ ವಿಷಯಗಳನ್ನು ಮಾಡಿಯೆ. ಹೀಗೆ ಆ ಪುರಾತನ ಲೋಕವು ಪೂರ್ತಿ ಭ್ರಷ್ಟವಾಗಿದ್ದುದರಿಂದ ನಾಶಮಾಡಲ್ಪಟ್ಟಿತು. ದೇವರು, “ಭಕ್ತಿಹೀನರಾದ ಅವರ ಮೇಲೆ ಜಲಪ್ರಳಯವನ್ನು ಬರಮಾಡಿದನು. ಆದರೆ ಸುನೀತಿಯನ್ನು ಸಾರುವವನಾದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು.” (2 ಪೇತ್ರ 2:5) ಹೌದು, ನಮ್ಮ ಪ್ರೀತಿಯ ಮತ್ತು ನ್ಯಾಯವಂತನಾದ ಯೆಹೋವ ದೇವರು ದುಷ್ಟರೊಂದಿಗೆ ನೀತಿವಂತರನ್ನು ನಾಶಗೊಳಿಸಲಿಲ್ಲ. ಆತನು ನೋಹನಿಗೆ, ತನ್ನನ್ನು, ತನ್ನ ಕುಟುಂಬವನ್ನು ಮತ್ತು ಅನೇಕ ಪ್ರಾಣಿಗಳನ್ನು ಉಳಿಸುವರೆ ಒಂದು ದೊಡ್ಡ ತೇಲುಪೆಟ್ಟಿಗೆಯನ್ನು ರಚಿಸುವಂತೆ ಹೇಳಿದನು. ಇದೆಲ್ಲ ಜಲಪ್ರಳಯದ ತರವಾಯ ಭೂಮಿಯನ್ನು ತುಂಬಿಸುವಂತೆ ಮಾಡಲಿಕ್ಕಾಗಿಯೆ. ಮತ್ತು ನೋಹನು “ಅಪ್ಪಣೆ ಕೊಟ್ಟ ಪ್ರಕಾರ ಮಾಡಿದನು.”—ಆದಿಕಾಂಡ 6:22.
5. ನೋಹನ ನೀತಿ ಮತ್ತು ನಂಬಿಕೆಯನ್ನು ಶಾಸ್ತ್ರವು ಹೇಗೆ ವರ್ಣಿಸುತ್ತದೆ?
5 ತೇಲುಪೆಟ್ಟಿಗೆಯ ಕೆಲಸ ಮುಗಿದಾಗ ದೇವರು ನೋಹನಿಗೆ, “ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿರುವವರಲ್ಲಿ ನೀನೊಬ್ಬನೇ ನನ್ನ ಮಂದೆ ನೀತಿವಂತನಾಗಿ ನಡೆಯುವದನ್ನು ನೋಡಿದ್ದೇನೆ” ಎಂದು ಹೇಳಿದನು. ಪೌಲನು ಇದನ್ನು ಈ ರೀತಿ ಸಾರಾಂಶ ರೂಪದಲ್ಲಿ ಹೇಳುತ್ತಾನೆ: “ನಂಬಿಕೆಯಿಂದಲೇ ನೋಹನು ಅದುವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೂಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ಅದರಿಂದ ಅವನು ಲೋಕದವರನ್ನು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡು ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.”—ಆದಿಕಾಂಡ 7:1; ಇಬ್ರಿಯ 11:7.
6. ನೋಹನು ನಂಬಿಕೆಯ ಮೂಲಕ ಅವನ ದಿನಗಳ ಜಗತ್ತನ್ನು ಹೇಗೆ ದಂಡನೆಗೆ ಗುರಿ ಮಾಡಿದನು?
6 ನೋಹನಲ್ಲಿ ಗಮನಾರ್ಹವಾದ ನಂಬಿಕೆಯಿತ್ತು. ಆ ಸಂತತಿಯನ್ನು ನಿರ್ಮೂಲಗೊಳಿಸುವ ದೇವರ ಮಾತನ್ನು ಅವನು ನಂಬಿದನು. ನೋಹನಿಗೆ ಯೆಹೋವನನ್ನು ಅಸಂತೋಷಪಡಿಸುವ ವಿಷಯದಲ್ಲಿ ಆರೋಗ್ಯಕರವಾದ ಭಯವಿತ್ತು. ಮತ್ತು ಅವನು ದೇವದತ್ತ ಆಜ್ಞಾನುಸಾರ ತೇಲುಪೆಟ್ಟಿಗೆಯನ್ನು ಕಟ್ಟಿದನು. ಇದಲ್ಲದೆ, ನೀತಿಯನ್ನು ಸಾರುವವನಾದ ನೋಹನು ಬರಲಿದ್ದ ನಾಶನದ ಕುರಿತು ಇತರರಿಗೆ ತಿಳಿಸಿದನು. ಅವರು ಅವನ ಮಾತುಗಳನ್ನು ಆಲಿಸಲು ನಿರಾಕರಿಸಿದರೂ, ಆ ದುಷ್ಟಲೋಕವು “ಅದರ ಅಚಿನ್ಚೊಳಗೆ ಹಾಕಿ ಅವನನ್ನು ಹಿಂಡುವಂತೆ” ಅವನು ಬಿಡಲಿಲ್ಲ. (ರೋಮಾಪುರ 12:2, ಫಿಲಿಪ್ಸ್) ಬದಲಾಗಿ, ಅವನ ನಂಬಿಕೆಯ ಮೂಲಕ ನೋಹನು ಲೋಕದ ದುಷ್ಟತನಕ್ಕಾಗಿ ಅದನ್ನು ದಂಡನೆಗೆ ಪಾತ್ರಮಾಡಿ ಅದು ನಾಶಯೋಗ್ಯವೆಂದು ತೋರಿಸಿದನು. ಅವನ ವಿಧೇಯತೆ ಮತ್ತು ನೀತಿಯ ಕೃತ್ಯಗಳು, ಅವನೂ ಅವನ ಕುಟುಂಬವಲ್ಲದೆ ಇತರರೂ ಅವರ ಜೀವನಶೈಲಿಯನ್ನು ಬದಲಾಯಿಸಲು ಇಷ್ಟಪಡುತ್ತಿದ್ದರೆ ಬಚಾವಾಗುತ್ತಿದ್ದರೆಂದು ತೋರಿಸಿಕೊಟ್ಟಿತು. ಹೌದು, ನೋಹನು ತನ್ನ ಸ್ವಂತ ಅಪೂರ್ಣ ದೇಹ, ತನ್ನನ್ನು ಆವರಿಸಿದ್ದ ದುಷ್ಟ ಜಗತ್ತು ಮತ್ತು ಪಿಶಾಚ—ಇವುಗಳ ಒತ್ತಡದ ಎದುರಿನಲ್ಲೂ ದೇವರನ್ನು ಸಂತೋಷಗೊಳಿಸುವ ರೀತಿಯ ಜೀವನವನ್ನು ಸಾಗಿಸುವುದು ಸಾಧ್ಯವೆಂದು ರುಜುಮಾಡಿದನು.
ದೇವರು ಈ ವ್ಯವಸ್ಥೆಯನ್ನು ನಾಶಮಾಡಿಯಾನೆ?
7. ನಾವು ಕೊನೆಯ ದಿನಗಳಲ್ಲಿ ಬದುಕುತ್ತಿದ್ದೇವೆಂದು ನಮಗೆ ಹೇಗೆ ಗೊತ್ತು?
7 ಈ ಇಪ್ಪತ್ತನೆಯ ಶತಕದ ಪ್ರತಿಯೊಂದು ದಶಕವೂ ಈ ಲೋಕ ಹೆಚ್ಚು ದುಷ್ಟತ್ವದೊಳಗೆ ಮುಳುಗುವುದನ್ನು ನೋಡಿದೆ. Iನೆಯ ಜಾಗತಿಕ ಯುದ್ಧದ ಬಳಿಕ ಇದು ವಿಶೇಷವಾಗಿ ಸತ್ಯ. ಲೈಂಗಿಕ ದುರಾಚಾರ, ಪಾತಕ, ಹಿಂಸಾಕೃತ್ಯ, ಯುದ್ಧ, ಹಗೆ, ದುರಾಶೆ ಮತ್ತು ರಕ್ತದ ದುರುಪಯೋಗಗಳಲ್ಲಿ ಮನುಷ್ಯರು ಎಷ್ಟು ಮುಳುಗಿದ್ದಾರೆಂದರೆ, ನೀತಿಪ್ರಿಯರು, ಪರಿಸ್ಥಿತಿಗಳು ಇದಕ್ಕಿಂತಲೂ ಹೆಚ್ಚು ಕೆಟ್ಟುಹೋದಾವೆ ಎಂದು ಪ್ರಶ್ನಿಸುವಂತಾಗಿದೆ. ಆದರೂ ನಮ್ಮ ತಲೆಮೊರೆಯಲ್ಲಿ ದುಷ್ಟತ್ವದ ವಿಪರೀತ ಬೆಳವಣಿಗೆಯನ್ನು ಬೈಬಲು ಮುಂತಿಳಿಸಿತು. ಇದು, ನಾವು “ಕಡೇ ದಿವಸಗಳಲ್ಲಿ” ಇದ್ದೇವೆಂಬುದಕ್ಕೆ ಇನ್ನೂ ಹೆಚ್ಚಿನ ರುಜುವಾತನ್ನು ಒದಗಿಸುತ್ತದೆ.—2 ತಿಮೊಥಿ 3:1-5; ಮತ್ತಾಯ 24:34.
8. ಪಾಪದ ಪ್ರಜ್ಞೆಯ ಕುರಿತು ಕೆಲವರು ಏನಂದಿದ್ದಾರೆ?
8 ಇಂದು, ಪಾಪದ ಸಾಮಾನ್ಯ ಜ್ಞಾನ ಅಧಿಕಾಂಶ ಜನರ ಮನಸ್ಸಿನಲ್ಲಿ ನಿಸ್ಸತ್ವವುಳ್ಳದ್ದಾಗಿದೆ. ನಾಲ್ವತ್ತಕ್ಕೂ ಹೆಚ್ಚು ವರುಷಗಳ ತಗ್ಗಿಗೆ XII ನೆಯ ಪೋಪ್ ಪಾಯಸರು ಗಮನಿಸಿದ್ದು: “ಈ ಶತಕದ ಪಾಪವು ಪಾಪಪ್ರಜ್ಞೆಯ ನಷ್ಟವೆ.” ಈ ಸಂತತಿ ಪಾಪ ಮತ್ತು ದೋಷವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತದೆ. ವಾಟೆವರ್ ಬಿಕೇಮ್ ಆಫ್ ಸಿನ್ ಎಂಬ ಪುಸ್ತಕದಲ್ಲಿ ಡಾ. ಕಾರ್ಲ್ ಮೆನಿಂಜರ್ ಹೇಳಿದ್ದು: “ ‘ಪಾಪ’ವೆಂಬ ಪದವೇ—ಪದ ಮತ್ತು ಅದರ ಅಭಿಪ್ರಾಯ—ಹೆಚ್ಚುಕಡಮೆ ಕಾಣದೆ ಹೋಗಿದೆ. ಏಕೆ? ಈಗ ಯಾರೂ ಪಾಪ ಮಾಡುವುದಿಲ್ಲವೆ?” ಅನೇಕರು ತಪ್ಪು ಮತ್ತು ಸರಿಗಳನ್ನು ವಿವೇಚಿಸಿ ತಿಳಿಯುವ ಸಾಮರ್ಥ್ಯನ್ನು ಕಳೆದುಕೊಂಡಿದ್ದಾರೆ. ಆದರೆ ಇದರಿಂದ ನಮಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ “ಅಂತ್ಯಕಾಲದಲ್ಲಿ” ‘ತನ್ನ ಸಾನ್ನಿಧ್ಯದ ಸೂಚನೆ’ಯನ್ನು ಚರ್ಚಿಸಿದಾಗ ಯೇಸು ಈ ವಿದ್ಯಮಾನಗಳನ್ನು ಮುಂತಿಳಿಸಿದನು.—ಮತ್ತಾಯ 24:3; ದಾನಿಯೇಲ 12:4.
ನೋಹನ ದಿನಗಳಲ್ಲಿದ್ದ ತೀರ್ಪಿನ ಮಾದರಿ
9. ಯೇಸು ನೋಹನ ದಿನಗಳಲ್ಲಿ ಮತ್ತು ತನ್ನ ಸಾನ್ನಿಧ್ಯದ ಸಮಯದಲ್ಲಿ ಸಂಭವಿಸುವ ವಿಷಯಗಳನ್ನು ಹೇಗೆ ಹೋಲಿಸಿದನು?
9 ಯೇಸು ನೋಹನ ದಿನಗಳಲ್ಲಿ ಮತ್ತು 1914ರಿಂದ ಆರಂಭವಾದ ತನ್ನ ರಾಜ್ಯಾಧಿಕಾರದ ಸಾನ್ನಿಧ್ಯವನ್ನು ಪರಸ್ಪರವಾಗಿ ಹೋಲಿಸಿದನು. ಅವನು ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವುದು. ಹೇಗಂದರೆ, ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡು ಹೋಗುವ ತನಕ ಏನೂ ತಿಳಿಯದೆ ಇದರ್ದಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:37-39.
10. ಕ್ರಿಸ್ತನ ಸಾನ್ನಿಧ್ಯದೊಂದಿಗೆ ಜೊತೆಗೊಂಡಿರುವ ಗಮನಾರ್ಹ ಘಟನೆಗಳನ್ನು ಸಾಮಾನ್ಯವಾಗಿ ಜನರು ಹೇಗೆ ಲಕ್ಷ್ಯಕ್ಕೆ ತಕ್ಕೊಳ್ಳುವುದಿಲ್ಲ?
10 ಹೌದು, ನೋಹನ ದಿನಗಳಂತೆಯೆ ಇಂದೂ ಜನರು ಅಲಕ್ಷ್ಯ ಮಾಡುತ್ತಾರೆ. ದೈನಂದಿನ ಜೀವಿತ ಮತ್ತು ಸ್ವಾರ್ಥಪರ ಹವ್ಯಾಸಗಳಲ್ಲಿ ತೀರಾ ಕಾರ್ಯಮಗ್ನರಾಗಿರುವ ಅವರು ಇಂದಿನ ಪರಿಸ್ಥಿತಿಗಳು ಗತ ಪರಿಸ್ಥಿತಿಗಳಿಗಿಂತ ತೀರಾ ಭಿನ್ನವಾಗಿವೆಯೆಂದೂ ಇವು ಯೇಸು ಅಂತ್ಯಕಾಲವನ್ನು ಸೂಚಿಸಿ ಹೇಳಿದುದನ್ನು ತೀರಾ ಹೋಲುತ್ತವೆಂದೂ ಗುರುತಿಸಲು ನಿರಾಕರಿಸುತ್ತಾರೆ. ಅನೇಕ ವರುಷಗಳಿಂದ ಯೆಹೋವನ ಸಾಕ್ಷಿಗಳು ಈ ಆಧುನಿಕ ಸಂತತಿಗೆ, ಮೆಸ್ಸೀಯ ರಾಜನಾದ ಯೇಸುವಿನ ಸಾನ್ನಿಧ್ಯವು ಸ್ವರ್ಗದಲ್ಲಿ 1914ರಿಂದ ಆರಂಭವಾಯಿತೆಂದೂ ಇದು, “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಗೆ ಸಮಾಂತರವಾಗಿದೆಯೆಂದೂ ಹೇಳುತ್ತಿದ್ದಾರೆ. (ಮತ್ತಾಯ 24:3) ಹೆಚ್ಚಿನವರು ರಾಜ್ಯಸಂದೇಶವನ್ನು ಕುಚೋದ್ಯ ಮಾಡುತ್ತಾರೆ. ಆದರೆ ಇದನ್ನು ಸಹ ಅಪೊಸ್ತಲ ಪೇತ್ರನು ಹೀಗೆ ಬರೆದು ಮುಂತಿಳಿಸಿದನು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಚಾರವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆ ಹೊಂದಿದ ದಿನ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು.”—2 ಪೇತ್ರ 3:3,4.
11. ಮಹಾ ಸಂಕಟ ಬರುವಾಗ ಇಂದಿನ ತಲೆಮೊರೆ ನೆವವಿಲ್ಲದ್ದಾಗಿರುವುದೇಕೆ?
11 ಆದರೂ ಮಹಾ ಸಂಕಟವು ಬರುವಾಗ ಇಂದಿನ ಸಂತತಿಗೆ ಯಾವ ನೆವವೂ ಇರದು. ಏಕೆ? ಏಕೆಂದರೆ, ದೇವರು ನಮ್ಮ ದಿನಗಳಲ್ಲಿ ಮಾಡಲಿರುವ ವಿಷಯಕ್ಕೆ ನಮೂನೆಯಾದ ಪುರಾತನ ದೈವಿಕ ತೀರ್ಪಿನ ಬೈಬಲ್ ವೃತ್ತಾಂತಗಳಿವೆ. (ಯೂದ 5-7) ನಮ್ಮ ಕಣ್ಣುಗಳ ಎದುರಿಗೆ ನೆರವೇರುತ್ತಿರುವ ಬೈಬಲ್ ಪ್ರವಾದನೆ ನಾವು ಸಮಯದೋಟದಲ್ಲಿ ಎಲ್ಲಿದ್ದೇವೆಂದು ನಿರ್ಣಯಾತ್ಮಕವಾಗಿ ತೋರಿಸುತ್ತದೆ. ಈ ಸಂತತಿಯ ಮುಂದೆ ಯೆಹೋವನ ಸಾಕ್ಷಿಗಳ ಸಾರುವ ಚಟುವಟಿಕೆಯೂ ನೋಹನಂತೆ ಸಮಗ್ರತೆ ಕಾಪಾಡಿರುವ ಅವರ ದಾಖಲೆಯೂ ಇವೆ.
12. ನೋಹನ ದಿನಗಳ ಜಗತ್ತಿನ ನಾಶನ ಮತ್ತು “ಈಗಿರುವ ಭೂಮ್ಯಾಕಾಶಗಳ” ಮೇಲೆ ಬರುವ ನಾಶನವನ್ನು ಸಾರಾಂಶವಾಗಿ ಪೇತ್ರನು ಹೇಗೆ ಹೋಲಿಸುತ್ತಾನೆ?
12 ಈ ನಿಜತ್ವಗಳನ್ನು ಅಲಕ್ಷ್ಯ ಮಾಡುವವರಿಗೆ ಏನಾಗುತ್ತದೆಂದು ಪೇತ್ರನು ವಿವರಿಸುತ್ತಾನೆ. ಯೇಸುವಿನಂತೆಯೆ, ಅಪೊಸ್ತಲನೂ ನೋಹನ ದಿನಗಳಲ್ಲಿ ಸಂಭವಿಸಿದ್ದನ್ನು ಸೂಚಿಸಿ ಹೇಳುವುದು: “ಹೀಗೆ ಮಾಡುವವರು ಒಂದು ಸಂಗತಿಯನ್ನು ತಿಳಿದರೂ ಬೇಕೆಂದು ಮರೆತು ಬಿಡುತ್ತಾರೆ. ಅದೇನಂದರೆ— ಪೂರ್ವಕಾಲದಲ್ಲಿದ್ದ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನಿಂದ ಉಂಟಾಗಿ ನೀರಿನಿಂದ ಆಧಾರಗೊಂಡಿರುವಲ್ಲಿ ಆ ನೀರುಗಳಿಂದಲೇ ಆ ಕಾಲದಲ್ಲಿದ್ದ ಲೋಕವು ಜಲಪ್ರಲಯದಿಂದ ನಾಶವಾಯಿತು. ಆದರೆ ಈಗಿರುವ ಭೂಮ್ಯಾಕಾಶಗಳು ಅದೇ ಬಲದಿಂದ ಬೆಂಕಿಯ ಮೂಲಕ ನಾಶವಾಗುವದಕ್ಕೆ ಇಡಲ್ಪಟ್ಟಿವೆ. ಮತ್ತು ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ ಆ ಬೆಂಕಿ ಸಿದ್ಧವಾಗಿದೆ.”—2 ಪೇತ್ರ 3:5-9.
13. ಮುಂದೆ ಬರಲಿರುವ ಪ್ರಧಾನ ವಿಷಯಗಳ ವೀಕ್ಷಣದಲ್ಲಿ, ಪೇತ್ರನ ಯಾವ ಬುದ್ಧಿವಾದವನ್ನು ಅನುಸರಿಸಬೇಕು?
13 ದೇವರ ಈ ಖಾತ್ರಿಯಾದ ತೀರ್ಪು ನಮ್ಮನ್ನು ದಿಟ್ಟಿಸು ನೋಡುತ್ತಿರುವಾಗ ನಾವು ಕುಚೋದ್ಯಗಾರರಿಂದ ವಂಚಿಸಲ್ಪಡದೆ ಯಾ ಭಯಕ್ಕೊಳಗಾಗದೆ ಇರೋಣ. ನಾವು ಅವರ ಅಂತ್ಯವಿಧಿಯಲ್ಲಿ ಪಾಲಿಗರಾಗಬೇಕೆಂದಿಲ್ಲ. ಪೇತ್ರನು ಬುದ್ಧಿಹೇಳುವುದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ. ಆ ದಿನದಲ್ಲಿ ಆಕಾಶಮಂಡಲವು ಬೆಂಕಿಹತ್ತಿ ಲಯವಾಗಿ ಹೋಗುವದು. ಸೂರ್ಯ ಚಂದ್ರ ನಕ್ಷತ್ರಗಳು ಉರಿದು ಕರಗಿಹೋಗುವವು. ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:11-13.
ಪಾರಾಗಲಿಕ್ಕಾಗಿ ನೋಹನ ನಂಬಿಕೆಯನ್ನು ಅನುಸರಿಸಿರಿ
14. ನಮ್ಮನ್ನು ವಿಶೇಷ್ಲಿಸಿಕೊಳ್ಳಲು ಯಾವ ಪ್ರಶ್ನೆಗಳು ಸಹಾಯ ಮಾಡಬಲ್ಲವು?
14 ಇಂದು ನಾವು ಪಾರಾಗುವ ಅಭ್ಯರ್ಥಿಗಳಾಗಿ ಪರಿಣಮಿಸಿ ಹಾಗೆ ಉಳಿಯುವುದರಲ್ಲಿ ನೋಹನು ಮತ್ತು ಅವನ ಪರಿವಾರ ಎದುರಿಸಿದ ಪಂಥಾಹ್ವಾನಗಳಿಗೆ ಸದೃಶವಾದುದನ್ನು ಎದುರಿಸುತ್ತೇವೆ. ನೋಹನಂತೆ, ಯೆಹೋವನ ಸಾಕ್ಷಿಗಳು ಸತ್ಕಾರ್ಯ ಬೆಂಬಲಿತ ನಂಬಿಕೆಯನ್ನು ತೋರಿಸಿ ಜಗತ್ತನ್ನು ದಂಡನೆಗೆ ಗುರಿಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಪ್ರತಿಯೊಬ್ಬನು ಹೀಗೆ ಪ್ರಶ್ನಿಸಿಕೊಳ್ಳಬಹುದು: “ನಾನು ಸ್ವತಃ ಹೇಗಿದ್ದೇನೆ? ನಾಳೆ ಮಹಾ ಸಂಕಟ ಬರುವಂತಿದ್ದರೆ ನಾನು ಪಾರಾಗಲು ಯೋಗ್ಯನೆಂದು ದೇವರು ತೀರ್ಪು ಕೊಟ್ಟಾನೆ? “ತನ್ನ ಕಾಲದವರಲ್ಲಿ ತಪ್ಪಿಲ್ಲದವನು” ಆಗಿದ್ದ ನೋಹನಂತೆ ಜಗತ್ತಿನಿಂದ ಪ್ರತ್ಯೇಕವಾಗಿರಲು ನನಗೆ ಧೈರ್ಯವಿದೆಯೆ? ಅಥವಾ, ನಾನು ವರ್ತಿಸುವ, ಮಾತಾಡುವ, ವಸ್ತ್ರಧಾರಣೆ ಮಾಡುವ ರೀತಿಯನ್ನು ನೋಡುವಾಗ ನನಗೂ ಲೌಕಿಕನಿಗೂ ವ್ಯತ್ಯಾಸವನ್ನು ಕಂಡುಹಿಡಿಯುವುದು ಕೆಲವೊಮ್ಮೆ ಕಷ್ಟವಾಗಬಹುದೆ? (ಆದಿಕಾಂಡ 6:9) ಯೇಸು ತನ್ನ ಶಿಷ್ಯರ ಕುರಿತು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ.”—ಯೋಹಾನ 17:16; 1 ಯೋಹಾನ 4:4-6 ಹೋಲಿಸಿ.
15. (ಎ) 1 ಪೇತ್ರ 4:3, 4ಕ್ಕನುಸಾರ, ನಮ್ಮ ಹಿಂದಿನ ಐಹಿಕ ನಡತೆ ಮತ್ತು ಆಲೋಚನೆಗಳನ್ನು ನಾವು ಹೇಗೆ ವೀಕ್ಷಿಸಬೇಕು? (ಬಿ) ಮಾಜಿ ಐಹಿಕ ಮಿತ್ರರು ನಮ್ಮನ್ನು ಟೀಕಿಸುವಲ್ಲಿ ನಾವೇನು ಮಾಡಬೇಕು?
15 ಪೇತ್ರನು ಸಲಹೆ ನೀಡುವುದು: “ನೀವು ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನ ಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಈ ಮೊದಲಾದವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವದರಲ್ಲಿಯೂ ಕಳೆದುಹೋದ ಕಾಲವೇ ಸಾಕು. ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.” (1 ಪೇತ್ರ 4:3, 4) ನಿಮ್ಮ ಮಾಜಿ ಐಹಿಕ ಮಿತ್ರರು, ನೀವು ಈಗ ದೇವರೊಂದಿಗೆ ನಡೆಯುವ ಕಾರಣ ಮತ್ತು ಅವರೊಂದಿಗೆ ಓಡದೆ ಇರುವ ಕಾರಣ ನಿಮ್ಮನ್ನು ದೂಷಿಸಿಯಾರು. ಆದರೆ ನೋಹನಂತೆ ನೀವು, ನಂಬಿಕೆ ಮತ್ತು ಅಭಿಮಾನಮಿತಿಯಿಂದ ಮಾಡುವ ನಿಮ್ಮ ಸತ್ಕಾರ್ಯಗಳ ಮೂಲಕ ಅವರನ್ನು ದಂಡನೆಗೆ ಪಾತ್ರರಾಗಿಸಬಲ್ಲಿರಿ.—ಮೀಕ 6:8.
16. ನೋಹನನ್ನು ದೇವರು ಹೇಗೆ ವೀಕ್ಷಿಸಿದನು, ಮತ್ತು, ಆಲೋಚನೆ ಮತ್ತು ನಡತೆಗಳನ್ನು ಪರೀಕ್ಷಿಸಲು ಯಾವ ಪ್ರಶ್ನೆಗಳು ನಮಗೆ ಸಹಾಯ ಮಾಡಬಹುದು?
16 ದೇವರು ನೋಹನನ್ನು ನೀತಿವಂತನೆಂದು ನಿರ್ಣಯಿಸಿದನು. ಆ ನಂಬಿಗಸ್ತ ಮೂಲಪಿತನಿಗೆ “ಯೆಹೋವನ ದಯ ದೊರಕಿತು.” (ಆದಿಕಾಂಡ 6:8) ದೇವರ ಮಟ್ಟಾನುಸಾರ ನೀವು ನಿಮ್ಮ ಆಲೋಚನೆ ಮತ್ತು ನಡತೆಯನ್ನು ಪರೀಕ್ಷಿಸುವಲ್ಲಿ, ನೀವು ಮಾಡುತ್ತಿರುವುದನ್ನು, ನೀವು ಹೋಗುವ ಸಕಲ ಸ್ಥಳಗಳನ್ನು ಆತನು ಒಪ್ಪುತ್ತಾನೆಂದು ನೆನಸುತ್ತೀರೊ? ನೀವು ಕೆಲವು ಸಲ ಈಗ ಹೆಚ್ಚು ಚಾಲ್ತಿಯಲ್ಲಿರುವ ಕೀಳು ತರಗತಿಯ ಮನೋರಂಜನೆಯಲ್ಲಿ ಭಾಗವಹಿಸುತ್ತೀರೊ? ನಾವು ಶುದ್ಧವಾದ, ಹಿತಕರವಾದ ಮತ್ತು ಭಕ್ತಿವೃದ್ಧಿ ಮಾಡುವ ವಿಷಯಗಳನ್ನು ಆಲೋಚಿಸಬೇಕೆಂದು ದೇವರ ವಾಕ್ಯ ಹೇಳುತ್ತದೆ. (ಫಿಲಿಪ್ಪಿ 4:8) ನೀವು, ‘ಸರಿ ತಪ್ಪುಗಳೆರಡನ್ನು ವಿಂಗಡಿಸಲಿಕ್ಕಾಗಿ ಗ್ರಹಣಶಕ್ತಿಯನ್ನು ತರಬೇತುಗೊಳಿಸುವಂತೆ’ ದೇವರ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸ ಮಾಡುತ್ತೀರೊ? (ಇಬ್ರಿಯ 5:14) ಕೆಟ್ಟ ಒಡನಾಡಿಗಳನ್ನು ಬದಿಗಿರಿಸಿ ಕ್ರೈಸ್ತ ಕೂಟಗಳಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಯೆಹೋವನ ಜೊತೆ ಆರಾಧಕರೊಂದಿಗೆ ಕೂಡಿ ಬರುವುದನ್ನು ಅಮೂಲ್ಯವೆಂದೆಣಿಸುತ್ತೀರೊ?—1 ಕೊರಿಂಥ 15:33; ಇಬ್ರಿಯ 10:24, 25; ಯಾಕೋಬ 4:4.
17. ಯೆಹೋವನ ಸಾಕ್ಷಿಗಳಾಗಿರುವ ನಾವು ನೋಹನಂತೆ ಹೇಗೆ ಇರಬಹುದು?
17 ತೇಲುಪೆಟ್ಟಿಗೆ ಕಟ್ಟಿ ಮುಗಿಸಿದ್ದನ್ನು ವರದಿ ಮಾಡಿದ ಮೇಲೆ ಶಾಸ್ತ್ರವು ಹೇಳುವುದು: “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.” (ಆದಿಕಾಂಡ 6:22) ಆ ದೇವಭಕ್ತನು ಯೆಹೋವನ ಸಾಕ್ಷಿಯಾಗಿ ಸಾರುವುದರಲ್ಲಿಯೂ ಕಾರ್ಯತತ್ಪರತೆ ತೋರಿಸಿದನು. ನೋಹನಂತೆ ನೀವೂ ನೀತಿಯ ನಿಯತಕಾಲಿಕ ಸಾರುವವರಾಗಿ ಯೋಗ್ಯ ವಿಷಯಗಳ ನಿಷ್ಠೆಯ ಪಕ್ಷವಾದಿಗಳಾಗಿರಬಲ್ಲಿರಿ. ಕೇವಲ ಕೆಲವರೇ ಆಲಿಸಿದರೂ, ಈ ದುಷ್ಟಲೋಕದ ಅಂತ್ಯದ ಎಚ್ಚರಿಕೆಯನ್ನು ಪಟ್ಟುಹಿಡಿದು ಕೊಡಿರಿ. ಅಂತ್ಯ ಬರುವ ಮೊದಲು ಶಿಷ್ಯರಾಗಿ ಮಾಡುವ ಕೆಲಸ ಮುಗಿಯುವಂತೆ ನಿಮ್ಮ ಜೊತೆಶ್ರಮಿಕರೊಂದಿಗೆ ಏಕತೆಯಿಂದ ಕೆಲಸ ಮಾಡಿರಿ.—ಮತ್ತಾಯ 28:19, 20.
18. ಯಾರು ಮಹಾ ಸಂಕಟವನ್ನು ಪಾರಾಗಬೇಕೆಂದು ಯೆಹೋವನು ಯಾವ ಆಧಾರದ ಮೇರೆಗೆ ನಿರ್ಣಯಿಸುತ್ತಾನೆ?
18 ನೋಹನ ದಿನದಲ್ಲಿ ತಾನಿಟ್ಟಿದ್ದ ನೀತಿ ಮತ್ತು ನ್ಯಾಯದ ಒಂದೇ ರೀತಿಯ ಮಾನದಂಡವನ್ನು ಉಪಯೋಗಿಸುತ್ತಾ ಯೆಹೋವನು, ಮಹಾ ಸಂಕಟದಲ್ಲಿ ಯಾರು ಪಾರಾಗಬೇಕು, ಯಾರು ನಾಶವಾಗಬೇಕೆಂಬುದನ್ನು ನಿರ್ಣಯಿಸುತ್ತಿದ್ದಾನೆ. ಈಗ ನಡೆಯುತ್ತಿರುವ ವಿಂಗಡಿಸುವ ಕೆಲಸವನ್ನು, ಕುರುಬನು ಆಡುಗಳಿಂದ ಕುರಿಗಳನ್ನು ಪ್ರತ್ಯೇಕಿಸುವುದಕ್ಕೆ ಯೇಸು ಹೋಲಿಸಿದನು. (ಮತ್ತಾಯ 25:31-46) ತಮ್ಮ ಜೀವಿತಗಳನ್ನು ಸ್ವಾರ್ಥಾಭಿಲಾಷೆ ಮತ್ತು ಸ್ವಾರ್ಥದ ಹವ್ಯಾಸಗಳಲ್ಲಿ ಕೇಂದ್ರವಾಗಿರಿಸುವವರು ಈ ಹಳೆಯ ಲೋಕದ ನಾಶವನ್ನು ಬಯಸದ ಕಾರಣ ಉಳಿಯರು. ಆದರೆ, ಈ ಜಗತ್ತಿನ ಹೇಸಿಗೆಯಲ್ಲಿ ಸಿಕ್ಕಿಕೊಳ್ಳಬಯಸದೆ ದೇವರಲ್ಲಿ ಬಲವಾದ ವಿಶ್ವಾಸವನ್ನಿಟ್ಟು ರಾಜ್ಯ ಸಂದೇಶವನ್ನು ಸಾರುತ್ತಾ ಯೆಹೋವನ ಬರಲಿರುವ ತೀರ್ಪಿನ ಎಚ್ಚರಿಕೆಯನ್ನು ಕೊಡುತ್ತಾ ಇರುವವರು ಪಾರಾಗಿ ದೇವರ ಅನುಗ್ರಹಪಾತ್ರರಾಗುವರು. ಯೇಸು ಹೇಳಿದ್ದು: “ಆವಾಗ ಇಬ್ಬರು ಹೊಲದಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಒಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಬೀಸುವ ಕಲ್ಲಿನ ಮುಂದೆ ಕೂತು ಬೀಸುತ್ತಿರುವರು. ಒಬ್ಬಳು ತೆಗೆದುಕೊಳ್ಳಲ್ಪಡುವಳು, ಒಬ್ಬಳು ಬಿಡಲ್ಪಡುವಳು.”—ಮತ್ತಾಯ 24:40, 41; 2 ಥೆಸಲೊನೀಕ 1:6-9; ಪ್ರಕಟನೆ 22:12-15.
ನೋಹನೊಂದಿಗೆ ಆಶೀರ್ವಾದಕ್ಕೆ ಬಾಧ್ಯರಾಗಿರಿ
19. ಕೊನೆಯ ದಿವಸಗಳಲ್ಲಿ ಯಾವ ಒಟ್ಟುಗೂಡಿಸುವಿಕೆಯನ್ನು ಯೆಶಾಯ ಮತ್ತು ಮೀಕ ಮುಂತಿಳಿಸಿದರು?
19 ದೇವರ ಪ್ರವಾದಿಗಳಾದ ಯೆಶಾಯ ಮತ್ತು ಮೀಕ ಇವರಿಬ್ಬರೂ ಸಮಾಂತರ ಭವಿಷ್ಯನುಡಿಗಳಲ್ಲಿ ಕೊನೆಯ ದಿನಗಳ ಘಟನೆಗಳನ್ನು ವರ್ಣಿಸಿದರು. ನಾವು ಇಂದು ಯಾವುದು ನೆರವೇರುವುದನ್ನು ನೋಡುತ್ತೇವೊ ಅದನ್ನು, ಅಂದರೆ, ನೀತಿಹೃದಯಿಗಳಾದ ಜನರು ಹಳೆಯ ಲೋಕದಿಂದ ಪ್ರವಾಹದಂತೆ ಬಂದು ಸತ್ಯಾರಾಧನೆಯ ಸಾಂಕೇತಿಕ ಬೆಟ್ಟಕ್ಕೆ ಏರಿಹೋಗುವುದನ್ನು ಅವರು ಮುನ್ನೋಡಿದರು. ಅವರು ಇತರರಿಗೆ ಆಮಂತ್ರಣ ಕೊಡುವುದು: “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು; ನಾವು ಆತನ ದಾರಿಗಳಲ್ಲಿ ನಡೆಯುವೆವು.” (ಯೆಶಾಯ 2:2,3; ಮೀಕ 4:1, 2) ಈ ಸಂತುಷ್ಟ ಗುಂಪಿನೊಂದಿಗೆ ನೀವು ನಡೆದಾಡುತ್ತೀರೊ?
20. ತಮ್ಮ ನಂಬಿಕೆಯ ಮೂಲಕ ಲೋಕವನ್ನು ದಂಡನೆಗೆ ಗುರಿ ಮಾಡುವವರು ಯಾವ ಆಶೀರ್ವಾದಗಳನ್ನು ಅನುಭವಿಸುವರು?
20 ಇಂದು ಜಗತ್ತನ್ನು ತಮ್ಮ ನಂಬಿಕೆಯ ಮೂಲಕ ದಂಡನೆಗೆ ಗುರಿ ಮಾಡುವವರು ಅನುಭವಿಸುವ ಆಶೀರ್ವಾದಗಳನ್ನೂ ಯೆಶಾಯ ಮತ್ತು ಮೀಕ ಸೂಚಿಸಿದರು. ಇವರ ಮಧ್ಯೆ ನಿಜ ಶಾಂತಿ ಮತ್ತು ನ್ಯಾಯ ನೆಲಸುವುದು. ಮತ್ತು ಅವರು ಯುದ್ಧವನ್ನು ಇನ್ನು ಮುಂದೆ ಕಲಿಯರು. ಅವರಿಗೆ ಯೆಹೋವನಿಂದ ಬಾಧ್ಯತೆಯ ನಿಜ ನಿರೀಕ್ಷೆ ಇರುವುದು ಮತ್ತು “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು.” ಆದರೆ ಪ್ರತಿಯೊಬ್ಬನು ಸ್ಥಿರ ನಿರ್ಣಯವನ್ನು ಮಾಡಬೇಕು. ಏಕೆಂದರೆ, ಎರಡು ಮಾರ್ಗಗಳ ಸಾಧ್ಯತೆಯನ್ನು ತೋರಿಸುತ್ತಾ ಮೀಕನು ಹೇಳುವುದು: “ಅನ್ಯ ಜನಾಂಗಗಳು ತಮ್ಮ ತಮ್ಮ ದೇವರ ಹೆಸರಿನಲ್ಲಿ ನಡೆಯುತ್ತವೆ, ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”—ಮೀಕ 4:3-5; ಯೆಶಾಯ 2:4.
21. ಅನಂತ ಜೀವನದ ಮಹಾಶೀರ್ವಾದಗಳಲ್ಲಿ ನೀವು ಹೇಗೆ ಪಾಲಿಗರಾಗಬಲ್ಲಿರಿ?
21 ಮಹಾ ಸಂಕಟವನ್ನು ಪಾರಾಗಲು ಏನು ಅವಶ್ಯವೆಂದು ಶಾಸ್ತ್ರವು ಸ್ಪಷ್ಟವಾಗಿಗಿ ತೋರಿಸುತ್ತದೆ: ಬಲವಾದ ನಂಬಿಕೆ. ನೋಹನಲ್ಲಿ ಇಂಥ ನಂಬಿಕೆಯಿತ್ತು, ಆದರೆ ನಿಮ್ಮಲ್ಲಿ ಅದು ಇದೆಯೆ? ಇರುವಲ್ಲಿ, ಅವನು “ನಂಬಿಕೆಯ ಫಲವಾದ ನೀತಿಗೆ ಬಾಧ್ಯ”ನಾದಂತೆ ನೀವೂ ಆಗುವಿರಿ. (ಇಬ್ರಿಯ 11:7) ನೋಹನು ತನ್ನ ಸಂತತಿಯ ಮೇಲೆ ಬಂದ ದೇವಾಜ್ಞಾಪಿತ ನಾಶನವನ್ನು ಪಾರಾದನು. ಆವನು ಜಲಪ್ರಳಯದ ಬಳಿಕ 350 ವರ್ಷಕಾಲ ಬದುಕಿದ್ದು ಮಾತ್ರವಲ್ಲ, ಭೂಮಿಯಲ್ಲಿ ಸದಾಕಾಲ ಬದುಕುವ ಪ್ರತೀಕ್ಷೆಯ ಪುನರುತ್ಥಾನವೂ ಅವನಿಗಾಗುವುದು. ಎಂಥ ಮಹಾಶೀರ್ವಾದ! (ಇಬ್ರಿಯ 11:13-16) ನೋಹ, ಅವನ ಕುಟುಂಬ ಮತ್ತು ಲಕ್ಷಗಟ್ಟಲೆ ಇತರರೊಂದಿಗೆ ನೀವು ಆ ಆಶೀರ್ವಾದದಲ್ಲಿ ಭಾಗಿಯಾಗಬಲ್ಲಿರಿ. ಹೇಗೆ? ಅಂತ್ಯದ ತನಕ ತಾಳುತ್ತಾ ನಿಮ್ಮ ನಂಬಿಕೆಯ ಮೂಲಕ ಈ ಜಗತ್ತನ್ನು ದಂಡನೆಗೆ ಗುರಿ ಮಾಡಿಯೆ. (w89 10/1)
ಜ್ಞಾಪಕವಿದೆಯೆ?
▫ ನೋಹನ ಜೀವನದ ಅಧ್ಯಯನ ಕ್ರೈಸ್ತರಿಗೆ ಪ್ರಾಮುಖ್ಯವೇಕೆ?
▫ ಈ ತಲೆಮೊರೆಯ ಜನರು ನಾಶಕ್ಕೆ ನಡೆಸಲ್ಪಡುವಾಗ ಯಾವುದರ ಲಕ್ಷ್ಯ ಮಾಡುವುದಿಲ್ಲ?
▫ ನೋಹನಂತೆ, ನಾವು ಹೇಗೆ ಜಗತ್ತನ್ನು ದಂಡನೆಗೆ ಗುರಿ ಮಾಡಬಲ್ಲೆವು?
▫ ನೀತಿಯನ್ನು ಸಾರುವವನಾದ ನೋಹನಂತೆ ನಾವು ಹೇಗೆ ಇರಬಲ್ಲೆವು?