ರಕ್ತ–ಜೀವಾಧಾರ
ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ರಕ್ತ ನಿಮ್ಮ ಜೀವಕ್ಕೆ ಸಂಬಂಧಿತವಾಗಿರುವುದರಿಂದ ಇದರಲ್ಲಿ ನಿಮಗೆ ಆಸಕ್ತಿಯಿದೆಯೆಂಬುದು ನಿಸ್ಸಂಶಯ. ರಕ್ತವು ಆಮ್ಲ ಜನಕವನ್ನು ದೇಹ ವ್ಯಾಪಕವಾಗಿ ಸಾಗಿಸಿ, ಅಲ್ಲಿಂದ ಅಂಗಾರಾಮ್ಲವನ್ನು ತೊಲಗಿಸಿ, ಶಾಖದ ಬದಲಾವಣೆಗೆ ನೀವು ಹೊಂದಿಕೊಳ್ಳುವಂತೆ ಸಹಾಯ ಮಾಡಿ, ಮತ್ತು ನೀವು ರೋಗದ ವಿರುದ್ಧ ಹೋರಾಡಲು ನೆರವಾಗುತ್ತದೆ.
1628 ರಲ್ಲಿ, ವಿಲ್ಯಂ ಹಾರ್ವಿ ರಕ್ತ ಪರಿಚಲನಾ ವ್ಯೂಹದ ನಕ್ಷೆ ಬರೆಯುವುದಕ್ಕೆ ಎಷ್ಟೋ ಮೊದಲು ಜೀವಕ್ಕೂ ರಕ್ತಕ್ಕೂ ಇರುವ ಸೇರಿಕೆ ಮಾಡಲ್ಪಟ್ಟಿತ್ತು. ಪ್ರಮುಖ ಧರ್ಮಗಳ ಮೂಲನೀತಿ, ಜೀವ ಮತ್ತು ರಕ್ತದ ಕುರಿತು ಮಾತಾಡುವ ಜೀವದಾತನೊಬ್ಬನನ್ನು ಸೂಚಿಸುತ್ತವೆ. ಯೆಹೂದಿ—ಕ್ರೈಸ್ತ ನ್ಯಾಯವಾದಿಯೊಬ್ಬನು ಆತನ ಕುರಿತು ಹೇಳಿದ್ದು: “ಆತನು ತಾನೇ ಸಕಲ ವ್ಯಕ್ತಿಗಳಿಗೆ ಜೀವ ಶ್ವಾಸ ಮತ್ತು ಸಮಸ್ತ ವಿಷಯಗಳನ್ನು ಕೊಡುತ್ತಾನೆ. ಏಕಂದರೆ, ಆತನಿಂದಲೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಇರುತ್ತೇವೆ.”a
ಇಂಥ ಜೀವದಾತನಲ್ಲಿ ನಂಬಿಕೆಯಿಡುವ ಜನರು, ಆತನ ನಿರ್ದೇಶಗಳು ನಮ್ಮ ಅನಂತ ಹಿತಕ್ಕಾಗಿವೆ ಎಂದು ಭರವಸ ಇಡುತ್ತಾರೆ. ಇಬ್ರಿಯ ಪ್ರವಾದಿಯೊಬ್ಬನು ಆತನನ್ನು, “ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನು” ಎಂದು ವರ್ಣಿಸುತ್ತಾನೆ.
ಯೆಶಾಯ 48:17 ರಲ್ಲಿರುವ ಈ ಆಶ್ವಾಸನೆ, ನಮ್ಮೆಲ್ಲರಿಗೂ ಪ್ರಯೋಜನ ತರಬಲ್ಲ ನೈತಿಕ ಮೌಲ್ಯಗಳಿವೆಯೆಂಬುದಕ್ಕಾಗಿ ಗೌರವಿಸಲ್ಪಟ್ಟಿರುವ ಒಂದು ಗ್ರಂಥದ ಭಾಗವಾಗಿದೆ. ಅದು ಮಾನವ ರಕ್ತದ ಉಪಯೋಗದ ವಿಷಯ ಏನನ್ನುತ್ತದೆ? ರಕ್ತದ ಮೂಲಕ ಜೀವವನ್ನುಳಿಸುವ ವಿಧವನ್ನು ಅದು ತೋರಿಸುತ್ತದೆಯೇ? ವಾಸ್ತವವಾಗಿ, ರಕ್ತವು ಜಟಿಲವಾದ ಜೀವದ್ರವಕ್ಕೂ ಹೆಚ್ಚಿನದೆಂದು ಬೈಬಲು ಸ್ಪಷ್ಟವಾಗಿ ತೋರಿಸುತ್ತದೆ. ಅದು 400ಕ್ಕೂ ಹೆಚ್ಚು ಬಾರಿ ರಕ್ತವನ್ನು ಸೂಚಿಸಿ ಮಾತಾಡುತ್ತದೆ ಮತ್ತು ಇವುಗಳಲ್ಲಿ ಕೆಲವು ಉಲ್ಲೇಖಗಳು ಜೀವರಕ್ಷಣೆಯನ್ನೊಳಗೊಂಡಿವೆ.
ಆದಿಯ ಒಂದು ಹೇಳಿಕೆಯಲ್ಲಿ ಸೃಷ್ಟಿಕರ್ತನು ಪ್ರಕಟಪಡಿಸಿದ್ದು: “ಜೀವಿಸುವ ಮತ್ತು ಚಲಿಸುವ ಪ್ರತಿಯೊಂದೂ ನಿಮಗೆ ಆಹಾರವಾಗಿರುವುದು.. . . ಆದರೆ ಜೀವರಕ್ತ ಇನ್ನೂ ಇರುವ ಮಾಂಸವನ್ನು ನೀವು ತಿನ್ನಕೂಡದು.” ಆತನು ಮುಂದುವರಿಸಿದ್ದು: “ನಿಮ್ಮ ಜೀವರಕ್ತಕ್ಕೆ ನಾನು ನಿಶ್ಚಯವಾಗಿಯೂ ಲೆಕ್ಕವನ್ನು ಕೇಳುವೆನು” ಎಂದು ಹೇಳಿ ಬಳಿಕ ಆತನು ನರಹತ್ಯವನ್ನು ಖಂಡಿಸಿದನು. (ಆದಿಕಾಂಡ 9:3-6, ನ್ಯೂ ಇಂಟರ್ನ್ಯಾಷನಲ್ ವಷನ್) ಆತನು ಇದನ್ನು, ಯಾರನ್ನು ಯೆಹೂದ್ಯರು, ಮುಸ್ಲಿಮರು ಮತ್ತು ಕ್ರೈಸ್ತರು ವಿಶೇಷವಾಗಿ ಗೌರವದಿಂದ ಕಾಣುತ್ತಾರೋ ಆ ಸಾಮಾನ್ಯ ಪೂರ್ವಜನಾದ ನೋಹನಿಗೆ ಹೇಳಿದನು. ಹೀಗೆ, ಸೃಷ್ಟಿಕರ್ತನ ದೃಷ್ಟಿಯಲ್ಲಿ ರಕ್ತ ಜೀವದ ಸ್ಥಾನದಲ್ಲಿದೆ ಎಂದು ಸಕಲ ಮಾನವ ಕುಲಕ್ಕೆ ತಿಳಿಸಲಾಯಿತು. ಇದು ಕೇವಲ ಆಹಾರದ ಕ್ರಮಸೂತ್ರವಾಗಿರಲಿಲ್ಲ. ಇದರಲ್ಲಿ ಒಂದು ನೀತಿಯ ಮೂಲಸೂತ್ರ ಅಡಗಿತ್ತು. ಮಾನವ ನೆತ್ತರಿಗೆ ಮಹಾ ಅರ್ಥಗರ್ಭಿತತೆ ಇದೆ ಮತ್ತು ಅದನ್ನು ದುರುಪಯೋಗಿಸಬಾರದು. ಆ ಬಳಿಕ, ಸೃಷ್ಟಿಕರ್ತನು, ತಾನು ಜೀವರಕ್ತಕ್ಕೆ ಸಂಬಂಧಿಸಿರುವ ನೈತಿಕ ವಿವಾದಾಂಶಗಳನ್ನು ನಾವು ಸುಲಭವಾಗಿ ನೋಡುವಂತೆ ವಿವರಣೆಗಳನ್ನು ಕೂಡಿಸಿದನು.
ಆತನು ಪುರಾತನದ ಇಸ್ರಾಯೇಲಿಗೆ ಧರ್ಮಶಾಸ್ತ್ರವನ್ನು ಕೊಟ್ಟಾಗ ಪುನಃ ರಕ್ತವನ್ನು ಸೂಚಿಸಿ ಮಾತಾಡಿದನು. ಅನೇಕರು ಈ ನ್ಯಾಯಸೂತ್ರಗಳ ವಿವೇಕ ಮತ್ತು ನೀತಿಯನ್ನು ಗೌರವಿಸುತ್ತಾರಾದರೂ ರಕ್ತದ ಕುರಿತು ಅದರಲ್ಲಿರುವ ಘನವಾದ ನಿಯಮಗಳ ಮಾಹಿತಿಯನ್ನು ಕೇವಲ ಕೆಲವರೇ ಬಲ್ಲರು. ಉದಾಹರಣೆಗೆ: “ಇಸ್ರಾಯೇಲ್ ಕುಲದವರಲ್ಲಿ ಯಾವನಾದರೂ ಅಥವಾ ಅವರ ಮಧ್ಯೆ ವಾಸಿಸುವ ವಿದೇಶಿಯರಲ್ಲಿ ಯಾವನಾದರೂ ಯಾವ ರಕ್ತದಲ್ಲಾದರೂ ಪಾಲು ತೆಗೆದು ಕೊಳ್ಳುವಲ್ಲಿ ನಾನು ರಕ್ತದಲ್ಲಿ ಪಾಲು ತೆಗೆದು ಕೊಳ್ಳುವ ಆ ವ್ಯಕ್ತಿಯನ್ನು ನಿರ್ಧಾರಕವಾಗಿ ಎದುರಿಸಿ ಅವನನ್ನು ಅವನ ವಂಶದವರೊಳಗಿಂದ ಕತ್ತರಿಸಿ ಬಿಡುವೆನು. ಏಕಂದರೆ ದೇಹದ ಜೀವ ರಕ್ತದಲ್ಲಿದೆ.” (ಯಾಜಕಕಾಂಡ 17:10, 11, ತನಾಕ್) ಆ ಬಳಿಕ ದೇವರು, ಸತ್ತ ಪ್ರಾಣಿಯ ಸಂಬಂಧದಲ್ಲಿ, ಬೇಟೆಗಾರನು ಏನು ಮಾಡಬೇಕೆಂದು ತಿಳಿಸಿದನು: “ಅವನು ಅದರ ರಕ್ತವನ್ನು ಎರೆದು ಮಣ್ಣಿನಿಂದ ಅದನ್ನು ಮುಚ್ಚಬೇಕು. . . . ನೀವು ಯಾವ ದೇಹದ ರಕ್ತದಲ್ಲೂ ಪಾಲು ತೆಗೆದು ಕೊಳ್ಳಬಾರದು, ಏಕಂದರೆ ಸಕಲ ಪ್ರಾಣಿಗಳ ಜೀವ ಅವುಗಳ ರಕ್ತದಲ್ಲಿದೆ. ಅದರಲ್ಲಿ ಪಾಲಿಗನಾಗುವ ಯಾವನೂ ಕತ್ತರಿಸಲ್ಪಡುವನು.”—ಯಾಜಕಕಾಂಡ 17:13, 14, ತ.
ಯೆಹೂದಿ ನ್ಯಾಯಸೂತ್ರಗಳು ಉತ್ತಮ ಆರೋಗ್ಯವನ್ನು ಬೆಳೆಸಿದವೆಂದು ಈಗ ವಿಜ್ಞಾನಿಗಳಿಗೆ ತಿಳಿದದೆ. ದೃಷ್ಟಾಂತಕ್ಕೆ, ಮಲವನ್ನು ಪಾಳೆಯದ ಹೊರಗೆ ಹಾಕಿ ಮುಚ್ಚಬೇಕೆಂದೂ ಜನರು ಹೆಚ್ಚು ರೋಗಾಪಾಯವಿರುವ ಮಾಂಸವನ್ನು ತಿನ್ನಬಾರದೆಂದೂ ಅದು ಕೇಳಿಕೊಂಡಿತು. (ಯಾಜಕಕಾಂಡ 11:4-8, 13; 17:15; ಧರ್ಮೋಪದೇಶಕಾಂಡ 23:12, 13) ರಕ್ತದ ಕುರಿತಾದ ನಿಯಮದಲ್ಲಿ ಆರೋಗ್ಯವು ಒಳಗೊಂಡಿರುತ್ತಾದರೂ ಅದರಲ್ಲಿ ಇನ್ನೂ ಹೆಚ್ಚು ವಿಷಯ ಅಡಕವಾಗಿತ್ತು. ರಕ್ತಕ್ಕೆ ಒಂದು ಸೂಚಕಾರ್ಥವಿತ್ತು. ಸೃಷ್ಟಿಕರ್ತನು ಒದಗಿಸಿದ ಜೀವದ ಅರ್ಥ ಅದಕ್ಕಿತ್ತು. ರಕ್ತವನ್ನು ವಿಶೇಷ ರೀತಿಯಲ್ಲಿ ಪರಿಗಣಿಸುವಲ್ಲಿ ಜೀವಕ್ಕೆ ತಾವು ಆತನಿಗೆ ಅಧೀನರು ಎಂದು ಜನರು ತೋರಿಸಿದರು. ಹೌದು, ರಕ್ತವನ್ನು ಅವರು ಸೇವಿಸದೆ ಇದುದ್ದಕ್ಕೆ ಮುಖ್ಯ ಕಾರಣವು, ಅದು ಅನಾರೋಗ್ಯಕರವಾಗಿದ್ದುದರಿಂದಲ್ಲ, ದೇವರಿಗೆ ಅದು ವಿಶೇಷ ಅರ್ಥವುಳ್ಳದ್ದಾಗಿದ್ದುದರಿಂದಲೇ.
ಧರ್ಮಶಾಸ್ತ್ರವು, ಜೀವವನ್ನು ಪೋಷಿಸುವುದಕ್ಕಾಗಿ ರಕ್ತವನ್ನು ತೆಗೆದು ಕೊಳ್ಳುವುದರ ಮೇಲೆ ಸೃಷ್ಟಿಕರ್ತನು ಹಾಕಿದ ನಿಷೇಧವನ್ನು ಪದೇ ಪದೇ ತಿಳಿಸಿತು. “ನೀವು ರಕ್ತವನ್ನು ತಿನ್ನ ಬಾರದು. ಅದನ್ನು ನೀರಿನಂತೆ ನೆಲದ ಮೇಲೆ ಎರೆಯಬೇಕು. ನಿಮಗೆ ಮತ್ತು ನಿಮ್ಮ ಬಳಿಕ ಬರುವ ಮಕ್ಕಳಿಗೆ ಒಳ್ಳೆಯದಾಗಬೇಕಾದರೆ ಅದನ್ನು ತಿನ್ನ ಬೇಡಿರಿ. ಏಕಂದರೆ ಆಗ ನೀವು ಸಮರ್ಪಕವಾದುದನ್ನು ಮಾಡುವಿರಿ.”—ಧರ್ಮೋಪದೇಶಕಾಂಡ 12:23-25, ನ್ಯೂ.ಇ.ವ; 15:23; ಯಾಜಕಕಾಂಡ 7:26, 27; ಯೆಹೆಜ್ಕೇಲ 33:25.b
ಕೆಲವರು ಇಂದು ತರ್ಕಿಸುವುದಕ್ಕೆ ವ್ಯತಿರಿಕ್ತವಾಗಿ, ತುರ್ತು ಪರಿಸ್ಥಿತಿಯ ಸಮಯದಲ್ಲೂ ದೇವರು ಹಾಕಿದ ರಕ್ತದ ಮೇಲಿನ ನಿಯಮವನ್ನು ಅಸಡ್ಡೆ ಮಾಡಬಾರದಿತ್ತು. ಯುದ್ಧ ಸಮಯದಲ್ಲಿ ಬಂದ ಒಂದು ಬಿಕ್ಕಟ್ಟಿನಲ್ಲಿ ಕೆಲವು ಇಸ್ರಾಯೇಲ್ಯ ಸೈನಿಕರು ಪ್ರಾಣಿಗಳನ್ನು ಕೊಂದು “ಮಾಂಸದೊಂದಿಗೆ ರಕ್ತವನ್ನೂ ತಿಂದರು.” ಹಾಗಾದರೆ ತುರ್ತುಪರಿಸ್ಥಿತಿಯ ವೀಕ್ಷಣದಲ್ಲಿ, ರಕ್ತದಿಂದ ತಮ್ಮ ಜೀವವನ್ನು ಪೋಷಿಸಿಕೊಳ್ಳುವ ಅನುಮತಿ ಅವರಿಗಿತ್ತೇ? ಇಲ್ಲ. ಅವರ ಅಧಿಪತಿ ಅವರ ನಡತೆ ಆಗಲೂ ಘೋರವಾದ ತಪ್ಪೆಂದು ತೋರಿಸಿದನು. (1 ಸಮುವೇಲ 14:31-35) ಆದುದರಿಂದ, ಜೀವವು ಅಮೂಲ್ಯವಾದರೂ, ತುರ್ತಿಗೊಳಗಾಗುವಾಗ ತನ್ನ ಮಟ್ಟವನ್ನು ಅಸಡ್ಡೆ ಮಾಡಬಹುದೆಂದು ಜೀವದಾತನು ಎಂದಿಗೂ ಹೇಳಿರುವುದಿಲ್ಲ.
ರಕ್ತ ಮತ್ತು ಸತ್ಯ ಕ್ರೈಸ್ತರು
ಮಾನವ ಜೀವವನ್ನು ರಕ್ತದ ಮೂಲಕ ರಕ್ಷಿಸುವ ಪ್ರಶ್ನೆಯ ಸಂಬಂಧದಲ್ಲಿ ಕ್ರೈಸ್ತತ್ವದ ಸ್ಥಾನವೇನು?
ಯೇಸು ಸಮಗ್ರತೆಯ ಮನುಷ್ಯನಾಗಿದ್ದನು. ಈ ಕಾರಣದಿಂದಲೇ ಅವನನ್ನು ವಿಶೇಷ ಗೌರವದಿಂದ ಕಾಣಲಾಗುತ್ತದೆ. ರಕ್ತವನ್ನು ತೆಗೆದು ಕೊಳ್ಳುವುದು ತಪ್ಪೆಂಬ ಸೃಷ್ಟಿಕರ್ತನ ಹೇಳಿಕೆ ಮತ್ತು ಆ ನಿಯಮದ ಬದ್ಧತೆ ಅವನಿಗೆ ತಿಳಿದಿತ್ತು. ಈ ಕಾರಣದಿಂದ, ರಕ್ತದ ಕುರಿತಾದ ಆ ನಿಯಮವನ್ನು, ಅದಕ್ಕೆ ವಿರೋಧವಾಗಿ ವರ್ತಿಸುವ ಒತ್ತಡವಿದ್ದರೂ, ಯೇಸು ಸಮರ್ಥಿಸುತ್ತಿದ್ದನೆಂದು ನಂಬಲು ಸಕಾರಣವಿದೆ. ಯೇಸು, “ಯಾವ ತಪ್ಪನ್ನೂ ಮಾಡಲಿಲ್ಲ, [ಮತ್ತು] ಅವನ ತುಟಿಗಳಲ್ಲಿ ಯಾವ ಮೋಸವೂ ಕಂಡುಬರಲಿಲ್ಲ.” (1 ಪೇತ್ರ 2:22, ನಾಕ್ಸ್) ಹೀಗೆ ಅವನು ತನ್ನ ಹಿಂಬಾಲಕರಿಗೆ ಒಂದು ಮಾದರಿಯನ್ನಿಟನ್ಟು. ಇದರಲ್ಲಿ ಜೀವ ಮತ್ತು ರಕ್ತಕ್ಕೆ ಗೌರವವನ್ನು ತೋರಿಸಬೇಕೆಂಬ ಮಾದರಿಯೂ ಸೇರಿತ್ತು. (ಯೇಸುವಿನ ಸ್ವಂತ ರಕ್ತ, ನಿಮ್ಮ ಜೀವನದ ಮೇಲೆ ಪರಿಣಾಮ ಬೀರುವ ಈ ಮಹತ್ವದ ವಿಷಯದಲ್ಲಿ ಹೇಗೆ ಸೇರಿದೆಯೆಂಬುದನ್ನು ನಾವು ಬಳಿಕ ಪರಿಗಣಿಸುವೆವು.)
ಯೇಸು ಮರಣ ಹೊಂದಿ ವರ್ಷಗಳು ಕಳೆದ ಬಳಿಕ, ಕ್ರೈಸ್ತನಾಗುವ ಒಬ್ಬನು ಇಸ್ರಾಯೇಲ್ಯರ ಎಲ್ಲಾ ನಿಯಮಗಳನ್ನು ಇಟ್ಟುಕೊಳ್ಳಬೇಕೊ ಎಂಬ ಪ್ರಶ್ನೆ ಎದ್ದಾಗ ಏನಾಯಿತೆಂದು ಗಮನಿಸಿರಿ. ಯಾವುದರಲ್ಲಿ ಅಪೊಸ್ತಲರೂ ಸೇರಿದ್ದರೋ ಆ ಕ್ರೈಸ್ತ ಆಡಳಿತ ಮಂಡಳಿಯ ಒಂದು ಸಭೆಯಲ್ಲಿ ಇದನ್ನು ಚರ್ಚಿಸಲಾಯಿತು. ಆಗ ಯೇಸುವಿನ ಮಲತಮ್ಮನಾದ ಯಾಕೋಬನು ನೋಹನಿಗೂ ಇಸ್ರಾಯೇಲ್ ಜನಾಂಗಕ್ಕೂ ರಕ್ತದ ವಿಷಯ ಕೊಡಲ್ಪಟ್ಟಿದ್ದ ಆಜ್ಞೆಗಳು ಸೇರಿದ್ದ ಬರಹಗಳನ್ನು ಸೂಚಿಸಿ ಮಾತಾಡಿದನು. ಕ್ರೈಸ್ತರು ಇದಕ್ಕೆ ಬದ್ಧರಾಗಿದ್ದರೋ?—ಅಪೊಸ್ತಲರ ಕೃತ್ಯಗಳು 15:1-21.
ಆ ಮಂಡಲಿ ತನ್ನ ತೀರ್ಮಾನವನ್ನು ಎಲ್ಲಾ ಸಭೆಗಳಿಗೆ ಕಳುಹಿಸಿತು: ಕ್ರೈಸ್ತರು ಮೋಶೆಗೆ ಕೊಡಲ್ಪಟ್ಟ ನ್ಯಾಯಸೂತ್ರಗಳನ್ನು ಪಾಲಿಸುವ ಅಗತ್ಯವಿಲ್ಲ. ಆದರೆ “ವಿಗ್ರಹಗಳಿಗೆ ಯಜ್ಞಾರ್ಪಿಸಿದ ವಸ್ತುಗಳನ್ನು ಮತ್ತು ರಕ್ತವನ್ನು ಮತ್ತು ಕತ್ತು ಹಿಸುಕಿ ಕೊಂದದ್ದನ್ನು (ರಕ್ತ ಬಸಿಯದಿರುವ ಮಾಂಸ) ಮತ್ತು ಹಾದರವನ್ನು ವಿಸರ್ಜಿಸುತ್ತಾ ಹೋಗಿರಿ.” (ಅಪೊಸ್ತಲರ ಕೃತ್ಯಗಳು 15:22-29) ಇಲ್ಲಿ ಅಪೊಸ್ತಲರು ಕೇವಲ ಒಂದು ಸಂಸ್ಕಾರವನ್ನು ಅಥವಾ ಆಹಾರಕ್ರಮದ ಆಜ್ಞೆಯನ್ನು ನೀಡಲಿಲ್ಲ. ಆ ಆಜ್ಞೆಯಲ್ಲಿ ಮೂಲಭೂತವಾದ ಮತ್ತು ಆದಿಕ್ರೈಸ್ತರು ಅನುಸರಿಸಿದ ನೈತಿಕ ಮಟ್ಟಗಳಿದ್ದವು. ಸುಮಾರು ಹತ್ತು ವರ್ಷಗಳ ಬಳಿಕ ಅವರು ತಾವಿನ್ನೂ, “ವಿಗ್ರಹಗಳಿಗೆ ಅರ್ಪಿಸಿದ ವಸ್ತುಗಳಿಂದ, ರಕ್ತದಿಂದ . . . ಮತ್ತು ಹಾದರದಿಂದ ದೂರ”ವಾಗಿರಬೇಕೆಂದು ಒಪ್ಪಿಕೊಂಡರು.—ಅಪೊಸ್ತಲರ ಕೃತ್ಯಗಳು 21:25.
ಕೋಟ್ಯಂತರ ಜನರು ಚರ್ಚುಗಳಿಗೆ ಹೋಗುತ್ತಾರೆಂದು ನಿಮಗೆ ತಿಳಿದದೆ. ಇವರಲ್ಲಿ ಬಹುಸಂಖ್ಯಾಕರು, ಕ್ರೈಸ್ತ ನೀತಿಸೂತ್ರಗಳಲ್ಲಿ, ವಿಗ್ರಹಗಳನ್ನು ಆರಾಧಿಸದಿರುವುದು ಮತ್ತು ಅಸಹ್ಯಕರವಾದ ಲೈಂಗಿಕ ದುರಾಚಾರಗಳನ್ನು ನಡಿಸದಿರುವುದು ಸೇರಿವೆ ಎಂದು ಪ್ರಾಯಶಃ ಒಪ್ಪಿಕೊಂಡಾರು. ಆದರೂ, ಅಪೊಸ್ತಲರು, ರಕ್ತವನ್ನು ವಿಸರ್ಜಿಸುವ ವಿಷಯವನ್ನು, ಆ ಇತರ ತಪ್ಪುಗಳನ್ನು ವಿಸರ್ಜಿಸುವ ಅದೇ ಉನ್ನತ ನೈತಿಕ ಮಟ್ಟದಲ್ಲಿಟ್ಟಿದ್ದಾರೆ ಎಂದು ಗಮನಿಸುವುದು ಯೋಗ್ಯ. ಅವರು ತಮ್ಮ ಆಜ್ಞೆಯನ್ನು ಹೀಗೆಂದು ಹೇಳಿ ಮುಗಿಸಿದರು: “ನೀವು ಜಾಗರೂಕತೆಯಿಂದ ನಿಮ್ಮನ್ನು ಈ ವಿಷಯಗಳಿಂದ ದೂರವಿಟ್ಟುಕೊಳ್ಳುವಲ್ಲಿ ಏಳಿಗೆ ಹೊಂದುವಿರಿ. ನಿಮಗೆ ಆರೋಗ್ಯ ಭಾಗ್ಯವಾಗಲಿ!”—ಅಪೊಸ್ತಲರ ಕೃತ್ಯಗಳು 15:29.
ಈ ಅಪೊಸ್ತಲಿಕ ವಿಧಿ ಬದ್ಧವೆಂದು ದೀರ್ಘಕಾಲದಿಂದ ಗ್ರಹಿಸಲ್ಪಟ್ಟಿತ್ತು. ಎರಡನೆಯ ಶತಕದ ಅಂತ್ಯಕ್ಕೆ ಸನಿಹದಲ್ಲಿ, ಚಿತ್ರಹಿಂಸೆಯಿಂದ ಸಾಯುತ್ತಿದ್ದ ಯುವ ಮಹಿಳೆಯೊಬ್ಬಳು, ಕ್ರೈಸ್ತರಿಗೆ “ವಿಚಾರಹೀನ ಪ್ರಾಣಿಗಳ ರಕ್ತವನ್ನೂ ಸಹ ತಿನ್ನಲು ಅನುಮತಿಯಿಲ್ಲ” ಎಂದು ಎತ್ತಿ ಹೇಳಿದಳೆಂದು ಯುಸೀಬಿಯಸನು ತಿಳಿಸುತ್ತಾನೆ. ಸಾಯಲು ತನಗಿರುವ ಹಕ್ಕಿನ ವಿಷಯ ಅವಳು ಇಲ್ಲಿ ಹೇಳಿದ್ದಲ್ಲ. ಅವಳಿಗೆ ಜೀವಿಸಲು ಮನಸ್ಸಿತ್ತು, ಆದರೆ ಆಕೆ ತನ್ನ ಮೂಲಸೂತ್ರಗಳನ್ನು ತ್ಯಜಿಸಲಿಲ್ಲ. ಹೀಗೆ, ಸ್ವಂತ ಲಾಭಕ್ಕಿಂತಲೂ ಸೂತ್ರಗಳನ್ನು ಪ್ರಥಮವಾಗಿಡುವವರನ್ನು ನೀವು ಸನ್ಮಾನಿಸುವುದಿಲ್ಲವೇ?
ವಿಜ್ಞಾನಿ ಜೋಸೆಫ್ ಪ್ರೀಸ್ಲ್ಟಿ ತೀರ್ಮಾನಿಸಿದ್ದು: “ನೋಹನಿಗೆ ಕೊಡಲ್ಪಟ್ಟ ರಕ್ತ ಅಶನ ನಿಷೇಧವು ಅವನ ಸಂತತಿಗೆಲ್ಲಾ ಬಂಧಕವೆಂದು ತೋರುತ್ತದೆ. . . . ನಾವು ಅಪೊಸ್ತಲಿಕ ನಿಷೇಧವನ್ನು, ಯಾರು ಅದರ ಪ್ರಕೃತಿ ಮತ್ತು ವೈಶಾಲ್ಯವನ್ನು ಸರಿಯಾಗಿ ತಿಳಿದಿರಲಿಲ್ಲ ಎಂದು ಹೇಳಸಾಧ್ಯವಿಲ್ಲವೋ, ಆ ಆದಿಕ್ರೈಸ್ತರ ಆಚಾರದಿಂದ ಅರ್ಥವಿವರಣೆ ಮಾಡುವುದಾದರೆ ಇದು ಮಿತಿರಹಿತವೂ ಸಾರ್ವಕಾಲಿಕವೂ ಆಗಿದೆ ಎಂಬ ತೀರ್ಮಾನಕ್ಕೆ ಬರುವುದು ಅನಿವಾರ್ಯ. ಏಕಂದರೆ, ಅನೇಕ ಶತಕಗಳ ವರೆಗೆ ಯಾವ ಕ್ರೈಸ್ತನೂ ರಕ್ತವನ್ನು ತಿನ್ನುತ್ತಿರಲಿಲ್ಲ.”
ರಕ್ತವನ್ನು ಔಷಧದೋಪಾದಿ ಉಪಯೋಗಿಸುವುದರಲ್ಲೀನು?
ಬೈಬಲಿನ ರಕ್ತ ನಿಷೇಧವು, ನೋಹ, ಮೋಶೆ ಅಥವಾ ಅಪೊಸ್ತಲ ದಿನಗಳಲ್ಲಿ ನಿಶ್ಚಯವಾಗಿಯೂ ಮಾಹಿತಿಯಲ್ಲಿ ಇದ್ದಿರದ, ರಕ್ತ ಪೂರಣಗಳಂಥ, ವೈದ್ಯಕೀಯ ಉಪಯೋಗಗಳನ್ನೂ ಆವರಿಸುವುದೋ?
ರಕ್ತವನ್ನು ಉಪಯೋಗಿಸುವ ಆಧುನಿಕ ಚಿಕಿತ್ಸಾವಿಧಾನ ಆಗ ಇದ್ದಿಲ್ಲವಾದರೂ ಔಷಧವಾಗಿ ರಕ್ತವನ್ನು ಉಪಯೋಗಿಸುವುದು ಅಷ್ಟು ಆಧುನಿಕವಲ್ಲ. ಈಜಿಪ್ಟ್ ಮತ್ತು ಇತರ ಸ್ಥಳಗಳಲ್ಲಿ, 2,000 ವರ್ಷಗಳಿಗೆ ಹಿಂದೆ ಮಾನವ “ರಕ್ತವು ಕುಷ್ಟ ರೋಗಕ್ಕೆ ಸರ್ವೂತ್ಕೃಷ್ಟ ಔಷಧವಾಗಿ ಪರಿಗಣಿಸಲ್ಪಡುತ್ತಿತ್ತು.” ಅಸ್ಸಿರಿಯ ರಾಷ್ಟ್ರವು ಯಂತ್ರಕಲಾ ವಿದ್ಯೆಯಲ್ಲಿ ನಾಯಕತ್ವ ಪಡೆದಿದ್ದಾಗ ರಾಜ ಈಸರ್ಹ್ಯಾಡೊನನ ಪುತ್ರನಿಗೆ ಕೊಡಲ್ಪಟ್ಟ ಔಷಧವನ್ನು ಒಬ್ಬ ವೈದ್ಯನು ತಿಳಿಸಿದನು: “[ರಾಜಪುತ್ರನು] ಈಗ ಗುಣ ಹೊಂದುತ್ತಿದ್ದಾನೆ. ನನ್ನ ಒಡೆಯನಾದ ರಾಜನು ಸಂತೋಷಿಸಬಹುದು. 22ನೆಯ ದಿನದಿಂದ ಹಿಡಿದು ನಾನು [ಅವನಿಗೆ] ರಕ್ತವನ್ನು ಕುಡಿಯಲು ಕೊಟ್ಟೆನು. ಅವನು ಮೂರು ದಿವಸ [ಅದನ್ನು] ಕುಡಿಯುವನು. ಇನ್ನು ಮೂರು ದಿವಸ ಆಂತರಿಕ ಲೇಪನಕ್ಕೆ ನಾನು [ಅವನಿಗೆ ರಕ್ತವನ್ನು] ಕೊಡುವೆನು.” ಈಸರ್ಹ್ಯಾಡೊನನಿಗೆ ಇಸ್ರಾಯೇಲ್ಯರೊಂದಿಗೆ ವ್ಯವಹಾರವಿತ್ತು. ಆದರೂ, ಇಸ್ರಾಯೇಲ್ಯರಲ್ಲಿ ದೇವರ ಧರ್ಮಶಾಸ್ತ್ರವಿದ್ದುದರಿಂದ ಅವರು ರಕ್ತವನ್ನು ಔಷಧವಾಗಿ ಕುಡಿಯಲಿಲ್ಲ.
ರೋಮನ್ ಸಮಯಗಳಲ್ಲಿ ರಕ್ತವನ್ನು ಔಷಧವಾಗಿ ಉಪಯೋಗಿಸಲಾಗುತ್ತಿತ್ತೋ? ರೋಮನ್ ಪ್ರಕೃತಿತತ್ವವಾದಿ ಪಿನ್ಲಿ (ಅಪೊಸ್ತಲರ ಸಮಕಾಲೀನ) ಮತ್ತು ಎರಡನೆಯ ಶತಮಾನದ ವೈದ್ಯ ಅರಟೇಯಸ್—ಇವರು, ರಕ್ತವು ಮೂರ್ಛೆರೋಗ (epilepsy) ಕ್ಕೆ ಚಿಕಿತ್ಸೆಯಾಗಿತ್ತೆಂದು ವರದಿಮಾಡುತ್ತಾರೆ. ಸಮಯಾನಂತರ ಟೆರ್ಟಲಿಯನ್ ಬರೆದುದು: “ಮಲ್ಲರಂಗದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ, ದುರಾಶೆಯ ತೃಷೆಯಿಂದ ದುಷ್ಟ ಪಾತಕಿಗಳ ಅಪ್ಪಟ ರಕ್ತವನ್ನು . . . ತಮ್ಮ ಮೂರ್ಛೆರೋಗವನ್ನು ಗುಣಪಡಿಸಲು ತೆಗೆದು ಕೊಂಡು ಹೋಗುವವರನ್ನು ಪರಿಗಣಿಸಿರಿ.” ಅವನು ಇವರನ್ನು, “[ತಮ್ಮ] ಊಟಗಳಲ್ಲಿ ಪ್ರಾಣಿಗಳ ನೆತ್ತರು ಕೂಡಾ ಇಲ್ಲದ” ಕ್ರೈಸ್ತರಿಗೆ ವ್ಯತಿರಿಕ್ತವಾಗಿ ಹೋಲಿಸಿದನು. “ಕ್ರೈಸ್ತರ ನ್ಯಾಯ ವಿಚಾರಣೆಗಳಲ್ಲಿ ನೀವು ಅವರಿಗೆ ರಕ್ತ ತುಂಬಿದ ಸಾಸೆಜ್ ಭಕ್ಷವನ್ನೂ ಕೊಡುತ್ತೀರಿ. ಅದು ಅವರಿಗೆ ನ್ಯಾಯ ಸಮ್ಮತವಲ್ಲವೆಂದು ನಿಮಗೆ ಮಂದಟ್ಟಾಗಿದೆ” ಎಂದು ಅವನು ಬರೆದನು. ಹೀಗೆ, ಆದಿಕ್ರೈಸ್ತರು ರಕ್ತವನ್ನು ಸೇವಿಸುವ ಬದಲು ಮರಣಕ್ಕೂ ಸಿದ್ಧರಾಗಿದ್ದರು.
ಫ್ಲೆಷ್ ಆ್ಯಂಡ್ ಬ್ಲಡ್ ಎಂಬ ಪುಸ್ತಕ ವರದಿ ಮಾಡುವುದು: “ರಕ್ತವು ತನ್ನ ದಿನನಿತ್ಯದ ರೂಪದಲ್ಲಿ . . . ಔಷಧ ಮತ್ತು ಮಾಯಾ ವಿದ್ಯೆಯ ಅಂಶವಾಗಿ ಬಳಕೆಯಿಂದ ಹೋಗಲಿಲ್ಲ. ಉದಾಹರಣೆಗೆ, 1483 ರಲ್ಲಿ ಫ್ರಾನ್ಸಿನ XI ನೆಯ ಲೂಯಿ ಸಾಯುತ್ತಲಿದ್ದನು. ‘ಪ್ರತಿದಿನ ಅವನ ಅವಸ್ಥೆ ಕೆಡುತ್ತಾ ಹೋಯಿತು. ಮತ್ತು ಔಷಧಗಳು ವಿಚಿತ್ರ ರೀತಿಯದ್ದಾಗಿದ್ದರೂ ಅವು ಅವನಿಗೆ ಯಾವ ಪ್ರಯೋಜನವನ್ನೂ ತರಲಿಲ್ಲ. ಏಕಂದರೆ ಅವನು ಕೆಲವು ಮಕ್ಕಳಿಂದ ತಕ್ಕೊಂಡು ಕುಡಿದ ಮಾನವ ರಕ್ತದ ಮೂಲಕ ಗುಣವಾಗಬೇಕೆಂದು ಆವೇಶದಿಂದ ನಿರೀಕ್ಷಿಸಿದ್ದನು.’”
ರಕ್ತ ಪೂರಣ ಮಾಡುವುದರ ಕುರಿತೇನು? ಇದರ ಪ್ರಯೋಗಗಳು 16 ನೆಯ ಶತಮಾನದ ಆರಂಭಕ್ಕೆ ಸನಿಹದಲ್ಲಿ ತೊಡಗಿದವು. ಥಾಮಸ್ ಬಾರ್ತೋಲಿನ್ (1616-80) ಎಂಬ ಕೋಪನ್ಹೇಗನ್ ವಿಶ್ವ ವಿದ್ಯಾಲಯದ ಅಂಗರಚನಾಶಾಸ್ತ್ರದ ಫ್ರೊಫೆಸರನು ಇದಕ್ಕೆ ಹೀಗೆ ಆಕ್ಷೇಪವೆತ್ತಿದನು: ‘ಮಾನವ ರಕ್ತವನ್ನು ಆಂತರಿಕ ರೋಗೌಷಧಕ್ಕಾಗಿ ಉಪಯೋಗಿಸುವವರು ಅದನ್ನು ದುರುಪಯೋಗಿಸಿ ಘೋರ ಪಾಪ ಮಾಡುವಂತೆ ಕಾಣುತ್ತದೆ. ನರಭಕ್ಷಕರನ್ನು ಖಂಡಿಸಲಾಗುತ್ತದೆ. ಹಾಗಾದರೆ, ಮಾನವ ರಕ್ತದಿಂದ ತಮ್ಮ ಗಂಟಲನ್ನು ಮಲಿನ ಮಾಡುವವರನ್ನು ನಾವೇಕೆ ಹೇಸುವುದಿಲ್ಲ? ಅಭಿಧಮನಿಯನ್ನು ಕತ್ತರಿಸಿ ಪರರಕ್ತವನ್ನು ಬಾಯಿಯ ಮೂಲಕವಾಗಿಯಾಗಲಿ ಪೂರಣ ಮಾಡುವ ಉಪಕರಣಗಳ ಮೂಲಕವಾಗಿಯಾಗಲಿ ಪಡೆಯುವುದೂ ಹೀಗೆಯೇ. ಹೀಗೆ ಶಸ್ತ್ರಚಿಕಿತ್ಸೆ ಮಾಡುವವರನ್ನು ರಕ್ತ ತಿನ್ನುವುದನ್ನು ನಿಷೇಧಿಸುವ ದೈವಿಕ ನಿಯಮವು ಭಯಭೀತರನ್ನಾಗಿ ಮಾಡುತ್ತದೆ.’
ಹೀಗೆ, ಗತ ಶತಮಾನಗಳ ಆಲೋಚನಾಶೀಲ ಜನರು, ಈ ಬೈಬಲ್ ನಿಯಮವು ರಕ್ತವನ್ನು ಬಾಯಿಂದ ಸೇವಿಸುವುದಕ್ಕೆ ಅನ್ವಯಿಸುವಪಷ್ಟೇ ಅಭಿಧಮನಿಗಳಲ್ಲಿ ಸೇರಿಸುವುದಕ್ಕೂ ಅನ್ವಯಿಸುತ್ತದೆ ಎಂದು ಗ್ರಹಿಸಿದರು. ಬಾರ್ತೋಲಿನ್ ತೀರ್ಮಾನಿಸಿದ್ದು: “[ರಕ್ತ] ವನ್ನು ತಕ್ಕೊಳ್ಳುವ ಎರಡು ವಿಧಗಳೂ ಒಂದೇ ಉದ್ದೇಶವನ್ನು, ಅದೇನಂದರೆ ಈ ರಕ್ತದಿಂದ ಕಾಯಿಲೆಯಿರುವ ದೇಹ ಪೋಷಿಸಲ್ಪಡಲಿ ಅಥವಾ ಸ್ವಸ್ಥಗೊಳ್ಳಲಿ ಎಂಬ ಉದ್ದೇಶವನ್ನು ನೆರವೇರಿಸುತ್ತವೆ.”
ಈ ಸಾಮಾನ್ಯ ಪುನರ್ವಿಮರ್ಶೆಯು, ಯೆಹೋವನ ಸಾಕ್ಷಿಗಳು ಆಯ್ದುಕೊಳ್ಳುವ ಸಂಧಾನ ಮಾಡಲಾಗದ ಧಾರ್ಮಿಕ ನೆಲೆಯನ್ನು ನೀವು ಗ್ರಹಿಸುವಂತೆ ಸಹಾಯ ಮಾಡೀತು. ಜೀವವು ಅವರಿಗೆ ಶ್ರೇಷ್ಠ ಮೌಲ್ಯದ್ದಾಗಿದೆ ಮತ್ತು ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಅವರು ಬಯಸುತ್ತಾರೆ. ಆದರೆ ಅವರು ದೇವರ ಮಟ್ಟವನ್ನು ಉಲ್ಲಂಘಿಸದಿರಲು ನಿರ್ಧರಿಸಿದ್ದಾರೆ ಮತ್ತು ಈ ಮಟ್ಟ ಸದಾ ಹೊಂದಿಕೆಯುಳ್ಳದ್ದಾಗಿದೆ: ಜೀವವು ಸೃಷ್ಟಿಕರ್ತನ ಕೊಡುಗೆಯಾಗಿದೆ ಎಂದು ಗೌರವಿಸುವವರು ರಕ್ತವನ್ನು ತೆಗೆದು ಕೊಂಡು ಆ ಜೀವವನ್ನು ಪೋಷಿಸ ಪ್ರಯತ್ನಿಸುವುದಿಲ್ಲ.
ಆದರೂ, ಅನೇಕ ವರ್ಷಗಳಿಂದ, ರಕ್ತವು ಜೀವವನ್ನು ರಕ್ಷಿಸುತ್ತದೆಂಬ ವಾದ ಕೇಳಿ ಬರುತ್ತಿದೆ. ವಿಪರೀತ ರಕ್ತನಷ್ಟ ಹೊಂದಿರುವವನಿಗೆ ರಕ್ತ ಪೂರಣ ಮಾಡಲಾಗಿ ಅವನು ಶೀಘ್ರ ಗುಣಮುಖನಾದ ಅನೇಕ ಸಂಭವಗಳನ್ನು ಡಾಕ್ಟರರು ಹೇಳಬಲ್ಲರು. ಆದುದರಿಂದ ನೀವು ಹೀಗೆ ಪ್ರಶ್ನಿಸ ಬಹುದು: ‘ಇದು ವೈದ್ಯಕೀಯವಾಗಿ ಎಷ್ಟು ವಿವೇಕದ್ದು ಅಥವಾ ಅವಿವೇಕದ್ದಾಗಿದೆ?’ ರಕ್ತ ಚಿಕಿತ್ಸೆಯನ್ನು ಬೆಂಬಲಿಸಲು ವೈದ್ಯಕೀಯ ಸಾಬೀತು ಕೊಡಲಾಗುತ್ತದೆ. ಆದುದರಿಂದ, ರಕ್ತದ ವಿಷಯದಲ್ಲಿ ತಿಳುವಳಿಕೆಯ ಆಯ್ಕೆ ಮಾಡುವ ಕಾರಣದಿಂದ ನಿಜತ್ವಗಳನ್ನು ಪಡೆಯಲು ತಾವು ಹಂಗಿಗರು.
[ಅಧ್ಯಯನ ಪ್ರಶ್ನೆಗಳು]
a ಅ.ಕೃತ್ಯಗಳು 17:25, 28 ರಲ್ಲಿ ಪೌಲನು, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್.
b ಇದೇ ರೀತಿಯ ನಿಷೇಧಗಳನ್ನು ಆ ಬಳಿಕ ಕುರಾನ್ನಲ್ಲಿ ಬರೆಯಲಾಯಿತು.
[ಪುಟ 5 ರಲ್ಲಿರುವ ಚೌಕ]
“ಇಲ್ಲಿ ನಿಷ್ಕೃಷ್ಟವಾಗಿ ಮತ್ತು ಕ್ರಮಬದ್ಧವಾಗಿ ಕೊಡಲ್ಪಟ್ಟಿರುವ ವಿಧಿಗಳು [ಅಪೊಸ್ತಲರ ಕೃತ್ಯಗಳು 15 ರಲ್ಲಿ] ಆವಶ್ಯಕವೆಂದು ಎಣಿಸಲ್ಪಟ್ಟಿದ್ದು, ಅಪೊಸ್ತಲರ ಮನಸ್ಸಿನಲ್ಲಿ ಅದೊಂದು ತಾತ್ಕಾಲಿಕ ಏರ್ಪಾಡು ಅಥವಾ ಹಂಗಾಮಿ ಹೆಜ್ಜೆಯಾಗಿರಲಿಲ್ಲ ಎಂಬುದಕ್ಕೆ ಅತಿ ಬಲಾಢ್ಯವಾದ ರುಜುವಾತನ್ನು ಕೊಡುತ್ತವೆ.”—ಫ್ರೊಫೆಸರ್ ಎಡುವಾರ್ಡ್ ರೂಸ್, ಸ್ಟ್ರಾಸ್ಬರ್ಗ್ ವಿಶ್ವ ವಿದ್ಯಾನಿಲಯ.
[ಪುಟ 6 ರಲ್ಲಿರುವ ಚೌಕ/ಚಿತ್ರಗಳು]
ಮಾರ್ಟಿನ್ ಲೂಥರನು ಈ ಅಪೊಸ್ತಲಿಕ ಆಜ್ಞೆಯ ಪರಿಣಾಮವನ್ನು ಸೂಚಿಸಿದನು: “ಈ ಸಭೆಗೆ ಹೊಂದಿಕೊಳ್ಳುವ ಚರ್ಚು ನಮಗಿರಬೇಕಾದರೆ, . . . ಇಂದಿನಿಂದ ಯಾವ ಪ್ರಭುವಾಗಲಿ, ದೊರೆಯಾಗಲಿ, ಪಟಣ್ಟಿಗನಾಗಲಿ, ರೈತನಾಗಲಿ ರಕ್ತದಲ್ಲಿ ಬೇಯಿಸಿದ ಹೆಬ್ಬಾತು, ಹರಿಣಿ, ಹರಿಣ ಅಥವಾ ಹಂದಿಯ ಮಾಂಸವನ್ನು ತಿನ್ನಬಾರದೆಂದು ನಾವು ಕಲಿಸಿ, ಒತ್ತಾಯ ಮಾಡಬೇಕು. . . . ಮತ್ತು ಪಟ್ಟಣಿಗರೂ ರೈತರೂ ವಿಶೇಷವಾಗಿ ಕೆಂಪು ಸಾಸೆಜ್ ಮತ್ತು ರಕ್ತದ ಸಾಸೆಜ್ನಿಂದ ದೂರವಿರಬೇಕು.”
[ಕೃಪೆ]
Woodcut by Lucas Cranach
[ಪುಟ 7 ರಲ್ಲಿರುವ ಚೌಕ]
“ದೇವರೂ ಮನುಷ್ಯರೂ ವಿವಿಧ ರೀತಿಯಲ್ಲಿ ವಿಷಯಗಳನ್ನು ವೀಕ್ಷಿಸುತ್ತಾರೆ. ನಮ್ಮ ದೃಷ್ಟಿಯಲ್ಲಿ ಯಾವುದು ಪ್ರಾಮುಖ್ಯವೆಂದು ಕಂಡುಬರುತ್ತದೋ ಅದು, ಅಪಾರ ವಿವೇಕದ ಅಂದಾಜಿನಲ್ಲಿ ಅನೇಕ ವೇಳೆ, ಏನೂ ಇಲ್ಲವಾಗಿದೆ; ಮತ್ತು ನಮಗೆ ಅಲ್ಪವೆಂದು ಕಂಡುಬರುವ ವಿಷಯವು, ಅನೇಕ ವೇಳೆ ದೇವರಿಗೆ ಅತಿ ಮಹತ್ವದ್ದಾಗಿದೆ. ಇದು ಆದಿಯಿಂದಲೇ ಹೀಗಿತ್ತು.”—“ಎನ್ ಇನ್ಕಾಯ್ವರಿ ಇಂಟು ದ ಲಾಫುಲ್ನೆಸ್ ಆಫ್ ಈಟಿಂಗ್ ಬ್ಲಡ್,” ಅಲೆಕ್ಸಾಂಡರ್ ಪೈರಿ, 1787.
[ಪುಟ 4 ರಲ್ಲಿರುವ ಚಿತ್ರ]
Medicine and the Artist by Carl Zigrosser/Dover Publications
[ಪುಟ 5 ರಲ್ಲಿರುವ ಚಿತ್ರ]
ಒಂದು ಐತಿಹಾಸಿಕ ಸಭೆಯಲ್ಲಿ ಕ್ರೈಸ್ತ ಆಡಳಿತ ಮಂಡಳಿ, ರಕ್ತದ ಸಂಬಂಧದಲ್ಲಿರುವ ದೇವರ ನಿಯಮ ಇನ್ನೂ ಬದ್ಧವೆಂದು ದೃಢೀಕರಿಸಿತು
[ಪುಟ 8 ರಲ್ಲಿರುವ ಚಿತ್ರ]
ಪರಿಣಾಮವೇನೇ ಆಗಿರಲಿ, ಆದಿಕ್ರೈಸ್ತರು ರಕ್ತದ ಕುರಿತಾದ ದೇವರ ನಿಯಮವನ್ನು ಉಲ್ಲಂಘಿಸಲು ನಿರಾಕರಿಸಿದರು
[ಕೃಪೆ]
Painting by Gérôme, 1883, courtesy of Walters Art Gallery, Baltimore