ನಿಮ್ಮ ಜೀವವೆಂಬ ವರದಾನಕ್ಕೆ ಸರಿಯಾದ ಮೌಲ್ಯವನ್ನು ಕಟ್ಟಿರಿ
‘ಕ್ರಿಸ್ತನ ರಕ್ತವು ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು ಶುದ್ಧೀಕರಿಸುವದು.’—ಇಬ್ರಿಯ 9:14.
ನಿಮ್ಮ ಜೀವವು ನಿಮಗೆ ಎಷ್ಟು ಅಮೂಲ್ಯವಾಗಿದೆ ಎಂದು ಕೇಳಲಾಗುವಲ್ಲಿ ನೀವೇನು ಉತ್ತರ ಕೊಡುವಿರಿ? ನಮ್ಮ ಜೀವವೂ ಇತರರ ಜೀವವೂ ನಮಗೆ ಅತ್ಯಮೂಲ್ಯವಾದದ್ದಾಗಿದೆ. ನಾವು ಕಾಯಿಲೆ ಬೀಳುವಾಗ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗುವುದು ಅಥವಾ ಕ್ರಮವಾಗಿ ವೈದ್ಯಕೀಯ ತಪಾಸಣೆಗಳಿಗೆ ಒಳಗಾಗುವುದೇ ಈ ಮಾತಿಗೆ ಸಾಕ್ಷ್ಯ. ಏಕೆಂದರೆ ನಮಗಿರುವ ಇಚ್ಛೆಯು ಬದುಕುವುದೂ ಆರೋಗ್ಯದಿಂದಿರುವುದೂ ಆಗಿದೆ. ವೃದ್ಧರ ಮತ್ತು ಅಂಗವಿಕಲರ ಇಚ್ಛೆಯೂ ಇದೇ ಆಗಿದೆ. ಅವರಿಗೂ ಸಾಯುವ ಮನಸ್ಸಿಲ್ಲ, ಬದುಕುವ ಬಯಕೆಯಿದೆ.
2 ಜೀವವನ್ನು ನೀವು ಎಷ್ಟು ಅಮೂಲ್ಯವೆಂದೆಣಿಸುತ್ತೀರೊ ಅದು ನಿಮಗೆ ಇತರರೊಂದಿಗಿರುವ ಸಂಬಂಧಗಳ ಮೇಲೂ ಪ್ರಭಾವ ಬೀರುತ್ತದೆ. ಉದಾಹರಣೆಗೆ, “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ” ಎಂದು ದೇವರ ವಾಕ್ಯವು ನಿರ್ದೇಶಿಸುತ್ತದೆ. (ಜ್ಞಾನೋಕ್ತಿ 23:22) “ಕಿವಿಗೊಡು” ಎಂಬುದರ ಅರ್ಥವು ಕೇವಲ ಮಾತುಗಳನ್ನು ಕೇಳಿಸಿಕೊಳ್ಳುವುದು ಎಂದಷ್ಟೇಯಲ್ಲ; ಈ ಜ್ಞಾನೋಕ್ತಿಯ ಅರ್ಥ ಅವುಗಳನ್ನು ಆಲಿಸಿ, ನಂತರ ವಿಧೇಯತೆಯನ್ನೂ ತೋರಿಸಬೇಕು ಎಂದಾಗಿದೆ. (ವಿಮೋಚನಕಾಂಡ 15:26; ಧರ್ಮೋಪದೇಶಕಾಂಡ 7:12; 13:18; 15:5; ಯೆಹೋಶುವ 22:2; ಕೀರ್ತನೆ 81:13) ಇದನ್ನು ಮಾಡಲು ದೇವರ ವಾಕ್ಯವು ಯಾವ ಕಾರಣವನ್ನು ಕೊಡುತ್ತದೆ? ನಿಮ್ಮ ತಂದೆತಾಯಿಗಳು ನಿಮಗಿಂತ ಹೆಚ್ಚು ವಯಸ್ಸಾದವರೂ ಹೆಚ್ಚು ಅನುಭವಸ್ಥರೂ ಆಗಿರುವುದಷ್ಟೇ ಇದಕ್ಕೆ ಕಾರಣವಲ್ಲ. ಅವರು ನಿಮ್ಮನ್ನು ‘ಹೆತ್ತವರು’ ಆಗಿದ್ದಾರೆ ಎಂಬ ಕಾರಣವು ಕೊಡಲ್ಪಟ್ಟಿದೆ. ಕೆಲವು ಆವೃತ್ತಿಗಳು ಈ ವಚನವನ್ನು, “ನಿನಗೆ ಜೀವಕೊಟ್ಟ ತಂದೆಗೆ ಕಿವಿಗೊಡು” ಎಂದು ತರ್ಜುಮೆಮಾಡುತ್ತವೆ. ಹಾಗಾದರೆ, ನೀವು ಜೀವವನ್ನು ಅಮೂಲ್ಯವಾಗಿ ಕಾಣುವಲ್ಲಿ, ಆ ಜೀವದ ಮೂಲದೆಡೆಗೆ ಕರ್ತವ್ಯಭಾವವನ್ನು ಹೊಂದಿರುವಿರಿ ಎಂಬುದು ಸಮಂಜಸ.
3 ನೀವು ಒಬ್ಬ ಸತ್ಕ್ರೈಸ್ತರಾಗಿರುವಲ್ಲಿ, ನಿಶ್ಚಯವಾಗಿಯೂ ಯೆಹೋವನೇ ನಿಮ್ಮ ಜೀವದ ಆದಿಮೂಲನೆಂಬುದನ್ನು ಒಪ್ಪಿಕೊಳ್ಳುತ್ತೀರಿ. ಆತನಿಂದ ನೀವು ‘ಜೀವಿಸುತ್ತೀರಿ’ ಇಲ್ಲವೆ ಜೀವಹೊಂದಿದ್ದೀರಿ, ಪ್ರಜ್ಞಾವಂತ ಜೀವಿಯೋಪಾದಿ ‘ಚಲಿಸುತ್ತೀರಿ’; ಮತ್ತು ಈಗ ‘ಇದ್ದೀರಿ’ ಅಥವಾ ಅಸ್ತಿತ್ವದಲ್ಲಿದ್ದು ಭವಿಷ್ಯದ ಬಗ್ಗೆ ಹಾಗೂ ಅನಂತ ಜೀವನದ ಬಗ್ಗೆಯೂ ಯೋಚಿಸಬಲ್ಲಿರಿ ಅಥವಾ ಅದಕ್ಕಾಗಿ ಯೋಜನೆಗಳನ್ನು ಮಾಡಬಲ್ಲಿರಿ. (ಅ. ಕೃತ್ಯಗಳು 17:28; ಕೀರ್ತನೆ 36:9; ಪ್ರಸಂಗಿ 3:11) ಆದುದರಿಂದ, ಜ್ಞಾನೋಕ್ತಿ 23:22ಕ್ಕೆ ಹೊಂದಿಕೆಯಲ್ಲಿ, ವಿಧೇಯತೆಯಿಂದ ದೇವರಿಗೆ ‘ಕಿವಿಗೊಡುವುದು’ ನ್ಯಾಯವಾಗಿದೆ. ಜೀವದ ಬಗ್ಗೆ ಬೇರಾವುದೇ ರೀತಿಯಲ್ಲಿ ಬೆಲೆಕಟ್ಟುವುದನ್ನು ಇಷ್ಟಪಡುವುದಕ್ಕಿಂತಲೂ ಜೀವದ ಕುರಿತಾದ ದೇವರ ದೃಷ್ಟಿಕೋನವನ್ನು ಗ್ರಹಿಸಿ, ಅದು ನಮ್ಮನ್ನು ನಡೆಸುವಂತೆ ಬಿಡುವುದು ನ್ಯಾಯವಾಗಿದೆ.
ಜೀವಕ್ಕೆ ಗೌರವ ತೋರಿಸಿರಿ
4 ಮಾನವ ಇತಿಹಾಸದ ಆದಿಯಲ್ಲೇ ಯೆಹೋವನು, ಜೀವವನ್ನು ಯಾವ ಕಾರಣಕ್ಕಾಗಿ ಉಪಯೋಗಿಸಬೇಕು (ಅಥವಾ ದುರುಪಯೋಗಿಸಬೇಕು) ಎಂಬ ನಿರ್ಣಯವನ್ನು ತಾನು ಮಾನವರಿಗೆ ಬಿಟ್ಟಿಲ್ಲ ಎಂಬುದನ್ನು ಸ್ಪಷ್ಟಪಡಿಸಿದನು. ಕಾಯಿನನು ಮತ್ಸರಭರಿತ ಕೋಪದಿಂದ ಒಂದು ಮುಗ್ಧ ಜೀವವನ್ನು, ಹೌದು ತನ್ನ ತಮ್ಮನಾದ ಹೇಬೆಲನ ಜೀವವನ್ನು ನಂದಿಸಿಬಿಟ್ಟನು. ಜೀವದ ಸಂಬಂಧದಲ್ಲಿ ಇಂತಹ ನಿರ್ಧಾರವನ್ನು ಮಾಡುವ ಹಕ್ಕು ಕಾಯಿನನಿಗೆ ಇತ್ತೆಂದು ನೀವು ನೆನಸುತ್ತೀರಾ? ದೇವರು ಹಾಗೆ ನೆನಸಲಿಲ್ಲ. ಕಾಯಿನನನ್ನು ಲೆಕ್ಕವೊಪ್ಪಿಸುವಂತೆ ಕೇಳುತ್ತಾ ಆತನಂದದ್ದು: “ನೀನು ಏನು ಮಾಡಿದಿ? ನಿನ್ನ ತಮ್ಮನ ರಕ್ತವು ಭೂಮಿಯ ಕಡೆಯಿಂದ ನನ್ನನ್ನು ಕೂಗುತ್ತದೆ, ಕೇಳು.” (ಆದಿಕಾಂಡ 4:10) ಭೂಮಿಗೆ ಬಿದ್ದಿದ್ದ ಹೇಬೆಲನ ರಕ್ತವು ಅವನ ಜೀವವನ್ನು ಪ್ರತಿನಿಧಿಸಿತೆಂಬುದನ್ನು ಗಮನಿಸಿ. ಆ ಜೀವವನ್ನು ಬೀಭತ್ಸ ರೀತಿಯಲ್ಲಿ ಅಂತ್ಯಗೊಳಿಸಲಾಗಿತ್ತು ಮತ್ತು ಅದು ಸೇಡಿಗಾಗಿ ದೇವರಿಗೆ ಮೊರೆಯಿಟ್ಟಿತು.—ಇಬ್ರಿಯ 12:24.
5 ಜಲಪ್ರಳಯಾನಂತರ, ಮಾನವಸಂತತಿಯು ಕೇವಲ ಎಂಟು ಮಂದಿಯಿಂದ ಹೊಸದಾಗಿ ಆರಂಭಗೊಂಡಿತು. ಸಕಲ ಮಾನವರಿಗೆ ಅನ್ವಯಿಸುವ ಒಂದು ಘೋಷಣೆಯಲ್ಲಿ ದೇವರು, ಜೀವ ಮತ್ತು ರಕ್ತಕ್ಕೆ ತಾನು ಯಾವ ರೀತಿಯಲ್ಲಿ ಬೆಲೆಕಟ್ಟಿದ್ದೇನೆಂಬುದರ ಬಗ್ಗೆ ಹೆಚ್ಚನ್ನು ತಿಳಿಯಪಡಿಸಿದನು. ಮಾನವರು ಪ್ರಾಣಿಮಾಂಸವನ್ನು ತಿನ್ನಬಹುದೆಂದು ಆತನು ಹೇಳಿದರೂ, ಈ ನಿರ್ಬಂಧವನ್ನು ಹಾಕಿದನು: “ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಪೈರುಗಳನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. ಆದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ.” (ಆದಿಕಾಂಡ 9:3, 4) ಇನ್ನೂ ಜೀವದಿಂದಿದ್ದ ಪ್ರಾಣಿಯ ಮಾಂಸವನ್ನಾಗಲಿ ರಕ್ತವನ್ನಾಗಲಿ ತಿನ್ನಬಾರದು ಎಂಬುದೇ ಇದರ ಅರ್ಥವಾಗಿದೆ ಎಂದು ಕೆಲವು ಮಂದಿ ಯೆಹೂದ್ಯರು ಹೇಳುತ್ತಾರೆ. ಆದರೆ ದೇವರು ಇಲ್ಲಿ, ಜೀವಪೋಷಣೆಗಾಗಿ ರಕ್ತ ಸೇವನೆ ಮಾಡುವುದನ್ನು ನಿಷೇಧಿಸುತ್ತಿದ್ದನು ಎಂಬುದು ನಂತರ ಸ್ಪಷ್ಟವಾಯಿತು. ಇದಲ್ಲದೆ, ನೋಹನಿಗೆ ಕೊಡಲ್ಪಟ್ಟ ದೇವರ ಆಜ್ಞೆಯು, ರಕ್ತವು ಒಳಗೂಡಿರುವ ದೇವರ ಉನ್ನತವಾದ ಉದ್ದೇಶವನ್ನು ಸಾಧಿಸುವುದರಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿತ್ತು. ಆ ಉನ್ನತ ಉದ್ದೇಶವು ಮಾನವರು ನಿತ್ಯಜೀವವನ್ನು ಪಡೆಯುವಂತೆ ಅನುಮತಿಸುತ್ತದೆ.
6 ದೇವರು ಮುಂದುವರಿಸುತ್ತ ಹೇಳಿದ್ದು: “ನಿಮ್ಮ ರಕ್ತವನ್ನು ಸುರಿಸಿ ಜೀವತೆಗೆಯುವವರಿಗೆ ಮುಯ್ಯಿತೀರಿಸುವೆನು [“ಜೀವತೆಗೆಯುವವರಿಂದ ಜೀವವನ್ನು ಹಿಂದಕ್ಕೆ ಕೇಳುವೆನು,” NW]. ಮೃಗವಾಗಿದ್ದರೆ ಅದಕ್ಕೂ ಮನುಷ್ಯನಾಗಿದ್ದರೆ, ಹತವಾದವನು ಅವನ ಸಹೋದರನಾಗಿರುವದರಿಂದ, ಅವನಿಗೂ ಮುಯ್ಯಿತೀರಿಸುವೆನೆಂದು ತಿಳಿದುಕೊಳ್ಳಿರಿ. ನರಹತ್ಯವು ಸಹೋದರಹತ್ಯವಲ್ಲವೇ. ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿಯೇ ಉಂಟುಮಾಡಿದನಾದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು.” (ಆದಿಕಾಂಡ 9:5, 6) ಇಡೀ ಮಾನವ ಕುಟುಂಬಕ್ಕೆ ಮಾಡಲ್ಪಟ್ಟ ಈ ಘೋಷಣೆಯಿಂದ, ದೇವರ ದೃಷ್ಟಿಯಲ್ಲಿ ಮನುಷ್ಯನ ರಕ್ತವು ಅವನ ಜೀವವನ್ನು ಪ್ರತಿನಿಧಿಸುವಂಥದ್ದಾಗಿದೆ ಎಂಬುದನ್ನು ನೀವು ಗ್ರಹಿಸಬಲ್ಲಿರಿ. ಸೃಷ್ಟಿಕರ್ತನು ಒಬ್ಬ ವ್ಯಕ್ತಿಗೆ ಜೀವವನ್ನು ಕೊಡುತ್ತಾನೆ, ಮತ್ತು ರಕ್ತದಿಂದ ಪ್ರತಿನಿಧಿಸಲ್ಪಡುವ ಆ ಜೀವವನ್ನು ಯಾವನೂ ಅಂತ್ಯಗೊಳಿಸಬಾರದು. ಕಾಯಿನನಂತೆ ಯಾವನಾದರೂ ಕೊಲೆಮಾಡುವಲ್ಲಿ, ಸೃಷ್ಟಿಕರ್ತನಿಗೆ ಆ ಕೊಲೆಗಾರನ ಜೀವವನ್ನು ‘ಹಿಂದಕ್ಕೆ ಕೇಳುವ’ ಹಕ್ಕಿದೆ.
7 ದೇವರು ತನ್ನ ಘೋಷಣೆಯ ಮೂಲಕ ಮನುಷ್ಯರು ರಕ್ತವನ್ನು ದುರುಪಯೋಗಿಸಬಾರದೆಂದು ಆಜ್ಞಾಪಿಸಿದನು. ಏಕೆಂದು ನೀವು ಎಂದಾದರೂ ಕುತೂಹಲಪಟ್ಟದ್ದುಂಟೊ? ರಕ್ತದ ಕುರಿತಾದ ದೇವರ ದೃಷ್ಟಿಕೋನದ ಹಿಂದೆ ಯಾವ ಕಾರಣವಿತ್ತು? ವಾಸ್ತವದಲ್ಲಿ, ಇದಕ್ಕಿರುವ ಉತ್ತರದೊಂದಿಗೆ, ಬೈಬಲಿನ ಅತಿ ಪ್ರಾಮುಖ್ಯ ಬೋಧನೆಗಳಲ್ಲಿ ಒಂದು ಸಂಬಂಧಿಸಿದೆ. ಅನೇಕ ಚರ್ಚುಗಳು ಈ ಬೋಧನೆಯನ್ನು ಅಸಡ್ಡೆಮಾಡುತ್ತವಾದರೂ, ಇದು ಕ್ರೈಸ್ತ ಸಂದೇಶದ ತಿರುಳೇ ಆಗಿದೆ. ಆ ಬೋಧನೆಯಾದರೂ ಯಾವುದು, ಹಾಗೂ ನಿಮ್ಮ ಜೀವ, ನಿರ್ಣಯಗಳು ಮತ್ತು ಕ್ರಿಯೆಗಳು ಇದರಲ್ಲಿ ಹೇಗೆ ಸೇರಿಕೊಂಡಿವೆ?
ರಕ್ತ—ಅದನ್ನು ಹೇಗೆ ಉಪಯೋಗಿಸಬಹುದು?
8 ಯೆಹೋವನು ಇಸ್ರಾಯೇಲಿಗೆ ಧರ್ಮಶಾಸ್ತ್ರದ ಕಟ್ಟಳೆಗಳನ್ನು ಕೊಟ್ಟಾಗ ಜೀವ ಮತ್ತು ರಕ್ತದ ಬಗ್ಗೆ ಹೆಚ್ಚು ವಿವರಣೆಯನ್ನು ಕೊಟ್ಟನು. ಹಾಗೆ ಕೊಡುವಾಗ ಆತನು ತನ್ನ ಉದ್ದೇಶದ ಸಾಧನೆಯಲ್ಲಿ ಇನ್ನೊಂದು ಹೆಜ್ಜೆಯನ್ನು ಮುಂದಿಟ್ಟನು. ದೇವರಿಗೆ ಮಾಡಬೇಕಾಗಿದ್ದ ಅರ್ಪಣೆಗಳಲ್ಲಿ ಧರ್ಮಶಾಸ್ತ್ರವು ಧಾನ್ಯ, ತೈಲ ಮತ್ತು ದ್ರಾಕ್ಷಾರಸವನ್ನು ಅವಶ್ಯಪಡಿಸಿತೆಂಬುದು ನಿಮಗೆ ಪ್ರಾಯಶಃ ತಿಳಿದಿದೆ. (ಯಾಜಕಕಾಂಡ 2:1-4; 23:13; ಅರಣ್ಯಕಾಂಡ 15:1-5) ಅದರಲ್ಲಿ ಪ್ರಾಣಿಯಜ್ಞಗಳೂ ಸೇರಿದ್ದವು. ಇವುಗಳ ಕುರಿತು ದೇವರಂದದ್ದು: “ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ [“ನಿಮ್ಮ ಜೀವಗಳಿಗೆ ಪ್ರಾಯಶ್ಚಿತ್ತವನ್ನು ಮಾಡಲು ನಿಮಗಾಗಿ ನಾನೇ ರಕ್ತವನ್ನು ಯಜ್ಞವೇದಿಯ ಮೇಲೆ ಹಾಕಿದ್ದೇನೆ,” NW]. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರವಾಗುತ್ತದಷ್ಟೆ. ಆದದರಿಂದ—ನಿಮ್ಮಲ್ಲಿಯಾಗಲಿ ನಿಮ್ಮ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದೇನೆ.” ಯಾವನಾದರೂ, ಅಂದರೆ ಬೇಟೆಗಾರನೊ ರೈತನೊ ಆಹಾರಕ್ಕಾಗಿ ಒಂದು ಪ್ರಾಣಿಯನ್ನು ಕೊಲ್ಲುವಲ್ಲಿ ಅವನು ಅದರ ರಕ್ತವನ್ನು ನೆಲಕ್ಕೆ ಸುರಿಸಿ ಅದನ್ನು ಮಣ್ಣಿನಿಂದ ಮುಚ್ಚಬೇಕು ಎಂದು ಸಹ ಯೆಹೋವನು ಹೇಳಿದನು. ಭೂಮಿಯು ದೇವರ ಪಾದಪೀಠವಾಗಿದೆ ಮತ್ತು ರಕ್ತವನ್ನು ಭೂಮಿಗೆ ಸುರಿಯುವ ಮೂಲಕ ಆ ವ್ಯಕ್ತಿಯು, ಆ ಜೀವವು ಜೀವದಾತನ ಬಳಿಗೆ ಹಿಂದಿರುಗುತ್ತದೆಂದು ಒಪ್ಪಿಕೊಂಡಂತಾಗುತ್ತಿತ್ತು.—ಯಾಜಕಕಾಂಡ 17:11-13; ಯೆಶಾಯ 66:1.
9 ಆ ನಿಯಮವು ನಮಗೆ ಯಾವುದೇ ಮಹತ್ವವನ್ನು ಹೊಂದಿರದ ಬರಿಯ ಧಾರ್ಮಿಕ ಸಂಸ್ಕಾರವಾಗಿರಲಿಲ್ಲ. ಇಸ್ರಾಯೇಲ್ಯರು ರಕ್ತ ಸೇವನೆಯನ್ನು ಏಕೆ ಮಾಡಬಾರದಾಗಿತ್ತೆಂಬುದನ್ನು ಗಮನಿಸಿದಿರೊ? ದೇವರು ಹೇಳಿದ್ದು: “ಆದದರಿಂದ—ನಿಮ್ಮಲ್ಲಿಯಾಗಲಿ ನಿಮ್ಮ ನಡುವೆ ಇಳುಕೊಂಡಿರುವ ಅನ್ಯದೇಶದವರಲ್ಲಿಯಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದೇನೆ.” ಕಾರಣವೇನು? “ನಿಮ್ಮ ಜೀವಗಳಿಗೆ ಪ್ರಾಯಶ್ಚಿತ್ತವನ್ನು ಮಾಡಲು ನಿಮಗಾಗಿ ನಾನೇ ರಕ್ತವನ್ನು ಯಜ್ಞವೇದಿಯ ಮೇಲೆ ಹಾಕಿದ್ದೇನೆ.” ಮನುಷ್ಯರು ರಕ್ತ ಸೇವನೆಮಾಡಬಾರದೆಂದು ದೇವರು ನೋಹನಿಗೆ ಹೇಳಿದ್ದೇಕೆ ಎಂಬುದರ ಒಳನೋಟವನ್ನು ಇದು ಕೊಡುತ್ತದೆಂಬುದನ್ನು ನೀವು ಗ್ರಹಿಸುತ್ತೀರೋ? ಸೃಷ್ಟಿಕರ್ತನು ರಕ್ತವನ್ನು ಮಹತ್ವಾರ್ಥವುಳ್ಳದ್ದಾಗಿ ದೃಷ್ಟಿಸಲು ಆಯ್ಕೆಮಾಡಿ, ಅನೇಕ ಜೀವಗಳನ್ನು ರಕ್ಷಿಸುವ ಏಕಮಾತ್ರ ವಿಶೇಷ ಉಪಯೋಗಕ್ಕಾಗಿ ಅದನ್ನು ಕಾದಿರಿಸಿದನು. ರಕ್ತವು ಪಾಪಗಳನ್ನು ಮುಚ್ಚಿಹಾಕುವುದರಲ್ಲಿ (ಪ್ರಾಯಶ್ಚಿತ್ತಮಾಡುವುದರಲ್ಲಿ) ಒಂದು ಅತಿ ಮಹತ್ವವುಳ್ಳ ಪಾತ್ರವನ್ನು ವಹಿಸಲಿಕ್ಕಿತ್ತು. ಆದುದರಿಂದ ಧರ್ಮಶಾಸ್ತ್ರಕ್ಕನುಸಾರ ರಕ್ತದ ಏಕಮಾತ್ರ ದೇವಾಧಿಕೃತ ಉಪಯೋಗವು, ಯೆಹೋವನ ಕ್ಷಮಾಪಣೆಯನ್ನು ಯಾಚಿಸುವ ಇಸ್ರಾಯೇಲ್ಯರ ಜೀವಗಳ ಪರವಾಗಿ ಪ್ರಾಯಶ್ಚಿತ್ತಮಾಡಲಿಕ್ಕಾಗಿ ಯಜ್ಞವೇದಿಯ ಮೇಲೆ ಬಳಸುವುದೇ ಆಗಿತ್ತು.
10 ಪ್ರಾಯಶ್ಚಿತ್ತಮಾಡಲಿಕ್ಕೋಸ್ಕರ ರಕ್ತವನ್ನು ಬಳಸುವ ಈ ಪರಿಕಲ್ಪನೆಯು ಕ್ರೈಸ್ತತ್ವದಿಂದ ಭಿನ್ನವಾದದ್ದಾಗಿರುವುದಿಲ್ಲ. ಧರ್ಮಶಾಸ್ತ್ರದ ಈ ದೈವಿಕವಾಗಿ ಏರ್ಪಡಿಸಲಾಗಿದ್ದ ವೈಶಿಷ್ಟ್ಯಕ್ಕೆ ಸೂಚಿಸುತ್ತಾ ಕ್ರೈಸ್ತ ಅಪೊಸ್ತಲ ಪೌಲನು ಬರೆದುದು: “ಧರ್ಮಶಾಸ್ತ್ರದ ಪ್ರಕಾರ ಸ್ವಲ್ಪಕಡಿಮೆ ಎಲ್ಲಾ ವಸ್ತುಗಳು ರಕ್ತದಿಂದಲೇ ಶುದ್ಧೀಕರಿಸಲ್ಪಡುವವು; ರಕ್ತಧಾರೆಯಿಲ್ಲದೆ ಪಾಪಪರಿಹಾರ ಉಂಟಾಗುವದಿಲ್ಲ.” (ಇಬ್ರಿಯ 9:22) ಈ ಅಪೇಕ್ಷಿತ ಯಜ್ಞಗಳು ಇಸ್ರಾಯೇಲ್ಯರನ್ನು ಪರಿಪೂರ್ಣರಾದ ಪಾಪರಹಿತ ಮಾನವರನ್ನಾಗಿ ಮಾಡಲಿಲ್ಲವೆಂಬುದನ್ನು ಪೌಲನು ಸ್ಪಷ್ಟಪಡಿಸಿದನು. ಅವನು ಬರೆದುದು: “ಆ ಯಜ್ಞಗಳಿಂದ ಪ್ರತಿವರುಷದಲ್ಲಿಯೂ ಪಾಪಗಳ ಜ್ಞಾಪಕವಾಗುವದುಂಟು; ಹೋರಿಗಳ ಮತ್ತು ಹೋತಗಳ ರಕ್ತದಿಂದ ಪಾಪಗಳು ಪರಿಹಾರವಾಗುವದು ಅಸಾಧ್ಯವಾಗಿದೆಯಲ್ಲಾ.” (ಇಬ್ರಿಯ 10:1-4) ಹಾಗಿದ್ದರೂ, ಇಂತಹ ಯಜ್ಞಗಳು ಉಪಯುಕ್ತವಾಗಿದ್ದವು. ಅವು ಇಸ್ರಾಯೇಲ್ಯರಿಗೆ, ಅವರು ಪಾಪಿಗಳೆಂದೂ, ಪೂರ್ತಿ ಕ್ಷಮಾಪಣೆಯನ್ನು ಪಡೆಯಲು ಅವುಗಳಿಗಿಂತ ಹೆಚ್ಚಿನ ಯಾವುದೊ ವಿಷಯವು ಅಗತ್ಯವೆಂದೂ ಜ್ಞಾಪಕಹುಟ್ಟಿಸಿದವು. ಹಾಗಾದರೆ ಪ್ರಾಣಿಗಳ ಜೀವಗಳನ್ನು ಪ್ರತಿನಿಧಿಸಿದ ಆ ರಕ್ತವು ಮಾನವ ಪಾಪಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕುವುದು ಅಸಾಧ್ಯವಾಗಿದ್ದರೆ, ಇನ್ನಾವ ಜೀವರಕ್ತವಾದರೂ ಹಾಗೆ ಮಾಡಶಕ್ತವಾಗಿತ್ತೊ?
ಜೀವದಾತನ ಪರಿಹಾರಮಾರ್ಗ
11 ವಾಸ್ತವದಲ್ಲಿ ಧರ್ಮಶಾಸ್ತ್ರವು, ದೇವರ ಚಿತ್ತವನ್ನು ಅತಿ ಹೆಚ್ಚು ಪರಿಣಾಮಕಾರಿಯಾಗಿ ಸಾಧಿಸಬಲ್ಲ ವಿಷಯವೊಂದನ್ನು ಸೂಚಿಸುತ್ತಿತ್ತು. ಪೌಲನು “ಧರ್ಮಶಾಸ್ತ್ರವು ಯಾತಕ್ಕೆ?” ಎಂದು ಕೇಳಿದನು. ನಂತರ ಅವನೇ ಉತ್ತರ ಕೊಟ್ಟದ್ದು: “ವಾಗ್ದಾನದಲ್ಲಿ ಸೂಚಿತನಾದವನು ಹುಟ್ಟಿ ಬರುವತನಕ ದೇವರು ಇಂಥಿಂಥದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೇವದೂತರ ಮುಖಾಂತರ ಒಬ್ಬ ಮಧ್ಯಸ್ಥನ [ಮೋಶೆಯ] ಕೈಯಲ್ಲಿ ಕೊಟ್ಟನು.” (ಗಲಾತ್ಯ 3:19) ಪೌಲನು ಅದೇ ರೀತಿ ಬರೆದುದು: ‘ಧರ್ಮಶಾಸ್ತ್ರವು ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆಯೇ ಹೊರತು ಅವುಗಳ ನಿಜಸ್ವರೂಪವಲ್ಲ.’—ಇಬ್ರಿಯ 10:1.
12 ಸಾರಾಂಶದಲ್ಲಿ ಇವನ್ನು ಜ್ಞಾಪಿಸಿಕೊಳ್ಳಿ. ನೋಹನ ದಿನಗಳಲ್ಲಿ ಮಾನವರು ಜೀವಪೋಷಣೆಗಾಗಿ ಪ್ರಾಣಿಮಾಂಸವನ್ನು ತಿನ್ನಬಹುದಾಗಿತ್ತಾದರೂ ರಕ್ತಸೇವನೆಯನ್ನು ಮಾಡಬಾರದೆಂದು ದೇವರು ನಿಯಮವನ್ನು ವಿಧಿಸಿದನು. ಸಮಯಾನಂತರ, “ರಕ್ತವೇ ಪ್ರಾಣಾಧಾರ” ಎಂದು ದೇವರು ಹೇಳಿದನು. ಹೌದು, ಆತನು ರಕ್ತವು ಜೀವವನ್ನು ಸೂಚಿಸುತ್ತಿರುವಂಥದ್ದಾಗಿ ಪರಿಗಣಿಸಲು ಆಯ್ಕೆಮಾಡಿ ಅಂದದ್ದು: “ನಿಮ್ಮ ಜೀವಗಳಿಗೆ ಪ್ರಾಯಶ್ಚಿತ್ತವನ್ನು ಮಾಡಲು ನಿಮಗಾಗಿ ನಾನೇ ರಕ್ತವನ್ನು ಯಜ್ಞವೇದಿಯ ಮೇಲೆ ಹಾಕಿದ್ದೇನೆ.” ಆದರೂ, ದೇವರ ಉದ್ದೇಶದ ಆಶ್ಚರ್ಯಕರವಾದ ಇನ್ನೂ ಹೆಚ್ಚಿನ ಹೊರಗೆಡಹುವಿಕೆ ಮುಂದೆ ಬರಲಿತ್ತು. ಧರ್ಮಶಾಸ್ತ್ರವು ಮೇಲುಗಳ ಮುನ್ಛಾಯೆಯಾಗಿತ್ತು. ಯಾವ ಮೇಲುಗಳು?
13 ವಾಸ್ತವಿಕತೆಯು ಯೇಸು ಕ್ರಿಸ್ತನ ಮರಣದ ಮೇಲೆ ಕೇಂದ್ರೀಕರಿಸಿತು. ಯೇಸು ಚಿತ್ರಹಿಂಸೆಗೊಳಗಾಗಿ ಶೂಲಕ್ಕೇರಿಸಲ್ಪಟ್ಟನೆಂದು ನಿಮಗೆ ತಿಳಿದದೆ. ಅವನು ಒಬ್ಬ ಪಾತಕಿಯಂತೆ ಸತ್ತನು. ಪೌಲನು ಬರೆದುದು: “ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು. . . . ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮಾಪುರ 5:6, 8) ನಮಗಾಗಿ ಸತ್ತದ್ದರಲ್ಲಿ ಕ್ರಿಸ್ತನು ನಮ್ಮ ಪಾಪಗಳನ್ನು ಮುಚ್ಚಲು ಒಂದು ಈಡನ್ನು ಕೊಟ್ಟನು. ಆ ಈಡೇ ಕ್ರೈಸ್ತ ಸಂದೇಶದ ತಿರುಳು. (ಮತ್ತಾಯ 20:28; ಯೋಹಾನ 3:16; 1 ಕೊರಿಂಥ 15:3; 1 ತಿಮೊಥೆಯ 2:6) ಆದರೆ ಇದಕ್ಕೂ ರಕ್ತ ಮತ್ತು ಜೀವಕ್ಕೂ ಏನು ಸಂಬಂಧ, ಹಾಗೂ ಇದರಲ್ಲಿ ನಿಮ್ಮ ಜೀವ ಒಳಗೊಂಡಿರುವುದು ಹೇಗೆ?
14 ಕೆಲವು ಚರ್ಚುಗಳು ಯೇಸುವಿನ ಮರಣವನ್ನು ಒತ್ತಿಹೇಳುತ್ತವೆ ಮತ್ತು ಅವುಗಳ ಹಿಂಬಾಲಕರು, “ಯೇಸು ನನಗಾಗಿ ಸತ್ತನು” ಎಂಬಂತಹ ಮಾತುಗಳನ್ನಾಡುತ್ತಾರೆ. ಕೆಲವು ಬೈಬಲ್ ಭಾಷಾಂತರಗಳು ಎಫೆಸ 1:7ನ್ನು ಹೇಗೆ ತರ್ಜುಮೆ ಮಾಡಿವೆಯೆಂದು ನೋಡಿರಿ: “ನಮಗೆ ಅವನಲ್ಲಿ ಮತ್ತು ಅವನ ಮರಣದ ಮೂಲಕ ವಿಮೋಚನೆ, ಅಂದರೆ ನಮ್ಮ ಅಪರಾಧಗಳ ತೊಲಗಿಸುವಿಕೆಯಾಗುತ್ತದೆ.” (ದಿ ಅಮೆರಿಕನ್ ಬೈಬಲ್, ಫ್ರ್ಯಾಂಕ್ ಶೈಲ್ ಬ್ಯಾಲಂಟೈನ್ ಅವರಿಂದ, 1902) “ಕ್ರಿಸ್ತನ ಮರಣದ ಮೂಲಕ ನಾವು ಬಿಡುಗಡೆ ಹೊಂದಿದ್ದೇವೆ, ಮತ್ತು ನಮ್ಮ ಪಾಪಗಳು ಕ್ಷಮಿಸಲ್ಪಟ್ಟಿವೆ.” (ಟುಡೇಸ್ ಇಂಗ್ಲಿಷ್ ವರ್ಷನ್, 1966) “ಕ್ರಿಸ್ತನಲ್ಲಿ ಹಾಗೂ ಅವನ ಮತ್ತು ಅವನ ಯಜ್ಞದ ಮೂಲಕ ನಾವು ವಿಮೋಚನೆ ಹೊಂದಿದ್ದೇವೆ, ಪಾಪಗಳ ಕ್ಷಮಾಪಣೆ ಎಂಬ ಅರ್ಥದ ವಿಮೋಚನೆಯನ್ನು ಹೊಂದಿದ್ದೇವೆ.” (ದ ನ್ಯೂ ಟೆಸ್ಟಮೆಂಟ್, ವಿಲ್ಯಮ್ ಬಾರ್ಕ್ಲೇ ಅವರಿಂದ, 1969) “ನಮ್ಮ ಪಾಪಗಳು ಕ್ಷಮಿಸಲ್ಪಟ್ಟದ್ದು ಮತ್ತು ನಾವು ಬಿಡುಗಡೆಯಾಗಿರುವುದು ಕ್ರಿಸ್ತನ ಮರಣದ ಮೂಲಕವೇ.” (ದ ಟ್ರಾನ್ಸ್ಲೇಟರ್ಸ್ ನ್ಯೂ ಟೆಸ್ಟಮೆಂಟ್, 1973) ಯೇಸುವಿನ ಮರಣದ ಮೇಲೆ ಒತ್ತನ್ನು ಹಾಕಿರುವುದನ್ನು ಈ ಭಾಷಾಂತರಗಳಲ್ಲಿ ನೀವು ನೋಡಬಲ್ಲಿರಿ. ‘ಆದರೆ ಯೇಸುವಿನ ಮರಣವು ನಿಜವಾಗಿಯೂ ಮಹತ್ವವುಳ್ಳದ್ದಾಗಿದೆ. ಹಾಗಿರುವಾಗ ಈ ಭಾಷಾಂತರಗಳಲ್ಲಿ ಕೊರತೆಯೇನಿದೆ?’ ಎಂದು ಕೆಲವರು ಕೇಳಬಹುದು.
15 ವಾಸ್ತವವೇನಂದರೆ, ನೀವು ಅಂತಹ ಭಾಷಾಂತರಗಳನ್ನೇ ಅವಲಂಬಿಸಬೇಕಾಗಿದ್ದಲ್ಲಿ, ನೀವು ಒಂದು ಅತೀ ಪ್ರಾಮುಖ್ಯ ವಿಷಯವನ್ನು ಅಲಕ್ಷಿಸಬಹುದು, ಮತ್ತು ಇದು ಬೈಬಲಿನ ಸಂದೇಶದ ನಿಮ್ಮ ತಿಳಿವಳಿಕೆಯನ್ನು ಸೀಮಿತಗೊಳಿಸಬಲ್ಲದು. ಇಂತಹ ಭಾಷಾಂತರಗಳು, ಎಫೆಸ 1:7ರ ಮೂಲಪಾಠವು “ರಕ್ತ”ವೆಂಬ ಅರ್ಥವಿರುವ ಒಂದು ಗ್ರೀಕ್ ಪದವನ್ನು (ಈಮಾ) ಒಳಗೊಂಡಿದೆ ಎಂಬ ನಿಜತ್ವವನ್ನು ಮರೆಮಾಡುತ್ತವೆ. ಆದರೆ ಕನ್ನಡ ಸತ್ಯವೇದದಂತಹ ಅನೇಕ ಬೈಬಲುಗಳು ಈ ವಚನವನ್ನು ಮೂಲಪಾಠಕ್ಕೆ ಹೆಚ್ಚು ನಿಖರವಾಗಿ ಭಾಷಾಂತರಿಸಿವೆ: “ಈತನು ನಮಗೋಸ್ಕರ ತನ್ನ ರಕ್ತವನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೇ.” (ಓರೆ ಅಕ್ಷರಗಳು ನಮ್ಮವು.)
16 “ತನ್ನ ರಕ್ತವನ್ನು” ಎಂಬ ಅನುವಾದದಲ್ಲಿ ಗಮನಾರ್ಹವಾದ ಅರ್ಥವಿದ್ದು, ಅದು ರಕ್ತದ ಸಂಬಂಧದಲ್ಲಿ ಅನೇಕ ವಿಷಯಗಳನ್ನು ನಮ್ಮ ಮನಸ್ಸಿಗೆ ತರಬೇಕು. ಏಕೆಂದರೆ ಮರಣಕ್ಕಿಂತ, ಹೌದು ಪರಿಪೂರ್ಣ ಮಾನವನಾಗಿದ್ದ ಯೇಸುವಿನ ಮರಣಕ್ಕಿಂತಲೂ ಹೆಚ್ಚಿನದ್ದರ ಆವಶ್ಯಕತೆ ಇತ್ತು. ಧರ್ಮಶಾಸ್ತ್ರದಿಂದ ಮುನ್ಸೂಚಿಸಲ್ಪಟ್ಟಿದ್ದನ್ನು, ವಿಶೇಷವಾಗಿ ದೋಷಪರಿಹಾರಕ ದಿನದಿಂದ ಏನು ಮುನ್ಸೂಚಿಸಲ್ಪಟ್ಟಿತ್ತೊ ಅದನ್ನು ಯೇಸು ನೆರವೇರಿಸಿದನು. ಆ ವಿಶೇಷ ದಿನದಂದು, ನಿಗದಿತ ಪ್ರಾಣಿಗಳನ್ನು ಯಜ್ಞಾರ್ಪಿಸಲಾಗುತ್ತಿತ್ತು. ಬಳಿಕ ಮಹಾಯಾಜಕನು ಅವುಗಳ ರಕ್ತದಲ್ಲಿ ಸ್ವಲ್ಪವನ್ನು ಸಾಕ್ಷಿಗುಡಾರ ಅಥವಾ ದೇವಾಲಯದ ಅತಿ ಪರಿಶುದ್ಧ ಸ್ಥಳಕ್ಕೆ ಒಯ್ದು, ಅಲ್ಲಿ ಅದನ್ನು ದೇವರ ಮುಂದೆ, ಆತನ ಸನ್ನಿಧಾನದಲ್ಲೋ ಎಂಬಂತೆ ಅರ್ಪಿಸುತ್ತಿದ್ದನು.—ವಿಮೋಚನಕಾಂಡ 25:22; ಯಾಜಕಕಾಂಡ 16:2-19.
17 ಪೌಲನು ಹೇಳಿದಂತೆ, ದೋಷಪರಿಹಾರಕ ದಿನವು ಯಾವುದರ ಮುನ್ಛಾಯೆಯಾಗಿತ್ತೊ ಅದನ್ನು ಯೇಸು ನೆರವೇರಿಸಿದನು. ಪ್ರಥಮವಾಗಿ, ಇಸ್ರಾಯೇಲಿನಲ್ಲಿ ಮಹಾಯಾಜಕನು ವರುಷಕ್ಕೊಮ್ಮೆ ಮಹಾಪರಿಶುದ್ಧ ಸ್ಥಳವನ್ನು ಪ್ರವೇಶಿಸಿ, ರಕ್ತವನ್ನು “ತನಗೋಸ್ಕರವೂ ಜನರ ತಪ್ಪುಗಳಿಗೋಸ್ಕರವೂ ಸಮರ್ಪಿಸುತ್ತಾನೆ” ಎಂದು ಅವನು ಹೇಳಿದನು. (ಇಬ್ರಿಯ 9:6, 7) ದೋಷಪರಿಹಾರಕ ದಿನದಂದು ಏನು ನಡೆಯುತ್ತಿತ್ತೊ ಅದಕ್ಕೆ ಹೊಂದಿಕೆಯಲ್ಲಿ, ಯೇಸು ಆತ್ಮಜೀವಿಯಾಗಿ ಎಬ್ಬಿಸಲ್ಪಟ್ಟ ಬಳಿಕ ಸ್ವರ್ಗವನ್ನು ಪ್ರವೇಶಿಸಿದನು. ರಕ್ತಮಾಂಸಗಳ ದೇಹವಿಲ್ಲದೆ ಅವನು ಆತ್ಮಜೀವಿಯಾಗಿ “ನಮಗೋಸ್ಕರ . . . ದೇವರ ಸನ್ನಿಧಾನಕ್ಕೆ” ಹೋಗಸಾಧ್ಯವಿತ್ತು. ಅವನು ದೇವರಿಗೆ ಏನನ್ನು ಸಮರ್ಪಿಸಿದನು? ಭೌತಿಕವಾದ ಏನನ್ನೋ ಸಮರ್ಪಿಸದೆ, ಅತಿ ಅರ್ಥಭರಿತವಾದದ್ದನ್ನು ಸಮರ್ಪಿಸಿದನು. ಪೌಲನು ಮುಂದುವರಿಸುತ್ತ ಹೇಳಿದ್ದು: “ಕ್ರಿಸ್ತನು . . . ಮಹಾಯಾಜಕನಾಗಿ ಬಂದು . . . ಹೋತಗಳ ಮತ್ತು ಹೋರಿಕರಗಳ ರಕ್ತವನ್ನು ತೆಗೆದುಕೊಳ್ಳದೆ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ದೇವರ ಸನ್ನಿಧಾನಕ್ಕೆ ಪ್ರವೇಶಿಸಿದನು. ಹೋತಹೋರಿಗಳ ರಕ್ತವೂ . . . ಪವಿತ್ರ ಮಾಡುವದಾದರೆ ನಿತ್ಯಾತ್ಮನಿಂದ ತನ್ನನ್ನು ತಾನೇ ನಿರ್ದೋಷಿಯನ್ನಾಗಿ ದೇವರಿಗೆ ಸಮರ್ಪಿಸಿಕೊಂಡ ಕ್ರಿಸ್ತನ ರಕ್ತವು ಎಷ್ಟೋ ಹೆಚ್ಚಾಗಿ ನಮ್ಮನ್ನು ನಿರ್ಜೀವಕರ್ಮಗಳಿಂದ ಬಿಡಿಸಿ ನಾವು ಜೀವವುಳ್ಳ ದೇವರನ್ನು ಆರಾಧಿಸುವವರಾಗುವಂತೆ ನಮ್ಮ ಮನಸ್ಸನ್ನು [“ಮನಸ್ಸಾಕ್ಷಿಗಳನ್ನು,” NW] ಶುದ್ಧೀಕರಿಸುವದಲ್ಲವೇ.” ಹೌದು, ಯೇಸು ತನ್ನ ಜೀವರಕ್ತದ ಮೌಲ್ಯವನ್ನು ದೇವರಿಗೆ ಸಮರ್ಪಿಸಿದನು.—ಇಬ್ರಿಯ 9:11-14, 24, 28; 10:11-14; 1 ಪೇತ್ರ 3:18.
18 ಈ ದೈವಿಕ ಸತ್ಯವು ರಕ್ತದ ಕುರಿತು ಬೈಬಲ್ ಏನು ಹೇಳುತ್ತದೊ ಅದರ ಆಶ್ಚರ್ಯಕರವಾದ ವ್ಯಾಪ್ತಿಯನ್ನು, ಅಂದರೆ ಅದರ ಬಗ್ಗೆ ದೇವರಿಗೆ ಏಕೆ ಆ ದೃಷ್ಟಿಕೋನವಿದೆ, ಅದರ ಬಗ್ಗೆ ನಮ್ಮ ದೃಷ್ಟಿಕೋನವೇನಾಗಿರಬೇಕು, ಮತ್ತು ರಕ್ತೋಪಯೋಗದ ವಿಷಯದಲ್ಲಿ ದೇವರು ಹಾಕಿರುವ ನಿರ್ಬಂಧಗಳನ್ನು ನಾವು ಏಕೆ ಗೌರವಿಸಬೇಕೆಂಬುದನ್ನು ಗ್ರಹಿಸಿಕೊಳ್ಳುವಂತೆ ಮಾಡುತ್ತದೆ. ಕ್ರೈಸ್ತ ಗ್ರೀಕ್ ಶಾಸ್ತ್ರದ ಪುಸ್ತಕಗಳನ್ನು ಓದುವಾಗ ಕ್ರಿಸ್ತನ ರಕ್ತಕ್ಕೆ ಅನೇಕ ಸಲ ಸೂಚಿಸಲ್ಪಟ್ಟಿರುವುದನ್ನು ನೀವು ನೋಡುವಿರಿ. (ಚೌಕವನ್ನು ನೋಡಿ.) ಪ್ರತಿಯೊಬ್ಬ ಕ್ರೈಸ್ತನು, ‘[ಕ್ರಿಸ್ತನ] ರಕ್ತದ’ ಮೇಲೆ ನಂಬಿಕೆಯನ್ನಿಡಬೇಕೆಂದು ಇವು ಸ್ಪಷ್ಟಪಡಿಸುತ್ತವೆ. (ರೋಮಾಪುರ 3:25) ನಾವು ಕ್ಷಮಾಪಣೆಯನ್ನು ಪಡೆಯುವುದು ಮತ್ತು ದೇವರೊಂದಿಗೆ ಸಮಾಧಾನವನ್ನು ಹೊಂದುವುದು “ಆತನು [ಯೇಸು] ಸುರಿಸಿದ ರಕ್ತದಿಂದ” ಮಾತ್ರ ಸಾಧ್ಯವಾಗುತ್ತದೆ. (ಕೊಲೊಸ್ಸೆ 1:20, ಓರೆ ಅಕ್ಷರಗಳು ನಮ್ಮವು.) ಯೇಸು, ತನ್ನೊಂದಿಗೆ ಸ್ವರ್ಗದಲ್ಲಿ ಆಳಲು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡವರ ವಿಷಯದಲ್ಲಿ ಇದು ನಿಶ್ಚಯವಾಗಿಯೂ ಸತ್ಯವಾಗಿದೆ. (ಲೂಕ 22:20, 28-30; 1 ಕೊರಿಂಥ 11:25; ಇಬ್ರಿಯ 13:20) ಇಂದಿನ “ಮಹಾ ಸಮೂಹ”ದವರ ವಿಷಯದಲ್ಲಿ ಅಂದರೆ ಬರಲಿರುವ “ಮಹಾ ಸಂಕಟ”ವನ್ನು (NW) ಪಾರಾಗಿ ಭೂಪರದೈಸಿನಲ್ಲಿ ನಿತ್ಯಜೀವವನ್ನು ಪಡೆಯುವವರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಅವರು ಸಾಂಕೇತಿಕವಾಗಿ, “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ.”—ಪ್ರಕಟನೆ 7:9, 14, ಓರೆ ಅಕ್ಷರಗಳು ನಮ್ಮವು.
19 ದೇವರ ದೃಷ್ಟಿಯಲ್ಲಿ ರಕ್ತಕ್ಕೆ ವಿಶೇಷವಾದ ಅರ್ಥವಿದೆಯೆಂಬುದು ಸುವ್ಯಕ್ತ. ನಮ್ಮ ದೃಷ್ಟಿಯಲ್ಲಿಯೂ ಹಾಗೆಯೇ ಇರಬೇಕು. ಜೀವದ ಕುರಿತು ಆಸಕ್ತನಾಗಿರುವ ಸೃಷ್ಟಿಕರ್ತನಿಗೆ, ಮನುಷ್ಯರು ರಕ್ತದ ವಿಷಯದಲ್ಲಿ ಏನು ಮಾಡಬೇಕು ಎಂಬದನ್ನು ನಿರ್ಬಂಧಿಸುವ ಹಕ್ಕಿದೆ. ನಮ್ಮ ಜೀವದ ವಿಷಯದಲ್ಲಿಯೂ ಆತನಿಗಿರುವ ಆಸಕ್ತಿಯಿಂದಾಗಿ ಆತನು ರಕ್ತವನ್ನು ಒಂದು ಅತಿ ಪ್ರಾಮುಖ್ಯ ವಿಧದಲ್ಲಿ ಉಪಯೋಗಿಸಲಿಕ್ಕಾಗಿ ಕಾದಿರಿಸಲು ನಿಶ್ಚಯಿಸಿದನು. ಇದು ನಿತ್ಯಜೀವದ ಸಾಧ್ಯತೆಗಿದ್ದ ಏಕಮಾತ್ರ ವಿಧವಾಗಿತ್ತು. ಆ ವಿಧದಲ್ಲಿ ಯೇಸುವಿನ ಅಮೂಲ್ಯ ರಕ್ತವು ಒಳಗೂಡಿತ್ತು. ಯೆಹೋವ ದೇವರು ನಮ್ಮ ಪ್ರಯೋಜನಾರ್ಥವಾಗಿ ರಕ್ತವನ್ನು, ಅಂದರೆ ಯೇಸುವಿನ ರಕ್ತವನ್ನು ಈ ಜೀವರಕ್ಷಕ ವಿಧದಲ್ಲಿ ಉಪಯೋಗಿಸಿದ್ದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬೇಕು! ಮತ್ತು ತನ್ನ ರಕ್ತವನ್ನು ನಮಗಾಗಿ ಯಜ್ಞವಾಗಿ ಸುರಿಸಿದ ಯೇಸುವಿಗೂ ನಾವೆಷ್ಟು ಆಭಾರಿಗಳಾಗಿರಬೇಕು! ಹೌದು, ನಾವು ಅಪೊಸ್ತಲ ಯೋಹಾನನ ಈ ಭಾವನೆಗಳನ್ನು ನಿಜವಾಗಿಯೂ ಗ್ರಹಿಸಬಲ್ಲೆವು: “ನಮ್ಮನ್ನು ಪ್ರೀತಿಸುವವನೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ ನಮ್ಮನ್ನು ರಾಜ್ಯವನ್ನಾಗಿಯೂ ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದವನೂ ಆಗಿರುವಾತನಿಗೆ ಯುಗಯುಗಾಂತರಗಳಲ್ಲಿಯೂ ಘನ ಮಹತ್ವಗಳಿರಲಿ. ಆಮೆನ್.”—ಪ್ರಕಟನೆ 1:5, 6.
20 ನಮ್ಮ ಸರ್ವ ವಿವೇಕಿಯಾದ ದೇವರೂ ಜೀವದಾತನೂ ಆಗಿರುವವನ ಮನಸ್ಸಿನಲ್ಲಿ ಈ ಜೀವರಕ್ಷಕ ಪಾತ್ರವು ಬಹಳ ಕಾಲದಿಂದ ಇತ್ತು. ಹಾಗಾದರೆ, ನಾವು ಹೀಗೆ ಪ್ರಶ್ನಿಸಬಹುದು: ‘ಇದು ನಮ್ಮ ನಿರ್ಣಯಗಳ ಮತ್ತು ಕ್ರಿಯೆಗಳ ಮೇಲೆ ಯಾವ ಪರಿಣಾಮವನ್ನು ಬೀರಬೇಕು?’ ಈ ಪ್ರಶ್ನೆಯನ್ನು ಮುಂದಿನ ಲೇಖನವು ಚರ್ಚಿಸುವುದು.
ಹೇಗೆ ಉತ್ತರ ಕೊಡುವಿರಿ?
• ಹೇಬೆಲ ಮತ್ತು ನೋಹನ ವೃತ್ತಾಂತಗಳಿಂದ, ರಕ್ತದ ಕುರಿತಾದ ದೇವರ ದೃಷ್ಟಿಕೋನದ ಬಗ್ಗೆ ನಾವೇನು ಕಲಿಯಬಲ್ಲೆವು?
• ರಕ್ತೋಪಯೋಗದ ಬಗ್ಗೆ ದೇವರು ಧರ್ಮಶಾಸ್ತ್ರದಲ್ಲಿ ಯಾವ ನಿರ್ಬಂಧವನ್ನು ಹಾಕಿದನು, ಮತ್ತು ಏಕೆ?
• ದೋಷಪರಿಹಾರಕ ದಿನವು ಯಾವುದರ ಮುನ್ಛಾಯೆಯಾಗಿತ್ತೊ ಅದನ್ನು ಯೇಸು ಹೇಗೆ ನೆರವೇರಿಸಿದನು?
• ಯೇಸುವಿನ ರಕ್ತವು ನಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು?
[ಅಧ್ಯಯನ ಪ್ರಶ್ನೆಗಳು]
1. ನಮಗೆ ನಮ್ಮ ಜೀವವು ಅತ್ಯಮೂಲ್ಯವೆಂಬುದಕ್ಕೆ ಯಾವ ಸಾಕ್ಷ್ಯವಿದೆ?
2, 3. (ಎ) ಯಾವ ಕರ್ತವ್ಯವನ್ನು ಜ್ಞಾನೋಕ್ತಿ 23:22 ಎತ್ತಿತೋರಿಸುತ್ತದೆ? (ಬಿ) ಜ್ಞಾನೋಕ್ತಿ 23:22ರಲ್ಲಿ ಹೇಳಿರುವ ಕರ್ತವ್ಯದಲ್ಲಿ ದೇವರು ಸೇರಿರುವುದು ಹೇಗೆ?
4. ಮಾನವ ಇತಿಹಾಸದ ಆದಿಭಾಗದಲ್ಲಿ, ಜೀವಕ್ಕೆ ಗೌರವವು ಒಂದು ಪ್ರಮುಖ ವಿಷಯವಾದದ್ದು ಹೇಗೆ?
5. (ಎ) ನೋಹನ ದಿನಗಳಲ್ಲಿ ದೇವರು ಯಾವ ನಿಷೇಧವನ್ನು ಹಾಕಿದನು, ಮತ್ತು ಅದು ಯಾರಿಗೆ ಅನ್ವಯಿಸಿತು? (ಬಿ) ಈ ನಿಷೇಧವು ಯಾವ ಅರ್ಥದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿತ್ತು?
6. ದೇವರು ಜೀವದ ಮೌಲ್ಯದ ಕುರಿತಾದ ತನ್ನ ದೃಷ್ಟಿಕೋನವನ್ನು ನೋಹನ ಮೂಲಕ ಒತ್ತಿಹೇಳಿದ್ದು ಹೇಗೆ?
7. ರಕ್ತದ ವಿಷಯದಲ್ಲಿ ದೇವರು ನೋಹನಿಗೆ ಮಾಡಿದ ಘೋಷಣೆಯಲ್ಲಿ ನಾವೇಕೆ ಆಸಕ್ತರಾಗಿರಬೇಕು?
8. ಧರ್ಮಶಾಸ್ತ್ರದಲ್ಲಿ ರಕ್ತದ ಉಪಯೋಗದ ಬಗ್ಗೆ ಯೆಹೋವನು ಯಾವ ನಿರ್ಬಂಧವನ್ನು ಹಾಕಿದನು?
9. ಧರ್ಮಶಾಸ್ತ್ರದಲ್ಲಿ ಸೂಚಿಸಿರುವ ಏಕಮಾತ್ರ ರಕ್ತೋಪಯೋಗ ಯಾವುದಾಗಿತ್ತು, ಮತ್ತು ಇದರ ಉದ್ದೇಶವೇನಾಗಿತ್ತು?
10. ಪ್ರಾಣಿರಕ್ತವು ಪೂರ್ಣ ಕ್ಷಮಾಪಣೆಗೆ ಏಕೆ ನಡಿಸಸಾಧ್ಯವಿರಲಿಲ್ಲ, ಆದರೆ ಧರ್ಮಶಾಸ್ತ್ರದಲ್ಲಿನ ಯಜ್ಞಗಳು ಯಾವ ಮರುಜ್ಞಾಪನವನ್ನು ಕೊಟ್ಟವು?
11. ಪ್ರಾಣಿರಕ್ತ ಯಜ್ಞಗಳು ಇನ್ನಾವುದನ್ನೊ ಸೂಚಿಸಿದವೆಂದು ನಮಗೆ ಹೇಗೆ ಗೊತ್ತು?
12. ರಕ್ತದ ಬಗ್ಗೆ ದೇವರ ಉದ್ದೇಶದ ಹೊರಗೆಡಹುವಿಕೆಯನ್ನು ನಾವು ಹೇಗೆ ಗ್ರಹಿಸಬಲ್ಲೆವು?
13. ಯೇಸುವಿನ ಮರಣವು ಪ್ರಾಮುಖ್ಯವಾಗಿತ್ತೇಕೆ?
14, 15. (ಎ) ಕೆಲವು ಭಾಷಾಂತರಗಳಲ್ಲಿ ಎಫೆಸ 1:7 ಯೇಸುವಿನ ಮರಣದ ಮೇಲೆ ಒತ್ತನ್ನು ಹಾಕುವುದು ಹೇಗೆ? (ಬಿ) ಹಾಗೆ ಮಾಡುವಾಗ ಎಫೆಸ 1:7ರಲ್ಲಿರುವ ಯಾವ ನಿಜತ್ವವನ್ನು ಅಲಕ್ಷ್ಯಮಾಡುವ ಸಾಧ್ಯತೆ ಇದೆ?
16. “ತನ್ನ ರಕ್ತವನ್ನು” ಎಂಬ ಅನುವಾದವು ನಮ್ಮ ಮನಸ್ಸಿಗೆ ಯಾವ ವಿಷಯವನ್ನು ತರಬೇಕು?
17. ದೋಷಪರಿಹಾರಕ ದಿನವು ಯಾವುದರ ಮುನ್ಛಾಯೆಯಾಗಿತ್ತೊ ಅದನ್ನು ಯೇಸು ಹೇಗೆ ನೆರವೇರಿಸಿದನು?
18. ರಕ್ತದ ಕುರಿತಾದ ಬೈಬಲ್ ಹೇಳಿಕೆಗಳು ಇಂದು ಕ್ರೈಸ್ತರಿಗೆ ಏಕೆ ಮಹತ್ವದ್ದಾಗಿರಬೇಕು?
19, 20. (ಎ) ರಕ್ತದ ಉಪಯೋಗವನ್ನು ನಿರ್ಬಂಧಿಸಲು ದೇವರು ಆರಿಸಿಕೊಂಡದ್ದೇಕೆ, ಮತ್ತು ಅದರ ಕುರಿತು ನಮಗೆ ಹೇಗನಿಸಬೇಕು? (ಬಿ) ನಾವು ಏನನ್ನು ತಿಳಿಯಲು ಆಸಕ್ತರಾಗಿರಬೇಕು?
[ಪುಟ 18ರಲ್ಲಿರುವ ಚೌಕ]
ಯಾರ ರಕ್ತವು ಜೀವಗಳನ್ನು ರಕ್ಷಿಸುತ್ತದೆ?
“ದೇವರು ಸ್ವ [ಮಗನ] ರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸುವದಕ್ಕಾಗಿ ಪವಿತ್ರಾತ್ಮನು ನಿಮ್ಮನ್ನೇ ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿರುವದರಿಂದ ನಿಮ್ಮ ವಿಷಯದಲ್ಲಿಯೂ ಎಲ್ಲಾ ಹಿಂಡಿನ ವಿಷಯದಲ್ಲಿಯೂ ಎಚ್ಚರಿಕೆಯಾಗಿರಿ.”—ಅ. ಕೃತ್ಯಗಳು 20:28.
“ಈಗ ನಾವು ಆತನ ರಕ್ತದಿಂದ ನೀತಿವಂತರಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವದು ಮತ್ತೂ ನಿಶ್ಚಯವಲ್ಲವೇ.”—ರೋಮಾಪುರ 5:9.
“ಈ ಲೋಕದಲ್ಲಿ ಯಾವ ನಿರೀಕ್ಷೆಯಿಲ್ಲದವರೂ ದೇವರನ್ನರಿಯದವರೂ ಆಗಿದ್ದೀರೆಂದು ಜ್ಞಾಪಕಮಾಡಿಕೊಳ್ಳಿರಿ. ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ.”—ಎಫೆಸ 2:12, 13.
“ತಂದೆಯಾದ ದೇವರು ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ ಆತನು ಶಿಲುಬೆಯ [“ಯಾತನಾ ಕಂಬದ,” NW] ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು.”—ಕೊಲೊಸ್ಸೆ 1:19, 20.
“ಹೀಗಿರುವಲ್ಲಿ ಸಹೋದರರೇ, . . . ಆತನ ರಕ್ತದ ಮೂಲಕ ಆತನ ಶರೀರವೆಂಬ ತೆರೆಯ ಮುಖಾಂತರ ದೇವರ ಸಮಕ್ಷಮದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು.”—ಇಬ್ರಿಯ 10:19.
“ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು . . . ನಶಿಸಿಹೋಗುವ ವಸ್ತುಗಳಿಂದಲ್ಲ. ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ.”—1 ಪೇತ್ರ 1:18, 19.
“ಆತನು ಬೆಳಕಿನಲ್ಲಿರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ, ಮತ್ತು ಆತನ ಮಗನಾದ ಯೇಸುವಿನ ರಕ್ತವು ಸಕಲಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿಮಾಡುತ್ತದೆ.”—1 ಯೋಹಾನ 1:7.
“ನೀನು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವದಕ್ಕೆ ಯೋಗ್ಯನೇ; ನೀನು ಯಜ್ಞಾರ್ಪಿತನಾಗಿ ನಿನ್ನ ರಕ್ತದಿಂದ ಸಕಲ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ.”—ಪ್ರಕಟನೆ 5:9.
“ನಮ್ಮ ಸಹೋದರರ ಮೇಲೆ . . . ದೂರು ಹೇಳಿದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ. ಅವರು . . . ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು.”—ಪ್ರಕಟನೆ 12:10, 11.
[ಪುಟ 16ರಲ್ಲಿರುವ ಚಿತ್ರ]
ರಕ್ತವು ಪಾಪಗಳ ಕ್ಷಮೆಯಲ್ಲಿ ಒಂದು ಪಾತ್ರವನ್ನು ವಹಿಸಬಲ್ಲದೆಂದು ದೇವರು ಧರ್ಮಶಾಸ್ತ್ರದ ಮೂಲಕ ವ್ಯಕ್ತಪಡಿಸಿದನು
[ಪುಟ 17ರಲ್ಲಿರುವ ಚಿತ್ರ]
ಯೇಸುವಿನ ರಕ್ತದ ಮುಖೇನ ಅನೇಕ ಜೀವಗಳ ರಕ್ಷಣೆ ಸಾಧ್ಯ