ಜಗತ್ತನ್ನೇ ಬದಲಾಯಿಸಿದ ಒಂದು ಬೈಬಲ್ ಭಾಷಾಂತರ
ದೇವರ ಪ್ರವಾದಿಯಾದ ಮೋಶೆಯು ಸುಮಾರು 3,500 ವರ್ಷಗಳ ಹಿಂದೆ ಬೈಬಲನ್ನು ಬರೆಯಲು ಆರಂಭಿಸಿದಾಗ, ಕೇವಲ ಒಂದು ಚಿಕ್ಕ ಜನಾಂಗವು ಅದನ್ನು ಓದಸಾಧ್ಯವಿತ್ತು. (ಧರ್ಮೋಪದೇಶಕಾಂಡ 7:7) ಯಾಕಂದರೆ, ಶಾಸ್ತ್ರಗಳು ಆ ಜನಾಂಗದ ಮೂಲ ಭಾಷೆಯಾದ ಹೀಬ್ರೂವಿನಲ್ಲಿ ಮಾತ್ರ ಲಭ್ಯವಿದ್ದವು. ಆದರೆ ಇದು ಸಮಯಾನಂತರ ಬದಲಾಗಲಿತ್ತು.
ಶತಮಾನಗಳಾದ್ಯಂತ ಬೈಬಲಿನ ಸಂದೇಶ ಮತ್ತು ಅದರ ಸಕಾರಾತ್ಮಕ ಪ್ರಭಾವದ ಹಬ್ಬುವಿಕೆಗೆ ಒಂದು ದೊಡ್ಡ ಕಾರಣವು, ಅದರ ಪ್ರಪ್ರಥಮ ಭಾಷಾಂತರವಾದ ಸೆಪ್ಟುಅಜಿಂಟ್ ಆಗಿದೆ. ಅದನ್ನು ಏಕೆ ರಚಿಸಲಾಯಿತು? ಮತ್ತು ಇದು ಜಗತ್ತನ್ನೇ ಬದಲಾಯಿಸಿದ ಒಂದು ಬೈಬಲ್ ಆಗಿತ್ತೆಂದು ಯೋಗ್ಯವಾಗಿ ಹೇಳಸಾಧ್ಯವಿದೆಯೊ?
ಒಂದು ಪ್ರೇರಿತ ಭಾಷಾಂತರವೊ?
ಸಾ.ಶ.ಪೂ. ಏಳು ಮತ್ತು ಆರನೆಯ ಶತಮಾನಗಳ ಸಮಯದಲ್ಲಿ ಬಾಬೆಲಿನಲ್ಲಿನ ಪರದೇಶವಾಸದ ನಂತರ, ಅನೇಕ ಯೆಹೂದ್ಯರು ಪ್ರಾಚೀನ ಇಸ್ರಾಯೇಲ್ ಮತ್ತು ಯೆಹೂದ ದೇಶಕ್ಕೆ ಹಿಂದಿರುಗಲಿಲ್ಲ. ಪರದೇಶವಾಸದ ಸಮಯದಲ್ಲಿ ಜನಿಸಿದಂತಹ ಯೆಹೂದ್ಯರಿಗೆ, ಹೀಬ್ರೂ ಭಾಷೆಯು ದ್ವಿತೀಯ ಭಾಷೆಯಾಗಿ ಪರಿಣಮಿಸಿತು. ಸಾ.ಶ.ಪೂ. ಮೂರನೆಯ ಶತಮಾನದೊಳಗೆ, ಗ್ರೀಕ್ ಸಾಮ್ರಾಜ್ಯದ ಒಂದು ಪ್ರಧಾನ ಸಾಂಸ್ಕೃತಿಕ ಕೇಂದ್ರವಾಗಿದ್ದ ಐಗುಪ್ತದ ಅಲೆಕ್ಸಾಂಡ್ರಿಯಾದಲ್ಲಿ, ಒಂದು ಯೆಹೂದಿ ಸಮುದಾಯವಿತ್ತು. ಈ ಯೆಹೂದ್ಯರು, ಪವಿತ್ರ ಶಾಸ್ತ್ರಗಳನ್ನು, ಆ ಸಮಯದಲ್ಲಿ ತಮ್ಮ ಮಾತೃಭಾಷೆಯಾದ ಗ್ರೀಕ್ ಭಾಷೆಗೆ ಭಾಷಾಂತರಿಸುವ ಮಹತ್ವವನ್ನು ಗ್ರಹಿಸಿದರು.
ಆ ಸಮಯದ ವರೆಗೆ, ಬೈಬಲಿನ ಪ್ರೇರಿತ ಸಂದೇಶವು ಹೀಬ್ರು ಭಾಷೆಯಲ್ಲಿ, ಮತ್ತು ಇತರ ಚಿಕ್ಕಪುಟ್ಟ ಭಾಗಗಳು, ನಿಕಟವಾಗಿ ಸಂಬಂಧಿಸಲ್ಪಟ್ಟಿದ್ದ ಅರೇಮೀಕ್ ಭಾಷೆಯಲ್ಲಿ ದಾಖಲಿಸಲ್ಪಟ್ಟಿದ್ದವು. ದೇವರ ವಾಕ್ಯವನ್ನು ಇನ್ನೊಂದು ಭಾಷೆಗೆ ಭಾಷಾಂತರಿಸುವುದು, ದೈವಿಕ ಪ್ರೇರಣೆಯ ಪ್ರಬಲವಾದ ಪರಿಣಾಮಗಳನ್ನು ಕುಂದಿಸುತ್ತಾ, ಪ್ರಾಯಶಃ ತಪ್ಪಾದ ಅರ್ಥವಿವರಣೆಗಳಿಗೂ ನಡಿಸುವುದೊ? ಯಾರಿಗೆ ಪ್ರೇರಿತ ವಾಕ್ಯವು ವಹಿಸಲ್ಪಟ್ಟಿತೊ ಆ ಯೆಹೂದ್ಯರು, ಭಾಷಾಂತರದ ಮೂಲಕ ಆ ಸಂದೇಶವನ್ನು ತಪ್ಪಾಗಿ ವಿವರಿಸುವ ಅಪಾಯವನ್ನು ಎದುರಿಸಲು ತಯಾರಿದ್ದರೊ?—ಕೀರ್ತನೆ 147:19, 20; ರೋಮಾಪುರ 3:1, 2.
ಈ ಸೂಕ್ಷ್ಮ ವಿವಾದಗಳು ಆತಂಕವನ್ನುಂಟುಮಾಡಿದವು. ಆದರೆ ಕೊನೆಯಲ್ಲಿ, ಯೆಹೂದ್ಯರು ಇನ್ನು ಮುಂದೆ ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ಶಕ್ತರಾಗಿರದೆ ಇರುವರು ಎಂಬ ಚಿಂತೆಯು, ಬೇರೆಲ್ಲ ವಿಷಯಗಳಿಗಿಂತ ಹೆಚ್ಚು ಪ್ರಧಾನವಾಯಿತು. ಮೋಶೆಯು ಬರೆದಂತಹ ಬೈಬಲಿನ ಪ್ರಥಮ ಐದು ಪುಸ್ತಕಗಳನ್ನು, ಅಂದರೆ ಟೊರಾದ ಗ್ರೀಕ್ ಭಾಷಾಂತರವನ್ನು ಮಾಡಲು ಒಂದು ನಿರ್ಣಯವನ್ನು ಮಾಡಲಾಯಿತು. ವಾಸ್ತವವಾದ ಭಾಷಾಂತರ ಕಾರ್ಯವಿಧಾನವು ಹೇಗಿತ್ತೆಂಬುದು ಅಸ್ಪಷ್ಟವಾಗಿದೆ. ಆರಿಸ್ಟಿಸ್ನ ಪತ್ರಕ್ಕನುಸಾರ ಐಗುಪ್ತದ ರಾಜನಾದ ಟಾಲಮಿ II (ಸಾ.ಶ.ಪೂ. 285-246) ತನ್ನ ರಾಜಮನೆತನದ ಗ್ರಂಥಾಲಯಕ್ಕಾಗಿ, ಗ್ರೀಕ್ ಭಾಷೆಗೆ ಭಾಷಾಂತರಿಸಲ್ಪಟ್ಟ ಪೆಂಟಟ್ಯೂಕ್ನ (ಅಥವಾ, ಟೊರಾ) ಒಂದು ಪ್ರತಿಯನ್ನು ಬಯಸಿದನು. ಈ ಕೆಲಸವನ್ನು ಅವನು 72 ಮಂದಿ ಯೆಹೂದಿ ವಿದ್ವಾಂಸರಿಗೆ ಒಪ್ಪಿಸಿದನು. ಇವರು ಇಸ್ರಾಯೇಲ್ನಿಂದ ಐಗುಪ್ತಕ್ಕೆ ಬಂದು, 72 ದಿನಗಳಲ್ಲಿ ಈ ಭಾಷಾಂತರವನ್ನು ಪೂರ್ಣಗೊಳಿಸಿದರು. ಅದನ್ನು ತದನಂತರ ಯೆಹೂದಿ ಸಮುದಾಯಕ್ಕೆ ಓದಿಹೇಳಲಾಯಿತು ಮತ್ತು ಅವರು ಅದು ಸೊಗಸಾದದ್ದೂ ನಿಷ್ಕೃಷ್ಟವೂ ಆಗಿದೆಯೆಂದು ಘೋಷಿಸಿದರು. ಈ ವೃತ್ತಾಂತಕ್ಕೆ ತದನಂತರ ಕೂಡಿಸಲ್ಪಟ್ಟ ಸ್ವಾರಸ್ಯಗಳು, ಪ್ರತಿಯೊಬ್ಬ ಭಾಷಾಂತರಕಾರನನ್ನು ಒಂದು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಯಿತೆಂದೂ, ಆದರೂ ಅವರ ಭಾಷಾಂತರಗಳ ಪ್ರತಿಯೊಂದೂ ಅಕ್ಷರವು ಹೋಲುತ್ತಿದ್ದವೆಂದೂ ವಾದಿಸಿದವು. 72 ಭಾಷಾಂತರಕಾರರ ಕುರಿತ ಈ ಅಭಿಪ್ರಾಯದಿಂದಾಗಿ, ಈ ಗ್ರೀಕ್ ಬೈಬಲ್ ಭಾಷಂತರವು, ಸೆಪ್ಟ್ಯುಅಜಿಂಟ್ ಎಂದು ಪ್ರಸಿದ್ಧವಾಯಿತು. ಇದು “ಎಪ್ಪತ್ತು” ಎಂಬ ಅರ್ಥವುಳ್ಳ ಒಂದು ಲ್ಯಾಟಿನ್ ಪದದ ಮೇಲೆ ಆಧರಿತವಾಗಿದೆ.
ಆರಿಸ್ಟಿಸ್ನ ಪತ್ರ ಒಂದು ಸಂಶಯಪ್ರಮಾಣದ ಬರಹವಾಗಿದೆಯೆಂದು ಹೆಚ್ಚಿನ ಪ್ರಚಲಿತ ದಿನದ ವಿದ್ವಾಂಸರು ಒಪ್ಪುತ್ತಾರೆ. ಭಾಷಾಂತರವನ್ನು ಮಾಡಲಿಕ್ಕಾಗಿ ಆರಂಭದ ಹೆಜ್ಜೆಯನ್ನು, ಟಾಲಮಿ IIನ್ನು ಅಲ್ಲ, ಬದಲಾಗಿ ಅಲೆಕ್ಸಾಂಡ್ರಿಯದ ಯೆಹೂದಿ ಸಮುದಾಯದ ಮುಖಂಡರು ತೆಗೆದುಕೊಂಡರು ಎಂದು ಸಹ ಅವರು ನಂಬುತ್ತಾರೆ. ಆದರೆ, ಸೆಪ್ಟ್ಯುಅಜಿಂಟ್ ಮೂಲ ಶಾಸ್ತ್ರಗಳಷ್ಟೇ ಪ್ರೇರಿತವಾಗಿತ್ತು ಎಂದು ಪ್ರಥಮ ಶತಮಾನದ ಯೆಹೂದ್ಯರ ನಡುವೆ ಇದ್ದ ಸಾಮಾನ್ಯ ನಂಬಿಕೆಯನ್ನು, ಅಲೆಕ್ಸಾಂಡ್ರಿಯದ ಯೆಹೂದಿ ತತ್ವಜ್ಞಾನಿ ಫಿಲೊ ಮತ್ತು ಯೆಹೂದಿ ಇತಿಹಾಸಕಾರ ಯೋಸೀಫಸ್ನ ಬರಹಗಳು ಹಾಗೂ ಟ್ಯಾಲ್ಮಡ್ ತೋರಿಸುತ್ತದೆ. ಅಂತಹ ನಂಬಿಕೆಗಳು, ಲೋಕವ್ಯಾಪಕವಾಗಿರುವ ಯೆಹೂದಿ ಸಮುದಾಯಕ್ಕೆ, ಸೆಪ್ಟ್ಯುಅಜಿಂಟ್ ಅನ್ನು ಸ್ವೀಕಾರಾರ್ಹಗೊಳಿಸಲಿಕ್ಕಾಗಿ ಮಾಡಲ್ಪಟ್ಟ ಪ್ರಯತ್ನದಿಂದಾಗಿದ್ದವು ಎಂಬುದು ನಿಸ್ಸಂದೇಹ.
ಆರಂಭದ ಭಾಷಾಂತರದಲ್ಲಿ, ಸೆಪ್ಟ್ಯುಅಜಿಂಟ್ನಲ್ಲಿ ಮೋಶೆಯ ಐದು ಪುಸ್ತಕಗಳು ಮಾತ್ರ ಸೇರಿದ್ದವು. ಆದರೆ ಕಟ್ಟಕಡೆಗೆ ಆ ಹೆಸರನ್ನು ಗ್ರೀಕ್ ಭಾಷೆಗೆ ಭಾಷಾಂತರಿಸಲ್ಪಟ್ಟಿರುವ ಎಲ್ಲ ಹೀಬ್ರೂ ಶಾಸ್ತ್ರಗಳನ್ನು ಸೂಚಿಸಲಿಕ್ಕಾಗಿ ಉಪಯೋಗಿಸಲಾಯಿತು. ಮುಂದಿನ ಹೆಚ್ಚುಕಡಿಮೆ ನೂರು ವರ್ಷಗಳಲ್ಲಿ ಉಳಿದಿದ್ದ ಪುಸ್ತಕಗಳನ್ನು ಭಾಷಾಂತರಿಸಲಾಯಿತು. ಒಂದು ಸಂಘಟಿತ ಪ್ರಯತ್ನದ ಬದಲಿಗೆ, ಇಡೀ ಸೆಪ್ಟ್ಯುಅಜಿಂಟ್ ಅನ್ನು, ನಿಧಾನವಾಗಿ ಒಂದೊಂದು ಭಾಗವಾಗಿ ಭಾಷಾಂತರಿಸಲಾಯಿತು. ಭಾಷಾಂತರಕಾರರು ಹೀಬ್ರೂ ಭಾಷೆಯ ತಮ್ಮ ಸಾಮರ್ಥ್ಯಗಳು ಮತ್ತು ಜ್ಞಾನದಲ್ಲಿ ಭಿನ್ನರಾಗಿದ್ದರು. ಹೆಚ್ಚಿನ ಪುಸ್ತಕಗಳನ್ನು ಅಕ್ಷರಶಃವಾಗಿ ಭಾಷಾಂತರಿಸಲಾಗಿತ್ತು, ಕೆಲವೊಮ್ಮೆ ತೀರ ವಿಪರೀತವಾಗಿ. ಆದರೆ ಇತರ ಭಾಷಾಂತರಗಳು ಅಕ್ಷರಶಃವಾದದ್ದಾಗಿರಲಿಲ್ಲ. ಕೆಲವೊಂದು ಭಾಷಾಂತರಗಳು, ಉದ್ದವಾದ ಮತ್ತು ಮೊಟಕಾದ ಆವೃತ್ತಿಗಳಲ್ಲಿ ಇವೆ. ಸಾ.ಶ.ಪೂ. ಎರಡನೆಯ ಶತಮಾನದ ಅಂತ್ಯದೊಳಗೆ, ಹೀಬ್ರೂ ಶಾಸ್ತ್ರಗಳ ಎಲ್ಲ ಪುಸ್ತಕಗಳನ್ನು ಗ್ರೀಕ್ ಭಾಷೆಯಲ್ಲಿ ಓದಲು ಸಾಧ್ಯವಿತ್ತು. ಅಸಂಗತವಾದ ಫಲಿತಾಂಶಗಳ ಹೊರತೂ, ಹೀಬ್ರೂ ಶಾಸ್ತ್ರಗಳನ್ನು ಗ್ರೀಕ್ ಭಾಷೆಗೆ ಭಾಷಾಂತರಿಸುವ ಪರಿಣಾಮವು, ಆ ಭಾಷಾಂತರಕಾರರ ನಿರೀಕ್ಷಣೆಗಳನ್ನು ಬಹಳ ಮೀರಿತು.
ಶೇಮನ ಗುಡಾರಗಳಲ್ಲಿ ಯೆಫೆತನು?
ಸೆಪ್ಟ್ಯುಅಜಿಂಟ್ ಕುರಿತಾಗಿ ಚರ್ಚಿಸುತ್ತಾ ಟ್ಯಾಲ್ಮಡ್, ಆದಿಕಾಂಡ 9:27ನ್ನು ಈ ರೀತಿ ಉಲ್ಲೇಖಿಸುತ್ತದೆ: “ಅವನು [ಯೆಫೆತನು] ಶೇಮನ ಗುಡಾರಗಳಲ್ಲಿ ವಾಸವಾಗಿರಲಿ.” (ಮೆಗಿಲಾ 9ಬಿ, ಬಾಬಿಲೋನ್ಯನ್ ಟ್ಯಾಲ್ಮಡ್) ಸೆಪ್ಟ್ಯುಅಜಿಂಟ್ನಲ್ಲಿ ಉಪಯೋಗಿಸಲ್ಪಟ್ಟ ಗ್ರೀಕ್ ಭಾಷೆಯ ಶೈಲಿಗನುಸಾರವಾಗಿ, ಯೆಫೆತನು (ಯಾವನ್ನ ತಂದೆ, ಇವನ ವಂಶಜರು ಗ್ರೀಕ್ ಜನರಾಗಿದ್ದರು) ಶೇಮನ (ಇಸ್ರಾಯೇಲ್ ಜನಾಂಗದ ಪೂರ್ವಜನು) ಗುಡಾರಗಳಲ್ಲಿ ವಾಸಿಸಿದನೆಂದು ಟ್ಯಾಲ್ಮಡ್ ಸಾಂಕೇತಿಕವಾಗಿ ಸೂಚಿಸುತ್ತದೆ. ಆದರೆ, ಶೇಮನು ಯೆಫೆತನ ಗುಡಾರಗಳಲ್ಲಿ ವಾಸಿಸಿದನೆಂದೂ ಸೆಪ್ಟ್ಯುಅಜಿಂಟ್ನ ಮೂಲಕ ಹೇಳಸಾಧ್ಯವಿದೆ. ಅದು ಹೇಗೆ?
ಮಹಾ ಅಲೆಕ್ಸಾಂಡರನ ವಿಜಯಗಳ ನಂತರ, ಸಾ.ಶ.ಪೂ. ನಾಲ್ಕನೆಯ ಶತಮಾನದ ಕೊನೆಯ ಭಾಗದಲ್ಲಿ, ಜಯಿಸಲ್ಪಟ್ಟ ದೇಶಗಳಲ್ಲೆಲ್ಲಾ ಗ್ರೀಕ್ ಭಾಷೆ ಮತ್ತು ಸಂಸ್ಕೃತಿಯನ್ನು ಹಬ್ಬಿಸಲಿಕ್ಕಾಗಿ ತೀವ್ರವಾದ ಪ್ರಯತ್ನವನ್ನು ಮಾಡಲಾಯಿತು. ಈ ಕಾರ್ಯನೀತಿಯನ್ನು ಹೆಲಿನೈಸೇಷನ್ (ಗ್ರೀಕೀಕರಣ) ಎಂದು ಕರೆಯಲಾಯಿತು. ಯೆಹೂದ್ಯರು ಸತತವಾಗಿ ಈ ಸಾಂಸ್ಕೃತಿಕ ದಾಳಿಗೆ ಒಳಗಾದರು. ಗ್ರೀಕ್ ಸಂಸ್ಕೃತಿ ಮತ್ತು ತತ್ವಜ್ಞಾನವು ಮೇಲುಗೈಯನ್ನು ಪಡೆಯುವಲ್ಲಿ, ಯೆಹೂದ್ಯರ ಧರ್ಮವೇ ಶಿಥಿಲಗೊಳ್ಳಲಿತ್ತು. ಈ ದಾಳಿಯ ಹಬ್ಬುವಿಕೆಯನ್ನು ಯಾವುದು ನಿಲ್ಲಿಸಸಾಧ್ಯವಿತ್ತು?
ಸೆಪ್ಟ್ಯುಅಜಿಂಟ್ ಅನ್ನು ಭಾಷಾಂತರಿಸುವುದಕ್ಕಾಗಿ ಯೆಹೂದ್ಯರಿಗಿದ್ದಿರಬಹುದಾದ ಒಂದು ಉದ್ದೇಶದ ಕುರಿತಾಗಿ, ಯೆಹೂದಿ ಬೈಬಲ್ ಭಾಷಾಂತರಕಾರ ಮ್ಯಾಕ್ಸ್ ಮಾರ್ಗೊಲಿಸ್ ಹೇಳುವುದು: “ಈ ಭಾಷಾಂತರ ವಿಚಾರವನ್ನು ಯೆಹೂದಿ ಸಮುದಾಯವು ಆರಂಭಿಸಿತೆಂದು ಒಬ್ಬನು ಭಾವಿಸುವುದಾದರೆ, ಬೇರೊಂದು ಉದ್ದೇಶ ಕೂಡ ಅದರಲ್ಲಿ ಒಳಗೂಡಿದ್ದಿರಬಹುದು. ಅದೇನೆಂದರೆ, ಯೆಹೂದಿ ಧರ್ಮಶಾಸ್ತ್ರವನ್ನು ಪರೀಕ್ಷಿಸಲಿಕ್ಕಾಗಿ ಅನ್ಯಜನಾಂಗದವರಿಗೆ ಅದನ್ನು ಲಭ್ಯಗೊಳಿಸಿ, ಹೆಲ್ಲಾಸ್ [ಗ್ರೀಸ್]ನ ವಿವೇಕಕ್ಕಿಂತಲೂ ಶ್ರೇಷ್ಠವಾಗಿರುವ ಒಂದು ಸಂಸ್ಕೃತಿ ಯೆಹೂದ್ಯರಿಗಿದೆಯೆಂದು ಜಗತ್ತಿಗೆ ಮನಗಾಣಿಸುವುದೇ.” ಹೀಗೆ, ಹೀಬ್ರೂ ಶಾಸ್ತ್ರಗಳನ್ನು ಗ್ರೀಕ್ ಭಾಷೆಯನ್ನಾಡುವ ಲೋಕಕ್ಕೆ ಲಭ್ಯಗೊಳಿಸುವುದು, ಆತ್ಮರಕ್ಷಣೆ ಮತ್ತು ಪ್ರತಿದಾಳಿಯ ಒಂದು ರೂಪವಾಗಿದ್ದಿರಬಹುದು.
ಗ್ರೀಕೀಕರಣದ ಅಲೆಕ್ಸಾಂಡರನ ಕಾರ್ಯನೀತಿಯು, ಗ್ರೀಕ್ ಭಾಷೆಯನ್ನು ಲೋಕದ ಅಂತಾರಾಷ್ಟ್ರೀಯ ಭಾಷೆಯನ್ನಾಗಿ ಮಾಡಿತ್ತು. ಅವನ ಸಾಮ್ರಾಜ್ಯವನ್ನು ರೋಮನರು ಆಕ್ರಮಿಸಿಕೊಂಡಾಗಲೂ, ಸಾಮಾನ್ಯವಾದ (ಅಥವಾ, ಕಾಯ್ನೆ) ಗ್ರೀಕ್ ಭಾಷೆಯು ರಾಷ್ಟ್ರಗಳ ನಡುವೆ, ವ್ಯಾಪಾರದ ಮತ್ತು ದೈನಂದಿನ ಬಳಕೆಯ ಭಾಷೆಯಾಗಿ ಉಳಿಯಿತು. ಇದು ಒಂದು ಉದ್ದೇಶಪೂರ್ವಕವಾದ ಪ್ರಯತ್ನದಿಂದಾಗಿ ಉಳಿದಿರಬಹುದು ಅಥವಾ ಒಂದು ಸ್ವಾಭಾವಿಕ ಬೆಳೆವಣಿಗೆಯಿಂದಾಗಿರಬಹುದು. ಆದರೆ ಈ ಹಿಂದೆ ದೇವರ ಮತ್ತು ಯೆಹೂದ್ಯರ ನಿಯಮಶಾಸ್ತ್ರದೊಂದಿಗೆ ಅಪರಿಚಿತರಾಗಿದ್ದ ಅನೇಕ ಯೆಹೂದ್ಯೇತರರು, ಹೀಬ್ರೂ ಶಾಸ್ತ್ರಗಳ ಸೆಪ್ಟ್ಯುಅಜಿಂಟ್ ಭಾಷಾಂತರವನ್ನು ಬೇಗನೆ ಸ್ವೀಕರಿಸಿದರು. ಫಲಿತಾಂಶಗಳು ಆಶ್ಚರ್ಯಜನಕವಾಗಿದ್ದವು.
ಮತಾವಲಂಬಿಗಳು ಮತ್ತು ದೇವರಿಗೆ ಭಯಪಡುವವರು
ಸಾ.ಶ. ಪ್ರಥಮ ಶತಮಾನದೊಳಗೆ, “ಮೋಶೆಯ ಕಾನೂನಿನ ಸೊಗಸು ಮತ್ತು ಘನತೆಯು ಯೆಹೂದ್ಯರಲ್ಲಿ ಮಾತ್ರವಲ್ಲ, ಇತರ ಎಲ್ಲ ರಾಷ್ಟ್ರಗಳಲ್ಲಿ ಸನ್ಮಾನಿಸಲ್ಪಟ್ಟಿದೆ” ಎಂದು ಫಿಲೊ ಬರೆಯಸಾಧ್ಯವಿತ್ತು. ಪ್ರಥಮ ಶತಮಾನದಲ್ಲಿ ಪ್ಯಾಲೆಸ್ಟೀನ್ನ ಹೊರಗೆ ಜೀವಿಸುತ್ತಿದ್ದ ಯೆಹೂದ್ಯರ ಕುರಿತಾಗಿ, ಯೆಹೂದಿ ಇತಿಹಾಸಕಾರನಾದ ಯೋಸೇಫ್ ಕ್ಲಾಸ್ನರ್ ಹೇಳುವುದು: “ಈ –ಲಕ್ಷಾಂತರ ಯೆಹೂದ್ಯರೆಲ್ಲರೂ ಪ್ಯಾಲೆಸ್ಟೀನ್ನಿಂದ ವಲಸೆಹೋದವರೆಂದು ನಂಬುವುದು ತುಂಬ ಕಷ್ಟ. ಈ ಮಹಾ ವೃದ್ಧಿಯು, ಅಧಿಕ ಸಂಖ್ಯೆಯ ಸ್ತ್ರೀಪುರುಷ ಮತಾವಲಂಬಿಗಳನ್ನೂ ಒಳಗೊಂಡಿತ್ತೆಂದು ಒಬ್ಬನು ನಿರಾಕರಿಸಲಾರನು.”
ಆದರೆ ಈ ಭಾವೋತ್ಪಾದಕ ಅಂಶಗಳು, ಇಡೀ ಕಥೆಯನ್ನು ತಿಳಿಸುವುದಿಲ್ಲ. ಯೆಹೂದಿ ಇತಿಹಾಸದ ಪ್ರೊಫೆಸರರಾದ ಶೇ ಜೆ. ಡಿ. ಕೊಹೆನ್ ತಿಳಿಸುವುದು: “ಅನೇಕ ಅನ್ಯಜನಾಂಗದವರು, ಸ್ತ್ರೀಪುರುಷರು, ಸಾಮಾನ್ಯ ಶಕ ಪೂರ್ವದ ಕೊನೆಯ ಶತಮಾನಗಳಲ್ಲಿ ಮತ್ತು ಸಾಮಾನ್ಯ ಶಕದ ಪ್ರಥಮ ಎರಡು ಶತಮಾನಗಳಲ್ಲಿ ಯೆಹೂದ್ಯಮತಕ್ಕೆ ಮತಾಂತರಗೊಂಡರು. ಆದರೆ, ಯೆಹೂದ್ಯಮತದ ನಿರ್ದಿಷ್ಟ ಅಂಶಗಳನ್ನು ಅಂಗೀಕರಿಸಿದರೂ, ಅದಕ್ಕೆ ಮತಾಂತರಗೊಂಡಿರದ ಅನ್ಯಜನಾಂಗದವರ ಸಂಖ್ಯೆ ಇನ್ನೂ ಹೆಚ್ಚಾಗಿತ್ತು.” ಕ್ಲಾಸ್ನರ್ ಮತ್ತು ಕೊಹೆನ್, ಮತಾಂತರಗೊಂಡಿರದ ಇವರನ್ನು ದೇವರಿಗೆ ಭಯಪಡುವವರು ಎಂದು ಸೂಚಿಸುತ್ತಾರೆ. ಈ ವಾಕ್ಸರಣಿಯನ್ನು ಆ ಸಮಯದ ಗ್ರೀಕ್ ಸಾಹಿತ್ಯದಲ್ಲಿ ಪದೇ ಪದೇ ಕಾಣಬಹುದು.
ಒಬ್ಬ ಮತಾವಲಂಬಿ ಮತ್ತು ದೇವರಿಗೆ ಭಯಪಡುವವನ ನಡುವಿನ ವ್ಯತ್ಯಾಸವೇನು? ಮತಾವಲಂಬಿಗಳು ಪೂರ್ಣವಾಗಿ ಮತಾಂತರಗೊಂಡವರಾಗಿದ್ದರು. ಅವರನ್ನು ಎಲ್ಲ ಅರ್ಥದಲ್ಲಿ ಯೆಹೂದ್ಯರೆಂದು ಪರಿಗಣಿಸಲಾಗುತ್ತಿತ್ತು, ಯಾಕಂದರೆ ಅವರು ಇಸ್ರಾಯೇಲಿನ ದೇವರನ್ನು ಸ್ವೀಕರಿಸಿದರು (ಇತರ ಎಲ್ಲ ದೇವರಗಳನ್ನು ತ್ಯಜಿಸಿ), ಸುನ್ನತಿಯನ್ನು ಮಾಡಿಸಿಕೊಂಡಿದ್ದರು, ಮತ್ತು ಇಸ್ರಾಯೇಲ್ ಜನಾಂಗದೊಂದಿಗೆ ಜೊತೆಗೂಡಿದರು. ವ್ಯತಿರಿಕ್ತವಾಗಿ, ದೇವರಿಗೆ ಭಯಪಡುವವರ ಕುರಿತಾಗಿ ಕೊಹೆನ್ ಹೇಳುವುದು: “ಈ ಅನ್ಯಜನಾಂಗದವರು, ಅನೇಕ ಯೆಹೂದಿ ಪದ್ಧತಿಗಳನ್ನು ಪಾಲಿಸುತ್ತಿದ್ದರೂ ಮತ್ತು ಯೆಹೂದ್ಯರ ದೇವರನ್ನು ಒಂದಲ್ಲ ಒಂದು ರೀತಿಯಲ್ಲಿ ಪೂಜಿಸುತ್ತಿದ್ದರೂ, ಅವರು ತಮ್ಮನ್ನು ಯೆಹೂದ್ಯರನ್ನಾಗಿ ಪರಿಗಣಿಸುತ್ತಿರಲಿಲ್ಲ ಮತ್ತು ಇತರರೂ ಅವರನ್ನು ಯೆಹೂದ್ಯರನ್ನಾಗಿ ಪರಿಗಣಿಸುತ್ತಿರಲಿಲ್ಲ.” ಕ್ಲಾಸ್ನರ್ ಅವರನ್ನು “ನಡುಬೀದಿಯಲ್ಲಿ ನಿಂತಿರುವವ”ರಾಗಿ ವರ್ಣಿಸುತ್ತಾನೆ. ಯಾಕಂದರೆ ಅವರು ಯೆಹೂದ್ಯಮತವನ್ನು ಅಂಗೀಕರಿಸಿಕೊಂಡರು ಮತ್ತು “ಅದರ ಕೆಲವೊಂದು ಪದ್ಧತಿಗಳನ್ನು ಪಾಲಿಸಿದರು, ಆದರೆ . . . ಪೂರ್ಣವಾಗಿ ಯೆಹೂದ್ಯರಾಗಲಿಲ್ಲ.”
ಮಿಷನೆರಿ ಯೆಹೂದ್ಯರೊಂದಿಗಿನ ಚರ್ಚೆಗಳಿಂದಾಗಿ ಅಥವಾ ಈ ಯೆಹೂದ್ಯರ ನಡತೆ, ಪದ್ಧತಿ ಮತ್ತು ನಡವಳಿಕೆಯು ಭಿನ್ನವಾಗಿರುವುದನ್ನು ಗಮನಿಸುವ ಮೂಲಕ, ಅವರಲ್ಲಿ ಕೆಲವರು ದೇವರಲ್ಲಿ ಆಸಕ್ತರಾಗಿದ್ದಿರಬಹುದು. ಆದರೆ, ಈ ದೇವರಿಗೆ ಭಯಪಡುವವರು ಯೆಹೋವ ದೇವರ ಕುರಿತಾಗಿ ಕಲಿಯಲು ಸೆಪ್ಟ್ಯುಅಜಿಂಟ್ ಮುಖ್ಯ ಸಾಧನವಾಗಿತ್ತು. ಪ್ರಥಮ ಶತಮಾನದಲ್ಲಿ ನಿಖರವಾಗಿ ದೇವರಿಗೆ ಭಯಪಡುವವರು ಎಷ್ಟು ಮಂದಿಯಿದ್ದರೆಂದು ತಿಳಿದುಕೊಳ್ಳಲು ಯಾವುದೇ ಮಾರ್ಗವಿಲ್ಲವಾದರೂ, ನಿಸ್ಸಂದೇಹವಾಗಿ, ಸೆಪ್ಟ್ಯುಅಜಿಂಟ್ ರೋಮನ್ ಸಾಮ್ರಾಜ್ಯದಾದ್ಯಂತ ದೇವರ ಕುರಿತಾದ ಜ್ಞಾನವನ್ನು ಹಬ್ಬಿಸಿತ್ತು. ಸೆಪ್ಟ್ಯುಅಜಿಂಟ್ನ ಮೂಲಕ ಮಹತ್ವಪೂರ್ಣವಾದ ತಳಪಾಯವನ್ನೂ ಹಾಕಲಾಯಿತು.
ಸೆಪ್ಟ್ಯುಅಜಿಂಟ್ ಮಾರ್ಗವನ್ನು ಸಿದ್ಧಗೊಳಿಸಲು ಸಹಾಯಮಾಡಿತು
ಕ್ರೈಸ್ತಧರ್ಮದ ಸಂದೇಶವನ್ನು ಹಬ್ಬಿಸುವುದರಲ್ಲಿ ಸೆಪ್ಟ್ಯುಅಜಿಂಟ್ ಪ್ರಮುಖ ಪಾತ್ರವನ್ನು ವಹಿಸಿತು. ಸಾ.ಶ. 33ರ ಪಂಚಾಶತ್ತಮದಂದು, ಕ್ರೈಸ್ತ ಸಭೆಯ ಸ್ಥಾಪನೆಯ ಸಮಯದಲ್ಲಿ ಗ್ರೀಕ್ ಭಾಷೆಯನ್ನಾಡುವ ಅನೇಕ ಯೆಹೂದ್ಯರು ಹಾಜರಿದ್ದರು. ಆ ಆರಂಭದ ಹಂತದಲ್ಲಿ ಕ್ರೈಸ್ತ ಶಿಷ್ಯರಾಗಿ ಪರಿಣಮಿಸಿದವರ ಮಧ್ಯೆ ಮತಾವಲಂಬಿಗಳು ಕೂಡ ಇದ್ದರು. (ಅ. ಕೃತ್ಯಗಳು 2:5-11; 6:1-6; 8:26-38) ಯೇಸುವಿನ ಅಪೊಸ್ತಲರು ಮತ್ತು ಇತರ ಆದಿ ಶಿಷ್ಯರ ಪ್ರೇರಿತ ಬರಹಗಳು, ದೂರದಲ್ಲಿ ವಾಸಿಸುತ್ತಿರುವ, ಸಾಧ್ಯವಾದಷ್ಟು ಜನರನ್ನು ತಲಪುವ ಉದ್ದೇಶದಿಂದ ರಚಿಸಲ್ಪಟ್ಟದ್ದರಿಂದ, ಅವುಗಳನ್ನು ಗ್ರೀಕ್ ಭಾಷೆಯಲ್ಲಿ ಬರೆದಿಡಲಾಯಿತು.a ಆದುದರಿಂದ, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿರುವ, ಹೀಬ್ರೂ ಶಾಸ್ತ್ರಗಳ ಅನೇಕ ಉಲ್ಲೇಖಗಳು ಸೆಪ್ಟ್ಯುಅಜಿಂಟ್ನಲ್ಲಿ ಆಧಾರಿತವಾಗಿದ್ದವು.
ಸ್ವಾಭಾವಿಕ ಯೆಹೂದ್ಯರು ಮತ್ತು ಮತಾವಲಂಬಿಗಳಲ್ಲದೆ, ಇತರರೂ ರಾಜ್ಯ ಸಂದೇಶವನ್ನು ಸ್ವೀಕರಿಸಲು ಸಿದ್ಧರಿದ್ದರು. ಅನ್ಯಜನಾಂಗದವನಾದ ಕೊರ್ನೇಲ್ಯನು, “ಭಕ್ತನೂ ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಪಡುವವನೂ ಆಗಿದ್ದು ಜನರಿಗೆ ಬಹಳವಾಗಿ ದಾನಧರ್ಮಮಾಡುತ್ತಾ ದೇವರಿಗೆ ನಿತ್ಯವೂ ಪ್ರಾರ್ಥನೆಮಾಡುತ್ತಾ ಇದ್ದನು.” ಸಾ.ಶ. 36ರಲ್ಲಿ, ಕೊರ್ನೇಲ್ಯನು, ಅವನ ಕುಟುಂಬವು ಮತ್ತು ಅವನ ಮನೆಯಲ್ಲಿ ನೆರೆದಿದ್ದ ಇತರರು, ಕ್ರಿಸ್ತನ ಹಿಂಬಾಲಕರಾಗಿ ದೀಕ್ಷಾಸ್ನಾನ ಪಡೆದುಕೊಂಡ ಪ್ರಥಮ ಅನ್ಯಜನಾಂಗದವರಾದರು. (ಅ. ಕೃತ್ಯಗಳು 10:1, 2, 24, 44-48; ಹೋಲಿಸಿರಿ ಲೂಕ 7:2-10.) ಅಪೊಸ್ತಲ ಪೌಲನು ಏಷಿಯಾ ಮೈನರ್ ಮತ್ತು ಗ್ರೀಸ್ನಾದ್ಯಂತ ಪ್ರಯಾಣಿಸಿದಾಗ, ಈಗಾಗಲೇ ದೇವರಿಗೆ ಭಯಪಡುತ್ತಿದ್ದ ಅನೇಕ ಅನ್ಯರಿಗೆ ಮತ್ತು “ದೇವಭಕ್ತರಾದ ಗ್ರೀಕ”ರಿಗೂ ಸಾರಿದನು. (ಅ. ಕೃತ್ಯಗಳು 13:16, 26; 17:4) ಕೊರ್ನೇಲ್ಯನು ಮತ್ತು ಆ ಇತರ ಅನ್ಯಜನಾಂಗದವರು ಸುವಾರ್ತೆಯನ್ನು ಸ್ವೀಕರಿಸಲು ಸಿದ್ಧರಿದ್ದದ್ದು ಏಕೆ? ಸೆಪ್ಟ್ಯುಅಜಿಂಟ್, ಆ ಮಾರ್ಗವನ್ನು ಸಿದ್ಧಗೊಳಿಸಲು ಸಹಾಯವನ್ನು ಮಾಡಿತ್ತು. ಸೆಪ್ಟ್ಯುಅಜಿಂಟ್ “ಎಷ್ಟೊಂದು ಮಹತ್ವಪೂರ್ಣ ಪುಸ್ತಕವಾಗಿದೆಯೆಂದರೆ, ಅದಿಲ್ಲದೆ ಹೋಗಿದ್ದರೆ ಕ್ರೈಸ್ತಪ್ರಪಂಚವನ್ನು ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಗ್ರಹಿಸಿಕೊಳ್ಳುವುದು ಅಸಾಧ್ಯವಾಗಿರುತ್ತಿತ್ತು” ಎಂದು ಒಬ್ಬ ವಿಧ್ವಾಂಸನು ಊಹಿಸುತ್ತಾನೆ.
ಸೆಪ್ಟ್ಯುಅಜಿಂಟ್ ತನ್ನ “ಪ್ರೇರಣೆಯನ್ನು” ಕಳೆದುಕೊಳ್ಳುತ್ತದೆ
ಸೆಪ್ಟ್ಯುಅಜಿಂಟ್ನ ವಿಸ್ತೃತ ಬಳಕೆಯು ಕಟ್ಟಕಡೆಗೆ ಯೆಹೂದ್ಯರ ನಡುವೆ ಪ್ರತಿಕೂಲ ಪ್ರತಿಕ್ರಿಯೆಯನ್ನುಂಟುಮಾಡಿತು. ಉದಾಹರಣೆಗಾಗಿ, ಕ್ರೈಸ್ತರೊಂದಿಗಿನ ಚರ್ಚೆಗಳಲ್ಲಿ, ಸೆಪ್ಟ್ಯುಅಜಿಂಟ್ ತಪ್ಪಾದ ಭಾಷಾಂತರವಾಗಿದೆಯೆಂದು ಯೆಹೂದ್ಯರು ಹೇಳಿದರು. ಸಾ.ಶ. ಎರಡನೆಯ ಶತಮಾನದೊಳಗೆ, ಯೆಹೂದ್ಯ ಸಮುದಾಯವು ಒಂದು ಸಮಯದಲ್ಲಿ ಪ್ರೇರಿತವಾದದ್ದೆಂದು ಶ್ಲಾಘಿಸುತ್ತಿದ್ದ ಭಾಷಾಂತರವನ್ನು ಸಂಪೂರ್ಣವಾಗಿ ತಿರಸ್ಕರಿಸಿಬಿಟ್ಟಿತ್ತು. ರಬ್ಬಿಗಳು ಹೀಗೆ ಹೇಳುತ್ತಾ 72 ಮಂದಿ ಭಾಷಾಂತರಕಾರರ ಕಥೆಯನ್ನು ತಿರಸ್ಕರಿಸಿದರು: “ಒಂದು ಸಮಯದಲ್ಲಿ ಐದು ಹಿರಿಯರು ರಾಜ ಟಾಲಮಿಗಾಗಿ ಟೊರಾವನ್ನು ಗ್ರೀಕ್ ಭಾಷೆಯಲ್ಲಿ ಬರೆದರು, ಮತ್ತು ಆ ದಿನವು, ಇಸ್ರಾಯೇಲ್ಗಾಗಿ ಬಂಗಾರದ ಕರುವು ರಚಿಸಲ್ಪಟ್ಟ ದಿನದಷ್ಟೇ ಅಶುಭವಾದ ದಿನವಾಗಿದೆ ಯಾಕಂದರೆ, ಟೊರಾವನ್ನು ನಿಷ್ಕೃಷ್ಟವಾಗಿ ಭಾಷಾಂತರಿಸಲು ಸಾಧ್ಯವಿಲ್ಲ.” ರಬ್ಬಿಸಂಬಂಧಿತ ದೃಷ್ಟಿಕೋನಗಳೊಂದಿಗೆ ಹೆಚ್ಚು ಕಟ್ಟುನಿಟ್ಟಾಗಿ ಒಪ್ಪಿಕೊಳ್ಳುವಂತೆ ರಬ್ಬಿಗಳು, ಗ್ರೀಕ್ ಭಾಷೆಗೆ ಇನ್ನೊಂದು ಭಾಷಾಂತರವನ್ನು ಮಾಡಲಿಕ್ಕಾಗಿ ಅಧಿಕಾರವನ್ನು ಕೊಟ್ಟರು. ಅದನ್ನು, ಅಕೀವಾ ಎಂಬ ರಬ್ಬಿಯ ಶಿಷ್ಯನಾದ ಅಕ್ವಿಲ್ಲನೆಂಬ ಯೆಹೂದಿ ಮತಾವಲಂಬಿಯು ಮಾಡಿದನು.
ಯೆಹೂದ್ಯರು ಸೆಪ್ಟ್ಯುಅಜಿಂಟ್ ಅನ್ನು ಉಪಯೋಗಿಸುವುದನ್ನು ನಿಲ್ಲಿಸಿದರು, ಆದರೆ ಅದು ಉದಯವಾಗುತ್ತಿದ್ದ ಕ್ಯಾಥೊಲಿಕ್ ಚರ್ಚ್ನ ಸ್ಟ್ಯಾಂಡರ್ಡ್ “ಹಳೇ ಒಡಂಬಡಿಕೆ” ಆಗಿ ಪರಿಣಮಿಸಿತು. ಅದರ ಸ್ಥಾನದಲ್ಲಿ ತದನಂತರ ಜೆರೋಮಿನ ಲ್ಯಾಟಿನ ವಲ್ಗೇಟ್ ಬಂತು. ಮೂಲ ಪ್ರತಿಯ ಸ್ಥಾನವನ್ನು, ಒಂದು ಭಾಷಾಂತರವು ತೆಗೆದುಕೊಳ್ಳಲು ಸಾಧ್ಯವಿಲ್ಲದಿದ್ದರೂ, ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಮೂಲಕ ಆತನ ರಾಜ್ಯದ ಕುರಿತಾದ ಜ್ಞಾನವನ್ನು ಹಬ್ಬಿಸುವುದರಲ್ಲಿ ಸೆಪ್ಟ್ಯುಅಜಿಂಟ್ ಒಂದು ಪ್ರಮುಖ ಪಾತ್ರವನ್ನು ವಹಿಸಿತು. ನಿಜವಾಗಿಯೂ, ಸೆಪ್ಟ್ಯುಅಜಿಂಟ್ ಜಗತ್ತನ್ನೇ ಬದಲಾಯಿಸಿದ ಬೈಬಲ್ ಭಾಷಾಂತರವಾಗಿದೆ.
[ಅಧ್ಯಯನ ಪ್ರಶ್ನೆಗಳು]
a ಮತ್ತಾಯನ ಸುವಾರ್ತೆಯು, ಪ್ರಥಮವಾಗಿ ಹೀಬ್ರೂ ಭಾಷೆಯಲ್ಲಿ ಮತ್ತು ತದನಂತರ ಗ್ರೀಕ್ನಲ್ಲಿ ಬರೆಯಲ್ಪಟ್ಟಿದ್ದಿರಬಹುದು.
[ಪುಟ 31 ರಲ್ಲಿರುವ ಚಿತ್ರ]
ಪೌಲನು ಸಾರಿದಂತಹ ಅನೇಕ ಜನರಿಗೆ “ಸೆಪ್ಟ್ಯುಅಜಿಂಟ್” ಅರ್ಥವಾಗುತ್ತಿತ್ತು
[ಪುಟ 29 ರಲ್ಲಿರುವ ಚಿತ್ರ]
Courtesy of Israel Antiquities Authority