“ಆತಿಥ್ಯದ ಮಾರ್ಗವನ್ನು ಅನುಸರಿಸಿರಿ”
“ಪವಿತ್ರ ಜನರೊಂದಿಗೆ ಅವರ ಆವಶ್ಯಕತೆಗಳಿಗನುಸಾರ ಪಾಲಿಗರಾಗಿರಿ. ಆತಿಥ್ಯದ ಮಾರ್ಗವನ್ನು ಅನುಸರಿಸಿರಿ.”—ರೋಮಾಪುರ 12:13, NW.
1. ಒಂದು ಮೂಲ ಮಾನವಾವಶ್ಯಕತೆ ಯಾವುದು, ಮತ್ತು ಅದು ಹೇಗೆ ಪ್ರದರ್ಶಿಸಲ್ಪಟ್ಟಿದೆ?
ಅಪರಿಚಿತವಾದ ನೆರೆಹೊರೆಯ ನಿರ್ಜನವಾದ ರಸ್ತೆಯೊಂದರಲ್ಲಿ ಹೊತ್ತುಮೀರಿರುವ ರಾತ್ರಿಯಲ್ಲಿ ನಡೆಯುವುದು ಈ ದಿನಗಳಲ್ಲಿ ಒಂದು ಚಿಂತಾಜನಕವಾದ ಅನುಭವವಾಗಿರಸಾಧ್ಯವಿದೆ. ಆದರೆ ಒಬ್ಬರ ಪರಿಚಯವೂ ಇಲ್ಲದೆ ಅಥವಾ ಗುರುತಿಸಲ್ಪಡದೆ, ಒಂದು ಜನಸ್ತೋಮದಲ್ಲಿರುವುದೂ ಅಷ್ಟೇ ಒತ್ತಡಭರಿತವಾದದ್ದಾಗಿರಸಾಧ್ಯವಿದೆ. ಮಾನವ ಪ್ರಕೃತಿಯ ಒಂದು ಆವಶ್ಯಕ ಭಾಗವು, ಇತರರು ತಮ್ಮ ಚಿಂತೆ ವಹಿಸಬೇಕು, ತಾವು ಬೇಕಾದವರೆನಿಸಲ್ಪಡಬೇಕು, ಮತ್ತು ಪ್ರೀತಿಸಲ್ಪಡಬೇಕು ಎಂಬುದು ನಿಶ್ಚಯ. ಅಪರಿಚಿತನಾಗಿಯಾಗಲಿ, ಹೊರಗಿನವನಾಗಿಯಾಗಲಿ ಉಪಚರಿಸಲ್ಪಡಲು ಯಾವನೂ ಬಯಸುವುದಿಲ್ಲ.
2. ನಮ್ಮ ಒಡನಾಟದ ಆವಶ್ಯಕತೆಗೆ ಯೆಹೋವನು ಹೇಗೆ ಒದಗಿಸಿದ್ದಾನೆ?
2 ಸಕಲ ವಿಷಯಗಳ ನಿರ್ಮಾಣಿಕನೂ ಸೃಷ್ಟಿಕರ್ತನೂ ಆಗಿರುವ ಯೆಹೋವ ದೇವರು, ಒಡನಾಟಕ್ಕಿರುವ ಮಾನವ ಆವಶ್ಯಕತೆಯನ್ನು ಚೆನ್ನಾಗಿ ಬಲ್ಲನು. ತನ್ನ ಮಾನವ ಸೃಷ್ಟಿಯ ವಿನ್ಯಾಸಕನೋಪಾದಿ ದೇವರಿಗೆ ಆದಿಯಿಂದಲೇ, “ಮನುಷ್ಯನು ಒಂಟಿಗನಾಗಿರುವುದು ಒಳ್ಳೇದಲ್ಲ,” ಎಂಬುದು ತಿಳಿದಿತ್ತು, ಮತ್ತು ಆತನು ಅದರ ವಿಷಯದಲ್ಲಿ ಏನನ್ನೋ ವ್ಯವಸ್ಥೆಮಾಡಿದನು. (ಆದಿಕಾಂಡ 2:18, 21, 22) ಯೆಹೋವನಿಂದ ಮತ್ತು ಆತನ ಸೇವಕರಿಂದ ಮಾನವರ ಕಡೆಗೆ ತೋರಿಸಲ್ಪಟ್ಟ ದಯಾವರ್ತನೆಗಳ ಉದಾಹರಣೆಗಳಿಂದ ಬೈಬಲ್ ದಾಖಲೆಯು ತುಂಬಿದೆ. ಇದು ನಮ್ಮನ್ನು, ಇತರರ ಆನಂದ ಮತ್ತು ಆಹ್ಲಾದಕ್ಕಾಗಿಯೂ ನಮ್ಮ ಸ್ವಂತ ಸಂತೃಪ್ತಿಗಾಗಿಯೂ, ಹೇಗೆ “ಆತಿಥ್ಯದ ಮಾರ್ಗವನ್ನು ಅನುಸರಿ”ಸಬೇಕೆಂಬುದನ್ನು ಕಲಿಯುವಂತೆ ಸಾಧ್ಯಮಾಡುತ್ತದೆ.—ರೋಮಾಪುರ 12:13.
ಅಪರಿಚಿತರ ಪ್ರೀತಿ
3. ಆತಿಥ್ಯದ ಮೂಲಾರ್ಥವನ್ನು ವಿವರಿಸಿರಿ.
3 ಬೈಬಲಿನಲ್ಲಿ ಬಳಸಿರುವಂತಹ “ಆತಿಥ್ಯ” ಎಂಬ ಪದವನ್ನು, “ಪ್ರೀತಿ” ಮತ್ತು “ಅಪರಿಚಿತ” ಎಂದು ಅರ್ಥೈಸುವ ಎರಡು ಮೂಲಪದಗಳಿರುವ, ಫಿಲೊಕ್ಸೀನಿಯ ಎಂಬ ಗ್ರೀಕ್ ಪದದಿಂದ ಭಾಷಾಂತರಿಸಲಾಗಿದೆ. ಹೀಗೆ, ಆತಿಥ್ಯವು ಮುಖ್ಯವಾಗಿ, “ಅಪರಿಚಿತರ ಪ್ರೀತಿ” ಎಂಬುದನ್ನು ಅರ್ಥೈಸುತ್ತದೆ. ಆದರೂ, ಇದೊಂದು ಔಚಿತ್ಯವಾಗಲಿ ಸೌಜನ್ಯದ ವಿಷಯವಾಗಲಿ ಆಗಿರುವುದಿಲ್ಲ. ಇದು ಒಬ್ಬನ ಭಾವನೆಗಳನ್ನೂ ವಾತ್ಸಲ್ಯಗಳನ್ನೂ ಒಳಗೊಳ್ಳುತ್ತದೆ. ಜೇಮ್ಸ್ ಸ್ಟ್ರಾಂಗ್ನ ಎಕ್ಸಾಸ್ಟಿವ್ ಕನ್ಕಾರ್ಡೆನ್ಸ್ ಆಫ್ ದ ಬೈಬಲ್ಗನುಸಾರ, ಫಿಲೀಓ ಎಂಬ ಕ್ರಿಯಾಪದದ ಅರ್ಥವು, “ಒಬ್ಬನಿಗೆ ಸ್ನೇಹಿತನಾಗಿರುವುದು ([ಒಬ್ಬ ವ್ಯಕ್ತಿಯನ್ನು ಅಥವಾ ಒಂದು ವಸ್ತುವನ್ನು] ಪ್ರೀತಿಸುವುದು), ಅಂದರೆ, (ಚಿತ್ತವೃತ್ತಿಯ ಅಥವಾ ಭಾವನೆಯ ವಿಷಯವಾಗಿ ವೈಯಕ್ತಿಕ ಅಂಟಿಕೆಯನ್ನು ಸೂಚಿಸುತ್ತ) ವಾತ್ಸಲ್ಯವಿರುವುದು.” ಆದುದರಿಂದ, ಆತಿಥ್ಯವು, ಪ್ರಾಯಶಃ ಕರ್ತವ್ಯ ಪ್ರಜ್ಞೆ ಅಥವಾ ಹಂಗಿನ ಕಾರಣ ಮೂಲತತ್ವಾಧಾರಿತ ಪ್ರೀತಿಯನ್ನೂ ಮೀರಿಹೋಗುತ್ತದೆ. ಅದು ಸಾಧಾರಣವಾಗಿ, ನೈಜ ಪ್ರೀತಿ, ವಾತ್ಸಲ್ಯ ಮತ್ತು ಮಿತ್ರತ್ವದ ಅಭಿವ್ಯಕ್ತಿಯಾಗಿದೆ.
4. ಆತಿಥ್ಯವು ಯಾರ ಕಡೆಗೆ ತೋರಿಸಲ್ಪಡಬೇಕು?
4 ಈ ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆದುಕೊಳ್ಳುವವನು “ಅಪರಿಚಿತನು” (ಗ್ರೀಕ್, ಸೀನಾಸ್). ಇದು ಯಾರಾಗಿರಬಹುದು? ಪುನಃ, ಸ್ಟ್ರಾಂಗ್ನ ಕನ್ಕಾರ್ಡೆನ್ಸ್, ಸೀನಾಸ್ ಎಂಬ ಪದವನ್ನು, ‘ವಿದೇಶಿ (ಪದಶಃ ಅನ್ಯ, ಅಥವಾ ಸಾಂಕೇತಿಕವಾಗಿ ಹೊಸಬ); ಸೂಚಕಾರ್ಥದಲ್ಲಿ ಒಬ್ಬ ಅತಿಥಿ ಅಥವಾ (ವಿಪರ್ಯಯವಾಗಿ) ಒಬ್ಬ ಅಪರಿಚಿತ’ ಎಂದು ಅರ್ಥನಿರೂಪಿಸುತ್ತದೆ. ಹೀಗೆ ಆತಿಥ್ಯವು, ಬೈಬಲಿನಲ್ಲಿ ಉದಾಹರಿಸಲ್ಪಟ್ಟಿರುವಂತೆ, ನಾವು ಪ್ರೀತಿಸುವವನೊಬ್ಬನ ಕಡೆಗೆ ತೋರಿಸುವ ದಯೆಯನ್ನು ಪ್ರತಿಬಿಂಬಿಸಬಲ್ಲದು, ಇಲ್ಲವೆ ಒಬ್ಬ ತೀರ ಅಪರಿಚಿತನ ಕಡೆಗೂ ಅದನ್ನು ವಿಸ್ತರಿಸಸಾಧ್ಯವಿದೆ. ಯೇಸು ವಿವರಿಸಿದ್ದು: “ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಭ್ರಷ್ಟರೂ ಹಾಗೆ ಮಾಡುವದಿಲ್ಲವೇ. ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನಗಳು ಸಹ ಹಾಗೆ ಮಾಡುವದಿಲ್ಲವೇ.” (ಮತ್ತಾಯ 5:46, 47) ನೈಜ ಆತಿಥ್ಯವು, ಪೂರ್ವಕಲ್ಪಿತಾಭಿಪ್ರಾಯ ಮತ್ತು ಭಯದಿಂದ ಹಾಕಲ್ಪಟ್ಟಿರುವ ಒಡಕು ಮತ್ತು ಭೇದಭಾವಗಳಿಗೆ ಅತೀತವಾಗಿರುತ್ತದೆ.
ಯೆಹೋವ, ಒಬ್ಬ ಪರಿಪೂರ್ಣ ಆತಿಥೇಯ
5, 6. (ಎ) “ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನು,” ಎಂದು ಹೇಳಿದಾಗ ಯೇಸುವಿನ ಮನಸ್ಸಿನಲ್ಲಿ ಏನಿತ್ತು? (ಬಿ) ಯೆಹೋವನ ಔದಾರ್ಯವು ಹೇಗೆ ತೋರಿಬರುತ್ತದೆ?
5 ಮೇಲೆ ಉದ್ಧರಿಸಲ್ಪಟ್ಟಿರುವಂತೆ, ಮಾನವರು ಒಬ್ಬರಿಗೊಬ್ಬರು ವ್ಯಕ್ತಪಡಿಸುವ ಪ್ರೀತಿಯಲ್ಲಿರುವ ಕೊರತೆಗಳನ್ನು ತೋರಿಸಿದ ಬಳಿಕ, ಯೇಸು ಈ ಹೇಳಿಕೆಯನ್ನು ಕೂಡಿಸಿದನು: “ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.” (ಮತ್ತಾಯ 5:48, NW) ಯೆಹೋವನು ಪ್ರತಿಯೊಂದು ವಿಧದಲ್ಲಿಯೂ ಪರಿಪೂರ್ಣನು ನಿಶ್ಚಯ. (ಧರ್ಮೋಪದೇಶಕಾಂಡ 32:4) ಆದರೆ ಯೇಸುವು, ತಾನು ಈ ಮುಂಚೆ ಹೇಳಿದಂತೆ, ಯೆಹೋವನ ಪರಿಪೂರ್ಣತೆಯಲ್ಲಿ ಒಂದು ನಿರ್ದಿಷ್ಟ ಅಂಶವನ್ನು ಎತ್ತಿತೋರಿಸುತ್ತಿದ್ದನು: “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:45) ದಯೆಯನ್ನು ತೋರಿಸುವ ವಿಷಯದಲ್ಲಿ, ಯೆಹೋವನು ಪಕ್ಷಪಾತವನ್ನೇ ತಿಳಿದಿರುವುದಿಲ್ಲ.
6 ಸೃಷ್ಟಿಕರ್ತನೋಪಾದಿ, ಯೆಹೋವನು ಸರ್ವಸ್ವಕ್ಕೂ ಒಡೆಯನಾಗಿದ್ದಾನೆ. “ಕಾಡಿನಲ್ಲಿರುವ ಸರ್ವಮೃಗಗಳೂ ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ. ಬೆಟ್ಟಗಳ ಪಕ್ಷಿಗಳನ್ನೆಲ್ಲಾ ಬಲ್ಲೆ; ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು,” ಎಂದು ಯೆಹೋವನನ್ನುತ್ತಾನೆ. (ಕೀರ್ತನೆ 50:10, 11) ಆದರೂ, ಆತನು ಸ್ವಾರ್ಥದಿಂದ ಯಾವುದನ್ನೂ ಸಂಗ್ರಹಿಸಿಡುವುದಿಲ್ಲ. ಆತನು ತನ್ನ ಔದಾರ್ಯದಲ್ಲಿ, ತನ್ನ ಎಲ್ಲ ಜೀವಿಗಳಿಗೆ ಒದಗಿಸುತ್ತಾನೆ. ಯೆಹೋವನ ಕುರಿತು ಕೀರ್ತನೆಗಾರನು ಹೇಳಿದ್ದು: “ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.”—ಕೀರ್ತನೆ 145:16.
7. ಯೆಹೋವನು ಅಪರಿಚಿತರನ್ನೂ ಕೊರತೆಯುಳ್ಳವರನ್ನೂ ನೋಡಿಕೊಳ್ಳುವ ವಿಧದಿಂದ ನಾವೇನು ಕಲಿಯಬಲ್ಲೆವು?
7 ಯೆಹೋವನು ಜನರಿಗೆ—ಆತನನ್ನು ತಿಳಿಯದಿದ್ದು, ಆತನಿಗೆ ಅಪರಿಚಿತರಾಗಿರುವ ಜನರಿಗೂ—ಅವಶ್ಯವಿರುವುದನ್ನು ಕೊಡುತ್ತಾನೆ. ಪೌಲ, ಬಾರ್ನಬರು, ಲುಸ್ತ್ರ ನಗರದ ಮೂರ್ತಿಪೂಜಕರಿಗೆ, ಯೆಹೋವನು “ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರಮಾಡುತ್ತಾ ಬಂದವನು ಆತನೇ,” ಎಂದು ಜ್ಞಾಪಕ ಹುಟ್ಟಿಸಿದರು. (ಅ. ಕೃತ್ಯಗಳು 14:17) ವಿಶೇಷವಾಗಿ ಕೊರತೆಯುಳ್ಳವರಿಗೆ ಯೆಹೋವನು ದಯೆಯುಳ್ಳವನೂ ಉದಾರಿಯೂ ಆಗಿದ್ದಾನೆ. (ಧರ್ಮೋಪದೇಶಕಾಂಡ 10:17, 18) ಇತರರಿಗೆ ದಯೆ ಮತ್ತು ಔದಾರ್ಯವನ್ನು ತೋರಿಸುವುದರಲ್ಲಿ—ಆತಿಥ್ಯ ತೋರಿಸುವವರಾಗಿರುವ ಮೂಲಕ—ನಾವು ಯೆಹೋವನಿಂದ ಹೇರಳವಾಗಿ ಕಲಿಯಬಲ್ಲೆವು.
8. ನಮ್ಮ ಆತ್ಮಿಕ ಆವಶ್ಯಕತೆಗಳ ಜಾಗ್ರತೆ ವಹಿಸುವುದರಲ್ಲಿ ಯೆಹೋವನು ತನ್ನ ಔದಾರ್ಯವನ್ನು ಹೇಗೆ ತೋರಿಸಿದ್ದಾನೆ?
8 ತನ್ನ ಜೀವಿಗಳ ಪ್ರಾಪಂಚಿಕ ಆವಶ್ಯಕತೆಗಳ ವಿಷಯದಲ್ಲಿ ಸಮೃದ್ಧಿಯಾಗಿ ಒದಗಿಸುವುದಕ್ಕೆ ಕೂಡಿಸಿ, ಯೆಹೋವನು ಆತ್ಮಿಕ ರೀತಿಯಲ್ಲಿಯೂ ಅವರ ಆವಶ್ಯಕತೆಗಳ ಜಾಗ್ರತೆ ವಹಿಸುತ್ತಾನೆ. ನಮ್ಮಲ್ಲಿ ಯಾವನಿಗೂ ನಾವಿದ್ದ ಹತಾಶವಾದ ಆತ್ಮಿಕ ಸ್ಥಿತಿಯು ಗ್ರಹಿಕೆಗೆ ಬರುವ ಮೊದಲೇ, ಯೆಹೋವನು ನಮ್ಮ ಆತ್ಮಿಕ ಹಿತಕ್ಕಾಗಿ ಅತಿ ಉದಾತ್ತ ರೀತಿಯಲ್ಲಿ ವರ್ತಿಸಿದನು. ರೋಮಾಪುರ 5:8, 10ರಲ್ಲಿ ನಾವು ಓದುವುದು: “ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. . . . ದೇವರಿಗೆ ವೈರಿಗಳಾಗಿದ್ದ ನಾವು ಆತನ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನ”ವಾಗಿದ್ದೇವೆ. ಆ ಒದಗಿಸುವಿಕೆಯು ಪಾಪಪೂರ್ಣ ಮನುಷ್ಯರಿಗೆ ನಮ್ಮ ಸ್ವರ್ಗೀಯ ತಂದೆಯೊಂದಿಗೆ ಒಂದು ಆನಂದದ ಕುಟುಂಬ ಸಂಬಂಧದೊಳಗೆ ಬರುವಂತೆ ಸಾಧ್ಯಗೊಳಿಸುತ್ತದೆ. (ರೋಮಾಪುರ 8:20, 21) ನಾವು ನಮ್ಮ ಪಾಪಪೂರ್ಣ ಮತ್ತು ಅಪರಿಪೂರ್ಣ ಸ್ಥಿತಿಯ ಹೊರತೂ ಜೀವನವನ್ನು ಜಯಪ್ರದವಾಗಿ ಮಾಡಸಾಧ್ಯವಾಗುವಂತೆ, ನಮಗೆ ಯೋಗ್ಯವಾದ ಮಾರ್ಗದರ್ಶನವೂ ನಿರ್ದೇಶನವೂ ಒದಗಿಸಲ್ಪಡುವಂತೆಯೂ ಯೆಹೋವನು ನೋಡಿಕೊಂಡನು.—ಕೀರ್ತನೆ 119:105; 2 ತಿಮೊಥೆಯ 3:16.
9, 10. (ಎ) ಯೆಹೋವನು ಪರಿಪೂರ್ಣನಾದ ಆತಿಥೇಯನೆಂದು ನಾವು ಏಕೆ ಹೇಳಬಲ್ಲೆವು? (ಬಿ) ಈ ಸಂಬಂಧದಲ್ಲಿ ಸತ್ಯಾರಾಧಕರು ಯೆಹೋವನನ್ನು ಹೇಗೆ ಅನುಕರಿಸಬೇಕು?
9 ಈ ವೀಕ್ಷಣದಲ್ಲಿ, ಯೆಹೋವನು ನಿಜವಾಗಿಯೂ ಅನೇಕ ವಿಧಗಳಲ್ಲಿ ಪರಿಪೂರ್ಣ ಆತಿಥೇಯನಾಗಿದ್ದಾನೆಂದು ನಾವು ಹೇಳಸಾಧ್ಯವಿದೆ. ಆತನು ಕೊರತೆಯುಳ್ಳವರನ್ನು, ನಮ್ರರನ್ನು ಮತ್ತು ದೀನರನ್ನು ಅಲಕ್ಷಿಸುವುದಿಲ್ಲ. ಆತನು ಅಪರಿಚಿತರ ಕಡೆಗೆ, ತನ್ನ ವೈರಿಗಳ ಕಡೆಗೂ ನಿಜಾಸಕ್ತಿ ಮತ್ತು ಚಿಂತೆಯನ್ನು ತೋರಿಸಿ, ಯಾವುದೇ ಪ್ರಾಪಂಚಿಕ ಪ್ರತಿಫಲಕ್ಕಾಗಿ ಎದುರುನೋಡುವುದಿಲ್ಲ. ಇದೆಲ್ಲದರಲ್ಲಿ, ಆತನು ಪರಿಪೂರ್ಣ ಆತಿಥೇಯನ ಅಂತಿಮ ಮಾದರಿಯಾಗಿರುವುದಿಲ್ಲವೆ?
10 ಅಂತಹ ಪ್ರೀತಿಪಾತ್ರ ದಯೆ ಮತ್ತು ಔದಾರ್ಯದ ದೇವರೋಪಾದಿ, ತನ್ನ ಆರಾಧಕರು ತನ್ನನ್ನು ಅನುಕರಿಸಬೇಕೆಂದು ಯೆಹೋವನು ಬಯಸುತ್ತಾನೆ. ಬೈಬಲಿನಾದ್ಯಂತ, ಈ ಹಿತಕರವಾದ ಗುಣದ ಗಮನಾರ್ಹವಾದ ಮಾದರಿಗಳನ್ನು ನಾವು ನೋಡುತ್ತೇವೆ. ಎನ್ಸೈಕ್ಲೊಪೀಡಿಯ ಜೂಡೇಅಕ ಗಮನಿಸುವುದೇನಂದರೆ, “ಪುರಾತನ ಇಸ್ರಾಯೇಲಿನಲ್ಲಿ, ಆತಿಥ್ಯವು ಬರಿಯ ಸಭ್ಯ ಶಿಷ್ಟಾಚಾರಗಳ ಪ್ರಶ್ನೆಯಾಗಿರಲಿಲ್ಲ, ಬದಲಿಗೆ, ಅದೊಂದು ನೈತಿಕ ವ್ಯವಸ್ಥೆಯಾಗಿತ್ತು . . . ದಣಿದ ಪ್ರಯಾಣಿಕನನ್ನು ಸ್ವಾಗತಿಸುವ ಮತ್ತು ಅಪರಿಚಿತನನ್ನು ಒಬ್ಬನ ಮಧ್ಯೆ ಸೇರಿಸಿಕೊಳ್ಳುವ ಬೈಬಲ್ ಸಂಬಂಧಿತ ಪದ್ಧತಿಗಳು, ಯಾವುದರಿಂದ ಆತಿಥ್ಯ ಮತ್ತು ಅದರ ಎಲ್ಲ ಸಂಬಂಧಿತ ಸಂಗತಿಗಳು ಯೆಹೂದಿ ಸಂಪ್ರದಾಯದೊಳಗೆ ತೀರ ಗೌರವದಿಂದ ಕಾಣಲ್ಪಡುವ ಸದ್ಗುಣವಾಗಿ ವಿಕಸಿಸಿವೆಯೊ ಆ ಮಾತೃಕೆಯಾಗಿತ್ತು.” ಯಾವುದಾದರೊಂದು ಪ್ರತ್ಯೇಕ ಜನಾಂಗ ಅಥವಾ ಕುಲದ ಸ್ವಾಮ್ಯ ಮುದ್ರೆಯಾಗಿರುವುದಕ್ಕೂ ಹೆಚ್ಚಾಗಿ, ಆತಿಥ್ಯವು ಯೆಹೋವನ ಸತ್ಯಾರಾಧಕರೆಲ್ಲರ ವಿಶೇಷ ಗುಣವಾಗಿರಬೇಕು.
ದೇವದೂತರಿಗೆ ಆತಿಥೇಯ
11. ಆತಿಥ್ಯವು ಅನಿರೀಕ್ಷಿತ ಆಶೀರ್ವಾದಗಳನ್ನು ತಂದಿತೆಂದು ಯಾವ ಗಮನಾರ್ಹವಾದ ಉದಾಹರಣೆಯು ತೋರಿಸುತ್ತದೆ? (ಆದಿಕಾಂಡ 19:1-3; ನ್ಯಾಯಸ್ಥಾಪಕರು 13:11-16 ನ್ನು ಸಹ ನೋಡಿರಿ.)
11 ಆತಿಥ್ಯ ಪ್ರದರ್ಶನದ ಬೈಬಲ್ ವೃತ್ತಾಂತಗಳಲ್ಲಿ ಅತಿ ಜ್ಞಾತವಾದ ಒಂದು, ಹೆಬ್ರೋನಿನ ಸಮೀಪದ ಮಮ್ರೆ ತೋಪಿನಲ್ಲಿ ಬೀಡು ಬಿಟ್ಟಿದ್ದಾಗ, ಅಬ್ರಹಾಮ ಮತ್ತು ಸಾರಳದ್ದಾಗಿತ್ತು. (ಆದಿಕಾಂಡ 18:1-10; 23:19) “ಅತಿಥಿಸತ್ಕಾರಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ,” ಎಂಬ ಬುದ್ಧಿವಾದವನ್ನು ಅಪೊಸ್ತಲ ಪೌಲನು ಒದಗಿಸಿದಾಗ, ನಿಸ್ಸಂದೇಹವಾಗಿ ಈ ಘಟನೆಯು ಅವನ ಮನಸ್ಸಿನಲ್ಲಿತ್ತು. (ಇಬ್ರಿಯ 13:2) ಈ ವೃತ್ತಾಂತದ ಅಧ್ಯಯನವು, ಆತಿಥ್ಯವು ಬರಿಯ ಪದ್ಧತಿ ಅಥವಾ ಪಾಲನೆಯ ಒಂದು ವಿಷಯವಲ್ಲವೆಂಬುದನ್ನು ನೋಡಲು ನಮಗೆ ಸಹಾಯಮಾಡುವುದು. ಬದಲಿಗೆ, ಅದು ಅದ್ಭುತಕರವಾದ ಆಶೀರ್ವಾದಗಳನ್ನು ತರುವ ಒಂದು ದೈವಿಕ ಗುಣವಾಗಿದೆ.
12. ಅಪರಿಚಿತರ ಕಡೆಗೆ ಅಬ್ರಹಾಮನು ತನ್ನ ಪ್ರೇಮವನ್ನು ಹೇಗೆ ತೋರಿಸಿದನು?
12 ಆ ಭೇಟಿಕಾರರು ಅಜ್ಞಾತರೂ ಅಬ್ರಹಾಮನಿಂದ ನಿರೀಕ್ಷಿಸಲ್ಪಡದಿದ್ದವರೂ ಆಗಿದ್ದರೆಂದು ಆದಿಕಾಂಡ 18:1, 2 ಸೂಚಿಸುತ್ತದೆ. ಅಂತೆಯೇ ಹೇಳುವುದಾದರೆ ಕೇವಲ ಮೂವರು ಅಪರಿಚಿತರು ದಾಟಿಹೋಗುತ್ತಿರುವಂತಿತ್ತು. ಕೆಲವು ವ್ಯಾಖ್ಯಾನಕಾರರಿಗನುಸಾರ, ಪೌರಸ್ತ್ಯರಲ್ಲಿದ್ದ ಪದ್ಧತಿಯು, ಒಬ್ಬ ಪ್ರಯಾಣಿಕನು ಒಂದು ಅಪರಿಚಿತ ದೇಶದಲ್ಲಿ ಯಾರ ಪರಿಚಯವೂ ಇಲ್ಲದವನಾಗಿದ್ದರೂ, ಅವನಿಗೆ ಆತಿಥ್ಯವನ್ನು ನಿರೀಕ್ಷಿಸುವ ಹಕ್ಕಿತ್ತು. ಆದರೆ ಆ ಅಪರಿಚಿತರು ತಮ್ಮ ವಿಶೇಷ ಹಕ್ಕನ್ನು ಪ್ರಯೋಗಿಸುವಂತೆ ಅಬ್ರಹಾಮನು ಕಾಯಲಿಲ್ಲ; ಅವನು ಆರಂಭಿಕ ಹೆಜ್ಜೆಯನ್ನು ತೆಗೆದುಕೊಂಡನು. ತನಗಿಂತ ಸ್ವಲ್ಪ ದೂರದಲ್ಲಿದ್ದ ಈ ಅಪರಿಚಿತರನ್ನು ಸಂಧಿಸಲು ಅವನು “ಓಡಿಹೋಗಲಾರಂಭಿಸಿದನು” (NW)—ಇದೆಲ್ಲ ನಡೆದುದು “ಮಧ್ಯಾಹ್ನದಲ್ಲಿ,” ಮತ್ತು ಅಬ್ರಹಾಮನು 99 ವರ್ಷ ಪ್ರಾಯದವನಾಗಿದ್ದನು! ನಾವು ಅನುಕರಿಸಲು ಆದರ್ಶಪ್ರಾಯನು ಎಂದು ಪೌಲನು ಅಬ್ರಹಾಮನನ್ನು ಸೂಚಿಸಿ ಏಕೆ ಹೇಳಿದನೆಂದು ಇದು ತೋರಿಸುವುದಿಲ್ಲವೊ? ಆತಿಥ್ಯದ ಸಾರವು ಇದೇ—ಅಪರಿಚಿತರ ಕಡೆಗೆ ಪ್ರೇಮ ಅಥವಾ ಪ್ರೀತಿ, ಅವರ ಆವಶ್ಯಕತೆಗಳ ಕಡೆಗೆ ಚಿಂತೆ. ಅದೊಂದು ಸಕಾರಾತ್ಮಕ ಗುಣವಾಗಿದೆ.
13. ಭೇಟಿಕಾರರ ಮುಂದೆ ಅಬ್ರಹಾಮನು ‘ಬೊಗ್ಗಿ ನಮಸ್ಕರಿಸಿದ್ದು’ ಏಕೆ?
13 ಅಪರಿಚಿತರನ್ನು ಭೇಟಿಮಾಡಿದ ಮೇಲೆ, ವೃತ್ತಾಂತವು ನಮಗೆ, ಅಬ್ರಹಾಮನು “ಬೊಗ್ಗಿ ನಮಸ್ಕರಿಸಿ” [“ನೆಲಕ್ಕೆ ಅಡ್ಡಬೀಳಲು ತೊಡಗಿದನು,” NW]ದನು ಎಂದೂ ಹೇಳುತ್ತದೆ. ತೀರ ಅಪರಿಚಿತರಿಗೆ ಬೊಗ್ಗುವುದೊ? ಅಬ್ರಹಾಮನು ಮಾಡಿದಂತಹ ಬೊಗ್ಗುವಿಕೆಯು, ಒಬ್ಬ ಗೌರವಾನಿತ್ವ ಅತಿಥಿಗೆ ಅಥವಾ ಉಚ್ಚ ಸ್ಥಾನದಲ್ಲಿರುವ ಒಬ್ಬನಿಗೆ ಅಭಿವಂದಿಸುವ ಒಂದು ರೀತಿಯಾಗಿತ್ತು, ದೇವರಿಗೆ ಮಾತ್ರ ಕಾದಿರಿಸಲ್ಪಟ್ಟಿರುವ ಆರಾಧನೆಯ ಒಂದು ಕ್ರಿಯೆಯೊಂದಿಗೆ ತಪ್ಪಾಗಿ ಗ್ರಹಿಸಬಾರದು. (ಹೋಲಿಸಿ ಅ. ಕೃತ್ಯಗಳು 10:25, 26; ಪ್ರಕಟನೆ 19:10.) ಬಗ್ಗುವ ಮೂಲಕ, ಕೇವಲ ತಲೆತಗ್ಗಿಸಿಯಲ್ಲ, “ನೆಲಕ್ಕೆ” ಅಡ್ಡಬೀಳುವ ಮೂಲಕ, ಅಬ್ರಹಾಮನು ಈ ಮೂವರು ಅಪರಿಚಿತರಿಗೆ ಪ್ರಮುಖರಾಗಿರುವವರೋಪಾದಿ ಗೌರವವನ್ನು ಕೊಟ್ಟನು. ಅವನು ಒಂದು ದೊಡ್ಡ, ಸಂಪದ್ಭರಿತ ಪಿತೃಪ್ರಧಾನ ಕುಟುಂಬದ ಶಿರಸ್ಸಾಗಿದ್ದರೂ, ಈ ಅಪರಿಚಿತರನ್ನು, ಅವರು ತನಗಿಂತಲೂ ಹೆಚ್ಚಿನ ಗೌರವಕ್ಕೆ ಯೋಗ್ಯರೆಂದು ಕಂಡನು. ಅಪರಿಚಿತರ ಮೇಲಿನ ರೂಢಿಯ ಅನುಮಾನ, ಪೂರ್ವಾಪರ ಪರಿಗಣನೆಗಿಂತ ಇದು ಎಷ್ಟೊಂದು ಭಿನ್ನವಾಗಿದೆ! ಅಬ್ರಹಾಮನು, “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ,” ಎಂಬ ಹೇಳಿಕೆಯ ಅರ್ಥವನ್ನು ನಿಜವಾಗಿಯೂ ಪ್ರದರ್ಶಿಸಿದನು.—ರೋಮಾಪುರ 12:10.
14. ಅಬ್ರಹಾಮನು ಅಪರಿಚಿತರಿಗೆ ಆತಿಥ್ಯವನ್ನು ತೋರಿಸಿದ್ದರಲ್ಲಿ ಯಾವ ಪ್ರಯತ್ನ ಮತ್ತು ತ್ಯಾಗ ಒಳಗೂಡಿದ್ದವು?
14 ವೃತ್ತಾಂತದ ಉಳಿದ ಭಾಗವು, ಅಬ್ರಹಾಮನ ಅನಿಸಿಕೆಗಳು ನೈಜವಾಗಿದ್ದವೆಂಬುದನ್ನು ತೋರಿಸುತ್ತದೆ. ಊಟವು ತಾನೇ ಅಸಾಧಾರಣವಾದುದಾಗಿತ್ತು. ಧಾರಾಳ ಪಶುಗಳಿರುವ ದೊಡ್ಡ ಕುಟುಂಬದಲ್ಲಿಯೂ, “ಕೊಬ್ಬಿದ ಎಳೇ ಕರು” ದಿನನಿತ್ಯದ ಆಹಾರವಾಗಿರಲಿಲ್ಲ. ಆ ಪ್ರದೇಶದ ಬಳಕೆಯ ಪದ್ಧತಿಗಳ ಕುರಿತು, ಜಾನ್ ಕಿಟೋ ಅವರ ಡೆಯ್ಲಿ ಬೈಬಲ್ ಇಲಸ್ಟ್ರೇಷನ್ಸ್ ಗಮನಿಸುವುದು: “ಕೆಲವು ಹಬ್ಬಗಳಲ್ಲಿ ಅಥವಾ ಒಬ್ಬ ಅಪರಿಚಿತನ ಆಗಮನದಲ್ಲಿ ಅಲ್ಲದೆ ಸುಖಭೋಗಗಳಲ್ಲಿ ಲೋಲುಪತೆಯಿರುವುದಿಲ್ಲ; ಮತ್ತು ಅಂತಹ ಸಂದರ್ಭಗಳಲ್ಲಿ ಮಾತ್ರ, ಅನೇಕ ಹಿಂಡುಗಳು ಮತ್ತು ಮಂದೆಗಳಿರುವ ಧಣಿಗಳಿಂದಲೂ, ಪ್ರಾಣಿಮಾಂಸವು ತಿನ್ನಲ್ಪಡುತ್ತದೆ.” ಬೆಚ್ಚನೆಯ ಹವಾಮಾನವು ಹಾಳಾಗುವಂತಹ ಯಾವುದೇ ಆಹಾರವನ್ನು ಶೇಖರಿಸಿಡುವಂತೆ ಅನುಮತಿಸಲಿಲ್ಲ. ಆದಕಾರಣ ಅಂತಹ ಊಟವನ್ನು ಬಡಿಸಬೇಕಾದರೆ ಎಲ್ಲವನ್ನು ಅದೇ ಸಮಯದಲ್ಲಿ ತಯಾರಿಸಬೇಕಾಗಿತ್ತು. ಈ ಸಂಕ್ಷಿಪ್ತ ವೃತ್ತಾಂತದಲ್ಲಿ, “ಕೂಡಲೆ,” ಅಥವಾ “ಬೇಗನೆ” ಎಂಬಂತಹ ಮಾತು, ಮೂರು ಬಾರಿ ಬರುವುದು ಆಶ್ಚರ್ಯಕರವಾಗಿರುವುದಿಲ್ಲ. ಮತ್ತು ಅಬ್ರಹಾಮನು ಊಟ ತಯಾರಿಸುವರೆ ಏರ್ಪಡಿಸಲು ಅಕ್ಷರಾರ್ಥವಾಗಿ, “ಓಡಿ”ದನು!—ಆದಿಕಾಂಡ 18:6-8.
15. ಅಬ್ರಹಾಮನು ಮಾದರಿಯಿಟ್ಟಂತೆ, ಆತಿಥ್ಯವನ್ನು ತೋರಿಸುವುದರಲ್ಲಿ ಪ್ರಾಪಂಚಿಕ ವಸ್ತುಗಳ ಕುರಿತ ಯೋಗ್ಯ ವೀಕ್ಷಣವೇನು?
15 ಆದರೂ ಉದ್ದೇಶವು, ಯಾವನನ್ನಾದರೂ ಮೆಚ್ಚಿಸಲು ಒಂದು ದೊಡ್ಡ ಔತಣವನ್ನು ತಯಾರಿಸುವುದಾಗಿರಲಿಲ್ಲ. ಅಬ್ರಹಾಮನು ಮತ್ತು ಸಾರಳು ಊಟವನ್ನು ಸಿದ್ಧಮಾಡಿ, ಬಡಿಸುವುದರಲ್ಲಿ ಸಕಲ ಪ್ರಯತ್ನವನ್ನೂ ಮಾಡಿದರೂ, ಅಬ್ರಹಾಮನು ಆ ಮೊದಲು ಅದನ್ನು ಹೇಗೆ ಸೂಚಿಸಿದನೆಂಬುದನ್ನು ಗಮನಿಸಿರಿ: “ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿರಿ. ನೀವು ದಾಸನಿರುವ ಸ್ಥಳದ ಹತ್ತಿರ ಹಾದುಹೋಗುತ್ತೀರಲ್ಲಾ. ನೀರು ತರಿಸಿಕೊಡುತ್ತೇನೆ; ನಿಮ್ಮ ಕಾಲುಗಳನ್ನು ತೊಳೆದುಕೊಂಡು ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿರಿ. ಸ್ವಲ್ಪ ಆಹಾರ ತರುತ್ತೇನೆ, ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಬೆಳೆಸಬಹುದು.” (ಆದಿಕಾಂಡ 18:4, 5) ಆ “ಸ್ವಲ್ಪ ಆಹಾರ” ಕೊಬ್ಬಿದ ಕರುವಿನೊಂದಿಗೆ, ಉತ್ತಮ ಹಿಟ್ಟಿನಿಂದ ಮಾಡಿದ ಉರುಟು ರೊಟ್ಟಿಗಳು, ಬೆಣ್ಣೆ ಮತ್ತು ಹಾಲಾಗಿದ್ದು—ರಾಜಯೋಗ್ಯ ಔತಣವಾಗಿ ಪರಿಣಮಿಸಿತು. ಪಾಠವೇನು? ಆತಿಥ್ಯವನ್ನು ತೋರಿಸುವಾಗ ಪ್ರಾಮುಖ್ಯ ವಿಷಯವು ಅಥವಾ ಒತ್ತಿ ತೋರಿಸಬೇಕಾದ ವಿಷಯವು, ಊಟ, ಪಾನೀಯಗಳು ಎಷ್ಟು ಪುಷ್ಕಳವಾಗಿರುವುವು, ಅಥವಾ ಪರ್ಯಾಲೋಚಿಸಿ ಮಾಡಿದ ಯಾವ ವಿನೋದಾವಳಿಯನ್ನು ಒದಗಿಸಲಾಗುವುದು, ಮುಂತಾದ ವಿಷಯಗಳಲ್ಲಿ ಅಲ್ಲ. ಆತಿಥ್ಯವು ಒಬ್ಬನು ಬೆಲೆಬಾಳುವ ವಸ್ತುಗಳನ್ನು ಒದಗಿಸಬಲ್ಲನೊ ಎಂಬುದರ ಮೇಲೆ ಆಧಾರಿಸುವುದಿಲ್ಲ. ಬದಲಿಗೆ, ಇತರರ ಕಡೆಗೆ ಯಥಾರ್ಥವಾದ ಚಿಂತೆ ಮತ್ತು ಒಬ್ಬನಿಗೆ ಸಾಧ್ಯವಿರುವ ಮಟ್ಟಿಗೆ ಇತರರಿಗೆ ಒಳ್ಳೆಯದನ್ನು ಮಾಡುವ ಬಯಕೆಯ ಮೇಲೆ ಆಧಾರಿಸಿದೆ. “ದ್ವೇಷವಿರುವಲ್ಲಿ ಕೊಬ್ಬಿದ ದನದ ಮಾಂಸಕ್ಕಿಂತಲೂ ಪ್ರೇಮವಿರುವಲ್ಲಿ ಸೊಪ್ಪಿನ ಊಟವೇ ಉತ್ತಮ,” ಎನ್ನುತ್ತದೆ ಒಂದು ಬೈಬಲ್ ಜ್ಞಾನೋಕ್ತಿ, ಮತ್ತು ನೈಜ ಆತಿಥ್ಯಕ್ಕೆ ಕೀಲಿ ಕೈಯಿರುವುದು ಅಲ್ಲಿಯೇ.—ಜ್ಞಾನೋಕ್ತಿ 15:17.
16. ತಾನು ಭೇಟಿಕಾರರಿಗೆ ಏನು ಮಾಡಿದನೊ ಅದರಲ್ಲಿ ಅಬ್ರಹಾಮನು ಆತ್ಮಿಕ ವಿಷಯಗಳಿಗೆ ಹೇಗೆ ಗಣ್ಯತೆಯನ್ನು ತೋರಿಸಿದನು?
16 ಆದರೂ ನಾವು, ಅಲ್ಲಿ ಆ ಇಡೀ ಸಂಭವಕ್ಕೆ ಒಂದು ಆತ್ಮಿಕ ಸೂಚ್ಯಾರ್ಥವೂ ಇತ್ತು ಎಂಬುದನ್ನು ಗಮನಿಸಬೇಕು. ಈ ಭೇಟಿಕಾರರು ಯೆಹೋವನಿಂದ ಬಂದ ದೂತರೆಂದು ಅಬ್ರಹಾಮನು ಹೇಗೊ ಗ್ರಹಿಸಿದನು. “ಸ್ವಾಮೀ, [“ಯೆಹೋವನೇ,” NW] ದಯವಿರಲಿ; ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿರಿ,” ಎಂದು ಅವನು ಅವರನ್ನು ಸಂಬೋಧಿಸಿದರಲ್ಲಿ ಇದು ಸೂಚಿಸಲ್ಪಡುತ್ತದೆ.a (ಆದಿಕಾಂಡ 18:3; ಹೋಲಿಸಿ ವಿಮೋಚನಕಾಂಡ 33:20.) ತನಗಾಗಿ ಅವರಲ್ಲಿ ಒಂದು ಸಂದೇಶವಿತ್ತೊ ಅಥವಾ ಅವರು ಕೇವಲ ದಾಟಿಹೋಗುತ್ತಿದ್ದವರೊ ಎಂಬುದು ಅಬ್ರಹಾಮನಿಗೆ ಮೊದಲೇ ಗೊತ್ತಿರಲಿಲ್ಲ. ಹೇಗಿದ್ದರೂ, ಯೆಹೋವನ ಉದ್ದೇಶದ ಹೊರಗಣ ಕೆಲಸವು ನೆರವೇರುತ್ತ ಇತ್ತೆಂಬುದನ್ನು ಅವನು ಗಣ್ಯಮಾಡಿದನು. ಈ ವ್ಯಕ್ತಿಗಳು ಯೆಹೋವನಿಂದ ಯಾವುದೊ ಒಂದು ಉದ್ದಿಷ್ಟ ಕಾರ್ಯದಲ್ಲಿ ಒಳಗೂಡಿದ್ದರು. ಅದಕ್ಕೆ ತನ್ನಿಂದ ಏನಾದರೂ ಸಹಾಯಮಾಡಸಾಧ್ಯವಿರುವಲ್ಲಿ, ಅದು ಅವನ ಮನಸ್ಸಂತೋಷವಾಗಿರಲಿಕ್ಕಿತ್ತು. ಯೆಹೋವನ ಸೇವಕರು ಅತ್ಯುತ್ತಮವಾದುದಕ್ಕೆ ಅರ್ಹರೆಂದು ಅವನು ಗ್ರಹಿಸಿದನು, ಮತ್ತು ಇದ್ದ ಪರಿಸ್ಥಿತಿಯಲ್ಲಿ ತನಗೆ ಅತ್ಯುತ್ತಮವಾದುದನ್ನು ಅವನು ಒದಗಿಸಲಿದ್ದನು. ಹೀಗೆ ಮಾಡುವುದರಿಂದ ತನಗೊ ಇತರ ಯಾರಿಗೊ ಆತ್ಮಿಕಾಶೀರ್ವಾದವೊಂದು ಇರುವುದು. ಅದು ಪರಿಣಮಿಸಿದಂತೆ, ಅಬ್ರಹಾಮ ಮತ್ತು ಸಾರಳು ತಮ್ಮ ಮನಃಪೂರ್ವಕವಾದ ಆತಿಥ್ಯಕ್ಕಾಗಿ ಬಹಳವಾಗಿ ಆಶೀರ್ವದಿಸಲ್ಪಟ್ಟರು.—ಆದಿಕಾಂಡ 18:9-15; 21:1, 2.
ಆದರಾತಿಥ್ಯದ ಜನರು
17. ತಮ್ಮ ಮಧ್ಯೆಯಿದ್ದ ಅಪರಿಚಿತರು ಮತ್ತು ಕೊರತೆಯಿದ್ದವರ ಕುರಿತು ಯೆಹೋವನು ಇಸ್ರಾಯೇಲ್ಯರಿಂದ ಏನನ್ನು ಅಪೇಕ್ಷಿಸಿದನು?
17 ಅಬ್ರಹಾಮನ ಗಮನಾರ್ಹ ಮಾದರಿಯನ್ನು, ಅವನಿಂದ ಬಂದ ಜನಾಂಗವು ಮರೆಯಲಿಕ್ಕಿರಲಿಲ್ಲ. ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ಅವರ ನಡುವೆ ಇದ್ದ ಅಪರಿಚಿತರಿಗೆ ಆತಿಥ್ಯವನ್ನು ತೋರಿಸುವ ಕುರಿತ ಮುನ್ನೇರ್ಪಾಡುಗಳು ಸೇರಿಸಲ್ಪಟ್ಟವು. “ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು; ಅವರನ್ನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತ ದೇಶದಲ್ಲಿದ್ದಾಗ ನೀವೂ ಅನ್ಯರಾಗಿದ್ದಿರಲ್ಲವೇ. ನಾನು ನಿಮ್ಮ ದೇವರಾದ ಯೆಹೋವನು.” (ಯಾಜಕಕಾಂಡ 19:34) ಜನರು ಪ್ರಾಪಂಚಿಕ ಬೆಂಬಲದ ಅಗತ್ಯವಿದ್ದವರಿಗೆ ವಿಶೇಷ ಪರಿಗಣನೆಯನ್ನು ತೋರಿಸಬೇಕಾಗಿತ್ತು, ಅವರನ್ನು ಲಘುವಾಗಿ ಮನಸ್ಸಿನಿಂದ ದೂರಮಾಡಬಾರದಾಗಿತ್ತು. ಯೆಹೋವನು ಸಮೃದ್ಧ ಬೆಳೆಗಳಿಂದ ಅವರನ್ನು ಆಶೀರ್ವದಿಸಿದಾಗ, ಅವರು ತಮ್ಮ ಹಬ್ಬಗಳಲ್ಲಿ ಸಂತೋಷಿಸಿದಾಗ, ಸಬ್ಬತ್ ವರ್ಷಗಳಲ್ಲಿ ತಮ್ಮ ಶ್ರಮಗಳಿಂದ ಅವರು ವಿಶ್ರಾಂತಿ ಪಡೆದಾಗ, ಮತ್ತು ಇತರ ಸಂದರ್ಭಗಳಲ್ಲಿ, ಜನರು ದುರ್ದೆಸೆಯಲ್ಲಿರುವವರನ್ನು—ವಿಧವೆಯರು, ತಂದೆಯಿಲ್ಲದ ಹುಡುಗರು ಮತ್ತು ಅನ್ಯ ನಿವಾಸಿಗಳನ್ನು—ಜ್ಞಾಪಿಸಿಕೊಳ್ಳಬೇಕಾಗಿತ್ತು.—ಧರ್ಮೋಪದೇಶಕಾಂಡ 16:9-14; 24:19-21; 26:12, 13.
18. ಯೆಹೋವನ ಅನುಗ್ರಹ ಮತ್ತು ಆಶೀರ್ವಾದವನ್ನು ಪಡೆಯುವ ಸಂಬಂಧದಲ್ಲಿ ಆತಿಥ್ಯವು ಎಷ್ಟು ಪ್ರಾಮುಖ್ಯವಾಗಿದೆ?
18 ಇಸ್ರಾಯೇಲ್ಯರು ಇತರರ ಕಡೆಗೆ, ದಯೆ, ಔದಾರ್ಯ ಮತ್ತು ಆತಿಥ್ಯಗಳನ್ನು ಅಭ್ಯಸಿಸಲು ಅಸಡ್ಡೆಮಾಡಿದಾಗ, ಯೆಹೋವನು ಅವರೊಂದಿಗೆ ವ್ಯವಹರಿಸಿದ ರೀತಿಯಲ್ಲಿಯೂ—ವಿಶೇಷವಾಗಿ ಕೊರತೆಯಿದ್ದವರ ಕಡೆಗೆ—ಈ ಗುಣಗಳ ಪ್ರಮುಖತೆಯನ್ನು ನೋಡಸಾಧ್ಯವಿದೆ. ಅಪರಿಚಿತರ ಮತ್ತು ಕೊರತೆಯುಳ್ಳವರ ಕಡೆಗೆ ತೋರಿಸುವ ದಯೆ ಮತ್ತು ಔದಾರ್ಯವು, ತನ್ನ ಮುಂದುವರಿಯುವ ಆಶೀರ್ವಾದಗಳನ್ನು ಪಡೆಯುವರೆ ತನ್ನ ಜನರಿಂದ ತಾನು ಅಪೇಕ್ಷಿಸುವ ಗುಣಗಳಲ್ಲಿ ಸೇರಿವೆಯೆಂದು ಯೆಹೋವನು ಸ್ಪಷ್ಟಗೊಳಿಸಿದನು. (ಕೀರ್ತನೆ 82:2, 3; ಯೆಶಾಯ 1:17; ಯೆರೆಮೀಯ 7:5-7; ಯೆಹೆಜ್ಕೇಲ 22:7; ಜೆಕರ್ಯ 7:9-11) ಈ ಮತ್ತು ಇತರ ಕಡ್ಡಾಯ ಆವಶ್ಯಕತೆಗಳನ್ನು ನಿರ್ವಹಿಸುವುದರಲ್ಲಿ ಆ ಜನಾಂಗವು ಶ್ರದ್ಧೆಯುಳ್ಳದ್ದಾಗಿದ್ದಾಗ, ಅವರು ಏಳಿಗೆ ಹೊಂದಿ, ಪ್ರಾಪಂಚಿಕ ಹಾಗೂ ಆತ್ಮಿಕ ಸಮೃದ್ಧಿಯನ್ನು ಅನುಭವಿಸಿದರು. ಅವರು ತಮ್ಮ ಸ್ವಾರ್ಥದ ವೈಯಕ್ತಿಕ ಕಸಬುಗಳಲ್ಲಿ ಮುಳುಗಿ, ಅಗತ್ಯದಲ್ಲಿರುವವರಿಗೆ ಈ ಹಿತಕರವಾದ ಗುಣಗಳನ್ನು ತೋರಿಸಲು ಅಸಡ್ಡೆಮಾಡಿದಾಗ, ಅವರು ಯೆಹೋವನ ಖಂಡನೆಯನ್ನು ಪಡೆದರು; ಕೊನೆಗೆ ಪ್ರತಿಕೂಲವಾದ ತೀರ್ಪು ಅವರಿಗೆ ಕೊಡಲ್ಪಟ್ಟಿತು.—ಧರ್ಮೋಪದೇಶಕಾಂಡ 27:19; 28:15, 45.
19. ನಾವು ಮುಂದೆ ಏನನ್ನು ಪರಿಗಣಿಸಬೇಕು?
19 ಹಾಗಾದರೆ, ನಮ್ಮನ್ನು ಪರೀಕ್ಷಿಸಿಕೊಂಡು, ನಾವು ಈ ವಿಷಯದಲ್ಲಿ ಯೆಹೋವನ ನಿರೀಕ್ಷಣೆಗಳಿಗೆ ಅನುಸಾರವಾಗಿ ಬದುಕುತ್ತಿದ್ದೇವೊ ಎಂದು ನೋಡುವುದು ಅದೆಷ್ಟು ಪ್ರಾಮುಖ್ಯ! ಜಗತ್ತಿನ ಸ್ವಾರ್ಥಪರ ಹಾಗೂ ವಿಂಗಡಿಸುವ ಮನೋಭಾವದ ವೀಕ್ಷಣದಲ್ಲಂತೂ ಇದು ಇಂದು ವಿಶೇಷವಾಗಿ ನಿಜವಾಗಿದೆ. ವಿಭಜಿತ ಜಗತ್ತಿನಲ್ಲಿ ನಾವು ಹೇಗೆ ಕ್ರೈಸ್ತಾತಿಥ್ಯವನ್ನು ತೋರಿಸಬಲ್ಲೆವು? ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವ ವಿಷಯವು ಅದಾಗಿದೆ.
[ಪಾದಟಿಪ್ಪಣಿ]
a ಈ ವಿಷಯದ ಹೆಚ್ಚು ಪೂರ್ಣವಾದ ಚರ್ಚೆಗಾಗಿ, ಮೇ 15, 1988ರ ದ ವಾಚ್ಟವರ್ನ “ದೇವರನ್ನು ಯಾರಾದರೂ ಕಂಡಿದ್ದಾರೊ?” ಎಂಬ ಲೇಖನವನ್ನು, 21-3ನೆಯ ಪುಟಗಳಲ್ಲಿ ನೋಡಿರಿ.
ನಿಮಗೆ ಜ್ಞಾಪಕವಿದೆಯೆ?
◻ “ಆತಿಥ್ಯ”ವೆಂದು ಭಾಷಾಂತರಿಸಲ್ಪಟ್ಟಿರುವ ಬೈಬಲ್ ಪದದ ಅರ್ಥವೇನು?
◻ ಆತಿಥ್ಯವನ್ನು ತೋರಿಸುವುದರಲ್ಲಿ ಯೆಹೋವನು ಯಾವ ವಿಧಗಳಲ್ಲಿ ಪರಿಪೂರ್ಣ ಮಾದರಿಯಾಗಿದ್ದಾನೆ?
◻ ಆತಿಥ್ಯವನ್ನು ತೋರಿಸುವುದರಲ್ಲಿ ಅಬ್ರಹಾಮನು ಎಷ್ಟರ ಮಟ್ಟಿಗೆ ಮುಂದುವರಿದನು?
◻ ಸತ್ಯಾರಾಧಕರೆಲ್ಲರೂ ಏಕೆ “ಆತಿಥ್ಯದ ಮಾರ್ಗವನ್ನು ಅನುಸರಿ”ಸಬೇಕು?