ಪ್ರಕೃತಿ ವಿಕೋಪಗಳ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ಕೊಡೋ ಉತ್ತರ
ಇವತ್ತು ನಡೀತಿರೋ ಪ್ರಕೃತಿ ವಿಕೋಪಗಳಿಗೆ ದೇವ್ರು ಕಾರಣ ಅಲ್ಲ. ಇದಕ್ಕೆ ತುತ್ತಾದವ್ರನ್ನ ನೋಡೋವಾಗ ದೇವ್ರಿಗೆ ತುಂಬಾ ಬೇಜಾರಾಗುತ್ತೆ. ಆದ್ರೆ ದೇವರು ಮುಂದೆ ತನ್ನ ಸರ್ಕಾರದ ಮೂಲಕ ಎಲ್ಲಾ ಕಷ್ಟಗಳ ಜೊತೆಗೆ ಪ್ರಕೃತಿ ವಿಕೋಪಗಳನ್ನ ಕೂಡ ತೆಗೆದು ಹಾಕ್ತಾನೆ. ಅಲ್ಲಿವರೆಗೂ ಅದ್ರಿಂದ ಬಾಧಿತರಾದವರಿಗೆ ಸಾಂತ್ವನವನ್ನ ಕೊಡ್ತಾನೆ.—2 ಕೊರಿಂಥ 1:3.
ಪ್ರಕೃತಿ ವಿಕೋಪಗಳು ದೇವರು ಕೊಡೋ ಶಿಕ್ಷೆ ಅಲ್ಲ ಅಂತ ಹೇಗೆ ಹೇಳ್ಬಹುದು?
ದೇವರು ಕೆಟ್ಟ ಜನರನ್ನ ನಾಶಮಾಡೋಕೆ ನೈಸರ್ಗಿಕ ಶಕ್ತಿಗಳನ್ನ ಬಳಸಿದ ಅಂತ ಬೈಬಲ್ ಹೇಳುತ್ತೆ. ಆದ್ರೆ ಆತನು ತಂದ ನಾಶನಕ್ಕೂ ಪ್ರಕೃತಿ ವಿಕೋಪಗಳಿಗೂ ತುಂಬಾ ವ್ಯತ್ಯಾಸ ಇದೆ.
ಪ್ರಕೃತಿ ವಿಕೋಪಗಳು ಒಳ್ಳೇಯವರ ಮೇಲೂ ಕೆಟ್ಟವರ ಮೇಲೂ ಬರುತ್ತೆ. ಆದ್ರೆ ದೇವರು ನೈಸರ್ಗಿಕ ಶಕ್ತಿಗಳನ್ನ ಬಳಸಿದಾಗ ಕೆಟ್ಟ ಜನರು ಮಾತ್ರ ನಾಶವಾದ್ರು. ಉದಾಹರಣೆಗೆ, ದೇವರು ಸೋದೋಮ್ ಗೊಮೋರವನ್ನ ನಾಶ ಮಾಡಿದಾಗ ಲೋಟ ಮತ್ತು ಅವ್ನ ಇಬ್ರು ಹೆಣ್ಣು ಮಕ್ಕಳನ್ನ ಕಾಪಾಡಿದ. ಯಾಕಂದ್ರೆ ಅವ್ರು ಒಳ್ಳೆಯವರಾಗಿದ್ರು. (ಆದಿಕಾಂಡ 19:29, 30) ದೇವ್ರು ಆಗಿದ್ದ ಜನರ ಮನಸ್ಸಿನಲ್ಲಿ ಏನಿದೆ ಅಂತ ತಿಳ್ಕೊಂಡು ಒಳ್ಳೇವ್ರನ್ನ ಉಳಿಸಿದ ಕೆಟ್ಟವ್ರನ್ನ ನಾಶ ಮಾಡ್ದ.—ಆದಿಕಾಂಡ 18:23-32; 1 ಸಮುವೇಲ 16:7.
ಪ್ರಕೃತಿ ವಿಕೋಪಗಳು ಯಾವುದೇ ಮುನ್ನೆಚ್ಚರಿಕೆಗಳಿಲ್ಲದೆ ಬರುತ್ತೆ. ದೇವರು ನೈಸರ್ಗಿಕ ಶಕ್ತಿಗಳನ್ನ ಬಳಸಿ ಕೆಟ್ಟ ಜನ್ರನ್ನ ನಾಶ ಮಾಡೋಕು ಮುಂಚೆ ಎಚ್ಚರಿಕೆಗಳನ್ನ ಕೊಟ್ಟನು. ಯಾರು ಎಚ್ಚರಿಕೆಗಳಿಗೆ ಕಿವಿಗೊಟ್ಟರೋ ಅವ್ರು ತಮ್ಮ ಜೀವ ಉಳಿಸಿಕೊಂಡ್ರು.—ಆದಿಕಾಂಡ 7:1-5; ಮತ್ತಾಯ 24:38, 39.
ಪ್ರಕೃತಿ ವಿಕೋಪಗಳಿಗೆ ಮನುಷ್ಯನೂ ಕಾರಣ. ಅವನು ಪರಿಸರ ಮಾಲಿನ್ಯ ಮಾಡ್ತಿದ್ದಾನೆ, ಭೂಕಂಪ, ಪ್ರವಾಹ ಆಗೋ ಇನ್ನಿತರ ಅಪಾಯಕಾರಿ ಸ್ಥಳಗಳಲ್ಲಿ ದೊಡ್ಡದೊಡ್ಡ ಕಟ್ಟಡಗಳನ್ನ ಕಟ್ತಿದ್ದಾನೆ. ಇದ್ರಿಂದ ಪ್ರಕೃತಿ ನಾಶ ಆಗ್ತಿದೆ. (ಪ್ರಕಟನೆ 11:18) ಇದಕ್ಕೆಲ್ಲಾ ಕಾರಣ ಮನುಷ್ಯನೇ ಹೊರತು ದೇವರಲ್ಲ.—ಜ್ಞಾನೋಕ್ತಿ 19:3.
ಪ್ರಕೃತಿ ವಿಕೋಪಗಳು ಕಡೇ ದಿವಸಗಳ ಸೂಚನೆನಾ?
ಹೌದು. “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಅಥವಾ “ಕಡೇ ದಿವಸಗಳಲ್ಲಿ” ಪ್ರಕೃತಿ ವಿಕೋಪಗಳು ಆಗುತ್ತೆ ಅಂತ ಬೈಬಲ್ ಹೇಳಿದೆ. (ಮತ್ತಾಯ 24:3; 2 ತಿಮೊತಿ 3:1) ಉದಾಹರಣೆಗೆ ನಮ್ಮ ಕಾಲದಲ್ಲಿ, “ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು” ಅಂತ ಯೇಸು ಹೇಳಿದನು. (ಮತ್ತಾಯ 24:7) ಆದ್ರೆ ದೇವರು ತುಂಬಾ ಬೇಗನೇ ಈ ಭೂಮಿ ಮೇಲಿರೋ ಎಲ್ಲ ಕಷ್ಟ ಸಂಕಟಗಳನ್ನ, ನೋವನ್ನ ಜೊತೆಗೆ ಪ್ರಕೃತಿ ವಿಕೋಪಗಳನ್ನೂ ತೆಗೆದು ಹಾಕ್ತಾನೆ.—ಪ್ರಕಟನೆ 21:3, 4.
ಪ್ರಕೃತಿ ವಿಕೋಪಕ್ಕೆ ತುತ್ತಾದವ್ರಿಗೆ ದೇವರು ಹೇಗೆ ಸಹಾಯ ಮಾಡ್ತಾರೆ?
ಪ್ರಕೃತಿ ವಿಕೋಪಗಳಿಗೆ ತುತ್ತಾದವ್ರಿಗೆ ದೇವರು ಬೈಬಲಿನ ಮೂಲಕ ಸಾಂತ್ವನ ಕೊಡ್ತಾನೆ. ದೇವರು ನಮ್ಮ ಬಗ್ಗೆ ತುಂಬ ಚಿಂತೆ ಮಾಡ್ತಾನೆ. ನಾವು ಕಷ್ಟ ಅನುಭವಿಸೋದನ್ನ ನೋಡುವಾಗ ದೇವ್ರಿಗೆ ತುಂಬ ನೋವಾಗುತ್ತೆ ಅಂತ ಬೈಬಲ್ ಹೇಳುತ್ತೆ. (ಯೆಶಾಯ 63:9; 1 ಪೇತ್ರ 5:6, 7) ಪ್ರಕೃತಿ ವಿಕೋಪಗಳಾಗದ ಸಮಯ ಬರುತ್ತೆ ಅಂತ ದೇವರು ಮಾತು ಕೊಟ್ಟಿದ್ದಾನೆ.—“ಪ್ರಕೃತಿ ವಿಕೋಪಕ್ಕೆ ತುತ್ತಾದವ್ರಿಗೆ ಸಾಂತ್ವನ ನೀಡೋ ಬೈಬಲ್ ವಚನಗಳು” ಚೌಕ ನೋಡಿ.
ದೇವರು ತನ್ನ ಸೇವಕರ ಮೂಲಕನೂ ಸಹಾಯ ಮಾಡ್ತಾನೆ. ಯೇಸು, “ಮನಮುರಿದವರನ್ನು” ಮತ್ತು “ದುಃಖಿತರೆಲ್ಲರನ್ನು” ಸಾಂತ್ವನಗೊಳಿಸ್ತಾನೆ ಅಂತ ಬೈಬಲ್ ಹೇಳುತ್ತೆ. (ಯೆಶಾಯ 61:1, 2) ದೇವರ ಸೇವಕರು ಯೇಸುವಿನ ಈ ಮಾದರಿಯನ್ನ ಅನುಕರಿಸ್ತಾರೆ. ಆತನು ಇಂಥ ಸೇವಕರನ್ನ ಬಳಸಿ ಪ್ರಕೃತಿ ವಿಕೋಪಗಳಿಗೆ ತುತ್ತಾದವ್ರಿಗೆ ಸಹಾಯ ಮಾಡ್ತಾನೆ.—ಯೋಹಾನ 13:15.
ದೇವರು ತನ್ನ ಆರಾಧಕರ ಮೂಲಕ ಪ್ರಕೃತಿ ವಿಕೋಪಗಳಿಗೆ ತುತ್ತಾದವ್ರಿಗೆ ಬೇಕಾದ ಅಗತ್ಯಗಳನ್ನ ಪೂರೈಸ್ತಾನೆ.—ಅಪೊಸ್ತಲರ ಕಾರ್ಯ 11:28-30; ಗಲಾತ್ಯ 6:10.
ಪ್ರಕೃತಿ ವಿಕೋಪಗಳನ್ನ ಎದುರಿಸೋಕೆ ಬೈಬಲ್ ಏನಾದ್ರೂ ಸಲಹೆ ಕೊಡುತ್ತಾ?
ಕೊಡುತ್ತೆ. ಪ್ರಕೃತಿ ವಿಕೋಪಗಳು ಬಂದಾಗ ಏನು ಮಾಡಬೇಕು ಅಂತ ಬೈಬಲಿನಲ್ಲಿ ತಿಳಿಸಿಲ್ಲ ಅಂದ್ರೂ ಅದ್ರಲ್ಲಿರೋ ತತ್ವಗಳು ತಯಾರಾಗಿರೋಕೆ ನಮಗೆ ಸಹಾಯ ಮಾಡುತ್ತೆ. ಉದಾಹರಣೆಗೆ,
ಮೊದ್ಲೇ ತಯಾರಾಗಿರಿ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು” ಅಂತ ಬೈಬಲ್ ಹೇಳುತ್ತೆ. (ಜ್ಞಾನೋಕ್ತಿ 22:3) ವಿಪತ್ತುಗಳು ಯಾವಾಗ ಬರುತ್ತೆ ಅಂತ ಗೊತ್ತಿಲ್ಲದೇ ಇರೋದ್ರಿಂದ ಮೊದ್ಲೇ ಪ್ಲಾನ್ ಮಾಡಿಕೊಳ್ಳೋದು ಒಳ್ಳೇದು. ಅದಕ್ಕಾಗಿ ಒಂದು ಎಮರ್ಜೆನ್ಸಿ ಕಿಟ್ಟನ್ನ ರೆಡಿ ಮಾಡಿಟ್ಟುಕೊಳ್ಳೋದು ಮತ್ತು ಅಪಾಯ ಬಂದಾಗ ಕುಟುಂಬದವ್ರೆಲ್ಲಾ ಎಲ್ಲಿ ಸೇರಿ ಬರೋದು ಒಳ್ಳೇದು ಅಂತ ಪೂರ್ವಾಭ್ಯಾಸ (ರಿಹರ್ಸಲ್) ಮಾಡಬೇಕು.
ಆಸ್ತಿಪಾಸ್ತಿಗಿಂತ ಜೀವ ಮುಖ್ಯ. “ನಾವು ಲೋಕದೊಳಗೆ ಏನನ್ನೂ ತೆಗೆದುಕೊಂಡು ಬಂದಿಲ್ಲ ಮತ್ತು ನಾವು ಅದರೊಳಗಿಂದ ಏನನ್ನೂ ತೆಗೆದುಕೊಂಡು ಹೋಗಲಾರೆವು” ಅಂತ ಬೈಬಲ್ ಹೇಳುತ್ತೆ. (1 ತಿಮೊತಿ 6:7, 8) ವಿಪತ್ತುಗಳಾದಾಗ ನಮ್ಮ ಜೀವ ಉಳಿಸಿಕೊಳ್ಳೋಕಾಗಿ ಮನೆ, ಆಸ್ತಿಪಾಸ್ತಿಗಳನ್ನ ಬಿಟ್ಟು ಹೋಗೋಕೆ ರೆಡಿ ಇರ್ಬೇಕು. ಯಾಕಂದ್ರೆ ಹಣ, ಮನೆ, ಆಸ್ತಿಪಾಸ್ತಿಗಿಂತ ನಮ್ಮ ಜೀವನೇ ಮುಖ್ಯ ಅನ್ನೋದನ್ನ ಮರೆಯಬಾರ್ದು.—ಮತ್ತಾಯ 6:25.