ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
© 2023 Watch Tower Bible and Tract Society of Pennsylvania
ನವೆಂಬರ್ 6-12
ಬೈಬಲಿನಲ್ಲಿರುವ ನಿಧಿ | ಯೋಬ 13-14
“ಒಬ್ಬ ಮನುಷ್ಯ ಸತ್ರೆ ಮತ್ತೆ ಬದುಕ್ತಾನಾ?”
ಕಾವಲಿನಬುರುಜು99 10/15 ಪುಟ 3 ಪ್ಯಾರ 1-3
ಹೆಚ್ಚು ಕಾಲ ಬದುಕಲಿಕ್ಕಾಗಿ ನಾವು ಮಾಡುವ ಹುಡುಕಾಟ
ಆಯುಷ್ಯದ ಅಲ್ಪಾವಧಿಯ ಕುರಿತಾದ ಈ ವಿಚಾರವು ಸುಮಾರು 3,500 ವರ್ಷಗಳ ಹಿಂದೆ ಬರೆಯಲ್ಪಟ್ಟಿತಾದರೂ, ಇಂದು ಸಹ ಜನರು ಇದನ್ನು ಅಲ್ಲಗಳೆಯುವುದು ತುಂಬ ಕಡಿಮೆ. ಜೀವನದಲ್ಲಿ ಸ್ವಲ್ಪ ಕಾಲಾವಧಿಯ ವರೆಗೆ ಗಟ್ಟಿಮುಟ್ಟಾಗಿದ್ದು, ತದನಂತರ ವಯಸ್ಸಾಗಿ ಸಾಯುವುದನ್ನು ಜನರು ಯಾವಾಗಲೂ ಅತೃಪ್ತಿಕರವಾದದ್ದಾಗಿ ಕಂಡುಕೊಂಡಿದ್ದಾರೆ. ಆದುದರಿಂದ, ಆಯುಷ್ಯವನ್ನು ಹೆಚ್ಚಿಸುವ ವಿಧಾನಗಳು ಇತಿಹಾಸದಾದ್ಯಂತ ಅಧಿಕಾಧಿಕಗೊಂಡಿವೆ.
ಯೋಬನ ದಿನಗಳಲ್ಲಿ ಐಗುಪ್ತದವರು, ತಮ್ಮ ಯೌವನವನ್ನು ಮರಳಿಪಡೆಯುವ ವ್ಯರ್ಥ ಪ್ರಯತ್ನದಲ್ಲಿ ಪ್ರಾಣಿಗಳ ವೃಷಣಗಳನ್ನು ತಿಂದರು. ಮಧ್ಯಯುಗದ ರಸವಿದ್ಯೆಗಳ ಪ್ರಮುಖ ಉದ್ದೇಶಗಳಲ್ಲಿ ಒಂದು, ದೀರ್ಘಕಾಲ ಬದುಕುವಂತೆ ಮಾಡಸಾಧ್ಯವಿರುವ ದಿವ್ಯೌಷಧವನ್ನು ಉತ್ಪಾದಿಸುವುದೇ ಆಗಿತ್ತು. ಕೃತಕವಾಗಿ ತಯಾರಿಸಲ್ಪಟ್ಟ ಚಿನ್ನವು ಅಮರ ಜೀವನವನ್ನು ಕೊಡುತ್ತದೆ ಮತ್ತು ಚಿನ್ನದ ತಟ್ಟೆಗಳಲ್ಲಿ ಊಟಮಾಡುವುದು ಆಯುಷ್ಯವನ್ನು ಹೆಚ್ಚಿಸಸಾಧ್ಯವಿದೆ ಎಂದು ಅನೇಕ ರಸವಿದ್ಯಾತಜ್ಞರು ನಂಬಿದರು. ಧ್ಯಾನ, ಉಸಿರಾಟದ ವ್ಯಾಯಾಮಗಳು, ಮತ್ತು ಆಹಾರಪಥ್ಯಗಳಂತಹ ವಿಧಾನಗಳನ್ನು ಉಪಯೋಗಿಸುವ ಮೂಲಕ ತಾವು ದೇಹದ ರಾಸಾಯನಿಕ ಸಂಯೋಜನೆಯನ್ನೇ ಬದಲಾಯಿಸಿ, ಅಮರಜೀವನವನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ಪುರಾತನ ಚೀನಾದ ಟಾವೊಮತದವರು ನೆನಸಿದರು.
ಸ್ಪೆಯ್ನ್ ದೇಶದ ವಾನ್ ಪಾಂಟ್ಸ ಡೇ ಲೀಯೋನ್ ಎಂಬ ಹೆಸರಿನ ಪರಿಶೋಧಕನು, ಯೌವನದ ಚಿಲುಮೆಯನ್ನು ಕಂಡುಕೊಳ್ಳಲಿಕ್ಕಾಗಿ ಅತ್ಯಾಸೆಯ ಹುಡುಕಾಟ ನಡೆಸಿದ್ದಕ್ಕಾಗಿ ಇಂದು ಜಗತ್ಪ್ರಸಿದ್ಧನಾಗಿದ್ದಾನೆ. 19ನೆಯ ಶತಮಾನದ ಒಬ್ಬ ವೈದ್ಯನು, ಹರ್ಮಿಪುಸ್ ರೆಡಿವೀವುಸ್ ಎಂಬ ತನ್ನ ಪುಸ್ತಕದಲ್ಲಿ, ವಸಂತಕಾಲದಲ್ಲಿ ಒಂದು ಚಿಕ್ಕ ಕೋಣೆಯಲ್ಲಿ ಯುವಪ್ರಾಯದ ಕನ್ಯೆಯರನ್ನು ಇರಿಸಿ, ಅವರ ನಿಶ್ವಾಸವನ್ನು ಬಾಟಲಿಗಳಲ್ಲಿ ಸಂಗ್ರಹಿಸಿ, ಆಯುಷ್ಯವನ್ನು ಹೆಚ್ಚಿಸುವ ಔಷಧವಾಗಿ ಉಪಯೋಗಿಸಬೇಕೆಂದು ಶಿಫಾರಸ್ಸು ಮಾಡಿದನು. ಈ ವಿಧಾನಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ ಎಂಬುದನ್ನು ಹೇಳುವ ಪ್ರಮೇಯವೇ ಇಲ್ಲ.
ಕಾವಲಿನಬುರುಜು15 4/15 ಪುಟ 32 ಪ್ಯಾರ 1-2
ಕಡಿದ ಮರ ಮತ್ತೆ ಚಿಗುರಬಲ್ಲದೇ?
ಲೆಬನೋನಿನ ದೇವದಾರು ವೃಕ್ಷ (ಸೀಡರ್ ವೃಕ್ಷ) ನೋಡಲು ಬಹು ಸುಂದರ. ಇದರ ಮುಂದೆ ಆಲೀವ್ ಮರ ಅಷ್ಟೇನೂ ಚೆನ್ನಾಗಿ ಕಾಣಲ್ಲ. ಏಕೆಂದರೆ ಅದು ಅಂಕುಡೊಂಕಾಗಿ ಗಂಟುಗಂಟಾಗಿ ಬೆಳೆಯುತ್ತದೆ. ಆದರೆ ಆಲೀವ್ ಮರಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಅದೇನು ಅಂತ ನಿಮಗೆ ಗೊತ್ತಾ? ಎಂಥದ್ದೇ ವಾತಾವರಣದಲ್ಲೂ ಬದುಕಿ ಉಳಿಯುವ ಸಾಮರ್ಥ್ಯ ಅದಕ್ಕಿದೆ. ಈಗಿರುವ ಕೆಲವು ಆಲೀವ್ ಮರಗಳಿಗೆ 1000ಕ್ಕೂ ಹೆಚ್ಚು ವಯಸ್ಸಾಗಿದೆ ಎಂದು ಅಂದಾಜು ಮಾಡಲಾಗಿದೆ. ಆಲೀವ್ ಮರದ ಕಾಂಡವನ್ನು ಸಂಪೂರ್ಣವಾಗಿ ಕಡಿದು ಹಾಕಿದರೂ ಮತ್ತೆ ಚಿಗುರುವ ಸಾಮರ್ಥ್ಯ ಅದಕ್ಕಿದೆ. ಇದಕ್ಕೆ ಕಾರಣ ವಿಶಾಲವಾಗಿ ಹರಡಿರುವ ಅದರ ಬೇರುಗಳು. ಅವು ಜೀವಂತವಿದ್ದರೆ ಸಾಕು ಮರ ಮತ್ತೆ ಚಿಗುರಬಲ್ಲದು.
ನಂಬಿಗಸ್ತ ವ್ಯಕ್ತಿಯಾಗಿದ್ದ ಯೋಬನಿಗೆ ತಾನು ಸತ್ತರೂ ಮತ್ತೆ ಬದುಕುವೆ ಎಂಬ ಭರವಸೆಯಿತ್ತು. (ಯೋಬ 14:13-15) ತನ್ನನ್ನು ಪುನರುತ್ಥಾನ ಮಾಡುವ ಸಾಮರ್ಥ್ಯ ದೇವರಿಗಿದೆ ಎಂದು ವಿವರಿಸಲು ಅವನು ಒಂದು ಮರದ (ಬಹುಶಃ ಆಲೀವ್ ಮರದ) ಉದಾಹರಣೆ ಕೊಟ್ಟನು. “ಕಡಿದ ಮರವೂ ತಾನು ಮೊಳೆಯುವದನ್ನು ನಿಲ್ಲಿಸದೆ ಮತ್ತೆ ಚಿಗುರೇನೆಂದು ನಿರೀಕ್ಷಿಸುತ್ತದಲ್ಲವೇ!” ಎಂದು ಯೋಬ ಹೇಳಿದನು. ತೀವ್ರ ಬರಗಾಲದಿಂದ ಆಲಿವ್ ಮರ ಒಣಗಿ ಸತ್ತುಹೋಗಿದ್ದರೂ ಮಳೆ ಬಿದ್ದಾಗ ಬೇರಿನಿಂದ ಚಿಗುರುಗಳು ಮೇಲೆ ಬಂದು “ಗಿಡದ ಹಾಗೆ ಕವಲೊಡೆಯುವದು.”—ಯೋಬ 14:7-9
ಕಾವಲಿನಬುರುಜು11 7/1 ಪುಟ 10 ಪ್ಯಾರ 5
‘ನಿನಗೆ ಹಂಬಲಿಕೆ ಇರುವುದು’
ಯೋಬನ ಮಾತುಗಳು ನಮಗೆ ಯೆಹೋವನ ಪ್ರೀತಿಯ ಬಗ್ಗೆ ಈ ಸಂಗತಿಯನ್ನು ಕಲಿಸುತ್ತವೆ: ಯೋಬನಂತೆ ತಮ್ಮನ್ನು ಯೆಹೋವನ ಕೈಗೊಪ್ಪಿಸಿ, ಆತನು ತನ್ನ ಇಚ್ಛೆಗನುಸಾರ ತಮ್ಮನ್ನು ರೂಪಿಸಿ ರಚಿಸುವಂತೆ ಬಿಟ್ಟುಕೊಡುವವರ ಮೇಲೆ ಯೆಹೋವನಿಗೆ ವಿಶೇಷ ಒಲುಮೆ ಇದೆ. (ಯೆಶಾಯ 64:8) ಆತನು ತನ್ನ ನಂಬಿಗಸ್ತ ಆರಾಧಕರನ್ನು ಅಮೂಲ್ಯ ಎಂದೆಣಿಸುತ್ತಾನೆ. ಕೊನೇ ತನಕ ನಿಷ್ಠಾವಂತರಾಗಿ ಸತ್ತವರನ್ನು ಪುನಃ ಜೀವಿತರನ್ನಾಗಿ ಮಾಡಲು ಆತನಿಗೆ ಹಂಬಲಿಕೆ ಇದೆ. “ಹಂಬಲಿಕೆ” ಪದಕ್ಕೆ ಬಳಸಲಾದ ಹೀಬ್ರು ಪದ “ಮನದಾಳದ ಉತ್ಕಟ ಬಯಕೆಯನ್ನು ತಿಳಿಸುವ ಪ್ರಬಲ ಪದಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ” ಎನ್ನುತ್ತಾರೆ ವಿದ್ವಾಂಸರೊಬ್ಬರು. ತನ್ನ ಆರಾಧಕರಲ್ಲಿ ಮೃತಪಟ್ಟವರನ್ನು ಯೆಹೋವನು ನೆನಪಿನಲ್ಲಿಡುತ್ತಾನೆ ಮಾತ್ರವಲ್ಲ ಅವರನ್ನು ಪುನಃ ಜೀವಿತರನ್ನಾಗಿ ಮಾಡಲು ಹಂಬಲಿಸುತ್ತಾನೆ.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 191
ಬೂದಿ
ಬೂದಿ ಅನ್ನೋ ಪದ ನಿಷ್ಪ್ರಯೋಜಕ ಅಥವಾ ಯಾವುದೇ ಕೆಲಸಕ್ಕೆ ಯೋಗ್ಯವಿಲ್ಲ ಅನ್ನೋದನ್ನ ಸೂಚಿಸುತ್ತೆ. ಉದಾಹರಣೆಗೆ ಅಬ್ರಹಾಮ ದೀನತೆಯಿಂದ ಯೆಹೋವನ ಮುಂದೆ ನಾನು “ಧೂಳು ಬೂದಿ” ಅಂತ ಒಪ್ಪಿಕೊಳ್ತಾನೆ. (ಆದಿ 18:27; ಯೆಶಾ 44:20; ಯೋಬ 30:19 ಹೋಲಿಸಿ) ಯೋಬ ಕೂಡ ತನ್ನ ಸ್ನೇಹಿತರ ಮಾತುಗಳು “ಕೆಲಸಕ್ಕೆ ಬಾರದ ಬೂದಿ ತರ” ಇತ್ತು ಅಂತ ಹೇಳಿದ.—ಯೋಬ 13:12.
ನವೆಂಬರ್ 13-19
ಬೈಬಲಿನಲ್ಲಿರುವ ನಿಧಿ| ಯೋಬ 15-17
“ಎಲೀಫಜನ ತರ ಸಾಂತ್ವನ ಕೊಡಬೇಡಿ”
ಕಾವಲಿನಬುರುಜು05 9/15 ಪುಟ 26 ಪ್ಯಾರ 4-5
ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!
ಎಲೀಫಜನು ಮಾತಾಡಿದಂಥ ಎಲ್ಲ ಮೂರು ಸಂದರ್ಭಗಳಲ್ಲಿ ಸಾದರಪಡಿಸಿದಂಥ ವಿಚಾರವು ಇದಾಗಿತ್ತು: ದೇವರು ಎಷ್ಟು ಕಠೋರನಾಗಿದ್ದಾನೆಂದರೆ ಅವನ ಸೇವಕರು ಏನು ಮಾಡಿದರೂ ಅದು ಆತನನ್ನು ಸಂತೋಷಪಡಿಸುವುದಿಲ್ಲ. ಎಲೀಫಜನು ಯೋಬನಿಗಂದದ್ದು: “ಆಹಾ, ಆತನು ತನ್ನ ಪರಿಚಾರಕರಲ್ಲಿಯೂ ನಂಬಿಕೆಯನ್ನಿಡುವದಿಲ್ಲ, ತನ್ನ ದೂತರ ಮೇಲೆಯೂ ತಪ್ಪುಹೊರಿಸುತ್ತಾನೆ.” (ಯೋಬ 4:18) ತದನಂತರ ಎಲೀಫಜನು ದೇವರ ಬಗ್ಗೆ ಹೇಳಿದ್ದು: “ಆಹಾ, ತನ್ನ ದೂತರಲ್ಲಿಯೂ ಆತನು ನಂಬಿಕೆಯಿಡುವದಿಲ್ಲ, ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಾಗಿರದು.” (ಯೋಬ 15:15) ಅವನು ಕೇಳಿದ್ದು: “ನೀನು ನೀತಿವಂತನಾಗಿರುವದು ಸರ್ವಶಕ್ತನಿಗೆ ಸುಖವೋ?” (ಯೋಬ 22:3) ಈ ದೃಷ್ಟಿಕೋನವನ್ನು ಬಿಲ್ದದನು ಸಹ ಸಮ್ಮತಿಸಿದನು. ಆದುದರಿಂದಲೇ ಅವನು ಹೇಳಿದ್ದು: “ನೋಡಿರಿ, ಆತನ [ದೇವರ] ದೃಷ್ಟಿಯಲ್ಲಿ ಚಂದ್ರನಿಗಾದರೂ ಕಳೆಯಿಲ್ಲ, ನಕ್ಷತ್ರಗಳೂ ಶುದ್ಧವಲ್ಲ.”—ಯೋಬ 25:5.
ಇಂಥ ಆಲೋಚನೆಗಳಿಂದ ಪ್ರಭಾವಿಸಲ್ಪಡದಂತೆ ನಾವು ಎಚ್ಚರಿಕೆಯಿಂದಿರಬೇಕು. ಏಕೆಂದರೆ ಅದು, ದೇವರು ನಮ್ಮಿಂದ ತೀರ ಹೆಚ್ಚನ್ನು ಅಪೇಕ್ಷಿಸುತ್ತಾನೆಂದು ಭಾವಿಸುವಂತೆ ಮಾಡಬಲ್ಲದು. ಮತ್ತು ಇಂಥ ದೃಷ್ಟಿಕೋನವು ಯೆಹೋವನೊಂದಿಗಿನ ನಮ್ಮ ಸಂಬಂಧದ ಮೇಲೆ ನೇರವಾಗಿ ದಾಳಿಮಾಡುತ್ತದೆ. ಅಷ್ಟುಮಾತ್ರವಲ್ಲದೆ, ಒಂದುವೇಳೆ ನಾವು ಆ ರೀತಿಯ ಆಲೋಚನೆಗಳಿಗೆ ಶರಣಾದರೆ, ಅಗತ್ಯವಿರುವ ಶಿಸ್ತು ನಮಗೆ ಕೊಡಲ್ಪಟ್ಟಾಗ ನಾವು ಯಾವ ಪ್ರತಿಕ್ರಿಯೆ ತೋರಿಸುವೆವು? ಆ ತಿದ್ದುಪಾಟನ್ನು ದೀನಭಾವದಿಂದ ಸ್ವೀಕರಿಸುವ ಬದಲು, ನಮ್ಮ ಹೃದಯವು “ಯೆಹೋವನ ಮೇಲೆ ಕುದಿಯು”ವುದು ಮತ್ತು ಆತನ ಕುರಿತು ನಾವು ಮನಸ್ಸಿನಲ್ಲಿ ಅಸಮಾಧಾನವನ್ನು ಇಟ್ಟುಕೊಳ್ಳುವೆವು. (ಜ್ಞಾನೋಕ್ತಿ 19:3) ಇದು ಆಧ್ಯಾತ್ಮಿಕವಾಗಿ ಎಷ್ಟು ವಿಪತ್ಕಾರಕವಾಗಿರುವುದು!
ಕಾವಲಿನಬುರುಜು15 2/15 ಪುಟ 9 ಪ್ಯಾರ 16
ಯೇಸುವಿನಲ್ಲಿದ್ದ ದೀನತೆ ಕೋಮಲತೆ ನಿಮ್ಮಲ್ಲೂ ಇರಲಿ
16 ನಮ್ಮ ಕೋಮಲ ಮಾತುಗಳು. ನಮ್ಮಲ್ಲಿ ಕೋಮಲ ಭಾವನೆ ಇದ್ದರೆ ‘ಮನಗುಂದಿದವರಿಗೆ ಸಾಂತ್ವನಗೊಳಿಸುವ ರೀತಿಯಲ್ಲಿ ಮಾತಾಡುತ್ತೇವೆ.’ (1 ಥೆಸ. 5:14) ನಮ್ಮ ಮಾತುಗಳಿಂದ ಬೇರೆಯವರನ್ನು ಹೇಗೆ ಪ್ರೋತ್ಸಾಹಿಸಬಹುದು? ನಮಗೆ ಅವರ ಬಗ್ಗೆ ಎಷ್ಟು ಚಿಂತೆ ಕಾಳಜಿಯಿದೆ ಎಂದು ಹೇಳಬಹುದು. ಅವರಲ್ಲಿರುವ ಒಳ್ಳೇ ಗುಣಗಳನ್ನು, ಅವರ ಸಾಮರ್ಥ್ಯವನ್ನು ನೆನಪುಹುಟ್ಟಿಸಿ ಪ್ರಶಂಸಿಸಬಹುದು. ಅವರು ಯೆಹೋವನಿಗೆ ಅಮೂಲ್ಯರಾಗಿ ಇರುವುದರಿಂದಲೇ ಆತನು ಅವರಿಗೆ ಸತ್ಯ ಕಲಿಯುವ ಅವಕಾಶ ಕೊಟ್ಟಿದ್ದಾನೆಂದು ಅರ್ಥಮಾಡಿಸಬಹುದು. (ಯೋಹಾ. 6:44) “ಮುರಿದ ಮನಸ್ಸುಳ್ಳವರಿಗೆ” ಮತ್ತು ‘ಕುಗ್ಗಿಹೋದವರಿಗೆ’ ಯೆಹೋವನು ಬೇಕಾದ ಸಹಾಯ ಸಾಂತ್ವನ ಕೊಡುತ್ತಾನೆ ಎಂದು ಭರವಸೆ ತುಂಬಬಹುದು. (ಕೀರ್ತ. 34:18) ನಾವು ಹೀಗೆ ಕೋಮಲತೆಯಿಂದ ಮಾತಾಡಿದರೆ ಅವರಿಗೆ ಸಾಂತ್ವನ ಸಿಗುತ್ತದೆ, ಹೊಸಬಲ ಪಡೆಯುತ್ತಾರೆ.—ಜ್ಞಾನೋ. 16:24.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು06 3/15 ಪುಟ 14 ಪ್ಯಾರ 10
ಯೋಬ ಪುಸ್ತಕದ ಮುಖ್ಯಾಂಶಗಳು
7:9, 10; 10:21; 16:22—ಈ ಹೇಳಿಕೆಗಳು, ಯೋಬನು ಪುನರುತ್ಥಾನದಲ್ಲಿ ನಂಬಿಕೆಯಿಡಲಿಲ್ಲ ಎಂಬುದನ್ನು ಸೂಚಿಸುತ್ತವೊ? ಇವು ಯೋಬನ ತತ್ಕ್ಷಣದ ಭವಿಷ್ಯತ್ತಿನ ಕುರಿತಾದ ಹೇಳಿಕೆಗಳಾಗಿದ್ದವು. ಹಾಗಾದರೆ ಅವನು ಹೇಳಿದ್ದರ ಅರ್ಥವೇನಾಗಿತ್ತು? ಒಂದು ಅರ್ಥವು, ಒಂದುವೇಳೆ ಅವನು ಮರಣಪಡುವಲ್ಲಿ ಅವನ ಸಮಕಾಲೀನರಲ್ಲಿ ಯಾರೊಬ್ಬರೂ ಅವನನ್ನು ನೋಡಲಾರರು ಎಂದಾಗಿರಬಹುದು. ಅವರ ದೃಷ್ಟಿಕೋನದಲ್ಲಿ, ಅವನು ತನ್ನ ಮನೆಗೆ ಪುನಃ ಸೇರಲು ಸಾಧ್ಯವಿರಲಿಲ್ಲ ಅಥವಾ ದೇವರ ನೇಮಿತ ಸಮಯದ ವರೆಗೆ ಯಾವುದೇ ಸಮ್ಮತಿಯನ್ನು ಪಡೆಯಲು ಸಾಧ್ಯವಿರಲಿಲ್ಲ. ಯಾರೊಬ್ಬರೂ ತಮ್ಮಷ್ಟಕ್ಕೆ ಯಾವುದೇ ಸಹಾಯವಿಲ್ಲದೆ ಷೀಓಲ್ನಿಂದ ಹಿಂದೆ ಬರಲಾರರು ಎಂಬುದು ಸಹ ಯೋಬನ ಹೇಳಿಕೆಯ ಅರ್ಥವಾಗಿದ್ದಿರಬಹುದು. ಯೋಬನು ಭಾವೀ ಪುನರುತ್ಥಾನದಲ್ಲಿ ನಿರೀಕ್ಷೆಯಿಟ್ಟಿದ್ದನು ಎಂಬುದು ಯೋಬ 14:13-15ರಿಂದ ಸ್ಪಷ್ಟವಾಗುತ್ತದೆ.
ನವೆಂಬರ್ 20-26
ಬೈಬಲಿನಲ್ಲಿರುವ ನಿಧಿ| ಯೋಬ 18-19
“ಜೊತೆ ಆರಾಧಕರ ಕೈ ಬಿಡಬೇಡಿ”
ಕಾವಲಿನಬುರುಜು22.01 ಪುಟ 16 ಪ್ಯಾರ 9
ಯೇಸುವಿನ ಕಣ್ಣೀರು ನಮಗೆ ತುಂಬ ಪಾಠಗಳನ್ನ ಕಲಿಸುತ್ತೆ
9 ದುಃಖದಲ್ಲಿ ಇರೋರಿಗೆ ಸಹಾಯ ಮಾಡಿ. ಮಾರ್ಥ ಮತ್ತು ಮರಿಯ ಜೊತೆ ಯೇಸು ಅತ್ತಿದ್ದು ಮಾತ್ರ ಅಲ್ಲ, ಅವರು ಹೇಳೋದನ್ನ ಕೇಳಿಸಿಕೊಂಡನು. ಅವರಿಗೆ ಸಮಾಧಾನ ಮಾಡಿದನು, ಧೈರ್ಯ ತುಂಬಿದನು. ನಾವೂ ದುಃಖದಲ್ಲಿ ಇರೋರಿಗೆ ಹೀಗೇ ಸಹಾಯ ಮಾಡಬೇಕು. ಆಸ್ಟ್ರೇಲಿಯದಲ್ಲಿ ಇರೋ ಡ್ಯಾನ್ ಅನ್ನೋ ಹಿರಿಯನ ಅನುಭವ ನೋಡಿ. ಅವರು ಹೇಳಿದ್ದು: “ನನ್ನ ಹೆಂಡತಿ ತೀರಿಹೋದಾಗ ನನಗೆ ತುಂಬ ದುಃಖ ಆಯ್ತು. ನನಗೆ ಸಹಾಯ ಬೇಕಾಯ್ತು. ಎಷ್ಟೋ ಸಹೋದರ ಸಹೋದರಿಯರು ಪ್ರತಿದಿನ ನಮ್ಮ ಮನೆಗೆ ಬಂದು ನಾನು ಹೇಳೋದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರು. ನಾನು ಅಳುವಾಗ ನನ್ನನ್ನ ವಿಚಿತ್ರವಾಗಿ ನೋಡುತ್ತಿರಲಿಲ್ಲ. ಮನೆಕೆಲಸ ಮಾಡೋಕೆ, ಕಾರ್ ತೊಳೆಯೋಕೆ, ರೇಷನ್ ತಗೊಂಡು ಬರೋಕೆ, ಅಡುಗೆ ಮಾಡೋಕೆ ಅವರು ನನಗೆ ತುಂಬಾ ಸಹಾಯ ಮಾಡ್ತಿದ್ರು. ಅವರು ಆಗಾಗ ನನ್ನ ಜೊತೆ ಕೂತುಕೊಂಡು ಪ್ರಾರ್ಥನೆ ಮಾಡ್ತಿದ್ರು. ‘ನಿಜವಾದ ಸ್ನೇಹಿತರು ಕಷ್ಟಕಾಲದಲ್ಲಿ ನಮ್ಮ ಸಹೋದರರಾಗ್ತಾರೆ’ ಅನ್ನೋ ಮಾತು ನಿಜ ಅಂತ ತೋರಿಸಿಕೊಟ್ಟರು.”—ಜ್ಞಾನೋ. 17:17.
ಕಾವಲಿನಬುರುಜು21.09 ಪುಟ 30 ಪ್ಯಾರ 16
ನಿಮ್ಮ ಆಪ್ತರು ಯೆಹೋವನನ್ನ ಬಿಟ್ಟುಹೋದಾಗ
16 ಸಮಾಧಾನ-ಸಹಾಯ ಮಾಡೋದನ್ನ ನಿಲ್ಲಿಸಬೇಡಿ. ಬಹಿಷ್ಕಾರ ಆದ ವ್ಯಕ್ತಿಯ ಕುಟುಂಬದವರಿಗೆ ನಮ್ಮ ಪ್ರೀತಿ, ಸಹಾಯ ತುಂಬಾನೇ ಬೇಕಾಗುತ್ತೆ. (ಇಬ್ರಿ. 10:24, 25) ಅವರಿಗೂ ಬಹಿಷ್ಕಾರ ಆಗಿದೆ ಅನ್ನೋ ತರ ನಾವು ನಡಕೊಳ್ಳಬಾರದು. ಹೆತ್ತವರು ಸತ್ಯ ಬಿಟ್ಟು ಹೋದಾಗ ಕೆಲವು ಮಕ್ಕಳು ಚಿಕ್ಕವರಾಗಿದ್ದರೂ ದೇವರಿಗೆ ನಿಯತ್ತಾಗಿ ಇರುತ್ತಾರೆ. ಅಂಥ ಮಕ್ಕಳಿಗೆ ನಮ್ಮ ಮಾತುಗಳಿಂದ ಪ್ರೋತ್ಸಾಹ ಕೊಡಬೇಕು. ಮರಿಯಾ ಅನ್ನೋ ಸಹೋದರಿಯ ಗಂಡ ಬಹಿಷ್ಕಾರ ಆದಾಗ ಅವಳನ್ನ, ಮಕ್ಕಳನ್ನ ಬಿಟ್ಟು ಹೋಗಿಬಿಟ್ಟರು. ಅವಳು ಹೇಳಿದ್ದು: “ಸಹೋದರ ಸಹೋದರಿಯರು ನಮ್ಮ ಮನೆಗೆ ಬಂದ್ರು, ಅಡುಗೆ ಮಾಡಿಕೊಟ್ರು, ನಮ್ಮ ಜೊತೆ ಕುಟುಂಬ ಆರಾಧನೆ ಮಾಡಿದ್ರು. ನನ್ನ ನೋವನ್ನು ಅರ್ಥಮಾಡಿಕೊಂಡು ಅವರೂ ಅತ್ತರು. ಜನರು ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದಾಗ ನನ್ನ ಪರವಾಗಿ ಮಾತಾಡಿದ್ರು. ಈ ಫ್ರೆಂಡ್ಸ್ ಇಲ್ಲದಿದ್ರೆ ನನಗೆ ಈ ಕಷ್ಟ ಸಹಿಸಿಕೊಳ್ಳೋಕೆ ಆಗ್ತಾನೇ ಇರಲಿಲ್ಲ.”—ರೋಮ. 12:13, 15.
ಕಾವಲಿನಬುರುಜು91 5/1 ಪುಟ 14-15 ಪ್ಯಾರ 20
ನೀವು ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದೀರೊ?
20 ಒಬ್ಬ ಮಾಜಿ ಮೇಲ್ವಿಚಾರಕನು ಅಥವಾ ಶುಶ್ರೂಷಾ ಸೇವಕನು ತನ್ನ ಸುಯೋಗವನ್ನು ಸ್ವಯಂ ಪ್ರೇರಿತನಾಗಿ ತ್ಯಜಿಸಿದಾಗಲೂ, ಈ ಸ್ಥಾನನಷ್ಟ ಅವನಿಗೆ ಪ್ರಯಾಸ ತರುತ್ತದೆಂದು ಹಿರಿಯ ಮಂಡಲಿಯವರು ಗ್ರಹಿಸಬೇಕು. ಅವನಿಗೆ ಬಹಿಷ್ಕಾರವಾಗಿಲ್ಲದಿರುವಲ್ಲಿ, ಆದರೆ ಆ ಸಹೋದರನು ಖಿನ್ನನಾಗಿದ್ದಾನೆಂದು ಹಿರಿಯರು ನೋಡುವಲ್ಲಿ ಅವರು ಪ್ರೀತಿಯ ಆತ್ಮಿಕ ನೆರವನ್ನು ಒದಗಿಸಬೇಕು. (1 ಥೆಸಲೊನೀಕ 5:14) ಸಭೆಗೆ ಅವನ ಆವಶ್ಯವಿದೆ ಎಂದು ಅವನು ಗ್ರಹಿಸುವಂತೆ ಅವರು ಸಹಾಯ ಮಾಡಬೇಕು. ಅವನಿಗೆ ಬುದ್ಧಿವಾದ ಬೇಕಾಗಿದ್ದರೂ, ಒಬ್ಬ ವಿನೀತ ಮತ್ತು ಕೃತಜ್ಞ ಪುರುಷನಿಗೆ ಸಭೆಯಲ್ಲಿ ಪುನಃ ಹೆಚ್ಚಿನ ಸೇವಾ ಸುಯೋಗಗಳನ್ನು ಪಡೆಯುವ ಮೊದಲು ದೀರ್ಘಕಾಲದ ಆವಶ್ಯಕತೆ ಇಲ್ಲದೆ ಹೋದೀತು
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು94 10/1 ಪುಟ 32
ಒಂದು ದಯಾಪೂರ್ಣ ಮಾತಿಗಿರುವ ಶಕ್ತಿ
ಹಾಗಿದ್ದರೂ, ಸ್ವತಃ ಯೋಬನಿಗೆ ಉತ್ತೇಜನದ ಅಗತ್ಯವಿದ್ದಾಗ, ಎಲೀಫಜನು ಮತ್ತು ಅವನ ಸಂಗಾತಿಗಳು ದಯೆಯ ಮಾತುಗಳನ್ನು ಆಡಲಿಲ್ಲ. ಯೋಬನಲ್ಲಿ ಯಾವುದೊ ಗುಪ್ತವಾದ ತಪ್ಪು ಇರಬೇಕೆಂಬುದನ್ನು ಸೂಚಿಸುತ್ತಾ, ಅವನ ವಿಪತ್ತಿಗಾಗಿ ಅವರು ಯೋಬನನ್ನು ದೂಷಿಸಿದರು. (ಯೋಬ 4:8) ದಿ ಇಂಟರ್ಪ್ರೆಟರ್ಸ್ ಬೈಬಲ್ ಹೇಳುವುದು: “ಯೋಬನಿಗೆ ಬೇಕಾಗಿರುವುದು, ಮಾನವ ಹೃದಯದ ಅನುಕಂಪ. ಅವನಿಗೆ ಸಿಗುವಂಥದ್ದು, ಖಂಡಿತವಾಗಿ ‘ಸತ್ಯ’ ವಾದ ಹಾಗೂ ಖಂಡಿತವಾಗಿ ಸುಂದರವಾದ ಧಾರ್ಮಿಕ ಹಳಸಲು ಮಾತು ಮತ್ತು ನೈತಿಕ ಮಾತುಗಳ ಒಂದು ಸರಣಿ.” ಎಲೀಫಜ ಮತ್ತು ಅವನ ಸಂಗಾತಿಗಳ ಮಾತನ್ನು ಕೇಳಿದರ್ದಿಂದ ಯೋಬನು ಎಷ್ಟು ಕಳವಳಗೊಂಡನೆಂದರೆ, ಅವನು ಹೀಗೆ ಕೂಗಿಕೊಳ್ಳುವಂತೆ ಒತ್ತಾಯಿಸಲ್ಪಟ್ಟನು: “ಎಷ್ಟರ ವರೆಗೆ ನನ್ನ ಆತ್ಮವನ್ನು ನೋಯಿಸಿ ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?”—ಯೋಬ 19:2.
ನಮ್ಮ ಯೋಚನಾರಹಿತ, ದಯಾರಹಿತ ಮಾತುಗಳಿಂದ ದೇವರ ಒಬ್ಬ ಜೊತೆ ಸೇವಕನು ಸಂಕಟದಲ್ಲಿ ಕೂಗಿಕೊಳ್ಳುವಂತೆ ನಾವು ಎಂದಿಗೂ ಮಾಡಬಾರದು. (ಹೋಲಿಸಿ ಧರ್ಮೋಪದೇಶಕಾಂಡ 24:15.) ಒಂದು ಬೈಬಲ್ ಜ್ಞಾನೋಕ್ತಿಯು ಎಚ್ಚರಿಸುವುದು: “ನೀವು ಹೇಳುವಂಥದ್ದು ಜೀವವನ್ನು ಉಳಿಸಬಲ್ಲದು ಯಾ ಅದನ್ನು ನಾಶಮಾಡಬಲ್ಲದು; ಆದುದರಿಂದ ನಿಮ್ಮ ಮಾತುಗಳ ಪರಿಣಾಮಗಳನ್ನು ನೀವು ಸ್ವೀಕರಿಸಬೇಕು.”—ಜ್ಞಾನೋಕ್ತಿ 18:21, ಟುಡೇಸ್ ಇಂಗ್ಲಿಷ್ ವರ್ಶನ್.
ನವೆಂಬರ್ 27–ಡಿಸೆಂಬರ್ 3
ಬೈಬಲಿನಲ್ಲಿರುವ ನಿಧಿ| ಯೋಬ 20-21
“ಹಣ ಆಸ್ತಿ ಇದ್ರೆ ನೀತಿವಂತರಾಗಿಬಿಡಲ್ಲ”
ಕಾವಲಿನಬುರುಜು07 8/1 ಪುಟ 30 ಪ್ಯಾರ 12
ನೀವು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತರೋ?’
12 ಯೇಸು ತನ್ನ ಹೇಳಿಕೆಯಲ್ಲಿ, ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವುದು ಮತ್ತು ತನಗೋಸ್ಕರ ದ್ರವ್ಯವನ್ನಿಟ್ಟುಕೊಳ್ಳುವುದು ಅಥವಾ ತನ್ನನ್ನು ಲೌಕಿಕ ರೀತಿಯಲ್ಲಿ ಧನವಂತನಾಗಿ ಮಾಡಿಕೊಳ್ಳುವುದರ ನಡುವಿನ ವ್ಯತ್ಯಾಸವನ್ನು ತಿಳಿಸುತ್ತಾನೆ. ಹೀಗೆ ಯೇಸು ಹೇಳುತ್ತಿದ್ದದ್ದು ಐಹಿಕ ಐಶ್ವರ್ಯಗಳ ಒಟ್ಟುಗೂಡಿಸುವಿಕೆ ಅಥವಾ ನಮ್ಮಲ್ಲಿರುವ ಲೌಕಿಕ ಸ್ವತ್ತುಗಳಲ್ಲಿ ತೃಪ್ತಿಯೇ ನಮ್ಮ ಜೀವನದ ಮುಖ್ಯ ಚಿಂತೆಯಾಗಿರಬಾರದು ಎಂಬುದನ್ನೇ. ಬದಲಿಗೆ ನಾವು ನಮ್ಮ ಸಂಪನ್ಮೂಲಗಳನ್ನು ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ಉತ್ತಮಗೊಳಿಸುವಂಥ ಹಾಗೂ ಬಲಪಡಿಸುವಂಥ ರೀತಿಯಲ್ಲಿ ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ನಾವು ಖಂಡಿತವಾಗಿಯೂ ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗುವೆವು. ಏಕೆ? ಏಕೆಂದರೆ ಆತನಿಂದ ಬರುವ ಅನೇಕ ಆಶೀರ್ವಾದಗಳಿಗೆ ಅದು ದಾರಿ ತೆರೆಯುವುದು. ಬೈಬಲ್ ಅನ್ನುವುದು: “ಯೆಹೋವನ ಆಶೀರ್ವಾದವು ಐಶ್ವರ್ಯವನ್ನುಂಟುಮಾಡುವುದು. ಅದರೊಂದಿಗೆ ಅವನು ಯಾವ ದುಃಖವನ್ನೂ ಸೇರಿಸುವದಿಲ್ಲ.”—ಜ್ಞಾನೋಕ್ತಿ 10:22, NIBV.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು95 1/1 ಪುಟ 9 ಪ್ಯಾರ 19
ಸೈತಾನನ ಮತ್ತು ಅವನ ಕೃತ್ಯಗಳ ಮೇಲೆ ಜಯಸಾಧಿಸುವುದು
19 ದೇವರ ಸೇವಕನಾದ ಯೋಬನು ಎಲೀಫಜ ಮತ್ತು ಚೋಫರನ ಮುಖಾಂತರ ಸೈತಾನನು ಸಾಗಿಸಿದ “ವ್ಯಾಕುಲಗೊಳಿಸುವ ಯೋಚನೆಗಳೊಂದಿಗೆ” ಹೋರಾಡಬೇಕಿತ್ತೆಂಬುದು ಆಸಕ್ತಿಯ ವಿಷಯವಾಗಿದೆ. (ಯೋಬ 4:13-18; 20:2, 3, NW) ಹೀಗೆ ಯೋಬನು “ಕಿರುಕುಳ” ವನ್ನನುಭವಿಸಿದನು, ಇದು ತನ್ನ ಮನಸ್ಸನ್ನು ಬಾಧಿಸುವ “ಭೀತಿಗಳ” ಕುರಿತು “ಗೊತ್ತುಗುರಿಯಿಲ್ಲದ ಮಾತಿ” ನಲ್ಲಿ ಅವನ ಒಳಗೂಡಿಕೆಯಲ್ಲಿ ಫಲಿಸಿತು. (ಯೋಬ 6:2-4; 30:15, 16, NW) ಎಲೀಹು ಶಾಂತವಾಗಿ ಯೋಬನಿಗೆ ಕಿವಿಗೊಟ್ಟನು ಮತ್ತು ವಿಷಯಗಳ ಕುರಿತು ಎಲ್ಲವನ್ನು ಬಲ್ಲ ಯೆಹೋವನ ನೋಟವನ್ನು ನೋಡುವಂತೆ ಅವನಿಗೆ ಯಥಾರ್ಥವಾಗಿ ಸಹಾಯ ಮಾಡಿದನು. ತದ್ರೀತಿಯಲ್ಲಿ ಇಂದು, ನೋಯಿಸಲ್ಪಟ್ಟವರ ಕುರಿತು ತಾವು ಚಿಂತಿಸುತ್ತೇವೆಂದು ಅಂತಹವರಿಗೆ ಹೆಚ್ಚಿನ “ಒತ್ತಡವನ್ನು” ಕೂಡಿಸದಿರುವ ಮೂಲಕ ತಿಳಿವಳಿಕೆಯುಳ್ಳ ಹಿರಿಯರು ತೋರಿಸುತ್ತಾರೆ. ಬದಲಿಗೆ, ಎಲೀಹುವಿನಂತೆ, ಅವರು ತಾಳ್ಮೆಯಿಂದ ಆಲಿಸುತ್ತಾರೆ ಮತ್ತು ತದನಂತರ ದೇವರ ವಾಕ್ಯದ ಉಪಶಮನಕಾರಿ ತೈಲವನ್ನು ಹಚ್ಚುತ್ತಾರೆ. (ಯೋಬ 33:1-3, 7; ಯಾಕೋಬ 5:13-15) ಹೀಗೆ ಯಾರ ಭಾವನೆಗಳು ಗಾಯಗಳಿಂದ—ನಿಜವಾದ ಯಾ ಭ್ರಾಂತಿಯ—ಕಲಕಲ್ಪಟ್ಟಿವೆಯೊ, ಅಥವಾ ಯಾರು ಯೋಬನಂತೆ “ಸ್ವಪ್ನಗಳಿಂದ . . . ದರ್ಶನಗಳ ಮೂಲಕ ಭಯ” ಪಟ್ಟಿರುತ್ತಾರೊ, ಅವರು ಸಭೆಯೊಳಗೆ ಉಪಶಮನಗೊಳಿಸುವ ಆತ್ಮಿಕ ಸಾಂತ್ವನವನ್ನು ಕಂಡುಕೊಳ್ಳಬಹುದು.—ಯೋಬ 7:14; ಯಾಕೋಬ 4:7.
ಡಿಸೆಂಬರ್ 4-10
ಬೈಬಲಿನಲ್ಲಿರುವ ನಿಧಿ| ಯೋಬ 22-24
“ಮನುಷ್ಯನಿಂದ ದೇವರಿಗೇನು ಪ್ರಯೋಜನ?”
ಕಾವಲಿನಬುರುಜು05 9/15 ಪುಟ 27 ಪ್ಯಾರ 1-3
ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!
ದೇವರು ತುಂಬ ಕಠೋರನು ಎಂಬ ವಿಚಾರಕ್ಕೆ ತುಂಬ ನಿಕಟವಾಗಿ ಸಂಬಂಧಿಸಿರುವ ಇನ್ನೊಂದು ವಿಚಾರವೇನೆಂದರೆ, ಆತನು ಮಾನವರನ್ನು ನಿಷ್ಪ್ರಯೋಜಕರಾಗಿ ದೃಷ್ಟಿಸುತ್ತಾನೆಂಬುದೇ. ಎಲೀಫಜನು ಮೂರನೇ ಸಲ ಮಾತಾಡಿದಾಗ ಈ ಪ್ರಶ್ನೆ ಕೇಳಿದನು: “ಮನುಷ್ಯಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೇ ಪ್ರಯೋಜನವಷ್ಟೆ.” (ಯೋಬ 22:2) ದೇವರ ದೃಷ್ಟಿಯಲ್ಲಿ ಮನುಷ್ಯನು ನಿಷ್ಪ್ರಯೋಜಕನಾಗಿದ್ದಾನೆ ಎಂದು ಎಲೀಫಜನು ಸೂಚಿಸುತ್ತಿದ್ದನು. ಅದೇ ಧಾಟಿಯಲ್ಲಿ ಬಿಲ್ದದನು ವಾದಿಸಿದ್ದು: “ಮನುಷ್ಯನು ದೇವರ ಎಣಿಕೆಯಲ್ಲಿ ನೀತಿವಂತನಾಗಿರುವದು ಹೇಗೆ? ಸ್ತ್ರೀಯಲ್ಲಿ ಹುಟ್ಟಿದವನು ಪರಿಶುದ್ಧನಾಗಿರುವದು ಸಾಧ್ಯವೋ?” (ಯೋಬ 25:4) ಅವರ ಈ ವಾದಸರಣಿಗನುಸಾರ, ಬರೀ ಮರ್ತ್ಯ ಮಾನವನಾಗಿರುವ ಯೋಬನು, ದೇವರ ಮುಂದೆ ನೀತಿಯ ನಿಲುವನ್ನು ಪಡೆಯಲು ಹೇಗೆ ತಾನೇ ಸಾಹಸಮಾಡಾನು?
ಇಂದು ಕೆಲವು ಜನರು, ಸ್ವತಃ ತಮ್ಮ ಕುರಿತಾದ ನಕಾರಾತ್ಮಕ ಭಾವನೆಗಳಿಂದ ಪೀಡಿತರಾಗಿದ್ದಾರೆ. ಈ ಸ್ಥಿತಿಯು, ಅವರ ಕುಟುಂಬದಲ್ಲಿ ಸಿಕ್ಕಿರುವ ಪಾಲನೆ, ಜೀವನದ ಒತ್ತಡಗಳಿಗೆ ಒಡ್ಡುವಿಕೆ ಅಥವಾ ಜಾತೀಯ ಇಲ್ಲವೆ ಕುಲಸಂಬಂಧಿತ ಹಗೆತನಕ್ಕೆ ತುತ್ತಾಗಿರುವುದರಂಥ ಅಂಶಗಳಿಂದಾಗಿ ಉಂಟಾಗಿರಬಹುದು. ಆದರೆ ಸೈತಾನನು ಮತ್ತು ಅವನ ದೆವ್ವಗಳು ಸಹ, ಒಬ್ಬ ವ್ಯಕ್ತಿಯನ್ನು ಜಜ್ಜಿಹಾಕುವುದರಿಂದ ವಿಚಿತ್ರ ಆನಂದವನ್ನು ಪಡೆಯುತ್ತಾರೆ. ಅವರು, ಒಬ್ಬ ವ್ಯಕ್ತಿಯು ಏನು ಮಾಡಿದರೂ ಸರ್ವಶಕ್ತ ದೇವರನ್ನು ಸಂತೋಷಪಡಿಸಲಾರನೆಂಬ ಭಾವನೆ ಅವನಲ್ಲಿ ಬರುವಂತೆ ಪ್ರಭಾವಿಸಿದರೆ, ಆಗ ಅವನು ನಿರಾಶೆಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಂಥ ವ್ಯಕ್ತಿಯು ಕಾಲಕ್ರಮೇಣ ಜೀವವುಳ್ಳ ದೇವರಿಂದ ದೂರ ಸರಿಯುವ, ಹೌದು ಅಗಲಿಹೋಗುವ ಸಾಧ್ಯತೆಯಿದೆ.—ಇಬ್ರಿಯ 2:1; 3:12.
ಇಳಿವಯಸ್ಸು ಮತ್ತು ಆರೋಗ್ಯದ ಸಮಸ್ಯೆಗಳು ನಮ್ಮ ಮೇಲೆ ಇತಿಮಿತಿಗಳನ್ನು ಹೇರುತ್ತವೆ. ನಮ್ಮ ಯುವಪ್ರಾಯದಲ್ಲಿ ನಾವು ಹೆಚ್ಚು ಆರೋಗ್ಯವಂತರು, ಹೆಚ್ಚು ಬಲವುಳ್ಳವರಾಗಿದ್ದಾಗ ರಾಜ್ಯ ಸೇವೆಯಲ್ಲಿ ಏನನ್ನು ಮಾಡಿದ್ದೇವೊ ಅದಕ್ಕೆ ಹೋಲಿಸುವಾಗ ನಮ್ಮ ಈಗಿನ ಪಾಲು ತೀರ ಚಿಕ್ಕದಾಗಿ ತೋರಬಹುದು. ಆದರೆ, ನಾವು ಈಗ ಏನು ಮಾಡುತ್ತಿದ್ದೇವೊ ಅದರಿಂದ ದೇವರಿಗೆ ಸಂತೋಷವಾಗುವುದಿಲ್ಲವೆಂಬ ಭಾವನೆಯು ನಮ್ಮಲ್ಲಿ ಹುಟ್ಟಬೇಕೆಂದು ಬಯಸುವವರು ಸೈತಾನನು ಮತ್ತು ಅವನ ದೆವ್ವಗಳಾಗಿದ್ದಾರೆಂದು ಗ್ರಹಿಸುವುದು ಎಷ್ಟು ಪ್ರಾಮುಖ್ಯ! ಈ ಆಲೋಚನೆಯನ್ನು ನಾವು ಪ್ರತಿರೋಧಿಸಬೇಕು.
ಕಾವಲಿನಬುರುಜು95 2/15 ಪುಟ 27 ಪ್ಯಾರ 6
ಸಮಸ್ಯೆಗಳನ್ನು ನಿರ್ವಹಿಸುವ ವಿಧಾನದಲ್ಲಿ ಒಂದು ಪಾಠ
ಯೋಬನ ಮೂವರು ಸಂಗಡಿಗರು ದಿವ್ಯ ಜ್ಞಾನದ ಬದಲಾಗಿ ವ್ಯಕ್ತಿಪರ ವಿಚಾರಗಳನ್ನು ವ್ಯಕ್ತಪಡಿಸಿದ ಮೂಲಕ ಅವನನ್ನು ಇನ್ನಷ್ಟು ಎದೆಗುಂದಿಸಿದರು. ಎಲೀಫಜನು, ‘ದೇವರಿಗೆ ಆತನ ಸೇವಕರಲ್ಲಿ ನಂಬಿಕೆಯಿಲ್ಲ’ ವೆಂದೂ ಮತ್ತು ಯೋಬನು ನೀತಿವಂತನಿರಲಿ ಇಲ್ಲದಿರಲಿ, ಅದು ನಿಜವಾಗಿ ಯೆಹೋವನಿಗೆ ಪ್ರಾಮುಖ್ಯವಲ್ಲ ಎಂದು ಹೇಳುವಷ್ಟರ ಮಟ್ಟಿಗೂ ಹೋದನು. (ಯೋಬ 4:18; 22:2, 3) ಇದಕ್ಕಿಂತ ಹೆಚ್ಚು—ನಿರುತ್ತೇಜನಕರ—ಅಥವಾ ಹೆಚ್ಚು ಅಸತ್ಯವಾದ ಮಾತನ್ನು ಊಹಿಸುವುದೂ ಕಷ್ಟ! ಯೆಹೋವನು ಎಲೀಫಜನನ್ನು ಮತ್ತು ಅವನ ಸಂಗಡಿಗರನ್ನು ಈ ದೂಷಣೆಗಾಗಿ ತದನಂತರ ಖಂಡಿಸಿದ್ದೇನೂ ಆಶ್ಚರ್ಯವಲ್ಲ. “[ಯೋಬನು] ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ” ಎಂದನಾತನು. (ಯೋಬ 42:7) ಆದರೆ ಅತ್ಯಂತ ಹಾನಿಕರವಾದ ಪ್ರತಿಪಾದನೆಯು ಇನ್ನೂ ಬರಲಿತ್ತು.
ಕಾವಲಿನಬುರುಜು03 4/15 ಪುಟ 14-15 ಪ್ಯಾರ 10-12
ಯೆಹೋವನ ಮನಸ್ಸನ್ನು ಸಂತೋಷಪಡಿಸುವ ಯುವ ಜನರು
10 ಈ ಬೈಬಲ್ ವೃತ್ತಾಂತದಲ್ಲಿ ತಿಳಿಸಲ್ಪಟ್ಟ ಪ್ರಕಾರ, ಸೈತಾನನು ಕೇವಲ ಯೋಬನ ನಿಷ್ಠೆಯನ್ನು ಮಾತ್ರವಲ್ಲ, ನಿಮ್ಮನ್ನೂ ಸೇರಿಸಿ ದೇವರ ಸೇವೆಮಾಡುವ ಇತರರೆಲ್ಲರ ನಿಷ್ಠೆಯನ್ನೂ ಸಂದೇಹಕ್ಕೆ ಗುರಿಪಡಿಸಿದನು. ವಾಸ್ತವದಲ್ಲಿ ಸಾಮಾನ್ಯ ಮಾನವಕುಲದ ಕುರಿತಾಗಿ ಮಾತಾಡುತ್ತಾ ಸೈತಾನನು ಯೆಹೋವನಿಗಂದದ್ದು: “ಒಬ್ಬ ಮನುಷ್ಯನು [ಕೇವಲ ಯೋಬನಲ್ಲ, ಬದಲಾಗಿ ಯಾವುದೇ ವ್ಯಕ್ತಿಯು] ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.” (ಯೋಬ 2:4) ಈ ಪ್ರಾಮುಖ್ಯವಾದ ವಿವಾದಾಂಶದಲ್ಲಿ ನಿಮ್ಮ ಪಾತ್ರವನ್ನು ನೀವು ಕಾಣುತ್ತೀರೊ? ಜ್ಞಾನೋಕ್ತಿ 27:11ರಲ್ಲಿ ಸೂಚಿಸಲ್ಪಟ್ಟಿರುವಂತೆ, ನೀವು ಯೆಹೋವನಿಗೆ ಏನನ್ನೊ ಕೊಡಸಾಧ್ಯವಿದೆ ಎಂದು ಯೆಹೋವನು ಹೇಳುತ್ತಿದ್ದಾನೆ. ಅದೇನೆಂದರೆ, ತನ್ನ ದೂರುಗಾರನಾದ ಸೈತಾನನಿಗೆ ತಾನು ಉತ್ತರ ಕೊಡಲಾಗುವಂತೆ ಒಂದು ಆಧಾರವೇ. ವಿಶ್ವದ ಪರಮಾಧಿಕಾರಿಯು, ಅತ್ಯಂತ ಮಹಾ ವಿವಾದಾಂಶದ ಸಂಬಂಧದಲ್ಲಿ ನಿಮ್ಮ ವೈಯಕ್ತಿಕ ಉತ್ತರಕ್ಕಾಗಿ ಕೇಳಿಕೊಳ್ಳುತ್ತಿದ್ದಾನೆ. ಇದರ ಕುರಿತು ತುಸು ಯೋಚಿಸಿರಿ. ಎಂತಹ ಮಹತ್ತಾದ ಜವಾಬ್ದಾರಿ ಮತ್ತು ಸುಯೋಗ ನಿಮ್ಮದಾಗಿದೆ! ಯೆಹೋವನು ನಿಮ್ಮಿಂದ ಏನನ್ನು ಕೇಳುತ್ತಿದ್ದಾನೊ ಅದನ್ನು ನೀವು ಪೂರೈಸಬಲ್ಲಿರೊ? ಯೋಬನು ಪೂರೈಸಿದನು. (ಯೋಬ 2:9, 10) ಅಲ್ಲದೆ, ಯೇಸು ಹಾಗೂ ಇತಿಹಾಸದಾದ್ಯಂತ ಅಸಂಖ್ಯಾತ ಜನರು—ಇದರಲ್ಲಿ ಅನೇಕ ಮಂದಿ ಯುವ ಜನರೂ ಸೇರಿದ್ದಾರೆ—ಈ ಕೋರಿಕೆಯನ್ನು ಪೂರೈಸಿದ್ದಾರೆ. (ಫಿಲಿಪ್ಪಿ 2:8; ಪ್ರಕಟನೆ 6:9) ನೀವು ಸಹ ಹಾಗೆ ಮಾಡಸಾಧ್ಯವಿದೆ. ಆದರೆ ಒಂದು ವಿಷಯದಲ್ಲಿ ಮಾತ್ರ ನೀವು ನಿಶ್ಚಿತರಾಗಿರಬೇಕು. ಅದೇನಂದರೆ, ಈ ಸಂಗತಿಯಲ್ಲಿ ಯಾವ ಪಕ್ಷವನ್ನೂ ವಹಿಸದೆ ತಟಸ್ಥರಾಗಿ ಉಳಿಯಲು ಸಾಧ್ಯವಿಲ್ಲ. ನಿಮ್ಮ ನಡವಳಿಕೆಯ ಮೂಲಕ, ನೀವು ಒಂದೋ ಸೈತಾನನ ದೂರುಗಳನ್ನು ಇಲ್ಲವೆ ಯೆಹೋವನ ಉತ್ತರವನ್ನು ಬೆಂಬಲಿಸುವವರಾಗಿದ್ದೀರೆಂಬದನ್ನು ತೋರಿಸಿಕೊಡುವಿರಿ. ಯಾವುದನ್ನು ಎತ್ತಿಹಿಡಿಯಲು ನೀವು ಆರಿಸಿಕೊಳ್ಳುವಿರಿ?
ಯೆಹೋವನು ನಿಮಗಾಗಿ ಚಿಂತಿಸುತ್ತಾನೆ
11 ನೀವು ಯಾವುದನ್ನು ಆರಿಸಿಕೊಳ್ಳುತ್ತೀರೆಂಬ ವಿಷಯವು ಯೆಹೋವನಿಗೆ ನಿಜವಾಗಿಯೂ ಪ್ರಾಮುಖ್ಯವೊ? ಆತನು ಸೈತಾನನಿಗೆ ತಕ್ಕದಾದ ಉತ್ತರವನ್ನು ಕೊಡಲು ಈಗಾಗಲೇ ಸಾಕಷ್ಟು ಜನರು ನಂಬಿಗಸ್ತರಾಗಿ ಉಳಿದಿರುವುದಿಲ್ಲವೆ? ಹೌದು, ಯೆಹೋವನನ್ನು ಯಾರೊಬ್ಬರೂ ಪ್ರೀತಿಯಿಂದ ಸೇವಿಸುವುದಿಲ್ಲ ಎಂಬ ಸೈತಾನನ ವಾದವು ಈಗಾಗಲೇ ಅನೇಕ ಬಾರಿ ಸುಳ್ಳಾಗಿ ರುಜುವಾಗಿರುತ್ತದೆ ನಿಜ. ಆದರೂ, ಪರಮಾಧಿಕಾರದ ವಿವಾದಾಂಶದಲ್ಲಿ ನೀವು ಆತನ ಪಕ್ಷವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲು ಯೆಹೋವನು ಬಯಸುತ್ತಾನೆ. ಯಾಕಂದರೆ ಆತನು ನಿಮ್ಮ ಕುರಿತು ವ್ಯಕ್ತಿಪರವಾಗಿ ಚಿಂತಿಸುತ್ತಾನೆ. ಯೇಸುವಂದದ್ದು: “ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.”—ಮತ್ತಾಯ 18:14.
12 ಆದುದರಿಂದ, ನೀವು ಆರಿಸಿಕೊಳ್ಳುವ ಮಾರ್ಗಕ್ರಮದಲ್ಲಿ ಯೆಹೋವನು ಆಸಕ್ತನಾಗಿದ್ದಾನೆಂಬುದು ಸ್ಪಷ್ಟ. ಅದಕ್ಕಿಂತಲೂ ಪ್ರಾಮುಖ್ಯವಾದ ಸಂಗತಿಯೇನೆಂದರೆ, ಆತನು ಅದರಿಂದ ಬಾಧಿತನಾಗುತ್ತಾನೆ. ಮಾನವರ ಒಳ್ಳೆಯ ಅಥವಾ ಕೆಟ್ಟ ಕೃತ್ಯಗಳಿಂದ ಯೆಹೋವನ ಆಳವಾದ ಭಾವನೆಗಳು ಕಲಕಿಸಲ್ಪಡುತ್ತವೆಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. ಉದಾಹರಣೆಗೆ, ಇಸ್ರಾಯೇಲ್ಯರು ಪದೇ ಪದೇ ಯೆಹೋವನಿಗೆ ವಿರುದ್ಧವಾಗಿ ದಂಗೆಯೆದ್ದಾಗ, ಅವರು ಆತನನ್ನು “ನೋಯಿಸಿದರು.” (ಕೀರ್ತನೆ 78:40, 41) ನೋಹನ ದಿನಗಳ ಜಲಪ್ರಳಯಕ್ಕೆ ಮುಂಚೆ, “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿ”ದ್ದಾಗ, ಯೆಹೋವನು “ತನ್ನ ಹೃದಯದಲ್ಲಿ ನೊಂದುಕೊಂಡನು.” (ಆದಿಕಾಂಡ 6:5, 6) ಇದೇನನ್ನು ಅರ್ಥೈಸುತ್ತದೆ ಎಂಬುದನ್ನು ಯೋಚಿಸಿರಿ. ನೀವು ಒಂದು ಕೆಟ್ಟ ಮಾರ್ಗಕ್ರಮವನ್ನು ಅನುಸರಿಸುವುದಾದರೆ, ನೀವು ನಿಮ್ಮ ನಿರ್ಮಾಣಿಕನನ್ನು ನೋಯಿಸುತ್ತಿದ್ದೀರಿ. ದೇವರು ಬಲಹೀನನೂ ಭಾವೋದ್ರೇಕಗಳಿಗೆ ಅಧೀನನೂ ಆಗಿದ್ದಾನೆಂದು ಇದರ ಅರ್ಥವಲ್ಲ. ಅದರ ನಿಜವಾದ ಅರ್ಥವು, ಆತನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಸುಕ್ಷೇಮದ ಕುರಿತು ಚಿಂತಿಸುತ್ತಾನೆ ಎಂಬುದೇ. ಆದರೆ ಯಾವುದು ಯೋಗ್ಯವೊ ಅದನ್ನು ನೀವು ಮಾಡುವಾಗ, ಯೆಹೋವನ ಮನಸ್ಸು ಸಂತೋಷಗೊಳ್ಳುತ್ತದೆ. ದೂರುಗಾರನಾದ ಸೈತಾನನಿಗೆ ಈಗ ಅಧಿಕ ಉತ್ತರವನ್ನು ನೀಡಶಕ್ತನಾಗಿರುವುದಕ್ಕಾಗಿ ಆತನು ಸಂತೋಷಿತನು ಮಾತ್ರವಲ್ಲ, ಆತನೀಗ ನಿಮಗೆ ಪ್ರತಿಫಲವನ್ನು ಕೊಡಶಕ್ತನು ಎಂಬದಕ್ಕೂ ಸಂತೋಷಿತನು. ಮತ್ತು ಪ್ರತಿಫಲ ಕೊಡುವಾತನಾಗಿರಲು ಆತನು ಬಯಸುತ್ತಾನೆ. (ಇಬ್ರಿಯ 11:6) ಯೆಹೋವನು ನಮಗೆ ಎಂತಹ ಪ್ರೀತಿಯುಳ್ಳ ತಂದೆಯಾಗಿರುತ್ತಾನೆ!
ಬೈಬಲಿನಲ್ಲಿರುವ ರತ್ನಗಳು
ನಿಮ್ಮ ಸೃಷ್ಟಿಕರ್ತನನ್ನು ಮಹಿಮೆಪಡಿಸಲು ಆಧ್ಯಾತ್ಮಿಕ ಗುರಿಗಳನ್ನು ಉಪಯೋಗಿಸಿರಿ
ಯೆಹೋವನು ಈ ವಿಶ್ವದ ಸೃಷ್ಟಿಯನ್ನು ಹೇಗೆ ಪೂರೈಸಿದನೆಂಬದನ್ನು ಪರಿಗಣಿಸಿರಿ. ‘ಸಾಯಂಕಾಲವೂ ಪ್ರಾತಃಕಾಲವೂ ಆಯಿತು’ ಎಂಬ ಮಾತುಗಳೊಂದಿಗೆ ಯೆಹೋವನು ಸೃಷ್ಟಿಯ ಅನುಕ್ರಮದ ಅವಧಿಗಳನ್ನು ಗುರುತಿಸಿದನು. (ಆದಿಕಾಂಡ 1:5, 8, 13, 19, 23, 31) ಪ್ರತಿಯೊಂದು ಸೃಷ್ಟಿಕಾರಕ ಅವಧಿಯ ಆರಂಭದಲ್ಲಿ, ಆ ದಿನಕ್ಕಾಗಿ ಅವನ ಗುರಿ ಇಲ್ಲವೆ ಲಕ್ಷ್ಯವೇನೆಂದು ಆತನಿಗೆ ಸ್ಪಷ್ಟವಾಗಿ ತಿಳಿದಿತ್ತು. ಮತ್ತು ಅದರಂತೆಯೇ ಸೃಷ್ಟಿಮಾಡುವ ತನ್ನ ಉದ್ದೇಶವನ್ನು ದೇವರು ಪೂರೈಸಿಬಿಟ್ಟನು. (ಪ್ರಕಟನೆ 4:11) “[ಯೆಹೋವನು] ಬಯಸಿದ್ದನ್ನೇ ಮಾಡುತ್ತಾನೆ” ಎಂದು ಮೂಲಪಿತನಾದ ಯೋಬನು ಹೇಳಿದನು. (ಯೋಬ 23:13) “ತಾನು ಉಂಟುಮಾಡಿದ್ದನ್ನೆಲ್ಲಾ” ನೋಡಿ, ಅದು ‘ಬಹು ಒಳ್ಳೇದಾಗಿದೆ’ ಎಂದು ಘೋಷಿಸುವಾಗ ಯೆಹೋವನಿಗೆ ಎಷ್ಟು ತೃಪ್ತಿಯಾಗಿದ್ದಿರಬಹುದು!—ಆದಿಕಾಂಡ 1:31.
ನಮ್ಮ ಗುರಿಗಳು ಕೈಗೂಡಬೇಕಾದರೆ, ಅವುಗಳನ್ನು ಸಾಧಿಸುವ ಬಲವಾದ ಅಪೇಕ್ಷೆ ನಮಗೂ ಇರಬೇಕು. ಅಂಥ ತೀವ್ರ ಅಪೇಕ್ಷೆಯನ್ನು ಬೆಳೆಸುವಂತೆ ಯಾವುದು ಸಹಾಯಮಾಡುವುದು? ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇದ್ದಾಗಲೂ, ಯೆಹೋವನು ಅದರ ಅಂತ್ಯಪರಿಣಾಮವನ್ನು, ಅಂದರೆ ಅದು ಆತನಿಗೆ ಘನಮಾನವನ್ನು ತರಲಿದ್ದಂಥ ಅಂತರಿಕ್ಷದಲ್ಲಿನ ಒಂದು ಸುಂದರ ರತ್ನಾಭರಣವಾಗುವುದನ್ನು ಮುನ್ನೋಡಶಕ್ತನಾಗಿದ್ದನು. ಅದೇ ರೀತಿಯಲ್ಲಿ, ಗುರಿಯನ್ನು ಸಾಧಿಸುವುದರ ಫಲಿತಾಂಶಗಳ ಕುರಿತು ಮತ್ತು ಪ್ರಯೋಜನಗಳ ಕುರಿತು ಧ್ಯಾನಿಸುವ ಮೂಲಕ, ನಾವೇನನ್ನು ಮಾಡಲು ಹೊರಟಿದ್ದೇವೊ ಅದನ್ನು ಮಾಡಿತೀರಿಸಬೇಕೆಂಬ ನಮ್ಮ ಅಪೇಕ್ಷೆಯನ್ನು ಬೆಳೆಸಸಾಧ್ಯವಿದೆ. ಇದು 19 ವರ್ಷ ಪ್ರಾಯದ ಟೋನಿಯ ಅನುಭವವಾಗಿತ್ತು. ಪಾಶ್ಚಾತ್ಯ ಯುರೋಪಿನ ಒಂದು ಬ್ರಾಂಚ್ ಆಫೀಸಿಗೆ ಅವನು ನೀಡಿದ ಭೇಟಿಯು ಅವನ ಮನಸ್ಸಿನಲ್ಲಿ ಅಚ್ಚೊತ್ತಿಸಿದ ಅಭಿಪ್ರಾಯವನ್ನು ಅವನೆಂದೂ ಮರೆಯಲಿಲ್ಲ. ‘ಇಂಥ ಸ್ಥಳದಲ್ಲಿದ್ದು ಸೇವೆಸಲ್ಲಿಸುವುದು ಹೇಗಿರಬಹುದು?’ ಎಂಬ ಪ್ರಶ್ನೆಯು ಅಂದಿನಿಂದ ಟೋನಿಯ ಮನಸ್ಸನ್ನು ಆಕ್ರಮಿಸಿತ್ತು. ಆ ಸಾಧ್ಯತೆಯ ಬಗ್ಗೆ ಯೋಚಿಸುವುದನ್ನು ಟೋನಿ ಬಿಟ್ಟುಬಿಡಲಿಲ್ಲ, ಮತ್ತು ಅದನ್ನು ತಲಪಲಿಕ್ಕಾಗಿ ಅವನು ಪ್ರಯತ್ನಮಾಡಿದನು. ವರ್ಷಗಳಾನಂತರ, ಬ್ರಾಂಚ್ನಲ್ಲಿ ಸೇವೆಮಾಡುವ ಅವನ ಅರ್ಜಿ ಮಂಜೂರಾದಾಗ ಅವನಿಗೆಷ್ಟು ಸಂತೋಷವಾಯಿತು!
ಡಿಸೆಂಬರ್ 11-17
ಬೈಬಲಿನಲ್ಲಿರುವ ನಿಧಿ| ಯೋಬ 25-27
“ನಿಯತ್ತಾಗಿರೋಕೆ ಪರಿಪೂರ್ಣರಾಗಿರಬೇಕು ಅಂತೇನಿಲ್ಲ”
it-1-E ಪುಟ 1210 ಪ್ಯಾರ 4
ನಿಯತ್ತು
ಯೋಬ “ನೀತಿವಂತನಾಗಿದ್ದ, ದೇವರಿಗೆ ನಿಯತ್ತಾಗಿದ್ದ. ದೇವರಿಗೆ ಭಯಪಡ್ತಿದ್ದ, ಕೆಟ್ಟದು ಮಾಡ್ತಿರಲಿಲ್ಲ” ಅಂತ ಬೈಬಲ್ ಹೇಳುತ್ತೆ. (ಯೋಬ 1:1) ಯೋಬ ಕೇವಲ ತನ್ನ ಸ್ವಾರ್ಥಕ್ಕೋಸ್ಕರ ದೇವರನ್ನ ಆರಾದಿಸ್ತಿದ್ದಾನೇ ಅಂತ ಸೈತಾನ ಆರೋಪ ಹಾಕ್ದ. ದೇವರು ಯೋಬನ ಆಸ್ತಿ-ಪಾಸ್ತಿ ಮತ್ತು ಅವನ ಮಕ್ಕಳನ್ನ ಕಿತ್ತುಕೊಳ್ಳೋಕೆ ಸೈತಾನನನ್ನ ಅನುಮತಿಸಿದ. ಆದ್ರೆ ಯೋಬ ಮಾತ್ರ ನಿಯತ್ತು ಕಳ್ಕೊಳ್ಳಲಿಲ್ಲ. (ಯೋಬ 1:6–2:3) ಅವನು ತನ್ನ ಪ್ರಾಣ ಉಳಿಸಿಕೊಳ್ಳೋಕೆ ಏನ್ ಬೇಕಾದ್ರೂ ಮಾಡೋಕೆ ರೆಡಿ ಇದ್ದಾನೆ ಅಂತ ಸೈತಾನ ಹೇಳ್ದ. (ಯೋಬ 2:4, 5) ಯೋಬ ತನಗೆ ಬಂದಿರೋ ಕಷ್ಟಗಳನ್ನ ಸಹಿಸಿಕೊಳ್ಳೋ ಮೂಲಕ ತಾನು ನೀತಿವಂತನು ಮತ್ತು ದೇವರಿಗೆ ನಿಯತ್ತಾಗಿದ್ದೀನಿ ಅಂತ ತೋರಿಸಿಕೊಟ್ಟ. ಯೋಬನಿಗೆ ತುಂಬ ನೋವಿಂದ ನರಳುವಷ್ಟೂ ಕಾಯಿಲೆ ಬಂತು, ತನ್ನ ಸ್ವಂತ ಹೆಂಡತಿನೇ ದೇವ್ರಿಗೆ ಶಾಪ ಹಾಕಿ ಸತ್ತುಹೋಗು ಅಂತ ಹೇಳ್ತಾಳೆ ಅಷ್ಟೆ ಅಲ್ಲ ಅವನ ಸ್ನೇಹಿತರೇ ದೇವರ ನೀತಿನಿಯಮಗಳ ಬಗ್ಗೆ ಇಲ್ಲ-ಸಲ್ಲದನ್ನ ಹೇಳ್ತಾರೆ. ಇಷ್ಟೆಲ್ಲಾ ಆದ್ರೂ ಯೋಬ ಮಾತ್ರ ದೇವರಿಗೆ ನಿಯತ್ತಾಗಿದ್ದ. ಅವನು ಹೀಗೆ ಹೇಳ್ತಾನೆ, “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ! ನಿನಗೆ ಇಷ್ಟ ಆಗೋದನ್ನೇ ಯಾವಾಗ್ಲೂ ಮಾಡ್ತೀನಿ, ಅದನ್ನ ಯಾವತ್ತೂ ಬಿಟ್ಟುಬಿಡಲ್ಲ ಆಗ ಬದುಕಿರೋ ತನಕ ನನ್ನ ಮನಸ್ಸು ಚುಚ್ಚಲ್ಲ.” (ಯೋಬ 27:5, 6) ಯೋಬ ಸಾಯೋವರೆಗೂ ನಿಷ್ಠೆ ಕಾಪಾಡ್ಕೊಳ್ಳೋ ಮೂಲಕ ಸೈತಾನ ಶುದ್ಧ ಸುಳ್ಳುಗಾರ ಅಂತ ತೋರಿಸಿಕೊಟ್ಟ.
ಕಾವಲಿನಬುರುಜು19.02 ಪುಟ 3 ಪ್ಯಾರ 3-5
ಸದಾ ಸಮಗ್ರತೆ ಕಾಪಾಡಿಕೊಳ್ಳಿ!
3 ಯೆಹೋವನ ಸೇವಕರು ಹೇಗೆ ಸಮಗ್ರತೆ ತೋರಿಸುತ್ತಾರೆ? ಅವರು ಯೆಹೋವನನ್ನು ಪೂರ್ಣಹೃದಯದಿಂದ ಪ್ರೀತಿಸುತ್ತಾರೆ. ಏನೇ ಆದರೂ ಆ ಪ್ರೀತಿಯನ್ನು ಅವರು ಬಿಟ್ಟುಕೊಡಲ್ಲ. ಎಲ್ಲಾ ಸಮಯದಲ್ಲೂ ಆತನಿಗೆ ಇಷ್ಟವಾದದ್ದನ್ನು ಮಾಡುತ್ತಾರೆ. ಬೈಬಲಿನಲ್ಲಿ ಸಮಗ್ರತೆ ಎಂಬ ಈ ಪದವನ್ನು ಹೇಗೆ ಬಳಸಲಾಗಿದೆ ಎಂದು ನೋಡೋಣ. ಬೈಬಲಿನಲ್ಲಿ “ಸಮಗ್ರತೆ” ಎಂದು ಭಾಷಾಂತರವಾಗಿರುವ ಪದದ ಅರ್ಥ ಏನೆಂದರೆ ಸಂಪೂರ್ಣವಾಗಿರುವುದು, ಲೋಪದೋಷ ಇಲ್ಲದಿರುವುದು. ಉದಾಹರಣೆಗೆ, ಇಸ್ರಾಯೇಲ್ಯರು ಯೆಹೋವನಿಗೆ ಪ್ರಾಣಿ ಯಜ್ಞಗಳನ್ನು ಕೊಡಬೇಕಿತ್ತು. ಆ ಪ್ರಾಣಿಗಳು ಪೂರ್ಣಾಂಗವಾಗಿ ಇರಬೇಕಿತ್ತು. (ಯಾಜ. 22:21, 22) ಕಾಲಿಲ್ಲದ, ಕಿವಿ ಇಲ್ಲದ, ಕಣ್ಣಿಲ್ಲದ ಅಥವಾ ರೋಗವಿರುವ ಪ್ರಾಣಿಗಳನ್ನು ಅವರು ಯಜ್ಞವಾಗಿ ಕೊಡಬಾರದಿತ್ತು. ಯಾವುದೇ ದೋಷ ಇಲ್ಲದ, ಆರೋಗ್ಯಕರವಾದ ಪ್ರಾಣಿಗಳನ್ನು ಯೆಹೋವನಿಗೆ ಯಜ್ಞವಾಗಿ ಕೊಡಬೇಕಿತ್ತು. (ಮಲಾ. 1:6-9) ಯೆಹೋವನಿಗೆ ಒಂದು ವಿಷಯ ಸಂಪೂರ್ಣವಾಗಿರುವುದು ಅಥವಾ ದೋಷ ಇಲ್ಲದೆ ಇರುವುದು ಎಷ್ಟು ಮುಖ್ಯ ಎಂದು ಇದರಿಂದ ಅರ್ಥವಾಗುತ್ತದೆ. ನೀವು ಒಂದು ಹಣ್ಣನ್ನೋ ಉಪಕರಣವನ್ನೋ ಪುಸ್ತಕವನ್ನೋ ಖರೀದಿಸಲು ಹೋಗುತ್ತೀರಿ ಎಂದು ನೆನಸಿ. ಅದು ಸ್ವಲ್ಪ ಹಾಳಾಗಿದ್ದರೆ ಅಥವಾ ಪುಸ್ತಕದಲ್ಲಿ ಕೆಲವು ಪುಟಗಳೇ ಇಲ್ಲ ಅಂದರೆ ನೀವದನ್ನು ತಗೊಳ್ತೀರಾ? ಖಂಡಿತ ಇಲ್ಲ. ನಾವು ತಗೊಳ್ಳುವ ವಸ್ತು ಚೆನ್ನಾಗಿರಬೇಕು, ಸಂಪೂರ್ಣವಾಗಿ ಇರಬೇಕೆಂದು ಬಯಸುತ್ತೇವೆ. ನಾವು ಯೆಹೋವನಿಗೆ ತೋರಿಸುವ ಪ್ರೀತಿ, ನಿಷ್ಠೆ ಸಹ ಅದೇ ರೀತಿ ಲೋಪದೋಷ ಇಲ್ಲದೆ ಸಂಪೂರ್ಣವಾಗಿ ಇರಬೇಕೆಂದು ಆತನು ಬಯಸುತ್ತಾನೆ.
4 ಹಾಗಾದರೆ ಸಮಗ್ರತೆ ಅನ್ನುವುದು ಪರಿಪೂರ್ಣತೆಗೆ ಸೂಚಿಸುತ್ತದಾ? ಒಂದುವೇಳೆ ವಿಷಯ ಹಾಗಿದ್ದರೆ ನಾವೆಲ್ಲ ತುಂಬ ತಪ್ಪು ಮಾಡುತ್ತೇವಲ್ಲಾ, ನಮ್ಮಲ್ಲಿ ಯಾರೂ ಲಾಯಕ್ಕಿಲ್ಲ ಅಂತ ಅನಿಸಿಬಿಡುತ್ತದೆ. ಆದರೆ ಸಮಗ್ರತೆ ಅನ್ನುವುದು ಪರಿಪೂರ್ಣತೆ ಅಲ್ಲ ಅಂತ ಅರ್ಥಮಾಡಿಕೊಳ್ಳಲು ಎರಡು ಕಾರಣಗಳನ್ನು ನೋಡಿ. ಒಂದು, ಯೆಹೋವನು ನಮ್ಮ ತಪ್ಪುಗಳನ್ನೇ ನೋಡುತ್ತಾ ಇರಲ್ಲ. “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” ಎಂದು ಆತನ ವಾಕ್ಯ ಹೇಳುತ್ತದೆ. (ಕೀರ್ತ. 130:3) ನಾವು ಅಪರಿಪೂರ್ಣರು, ಪಾಪ ಮಾಡುತ್ತೇವೆ ಎಂದು ಆತನಿಗೆ ಗೊತ್ತು. ಆದ್ದರಿಂದ ಆತನು ನಮ್ಮನ್ನು ಉದಾರವಾಗಿ ಕ್ಷಮಿಸುತ್ತಾನೆ. (ಕೀರ್ತ. 86:5) ಎರಡು, ಯೆಹೋವನಿಗೆ ನಮ್ಮ ಇತಿಮಿತಿಗಳು ಗೊತ್ತು. ನಮ್ಮಿಂದ ಸಾಧ್ಯವಿಲ್ಲದ ವಿಷಯವನ್ನು ಆತನೆಂದೂ ಕೇಳಲ್ಲ. (ಕೀರ್ತನೆ 103:12-14 ಓದಿ.) ಹಾಗಾದರೆ ಯಾವ ವಿಧದಲ್ಲಿ ನಾವು ಯೆಹೋವನ ಮುಂದೆ ದೋಷವಿಲ್ಲದೆ ಸಂಪೂರ್ಣವಾಗಿರಲು ಸಾಧ್ಯ?
5 ಸಮಗ್ರತೆ ತೋರಿಸಲು ಯೆಹೋವನ ಸೇವಕರಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಪ್ರೀತಿ. ದೇವರ ಮೇಲೆ ನಮಗಿರುವ ಪ್ರೀತಿ ಮತ್ತು ನಮ್ಮ ಸ್ವರ್ಗೀಯ ತಂದೆಯಾಗಿರುವ ಆತನಿಗೆ ನಾವು ತೋರಿಸುವ ಭಕ್ತಿ ಯಾವಾಗಲೂ ಸಂಪೂರ್ಣವಾಗಿರಬೇಕು. ಪರೀಕ್ಷೆ ಬಂದಾಗಲೂ ನಾವು ನಮ್ಮ ಪ್ರೀತಿ-ಭಕ್ತಿಯನ್ನು ಹಾಗೇ ಕಾಪಾಡಿಕೊಂಡರೆ ನಮ್ಮಲ್ಲಿ ಸಮಗ್ರತೆ ಇದೆ ಎಂದಾಗುತ್ತದೆ. (1 ಪೂರ್ವ. 28:9; ಮತ್ತಾ. 22:37) ಆರಂಭದಲ್ಲಿ ನೋಡಿದ ಆ ಮೂರು ಸಾಕ್ಷಿಗಳ ಬಗ್ಗೆ ಪುನಃ ಯೋಚಿಸಿ. ಅವರು ಯಾಕೆ ಹಾಗೆ ಪ್ರತಿಕ್ರಿಯಿಸಿದರು? ನಮ್ಮ ಯುವ ಸಹೋದರಿಗೆ ಶಾಲೆಯಲ್ಲಿ ಮೋಜುಮಸ್ತಿ ಮಾಡಲು ಇಷ್ಟ ಇಲ್ಲ ಅಂತಾನಾ? ನಮ್ಮ ಯುವ ಸಹೋದರನಿಗೆ ತನ್ನ ಶಾಲಾ ಸಹಪಾಠಿಯಿಂದ ಗೇಲಿಮಾಡಿಸಿಕೊಳ್ಳಲು ಇಷ್ಟ ಅಂತಾನಾ? ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವ ನಮ್ಮ ಸಹೋದರನಿಗೆ ಕೆಲಸ ಕಳಕೊಳ್ಳುವುದರ ಬಗ್ಗೆ ಚಿಂತೆ ಇಲ್ಲ ಅಂತಾನಾ? ಇಲ್ಲ. ಯೆಹೋವನಿಗೆ ಕೆಲವು ಮಟ್ಟಗಳಿವೆ ಎಂದು ಅವರಿಗೆ ಗೊತ್ತು. ಅವರ ಸ್ವರ್ಗೀಯ ತಂದೆಗೆ ಏನಿಷ್ಟಾನೋ ಅದನ್ನೇ ಮಾಡಬೇಕೆಂದು ಅವರು ದೃಢಮನಸ್ಸು ಮಾಡಿಕೊಂಡಿದ್ದಾರೆ. ಅವರಿಗೆ ಯೆಹೋವನ ಮೇಲೆ ಪ್ರೀತಿ ಇರುವುದರಿಂದ ಯಾವುದೇ ತೀರ್ಮಾನ ತಗೊಳ್ಳುವ ಮುಂಚೆ ಅದು ದೇವರಿಗೆ ಇಷ್ಟ ಆಗುತ್ತದಾ ಎಂದು ಯೋಚಿಸುತ್ತಾರೆ. ಹೀಗೆ ಅವರು ತಮ್ಮಲ್ಲಿ ಸಮಗ್ರತೆ ಇದೆ ಎಂದು ತೋರಿಸಿಕೊಡುತ್ತಾರೆ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು16.11 ಪುಟ 9 ಪ್ಯಾರ 3
ದೇವರ ವಾಕ್ಯಕ್ಕೆ ತಕ್ಕಂತೆ ಸಂಘಟಿತರು
3 ಯೆಹೋವನು ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುತ್ತಾನೆ ಎನ್ನುವುದನ್ನು ಆತನ ಸೃಷ್ಟಿಯನ್ನು ನೋಡಿದಾಗ ಗೊತ್ತಾಗುತ್ತದೆ. ಆತನು “ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.” (ಜ್ಞಾನೋ. 3:19) ಆತನ ಸೃಷ್ಟಿಯ ಬಗ್ಗೆ ನಾವು ತಿಳಿದುಕೊಳ್ಳಲು ಬೇಕಾದಷ್ಟಿದೆ. “ಆತನನ್ನು ಕುರಿತು ಸ್ವಲ್ಪ ಮಾತ್ರ ಕೇಳಿದ್ದೇವೆ” ಎನ್ನುತ್ತದೆ ಬೈಬಲ್. (ಯೋಬ 26:14, ಪವಿತ್ರ ಗ್ರಂಥ ಭಾಷಾಂತರ) ಆದರೂ ನಮಗೆ ತಿಳಿದಿರುವ ಅಷ್ಟೋ ಇಷ್ಟೋ ವಿಷಯಗಳಿಂದಲೇ ದೇವರು ವಿಶ್ವವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದಾನೆ ಎನ್ನುವುದು ಸ್ಪಷ್ಟವಾಗುತ್ತದೆ. (ಕೀರ್ತ. 8:3, 4) ಆಕಾಶದಲ್ಲಿ ಕೋಟಿ ಕೋಟಿ ನಕ್ಷತ್ರಗಳಿದ್ದರೂ ಅವೆಲ್ಲವೂ ವ್ಯವಸ್ಥಿತವಾಗಿ ಚಲಿಸುತ್ತವೆ. ಸೂರ್ಯನನ್ನು ಸುತ್ತುತ್ತಿರುವ ಗ್ರಹಗಳನ್ನೇ ನೋಡಿ. ಇಂಥ ಸುವ್ಯವಸ್ಥೆ ಹೇಗೆ ಬಂತು? ಯೆಹೋವನು ಗ್ರಹಗಳನ್ನು ಮತ್ತು ನಕ್ಷತ್ರಗಳನ್ನು ವ್ಯವಸ್ಥಿತವಾಗಿ ಚಲಿಸುವಂತೆ ಮಾಡಿರುವುದೇ ಇದಕ್ಕೆ ಕಾರಣ. ದೇವರು ಭೂಮಿಯನ್ನು ಮತ್ತು “ಆಕಾಶವನ್ನು ಜ್ಞಾನದಿಂದ ನಿರ್ಮಿಸಿದ್ದಾನೆ.” ಇದು ನಾವು ಆತನನ್ನು ಸ್ತುತಿಸುವಂತೆ, ಆರಾಧಿಸುವಂತೆ ಮತ್ತು ಆತನಿಗೆ ನಿಷ್ಠೆ ತೋರಿಸುವಂತೆ ಪ್ರೇರಿಸುತ್ತದೆ.—ಕೀರ್ತ. 136:1, 5-9.
ಡಿಸೆಂಬರ್ 18-24
ಬೈಬಲಿನಲ್ಲಿರುವ ನಿಧಿ| ಯೋಬ 28-29
“ಯೋಬನ ತರ ನೀವು ಒಳ್ಳೆ ಹೆಸ್ರು ಮಾಡಿದ್ದೀರ?”
ಕಾವಲಿನಬುರುಜು02 5/15 ಪುಟ 22 ಪ್ಯಾರ 19
ಅಗತ್ಯದಲ್ಲಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿರಿ
19 ನಾವು ಚರ್ಚಿಸಿರುವ ಬೈಬಲ್ ವೃತ್ತಾಂತಗಳು, ಒಂದು ಅಗತ್ಯವಿದ್ದು, ಅದನ್ನು ತಾವಾಗಿಯೇ ಪೂರೈಸಲು ಅಸಮರ್ಥರಾಗಿರುವವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಬೇಕೆಂಬ ನಿಜತ್ವವನ್ನು ಒತ್ತಿಹೇಳುತ್ತವೆ. ತನ್ನ ವಂಶವನ್ನು ಮುಂದುವರಿಸಲು ಅಬ್ರಹಾಮನಿಗೆ ಬೆತೂವೇಲನ ಸಹಕಾರವು ಅಗತ್ಯವಾಗಿತ್ತು. ತನ್ನ ಅವಶೇಷವನ್ನು ಕಾನಾನಿಗೆ ತೆಗೆದುಕೊಂಡು ಹೋಗುವಂತೆ ಮಾಡಲು ಯಾಕೋಬನಿಗೆ ಯೋಸೇಫನ ಆವಶ್ಯಕತೆಯಿತ್ತು. ಬಾಧ್ಯಸ್ಥನನ್ನು ಪಡೆಯಲು ನೊವೊಮಿಗೆ ರೂತಳ ಸಹಾಯದ ಅಗತ್ಯವಿತ್ತು. ಯಾವುದೇ ಸಹಾಯವಿಲ್ಲದೆ ಅಬ್ರಹಾಮನಾಗಲಿ, ಯಾಕೋಬನಾಗಲಿ, ನೊವೊಮಿಯಾಗಲಿ ಈ ಅಗತ್ಯಗಳನ್ನು ಪೂರೈಸಸಾಧ್ಯವಿರುತ್ತಿರಲಿಲ್ಲ. ಅದೇ ರೀತಿ, ಇಂದು ಪ್ರೀತಿಪೂರ್ವಕ ದಯೆಯನ್ನು ವಿಶೇಷವಾಗಿ ಅಗತ್ಯದಲ್ಲಿರುವವರಿಗೆ ತೋರಿಸಬೇಕು. (ಜ್ಞಾನೋಕ್ತಿ 19:17) ನಾವು ಮೂಲಪಿತನಾದ ಯೋಬನನ್ನು ಅನುಕರಿಸಬೇಕು. ಏಕೆಂದರೆ ಅವನು, “ಅಂಗಲಾಚುವ ಬಡವನನ್ನೂ ಸಹಾಯಕನಿಲ್ಲದ ಅನಾಥನನ್ನೂ ರಕ್ಷಿಸುವವನಾಗಿ” ಇದ್ದನು. “ಗತಿಯಿಲ್ಲದವ”ನನ್ನು ಲಕ್ಷಿಸಿದನು. ಅವನು “ವಿಧವೆಯ ಹೃದಯವನ್ನು ಉತ್ಸಾಹ”ಗೊಳಿಸುತ್ತಿದ್ದನು. ಅವನು “ಕುರುಡನಿಗೆ ಕಣ್ಣಾಗಿಯೂ ಕುಂಟನಿಗೆ ಕಾಲಾಗಿಯೂ” ಇದ್ದನು.—ಯೋಬ 29:12-15.
it-1-E ಪುಟ 655 ಪ್ಯಾರ 10
ಬಟ್ಟೆ
ಒಬ್ಬ ವ್ಯಕ್ತಿಯನ್ನ ಅವನ ಗುಣಗಳನ್ನ ಕೆಲವೊಂದು ಸಲ ಬೈಬಲ್ ಬಟ್ಟೆಗೆ ಹೋಲಿಸುತ್ತೆ. ಉದಾಹರಣೆಗೆ ಒಬ್ಬ ವ್ಯಕ್ತಿಯ ಯೂನಿಫಾರ್ಮ್ ನೋಡಿದ ಕೂಡಲೆ, ಅವನು ಈ ಕಂಪನಿ ಅಥವಾ ಈ ಗುಂಪಿನವನು ಅಂತ ಕಂಡುಹಿಡಿಬಹುದು. ಅದೇ ತರ ಒಬ್ಬನ ಬಟ್ಟೆ ನೋಡಿ ಅವನ ನಡೆನುಡಿ, ಗುಣಗಳೇನು ಮತ್ತು ಅವನು ಎಂಥವನು ಅಂತ ಗುರುತಿಸಬಹುದು.—ಮತ್ತಾ 22:11, 12; ಪ್ರಕ 16:14, 15.
ಕಾವಲಿನಬುರುಜು09-E 2/1 ಪುಟ 15 ಪ್ಯಾರ 3-4
ಹೆಸ್ರಲ್ಲಿ ಏನಿದೆ?
ನಾವು ಹುಟ್ಟಿದ ಕೂಡಲೇ ನಮಗೆ ನಾವೇ ಹೆಸ್ರಿಟ್ಟುಕೊಳ್ಳೋಕೆ ಆಗಲ್ಲ. ಆದ್ರೆ ನಮಗೆ ಇಟ್ಟಿರೋ ಹೆಸ್ರಿನ ಪ್ರಕಾರ ಜೀವಿಸಬಹುದು. (ಜ್ಞಾನೋಕ್ತಿ 20:11) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ಒಂದುವೇಳೆ ಯೇಸು ಅಥವಾ ಅಪೊಸ್ತಲರಿಗೆ ಹೆಸ್ರಿಡೋಕೆ ಒಂದು ಚಾನ್ಸ್ ಸಿಕ್ಕಿದ್ರೆ ನನಗೆ ಯಾವ ಹೆಸ್ರಿಡ್ತಿದ್ರು? ನನ್ನ ಸ್ವಭಾವ ಅಥವಾ ಗುಣಕ್ಕೆ ಸರಿ ಹೊಂದೋ ಹೆಸ್ರಿಡ್ತಿದ್ರಾ?
ಈ ಪ್ರಶ್ನೆಗಳ ಬಗ್ಗೆ ಯಾಕೆ ಯೋಚಿಸಬೇಕು? “ಹೆಚ್ಚು ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಸಂಪಾದಿಸೋದು ಒಳ್ಳೇದು” ಅಂತ ರಾಜ ಸೊಲೊಮೋನ ಹೇಳಿದ. (ಜ್ಞಾನೋಕ್ತಿ 22:1) ಸಮಾಜದಲ್ಲಿ ಒಳ್ಳೇ ಹೆಸ್ರು ಇರೋದು ಒಳ್ಳೇದೇ. ಆದ್ರೆ ದೇವರ ಮುಂದೆ ಒಳ್ಳೆ ಹೆಸ್ರು ಮಾಡಿಕೊಳ್ಳೋದು ಅದಕ್ಕಿಂತ ಒಳ್ಳೇದು ಯಾಕಂದ್ರೆ ಅದು ಶಾಶ್ವತವಾಗಿರುತ್ತೆ. ಅದು ಹೇಗೆ ಸಾಧ್ಯ? ಯಾರೆಲ್ಲಾ ತನಗೆ ಭಯಪಡ್ತಾರೋ ಅವರ ಹೆಸ್ರನ್ನ “ಜ್ಞಾಪಕ ಪುಸ್ತಕದಲ್ಲಿ” ಬರಿತೀನಿ ಮತ್ತು ಅವರಿಗೆ ಶಾಶ್ವತ ಜೀವ ಕೊಡ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ.—ಮಲಾಕಿ 3:16; ಪ್ರಕಟನೆ 3:5; 20:12-15.
ಬೈಬಲಿನಲ್ಲಿರುವ ರತ್ನಗಳು
ಎಚ್ಚರ!00 7/8 ಪುಟ 26
ನಗುಮುಖದಿಂದಿರಿ ಅದು ನಿಮಗೆ ಒಳ್ಳೆಯದು!
ಈಗ ಪ್ರಶ್ನೆಯೇನೆಂದರೆ, ನಗು ನಿಜವಾಗಿಯೂ ಯಾವುದಾದರೂ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡಬಲ್ಲದೋ? ಯಾರೋ ಒಬ್ಬರು ನಿಮ್ಮನ್ನು ನೋಡಿ ಮಂದಹಾಸವನ್ನು ಬೀರಿದಾಗ, ಅದು ನಿಮ್ಮ ಮನಸ್ಸು ಹಗುರವಾದಂತೆ ಅಥವಾ ನಿರಾತಂಕ ಭಾವನೆಯನ್ನು ಉಂಟುಮಾಡಿದಂತಹ ಸಂದರ್ಭವು ನಿಮಗೆ ನೆನಪಿದೆಯೋ? ಅಥವಾ ಯಾರೂ ಮಂದಹಾಸವನ್ನು ಬೀರದಿದ್ದಾಗ, ಅದು ನಿಮ್ಮಲ್ಲಿ ಆತಂಕವನ್ನು ಇಲ್ಲವೇ ತಿರಸ್ಕರಿಸಿದಂಥ ಭಾವನೆಯನ್ನು ಉಂಟುಮಾಡಿದೆಯೋ? ಹೌದು, ನಗು ಖಂಡಿತವಾಗಿಯೂ ಗಮನಾರ್ಹವಾದ ಬದಲಾವಣೆಯನ್ನು ಉಂಟುಮಾಡುತ್ತದೆ. ನಗುಮುಖದಿಂದಿರುವುದು ನಿಮ್ಮನ್ನು ಮತ್ತು ನೀವು ಯಾರನ್ನು ನೋಡಿ ಮುಗ್ನುಳಗೆಯನ್ನು ಸೂಸುತ್ತೀರೋ ಅವರನ್ನು, ಹೀಗೆ ಅದು ಇಬ್ಬರನ್ನೂ ಪ್ರಭಾವಿಸುತ್ತದೆ. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವ್ಯಕ್ತಿಯಾದ ಯೋಬನು ತನ್ನ ವೈರಿಗಳ ಕುರಿತು ಹೇಳಿದ್ದು: “ನಾನು ಅವರನ್ನು ನೋಡಿ ನಗಲು ಅವರು ಧೈರ್ಯಗೆಟ್ಟರು, ನನ್ನ ಮುಖಕಾಂತಿಯನ್ನೋ ಅವರು ಎಂದೂ ಕುಂದಿಸಲಿಲ್ಲ.” (ಯೋಬ 29:24) ಯೋಬನ ‘ಮುಖಕಾಂತಿಯು’ ಆತನ ಉಲ್ಲಾಸವಾದ ಅಥವಾ ಗೆಲುವಿನ ಮುಖವನ್ನು ಸೂಚಿಸಿರಬಹುದು.
ಡಿಸೆಂಬರ್ 25-31
ಬೈಬಲಿನಲ್ಲಿರುವ ನಿಧಿ| ಯೋಬ 30-31
“ಯೋಬನ ಒಳ್ಳೆ ನಡತೆ”
ಕಾವಲಿನಬುರುಜು10 4/15 ಪುಟ 21 ಪ್ಯಾರ 8
ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ!
8 ನಿಜ ಕ್ರೈಸ್ತರು ಕಣ್ಣಿನಾಶೆ ಮತ್ತು ಶರೀರದಾಶೆಯಿಂದ ವಿಮುಕ್ತರಲ್ಲ. ಆದುದರಿಂದ ನಾವೇನನ್ನು ನೋಡುತ್ತೇವೋ ಮತ್ತು ಯಾವುದನ್ನು ಬಯಸುತ್ತೇವೋ ಆ ಸಂಬಂಧದಲ್ಲಿ ಸ್ವಶಿಸ್ತನ್ನು ಅಭ್ಯಾಸಿಸುವಂತೆ ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (1 ಕೊರಿಂ. 9:25, 27; 1 ಯೋಹಾನ 2:15-17 ಓದಿ.) ನೀತಿವಂತನಾದ ಯೋಬನು ನೋಡುವುದು ಮತ್ತು ಆಶಿಸುವುದರ ನಡುವಣ ಬಲವಾದ ಕೊಂಡಿಯನ್ನು ಗ್ರಹಿಸಿಕೊಂಡವರಲ್ಲಿ ಒಬ್ಬನು. ಅವನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” (ಯೋಬ 31:1) ಯೋಬನು ಪರಸ್ತ್ರೀಯನ್ನು ಅನೈತಿಕ ರೀತಿಯಲ್ಲಿ ಸ್ಪರ್ಶಿಸಲು ನಿರಾಕರಿಸಿದ್ದು ಮಾತ್ರವಲ್ಲ ಅಂಥ ಒಂದು ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಲು ಸಹ ಅನುಮತಿಸಿರಲಿಲ್ಲ. ನಮ್ಮ ಮನಸ್ಸು ಅನೈತಿಕ ಯೋಚನೆಗಳಿಂದ ಕೂಡಿರದೆ ಶುದ್ಧವಾಗಿರಬೇಕು ಎಂಬುದನ್ನು ಒತ್ತಿಹೇಳಲು ಯೇಸು ಅಂದದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.”—ಮತ್ತಾ. 5:28.
ಕಾವಲಿನಬುರುಜು08 10/1 ಪುಟ 31 ಪ್ಯಾರ 4
‘ಅಂತ್ಯದ ಸ್ಥಿತಿಯನ್ನು’ ಮನಸ್ಸಿನಲ್ಲಿಡಿರಿ
ಅಂಥ ಹಾನಿಕರವಾದ ಮಾರ್ಗಕ್ಕೆ ಅಡಿಯಿಡುವ ಮೊದಲು, ‘ಇದು ನನ್ನನ್ನು ಎಲ್ಲಿಗೆ ನಡಿಸುತ್ತಿದೆ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ‘ಅಂತ್ಯದ ಸ್ಥಿತಿ’ ಏನಾಗಬಹುದು ಎಂದು ತುಸು ನಿಂತು ಆಲೋಚಿಸಿರಿ. ಅದು ತಾನೇ ನಿಮ್ಮನ್ನು ಗಂಭೀರ ದುಷ್ಪರಿಣಾಮಗಳಿಂದ ದೂರವಿರಿಸುವುದು. ದೇವರ ಎಚ್ಚರಿಕೆಯ ಸೂಚನಾ ಫಲಕಗಳನ್ನು ನಿರ್ಲಕ್ಷಿಸಿದವರ ಬಾಳಪಯಣವು ಏಡ್ಸ್, ರತಿರವಾನಿತ ರೋಗಗಳು, ಅನಪೇಕ್ಷಿತ ಗರ್ಭದಾರಣೆಗಳು, ಗರ್ಭಪಾತಗಳು, ಬಿರಿದ ಸಂಬಂಧಗಳು, ಅಪರಾಧಿ ಮನಸ್ಸಾಕ್ಷಿಗಳೇ ಮುಂತಾದ ಹಾನಿಕರ ಪರಿಣಾಮಗಳಿಂದ ತುಂಬಿರುವುದು. ಅನೈತಿಕ ಕೃತ್ಯಗಳನ್ನು ನಡಿಸುವವರ ಅಂತ್ಯ ಸ್ಥಿತಿಯನ್ನು ಪೌಲನು ಸ್ಪಷ್ಟವಾಗಿ ತಿಳಿಸಿದ್ದಾನೆ. ಅವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.”—1 ಕೊರಿಂಥ 6:9, 10.
ಕಾವಲಿನಬುರುಜು10 11/15 ಪುಟ 5-6 ಪ್ಯಾರ 15-16
ಯೌವನಸ್ಥರೇ, ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ
15 ದೇವರೆಡೆಗಿನ ನಿಮ್ಮ ನಿಷ್ಠೆ ಹೆಚ್ಚು ಪರೀಕ್ಷೆಗೊಳಗಾಗುವುದು ಯಾವಾಗ? ನೀವು ಇತರರೊಂದಿಗೆ ಇರುವಾಗಲೋ, ಒಬ್ಬರೇ ಇರುವಾಗಲೋ? ನೀವು ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿರುವಾಗ ಸಾಮಾನ್ಯವಾಗಿ ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಲು ಎಚ್ಚರವಾಗಿರುತ್ತೀರಿ. ಅಂದರೆ ಆಧ್ಯಾತ್ಮಿಕ ಅಪಾಯಗಳನ್ನು ಎದುರಿಸಲು ಹೆಚ್ಚು ಸನ್ನದ್ಧರಾಗಿರುತ್ತೀರಿ. ಆದರೆ ನೀವು ಒಂಟಿಯಾಗಿರುವಾಗ, ಜಾಗರೂಕರಿಲ್ಲದಿರುವಾಗ ನಿಮ್ಮ ನೈತಿಕ ಮಟ್ಟಗಳು ಸುಲಭವಾಗಿ ಆಕ್ರಮಣಕ್ಕೆ ಗುರಿಯಾಗಬಲ್ಲವು.
16 ಒಬ್ಬರೇ ಇರುವಾಗಲೂ ನೀವೇಕೆ ಯೆಹೋವನಿಗೆ ವಿಧೇಯರಾಗಬೇಕು? ಇದನ್ನು ನೆನಪಿಡಿ: ನಿಮ್ಮ ನಡತೆ ಯೆಹೋವನ ಮನಸ್ಸನ್ನು ಒಂದೋ ನೋಯಿಸಬಲ್ಲದು ಇಲ್ಲವೆ ಸಂತೋಷಪಡಿಸಬಲ್ಲದು. (ಆದಿ. 6:5, 6; ಜ್ಞಾನೋ. 27:11) ನಿಮ್ಮ ಕ್ರಿಯೆಗಳು ಯೆಹೋವನಿಗೆ ಮುಖ್ಯವಾಗಿವೆ ಏಕೆಂದರೆ “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ನಿಮ್ಮ ಸ್ವಂತ ಪ್ರಯೋಜನಕ್ಕಾಗಿ ನೀವು ಆತನಿಗೆ ಕಿವಿಗೊಡಬೇಕೆಂದು ಆತನು ಬಯಸುತ್ತಾನೆ. (ಯೆಶಾ. 48:17, 18) ಪುರಾತನ ಇಸ್ರಾಯೇಲಿನಲ್ಲಿದ್ದ ಯೆಹೋವನ ಸೇವಕರಲ್ಲಿ ಕೆಲವರು ಆತನ ಮಾತುಗಳನ್ನು ಅಲಕ್ಷಿಸಿ ಆತನ ಮನಸ್ಸಿಗೆ ನೋವನ್ನುಂಟುಮಾಡಿದರು. (ಕೀರ್ತ. 78:40, 41) ಇನ್ನೊಂದು ಕಡೆ, ಪ್ರವಾದಿ ದಾನಿಯೇಲನನ್ನು ಯೆಹೋವನು ತುಂಬ ಪ್ರೀತಿಸಿದನು. ಏಕೆ? ದಾನಿಯೇಲನು ಇತರರೊಂದಿಗಿದ್ದಾಗ ಮಾತ್ರವಲ್ಲ ಒಬ್ಬನೇ ಇದ್ದಾಗಲೂ ಯೆಹೋವನಿಗೆ ನಿಷ್ಠೆ ತೋರಿಸಿದನು. (ದಾನಿಯೇಲ 6:10 ಓದಿ.) ಆದುದರಿಂದಲೇ ಒಬ್ಬ ದೇವದೂತನು ಅವನನ್ನು “ಅತಿಪ್ರಿಯನೇ” ಎಂದು ಕರೆದನು.—ದಾನಿ. 10:11.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು05 11/15 ಪುಟ 11 ಪ್ಯಾರ 3
ಪ್ರೀತಿಯಿಂದ ಕಿವಿಗೊಡುವ ಕಲೆ
ಯೋಬನ ಸಂಗಡಿಗರು ಕಡಿಮೆಪಕ್ಷ ಅವನ ಹತ್ತು ಪ್ರಸಂಗಗಳಿಗೆ ಕಿವಿಗೊಟ್ಟರು. ಆದರೂ ಯೋಬನು ದುಃಖದಿಂದ ಹೇಳಿದ್ದು: “ಅಯ್ಯೋ, ನನ್ನ ಕಡೆಗೆ ಕಿವಿಗೊಡತಕ್ಕವನು ಇದ್ದರೆ ಎಷ್ಟೋ ಲೇಸು!” (ಯೋಬ 31:35) ಏಕೆ? ಏಕೆಂದರೆ ಅವರ ಕಿವಿಗೊಡುವಿಕೆಯು ಅವನಿಗೆ ಯಾವುದೇ ಸಾಂತ್ವನವನ್ನು ಒದಗಿಸಲಿಲ್ಲ. ಅವರಿಗೆ ಯೋಬನ ಬಗ್ಗೆ ಯಾವುದೇ ಕಾಳಜಿಯಿರಲಿಲ್ಲ ಮತ್ತು ಅವನ ಭಾವನೆಗಳನ್ನು ಅರಿತುಕೊಳ್ಳಲೂ ಅವರು ಬಯಸಲಿಲ್ಲ. ಸಹಾನುಭೂತಿಯುಳ್ಳ ಕೇಳುಗರು ತೋರಿಸುವ ಅನುಕಂಪವು ಖಂಡಿತವಾಗಿಯೂ ಅವರಲ್ಲಿರಲಿಲ್ಲ. ಆದರೆ ಅಪೊಸ್ತಲ ಪೇತ್ರನು ಸಲಹೆನೀಡಿದ್ದು: “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ [“ಅನುಕಂಪವುಳ್ಳವರಾಗಿರಿ,” NW]; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.” (1 ಪೇತ್ರ 3:8) ನಾವು ಹೇಗೆ ಅನುಕಂಪವನ್ನು ತೋರಿಸಸಾಧ್ಯವಿದೆ? ಒಂದು ವಿಧವು, ಇನ್ನೊಬ್ಬ ವ್ಯಕ್ತಿಯ ಭಾವನೆಗಳ ಬಗ್ಗೆ ಚಿಂತೆತೋರಿಸಿ, ಅವುಗಳನ್ನು ಅರಿತುಕೊಳ್ಳಲು ಪ್ರಯತ್ನಿಸುವ ಮೂಲಕವೇ. “ಅದು ನಿಜವಾಗಿಯೂ ನಿನಗೆ ದುಃಖವನ್ನು ಉಂಟುಮಾಡಿರಬೇಕು” ಇಲ್ಲವೆ “ನಿನ್ನ ಬಗ್ಗೆ ತಪ್ಪುತಿಳಿಯಲಾಗಿದೆ ಎಂದು ನಿನಗನಿಸಿರಬೇಕು” ಎಂಬಂಥ ಅನುಕಂಪದ ಮಾತುಗಳನ್ನು ಆಡುವ ಮೂಲಕ ನಮಗೆ ನಿಜವಾಗಿಯೂ ಚಿಂತೆಯಿದೆ ಎಂಬುದನ್ನು ತೋರಿಸಸಾಧ್ಯವಿದೆ. ಇನ್ನೊಂದು ವಿಧವು, ವ್ಯಕ್ತಿಯು ಏನನ್ನು ತಿಳಿಸುತ್ತಿದ್ದಾನೊ ಅದನ್ನು ನಮ್ಮ ಸ್ವಂತ ಮಾತುಗಳಲ್ಲಿ ಪುನರುಚ್ಚರಿಸುವ ಮೂಲಕವೇ ಆಗಿದೆ. ಹೀಗೆ ಮಾಡುವಾಗ, ಆ ವ್ಯಕ್ತಿ ಏನನ್ನು ಹೇಳುತ್ತಿದ್ದಾನೊ ಅದು ನಮಗೆ ಅರ್ಥವಾಗುತ್ತಿದೆ ಎಂಬುದನ್ನು ನಾವು ತೋರಿಸುತ್ತೇವೆ. ಪ್ರೀತಿಯಿಂದ ಕಿವಿಗೊಡುವುದು ಎಂದರೆ ಬರೀ ಪದಗಳಿಗೆ ಲಕ್ಷ್ಯಕೊಡುವುದಲ್ಲ, ಬದಲಾಗಿ ಪದಗಳ ಹಿಂದೆ ಅಡಗಿರುವ ಭಾವನೆಗಳಿಗೂ ಲಕ್ಷಕೊಡುವುದನ್ನು ಸೂಚಿಸುತ್ತದೆ.