ವಾಚಕರಿಂದ ಪ್ರಶ್ನೆಗಳು
ಕ್ರೈಸ್ತರು ಮದುವೆಯಾಗಲು ಮಾಡಿಕೊಳ್ಳುವ ನಿಶ್ಚಿತಾರ್ಥವನ್ನು ಎಷ್ಟು ಗಂಭೀರವಾಗಿ ಪರಿಗಣಿಸಬೇಕು?
ವಿವಾಹಕ್ಕಾಗಿ ಮಾಡಲಾಗುವ ನಿಶ್ಚಿತಾರ್ಥವು ಸಂತೋಷಕ್ಕೆ ಕಾರಣವಾಗಿದೆಯಾದರೂ ಅದು ಒಂದು ಗಂಭೀರವಾದ ವಿಷಯವೂ ಆಗಿದೆ. ವೈಯಕ್ತಿಕವಾದ ಕ್ಷುಲ್ಲಕ ಕಾರಣಕ್ಕಾಗಿ ನಿಶ್ಚಿತಾರ್ಥವನ್ನು ಯಾವುದೇ ಸಮಯದಲ್ಲಿಯೂ ಕೊನೆಗಾಣಿಸಬಹುದು ಎಂದು ನೆನಸುತ್ತಾ, ಯಾವನೇ ಪ್ರೌಢ ಕ್ರೈಸ್ತನು ಅದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ನಿಶ್ಚಿತಾರ್ಥದ ಸಮಯವು, ವಿವಾಹಕ್ಕೆ ಮುಂಚೆ ಜೋಡಿಯು ಒಬ್ಬರನ್ನೊಬ್ಬರು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಂತೆ ಅವಕಾಶವನ್ನು ಸಹ ನೀಡುತ್ತದೆ.
ಈ ವಿಷಯವನ್ನು ಚರ್ಚಿಸುವುದರಲ್ಲಿ, ವಿವಾಹವನ್ನು ಒಳಗೂಡಿರುವ ಸಾಮಾಜಿಕ ಪದ್ಧತಿಗಳು ಮತ್ತು ಅದಕ್ಕೆ ನಡಿಸುವ ಹೆಜ್ಜೆಗಳು ಬೇರೆ ಬೇರೆ ಸ್ಥಳಗಳಲ್ಲಿ ಮತ್ತು ಸಮಯಗಳಲ್ಲಿ ತೀರ ಭಿನ್ನವಾಗಿರುತ್ತವೆ ಎಂಬುದನ್ನು ಗ್ರಹಿಸುವುದು ಅಗತ್ಯ. ಬೈಬಲು ಇದನ್ನು ದೃಷ್ಟಾಂತಿಸುತ್ತದೆ.
“ಪುರುಷರನ್ನರಿಯದ” ಲೋಟನ ಇಬ್ಬರು ಹೆಣ್ಣುಮಕ್ಕಳಿಗೆ ಇಬ್ಬರು ಸ್ಥಳೀಯ ಪುರುಷರೊಂದಿಗೆ ಒಂದು ವಿಧದಲ್ಲಿ ನಿಶ್ಚಿತಾರ್ಥವಾಗಿತ್ತು. ಲೋಟನ ಅಳಿಯಂದಿರು ಅವನ ‘ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಬೇಕಿತ್ತು,’ ಹೀಗಿದ್ದರೂ ನಿಶ್ಚಿತಾರ್ಥವು ಹೇಗೆ ಮತ್ತು ಯಾವಾಗ ನಡೆಯಿತೆಂಬುದನ್ನು ನಮಗೆ ಬೈಬಲು ತಿಳಿಸುವುದಿಲ್ಲ. ಹೆಣ್ಣುಮಕ್ಕಳು ವಯಸ್ಕರಾಗಿದ್ದರೋ? ಯಾರನ್ನು ಮದುವೆಯಾಗಬೇಕು ಎಂಬ ಆಯ್ಕೆಯನ್ನು ಮಾಡುವುದರಲ್ಲಿ ಇವರಿಗೆ ಮುಖ್ಯ ಪಾತ್ರವಿತ್ತೋ? ಇವರ ನಿಶ್ಚಿತಾರ್ಥವು ಯಾವುದೇ ಬಹಿರಂಗ ಹೆಜ್ಜೆಯ ಮೂಲಕ ನಡೆಯಿತೋ? ಇದರ ಬಗ್ಗೆ ನಮಗೆ ತಿಳಿದಿರುವುದಿಲ್ಲ. (ಆದಿಕಾಂಡ 19:8-14) ಏಳು ವರುಷಗಳ ತನಕ ಕೆಲಸ ಮಾಡಿದ ನಂತರ, ತಾನು ರಾಹೇಲಳನ್ನು ಮದುವೆಯಾಗುತ್ತೇನೆ ಎಂಬ ಒಪ್ಪಂದವನ್ನು ಯಾಕೋಬನು ಅವಳ ತಂದೆಗೆ ಮಾಡಿದ ವಿಷಯವು ನಮಗೆ ಗೊತ್ತಿದೆ. ಯಾಕೋಬನು ರಾಹೇಲಳನ್ನು “ನನ್ನ ಹೆಂಡತಿ” ಎಂದು ಕರೆದನಾದರೂ, ಅವರು ಆ ವರ್ಷಗಳಲ್ಲಿ ಯಾವುದೇ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳಲಿಲ್ಲ. (ಆದಿಕಾಂಡ 29:18-21) ಇನ್ನೊಂದು ಉದಾಹರಣೆಯಾಗಿ, ದಾವೀದನು ಸೌಲನ ಮಗಳನ್ನು ಮದುವೆಯಾಗುವ ಮುಂಚೆ ಫಿಲಿಷ್ಟಿಯರ ಮೇಲೆ ಜಯವನ್ನು ಸಾಧಿಸಬೇಕಾಗಿತ್ತು. ಸೌಲನ ಬೇಡಿಕೆಯನ್ನು ಪೂರೈಸಿದ ಮೇಲೆ, ದಾವೀದನು ಅವನ ಮಗಳಾದ ಮೀಕಲಳನ್ನು ಮದುವೆಯಾದನು. (1 ಸಮುವೇಲ 18:20-28) ಈ “ನಿಶ್ಚಿತಾರ್ಥಗಳು” ಪರಸ್ಪರವಾಗಿ ಭಿನ್ನವಾಗಿದ್ದದ್ದು ಮಾತ್ರವಲ್ಲ, ಇಂದು ಅನೇಕ ದೇಶಗಳಲ್ಲಿ ಸಾಮಾನ್ಯವಾಗಿರುವ ಪದ್ಧತಿಗಳಿಗಿಂತಲೂ ಭಿನ್ನವಾಗಿದ್ದವು.
ಮೋಶೆಯ ನಿಯಮಶಾಸ್ತ್ರದಲ್ಲಿ ಮದುವೆ ಮತ್ತು ನಿಶ್ಚಿತಾರ್ಥದ ಕುರಿತು ಕಟ್ಟಳೆಗಳು ಇದ್ದವು. ದೃಷ್ಟಾಂತಕ್ಕೆ, ಒಬ್ಬ ಪುರುಷನಿಗೆ ಒಬ್ಬಳಿಗಿಂತ ಹೆಚ್ಚು ಹೆಂಡತಿಯರಿರಬಹುದಿತ್ತು; ಅವನು ಬೇರೆ ಬೇರೆ ಕಾರಣಗಳ ಮೇಲೆ ವಿವಾಹ ವಿಚ್ಛೇದನವನ್ನು ಪಡೆಯಸಾಧ್ಯವಿತ್ತಾದರೂ, ಹೆಂಡತಿಯು ಹೀಗೆ ಮಾಡಲು ಸಾಧ್ಯವಿರಲಿಲ್ಲ. (ವಿಮೋಚನಕಾಂಡ 22:16, 17; ಧರ್ಮೋಪದೇಶಕಾಂಡ 24:1-4) ನಿಶ್ಚಿತಳಾಗಿರದಿದ್ದ ಕನ್ಯೆಯನ್ನು ಬಲಾತ್ಕರಿಸಿದ ಪುರುಷನೊಬ್ಬನು ಆಕೆಯ ತಂದೆಯು ಒಪ್ಪುವುದಾದರೆ ಅವಳನ್ನು ಮದುವೆಯಾಗಲೇಬೇಕಿತ್ತು ಮತ್ತು ಅವಳನ್ನು ಎಂದೂ ಪರಿತ್ಯಾಗಮಾಡಸಾಧ್ಯವಿರಲಿಲ್ಲ. (ಧರ್ಮೋಪದೇಶಕಾಂಡ 22:28, 29) ಮದುವೆಯಲ್ಲಿ ಅನ್ವಯಿಸಲಾದ ಇತರ ನಿಯಮಗಳಲ್ಲಿ ಲೈಂಗಿಕ ಸಂಬಂಧಗಳಿಂದ ಯಾವಾಗ ದೂರವಿರಬೇಕೆಂಬುದು ಸಹ ಸೇರಿತ್ತು. (ಯಾಜಕಕಾಂಡ 12:2, 5; 15:24; 18:19) ನಿಶ್ಚಿತಾರ್ಥವಾಗುವ ಸಂಬಂಧದಲ್ಲಿ ಯಾವ ಕಟ್ಟಳೆಗಳು ಸೇರಿದ್ದವು?
ನಿಶ್ಚಿತಾರ್ಥವಾಗಿದ್ದ ಇಸ್ರಾಯೇಲ್ಯ ಸ್ತ್ರೀಯು ಕಾನೂನಿನ ದೃಷ್ಟಿಯಲ್ಲಿ ನಿಶ್ಚಿತಾರ್ಥವಾಗಿರದಿದ್ದ ಸ್ತ್ರೀಗಿಂತ ಭಿನ್ನಳಾಗಿದ್ದಳು. ಕೆಲವೊಂದು ಸಂದರ್ಭಗಳಲ್ಲಿ ಅವಳು ಮದುವೆಯಾದವಳಾಗಿ ಪರಿಗಣಿಸಲ್ಪಡುತ್ತಿದ್ದಳು. (ಧರ್ಮೋಪದೇಶಕಾಂಡ 22:23-29; ಮತ್ತಾಯ 1:18, 19) ಇಸ್ರಾಯೇಲ್ಯರು ನಿರ್ದಿಷ್ಟ ಸಂಬಂಧಿಕರೊಂದಿಗೆ ನಿಶ್ಚಿತಾರ್ಥಮಾಡಿಕೊಳ್ಳುವ ಅಥವಾ ಮದುವೆಯಾಗುವ ಸಾಧ್ಯತೆ ಇರಲಿಲ್ಲ. ಸಾಮಾನ್ಯವಾಗಿ ಇವರು ರಕ್ತ ಸಂಬಂಧಿಗಳಾಗಿದ್ದರೂ, ಕೆಲವು ನಿಶ್ಚಿತಾರ್ಥಗಳು ಹಾಗೂ ಮದುವೆಗಳು ಕುಟುಂಬದ ಹಕ್ಕುಗಳನ್ನು ಬಾಧ್ಯತೆಯಾಗಿ ಪಡೆಯಲಿಕ್ಕಿದ್ದ ಕಾರಣದಿಂದಾಗಿ ನಿಷೇಧಿಸಲ್ಪಟ್ಟಿದ್ದವು. (ಯಾಜಕಕಾಂಡ 18:6-20; ಮಾರ್ಚ್ 15, 1978ರ ದ ವಾಚ್ಟವರ್ನ ಪುಟಗಳು 25-28ನ್ನು ನೋಡಿರಿ.) ದೇವರ ಸೇವಕರು ನಿಶ್ಚಿತಾರ್ಥವನ್ನು ಹಗುರವಾಗಿ ಎಣಿಸಬಾರದಾಗಿತ್ತೆಂಬುದು ಸ್ಪಷ್ಟ.
ಇಸ್ರಾಯೇಲ್ಯರು ನಿಯಮಶಾಸ್ತ್ರದ ಇಂತಹ ಎಲ್ಲ ಕಟ್ಟಳೆಗಳ ಕೆಳಗೆ ಇದ್ದರಾದರೂ ಕ್ರೈಸ್ತರು ನಿಶ್ಚಿತಾರ್ಥ ಅಥವಾ ಮದುವೆಯ ಕುರಿತಾದ ಕಟ್ಟಳೆಗಳನ್ನು ಸಹ ಒಳಗೂಡಿರುವ ಆ ನಿಯಮಶಾಸ್ತ್ರದ ಕೆಳಗೆ ಇರುವುದಿಲ್ಲ. (ರೋಮಾಪುರ 7:4, 6; ಎಫೆಸ 2:15; ಇಬ್ರಿಯ 8:6, 13) ವಾಸ್ತವದಲ್ಲಿ, ಮದುವೆಯ ಕುರಿತಾದ ಕ್ರೈಸ್ತ ಆದರ್ಶವು ನಿಯಮಶಾಸ್ತ್ರಕ್ಕಿಂತ ಭಿನ್ನವಾಗಿತ್ತೆಂದು ಯೇಸು ಕಲಿಸಿದನು. (ಮತ್ತಾಯ 19:3-9) ಆದಾಗ್ಯೂ, ಅವನು ಮದುವೆ ಇಲ್ಲವೇ ನಿಶ್ಚಿತಾರ್ಥದ ಗಂಭೀರತೆಯನ್ನು ಕಡಿಮೆಗೊಳಿಸಲಿಲ್ಲ. ಹಾಗಾದರೆ, ನಮ್ಮ ಚರ್ಚಾವಿಷಯವಾಗಿರುವ ಕ್ರೈಸ್ತರ ಮಧ್ಯೆ ನಡೆಯುವ ನಿಶ್ಚಿತಾರ್ಥವು ಎಷ್ಟು ಗಂಭೀರವಾದ ವಿಷಯವಾಗಿದೆ?
ಅನೇಕ ದೇಶಗಳಲ್ಲಿ ಯಾರನ್ನು ಮದುವೆಯಾಗಬೇಕು ಎಂಬ ವಿಷಯದಲ್ಲಿ ವ್ಯಕ್ತಿಗಳು ಸ್ವತಃ ಆಯ್ಕೆಯನ್ನು ಮಾಡುತ್ತಾರೆ. ಒಬ್ಬ ಪುರುಷ ಮತ್ತು ಸ್ತ್ರೀಯು ಒಮ್ಮೆ ಪರಸ್ಪರ ಮದುವೆಯಾಗುತ್ತೇವೆಂದು ಮಾತುಕೊಡುವಾಗ ಅವರಿಗೆ ನಿಶ್ಚಿತಾರ್ಥವಾಗಿದೆ ಎಂದೆಣಿಸಲ್ಪಡುತ್ತದೆ. ಸಾಮಾನ್ಯವಾಗಿ, ನಿಶ್ಚಿತಾರ್ಥಕ್ಕೆ ಯಾವುದೇ ಹೆಚ್ಚಿನ ಸಾಂಪ್ರದಾಯಿಕ ಹೆಜ್ಜೆಯು ಬೇಕಾಗಿರುವುದಿಲ್ಲ. ತಮ್ಮ ನಿಶ್ಚಿತಾರ್ಥವನ್ನು ಸೂಚಿಸುವುದಕ್ಕೆ ಪುರುಷನೊಬ್ಬನು ತನ್ನ ಭಾವೀ ಹೆಂಡತಿಗೆ ಉಂಗುರವನ್ನು ಕೊಡುವುದು ಕೆಲವು ಸ್ಥಳಗಳಲ್ಲಿ ಸಾಮಾನ್ಯವಾಗಿರುವ ವಿಷಯವೆಂಬುದು ಒಪ್ಪಿಕೊಳ್ಳತಕ್ಕ ಸಂಗತಿ. ಅಥವಾ ಕುಟುಂಬದ ಭೋಜನದ ಸಮಯದಲ್ಲಿ ಅಥವಾ ಇನ್ನಿತರ ಚಿಕ್ಕ ನೆರವಿಗಳಲ್ಲಿ ನಿಶ್ಚಿತಾರ್ಥದ ಕುರಿತು ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ತಿಳಿಸುವುದು ಕೂಡ ರೂಢಿಯಲ್ಲಿದೆ. ಇವುಗಳು ಶಾಸ್ತ್ರಸಂಬಂಧವಾದ ಆವಶ್ಯಕತೆಗಳಾಗಿರುವ ಬದಲು, ವೈಯಕ್ತಿಕ ಆಯ್ಕೆಗಳಾಗಿರುತ್ತವೆ. ಸ್ತ್ರೀ ಮತ್ತು ಪುರುಷ—ಇವರಿಬ್ಬರ ಸಮ್ಮತಿಯೇ ನಿಶ್ಚಿತಾರ್ಥವನ್ನು ಸೂಚಿಸುತ್ತದೆ.a
ಒಬ್ಬ ಕ್ರೈಸ್ತನು ಪ್ರಣಯಾಚರಣೆ, ನಿಶ್ಚಿತಾರ್ಥ ಅಥವಾ ಮದುವೆಯೊಳಗೆ ಮುಂದಾಲೋಚಿಸದೆ ಧುಮುಕಬಾರದು. ಅವಿವಾಹಿತರು ಪ್ರಣಯಾಚರಣೆಯನ್ನು ಪ್ರಾರಂಭಿಸುವುದು ವಿವೇಕಯುತವಾಗಿರುತ್ತದೋ ಇಲ್ಲವೋ ಅಥವಾ ನಿಶ್ಚಿತಾರ್ಥ ಅಥವಾ ಮದುವೆಗೆ ಹೆಜ್ಜೆಯನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಣಯಿಸುವುದರಲ್ಲಿ ಸಹಾಯನೀಡುವ ಬೈಬಲ್ ಆಧಾರಿತ ಪ್ರಕಾಶನಗಳನ್ನು ನಾವು ಪ್ರಕಟಿಸುತ್ತೇವೆ.b ಕ್ರೈಸ್ತ ಮದುವೆಯು ಶಾಶ್ವತ ಎಂಬುದು ಸಲಹೆಯ ಪ್ರಮುಖ ಅಂಶವಾಗಿದೆ.—ಆದಿಕಾಂಡ 2:24; ಮಾರ್ಕ 10:6-9.
ಇಬ್ಬರು ಕ್ರೈಸ್ತರು ನಿಶ್ಚಿತಾರ್ಥದ ಕುರಿತು ಆಲೋಚಿಸುವ ಮೊದಲು ಒಬ್ಬರನ್ನೊಬ್ಬರು ಬಹಳ ಉತ್ತಮವಾಗಿ ತಿಳಿದುಕೊಳ್ಳತಕ್ಕದ್ದು. ಪ್ರತಿಯೊಬ್ಬರು ಹೀಗೆ ಕೇಳಿಕೊಳ್ಳಸಾಧ್ಯವಿದೆ: ‘ನಾನು ನಿಜವಾಗಿಯೂ ಅವನ ಅಥವಾ ಅವಳ ಆತ್ಮಿಕತೆ ಹಾಗೂ ದೇವರೆಡೆಗಿರುವ ಭಕ್ತಿಯ ಕುರಿತು ಖಾತ್ರಿಯಿಂದ ಇದ್ದೇನೋ? ನಾನು ಜೀವನ ಪೂರ್ತಿ ಆ ವ್ಯಕ್ತಿಯೊಂದಿಗೆ ಯೆಹೋವನಿಗೆ ಸೇವೆ ಸಲ್ಲಿಸುವುದನ್ನು ಕಲ್ಪಿಸಿಕೊಳ್ಳಬಲ್ಲೆನೋ? ನಮ್ಮಲ್ಲಿರುವ ವ್ಯಕ್ತಿತ್ವ ಭಿನ್ನತೆಗಳನ್ನು ನಾವಿಬ್ಬರೂ ಸಾಕಷ್ಟು ಮಟ್ಟಿಗೆ ತಿಳಿದುಕೊಂಡಿದ್ದೇವೋ? ನಾವು ಸದಾಕಾಲ ಹೊಂದಾಣಿಕೆಯಿಂದ ಇರುವೆವೆಂಬುದನ್ನು ನಾನು ದೃಢವಿಶ್ವಾಸದಿಂದ ಹೇಳಬಲ್ಲೆನೋ? ಪರಸ್ಪರರ ಹಿಂದಿನ ಕೃತ್ಯಗಳ ಕುರಿತು ಹಾಗೂ ಸದ್ಯದ ಪರಿಸ್ಥಿತಿಗಳ ಕುರಿತು ನಾವು ಸಾಕಷ್ಟು ಮಟ್ಟಿಗೆ ತಿಳಿದುಕೊಂಡಿದ್ದೇವೋ?’
ಒಮ್ಮೆ ಇಬ್ಬರು ಕ್ರೈಸ್ತರು ನಿಶ್ಚಿತಾರ್ಥರಾದರೆಂದರೆ, ಅವರು ಮತ್ತು ಇತರರು ಮದುವೆಯನ್ನು ನಿರೀಕ್ಷಿಸುವುದು ತಕ್ಕದ್ದಾಗಿರುತ್ತದೆ. ಯೇಸುವು ಬುದ್ಧಿವಾದ ನೀಡಿದ್ದು: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ” (ಮತ್ತಾಯ 5:37) ನಿಶ್ಚಿತಾರ್ಥಮಾಡಿಕೊಳ್ಳುವ ಕ್ರೈಸ್ತರು ಅದಕ್ಕನುಗುಣವಾಗಿ ಜೀವಿಸಬೇಕು. ಆದಾಗ್ಯೂ, ಅಪರೂಪವಾದ ಸಂದರ್ಭಗಳಲ್ಲಿ, ನಿಶ್ಚಿತಾರ್ಥದ ಮುಂಚೆ ಗಂಭೀರವಾದೊಂದು ಸಂಗತಿಯು ತಿಳಿಸಲ್ಪಟ್ಟಿರಲಿಲ್ಲವೆಂದು ಅಥವಾ ಮರೆಮಾಚಲ್ಪಟ್ಟಿತ್ತೆಂದು ಒಬ್ಬ ನಿಶ್ಚಿತಾರ್ಥಮಾಡಿಕೊಂಡ ಕ್ರೈಸ್ತನು ತಿಳಿದುಕೊಳ್ಳಬಹುದು. ಅದು ಒಬ್ಬನು ಹಿಂದೆ ಮಾಡಿದ ಪಾತಕ ಅಥವಾ ಅನೈತಿಕ ಕೃತ್ಯಗಳಂತಹ ಮುಖ್ಯವಾದ ವಿಷಯವಾಗಿರಬಹುದು. ಇದನ್ನು ತಿಳಿದ ಕ್ರೈಸ್ತನು ತಾನೇನನ್ನು ಮಾಡಬೇಕೆಂಬುದನ್ನು ನಿರ್ಣಯಿಸಲೇಬೇಕು. ಪ್ರಾಯಶಃ ಇಬ್ಬರು ವಿಷಯಗಳನ್ನು ಕೂಲಂಕುಷವಾಗಿ ಚರ್ಚಿಸಿ ತಮ್ಮ ನಿಶ್ಚಿತಾರ್ಥವನ್ನು ಮುಂದುವರಿಸುವುದಕ್ಕೆ ಒಪ್ಪಬಹುದು. ಅಥವಾ ಅವರು ನಿಶ್ಚಿತಾರ್ಥವನ್ನು ಕೊನೆಗಾಣಿಸುವದಕ್ಕೆ ಜೊತೆಯಾಗಿ ನಿರ್ಣಯಿಸಬಹುದು. ಹಾಗೆ ಮಾಡುವುದು ಖಾಸಗಿ ವಿಷಯವಾಗಿರಬಹುದಾದರೂ, ಬಹಳ ಗಂಭೀರವಾದ ನಿರ್ಣಯವಾಗಿರುತ್ತದೆ. ಇತರರು ತಲೆಹಾಕಬೇಕಾದ, ಏಕೆ ಹೀಗಾಯಿತೆಂದು ಊಹಿಸುತ್ತ ಇರಬೇಕಾದ ಅಥವಾ ಖಂಡಿಸಬೇಕಾದ ವಿಷಯವು ಇದಾಗಿರುವುದಿಲ್ಲ. ಇನ್ನೊಂದು ಕಡೆಯಲ್ಲಿ, ಗಂಭೀರವಾದ ಈ ವಿಷಯವನ್ನು ತಿಳಿದಿರುವವನು, ಇನ್ನೊಬ್ಬ ವ್ಯಕ್ತಿಯು ನಿಶ್ಚಿತಾರ್ಥವನ್ನು ಮುಂದುವರಿಸಲು ಬಯಸುವುದಾದರೂ, ಅದನ್ನು ಕೊನೆಗಾಣಿಸಲು ವೈಯಕ್ತಿಕವಾಗಿ ಒತ್ತಾಯಿಸಲ್ಪಡಬಹುದು.—ಜೂನ್ 15, 1975ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ “ವಾಚಕರಿಂದ ಪ್ರಶ್ನೆಗಳು” ಲೇಖನವನ್ನು ನೋಡಿರಿ.
ಮದುವೆಯಾಗುವುದಕ್ಕಿಂತ ಮುಂಚೆಯೇ ಇಂತಹ ವಿವಾದಗಳನ್ನು ಇತ್ಯರ್ಥಗೊಳಿಸುವುದಕ್ಕೆ ಒಳ್ಳೆಯ ಕಾರಣಗಳಿರುತ್ತವೆ. ವಿಚ್ಛೇದನ ಕೊಟ್ಟು ಪುನರ್ವಿವಾಹವಾಗುವುದಕ್ಕೆ ಒಬ್ಬನು ಸ್ವತಂತ್ರನಾಗುವುದಕ್ಕಿರುವ ಏಕಮಾತ್ರ ಶಾಸ್ತ್ರೀಯ ಆಧಾರವು ಪೋರ್ನೀಯ ಆಗಿದೆ, ಅಂದರೆ, ಇನ್ನೊಬ್ಬ ವಿವಾಹ ಸಂಗಾತಿಯು ಘೋರವಾದ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡಿರುವುದಾಗಿದೆ. (ಮತ್ತಾಯ 5:32; 19:9) ಮದುವೆಗೆ ಮುಂಚೆ ಸಂಭವಿಸಿದ ಗಂಭೀರ ಸಮಸ್ಯೆ ಅಥವಾ ತಪ್ಪುಗೈಯುವಿಕೆಯನ್ನು ಒಬ್ಬನು ತಿಳಿದುಕೊಳ್ಳುವುದಾದರೆ, ಆಗ ಕಾನೂನುಬದ್ಧವಾದ ವಿವಾಹವು ವಿಚ್ಛೇದನದಲ್ಲಿ ಕೊನೆಗೊಳ್ಳಸಾಧ್ಯವಿದೆ ಎಂಬುದನ್ನು ಯೇಸು ಇಲ್ಲಿ ತಿಳಿಸಲಿಲ್ಲ.
ಉದಾಹರಣೆಗೆ, ಯೇಸುವಿನ ದಿನಗಳಲ್ಲಿ ಕುಷ್ಠರೋಗವನ್ನು ಹತ್ತಿಸಿಕೊಳ್ಳುವ ಸಾಧ್ಯತೆಯು ನಿಶ್ಚಯವಾಗಿಯೂ ಇತ್ತು. ಒಬ್ಬ ಯೆಹೂದಿ ಗಂಡನಿಗೆ ತನ್ನ ಜೊತೆಗಾರ್ತಿ ತನ್ನನ್ನು ಮದುವೆಯಾದಾಗ, ಆಕೆಗೆ (ಗೊತ್ತಿದ್ದೊ, ಗೊತ್ತಿಲ್ಲದೆಯೊ) ಕುಷ್ಟರೋಗವಿತ್ತು ಎಂದು ತಿಳಿದು ಬರುವಲ್ಲಿ, ಅವನಿಗೆ ವಿವಾಹ ವಿಚ್ಛೇದ ಮಾಡಲು ಕಾರಣವನ್ನು ಇದು ಒದಗಿಸುತ್ತಿತ್ತೊ? ಧರ್ಮಶಾಸ್ತ್ರದ ಕೆಳಗಿದ್ದ ಯೆಹೂದ್ಯನೊಬ್ಬನು ವಿಚ್ಛೇದನವನ್ನು ಕೊಡಬಹುದಾಗಿತ್ತಾದರೂ, ತನ್ನ ಹಿಂಬಾಲಕರಿಗೆ ಇದು ಯೋಗ್ಯವೆಂದು ಯೇಸು ಹೇಳಲಿಲ್ಲ. ಕೆಲವು ಅಧುನಿಕ ದಿನದ ಸನ್ನಿವೇಶಗಳನ್ನು ಪರಿಗಣಿಸಿರಿ. ಪರಂಗಿ ರೋಗ (ಸಿಫಿಲಿಸ್), ಜನನಾಂಗದ ಗುಳ್ಳೆರೋಗ (ಜೆನಿಟಲ್ ಹರ್ಪೀಸ್), ಹೆಚ್ಐವಿ ಅಥವಾ ಇನ್ನಿತರ ಗಂಭೀರ ಅಂಟುಜಾಡ್ಯದಿಂದ ಬಾಧಿತನಾಗಿರುವ ಒಬ್ಬ ಪುರುಷನು ವಾಸ್ತವಾಂಶವನ್ನು ತಿಳಿಯಪಡಿಸದೆ ಮದುವೆಯಾಗಬಹುದು. ಪ್ರಾಯಶಃ ನಿಶ್ಚಿತಾರ್ಥದ ಸಮಯದಲ್ಲಿ ಅಥವಾ ಅದಕ್ಕೆ ಮುಂಚೆ ಲೈಂಗಿಕ ದುರಾಚಾರದ ಕಾರಣ ಅವನಿಗೆ ಸೋಂಕು ತಗಲಿದ್ದಿರಬೇಕು. ಅವನ ಕಾಯಿಲೆ ಅಥವಾ ಹಿಂದಿನ ಅನೈತಿಕತೆಯ (ಷಂಡತನ ಅಥವಾ ನಪುಂಸಕತ್ವ ಸೇರಿಸಿ) ಕುರಿತು ಹೆಂಡತಿಯು ನಂತರ ತಿಳಿದುಕೊಳ್ಳುವುದು ತಾನೇ ಈಗ ಅವರು ಮದುವೆಯಾಗಿದ್ದಾರೆಂಬ ವಾಸ್ತವಾಂಶವನ್ನು ಬದಲಾಯಿಸುವುದಿಲ್ಲ. ಮದುವೆಗೆ ಮುಂಚೆ ಯಾವುದೋ ಕಾಯಿಲೆಯು ಅವಳಲ್ಲಿ ಇದ್ದರೆ ಅಥವಾ ಇನ್ನೊಬ್ಬ ಪುರುಷನಿಂದ ಗರ್ಭಿಣಿಯಾಗಿರುವ ವಿಷಯವನ್ನು ಅವಳು ಮುಚ್ಚಿಟ್ಟಿದ್ದರೆ ಸಹ ಮದುವೆಯ ಮುಂಚೆ ನಡಿಸಲಾದ ಅಹಿತಕರವಾದ ಜೀವನವು ಮದುವೆಯನ್ನು ಸದಾಕಾಲಕ್ಕೂ ಕೊನೆಗಾಣಿಸುವುದಕ್ಕಿರುವ ಶಾಸ್ತ್ರೀಯ ಆಧಾರವಾಗಿರುವುದಿಲ್ಲ. ಅವರು ಈಗ ಮದುವೆಯಾಗಿರುತ್ತಾರೆ ಮತ್ತು ಪರಸ್ಪರ ಬದ್ಧರಾಗಿದ್ದಾರೆ.
ಇಂತಹ ದುಃಖಕರ ಸನ್ನಿವೇಶಗಳು ಅಪರೂಪವಾಗಿರುವುದಾದರೂ ಈ ಉದಾಹರಣೆಗಳು ಮೂಲ ಅಂಶಕ್ಕೆ ಒತ್ತನ್ನು ಕೊಡುತ್ತವೆ: ನಿಶ್ಚಿತಾರ್ಥವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ನಿಶ್ಚಿತಾರ್ಥದ ವೇಳೆಯಲ್ಲಿ ಮತ್ತು ಅದಕ್ಕೂ ಮುಂಚೆ, ಕ್ರೈಸ್ತರು ಒಬ್ಬರನ್ನೊಬ್ಬರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಬಹಳ ಪರಿಶ್ರಮಪಡಬೇಕು. ಇನ್ನೊಂದು ಕಡೆಯವರು ಏನನ್ನು ತಿಳಿದುಕೊಳ್ಳಲು ಬಯಸುತ್ತಾರೆ ಹಾಗೂ ಯಾವುದನ್ನು ತಿಳಿದುಕೊಳ್ಳುವ ಹಕ್ಕು ಅವರಿಗಿರುತ್ತದೋ ಅದರ ಕುರಿತು ಕ್ರೈಸ್ತರು ಪ್ರಾಮಾಣಿಕವಾಗಿ ತಿಳಿಸತಕ್ಕದ್ದು. (ಕೆಲವು ಪ್ರದೇಶಗಳಲ್ಲಿ ದಂಪತಿಗಳು ಮದುವೆಯ ಮುಂಚೆ ವೈದ್ಯಕೀಯ ಪರೀಕ್ಷೆಯನ್ನು ಮಾಡಬೇಕೆಂದು ಕಾನೂನು ಕೇಳಿಕೊಳ್ಳುತ್ತದೆ. ಇನ್ನಿತರರು ತಮ್ಮ ಸ್ವಂತ ಮಾಹಿತಿಗಾಗಿ ಇಂತಹ ತಪಾಸಣೆಯನ್ನು ಮಾಡಲು ಬಯಸಬಹುದು.) ಹೀಗೆ ಅವರಿಬ್ಬರೂ ಇನ್ನೂ ಹೆಚ್ಚಿನ ಹರ್ಷಭರಿತ ಮತ್ತು ಗಂಭೀರ ಹೆಜ್ಜೆಯನ್ನು ತೆಗೆದುಕೊಳ್ಳಲು ಮುಂದರಿಯುವಾಗ ನಿಶ್ಚಿತಾರ್ಥದ ಹರ್ಷವು ಮತ್ತು ಗಂಭೀರತೆಯು ಗೌರವಾರ್ಹ ಉದ್ದೇಶವನ್ನು ಪೂರೈಸುವುದು.—ಜ್ಞಾನೋಕ್ತಿ 5:18, 19; ಎಫೆಸ 5:33.
[ಅಧ್ಯಯನ ಪ್ರಶ್ನೆಗಳು]
a ಹೀಗಿದ್ದರೂ, ಕೆಲವು ಸಮಾಜಗಳಲ್ಲಿ ಹೆತ್ತವರು ಈಗಲೂ ತಮ್ಮ ಮಕ್ಕಳ ನಿಶ್ಚಿತಾರ್ಥವನ್ನು ಏರ್ಪಡಿಸುತ್ತಾರೆ. ಅವರಿಬ್ಬರೂ ಮದುವೆಯಾಗುವ ಸ್ಥಿತಿಯನ್ನು ತಲಪುವ ತುಂಬ ಸಮಯದ ಮುಂಚೆಯೇ ಇದನ್ನು ಅವರು ಮಾಡಬಹುದು. ಈ ಮಧ್ಯೆ ಅವರಿಗೆ ನಿಶ್ಚಿತಾರ್ಥವಾಗಿದೆ ಅಥವಾ ಅವರು ಒಬ್ಬರಿಗೊಬ್ಬರು ಮಾತು ಕೊಟ್ಟಿದ್ದಾರೆ ಎಂದು ಪರಿಗಣಿಸಲಾಗುತ್ತದಾದರೂ, ಇವರಿಗೆ ಇನ್ನೂ ಮದುವೆಯಾಗಿರುವುದಿಲ್ಲ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಅಧ್ಯಾಯಗಳು 28-32ನ್ನು ಮತ್ತು ಕುಟುಂಬ ಸಂತೋಷದ ರಹಸ್ಯ, ಅಧ್ಯಾಯ 2ನ್ನು ನೋಡಿರಿ.