ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವನಂದು ಆತನಲ್ಲಿ ಭರವಸವಿಡಿರಿ
“ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
1. ಮಾನವರಿಗಾಗಿ ಮತ್ತು ಈ ಭೂಮಿಗಾಗಿ ಯೆಹೋವನ ಉದ್ದೇಶವು ಏನಾಗಿದೆ?
ಯೆಹೋವನು ನಮ್ಮ ಪ್ರಥಮ ಹೆತ್ತವರನ್ನು ಸೃಷ್ಟಿಸಿದಾಗ, ಅವರನ್ನು ಪರಿಪೂರ್ಣರನ್ನಾಗಿ ಮಾಡಿದನು. ಅವರು ಆತನ ನಿಯಮಗಳಿಗೆ ವಿಧೇಯರಾದರೆ—ಈ ಭೂಮಿಯ ಮೇಲೆ ಸದಾಕಾಲ ಜೀವಿಸಬಹುದೆಂಬ ಉದ್ದೇಶದಿಂದ ಆತನು ಅವರನ್ನು ಸೃಷ್ಟಿಸಿದನು. (ಆದಿಕಾಂಡ 1:26, 27; 2:17) ಇನ್ನೂ ಹೆಚ್ಚಾಗಿ, ದೇವರು ಅವರನ್ನು ಪ್ರಮೋದವನದ ಪರಿಸರದಲ್ಲಿ ಇರಿಸಿದನು. (ಆದಿಕಾಂಡ 2:8, 9) ಯೆಹೋವನು ಅವರಿಗೆ ಹೇಳಿದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” (ಆದಿಕಾಂಡ 1:28) ಹೀಗೆ, ಅವರ ಸಂತಾನವು ಕಟ್ಟಕಡೆಗೆ ಭೂವ್ಯಾಪಕವಾಗಿ ಹರಡಲಿತ್ತು, ಮತ್ತು ಈ ಗ್ರಹವು ಪರಿಪೂರ್ಣರಾದ, ಸಂತೋಷಿತ ಮಾನವಕುಲದಿಂದ ತುಂಬಿರುವ ಪ್ರಮೋದವನವಾಗಲಿತ್ತು. ಮಾನವ ಕುಟುಂಬಕ್ಕೆ ಎಂತಹ ಉತ್ತಮ ಆರಂಭವಿತ್ತು! “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”—ಆದಿಕಾಂಡ 1:31.
2. ಮಾನವ ಕಾರ್ಯಗಳ ಸ್ಥಿತಿಯು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?
2 ಆದರೂ, ಸಾವಿರಾರು ವರ್ಷಗಳ ವರೆಗೆ ಅಸ್ತಿತ್ವದಲ್ಲಿದ್ದ ಮಾನವ ಕಾರ್ಯಗಳ ಪರಿಸ್ಥಿತಿಯು, ದೇವರ ಮೂಲಭೂತ ಉದ್ದೇಶಕ್ಕೆ ಯಾವ ಹೋಲಿಕೆಯನ್ನೂ ಹೊಂದಿರುವುದಿಲ್ಲ. ಮಾನವಕುಲವು ಪರಿಪೂರ್ಣತೆಯಿಂದ ಬಹಳ ದೂರವಿದೆ ಮತ್ತು ಖಂಡಿತವಾಗಿಯೂ ಸಂತೋಷದಿಂದಿಲ್ಲ. ಲೋಕ ಪರಿಸ್ಥಿತಿಗಳು ವಿಷಾದಕರವಾಗಿವೆ, ಮತ್ತು ಪ್ರವಾದಿಸಲ್ಪಟ್ಟಂತೆ, ಅವು ನಮ್ಮ ಸಮಯದಲ್ಲಿ ನಾಟಕೀಯವಾಗಿ ಹೆಚ್ಚು ಕೆಟ್ಟಿವೆ. (2 ತಿಮೊಥೆಯ 3:1-5, 13) ಮಾನವರಿಗಾಗಿ ದೇವರ ಉದ್ದೇಶವು ಹತ್ತಿರದ ಭವಿಷ್ಯತ್ತಿನಲ್ಲಿ ನೆರವೇರುವುದೆಂಬ ಭರವಸೆಯಿಂದ ನಾವು ಹೇಗೆ ಇರಬಲ್ಲೆವು? ಮುಂದುವರಿಯುವ ಸಂಕಟದ ಸ್ಥಿತಿಗಳೊಂದಿಗೆ ಇನ್ನೂ ಹೆಚ್ಚು ದೀರ್ಘಾವಧಿಗಳು ಗತಿಸುವುವೊ?
ವಿಷಯವು ಕೆಡುವಂತೆ ಯಾವುದು ಮಾಡಿತು?
3. ಯೆಹೋವನು ಯಾಕೆ ಮಾನವಕುಲದ ದಂಗೆಯನ್ನು ಕೂಡಲೇ ಅಂತ್ಯಗೊಳಿಸಲಿಲ್ಲ?
3 ದೇವರ ಪ್ರೇರಿತ ವಾಕ್ಯದ ನಿಷ್ಕೃಷ್ಟ ಜ್ಞಾನ ಇರುವವರಿಗೆ ಯೆಹೋವನು ಭೂಮಿಯ ಮೇಲೆ ಈ ಕೆಟ್ಟ ಪರಿಸ್ಥಿತಿಗಳನ್ನು ಯಾಕೆ ಅನುಮತಿಸಿದ್ದಾನೆಂಬ ವಿಷಯವು ಗೊತ್ತಿದೆ. ಅವುಗಳ ಕುರಿತು ಆತನು ಏನು ಮಾಡುವನು ಎಂಬುದು ಸಹ ಅವರಿಗೆ ತಿಳಿದಿದೆ. ಬೈಬಲ್ ದಾಖಲೆಯಿಂದ, ದೇವರು ಮಾನವರಿಗೆ ಕೊಟ್ಟಿದ್ದ ಮುಕ್ತ ಆಯ್ಕೆಯ ಅದ್ಭುತಕರ ಕೊಡುಗೆಯನ್ನು ನಮ್ಮ ಪ್ರಥಮ ಹೆತ್ತವರು ದುರುಪಯೋಗಿಸಿದರೆಂದು ಅವರು ಕಲಿತಿದ್ದಾರೆ. (ಹೋಲಿಸಿ 1 ಪೇತ್ರ 2:16.) ದೇವರಿಂದ ಸ್ವಾತಂತ್ರ್ಯದ ಮಾರ್ಗವನ್ನು ಅವರು ತಪ್ಪಾಗಿ ಆಯ್ದುಕೊಂಡರು. (ಆದಿಕಾಂಡ, 2 ನೆಯ ಮತ್ತು 3 ನೆಯ ಅಧ್ಯಾಯಗಳು) ಅವರ ದಂಗೆಯು, ಅತಿ ದೊಡ್ಡ ಪ್ರಮಾಣದ ಇಂತಹ ಪ್ರಶ್ನೆಗಳನ್ನು ಎಬ್ಬಿಸಿತು: ವಿಶ್ವದ ಸಾರ್ವಭೌಮನಿಗೆ ಮಾನವರ ಮೇಲೆ ಆಳುವ ಅಧಿಕಾರವಿದೆಯೊ? ಆತನ ಆಳಿಕೆ ಅವರಿಗಾಗಿ ಅತ್ಯುತ್ತಮ ಆಳಿಕೆಯಾಗಿದೆಯೊ? ಮಾನವ ಆಳಿಕೆ ದೇವರ ಮೇಲ್ವಿಚಾರಣೆ ಇಲ್ಲದೆ ಯಶಸ್ವಿಯಾಗಬಲ್ಲದೊ? ಮಾನವ ಆಳಿಕೆಯ ಶತಮಾನಗಳನ್ನು ಗತಿಸಿಹೋಗಲು ಬಿಡುವುದೇ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವ ಖಂಡಿತ ಮಾರ್ಗವಾಗಿತ್ತು. ಪರಿಣಾಮಗಳು, ಮಾನವರು ತಮ್ಮ ನಿರ್ಮಾಣಿಕನಿಂದ ಬೇರ್ಪಟ್ಟು ಸಫಲರಾಗಬಹುದಿತ್ತೊ ಇಲ್ಲವೊ ಎಂಬುದನ್ನು ಯಾವುದೇ ಸಂದೇಹವಿಲ್ಲದೆ ತೋರಿಸುತ್ತಿದ್ದವು.
4, 5. (ಎ) ದೇವರ ಆಳಿಕೆಯ ಮಾನವ ನಿರಾಕರಣೆಯ ಫಲಿತಾಂಶವು ಏನಾಗಿ ಪರಿಣಮಿಸಿದೆ? (ಬಿ) ಸಮಯದ ದಾಟುವಿಕೆಯು ಯಾವ ಸಂದೇಹವೂ ಇಲ್ಲದಂತೆ ಏನನ್ನು ತೋರಿಸಿದೆ?
4 ಆದಾಮ ಮತ್ತು ಹವ್ವರು ದೇವರನ್ನು ಬಿಟ್ಟಾಗ, ಆತನು ಅವರನ್ನು ಆಮೇಲೆ ಪರಿಪೂರ್ಣತೆಯಲ್ಲಿ ಪೋಷಿಸಲಿಲ್ಲ. ಆತನ ಬೆಂಬಲವಿಲ್ಲದೆ, ಅವರು ಕೀಳಾದ ಸ್ಥಿತಿಗೆ ಬಂದರು. ಫಲಿತಾಂಶವು ಅಪರಿಪೂರ್ಣತೆ, ಮುಪ್ಪು, ಮತ್ತು ಅಂತಿಮವಾಗಿ ಮರಣವಾಗಿತ್ತು. ಆನುವಂಶಿಕ ನಿಯಮಗಳ ಮುಖಾಂತರ, ನಮ್ಮ ಪ್ರಥಮ ಹೆತ್ತವರು, ನಮ್ಮನ್ನೂ ಸೇರಿಸಿ ತಮ್ಮ ಎಲ್ಲಾ ವಂಶದವರ ಮೇಲೆ ಆ ನಕಾರಾತ್ಮಕ ವೈಲಕ್ಷಣ್ಯಗಳನ್ನು ಮುಂದೆ ಸಾಗಿಸಿದರು. (ರೋಮಾಪುರ 5:12) ಸಾವಿರಾರು ವರ್ಷಗಳ ಮಾನವ ಆಳಿಕೆಯ ಫಲಿತಾಂಶದ ಕುರಿತೇನು? ಅದು ದುರಂತಕರವಾಗಿದೆ; ಪ್ರಸಂಗಿ 8:9 ಸತ್ಯವಾಗಿ ಹೇಳಿದಂತೆ: “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.”
5 ತಮ್ಮ ಕಾರ್ಯಗಳನ್ನು ತಮ್ಮ ನಿರ್ಮಾಣಿಕನಿಂದ ಬೇರ್ಪಟ್ಟು ಯಶಸ್ವಿಯಾಗಿ ನಿರ್ದೇಶಿಸುವ ಸಾಮರ್ಥ್ಯವು ಮಾನವರಲ್ಲಿಲ್ಲವೆಂದು ಸಮಯದ ದಾಟುವಿಕೆ ನಿರ್ಣಾಯಕವಾಗಿ ತೋರಿಸಿದೆ. ಪ್ರೇರಿತ ಬೈಬಲ್ ಬರಹಗಾರನಾದ ಯೆರೆಮೀಯನು ಘೋಷಿಸಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23; ಧರ್ಮೋಪದೇಶಕಾಂಡ 32:4, 5; ಪ್ರಸಂಗಿ 7:29.
ದೇವರ ಉದ್ದೇಶವು ಬದಲಾಗಿಲ್ಲ
6, 7. (ಎ) ಸಾವಿರಾರು ವರ್ಷಗಳ ಇತಿಹಾಸವು ಯೆಹೋವನ ಉದ್ದೇಶಗಳನ್ನು ಬದಲಾಯಿಸಿದೆಯೊ? (ಬಿ) ಯೆಹೋವನ ಉದ್ದೇಶದಲ್ಲಿ ಯಾವುದು ಒಳಗೊಂಡಿದೆ?
6 ಇಷ್ಟೊಂದು ದುಷ್ಟತನ ಮತ್ತು ಕಷ್ಟಾನುಭವದಿಂದ ತುಂಬಿರುವ ಮಾನವ ಇತಿಹಾಸದ ಸಾವಿರಾರು ವರ್ಷಗಳ ದಾಟುವಿಕೆ ದೇವರ ಉದ್ದೇಶವನ್ನು ಬದಲಾಯಿಸಿದೆಯೊ? ಆತನ ವಾಕ್ಯವು ಹೇಳುವುದು: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು.” (ಯೆಶಾಯ 45:18) ಆದುದರಿಂದ ದೇವರು ಭೂಮಿಯನ್ನು ಮಾನವರ ಮೂಲಕ ನಿವಾಸಿಸಲ್ಪಡುವುದಕ್ಕೆ ರೂಪಿಸಿದನು, ಮತ್ತು ಅದು ಇನ್ನೂ ಆತನ ಉದ್ದೇಶವಾಗಿದೆ.
7 ಯೆಹೋವನು ಭೂಮಿಯನ್ನು ನಿವಾಸಿಸಲ್ಪಡುವುದಕ್ಕೆ ಮಾತ್ರವಲ್ಲ ಅದು ಪರಿಪೂರ್ಣ, ಹರ್ಷಿತ ಜನರಿಂದ ಅನುಭವಿಸಲ್ಪಡುವ ಒಂದು ಪ್ರಮೋದವನವಾಗುವಂತೆ ಕೂಡ ಉದ್ದೇಶಿಸಿದನು. ಆದುದರಿಂದಲೇ, “ನೀತಿಯು ವಾಸವಾಗಿರುವ” “ಒಂದು ನೂತನ ಭೂಮಂಡಲ,” ಒಂದು ಹೊಸತಾದ ಮಾನವ ಸಮಾಜವಿರುವುದೆಂದು ಬೈಬಲ್ ಮುಂತಿಳಿಸಿತು. (2 ಪೇತ್ರ 3:13) ಮತ್ತು ಪ್ರಕಟನೆ 21:4 ರಲ್ಲಿ, ಆತನ ಹೊಸ ಲೋಕದಲ್ಲಿ, ಅವನು “ಅವರ [ಮಾನವಕುಲದ] ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂದು ದೇವರ ವಾಕ್ಯವು ನಮಗೆ ಹೇಳುತ್ತದೆ. ಇಂತಹ ಕಾರಣಗಳಿಗಾಗಿಯೇ ಯೇಸು ಭೂಮಿಯ ಮೇಲೆ ಬರುವ ಆ ಹೊಸ ಲೋಕದ ಕುರಿತು “ಪರದೈಸ” ಎಂಬುದಾಗಿ ಮಾತಾಡಬಹುದಿತ್ತು.—ಲೂಕ 23:43.
8. ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವನೆಂದು ನಾವು ನಿಶ್ಚಿತರಾಗಿರಬಲ್ಲೆವು ಏಕೆ?
8 ಯೆಹೋವನು ವಿಶ್ವದ ಸರ್ವಶಕ್ತ ಹಾಗೂ ಸರ್ವಜ್ಞಾನಿಯಾದ ಸೃಷ್ಟಿಕರ್ತನಾಗಿರುವುದರಿಂದ, ಆತನ ಉದ್ದೇಶಕ್ಕೆ ವಿಘ್ನ ತರಲು ಯಾರಿಗೂ ಸಾಧ್ಯವಿಲ್ಲ. “ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ—ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.” (ಯೆಶಾಯ 14:24) ಹೀಗೆ, ಈ ಭೂಮಿಯನ್ನು ಪರಿಪೂರ್ಣ ಜನರಿಂದ ನಿವಾಸಿಸಲ್ಪಟ್ಟ ಪ್ರಮೋದವನವಾಗಿ ಮಾಡುತ್ತೇನೆಂದು ದೇವರು ಹೇಳುವಾಗ, ಹಾಗೆಯೇ ಆಗುವುದು. ಯೇಸು ಹೇಳಿದ್ದು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5; ಹೋಲಿಸಿ ಕೀರ್ತನೆ 37:29.) ಆ ವಾಗ್ದಾನದ ನೆರವೇರಿಕೆಯ ಕುರಿತು ನಾವು ನಿಶ್ಚಿತರಾಗಿರಸಾಧ್ಯವಿದೆ. ವಾಸ್ತವದಲ್ಲಿ, ಅದಕ್ಕಾಗಿ ಜೀವ ಕೊಡುವ ಮಟ್ಟಿಗೂ ಅದರಲ್ಲಿ ಭರವಸೆ ಇಡಸಾಧ್ಯವಿದೆ.
ಅವರು ಯೆಹೋವನನ್ನು ನಂಬಿದರು
9. ಯೆಹೋವನಲ್ಲಿ ತನ್ನ ಭರವಸೆಯನ್ನು ತೋರಿಸಿದ ಯಾವ ಸಂಗತಿಯನ್ನು ಅಬ್ರಹಾಮನು ಮಾಡಿದನು?
9 ಇತಿಹಾಸದ ಉದ್ದಕ್ಕೂ ದೇವ ಭಯವಿರುವ ಅನೇಕ ಜನರು ಭೂಮಿಗಾಗಿದ್ದ ದೇವರ ಉದ್ದೇಶದ ಮೇಲೆ ತಮ್ಮ ಜೀವಗಳನ್ನು ಒಪ್ಪಿಸಿಬಿಟ್ಟರು ಯಾಕೆಂದರೆ ಆತನು ಅದನ್ನು ನೆರವೇರಿಸುವನೆಂದು ಅವರಿಗೆ ಮನದಟ್ಟಾಗಿತ್ತು. ಅವರ ಜ್ಞಾನವು ಸೀಮಿತವುಳ್ಳದ್ದಾಗಿದ್ದರೂ, ಅವರು ದೇವರನ್ನು ನಂಬಿದರು ಮತ್ತು ತಮ್ಮ ಜೀವಿತಗಳನ್ನು ಆತನ ಚಿತ್ತವನ್ನು ಮಾಡುವುದರ ಮೇಲೆ ಕಟ್ಟಿದರು. ಉದಾಹರಣೆಗೆ, ಬೈಬಲನ್ನು ಬರೆಯಲಾರಂಭಿಸುವ ಬಹಳ ಮುಂಚೆಯೇ—ಯೇಸು ಭೂಮಿಯಲ್ಲಿದುದಕ್ಕೆ ಸುಮಾರು 2,000 ವರ್ಷಗಳ ಮುಂಚೆ, ಅಬ್ರಹಾಮನಿದ್ದನು. ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸುವನೆಂದು ಅಬ್ರಹಾಮನು ಆತನಲ್ಲಿ ಭರವಸವಿಟ್ಟನು. ಬಹುಶಃ ಅಬ್ರಹಾಮನು ಸೃಷ್ಟಿಕರ್ತನ ಕುರಿತು ನೋಹನಿಂದ ಕಲಿಸಲ್ಪಟ್ಟಿದ್ದ ನಂಬಿಗಸ್ತ ಪೂರ್ವಜನಾದ ಶೇಮನಿಂದ ಕಲಿತನು. ಹೀಗೆ ದೇವರು ಅಬ್ರಹಾಮನಿಗೆ ಕಲೀಯ್ದರ ಸಮೃದ್ಧ ಊರ್ ಪಟ್ಟಣದಿಂದ ಅಪರಿಚಿತ ಹಾಗೂ ಅಪಾಯಕಾರಿ ಕಾನಾನ್ ದೇಶಕ್ಕೆ ಹೋಗುವಂತೆ ಹೇಳಿದಾಗ, ಯೆಹೋವನಲ್ಲಿ ಭರವಸೆ ಇಡಬಹುದೆಂದು ಆ ಪೂರ್ವಜನಿಗೆ ಗೊತ್ತಿದ್ದರಿಂದ ಅವನು ಹೋದನು. (ಇಬ್ರಿಯ 11:8) ಸಕಾಲದಲ್ಲಿ, ಯೆಹೋವನು ಅವನಿಗೆ, “ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡುವೆನು” ಎಂಬುದಾಗಿ ಹೇಳಿದನು.—ಆದಿಕಾಂಡ 12:2.
10, 11. ತನ್ನ ಏಕಜಾತ ಪುತ್ರನಾದ ಇಸಾಕನನ್ನು ಬಲಿಯಾಗಿ ನೀಡಲು ಅಬ್ರಹಾಮನು ಏಕೆ ಸಿದ್ಧನಾಗಿದ್ದನು?
10 ಅಬ್ರಹಾಮನಿಗೆ ಇಸಾಕನು ಹುಟ್ಟಿದ ಮೇಲೆ ಏನು ಸಂಭವಿಸಿತು? ಇಸಾಕನ ಮೂಲಕ ಅವನ ವಂಶದವರು ಒಂದು ದೊಡ್ಡ ಜನಾಂಗವಾಗಿ ವಿಕಾಸ ಹೊಂದುವರೆಂದು ಯೆಹೋವನು ಅಬ್ರಹಾಮನಿಗೆ ಸೂಚಿಸಿದನು. (ಆದಿಕಾಂಡ 21:12) ಹೀಗೆ, ಯೆಹೋವನು ಅಬ್ರಹಾಮನಿಗೆ, ಅವನ ನಂಬಿಕೆಯ ಪರೀಕೆಯ್ಷಾಗಿ, ತನ್ನ ಮಗನಾದ ಇಸಾಕನನ್ನು ಬಲಿಕೊಡುವಂತೆ ಹೇಳಿದಾಗ, ಅದು ಅಸಮಂಜಸವಾದ ಸಂಗತಿಯಾಗಿ ತೋರಿದಿರ್ದಬೇಕು. (ಆದಿಕಾಂಡ 22:2) ಆದರೂ, ಯೆಹೋವನಲ್ಲಿ ಪೂರ್ಣ ಭರವಸೆಯಿಂದ, ಇಸಾಕನನ್ನು ಕೊಲ್ಲಲು ತನ್ನ ಕತ್ತಿಯನ್ನು ನಿಜವಾಗಿಯೂ ತೆಗೆದುಕೊಳ್ಳುತ್ತಾ, ಅನುವರ್ತಿಸುವ ಹೆಜ್ಜೆಗಳನ್ನು ಅಬ್ರಹಾಮನು ತೆಗೆದುಕೊಂಡನು. ಕೊನೆಯ ಘಳಿಗೆಯಲ್ಲಿ, ಅಬ್ರಹಾಮನನ್ನು ತಡೆಯಲು ದೇವರು ಒಬ್ಬ ದೇವದೂತನನ್ನು ಕಳುಹಿಸಿದನು.—ಆದಿಕಾಂಡ 22:9-14.
11 ಅಬ್ರಹಾಮನು ಯಾಕೆ ಅಷ್ಟು ವಿಧೇಯನಾಗಿದ್ದನು? ಇಬ್ರಿಯ 11:17-19 ಪ್ರಕಟಿಸುವುದು: “ಅಬ್ರಹಾಮನು ಪರಿಶೋಧಿತನಾಗಿ ನಂಬಿಕೆಯಿಂದಲೇ ಇಸಾಕನನ್ನು ಸಮರ್ಪಿಸಿದನು. ಇಸಾಕನು ಅವನ ಏಕಪುತ್ರನಾಗಿದ್ದರೂ ಮತ್ತು ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರೆಂದು ದೇವರು ಅವನಿಗೆ ಹೇಳಿದ್ದರೂ ಆ ವಾಗ್ದಾನಗಳನ್ನು ಹೊಂದಿದ ಅವನು ಆ ಒಬ್ಬನೇ ಮಗನನ್ನು ಸಮರ್ಪಿಸುವದಕ್ಕಿದ್ದನು. ತನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು ತಿಳುಕೊಂಡನು. ಮತ್ತು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಹೊಂದಿದನು.” ರೋಮಾಪುರ 4:20, 21 ಅದೇ ರೀತಿಯಲ್ಲಿ ಹೇಳುವುದು: “ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು [ಅಬ್ರಹಾಮನು] ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. . . . ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟನು.”
12. ಅಬ್ರಹಾಮನು ತನ್ನ ನಂಬಿಕೆಗಾಗಿ ಹೇಗೆ ಬಹುಮಾನಿಸಲ್ಪಟ್ಟನು?
12 ಅಬ್ರಹಾಮನು ತನ್ನ ನಂಬಿಕೆಗಾಗಿ ಇಸಾಕನನ್ನು ಉಳಿಸುವುದರಿಂದ ಮತ್ತು ಅವನ ಮುಖಾಂತರ “ದೊಡ್ಡ ಜನಾಂಗವನ್ನು” ಹೊಂದುವುದರಿಂದ ಮಾತ್ರವಲ್ಲ ಬೇರೊಂದು ರೀತಿಯಲ್ಲಿ ಸಹ ಬಹುಮಾನಿಸಲ್ಪಟ್ಟನು. ದೇವರು ಅಬ್ರಹಾಮನಿಗೆ ಹೇಳಿದ್ದು: “ನೀನು ನನ್ನ ಮಾತನ್ನು ಕೇಳಿದರ್ದಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:18) ಹೇಗೆ? ದೇವರ ಸ್ವರ್ಗೀಯ ರಾಜ್ಯದ ರಾಜನು ಅಬ್ರಹಾಮನ ವಂಶಾವಳಿಯ ಮುಖಾಂತರ ಬರುವನು. ಆ ರಾಜ್ಯವು ಸೈತಾನನ ಕೆಳಗಿರುವ ಈ ದುಷ್ಟ ಲೋಕವನ್ನು ಜಜ್ಜಿ ಅಸ್ತಿತ್ವದಿಂದ ತೆಗೆದುಹಾಕುವುದು. (ದಾನಿಯೇಲ 2:44; ರೋಮಾಪುರ 16:20; ಪ್ರಕಟನೆ 19:11-21) ಆಮೇಲೆ, ರಾಜ್ಯದ ಆಳಿಕೆಯ ಕೆಳಗೆ ಶುಚಿಮಾಡಲ್ಪಟ್ಟ ಭೂಮಿಯಲ್ಲಿ, ಪ್ರಮೋದವನವು ಭೂವ್ಯಾಪಕವಾಗಿ ವಿಕಸಿಸಲ್ಪಡುವುದು ಮತ್ತು “ಎಲ್ಲಾ ಜನಾಂಗ” ಗಳಿಂದ ದೇವರ ಚಿತ್ತವನ್ನು ಮಾಡುವ ಜನರು ಪರಿಪೂರ್ಣ ಆರೋಗ್ಯವನ್ನು ಮತ್ತು ಸದಾಕಾಲದ ಜೀವಿತವನ್ನು ಅನುಭವಿಸುವರು. (1 ಯೋಹಾನ 2:15-17) ರಾಜ್ಯದ ಕುರಿತು ಕೇವಲ ಸೀಮಿತ ಜ್ಞಾನವನ್ನು ಅಬ್ರಹಾಮನು ಹೊಂದಿದ್ದರೂ, ಅವನು ದೇವರಲ್ಲಿ ಭರವಸೆಯಿಟ್ಟನು ಮತ್ತು ಅದರ ಸ್ಥಾಪನೆಗೆ ಎದುರುನೋಡಿದನು.—ಇಬ್ರಿಯ 11:10.
13, 14. ಯೋಬನು ದೇವರನ್ನು ಏಕೆ ನಂಬಿದನು?
13 ಅನೇಕ ನೂರು ವರ್ಷಗಳಾನಂತರ, ಸಾ.ಶ.ಪೂ. 17 ನೆಯ ಮತ್ತು 16 ನೆಯ ಶತಮಾನಗಳ ನಡುವೆ, ಈಗ ಅರೇಬಿಯ ಎಂದಾಗಿರುವ ಸ್ಥಳದಲ್ಲಿ ಯೋಬನಿದ್ದನು. ಅವನು ಕೂಡ ಬೈಬಲನ್ನು ಬರೆಯಲಾರಂಭಿಸುವ ಮುಂಚೆಯೇ ಜೀವಿಸಿದ್ದನು. ಯೋಬನು “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದನು.” (ಯೋಬ 1:1) ಸೈತಾನನು ಯೋಬನ ಮೇಲೆ ಅಸಹ್ಯವಾದ, ವೇದನಾಮಯ ರೋಗವನ್ನು ಉಂಟುಮಾಡಿದಾಗ, ಆ ನಂಬಿಗಸ್ತ ಮನುಷ್ಯನು ಅವನ ಕಠಿನ ಪರೀಕ್ಷೆಯ ಉದ್ದಕ್ಕೂ “ಪಾಪದ ಮಾತೊಂದನ್ನೂ ನುಡಿಯಲಿಲ್ಲ.” (ಯೋಬ 2:10, ದ ನ್ಯೂ ಇಂಗ್ಲಿಷ್ ಬೈಬಲ್) ಯೋಬನು ದೇವರನ್ನು ನಂಬಿದನು. ಮತ್ತು ಅವನು ಯಾಕೆ ಇಷ್ಟೊಂದು ಕಷ್ಟಾನುಭವಿಸುತ್ತಿದ್ದಾನೆಂಬ ವಿವರಗಳು ಅವನಿಗೆ ಗೊತ್ತಿರದಿದ್ದರೂ, ಅವನು ತನ್ನ ಜೀವಿತವನ್ನು ದೇವರ ಮತ್ತು ಆತನ ವಾಗ್ದಾನಗಳ ಮೇಲೆ ಒಪ್ಪಿಸಿಬಿಟ್ಟನು.
14 ತಾನು ಸತ್ತರೂ ಕೂಡ, ಪುನರುತ್ಥಾನದ ಮೂಲಕ ದೇವರು ತನ್ನನ್ನು ಯಾವುದಾದರೊಂದು ದಿನ ಜೀವಿತಕ್ಕೆ ಪುನಃಸ್ಥಾಪಿಸುವನು ಎಂದು ಯೋಬನಿಗೆ ಗೊತ್ತಿತ್ತು. ಯೆಹೋವ ದೇವರಿಗೆ ಹೀಗೆ ಹೇಳಿದಾಗ, ಈ ನಿರೀಕ್ಷೆಯನ್ನು ಅವನು ಸೂಚಿಸಿದನು: “ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು . . . ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು! ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? . . . ನೀನು ಕರೆದರೆ ಉತ್ತರಕೊಡುವೆನು.” (ಯೋಬ 14:13-15) ಅತಿ ಸಂಕಟದಲ್ಲಿಯೂ, “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು,” ಎಂಬುದಾಗಿ ಹೇಳುತ್ತಾ, ಯೋಬನು ಯೆಹೋವನ ಸಾರ್ವಭೌಮತೆಯಲ್ಲಿ ನಂಬಿಕೆಯನ್ನು ಪ್ರದರ್ಶಿಸಿದನು.—ಯೋಬ 27:5.
15. ಯೆಹೋವನ ಉದ್ದೇಶದಲ್ಲಿ ದಾವೀದನು ತನ್ನ ಭರವಸೆಯನ್ನು ಹೇಗೆ ವ್ಯಕ್ತಪಡಿಸಿದನು?
15 ಯೋಬನ ಬಳಿಕ ಸುಮಾರು ಆರು ಶತಮಾನಗಳ ಮತ್ತು ಯೇಸು ಭೂಮಿಗೆ ಬರುವ ಸುಮಾರು ಒಂದು ಸಾವಿರ ವರ್ಷಗಳ ಮುಂಚೆ, ಹೊಸ ಲೋಕವೊಂದರಲ್ಲಿ ದಾವೀದನು ತನ್ನ ಭರವಸೆಯನ್ನು ವ್ಯಕ್ತಪಡಿಸಿದನು. ಕೀರ್ತನೆಗಳಲ್ಲಿ ಅವನಂದದ್ದು: “ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು. ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ಅವನ ಅಚಲ ನಿರೀಕ್ಷೆಯ ಕಾರಣ, ದಾವೀದನು ಪ್ರೇರೇಪಿಸಿದ್ದು: “ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು . . . ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.”—ಕೀರ್ತನೆ 37:3, 4, 9-11, 29.
16. ‘ಸಾಕ್ಷಿಗಳ ಒಂದು ಮಹಾ ಮೇಘಕ್ಕೆ’ ಯಾವ ನಿರೀಕ್ಷೆಯಿತ್ತು?
16 ಶತಮಾನಗಳ ಉದ್ದಕ್ಕೂ, ನಂಬಿಗಸ್ತ ಪುರುಷರಿಗೆ ಹಾಗೂ ಸ್ತ್ರೀಯರಿಗೆ ಭೂಮಿಯ ಮೇಲೆ ಅನಂತ ಜೀವನದ ಅದೇ ನಿರೀಕ್ಷೆ ಇತ್ತು. ವಾಸ್ತವದಲ್ಲಿ, ಯೆಹೋವನ ವಾಗ್ದಾನಗಳ ಮೇಲೆ ತಮ್ಮ ಜೀವಿತಗಳನ್ನು ಅಕ್ಷರಾರ್ಥಕವಾಗಿ ಒಪ್ಪಿಸಿಬಿಟ್ಟ ‘ಸಾಕ್ಷಿಗಳ ಒಂದು ಮಹಾ ಮೇಘ’ ವನ್ನು ಅವರು ರಚಿಸಿದರು. ಯೆಹೋವನ ಪ್ರಾಚೀನ ಸಾಕ್ಷಿಗಳಲ್ಲಿ ಅನೇಕರು, “ತಾವು . . . ಶ್ರೇಷ್ಠಪುನರುತ್ಥಾನವನ್ನು ಹೊಂದುವದಕ್ಕೋಸ್ಕರ” ತಮ್ಮ ನಂಬಿಕೆಯ ಕಾರಣ ಹಿಂಸಿಸಲ್ಪಟ್ಟರು ಮತ್ತು ಕೊಲ್ಲಲ್ಪಟ್ಟರು. ಅದು ಹೇಗೆ? ಹೊಸ ಲೋಕದಲ್ಲಿ, ದೇವರು ಅವರಿಗೆ ಶ್ರೇಷ್ಠವಾದ ಪುನರುತ್ಥಾನ ಮತ್ತು ನಿತ್ಯ ಜೀವದ ಪ್ರತೀಕ್ಷೆಯೊಂದಿಗೆ ಬಹುಮಾನ ನೀಡುವನು.—ಯೋಹಾನ 5:28, 29; ಇಬ್ರಿಯ 11:35; 12:1.
ಕ್ರೈಸ್ತ ಸಾಕ್ಷಿಗಳು ದೇವರಲ್ಲಿ ಭರವಸೆಯನ್ನಿಡುತ್ತಾರೆ
17. ಪ್ರಥಮ ಶತಮಾನದ ಕ್ರೈಸ್ತರು ಎಷ್ಟು ದೃಢವಾಗಿ ಯೆಹೋವನನ್ನು ನಂಬಿದರು?
17 ಸಾ.ಶ. ಪ್ರಥಮ ಶತಮಾನದಲ್ಲಿ, ಯೆಹೋವನು ಹೊಸದಾಗಿ ಸ್ಥಾಪಿಸಲ್ಪಟ್ಟ ಕ್ರೈಸ್ತ ಸಭೆಗೆ, ರಾಜ್ಯ ಮತ್ತು ಭೂಮಿಯ ಮೇಲೆ ಅದರ ಆಳಿಕೆಯ ಕುರಿತು ಹೆಚ್ಚಿನ ವಿವರಗಳನ್ನು ಪ್ರಕಟಿಸಿದನು. ಉದಾಹರಣೆಗೆ, ಯೇಸು ಕ್ರಿಸ್ತನೊಂದಿಗೆ ಸ್ವರ್ಗದ ರಾಜ್ಯದಲ್ಲಿ ಸಹವಸಿಸುವ ಸಂಖ್ಯೆಯು 1,44,000 ಜನರಾಗಿರುವರೆಂದು ಬರೆಯಲು ಆತನ ಆತ್ಮವು ಅಪೊಸ್ತಲ ಯೋಹಾನನನ್ನು ಪ್ರೇರೇಪಿಸಿತು. ಇವರು “ಮನುಷ್ಯರೊಳಗಿಂದ ಸಕ್ವೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟ” ದೇವರ ನಂಬಿಗಸ್ತ ಸೇವಕರಾಗಿರುವರು. (ಪ್ರಕಟನೆ 7:4; 14:1-4) ಅವರು ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ “ರಾಜರಂತೆ” ಭೂಮಿಯನ್ನು ಆಳುವರು. (ಪ್ರಕಟನೆ 20:4-6) ಸ್ವರ್ಗೀಯ ರಾಜ್ಯ ಮತ್ತು ಅದರ ಭೂರಾಜ್ಯಕ್ಕಾಗಿ ತನ್ನ ಉದ್ದೇಶವನ್ನು ಯೆಹೋವನು ನೆರವೇರಿಸುವನೆಂದು ಆ ಪ್ರಥಮ ಶತಮಾನದ ಕ್ರೈಸ್ತರು ಎಷ್ಟು ದೃಢವಾಗಿ ನಂಬಿದ್ದರೆಂದರೆ, ತಮ್ಮ ನಂಬಿಕೆಗಾಗಿ ಮರಣ ಹೊಂದಲು ಅವರು ಸಿದ್ಧರಾಗಿದ್ದರು. ಅವರಲ್ಲಿ ಅನೇಕರು ಅದನ್ನೇ ಮಾಡಿದರು.
18. ಇಂದಿನ ಯೆಹೋವನ ಸಾಕ್ಷಿಗಳು ಹಿಂದಿನ ಕಾಲದ ಅವರ ಪ್ರತಿರೂಪಗಳನ್ನು ಹೇಗೆ ಅನುಕರಿಸುತ್ತಾರೆ?
18 ಇಂದು, ಸುಮಾರು 50 ಲಕ್ಷ ಯೆಹೋವನ ಸಾಕ್ಷಿಗಳಿಗೆ, ತಮಗಿಂತ ಶತಮಾನಗಳ ಮುಂಚೆ ಜೀವಿಸಿದ ತಮ್ಮ ಪ್ರತಿರೂಪಗಳಿಗೆ ಇದ್ದಂತೆ ದೇವರಲ್ಲಿ ಅದೇ ಭರವಸೆಯಿದೆ. ಈ ಪ್ರಸ್ತುತ ದಿನದ ಸಾಕ್ಷಿಗಳು ಕೂಡ ತಮ್ಮ ಜೀವಗಳನ್ನು ದೇವರ ವಾಗ್ದಾನಗಳ ಮೇಲೆ ಒಪ್ಪಿಸಿಬಿಟ್ಟಿದ್ದಾರೆ. ಅವರು ತಮ್ಮ ಜೀವಿತಗಳನ್ನು ಆತನಿಗೆ ಸಮರ್ಪಿಸಿದ್ದಾರೆ ಮತ್ತು ತಮ್ಮ ನಂಬಿಕೆಯನ್ನು ಬಲಪಡಿಸಲು ಸಂಪೂರ್ಣ ಬೈಬಲ್ ಅವರಲ್ಲಿದೆ. (2 ತಿಮೊಥೆಯ 3:14-17) ಈ ಆಧುನಿಕ ದಿನದ ಯೆಹೋವನ ಸಾಕ್ಷಿಗಳು, “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂಬುದಾಗಿ ಘೋಷಿಸಿದ ಕ್ರಿಸ್ತನ ಪ್ರಥಮ ಶತಮಾನದ ಹಿಂಬಾಲಕರನ್ನು ಅನುಸರಿಸುತ್ತಾರೆ. (ಅ. ಕೃತ್ಯಗಳು 5:29) ಈ ಶತಮಾನದಲ್ಲಿ ಈ ಕ್ರೈಸ್ತ ಸಾಕ್ಷಿಗಳಲ್ಲಿ ಅನೇಕರು ಕ್ರೂರವಾಗಿ ಹಿಂಸಿಸಲ್ಪಟ್ಟಿದ್ದಾರೆ. ಕೆಲವರು ತಮ್ಮ ನಂಬಿಕೆಗಾಗಿ ಕೊಲ್ಲಲ್ಪಟ್ಟಿದ್ದಾರೆ ಸಹ. ಇತರರು ರೋಗದಿಂದ, ಅಪಘಾತದಿಂದ, ಯಾ ವೃದ್ಧಾಪ್ಯದಿಂದ ಮರಣ ಹೊಂದಿದ್ದಾರೆ. ಆದರೂ ಗತಕಾಲದ ನಂಬಿಗಸ್ತ ಸಾಕ್ಷಿಗಳಂತೆ, ಅವರು ದೇವರನ್ನು ನಂಬಿದ್ದಾರೆ ಯಾಕೆಂದರೆ, ಆತನು ಅವರನ್ನು ಆತನ ಹೊಸ ಲೋಕದಲ್ಲಿ ಪುನರುತ್ಥಾನದ ಮೂಲಕ ಜೀವಿತಕ್ಕೆ ಪುನಃಸ್ಥಾಪಿಸುವನೆಂದು ಅವರಿಗೆ ತಿಳಿದಿದೆ.—ಯೋಹಾನ 5:28, 29; ಅ. ಕೃತ್ಯಗಳು 24:15; ಪ್ರಕಟನೆ 20:12, 13.
19, 20. ನಮ್ಮ ದಿನಕ್ಕಾಗಿ ಬೈಬಲ್ ಪ್ರವಾದನೆಯ ಕುರಿತು ನಾವು ಏನನ್ನು ಗುರುತಿಸುತ್ತೇವೆ?
19 ಎಲ್ಲಾ ಜನಾಂಗಗಳಿಂದ ಒಂದು ಭೂವ್ಯಾಪಕ ಸಹೋದರತ್ವದೊಳಗೆ ಅವರ ತರುವಿಕೆಯು ಬಹಳ ಹಿಂದೆಯೇ ಬೈಬಲ್ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಿತ್ತು ಎಂಬುದನ್ನು ಯೆಹೋವನ ಸಾಕ್ಷಿಗಳು ಗಣ್ಯಮಾಡುತ್ತಾರೆ. (ಯೆಶಾಯ 2:2-4; ಪ್ರಕಟನೆ 7:4, 9-17) ಇನ್ನು ಇತರ ಪ್ರಾಮಾಣಿಕ ಹೃದಯದವರನ್ನು ತನ್ನ ಅನುಗ್ರಹ ಮತ್ತು ಸಂರಕ್ಷಣೆಯಲ್ಲಿ ಕೂಡಿಸಲು, ಲೋಕವ್ಯಾಪಕ ಸಾರುವ ಕೆಲಸದಲ್ಲಿ ಯೆಹೋವನು ಅವರನ್ನು ಉಪಯೋಗಿಸುತ್ತಿದ್ದಾನೆ. (ಜ್ಞಾನೋಕ್ತಿ 18:10; ಮತ್ತಾಯ 24:14; ರೋಮಾಪುರ 10:13) ಆತನು ಬೇಗನೆ ತನ್ನ ಅದ್ಭುತಕರ ಹೊಸ ಲೋಕವನ್ನು ತರುವನೆಂಬ ತಿಳಿವಳಿಕೆಯಿಂದ, ಇವರೆಲ್ಲರೂ ತಮ್ಮ ಪೂರ್ಣ ಭರವಸೆಯನ್ನು ಯೆಹೋವನಲ್ಲಿ ಇಡುತ್ತಾರೆ.—ಹೋಲಿಸಿ 1 ಕೊರಿಂಥ 15:58; ಇಬ್ರಿಯ 6:10.
20 ಸೈತಾನನ ಲೋಕವು ನಿಷ್ಕರ್ಷಕ ವರ್ಷವಾದ 1914 ರಿಂದ, ಈಗ ಸುಮಾರು 80 ವರ್ಷಗಳ ಕಾಲ ಅದರ ಕಡೆಯ ದಿನಗಳಲ್ಲಿ ಇದೆಯೆಂದು ಬೈಬಲ್ ಪ್ರವಾದನೆಗಳು ಸೂಚಿಸುತ್ತವೆ. ಈ ಲೋಕವು ಅದರ ಅಂತ್ಯವನ್ನು ಸಮೀಪಿಸುತ್ತಿದೆ. (ರೋಮಾಪುರ 16:20; 2 ಕೊರಿಂಥ 4:4; 2 ತಿಮೊಥೆಯ 3:1-5) ದೇವರ ರಾಜ್ಯವು ಬೇಗನೆ ಭೂಮಿಯ ಎಲ್ಲಾ ಕಾರ್ಯಗಳ ಸಂಪೂರ್ಣ ನಿಯಂತ್ರಣವನ್ನು ವಹಿಸುವುದೆಂದು ಅವರು ಗ್ರಹಿಸುವುದರಿಂದ ಯೆಹೋವನ ಸಾಕ್ಷಿಗಳು ಧೈರ್ಯ ಮತ್ತು ನಿರ್ಧಾರವನ್ನು ಹೊಂದಿದ್ದಾರೆ. ಈ ಪ್ರಚಲಿತ ದುಷ್ಟ ಲೋಕವನ್ನು ಸಮಾಪ್ತಿಗೆ ತರುವ ಮತ್ತು ತನ್ನ ನೀತಿಯ ಹೊಸ ಲೋಕವನ್ನು ತರುವ ಮೂಲಕ, ಇಷ್ಟೊಂದು ಶತಮಾನಗಳ ವರೆಗೆ ಭೂಮಿಯ ಮೇಲೆ ಇದ್ದ ಕೆಟ್ಟ ಪರಿಸ್ಥಿತಿಯನ್ನು ದೇವರು ಸಂಪೂರ್ಣವಾಗಿ ಅಳಿಸಿಬಿಡುವನು.—ಜ್ಞಾನೋಕ್ತಿ 2:21, 22.
21. ಪ್ರಸ್ತುತ ತೊಂದರೆಗಳ ಹೊರತೂ ನಾವು ಹರ್ಷಿಸಬಲ್ಲೆವು ಯಾಕೆ?
21 ಆಮೇಲೆ, ನಿತ್ಯತೆಯ ಉದ್ದಕ್ಕೂ, ಪೂರ್ವದಲ್ಲಿ ನಾವು ಪಡೆದಂತಹ ಯಾವುದೇ ಹಾನಿಯನ್ನು ಸರಿದೂಗಿಸುವಂತಹ ಆಶೀರ್ವಾದಗಳನ್ನು ಸುರಿಸುವ ಮೂಲಕ ನಮಗಾಗಿ ತನ್ನ ಮಹಾ ಕಾಳಜಿಯನ್ನು ದೇವರು ತೋರಿಸುವನು. ಹೊಸ ಲೋಕದಲ್ಲಿ ನಮಗೆ ಎಷ್ಟೊಂದು ಒಳ್ಳೆಯ ವಿಷಯಗಳು ಸಂಭವಿಸುವವೆಂದರೆ, ನಮ್ಮ ಹಿಂದಿನ ಸಂಕಟಗಳು ನಮ್ಮ ಜ್ಞಾಪಕದಿಂದ ಮಾಸಿಹೋಗುವುವು. ಆಗ ಯೆಹೋವನು ‘ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುವನು’ ಎಂದು ತಿಳಿಯುವುದು ಎಷ್ಟು ಸಾಂತ್ವನದಾಯಕವಾಗಿದೆ.—ಕೀರ್ತನೆ 145:16; ಯೆಶಾಯ 65:17, 18.
22. ನಮ್ಮ ಭರವಸೆಯನ್ನು ನಾವು ಯೆಹೋವನಲ್ಲಿ ಯಾಕೆ ಇಡಬೇಕು?
22 ಹೊಸ ಲೋಕದಲ್ಲಿ, ನಂಬಿಗಸ್ತ ಮಾನವಕುಲವು ರೋಮಾಪುರ 8:21ರ ನೆರವೇರಿಕೆಯನ್ನು ನೋಡುವುದು: “ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.” ಯೇಸು ತನ್ನ ಹಿಂಬಾಲಕರಿಗೆ ಕಲಿಸಿದ ಈ ಪ್ರಾರ್ಥನೆಯು ನೆರವೇರುವುದನ್ನು ಅವರು ನೋಡುವರು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಆದುದರಿಂದ ನಿಮ್ಮ ಸಂಪೂರ್ಣ ಭರವಸೆಯನ್ನು ಯೆಹೋವನಲ್ಲಿ ಇಡಿರಿ ಯಾಕೆಂದರೆ ಆತನ ನಿಶ್ಚಿತ ವಾಗ್ದಾನವು, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು,” ಎಂಬುದಾಗಿದೆ.—ಕೀರ್ತನೆ 37:29.
ನೀವು ಹೇಗೆ ಉತ್ತರಿಸುವಿರಿ?
▫ ಮಾನವರಿಗಾಗಿ ಮತ್ತು ಈ ಭೂಮಿಗಾಗಿ ಯೆಹೋವನ ಉದ್ದೇಶವು ಏನಾಗಿದೆ?
▫ ಭೂಮಿಯ ಮೇಲೆ ಕೆಟ್ಟ ಪರಿಸ್ಥಿತಿಗಳನ್ನು ದೇವರು ಯಾಕೆ ಅನುಮತಿಸಿದ್ದಾನೆ?
▫ ಹಳೆಯ ಕಾಲದ ನಂಬಿಗಸ್ತ ಜನರು ಯೆಹೋವನಲ್ಲಿ ತಮ್ಮ ಭರವಸೆಯನ್ನು ಹೇಗೆ ತೋರಿಸಿದರು?
▫ ದೇವರ ಸೇವಕರು ಇಂದು ಯೆಹೋವನಲ್ಲಿ ಭರವಸೆಯನ್ನಿಡುತ್ತಾರೆ ಏಕೆ?
[ಪುಟ 16 ರಲ್ಲಿರುವ ಚಿತ್ರ]
ದೇವರು ಮಾನವರನ್ನು ಪ್ರಮೋದವನ ಭೂಮಿಯ ಮೇಲೆ ಸಂತೋಷದಲ್ಲಿ ಸದಾಕಾಲ ಜೀವಿಸಲು ಸೃಷ್ಟಿಸಿದನು
[ಪುಟ 18 ರಲ್ಲಿರುವ ಚಿತ್ರ]
ಸತ್ತವರನ್ನು ಪುನರುತ್ಥಾನಗೊಳಿಸಲಿರುವ ಯೆಹೋವನ ಸಾಮರ್ಥ್ಯದಲ್ಲಿ ಅಬ್ರಹಾಮನು ತನ್ನ ಭರವಸೆಯನ್ನಿಟ್ಟನು