ನೀವು ದೇವರ ವಿಶ್ರಾಂತಿಯಲ್ಲಿ ಸೇರಿದ್ದೀರೊ?
“ಆತನ [“ದೇವರ,” NW] ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.”—ಇಬ್ರಿಯ 4:10.
1. ವಿಶ್ರಾಂತಿಯು ಏಕೆ ಅಷ್ಟೊಂದು ಅಪೇಕ್ಷಣೀಯವಾಗಿದೆ?
ವಿಶ್ರಾಂತಿ. ಎಷ್ಟು ಹಿತಕರವಾದ ಹಾಗೂ ಮುದನೀಡುವ ಶಬ್ದ! ಇಂದಿನ ತ್ವರಿತಗತಿಯ ಹಾಗೂ ಆವೇಶಪರವಾದ ಲೋಕದಲ್ಲಿ ಜೀವಿಸುತ್ತಿದ್ದು, ನಮ್ಮಲ್ಲಿ ಅತ್ಯಧಿಕ ಮಂದಿ ಖಂಡಿತವಾಗಿಯೂ ಸ್ವಲ್ಪ ವಿಶ್ರಾಂತಿಯನ್ನಾದರೂ ಅಪೇಕ್ಷಿಸುತ್ತೇವೆ. ಎಳೆಯರಾಗಿರಲಿ ವೃದ್ಧರಾಗಿರಲಿ, ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ, ದೈನಂದಿನ ಜೀವಿತದ ಆಗುಹೋಗುಗಳಿಂದ ನಾವು ಕಷ್ಟಕ್ಕೆ ಸಿಕ್ಕಿಕೊಂಡವರೂ ಬಳಲಿಹೋದ ಅನಿಸಿಕೆಯುಳ್ಳವರೂ ಆಗಿರಬಹುದು. ಶಾರೀರಿಕ ಇತಿಮಿತಿಗಳು ಅಥವಾ ದೌರ್ಬಲ್ಯಗಳಿರುವವರಿಗೆ, ಪ್ರತಿ ದಿನವು ಒಂದು ಪಂಥಾಹ್ವಾನವಾಗಿರುತ್ತದೆ. ಶಾಸ್ತ್ರವಚನಗಳು ಹೇಳುವಂತೆ, “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.” (ರೋಮಾಪುರ 8:22) ವಿಶ್ರಾಂತಿಪಡೆದುಕೊಳ್ಳುತ್ತಿರುವ ವ್ಯಕ್ತಿಯೊಬ್ಬನು ಖಂಡಿತವಾಗಿಯೂ ಒಬ್ಬ ಸೋಮಾರಿಯಾಗಿರಬೇಕೆಂದಿಲ್ಲ. ವಿಶ್ರಾಂತಿಯು, ಪೂರೈಸಲ್ಪಡಬೇಕಾದ ಒಂದು ಮಾನವ ಆವಶ್ಯಕತೆಯಾಗಿದೆ.
2. ಯೆಹೋವನು ಎಂದಿನಿಂದ ವಿಶ್ರಮಿಸುತ್ತಿದ್ದಾನೆ?
2 ಯೆಹೋವ ದೇವರು ತಾನೇ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾನೆ. ಆದಿಕಾಂಡ ಪುಸ್ತಕದಲ್ಲಿ ನಾವು ಓದುವುದು: “ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು. ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು.” ಯೆಹೋವನು “ಏಳನೆಯ ದಿನ”ಕ್ಕೆ ವಿಶೇಷ ಅರ್ಥವನ್ನು ಕೊಟ್ಟನು, ಏಕೆಂದರೆ ಪ್ರೇರಿತ ದಾಖಲೆಯು ಹೀಗೆ ಮುಂದುವರಿಸುತ್ತದೆ: “ದೇವರು ಏಳನೆಯ ದಿನವನ್ನು ಆಶೀರ್ವದಿಸಿ, ಅದನ್ನು ಪರಿಶುದ್ಧವಾದದ್ದಾಗಿ ಮಾಡಲು ಮುಂದುವರಿದನು” (NW).—ಆದಿಕಾಂಡ 2:1-3.
ದೇವರ ತನ್ನ ಕೆಲಸವನ್ನು ನಿಲ್ಲಿಸಿ ವಿಶ್ರಮಿಸಿದನು
3. ದೇವರು ಏಕೆ ವಿಶ್ರಮಿಸಿದನು ಎಂಬುದಕ್ಕೆ ಯಾವುವು ಕಾರಣಗಳಾಗಿರಲು ಸಾಧ್ಯವಿಲ್ಲ?
3 ದೇವರು “ಏಳನೆಯ ದಿನ”ದಂದೇ ಏಕೆ ವಿಶ್ರಮಿಸಿದನು? ಆಯಾಸಗೊಂಡಿದ್ದರಿಂದ ಆತನು ವಿಶ್ರಮಿಸಲಿಲ್ಲ ಎಂಬುದು ಖಂಡಿತ. ಯೆಹೋವನು “ಅತಿ ಬಲಾಢ್ಯ”ನಾಗಿದ್ದಾನೆ ಮತ್ತು “ದಣಿದು ಬಳಲುವದಿಲ್ಲ.” (ಯೆಶಾಯ 40:26, 28) ಅಥವಾ ತನಗೆ ವಿರಾಮದ ಇಲ್ಲವೆ ಬದಲಾವಣೆಯ ಅಗತ್ಯವಿದೆ ಎಂಬ ಕಾರಣಕ್ಕಾಗಿ ದೇವರು ವಿಶ್ರಮಿಸಲಿಲ್ಲ. ಏಕೆಂದರೆ ಯೇಸು ನಮಗೆ ಹೇಳಿದ್ದು: “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾನೆ, ನಾನೂ ಕೆಲಸಮಾಡುತ್ತೇನೆ.” (ಯೋಹಾನ 5:17) ಹೇಗಿದ್ದರೂ “ದೇವರು ಆತ್ಮಸ್ವರೂಪ”ನಾಗಿದ್ದಾನೆ ಮತ್ತು ಶಾರೀರಿಕ ಸೃಷ್ಟಿಜೀವಿಗಳ ದೈಹಿಕ ಆವರ್ತಗಳು ಹಾಗೂ ಆವಶ್ಯಕತೆಗಳಿಂದ ಆತನು ನಿರ್ಬಂಧಿಸಲ್ಪಟ್ಟಿರುವುದಿಲ್ಲ.—ಯೋಹಾನ 4:24.
4. ಹಿಂದಿನ ಆರು ‘ದಿನಗಳಿ’ಗಿಂತ “ಏಳನೆಯ ದಿನ”ವು ಯಾವ ರೀತಿಯಲ್ಲಿ ಭಿನ್ನವಾದದ್ದಾಗಿತ್ತು?
4 ದೇವರು “ಏಳನೆಯ ದಿನ”ದಂದು ಏಕೆ ವಿಶ್ರಮಿಸಿದನೆಂಬ ವಿಷಯದಲ್ಲಿ ನಾವು ಹೇಗೆ ಸ್ವಲ್ಪ ಒಳನೋಟವನ್ನು ಪಡೆದುಕೊಳ್ಳಸಾಧ್ಯವಿದೆ? ಹಿಂದಿನ ಆರು ಸೃಷ್ಟಿಕಾರಕ ‘ದಿನಗಳ’ ದೀರ್ಘ ಕಾಲಾವಧಿಯ ಸಮಯದಲ್ಲಿ, ತಾನು ಯಾವ ಕೆಲಸವನ್ನು ಪೂರೈಸಿದ್ದನೋ ಅದರ ಕುರಿತು ತುಂಬ ಪ್ರಸನ್ನನಾಗಿದ್ದರೂ, ವಿಶೇಷವಾಗಿ “ಏಳನೆಯ ದಿನ”ವನ್ನು ದೇವರು ಆಶೀರ್ವದಿಸಿದನು ಮತ್ತು ಅದನ್ನು “ಪರಿಶುದ್ಧ”ವೆಂದು ಪ್ರಕಟಿಸಿದನು ಎಂಬುದನ್ನು ಗಮನಿಸುವ ಮೂಲಕವೇ. ಕಾನ್ಸೈಸ್ ಆಕ್ಸ್ಫರ್ಡ್ ಡಿಕ್ಷನೆರಿಯು, “ಪರಿಶುದ್ಧ” ಎಂಬ ಶಬ್ದವನ್ನು, “(ಒಬ್ಬ ದೇವರಿಗೆ ಅಥವಾ ಯಾವುದೋ ಧಾರ್ಮಿಕ ಉದ್ದೇಶಕ್ಕೆ) ಸಂಪೂರ್ಣವಾಗಿ ಸಮರ್ಪಿಸಲ್ಪಟ್ಟದ್ದು ಅಥವಾ ಮೀಸಲಾಗಿಡಲ್ಪಟ್ಟದ್ದು” ಎಂದು ಅರ್ಥನಿರೂಪಿಸುತ್ತದೆ. ಹೀಗೆ, ಯೆಹೋವನು “ಏಳನೆಯ ದಿನ”ವನ್ನು ಆಶೀರ್ವದಿಸಿದ್ದು ಹಾಗೂ ಅದನ್ನು ಪರಿಶುದ್ಧವೆಂದು ಪ್ರಕಟಿಸಿದ್ದು, ಆತನ ಯಾವುದೇ ಅಗತ್ಯಗಳನ್ನು ಸೂಚಿಸುವುದಿಲ್ಲ. ಬದಲಾಗಿ ಆತನ ಪರಿಶುದ್ಧ ಚಿತ್ತ ಹಾಗೂ ಉದ್ದೇಶದೊಂದಿಗೆ, ಆತನ “ವಿಶ್ರಾಂತಿ”ಯು ಯಾವುದೋ ಸಂಬಂಧವನ್ನು ಹೊಂದಿರಲೇಬೇಕು ಎಂಬುದನ್ನು ಅದು ಸೂಚಿಸುತ್ತದೆ. ಆ ಸಂಬಂಧವು ಯಾವುದಾಗಿದೆ?
5. ಹಿಂದಿನ ಆರು ಸೃಷ್ಟಿಕಾರಕ ‘ದಿನಗಳ’ಲ್ಲಿ ದೇವರು ಯಾವುದನ್ನು ಕಾರ್ಯರೂಪಕ್ಕೆ ತಂದನು?
5 ಹಿಂದಿನ ಆರು ಸೃಷ್ಟಿಕಾರಕ ‘ದಿನಗಳ’ಲ್ಲಿ, ಭೂಮಿಯನ್ನು ಹಾಗೂ ಅದರ ಸುತ್ತಲೂ ಇರುವ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಎಲ್ಲ ಕಾಲಚಕ್ರಗಳನ್ನು ಹಾಗೂ ನಿಯಮಗಳನ್ನು ದೇವರು ಉಂಟುಮಾಡಿ, ಅವುಗಳನ್ನು ಕಾರ್ಯರೂಪಕ್ಕೆ ತಂದಿದ್ದನು. ಇವೆಲ್ಲವೂ ಎಷ್ಟು ಅದ್ಭುತಕರವಾಗಿ ವಿನ್ಯಾಸಿಸಲ್ಪಟ್ಟಿವೆ ಎಂಬುದನ್ನು ವಿಜ್ಞಾನಿಗಳು ಈಗ ಕಲಿಯುತ್ತಿದ್ದಾರೆ. “ಆರನೆಯ ದಿನ”ವು ಮುಕ್ತಾಯಗೊಳ್ಳುತ್ತಿದ್ದಾಗ, ದೇವರು ಪ್ರಥಮ ಮಾನವ ಜೊತೆಯನ್ನು ಸೃಷ್ಟಿಸಿ, “ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ” ಅದರಲ್ಲಿ ಅವರನ್ನು ಇರಿಸಿದನು. ಕೊನೆಯದಾಗಿ, ದೇವರು ಮಾನವ ಕುಟುಂಬದ ಹಾಗೂ ಭೂಮಿಯ ಕುರಿತಾದ ತನ್ನ ಉದ್ದೇಶವನ್ನು ಈ ಕೆಳಗಿನ ಪ್ರವಾದನಾತ್ಮಕ ಮಾತುಗಳಲ್ಲಿ ನುಡಿದನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.”—ಆದಿಕಾಂಡ 1:28, 31; 2:8.
6. (ಎ) “ಆರನೆಯ ದಿನ”ದ ಅಂತ್ಯದಲ್ಲಿ, ತಾನು ಸೃಷ್ಟಿಸಿದ ಸರ್ವ ಸೃಷ್ಟಿಯ ವಿಷಯದಲ್ಲಿ ದೇವರಿಗೆ ಯಾವ ಅನಿಸಿಕೆಯಾಯಿತು? (ಬಿ) ಯಾವ ಅರ್ಥದಲ್ಲಿ “ಏಳನೆಯ ದಿನ”ವು ಪರಿಶುದ್ಧವಾದದ್ದಾಗಿದೆ?
6 ಸೃಷ್ಟಿಯ “ಆರನೆಯ ದಿನ”ವು ಮುಕ್ತಾಯಗೊಂಡಂತೆ, ವೃತ್ತಾಂತವು ನಮಗೆ ಹೇಳುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ತಾನು ಮಾಡಿರುವ ಎಲ್ಲವನ್ನೂ ನೋಡಿ ದೇವರು ಸಂತೃಪ್ತನಾದನು. ಹೀಗೆ ಆತನು ಭೂಮಿಗೆ ಸಂಬಂಧಿಸಿದ ಇನ್ನೂ ಹೆಚ್ಚಿನ ಸೃಷ್ಟಿಕಾರಕ ಕೆಲಸದಿಂದ ವಿಶ್ರಮಿಸಿದನು, ಅಥವಾ ಕೆಲಸವನ್ನು ನಿಲ್ಲಿಸಿದನು. ಆದರೆ, ಆಗ ಇದ್ದ ಪ್ರಮೋದವನವು ಪರಿಪೂರ್ಣವಾದದ್ದೂ ಸುಂದರವಾದದ್ದೂ ಆಗಿತ್ತಾದರೂ, ಅದು ಒಂದು ಚಿಕ್ಕ ಕ್ಷೇತ್ರವನ್ನು ಮಾತ್ರ ಆವರಿಸಿತ್ತು, ಮತ್ತು ಭೂಮಿಯ ಮೇಲೆ ಇಬ್ಬರು ಮಾನವ ಜೀವಿಗಳು ಮಾತ್ರವೇ ಇದ್ದರು. ಭೂಮಿಯೂ ಮಾನವ ಕುಟುಂಬವೂ ದೇವರು ಉದ್ದೇಶಿಸಿದ್ದ ಸ್ಥಿತಿಯನ್ನು ಮುಟ್ಟಲಿಕ್ಕಾಗಿ, ಬಹಳ ಸಮಯವು ಹಿಡಿಯಲಿತ್ತು. ಈ ಕಾರಣಕ್ಕಾಗಿ, ಆತನು “ಏಳನೆಯ ದಿನ”ವನ್ನು ನೇಮಿಸಿದನು. ಇದು, ಹಿಂದಿನ ಆರು ‘ದಿನಗಳ’ಲ್ಲಿ ಆತನು ಏನನ್ನು ಸೃಷ್ಟಿಸಿದನೋ ಅದೆಲ್ಲವೂ ಆತನ ಪವಿತ್ರ ಚಿತ್ತಕ್ಕನುಸಾರ ವಿಕಸಿಸುವಂತೆ ಅವಕಾಶವನ್ನು ಒದಗಿಸಲಿತ್ತು. (ಎಫೆಸ 1:11ನ್ನು ಹೋಲಿಸಿರಿ.) “ಏಳನೆಯ ದಿನ”ವು ಮುಕ್ತಾಯಗೊಳ್ಳುವಾಗ, ಭೂಮಿಯು ಪರಿಪೂರ್ಣ ಮಾನವರ ಕುಟುಂಬದಿಂದ ಶಾಶ್ವತವಾಗಿ ನಿವಾಸಿಸಲ್ಪಡುವ ಒಂದು ಭೂವ್ಯಾಪಕ ಪ್ರಮೋದವನವಾಗಿ ಪರಿಣಮಿಸಿರುವುದು. (ಯೆಶಾಯ 45:18) “ಏಳನೆಯ ದಿನ”ವು, ಭೂಮಿಯ ಹಾಗೂ ಮಾನವಕುಲದ ಸಂಬಂಧದಲ್ಲಿ ದೇವರ ಚಿತ್ತದ ನೆರವೇರಿಕೆ ಮತ್ತು ಪೂರೈಕೆಗಾಗಿ ಪ್ರತ್ಯೇಕವಾಗಿರಿಸಲ್ಪಟ್ಟಿದೆ ಅಥವಾ ಸಮರ್ಪಿಸಲ್ಪಟ್ಟಿದೆ. ಆ ಅರ್ಥದಲ್ಲಿ ಇದು “ಪರಿಶುದ್ಧ”ವಾಗಿದೆ.
7. (ಎ) ಯಾವ ಅರ್ಥದಲ್ಲಿ ದೇವರು “ಏಳನೆಯ ದಿನ”ದಲ್ಲಿ ವಿಶ್ರಮಿಸಿದನು? (ಬಿ) “ಏಳನೆಯ ದಿನ”ವು ಕೊನೆಗೊಳ್ಳುವಷ್ಟರಲ್ಲಿ ಏನು ಸಂಭವಿಸಿರುವುದು?
7 ಹೀಗೆ ದೇವರು “ಏಳನೆಯ ದಿನ”ದಲ್ಲಿ ತನ್ನ ಸೃಷ್ಟಿಕಾರಕ ಕೆಲಸದಿಂದ ವಿಶ್ರಮಿಸಿದನು. ಇದು, ಆತನು ಕೆಲಸವನ್ನು ನಿಲ್ಲಿಸಿ, ತಾನು ಯಾವುದನ್ನು ಕಾರ್ಯನಡಿಸುವಂತೆ ಆರಂಭಿಸಿದ್ದನೋ ಅದು ತನ್ನ ಕೆಲಸವನ್ನು ಪೂರೈಸುವಂತೆ ಅನುಮತಿಸಿದನೋ ಎಂಬಂತಿತ್ತು. “ಏಳನೆಯ ದಿನ”ದ ಕೊನೆಯಷ್ಟಕ್ಕೆ, ಸಮಸ್ತವೂ ತನ್ನ ಉದ್ದೇಶಕ್ಕನುಸಾರವೇ ನಡೆದಿರುವುದು ಎಂಬ ಸಂಪೂರ್ಣ ಭರವಸೆ ಆತನಿಗಿದೆ. ಎಷ್ಟೇ ಅಡಚಣೆಗಳು ಇರುವುದಾದರೂ, ಅವುಗಳು ಜಯಿಸಲ್ಪಡುವವು. ದೇವರ ಚಿತ್ತವು ಸಂಪೂರ್ಣ ವಾಸ್ತವಿಕತೆ ಆಗುವಾಗ, ಸರ್ವ ವಿಧೇಯ ಮಾನವಕುಲವು ಪ್ರಯೋಜನವನ್ನು ಪಡೆದುಕೊಳ್ಳುವುದು. ಇದನ್ನು ಯಾವುದೂ ತಡೆಯದು, ಏಕೆಂದರೆ ದೇವರ ಆಶೀರ್ವಾದವು “ಏಳನೆಯ ದಿನ”ದ ಮೇಲಿದೆ, ಮತ್ತು ಆತನು ಅದನ್ನು “ಪರಿಶುದ್ಧ”ವಾದದ್ದಾಗಿ ಮಾಡಿದನು. ವಿಧೇಯ ಮಾನವಕುಲಕ್ಕೆ ಎಂತಹ ಒಂದು ಮಹಿಮಾಯುತ ಪ್ರತೀಕ್ಷೆ!
ಇಸ್ರಾಯೇಲ್ ದೇವರ ವಿಶ್ರಾಂತಿಯಲ್ಲಿ ಸೇರಲು ತಪ್ಪಿಹೋಯಿತು
8. ಯಾವಾಗ ಮತ್ತು ಹೇಗೆ ಇಸ್ರಾಯೇಲ್ಯರು ಸಬ್ಬತ್ತನ್ನು ಆಚರಿಸಲು ಆರಂಭಿಸಿದರು?
8 ಕೆಲಸ ಹಾಗೂ ವಿಶ್ರಾಂತಿಗಾಗಿದ್ದ ಯೆಹೋವನ ಏರ್ಪಾಡಿನಿಂದ ಇಸ್ರಾಯೇಲ್ ಜನಾಂಗವು ಪ್ರಯೋಜನವನ್ನು ಪಡೆದುಕೊಂಡಿತು. ಸೀನಾಯಿ ಪರ್ವತದಲ್ಲಿ ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮುಂಚೆಯೇ, ದೇವರು ಅವರಿಗೆ ಮೋಶೆಯ ಮೂಲಕವಾಗಿ ಹೀಗೆ ಹೇಳಿದನು: “ನೀವು ಸಬ್ಬತ್ ದಿನವನ್ನು ಆಚರಿಸಬೇಕೆಂದು ನಾನು [ಯೆಹೋವನು] ಅಪ್ಪಣೆಮಾಡಿರುವದರಿಂದಲೇ ಆರನೆಯ ದಿನದಲ್ಲಿ ಎರಡು ದಿನದ ಆಹಾರವು ನಿಮಗೆ ದೊರಕುವಂತೆ ಅನುಗ್ರಹಿಸಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬನು ತಾನಿರುವಲ್ಲಿಯೇ ಇರಬೇಕು; ಏಳನೆಯ ದಿನದಲ್ಲಿ ಒಬ್ಬನೂ ತನ್ನ ಸ್ಥಳವನ್ನು ಬಿಟ್ಟು ಹೊರಗೆ ಹೋಗಕೂಡದು.” ಇದರ ಫಲಿತಾಂಶವಾಗಿ, “ಏಳನೆಯ ದಿನದಲ್ಲಿ ಜನರು ಸಬ್ಬತ್ತನ್ನು ಆಚರಿಸಲು ತೊಡಗಿದರು” (NW).—ವಿಮೋಚನಕಾಂಡ 16:22-30.
9. ಸಬ್ಬತ್ತಿನ ನಿಯಮವು, ನಿಸ್ಸಂಶಯವಾಗಿ ಇಸ್ರಾಯೇಲ್ಯರಿಗೆ ಒಂದು ಸ್ವಾಗತಾರ್ಹ ಬದಲಾವಣೆಯಾಗಿತ್ತೇಕೆ?
9 ಐಗುಪ್ತದ ದಾಸತ್ವದಿಂದ ಆಗಷ್ಟೇ ಬಿಡುಗಡೆಹೊಂದಿದ್ದ ಇಸ್ರಾಯೇಲ್ಯರಿಗೆ ಈ ಏರ್ಪಾಡು ಹೊಸದಾಗಿತ್ತು. ಐಗುಪ್ತ್ಯರು ಹಾಗೂ ಇತರ ಜನಾಂಗಗಳವರು, ಸಮಯವನ್ನು ಐದರಿಂದ ಹತ್ತು ದಿನಗಳ ಕಾಲಾವಧಿಗಳಲ್ಲಿ ಅಳೆಯುತ್ತಿದ್ದರೂ, ಗುಲಾಮರಾಗಿದ್ದ ಇಸ್ರಾಯೇಲ್ಯರಿಗೆ ವಿಶ್ರಾಂತಿಯ ಒಂದು ದಿನವು ಅನುಮತಿಸಲ್ಪಟ್ಟಿರುವುದು ಅಸಂಭವನೀಯ. (ವಿಮೋಚನಕಾಂಡ 5:1-9ನ್ನು ಹೋಲಿಸಿರಿ.) ಆದುದರಿಂದಲೇ, ಇಸ್ರಾಯೇಲ್ನ ಜನರು ಈ ಬದಲಾವಣೆಯನ್ನು ಸ್ವೀಕರಿಸಿದರು ಎಂಬ ತೀರ್ಮಾನಕ್ಕೆ ಬರುವುದು ಸಮಂಜಸ. ಸಬ್ಬತ್ತಿನ ಆವಶ್ಯಕತೆಯನ್ನು ಒಂದು ಹೊರೆಯೋಪಾದಿ ಅಥವಾ ನಿರ್ಬಂಧದೋಪಾದಿ ಪರಿಗಣಿಸುವುದಕ್ಕೆ ಬದಲು, ಅದನ್ನು ಆಚರಿಸಲು ಅವರು ಆನಂದಿತರಾಗಿದ್ದಿರಬೇಕು. ವಾಸ್ತವದಲ್ಲಿ, ಐಗುಪ್ತದಲ್ಲಿನ ಅವರ ದಾಸತ್ವ ಹಾಗೂ ತಾನು ಅವರನ್ನು ಬಿಡುಗಡೆಗೊಳಿಸಿದ್ದರ ಜ್ಞಾಪನದೋಪಾದಿ ಸಬ್ಬತ್ ಕಾರ್ಯನಡಿಸಲಿತ್ತೆಂದು ದೇವರು ತದನಂತರ ಅವರಿಗೆ ಹೇಳಿದನು.—ಧರ್ಮೋಪದೇಶಕಾಂಡ 5:15.
10, 11. (ಎ) ವಿಧೇಯರಾಗಿರುವ ಮೂಲಕ, ಇಸ್ರಾಯೇಲ್ಯರು ಆನಂದಿಸಲಿಕ್ಕಾಗಿ ಏನನ್ನು ಎದುರುನೋಡಸಾಧ್ಯವಿತ್ತು? (ಬಿ) ದೇವರ ವಿಶ್ರಾಂತಿಯಲ್ಲಿ ಸೇರಲು ಇಸ್ರಾಯೇಲ್ಯರು ಏಕೆ ತಪ್ಪಿಹೋದರು?
10 ಮೋಶೆಯೊಂದಿಗೆ ಐಗುಪ್ತದಿಂದ ಬಿಡುಗಡೆಯಾಗಿ ಬಂದಿದ್ದ ಇಸ್ರಾಯೇಲ್ಯರು ವಿಧೇಯರಾಗಿರುತ್ತಿದ್ದಲ್ಲಿ, ಅವರಿಗೆ “ಹಾಲೂ ಜೇನೂ ಹರಿಯುವ ವಿಸ್ತಾರವಾದ” ಒಳ್ಳೇ “ವಾಗ್ದತ್ತ ದೇಶ”ವನ್ನು ಪ್ರವೇಶಿಸುವ ಸುಯೋಗವು ದೊರಕಸಾಧ್ಯವಿತ್ತು. (ವಿಮೋಚನಕಾಂಡ 3:8) ಅಲ್ಲಿ ಅವರು ನಿಜವಾದ ವಿಶ್ರಾಂತಿಯನ್ನು ಅನುಭವಿಸಲು ಸಾಧ್ಯವಿತ್ತು; ಕೇವಲ ಸಬ್ಬತ್ತಿನ ದಿನದಂದು ಮಾತ್ರವಲ್ಲ, ತಮ್ಮ ಇಡೀ ಜೀವಿತದಾದ್ಯಂತ ಅವರು ವಿಶ್ರಾಂತಿಯನ್ನು ಅನುಭವಿಸಲು ಸಾಧ್ಯವಿತ್ತು. (ಧರ್ಮೋಪದೇಶಕಾಂಡ 12:9, 10) ಆದರೂ, ವಿಷಯವು ಹಾಗಾಗಿ ಪರಿಣಮಿಸಲಿಲ್ಲ. ಅವರ ಕುರಿತಾಗಿ ಅಪೊಸ್ತಲ ಪೌಲನು ಬರೆದುದು: “ಕೇಳಿ ಕೋಪವನ್ನೆಬ್ಬಿಸಿದವರು ಯಾರು? ಮೋಶೆಯ ಕೈಕೆಳಗಿದ್ದು ಐಗುಪ್ತದೊಳಗಿಂದ ಹೊರಟುಬಂದವರೆಲ್ಲರೂ ಅಲ್ಲವೇ. ಮತ್ತು ನಾಲ್ವತ್ತು ವರುಷ ಆತನು ಯಾರ ಮೇಲೆ ಬಹಳವಾಗಿ ಕೋಪಿಸಿಕೊಂಡನು? ಪಾಪಮಾಡಿದವರ ಮೇಲೆ ಅಲ್ಲವೇ. ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ. ನನ್ನ ವಿಶ್ರಾಂತಿಯಲ್ಲಿ ನೀವು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಪ್ರಮಾಣಮಾಡಿದನು? ಅವಿಧೇಯರನ್ನು ಕುರಿತಲ್ಲವೇ. ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ.”—ಇಬ್ರಿಯ 3:16-19.
11 ನಮಗೆ ಎಂತಹ ಒಂದು ಪ್ರಬಲವಾದ ಪಾಠ! ಯೆಹೋವನಲ್ಲಿ ಅವರ ನಂಬಿಕೆಯ ಕೊರತೆಯ ಕಾರಣದಿಂದ, ಆ ಸಂತತಿಯು ತಮಗಾಗಿ ಆತನು ವಾಗ್ದಾನಿಸಿದ್ದ ವಿಶ್ರಾಂತಿಯನ್ನು ಪಡೆದುಕೊಳ್ಳಲಿಲ್ಲ. ಅದಕ್ಕೆ ಬದಲಾಗಿ, ಅವರು ಅರಣ್ಯದಲ್ಲಿ ನಾಶವಾಗಿಹೋದರು. ಅಬ್ರಹಾಮನ ವಂಶಸ್ಥರೋಪಾದಿ, ಭೂಮಿಯ ಸಕಲ ಜನಾಂಗಗಳಿಗೆ ಆಶೀರ್ವಾದವನ್ನು ಒದಗಿಸುವುದರಲ್ಲಿ, ದೇವರ ಚಿತ್ತದೊಂದಿಗೆ ತಾವು ನಿಕಟವಾದ ಸಂಬಂಧವನ್ನು ಪಡೆದುಕೊಂಡಿದ್ದೆವು ಎಂಬುದನ್ನು ಗ್ರಹಿಸಲು ಅವರು ತಪ್ಪಿಹೋದರು. (ಆದಿಕಾಂಡ 17:7, 8; 22:18) ದೈವಿಕ ಚಿತ್ತಕ್ಕನುಗುಣವಾಗಿ ಕಾರ್ಯನಡಿಸುವುದಕ್ಕೆ ಬದಲಾಗಿ, ಅವರು ತಮ್ಮ ಲೌಕಿಕ ಹಾಗೂ ಸ್ವಾರ್ಥಪರ ಬಯಕೆಗಳಿಂದ ಸಂಪೂರ್ಣವಾಗಿ ಅಪಕರ್ಷಿಸಲ್ಪಟ್ಟರು. ನಾವೆಂದಿಗೂ ಅಂತಹ ಒಂದು ಸ್ಥಿತಿಯನ್ನು ತಲಪದಿರೋಣ!—1 ಕೊರಿಂಥ 10:6, 10.
ವಿಶ್ರಾಂತಿಯೊಂದು ಇನ್ನೂ ಇದೆ
12. ಪ್ರಥಮ ಶತಮಾನದ ಕ್ರೈಸ್ತರಿಗೆ ಯಾವ ಪ್ರತೀಕ್ಷೆಯು ಇನ್ನೂ ಇತ್ತು, ಮತ್ತು ಅವರು ಅದನ್ನು ಹೇಗೆ ಸಾಧಿಸಸಾಧ್ಯವಿತ್ತು?
12 ನಂಬಿಕೆಯ ಕೊರತೆಯ ಕಾರಣದಿಂದ ಇಸ್ರಾಯೇಲ್ಯರು ದೇವರ ವಿಶ್ರಾಂತಿಯನ್ನು ಸೇರಲು ತಪ್ಪಿಹೋದರು ಎಂಬುದನ್ನು ಸೂಚಿಸಿದ ಬಳಿಕ, ಪೌಲನು ತನ್ನ ಗಮನವನ್ನು ತನ್ನ ಜೊತೆ ವಿಶ್ವಾಸಿಗಳ ಕಡೆಗೆ ತಿರುಗಿಸಿದನು. ಇಬ್ರಿಯ 4:1-5ರಲ್ಲಿ ಗಮನಿಸಿದಂತೆ, ಅವನು ಅವರಿಗೆ “ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನವು ಇನ್ನೂ” ಇದೆಯೆಂಬ ಆಶ್ವಾಸನೆಯನ್ನು ನೀಡಿದನು. “ಶುಭವರ್ತಮಾನ”ದಲ್ಲಿ ನಂಬಿಕೆಯನ್ನು ಇಡುವಂತೆ ಪೌಲನು ಅವರನ್ನು ಪ್ರಚೋದಿಸಿದನು, ಏಕೆಂದರೆ “ನಂಬಿರುವ ನಾವಾದರೋ ಆ ವಿಶ್ರಾಂತಿಯಲ್ಲಿ ಸೇರುತ್ತಲೇ ಇದ್ದೇವೆ.” ಯೇಸುವಿನ ಪ್ರಾಯಶ್ಚಿತ್ತ ಯಜ್ಞದಿಂದ ಧರ್ಮಶಾಸ್ತ್ರವು ಈಗಾಗಲೇ ತೆಗೆದುಹಾಕಲ್ಪಟ್ಟಿದ್ದರಿಂದ, ಸಬ್ಬತ್ತಿನಿಂದ ಒದಗಿಸಲ್ಪಡುವ ಶಾರೀರಿಕ ವಿಶ್ರಾಂತಿಗೆ ಪೌಲನು ಇಲ್ಲಿ ಸೂಚಿಸುತ್ತಿರಲಿಲ್ಲ. (ಕೊಲೊಸ್ಸೆ 2:13, 14) ಆದಿಕಾಂಡ 2:2 ಹಾಗೂ ಕೀರ್ತನೆ 95:11ನ್ನು ಉದ್ಧರಿಸುವ ಮೂಲಕ, ಪೌಲನು ಹೀಬ್ರು ಕ್ರೈಸ್ತರಿಗೆ ದೇವರ ವಿಶ್ರಾಂತಿಯಲ್ಲಿ ಸೇರುವಂತೆ ಪ್ರಚೋದಿಸುತ್ತಿದ್ದನು.
13. ಕೀರ್ತನೆ 95ನ್ನು ಉದ್ಧರಿಸಿದ್ದರಲ್ಲಿ, ಪೌಲನು “ಈಹೊತ್ತು” ಎಂಬ ಶಬ್ದಕ್ಕೆ ಏಕೆ ಗಮನವನ್ನು ಸೆಳೆದನು?
13 ತಮಗಿಂತ ಮುಂಚೆ ಇದ್ದ ಇಸ್ರಾಯೇಲ್ಯರಿಗೆ ಸಬ್ಬತ್ತಿನ ವಿಶ್ರಾಂತಿಯು “ಶುಭವರ್ತಮಾನ”ವಾಗಿ ಇದ್ದಿರಬೇಕಾಗಿದ್ದಂತೆಯೇ ದೇವರ ವಿಶ್ರಾಂತಿಯಲ್ಲಿ ಸೇರುವ ಸಾಧ್ಯತೆಯು, ಹೀಬ್ರು ಕ್ರೈಸ್ತರಿಗೆ “ಶುಭವರ್ತಮಾನ”ವಾಗಿದ್ದಿರಬೇಕು. ಆದುದರಿಂದ, ಅರಣ್ಯದಲ್ಲಿ ಇಸ್ರಾಯೇಲ್ ಮಾಡಿದ ತಪ್ಪನ್ನೇ ಮಾಡದಿರುವಂತೆ ಪೌಲನು ತನ್ನ ಜೊತೆ ವಿಶ್ವಾಸಿಗಳನ್ನು ಪ್ರೇರೇಪಿಸಿದನು. ಈಗ ಯಾವುದು ಕೀರ್ತನೆ 95:7, 8 ಆಗಿದೆಯೋ ಅದನ್ನು ಉಲ್ಲೇಖಿಸುತ್ತಾ ಅವನು, ಸೃಷ್ಟಿಯನ್ನು ಮುಗಿಸಿ ದೇವರು ವಿಶ್ರಮಿಸಿದಂದಿನಿಂದ ಆಗ ದೀರ್ಘ ಸಮಯವು ಸಂದಿದ್ದರೂ, “ಈಹೊತ್ತು” ಎಂಬ ಶಬ್ದಕ್ಕೆ ಗಮನ ಸೆಳೆದನು. (ಇಬ್ರಿಯ 4:6, 7) ಪೌಲನ ವಾದಾಂಶವೇನಾಗಿತ್ತು? ಭೂಮಿಯ ಹಾಗೂ ಮಾನವಕುಲದ ಸಂಬಂಧದಲ್ಲಿ ತನ್ನ ಉದ್ದೇಶವು ಸಂಪೂರ್ಣವಾಗಿ ಪೂರೈಸಲ್ಪಡುವಂತೆ ಅನುಮತಿಸಲಿಕ್ಕಾಗಿ ದೇವರು ಬದಿಗಿರಿಸಿದ್ದ “ಏಳನೆಯ ದಿನ”ವು ಅದಾಗಿದ್ದು, ಅದು ಇನ್ನೂ ಮುಂದುವರಿಯುತ್ತಿತ್ತು. ಆದುದರಿಂದ, ಸ್ವಾರ್ಥಪರ ಬೆನ್ನಟ್ಟುವಿಕೆಗಳಲ್ಲಿ ಮುಳುಗಿರುವುದಕ್ಕೆ ಬದಲಾಗಿ, ಆ ಉದ್ದೇಶಕ್ಕೆ ಹೊಂದಿಕೆಯಲ್ಲಿ ಕಾರ್ಯನಡಿಸುವುದು ಅವನ ಜೊತೆ ಕ್ರೈಸ್ತರಿಗೆ ತುರ್ತಿನ ವಿಷಯವಾಗಿತ್ತು. ಅವನು ಪುನಃ ಒಮ್ಮೆ, “ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ” ಎಂಬ ಎಚ್ಚರಿಕೆಯನ್ನು ಕೊಟ್ಟನು.
14. ದೇವರ “ವಿಶ್ರಾಂತಿ”ಯು ಇನ್ನೂ ಉಳಿದಿದೆ ಎಂಬುದನ್ನು ಪೌಲನು ಹೇಗೆ ತೋರಿಸಿದನು?
14 ಇದಕ್ಕೆ ಕೂಡಿಸಿ, ವಾಗ್ದಾನಮಾಡಲ್ಪಟ್ಟ “ವಿಶ್ರಾಂತಿ”ಯು (NW), ಕೇವಲ ಯೆಹೋಶುವನ ನಾಯಕತ್ವದ ಕೆಳಗೆ ವಾಗ್ದತ್ತ ದೇಶದಲ್ಲಿ ನೆಲೆಸುವಂತಹ ಒಂದು ವಿಚಾರವಾಗಿರಲಿಲ್ಲ ಎಂದು ಪೌಲನು ತೋರಿಸಿದನು. (ಯೆಹೋಶುವ 21:44) “ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ” ಎಂದು ಪೌಲನು ವಾದಿಸಿದನು. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಪೌಲನು ಕೂಡಿಸಿದ್ದು: “ದೇವರ ಜನರು ಅನುಭವಿಸುವದಕ್ಕಿರುವ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು.” (ಇಬ್ರಿಯ 4:8, 9) ಆ “ಸಬ್ಬತೆಂಬ ವಿಶ್ರಾಂತಿ” ಏನಾಗಿದೆ?
ದೇವರ ವಿಶ್ರಾಂತಿಯಲ್ಲಿ ಸೇರಿರಿ
15, 16. (ಎ) “ಸಬ್ಬತೆಂಬ ವಿಶ್ರಾಂತಿ” ಎಂಬ ಶಬ್ದದ ವಿಶೇಷತೆ ಏನಾಗಿದೆ? (ಬಿ) ‘ಒಬ್ಬನ ಸ್ವಂತ ಕೆಲಸದಿಂದ ವಿಶ್ರ’ಮಿಸುವುದು ಎಂಬುದರ ಅರ್ಥವೇನು?
15 “ಸಬ್ಬತೆಂಬ ವಿಶ್ರಾಂತಿ” ಎಂಬ ಅಭಿವ್ಯಕ್ತಿಯು, “ಸಬ್ಬತ್ತನ್ನು ಆಚರಿಸುವುದು” ಎಂಬರ್ಥವನ್ನು ಕೊಡುವ ಗ್ರೀಕ್ ಶಬ್ದದಿಂದ ಭಾಷಾಂತರಿಸಲ್ಪಟ್ಟದ್ದಾಗಿದೆ. (ಕಿಂಗ್ಡಮ್ ಇಂಟರ್ಲಿನಿಯರ್) ಪ್ರೊಫೆಸರ್ ವಿಲ್ಯಮ್ ಲೇನ್ ಹೇಳುವುದು: “ಈ ಶಬ್ದವು, ವಿಮೋಚನ 20:8-10ರ ಆಧಾರದ ಮೇಲೆ ಯೆಹೂದ್ಯಮತದಲ್ಲಿ ವಿಕಸಿಸಿಕೊಂಡ ಸಬ್ಬತ್ ಬೋಧನೆಯಿಂದ ತನ್ನ ನಿರ್ದಿಷ್ಟವಾದ ಸೂಕ್ಷ್ಮ ವ್ಯತ್ಯಾಸವನ್ನು ಪಡೆದುಕೊಂಡಿತು. ಅಲ್ಲಿ ವಿಶ್ರಾಂತಿ ಹಾಗೂ ಸ್ತುತಿಗಳು ಒಂದಕ್ಕೊಂದು ಸಂಬಂಧಿಸಿವೆ ಎಂದು ಒತ್ತಿಹೇಳಲಾಗಿತ್ತು . . . [ಅದು] ದೇವರ ಆರಾಧನೆ ಹಾಗೂ ಸ್ತುತಿಯಲ್ಲಿ ವ್ಯಕ್ತಪಡಿಸಲ್ಪಡುವ ಸಂತೋಷ ಸಮಾರಂಭ ಹಾಗೂ ಆನಂದದ ವಿಶೇಷ ಅಂಶವನ್ನು ಒತ್ತಿಹೇಳುತ್ತದೆ.” ಹಾಗಾದರೆ, ವಾಗ್ದಾನಮಾಡಲ್ಪಟ್ಟ ವಿಶ್ರಾಂತಿಯು, ಕೇವಲ ಕೆಲಸದಿಂದ ವಿರಾಮವನ್ನು ಪಡೆಯುವುದನ್ನು ಅರ್ಥೈಸುವುದಿಲ್ಲ. ಅದು, ಬಳಲಿಸುವಂತಹ, ಉದ್ದೇಶರಹಿತ ದುಡಿಮೆಯಿಂದ, ದೇವರಿಗೆ ಘನತೆಯನ್ನು ತರುವಂತಹ ಹರ್ಷಭರಿತ ಸೇವೆಗೆ ಒಂದು ಬದಲಾವಣೆಯಾಗಿದೆ.
16 ಇದು ಪೌಲನ ಮುಂದಿನ ಮಾತುಗಳಿಂದ ಸಮರ್ಥಿಸಲ್ಪಟ್ಟಿದೆ: “ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರಮಿಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರಮಿಸಿಕೊಂಡಿದ್ದಾನೆ.” (ಇಬ್ರಿಯ 4:10) ಬಳಲಿ ಆಯಾಸಗೊಂಡ ಕಾರಣಕ್ಕಾಗಿ ದೇವರು ಏಳನೆಯ ಸೃಷ್ಟಿಕಾರಕ ದಿನದಲ್ಲಿ ವಿಶ್ರಮಿಸಲಿಲ್ಲ. ಬದಲಾಗಿ, ತನ್ನ ಸ್ತುತಿ ಹಾಗೂ ಘನತೆಗಾಗಿ, ತನ್ನ ಕೈಕೆಲಸವು ವೃದ್ಧಿಯಾಗಿ, ಸಂಪೂರ್ಣವಾಗಿ ಮಹಿಮೆಗೆ ಬರುವಂತೆ ಸಮಯವನ್ನು ಕೊಡಲಿಕ್ಕಾಗಿ ಆತನು ಭೂಸಂಬಂಧವಾದ ಸೃಷ್ಟಿಕಾರಕ ಕೆಲಸವನ್ನು ನಿಲ್ಲಿಸಿದನು ಅಷ್ಟೆ. ದೇವರ ಸೃಷ್ಟಿಯ ಒಂದು ಭಾಗದೋಪಾದಿ, ನಾವು ಸಹ ಆ ಏರ್ಪಾಡಿಗೆ ಹೊಂದಿಕೊಳ್ಳತಕ್ಕದ್ದು. ನಾವು ‘ನಮ್ಮ ಸ್ವಂತ ಕೆಲಸಗಳಿಂದ ವಿಶ್ರ’ಮಿಸಬೇಕು, ಅಂದರೆ, ರಕ್ಷಣೆಯನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ, ನಾವು ದೇವರ ಮುಂದೆ ನಮ್ಮನ್ನೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸುವುದನ್ನು ನಿಲ್ಲಿಸಬೇಕು. ಬದಲಾಗಿ, ನಮ್ಮ ರಕ್ಷಣೆಯು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೇಲೆ ಹೊಂದಿಕೊಂಡಿದೆ ಎಂಬ ನಂಬಿಕೆ ನಮಗಿರಬೇಕು. ಅದರ ಮೂಲಕವಾಗಿಯೇ ಎಲ್ಲ ವಿಷಯಗಳೂ ಪುನಃ ದೇವರ ಉದ್ದೇಶದೊಂದಿಗೆ ಹೊಂದಿಕೆಯಲ್ಲಿ ತರಲ್ಪಡುವವು.—ಎಫೆಸ 1:8-14; ಕೊಲೊಸ್ಸೆ 1:19, 20.
ದೇವರ ವಾಕ್ಯವು ಕಾರ್ಯಸಾಧಕವಾದದ್ದು
17. ಮಾಂಸಿಕ ಇಸ್ರಾಯೇಲ್ಯರಿಂದ ಬೆನ್ನಟ್ಟಲ್ಪಟ್ಟ ಯಾವ ಮಾರ್ಗವನ್ನು ನಾವು ತೊರೆಯಬೇಕು?
17 ತಮ್ಮ ಅವಿಧೇಯತೆ ಹಾಗೂ ನಂಬಿಕೆಯ ಕೊರತೆಯ ಕಾರಣದಿಂದಲೇ ಇಸ್ರಾಯೇಲ್ಯರು ದೇವರ ವಾಗ್ದತ್ತ ವಿಶ್ರಾಂತಿಯಲ್ಲಿ ಸೇರಲು ತಪ್ಪಿಹೋದರು. ಇದರ ಪರಿಣಾಮವಾಗಿ, ಪೌಲನು ಹೀಬ್ರು ಕ್ರೈಸ್ತರಿಗೆ ಉತ್ತೇಜನ ನೀಡಿದ್ದು: “ಆದದರಿಂದ ನಾವು ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸಪಡೋಣ; ನಮ್ಮಲ್ಲಿ ಒಬ್ಬರಾದರೂ ಅವರ ಅವಿಧೇಯತ್ವವನ್ನು ಅನುಸರಿಸುವವರಾಗಬಾರದು.” (ಇಬ್ರಿಯ 4:11) ಪ್ರಥಮ ಶತಮಾನದ ಯೆಹೂದ್ಯರಲ್ಲಿ ಅಧಿಕಾಂಶ ಮಂದಿ ಯೇಸುವಿನಲ್ಲಿ ನಂಬಿಕೆಯಿಡಲಿಲ್ಲ, ಮತ್ತು ಸಾ.ಶ. 70ರಲ್ಲಿ ಯೆಹೂದಿ ವಿಷಯಗಳ ವ್ಯವಸ್ಥೆಯು ಅಂತ್ಯಗೊಂಡಾಗ, ಅವರಲ್ಲಿ ಅನೇಕರು ಬಹಳವಾಗಿ ಕಷ್ಟಾನುಭವಿಸಿದರು. ಇಂದು ದೇವರ ವಾಗ್ದಾನದ ಮಾತುಗಳಲ್ಲಿ ನಾವು ನಂಬಿಕೆಯಿಡುವುದು ಎಷ್ಟು ಅತ್ಯಗತ್ಯವಾದದ್ದಾಗಿದೆ!
18. (ಎ) ದೇವರ ವಾಕ್ಯದಲ್ಲಿ ನಂಬಿಕೆಯನ್ನು ಇಡಲಿಕ್ಕಾಗಿ ಪೌಲನು ಯಾವ ಕಾರಣಗಳನ್ನು ಕೊಟ್ಟನು? (ಬಿ) ದೇವರ ವಾಕ್ಯವು “ಇಬ್ಬಾಯಿಕತ್ತಿಗಿಂತಲೂ ಹದ”ವಾದದ್ದಾಗಿದೆ ಹೇಗೆ?
18 ಯೆಹೋವನ ವಾಕ್ಯದಲ್ಲಿ ನಂಬಿಕೆಯನ್ನಿಡಲು ನಮಗೆ ಸಮಂಜಸವಾದ ಕಾರಣಗಳು ಇವೆ. ಪೌಲನು ಬರೆದುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) ಹೌದು, ದೇವರ ವಾಕ್ಯ ಅಥವಾ ಸಂದೇಶವು, “ಇಬ್ಬಾಯಿಕತ್ತಿಗಿಂತಲೂ ಹದವಾದದ್ದು.” ತಮ್ಮ ಪೂರ್ವಜರಿಗೆ ಏನು ಸಂಭವಿಸಿತೆಂಬುದನ್ನು ಹೀಬ್ರು ಕ್ರೈಸ್ತರು ಜ್ಞಾಪಿಸಿಕೊಳ್ಳಬೇಕಾಗಿತ್ತು. ಅವರು ಅರಣ್ಯದಲ್ಲಿ ನಾಶವಾಗಿಹೋಗುವರು ಎಂಬ ಯೆಹೋವನ ತೀರ್ಮಾನವನ್ನು ಅಲಕ್ಷಿಸಿ, ಅವರು ವಾಗ್ದತ್ತ ದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಮೋಶೆಯು ಅವರಿಗೆ ಎಚ್ಚರಿಕೆ ನೀಡಿದ್ದು: “ಅಲ್ಲಿ ಅಮಾಲೇಕ್ಯರೂ ಕಾನಾನ್ಯರೂ ನಿಮ್ಮ ಎದುರಿನಲ್ಲಿರುವದರಿಂದ ನೀವು ಅವರ ಕತ್ತಿಯಿಂದ ಸತ್ತೀರಿ.” ಇಸ್ರಾಯೇಲ್ಯರು ಹಟಮಾರಿತನದಿಂದ ಮುಂದುವರಿದಾಗ, “ಆ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾನ್ಯರೂ ಇಳಿದುಬಂದು ಅವರನ್ನು ಹೊಡೆದು ಹೊರ್ಮಾ ಪಟ್ಟಣದ ವರೆಗೆ ಸಂಹರಿಸಿದರು.” (ಅರಣ್ಯಕಾಂಡ 14:39-45) ಯೆಹೋವನ ವಾಕ್ಯವು ಯಾವುದೇ ಇಬ್ಬಾಯಿ ಕತ್ತಿಗಿಂತಲೂ ಹೆಚ್ಚು ಹದವಾದದ್ದಾಗಿದೆ, ಮತ್ತು ಉದ್ದೇಶಪೂರ್ವಕವಾಗಿ ಅದನ್ನು ಅಲಕ್ಷಿಸುವವನು, ಖಂಡಿತವಾಗಿಯೂ ಅದರ ಪರಿಣಾಮಗಳನ್ನು ಅನುಭವಿಸುತ್ತಾನೆ.—ಗಲಾತ್ಯ 6:7-9.
19. ದೇವರ ವಾಕ್ಯವು ಎಷ್ಟು ಪ್ರಬಲವಾಗಿ ‘ತೂರಿಹೋಗು’ತ್ತದೆ, ಮತ್ತು ದೇವರಿಗೆ ನಮ್ಮ ಲೆಕ್ಕ ಒಪ್ಪಿಸುವಿಕೆಯನ್ನು ನಾವು ಏಕೆ ಅಂಗೀಕರಿಸಬೇಕು?
19 ದೇವರ ವಾಕ್ಯವು ಎಷ್ಟು ಪ್ರಬಲವಾಗಿ “ಪ್ರಾಣ ಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗು”ತ್ತದೆ! ಸಾಂಕೇತಿಕವಾಗಿ ಮೂಳೆಗಳ ಅತ್ಯಂತ ಒಳಗಿನ ಭಾಗದಲ್ಲಿರುವ ಅಸ್ಥಿಮಜ್ಜೆಯನ್ನೇ ನೇರವಾಗಿ ಭೇದಿಸುವ ಮೂಲಕ, ಅದು ಪ್ರತಿಯೊಬ್ಬ ವ್ಯಕ್ತಿಯ ಆಲೋಚನೆಗಳು ಹಾಗೂ ಉದ್ದೇಶಗಳನ್ನು ಗ್ರಹಿಸುತ್ತದೆ! ಐಗುಪ್ತದ ದಾಸತ್ವದಿಂದ ಸ್ವತಂತ್ರರಾದ ಇಸ್ರಾಯೇಲ್ಯರು ಧರ್ಮಶಾಸ್ತ್ರವನ್ನು ಪಾಲಿಸಲು ಒಪ್ಪಿಕೊಂಡಿದ್ದರಾದರೂ, ತಮ್ಮ ಹೃದಯಗಳಲ್ಲಿ ಅವರು ತನ್ನ ಒದಗಿಸುವಿಕೆಗಳನ್ನು ಹಾಗೂ ಆವಶ್ಯಕತೆಗಳನ್ನು ಗಣ್ಯಮಾಡಲಿಲ್ಲ ಎಂಬುದು ಯೆಹೋವನಿಗೆ ಗೊತ್ತಿತ್ತು. (ಕೀರ್ತನೆ 95:7-11) ಆತನ ಚಿತ್ತವನ್ನು ಮಾಡುವುದಕ್ಕೆ ಬದಲಾಗಿ, ಅವರು ತಮ್ಮ ಶಾರೀರಿಕ ಬಯಕೆಗಳನ್ನು ತೃಪ್ತಿಪಡಿಸುವುದರಲ್ಲೇ ಮಗ್ನರಾಗಿದ್ದರು. ಆದುದರಿಂದ ಅವರು ದೇವರ ವಾಗ್ದತ್ತ ವಿಶ್ರಾಂತಿಯಲ್ಲಿ ಸೇರಲಿಲ್ಲ, ಬದಲಾಗಿ ಅರಣ್ಯದಲ್ಲೇ ನಾಶವಾಗಿಹೋದರು. ನಾವು ಆ ಪಾಠಕ್ಕೆ ಲಕ್ಷ್ಯಕೊಡಬೇಕು, ಏಕೆಂದರೆ “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ [ದೇವರ] ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.” (ಇಬ್ರಿಯ 4:13) ಆದುದರಿಂದ ನಾವು ಯೆಹೋವನಿಗೆ ಮಾಡಿರುವ ನಮ್ಮ ಸಮರ್ಪಣೆಯನ್ನು ಪೂರೈಸೋಣ, ಮತ್ತು “ಹಿಂದೆಗೆದವರಾಗಿ ನಾಶವಾಗ”ದಿರೋಣ.—ಇಬ್ರಿಯ 10:39.
20. ಮುಂದೆ ಏನು ಕಾದಿದೆ, ಮತ್ತು ದೇವರ ವಿಶ್ರಾಂತಿಯಲ್ಲಿ ಸೇರಲು ಈಗ ನಾವು ಏನು ಮಾಡಬೇಕಾಗಿದೆ?
20 “ಏಳನೆಯ ದಿನ”ವು—ದೇವರ ವಿಶ್ರಾಂತಿ ದಿನವು—ಇನ್ನೂ ಮುಂದುವರಿಯುತ್ತಿರುವುದಾದರೂ, ಈ ಭೂಮಿಯ ಹಾಗೂ ಮಾನವಕುಲದ ಕಡೆಗಿನ ತನ್ನ ಉದ್ದೇಶದ ನೆರವೇರಿಕೆಯ ಕುರಿತು ಆತನು ಎಚ್ಚರವುಳ್ಳವನಾಗಿದ್ದಾನೆ. ಅತಿ ಬೇಗನೆ, ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನು, ಪಿಶಾಚನಾದ ಸೈತಾನನನ್ನು ಸೇರಿಸಿ, ದೇವರ ಚಿತ್ತಕ್ಕೆ ವಿರೋಧವನ್ನು ತೋರಿಸುವವರೆಲ್ಲರನ್ನು ಈ ಭೂಮಿಯಿಂದಲೇ ಇಲ್ಲದಂತೆಮಾಡಲು ಕಾರ್ಯನಡಿಸುವನು. ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ, ಯೇಸುವೂ ಅವನ 1,44,000 ಮಂದಿ ಜೊತೆ ಅರಸರೂ, ಭೂಮಿಯನ್ನು ಹಾಗೂ ಮಾನವಕುಲವನ್ನು ದೇವರು ಉದ್ದೇಶಿಸಿದ್ದ ಸ್ಥಿತಿಗೆ ತಂದು ಮುಟ್ಟಿಸುವರು. (ಪ್ರಕಟನೆ 14:1; 20:1-6) ನಮ್ಮ ಜೀವಿತಗಳು ಯೆಹೋವ ದೇವರ ಚಿತ್ತದ ಮೇಲೆಯೇ ಕೇಂದ್ರೀಕರಿಸಿವೆ ಎಂಬುದನ್ನು ರುಜುಪಡಿಸಲು ನಮಗಿರುವ ಸಮಯವು ಇದೇ ಆಗಿದೆ. ದೇವರ ಮುಂದೆ ನಮ್ಮನ್ನು ಸಮರ್ಥಿಸಿಕೊಳ್ಳಲು ಮತ್ತು ನಮ್ಮ ಸ್ವಂತ ಅಭಿರುಚಿಗಳನ್ನು ಮುಂದುವರಿಸಲು ಪ್ರಯತ್ನಿಸುವುದಕ್ಕೆ ಬದಲಾಗಿ, ‘ನಮ್ಮ ಸ್ವಂತ ಕೆಲಸಗಳಿಂದ ವಿಶ್ರ’ಮಿಸಿ, ಪೂರ್ಣ ಮನಸ್ಸಿನಿಂದ ರಾಜ್ಯಾಭಿರುಚಿಗಳನ್ನು ಪೂರೈಸುವ ಸಮಯವು ಇದೇ ಆಗಿದೆ. ಹಾಗೆ ಮಾಡುವ ಮೂಲಕ ಮತ್ತು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವ ಮೂಲಕ, ದೇವರ ವಿಶ್ರಾಂತಿಯ ಪ್ರಯೋಜನಗಳನ್ನು ಈಗಲೂ ಮುಂದೆಯೂ ಅನುಭವಿಸುವ ಸುಯೋಗವು ನಮಗಿರುವುದು.
ನೀವು ವಿವರಿಸಬಲ್ಲಿರೊ?
◻ ಯಾವ ಉದ್ದೇಶಕ್ಕಾಗಿ ದೇವರು “ಏಳನೆಯ ದಿನ”ದಲ್ಲಿ ವಿಶ್ರಮಿಸಿದನು?
◻ ಇಸ್ರಾಯೇಲ್ಯರು ಯಾವ ವಿಶ್ರಾಂತಿಯನ್ನು ಅನುಭವಿಸಸಾಧ್ಯವಿತ್ತು, ಆದರೆ ಅವರು ಅದರಲ್ಲಿ ಸೇರಲು ಏಕೆ ತಪ್ಪಿಹೋದರು?
◻ ದೇವರ ವಿಶ್ರಾಂತಿಯಲ್ಲಿ ಸೇರಲಿಕ್ಕಾಗಿ ನಾವು ಏನು ಮಾಡಬೇಕು?
◻ ದೇವರ ವಾಕ್ಯವು ಹೇಗೆ ಸಜೀವವಾದದ್ದು, ಕಾರ್ಯಸಾಧಕವಾದದ್ದು, ಮತ್ತು ಯಾವುದೇ ಇಬ್ಬಾಯಿ ಕತ್ತಿಗಿಂತಲೂ ಹದವಾದದ್ದು ಆಗಿದೆ?
[ಪುಟ 16,17 ರಲ್ಲಿರುವಚಿತ್ರ]
ಇಸ್ರಾಯೇಲ್ಯರು ಸಬ್ಬತ್ತನ್ನು ಪಾಲಿಸಿದರಾದರೂ, ಅವರು ದೇವರ ವಿಶ್ರಾಂತಿಯಲ್ಲಿ ಸೇರಲಿಲ್ಲ. ಏಕೆ ಎಂಬುದು ನಿಮಗೆ ಗೊತ್ತೊ?